ಈಗ ಕನಕಪುರಿಯ ಐತಿಹಾಸಿಕ ಸಂದರ್ಭವನ್ನು ತಿಳಿಯದಿದ್ದರೆ ನಮ್ಮ ಕಥನವೇ ಗೋಜಲಾಗುವುದರಿಂದ ಮೊದಲು ಅದನ್ನೇ ನಾತಿ ಹೃಸ್ವನಾತಿ ದೀರ್ಘವಾಗಿ ನೋಡೋಣ:

ಕನಕಪುರಿ ಪ್ರಾಚೀನ ನಗರವೇನಲ್ಲ. ಸುಮಾರು ಇನ್ನೂರು ವರ್ಷಗಳೀಚಿನ ಕಾವ್ಯೇತಿಹಾಸಗಳಲ್ಲಿ ವೈಭವದಿಂದ ಮೆರೆದ ನಗರವಸ್ಥೆ. ಜಂಬೂದ್ವೀಪದ ಪರಶುರಾಮ ಕ್ಷೇತ್ರದಲ್ಲಾಗಲಿ ಪುರಾಣ ಕತೆಗಳಲ್ಲಾಗಲಿ ಅದರ ಸುದ್ದಿಯಿಲ್ಲ. ಪಶ್ಚಿಮ ಕರಾವಳಿ, ಅದರ ಮೂಡಣ ಘಟ್ಟ ದಾಟಿ ಬರುವಾಗ ಪರ್ವತ ಪ್ರದೇಶ ಮತ್ತು ಬಯಲಸೀಮೆಯ ಮಧ್ಯೆ ಸಿಕ್ಕೋದೇ ಕನಕಪುರಿ. ಪುರದ ಉತ್ತರದಲ್ಲಿ ಪಶ್ಚಿಮಕ್ಕೆ ಹರಿದು ಘಟ್ಟದಿಂದ ಕೆಳಗೆ ಧುಮುಕಿ ಸಮುದ್ರ ಸೇರುವ ಶೀಲವಂತಿ ನದಿ ಇದೆ. ಪಾತ್ರ ದೊಡ್ಡದು. ಅದರ ದಕ್ಷಿಣಕ್ಕೆ ಬೋಳುಗುಡ್ಡವಿದೆ. ಅದನ್ನು ಅಗಿದಗಿದು ತಗ್ಗುತೋಡಿದ ಗುರುತುಗಳಿವೆ. ಗುಡ್ಡದ ಪೂರ್ವಕ್ಕೆ ಕನಕಪುರಿಯಿದ್ದು ಅದರ ದಕ್ಷಿಣಕ್ಕೆ ಹೊಲಗದ್ದೆಗಳು, ನೀರಾವರಿ ತೋಟಗಳಿದ್ದು ಅವುಗಳಂಚಿಗೆ ಪರ್ವತ ಸಾಲಿದೆ. ನದಿಯ ದಕ್ಷಿಣ ಬದಿಯ ಪುರಿ ಸುರುವಾಗೋದೇ ಅರಮನೆಯಿಂದ. ಅಲ್ಲಿಂದ ಮುಖ್ಯರಸ್ತೆ ಪೂರ್ವಕ್ಕೆ ಹೋಗುತ್ತದೆ. ಅದರ ಆಜೂಬಾಜೂ ಅವುಗಳ ಅಕ್ಕಪಕ್ಕ ಊರು ಬೆಳೆದಿದೆ.

ಮಲೆನಾಡ ಸೆರಗಿನ ಪ್ರದೇಶವಾಗಿದ್ದರಿಂದ ಹೆಚ್ಚಿನ ಮಳೆಯಿಂದಾಗಿ ಬಣ್ಣಗಳಿಲ್ಲದ ಕಲ್ಲಿನ, ಪಾಚಿಗಟ್ಟಿ ಕರಿಬಣ್ಣಕ್ಕೆ ತಿರುಗಿದ ಮನೆಗಳಿಂದಾಗಿ ಊರು ನೋಡುವುದಕ್ಕೆ ಚಂದದ್ದಲ್ಲ. ಮುಖ್ಯರಸ್ತೆಗಳು ಪೂರ್ವಪಶ್ಚಿಮಗಳಿಗೆ ಮಾತ್ರ ಹೋಗುತ್ತವೆ, ಬರುತ್ತವೆ. ಪೂರ್ವದ ರಸ್ತೆಗಳು ಪಟ್ಟಣ ಸೇರುವಲ್ಲಿ ಅರ್ಧ ಯೋಜನದಷ್ಟು ದೂರ ಬಗೆ ಬಗೆಯ ಬೃಹತ್ ಗೋದಾಮುಗಳಿವೆ. ಅವನ್ನು ದಾಟಿ ಒಳಕ್ಕೆ ಪ್ರವೇಶಿಸಿದರೆ ಇಡೀ ಪಟ್ಟಣ ಒಂದು ಅಖಂಡ ಮಾರುಕಟ್ಟೆಯಂತಿದೆ. ಯಾವ ಬೀದಿ ನೋಡಿದರೂ ಅದಕ್ಕೆ ಉಪಬೀದಿಗಳು, ಉಪಬೀದಿಗಳಿಗೆ ಸಂದಿಗಳು, ಸಂದಿಗಳಲ್ಲಿ ಚಾಳಗಳು ಇದ್ದರೂ ಅವೆಲ್ಲವೂ ಅಂಗಡಿಗಳೇ ಆಗಿವೆ. ಜನರ ವಾಸದ ಮನೆಗಳೆಲ್ಲಿವೆಯೆಂದು ತಿಳಿಯುವುದೇ ಇಲ್ಲ. ಅಂಗಡಿಗಳು ಹೊರಗೆ ಒರಟು ಕಲ್ಲಿನ ಭದ್ರ ಕಟ್ಟಡಗಳೆಂದು ಕಂಡರೂ ಒಳಗೊಳಗೆ ಬಹಳ ವೈಭವ ‘ಹಾವ ಭಾವ ವಿಲಾಸ ವಿಭ್ರಮ’ಗಳಿಂದ ಸದಾ ಭೋಗನಿರತವಾಗಿರುವಂತೆ ಕಾಣಿಸುತ್ತವೆ.

