ಅದಾಗಿ ಒಂದು ದಿನ ಬೆಳ್ಳಿ ಗವಿಗೆ ಬಂದಾಗ ಶಿವಪಾದ

“ಮಗಳೇ ಈ ಬೇಸಿಗೆಯಲ್ಲೇ ಮಗನಿಗೆ ಮದುವೆಯ ವ್ಯವಸ್ಥೆ ಮಾಡು” ಅಂದ.

“ಅವನಿಗೊಪ್ಪುವ ಕನ್ಯೆಯನ್ನ ನೀನೇ ತೋರ್ಸು;”

-ಎಂದಳು.

“ಐದು ಬೊಗಸೆ ಗಂಧಶಾಳಿ ಭತ್ತ ತಗೊಂಡು ಅವನ ಶಲ್ಯದಲ್ಲಿ ಕಟ್ಟು. ಯಾವ ಕನ್ಯೆ ಕೇವಲ ಅವನ ಶಲ್ಯದೊಳಗಿನ ಭತ್ತದಿಂದ ಅವನ ಹೊಟ್ಟಿತುಂಬ ಊಟ ಹಾಕುವಳೋ ಅವಳೇ ಅವನ ಮಡದಿ”

“ಗಡಿಗೆ, ಮಡಿಕೆ ಅವೂ ಐದು ಬೊಗಸೆ ಭತ್ತದೊಳಗೇ ಬಂತ?”

“ಹೆಂಗಾದರೂ ಮಾಡಲಿ, ಏನೇ ಮಾಡಲಿ, ಅಷ್ಟೇ ಭತ್ತದಲ್ಲೇ ಮಾಡಬೇಕು.”

“ನನ್ನಯ್ಯಾ ಇದಾಗೋ ಮಾತ, ಹೋಗೋ ಮಾತ? ಯಾವಳಾದರೂ ಐದು ಬಗಸಿ ಭತ್ತದೊಳಗs ಇಷ್ಟೆಲ್ಲಾ ಮಾಡಾಕಾದೀತ?”

-ಎಂದು ಸಂದೇಹ ವ್ಯಕ್ತಪಡಿಸಿದಳು ಬೆಳ್ಳಿ.

“ಅಮ್ಮನ ಅಪ್ಪಣೆ ಈ ರೀತಿ ಆಗಿದೆ! ಅದರ ಕತೆ ನನಗೂ ನಿನಗೂ ತಿಳೀಲಾರದು ತಿಳಿದವಳ್ಯಾವಳೋ ಹುಡುಗಿ ಕಾದಿರ್ತಾಳ. ಒಳ್ಳೇ ದಿನ ಒಳ್ಳೇ ವ್ಯಾಳ್ಯೆ ನೋಡಿ ಕನ್ಯೆಯ ಶೋಧನೆಗೆ ಕಳಿಸು” ಅಂದ.

“ಆಯಿತೆಪ್ಪಾ”. ಅಂದಳು.

ಶಿವಪಾದ ಹೇಳಿದಂತೆ ಒಂದು ಒಳ್ಳೆಯ ದಿನ ಒಳ್ಳೆಯ ವೇಳೆ ಅಮ್ಮನ ನೆನೆದು ಬೆಳ್ಳಿ ಎದ್ದು ಕೊಟ್ಟಿಗೆಯ ಕೋಳಿ ಕೂಗುವ ಮುನ್ನ ಮಗನ ಎಬ್ಬಿಸಿದಳು. ಮಗ ಮಡುವಿಗೈದಿ ಮೂರು ಮುಳುಗು ಹಾಕಿ ಮಿಂದು ಒದ್ದೆ ಬಟ್ಟೆಯಲ್ಲೇ ಬೀಡಿಗೆ ಬಂದು ಮುಂಜಾನೆಯ ಹನಿಪೂಜೆ ಮಾಡಿದ. ಹೆತ್ತಯ್ಯ ಮುತ್ತಯ್ಯರ ನೆನೆದು ಬೆಟ್ಟದ ಅಮ್ಮನ ನೆನೆದ. ಮೂಡುದಿಕ್ಕು ನೋಡಿ ಸೂರ್ಯನ ಹೊಗಳಿದ. ಪಡುವಣಕ್ಕೆ ತಿರುಗಿ ಚಂದ್ರನ ನೆನೆದ, ಆಮೇಲೆ ಬಟ್ಟೆ ಬದಲಿಸಿ ಮಡಿಯುಟ್ಟು ಗಂಧವಪೂಸಿ ಭಕ್ತಿಗೆ ವಿಭೂತಿಯ ಹಚ್ಚಿಕೊಂಡ.

