ಚಂಡೀದಾಸ ತಾತ ಅರಮನೆಗ್ಯಾಕೆ ಬರಲಿಲ್ಲ?-ಎಂದು ಗೌರಿಗೆ ಬೇಸರವಾಯಿತು. ಅಥವಾ ಈಗ ಬರಬಹುದು. ಆದರೂ ಅವನು ಬರುವತನಕ ಕಾಯುವುದಾಗದೆ ದೇವಾಲಯಕ್ಕೆ ತಾನೇ ಓಡಿದಳು.

ದೇವಾಲಯದಲ್ಲಿ ಯಾರೂ ಇರಲಿಲ್ಲ. ಆದರೆ ಮುಂದುಗಡೆ ಒಂದು ಹೋರಿ ನಿಂತಿತ್ತು! ನೋಡಿದರೆ ತಾನು ಅನೇಕ ಸಲ ಕನಸಿನಲ್ಲಿ ಕಂಡ ಹೋರಿಯಂತಿದೆ! ಮತ್ತಷ್ಟು ನೋಡುತ್ತಿರುವಂತೆಯೇ ಆ ಹೋರಿಯೇ ಇವಳಿರುವಲ್ಲಿಗೆ ಬಂದು ನಿಂತುಕೊಂಡಿತು. ಕಳೆದು ಹೋದ ಪರಿಚಿತರನ್ನು ಕಂಡಂತೆ ಗೌರಿಗೆ ಹರ್ಷವಾಯಿತು. ಮೆಲ್ಲಗೆ ಅದರ ಸಮೀಪ ಹೋಗಿ ಮುಖದ ಮೇಲೆ ಕೈ ಇಟ್ಟಳು. ಅದು ಇನ್ನಷ್ಟು ಹತ್ತಿರಕ್ಕೆ ಮುಖ ಸರಿಸಿ ಅವಳ ಹಸ್ತಸ್ಪರ್ಶದ ಸುಖಕ್ಕೆ ಕಣ್ಣು ಮುಚ್ಚಿತು. ಗೌರಿ ರೋಮಾಂಚಿತಳಾಗಿ ಅದರ ಮುಖವನ್ನ ತಬ್ಬಿಕೊಂಡಳು. ಅದು ಪ್ರಾಣಿ, ಬಳಕೆಯಿಲ್ಲದವರನ್ನು ಇರಿಯಬಹುದೆಂಬ ಖಬರಿಲ್ಲದೆ ಮತ್ತೆ ಮತ್ತೆ ತಬ್ಬಿಕೊಂಡಳು. ಆಶ್ಚರ್ಯವೆಂದರೆ ಹೋರಿ ಸುಮ್ಮನೆ, ಆಕೆ ಹ್ಯಾಗೆ ತಬ್ಬಿದರೆ ಹಾಗೆ ಬಾಗುತ್ತ, ಹ್ಯಾಗೆ ಎಳೆದರೆ ಹಾಗೆ ಕತ್ತು ಚಾಚುತ್ತ, ಅವಳ ಪುಟ್ಟ ಕೈಗಳಿಗೆ ಮುಖ ನೀಡಿ ನಿಂತುಕೊಂಡಿತು. ಸುತ್ತ ನೋಡಿದಳು. ದೇವಾಲಯದಲ್ಲಿ ಯಾತ್ರಿಕರ ಸಾಮಾನು ಸರಂಜಾಮುಗಳ ಗಂಟುಗಳಿದ್ದವು. ಆದರೆ ಯಾರೂ ಇರಲಿಲ್ಲ. ಮಿಂದು ಬರಲು ಹೋಗಿರಬೇಕೆಂದು ಹೋರಿಯನ್ನು ಕರೆದುಕೊಂಡು ಅನತಿ ದೂರದ ಗೋಡೆಯ ಹಿಂಬದಿಯಲ್ಲಿ ಎತ್ತರದ ಹುಲ್ಲು ಬೆಳೆದಿರುವಲ್ಲಿಗೆ ಅದನ್ನು ಕರೆದೊಯ್ದಳು.

ಚಿಕ್ಕಮ್ಮಣ್ಣಿ ತಡಮಾಡಿ ಬಂದಾಗ ದೇವಾಲಯದ ಒಂದು ಮೂಲೆಯಲ್ಲಿ ಆರೇಳು ಜನ ಸೇರಿದ್ದರು. ಹೊರಭಾಗದಲ್ಲಿ ಚಂಡೀದಾಸ ನಿಂತು ಚಿಕ್ಕಮ್ಮಣ್ಣಿಯ ದಾರಿಯನ್ನೇ ಕಾಯುತ್ತಿದ್ದ. ಇವಳನ್ನು ಕಂಡುದೇ ಅವಸರದಿಂದ ಮುಂದೆ ಬಂದು ನಮಸ್ಕಾರ ಮಾಡಿದ. ಮೂಲೆಯಲ್ಲಿ ಪ್ರಭಾವಶಾಲಿಯಾಗಿದ್ದ ಒಬ್ಬ ಹುಡುಗ ಮಗುವಿನ ನಾಡಿ ನೋಡುತ್ತಿದ್ದ. ಅವನ ಕಡೆ ತೋರುಬೆರಳು ಮಾಡಿ ಅವನ್ಯಾರೆಂದು ಚಿಕ್ಕಮ್ಮಣ್ಣಿ ಕೇಳುವಷ್ಟರಲ್ಲಿ ಚಂಡೀದಾಸ ಮುಂದಾಗಿ “ಅವನೇ ತಾಯಿ ನಿನ್ನಡಿ! ಕರೆಯಲೆ?” ಎಂದು ಹೇಳಿ ಉತ್ತರಕ್ಕಾಗಿ ಕಾಯದೆ ಹೋಗಿಯೇಬಿಟ್ಟ. ಈತ ಹೋದಷ್ಟು ಅವಸರದಿಂದ ಆತ ಬರಲಿಲ್ಲ. ಕೈಸನ್ನೆ ಮಾಡಿ ಕಾಯಲಿಕ್ಕೆ ಹೇಳಿ ಸಮಾಧಾನದಿಂದಲೇ ನಾಡೀ ಪರೀಕ್ಷೆ ಮುಂದುವರಿಸಿದ. ಆಮೇಲೊಂದು ಬೇರು ಕೊಟ್ಟು ಮಗುವಿನ ತಂದೆಗೆ ಅದನ್ನುಪಯೋಗಿಸುವ ವಿಧಾನ ತಿಳಿಸಿ ಈ ಕಡೆ ಚಿಕ್ಕಮ್ಮಣ್ಣಿಯ ಬಳಿಗೆ ಬಾಯಿತುಂಬ ನಗುತ್ತ ಬಂದ. ಪ್ರಕಾಶಮಾನವಾದ ಅವನ ನೇತ್ರಗಳು ಅವನ ಮುಖಕ್ಕೆ ತೇಜಸ್ಸಿನ ಕಳೆ ಕೊಟ್ಟಿದ್ದವು. ಚಿಕ್ಕೆ ಬರೆದ ರುಮಾಲು ತೆಗೆದು ಮಿಂದು ಒದ್ದೆಯಾಗಿದ್ದ ಕೂದಲನ್ನು ಒರೆಸಿಕೊಂಡಾಗ ಬಂದ ವಾಸನೆಗೆ ಚಿಕ್ಕಮ್ಮಣ್ಣಿ ಸ್ವಲ್ಪ ಹಿಂದೆ ಸರಿದಳು. ತಕ್ಷಣ ಚಿಕ್ಕಂದಿನ ತನ್ನ ಮಕ್ಕಳ ದೇಹದ ವಾಸನೆ ನೆನಪಾಯಿತು. ಎರಡೂ ಕೈ ಜೋಡಿಸಿ “ಶರಣಬ್ಬೆ” ಅಂದ. ಅವನ ಎಡಗೈಯ ಕಿರುಬೆರಳಿಗೆ ಅಂಟಿಕೊಂಡು ನೇತಾಡುವಂತಿದ್ದ ಆರನೇ ಬೆರಳು ನೋಡಿ ಚಿಕ್ಕಮ್ಮಣ್ಣಿಯ ಮೈ ಝುಂ ಎಂದು ನವಿರೆದ್ದವು! ಮುಖ ನೋಡಿದರೆ ಹೆಚ್ಚು ಕಡಿಮೆ ಎಳೆಯ ಛಾಯಾದೇವಿಯಂತೇ ಇದ್ದಾನೆ! ಹುಬ್ಬು ಮತ್ತು ಮೂಗುಗಳಂತೂ ಛಾಯಾದೇವಿಯವೆ! ಮೂಕವಿಸ್ಮಿತಳಾಗಿ, ಕಣ್ಣಲ್ಲಿ ಆಶೆಯ ಸೊಡರು ಹಚ್ಚಿಕೊಂಡು ನಿಂತುಬಿಟ್ಟಳು! ಮಳೆ ಬಂದು ಉರಿಯುವ ಭೂಮಿ ತಣ್ಣಗಾಗುವಂತೆ ಅವಳ ಹೃದಯ ತಂಪಾಯಿತು. ಚಂಡೀದಾಸ ಮುಂದೆ ಬಂದು,

“ಇವನೇ ತಾಯಿ ನಿನ್ನಡಿ. ಕನ್ಯಾರ್ಥಿಯಾಗಿ ಬಂದವ.”

ಅಂದ. ಈಗ ಆ ತರುಣ ಚಿಕ್ಕಮ್ಮಣ್ಣಿಯ ಮುಂದೆ ಬಂದು ಇನ್ನೊಮ್ಮೆ ಕೈ ಮುಗಿದು ನಿಂತು,

“ಶರಣು ಅಬ್ಬೆ ಶರಣು.

ನಿನ್ನ ಮನೆಯಲ್ಲೊಂದು ಕನ್ನೆಗೂಸು ಇದೆ ಅಂತ ಅಣ್ಣಯ್ಯ ಹೇಳಿದ. ಕೇಳೋಣ ಅಂತ ಬಂದೆ. ಉಳಿದದ್ದನ್ನ ಅಣ್ಣಯ್ಯ ಹೇಳುತ್ತಾನೆ.”

