ಬಿಳಿಗಿರಿರಾಯನ ಅಂತ್ಯಸಂಸ್ಕಾರ ಮುಗಿದ ಮೇಲೆ ಅವನ ಜೊತೆ ಬಂದ ಬಂಟರು ತಮ್ಮ ಸೀಮೆಗೆ ಹೊರಟು ನಿಂತಾಗಲೇ ಶಿಖರಸೂರ್ಯ ಎಚ್ಚರಗೊಂಡ. ಕನಕಪುರಿಯಲ್ಲಿ ಅವರಂಥ ನಂಬಿಕಸ್ಥರು ಸಿಕ್ಕುವುದು ಸಾಧ್ಯವಿಲ್ಲವೆಂದು ಅವನಿಗೆ ಗೊತ್ತು. ಅವರೊಂದಿಗಿನ ಅಲ್ಪಾವಧಿಯ ಒಡನಾಟದಲ್ಲಿ ಅವರ ಚಾಕಚಕ್ಯತೆಯ ಕೈಚಳಕ, ಪರಸ್ಪರ ತಿಳುವಳಿಕೆ, ಕಣ್ಣು ಮೂಗು ತುಟಿ ಮತ್ತು ಕೈಕಾಲು ಬೆರಳು ಸನ್ನೆಗಳ ಮೂಲಕವೇ ಇನ್ನೊಬ್ಬನಿಗೆ ಸಂದೇಶ ಕಳಿಸುವ ಅವರ ಸಂವಹನ ವ್ಯವಸ್ಥೆಗೆ ಬೆರಗಾದ. ಅವರು ಬಂದಾಗಿನಿಂದ ಈ ವರೆಗೆ ಸಂಬಳವನ್ನೇ ಕೊಟ್ಟಿರಲಿಲ್ಲವೆಂದು ತಿಳಿಯಿತು. ತಕ್ಷಣ ಅರ್ಥಕೌಶಲನ ಬಳಿಗೆ ಹೋಗಿ ಹಣದ ವ್ಯವಸ್ಥೆ ಮಾಡಿಕೊಂಡು ಬಂದ.

ಮೊದಲು ಸುಕ್ರನನ್ನು ಕರೆದ. ಆತ ಬಂದು ಬಾಗಿ ನಿಂತೊಡನೆ ಅವನ ಕೈಗೆ ನಲವತ್ತು ಹಣ ನೀಡಿ ಅವನ್ನು ಕೃತಜ್ಞತೆಯಿಂದ ತಬ್ಬಿಕೊಂಡ. ಹಣವನ್ನೇ ಕಾಣದ ಎಲ್ಲರ ಮುಖಗಳೂ ಅರಳಿದವು. ಆಮೇಲೆ ಪ್ರತಿಯೊಬ್ಬರ ಕೈಗೂ ಹಣಕೊಟ್ಟ. ಒಬ್ಬೊಬ್ಬರಿಗೆ ಹಣ ಕೊಡುವಾಗಲೂ ಅವರ ಕೈ ಹಿಡಿದುಕೊಂಡು ಮುಖಭಾವದಲ್ಲಿ ಕೃತಜ್ಞತೆ ಸೂಚಿಸಿ ಮೃದುವಾಗಿ ಹಿಸುಕಿದ. ಇದು ಬಂಟರ ಮೇಲೆ ಬಹಳ ಪರಿಣಾಮ ಬೀರಿತು. ಇಷ್ಟು ದಿವಸ ಅಸ್ಪೃಶ್ಯರಂತಿದ್ದ ಅವರಲ್ಲಿ ಕೃತಜ್ಞತಾ ಭಾವ ಮೂಡಿ ಆರ್ದ ಹೃದಯಿಗಳಾದರು. ಕೆಲವರು ಜಲಜಲ ಕಣ್ಣೀರುಗರೆದರು. ಇನ್ನೇನು ಅವರು ಹೊರಡಲಿದ್ದಾಗ ಶಿಖರಸೂರ್ಯ

“ಸುಕ್ರ” ಅಂದ.

“ಒಡೆಯಾ”

“ಇಲ್ಲಿ ಬಾ”

ಎಂದು ಹೇಳಿ ಅವನನ್ನು ಒಳಮನೆಗೆ ಕರೆದುಕೊಂಡು ಹೋದ, ನಿಂತ ಬಂಟರು ಪ್ರಶ್ನಾರ್ಥಕ ದೃಷ್ಟಿಗಳನ್ನು ವಿನಿಮಯ ಮಾಡಿಕೊಂಡು ‘ಕಾಯೋಣ’ವೆಂದು ಸನ್ನೆಯಿಂದ ತೀರ್ಮಾನಿಸಿ ನಿಂತರು.