ಮಾರುಕಟ್ಟೆ ದಾಟಿ ಬಲಕ್ಕೆ ತಿರುಗಿದರೆ ನದಿಯಲ್ಲಿ ನಡೆವ ವ್ಯವಹಾರಗಳ ದೊಡ್ಡ ಬಲೆಯೇ ಕಾಣಸಿಗುತ್ತದೆ. ನದಿಯಲ್ಲಿ ನಾಲ್ಕಾರು ದೊಡ್ಡ ನಾವೆಗಳು ಸಾಮಾನು ಸರಂಜಾಮುಗಳನ್ನು ಇಳಿಸುತ್ತಲೋ ಇಲ್ಲ ಹೇರಿಕೊಳ್ಳುತ್ತಲೋ ನಿಂತಿರುವುದು ಕಾಣಿಸುತ್ತದೆ. ಅಲ್ಲಿಂದ ನೋಡಿದರೆ ನಗರದತ್ತ ಮುಖ ಮಾಡಿದ ಅರಮನೆಯ ಬೆನ್ನು ಕಾಣಿಸುತ್ತದೆ. ಎತ್ತರವಾದ ಪೌಳಿಯ ಒಳಗೆ ಕೆಂಪುಕಲ್ಲಿನಿಂದ ಕಟ್ಟಿದ ಒಡ್ಡೋಲಗದ ಸುತ್ತ ನಾಲ್ಕು ಸೌಧಗಳಿರುವ ವೈಭವದ ಅರಮನೆ ಅದು. ಒಡ್ಡೋಲಗದ ಮೇಲೆ ಮುಖ್ಯ ಮತ್ತು ಅತಿ ಎತ್ತರವಾದ ಗೋಪುರವಿದ್ದು ಅದನ್ನು ಹ್ಯಾಗೆ ಕಟ್ಟಿರಬಹುದೆಂದು ನೋಡಿದ ಪ್ರತಿಯೊಬ್ಬರಿಗೂ ಆಶ್ಚರ್ಯವಾಗುತ್ತದೆ. ಆದಿತ್ಯರ ಆಳ್ವಿಕೆಯ ಅಂಚಿನಲ್ಲಿ ವರ್ತಕ ವಂಶವೊಂದು ಬಂದು ಸೇರಿಕೊಂಡಂತೆ ರಾಜವಂಶದ ಚರಿತ್ರೆಯಿದೆ. ಆ ಬಗೆಗಿನ ಕತೆಗಳನ್ನು ಸುಲಿದರೆ ಉಳಿಯುವ ಇತಿಹಾಸ ಇಂತಿದೆ:

ಗರುಡವಂಶದ ಪಾಳೇಗಾರನೊಬ್ಬ ಬಂಗಾರದ ಹಟ್ಟಿಗೆ ಒಡೆಯನಾಗಿದ್ದ. ಮಸಾಲೆ ಸಾಮಾನಿಗಾಗಿ ದೂರದ ವರ್ತಕರೂ ಬಂದು ಇಲ್ಲಿ ನೆಲೆಸಿದರು. ಒಡೆಯನೂ ವರ್ತಕರೂ ಪರಸ್ಪರ ಸಹಕಾರದಿಂದ ರಾಜ್ಯ ಕಟ್ಟಿ ಸಣ್ಣ ಸೀಮೆಯಿದ್ದದ್ದು ರಾಜ್ಯವಾಗಿ, ಒಡೆಯ ರಾಜನಾದ. ಮುಂದೆ ಬಂಗಾರದ ಹಟ್ಟಿ ಕನಕಪುರಿಯೆಂಬ ರಾಜಧಾನಿಯಾಗಿ ರಾಜ ಮಹಾರಾಜನಾದ. ಈ ವಂಶದ ಕೊನೆಯ ದೊರೆ ವಿಜಯಶೀಲ ವರ್ತಕಶ್ರೇಷ್ಠನ ಅನುಪಮ ಸುಂದರಿಯಾದ ಕನಕರೇಖೆ ಎಂಬ ಮಗಳನ್ನು ಮೋಹಿಸಿದ. ಮದುವೆಗೆ ವರ್ತಕ ಕುಲದವರು ಒಪ್ಪಲಿಲ್ಲ. ಮಹಾರಾಜನ ಒತ್ತಡದ ಮೇರೆಗೆ ಕೆಲವು ಕರಾರುಗಳನ್ನು ಹಾಕಿ ಒಪ್ಪಿಕೊಂಡರು. ರಾಜ ಅವೆಲ್ಲವನ್ನು ಒಪ್ಪಿಕೊಂಡು ಮದುವೆಯಾದ. ಅವರಿಂದ ಸುರುವಾದ ವಂಶವೇ ಈಗಿನ ರಾಜರದು. ವಿಜಯಶೀಲ ಕನಕರೇಖೆಯನ್ನು ಮದುವೆಯಾಗುವಾಗ ಹಿರಿಯ ಪಟ್ಟದ ರಾಣಿಗೊಬ್ಬ ಮಗನಿದ್ದ. ಅವನಿಗೆ ರಾಜ್ಯ ತಪ್ಪಿಸಲೆಂದು ವರ್ತಕರು ಇನ್ನೂ ಒಂದು ಕರಾರಿಗೆ ಒಪ್ಪಿಗೆ ಪಡೆದರು. ಅದೆಂದರೆ, ರಾಜ ಹಿರಿಯ ಪಟ್ಟದ ರಾಣಿಯ ಮಗನನ್ನೇ ಯುವರಾಜನನ್ನಾಗಿ ಮಾಡಬೇಕೆಂದಿಲ್ಲ. ತನ್ನ ಇಷ್ಟಾನುಸಾರ ಕಿರಿಯ ರಾಣಿಯರ ಮಕ್ಕಳನ್ನೂ ಮಾಡಬಹುದಾಗಿತ್ತು. ಇದೇ ಇಂದಿನ ಎಲ್ಲ ಸಮಸ್ಯೆಗಳ ಮೂಲ ಉರುಲಾಯಿತೆಂದು ಮುಂದೆ ನಿಮಗೇ ತಿಳಿಯುತ್ತದೆ.

ಅಂದಿನಿಂದ ಅರಸೊತ್ತಿಗೆಯ ಸ್ವರೂಪ ಮಾತ್ರವಲ್ಲ, ರಾಜಲಾಂಛನವೂ ಬದಲಾಯಿತು. ಮೊದಲು ಸೂರ್ಯನ ಗುರುತಾದ ಹದ್ದು ರಾಜಲಾಂಛನವಾದದ್ದು ವರ್ತಕ ಸಮಾಜದ ಬೆರಕೆಯಾದ ಮೇಲೆ ಒಂದು ಕಾಲಲ್ಲಿ ತಕ್ಕಡಿ ಇನ್ನೊಂದು ಕಾಲಲ್ಲಿ ಖಡ್ಗ ಹಿಡಿದ ಹದ್ದು ರಾಜಲಾಂಛನವಾಯಿತು. ವಿಜಯಶೀಲ ವಿಲಾಸಿ. ಇದು ಗೊತ್ತಾದದ್ದೇ ಮಾಂಡಳಿಕರು ಬಲಿತು ಸ್ವತಂತ್ರರಾದರು. ರಾಜ ಕನಕರೇಖೆಯ ಪ್ರೇಮಪಾಶದಲ್ಲಿಯೇ ಸದಾಕಾಲ ಬಿದ್ದಿರುತ್ತ ರಾಜ್ಯಭಾರ ಮರೆತ. ಕನಕರೇಖೆಯ ಅಣ್ಣತಮ್ಮಂದಿರು ರಾಜ್ಯಭಾರ ನೋಡಿಕೊಂಡರು. ಈಗ ಕ್ಷತ್ರಿಯರು ಮತ್ತು ವರ್ತಕರ ಮಧ್ಯೆ ವಿರಸ ಉಂಟಾಗಿ ಶೂರರಾದ ಕ್ಷತ್ರಿಯರು ಬೇರೆ ರಾಜರಲ್ಲಿಗೆ ಹೋದರು. ರಾಜ ಮತ್ತವನ ಆಡಳಿತದ ಗುಟ್ಟುಗಳನ್ನರಿತ ಕೆಲವರು ಸ್ವತಂತ್ರ ಸೈನ್ಯಕಟ್ಟಿ ಕನಕಪುರಿಯ ಮೇಲೆ ದಂಡೆತ್ತಿ ಬಂದರು. ಹೀಗೆ ಬಂದವರನ್ನೆಲ್ಲ ಎದುರಿಸಲು ರಾಜ್ಯದಲ್ಲಿ ಶೂರರಾದ ಸೈನಿಕರು ಇರಲಿಲ್ಲ. ಮಹಾರಾಣಿ ಕನಕರೇಖೆಯ ಸಹೋದರರಲ್ಲಿ ದಂಡೆತ್ತಿ ಬಂದವರನ್ನು ನಿಭಾಯಿಸಲು ಅನುಭವವೂ ಇರಲಿಲ್ಲ, ಶೌರ್ಯವೂ ಇರಲಿಲ್ಲ. ಹೀಗಾಗಿ ಬಂದ ಬಂದವರಿಗೆ ಕಾದಾಡದೆ ಅಷ್ಟಿಷ್ಟು ಹಣ, ಚಿನ್ನ ಕೊಟ್ಟು ಹಿಂದಿರುಗಿಸುವ ಉಪಾಯ ಕಂಡುಕೊಂಡರು. ಈ ಉಪಾಯ ಮೊದಮೊದಲು ಯಶಸ್ವಿಯಾದದ್ದು ಬರಬರುತ್ತ ದುಬಾರಿಯಾಯಿತು. ಈಗ ರಾಜ್ಯವನ್ನು ಉಳಿಸಿಕೊಳ್ಳಲು ಎಷ್ಟು ಚಿನ್ನವಿದ್ದರೂ ಸಾಲದಾಯಿತು. ವರ್ತಕ ಸಮಾಜ ತನ್ನ ಚಿನ್ನವನ್ನೆಲ್ಲ ಕಳೆದುಕೊಂಡಿತು.