ಚಿಕ್ಕಮ್ಮಣ್ಣಿಗೆ ಅವನ ಮಾತು ಪೂರ್ತಿ ಅರ್ಥವಾಗಲಿಲ್ಲ. ಪ್ರಶ್ನಾರ್ಥಕವಾಗಿ ಚಂಡೀದಾಸನ ಕಡೆಗೆ ನೋಡಿದಳು. ಚಂಡೀದಾಸ ಮುಂದ ಬಂದು,

“ತಾಯಿ ಇವನು ನಿನ್ನಡಿ, ಶಿವಾಪುರದ ಶಿವಪಾದನ ಶಿಷ್ಯ. ಗದ್ದೆಗೇಯ್ತಾನೆ. ವೈದ್ಯ ಮಾಡ್ತಾನೆ. ಅವನ ಮನೆಗೆ ತಕ್ಕ ಗೃಹಣಿಗಾಗಿ ಹುಡುಕುತ್ತ ಬಂದೆವು. ಮನೆ ಸಾಗಿಸೋದು ರಾಜ್ಯಭಾರ ಮಾಡೋದಕ್ಕಿಂತ ಕಠಿಣ. ಶಿವ ಮೆಚ್ಚಿ ಹೌದಂಬೋ ಹಾಗೆ ಮನಿತನ ನಡೆಸಬೇಕಾದರೆ ಅಂಥಾ ಕನ್ಯೆಯನ್ನು ಹ್ಯಾಂಗೆ ಆರಿಸೋದು? ಅದಕ್ಕೆ ಅವನಬ್ಬೆ ಒಂದು ನಿಯಮ ಹೇಳಿ ಕಳಿಸಿದಾಳೆ.”

“ಅದೇನು ನಿಯಮ?”

-ಎಂದು ಯಾಂತ್ರಿಕವಾಗಿ ಕೇಳಿದಳಾದರೂ ಕಣ್ಣು ಮಿಟುಕಿಸದೆ ಆ ಎಳೆಯನ ತೇಜಃಪುಂಜವಾದ ಮುಖ ಹಾಗೂ ತೂಗಾಡುವ ಬೆರಳನ್ನೇ ನೋಡುತ್ತಿದ್ದಳು ಚಿಕ್ಕಮ್ಮಣ್ಣಿ. ಚಂಡೀದಾಸ ನಿನ್ನಡಿಯ ಶಲ್ಯದಲ್ಲಿದ್ದ ಗಂಟು ತೋರಿಸಿ,

“ಇದು ಗಂಧಶಾಳೀ ಭತ್ತ. ಇಷ್ಟನ್ನೇ ಉಪಯೋಗಿಸಿ ನಿಮ್ಮ ಮೊಮ್ಮಗಳು ಅಡಿಗೆ ಮಾಡಿ ವರನಿಗೆ ಬಡಿಸುವುದು ಸಾಧ್ಯವಾದರೆ….”

“ಇದಿಷ್ಟರಲ್ಲೇ?”

“ಹೌದು ಇಷ್ಟರಲ್ಲೇ ಆಗಬೇಕು; ಅವನಿಗೆ ತೃಪ್ತಿಯೂ ಆಗಬೇಕು.”

ಅಷ್ಟರಲ್ಲಿ ಇಬ್ಬರು ರೋಗಿಗಳು ಇವರಿದ್ದಲ್ಲಿಗೇ ಬರತೊಡಗಿದರು. ಈಗ ನಿನ್ನಡಿ ಚಿಕ್ಕಮ್ಮಣ್ಣಿಗೆ ಪುನಃ ಆರನೆ ಬೆರಳು ತೋರುವಂತೆ ನಮಸ್ಕರಿಸಿ ಹಿಂದೆ ಹೋಗಿ ಜನರನ್ನು ಸೇರಿಕೊಂಡ.

“ಈ ಬಗ್ಗೆ ಗೌರಿಯಲ್ಲಿ ಒಂದು ಮಾತು ಕೇಳುವುದು ಒಳ್ಳೆಯದಲ್ಲವೆ?”

“ಹೌದು ಅಡಿಗೆ ಮಾಡೋಳು ಅವಳಾದ್ದರಿಂದ ಕೇಳುವುದು ಉಚಿತ.”

-ಎಂದು ಚಂಡೀದಾಸನೂ ಹೇಳಿದ. ಚಿಕ್ಕಮ್ಮಣ್ಣಿ ಕುತೂಹಲ ತಾಳದೆ ಮೆಲ್ಲಗೆ ಕೇಳಿದಳು:

“ಈತನ ತಂದೆ ತಾಯಿ ಯಾರಪ್ಪಾ?”

“ತಾಯಿ ಬೆಳ್ಳಿ; ತಂದೆ ಜಟ್ಟಿಗ; ಶಿವಪಾದನ ಶಿಷ್ಯ ತಾಯಿ!”

“ಇವನು ಅವರ ಸಾಕು ಮಗನ? ಸ್ವಂತ ಮಗನ?”

“ಸ್ವಂತ ಮಗ…”

ಚಿಕ್ಕಮ್ಮಣ್ಣಿಯ ಉತ್ಸಾಹ ಧಸಕ್ಕನೆ ಕುಸಿಯಿತು. ಆರ್ದನೇತ್ರಳಾಗಿ ಆದರೂ ನಂಬಿಕೆ ಕಳೆದುಕೊಳ್ಳದೆ,

“ನಿನ್ನಡಿ ಅಂದರೆ ಆತನ ಹೆಸರ ಅದು?”

“ಮುಂದಿನ ಶಿವಪಾದನಿಗೆ ಇಡುವ ಹೆಸರು ತಾಯಿ!”

ಚಿಕ್ಕಮ್ಮಣ್ಣಿ ಹೋದ ಮೇಲೆ ಚಂಡೀದಾಸ “ಹೋರಿ ಕಾಣುತ್ತಿಲ್ಲ” ಎನ್ನುತ್ತ ಹುಡುಕುವುದಕ್ಕೆ ಹೊರಗೆ ಬಂದಾಗ ಗೋಡೆ ಹಿಂಬದಿಯಲ್ಲಿ ಬೆಳೆದ ಎತ್ತರವಾದ ಹುಲ್ಲಿನಲ್ಲಿ ಹೋರಿ ನಿಂತಿತ್ತು. ಗೌರಿ ಎಳೆಯ ಹಸಿರು ಹುಲ್ಲನ್ನು ಆರಿಸಿ ಕಿತ್ತು ತಂದು ಅದು ತಿನ್ನುತ್ತಿದ್ದ ಬಲಿತ ಹುಲ್ಲನ್ನು ಕಿತ್ತೆಸೆದು ತಾನು ತಂದ ಎಳೇ ಹುಲ್ಲನ್ನು ತಿನ್ನಿಸುತ್ತಿದ್ದಳು. ಚಂಡೀದಾಸ ನೋಡಿ ಚಕಿತನಾದ.

ಹೋರಿಯೊಂದಿಗೆ ಏನೇನೋ ಮಾತಾಡುತ್ತ, ಹೆಚ್ಚು ತಿನ್ನಬೇಕೆಂದು ಬುದ್ಧಿ ಹೇಳುತ್ತ ಹುಲ್ಲು ತಿನ್ನಿಸುತ್ತಿದ್ದಳು. ಹೋರಿ ಕೂಡ ವಿಧೇಯ ಬಾಲಕನಂತೆ ಅವಳು ಹೇಳಿದ್ದಕ್ಕೆಲ್ಲ ಕತ್ತು ಹಾಕುತ್ತ ಕೊಟ್ಟಷ್ಟನ್ನೂ ತಿನ್ನುತ್ತಿತ್ತು. ಇಬ್ಬರ ಮಧ್ಯೆ ಆಗಲೇ ಪೂರ್ವ ಪರಿಚಯವೆಂಬಷ್ಟು ಸಲಿಗೆಯ ಸಂವಾದ ನಡೆದಿತ್ತು. ಚಂಡೀದಾಸ ನೋಡುತ್ತ ಬಹಳ ಹೊತ್ತು ಸುಮ್ಮನೆ ನಿಂತುಕೊಂಡ.

ಚಿಕ್ಕಮ್ಮಣ್ಣಿ ಮನೆಗೆ ಬಂದಾಗ ಉದ್ವಿಗ್ನಗೊಂಡಿದ್ದಳು. ಕೊರಳ ಸೆರೆ ತುಂಬಿ ಬಂದಿತ್ತು. ಆರ್ದವಾಗಿದ್ದ ಕಣ್ಣಂಚಿನಲ್ಲಿ ಕಣ್ಣೀರು ಸಂಗ್ರಹಗೊಂಡು ಎಣ್ಣೆಯಲ್ಲಿಯ ಸೊಡರಿನ ಹಾಗೆ ಕಣ್ಣು ಹೊಳೆಯತೊಡಗಿದ್ದವು. ಏನಾಯಿತೆಂದು ರವಿ ಆದಮೇಲೆ ಛಾಯಾದೇವಿ ಮತ್ತೆ ಮತ್ತೆ ಕೇಳಿದರೂ ಭಾವೋದ್ವೇಗವನ್ನು ನುಂಗಿಕೊಂಡು ತಡವಾಗಿ ನಿಧಾನವಾಗಿ ಹೇಳಿದಳು:

“ಹುಡುಗ ಕನ್ಯಾಪರೀಕ್ಷೆ ಮಾಡಬೇಕಂತೆ. ಪರೀಕ್ಷೆಯಲ್ಲಿ ಉತ್ತೀರ್ಣಳಾದರೆ ಮಾತ್ರ ಮದುವೆಯಂತೆ.”

-ಎಂದು ಹೇಳಿ ಬೆವರೊರಿಸಿಕೊಂಡಳು. ಹೋಗಿ ಬಂದು ಆಯಾಸವಾಗಿರಬೇಕೆಂದುಕೊಂಡು ರವಿ ಹೇಳಿದ:

“ಪರೀಕ್ಷೆ ಅಂದರೆ ನೀನ್ಯಾಕಜ್ಜಿ ಆತಂಕ ಪಡಬೇಕು? ಆಗೋದಿಲ್ಲ ಅಂದರಾಯ್ತು.”

ಚಿಕ್ಕಮ್ಮಣ್ಣಿ ತನಗಿದು ಕೇಳಿಸಲಿಲ್ಲವೆಂಬಂತೆ-

“ಪರೀಕ್ಷೆ ಅಂದರೆ ಅಂತಿಂಥದಲ್ಲ ಕಣಪ್ಪ. ಐದು ಬೊಗಸೆ ಗಂಧಶಾಳಿ ಭತ್ತ ಕೊಡ್ತಾನಂತೆ. ಅಷ್ಟರಲ್ಲೇ ಗೌರಿ ಅಡಿಗೆ ಮಾಡಿ ಅವನಿಗೆ ತೃಪ್ತಿಯಾಗುವಂತೆ ಬಡಿಸಬೇಕಂತೆ. ಅಂದರೆ ಆಗೋ ಮಾತ ಇದು?”