ಒಳಗೆ ಬಂದು ಶಿಖರಸೂರ್ಯ ಕಿಡಿಕಿಯ ಬಳಿಯ ಪೀಠದ ಮೇಲೆ ಕುಂತು ಸುಕ್ರನಿಗೆ ಇನ್ನೊಂದು ಪೀಠ ತೋರಿಸಿದ. ಸುಕ್ರ ನಿರಾಕರಿಸಿ ಅವನ ಪೀಠದ ಬಳಿ ನೆಲದ ಮೇಲೆ ಕುಂತ. ಒತ್ತಾಯ ಮಾಡಿದರೂ ಸ್ಥಳ ಬದಲಿಸಲಿಲ್ಲ. ಅವನ ಮುಖವನ್ನೇ ನೋಡುತ್ತ ಶಿಖರಸೂರ್ಯ ಕೇಳಿದ:

“ಸುಕ್ರ, ಮಾತು ನಮ್ಮಿಬ್ಬರಲ್ಲೇ ಇರಬೇಕು. ಒಪ್ಪಿಗೆಯಾ?”

“ಬೆಟ್ಟದಯ್ಯನಾಣೆ ಒಪ್ಪಿದೆ ಒಡೆಯಾ”

“ಸುಕ್ರ, ನಿಮ್ಮ ರಾಯರದು ಸಾವೊ? ಕೊಲೆಯೊ?”

“ಕೊಲೆ ಒಡೆಯಾ.”

ನಿರೀಕ್ಷಿದ ಉತ್ತರವೇ ಸಿಕ್ಕಿದ್ದರಿಂದ ಆಶ್ಚರ್ಯವಾಗಲಿಲ್ಲ. ಆದರೆ ಆಸಕ್ತಿ ಕೆರಳಿತು.

“ಹಗಲು ರಾತ್ರಿ ರಾಜನೊಂದಿಗೆ ಇರುತ್ತಿದ್ದವನು ನೀನು. ಈಗ ನೀನೇ ಹೇಳು: ಕೊಲೆ ಮಾಡಿದವಳು ಒಬ್ಬ ವಿಷಕನ್ಯೆ. ಆಕೆಯನ್ನು ಯಾರು ಕಳಿಸಿದ್ದು?”

“ಪ್ರಧಾನರ ತಿಳುವಳಿಕೆ ಇಲ್ಲದೆ ಇಲ್ಲಿ ಏನೂ ನಡೆಯುವುದಿಲ್ಲ. ಅಲ್ಲವೇ”

ಶಿಖರಸೂರ್ಯ ಸ್ವಲ್ಪ ಹೊತ್ತು ಮಾತಾಡಲಿಲ್ಲ. ಆಮೇಲೆ ಸುಕ್ರನನ್ನೇ ನೋಡುತ್ತ “ನೀವರಿಲಿಲ್ಲವೇ”? ಅಂದ.

“ನಾವಿಷ್ಟು ಜನ ಇದ್ದೂ ನಮ್ಮ ರಾಜನನ್ನು ಉಳಿಸಲಾಗಲಿಲ್ಲ ಒಡೆಯಾ!”

ಎಂದು ಹೇಳುತ್ತ ಸುಕ್ರ ಕಂಬನಿ ಮಿಡಿದು, ಹೇಳಿದ:

“ಕನಕಪುರಿಯೆಂದರೆ ಗೊತ್ತ ಒಡೆಯಾ? ಸುಳ್ಳು ಕಪಟ ಮಾಡುವವರು, ಒಂದು ಬಳ್ಳ ಭತ್ತಕ್ಕೆ ತಲೆ ಕಡಿಯುವವರು, ಎಂದು ಆಗಾಗ ನಮ್ಮ ರಾಜ ಹೇಳುತ್ತಲೇ ಇದ್ದ. ಅವನು ಹೇಳಿದ ಹಾಗೇ ಆಯ್ತು. ಈ ಜನ ಅವನ ಮಾನಕ್ಕೆ ಹೀನಾಯ ಮಾಡಿ ಕೊಂದರು. ಅದನ್ನೆಲ್ಲ ನೆನೆದರೆ ಕಣ್ಣೀರು ಬರುವಲ್ಲಿ ನೆತ್ತರು ಬರುತ್ತದೆ ಒಡೆಯಾ”