ಚಿನ್ನದ ಅಭಾವ ಚಿನ್ನದ ಶೋಧನೆಯಾಗಿ ಮಾರ್ಪಾಡಾಯಿತು. ಇದರ ಪರಿಣಾಮವೆಂದರೆ ಬೋಳು ಗುಡ್ಡಗಾಡು ಪ್ರದೇಶ ವರ್ತಕರು ತೋಡಿದ ತಗ್ಗು, ಕುಳಿ, ಹೊಂಡಗಳಿಂದ ತುಂಬಿ ಹೋಯಿತು. ಈ ಸನ್ನಿವೇಶವನ್ನು ಒಮ್ಮೆ ಅರ್ಥಕೌಶಲ ಹೀಗೆ ವರ್ಣಿಸಿದ್ದ:

ಮನೆಯಲ್ಲಿಯ ಚಿನ್ನವೆಲ್ಲಾ ಖಾಲಿಯಾಯತ್ತು. ಕಳೆಯುತ್ತ ಬಂದ ಹಾಗೆ ತಿಳಿಯುತ್ತಾ ಬಂತು. ಮನೆ ಖಾಲಿ ಆಗಿತ್ತಲ್ಲ, ಹೃದಯವೂ ಖಾಲಿ, ಕಣ್ಣೂ ಖಾಲಿ. ವರ್ತಮಾನವಂತೂ ಮೊದಲೇ ಖಾಲಿ. ಭವಿಷ್ಯವೂ ಖಾಲಿ! ಆಗ ನೋಡು ಇಡೀ ಕನಕಪುರಿಗೆ ಒಂದು ಸಂಕ್ರಾಂತಿಯ ಮುಂಜಾನೆ ಅದ್ಭುತವಾದ ದರ್ಶನವಾಯಿತಯ್ಯ!-ಕಲ್ಪಿಸಿಕೊಳ್ಳಯ್ಯಾ ಇಡೀ ಕನಕಪುರಿಗೆ ಒಂದೇ ದರ್ಶನ!

ಅದೇನಪ್ಪಾ ಅಂದರೆ, ಆ ದಿನ ಬೆಳಿಗ್ಗೆ ನದಿಯಲ್ಲಿ ಮುಳುಗೆದ್ದು ಸೂರ್ಯನಿಗೆ ನಮಸ್ಕಾರ ಮಾಡೋಣವೆಂದು ನೋಡಿದರೆ ಅಲ್ಲೆಲ್ಲಿದ್ದಾನೆ ಸೂರ್ಯ? ಆಕಾಶದಲ್ಲೊಂದು ಚಿನ್ನದ ತಲೆ ಫಳಫಳಾ ಹೊಳೀತಿದೆ! ಕೈಯಿಲ್ಲ, ಕಾಲಿಲ್ಲ. ಏನಿದರ ಅರ್ಥ ಅಂತ ತಲೆ ಕೆಡಿಸಿಕೊಂಡಿರಬೇಕಾದರೆ ಆ ತಲೆ ಹೇಳಿತು, ನೋಡು:

“ಲೋ ಮಕ್ಕಳ್ರಾ, ಚಿನ್ನ ಗಳಿಸಬೇಕಾದ್ದು ಕೈ ಮೈ ದುಡಿಮೆಯಿಂದಲ್ರೊ, ತಲೆ! ತಲೆಯಿಂದ ಕಣ್ರೋ ಮುಂಡೇವಾ!”