-ಎನ್ನುತ್ತ ರವಿಯನ್ನು ತಬ್ಬಿಕೊಂಡು ಬಿಕ್ಕಿಬಿಕ್ಕಿ ಅಳತೊಡಗಿದಳು. ರವಿಗೆ ಗೊಂದಲವಾಯಿತು. ಸೇವಕರಾದಿಯಾಗಿ ಇಡೀ ಬಳಗ ಗೊಂದಲದಲ್ಲಿ ಅದ್ದಿಹೋಯಿತು. ಇದರ ಹಿಂದೇನೋ ಇರಬೇಕೆಂದು ರವಿ, ಛಾಯಾದೇವಿ ಇಬ್ಬರೂ ವಿಷಯ ತಿಳಿಯಲು ಕಾತರತೆಯಿಂದ ಏನು? ಯಾಕೆ? ಎಂಬಿತ್ಯಾದಿ ಹಲವಾರು ಪ್ರಶ್ನೆಗಳನ್ನು ಕೇಳಿದರು. ಚಿಕ್ಕಮ್ಮಣ್ಣಿ ದೃಢತೆಯನ್ನ ಒತ್ತಾಯದಿಂದ ತಂದುಕೊಳ್ಳಲು ಯತ್ನಿಸಿದಳಾದರೂ ಅವಳ ಮುಖದ ಮೇಲೆ ಯಾತನೆ ತಾಂಡವವಾಡುತ್ತಿದ್ದು ಮುತ್ತುಗಳಂಥ ಕಣ್ಣೀರು ಸುರಿಸುತ್ತಿದ್ದಳು. ಕೊನೆಗೆ ಮೂಲೆಯಲ್ಲಿದ್ದ ಜಯರಾಣಿ ಬಂದು ಚಿಕ್ಕಮ್ಮಣ್ಣಿಯನ್ನು ರವಿಯಿಂದ ಬಿಡಿಸಿ ತಾನು ತಬ್ಬಿಕೊಂಡು ಸಮಾಧಾನ ಮಾಡಲು ನೋಡಿದಳು. ಯಾರೆಷ್ಟು ಪ್ರಯತ್ನಿಸಿದರೂ ಅವಳು ಬಾಯಿಬಿಡಲಿಲ್ಲ. ಸರಿಪಡಿಸಲಾರದಷ್ಟು ಅವಳ ಮುಖ ಕೆಟ್ಟಿತ್ತು.

“ಅಷ್ಟರಲ್ಲಿ ಅಜ್ಜೀ ಅಜ್ಜೀ ಚಂಡೀದಾಸ ತಾತಾ ಬಂದಿದ್ದಾನೆ!” ಎಂದು ಹೇಳುತ್ತ ಗೌರಿ ಬಂದಳು. ಈ ದೃಶ್ಯದಲ್ಲಿ ಮುದ್ದು ಇಲ್ಲದ್ದನ್ನ ಈ ತನಕ ಯಾರೂ ಗಮನಿಸಿರಲಿಲ್ಲ. ತಕ್ಷಣ ಎಲ್ಲರೂ ಗೌರಿಯ ಕಡೆಗೆ ನೋಡಿದರು. ಕಣ್ಣು ಬೆಳಕನ್ನ ಮೆಲುಕಾಡಿಸುತ್ತಿವೆ! ಮುಖದಲ್ಲಿ ಕೋಮಲವಾದ ಕಾಂತಿ ಹೊಳೆಯುತ್ತಿದೆ. ಉಡಿಯಲ್ಲಿ ಏನನ್ನೋ ಜತನವಾಗಿ ಹಿಡಿದುಕೊಂಡು ಬಂದಿದ್ದಾಳೆ! ಎಲ್ಲರನ್ನು ಮುಗುಳುನಗೆಯಲ್ಲಿ ಮೀಯಿಸುತ್ತ “ಚಂಡೀದಾಸ ತಾತಾ ಬಂದಾನಜ್ಜೀ” ಎಂದು ಇನ್ನೊಮ್ಮೆ ಹೇಳಿದಳು. ಚಿಕ್ಕಮ್ಮಣ್ಣಿ ಉತ್ಸುಕತೆಯಿಂದ,

“ನೀನು ದೇವಾಲಯದಿಂದ ಬಂದೆಯಾ ಮುದ್ದು?”

ಎಂದಳು. ಮುದ್ದು ಉತ್ಸಾಹದಿಂದ ಹೇಳಿದಳು:

“ಹೌದು.”

“ಅವರನ್ನು ಭೇಟಿಯಾಗಿ ಬಂದೆಯಾ?”;

“ಹೌದು.”

“ಉಡಿಯಲ್ಲಿ ಅದೇನು?”

“ಗಂಧಶಾಳೀ ಭತ್ತ! ಚಂಡೀದಾಸ ತಾತಾ ಕೊಟ್ಟ. ಇದಿಷ್ಟೇ ಭತ್ತದಲ್ಲಿ ವರನಿಗೆ ಅಡಿಗೆ ಮಾಡಿ ಹಾಕಬೇಕಂತೆ.”

ರವಿ ಸುಮ್ಮನಿರಲಿಲ್ಲ. ಮುಂದೆ ಬಂದು ಕೊಂಚ ಕೋಪದಿಂದಲೇ ಕೇಳಿದ:

“ನಿನಗಿದು ಒಪ್ಪಿಗೆಯೇ ಮದ್ದು?”

“ಓಹೊ! ಆರು ಬೆರಳಿನ ಹುಡುಗನನ್ನ ಕನಸಿನಲ್ಲಿ ನಾಕುಬಾರಿ ಕಂಡಿದ್ದೇನಪ್ಪ! ಅವನ ಹೋರಿಯನ್ನ ಕೂಡ ನಾನು ಬಲ್ಲೆ. ಅಜ್ಜಿಗೆ ಹೇಳಿದರೆ ‘ಅದೆಲ್ಲಿ ಹೋರಿಯ ಕಂಡೆ ಮಾರಾಯಳೆ?’ ಅಂದಿದ್ದಳು.

ತಕ್ಷಣ ಚಿಕ್ಕಮ್ಮಣ್ಣಿಗೆ ಇವಳು ಹೋರಿಯ ಕನಸು ಹೇಳಿದ್ದು ನೆನಪಾಗಿ ಮೈತುಂಬ ನವಿರೆದ್ದವು. ತಾಳ್ಮೆ ಕಳೆದುಕೊಂಡ ರವಿ,

“ನೀನ್ಯಾಕೆ ಅವರನ್ನ ಮನೆಗೆ ಕರೀಲಿಲ್ಲ?”

“ಕನ್ಯಾರ್ಥಿಯಾಗಿ ಬಂದಿದ್ದೇವೆ, ದೇವಾಲಯದಲ್ಲೇ ಇರ್ತೇವೆ ಅಂದರಪ್ಪ.”

“ಅವರ ಕರಾರು ನಿನಗೆ ಒಪ್ಪಿಗೆಯೊ?”

“ಒಪ್ಪಿಕೊಂಡೇ ಅವರು ಕೊಟ್ಟ ಭತ್ತ ತಂದಿದ್ದೇನೆ.”

“ಇಷ್ಟೇ ಭತ್ತದಲ್ಲಿ ಅವರು ಹೇಳಿದಂತೆ ಮಾಡುತ್ತೀಯ ಮದ್ದು?”

“ಮಾಡ್ತೀನೋ, ಇಲ್ಲವೋ ನೀನೇ ನೋಡುತ್ತ ಕೂತಿರಣ್ಣ.”

“ಆಯ್ತು ಪರೀಕ್ಷೆಯಲ್ಲಿ ಗೆದ್ದೆ ಎಂದೇ ಇಟ್ಟುಕೊಳ್ಳೋಣ. ನೀನು ಅವರ ಆ ಹಟ್ಟಿಗೆ ಹೋಗಿ ಇರ್ತೀಯಾ?”

“ಓಹೋ!”

-ಎಂದು ಹೇಳಿ ಗೆಲುವಿನ ನಗೆ ಬೀರುತ್ತ ಅಡಿಗೆ ಮನೆಗೆ ನಡೆದಳು ಗೌರಿ. ಚಿಕ್ಕಮ್ಮಣ್ಣಿ ಕೂಡ ಕಣ್ಣಗಲ ಮಾಡಿಕೊಂಡು ಗೌರಿಯ ಕಡೆಗೇ ನೋಡುತ್ತ ಕುಸಿದಳು. ಸೂತ್ರಹರಿದ ಘಟನಾವಳಿಯ ಒಂದೆಳೆಯೂ ಅರ್ಥವಾಗದ ತಾಳ್ಮೆಗೆಟ್ಟು ರವಿ ದೇವಾಲಯಕ್ಕೆ ನಡೆದ.

ದೇವಾಲಯಕ್ಕೆ ಬಂದು ನೋಡಿದರೆ ಬಿಳಿಗಿರಿಯವರೇ ಸುಮಾರು ಹತ್ತೆಂಟು ಜನ ಒಬ್ಬ ತರುಣನ ಸುತ್ತ ಸೇರಿದ್ದಾರೆ; ತರುಣ ಒಬ್ಬೊಬ್ಬರದೇ ನಾಡೀ ಹಿಡಿದು ಪರೀಕ್ಷಿಸಿ ಮದ್ದುಕೊಡಲು ಚಂಡೀದಾಸನಿಗೆ ಸಲಹೆ ಕೊಡುತ್ತಿದ್ದಾನೆ! ತರುಣನ ಆಕಾರ ತಕ್ಷಣ ಇವನ ಮನಸ್ಸನ್ನು ಸೂಜಿಗಲ್ಲಿನಂತೆ ಸೆಳೆಯಿತು. ಸೊಂಟಕ್ಕೊಂದು ಬಿಳಿಯ ಬಟ್ಟೆ ಸುತ್ತಿಕೊಂಡು ಅಂಥದೇ ಇನ್ನೊಂದು ತುಂಡನ್ನು ತಲೆಗೆ ಸುತ್ತಿಕೊಂಡಿದ್ದ. ಅಜಾನುಬಾಹು, ಹಾಗೇ ಉನ್ನತಾಕಾರದ ತರುಣನ ಆಕೃತಿಗೆ ರವಿ ಮಾರುಹೋದ. ನೀಳವಾದ ಮೂಗು, ದೊಡ್ಡ ಕಣ್ಣು ಉಲ್ಲಾಸದಿಂದ ಅವನ ಮುಖ ಕಳೆಕಳೆಯಾಗಿತ್ತು. ತನ್ನ ವೈದ್ಯವಿದ್ಯೆಯ ಬಗ್ಗೆ ಅಪಾರವಾದ ವಿಶ್ವಾಸ ಹೊಂದಿದ್ದ. ರೋಗಿಯನ್ನು ನೋಡುವಾಗ ಮುಗುಳುನಗುತ್ತಿದ್ದ ಮತ್ತು ಆ ನಗೆಯಲ್ಲಿ ಪ್ರಸನ್ನತೆ ಇತ್ತು. ಯೌವನದ ಸಂಪನ್ನತೆಯಿಂದ ಕೂಡಿದ ಅವನ ಒಟ್ಟಾರೆ ನಿಲುವು, ನೋಟ, ನಾಡಿ ನೋಡುವ ರೀತಿ ಇವೆಲ್ಲ ನಾಗರಿಕರಿಗೆ ಅಪರಿಚಿತವಾದ ಒಂದು ಒರಟು ಪ್ರಾಣಿಗೆ ಸಮೀಪದವಾಗಿ ಕಾಣುತ್ತಿದ್ದವು.

