ದಂಡು ಕನಕಪುರಿ ತಲುಪಿದಾಗ ಸಂಜೆಯಾಗಿತ್ತು. ಇವರು ಬರುವ ಸುದ್ದಿ ಮೊದಲೇ ತಲುಪಿದ್ದರಿಂದ ಕನಕಪುರಿ ಥರಾವರಿ ದೀಪಗಳಿಂದ ಝಗಮಗ ಹೊಳೆಯುತ್ತಿತ್ತು. ಆಗಲೇ ಪಶ್ಚಿಮದ ಬಿಳಿಗಿರಿಯಿಂದ ಪೂರ್ವದ ಕನಕಪುರಿಯವರೆಗೆ ಶಿಖರಸೂರ್ಯನ ಕೀರ್ತಿಪತಾಕೆ ಹಾರಾಡತೊಡಗಿತ್ತು. ಇವರನ್ನು ಸ್ವಾಗತಿಸಲು ಊರ ಅಗಸಿಗೇ ಅರ್ಥಕೌಶಲ, ವರ್ತಕ ಸಂಘದ ಅಧ್ಯಕ್ಷ ಪಟ್ಟಣಶೆಟ್ಟಿ, ಪರಮಶೆಟ್ಟಿ ಧನಪಾಲ ಮುಂತಾದವರು ಬಂದು ನಿಂತಿದ್ದರು. ಅರ್ಥಕೌಶಲ ಯುವರಾಜ ಮತ್ತು ಶಿಖರಸೂರ್ಯ ಇಬ್ಬರಿಗೂ ಮಾಲೆ ಹಾಕಿ ತಬ್ಬಿಕೊಂಡು ಕಣ್ಣೊದ್ದೆ ಮಾಡಿಕೊಂಡ. ಮೊದಲು ಚಿವುಟಿದರೆ ರಕ್ತ ಚಿಮ್ಮುವಂತಿದ್ದ ಯುವರಾಜ ಈಗ ಬರೀ ಚರ್ಮ ಮತ್ತು ಮೂಳೆಗಳಿದ್ದ ಬಡಕಲು ಪ್ರಾಣಿಯಂತಾಗಿದ್ದ. ಮುಖದಲ್ಲಿ ಕಳೆಯಿರಲಿಲ್ಲ. ಕೆನ್ನೆ ಕಣ್ಣುಗಳು ಒಳಸೇರಿ ಕುಳಿಬಿದ್ದಿದ್ದವು. ದಂಡು ಸಾಲಾಗಿ ನಿಂತ ಮೇಲೆ ಮೆರವಣಿಗೆ ಹೊರಟಿತು. ಮೆರವಣಿಗೆಯ ಹಿಂದೆ ಯುವರಾಜನ ಆನೆ ಮತ್ತು ಶಿಖರಸೂರ್ಯರ ಕುದುರೆಗಳು ಬರುತ್ತಿದ್ದವು.

