ಕನಕಪುರಿಯನ್ನು ಆಳಿದ ರಾಜರಲ್ಲಿ ಈಗಿನ ಗುಣಾಧಿಕ್ಯನೇ ಹೆಚ್ಚು ಯಶಸ್ವಿಯಾದವನು. ಇಪ್ಪತ್ತ ನಾಲ್ಕು ವರ್ಷ ರಾಜ್ಯವಾಳಿ ಎಂಟು ದೊಡ್ಡ ಯುದ್ಧಗಳನ್ನು ಗೆದ್ದು ಕನಕಪುರಿಗೆ ಅಪಾರ ಸಂಪತ್ತು ಮತ್ತು ಕೀರ್ತಿ ತಂದವನು. ಅವುಗಳಲ್ಲೆಲ್ಲ ಬಿಳಿಗಿರಿ ರಾಜನ ಮೇಲೆ ದಂಡೆತ್ತಿ ಹೋದ ಒಂಬತ್ತನೇ ಯುದ್ಧವೇ ಮಹತ್ವದ್ದು. ಅಲ್ಲಿಯೇ ಅವನಿಗೆ ಶರಣಾಗತನಾದ ಬಿಳಿಗಿರಿ ರಾಜ ‘ವಿಜಯದ ಕಡಗ’ ಕೊಟ್ಟು ಸನ್ಮಾನ ಮಾಡಿದ್ದು, ಆ ಊರಿನಲ್ಲಿದ್ದಾಗಲೇ ಅವನು ಪ್ರೀತಿಯ ಚಿಕ್ಕಮ್ಮಣ್ಣಿಯನ್ನು ಮದುವೆಯಾದದ್ದು. ಇದು ಕನಕಪುರಿಯ ಇತಿಹಾಸದ ಮಹತ್ವದ ಅಧ್ಯಾಯವಾಗಿರುವದರಿಂದ ಅದನ್ನು ತಿಳಿಯುವ ಅಗತ್ಯವಿದೆ.

‘ಜಗತ್ಪ್ರಸಿದ್ಧ ಪ್ರಬಲ ಕನಕಪುರಿಯನ್ನು ನಿರ್ಲಕ್ಷಿಸಿ ತನ್ನ ಶ್ರೀಮಂತಿಕೆಯಿಂದ ಇವರ ಕಣ್ಣು ಮತ್ತು ಅಸೂಯೆಯಗಳನ್ನು ಕುಕ್ಕುತ್ತ ಏಳುಮಲೆಯ ದೊರೆ ರಾಜ್ಯಭಾರ ಮಾಡುತ್ತಿದ್ದ. ಬಿಳಿಗಿರಿ ಅವನ ರಾಜಧಾನಿ. ಇವರ ಅಡಿಕೆ ಮತ್ತು ಮಸಾಲೆ ಸಾಮಾನುಗಳಿಗೆ ಐವತ್ತಾರು ದೇಶಗಳಲ್ಲಿ ಭಾರಿ ಬೇಡಿಕೆಯಿತ್ತು. ಅಂಥದೊಂದು ನಾಡು ತನ್ನ ಆಧೀನ ಇಲ್ಲದ್ದೇ ಕನಕಪುರಿಯ ವರ್ತಕರು ನಿದ್ದೆಗೆಡುವುದಕ್ಕೆ ಕಾರಣವಾಯಿತು. ಏಳುಮಲೆಯ ಗಿರಿಗಹ್ವರಗಳನ್ನು ಅಧ್ಯಯನ ಮಾಡಿ, ಎರಡು ವರ್ಷ ಯುದ್ಧದ ತಯಾರಿ ಮಾಡಿಕೊಂಡು ಒಳ್ಳೆಯ ಮುಹೂರ್ತ ಸಂದರ್ಭಗಳನ್ನು ಕಾಯುತ್ತ ಕೂತರು.