ಅಷ್ಟರಲ್ಲಿ ಬೆಳ್ಳಿ ಬೆಳಗಿನ ನ್ಯಾರೆ ಬೆಳಗಿನ ವ್ಯಾಳ್ಯದಲ್ಲೇ ಮಾಡಬೇಕೆಂದು ಎಲ್ಲ ಸಿದ್ಧಪಡಿಸಿ ಬಾಳೆ ಎಲೆ ಹಾಕಿ, ಹಾಕಿದ ಎಲೆಗೆ ನೀರಿನ ಹನಿ ಚಿಮುಕಿಸಿ ಮಗನಿಗಾಗಿ ಕಾಯುತ್ತಿದ್ದಳು. ನಿನ್ನಡಿ ಹೋಗಿ ನ್ಯಾರೆಗೆ ಕೂತ. ಮೆಣಸು ಹುಳಿ ಸೇರಿಸಿ ಐದು ತೆಂಗಿನ ಕಾಯಿ ಹಾಕಿ ಮಾಡಿದ ಚಟ್ನಿಯ ನೀಡಿದಳು. ಹಸಿರು ಬಣ್ಣದ ಕಾಯಿ ಪಲ್ಯ ಹಾಕಿ, ಬೆಳ್ಯನ ಆರು ರೊಟ್ಟಿಯ ಹಾಕಿ ಮ್ಯಾಲೆ ಪಚ್ಚವರ್ಣದ ಸೊಪ್ಪಿನ ಪಲ್ಯ, ಗಿಂಡಿಗಾತ್ರದ ಬೆಣ್ಣೆ ಉಂಡಿಯ ಹಾಕಿ, ಒಂದೆರಡು ಅಕ್ಕಿಯ ಉಂಡಿಗಳನ್ನಿಟ್ಟು ಅದಕ್ಕೊಪ್ಪುವ ಉಪ್ಪಿನಕಾಯಿ ನೀಡಿದಳು. ನಿನ್ನಡಿ ಎಡದಲ್ಲಿ ಬೆಕ್ಕಿಗೆ ಬೆಣ್ಣೆಯ ಹಾಕಿ, ಬಲದಲ್ಲಿ ನಾಯಿಗೆ ರೊಟ್ಟಿಯ ಹಾಕಿದ. ಬಿಸಿಬಿಸಿ ಉಂಡು ಭಗಭಗ ಬೆವೆತು ತಂಬಿಗೆ ಕಪಿಲೆಯ ಹಾಲು ಕುಡಿದು ಎಂಜಲು ತೊಳಕೊಂಡು ಮ್ಯಾಲೆದ್ದ.

ತಾಯಿ ಕಲ್ಲುಪೆಟ್ಟಿಗೆ ಬಾಗಿಲು ತೆಗೆದು ಪಟ್ಟೆಯ ಕಂಬಿ ಧೋತರ ಕೊಟ್ಟಳು. ಧೋತರವನ್ನು ಕತ್ತರಿ ಕಚ್ಚೆಹಾಕಿ ಉಟ್ಟ. ಓರವಾಗಿ ಬಟ್ಟೆ ತೊಟ್ಟ. ಪಟ್ಟೆಯ ರುಮಾಲು ತಕ್ಕೊಂಡು ನೆರಿಗೆ ನೆರಹಿ ಮುಂಡಾಸು ಕಟ್ಟಿಕೊಂಡ. ಬೆಳ್ಳಿಕಟ್ಟಿನ ಚೂರಿ ತಗೊಂಡ. ಅಷ್ಟರಲ್ಲಿ ಅಬ್ಬೆ ಪಟ್ಟೆಯ ಶಲ್ಯದಲ್ಲಿ ಐದು ಬೊಗಸೆ ಗಂಧಶಾಳಿ ಭತ್ತ ಕಟ್ಟಿ ಎಡಭುಜದ ಮ್ಯಾಲೆ ಹಾಕಿದಳು. ಅಬ್ಬೆಯ ಪಾದ ಮುಟ್ಟಿ ನಮಸ್ಕರಿಸಿದ, ಹೆತ್ತಯ್ಯ ಮುತ್ತಯ್ಯ ಬೆಟ್ಟದ ಅಮ್ಮ, ಶಿವಪಾದನ ನೆನೆದ.

