ಹಾಲಿನ ಕೆನೆವರ್ಣ ಬಳಿದ ಹಜಾರದಲ್ಲಿ ಚಿಕ್ಕರಾಣಿ ನಿಧಾನವಾಗಿ ನಡೆಯುತ್ತ ಬಂದಳು. ಇಳಿಹೊತ್ತಿನ ಮಾಗಿದ ಬಿಸಿಲು ಪಡುವಣದ ಕಿಡಿಕಿಡಿಗಳ ಮೂಲಕ ಹಜಾರದ ಕೆಲವು ಭಾಗಗಳನ್ನಾಕ್ರಮಿಸಿ ಅಲ್ಲಿದ್ದ ಕಂಬಗಳಿಗೆ ಚಿನ್ನದ ಮೆರುಗು ಕೊಟ್ಟಿತ್ತು. ಮಾಗಿಯ ಕೊನೆಗಾಲದ ಹವೆ ಬೆಚ್ಚಗಿತ್ತು. ಉದ್ಯಾನದ ಹೂಗಳ ಪರಿಮಳ ಹಜಾರದ ತುಂಬ ವಿರಳವಾಗಿ ಪಸರಿಸಿತ್ತು. ಅಂಗಳದಲ್ಲಿ ಕೆಂಪು ಹೂ ಮುಡಿದ ತರುಣ ಗಿಡಗಳು ತಲೆ ಎತ್ತಿ ಎಳೆಬಿಸಿಲಲ್ಲಿ ಹೊಳೆಯುತ್ತಿದ್ದವು. ಚಿಕ್ಕಮ್ಮಣ್ಣಿಗೆ ಇವತ್ತು ವಿಚಿತ್ರವಾದ ನಂಬಿಕೆ ಮತ್ತು ಆತ್ಮವಿಶ್ವಾಸ ಬಂದುಬಿಟ್ಟಿತ್ತು. ಇದಕ್ಕೆ ಮಹಾರಾಜರ ಆರೋಗ್ಯ ವಾಪಸಾದದ್ದು ಒಂದು ಕಾರಣವಾದರೆ ಇನ್ನೊಂದು ಅವಳ ಉಳಿದೆಲ್ಲ ಕನಸುಗಳು ನನಸಾಗುವ ಶಕುನಗಳನ್ನು ಕಂಡಿದ್ದಳು.

ಹದಿನಾರು ವರ್ಷಗಳ ಹಿಂದೆ ಬಿಳಿಗಿರಿಯ ಚೆಲುವರಾಯ ತಂಗಿ ವಿನಯವತಿಯನ್ನು ಕನಕಪುರಿಯ ಮಹಾರಾಜ ಗುಣಾಧಿಕ್ಯನಿಗೆ ಧಾರೆಯೆರೆದು ಕೊಟ್ಟಾಗ ಮಹಾರಾಣಿ ಇವಳನ್ನು ಸ್ವಾಗತಿಸಲು ಬರಲೇ ಇಲ್ಲ. ಮುಂದೊಂದು ವಾರವಾದ ಮೇಲೆ ಇಬ್ಬರ ಮುಖಾಮುಖಿಯಾಯಿತು. ಪಟ್ಟು ಹಿಡಿದು ಹಕ್ಕುದಾರಿಕೆ ಕೇಳದ ಚಿಕ್ಕರಾಣಿಯ ಮೃದು ಸ್ವಭಾವ, ಜಗಳವಾಡದ ಸಾತ್ವಿಕ ಗುಣ-ಇವು ಮಹಾರಾಣಿಗೆ ಇಷ್ಟವಾದವು. ಅವಳೇ ದಯಮಾಡಿ ನಾಲ್ಕನೇ ಸೌಧದ ಅಂತಃಪುರದ ಒಂದು ಚಿಕ್ಕ ಕೋಣೆಯನ್ನು ಬಿಟ್ಟುಕೊಟ್ಟಳು.

