ಒಂದು ದಿನ ಮುಂಜಾನೆ ಚಿಕ್ಕಮ್ಮಣ್ಣಿ ಮಹಾರಾಜನ ಮುಂದೊಂದು ವಿಚಾರ ಹೇಳಿ, ಅನುಮತಿ ಸಿಕ್ಕಿದ್ದೇ ಆನಂದಭರಿತಳಾದಳು. ವರ್ಷಗಳಾದ ಮೇಲೆ ಅವಳ ತುಟಿಗಳ ಮೇಲೆ ತಿಳಿಯಾದ ನಗೆ ಮೂಡಿತ್ತು. ಅಷ್ಟರಲ್ಲಿ ಮೆಟ್ಟಲಿಳಿದು ಛಾಯಾದೇವಿ ಬಂದಳು. ಮಗಳು ಬಂದುದೂ ಶುಭಸೂಚನೆ ಎಂದುಕೊಂಡಳು. ಮಗಳಿಗಾಗಲೇ ಹದಿನೈದು ವರ್ಷ. ಈ ವಯಸ್ಸಿಗೆ ತಾನು ತಾಯಿಯಾಗಿದ್ದಳು. ಈಗಿನ ಹುಡುಗಿಯರು ಭಾರೀ ಧೈರ್ಯಸ್ಥರು. ಸ್ವಂತ ಅಭಿಪ್ರಾಯ ಉಳ್ಳವರು ಮತ್ತು ಅದನ್ನು ಸ್ಪಷ್ಟವಾಗಿ ಹೇಳಬಲ್ಲವರು. ತನ್ನ ಮಗಳಲ್ಲಿ ಹಿರಿಯರ ಬಗ್ಗೆ ಕೊಂಚ ಅನಾದರವಿತ್ತು. ಆದರೆ ಅವಳೊಮ್ಮೆ ನಕ್ಕರಾಯ್ತು, ಆ ನಗೆಯ ಬೆಳಕಿನಲ್ಲಿ ಅವಳ ದೋಷಗಳೆಲ್ಲ ಮರೆಯಾಗುತ್ತಿದ್ದವು. ಮಗಳು ಬಂದು “ಅಮ್ಮ ಉದ್ಯಾನದಲ್ಲಿರ್ತೀನಿ” ಎಂದು ಹೇಳಿ ತಾಯಿಯ ಉತ್ತರಕ್ಕೂ ಕಾಯದೆ ಜಿಂಕೆಯಂತೆ ಹೊಸ್ತಿಲು ಹಾರಿ ಬಿಟ್ಟಳು. ಚಿಕ್ಕಮ್ಮಣ್ಣಿ ನಿಧಾನವಾಗಿ ಹೊಸ್ತಿಲು ದಾಟಿ ಉದ್ಯಾನಕ್ಕೆ ಕಾಲಿಡುತ್ತಿದ್ದಂತೆ ಸುಸ್ತಾಯಿತು. “ಅಬ್ಬಾ ಮಕ್ಕಳಿಗಾಗಿಯಾದರೂ ನಾನು ಗಟ್ಟಿಮುಟ್ಟಾಗಿರಬೇಕು” ಎಂದುಕೊಂಡಳು.

ನಿಧಾನವಾಗಿ ಉದ್ಯಾನದ ಕಡೆಗೆ ಬರುತ್ತಿದ್ದ ತಾಯಿಯನ್ನು ನೋಡಿ ಛಾಯಾದೇವಿಗೆ ಬೇಸರವಾಯಿತು. ‘‘ಅಮ್ಮ ಯಾವಾಗಲೂ ಹೀಗೇ, ಏನಾದರೊಂದು ತಲೆಯಲ್ಲಿ ಹಾಕಿಕೊಂಡು ಕೊರಗೋದು… ಮಗ ಸಿಗಲಿಲ್ಲ. ದೇವರಿಗೆ ಹೂವೇರಲಿಲ್ಲ, ತಂದೆ ಉಣಲಿಲ್ಲ… ಹೀಗೇ…’’ ಚಿಕ್ಕಮ್ಮಣ್ಣಿ ಸೊರಗಿ ಆಗಲೇ ಎಲುಬಿನ ಗೂಡಾಗಿ ಈಗೀಗ ಮಾತು ಕೂಡಾ ನಿಧಾನವಾಗಿ ಆಡುತ್ತಿದ್ದಳು.

