ಕುರಿ ಉಣ್ಣೆಯ ಒರಟಾದ ತುಂಡು ಬಟ್ಟೆಯ, ನೀಳ ಕೂದಲಿನ, ಕೈಯಲ್ಲಿ ಉದ್ದ ಕೋಲು ಹಿಡಿದ, ಎತ್ತರದ ವ್ಯಕ್ತಿಯೊಬ್ಬ ಅರಮನೆಯ ಪೌಳಿಯ ಹೊಕ್ಕು ಯಾರಾದರೂ ಇದ್ದಾರೆಯೇ? ಅಂತ ಆ ಈ ಕಡೆ ಶೋಧಕ ದೃಷ್ಟಿಯಿಂದ ಹುಡುಕಿ, ರಾಜಕುಮಾರಿ ಉದ್ಯಾನದ ಒಂದು ಬದಿಯಲ್ಲಿದ್ದರೂ ಅವಳನ್ನು ಬಿಟ್ಟು ಉದ್ಯಾನದ ಅಂಚಿನಲ್ಲಿದ್ದ ಚಿಕ್ಕಮ್ಮಣ್ಣಿಯ ಕಡೆಗೆ ಅವಸರದಲ್ಲಿ ನಡೆಯತೊಡಗಿದ. ಆತ ತನ್ನ ಕಡೆ ನೋಡಿದ್ದನ್ನು ಛಾಯಾದೇವಿ ಗಮನಿಸಿದ್ದಳು. ಆದರೂ ತನ್ನನ್ನು ಬಿಟ್ಟು ಚಿಕ್ಕಮ್ಮಣ್ಣಿಯ ಕಡೆಗೆ ಹೋದದ್ದನ್ನು ನೋಡಿ ಯಾವುದೋ ಅಮ್ಮನಿಗೆ ಸಂಬಂಧಪಟ್ಟ ತುರ್ತು ಕಾರ್ಯವಿರಬೇಕೆಂದು ಊಹಿಸಿ, ಹಾಗೆ ದೊಡ್ಡ ಹೆಜ್ಜೆ ಹಾಕುತ್ತ ದೂರದೂರಕ್ಕೆ ಕೋಲೂರುತ್ತ ನಡೆದಾಗ ಕಾಲ್ಕಡಗ ಮತ್ತು ಕೋಲಿನ ಗೆಜ್ಜೆ ಅಲುಗಿ ನಾದಮಯ ಶಬ್ದ ಕೇಳಿಸುತ್ತಿತ್ತು. ಗಾಳಿಗೆ ಅಲುಗಲುಗಿ ಮುಖದ ಮ್ಯಾಲೆ ತೂರಿ ಬರುತ್ತಿದ್ದ ನರೆಗೂದಲ ಬಗ್ಗೆ ನಿರ್ಲಕ್ಷದಿಂದ ಇದ್ದ. ಆತನ ಮುಖದಲ್ಲಿ ಅವನ ಅವಸರವನ್ನು ಗಮನಿಸಿ ಕೈಯ ಹೂಗಳನ್ನು ಪುನಃ ಹುಡುಗನ ಕೈಗಿತ್ತು ಪೂಜಾರಿಗೆ ತಲುಪಿಸಲು ಹೇಳಿ ಬರುತ್ತಿರುವ ವ್ಯಕ್ತಿಯ ಕಡೆಗೆ ಹೆಜ್ಜೆ ಹಾಕಿದಳು.

ಬಂದಾತ ಬಾಗಿ ನಮಸ್ಕಾರವನ್ನಾಚರಿಸಿ, ಚಿಕ್ಕಮ್ಮಣ್ಣಿ ಅದನ್ನು ಸ್ವೀಕರಿಸಿ, ಈತ ಅವಸರದಲ್ಲಿ ಏನನ್ನೋ ಹೇಳಿದ. ಹೇಳಿದ ದನಿ ಕೇಳಿಸಿತಾದರೂ ಶಬ್ದಗಳು ಪ್ರತ್ಯೇಕವಾಗಿರಲಿಲ್ಲ. ಚಿಕ್ಕಮ್ಮಣ್ಣಿ ಅವಸರ ಮತ್ತು ಆತಂಕದಲ್ಲಿ ಕೇಳಿದ ಒಂದೆರಡು ಪ್ರಶ್ನೆಗಳಿಗೆ ಆತ ಅಭಿನಯಪೂರ್ವಕ ದೀರ್ಘವಾದ ಉತ್ತರ ಕೊಟ್ಟ. ಆಮೇಲೆ ಚಿಕ್ಕಮ್ಮಣ್ಣಿ ಮಾತಾಡಲಿಲ್ಲ. ದುಃಖದ ಸುದ್ದಿ ಕೇಳಿದಂತೆ ಅಳುಮುಖ ಮಾಡಿಕೊಂಡು, ನಿಟ್ಟುಸಿರು ಬಿಟ್ಟು ಅರಮನೆಯ ಕಡೆಗೆ ತಿರುಗಿದಳು. ಬಂದ ವ್ಯಕ್ತಿ ಎತ್ತರದ ದನಿಯಲ್ಲಿ ಹೇಳಿದ:

“ನಮ್ಮ ರಾಜನಿಗೂ ಕುಲಕ್ಕೂ ಅವಮಾನ ಮಾಡಿದ್ದಾರೆ. ಅವರ ಪೈಕಿ ಯಾರು ಬಂದರೂ ನಾವು ಜೀವಂತ ಬಿಡುವುದಿಲ್ಲ!”

ಮೊದಲು ಸುದ್ದಿ ಕೇಳಿಯೇ ದುಃಖ ತುಂಬಿದ ಚಿಕ್ಕಮ್ಮಣ್ಣಿ ಈಗ ಶಕ್ತಿ ಉಡುಗಿ ಹೋದಂತಾಗಿ ಅಸ್ಥಿರವಾದ ಎರಡು ಹೆಜ್ಜೆ ಇಡುವಷ್ಟರಲ್ಲಿ ಬೀಳುವಂತಾದಳು. ಬಂದ ವ್ಯಕ್ತಿಯೇ ಓಡಿಹೋಗಿ ಆಧಾರಕ್ಕೆ ಕೈ ಕೊಡಬೇಕೆಂಬಲ್ಲಿ ಚಿಕ್ಕಮ್ಮಣ್ಣಿಯೇ ಸುಧಾರಿಸಿಕೊಂಡು ಬೇಡವೆಂಬಂತೆ ಕೈ ಚಲಿಸಿದಳು. ಸ್ವಲ್ಪ ಹೊತ್ತು ನಿಂತು ಸುಧಾರಿಸಿಕೊಂಡು ಆ ಒರಟು ಮನುಷ್ಯನ ಕಡೆಗೆ ತಿರುಗುವಷ್ಟರಲ್ಲಿ ಅಲ್ಲಿಗೆ ಛಾಯಾದೇವಿ ಬಂದಿದ್ದಳು. ಆ ಕಾಡು ಮನುಷ್ಯನನ್ನು ನೋಡಿ ಬೆರಗಾದರೂ ತನ್ನ ತಾಯಿಯನ್ನು ಕಳವಳಕ್ಕೀಡು ಮಾಡಿದವನೆಂದು ಕೋಪವುಕ್ಕಿ ಮಾತಾಡಿದಳು ರಾಜಕುಮಾರಿ:

“ಯಾರು ನೀನು?”

“ಬಿಳಿಗಿರಿರಾಯರ ಭಂಟ ಸುಕ್ರ.”

-ಎಂದ ಬೆರಗಿನಿಂದ ಆಕೆಯನ್ನೇ ನೋಡುತ್ತ. ಅಷ್ಟರಲ್ಲಿ ಚಿಕ್ಕಮ್ಮಣ್ಣಿ ಬೀಳುವಳೋ ಏಳುವಳೋ ಎಂಬಂತೆ ಹೊಯ್ದಾಡುತ್ತ ಅರಮನೆಯ ಕಡೆಗೆ ನಡೆದಿದ್ದಳು. ಬಿದ್ದಾಳೆಂದು ಇವಳೂ ಸಹಾಯಕ್ಕೆ ಓಡಿದಳು. ಸುಕ್ರ ಚಿಕ್ಕಮ್ಮಣ್ಣಿಯನ್ನು ಆಕೆ ಕಣ್ಮರೆಯಾಗುವತನಕ ಅನುಕಂಪದಿಂದ ನೋಡಿ ಬಂದ ದಾರಿಯಿಂದ ಹೊರಕ್ಕೆ ಹೋದ.

