ಒಂದು ದಿನ ಮೂಲಿಕೆ ಹುಡುಕುತ್ತ ಅರ್ಥಕೌಶಲನೊಂದಿಗೆ ಬೋಳುಗುಡ್ಡದ ಮೇಲೆ ಹೋಗಿದ್ದ ಶಿಖರಸೂರ್ಯ ಅಲೆದಾಡುತ್ತ ಗುಡ್ಡದ ನೆತ್ತಿಗೆ ಬಂದ. ಹಾಗೇ ಮುಂದೆ ಬಂದಂತೆ ಕೆಳಗಡೆ ನದಿ, ಕನಕಪುರಿ ಕಂಡವು. ಶಿಖರಸೂರ್ಯ ತಕ್ಷಣ ಕುದುರೆಯಿಂದಿಳಿದು, ಅದನ್ನಲ್ಲೇ ಬಿಟ್ಟು ಗುಡ್ಡದ ತುದಿತನಕ ಬಂದು ಬೆರಗಾಗಿ ನಗರ ಮತ್ತು ಅದರ ಸುತ್ತಲ ಪ್ರದೇಶವನ್ನು ನೋಡುತ್ತ ನಿಂತ. ಬೋಳುಗುಡ್ಡದ ಕೆಳಭಾಗವೇ ಅಲ್ಲದೆ ಇಡೀ ಕೊಳ್ಳ ಅತ್ಯಾಚಾರಕ್ಕೊಳಗಾದ ಹೆಂಗಸಿನಂತೆ ಅಸ್ತವ್ಯಸ್ತ ಬಿದ್ದುಕೊಂಡಿತ್ತು. ನದಿಯಾಚೆ ಕೊಳ್ಳದಲ್ಲಿ ಅಲ್ಲಲ್ಲಿ ಅಗಿದು ಬಿಟ್ಟ ತಗ್ಗುಗಳು, ಅವುಗಳಲ್ಲಿ ನೀರು ತುಂಬಿದ ಹೊಂಡಗಳು ಬೇಕಾದಷ್ಟಿದ್ದವು. ಸಾಲದ್ದಕ್ಕೆ ನಗರದ ಎಡಬದಿಯ ತೋಟಗದ್ದೆಗಳಲ್ಲೂ ಕೆಲವು ಕೆಮ್ಮಣ್ಣಿನ ತಗ್ಗುಗಳಿದ್ದವು. ನದಿಯಿದೆ, ಚಲನಶೀಲವಾಗಿದೆಯೆಂದು ಅನ್ನಿಸುತ್ತಿರಲಿಲ್ಲ. ಹಸಿರಿದೆ, ಬಾಡಿತ್ತು. ಹಕ್ಕಿ ಹಾರುತ್ತಿದ್ದವು, ಹಾಡುತ್ತಿರಲಿಲ್ಲ. ಕೆಳಗೆ ಮನುಷ್ಯರ ಸುಳಿವೇನೋ ಇತ್ತು. ಆದರೆ ಎತ್ತರದಿಂದ ನೋಡಿದವರಿಗೆ ಅವರು ನಡೆದಾಡುವಂತೆ ಕಾಣುತ್ತಿರಲಿಲ್ಲ. ಮೆಲ್ಲಗೆ ಸರಿದಂತೆ, ಅಥವಾ ಎಳೆಯಲ್ಪಡುವವರಂತೆ ಕಾಣುತ್ತಿದ್ದರು. ನದಿಯಾಚೆ ಬದಿಯಲ್ಲಿ ಗದ್ದೆಗಳು, ತೋಟಗಳು ಹಸಿರಾಗಿ ಹೊಳೆಯುತ್ತಿದ್ದವು. ಅವುಗಳ ಪಕ್ಕ ಬಿಳಿ ಹಸುಗಳು, ಮರಿಯಾನೆಯಂಥ ಎಮ್ಮೆಗಳು ಮೇಯುತ್ತಿದ್ದವು. ನದಿಯ ನೀರಿನಲ್ಲಿ ನೀಲಿ ಆಕಾಶ ಪ್ರತಿಫಲಿಸಿತ್ತು. ಆದರೆ ಅದೂ ಹಸನಾಗಿರಲಿಲ್ಲ. ಗಾಳಿ ಕೂಡ ನಿರ್ಮಲವಾಗಿರಲಿಲ್ಲ. ಬೆಟ್ಟದಲ್ಲಿ ಕೂಡ ಹೆಸರಿಸಲಾಗದ ತೆಳು ವಾಸನೆಗಳಿಂದ ಕೂಡಿದ, ಪರಾಗಕ್ಕಿಂತ ಸೂಕ್ಷ್ಮವಾದ ಧೂಳು ಅಲ್ಲಿಯ ಹಸಿರನ್ನು ಬಿಳಿಚಿಕೊಳ್ಳುವಂತೆ ಮಾಡಿತ್ತು. ಕೆಳಗೆ ದೂರದಲ್ಲಿ ಒಂದೊಂದು ಕೆಂಪು ಹೆಂಚಿನ ಮನೆಗಳು ಕಾಣಿಸುತ್ತಿದ್ದವು. ಈ ಕಡೆ ಸೂರ್ಯಾಸ್ತದ ಬಿಸಿಲು ಬಿದ್ದು ಅರಮನೆಯ ಕಿಡಿಕಿಗಳು ಉರಿವ ಬೆಂಕಿಯ ಹಾಗೆ ಕಾಣುತ್ತಿದ್ದವು. ಅರಮನೆಯ ತರುಮರಗಳ ಹಸಿರಿಗೆ ಚಿನ್ನದ ಬಣ್ಣವೇರಿ ಫಳಫಳ ಹೊಳೆದು ಕಣ್ಣು ಕುಕ್ಕುತ್ತಿದ್ದವು. ಆದರೆ ಅರಮನೆಯಲ್ಲಿ, ಅಷ್ಟು ದೊಡ್ಡ ಕಟ್ಟಡದಲ್ಲಿ ಯಾರೂ ವಾಸವಾಗಿಲ್ಲವೆಂಬಂತೆ ಬಣಗುಡುತ್ತಿದ್ದುದರಿಂದ ನೋಡಿ ಹಳಹಳಯಾಯಿತು. ಇಲ್ಲೆಲ್ಲೂ ಬೆರಗಿನ ನೋಟವಿಲ್ಲವಲ್ಲ! ಈ ವೈದ್ಯನೇನು ಕಂಡ! ಎಂದುಕೊಂಡು ಅರ್ಥಕೌಶಲನೂ ಬಂದು ಶಿಖರಸೂರ್ಯನ ಪಕ್ಕದಲ್ಲಿ ನಿಂತುಕೊಂಡು ಕೇಳಿದ:

“ಏನಯ್ಯಾ ಮಿತ್ರಾ, ಏನು ಸೋಜಿಗ ಕಂಡೆ?”

“ಅದ್ಯಾಕೆ ಇಷ್ಟೊಂದು ತಗ್ಗುಗಳು, ಕುಳಿಗಳು ಇಲ್ಲಿವೆ ಪ್ರಧಾನಿಗಳೆ?”

“ಇವೆಲ್ಲ ಚಿನ್ನದ ಗಣಿಗಳಪ್ಪಾ! ಸಾಮಾನ್ಯವೇ? ಕನಕಪುರಿಗೆ ಬಂದು ಕನಕದ ಗಣಿಯ ವಿಷಯ ತಿಳಿಯದಿದ್ದರೆ ಹ್ಯಾಗೆ? ಕೊಳ್ಳದಲ್ಲಿರೋವೆಲ್ಲ ವರ್ತಕರ ಗಣಿಗಳು. ವರ್ತಕರು ಎಂದಿದ್ದರೂ ಚಿನ್ನದ ಬೆನ್ನು ಹತ್ತಿ ಹೋಗುವವರೆಂದೇ ಅನ್ನೋಣ!-ಆಚೆ ಗದ್ದೆ ತೋಟಗಳಲ್ಲೂ ತೋಡಿದ್ದಾರೆ ನೋಡು ರೈತರು! ರೈತರಿಗೂ ಚಿನ್ನದ ರುಚಿ ಹತ್ತಿಬಿಟ್ಟಿತಣ್ಣಾ! ರೈತರೂ ಬಂಗಾರಮ್ಮನ ಒಕ್ಕಲಾಗಿ ಅಗಿಯತೊಡಗಿದರು. ಇಬ್ಬರಿಗೂ ಸಿಕ್ಕಿದ್ದು ಬರೀ ಮಳಲಷ್ಟೆ.”