ಛಾಯಾದೇವಿ ಹದಿನೈದರ ಪ್ರಾಯಕ್ಕೆ ತಕ್ಕ ಸೌಂದರ್ಯ, ಕಾಂತಿ ತುಂಬಿಕೊಂಡು ಮೋಹಕವಾಗಿ ರೂಪುಗೊಂಡಿದ್ದಳು. ತುಂಬಿದೆದೆ, ದುಂಡಗಿನ ಕೈಕಾಲು, ಗೋದಿಬಣ್ಣದ ಚೆಲುವೆ, ಎಳೆಬಿಸಿಲಲ್ಲಿ ತಾಮ್ರದ ಗೊಂಬೆಯಂತೆ ಹೊಳೆಯುತ್ತಿದ್ದಳು. ಅವಳ ಸದಾ ಹೊಳೆವ ಚಂಚಲ ಕಣ್ಣುಗಳನ್ನು ತಾಯಿ ನೋಡಿದಾಗೊಮ್ಮೆ ಮನಸ್ಸಿನಲ್ಲೇ ದೃಷ್ಟಿ ನಿವಾಳಿಸುತ್ತಿದ್ದಳು. ಮುಖ ಗುಂಡಗಿದ್ದರೂ ಮೇಲ್ಭಾಗದಲ್ಲಿ ತುಸು ಚಪ್ಪಟೆಯಾಗಿ ಕೆಳಗೆ ಇಳಿವಾಗ ಮೂಗನ್ನು ತುಸು ಕೆಳಕ್ಕೆ ಒತ್ತಿತ್ತು. ಹಲ್ಲು ತುಸು ದಪ್ಪಗಿದ್ದುದರಿಂದ ಕೆಂಪು ಮೇಲ್ದುಟಿಯನ್ನು ತುಸು ಹಿಂದೆ ತಳ್ಳಿದ್ದವು. ಗದ್ದದ ತುದಿ ಕೊಂಚ ಮುಂದೆ ಬಂದು ಮುಖಕ್ಕೊಂದು ಅಪರೂಪದ ಚೆಲುವಿಕೆಯನ್ನು ಕೊಟ್ಟಿತ್ತು.