ಎಂದು ಹೇಳುತ್ತ, ಕೋಪದಿಂದ ನಡುಗುತ್ತ, ಕಡುದುಃಖದ ಕಣ್ಣೀರನತ್ತ. ದುಃಖದ ಆವೇಗ ಕಡಿಮೆ ಆಗಲೆಂದು ತುಸುಹೊತ್ತು ಸುಮ್ಮನಿದ್ದು ಆಮೇಲೆ ಮೆಲ್ಲಗೆ ಅವನ ಭುಜದ ಮೇಲೆ ಕೈಯಿಟ್ಟ ಶಿಖರಸೂರ್ಯ. ಹಾಗೆ ದುಃಖಿಸಿದ್ದು ಹುಟ್ಟಾ ಬಂಟನಾದ ತನಗೆ ಅವಮಾನಕರವೆಂದು ಸುಕ್ರನಿಗೆ ಅನ್ನಿಸಿತು. ಕಣ್ಣೀರನೊರೆಸಿಕೊಂಡು, ಉರಿಯುವ ನೇತ್ರಗಳಿಂದ ಅರಮನೆಯನ್ನು ನೋಡುತ್ತ ಎದ್ದು ಹೇಳಿದ:

“ರಾಯನಿಲ್ಲದೆ ಬರಿಗೈಯಲ್ಲಿ ಹೋಗಿ ಜನಕ್ಕೆ ನಾವೇನು ಹೇಳಬೇಕು ಒಡೆಯಾ?”

“ನಿಮ್ಮ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ ಸುಕ್ರ”

ಅಂದ ಶಿಖರಸೂರ್ಯ. ತಕ್ಷಣ ಸುಕ್ರನ ಕರ್ತವ್ಯ ಪ್ರಜ್ಞೆ ಜಾಗೃತವಾಯಿತು. ಗಟ್ಟಿಯಾಗಿ ಕೋಲೂರಿ ಹಾಗೇ ನಿಂತ. ಶಿಖರಸೂರ್ಯ ಕೇಳಿದ:

“ಹೇಳು ಸುಕ್ರ ಈ ಕೊಲೆಗೆ ಏನು ಕಾರಣ?”

ಸುಕ್ರ ಹೇಳಿದ:

“ಇನ್ನೇನಿರುವುದು ಸಾಧ್ಯ ಒಡೆಯಾ ತರುವಷ್ಟು ಚಿನ್ನವನ್ನ ಇಲ್ಲಿಗೆ ತಂದು ಉಳಿದದ್ದನ್ನು ನಮ್ಮ ರಾಜ ಗುಪ್ತಸ್ಥಳದಲ್ಲಿ ಇಟ್ಟು ಬಂದ. ಆ ಸ್ಥಳ ಗೊತ್ತಿಲ್ಲದ ಈಗಿನ ರಾಜ ಅಂದರೆ ನಮ್ಮ ರಾಜನ ತಮ್ಮ ಶಿವದೇವರಾಯ “ವೈರ ಮರೆತು, ನಮ್ಮ ರಾಜ್ಯಕ್ಕೇಬಂದು ನೆಮ್ಮದಿಯಿಂದ ಇರಬಹುದಲ್ಲ? ನಾವು ಕನಕಪುರಿಯವರಷ್ಟು ಕಟುಕರಲ್ಲ.”