ಶಿಖರಸೂರ್ಯ ಅವನ ಮಾತು ಕೇಳಿ ನಕ್ಕ, ಆದರೆ ಅರ್ಥಕೌಶಲ ಬಿಡಲಿಲ್ಲ. ಅವನ ಭುಜದ ಮೇಲೆ ಕೈಯೂರಿ ಹೇಳಿದ:

“ಇಡೀ ಪ್ರಪಂಚ ಕನಕಪುರಿಯೆಂಬ ನಗರವಾಗಿ ಹೊಸ ನಾಗರಿಕತೆಯೊಂದು ಹುಟ್ಟುತ್ತಿರುವ ದರ್ಶನ ನಿನಗಾಗುತ್ತಿಲ್ಲವೆ? ಇತಿಹಾಸದ ಹಳೇ ಚಕ್ರ ತನ್ನೊಂದು ಸುತ್ತು ಮುಗಿಸಿಯಾಯ್ತು ಮಾರಾಯ; ಈಗ ಸುರುವಾಗಿರೋದು ಹೊಸ ಸುತ್ತು. ಹೊಸ ಒತ್ತಡಗಳಿಂದ ಉಂಟಾಗುತ್ತಿರುವ, ಹೊಸದೊಂದು ನಾಗರಿಕತೆಯ ಪ್ರಾರಂಭ ಕಾಣಿಸುತ್ತಿಲ್ಲವೆ? ಬ್ರಾಹ್ಮಣ, ಕ್ಷತ್ರಿಯರ ಕಾಲ ಮುಗಿದು ಈಗ ವೈಶ್ಯಯುಗ ಸುರುವಾಗಿದೆಯಣ್ಣಾ!

ಹಿಂಗಂದು ಶಿಖರಸೂರ್ಯನ ಮೇಲೆ ತನ್ನ ಮಾತಿನ ಪ್ರಭಾವ ಹ್ಯಾಗಾಯಿತೆಂದು ಪರೀಕ್ಷಿಸಿದ. ಅವನಿನ್ನೂ ನಗರದ ಮೇಲಿನ ಕಣ್ಣು ಕಿತ್ತರಲಿಲ್ಲ. ಇವನು ಮುಂದುವರಿಸಿದ:

“ಹೊಸನಾಗರಿಕತೆಯಲ್ಲಿ ಎಲ್ಲವೂ ಸ್ಥಳ ಬದಲಿಸುತ್ತವೆ. ಧರ್ಮಗಳು ರಾಜರು, ಕಳ್ಳರು, ದೇವರು, ಸ್ವರ್ಗನರಕಗಳು, ಪ್ರೇಮ, ಪ್ರೀತಿ, ಶಿಕ್ಷಣ ಎಲ್ಲ ಎಲ್ಲವೂ ಸ್ಥಳ ಬದಲಾಯಿಸುತ್ತವೆ. ಅವನ್ಯಾವನೋ ಶಿವಪಾದನಂತೆ….”

ತಕ್ಷಣ ಶಿಖರಸೂರ್ಯ ಇವನನ್ನ ಭಯ ಮತ್ತು ಇರಿವ ಕಣ್ಣಿಂದ ನೋಡಿದ. ಯಾಕೆಂದು ಅರ್ಥಕೌಶಲನಿಗೆ ಹೊಳೆಯಲಿಲ್ಲ. ತನ್ನ ಪಾಡಿಗೆ ತಾನು ಮಾತು ಮುಂದುವರೆಸಿದ:

“ಅವನು ಕಳೆದ ನಾಗರಿಕತೆಯ ಕೊನೆಯ ಕವಿ. ಹಳೆಯ ನಾಗರಿಕತೆಯ ದೊಡ್ಡ ಕನಸಿಗೆ ಮತ್ತು ಸೋಲಿಗೆ ಸಾಕ್ಷಿಯಾಗಿರುತ್ತ ಅದರ ತೂಕ ಮಾಡೋದಕ್ಕೆ ಪ್ರಯತ್ನ ಮಾಡಿದ. ಕೊನೆಗೆ ಹೊಸ ನಾಗರಿಕತೆಯ ಹೊಸ್ತಿಲಿಗೆ ಬಂದು ಅಮ್ಮಾ ಅಂತ ಕೂತ!”

