ಇತಿಹಾಸದಲ್ಲಿ ಪ್ರಥಮ ಹೆಜ್ಜೆ ಇಟ್ಟ ಶಿಖರಸೂರ್ಯನಿಗೆ ಸುಸ್ವಾಗತ!

ಇಂತು ಶಿಖರಸೂರ್ಯ ಕನಕಪುರಿಗೆ ಬಂದು ರಾಜನನ್ನೇ ಪ್ರಥಮ ರೋಗಿಯನ್ನಾಗಿ ಪಡೆದು ತನ್ನ ವೈದ್ಯಗಾರಿಕೆಯನ್ನು ಸುರು ಮಾಡಿದ. ಒಂದು ವರ್ಷದಿಂದ ನರಳುತ್ತ ಬಿದ್ದಿದ್ದ ರಾಜ ಒಂದೇ ವಾರದಲ್ಲಿ, ಆಶ್ಚರ್ಯಕರ ರೀತಿಯಲ್ಲಿ ಗುಣ ಹೊಂದಿದ್ದು ಮಾತ್ರವಲ್ಲದೆ ಒಬ್ಬನೇ ಯಾರ ನೆರವಿಲ್ಲದೆ ಅರಮನೆ ಮತ್ತು ಉದ್ಯಾನದಲ್ಲಿ ಅಲೆದಾಡತೊಡಗಿದ್ದು ಶಿಖರಸೂರ್ಯನ ಪ್ರಥಮ ಗೆಲುವಾಯಿತು. ಆಳು ಕಾಳು ದೊಡ್ಡ ಮನೆಯನ್ನು ವಾಸಕ್ಕೆ ಪಡೆದ.

ನದೀ ತೀರದ ಎತ್ತರವಾದ ಕಲ್ಲಿನ ಮನೆ ತುಂಬ ಸುಂದರವಾಗಿತ್ತು. ಚಿತ್ತಾರ ಕೆತ್ತಿದ ತೊಲೆಬಾಗಿಲು ತೆಗೆಯುವುದಕ್ಕೆ ಎರಡೂ ಕೈ ಬಲ ಉಪಯೋಗಿಸಬೇಕಿತ್ತು. ಆರಡಿ ಅಗಲದ ಗೋಡೆಗಳಲ್ಲಿ ಗಾಳಿ ಬೆಳಕುಗಳಿಗಾಗಿ ಕೋಣೆಗೆ ಎರಡೆರಡು ಕಿಡಿಕಿಗಳಿದ್ದವು. ಕೆಳಗಿನ ಮನೆಯಲ್ಲಿ ಅಡಿಗೆ ಮನೆ, ದೇವರ ಕೋಣೆ, ರೋಗಿಗಳು ಕಾಯುವುದಕ್ಕೆ – ಆಳುಗಳಿಗೆ – ಹೀಗೆ ಬೇಕಾದಷ್ಟು ಭಾಗಗಳಿದ್ದವು. ಅಟ್ಟದ ಮೇಲೆ ಮಾತ್ರ ವಿಶಾಲವಾದ ಒಂದು ಪಡುಕೋಣೆಯಿದ್ದು ಅದರಲ್ಲಿ ದೊಡ್ಡ ಕನ್ನಡಿ ಮತ್ತು ಶೃಂಗಾರ ಸಾಧನಗಳಿದ್ದವು. ಇಡೀಮನೆ ಶ್ರೀಮಂತಿಕೆ ಮತ್ತು ಹಳೆ ಮನೆಯ ಗಾಂಭೀರ್ಯಗಳು ಮನದಟ್ಟಾಗುವಂಥ, ದೊಡ್ಡವರು ವಾಸಿಸುವಂಥ ಮನೆ ಎಂದು ಗೊತ್ತಾಗುವಂತಿತ್ತು.