ಇದರ ಸುಳಿವಿಲ್ಲದ ಬಿಳಿಗಿರಿಯ ಚೆಲುವರಾಯ ಅನತಿದೂರದ ಅಳುಪರ ಮೇಲೆ ದಂಡೆತ್ತಿ ಹೋದ. ಇದನ್ನೇ ಕಾಯುತ್ತಿದ್ದ ಕನಕಪುರಿಯವರು ಸಮಯ ಸಾಧಿಸಿ ದಾಳಿ ಮಾಡಿ ಬಿಳಿಗಿರಿಯನ್ನು ವಶಮಾಡಿಕೊಂಡರು. ಅತ್ತ ಆಳುಪರ ಮೇಲೆ ದಂಡೆತ್ತಿ ಹೋಗಿದ್ದ ಚೆಲುವರಾಯನಿಗೆ ಸುದ್ದಿ ಮುಟ್ಟಿ ವಾಪಸು ಬಂದ. ಅನ್ಯರ ಅಧೀನದಲ್ಲಿದ್ದ ತನ್ನ ರಾಜಧಾನಿಯನ್ನು ಹಿಂದಿರುಗಿ ಪಡೆಯುವುದಕ್ಕೆ ಈಗ ಯುದ್ಧ ಮಾಡಬೇಕಾಯಿತು! ಆದರೆ ಹ್ಯಾಗೆ ಯುದ್ಧ ಮಾಡಿದರೂ ತನ್ನ ಊರಲ್ಲಿದ್ದ ಪ್ರಜೆಗಳಿಗೇ ಹಾನಿಯಾಗಬೇಕು. ಊರಿನ ನೀರಿನ ಸರಬರಾಜು ತಪ್ಪಿಸಬಹುದು. ಅದು ತನ್ನವರಿಗೇ ಹಾನಿ. ಸಿಡಿತಲೆ ಹಾರಿಸಿದರೂ ತನ್ನವರಿಗೇ ಹಾನಿ. ಕೊನೆಗೂ ಒಂದು ಒಪ್ಪಂದಕ್ಕೆ ಒಪ್ಪಲೇಬೇಕಾಯಿತು. ಒಪ್ಪಂದವೂ ಆಗಿ ರಾಜ ತನ್ನ ರಾಜಧಾನಿಯ ಪ್ರವೇಶ ಮಾಡಿದರೆ ಆಶ್ಚರ್ಯವೋ ಆಶ್ಚರ್ಯ! ಕನಕಪುರಿಯವರೇ ಮುಂದಾಗಿ ಭರ್ಜರಿಯಾಗಿ ಬರಮಾಡಿಕೊಂಡರಲ್ಲದೆ, ಕನಕಪುರಿಯ ಸೈನಿಕರು ತಮ್ಮ ವಿಶೇಷ ಕವಾಯತನಿಂದ ಬಿಳಿಗಿರಿ ರಾಯನಿಗೆ ಮರ್ಯಾದೆ ತೋರಿಸಿದರು. ಚೆಲುವರಾಯನನ್ನು ಅವನ ಸಿಂಹಾಸನದ ಮೇಲೆ ಕೂರಿಸಿ ಭಾರಿ ಸನ್ಮಾನ ಮಾಡಿ ಅಮೂಲ್ಯವಾದ ಮತ್ತು, ಆಶ್ಚರ್ಯಕರ ಕಾಣಿಕೆಗಳಿಂದ ಬಿಳಿಗಿರಿರಾಯ ಆನಂದಪರವಶನಾಗುವಂತೆ ಮಾಡಿದರು. ಸಮಯವನ್ನಳೆಯುವ ಯಂತ್ರವನ್ನು ಕೊಟ್ಟು ರಾಜ ಮತ್ತವನ ಪರಿವಾರದ ಮನಸ್ಸಂತೋಷ ಪಡಿಸಿದರು. ಒಬ್ಬ ಆಟಿಗೆ ಸೈನಿಕ ಮನೆಯೊಳಗಿಂದ ಬಂದು ಎತ್ತರವಾದ ದೀಪವನ್ನು ಪ್ರತಿಸಂಜೆ ಸಮಯಕ್ಕೆ ಸರಿಯಾಗಿ ಹೊತ್ತಿಸಿ ಮತ್ತೆ ಆಟಿಗೆ ಮನೆಯೊಳಕ್ಕೆ ಹೋಗುವಂಥ ಯಂತ್ರಕೊಟ್ಟು ಇಡೀ ಬಿಳಿಗಿರಿಯನ್ನು ಬೆರಗಿನಲ್ಲಿ ಮುಚ್ಚಿಬಿಟ್ಟರು. ಇನ್ನು ಕನಕಪುರಿ ರಾಜನನ್ನು ತಾನು ಹ್ಯಾಗೆ ಆನಂದಪಡಿಸಬೇಕೆಂದು ಚೆಲುವರಾಯನಿಗೆ ತಿಳಿಯದಾಯಿತು. ತನ್ನ ತಂಗಿ ವಿನಯವತಿಯನ್ನು ಗುಣಾಧಿಕ್ಯನಿಗೆ ಕೊಟ್ಟು ಅದ್ದೂರಿಯಾಗಿ ಲಗ್ನಮಾಡಿ, ಬೀಗತನದ ಮತ್ತು ಮಹಾರಾಜನ ಶೌರ್ಯದ ಗುರುತಿಗಾಗಿ ನವರತ್ನ ಖಚಿತವಾದ ಮತ್ತು ಒಳಗೂ ನವರತ್ನಗಳು ತುಂಬಿದ್ದ ‘‘ವಿಜಯದ ಕಡಗ’’ವನ್ನು ಬಲಗೈಗೆ ತೊಡಿಸಿದನು.

