ಊಟಕ್ಕೆ  ಕರೆ ಬಂದಾಗ ಹೊತ್ತು ಇಳಿಮುಖವಾಗಿತ್ತು. ಬಂದು ನೋಡಿದರೆ ಮನೆಯವರೆಲ್ಲ ಅತಿಥಿಗೆ ವಿಶೇಷ ಗೌರವ ತೋರಿಸುತ್ತಿದ್ದಾರೆ! ಎಲ್ಲರ ಮುಖದಲ್ಲಿ ಮುಗುಳುನಗೆಯಿದೆ. ಊಟದಲ್ಲಿ ಎರಡು ಪದಾರ್ಥಗಳು ಮೂರು ಚಟ್ನಿಯಲ್ಲದೆ ಬಿಳಿ ಅನ್ನ, ಸೊಪ್ಪಿನ ಸಾರು ಜೊತೆಗೊಂದು ಸಿಹಿ ಇದ್ದುದರಿಂದ ಸೇವಕರಿಗೆ ಶಿಖರಸೂರ್ಯನ ಬಗ್ಗೆ ವಿಶೇಷ ಗೌರವ ಭಾವನೆ ಮೂಡಿತು. ಯಾಕೆಂದರೆ ಅರ್ಥಕೌಶಲನ ಜಿಪುಣತನ ಇಡೀ ಕನಕಪುರಿಗೇ ಪರಿಚಿತವಾದದ್ದು. ನಾಲ್ಕು ರೊಟ್ಟಿ ತಿಂದ ನಾಯಿ ಮೂರೇ ಸಲ ಬೊಗಳಿದರೆ ಅನ್ಯಾಯವಾಯಿತೆಂದುಕೊಳ್ಳುವ ಅರ್ಥಕೌಶಲ ಇಷ್ಟು ಉದಾರನಾಗಿ, ಇಂಥಾ ರಾಜಭೋಜನ ಹಾಕಬೇಕಾದರೆ ಬಂದ ಅತಿಥಿ ರಾಜವಂಶದವನೇ ಇರಬೇಕೆಂದು ತರ್ಕ ಮಾಡಿದರು ಸೇವಕರೆಲ್ಲ! ಎಷ್ಟೋ ವರ್ಷಗಳಾದ ಮೇಲೆ ಇಂಥಾ ರುಚಿಕರ ಭೋಜನ ಸಿಕ್ಕುದರಿಂದ ಆನಂದಿತನಾದ ಶಿಖರಸೂರ್ಯ ಮೈಚಳಿ ಬಿಟ್ಟು ತಿನ್ನಬೇಕೆಂದು ಕೈ ಹಾಕಿದರೆ ಮನೆಯಲ್ಲಿದ್ದವರೆಲ್ಲ ಇವನು ತಿನ್ನುವುದನ್ನೇ ನೋಡುತ್ತಿರುವುದರ ಅರಿವಾಗಿ ಹುಷಾರಾದ.  ಅಡಿಗ ಪರವಾಯಿಲ್ಲವೆಂಬಂತೆ ಮುಖ ಮಾಡಿ, ಮಾಡಿದವರಿಗಾದರೂ ಗೌರವ ಕೊಡಲು ತಿನ್ನಬೇಕಲ್ಲಾ ಎಂಬಂತೆ ಉಂಡ. ಅರ್ಥಕೌಶಲ ಮಾತ್ರ ಅಗುಳಗಳು ಅಗಿದು ಹನಿ ಹನಿ ನಂಜಿಕೊಂಡು ಸುಖಿಸುತ್ತ ಅಂಗೈ ಸಮೇತ ಐದೂ ಬೆರಳು ನೆಕ್ಕಿ ಖಾಲಿ ಎಲೆ ಮಾತ್ರ ಉಳಿಸಿ ಅದರಲ್ಲಿ ಕೈ ಊರಿ,

“ಇವತ್ತು ಸಂಜೆಗೆ ರಾಜರ ಸನ್ನಿಧಿಗೆ ಹೋಗುವಾ” ಅಂದ.

“ಆಗದಾಗದು, ಸಂಜೆ ಸಮಯ ನಾನು ರೋಗಿಗಳನ್ನು ನೋಡುವುದಿಲ್ಲ. ಬೆಳಿಗ್ಗೆ ಆದೀತು. ನಾನು ನೋಡುವತನಕ ಮಹಾರಾಜರು ಬರಿ ಹೊಟ್ಟೆಯಲ್ಲಿರುವುದು ಅಗತ್ಯ.”

-ಅಂದ. ಅರ್ಥಕೌಶಲನಿಗೆ ಅರ್ಥವಾಯಿತು. ಬೆಳಿಗ್ಗೆ ವೈದ್ಯರು ಬರುತ್ತಾರೆಂದು ಅರಮನೆಗೆ ಸುದ್ದಿ ಕಳಿಸಿ, ಅತಿಥಿಯನ್ನೇ ನೋಡುತ್ತ ನಿಂತಿದ್ದ ಅರ್ಧಾಂಗಿಗೆ ಕಣ್ಣುಕಿಸಿದು ಒಳಕ್ಕೆ ಕಳಿಸಿ ಕೈ ತೊಳೆಯಲೆದ್ದ.

ಬೆಳಿಗ್ಗೆ ಕೋಳಿ ಕೂಗಿ ಅಂಗಳ ಗುಡಿಸುವ ಹೊತ್ತಿಗೆ ಇಬ್ಬರೂ ಅರಮನೆಗೆ ಹೊರಡುವ ಮುನ್ನ ಅರ್ಥಕೌಶಲ,

“ಕವಿರಾಜ ಶಿವಾಪುರದವರೆನೊ?”

-ಎಂದು ಕೇಳಿದ. ಶಿಖರಸೂರ್ಯ ತಕ್ಷಣ ಎಚ್ಚತ್ತು “ಅಲ್ಲ” ಅಂದ.

“ಹಾಗಿದ್ದರೆ ಮಹಾರಾಜರು ನಿನ್ನದು ಯಾವೂರಾಯ್ತು? ಅಂತ ಕೇಳೇ ಕೇಳ್ತಾರೆ. ಆವಾಗ ನೀನು ಶಿವಾಪುರದವನೆಂದು ಹೇಳಬೇಕು. ಅಂದರೇನೆ ನಿನ್ನ ವೈದ್ಯವನ್ನು ಅವರು ಒಪ್ಪಿಕೊಳ್ಳೋದು. ಇಲ್ಲದಿದ್ದರೆ ನಾವು ಅಲ್ಲಿಗೆ ಹೋಗಿಯೂ ಪ್ರಯೋಜನವಿಲ್ಲ.”

ಎಂದು ಸ್ಪಷ್ಟವಾಗಿ ಹೇಳಿಬಿಟ್ಟ. ಸನ್ನಿವೇಶ ಅರ್ಥವಾಗದೆ ಶಿಖರಸೂರ್ಯ ತಬ್ಬಿಬ್ಬಾದ. ‘ಶಿವಾಪುರದಲ್ಲಿ ತಾನು ಮಾಡಿದ ಆಕಾರ್ಯದ ಬಗ್ಗೆ ಇವನಿಗೆ ತಿಳಿದಿದೆಯೊ? ಶಿವಪಾದನ ಬಳಕೆ ಇಲ್ಲಿಯೂ ಇದೆಯೊ?’ …ಎಂಬಿತ್ಯಾದಿ ಒಂದೇ ಕ್ಷಣದಲ್ಲಿ ಹಲ ಬಗೆ ಯೋಚಿಸಿ,

“ತಾವು ಹ್ಯಾಗೆ ಹೇಳಿದರೆ ಹಾಗೆ” ಅಂದುಬಿಟ್ಟ.

“ಶಿವಾಪುರದವನು ಅಂತ ಹೇಳು. ಮುಂದಿನದನ್ನು ನೋಡಿಕೊಳ್ಳುವಾ.”

