ಕುದುರೆ ದಣಿದಿತ್ತು. ಒಂದು ವಾರದಿಂದ ಓಡುತ್ತಲೇ ಇದ್ದ ಕುದುರೆ ರಾತ್ರಿ ಯಾವುದಾದರೂ ಹಟ್ಟಿ ಸಿಕ್ಕರೆ ಒಂದೆರಡು ಗಂಟೆ ನಿದ್ದೆ ಮಾಡಿದ್ದರೇ ಹೆಚ್ಚು, ಅಷ್ಟರಲ್ಲಿ ಸವಾರ ಬಂದು ಹತ್ತಿ ಪಕ್ಕೆಗೆ ಒದೆಯುತ್ತಿದ್ದ. ಹಗಲು ಹೊತ್ತಿನಲ್ಲಾದರೆ ಜನ ಇಲ್ಲದ ಸ್ಥಳದಲ್ಲಿ ತುಸು ಹೊತ್ತು ತಂಗಿ ಹುಲ್ಲು ಮೇದು, ನೀರು ಕುಡಿದು ಮತ್ತೆ ಓಡಬೇಕು. ಪ್ರಯಾಣದ ಕೊನೆಕೊನೆಗಂತೂ ಕುದುರೆಯ ಕಣ್ಣು ಸಂಕೋಚಗೊಂಡು ಮನಸ್ಸಿಲ್ಲದೆ ತೆರೆದಂತೆ ಕಾಣುತ್ತಿದ್ದ. ಬಿಟ್ಟೂ ಬಿಡದೆ ಓಡಿ ಬಂದುದರಿಂದ ಕುದುರೆ ಮತ್ತು ಸವಾರ ಇಬ್ಬರ ಮೈತುಂಬ ಧೂಳಡರಿ, ಬಟ್ಟೆ ಬರೆ ಹೊಲಸಾಗಿ ಇಬ್ಬರ ಮುಖಗಳಲ್ಲೂ ಧೂಳಿನಲ್ಲಿ ಉರುಳಾಡಿದ ಶವದ ಕಳೆಯಿತ್ತು. ಕುದುರೆ ಎಲ್ಲಿಗೆ ಹೊರಟಿದೆ ಎಂದು ತಿಳಿಯುವಷ್ಟು ಚೈತನ್ಯ ಸವಾರನಿಗಿರಲಿಲ್ಲ. ಸವಾರ ನಿರ್ದೇಶಿಸಲಿಲ್ಲವಾದರೂ ತನ್ನ ಯಜಮಾನನ ಮನೆ ಯಾವುದೆಂದು ತಿಳಿದುದರಿಂದ, ಸಂಶಯವಿಲ್ಲದೆ ತರುಮರಗಳಿರುವ ಪ್ರಾಂಗಣಕ್ಕೆ ಕುದುರೆ ಬಂದು ನಿಂತಿತು.

ಕಲ್ಲಿನಲ್ಲಿ ಕಟ್ಟಿದ ಎರಡಂತಸ್ತಿನ, ಚಿತ್ತಾರದ ಬಾಗಿಲುಳ್ಳ, ದಪ್ಪ ಮರದಲ್ಲಿ ಮಾಡಿದ ಕಿಟಕಿಗಳುಳ್ಳ, ನೋಡಿದರೆ ಗೌರವಸ್ಥ ಶ್ರೀಮಂತರ ಮನೆಯೆಂದು ಗೊತ್ತಾಗುವಂಥ ಮನೆ ಅದು. ಮನೆಯ ಸೇವಕ ಕುದುರೆಯನ್ನು ಕಂಡವನೇ ಅಪರಿಚಿತ ಸವಾರ ನನ್ನ ನೋಡಿ ಪುನಃ ಕುದುರೆಯನ್ನು ಗುರುತಿಸಿ “ಕುದುರೆಯೇನೋ ನಮ್ಮದೇ, ಆದರೆ ಈತ ಯಾರು? ಯಾಕೆ? ಹ್ಯಾಗೆ?” ಎಂದು ಬೆರಗಾಗಿ ಒಡೆಯರಿಗೆ ತಿಳಿಸಲು ದೊಡ್ಡ ಮನೆಗೋಡಿದ.