ನಿನ್ನಡಿಯ ಪಕ್ಕದಲ್ಲಿ ಕೂತಿದ್ದ ಚಂಡೀದಾಸ ರವಿಯನ್ನು ಕರೆದು ಪಕ್ಕದಲ್ಲಿ ಕೂರಿಸಿಕೊಂಡು ಮೆಲ್ಲಗೆ ಹೇಳಿದ:

“ಇವನೇ ನಿನ್ನಡಿ, ಶಿವಪಾದನ ಶಿಷ್ಯ. ನಾನೂ ನಿಮ್ಮಪ್ಪನೂ ಶಿವಪಾದನ ಶಿಷ್ಯರೇ. ಆದರೆ ಇವನ ವಿದ್ಯೆ, ನಿಷ್ಠೆ, ತಪಸ್ಸಿನ ಮುಂದೆ ನಾವ್ಯಾರೂ ಅಲ್ಲ.”

ಅಷ್ಟೇ ಮೆಲ್ಲಗೆ ರವಿ ಕೇಳಿದ:

“ಅದು ಸರಿ ಚಂಡೀದಾಸರೇ, ಇವನು ವೈದ್ಯ ಅಂತ ಬಿಳಿಗಿರಿ ಜನಕ್ಕೆ ಹೇಗೆ ಗೊತ್ತಾಯಿತು.?”

“ಬಿಳಿಗಿರಿಯ ಕೆಲವು ಸಾಮಾನ್ಯ ಜನ ಅಮ್ಮನ ಭಕ್ತರು ಸ್ವಾಮೀ….”

ಆಮೇಲೆ ರವಿ ಇನ್ನಷ್ಟು ಚಂಡೀದಾಸನ ಹತ್ತಿರ ಸರಿದು ಪಿಸುದನಿಯಲ್ಲಿ ಕೇಳಿದ:

“ನಿಮ್ಮ ಗಂಧಶಾಳಿ ಭತ್ತದ ಕತೆಯೇನು? ಕನ್ಯೆಯನ್ನಾರಿಸಲಿಕ್ಕೆ ಈ ತನಕ ಇಂಥ ಪರೀಕ್ಷೆ ಯಾರೂ ಮಾಡಿಲ್ಲ, ಅಲ್ಲವೆ?”

“ನಿಜ ಯಾರೂ ಮಾಡಿಲ್ಲ. ಒಂದು ದಿನ ಶಿವಪಾದ ಇವನನ್ನು ಕರೆದು, ‘ಅಪಾರ ಚಿನ್ನವನ್ನ ಬೇಡುವ ಸಾಮ್ರಾಜ್ಯ ಬೇಕೋ? ಐದು ಬೊಗಸೆ ಭತ್ತದಲ್ಲೇ ನಡೆಸುವ ಮಿತವ್ಯಯದ ಜೀವನ ಬೇಕೊ?’ ಅಂತ ಕೇಳಿದ. ಅದಕ್ಕೆ ಇವನು ಸೇರುಭತ್ತದಲ್ಲಿ ನಡೆಸುವ ಮಿತವ್ಯಯದ ಜೀವನ ನನಗಿಷ್ಟ” ಅಂದ. ಹಾಗಿದ್ದರೆ ಐದು ಬೊಗಸೆ ಭತ್ತದಲ್ಲೇ ನಿನಗೆ ಸಂತೃಪ್ತಿಯಾಗುವಂಥ ಅಡಿಗೆ ಮಾಡಿ ಹಾಕುವ ಕನ್ಯೆಯನ್ನು ಮದುವೆಯಾಗು ಅಂದ. ಅಂಥ ಮಡದಿಯ ಹುಡುಕಾಟವಿದು.”

“ಅಂಥವಳು ಸಿಗದಿದ್ದರೆ?”

“ಈತನಿಗೆ ಮದುವೆಯಿಲ್ಲ.”

* * *

ಇತ್ತ ಗೌರಿ ಶುದ್ಧಕ್ಕೆ ಜಳಕವ ಮಾಡಿ, ಮಡಿಯುಟ್ಟು ಅಡಿಗೆ ಮಾಡಲು ಸುರುಮಾಡಿದ್ದಳು. ಚಂಡೀದಾಸ ಕೊಟ್ಟ ಭತ್ತವನ್ನು ಕುಟ್ಟಿ ತೌಡು ಮತ್ತು ಅಕ್ಕಿ ಬೇರ್ಪಡಿಸಿ ತೌಡನ್ನ ಅಕ್ಕಸಾಲಿಗೆ ಮಾರಿ ಬಂದ ದುಡ್ಡಿನಲ್ಲಿ ಅಡಿಗೆ ಪಾತ್ರೆ ಪರಿಯಾಣ ಕೊಂಡಳು. ಅಕ್ಕಿ ಕುದಿಯಲಿಟ್ಟು ಅನ್ನವಾದ ಮೇಲೆ ಅದರ ಗಂಜಿಗೆ ಹಿತ್ತಲಲ್ಲಿಯ ಮೆಣಸು ಸೊಪ್ಪು ತಂದು ಹಸಿರು ಸಾರು, ಪಲ್ಯ ಮಾಡಿದಳು. ನಾಲ್ಕು ಬಾಳೆಯೆಲೆ ತಂದು “ಅಣ್ಣಾ ಅವರನ್ನ ಕರೆದುಕೊಂಡು ಬಾ” ಎಂದಳು.

ಚೈತನ್ಯ ಉತ್ಸಾಹಗಳಿಂದ ಕಳಕಳಿಸುತ್ತಿದ್ದ ಗೌರಿಯನ್ನು ನೋಡಿ ಚಿಕ್ಕಮ್ಮಣ್ಣಿ ಮತ್ತು ಛಾಯಾದೇವಿಯವರ ಮುಖಗಳು ಅರಳಿದವು. ಅಜ್ಜಿ ಮುಂದೆ ಬಂದು ಸೊಗಸಾದ ಪಟ್ಟೆ ಸೀರೆಯುಡಿಸಿ ರವಿಕೆ ತೊಡಿಸಿದಳು. ಬಂಗಾರದ ಬಾಚಣಿಕೆಯಿಂದ ತಲೆ ಬಾಚಿ ಬಲಮುಡಿಕಟ್ಟಿ ಚೆಲುವ ಚೆಲ್ಲುವ ಪರಿಮಳದ ಹೂ ಮುಡಿಗಿಡಿದಳು. ಮುತ್ತಿನ ಬೈತಲೆ ಎಣ್ಣೆ ಓಲೆ ಎಸಳು ಬುಗುಡಿಯಿಟ್ಟು ಬಂಗಾರದಲ್ಲಿ ಸಿಂಗಾರ ಮಾಡಿದಳು. ನೊಸಲಿಗೆ ಚಿಕ್ಕೆ ಬೊಟ್ಟಿಟ್ಟು ಕಣ್ಣಿಗೆ ಕಾಡಿಗೆ ಗೆರೆಯೆಳೆದು ಎದುರು ಕನ್ನಡಿ ಹಿಡಿದಳು. ಗೌರಿ ಕನ್ನಡಿಯಲ್ಲಿ ಸೊಬಗ ನೋಡಿಕೊಂಡು ಮುಡಿದ ಹೂಗಳ ಮುಟ್ಟಿನೋಡಿಕೊಂಡು ಊಟಕ್ಕೆ ನೀಡಲು ಬಂದಾಗ ಅಡಿಗೆ ಮನೆಗೆ ಬೆಳಕೇ ಪ್ರವೇಶಿಸಿದಂತಾಯ್ತು.

ನಾಲ್ಕು ಬಾಳೆ ಎಲೆ ಹಾಕಿ, ಹಾಕಿದ ಎಲೆಗೆ ನೀರಿನ ಹನಿ ಚಿಮುಕಿಸುವಷ್ಟರಲ್ಲಿ ನಿನ್ನಡಿ ಒಬ್ಬನೇ ಬಂದು ಎಲೆ ಮುಂದೆ ಕೂತ. ಸೇವಕ, ಸೇವಕಿಯರು ನಿನ್ನಡಿಯನ್ನು ನೋಡಲು ಒಬ್ಬರನ್ನೊಬ್ಬರು ನೂಕಾಡಿ, ತಳ್ಳಿ ತುದಿಗಾಲಲ್ಲಿ ನಿಂತು ಮುಂದಿನವರ ಭುಜದ ಮ್ಯಾಲಿಂದ ಕಣ್ಣು ಹಾಯಿಸಿ ನೋಡುತ್ತ ನಿನ್ನಡಿ ಗೌರಿಯರ ಜೋಡಿಯನ್ನು ಕಣ್ಣಿನಿಂದಲೇ ತೂಗಿ ಮೆಚ್ಚುತ್ತಿದ್ದರು. ಇನ್ನೊಂದು ತುದಿಗೆ ಚಿಕ್ಕಮ್ಮಣ್ಣಿ ಮತ್ತು ಛಾಯಾದೇವಿಯವರು ಹೆಮ್ಮೆ ಹರ್ಷಗಳಿಂದ ಗೌರಿಯನ್ನು ನೋಡುತ್ತಿದ್ದರು. ರವಿ, ಕುರುಮುನಿ ಮತ್ತು ಚಂಡೀದಾಸರು ಹೊರಗಿದ್ದರು. ತನ್ನ ಸುತ್ತ ನಡೆಯುತ್ತಿದ್ದುದನ್ನು ನಿನ್ನಡಿ ಗಮನಿಸಿದಂತೆ ಕಾಣಲಿಲ್ಲ.

ಎಲೆ ಮುಂದೆ ಕೂತವರನ್ನು ಹೆಚ್ಚು ಹೊತ್ತು ಕಾಯಿಸಬಾರದೆಂದು ಗೌರಿ ಬಡಿಸತೊಡಗಿದಳು. ಮುತ್ತಿನ ಬಣ್ಣದ ಅನ್ನ, ಪಚ್ಚೆಬಣ್ಣದ ಸಾರು ಬಡಿಸಿದಳು. ಆಮೇಲಾಮೇಲೆ ಒಂದೊಂದು ಭಕ್ಷ್ಯವನ್ನು ಬಡಿಸುವಾಗಲೂ ಕಾತರತೆಯಿಂದ ಅತಿಥಿಯ ಮುಖದ ಕಡೆಗೆ ಕಣ್ಣು ಹಾಯಿಸುತ್ತಿದ್ದಳು. ತನ್ನ ಲೆಕ್ಕ ಎಲ್ಲೋ ತಪ್ಪಿದೆಯೆಂಬುದನ್ನು ಆಕೆ ತಿಳಿದಿದ್ದಳು. ಮತ್ತು ಕೊನೆಯ ಕ್ಷಣದಲ್ಲಾದರು ಅದು ಸರಿ ಹೋಗಲೆಂದು ಅದೇನೆಂದು ಅವಳಿಗೂ ಅಂದಾಜುಗಲಿಲ್ಲ. ನಿನ್ನಡಿ ಮಾತ್ರ ಇದ್ಯಾವುದನ್ನೂ ಗಮನಿಸದೆ ಆನಂದವನ್ನುಂಡಂತೆ ಘನವಾದ ಭೋಜನ ಪೂರೈಸಿ ಎದ್ದ! ಆದರೆ ಊಟ ನೀಡಿದ ಗೌರಿ ಮುಖ ಗಂಟು ಹಾಕಿದ್ದಳು.

ಗೌರಿಯ ಪರೀಕ್ಷೆಯಲ್ಲಿ ಅವಳ ವಿನಾ ಅವಳ ಬಳಗದ ಯಾರಿಗೂ ಆಸಕ್ತಿಯಿರಲಿಲ್ಲ. ಯಾಕಂತಿರೋ? ಹುಡುಗ ರಾಜನಲ್ಲ, ಶಿವಾಪುರ ರಾಜಧಾನಿಯಲ್ಲ, ಅದೊಂದು ಚಿಕ್ಕಹಟ್ಟಿ. ಇಷ್ಟಾಗಿ, ಇವರಾಗಿ ಕನ್ನೆಯನ್ನು ತೋರಿಸಿದವರೂ ಅಲ್ಲ. ನಮಗೆ ಒಪ್ಪಿಗೆಯಿಲ್ಲವೆಂದು ಸೌಜನ್ಯದಿಂದ ಹೇಳಿದರಾಯಿತೆಂದು ಅಂದುಕೊಂಡರು. ಚಿಕ್ಕಮ್ಮಣ್ಣಿಗೆ ಮಾತ್ರ ಇವನ ಮೂಲದ ಬಗ್ಗೆ ಇನ್ನಷ್ಟು ತಿಳಿಯುವ ಕುತೂಹಲ ಇತ್ತು. ತಾಯಿ ಹೇಳಿದ್ದರಲ್ಲಿ ಛಾಯಾದೇವಿಗೆ ನಂಬಿಕೆಯಾಗಲಿಲ್ಲ. ಚಿಕ್ಕಮ್ಮಣ್ಣಿ ಮೆಲ್ಲಗೆ ಹೊರಗಿನ ಮೊಗಸಾಲೆಗೆ ಬಂದಳು. ಹಿಂದಿನಿಂದ ಛಾಯಾದೇವಿ, ಗೌರಿ-ಅವರೂ ಬಂದರು.

ಚಂಡೀದಾಸನೊಂದಿಗೆ ನಿನ್ನಡಿ ಸುಗ್ಗಿಕಾಲದ ಹಗಲಿನಂತೆ ಸಂತೃಪ್ತಿಯಿಂದ ನಗುತ್ತಿದ್ದ. ಚಂಡೀದಾಸ, ಕುರುಮುನಿ ಕೂಡ ಸಂಭ್ರಮದಲ್ಲಿದ್ದರು. ಚಿಕ್ಕಮ್ಮಣ್ಣಿಯನ್ನು ನೋಡಿ ನಿನ್ನಡಿ ಎದ್ದು ಬಂದು ಅವಳೆದುರು ಕೈಮುಗಿದು ನಿಂತುಕೊಂಡು,

“ಅಬ್ಬೆ, ನನಗೆ ಹೊಟ್ಟೆತುಂಬಿ ತೃಪ್ತಿ ಆಯ್ತಬೆ, ನಿನ್ನ ಕೂಸನ್ನ ಒಪ್ಪಿದೀನಿ.”

-ಅಂದ. ಉಳಿದವರ ಯಾವ ಸ್ಪಂದನೆಗೂ ಅವಕಾಶ ಕೊಡದೆ ಗೌರಿ ಸೀದಾ ಮುಂದೆ ಬಂದು ಉದ್ವೇಗದ ದನಿಯಲ್ಲಿ,

“ಆದರೆ ನಾನು ಒಪ್ಪಲಿಲ್ಲ!” ಎಂದಳು.

ಗೌರಿಯ ಮಾತು ಕೇಳಿ ಎಲ್ಲರಿಗೂ ಆಶ್ಚರ್ಯವಾಗಿ ಅವಳ ಕಡೆಗೆ ನೋಡಿದರು.

ವಧುವನ್ನು ಒಪ್ಪಿದೆನೆಂದು ವರ, ವರನನ್ನು ಒಪ್ಪಲಿಲ್ಲವೆಂದು ವಧು ಅವರವರೇ ಹೇಳುತ್ತಿದ್ದಾರೆಯೇ ಶಿವಾಯಿ ಯಾರೂ ಇವರ ಅಭಿಪ್ರಾಯ ಕೇಳಿರಲಿಲ್ಲ. ಅದೆಲ್ಲ ಹಿರಿಯರ ಹಿರಿತನದಲ್ಲಿ ನಡೆಯಬೇಕಾದ ವ್ಯವಹಾರವಲ್ಲವೆ? ಇವರಿವರೇ ಸುರುಮಾಡಿದ್ದನ್ನ ಹಿರಿಯರು ಮಕ್ಕಳಾಟದ ಹಾಗೆ ಗಮನಿಸಿದರೇ ಹೊರತು ಗಂಭೀರವಾಗಿ ಪರಿಗಣಿಸಲೇ ಇಲ್ಲ.

ಮೊಗಸಾಲೆಯ ಅಂಚಿನಲ್ಲಿ ಹಿಂದೆ ಕೈಕಟ್ಟಿಕೊಂಡು ಹುಬ್ಬು ಗಂಟಿಕ್ಕಿ ಆಲೋಚಿಸುತ್ತ ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದ ರವಿ ಏನೋ ಆಗಬಾರದ್ದು ಆಯಿತೆಂದು ಅವಸರದಲ್ಲಿ ತಂಗಿಯನ್ನು ನೋಡಲು ಒಳಗೆ ಬಂದ. ಚಿಕ್ಕಮ್ಮಣ್ಣಿಗೆ ಏನು ಎತ್ತ ತಿಳಿಯದೆ ಸಂದರ್ಭಸೂತ್ರ ಹರಿದು ತುಂಡಾದಂತೆನಿಸಿ “ಏನಂದೆ ಮುದ್ದು?” ಎಂದಳು. ತಿಳಿಯಾದ ಬೆಳಕಿನಿಂದ ಗೌರಿಯ ಕಣ್ಣು ಹೊಳೆಯುತ್ತಿದ್ದವು. ಅವಳ ಮುಖ ಪರಿಪಕ್ವವಾದ ಸದಸದ್ವಿವೇಕದಿಂದ ಕಾಂತಿಗೊಂಡಿತ್ತು. ಚಿಕ್ಕಮ್ಮಣ್ಣಿಯನ್ನು ಕುರಿತು ಹೇಳಿದಳು:

“ನಾನು ವರನನ್ನ ಒಪ್ಪಿಕೊಳ್ಳಲಿಲ್ಲವೆಂದು ಹೇಳಜ್ಜಿ.”

ಚಂಡೀದಾಸ ಕುರುಮುನಿ ಇರಲಿ, ರವಿ, ಛಾಯಾದೇವಿಗೂ ಗೌರಿಯ ಧೈರ್ಯದ ಮಾತುಗಳಿಂದ ಆಘಾತವಾಯಿತು. ಮಗುವಿನಂತೆ ತೃಪ್ತಿಯಿಂದ ಹಸನ್ಮುಖಿಯಾಗಿದ್ದ ನಿನ್ನಡಿಯ ಮುಖ ನಿಸ್ತೇಜವಾಯಿತು. ಗೌರಿಯನ್ನೇ ನೋಡುತ್ತ ಅವಳ ಮಾತು ಕೇಳಿ ನಾಚಿಕೆಯಿಂದ ಅವನತಮುಖಿಯಾದ ನಿನ್ನಡಿ ಬಹಳ ಹೊತ್ತಿನ ತನಕ ಮುಖ ಮ್ಯಾಲೆತ್ತಲಿಲ್ಲ. ಉಳಿದವರೂ ಮಾತಾಡಲಿಲ್ಲ. ಎಲ್ಲರೂ ತನ್ನನ್ನೇ ನೋಡುತ್ತಿದ್ದಾರೆಂದು ಅನ್ನಿಸಿತು. ಮುಖ ಮ್ಯಾಲೆತ್ತಿದ್ದ! ಪಶ್ಚಾತ್ತಾಪದಿಂದ ಸುಟ್ಟ ಮುಖ ಮೋಡ ಮುಸುಕಿದ ಹುಣ್ಣಿಮೆ ಚಂದ್ರನಂತೆ ಬಾಡಿತ್ತು.