ಮನೆ ಸುತ್ತಲೂ ತರುಮರಗಳಿದ್ದು, ಸದಾ ಹಸಿರಾಗಿ ಒಂದಿಲ್ಲೊಂದು ಜಾತಿಯ ಮರಗಳಲ್ಲಿ ಒಂದಿಲ್ಲೊಂದು ಪರಿಮಳದ ಹೂಗಳಿರುವಂತೆ ನೋಡಿಕೊಳ್ಳಲಾಗಿತ್ತು. ಅಟ್ಟದ ಕಿಡಿಕಿಗಳಿಂದ ಹೊರಗೆ ನೋಡಿದಾಗಲೂ ಅಷ್ಟೆ; ಒಂದೊಂದು ಕಡೆಯಲ್ಲಿ ಒಂದೊಂದು ಬಗೆಯ ನಿಸರ್ಗದ ದೃಶ್ಯಾವಳಿ ಕಣ್ಣಿಗೆ ಬೀಳುವಂತೆ ವ್ಯವಸ್ಥೆ ಮಾಡಲಾಗಿತ್ತು. ಒಂದೇ ಕೊರತೆಯೆಂದರೆ ಮನೆಯ ಹಿತ್ತಲಲ್ಲಿ ವೈದ್ಯನಿಗೆ ತುರ್ತಾಗಿ ಬೇಕಾಗುವ ನಾರುಬೇರು ಮೂಲಿಕೆಗಳನ್ನು ಬೆಳೆಸಿರಲಿಲ್ಲ. ಅವನು ಬೆಳೆಸುವ ವ್ಯವಸ್ಥೆಯನ್ನು ಶಿಖರಸೂರ್ಯ ಕೂಡಲೇ ಮಾಡಿದ. ಗೃಹಪ್ರವೇಶ ಮಾಡಿ ಅಟ್ಟದ ಮೇಲಿಂದ ಬಡಗು ದಿಕ್ಕಿನಲ್ಲಿಯ ಗಂಧರ್ವರ ಮನೋಹರ ತೋಟದಂಥ ಉದ್ಯಾನ ನೋಡುತ್ತಿದ್ದಾಗ ಅರ್ಥಕೌಶಲನ ಆಳು ಬಂದು ಪ್ರಧಾನಿಯ ಮನೆಗೆ ಸಂಜೆಯ ಊಟಕ್ಕೆ ಬರಲು ಆಮಂತ್ರಣವಿದ್ದುದನ್ನು ಹೇಳಿ ಹೋದ.

ಶಿಖರಸೂರ್ಯ ವೈದ್ಯನಾದಾಗ ಅವನ ವೃತ್ತಿ ಪ್ರತಿಭೆಯನ್ನು ಕನಕಪುರಿಯ ವರ್ತಕ ಸಮಾಜವಾಗಲಿ, ಅರಮನೆಯ ಪರಿವಾರ, ಪ್ರಜೆಗಳಾಗಲಿ ಯಾರೂ ಪ್ರಶ್ನಿಸಲಿಲ್ಲ. ವರ್ಷಗಳಿಂದ ಮಲಗಿದ್ದ ಮಹಾರಾಜ ಒಂದೇ ದಿನದಲ್ಲಿ ಎದು ಅಡ್ಡಾಡುವಂತೆ ಮಾಡಿದ್ದು ವೃತ್ತಿ ಪವಾಡವೆಂದೇ ಎಲ್ಲರ ಒಮ್ಮತದ ಅಭಿಪ್ರಾಯವಾಗಿತ್ತು. ಅವನು ಹಿಮಾಲಯದಲ್ಲಿ ತಪಸ್ಸು ಮಾಡಿ ವಿದ್ಯೆ ಕಲಿತವನೆಂದು, ಅಶ್ವಿನಿ ಕುಮಾರರನ್ನು ಒಲಿಸಿಕೊಂಡವನೆಂದು ಸಾಮಾನ್ಯರಲ್ಲಿ ಕತೆಗಳು ಹುಟ್ಟಿಕೊಂಡವು.