ಎಂದು ಸಹಜವಾಗಿ ಎಂಬಂತೆ ಹೇಳಿಕೊಟ್ಟು ನೀನು ವೈದ್ಯನಾದುದು ನನ್ನ ದಯದಿಂದ ಎಂಬುದು ನೆನಪಿರಲಿ ಎಂಬಂತೆ ನೋಡಿ ಮುಂದೆ ನಡೆದ. ಹಿಂದಿನಿಂದ ಕವಿರಾಜನೂ ಹೆಜ್ಜೆ ಹಾಕಿದ.

ದಾರಿಯುದ್ದಕ್ಕೂ ಭೇಟಿಯಾದ ಜನ ಅರ್ಥಕೌಶಲನಿಗೆ ಕೈಮುಗಿದು ಗೌರವ ತೋರಿಸುತ್ತಿದ್ದರು. ಅಂಗಳ ಗುಡಿಸುವವರು, ರಂಗೋಲಿ ಗೆರೆ ಎಳೆಯುವವರು ಇವರಿಬ್ಬರೂ ದಾಟುವತನಕ ಬದಿಗೆ ನಿಂತು ಮರ್ಯಾದೆ ತೋರಿಸಿದರು. ದೂರದ ಅನೇಕರು ಈತ ಮಾತಾಡಿಸದಿದ್ದರೂ ಅವರಾಗಿ ಓಡಿಬಂದು ನಮಸ್ಕರಿಸಿ ಹೋದರು. ಇದೆಲ್ಲ ಶಿಖರಸೂರ್ಯ ನಿರೀಕ್ಷಿದಂತೆಯೇ ಇತ್ತು. ಆದರೆ ಅರಮನೆ ಮಾತ್ರ ಇವನ ಕಲ್ಪನೆಯನ್ನು ಮೀರಿ ಭಿಕೋ ಎನ್ನುತ್ತಿತ್ತು. ವೈರಿ ರಾಜರು ಈಗಷ್ಟೆ ಲೂಟಿ ಮಾಡಿಕೊಂಡು ಹೋದ ಅರಮನೆಯ ಹಾಗೆ ಹಾಳು ಸುರಿಯುತ್ತಿತ್ತು. ಸುಮಾರು ಎರಡು ಎಕರೆಯಷ್ಟಿದ್ದ ರಾಜಾಂಗಳವನ್ನು ಇಬ್ಬರೇ ಆಳುಗಳು ಗುಡಿಸುತ್ತಿದ್ದರೆಂದರೆ ಅರಮನೆಯ ಸ್ಥಿತಿಯನ್ನು ವಾಚಕರೇ ಊಹಿಸಿಕೊಳ್ಳಬೇಕು.