ಈಗ ಇಬ್ಬರೂ ತುಂಬಿದ್ದ ‘ವಿಜಯದ ಕಡಗ’ವನ್ನು ಬಲಗೈಗೆ ಕರಾರುಗಳು:

ಒಂದು: ಕನಕಪುರಿಯ ವರ್ತಕಶ್ರೇಷ್ಠನಿಗೆ ಏಳುಮಲೆಯ ಮಸಾಲೆ ಸಾಮಾನುಗಳನ್ನು ಸಗಟು ಖರೀದಿಸುವ ಮತ್ತು ಎಲ್ಲ ದೇಶಗಳಿಗೆ ವಿತರಿಸುವ ಅಧಿಕಾರ ಕೊಡತಕ್ಕದ್ದು.

ಎರಡು: ಬಿಳಿಗಿರಿಗೆ ಬೇಕಾಗುವ ಎಲ್ಲ ಯುದ್ಧ ಸಾಮಗ್ರಿಗಳನ್ನು ಕನಕಪುರಿಯ ಪರಮ ವರ್ತಕನಿಂದಲೇ ತೆಗೆದುಕೊಳ್ಳತಕ್ಕದ್ದು.

ಮೂರು: ಬಿಳಿಗಿರಿಗೆ ಸ್ವಂತ ಸೈನ್ಯ ಬೇಡ. ಕನಕಪುರಿಯ ಪ್ರಧಾನಿಯೇ ಬಿಳಿಗಿಯ ರಕ್ಷಣೆಗೆ ಶಾಶ್ವತವಾಗಿ ಸೈನ್ಯವ್ಯವಸ್ಥೆ ಮಾಡತಕ್ಕದ್ದು.

ಮೂರನೇ ಕರಾರನ್ನು ಚೆಲುವರಾಯ ಒಪ್ಪಿದರೂ ಅವನ ತಮ್ಮ ಶಿವದೇವರಾಯ ಒಪ್ಪಲಿಲ್ಲ. ನಮ್ಮಲ್ಲಿಯ ಸೈನಿಕರು ಅನಾಥರಾಗುವರೆಂದು, ನಿರುದ್ಯೋಗಿಗಳಾಗುವರೆಂದು ನೆಪಹೇಳಿ ಇದೊಂದರಿಂದ ವಿನಾಯತಿ ಬೇಕೆಂದು ಪಟ್ಟು ಹಿಡಿದು ಪಡೆದ. ಮೊದಲಿನ ಎರಡರಿಂದಲೇ ಸಿಕ್ಕುವ ನಿವ್ವಳಲಾಭವನ್ನು ವಾಚಕರು ಊಹಿಸಬಲ್ಲರಾದ್ದರಿಂದ ಒಪ್ಪದೇ ಇದ್ದ ಮೂರನೇ ಕರಾರಿನ ಬಗ್ಗೆ ಈಗ ಹೇಳಲೇಬೇಕು.