ರಸ್ತೆಯ ಇಕ್ಕೆಲಗಳಲ್ಲಿ ಗಿಜಿಗಿಜಿ ಜನ ತುಂಬಿ ಯುವರಾಜ ಮತ್ತು ಶಿಖರಸೂರ್ಯರಿಗೆ ಜಯಕಾರ ಒದರುತ್ತಿದ್ದರು. ಇಬ್ಬರೂ ಜನರ ಜಯಕಾರ ಮತ್ತು ಅಭಿನಂದನೆಗಳನ್ನು ಮುಖದ ತುಂಬ ನಗುತ್ತ ಕೈಬೀಸಿ ಸ್ವೀಕರಿಸುತ್ತಿದ್ದರು. ಮೆರವಣಿಗೆ ಮುಂದುವರಿದಂತೆ ಮನೆಮನೆಯ ಸ್ತ್ರೀಯರು ನೀರು ನೀಡಿ ಆರತಿ ಬೆಳಗಿದರು. ಕೆಲವರು ಅವರ ಮೇಲೆ ಹೂ ಎಸೆದು ತಮ್ಮ ಆನಂದ ಅಭಿಮಾನಗಳನ್ನ ವ್ಯಕ್ತಪಡಿಸಿದರು. ಗೆಲುವು ತಂದುಕೊಟ್ಟ ಮತ್ತು ಕೊಟ್ಟ ಮಾತನ್ನು ಉಳಿಸಿಕೊಂಡ ಶಿಖರಸೂರ್ಯ ಬಹುದೊಡ್ಡ ಜನನಾಯಕನಾಗಿ ಬಿಟ್ಟಿದ್ದ. ಇವನ ಮೇಲೆ ಜನ ಯುವರಾಜನ ಎರಡು ಪಟ್ಟು ಹೂಮಳೆಗೆರೆದರು. ಇವನ ಜಯಘೋಷ ಮುಗಿಲು ಮುಟ್ಟುವಂತೆ ಒದರಿದರು. ಇಲ್ಲಿಯವರೆಗೆ ಅರಮನೆ ಮಾತ್ರ ಒಪ್ಪಿಕೊಂಡಿದ್ದ ರಾಜವೈದ್ಯನನ್ನು ಈಗ ಇಡೀ ಕನಕಪುರಿ ತಮ್ಮವನನ್ನಾಗಿ ಒಪ್ಪಿಕೊಂಡಿತು.

ಅರಮನೆಯಲ್ಲಿ ಮಹಾರಾಜ ಮಹಾರಾಣಿಯವರಿಬ್ಬರೂ ವಿಶೇಷ ಅಲಂಕಾರ ಮಾಡಿಕೊಂಡು ಹೊಳೆವ ಕಂಗಳಿಂದ ಕಾಯುತ್ತಿದ್ದರು. ಮಹಾರಾಜನ ಎದ್ದು ಕಾಣುವ, ಕೊಂಚ ಮಿತಿಮೀರಿ ಬೆಳೆದ ಕೊಬ್ಬಿನಿಂದಾಗಿ ಆತನ ಕೆನ್ನೆ ಫಳಫಳ ಹೊಳೆಯುತ್ತಿದ್ದವು. ಹಿಂದೆ ತಾನು ಬಿಳಿಗಿರಿಯನ್ನು ಗೆದ್ದಾಗಿನ ಪಟ್ಟೆ ಪೀತಾಂಬರದ ಉತ್ತರೀಯ ಮತ್ತು ಕೆಂಪಂಚಿನ ನೂಲು ಕಟ್ಟಿಕೊಂಡು ವಿಜಯದ ಕಡಗ ಧರಿಸಿ ಸೊಗಸುಗಾರನಂತೆ ಕಾಣುತ್ತಿದ್ದ. ಮಹಾರಾಣಿ ಜರತಾರಿ ಕುಸುರಿಯ ಪೀತಾಂಬರದಿಂದ ಅಲಂಕೃತಳಾಗಿದ್ದಳು. ಚಿಕ್ಕಮ್ಮಣ್ಣಿಯೂ ಅಲ್ಲಿಯೇ ನಿಂತಿದ್ದಳು. ಮಹಾರಾಣಿ ಮಗನನ್ನು ತಬ್ಬಿಕೊಂಡು ಅತ್ತುಬಿಟ್ಟಳು.

ಅರ್ಥಕೌಶಲ ಶಿಖರಸೂರ್ಯನಿಗೆ ಬಂಗಾರದ ಕಡಗ, ಮುಂಗೈ ಸರಪಳಿ ಕೊಟ್ಟು, ದೊಡ್ಡ ಹಚ್ಚಡ ಹೆಗಲ ಮೇಲೆ ಹೊದಿಸಿ, ವೀಳ್ಯ ಕೊಟ್ಟು ಸನ್ಮಾನಿಸಿದ. ಮಹಾರಾಜ ಮತ್ತು ಮಹಾರಾಣಿ ಬಿಳಿಯ ಕುದುರೆ, ಬಿಳಿಯ ಸತ್ತಿಗೆ ಕೊಟ್ಟು ಬಿರುದಾವಳಿಗಳಿಂದ ಹೊಗಳಿಸಿ ಉಂಬಳಿ ಉತ್ತಾರ ಬಿಟ್ಟರು. ವರ್ತಕ ಸಂಘದವರು ಜರದ ಶಲ್ಯ, ರೇಷ್ಮೆ, ದೋತರ, ಮೊಳಕೈ ಕಡಗ ಕೊಟ್ಟು ಸತ್ಕರಿಸಿದರು. ಶಿಖರಸೂರ್ಯ ಬದೆಗನನ್ನು ಮರೆಯಲಿಲ್ಲ. ಸೇನಾಪತಿ ಕಾಲ್ಮುರಿದು ಬಿದ್ದುದರಿಂದ ಖಾಲಿಯಾದ ಅವನ ಸ್ಥಳಕ್ಕೆ ಬದೆಗನನ್ನು ನಿಯಮಿಸುವಂತೆ ಮಾಡಿದ.