ಒಡೆಯನೂ ತೊಲೆಬಾಗಿಲಲ್ಲಿ ನಿಂತು ಕುದುರೆ ಮತ್ತು ಸವಾರನನ್ನೇ ಬೆರಗಿನಿಂದ ನೋಡುತ್ತ ‘‘ಕುದುರೆ ಒಯ್ದವನೇ ಬೇರೆ: ತಂದವನೇ ಬೇರೆ! ನಿಧಾನವಾಗಿ ತಿಳಿದರಾಯ್ತು, ಅವ ಬರಲಿ’’ ಎಂದು ಕಟ್ಟೆಯ ಮೇಲೆ ಕಾಲುಗಳನ್ನು ಇಳಿಬಿಟ್ಟು ಕೂತ. ಸೊಂಟದ ದೋತ್ರ, ಹೆಗಲ ಮೇಲೊಂದು ಕೈಬಟ್ಟೆ ಬಿಟ್ಟು ಮೈಮೇಲೆ ಬೇರೆ ಬಟ್ಟೆಗಳಿರಲಿಲ್ಲ. ಕಿವಿಯಲ್ಲಿ ದೊಡ್ಡ ಓಲೆ, ದೊಡ್ಡ ತಲೆಯ ಹಿಂದೆ ಕೂದಲಿದ್ದು ಬೆನ್ನು, ಭುಜದ ಮೇಲೆ ಒರಗಿದ್ದವು. ಬೆರಳುಗಳಲ್ಲಿ ಬಣ್ಣದ ಉಂಗುರಗಳಿದ್ದು ನೀಳವಾದ ಕೈಗಳನ್ನು ಕೊಂಚ ಉಬ್ಬಿದ ಹೊಟ್ಟೆಯ ಮೇಲೆ ಇಟ್ಟುಕೊಂಡು ಆಗಂತುಕನನ್ನೇ ನೋಡುತ್ತ ಕೂತ. ‘‘ಇವನ್ಯಾರೋ! ನಮ್ಮ ಕುದುರೆಯೇನೋ ಬಂತು ಸೈ, ಹೊಳೆಯ ಏನಾದ?’’ ಎಂದು ಇನ್ನೊಮ್ಮೆ ಯೋಚಿಸಿ ‘‘ಗೊತ್ತಾದೀತು’’ ಅಂತ ಮತ್ತೊಮ್ಮೆ ಸಮಾಧಾನ ಮಾಡಿಕೊಂಡು ಕೂರುವಷ್ಟರಲ್ಲಿ ಜಯಸೂರ್ಯ ಕುದುರೆಯಿಂದಿಳಿದ. ಸೇವಕ ಕುದುರೆ ಹಿಡಿದುಕೊಂಡು ಅದರ ಒಡಲ ಸುತ್ತ ಕಟ್ಟಿದ ಪಟ್ಟಿಯನ್ನೂ ಕೊರಳ ಪಟ್ಟಿಯನ್ನೂ ಸಡಿಲಿಸಿದ. ಜೊಲ್ಲಿನಿಂದ ಅಂಟಂಟಾದ ಕಡಿವಾಣವನ್ನು ಅದರ ಬಾಯಿಂದ ಹೊರತೆಗೆದು ಪಾಗಾದತ್ತ ಕರೆದೊಯ್ದ. ಜಯಸೂರ್ಯ ಈ ಕಡೆ ಬಂದ.