ದೂರದಲ್ಲಿ ಇವರಿಗಾಗಿ ಕಾಯುತ್ತಿದ್ದ ಸೇವಕನೊಬ್ಬ ಓಡಿಬಂದು ಮಹಾರಾಜರ ಸಮಯ ಹೇಳಿ ಇವರನ್ನು ಕರೆದುಕೊಂಡು ಮುಂದೆ ಮುಂದೆ ಹೊರಟ. ಇವರು ನೇರ ರಾಜನಿದ್ದಲ್ಲಿಗೇ ಹೋದರು. ಮಹಾರಾಜ ‘ನಿದ್ದೆಮಾಡಿ ದಣಿದವರಂತೆ’ ಹಾಸಿಗೆಯ ಮೇಲೆ ದಿಂಬಿಗೆ ಒರಗಿದ್ದ. ಅರ್ಥಕೌಶಲ ಪರಿಚಯ ಮಾಡಿಕೊಡುತ್ತಿರುವಾಗಲೇ ಶಿಖರಸೂರ್ಯ ರಾಜನ ಕೈನಾಡಿಯ ಮೇಲೆ ಬೆರಳಿಟ್ಟಿದ್ದ. ಶಿಖರಸೂರ್ಯ ಅರ್ಧ ಗಳಿಗೆ ರಾಜನ ರೋಗದ ಲಕ್ಷಣಗಳನ್ನು ಸ್ಪಷ್ಟವಾದ ಮಾತುಗಳಲ್ಲಿ ಅವರು ಹೇಳುವ ಮೊದಲೇ ವರ್ಣಿಸಿದ. ಅವನು ತನ್ನ ರೋಗವನ್ನು ಗ್ರಹಿಸಿದ ರೀತಿ ಮತ್ತು ವಿವರಿಸಿದ ಪರಿಗೆ ರಾಜ ಮೆಚ್ಚುಗೆಯ ಮುಗುಳುನಗೆ ಬೀರಿ ಅರ್ಥಕೌಶಲನ ಕಡೆಗೆ ನೋಡಿದ. ಅವನು ಧನ್ಯನಾದಂತೆ ಹಿಂಡಿದ ತುಟಿಗಳನ್ನು ಹಿಗ್ಗಿಸಿ ಮುಖದ ತುಂಬ ನಗು ಉಕ್ಕಿಸಿದ. ಆಶ್ಚರ್ಯವೆಂದರೆ ಅರ್ಥಕೌಶಲ ಮೊದಲೇ ಹೇಳಿದ್ದಂತೆ ಕವಿರಾಜನನ್ನು “ನಿನ್ನದು ಯಾವೂರಾಯ್ತು?” ಎಂದು ಮಹಾರಾಜ ಕೇಳಿಯೇಬಿಟ್ಟ! ಆದರೆ ಪ್ರಶ್ನೆಯನ್ನ ಮೆಚ್ಚುಗೆಯಿಂದ, ತಾನು ಕಾಯುತ್ತಿದ್ದ ಶಿವಾಪುರದ ವೈದ್ಯ ಇವನೇ ಎಂಬ ವಿಶ್ವಾಸದಿಂದ ಕೇಳಿದ್ದ. ಶಿಖರಸೂರ್ಯನಿಂದ ನಿರೀಕ್ಷಿತ ಉತ್ತರ ಬಂದಾಗ ರಾಜ, ಪ್ರಧಾನಿ ಇಬ್ಬರೂ ಸಮಾಧಾನಕರ ನಿಟ್ಟುಸಿರು ಬಿಟ್ಟರು. ಈಗ ವಿಶ್ವಾಸ ತುಂಬಿ ರಾಜಶೀರ್ಣ ದನಿಯಲ್ಲಿ ಹೇಳಿದ:

“ನೋಡಯ್ಯಾ ನೀನು ನನ್ನ ನಾಡಿ ನೋಡುತ್ತಿರುವ ನೂರನೆಯ ವೈದ್ಯ. ಬದುಕಿನಲ್ಲಿ ನಂಬಿಕೆ ಕಳೆದುಕೊಂಡಿದ್ದವನು ಅರ್ಥಕೌಶಲನ ಒತ್ತಾಯಕ್ಕೆ ಬಾಗಿ ನಿನ್ನ ಕೈಯಲ್ಲಿ ಜೀವ ಇಟ್ಟಿದ್ದೇನೆ. ನನಗೆ ಭರವಸೆ ಬೇಡ. ಶೀಘ್ರ ಪರಿಣಾಮ ಬೇಕು. ಒಂದೇ ದಿನದಲ್ಲಿ ಪರಿಣಾಮ ತೋರಿಸಬಲ್ಲೆಯಾ?”

“ಆಯ್ತು ಪ್ರಭು. ನಾಳೆ ಬೆಳಿಗ್ಗೆ ನಾವಿಬ್ಬರೂ ಉದ್ಯಾನದಲ್ಲಿ ವಾಯುವಿಹಾರಕ್ಕೆ ಹೋಗುವಾ. ಆಗಬಹುದಲ್ಲ?”