ಸರಿಯಾದ ಶಬ್ದಗಳಿಗಾಗಿ ತಡಕಾಡುತ್ತ ಆತುರಾತುರಾಗಿ “ಯಾಕ? ಯಾಕ?” ಅಂದ.

ಗೌರಿ ಸ್ಪಷ್ಟವಾಗಿ, ಆದರೆ ಗೌರವಪೂರ್ಣ ಸೌಜನ್ಯದಿಂದ ಹೇಳಿದಳು:

“ಸ್ವಾಮೀ, ನೀವು ಬಂದವರು ಮೂರು ಜನ. ಅವರನ್ನು ಬಿಟ್ಟು ನೀವೊಬ್ಬರೇ ಊಟಕ್ಕೆ ಕುಂತಿರಿ. ಇನ್ನೂ ಮೂರೆಲೆ ಯಾರಿಗಾಗಿ ಇವೆ? ಎಂದೂ ಚಿಂತಿಸಲಿಲ್ಲ. ನೀವೊಬ್ಬರೇ ಊಟಕ್ಕೆ ಕುಂತಿರಿ. ನೀಡಿದ ತಕ್ಷಣ ಊಟ ಮಾಡಿ ತೃಪ್ತಿಯಾಯಿತು; ಅಂದಿರಿ. ನಿಮ್ಮ ಮಡದಿಯಾಗಲಿದ್ದ ನನಗೆ ಏನಾದರೂ ಉಳಿದಿದೆಯೇ? ನೋಡಲಿಲ್ಲ. ಹೋರಿಗೆ ಮೇವು ಹಾಕಿಯಾಯಿತೇ ಅನ್ನಲಿಲ್ಲ. ನೀವೊಬ್ಬರೇ ಉಂಡು ತೃಪ್ತಿಯಾಯಿತೆಂದರೆ ಅದು ಮನೆತನವೆ? ಮನೆತನ ನಡೆಯೋದು ಇರೋದನ್ನೆಲ್ಲ ಒಬ್ಬರೇ ತಿನ್ನೋದರಿಂದಲ್ಲ; ಇರೋದನ್ನ ಇದ್ದವರೆಲ್ಲ ಹಂಚಿ ತಿನ್ನೋದರಿಂದ. ಹೋಗಿ ನಿಮ್ಮ ಅಬ್ಬೆಗೆ ಹೇಳಿ!”

ಕುರುಮುನಿ, ಚಂಡೀದಾಸರ ಮುಖಗಳು ವಿವರ್ಣವಾದವು. ನಾಚಿಕೆಯಿಂದ ನಿನ್ನಡಿ ಅವನತ ಮುಖನಾದ. ಸಂಸಾರ ನಿಭಾಯಿಸುವುದಕ್ಕೆ, ಬದುಕುವುದಕ್ಕೆ ಹೆಚ್ಚು ಉಪಯುಕ್ತವಾದ ಸೂತ್ರ ಇದೇ, ಅಬ್ಬೆ ಹೇಳಿದ್ದು ಸಾಲದು ಎಂದುಕೊಂಡ. ಈತನಕ ನಾವು ಅಂದುಕೊಂಡದ್ದು ‘ಸಹನೌ ಭುನಕ್ತು’ ಎಂದು. ಜತೆಗೂಡಿ ಊಟ ಮಡುವುದಷ್ಟೇ ಅಲ್ಲ; ಇದ್ದದ್ದನ್ನ ಎಲ್ಲರೂ ಹಂಚಿಕೊಂಡು ಉಂಬೋದು-ಹೆಚ್ಚಿನದೆಂದು ಹೇಳುತ್ತಿದ್ದಾಳೆ ಈ ಕೂಸು! “ಭಲೆ” ಅಂದು ಇನ್ನೇನು ಮೊಗಸಾಲೆಯಿಂದ ಒಳಗೆ ಹೋಗಲಿದ್ದ ಗೌರಿಯ ಮುಂದೆ ಹೋಗಿ ಅಡ್ಡಗಟ್ಟಿದ! ಚಕಿತರಾಗಿ ಎಲ್ಲರೂ ನೋಡುತ್ತಿದ್ದಾಗ ಅವಳ ಎದುರಿಗೆ ಮೊಳಕಾಲೂರಿ ಕೂತು, ತಪ್ಪು ಮಾಡಿದಂತೆ ಮೂರು ಸಲ ಕಿವಿ ಹಿಡಿದುಕೊಂಡು ಆಮೇಲೆ ಕೈಮುಗಿದು:

“ಕೂಸೇ ನೀ ಹೇಳಿದ್ದು ದೊಡ್ಡಮಾತು. ನಿನ್ನಂಥಾ ಜಾಣೆಯ ನಾ ಕಾಣೆ. ನನ್ನ ಸಣ್ಣತನವ ಹೊಟ್ಟೆಗೆ ಹಾಕ್ಕೊಂಡು, ದೊಡ್ಡ ಮನಸ್ಸು ಮಾಡಿ ನೀ ನನ್ನ ಮನೆ ತುಂಬಿದರೆ ಅದು ನನ್ನ ಭಾಗ್ಯ, ಶಿವಾಪುರದ ಭಾಗ್ಯ!”

-ಎಂದು ಹೇಳಿದ. ಅವನ ಈ ನಡೆಯನ್ನು ಯಾರೂ ಊಹಿಸಿರಲಿಲ್ಲ. ಚಿಕ್ಕಮ್ಮಣ್ಣಿ ಇರಲಿ, ಗೌರಿಗೂ ಆನಂದಾಶ್ಚರ್ಯಗಳಾಗಿ ಏನು ಹೇಳಬೇಕೆಂದು ತೋಚದೆ ನಾಚಿ, ಕೆನ್ನೆ ಕೆಂಪೇರಿ ಚಿಕ್ಕಮ್ಮಣ್ಣಿಯ ಹಿಂದೆ ಸರಿದಳು. ಈಗ ಗೌರಿ ತನ್ನ ಆಯ್ಕೆಯನ್ನು ಹೇಳಬೇಕು, ಅಥವಾ ಚಿಕ್ಕಮ್ಮಣ್ಣಿಯಾದರೂ ಅವಳ ಪರವಾಗಿ ಹೇಳಬೇಕು.

ಚಿಕ್ಕಮ್ಮಣ್ಣಿ ಸೌಜನ್ಯದಿಂದ

“ನಾವು ಮಾತಾಡಿಕೊಂಡು ನಾಳೆ ಬೆಳಿಗ್ಗೆ ಹೇಳಿದರಾಗದೆ?”

ಎಂದು ನಿನ್ನಡಿಗಂದಳು. ನಿನ್ನಡಿ “ಹಾಂಗೇ ಆಗಲೇಳು” ಎಂದು ಹೇಳಿ ಥಟ್ಟನೆದ್ದು ಹೊರಟ. ತಕ್ಷಣ ಗೌರಿ ಬಂದು “ಅಣ್ಣಾ, ಚಂಡೀದಾಸ ತಾತಾ, ಕುರುಮುನಿ ಇವರನ್ನು ಊಟಕ್ಕೆ ಕರೆದುಕೊಂಡು ನೀನೂ ಬಾ” ಅಂದಳು. ನಿನ್ನಡಿ ಪ್ರಸನ್ನನಾಗಿ “ಹೌಂದು! ಹೌಂದು!” ಎಂದು ತಲೆದೂಗಿದ.

ರವಿಕೀರ್ತಿ ಆಶ್ಚರ್ಯದ ಶಿಖರದ ತುದಿಗಿದ್ದವನು ಕೆಳಕ್ಕಿಳಿದಿರಲೇ ಇಲ್ಲ. ಗೌರಿ ಅಂದರೆ ಬಿಚ್ಚಿದ್ದ ತಲೆಗೂದಲು ಕಟ್ಟಲು ತಿಳಿಯದೆ ದಡ್ಡಿಯೆಂದು ಹಾಗೂ ಭಾವುಕ ಕನಸುಗಳಲ್ಲಿ ದಿನಗಳೆವ ಹಸುಳೆಯೆಂದು ತಿಳಿದಿದ್ದ. ಅವನ ತಿಳುವಳಿಕೆಯನ್ನು ಗೌರಿ ತನ್ನ ಜಾಣ್ಮೆ ವಿವೇಕಗಳಿಂದ ತಲೆಕೆಳಗು ಮಾಡಿದ್ದಳು. ರವಿ ಮಾತ್ರವಲ್ಲ ಎಲ್ಲರೂ ಅವಳ ಕಾರ್ಯ ನೈಪುಣ್ಯ, ಸಮಯಪ್ರಜ್ಞೆಗಳನ್ನು ಮೆಚ್ಚಿಕೊಂಡಿದ್ದರು. ನಿನ್ನಡಿಯ ಜೊತೆ ಜವಾಬ್ದಾರಿಯಿಂದ, ವಿವೇಕದಿಂದ ಮಾತಾಡಿದ್ದಳು. “ಸಹನೌ ಭನುಕ್ತು” ಎಂಬ ಆದರ್ಶಕ್ಕಿಂತ ಇದ್ದುದನ್ನು ಎಲ್ಲರೂ ಹಂಚಿಕೊಂಡು ತಿನ್ನಬೇಕೆಂಬ ಅವಳ ಮಾತು ಹೆಚ್ಚು ಉಚಿತ ಮತ್ತು ಯೋಗ್ಯವಾದುದಾಗಿತ್ತು. ಇಂಥ ಒಂದು ದರ್ಶನವನ್ನು ತನ್ನ ಪುಟ್ಟ ತಂಗಿ ಹೇಳಿದ್ದಕ್ಕೆ ಅವಳ ಬಗ್ಗೆ ಭಾರಿ ಅಭಿಮಾನ ಮೂಡಿತು. ಇಬ್ಬರದೂ ಅನುಪಮ ಜೋಡಿ ಎಂಬ ತೀರ್ಮಾನಕ್ಕೆ ರವಿ ಬಂದ.