ಛಾಯಾದೇವಿಗೆ ತಾಯಿ ಅಂದರೆ ಅಷ್ಟಕಷ್ಟೆ. ಮಾತಿನಲ್ಲಿ ಅತಿ ವಿನಯ, ಸೇವಕರಿಗೂ ದರ್ಪ ತೋರಿಸುತ್ತಿರಲಿಲ್ಲ. ಇವಳೊಂದು ಬಡಹೆಂಗಸೆಂದು ದೂರುತ್ತಿದ್ದಳು. ತಂದೆಯ ಬಗೆಗೂ ತಕರಾರುಗಳಿದ್ದವು. ಮಹಾರಾಣಿಗೆ ಹೆದರುತ್ತಿದ್ದ. ಯುದ್ಧದ ವಿಷಯದಲ್ಲಿ ಮಾತ್ರವಲ್ಲ, ಬೇಟೆಗೆ ಹೋಗಬೇಕಾದರೂ ಮಹಾರಾಣಿಯನ್ನು ಕೇಳುತ್ತಾನೆಂದರೆ ಇವನೆಂಥ ರಾಜ? ಅರಮನೆಯ ಹೆಂಗಸರು ಗಂಡಸರನ್ನು ಹಾಳು ಮಾಡಿದ್ದಾರೆಂದೇ ಅವಳು ನಂಬಿದ್ದಳು ಮತ್ತು ಹಾಗೆಂದು ತಂದೆಯ ಮುಂದೆಯೂ ಹೇಳುತ್ತಿದ್ದಳು. ಇಂಥ ಮಾತು ಕೇಳಿ ರಾಜ ದೊಡ್ಡದಾಗಿ ನಗುತ್ತಿದ್ದ. ಆದರೆ ಅಣ್ಣ ಆದಿತ್ಯಪ್ರಭನ ಯುದ್ಧಾಸಕ್ತಿಯ ಬಗ್ಗೆ ಅವಳಿಗೆ ಹೆಮ್ಮೆಯಿತ್ತು. ಅಲ್ಲಿಯೂ ಅವನ ತಾಯಿಯ ಪ್ರಭಾವವಿರಬೇಕೆಂದು, ಇಲ್ಲದಿದ್ದರೆ ಮಾಡಿದ ಒಂದೇ ಯುದ್ಧವನ್ನು ಆತ ಸೋಲುತ್ತಿರಲಿಲ್ಲವೆಂದೂ ನಂಬಿದ್ದಳು. ವರ್ತಕರು ಅಣ್ಣನನ್ನು ನಂಬಿರಲಿಲ್ಲವಾದ್ದರಿಂದ ಅವಳು ಅವರನ್ನು ಎಂದೂ ಕ್ಷಮಿಸಿರಲಿಲ್ಲ. ಯುದ್ಧದ ವಿಷಯದಲ್ಲಿ ತಂದೆಯ ಬಗ್ಗೆ ಕೊಂಚ ಅಭಿಮಾನವಿದ್ದುದು ನಿಜ. ಯಾಕೆಂದರೆ ಆತ ಮಾಡಿದ ಎಲ್ಲ ಯುದ್ಧಗಳನ್ನು ಗೆದ್ದಿದ್ದ. ‘ವಿಜಯದ ಕಡಗ’ ಪಡೆದು ಸನ್ಮಾನಿತನಾಗಿದ್ದ!

ಉದ್ಯಾನದ ಕಡೆಗೆ ನಿಧಾನವಾಗಿ ಬರುತ್ತಿದ್ದ ತಾಯಿಯನ್ನು ನೋಡಿ ಗಾಳಿಗಲುಗಿ ಮುಖದ ಮ್ಯಾಲೆ ಚೆಲ್ಲುವರಿದ ಕೂದಲನ್ನ ರಭಸದಿಂದ ಹಿಂದೆ ಸರಿಸಿಕೊಂಡು ತನ್ನ ಅಸಹನೆಯನ್ನ ತೋರಿಸಿದಳು ಛಾಯಾದೇವಿ. ಅಷ್ಟರಲ್ಲಿ ಅಲ್ಲಿಗೆ ಓಡಿಬಂದ ಹೂಗಾರ ಹುಡುಗನಿಗೆ ಅರಳಿದ ಹೂವೊಂದನ್ನು ತೋರಿಸಿ ಕಿತ್ತುಕೊಡಲು ಹೇಳಿದಳು. ಅವು ದೇವರ ಹೂವಾದ್ದರಿಂದ ಕಿತ್ತರೆ ತನ್ನ ತಾಯಿ ಕೆರಳುತ್ತಾಳೆ ಅಂತ ಗೊತ್ತಿದ್ದರೂ ಕೇಳಿದಳಾದ್ದರಿಂದ ಹುಡುಗ ಚಿಕ್ಕಮ್ಮಣ್ಣಿಯ ಕಡೆಗೆ ನೋಡಿ ಅನುಮಾನಿಸುತ್ತ ನಿಂತ. ಇವಳು ತಾಯಿಗೆ ಕೇಳಿಸುವಂತೆ ಇನ್ನೊಮ್ಮೆ ಒತ್ತಾಯಿಸಿದಳು.