‘ಇವನಿಗೆ ಶಿವಪಾದ ಹ್ಯಾಗೆ ಗೊತ್ತು? ಗೊತ್ತಿದ್ದರೆ ಎಷ್ಟು ಗೊತ್ತು? ತಾನು ಅಲ್ಲಿಂದ ಓಡಿಬಂದದ್ದು ಇವನಿಗೆ ಗೊತ್ತಿರಬಹುದೆ? ಎಂದೆನಿಸಿ ಶಿಖರಸೂರ್ಯನಿಗೆ ಚಿಂತೆಯಾಯಿತು. ಆದರದನ್ನು ಕಿಂಚಿತ್ತೂ ತೋರಿಸಿಕೊಳ್ಳದೆ ಶಿವಪಾದನ ಬಳಿಗೆ ಬೇಕಾದಷ್ಟು ಜನ ಬರುತ್ತಾರೆ ಹೋಗುತ್ತಾರೆ. ಆದರೆ ಆತ ಇಂಥ ಖ್ಯಾತಿಯವನೆಂದು, ಅರ್ಥಕೌಶಲ ಹೇಳುವಮತೆ ಒಂದು ಪರ್ಯಾಯ ವ್ಯವಸ್ಥೆಯ ಪ್ರತಿನಿಧಿಯೆನಿಸುವಷ್ಟು ದೊಡ್ಡವನೆಂದು ಗೊತ್ತಿರಲಿಲ್ಲ. ಅಥವಾ ಅವನೇ ಬೇರೆ, ಈ ಶಿವಪಾದನೇ ಬೇರೆ ಇರಬಹುದೇ? ಎಂದು ಯೋಚಿಸುತ್ತ ಅರಿವು ಹಾರಿ,

“ನನಗೇನೋ ಅನುಮಾನವೇ” ಅಂದ ದೊಡ್ಡ  ದನಿಯಲ್ಲಿ.

“ಅದ್ಯಾಕಣ್ಣಾ ಅನುಮಾನ? ಹಳೇ ಆಸೆಗಳ ಆಮಿಷಕ್ಕೆ ಬಲಿಯಾಗಬೇಡ ಮಿತ್ರಾ. ಅವುಗಳ ಅಸಂಗತ ಆಸೆಗಳನ್ನ ಈಡೇರಿಸಲಿಕ್ಕಾಗುತ್ತ? ದೇವರಂತೆ, ಸ್ವರ್ಗವಂತೆ ನರಕವಂತೆ… ಒಬ್ಬೊಬ್ಬರಿಗೆ ಒಂದೊಂದು ಥರ ಕಾಣಿಸುವ ಅಂಥ ಕಲ್ಪನೆಗಳನ್ನು ನಿಯಂತ್ರಿಸಲಿಕ್ಕಾದೀತೆ? ಅಣ್ಣಾ ಶಿಖರಸೂರ್ಯನೇ ಅವನ್ನೆಲ್ಲಾ ಅವುಗಳ ಸ್ಥಾನದಲ್ಲಿ ಕೂರಿಸಬೇಕಣ್ಣಾ!”

“ಶಿವಪಾದ ಇಲ್ಲಿಗೆ ಬಂದಿದ್ದನ?”

“ಅವನ್ಯಾಕೆ ಬರ್ತಾನೆ ಅವನಮ್ಮನ್ನ ಬಿಟ್ಟು? ಅವನ ಚೇಲಾ ಒಬ್ಬ ಬಂದಿದ್ದ, ಪಂಡಿತ. ಮಹಾರಾಜರು ವಾಕ್ಯಾರ್ಥ ಏರ್ಪಡಿಸಿದರು. ಎದುರಿಗೊಂದು ಬೆದರು ಇರಲಿ ಅಂತ ನಮ್ಮವನೊಬ್ಬನನ್ನು ತಯಾರು ಮಾಡಿದೆವು. ಇಬ್ಬರೂ ವಾದ ಪ್ರತಿವಾದ ಮಂಡಿಸಿದರಪ್ಪ. ಆತ ಬೆರಿಕಿ. ಈ ನಗರ ಈಗ ರೂಪುಗೊಳ್ಳುತ್ತಿರುವ ಪರಿಗೆ ಬೆರಗಾಗಿ ಇದಕ್ಕೆ ಪರ್ಯಾಯ ಅಂತ ಶಿವಾಪುರ, ಶಿವಪಾದ, ಅವರಮ್ಮನ ವಿಷಯ ಹೇಳಿದ….”

ಬೇಗ ಹೇಳಲೆಂದು ಒತ್ತಾಯಿಸಲು “ಮುಂದೆ?” ಅಂದ ಶಿಖರಸೂರ್ಯ.