ಎತ್ತರವಾದ, ತಾಮ್ರ ಬೆರೆತ ಉಕ್ಕಿನ ದೇಹದ, ಠೀವಿಯ ನಡಿಗೆಯ, ದಪ್ಪ ಹುಬ್ಬಿನ, ಕಿವಿಗೂದಲಿನ ವಿಲಕ್ಷಣ ಮುಖದ, ದಣಿದುದರಿಂದ ಓದಲಾಗದ ಕಣ್ಣುಳ್ಳ ಜಯಸೂರ್ಯನ ನೋಡಿ-ಇವನ್ಯಾವನೋ ದೊಡ್ಡ ಮನುಷ್ಯನೇ ಇರಬೇಕು-ಅಂದುಕೊಂಡ, ಯಜಮಾನ. ಸೊಂಟದ ದಟ್ಟಿ ಮತ್ತು ಹೆಗಲ ಕಂಬಳಿ ವಿನಾ ಬೇರೆ ಬಟ್ಟೆಯಿರಲಿಲ್ಲ. ಧೂಳಡರಿದ ನೀಳ ಕೂದಲು ಭುಜದ ಮ್ಯಾಲೊರಗಿ ನಡಿಗೆಯ ಲಯಾನುಸಾರ ನಲುಗುತ್ತಿದ್ದವು. ಕುದುರೆ ಇಳಿದಾಗಿನಿಂದ ತನ್ನಲ್ಲಿಗೆ ಬರುವ ತನಕ ಆ  ಈ ಕಡೆ ನೋಡದೆ ಆಗಂತುಕನನ್ನೇ ನೋಡುತ್ತ ಕೂತ. ಬಿಲಿಸಲಿನಲ್ಲಿ ಬಂದುದರಿಂದ ಅವನ ಮುಖ ಕೆಂಪೇರಿತ್ತು. ಬೆವರಿನಿಂದ ಒದ್ದೆಯಾದ ಅವನ ಕಣ್ಣು ಹೆಚ್ಚಾಗಿಯೇ ಹೊಳೆಯುತ್ತಿದ್ದವು. ಆತ ಬರುತ್ತಲೂ ಕೂತೇ ಇರಬೇಕೆಂಬ ನಿಲುವು ಸಡಲಿ ಇದ್ದು ಬಾಗಿಲಿಗೆ ಬಂದ. ಯಜಮಾನನ ಮನೆಯೆದುರು ಬಾವಿಗೆ ಹೋಗಿ ನೀರು ತಕ್ಕೊಂಡು ಕೈಕಾಲು ತೊಳೆದುಕೊಂಡು ಮುಖ ಶುದ್ಧಿ ಮಾಡಿಕೊಂಡು ಬಂದು ಆಗಂತುಕ ಕೇಳಿದ:

“ಅರ್ಥಕೌಶಲ ನೀವೇನೊ?”

“ಹೌದು”

ಎಂದೊಂದು ಆಸನ ತೋರಿಸಿ ಕೂರಲಿಕ್ಕೆ ಸನ್ನೆ ಮಾಡಿದ. ಜಯಸೂರ್ಯನಿಗೆ ಇಷ್ಟು ಉಪಚಾರ ಸಾಕಾಯ್ತು, ಹೋಗಿ ಕೂತ.

“ನಿಮ್ಮ ಸೇವಕ ಹೊಳೆಯ ಎಂಬಾತನನ್ನು ಹುಲಿ ಮುರಿಯಿತು. ನಾನೂ ಸಹಾಯ ಮಾಡಲಾಗಲಿಲ್ಲ. ನಾನಲ್ಲಿಗೆ ತಲುಪಿ ಹುಲಿಯನ್ನ ಓಡಿಸಿದಾಗ ಅವನಾಗಲೇ ಅರೆಜೀವವಾಗಿದ್ದ. ನಿಮಗೆ ತಲುಪಿಸಲು ಇದಿಷ್ಟನ್ನು ಕೊಟ್ಟ ತಗೊಳ್ಳಿ.”