ಮೊದಲ ನೋಟದಲ್ಲಿಯೇ ಚಿಕ್ಕರಾಣಿ ಮಹಾರಾಣಿಗೆ ಹೆದರಿ ಬಿಟ್ಟಳು. ಆತ್ಮವಿಶ್ವಾಸದಿಂದ ಬೀಗುವ ಗೋಧಿಬಣ್ಣದ ಮುಖದಲ್ಲಿ ನೀಳವಾದ ಮೂಗು, ರಂಗು ಹಚ್ಚಿದ ಕೆಂದುಟಿ, ನಕ್ಕಾಗ ಕಾಣಿಸುವ ಸುಂದರವಾದ ದಂತಪಂಕ್ತಿ, ಹೊಳೆವ ಕಣ್ಣು ಮತ್ತು ಸಮೃದ್ಧ ಕೂದಲ ರಾಶಿಯಿಂದಾಗಿ ಮಹಾರಾಣಿಯನ್ನು ಯಾರು ಕಂಡರೂ ಕೊಂಚ ಹಿಂಜರಿಯುತ್ತಿದ್ದರು. ಮಕ್ಕಳಿಗಂತೂ ಇಷ್ಟವಾಗುವ ಆಕಾರವಲ್ಲ ಅದು. ಆಕೆಯ ಮಾತಿನಲ್ಲಿ ಯಾರನ್ನೂ ಒಲಿಸಿಕೊಳ್ಳುವ ಅಥವಾ ಮೆಚ್ಚಿಸುವ ಆತುರ ಇರುತ್ತಿರಲಿಲ್ಲ. ಎಲ್ಲರೂ ತನ್ನ ಮಾತನ್ನು ಆಲಿಸುತ್ತಿದ್ದಾರೆಂಬ ಖಾತ್ರಿಯಿಂದಲೇ ಮಾತಾಡುತ್ತಿದ್ದಳು ಮತ್ತು ಪರರ ಬಗ್ಗೆ ಅವಳ ಮಾತಿನಲ್ಲಿ ತಾತ್ಸಾರವಿರುತ್ತಿತ್ತು. ಮಾತಾಡುವಾಗ ಯಾರೂ ತನ್ನ ಅಂತರಂಗದಲ್ಲಿ ಇಣಿಕಿ ಹಾಕದಂತೆ ಎಚ್ಚರಿಕೆ ವಹಿಸುತ್ತಿದ್ದಳು. ಓದಿಕೊಂಡಿದ್ದಳು ಮತ್ತು ವಾದಕ್ಕೆ ನಿಂತರೆ ಸಮರ್ಥನೆಗಾಗಿ ಬೇಕಾದ ಗ್ರಂಥ ಮತ್ತು ಆಧಾರ ತರ್ಕಗಳನ್ನು ಬಳಸಬಲ್ಲವಳಾಗಿದ್ದಳು. ಅಲ್ಲದೆ ದನಿಯಲ್ಲಿ ಭಾವಕ್ಕೆ ತಕ್ಕಂತೆ ಏರಿಳಿವು ಮಾಡದೆ ಆಜ್ಞೆಗಳ ಧಾಟಿಯಲ್ಲಿ ಮಾತಾಡುತ್ತಿದ್ದಳು. ತಾನು ಅರ್ಥಕೌಶಲನ ಸಂಬಂಧಿಯೆಂಬ, ರಾಜನ ವಂಶಾವಳಿಗೆ ಬಳುವಳಿಯಾಗಿ ಆದಿತ್ಯಪ್ರಭನನ್ನು ಹೆತ್ತುಕೊಟ್ಟ ತಾಯಿಯೆಂಬ ನಿಶ್ಚಿಂತೆಯಿಂದ ಇದ್ದಳಾಗಿ ಮಹಾರಾಜ ವಿನಯವತಿಯನ್ನು ಚಿಕ್ಕರಾಣಿಯಾಗಿ ಮದುವೆಯಾದುದಕ್ಕೆ ಅವಳಿಗ್ಯಾವ ಆತಂಕಗಳೂ ಇರಲಿಲ್ಲ.

ಮಹಾರಾಣಿಯ ಕೈಯಲ್ಲಿ ಸದಾ ಒಂದು ನಾಯಿ ಮರಿ ಇರುತ್ತಿತ್ತು. ಒಮ್ಮೊಮ್ಮೆ ಮರಿಯ ತಾಯಿಯೂ ಆಕೆಯ ಜೊತೆಗಿರುತ್ತಿತ್ತು. ಅವಳ ಪಾಡಿಗವಳನ್ನು ಶ್ವಾನ ಸ್ನೇಹದಲ್ಲಿ ಬಿಟ್ಟು ಉಳಿದವರು ನೆಮ್ಮದಿಯಿಂದ ಇದ್ದರು.