“ನಮ್ಮವನು ನಾವಂದುಕೊಂಡ ಹಾಗೆ ಬೆಬ್ಬೆಬ್ಬೆ ಅಂತ ಬೆವರು ಸುರಿಸಿದ. ಆಮ್ಯಾಲೆ ಯಾರಾದರೂ ಪ್ರಶ್ನೆ ಕೇಳಬಹುದು ಅಂತಾಯ್ತು. ಯಾರೂ ಏಳಲಿಲ್ಲಯ್ಯ. ಕೊನೆಗೊಬ್ಬ ಮೇಧಾವಿ ಎದ್ದ ನೋಡು! ಯಾರು ಗೊತ್ತ”

“ಯಾರು?”

“ನಾನೇ!”

“ಭಲೆ! ನೀವೇನು ಹೇಳಿದಿರಿ ಪ್ರಧಾನಿಗಳೆ?”

“ಹೇಳಿದೆ: ಒಂದು ಮಾತು ಹೇಳಲ ಪಂಡಿತನೆ? ಈ ಪ್ರಪಂಚದಲ್ಲಿ ಚಿನ್ನ ಬಿಟ್ಟು ಉಳಿದದ್ದೆಲ್ಲಾ ಸೆಗಣಿ! ನಮ್ಮ ಕೈಲಿರೋದು ಸೆಗಣಿ ಅಂತ ‘ಒಪ್ಪಿಕೊಳ್ಳೋದಕ್ಕೆ ನಮಗೆ ಮನಸ್ಸಿಲ್ಲ. ಅದಕ್ಕೆ ಏನೇನೋ ಹೆಸರಿಡ್ತೀವಿ: ಸದ್ಗುಣ ಅಂತೀವಿ, ಗೌರವ ಅಂತೀವಿ. ಆತ್ಮ ಪರಮಾತ್ಮ ಅಂತೀವಿ. ಮೌಲ್ಯ ಅಂತೀವಿ, ಸಂಸ್ಕೃತಿ ಮಣ್ಣು ಮಸಿ ಅಂತೀವಿ….

ಅಷ್ಟರಲ್ಲಿ ಆ ಪಂಡಿತ

‘ಸೆಗಣಿ ವ್ಯವಹಾರದಲ್ಲಿ ವರ್ತಕರಾದ ನಿಮ್ಮ ಪಾತ್ರವೇನು ಮಹಾಶಯರೆ?” ಅಂದ ವ್ಯಂಗ್ಯವಾಗಿ.

ನನಗೆ ವ್ಯಂಗ್ಯ ಹೇಳಿಕೊಡ್ತಾನ ಇವನು? ಹೇಳಿದೆ:

ಇಷ್ಟೆ ಪಂಡಿತನೆ: ಸೆಗಣಿ ತಿನ್ನಬಾರದು. ಇನ್ನೊಬ್ಬರಿಗೆ ತಿನ್ನಿಸಬೇಕು. ಆದರೆ ಹ್ಯಾಗೆ ತಿನ್ನಿಸಬೇಕು? ಅಂದರೆ ಅದನ್ನವರು ಅದು ಪಾಯಸ ಅಂತ ತಿಳಿದುಕೊಂಡು ತಿಂದಿರಬೇಕು!

ಅದು ಹ್ಯಾಗೆ ಸಾಧ್ಯ? ಹ್ಯಾಗಂದರೆ ನಯ, ನಾಜೂಕು, ಸಂಗೀತ, ನೃತ್ಯ, ಮಾತು, ಬಣ್ಣ… ಇತ್ಯಾದಿ ಸಂಸ್ಕೃತಿಯ ಮಸಾಲೆಗಳನ್ನೆಲ್ಲಾ ಬೆರೆಸಿ ಕೊಡಬೇಕು!

ಇದು ನಿಮ್ಮ ಶಿವಾಪುರಕ್ಕೆ ಪರ್ಯಾಯವಾದ ಕನಕಪುರಿ!”