-ಎಂದು ಹೇಳಿ ಒಂದು ಗಂಟನ್ನು ಕೊಟ್ಟ. ಅರ್ಥಕೌಶಲ ತಗೊಂಡು ನೋಡಿದ. ತಾನು ಸೇವಕರಿಗೆಂದು ಕೊಡುವ ತನ್ನ ಹೆಸರು ಬರೆದ ಕಠಾರಿಯಿತ್ತು. ಗಂಟಿನಲ್ಲಿ ಹಣವಿದೆಯೆಂದು ಗೊತ್ತಾಯ್ತು. ಬಿಚ್ಚಲಿಲ್ಲ. ಸೇವಕಿ ಆಗಲೇ ಬಾಯಾರಿಕೆಗೆ ಮುಂದೆ ಇಟ್ಟು ಹೋಗಿದ್ದಳು. ಅರ್ಥಕೌಶಲನೇ ಬೆಲ್ಲದ ಬಟ್ಟಲು ಮತ್ತು ನೀರಿನ ಚೊಂಬನ್ನು ತೋರಿಸಿ ‘ಬಾಯಾರಿಕೆಗೆ’ ಅಂದ. ಜಯಸೂರ್ಯ ಬೆಲ್ಲದ ಸಣ್ಣ ಕರಣಿಯನ್ನ ಬಾಯಿಗೆ ಒಗೆದುಕೊಂಡು ಚೊಂಬನ್ನೆತ್ತಿ ಗಟ ಗಟ ನೀರು ಕುಡಿದ. ಅಲ್ಲಿದ್ದವರು ತನ್ನನ್ನೇ ನೋಡುತ್ತಿರುವುದನ್ನು ಗಮನಿಸುತ್ತ ಬಾಯೊರೆಸಿಕೊಂಡ. ಅರ್ಥಕೌಶಲ ಮಾತ್ರ ಇನ್ನೂ ಕುತೂಹಲದಲ್ಲಿಯೇ ಇದ್ದ. ಕಣ್ಣು ಸಂಕೋಚಗೊಳಿಸಿ ಹರಿತವಾದ ನೋಟವನ್ನ ಇವನ ಹೃದಯದಲ್ಲಿ ನಾಟಿಸಿ ಇವನರಿಯದಂಗೆ ನೋಡಲು ಹಾರೈಸುತ್ತಿದ್ದ. ಜಯಸೂರ್ಯ ಇದನ್ನ ಗಮನಿಸಿ ಮುಂದುವರೆಸಿದ:

“ನಿಮ್ಮ ಸೇವಕ ಹೊಳೆಯನ ಕುದುರೆಯಿಂದ ನನಗೆ ಸಹಾಯವಾಯಿತು. ನಾನು ಕವಿರಾಜ. ನಿಮ್ಮ ರಾಜರಿಗೆ ಜಡ್ಡಿದೆಯೆಂದು ಕೇಳಿದೆ. ಅವಕಾಶವಾದರೆ ಮದ್ದು ಕೊಡುವಾ ಅಂತ ಬಂದೆ.” ಅಂದ.

“ನಿಮ್ಮ ಹೆಸರು?”

“ಶಿಖರಸೂರ್ಯ?”

“ಪೂರ್ತಿ ಹೆಸರು?”

“ಶಿಖರಸೂರ್ಯ ಹೆಗಡೆ”