-ಎಂದು ಹೇಳಿ ಕಳಿಸಿದ. ಇದು ನಮ್ಮ ರಾಜನಿಗೂ ಒಪ್ಪಿಗೆಯಾಯಿತು. ಎಷ್ಟೆಂದರೂ ರಕ್ತ ಸಂಬಂಧ. ಅವನು ಕೊಂದರೂ ಇವರು ಮಾಡುವ ಅವಮಾನಕ್ಕಿಂತ ಮೇಲು-ಎಂದುಕೊಂಡು ಹೊರಡುವ ತಯಾರಿ ಮಾಡಿದ. ಇದೆಲ್ಲವೂ ನಿಮ್ಮ ಪ್ರಧಾನಿಗೆ ಗೊತ್ತಾಯಿತು. ಇವರ ಬಳಿ ಬಚ್ಚಿಟ್ಟ ಚಿನ್ನವಿದೆ ಎಂದು ತಿಳಿದದ್ದೇ ನಮ್ಮ ರಾಜನ ಸೇವೆಯ ವ್ಯವಸ್ಥೆ ಒಂದೇ ತಾಸಿನಲ್ಲಿ ಅದ್ಭುತವಾಗಿ ಮೇಲೇರಿತು. ಆಳುಕಾಳುಗಳೇನು, ಸೇವೆ ಚಾಕರಿಗಳೇನು! ಮಹಾರಾಣಿಯೇ ಖುದ್ದಾಗಿ ಜರತಾರಿ ಕುಸುರಿ ಪೀತಾಂಬರವುಟ್ಟು ಅಲಂಕೃತಳಾಗಿ ಸಡಗರದಲ್ಲಿ ಸರಸರ ಸದ್ದು ಮಾಡುತ್ತ ಬಂದಳು! ನಮ್ಮ ರಾಜ ನನ್ನ ಲಘುವಾಗಿ ಉಪಚರಿಸಿದ್ದಕ್ಕೆ ಪ್ರಧಾನಿ ಮೊದಲಾಗಿ ಎಲ್ಲರನ್ನು ವಾಚಾಮಗೋಚರ ಬೈದಳು. ಸಂಗೀತಮಯ ವಿಶೇಷಣಗಳಿಂದ ನಮ್ಮ ರಾಜನನ್ನು, ಅವನ ಧಾರಾಳತನವನ್ನು ಹೊಗಳಿದಳು. ಸುದೈವದಿಂದ ನಮ್ಮ ರಾಜ ಆಕೆಯ ಮಾತಿಗೆ ಮರುಳಾಗಲಿಲ್ಲ.

ಚಿಕ್ಕಮ್ಮಣ್ಣಿಯನ್ನು ಮೊದಲು ಇಲ್ಲಿಗೆ ಕಳಿಸುತ್ತಿರಲಿಲ್ಲ. ಈಗ ಕರೆತಂದು ಇಲ್ಲಿ ಬಿಟ್ಟು ಹೋದಳು. ಅಣ್ಣನನ್ನು ನೋಡಿ ತಂಗಿ, ತಂಗಿಯನ್ನು ನೋಡಿ ಅಣ್ಣ ಇಬ್ಬರೂ ಕಣ್ಣೀರುಗರೆದರೇ ವಿನಾ ಮಾತಾಡಲಿಲ್ಲ. ಕೊನೆಗೆ ಮೋದಹ ಮೋಡಿಗಾರುಡಿಗಳ ಬಲ್ಲ ಪರಮಾಯಿಷಿ ಹೆಣ್ಣೊಂದನ್ನು ಕಳಿಸಿದರು.”

‘ಈಗ ಚಿನ್ನ ಎಲ್ಲಿದೆ? ನಿನಗೆ ಗೊತ್ತಿಲ್ಲವೆ ಸುಕ್ರ?” ಎಂಬ ಪ್ರಶ್ನೆ ಶಿಖರಸೂರ್ಯನ ನಾಲಗೆಯ ತುದಿತನಕ ಬಂದಿತ್ತು. ಕೇಳಲಿಲ್ಲ. ಅವನೇ ಹೇಳಲೆಂದು ಅವನ ಮುಖವನ್ನೇ ನೋಡುತ್ತ ಕೂತ. ಅಧರೆ ಸುಕ್ರ ವಿಷಕನ್ಯೆಯ ವಿಷಯದಿಂದ ಇನ್ನೂ ಹೊರಬಂದಿರಲಿಲ್ಲ. ಅದು ಅವನನ್ನ ಗಾಢವಾಗಿ ತಟ್ಟಿದಂತಿತ್ತು.