ಇನ್ನೊಂದು ದಿನ ಸುಕ್ರ, ಬದೆಗರನ್ನು ಕರೆದು ಬೆಟ್ಟದಯ್ಯನಿಗೆ ಬರುವ ಸೋಮವಾರ ಮೂರು ಕುಡುತೆ ತುಂಬೆ ಹೂ, ಮೂರು ಬಳ್ಳ ಬೆಳ್ತಿಗೆ ಅಕ್ಕಿ, ವೀಳ್ಯ, ಕಲ್ಲುಸುಣ್ಣ, ಕಪಿಲೆ ಹಾಲು, ಐದು ತೆಂಗಿನ ಕಾಯಿ ಕೊಟ್ಟು ತನ್ನ ಹೆಸರಿನಲ್ಲಿ ಪೂಜೆ ಪುನಸ್ಕಾರ ಆಚರಿಸಲು ಹೇಳಿ ಐದು ಹಣ ಕೊಟ್ಟ. ಹತ್ತು ಹಣ ಕೊಟ್ಟು ಬೆಟ್ಟದಯ್ಯನಿಗೆ ಒಂಟಿ ದೀವಟಿಗೆ, ತಾಳೆಗರಿಯ ಬೆಳ್ಗೊಡೆ, ಕೋಲು ಗಗ್ಗರ ಕಂಚಿನ ಗುರಾಣಿಯ ಉಡುಗೊರೆ ಕೊಡೆಂದು ಹೇಳಿದ. ಸಾವಿರ ಹಣ ಕೊಟ್ಟು ಬೆಟ್ಟದಯ್ಯನಿಗೆ ನೂರಿಪ್ಪತ್ತು ಕಂಬಗಳ ಗುಡಿ ಕಟ್ಟಿ, ನೂರಪ್ಪತ್ತು ಗೊಂಬೆಗಳ ಮಾಡಿ ಕಂಬಕ್ಕೊಂದು ಗೊಂಬೆ ನಿಲ್ಲಿಸುವಂತೆಯೂ, ಅಂಗಳದಲ್ಲಿ ಆನೆಕಲ್ಲಿನ ಕೆಲಸ ಮಾಡುವಂತೆಯು, ವರ್ಷಂಪ್ರತಿ ನೇಮ, ಉತ್ಸವ ವ್ಯವಸ್ಥೆ ಮಾಡುವಂತೆಯೂ ಹೇಳಿದ. ತಮ್ಮ ದೇವರ ಬಗ್ಗೆ ತಮ್ಮೊಡೆಯನ ಭಕ್ತಿಯ ನೋಡಿ ಸುಕ್ರ ಬದೆಗರಿಬ್ಬರಿಗೂ ಒದ್ದೆ ಕಣ್ಣಿನವರಾಗಿ, ಆನಂದಗಳ ಮುಕ್ಕಳಿಸುವವರಾಗಿ ಅಂಡೆತ್ತಿ ಬಾಗಿ ನಮಸ್ಕಾರವನ್ನಾಚರಿಸಿ ಹಣದ ಸಮೇತ ತಮ್ಮ ಹಟ್ಟಿಗೆ ಹೋದರು.