ಚಿಕ್ಕಮ್ಮಣ್ಣಿ ಒಳಗೆ ಬಂದಾಗ ಅರ್ಥಕೌಶಲ ಬಂದು ಮಹಾರಾಜನ ಮುಂದೆ ಕೂತಿದ್ದ. ಮೂವರು ಯೋಚಿಸಿದರು: ಅರಮನೆಯ ಯಾರೊಬ್ಬರಿಗೂ ಬಿಳಿಗಿರಿ ಭಂಟರ ಎದುರು ನಿಂತು ಮಾತನಾಡುವ ನೈತಿಕ ಧೈರ್ಯವಿರಲಿಲ್ಲ. ಬಿಳಿಗಿರಿ ರಾಯನನ್ನು ಕನಕಪುರಿಯವರು ಬಹಳ ಕೆಟ್ಟದಾಗಿ ನಡೆಸಿಕೊಂಡಿದ್ದರು. ಗೌರವ ತೋರಿರಲಿಲ್ಲ, ಸಾಲದ್ದಕ್ಕೆ ಅವನ ಚಿನ್ನವನ್ನೆಲ್ಲಾ ಸುಲಿದ ಮೇಲೆ ಅಸ್ಪೃಶ್ಯನಂತೆ ನಡೆಸಿಕೊಂಡಿದ್ದರು. ಈಗ ರಾಯ ಮರಣ ಹೊಂದಿದ್ದಾನೆ. ಅಂತ್ಯ ಸಂಸ್ಕಾರ ಮಾಡಬೇಕು. ಆದರೆ ಹೆಣದ ಬಳಿ ಕನಕಪುರಿಯ ಯಾರು ಬಂದರೂ ಸೇಡು ತೀರಿಸಿಕೊಳ್ಳುವುದಾಗಿ ಸುಕ್ರ ಬೇರೆ ಸಾರಿ ಹೋಗಿದ್ದಾನೆ. ಈಗ ಅರ್ಥಕೌಶಲನಿರಲಿ, ಮಹಾರಾಜ ಹೋದರೂ ಅಪಾಯಕಾರಿ. ಚಿಕ್ಕಮ್ಮಣ್ಣಿಯ ಬಗ್ಗೆ ಗೌರವವಿದ್ದುದೇನೋ ನಿಜ, ಆಕೆಯ ಹಿಂದೆ ನಿಂತು ಅವಳನ್ನು ಮುಂದೆ ಮಾಡುವುದು ರಾಜನಿಗೂ ಇಷ್ಟವೆ. ಆದರೆ ಪರಿಸ್ಥಿತಿಯನ್ನು ನಿಭಾಯಿಸುವಷ್ಟು ಚಾಲಕುತನ ಅವಳಲ್ಲಿರಲಿಲ್ಲ. ಅಲ್ಲದೆ ಅವಳ ಮುಗ್ಧತೆಯಿಂದಾಗಿ ಉದ್ದೇಶಕ್ಕೆ ವಿರುದ್ಧವಾಗಿ ಪರಿಸ್ಥಿತಿ ಬಿಗಡಾಯಿಸಬಹುದೆಂಬ ಭಯವೂ ಉಂಟಾಯಿತು. ಇಂಥ ಬಿಗಿ ಸನ್ನಿವೇಶದಿಂದ ಅರಮನೆಯ ಮಾನಮರ್ಯಾದೆಗೆ ಕುಂದುಂಟಾಗದಂತೆ ಅದನ್ನು ಸುರಳೀತ ಪಾರು ಮಾಡಬಲ್ಲಾತ ಶಿಖರಸೂರ್ಯನೊಬ್ಬನೇ ಎಂಬ ತೀರ್ಮಾನಕ್ಕೆ ಮೂವರು ಬಂದು ಬಿಟ್ಟರು. ಹೇಳಿಕಳಿಸಿ ಶಿಖರಸೂರ್ಯನಿಗಾಗಿ ಕಾಯುತ್ತ ಕೂತರು.