ಮಹಾರಾಜನ ಚಿಕ್ಕ ಮಡದಿಯಾಗಿ ಬಂದ ವಿನಯವತಿ ಇಲ್ಲಿ ಚಿಕ್ಕಮ್ಮಣ್ಣಿಯಾದಳು. ಎಲ್ಲರೂ ತನ್ನನ್ನು ನೋಡಿ ಮರುಗುತ್ತಿರುವಂತೆ, ತನಗೆ ಅನುಕಂಪ ತೋರಿಸುತ್ತಿರುವಂತೆ ಅನ್ನಿಸಿ ತಾನು ಈ ಸಂದರ್ಭದಲ್ಲಿ ಅಪಮೇಳವಾದೆನೆಂದು ಭಾವಿಸಿದಳು. ಮೊದಮೊದಲು ಮಹಾರಾಣಿ ಮತ್ತವಳ ಪರಿವಾರದೊಂದಿಗೆ ಮಾತುಗಳಲ್ಲಿ ಭಾಗವಹಿಸಲು ಮಾಡಿದ ಅವಳ ಪ್ರಯತ್ನಗಳು ವಿಫಲವಾದವು. ಮಹಾರಾಣಿ ಅವಳ ಮಾತುಗಳನ್ನು ನಿರ್ಲಕ್ಷ್ಯದಿಂದ ತಳ್ಳಿಹಾಕುತ್ತಿದ್ದಳು. ಮಹಾರಾಣಿಯ ಮಾತುಗಳಲ್ಲಿ ಜಾಣತನ, ಪ್ರಾಸ, ಸಂಗೀತ ಇರುತ್ತಿತ್ತು. ಕುಚೋದ್ಯವಂತೂ ಬೇಕಾದಷ್ಟು ಇರುತ್ತಿತ್ತು. ಆತ್ಮೀಯತೆ ಮಾತ್ರ ಎಳ್ಳಷ್ಟೂ ಇರುತ್ತಿರಲಿಲ್ಲ. ಅವಳ ಆತ್ಮೀಯತೆ ಏನಿದ್ದರೂ ನಾಯಿಗಳಿಗೆ ಮೀಸಲು, ರಾಜನಿಗೂ ಅದರಲ್ಲಿ ಪಾಲಿರಲಿಲ್ಲ. ಇದೇ ಕಾರಣವಾಗಿ ಚಿಕ್ಕಮ್ಮಣ್ಣಿಗೆ ರಾಜನ ಪ್ರೀತಿ ಆಸರೆಯಾಗಿ ಸಿಕ್ಕಿತು. ರಾಜ ಕ್ಷತ್ರಿಯ ಕನ್ಯೆಯನ್ನು ಮದುವೆಯಾದುದರಿಂದ ಕುಲಗೆಟ್ಟನೆಂದೇ ಮಹಾರಾಣಿ ದೂರುತ್ತಿದ್ದಳು. ಚಿಕ್ಕಮ್ಮಣ್ಣಿ ಮಾತ್ರ ರಾಜನಿಗೂ ಸೇವಕರಿಗೂ ಅಚ್ಚುಮೆಚ್ಚಿನವಳಾಗಿ ಛಾಯಾದೇವಿ, ತರುಣಚಂದ್ರರನ್ನು ಹೆತ್ತು ಅರಮನೆಯನ್ನ ಬೆಳ್ದಿಂಗಳಿಂದ ತುಂಬಿಬಿಟ್ಟಳು.