ನಸುಗೋಪದ ಮಗಳು ಎಳೆಬಿಸಿನಲ್ಲಿ ಮಿರುಗುತ್ತಿದ್ದಳು. ಸುಳಿಗಾಳಿಗೆ ಮುಖದ ಮೇಲಾಡುವ ಕರಿಗೂದಲನ್ನು ಹಿಂತಗೊಂಡು ಕಿವಿಯ ಹಿಂದೆ ತಗಲಿಸಿ ಕೊಂಡಳು. ದೇವರಿಗೊಂದು ಹೂ ಕಡಿಮೆ ಆದರೆ ಆಗಲಿ, ಹಾಗಂತ ಇವಳು ಹೂಗಾರ ಹುಡುಗನೊಂದಿಗೆ ಸಲಿಗೆಯಿಂದ ಮಾತಾಡಿದ್ದು ತಪ್ಪೆಂದು ಅನ್ನಿಸಿತು ತಾಯಿಗೆ. ಮೈತುಂಬ ರೇಶ್ಮೆಲಂಗ ದಾವಣಿ ಹಾಕಿದ್ದಳಾದರೂ ಅವಳಿನ್ನೂ ಬಾಲಕಿಯೆಂದು ತಿಳಿಯಲು ತಾಯಿಯ ಮನಸ್ಸು ಒಪ್ಪಲಿಲ್ಲ. ಇಷ್ಟರಲ್ಲೇ ಇವಳು ಮದುವೆಯಾಗಿ ಮುಖದ ಮೇಲೆ ಸ್ವಚ್ಛಂದ ಸಂಚರಿಸುವ ಕೂದಲನ್ನು ತುರುಬುಕಟ್ಟಿ ಹಣೆಗೆ ಕುಂಕುಮ, ಕೈ ತುಂಬ ಹಸಿರು ಬಳೆ, ಮೈತುಂಬ ರೇಶ್ಮೆ ಸೀರೆ ಉಟ್ಟು ನಿಂತರೆ… ಅಬ್ಬ! ಏನು ಚೆಲುವೆ ನನ್ನ ಮಗಳು! ತಕ್ಷಣ ಶಿಖರಸೂರ್ಯನ ನೆನಪಾಯ್ತು.

ಮಗಳ ಮನಸ್ಸಿಗೆ ಶಿಖರಸೂರ್ಯನ ನಂಜೇರಿದೆಯೆಂದು ತಿಳಿದಿತ್ತು. ಅವನ ವಿಷಯ ಎತ್ತಿದಾಗ ಛಾಯಾದೇವಿಯ ಮುಖ ಕೆಂಪೇರಿದ್ದನ್ನು, ಆ ದಿನ ರಾಜನೊಂದಿಗೆ ತಾನು ಆಡಿದ ಮಾತನ್ನು ಆಕೆ ಕದ್ದು ಕೇಳಿಸಿಕೊಂಡಿದ್ದನ್ನು ಗಮನಿಸಿದ್ದಳು. ಅಣ್ಣ ಬಿಳಿಗಿರಿಗೆ ಮಗಳನ್ನು ಕೊಡಬೇಕೆಂದರೆ ಅವನೇ ಇಲ್ಲಿ ಇವರ ಅತಿಥಿಯಾಗಿ ಖೈದಿಯಂತೆ ಕೊಳೆಯುತ್ತಿದ್ದ. ಚಿಕ್ಕ ಅಣ್ಣನ ಬಗ್ಗೆ ಇನ್ನೂ ಅಂದಾಜಾಗಿರಲಿಲ್ಲ. ಅರಮನೆಯಲ್ಲಿ ಯಾರನ್ನ ನಂಬಿದರೂ ಅವರು ಯಾವಾಗ ಚೂರಿ ಇಲ್ಲವೆ ವಿಷಯ ಹಾಕುತ್ತಾರೆಂದು ಖಾತ್ರಿಯಿರಲಿಲ್ಲ. ಇದ್ದುದರಲ್ಲಿ ಪ್ರಾಮಾಣಿಕವಾಗಿ ರಾಜನನ್ನು ಕಾಪಾಡಿದ ಶಿಖರಸೂರ್ಯನೇ ಅರಮನೆಯ ವಿಷಕಾರಿ ವಾತಾವರಣದಿಂದ ಮಗಳನ್ನು ಕಾಪಾಡಬಲ್ಲನೆಂದು ನಂಬಿಕೆ ಬಂದಿತ್ತು. ಕುಲಗೋತ್ರ ಅಂತಸ್ತಿನಲ್ಲಿ ಕೊಂಚ ಕಮ್ಮಿ ಬರಬಹುದು. ಕನಕಪುರಿಯವರು ವರ್ತಕರೊಂದಿಗೇ ಸಂಬಂಧ ಬೆಳೆಸಬಹುದಾದರೆ ಹೆಗಡೆ ಜೊತೆಗೆ ಯಾಕಾಗಬಾರದು? ‘ಆತ ಎಂದಿಗೂ ಚಿಕ್ಕವನಾಗಿರಲಿಲ್ಲ’ ಅಂತ ಅನ್ನಿಸೋದಿಲ್ಲವೆ? ಎಂದು ಮಹಾರಾಜ ಅಂದಿದ್ದ.