ಶಿಖರಸೂರ್ಯ ಬಂದಾಗ ಅರಮನೆಯ ಮೊಗಸಾಲೆಯಲ್ಲಿ ಛಾಯಾದೇವಿ ಮತ್ತು ಆದಿತ್ಯಪ್ರಭ ಚಿಂತಾಕ್ರಾಂತರಾಗಿ, ಆತಂಕದಲ್ಲಿ ಕೂತಿದ್ದರು. ಇಬ್ಬರೂ ಮಾತಾಡಲಿಲ್ಲ. “ಚಿಕ್ಕಮ್ಮಣ್ಣಿಯ ಕೋಣೆ ಯಾವುದು?” ಅಂದ ಆದಿತ್ಯಪ್ರಭನಿಗೆ. ಯುವರಾಜ ಕೈಯಿಂದ ಒಂದು ಬಾಗಿಲು ತೋರಿಸಿದ. ಯುವರಾಜನ ಕಡೆಗೆ ನೋಡದೆ ಅವನು ತೋರಿದ ಕೋಣೆಯನ್ನು ಪ್ರವೇಶಿಸಿದ. ತಿಳಿ ಕೆಂಬಣ್ಣ ಬಳಿದ ವಿಶಾಲ ಕೋಣೆ, ಕಿಡಕಿಯ ಸುತ್ತ ಸುಣ್ಣ ಮತ್ತು ನೀಲಿ ಬಣದಲ್ಲಿ ಚಿತ್ತಾರ ಬರೆದಿದ್ದರು. ಅದರಡಿಯ ಮಂಚದಲ್ಲಿ ಕೂತಿದ್ದ ಮಹಾರಾಜ ಕಂಡ. ಇವನ ದೃಷ್ಟಿಯಿಂದ ತಪ್ಪಿಸಿಕೊಳ್ಳಲು, ಇವನಿಗಿಂತ ಮುಂಚೆ ರಾಜನೇ ಮುಖ ತಿರುಗಿಸಿದ್ದ. ಕಿಡಿಕಿಯಿಂದ ಬರುವ ಬೆಳಕು ಸಾಲದೆ ಮೂಲೆಯ ಕಡೆಗೆ ಮುಖ ತಿರುಗಿಸಿದ್ದರಿಂದ ರಾಜನ ಮುಖ ಕಾಣಿಸುತ್ತಿರಲಿಲ್ಲ. ಬಂದಾಗೊಮ್ಮೆ “ಬಾ ವೈದ್ಯನೇ” ಎಂದು ಕೈಚಾಚಿ ಕರೆಯುತ್ತಿದ್ದ ರಾಜ ಇಂದು ಬೇರೆ ಕಡೆ ಮುಖ ತಿರುಗಿಸಿದ್ದು ಶಿಖರಸೂರ್ಯನ ಕುತೂಹಲ ಕೆರಳಿಸಿತು. ‘ಇವತ್ತೇನೋ ಆಗಿದೆ’ ಎಂದು ಯೋಚಿಸುತ್ತಲೇ ಹೊರಗೆ ಬಂದ. ಪುನಃ ಯುವರಾಜನ ಕಡೆಗೆ ಪ್ರಶ್ನಾರ್ಥಕವಾಗಿ ನೋಡಿದ. ಅವನು ಮುಂದಿನ ಕೋಣೆ ಎಂದು ಸನ್ನೆಯಿಂದಲೇ ಹೇಳಿದ. ಮುಂದಿನ ಕೋಣೆಯ ಬಾಗಿಲು ತಳ್ಳಿ ಒಳಕ್ಕೆ ಹೋದ.

ಇದೂ ದೊಡ್ಡ ಕೋಣೆಯೇ. ಬಣ್ಣದ ಬಟ್ಟೆಗಳಿಂದ ಕಿಡಿಕಿಗಳನ್ನು ಅಲಂಕರಿಸಿದ್ದರು. ಕೆನೆಬಣ್ಣದ ಗೋಡೆಗಳಿಗೆ ಅಲಂಕಾರದ ಕಲಾತ್ಮಕ ವಸ್ತುಗಳನ್ನ ಅಂಟಿಸಲಾಗಿತ್ತು. ಅವನ್ನು ನೋಡುವ ತಾಳ್ಮೆ ಇಲ್ಲದೆ ನೇರ ಮಂಚದ ಕಡೆಗೆ ನೋಡಿದ. ಪೀಠದ ಮೇಳೆ ರಾಜಗುರು ಮಂಡಿಸಿದ್ದ. ಅವನೆದುರಿನ ಪೀಠದಲ್ಲಿ ಚಿಕ್ಕಮ್ಮಣ್ಣಿ ಬಿಕ್ಕುತ್ತ ಕೂತಿದ್ದಳು. ರಾಜಗುರುವಿನ ಆಚೆ ಪೀಠದಲ್ಲಿ ಅರ್ಥಕೌಶಲ ಕೂತಿದ್ದವನು ಗೊಂದಲದಲ್ಲಿ ಎದ್ದುನಿಂತು ದುಃಖದ ಅಭಿನಯವನ್ನೂ ಮಾಡುತ್ತ, ಹಸ್ತ ಹೊಸೆದು ಶಿಖರಸೂರ್ಯನ ಕಡೆಗೂ, ಚಿಕ್ಕಮ್ಮಣ್ಣಿಯ ಕಡೆಗೂ ನೋಡುತ್ತ, ತನ್ನ ಅಸಹಾಯಕತೆಗೆ ತಾನೇ ಮರುಗುತ್ತ ಶಿಖರಸೂರ್ಯನಿಗೆ ಕೂರಲು ಒಂದು ಆಸನ ತೋರಿಸಿದ.