ಮುದಿರಾಜನಿಗೆ ಯೌವನ ಪ್ರಾಪ್ತಿಯಾದಷ್ಟು ಆನಂದವಾಗಿ, ಆದರೂ ನಂಬದೆ “ಆಯ್ತು” ಅಂದ. ತಕ್ಷಣ ಶಿಖರಸೂರ್ಯನೆದ್ದು ನಿಂತು,

“ನಾನು ಕಾಡಿಗೆ ಹೋಗಿ ಬರಬೇಕು. ನನ್ನೊಂದಿಗೆ ಯಾರನ್ನಾದರೂ ಕಳಿಸುತ್ತೀರಾ” ಅಂದ.

“ನಾನಿಲ್ಲವೆ? ಬಾ”

-ಎಂದು ಅರ್ಥಕೌಶಲ ಎದ್ದು ನಿಂತ, ಕೂಡಲೇ ಇಬ್ಬರಿಗೂ ಕುದುರೆಗಳ ವ್ಯವಸ್ಥೆಯಾಯಿತು. ಇಬ್ಬರೂ ಮಾಯವಾಗಿ ಒಂದು ತಾಸಿನಲ್ಲಿ ಮತ್ತೆ ಹಾಜರಾದರು. ಕಾಡಿನಿಂದ ತಂದ ಮೂಲಿಕೆಗಳಿಂದ ಮದ್ದರೆದು ಮಹಾರಾಜನಿಗೆ ಕೊಟ್ಟು ಸಂಜೆ ಪುನಃ ಬರುವುದಾಗಿ ಹೇಳಿ ಹೊರಟರು. ತನ್ನ ಅಂತಃಪುರದ ಬಾಗಿಲಲ್ಲಿ ನಿಂತು ಮಹಾರಾಣಿ ಶಿಖರಸೂರ್ಯನನ್ನು ಆಪಾದಮಸ್ತಕ ಗಮನಿಸುತ್ತಿದ್ದಳು.

ಮನುಷ್ಯಜೀವನದಲ್ಲಿ ಒಮ್ಮೊಮ್ಮೆ ವಿಚಿತ್ರ ಗಳಿಗೆಗಳು ಬರುತ್ತವೆ. ಅಂಥ ಗಳಿಗೆಗಳಲ್ಲಿ ಇದ್ದಕ್ಕಿದ್ದಂತೆ ಮನುಷ್ಯನಿಗೆ ಕೆಲವು ಬಾಗಿಲುಗಳು ಎದುರಾಗುತ್ತವೆ. ಯಾವುದೋ ಒಂದು ಬಾಗಿಲು ತೆರೆದರೆ ಸಾಮಾನ್ಯವಾಗಿ ಕಾಣಲಾರದ ಸೌಭಾಗ್ಯಗಳು, ನಿಧಿಗಳು, ನಾಳೆಗಳು, ಸುದೈವಗಳು, ಅವಕಾಶಗಳು ಕಾಣಿಸತೊಡಗುತ್ತವೆ. ಆದರೆ ಸರಿಯಾದ ಬಾಗಿಲನ್ನ ತೆರೆಯಬೇಕಷ್ಟೆ. ಇನ್ನು ಕೆಲವರಿಗೆ ಕೈ ಹಚ್ಚಿದ್ದೇ ಸರಿಯಾದ ಬಾಗಿಲಾಗಿರುತ್ತದೆ. ಎರಡರಲ್ಲಿ ಯಾವುದಾದರೂ ಸರಿಯೆ ಶಿಖರಸೂರ್ಯನಿಗೀಗ ಅಂಥ ಗಳಿಗೆ ಸಿಕ್ಕಿತು.

ಮೂರನೇ ದಿನ ಬೆಳಗಿನ ಸಮಯ ರಾಜ ಶಿಖರಸೂರ್ಯನೊಂದಿಗೆ ಉದ್ಯಾನದಲ್ಲಿ ನೂರು ಹೆಜ್ಜೆ ನಡೆದಾಡಿದ. ಅಂದಿನಿಂದಲೇ ಆತ ರಾಜವೈದ್ಯನಾದ!