ಹೊರಗೆ ಗೂಳಿ ಭೈರನ ಬೆನ್ನ ಮ್ಯಾಲೆ ಜೂಲು ಹಾಕಿ ಸಿಂಗಾರ ಮಾಡಿದ್ದರು. ಕುರುಮುನಿ ತನ್ನ ಕುದುರೆಯೊಂದಿಗೆ ಕಾಯುತ್ತಿದ್ದ. ಕುದುರೆಯೇರಿ ಚಂಡೀದಾಸ ಕಾಯುತ್ತಿದ್ದ. ಅಡಿಯುದ್ದದ ಎಕ್ಕಡ ಮೆಟ್ಟಿ ಆಳುದ್ದದ ಕೋಲು ಕೊಡೆ ಹಿಡಿದುಕೊಂಡು ಹೋರಿಯನ್ನೇರಿ ನಿನ್ನಡಿ ಕುರುಮುನಿ, ಚಂಡೀದಾಸರ ಜೊತೆಗೂಡಿ ಕನ್ಯಾರ್ಥಿಯಾಗಿ ಪಯಣವಾದ.

ತಮ್ಮ ಸ್ಥಾನಮಾನ ಗುಣಗೌರವಗಳಿಗೆ ಸಮಾನವಾದ ಯಾರ್ಯಾರ ಮನೆತನಗಳಲ್ಲಿ ಕನ್ಯೆಯರಿದ್ದಾರೆಂದು ಕೇಳಿ ತಿಳಿದಿದ್ದರೋ ಆ ಎಲ್ಲ ಊರು ಹಟ್ಟಿ ಮನೆತನಗಳಿಗೆ ಹೋದರು. ಕನ್ಯಾರ್ಥಿಯಾಗಿ ಒಂದು ತಿಂಗಳು ಅಲೆದಾಡಿದರೂ ನಿನ್ನಡಿಯ ಕೈಹಿಡಿಯಲು ಯಾವೊಬ್ಬ ಕನ್ಯೆಯೂ ಮುಂದೆ ಬರಲಿಲ್ಲ. ಅನ್ನ ಮೊದಲಾಗಿ ಅಡಿಗೆಯ ಪಾತ್ರೆ ಪಡಗ, ಸಾರಿನ ಉಪ್ಪೆಣ್ಣೆ ಕೂಡ ಐದೇ ಬೊಗಸೆ ಭತ್ತದಲ್ಲಾಗಬೇಕೆಂದರೆ ಹ್ಯಾಗೆ?

ಇಲ್ಲಿಯವರೆಗೆ ಚಂಡೀದಾಸ ಗೌರಿಯ ಪ್ರಸ್ತಾಪ ಮಾಡಿರಲಿಲ್ಲ. ಅದಕ್ಕೆ ಎರಡು ಕಾರಣಗಳಿದ್ದವು. ಒಂದನೆಯದಾಗಿ ಸದರಿ ಕರಾರಿನಂತೆ ಅಡಿಗೆ ಮಾಡುವುದಾಗಲಿ, ವರನಿಗೆ ತೃಪ್ತಿಯಾಗುವಂತೆ ಉಣಬಡಿಸುವುದಾಗಲಿ ಅಸಾಧ್ಯವೆಂದು ಅವನೂ ನಂಬಿದ್ದ. ಎರಡನೆಯ ಕಾರಣವೆಂದರೆ ಒಂದುವೇಳೆ ಕರಾರಿನಂತೆ ಎಲ್ಲ ನಡೆದರೂ ಶಿಖರಸೂರ್ಯ ಈ ಸಂಬಂಧವನ್ನ ಒಪ್ಪಲಾರ. ಈಗ ಅವನು ಅದೃಶ್ಯನಾಗಿದ್ದರೂ ಆಕಸ್ಮಾತ್ ಮುಂದೆ ಪ್ರತ್ಯಕ್ಷನಾದರೂ ಅವನು ಒಪ್ಪಲಾರದ ಸಂಬಂಧವಿದು. ಆತ ಅರಮನೆಯವ. ಅವನ ಗೌರವ ಅಂತಸ್ತುಗಳು ದೊಡ್ಡವು. ಒಂದು ಚಿಕ್ಕ ಹಟ್ಟಿಯ, ಅದರಲ್ಲೂ ಶಿವಪಾದನ ಊರಿನ ಸಂಬಂಧ ಒಪ್ಪತ್ತಾನೆಂಬುದು ಅವನ ಊಹೆಗೆ ಮೀರಿದ ವಿಷಯವಾಗಿತ್ತು. ಈಗ ನೋಡಿದರೆ ಯಾವೊಬ್ಬ ಕನ್ಯೆಯೂ ಒಪ್ಪಿಲ್ಲವಾದ್ದರಿಂದ ಯಾಕೆ ಪ್ರಶ್ನಿಸಬಾರದು? ಅನ್ನಿಸಿ ಗೌರಿಯ ಹೆಸರು ಹೇಳಿದ. ನಿನ್ನಡಿ “ಅದೂ ಆದೀತು” ಅಂದ. ಬಿಳಿಗಿರಿಗೆ ಹೇಳಿ ಕಳಿಸಿದರು.