ಚಿಕ್ಕಮ್ಮಣ್ಣಿ ಅತ್ತು ಅತ್ತು ಮುಂಗೂದಲು ಚದುರಿ ಬೆವರು ಕಣ್ಣೀರಲ್ಲಿ ಒದ್ದೆಯಾಗಿದ್ದವು. ಕಣ್ಣುಮೂಗಿನ ತುದಿಗಳು ಕೆಂಪಗಾಗಿ ಮುಖ ಊದಿಕೊಂಡಿತ್ತು. ಹಣೆಯ ಕುಂಕುಮದಲ್ಲಿ ಬೆವರ ಹನಿ ಹರಿದು ಅದರಗುಂಟ ಕುಂಕುಮ ಮೆತ್ತಿ ಹಣೆಯಿಂದ ನೆತ್ತರು ಸೋರಿದ ಹಾಗೆ ಕಾಣುತ್ತಿತ್ತು. ಸೀರೆ ಮತ್ತು ಆಭರಣಗಳು ಅಸ್ತವ್ಯಸ್ಥವಾಗಿದ್ದವು. ಶಿಖರಸೂರ್ಯನನ್ನು ನೋಡಿ ದುಃಖ ಒತ್ತರಿಸಿ ಬಂತು. ಎದ್ದು ಅವನಲ್ಲಿಗೆ ಹೋಗಿ ಅವನ ಎರಡೂ ಹಸ್ತಗಳನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಅಂಗಲಾಚಿದಳು:

“ಮಗನೆ, ನನಗೊಂದು ಉಪಕಾರ ಮಾಡುತ್ತೀಯ ನನ್ನಪ್ಪ?”

ಎಂದು ಹೇಳಿ ಅವನ ಉತ್ತರಕ್ಕೆ ಅವಕಾಶ ಕೊಡದೆ, ಅವನ ಮುಖವನ್ನೇ ನೋಡುತ್ತ ತತ್ಕಾಲದ ಸಂದರ್ಭವನ್ನು ವಿವರಿಸಿದಳು. ಆಕೆ ನಿರೀಕ್ಷಿಸಿದ್ದಂತೆ ಅವಳ ಕೈಗಳಲ್ಲಿ ತನ್ನ ಅಗಲವಾದ ಹಸ್ತಗಳನ್ನ ಚಲಿಸದಂತೆ ಇಟ್ಟು, ಚಿಕ್ಕಮ್ಮಣ್ಣಿಯ ಮುಖವನ್ನೇ ನೋಡುತ್ತ ಹಾ ಹೂ ಎನ್ನದೆ, ಮಧ್ಯೆ ಪ್ರಶ್ನೆ ಕೇಳದೆ, ಅವಳು ಹೇಳಿದ್ದನ್ನೆಲ್ಲ ಕೇಳಿಸಿಕೊಂಡು “ಆಗಲಿ ತಾಯಿ” ಎಂದು ನಮ್ರತೆಯಿಂದ ಹೇಳಿ ಶಿಖರಸೂರ್ಯ ಬಿಟ್ಟ ಬಾಣದ ಹಾಗೆ ಹೊರಗೆ ಹೋದ. ಹಿಂದಿನಿಂದ ಅರ್ಥಕೌಶಲನೂ ಹೋದ.