ಗೌರಿಗೆ ನಿನ್ನಡಿ ಇಷ್ಟವಾದ. ಅವನನ್ನು ನೋಡಿದಾಗಿನಿಂದ ಚೈತನ್ಯ ಉತ್ಸಾಹಗಳಿಂದ ಕಂಗೊಳಿಸುತ್ತಿದ್ದವಳು ಅವನೊಬ್ಬನೇ ಊಟ ಮಾಡಿದ್ದಕ್ಕೆ ಬೇಸರವಾಯಿತಾದರೂ ಅವನು ಕಿವಿ ಹಿಡಿದುಕೊಂಡು ಕ್ಷಮೆ ಕೇಳಿಕೊಂಡಾದ ಮೇಲೆ ಆಗಲೇ ಅವಳ ಪ್ರೇಮಾಂಕುರವಾಗಿ ದುಂಡುದುಟಿಗಳಲ್ಲಿ ಮಂದಹಾಸ ಲಾಸ್ಯವಾಡಿತು. ಅಜ್ಜಿಯ ಹಿಂದೆ ಅಡಗಿ ನಿಂತಾಗಲೂ ಅವಳ ನೇತ್ರ ಅವನಲ್ಲಿಯೇ ನಟ್ಟಿದ್ದವು. ಕೋಮಲವೂ ಮಾಂಸಲವೂ ಆದ ಬಾಹು ಮತ್ತು ಮುಖಗಳ ಕಾಂತಿ ಅವಳಿಗೊಂದು ಅಪೂರ್ವ ಸೌಂದರ್ಯವನ್ನು ಕೊಟ್ಟಿದ್ದವು.

ಆದರೆ ಛಾಯಾದೇವಿಗಾಗಲಿ, ಬಳಗದವರಿಗಾಗಲಿ ಬೀಗತನ ಮನಸ್ಸಿಗೆ ಬರಲಿಲ್ಲ. ವರ ನಡೆನುಡಿಗಳಲ್ಲಿ ಒಡ್ಡ. ಇತರರಿಗೆ ಹಿತವಾಗುವಂತೆ ಮಾತಾಡುವುದು ಅವನಿಗೆ ತಿಳಿಯದು. ಅರಮನೆಯ ಶಿಷ್ಟಾಚಾರಗಳಂತೂ ಅವನಿಂದ ಬಲು ದೂರ. ಅವನ ಮಾಂಸಖಂಡಗಳು ಕೂಡ ಯಾವುದೋ ಪ್ರಾಣಿಯ ಮಾಂಸಖಂಡಗಳಂತಿದ್ದವು. ಇನ್ನೇನಪ್ಪಾ ಅಂದರೆ ಸರಳ ಸ್ನೇಹಶೀಲ ಮನೋಭಾವ ಅವನ ಒಡ್ಡತನವನ್ನು ಕೊಂಚ ಮರೆಮಾಚಿತ್ತು; ಅಷ್ಟೆ. ಅಂತಸ್ತಿನಲ್ಲಿ ಸಮಾನನಲ್ಲ. ಇಂಥ ಒರಟನ ಜೊತೆ, ಬುಡಕಟ್ಟಿನ ಜನರೊಟ್ಟಿಗೆ ಗುಡ್ಡಗಾಡಿನ ದಟ್ಟ ಕಾಡಿನಲ್ಲಿ ಮುದ್ದು ವಾಸಿಸಬಲ್ಲಳೇ? ಆದರೆ ಗೌರಿಯೇ ನಿನ್ನಡಿಯನ್ನು ಒಪ್ಪಿದಾಳಲ್ಲ!

ಛಾಯಾದೇವಿ ಮತ್ತು ಚಿಕ್ಕಮ್ಮಣ್ಣಿ ರಾತ್ರಿ ಬಹಳ ಹೊತ್ತಿನತನಕ ಮಾತಾಡಿಕೊಂಡರು. ಇವನು ತರುಣಚಂದ್ರನೇ ಎಂದ ಚಿಕ್ಕಮ್ಮಣ್ಣಿಯ ವಾದವನ್ನು ಛಾಯಾದೇವಿ ಒಪ್ಪಲಿಲ್ಲ. ಕೊನೆಗೆ ಶಿಖರಸೂರ್ಯ ಬರುವತನಕ ಕಾಯುವುದೆಂದೂ ಅಥವಾ ರವಿಯನ್ನು ಶಿವಾಪುರಕ್ಕೆ ಕಳಿಸುವುದೆಂದೂ ಅಲ್ಲಿ ಅವನು ನಿಜ ತಿಳಿದು ಬರಲೆಂದೂ ತೀರ್ಮಾನಿಸಿದರು. ಆದರೆ ಅವರಿಬ್ಬರೂ ಗೌರಿಯನ್ನು ಶಿವಾಪುರಕ್ಕೆ ಕಳಿಸಿಕೊಡಲು ಒಪ್ಪಲಿಲ್ಲ. ಅವನು ತರುಣಚಂದ್ರನೇ ಆಗಿದ್ದಲ್ಲಿ ಇಲ್ಲಿಗೇ ಕರೆತರಬೇಕೆಂದು ಆಲೋಚಿಸಿದರು. ಚಿಕ್ಕಮ್ಮಣ್ಣಿ ಇಷ್ಟಕ್ಕೇ ನಿಲ್ಲಿಸಿರಲಿಲ್ಲ. ಚಂಡೀದಾಸನಿಗೆ ವಿಷಯದ ಗಾಂಭೀರ್ಯ ಮತ್ತು ಅಗತ್ಯಗಳನ್ನು ತಿಳಿಸಿ ನಿಜ ತಿಳಿಯಲು ಕೇಳಿಕೊಂಡಿದ್ದಳು. ಅವನೂ ತಿಳಿದು ಹೇಳುವುದಾಗಿ ಮಾತುಕೊಟ್ಟಿದ್ದ.

ಆದರೆ ಬೆಳಿಗ್ಗೆ ಸೂರ್ಯನಾರಾಯಣಸ್ವಾಮಿ ಮೂಡು ದಿಕ್ಕಿನಲ್ಲಿ ಮೂಡುವುದರೊಳಗೆ ನಿನ್ನಡಿ ತನ್ನ ಪರಿವಾರದೊಂದಿಗೆ ಮಾಯವಾಗಿದ್ದ. ದೇವಾಲಯದಿಂದ ಒಬ್ಬ ಸೇವಕ ಬಂದು “ಬಯಲ ಸೀಮೆಯಲ್ಲಿ ಗಡ್ಡೀಬೇನೆ ಹಬ್ಬಿರುವುದರಿಂದ ಬೆಳ್ಳಿ ಮೂಡುವ ಮುನ್ನವೇ ಅವರು ಪಯಣವಾದರೆಂದು, ವಿಷಯವೇನಾದರೂ ಇದ್ದರೆ ಶಿವಾಪುರಕ್ಕೆ ತಿಳಿಸುವುದೆಂದೂ ಹೇಳಿದ್ದಾರೆ” ಎಂದು ಸುದ್ದಿ ಮುಟ್ಟಿಸಿದ.

ಈ ವಿಷಯವಿನ್ನೂ ಬೆಳಗಿನ ಸವಿಗನಸಿನಲ್ಲಿದ್ದ ಗೌರಿಗೆ ತಿಳಿದಿರಲಿಲ್ಲ. ಅಷ್ಟರಲ್ಲಿ ಶಿಖರಸೂರ್ಯ ಸೈನ್ಯಸಮೇತ ಬಂದು ಕನಕಪುರಿಯನ್ನು ವಶಪಡಿಸಿಕೊಂಡ ಸುದ್ದಿ ಬಂತು!

ತಾನು ಏಳುವುದರೊಳಗೆ ನಿನ್ನಡಿ ತನ್ನ ಪರಿವಾರ ಸಮೇತ ಇನ್ನೊಂದು ಊರಿಗೆ ಹೋದ ಸುದ್ದಿ ಕೇಳಿ ಗೌರಿ ಕಂಗಾಲಾದಳು. ಕನ್ಯೆಯನ್ನು ಪರೀಕ್ಷೆ ಮಾಡಿದ ಮಾತ್ರಕ್ಕೆ ಮದುವೆಯಾಗುವುದಿಲ್ಲವಲ್ಲ. ಈ ಮಧ್ಯೆ ಇನ್ನೂ ಕೆಲವು ಆಚಾರ ವಿಚಾರಗಳು ಜವಾಬ್ದಾರಿಗಳ ಮಾತುಕತೆಗಳು ಇರುತ್ತವೆಂದು ಗೊತ್ತಿದ್ದರೂ ತಾನು ಅವನನ್ನ ಇಷ್ಟಪಟ್ಟ ವಿಷಯ ಅವನಿಗೆ ತಲುಪದೇ ಹೋಯಿತಲ್ಲಾ ಎಂದು ಮರುಗಿದಳು. ಹ್ಯಾಗೆ ತಿಳಿಸುವುದೆಂದೂ ಸಂಕಟಪಟ್ಟಳು. ಈ ವಿಷಯದಲ್ಲಿ ಅಣ್ಣ ಸಹಾಯ ಮಾಡಬಹುದು ಎಂದುಕೊಂಡಳು. ಆದರೆ ಮನೆಯಲ್ಲಿ ಯಾರ ಬಾಯೊಳಗೆಲ್ಲ ಶಿಖರಸೂರ್ಯ ಬಂದು ಸುದ್ದಿಯೇ ಓಡಾಡುತ್ತಿತ್ತು. ರವಿ ತಂದೆ ಬಂದ ಸುದ್ದಿ ಕೇಳಿ ‘ಅವನೇ ಎಲ್ಲ ನಿರ್ಧಾರ ತಗೊಳ್ಳುತ್ತಾನೆ ಸುಮ್ಮನಿರು’ ಎಂದು ಹೇಳಿದ. ಆದರೆ ತಂದೆಯ ಆಗಮನದ ಬಗ್ಗೆ ಉತ್ಸಾಹವಿದ್ದಂತೆ ರವಿಗೆ ತನ್ನ ಭವಿಷ್ಯದ ಬಗ್ಗೆ ಭಯ ಕೂಡ ಇತ್ತು. ವಾಸಂತಿಯ ಜೊತೆಗಿನ ಸಂಬಂಧದ ವಿಷಯ ಹೇಳಿ ಅವನನ್ನು ಹ್ಯಾಗೆ ಎದುರಿಸುವುದೆಂದು ಉಪಾಯಗಳನ್ನು ಯೋಚಿಸತೊಡಗಿದ್ದ. ಗೌರಿಗೆ ಮಾತ್ರ ತಂದೆ ಬಗ್ಗೆ ಕಿಂಚಿತ್‌ ಭಯವೂ ಇರಲಿಲ್ಲ. “ತಂದೆಯೇನಾದರೂ ನನ್ನ ಆಯ್ಕೆಯನ್ನು ವಿರೋಧಿಸಿದರೆ ‘ನನ್ನ ಪಾಡು ನನಗೆ ನಿನ್ನ ಕರ್ಮ ನಿನಗೆ’ ಅಂತ ಹೇಳಿ ಶಿವಾಪುರಕ್ಕೆ ನಾನು ಹೊರಡೋಳೇ” ಎಂದು ರವಿಯೆದುರು ಸಾರಿ ಹೇಳಿಬಿಟ್ಟಳು. ಇದೇ ಮಾತನ್ನು ಅಜ್ಜಿ ಮತ್ತು ತಾಯಿಗೂ ಹೇಳಿದಳು. ಛಾಯಾದೇವಿಗೂ ನಿನ್ನಡಿಯನ್ನು ಪ್ರತ್ಯಕ್ಷ ಕಂಡಮೇಲೆ ಅವ ತರುಣಚಂದ್ರ ಹೌದೋ ಅಲ್ಲವೋ ಅಂತ ಸಂಶಯವಿತ್ತು. ಆದರೆ ಗೌರಿಗೆ ಮಾತ್ರ ನಿನ್ನಡಿ ತನ್ನ ಸೋದರಮಾವನೇ ಎಂಬುದರಲ್ಲಿ ಸಂದೇಹವೇ ಇರಲಿಲ್ಲ. ‘ಇದಕ್ಕೆ ನನ್ನ ಅಂತಃಕರಣವೇ ಪ್ರಮಾಣ. ಇಲ್ಲದಿದ್ದಲ್ಲಿ ನಾನವನನ್ನ ನೋಡದಿದ್ದರೂ ಆತ ಹೋರಿಯನ್ನೇರಿ ಕನಸಿನಲ್ಲಿ ಬರುವುದು ಸಾಧ್ಯವಿತ್ತೇ?” ಎಂದು ಚಿಕ್ಕಮ್ಮಣ್ಣಿಯ ಮುಂದೆ ವಾದಿಸಿದ್ದಳು. ಸಣ್ಣವಳ ಮಾತೇನೆಂದು ಅವಳು ಒಪ್ಪಿರಲಿಲ್ಲ. ರವಿಕೀರ್ತಿಗೆ ಇಷ್ಟು ಧೈರ್ಯ ಇರಲಿಲ್ಲ.