ಒಪ್ಪಂದವಾದ ಮೂರು ವರ್ಷ ಕನಕಪುರಿಯು ಬಿಳಿಗಿರಿಯನ್ನು ಅಕ್ಷರಶಃ ಸುಲಿಗೆ ಮಾಡಿತು. ಸಾಮಾನ್ಯವಾಗಿ ಮೂರು ವರ್ಷಕ್ಕೊಂದಾದರೂ ದೊಡ್ಡ ಯುದ್ಧ ಮಾಡಿ ದೇಶಗಳನ್ನು ಸುಲಿಯುವ ಪದ್ಧತಿ ಇಟ್ಟುಕೊಂಡಿದ್ದ ಕನಕಪುರಿಯವರು ಆ ವರ್ಷ ಯುದ್ಧದ ಸುದ್ದಿ ಎತ್ತಲಿಲ್ಲ. ಈ ಮಧ್ಯೆ ಗುಣಾಧಿಕ್ಯ ಮಹಾರಾಜನಿಗೆ ವಿನಯವತಿಯಿಂದ ಛಾಯಾದೇವಿ ಮತ್ತು ತರುಣಚಂದ್ರ ಎಂಬ ಇಬ್ಬರು ಮಕ್ಕಳಾದರು. ಆಗಲೇ ಹೋದಾಗ ತರುಣಚಂದ್ರ ಕಾಣೆಯಾಗಿದ್ದಾನೆಂದು ಕನಕಪುರಿಯಿಂದ ಸುದ್ದಿ ಬಂತು. ಯುದ್ಧವನ್ನು ಅರ್ಧಕ್ಕೇ ನಿಲ್ಲಿಸಿ ಮಹಾರಾಜ ವಾಪಸಾದ. ಬಳಿಕ ಕಳೆದು ಹೋದ ಮಗನನ್ನು ಪತ್ತೆಹಚ್ಚಲು ಎಷ್ಟು ಪ್ರಯತ್ನಿಸಿದರೂ ಮಗ ಸಿಕ್ಕದೆ ನಿರಾಸೆಯಲ್ಲಿ ಕೈ ಚೆಲ್ಲಿ ರೋಗಕ್ಕೆ ತುತ್ತಾದ. ಮಳೆಯಾಳ ಮದ್ದು ಮಾಟವೆಂದರು, ವಿಷ ಸೇವನೆಯೆಂದರು, ಯಾವುದಕ್ಕೆ ಮದ್ದು ಕೊಟ್ಟರೂ ಗುಣ ಕಾಣಲಿಲ್ಲ.

ಕನಕಪುರಿಯ ರಾಜ ದುರ್ಬಲನಾದ ಸುದ್ದಿ ತಿಳಿದದ್ದೇ ತಡ ಬಿಳಿಗಿರಿರಾಯನ ಸೋದರ ಶಿವದೇವರಾಯ ಕನಕಪುರಿಯೊಂದಿಗಿನ ಅಣ್ಣನ ವ್ಯವಹಾರದ ಬಗ್ಗೆ ತಕರಾರು ತೆಗೆದ. ನಾವು ಬೆಳೆವ ಮಸಾಲೆಗಳ ಬೆಲೆ ನಿಗದಿಯ ಮತ್ತು ಮಾರಾಟದ ಹಕ್ಕು ನಮ್ಮದೇ ಎಂದು ಬಹಿರಂಗವಾಗಿಯೇ ಅಣ್ಣನನ್ನು ಟೀಕೆ ಮಾಡತೊಡಗಿದ. ಚೆಲುವರಾಯ ತಮ್ಮನಿಗೆ ತಿಳಿಹೇಳಲು ಮಾಡಿದ ಪ್ರಯತ್ನಗಳು ವಿಫಲವಾದವು. ಕೊನೆಗೆ ಬುಡಕಟ್ಟು ನಾಯಕರ ಬೆಂಬಲ ತಗೊಂಡು ಅಣ್ಣನ ಮೇಲೆ ಯುದ್ಧ ಸಾರಿದ. ಬಿಳಿಗಿರಿಯ ಚೆಲುವರಾಯನ ಬೆಂಬಲಕ್ಕೆ ಕನಕಪುರಿ ನಿಂತಿತು.

ಅಣ್ಣ ತಮ್ಮಂದಿರ ಮಧ್ಯೆ ಯುದ್ಧವಾಯಿತು. ಯುದ್ಧದಲ್ಲಿ ಬಿಳಿಗಿರಿಯ ಚೆಲುವರಾಯ ಸೋತು ಅಪಾರವಾದ ಚಿನ್ನಬೆಳ್ಳಿ ವಜ್ರ ವೈಢೂರ್ಯಗಳನ್ನು ನಾಲ್ಕು ಗಾಡಿಗಳಲ್ಲಿ ಹೇರಿಕೊಂಡು ರಾತೋರಾತ್ರಿ, ಯಾರಿಗೂ ಗೊತ್ತಾಗದಂತೆ ತಪ್ಪಿಸಿಕೊಂಡು ಓಡಿ ಕನಕಪುರಿಗೆ ಬಂದುಬಿಟ್ಟ.