ಮಹಾರಾಜ ಗುಣಾಧಿಕ್ಯನಂತೂ ಶಿಖರಸೂರ್ಯನನ್ನು ಒಂದು ದಿನ ನೋಡದಿದ್ದರೂ ಚಡಪಡಿಸುತ್ತಿದ್ದ. ಒಬ್ಬರ ಮೇಲೊಬ್ಬರು ಸೇವಕರನ್ನು “ವೈದ್ಯನನ್ನು ಕರೆದು ತಾ” ಎಂದು ಕಳಿಸುತ್ತಿದ್ದ. ಹೋದ ಸೇವಕ ಬರುವತನಕ ಕಾಯದೆ ಮತ್ತೊಬ್ಬನನ್ನು ಅಟ್ಟುತ್ತಿದ್ದ. ಆದರೆ ಅವನ ಅಗಲವಾದ ಹಣೆ, ಆಳದಲ್ಲಿ ಹೊಳೆಯುವ ನೀಲಿ ಕಣ್ಣು, ಕುಡುಗೋಲಿನಂತೆ ಬಾಗಿದ ಮೂಗು, ತುಸು ಮುಂಚಾಚಿ ಮುಖವನ್ನು ಇನ್ನಷ್ಟು ಅಗಲವಾಗಿಸಿದ ಕೆನ್ನೆಗಳು, ಅವುಗಳಂಚಿಗಿರುವ ದೊಡ್ಡ ಕಿವಿಗಳಲ್ಲಿ ಬೆಳೆದ ಪೊದೆಗೂದಲು – ಇಂಥ ಲಕ್ಷಣಗಳಿಂದಾಗಿ ಅವನನ್ನು ಕಂಡು ಭಯವೂ ಆಗುತ್ತಿತ್ತು. ಈತ ತನ್ನ ವೈದ್ಯದಿಂದ ನನಗೆ ವಿಪತ್ತನ್ನೂ ತರಬಹುದೆಂದು ಅನುಮಾನ ಪಡುತ್ತಿದ್ದ. ಅನುಮಾನ ಪಡುವುದು ತನ್ನ ವಂಶಬುದ್ದಿಯ ದೌರ್ಬಲ್ಯವೆಂದು ಕೂಡಲೇ ಧೈರ್ಯ ತಂದುಕೊಳ್ಳುತ್ತಲೂ ಇದ್ದ. ಇಷ್ಟಂತೂ ನಿಜ- ಶಿಖರಸೂರ್ಯ ಅರಮನೆ ಪ್ರವೇಶ ಮಾಡಿದಾಗಿನಿಂದ ಹೋಗುವತನಕ ಅವನನ್ನು ಸೂಕ್ಷ್ಮವಾಗಿ ವೀಕ್ಷಿಸಲೆಂದೇ ಒಂದು ಕಣ್ಣು ಮೀಸಲಾಗಿಡುತ್ತಿದ್ದ.

ಮಹಾರಾಣಿಗೆ ಶಿಖರಸೂರ್ಯನ ಬಗ್ಗೆ ಆತಂಕವಿದ್ದರೂ ತೋರಿಸಿಕೊಂಡಿರಲಿಲ್ಲ. ಮಾತಿನವನಲ್ಲ. ಆದರೂ ಮಹತ್ವಾಕಾಂಕ್ಷಿಯೆಂದು ಖಚಿತವಾಗಿತ್ತು. ಆದರೆ ಇವನ ಬಲಾಬಲಗಳ ಬಗ್ಗೆ ಸಾಧ್ಯಾಸಾಧ್ಯತೆಗಳ ಬಗ್ಗೆ, ಮನಸ್ಸಿನ ಒಳಗುಟ್ಟುಗಳ ಬಗ್ಗೆ ಅಂದಾಜಾಗಿರಲಿಲ್ಲ. ಇವನ ವರ್ಮಸ್ಥಳವನ್ನರಿಯಲು ಯಾವುದಾದರೂ ಕಳ್ಳ ದಾರಿ ಇವೆಯೇ ಎಂದು ಹುಡುಕಲು ಅರ್ಥಕೌಶಲನಿಗೇ ಹೇಳಿ ಬಿಟ್ಟಿದ್ದಳು.