ಅಂತಂದು ನಕ್ಕ! ಒಮ್ಮೆ ಚಿನ್ನದ ಕನಸಿನಿಂದ ಉದ್ರಿಕ್ತರಾದರೋ ಆಮೇಲೆ ಒಬ್ಬನೂ ಹಿಂದಿರುಗಿ ನೋಡಲೇ ಇಲ್ಲ

ಐವತ್ತಾರೂ ದೇಶಗಳಲ್ಲಿ ನಮ್ಮ ರಾಜ್ಯ ಮಾತ್ರ ಶ್ರೀಮಂತವಾಗಿದೆ! ಯಾಕೆ?

ಭೂಮಿಸೀಮೆ ಹೆಚ್ಚಾಗಿದೆಯ?

ಇಲ್ಲ.

ದುಡಿಯೋ ಜನ ಹೆಚ್ಚಿಗಿದ್ದಾರಾ?

ಇಲ್ಲ.

ಸಂಪನ್ಮೂಲ ಹೆಚ್ಚಿಗಿದೆಯ?

ಇಲ್ಲ.

ಮತ್ಯಾಕಪ್ಪ ಹಿಂಗಿದ್ದೀವಿ? ಅಲ್ಲೇ ಮಜಾ ಇರೋದು ರಾಜಾ!

ಹೆಂಗೆ?

ಹೆಂಗೆಂದರೆ, ನಮ್ಮಷ್ಟು ಯುದ್ಧಗಳನ್ನ ಬೇರೆ ಯಾರಾದರೂ ಮಾಡಿದ್ದಾರಾ?

ಇಲ್ಲ.

ಯಾಕೆ? ಯಾಕೆಂದರೆ ಯುದ್ಧವಿಲ್ಲದೆ ಶ್ರೀಮಂತಿಕೆಯಿಲ್ಲ. ಸಣ್ಣಪುಟ್ಟ ಯುದ್ಧ ಬಿಡು, ಮೂರು ವರ್ಷಕ್ಕೊಂದು ದೊಡ್ಡ ಯುದ್ಧ ಮಾಡಿದ್ದೀವಿ. ಒಂದು ಬಿಟ್ಟು ಅಷ್ಟೂ ಯುದ್ಧ ಗೆದ್ದಿದ್ದೀವಿ. ಹ್ಯಾಗೆ? ಅನ್ನು. ತಲೆ!

ಇಷ್ಟು ಯುದ್ಧ ಗೆದ್ದರೂ ನಮ್ಮ ರಾಜ್ಯ ಅಷ್ಟೇ ಇದೆಯಲ್ಲ? ವಿಸ್ತಾರವಾಗಿಲ್ಲವಲ್ಲ? ಯಾಕೆ? ಗೆದ್ದ ರಾಜ್ಯಗಳನ್ನ ಅಲ್ಲಿಯ ರಾಜರ ಮೂಲಕ ಆಳೋರ್ಯಾರು? ನಾವೆ! ಹೆಂಗಿದೆ? ತಲೆ!

ಹೆಂಗೆ?

ತಲೆ ಇದ್ದರೆ ಚಿನ್ನ, ಚಿನ್ನ ಇದ್ದರೆ ಸೈನ್ಯ, ಸೈನ್ಯ ಇದ್ದರೆ ದೇಶ, ಇದ್ದರೆ ಅಧಿಕಾರ –ಅಧಿಕಾರ ಇದ್ದರೆ ಚಿನ್ನ… ಹ್ಯಾಗಿದೆ ವರ್ತುಳ? ಈ ವರ್ತುಳದ ಮಧ್ಯೆ, ಧರ್ಮ, ಕುಟುಂಬ, ಸಮಾಜ, ಮೌಲ್ಯ ಇತ್ಯಾದಿ ಬಿದ್ದುಕೊಂಡಿರ್ಲೇಳು, ಅವೂ ಚಿನ್ನ ಗಳಿಸೋ ಹಾಗೆ ಮಾಡಿದರಾಯ್ತಪ್ಪ! ಅದಕ್ಕೇನು ಮಾಡಿದಿವಿ ಗೊತ್ತ? ತಲೆಗೆ ರಾಜ್ಯವ್ಯವಸ್ಥೆ ಸೇರಿಸಿಕೊಂಡಿವಿ!

ಹ್ಯಾಗೆ?