“ನಮ್ಮ ರಾಜನಾದರೋ ಪಾನಪ್ರಿಯ ಪ್ರಣಯ ವಿಲಾಸಿ. ಅವಳೋ ಅಪ್ಸರೆ. ಅವಳ ಕಡೆಯಿಂದ ಸುಳಿವ ಗಾಳಿಗೂ ಮದನಜ್ವರ ಏರುತ್ತಿತ್ತು. ಅಂಥ ಕಾಮೋಜ್ವಲೆಯ ಮುಂದೆ ಗಂಡಸಿನ ಗಂಡಸುತನ, ದೃಢ ನಿರ್ಧಾರಗಳು ಬೆಂಕಿಯ ಮುಂದಿನ ಬೆಣ್ಣೆಯಂತೆ ಕರುತ್ತಿದ್ದವು. ನಮ್ಮ ರಾಜನಾಗಲೇ ಮರ್ಯಾದೆಯ ಗಡಿಗಳನ್ನ ದಾಟಿ ಬಿಟ್ಟಿದ್ದ. ಇವನ ಮುಗ್ಧತನಕ್ಕೆ ಬೆರಗಾದ ಅವಳಿಗೆ ಅದ್ಯಾಕೆ ಕರುಣೆ ಬಂತೋ- ಬೇಡಬೇಡವೆಂದು ಗೋಗರೆದಳು. ಅವಳ ತೊಡೆಯಿಂದ ಅವನನ್ನು ಸೆಳೆದು ತರಲು ನಾವು ಮಾಡಿದ ಪ್ರಯತ್ನ ಫಲ ಕೊಡಲಿಲ್ಲ. ಬಾಗಿಲು ಭದ್ರವಾಗಿತ್ತು. ಕೊನೆಗೆ ಹೀಗಾದರೂ ನಮ್ಮ ರಾಜ ಆನಂದವಾಗಿರಲೆಂದು ನಾವೂ ಸುಮ್ಮನಾದೆವು. ಬೆಳಿಗ್ಗೆದ್ದು ನೋಡಿದಾಗ ಅವಳು ಅಲ್ಲಿರಲಿಲ್ಲ! ರಾಜನ ಶವ ಇತ್ತು! ಆಕೆ ವಿಷಕನ್ಯೆಯೆಂದು ನಮಗೆ ಆಗಲೇ ಗೊತ್ತಾಯಿತು!”

ಇಬ್ಬರ ಮಧ್ಯೆ ದಟ್ಟವಾದ ಮೌನ ಆವರಿಸಿತು. ಕಂಬನಿ ಮಿಡಿಯುತ್ತ ಸುಕ್ರ ನಿಂತ. ನೆಲ ನೋಡುತ್ತ ಶಿಖರಸೂರ್ಯ ಕೂತ. ತನ್ನಲ್ಲಿದ್ದ ಎಲ್ಲ ಕಂಬನಿಗಳ ಅತ್ತನೆಂದೆನಿಸಿದಾಗ ಶಿಖರಸೂರ್ಯ ಹೇಳಿದ:

“ಚಿಕ್ಕಮ್ಮಣ್ಣಿಯ ಬಗ್ಗೆ ನನಗೆ ಕಾಳಜಿಯಿಂದ ಸುಕ್ರ,”

ಸುಕ್ರನಿಗೆ ತಕ್ಷಣ ಚಿಕ್ಕಮ್ಮಣ್ಣಿಯ ಮಾತು ನೆನಪಾಯಿತು; ‘ಮೃಗಗಳೇ ತುಂಬಿಕೊಂಡಿರುವ ಅರಮನೆಯಲ್ಲಿ ಶಿಖರಸೂರ್ಯ ಒಬ್ಬನೇ ನಂಬಿಕಸ್ಥ ಕಣಪ್ಪ. ನನಗೆ ಅವನೇ ಆಸರೆ’ ಎಂದಿದ್ದಳು.

ಸುಕ್ರ ಸೂಕ್ಷ್ಮಕಣ್ಣುಗಳಿಂದ ಶಿಖರಸೂರ್ಯನ ಹೃದಯದೊಳಗೆ ಇಳಿಯುವಂತೆ ಅವನನ್ನೇ ನೋಡಿದ. ಇವನನ್ನ ನಂಬಬಹುದೆನ್ನಿಸಿತು. ಶಿಖರಸೂರ್ಯ ಹೇಳಿದ:

“ನಾನೂ ನಿನ್ನಂತೆ ಈ ಊರಿಗೆ ಹೊರಗಿನವ ಸುಕ್ರ. ನಿನ್ನ ದುಃಖದಲ್ಲಿ ನಾನೂ ಭಾಗಿ. ನೀನು ನನ್ನನ್ನು ನಂಬುತ್ತೀಯಾ ಸುಕ್ರ? ನಂಬಿದರೆ ಮುಂದೆ ಮಾತಾಡಬಹುದು. ಇಲ್ಲಿದಿದ್ದರೆ ಬೇಡ, ಹೊರಡು”

“ನಂಬಿದೆ. ಅದೇನು ಹೇಳೊಡೆಯಾ.”