ಅರ್ಥಕೌಶಲ ಮಾತ್ರ ಶಿಖರಸೂರ್ಯನ ಬಗ್ಗೆ ಬಾರೀ ಖುಶಿಯಿಂದಿದ್ದ. ಅವನೇ ಪ್ರಧಾನಿಯಾದ್ದರಿಂದ ಅವನ ಸಂತೋಷಕ್ಕೆ ಒಂದು ಮಹತ್ವವೂ ಇತ್ತು. ಶಿಖರಸೂರ್ಯನ ಪ್ರತಿಭೆಯನ್ನ ತಾನೇ ಶೋಧಿಸಿ ಗುರುತಿಸದವನೆಂಬ, ತಾನೇ ಅವನನ್ನು ಮಹಾರಾಜನಲ್ಲಿಗೆ ಕರೆದೊಯ್ದವನೆಂಬ ಸಂಗತಿಗಳನ್ನು ಅರಮನೆಯ ಒಳಗೂ ಹೊರಗೂ ಸಾರಿ ಸಾರಿ ಹೇಳುತ್ತಿದ್ದ. ತನ್ನನ್ನು ಹುಡುಕಿಕೊಂಡು ಶಿಖರಸೂರ್ಯ ಹ್ಯಾಗೆ ಬಂದನೆಂದು, ಹ್ಯಾಗೆ ಇವನು ಸ್ವಾಗತಿಸಿದನೆಂದು, ಹ್ಯಾಗೆ ಇವನನ್ನು ಪರೀಕ್ಷಿಸಿದನೆಂದು – ಇಂಥದೇ ಸಣ್ಣ ಪುಟ್ಟ ವಿವರಗಳನ್ನು ಕತೆ ಮಾಡಿ ಹೇಳುತ್ತಿದ್ದ ಮತ್ತು ಬೇರೆಯವರು ಅವನ ಬಗ್ಗೆ ಕತೆ ಹೇಳುವಾಗ ತಾನೂ ಅದರಲ್ಲಿ ಒಂದು ಪಾತ್ರವಾಗಿ ಸೇರುವಂತೆ ವ್ಯವಸ್ಥೆ ಮಾಡಿಕೊಂಡಿದ್ದ. ಆದರೆ ಅರ್ಥಕೌಶಲನಿಗೂ ದಿಗಿಲಿತ್ತು. ಕಂಡವರ ಮೇಲೆ ಕಣ್ಣಿಂದಲೇ ಹುಕುಂ ಚಲಾಯಿಸುವ ಧಿಮಾಕಿನ, ರಾಜ ಕಳೆದುಕೊಂಡ ಸಾಮ್ರಾಟನ ನಿಲುವಿನ ಶಿಖರಸೂರ್ಯನನ್ನು ಕಂಡಾಗೆಲ್ಲ ಒಳಗೊಳಗೇ ಭೀತನಾಗುತ್ತಿದ್ದ. ಇವನ ಒಳಗುಟ್ಟನ್ನು ತಿಳಿಯಲು ತನ್ನಿಬ್ಬರು ಬೇಹುಗಾರರನ್ನು ಇವನಲ್ಲಿ ವೈದ್ಯವಿದ್ಯೆ ಕಲಿವ ಶಿಷ್ಯರಾಗಿ ನೇಮಿಸಿ ಕಾಯತೊಡಗಿದ್ದ. ಶಿಖರಸೂರ್ಯನಲ್ಲಿ ಮಾತ್ರ-ರಾಜರು ದೇವರು ಸೈನಿಕರು-ಇವರಲ್ಲಿ ಯಾರಿಗಾದರೂ ಹೆದರುವುದೂ ಬಿಡುವುದೂ ನಿಮ್ಮಿಷ್ಟ; ನನಗಂತೂ ಹೆದರಲೇಬೇಕೆಂದು ತಾಕೀತು ಮಾಡುವಂಥ ಚಹರೆಯಿತ್ತು!