ಅದು ಹೀಗೆ:

ರಾಜ ಕ್ಷತ್ರಿಯ ಧರ್ಮವನ್ನಾಚರಿಸಿದರೂ ಅರಸೊತ್ತಿಗೆಯ ಅಧಿಕಾರವನ್ನು ‘ವರ್ತಕ ಸಂಘ’ದೊಂದಿಗೆ ಹಂಚಿಕೊಂಡಿದ್ದು ಕನಕಪುರಿಯ ವಿಶೇಷ. ಅಂದರೆ ರಾಜ ತೆಗೆದುಕೊಳ್ಳುವ ಯಾವುದೇ ಮಹತ್ವದ ತೀರ್ಮಾನಕ್ಕೆ ವರ್ತಕ ಸಂಘದ ಒಪ್ಪಿಗೆ ಬೇಕು. ವರ್ತಕ ಸಂಘಕ್ಕೆ ತಂತಮ್ಮ ಸಮ್ಮತಿಯಿಂದಾಯ್ದ ಐದು ಜನ ಪಂಚರಿರುತ್ತಾರೆ. ಅವರ ಅಧ್ಯಕ್ಷ ವರ್ತಕ ಶ್ರೇಷ್ಠ. ಅನಂತರದವ ವರ್ತಕೋತ್ತಮ. ಮೂರು ಜನ ವರ್ತಕಧನರು ಸದಸ್ಯರು. ಹೀಗೆಯೇ ರಾಜ ನೇತೃತ್ವದಲ್ಲಿ ಪ್ರಧಾನಿ ಸೇನಾಪತಿ ಇವರ ‘ರಾಜಸಭೆ’ ಇರುತ್ತದೆ. ರಾಜ್ಯದ ಮಹತ್ವದ ಆರ್ಥಿಕ ವಿಚಾರಗಳು, ಯುದ್ಧ, ಸಂಧಿ – ಕಂದಾಯವೇ ಮೊದಲಾದ ವಿಚಾರಗಳನ್ನು ಸದರೀ ಸಂಘ ಮತ್ತು ಸಭೆ ಸೇರಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ.

ಕನಕಪುರಿಯ ವ್ಯಾಪಾರವೂ ಅಷ್ಟೇ- ಐವತ್ತೈದೂ ದೇಶಗಳ ತುಂಬ ಇವರ ವ್ಯಾಪಾರಕೌಶಲದ ಖ್ಯಾತಿ ಹಬ್ಬಿದೆ. ವಾರಕ್ಕೊಮ್ಮೆ ನಡೆಯುವ ‘ಊರ ಸಂತೆ’ ಮತ್ತು ವರ್ಷಕ್ಕೊಮ್ಮೆ ನಡೆಯುವ “ವಾರ್ಷಿಕ ವ್ಯಾಪಾರ”ಕ್ಕೆ ವಿದೇಶಗಳಿಂದಲೂ ಗಿರಾಕಿಗಳು ಬರುತ್ತಾರೆ. ಇಲ್ಲಿ ಸಿಕ್ಕುವ ಆಯುಧ, ಯುದ್ಧ ಸಾಮಗ್ರಿ ಮತ್ತು ಚಿನ್ನಾಭರಣಗಳ ಅಸಲಿತನದ ಬಗ್ಗೆಯಾಗಲಿ, ಕುಸುರಿಗೆಲಸದ ಬಗ್ಗೆಯಾಗಲಿ ಹೆಸರಿಡುವಂತೆಯೇ ಇಲ್ಲ.

ಕನಕಪುರಿಯ ಕರಕುಶಲಗಾರಿಕೆ ಮತ್ತು ಕಸುಬುದಾರಿಕೆಯ ಬಗ್ಗೆ ಹೇಳದಿದ್ದರೆ ಅದೊಂದು ದೊಡ್ಡ ಕೊರತೆಯೇ ಆದೀತು. ರಾಜರು ಮತ್ತು ಶ್ರೀಮಂತರಿಗಾಗಿ ತಾಸು ಗಳಿಗೆಗಳನ್ನು ತೋರಿಸುವ ಕಾಲಯಂತ್ರ (ಗಡಿಯಾರ)ಗಳಲ್ಲದೆ ಸೈನ್ಯಕ್ಕೆ ಬೇಕಾಗುವ ಅನೇಕ ಮಾರಕ ಆಯುಧಗಳ ತಯಾರಿಕೆಯಲ್ಲಿ ಇಲ್ಲಿಯ ಕಸಬುದಾರರು ಪ್ರಸಿದ್ಧರಾಗಿದ್ದರು. ಇವರು ಮಾಡುವ ಸಿಡಿತಲೆ ಗುಂಡುಗಳು ಗುರಿಯಿಟ್ಟು ಹಾರಿಸಿದಲ್ಲಿ ವೈರಿಯ ಕೋಟೆಕೊತ್ತಳಗಳನ್ನು ಧೂಳಿಪಟ ಮಾಡುವಷ್ಟು ಸಮರ್ಥವಾಗಿದ್ದವು. ಚರ್ಮದ ಪಟ್ಟಿಯ ಹಾಗೆ ಸೊಂಟಕ್ಕೆ ಸುತ್ತಿಕೊಳ್ಳುವಂಥ ಸೂಕ್ಷ್ಮಕತ್ತಿಗಳನ್ನು ಮಾಡುವುದಲ್ಲದೆ ವಿಷದ ನೀರು ಕುಡಿಸಿದ ಕಟಾರಿ, ಚಾಕು ಚೂರಿಗಳ ನಿರ್ಮಾಣದಲ್ಲೂ ಕೆಲವರು ಬೇಕಸಬಿನವರು. ಹೆಸರು ಮಾಡಿಕೊಂಡಿದ್ದರು. ಇನ್ನಿವರ ಕುದುರೆ ವ್ಯಾಪಾರವಂತೂ ಅಕ್ಷರಶಃ ಅಂತರ್ದೇಶೀಯವೆನ್ನಬಹುದಾದ ವ್ಯವಹಾರವಾಗಿತ್ತು. ಅರಬ ದೇಶದ ಕುದುರೆಗಳು ಹಡಗು ಇಳಿದು ನೇರ ಇಲ್ಲಿಗೇ ಬರುವ ಹಾಗೆ, ಇವರು ಆರಿಸಿಬಿಟ್ಟ ಕುದುರೆಗಳನ್ನು ಮಾತ್ರ ಬೇರೆಯವರಿಗೆ ಮಾರುವಂತೆ ವ್ಯವಸ್ಥೆ ಮಾಡಿಕೊಂಡಿದ್ದರು.