ಕನಕಪುರಿಯಲ್ಲಿ ಭವ್ಯ ಸ್ವಾಗತ ದೊರೆಯಿತು. ಅತಿಥಿರಾಜನಿಗಾಗಿ ನದೀ ತೀರದ ಸುಂದರವಾದ ಅತಿಥಿಗೃಹ ಇಂದ್ರಭವನದಲ್ಲಿ ವ್ಯವಸ್ಥೆ ಮಾಡಿದರು. ತನ್ನೊಂದಿಗೆ ಚೆಲುವರಾಯ ಸುಮಾರು ಒಂದು ಕಡಿಮೆ ನಲವತ್ತು ಸೈನಿಕರ ಚಿಕ್ಕ ಪಡೆ ತಂದಿದ್ದ. ಅವರು ಚೆಲುವರಾಯನ ಸೇವಕರಾದರು. ಅತಿಥಿಯೆಂದರೂ ಅವನಿದ್ದ ಇಂದ್ರನಿವಾಸದ ಬಾಡಿಗೆ ಮತ್ತು ಅವನ ಕಡೆಯವರ ದಿನನಿತ್ಯದ ಖರ್ಚಿಗೆ ಅವನು ತಂದ ನಿಧಿಯಿಂದಲೇ ಹಣ ಸಂದಾಯವಾಗುತ್ತಿತ್ತು.

ಚೆಲುವರಾಯನ ಆನಂದಕ್ಕೆ ಕಿಂಚಿತ್ತೂ ಕೊರತೆಯಾಗದಂತೆ, ಅವನ ಅಹಂಕಾರಕ್ಕೆ ಕಿಂಚಿತ್ತೂ ಕೊಂಕಾಗದಂತೆ ಅವನನ್ನು ಹಗಲು ರಾತ್ರಿ ಕಣ್ಣಿಗೆ ಕಣ್ಣು ಹಚ್ಚದೆ ಅವನ ಜನ ನೋಡಿಕೊಂಡರು.

ಒಂದು ವರ್ಷ ಕಳೆದಿರಬೇಕು, ಸೈನ್ಯ ಪಡೆಯ ಅರ್ಧ ಜನ ಮತ್ತು ತಾಣು ತಂದ ನಿಧಿ ಅರ್ಧ ಮಾಯವಾಗಿತ್ತು! ದಿನ ಬಿಟ್ಟು ದಿನ ಬಂದು ಯೋಗಕ್ಷೇಮ ಕೇಳುತ್ತಿದ್ದ ಪ್ರಧಾನಿ ಅರ್ಥಕೌಶಲನಿಗೆ ಈಗ ಸಮಯವೇ ಸಿಕ್ಕದಾಯಿತು. ಹೀಗೇ ನಿರ್ಲಕ್ಷಿಸುತ್ತ ಬಂದು ಇನ್ನೊಂದು ವರ್ಷ ಕಳೆಯುವುದರೊಳಗಾಗಿ ಬಿಳಿಗಿರಿರಾಯ ಪೂರ್ತಿ ನಿಧಿ ಕಳೆದುಕೊಂಡು ಪಾಪರಾಗಿ ಸಾಮಾನ್ಯ ಪ್ರಜೆಯಾಗಿದ್ದ. ಚೆಲುವರಾಯನ ತಂಗಿ ಅಂದರೆ ಇಲ್ಲಿ ಚಿಕ್ಕ ರಾಣಿಯಾಗಿದ್ದ ಚಿಕ್ಕಮ್ಮಣ್ಣಿ ಅಣ್ಣನ ಸ್ಥಿತಿ ನೋಡಿ ಪ್ರತಿಭಟಿಸಿದಳು. ಇದರಿಂದಾದ ಪ್ರಯೋಜನವೆಂದರೆ ಸೈನ್ಯ ಪಡೆಯ ಉಳಿದ ಜನ ಮಾಯವಾಗಲಿಲ್ಲ. ಚೆಲುವರಾಯನ ಸೇವೆ ಮಾಡಿಕೊಂಡು ಅಲ್ಲೇ ಇದ್ದರು.