ತರುಣಚಂದ್ರ ಚಂದ್ರನಿಗಿಂತ ಹೆಚ್ಚಲ್ಲ ಕಮ್ಮಿಯಲ್ಲ. ಬಿಳಿಯ ಹಲ್ಲುಗಳನ್ನು ಪ್ರದರ್ಶಿಸುತ್ತ ತೇವವಾದ ಮತ್ತು ಮೃದುವಾದ ತುಟಿಗಳಿಂದ ಮಂಜುಳ ಧ್ವನಿಯಲ್ಲಿ ಗಾಗೂ ತೊದಲುತ್ತ ಇಡೀ ವಾತಾವರಣಕ್ಕೆ ವಿಶೇಷ ಕಳೆ ತರುತ್ತಿದ್ದ. ಆ ಪುಟ್ಟ ಸುಕುಮಾರ ಬಾಲಕನನ್ನು ಯಾವಾಗ ಕಂಡರೂ ಯಾರೂ ಕಂಡರೂ ಅವರ ಭಾವಶ್ರೀಮಂತಿಕೆ ಹೆಚ್ಚುತ್ತಿತ್ತು. ಇತ್ತ ಮಹಾರಾಣಿಗೂ ಅವನೆಂದರೆ ಆಶ್ಚರ್ಯವೇ. ಅವನನ್ನು ನೋಡಿ ಅವಳ ಒಂದು ನಾಯಿಯೂ ಬೊಗಳುತ್ತಿರಲಿಲ್ಲ. ಅಷ್ಟೇ ಅಲ್ಲ, ಅವನನ್ನು ಬಹಳ ದಿನಗಳಿಂದ ಬಲ್ಲಂತೆ ಸಲಿಗೆಯಿಂದ ವರ್ತಿಸುತ್ತಿದ್ದವು. ಒಂದು ಸಲ ತನ್ನ ಶ್ವಾನಕೂಪದ ಕ್ರೂರವಾದ ನಾಯಿಯೊಂದನ್ನು ತರಿಸಿದ್ದಳು. ಮಹಾರಾಣಿಗೆ ಗೊತ್ತಿಲ್ಲದ್ದ ಹಾಗೆ ಅದು ಅಂಬೆಗಾಗಲಲ್ಲಿ ತನ್ನ ಕಡೆಗೆ ಬರುತ್ತಿದ್ದ ತರುಣಚಂದ್ರನ ಕಡೆಗೆ ಓಡಿ ಹೋಯಿತು. ಸುತ್ತ ಸೇವಕಿಯರಿರಲಿಲ್ಲ. ಕೂಸನ್ನು ಕಚ್ಚಿ ಕೊಲ್ಲುತ್ತದೆಂದು ಮಹಾರಾಣಿ ಗಾಬರಿಯಾದಳು, ಕೂಗಿದರೂ ಅಪಾಯವೇ ಎಂದು ಬಾಯಿಮುಚ್ಚಿಕೊಂಡು ನೋಡಿದರೆ –ನಾಯಿ ಬಾಲ ಅಲ್ಲಾಡಿಸುತ್ತಾ ಮುಂಗಾಲ ಮೇಲೆ ನೆಗೆಯುತ್ತಾ ಅವನೊಂದಿಗೆ ಚಲ್ಲಾಟವಾಡುತ್ತಿದೆ! “ಈ ವಿಶ್ವಾಸವನ್ನ ನನ್ನ ನಾಯಿಗಳಿಂದ ಮೂಳೆ ಬಲಿಯದ ಈ ಹಸುಳೆ ಹ್ಯಾಗೆ ಪಡೆದುಕೊಂಡ!”

ಅಂದಿನಿಂದಲೇ ಮಹಾರಾಣಿಯ ಅಸೂಯೆಯ ಸಿಡಿಮಿಡಿ ಸುರುವಾಯಿತು. ಅರಮನೆಗೆ ಮದ್ದು ಮಾಟದ ಮಲೆಯಾಳ ಮಾಂತ್ರಿಕರು, ವಿಷವೈದ್ಯರುಗಳ ಬಳಕೆ ಜಾಸ್ತಿಯಾಯಿತು. ಮಕ್ಕಳನ್ನು ತೌರಿಗೆ ಕಳಿಸೋಣವೆಂದು ಚಿಕ್ಕಮ್ಮಣ್ಣಿ ಚಿಂತಿಸಿದಳಾದರೂ ದೊಡ್ಡಣ್ಣನೇ ಕನಕಪುರಿಯಲ್ಲಿ ಶಾಶ್ವತ ಅತಿಥಿಯಾಗಿರುವಾಗ ಹ್ಯಾಗೆ ಸಾಧ್ಯ? ಬೇರೆ ಗತಿಯಿಲ್ಲವೆಂದು ಚಿಕ್ಕಮ್ಮಣ್ಣಿ ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಸದಾಕಾಲ ಮಕ್ಕಳನ್ನು ಕಾಪಾಡುತ್ತಿದ್ದಳು. ಮಹಾರಾಜ ಯುದ್ಧಕ್ಕೆ ಹೋಗಿದ್ದಾಗಲಂತೂ ರಾತ್ರಿ ಮಕ್ಕಳನ್ನು ತಬ್ಬಿಕೊಂಡೇ ಮಲಗುತ್ತಿದ್ದಳು. ಇದ್ದಕ್ಕಿದ್ದ ಹಾಗೆ ಒಂದು ದಿನ ಬೆಳಿಗ್ಗೆ ನೋಡಿಕೊಂಡಾಗ ತಾಯಿಯ ತೋಳು ಬರಿದಾಗಿತ್ತು; ತರುಣಚಂದ್ರ ಇರಲಿಲ್ಲ! ಕಣ್ಮರೆಯಾಗಿರುವ ತರುಣಚಂದ್ರನ ಬಗ್ಗೆ ಮಹಾರಾಜ ಪಕ್ಷಪಾತದಿಂದ ಇರುವುದನ್ನು ಗಮನಿಸಿ, ಅಪಾಯದ ಮುನ್ಸೂಚನೆಯನ್ನು ಮುಂಗಂಡು ಬಹುಬೇಗ ತನ್ನ ಮಗ ಆದಿತ್ಯನಿಗೆ ಯುವರಾಜನ ಪಟ್ಟಗಟ್ಟಬೇಕೆಂದು ಮಹಾರಾಣಿ ಬಯಸಿದ್ದಳು. ಆದರೆ ಹೋಲಿಕೆಯಲ್ಲಿ ಪ್ರಧಾನಿಯ ಪ್ರತಿಬಿಂಬದಂತಿರುವ ಆದಿತ್ಯಪ್ರಭನ ಬಗ್ಗೆ ಮಹಾರಾಜನಿಗೆ ಅನುಮಾನಗಳಿದ್ದವು. ವರ್ತಕ ಸಂಘದ ಸರಿ ಅರ್ಧ ಸದಸ್ಯರೂ ಸಮರ್ಥಿಸಿದ್ದರಿಂದ ಮಹಾರಾಜ ಈ ಘರ್ಷಣೆಯ ಅನುಕೂಲ ತಗೊಂಡು ಯುವರಾಜನ ನೇಮಕಾತಿಯನ್ನು ಮುಂದೆ ಮುಂದೆ ಹಾಕುತ್ತಿದ್ದ. ಈ ಸಂದರ್ಭದಲ್ಲೇ ತರುಣಚಂದ್ರ ಕಾಣೆಯಾದ.

ಚಿಕ್ಕಮ್ಮಣ್ಣಿ ಇಡೀ ತಿಂಗಳು ಅತ್ತು ಕರೆದಳು. ಅಳುತ್ತ ತನ್ನ ಕೋಣೆಯ ಮೂಲೆಯಿಂದ ಮೂಲೆಗೆ ಅಲೆದಳು. ಒಬ್ಬಳೇ ಕನ್ನಡಿಯ ಮುಂದೆ ಕೂತು ‘ಏನು ಹೇಳಲೇ ತಾಯೀ’ ಎಂದತ್ತಳು. ಮಗಳನ್ನು ತಬ್ಬಿ ಅತ್ತಳು. ಮಗಳು ಸಮಾಧಾನ ಮಾಡಿದರೆ “ಇಲ್ಲ ಮಗಳೇ ನಾನೀಗ ನೆಮ್ಮದಿಯಿಂದ ಇದ್ದೇನೆ, ನಾನಿನ್ನು ಮಗನ ಬಗ್ಗೆ ಚಿಂತಿಸುವುದಿಲ್ಲ ಎಂದು ಹೇಳಿ ಗದ್ಗದಿಸಿದಳು. ಒಂದು ದಿನ ಕನ್ನಡಿಯ ತನ್ನ ಪ್ರತಿಬಿಂಬ –“ಮಗ ಬಂದೇ ಬರ್ತಾನೆ, ಅಲ್ಲೀ ತನಕ ನೆಮ್ಮದಿಯಿಂದ ಇರೋದಕ್ಕೆ ಕಲಿಯಬೇಕಮ್ಮ” ಎಂದು ಬುದ್ದಿ ಹೇಳಿದಂತೆ ತಾನೇ ಹೇಳಿಕೊಂಡಳು. ದುಃಖ ಒತ್ತರಿಸಿ ‘ತರುಣಚಂದ್ರಾ’ ಎಂದು ದನಿ ಮಾಡಿ ಅತ್ತಳು. ಅಷ್ಟರಲ್ಲಿ ಹೊರಗೆ ಕಾಲ ಸಪ್ಪಳ ಕೇಳಿಸಿ ಮುಖ ಬಿಳಿಚಿಕೊಂಡು ಸುಮ್ಮನಾದಳು. ಬಂದವನು ಮಹಾರಾಜ, ತನ್ನ ದುಃಖ ರಾಜನಿಗೆ ಗೊತ್ತಾಗಲಿಲ್ಲವೇ? ಎಂದು ಸಂಶಯದಿಂದ ಕಣ್ಣೀರು ಬತ್ತುವತನಕ ಅತ್ತಳು.