ಕನಕಪುರಿಯ ವರ್ತಕ ಸಂಘದ ಒಗ್ಗಟ್ಟು ಸಹಕಾರಗಳಂತೂ ದೇಶಗಳ ತುಂಬ ಗಾದೆ ನಾಣ್ಣುಡಿಯಾಗಿ ಖ್ಯಾತವಾಗಿದ್ದವು. ಯುದ್ಧ ಸಾಮಾಗ್ರಿಗಳ ತಯಾರಿಕೆ ಪೂರ್ತಿ ವರ್ತಕರದಾಗಿದ್ದು ಬಂದ ಲಾಭದಲ್ಲಿ ಅರಮನೆಯ ಪಾಲುದಾರಿಕೆಯೂ ಇರುತ್ತಿತ್ತು. ಯುದ್ಧ ಮಾಡುವುದು, ಆದ್ದರಿಂದ ಆಗಾಗ ಯುದ್ದಗಳು ನಡೆಯುವಂತೆ ನೋಡಿಕೊಳ್ಳುವುದು ಅರಮನೆಯ ಜವಾಬ್ದಾರಿಯಾಗಿತ್ತು. ನಡೆಯದಿದ್ದಲ್ಲಿ ಒಬ್ಬರ ಮೇಲೊಬ್ಬರನ್ನು ಎತ್ತಿಕಟ್ಟಿಯಾದರೂ ಯುದ್ಧ ನಡೆಯವಂತೆ ನೋಡಿಕೊಳ್ಳಲಾಗಿತ್ತಿತ್ತು.

ಯಾವ ಯುದ್ಧದಿಂದ ಲಾಭವಾಗುವುದೋ ಅಂಥ ಯುದ್ಧಗಳಲ್ಲಿ ಮಾತ್ರ ವರ್ತಕ ಸಂಘ ಆಸಕ್ತಿ ತೋರಿಸುತ್ತಿತ್ತು. ರಾಜ ಮತ್ತು ವರ್ತಕರು ಯುದ್ಧದಿಂದ ಶೇಕಡಾ ನೂರರಷ್ಟು ಲಾಭ ಪಡೆಯುತ್ತಿದ್ದರಾಗಿ ಕನಕಪುರಿ ಎಲ್ಲ ರಾಜಧಾನಿಗಳಿಗಿಂತ ಶ್ರೀಮಂತವಾಗಿತ್ತು. ಒಂದು ಯುದ್ಧದ ಹುನ್ನಾರು ಮಾಡಿದರೆ ಅದರಿಂದ ಬರುವ ಲಾಭನಷ್ಟಗಳನ್ನು ಸರಿಯಾಗಿ ಲೆಕ್ಕ ಹಾಕಿ, ಯೋಜನೆಗಳನ್ನು ಸಿದ್ಧಗೊಳಿಸಿ, ಅದರಂತೆಯೇ ಮಾಡುತ್ತಿದ್ದರಾದ್ದರಿಂದ ಅವರ ಯೋಜನೆಗಳು ಎಲ್ಲಿಯೂ ಹಾದಿ ತಪ್ಪುತಿರಲಿಲ್ಲ. ಗೆದ್ದ ರಾಜ್ಯದ ಪ್ರಜೆಗಳಂತೂ ತಾವು ಕನಕಪುರಿಗೆ ಸೋತದ್ದೇ ಸೌಭಾಗ್ಯವೆಂದು ನಂಬುವ ಹಾಗೆ ಮಾಡುತ್ತಿದ್ದರು. ತಾವು ಗೆದ್ದ ರಾಜನನ್ನು ಹೊಸ ಹೊಸ ಮರ್ಯಾದೆಗಳಿಂದ, ರಂಜನೀಯವಾದ ಬಿರುದಾವಳಿಗಳಿಂದ, ಬೆಲೆಯುಳ್ಳ ಕಾಣಿಕೆಗಳಿಂದ ಮುಚ್ಚಿಬಿಡುತ್ತಿದ್ದರು. ಗೆದ್ದೆವೆಂದು ಆ ರಾಜ್ಯವನ್ನೆಂದೂ ಆಕ್ರಮಿಸಿದವರಲ್ಲ. ಪ್ರತಿಯಾಗಿ ಆ ರಾಜ್ಯದ ವ್ಯಾಪಾರದ ಗುತ್ತಿಗೆ ಮತ್ತು ಸಲಹಾಮಂತ್ರಿಯಾಗಿ ತಮ್ಮಲ್ಲಿಯ ಒಬ್ಬ ವರ್ತಕನನ್ನು ನಿಯಮಿಸಿ ಗೊತ್ತಾಗದ ಹಾಗೆ ಸುಲಿಯುತ್ತಿದ್ದರು. ಇದು ಆ ರಾಜ್ಯದ ಜನತೆಗೂ ತಿಳಿಯುತ್ತಿತ್ತು; ತಡವಾಗಿ; ಅಂದರೆ ಎಲ್ಲ ಕಳೆದುಕೊಂಡು ನಿರ್ವೀರ್ಯರಾದ ಮೇಲೆ!