ಇಂದ್ರಭವನಕ್ಕೆ ಬಂದ ಶಿಖರಸೂರ್ಯ ನೇರ ಬಿಳಿಗಿರಿರಾಯನ ಹೆಣವಿದ್ದಲ್ಲಿಗೆ ಹೋದ. ಹೆಣ ನೋಡಿದ್ದೇ ಅನುಮಾನ ಬಂತಾದರೂ ವಿವರಣೆ ಕೇಳುವ ಸಂದರ್ಭ ಇದಲ್ಲ ಎಂದು ಸುಮ್ಮನಾದ. ಸುಮಾರು ಹದಿನೆಂಟಿಪ್ಪತ್ತು ಜನ ಬುಡಕಟ್ಟಿನ ಬಂಟರು ಅಲ್ಲಲ್ಲಿ ಗುಂಪುಗುಂಪಾಗಿ ಅಸಮಾಧಾನದಿಂದ ನಿಂತಿದ್ದವರು ಇವನನ್ನು ಕಂಡುದೇ ಕೋಪದಿಂದ ಸುತ್ತುವರಿದು ನಿಂತರು. ಅವರಲ್ಲಿ ಅನೇಕರು ಕೈದುಧಾರಿಗಳಾಗಿದ್ದರು. ತಲೆಗೆ ಹಕ್ಕಿಯ ಗರಿ ಸಿಕ್ಕಿಸಿಕೊಂಡು ಕೆನ್ನೆ ಹಣೆ ಗದ್ದಗಳಿಗೆ, ಕೆಳಗೆ ಬೆನ್ನು ಎದೆ ತೋಳುಗಳಿಗೆ ಕೆಂಪು ಬಣ್ಣದ ಪಟ್ಟಿ ಬಳಿದುಕೊಂಡಿದ್ದರು. ಒಂದೇ ಬುಡಕಟ್ಟಿನವರೆಂದು ಹೇಳಲು ಸುಲಭವಾಗುವಷ್ಟು ಎಲ್ಲರ ಬಣ್ಣದ ಗೀರುಗಳಲ್ಲಿ ಸಾಮ್ಯವಿತ್ತು. ಕುರಿ ಉಣ್ಣೆಯ ಒರಟಾದ ತುಂಡು ಬಟ್ಟೆಯನ್ನು ಸೊಂಟಕ್ಕೆ ಸುತ್ತಿಕೊಂಡು ಕೈಯಲ್ಲಿ ಕೆಲವರು ಉದ್ದವದ ಭಲ್ಲೆ ಹಿಡಿದಿದ್ದರು. ಸೊಂಟದಲ್ಲಿ ಚೂರಿಗಿಂತ ಉದ್ದವಾದ ಆದರೆ ಕತ್ತಿಯಲ್ಲದ ಆಯುಧವನ್ನು ಸಿಕ್ಕಿಸಿಕೊಂಡಿದ್ದರು. ಕೂದಲು ಜಡೆಗಟ್ಟಿ ಕಗ್ಗಾಡುವಾಸನೆ ಬರುತ್ತಿತ್ತು. ಶಿಖರಸೂರ್ಯ ಅವರನ್ನು ನೋಡಿ ಮುಗುಳು ನಗುತ್ತ ಅವರೂ ಮುಗುಳು ನಗಲೆಂದು ಅಥವಾ ಮೈಮರೆಯಲೆಂದು ನೋಡುತ್ತ ನಿಂತ. ಅವರ್ಯಾರೂ ಇಂಥ ಅಮಾನುಷ ವ್ಯಕ್ತಿಯನ್ನು ನಿರೀಕ್ಷಿಸಿರಲಿಲ್ಲ ಮತ್ತು ಕಂಡಿರಲಿಲ್ಲವೆನ್ನುವದು ಅವರ ಬೆರಗಿನ ಮುಖಚರ್ಯೆಯಿಂದಲೇ ತಿಳಿಯುತ್ತಿತ್ತು. ಎಲ್ಲರಿಗಿಂತ ಒಂದಡಿ ಎತ್ತರದ ಅವನ ನಿಲುವು, ಭುಜದ ಮೇಲೊರಗಿದ್ದ ನೀಳ ಕೂದಲು, ಹುಬ್ಬು ದಪ್ಪ, ಪೊದೆಯಾದ ಕಿವಿಗೂದಲು ಅಜಾನುಬಾಹು ದೇಹಾಕೃತಿ ನೋಡಿ ಅವರಲ್ಲಿಯ ಅನೇಕರು ಗಾಬರಿಯಾದರು. ಅಷ್ಟರಲ್ಲಿ ಭಂಟರ ನಾಯಕ ಸುಕ್ರ ‘ಬೆಟ್ಟಾ’ ಎಂದು ಕೂಗಿದ. ಅವರಲ್ಲಿ ದೂರ ನಿಂತವನೊಬ್ಬ ತಡಮಾಡಬಾರದೆಂದು ಭಯದಲ್ಲಿ ಆವೇಶ ಬಂದವರಂತೆ ಭಲ್ಲೆಯ ತುದಿಯನ್ನು ಗುರಿಹಿಡಿದು, ಕಿಟಾರನೆ ಕಿರುಚುತ್ತ ಓಡಿ ಬಂದು ಶಿಖರಸೂರ್ಯನ ಎದೆಗೇ ತಿವಿದ. ಲೋಹಕ್ಕೆ ಲೋಹ ತಾಗಿದಂತೆ ಕೊಂಚ ಸದ್ದು ಮಾಡಿ ಭಲ್ಲೆಯದ ತುದಿ ಜಾರಿತು! “ಇನ್ನೊಮ್ಮೆ ಇರಿ” ಎಂದು ಶಿಖರಸೂರ್ಯ ಎದೆ ಸೆಟೆಸಿ ಅವನಿಗೆದುರಾಗಿ ನಿಂತ ಆಗ ಇನ್ನೊಮ್ಮೆ, ಈ ಸಲ ಇನ್ನೂ ಜೋರಾಗಿ ಇರಿದ. ಭಲ್ಲೆ ಹಿಂದೆ ಪುಟಿದು ಕೆಳಗೆ ಬಿತ್ತು! ಬಾಗಿ ತಕ್ಕೊಳ್ಳಲು ಭಯವಾಗಿ ಹಾಗೇ ನಿಂತ. ಕೂಡಲೇ ಶಿಖರಸೂರ್ಯ ಪಕ್ಕದವನ ಕಿರುಗತ್ತಿ ಹಿರಿದು ಇನ್ನೊಬ್ಬನ ಕೈಗಿತ್ತು ‘ಹೊಯ್’ ಎಂದು ಎದೆಯುಬ್ಬಿಸಿ ಒಡ್ಡಿದ. ಆತ ಹೊಡೆದರೆ ಖಣಲ್ ಖಣಲ್ ಎಂದು ಲೋಹಕ್ಕೆ ಹೊಡೆದ ಸದ್ದಾಗಿ ನಿಂತವರೆಲ್ಲ ಗಾಬರಿಯಾದರು. ಯಾರೊಬ್ಬರ ಬಾಯಿಂದಲೂ ಮಾತು ಬರದಾಯ್ತು. ಇವನ್ಯಾರಿರಬೇಕೆಂದು ದಿಗಿಲಾಗಿ, ಈತ ತಮಗೇನೂ ಮಾಡದಿರಲೆಂದು ಶಿಖರಸೂರ್ಯನ ಮುಖವನ್ನೇ ದಯೆ ಯಾಚಿಸುವಂತೆ ಕಣ್ಣಗಲಿಸಿ ನೋಡುತ್ತ ನಿಂತರು! ಇವನ್ಯಾರೋ ದೊಡ್ಡ ಗುಡ್ಡನಿರಬೇಕೆಂದು ಎಲ್ಲರೂ ಅವನೆದುರು ಬಾಗಿ, ನೆಲಕ್ಕೆ ಕೈ ಊರಿ ಹಣೆಯಿಂದ ಎರಡು ಬಾರಿ ನೆಲ ಕುಟ್ಟಿ ಶರಣಾದರು! ಶಿಖರಸೂರ್ಯನಿಗೂ ಧೈರ್ಯ ಬಂತು. ಆಜ್ಞೆ ಮಾಡುವಂತೆ ಬಿರುಸಾಗಿ “ಬನ್ನಿ ಹೆಣ ಚಂದ ಮಾಡುವಾ” ಎಂದು ಕೂಗಿದೊಡನೆ ಎಲ್ಲರೂ ನೆರವಾಗಲು ಬಂದರು. ದೂರದಿಂದ ಇದನ್ನೆಲ್ಲ ಬಿಟ್ಟಗಣ್ಣು ಬಿಟ್ಟಂತೆ ನೋಡುತ್ತಿದ್ದ ಅರ್ಥಕೌಶಲ ಕಾಲಿಗೆ ಬುದ್ದಿ ಹೇಳಿದ.