ರಾಜವೈದ್ಯನ ಮಕ್ಕಳಿಬ್ಬರಿಗೂ ಹುಟ್ಟು, ಬಳಿಗಳ ಹೆಸರು ಹೇಳಿ, ಮಗನಿಗೆ ರವಿಕೀರ್ತಿಯೆಂದೂ, ಮಗಳಿಗೆ ಮುದ್ದುಗೌರಿಯೆಂದೂ ಮೂರು ಮೂರು ಸಲ ಕೂಗಿ ಕರೆದು, ಮರದ ತೊಟ್ಟಿಲುಗಳಿಗೆ ಬಣ್ಣದ ಗುಬ್ಬಿಗಳನ್ನು ಕಟ್ಟಿ ಅಟ್ಟದ ತೋಳಿಗೆ ಕಟ್ಟಿದರು. ಚಿಕ್ಕಮ್ಮಣ್ಣಿ ಶಿವ ಶಿವ ಪದ ಹೇಳಿ ಜೋಗುಳಗಳ ಹಾಡಿದಳು. ಬಿಳಿಗಿರಿಯಿಂದ ಮುದ್ದು ಗೌರಿಗೆ ಅತ್ತೀಕಾಯಿ ಕುಂಡಲ, ಕಂಠಕ್ಕೆ ಪಾರಿಜಾತ ಮಾಲೆ, ಕೈಗೆ ಮುರಿಗಿ ಬಳೆ, ಕಾಲಿಗೆ ಹುರಿಗೆಜ್ಜೆ, ಸೊಂಟಕ್ಕೆ ಪಟ್ಟಿ ಮಾಡಿಸಿ ಕಳಿಸಿದ್ದರು. ರವಿಕೀರ್ತಿಗೆ ಆಡಲು ಮುತ್ತಿನ ಚೆಂಡು, ಹವಳದ ಹರಳು, ಚಿನ್ನದ ಬಿಲ್ಲುಬಾಣಗಳ ಕಳಿಸಿದ್ದರು. ಮಕ್ಕಳಿಬ್ಬರೂ ಬಾಳುತ್ತ ಬೆಳೆಯತ್ತ ಒಂದು ವರ್ಷ ಕಳೆವಾಗ ಕೈ ಹಿಡಿದು ನಡೆಯುತ್ತ, ಎರಡು ವರ್ಷಗಳ ಬೆಳವಣಿಗೆ ಬೆಳೆದರು. ಎರಡು ವರ್ಷ ಕಳೆವಾಗ ನಾಲ್ಕರ ಪ್ರಾಯದ ಬೆಳವಣಿಗೆ ಹೊಂದಿ, ಸಣ್ಣ ಪ್ರಾಯದಲ್ಲಿ ದೊಡ್ಡ ಬುದ್ದಿಯ ತೋರಿಸುವಂಥವರಾದರು. ಆಟಗುಳಿ ಮಕ್ಕಳಿಬ್ಬರೂ ಹಾರಾಟವಾಡಿ ತಂದೆತಾಯಿಗಳಿಬ್ಬರ ಕಣ್ಣಿಗೆ ಹಬ್ಬವಾದರು. ಮಕ್ಕಳು ಕುಣಿದು ಕುಪ್ಪಳಿಸಿದರೆ ಶಿಖರಸೂರ್ಯ ಮತ್ತು ಛಾಯಾದೇವಿಯರಿಬ್ಬರೂ ಉಕ್ಕಿ ಬರುವ ಹರ್ಷ ಮತ್ತು ನಗುವನ್ನು ಮಿತಿಯೊಳಗಿಡಲು ಪ್ರಯತ್ನಿಸುತ್ತಿದ್ದರು. ತಡೆಯಲಾರದಾದಾಗ ಪರಸ್ಪರ ಮುಖ ನೋಡಿಕೊಂಡು ಮತ್ತೆ ನಗುತ್ತಿದ್ದರು.