ಒಂದು ಕಾಲಕ್ಕೆ ವರ್ತಕರು ಚಿನ್ನದ ಅಭಾವದಿಂದ ಕಂಗಾಲಾದರೂ ಆಮೇಲೆ ತಮ್ಮಲ್ಲಿದ್ದ ಶ್ರೀಮಂತಿಕೆಯನ್ನು ರಾಜ್ಯಕ್ಕಾಗಿ ಬಳಸಿ ಶೂರರ ಸೈನ್ಯಕಟ್ಟಿ ಜಾಣತನದಿಂದ ನಿಭಾಯಿಸಿದರು; ಜೊತೆಗೆ ಆರ್ಥಿಕತೆಯನ್ನು ಕೂಡ. ಈ ಮಧ್ಯೆ ಶೂರರೂ ಕೆಲವರು ಹೇಡಿಗಳೂ ಆದ ರಾಜರನ್ನು ಮುಂದಿಟ್ಟುಕೊಂಡು ಬೇಕಾದಷ್ಟು ಯುದ್ಧಗಳನ್ನು ಮಾಡಿ ಗೆದ್ದರೂ ಸೋತರೂ ಕನಕಪುರಿಯ ಸಿಂಹಾಸನ ಇನ್ನೊಬ್ಬರ ಪಾಲಾಗದಂತೆ ನೋಡಿಕೊಂಡಿದ್ದು ಸಣ್ಣ ಸಾಧನೆಯಲ್ಲ. ಅದೂ ಹತ್ತರೊಂದಿಗೆ ಹನ್ನೊಂದನೇ ದೇಶವಾಗಿ ಅಲ್ಲ. ಕನಕಪುರಿ ಸಮೃದ್ಧ ದೇಶವೆಂದು, ಶ್ರೀಮಂತ ದೇಶವೆಂದು ಐವತ್ತೈದು ದೇಶಗಳ ಜನ ನೆನಪಿಟ್ಟುಕೊಳ್ಳುವಂತೆ ನಿಭಾಯಿಸಿದ್ದರು. ಕನಕಪುರಿಯ ಒಂದು ಹಣಕ್ಕೆ ಮಾಳವ ದೇಶದ ಐವತ್ತು ಹಣ, ತಿಗುಳರ ಮೂವತ್ತು ಹಣ ಸಮ!- ಹೀಗೆ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಬೆಲೆಯಿರೋದು ಯಾಕೆ?” ಇದು ಕನಕಪುರಿಯ ಹಿರಿಮೆ! ಈಗಿನ ದೊರೆ ಗುಣಾಧಿಕ್ಯ ವಿಷಪ್ರಾಶನ ಕಾರಣವಾಗಿ ಜಡ್ಡಾಗಿ ಬಿದ್ದು ರಾಜ್ಯ ಈ ಸ್ಥಿತಿಗೆ ಬಂದಿತ್ತು. ರಾಜನ ಜಡ್ಡು ಕಾರಣವಾಗಿ ಯುದ್ಧವಿರಲಿಲ್ಲ. ಒಂದು ಉತ್ಸವವಿರಲಿಲ್ಲ. ವ್ಯವಹಾರದಲ್ಲಿ ಒಂದು ಚುರುಕಿರಲಿಲ್ಲ. ದುಡಿಮೆಗಾರರು, ವರ್ತಕರು ಸೈನಿಕರು ಎಲ್ಲರೂ ಕೈ ಖಾಲಿ ಮಾಡಿಕೊಂಡು ಆಕಳಿಸುತ್ತ ಕೂತಿದ್ದರು. ಶಿಖರಸೂರ್ಯನ ಪ್ರವೇಶವಾದದ್ದು ಈ ಸಂಧರ್ಭದಲ್ಲಿ.