ಭೇಟಿಯಾದವರ ಮೇಲೆ ಭೌತಿಕ ಪ್ರಭಾವ ಬೀರಿ ಅವರಲ್ಲಿ ಸ್ನೇಹೋಲ್ಲಾಸಗಳನ್ನ ಉಂಟು ಮಾಡುವ ಒಂದು ಕಲೆ ಜಯಸೂರ್ಯನಲ್ಲಿತ್ತು. ಅದನ್ನ ಈಗ ಸರಿಯಾಗಿಯೇ ಉಪಯೋಗಿಸಿದ್ದ. ಅರ್ಥಕೌಶಲ ತನ್ನ ಮಾತನ್ನು ಆಸಕ್ತಿಯಿಂದ ಆಲಿಸುತ್ತಿದ್ದಾನೆಂದು ಗೊತ್ತಿದ್ದೂ ತಾನು ಮಾತ್ರ ಯಾರನ್ನೂ ಒಲಿಸಿಕೊಳ್ಳಲು ಆತುರನಾಗಿಲ್ಲೆಂಬಂತೆ ಮಾತಾಡಿದ. ಅರ್ಥಕೌಶಲ ನಂಬಲಿಲ್ಲ. “ವಿಶ್ರಾಂತಿ ಆಗಲಿ, ಆಮೇಲೆ ಮಾತಾಡುವಾ” ಎಂದು ಹೇಳಿ ತನ್ನ ಖಾಸಗಿ ಅತಿಥಿಗೃಹದ ಮಹಡಿಗೆ ಕರೆದೊಯ್ಯುವಂತೆ ಅಲ್ಲಿದ್ದ ಸೇವಕನಿಗೆ ಹೇಳಿದ. ಇಬ್ಬರೂ ಹೋದಮೇಲೆ ಅರ್ಥಕೌಶಲ ತನಗೆ ಕೊಟ್ಟ ಗಂಟಿನಲ್ಲಿಯ ಹಣವ ಎಣಿಸಿದ. ಸರಿಯಾಗಿ ಮುನ್ನೂರು ಹಣ ಇತ್ತು. ಆದ್ದರಿಂದ ಈತ ಹೊಳೆಯನನ್ನು ಉದ್ದೇಶಪೂರ್ವಕ ಕೊಂದು ಬಂದವನಲ್ಲವೆಂದು ನಂಬಿಕೆಯಾಯಿತು. ಇನ್ನಿವನ ವೈದ್ಯವಿದ್ಯೆ, ರಾಜನ ಜಡ್ಡಿಗೆ ವೈದ್ಯನಾಗಿ ಒಂದು ಅವಕಾಶ ಕೊಟ್ಟು ನೋಡುವುದರಲ್ಲಿ ಹಾನಿಯೇನೂ ಇಲ್ಲವೆನ್ನಿಸಿತು. ಇಂದಿನ ಸಂಜೆ ಅರಮನೆಗೆ ಕರೆದೊಯ್ದು ರಾಜರ ಭೇಟಿ ಮಾಡಿಸಿ ರಾತ್ರಿ ಧರ್ಮಶಾಲೆಗೋ, ಅತಿಥಿಗೃಹಕ್ಕೋ ಅಟ್ಟಿದರಾಯಿತೆಂದು ಅರ್ಥಕೌಶಲ ಅಂದುಕೊಂಡ.

ಎರಡೇ ಕಿಡಕಿಗಳಿದ್ದ ಕಲ್ಲಿನ ದೊಡ್ಡ ಕೋಣೆಯಲ್ಲಿ ಮಂಚದ ಮೇಲೆ ಅಡ್ಡಾಗಿ ಜಯಸೂರ್ಯ ಚಿಂತಿಸಿದ. ಈ ದಿನ ಅನಿರೀಕ್ಷಿತವಾದ ಅನೇಕ ಮಾತಗಳು ಅವನ ಬಾಯಿಂದ ಬಂದಿದ್ದವು. ತನ್ನನ್ನು ಶಿವಾಪುರದ ಗವಿಯಲ್ಲಿ ಕಂಡವರ್ಯಾರೂ ಇಲ್ಲಿಗೆ ಬರಲಾರೆಂದು ನಂಬಿಕೆ ಇದ್ದರೂ ಅರ್ಥಕೌಶಲ ತನ್ನ ಹೆಸರನ್ನು ಎರಡು ಬಾರಿ ಯಾಕೆ ಕೇಳಿದ? ಮನುಷ್ಯ ಮೂಬೆರಿಕಿ. ಪ್ರಾಯ ಮಾಗಿ ಕೊಬ್ಬಿದ ಮುಖದಲ್ಲಿ ನೀಳ ಮೂಗು, ಹೆಂಗಸರಿಗಿರುವಂಥ ಕೊರೆದ ಹಾಗಿದ್ದ ಹುಬ್ಬು, ಸದಾ ಏನಾದರೊಂದು ಹೊಸದನ್ನು ಹುಡುಕುವ ಕಣ್ಣುಗಳು, ಎದುರಿನವರನ್ನು ಭೇದಿಸಿ ನೋಡುವ ಅವನ ಆಸಕ್ತಿ-ಇವುಗಳ ಬಗ್ಗೆ ಚಿಂತಿಸುತ್ತಲೇ ಜಯಸೂರ್ಯ ಕೊಂಚ ಹೊತ್ತು ಅಡ್ಡಾದ.