ಮಹಾರಾಜನಿಗೆ ಮಗ ಕಳೆದುಹೋದುದರ ಬಗ್ಗೆ ದುಃಖವಾಗಿರಲಿಲ್ಲವೆಂದಲ್ಲ ತರುಣಚಂದ್ರನನ್ನ ಜೀವಕ್ಕೆ ಹಚ್ಚಿಕೊಂಡಿದ್ದ. ಆದರೆ ಯಾವ ಪ್ರಸಂಗದಲ್ಲಿಯೂ ಯಾರ ಮುಂದೆಯೂ ಮಗನ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಅನುಕಂಪದಿಂದ ಚಿಕ್ಕಮ್ಮಣಿಯ ಕಡೆಗೆ ನೋಡುತ್ತಿದ್ದನಾದರೂ ಸಾಂತ್ವನದ ಒಂದು ಮಾತನ್ನೂ ಆಡಿರಲಿಲ್ಲ. ಅವಳೊಮ್ಮೆ ಆದಿತ್ಯಪ್ರನನ್ನು ಯುವರಾಜನನ್ನಾಗಿ ಮಾಡಬೇಕೆಂದು ಅರ್ಥಕೌಶಲ ಮತ್ತು ಮಹಾರಾಣಿ ಆಗಾಗ ಕೊಡುತ್ತಿದ್ದ ಕಾಟ ಮಾತ್ರ ತರುಣಚಂದ್ರ ಕಾಣೆಯಾದಾಗಿನಿಂದ ತಪ್ಪಿಹೋಗಿತ್ತು. ಅರ್ಥಕೌಶಲ ಮತ್ತು ಮಹಾರಾಣಿಯರ ಷಡ್ಯಂತ್ರಕ್ಕೆ ತರುಣಚಂದ್ರ ಗುರಿಯಾಗಿದ್ದಾನೆಂದು ಮಹಾರಾಜನಿಗೆ ಖಚಿತವಾಗಿತ್ತು. ಆದರೆ ಅದನ್ನು ಬಾಯಿಬಿಟ್ಟು ಹೇಳಲಾರದವನಾಗಿದ್ದ. ಚಿಕ್ಕಮ್ಮಣ್ಣಿ ಮತ್ತು ಮಗಳು ಛಾಯಾದೇವಿಯನ್ನು ಕೊಲೆ ಮಾಡಬಹುದೆಂಬ ಸಂದೇಹದಿಂದ ತನ್ನ ಕೋಣೆಯ ಪಕ್ಕದಲ್ಲೇ ಅವರ ವಾಸದ ವ್ಯವಸ್ಥೆ ಮಾಡಿ ಮೈಕಾವಲಿದ್ದಂತೆ ಅವರ ಮ್ಯಾಲೂ ಒಂದು ಕಣ್ಣಿಟ್ಟಿದ್ದ. ಇಂಥ ಆತಂಕದಲ್ಲಿಯೇ ಮಹಾರಾಜ ಹಾಸಿಗೆ ಹಿಡಿದಿದ್ದ. ವಿಷದ ಪರಿಮಾಣವೆಂದು, ಮದ್ದು ಮಾಟವೆಂದು ಜನರಾಡಿಕೊಳ್ಳುತ್ತಿದ್ದರು. ಬರಬರುತ್ತ ಹಾಸಿಗೆ ಬಿಟ್ಟು ಏಳಲಾರದ ಸ್ಥಿತಿ ಬಂದಾಗ ಶಿಖರಸೂರ್ಯ ಬಂದು ವಾಸಿ ಮಾಡಿದ್ದ.