ಶಿಖರಸೂರ್ಯನಿಗೆ ಈ ವಾದ ಸಮ್ಮತವೆನ್ನಿಸಿ ಮೆಚ್ಚುಗೆಯಿಂದ “ಅಬ್ಬಾ!” ಅಂದ. ಅರ್ಥಕೌಶಲ ಉಬ್ಬಿ ಮುಂದುವರೆಸಿದ :

“ನಿಜ ಹೇಳ್ತೀನಯ್ಯಾ ವೈದ್ಯ ಮಿತ್ರಾ. ನನ್ನ ಮಾತು ಕೇಳಿ ಶಿವಾಪುರ ಪಂಡಿತ ಆವಾಕ್ಕಾದ! ನಾನಿಷ್ಟು ಒರಟಾಗಿ ಮಾತಾಡಲಿಲ್ಲ ಅಂತಿಟ್ಟಕ, ಎದುರಿಗೆ ಮಹಾರಾಜರಿದ್ದರು ನೋಡು. ಆದರೂ ಆಸಾಮಿ “ಸರಿ ಸ್ವಾಮಿ” ಅಂತ ಮಾತೆಳೆದು ಮಾಯವಾದವನು, ಆಮೇಲ ಅವನ ದರ್ಶನ ಆಗಲೇ ಇಲ್ಲವೆ!”

“ಭಲೆ ಪ್ರಧಾನಿಗಳೆ! ಮೆಚ್ಚಿಕೊಂಡೆ ನಿಮ್ಮ ವಾದವನ್ನ!”

“ಹಾಗೆ ಬಾ ದಾರಿಗೆ.”

ಈಗ ಶಿಖರಸೂರ್ಯ ಶಿವಪಾದನ ಭಯದಿಂದ ಮುಕ್ತನಾದ. ಅವರ್ಯಾರಾದರೂ ಬಂದರೆ ಅರ್ಥಕೌಶಲನ ಮೂಲಕ ನಿವಾರಿಸಬಹುದೆಂಬ ವಿಶ್ವಾಸ ಮೂಡಿತು. ಕೇಳಿದ:

“ಇಲ್ಲಿಗೆ ಅವರು ಆಗಾಗ ಬರುವುದುಂಟಾ?”

“ಕಡಿಮೆ, ಇಲ್ಲಿ ಯಾರೂ ಅವರ ಒಕ್ಕಲಿಲ್ಲ.”

“ಶಿವಪಾದ ಇರೋದೆಲ್ಲಿ?”

“ಎಂಥದೋ ಶಿವಾಪುರವಂತೆ.”

“ನೀವು ಅಲ್ಲಿಗೆ ಹೋಗಿದ್ದಿರ?”

“ವರ್ತಕರ್ಯಾಕೆ ಅಲ್ಲಿಗೆ ಹೋಗುತ್ತಾರೆ, ವೈದ್ಯನೆ? ಅವನೇನೋ ಅಹಿಂಸೆ ಅಂತಾನೆ. ಧರ್ಮ ದೇವರು ಅಂತಾನೆ, ತಾಯಿ ಅಂತಾನೆ. ಎಲ್ಲವೂ ನಮ್ಮ ಕನಕಪುರಿಗೆ ವಿರೋಧವಾದ ಮಾತುಗಳೇ, ಅವನ್ನಿಟ್ಟುಕೊಂಡು ನಾವು ಬದುಕಲಿಕ್ಕಾಗುತ್ತ?”

“ಇಲ್ಲಿಂದ ಶಿವಪುರ ಎಷ್ಟು ದೂರ?”

“ನನಗೆ ಗೊತ್ತಿಲ್ಲ, ಗೊತ್ತಿದ್ದವರಿದ್ದಾರೆ.”

ಎಂದು ಹೇಳಿ ಅವನ ಆಸಕ್ತಿಗಾಗಿ ಆಶ್ಚರ್ಯ ತಳೆದು ಅವನ ಮುಖವನ್ನೇ ನೋಡಿದ. ಅಷ್ಟರಲ್ಲಿ ಬಂಟನೊಬ್ಬ ಕುದುರೆ ಓಡಿಸುತ್ತ ಬಂದು ಅನತಿ ದೂರದಲ್ಲಿ ಕೆಳಗಿಳಿದು ಪ್ರಧಾನಿಗೆ ನಮಸ್ಕಾರವನ್ನಾಚರಿಸಿದ. ಪಕ್ಕಕ್ಕೆ ಹೋಗಿ ಇವನಿಗೆ ತಿಳಿಯದಂತೆ ಒಂದೆರಡು ಮಾತಿನಲ್ಲಿ ವಿಷಯ ತಿಳಿಸಿ ಹೋದ. ಇವರೂ ಹೊರಟರು.