ಬೆಳ್ಳಿಯಿಂದ ಒದೆ ತಿಂದು, ಕುರುಮುನಿಯಿಂದ ಏಟು ತಿಂದು ಓಡಿ ಬರುವಾಗ ಜಯಸೂರ್ಯ ಯೋಚನೆ ಮಾಡಿದ್ದು: ದೂರದೂರಕ್ಕೆ ಶಿವಾಪುರದ ಯಾರೂ, ಅಂದರೆ ಗಾಳಿ ಕೂಡ ಸುಳಿಯದಲ್ಲಿ ಬದುಕಬೇಕೆಂದು, ಬದುಕಿ ಸೇಡು ತೀರಿಸಿಕೊಳ್ಳಬೇಕೆಂದು ನಿರ್ಧರಿಸಿದ್ದ. ನಾಲ್ಕು ರಾತ್ರಿ ಮೂರುಗಹಲು ಓಡಿ ಬಂದು ಕಾಡಿನಲ್ಲಿ ವಿಶ್ರಾಂತಿ ತಗೊಳ್ಳುತ್ತಿದ್ದಾಗ ಅರ್ಥಕೌಶಲನ ಸೇವಕ ಹೊಳೆಯ ಸಿಕ್ಕ. ಪರಿಚಯವಾಯಿತು. ಕನಕಪುರಿಯ ವಿಷಯ, ಅರ್ಥಕೌಶಲ ಮತ್ತು ರಾಜನ ವಿಚಾರ ಗೊತ್ತಾಯಿತು. ಹೊಳೆಯನನ್ನು ಕೊಂದು ಅವನದೇ ಕುದುರೆಯೇರಿ ಇಲ್ಲಿಗೆ ಬಂದಿದ್ದ. ಶಿವಪಾದನಿಗೆ ಎಲ್ಲಾ ದೇಶಗಳಲ್ಲಿ ಶಿಷ್ಯರಿದ್ದುದರಿಂದ ಅವರಿಗೆ ಗೊತ್ತಾಗಬಾರದೆಂದೂ, ಅದಕ್ಕಾಗಿ ತನ್ನ ಹೆಸರು ಬದಲಿಸಬೇಕೆಂದೂ ಯೋಚಿಸಿದ್ದ. ಆದರೆ ತನ್ನ ಹೆಸರು “ಶಿಖರಸೂರ್ಯ” ಎಂದು ಮಾತ್ರ ಯೋಚಿಸಿದ್ದವನು ‘ಹೆಗಡೆ’ ಎಂದು ಸೇರಿಸಿದ್ದು ಅರ್ಥಕೌಶಲನ ಮನೆಗೆ ಬಂದ ಮೇಲೆಯೇ.

ಓಡಿಬರುವಾಗ ಹಗಲು ರಾತ್ರಿ ಅನ್ನಲಿಲ್ಲ. ನಿದ್ದೆ ನೀರಡಿಕೆ ಅನ್ನಲಿಲ್ಲ. ಕಲ್ಲು ಮುಳ್ಳು ಕಂಟಿ ಅನ್ನಲಿಲ್ಲ. ಅಷ್ಟೆಲ್ಲ ಕಷ್ಟಪಟ್ಟು ಬಂದವನಿಗೆ ಇಲ್ಲೇನು ಕಾದಿದೆಯೋ ಎಂದು ಚಿಂತೆಯಿಂದಲೇ ಅಡ್ಡಾದ. ಇನ್ನು ಮೆಲೆ ನಾವೂ ಅವನನ್ನ ಶಿಖರಸೂರ್ಯ ಎಂದೇ ಕರೆಯೋಣ.