ರವಿಕೀರ್ತಿಗೆ ಕಾಳಗದ ವಿದ್ಯಾಬುದ್ದಿ ಓದು ಬರಹ ಕಲಿಸಿದರು. ಆತ ಒಂದನೇ ವರ್ಷ ಒಂದನೇ ಕಿತಾಬು ಕಲಿತ. ಎರಡನೇ ವರ್ಷ ಎರಡನೇ ಕಿತಾಬು ಕಲಿತ, ಅದಾಗಿ ಮೂರನೇ ವರ್ಷ ಮೂರನೇ ಕಿತಾಬು ಕಲಿತು ಕಲಿಕೆಯಲ್ಲಿ ಮಿಗಿಲಾದ. ಶಿಖರಸೂರ್ಯ ಮಕ್ಕಳಿಗೆ ಸ್ವಯಂ ಕೆಲವು ಪಾಠಗಳನ್ನು ಹೇಳಿದ: ಅವನ ಪ್ರಕಾರ ಈ ಜಗತ್ತು ನಡೆಯೋದು ಎರಡರಿಂದ: ಒಂದು ಚಿನ್ನ, ಇನ್ನೊಂದು ಬುದ್ಧಿಶಕ್ತಿ. ಚಿನ್ನದಿಂದ ಬಲ ಬರುತ್ತದೆ. ಬಲದಿಂದ ಅಧಿಕಾರ ಬರುತ್ತದೆ. ಚಿನ್ನ ಗಳಿಸಲಿಕ್ಕೆ ಮತ್ತು ಆ ಮೂಲಕ ಅಧಿಕಾರ ಪಡೆದು ಜನರನ್ನಾಳಲಿಕ್ಕೆ ಬುದ್ಧಿಶಕ್ತಿ ಬೇಕು.

ಮನುಷ್ಯ ದೇಹದಂಡನೆಯಿಂದ ಚಿನ್ನ ಗಳಿಸಬೇಕು ಎನ್ನುತ್ತಾರೆ. ಅದು ತಪ್ಪು. ದೇಹದಂಡನೆ ಮಾಡಲಿಕ್ಕೆ ಮನುಷ್ಯನೇನು ಪ್ರಾಣಿಯೆ? ಪ್ರಾಣಿಗಳಿಗೆ, ಪ್ರಾಣಿ ಸಮಾನರಿಗೆ ಬುದ್ಧಿಶಕ್ತಿ ಇರುವುದಿಲ್ಲವಾದ್ದರಿಂದ ಅಂಥವರು ದೇಹದಂಡನೆ ಮಾಡುತ್ತಾರೆ. ಆದರೆ ಮನುಷ್ಯ ಬುದ್ಧಿಜೀವಿ! ತಲೆ ಉಪಯೋಗಿಸಬೇಕು. ಆ ಮೂಲಕ ಚಿನ್ನ, ಚಿನ್ನದಿಂದ ಬಲ, ಬಲದಿಂದ ಅಧಿಕಾರ ಪಡೆದು ಜಗತ್ತನ್ನಾಳಬೇಕು. ಅಂದರೆ ಪ್ರಾಣಿಗಳನ್ನೂ, ಪ್ರಾಣಿಸಮಾನರನ್ನೂ ಆಳಬೇಕು.

ಬುದ್ಧಿಶಕ್ತಿಯನ್ನು ಅರಳಿಸುವುದಕ್ಕಾಗಿ ಶಿಖರಸೂರ್ಯ ಬೀಜಗಣಿತ, ರೇಖಾಗಣಿತಗಳನ್ನು ಮಕ್ಕಳಿಗೆ ಕಲಿಸಲು ಉತ್ಸುಕನಾಗಿದ್ದ. ರವಿಕೀರ್ತಿ ಹತ್ತರವರೆಗೆ ಬೆರಳು ಮಡಿಚಿ ಎಣಿಸಿ ತಂದೆಯನ್ನು ಆನಂದಗೊಳಿಸಿದ. ಮಗನ ದಿನಚರಿ, ಯಾವುದೇ ಕೆಲಸ ಆಟಗಳು ಕೂಡ ಬೀಜಗಣಿತದ ಹಾಗೆ ನಿರ್ದಿಷ್ಟ ಪರಿಣಾಮದ ಕಡೆಗೆ ಓಡುವಂತೆ ಕಲಿಸಿದ. ಆಮೇಲೆ ಉಚ್ಚಗಣಿತಶಾಸ್ತ್ರದ ಸಮಸ್ಯೆಗಳು, ಅವುಗಳ ಪರಿಹಾರಗಳು, ಜೀವನದಲ್ಲಿ ಸಹಜವಾಗಿ ಉದ್ಭವಿಸುವ ಸಮಸ್ಯೆಗಳು ಕರಾರುವಾಕ್ಯಾದ ಪರಿಣಾಮಗಳು-ಇವೇ ಮುಂತಾದ ಪಾಠಗಳನ್ನು ಮುಂದುವರೆಸಿ ಮಗನಿಗೆ ಹೇಳಿದ