ಇದನ್ನೆಲ್ಲ ಅಡಗಿ ಕೇಳಿಸಿಕೊಂಡಿದ್ದ ಛಾಯಾದೇವಿ ಅಂದುಕೊಂಡಿದ್ದಳು:

“ಇಂಥದೇನಿದ್ದರೂ ಹೇಳಬೇಕಿದ್ದವಳು ನಾನಲ್ಲವೆ? ನಾನೇ ಹೇಳಿಲ್ಲವೆಂದ ಮೇಲೆ ಇವನಿಗಿನ್ನೇನು? ಯಾರೇ ಯಾಕೆ, ದೇವರು ಕೈ ಚಾಚಿ ಬಂದರೂ ಒಪ್ಪಿಗೆ ಸೂಚಿಸಬೇಕಾದವಳು ನಾನು, ಛಾಯಾದೇವಿ! ನಾನು ಒಪ್ಪಿಗೆ ಕೊಟ್ಟರೆ ಇಂದ್ರನಾದರೂ ಧನ್ಯತೆಯಿಂದ ಬಾಗಿ ನಿಂತಾನು. ವಯಸ್ಸಾದ ಮಾತ್ರಕ್ಕೆ ನನ್ನಂಥವಳನ್ನು ಬಿಟ್ಟು ಆ ವೈದ್ಯ ಇನ್ನೇನು ಅಡಗೂಲಜ್ಜಿಯ ಮಲಮಗಳನ್ನು ಮದುವೆಯಾಗಬೇಕೆ?”

ಆದರೆ ಇನ್ನೂ ಉದ್ಯಾನದಲ್ಲಿ ನಿಂತಿರುವ ತಾಯಿಯನ್ನು ಕಂಡು ರಾಜಕುಮಾರಿಯ ಸಹನೆ ಮೀರಿತು. ಏನು ಮಾಡುತ್ತಿದ್ದಾಳೆ ಅಮ್ಮ? ಬಿಳಿ ಹೂಗಳ ಗೊಂಚಲು ಕಟ್ಟಿ ಚಿಕ್ಕಮ್ಮಣ್ಣಿಯ ಕೈಗಿತ್ತು ಹೂಗಾರ ಹುಡುಗ ಬಾಗಿದ. ಚಿಕ್ಕಮ್ಮಣ್ಣಿ ಪ್ರಸನ್ನಚಿತ್ತಳಾಗಿ ಅವನ ನಮಸ್ಕಾರ ಸ್ವೀಕರಿಸಿದಳು. ಅಷ್ಟರಲ್ಲಿ…