ಎಂದು ಹೇಳಿ ತನ್ನ ಎಡಗೈಯಲ್ಲಿ ಬಲಗೈ ಹಾಕಿಕೊಂಡು ಎದೆಗೆ ಮುಟ್ಟಿಕೊಂಡು ತನ್ನನ್ನು ನಂಬಬಹುದೆಂದು ಸೂಚಿಸಿದ. ಮುಂದೆ ಶಿಖರಸೂರ್ಯನಿಗೆ ತೊಂದರೆಯಾಗಲಿಲ್ಲ.

ಸುಕ್ರನಲ್ಲಿ ಸ್ನೇಹೋಲ್ಲಾಸಗಳನ್ನು ಕೆರಳಿಸಿ ಹೇಳಿದ ಎಲ್ಲವನ್ನು ಪ್ರಶ್ನೆಯಿಲ್ಲದೆ ಒಪ್ಪಿಕೊಳ್ಳುವಂತೆ ಶಿಖರಸೂರ್ಯ ಮೋಡಿ ಮಾಡಿದ. ಈಗ ಇಬ್ಬರ ನಡುವೆ ಸಂವಹನ ಸುಲಭವಾಯಿತು. ಸುಕ್ರ ಬೇರೆಲ್ಲೂ ಸೇರದೆ ತನ್ನ ಆಪ್ತ ಮಿತ್ರನಾಗಿ ದಳವಾಯಿಯಾಗಿರಬೇಕೆಂದೂ, ಒಂದು ಕಡಿಮೆ ನಲವತ್ತು ಭಂಟರ ಪಡೆ ಕಟ್ಟಿ ಸದ್ಯ ತನ್ನ ಹಟ್ಟಿಯಲ್ಲೇ ನಿತ್ಯ ಕವಾಯತು ಮಾಡುತ್ತಿರಬೇಕೆಂದೂ ಮಾತಾಯಿತು. ಚುರುಕಿನ ಹಾಗೂ ನಂಬಕಿಸ್ಥರಾದ ನಾಲ್ಕು ಭಂಟರನ್ನು ತನ್ನಲ್ಲಿಟ್ಟಿರಬೇಕೆಂದೂ ಅವರ ಮೂಲಕ ಸುಕ್ರನ ಹಟ್ಟಿಗೂ ಕನಕಪುರಿಯ ತನ್ನ ಮನೆಗೂ ಸಂದೇಶ ರವಾನೆಯಾಗುತ್ತಿರಬೇಕೆಂದೂ, ಇವರೆಲ್ಲರ ಸಂಬಳದ ವ್ಯವಸ್ಥೆ ಮಾಡುವುದಾಗಿಯೂ ಮಾತಾಗಿ, ಮಾತಿಗಿಬ್ಬರೂ ಒಪ್ಪಿ ವೀಳ್ಯ ಬದಲಿಸಿಕೊಂಡು ತಿಂದರು. ಆಮೇಲೆ ಇಬ್ಬರೂ ಆಲಂಗಿಸಿ ಎದೆಗೆ ಎದೆ ತಾಗಿಸಿ ವಿಶ್ವಾಸಗಳನ್ನು ದೃಢಪಡಿಸಿಕೊಂಡು ಈ ಎಲ್ಲವನ್ನೂ ಗುಟ್ಟಾಗಿಡುವ ಪ್ರತಿಜ್ಞೆಗೈದರು. ಆಮೇಲೆ ಸುಕ್ರ ತನ್ನ ಮೇಲಾಧಿಕಾರಿಗೆ ಮಾಡುವಂತೆ ಬಿಲ್ಲಿನಂತೆ ಬಾಗಿ ಯಥೋಚಿತ ಗೌರವಾರ್ಪಣೆ ಆಚರಿಸಿದ. ಶಿಖರಸೂರ್ಯನ ಮುಖದಲ್ಲೂ ತೃಪ್ತಿಯ ಮಂದಹಾಸ ಮೂಡಿತು. ಆಮೇಲೆ ಇಬ್ಬರೂ ಹೊರಗೆ ನಿಂತ ಭಂಟರನ್ನು ತಮ್ಮ ಮುಗುಳುನಗೆಯಲ್ಲಿ ಮೀಯಿಸುತ್ತ ಹೊರಬಂದರು.