“ನಮ್ಮಲ್ಲಿದ್ದಾರಲ್ಲ ಅನೇಕ ‘ಅಗಣಿತರು’… (ಗಣಿತ ಬಾರದವರಿಗೆ ಅವನೇ ಕೊಟ್ಟ ಹೆಸರು)

ನೀನು ಅವರಂತಾಗಬಾರದಣ್ಣ, ಸತತ ಅಭ್ಯಾಸದಿಂದಷ್ಟೇ ಗಣಿತದಲ್ಲಿ ಆಸಕ್ತಿ ಮುಡೋದು. ಅದೊಮ್ಮೆ ಮೂಡಿದರೆ ನಿನ್ನ ತಲೆಯಲ್ಲಿರೋ ದಡ್ಡತನವನ್ನ ಅದೇ ಓಡಿಸುತ್ತದೆ.”

ಗೌರಿಯ ತಲೆಗೆ ಮಾತ್ರ ಗಣಿತ ಹತ್ತಲೇ ಇಲ್ಲ. ಗಣಿತ ಹೇಳಿಕೊಡುವಾಗಿನ ಅಪ್ಪನ ಕಣ್ಣುಗಳನ್ನು ಕಂಡು ಆಕೆ ಬೆವರುತ್ತಿದ್ದಳು. ಅವನ ಪಾಠ ಸ್ಪಷ್ಟವಾಗಿದ್ದರೂ ಭಯವೇ ಅವಳ ಗ್ರಹಿಕೆಗೆ ಅಡ್ಡಿಯಾಗಿತ್ತು. ಹೀಗಾಗಿ ಪಾಠ ನಡೆದಾಗ ಆತಂಕ ಭೀತಿಗಳಿಂದ ಮುಖ ಬಿಳಿಚಿಕೊಂಡು ಮಂಕಾಗಿ ಕೂರುತ್ತಿದ್ದಳು. ಹಾಗೆ ಕೂತಾಗ ಅವಳಿಗೆ ಯಾವುದೂ ಕೇಳಿಸುತ್ತಿರಲಿಲ್ಲ. ಕಾಣಿಸುತ್ತಿರಲಿಲ್ಲ. ಆತ್ಮಚಿಂತನೆ ಮಾಡುವಾಗ ಮಾತ್ರ ಅವಳ ಕಣ್ಣುಗಳು ಸೊಬಗನ್ನು ಮುಕ್ಕುಳಿಸುತ್ತಿದ್ದವು. ಆದರೆ ಆ ಕ್ಷಣವೆ ಹಿಂದಕ್ಕೆ ಕೈ ಕಟ್ಟಿಕೊಂಡು, ಹುಬ್ಬು ಗಂಟಿಕ್ಕಿ, ಕಣ್ಣುಗಳನ್ನು ಕಿರಿದುಗೊಳಿಸಿ ಆಲೋಚಿಸುತ್ತ ಮೂಲೆಯಿಂದ ಮೂಲೆಗೆ ಹೆಜ್ಜೆ ಹಾಕುವ ತಂದೆಯನ್ನು ನೆನೆಯುತ್ತ ಅವನ ದೃಷ್ಟಿ ತನ್ನ ಮೇಲೆಯೇ ನಾಟಿಕೊಂಡಿದೆಯೆಂದು ಚಡಪಡಿಸುತ್ತಿದ್ದಳು!