ಇತ್ತೀಚೆಗೆ ಹಣ್ಣು ಹಣ್ಣು ಮುದುಕನೊಬ್ಬ ಅವಳ ಕನಸಿನಲ್ಲಿ ಬಂದು “ನಿನ್ನ ಮನೆಗೊಂದು ದೆವ್ವಿನಂಥ ಹದ್ದು ಬರುತ್ತಿದೆ ಹುಷಾರಾಗಿರು” ಎಂದು ಹೇಳಿದಂತಾಯ್ತು.

“ದೆವ್ವಿನಂಥ ಹದ್ದು? ಅದು ಹ್ಯಾಗಿರುತ್ತದೆ?” ಅಂದಿದ್ದಳು.

“ಕಪ್ಪಗಿರುತ್ತದೆ! ನಕ್ಕರೂ ಅತ್ತರೂ ಕೋಪಗೊಂಡರೂ ಹಲ್ಲು ಕಿರಿಯುತ್ತದೆ!”

-ಅಂತ ಹೇಳಿ ಮಾಯವಾಗಿದ್ದ. ಎಚ್ಚರವಾಗಿದ್ದ ಅಜ್ಜಿ ಇವಳ ಕಡೆ ಬೆನ್ನು ಮಾಡಿ ಮಲಗಿದ್ದಳು. ಅವಳನ್ನು ತನ್ನ ಕಡೆಗೆ ತಿರುಗಿಸಿ ತಬ್ಬಿಕೊಂಡು ಮಲಗಿದ್ದಳು.

ಆ ಮುದುಕ ಯಾರು? ದೆವ್ವ ಹೆಂಗಿರುತ್ತದೆ? ಅಂದಾಜಾಗಲೇ ಇಲ್ಲ. ಅಜ್ಜಿಗೆ ಹೇಳಬೇಕೆಂದಳು. ಆಕೆ ಕನಸನ್ನ ಲಘುವಾಗಿ ಪರಿಗಣಿಸಿ ‘ಹೆದರಿದ್ದೀ ಅಂಗಾತ ಮಲಗಬೇಡ. ಎದೆ ಮೇಲೆ ಕೈ ಇಟ್ಟುಕೋಬೇಡ.’ ಅಂತ ಹೇಳುವುದು ಖಾತ್ರಿಯೆನಿಸಿ ಹೇಳಲಿಲ್ಲ. ಆದರೆ ಇನ್ನೊಮ್ಮೆ ಕನಸಿನಲ್ಲಿ ಮುದುಕನ ಕಂಡಾಗ ಅಥವಾ ಅವನು ಹದ್ದಿನ ಬಗ್ಗೆ ಹೇಳಿದಾಗ ಭಯವಾಗಿರಲಿಲ್ಲ. ಆದರೂ ಹುಷಾರಾಗಿರಬೇಕೆಂದುಕೊಂಡಳು. ಮುದುಕ ಎತ್ತರವಾಗಿದ್ದ. ಎದೆ ಮುಖದ ಮೂಳೆ ಕಾಣಿಸುತ್ತಿದ್ದವು. ಕಣ್ಣು ಹುದುಗಿ ತಗ್ಗು ಬಿದ್ದಿದ್ದವು. ಅವನ ಮುಖದ ಮೇಲೆ ಕನಿಷ್ಟ ಒಂದು ಸಾವಿರವಾದರೂ ಅಡ್ಡತಿಡ್ಡ ಗೆರೆ ಮೂಡಿದ್ದವು. ಆತ ಇನ್ನೊಮ್ಮೆ ಕನಸಿನಲ್ಲಿ ಬಂದಾಗ-

“ಆ ಹದ್ದು ಹೆಂಗಿರ್ತದೆ?”-ಅಂತ ಕೇಳಿದ್ದಳು.

“ಆಕಾಶದ ನೀಲಿಮದಲ್ಲಿ ಅಡಗಿ ಹೊಂಚಿರ್ತದೆ. ನೀನು ಮೈ ಮರೆತಾಗ ಸದ್ದಿಲ್ಲದೆ ಎಗರಿ ಕಚ್ಚಿಕೊಂಡು ಹೋಗುತ್ತದೆ. ಅದಕ್ಕೆ ಹೊರಕ್ಕೆ ಹೊರಟಾಗ ಕೈಯಲ್ಲೊಂದು ಕುಡುಗೋಲು ಹಿಡಿದಿರು. ಅದು ಎಗರುವುದಕ್ಕೆ ಬಂದಾಗ ಬಿರುಗಾಳಿ ಬೀಸುತ್ತದೆ. ಅದೇ ಗುರುತು. ತಕ್ಷಣ ಕುಡುಗೋಲು ಹಿಡಿದು ಸಿದ್ಧಳಾಗು”-ಎಂದು ಹೇಳಿದ್ದ.

ಮಾರನೇ ದಿನ ಗೌರಿ ಹೊರಗೆ ಹೊರಟಾಗ ಕುಡುಗೋಲು ಹಿಡಿದುಕೊಂಡಿದ್ದನ್ನ ನೋಡಿ ಚಿಕ್ಕಮ್ಮಣ್ಣಿ ಚಕಿತಳಾದಳು. “ಯಾಕೆ ಮುದ್ದು ಕುಡುಗೋಲು ಹಿಡಿದಿದ್ದೀಯಲ್ಲ? ಹುಲ್ಲು ಕೊಯ್ಯಬೇಕೆ? ಸೇವಕರಿಲ್ಲವೇ?” ಎಂದಳು.

“ಇಲ್ಲಜ್ಜಿ ಆಕಾಶದಲ್ಲಿ ಕೆಟ್ಟ ಹದ್ದು ಬಂದಿದೆಯಂತೆ. ಈ ಕ್ಷಿತಿಜದಿಂದ ಆ ಕ್ಷಿತಿಜದ ತನಕ ಅದಕ್ಕೆ ರೆಕ್ಕೆಗಳಿವೆಯಂತೆ. ಅದು ಮನುಷ್ಯನನ್ನ ಕಚ್ಚಿಕೊಂಡು ಹೋಗುತ್ತದಂತೆ; ಅದಕ್ಕೇ.”

-ಅಂದಳು. ಚಿಕ್ಕಮ್ಮಣ್ಣಿ ಇದನ್ನು ಕೇಳಿ ಬಹಳ ಹೊತ್ತು ನಕ್ಕಳು. ಮತ್ತು ಇದು ನೆನಪಾದಾಗಲೆಲ್ಲ ಹೇಳಿ ನಗುತ್ತಿದ್ದಳು.

ಇನ್ನೊಂದು ದಿನ ಶಿಖರಸೂರ್ಯನೇ ಅವಳ ಕನಸಿನಲ್ಲಿ-ಹೊರಗಿನಿಂದ ಬಂದು ಮನೆ ಹೊಕ್ಕ. ಇಷ್ಟು ವರ್ಷ ಗಮನಿಸದಿದ್ದವಳು ಆ ದಿನ ಕನಸಿನಲ್ಲಿ ಆತನಿಗೊಂದು ದಟ್ಟವಾದ ಕಪ್ಪು ನೆರಳು ಬಿದ್ದಿರುವುದನ್ನು ಕಂಡು ಬೆರಗಾದಳು. ಇನ್ನೂ ಆಶ್ಚರ್ಯವೆಂದರೆ ಆ ನೆರಳು ಹದ್ದಿನ ನೆರಳಿನಂತಿತ್ತು! ಅಪ್ಪ ಹದ್ದಿನ ಜೊತೆ ಮನೆ ಹೊಕ್ಕನ? ಮುದುಕ ಹೇಳಿದ ಹದ್ದು ಅಂದರೆ ಈ ನೆರಳು ಇದ್ದೀತ? ಇರಲಾರದೆಂದುಕೊಂಡಳು. ಹದ್ದು ಇನ್ನೊಂದು ಕಡೆಯಿಂದ ಹಾರಿ ಬರಬಹುದು. ತಾನು ಹುಷಾರಾಗಿರಬೇಕಲ್ಲದೇ ಮನೆಯವರನ್ನು ಎಚ್ಚರಿಸಬೇಕೆಂದುಕೊಂಡಳು. ಇದಾಗಿ ಎರಡು ದಿನಕ್ಕೆ, ರವಿ ಮತ್ತು ಬೊಂತೆಯ ಕನಕಪುರಿಗೆ ಬರಬೇಕೆಂದು ಕುದುರೆ ಗಾಡಿ ಬಂತು.