ಬಿಳಿಗಿರಿಗೆ ಚಿಕ್ಕಮ್ಮಣ್ಣಿ ಮಗಳು, ಮೊಮ್ಮಗಳೊಂದಿಗೆ ಬಂದುದೇ ಆಯ್ತು, ಇಡೀ ಅರಮನೆ ಆನಂದದಿಂದ ನಲಿದಾಡಿತು. ಶಿಖರಸೂರ್ಯ ಯಾಕೆ ಬರಲಿಲ್ಲವೆಂದು ಮತ್ತೆ ಮತ್ತೆ ಕೇಳಿದರು. ಚಿಕ್ಕಮ್ಮಣ್ಣಿಯ ಮುದಿ ಚಿಕ್ಕಪ್ಪನಂತೂ ತನ್ನೆಲ್ಲ ಸಮಸ್ಯೆಗಳು ಬಗೆಹರಿದಂತೆ ಉಲ್ಲಾಸಭರಿತನಾದ. ಮಗಳು ಕನಕಪುರಿಯ ಹಂಗು ಹರಿದುಕೊಂಡು ತನ್ನಲ್ಲಿಗೆ ಬಂದದ್ದೇ ಮುದುಕು ಹೊಸಪ್ರಾಯ ಬಂದಷ್ಟು ಹುರುಪಾದ. ಅವನ ಆನಂದಕ್ಕೆ ಬೇರೊಂದು ಕಾರಣವೂ ಇತ್ತು. ತನ್ನ ಮಗಳು ಜಯರಾಣಿ ಚಿಕ್ಕವಳಾದರೂ ಅವಳನ್ನು ಯೋಗ್ಯವರನಿಗೇ ಕೊಡಬೇಕು. ವಯಸ್ಸು ಕೊಂಚ ಹೆಚ್ಚಾದರೂ ಮಗಳಿಗೆ ರವಿಕೀರ್ತಿಗಿಂತ ಹೆಚ್ಚಿನ ವರ ಯಾರಿದ್ದಾರೆ? ಈ ಮೂಲಕ ಬಲಾಢ್ಯನಾದ ಶಿಖರಸೂರ್ಯನೂ ಬಿಳಿಗಿರಿಯಲ್ಲಿರುತ್ತಾನೆ. ಅವನು ಜೊತೆಗಿದ್ದರೆ ನೂರಾಳ್ಪಡೆ ಇದ್ದ ಹಾಗೆ. ರವಿಕೀರ್ತಿಯಿಂದಾಗಿ ರಾಜ್ಯವೂ ಬಳಗದವರ ಕೈಯಲ್ಲೇ ಉಳಿದಂತಾಗುತ್ತದೆ. ಚಿಕ್ಕಮ್ಮಣ್ಣಿ ಹಾಗೂ ಛಾಯಾದೇವಿಗೂ ಈ ವಿಚಾರ ಸಮ್ಮತವೇ.ಆದರೆ ರವಿಕೀರ್ತಿಗೊಂದು ಸ್ವಂತ ಅಭಿಪ್ರಾಯವಿದ್ದೀತೆಂದು ಮಾತ್ರ ಯಾರೊಬ್ಬರೂ ಯೋಚಿಸಲಿಲ್ಲ. ಎಲ್ಲರೂ ಗಂಭೀರವಾಗಿ ಆಲೋಚನೆ ಮಾಡಿದ್ದು ಗೌರಿಯ ಬಗ್ಗೆ. ಆಕೆ ಮಹಾಚೆಲುವೆಯಲ್ಲವೆಂಬ ಆತಂಕ ಛಾಯಾದೇವಿಗಿದ್ದರೆ ಚಿಕ್ಕಮ್ಮಣ್ಣಿ ಮತ್ತು ವೃದ್ಧ ದೊರೆಗೆ ಆ ಚಿಂತೆ ಇರಲಿಲ್ಲ. ನಮ್ಮ ಮೊಮ್ಮಗಳಿಗೆ ವರ ಸಿಕ್ಕುವುದಿಲ್ಲವೆಂದರೆ ಅದೊಂದು ಹಾಸ್ಯಾಸ್ಪದ ಪ್ರಸಂಗವೆಂದೇ ಅವರು ನಂಬಿದ್ದರು.

ಆದರೆ ಬಿಳಿಗಿರಿಗೆ ಬಂದಾದಮೇಲೆ ಗೌರಿ ಇನ್ನೂ ಒಂಟಿಯಾದಳು. ಅಣ್ಣನಿರಲಿಲ್ಲ. ಜೊತೆಗಿದ್ದ ಅಜ್ಜಿ ತನ್ನ ಬಳಗ ಸೇರಿಕೊಂಡು ಅಂತಃಪುರದ ಮೆಚ್ಚಿನ “ಚಿಕ್ಕಮ್ಮಣ್ಣಿ”ಯಾಗಿ ಬಿಟ್ಟಳು. ತಾಯಿ ಅಂತಃಕರಣದವಳಲ್ಲ. ನಿದ್ದೆಯಿಲ್ಲ, ಎಚ್ಚರದಲ್ಲಿ ಸೊಗಸಿಲ್ಲ. ನೋಡುವುದಕ್ಕೆ ಕನ್ನಡಿ ಬಿಟ್ಟರೆ ಬೇರೆ ಆತ್ಮೀಯರಿಲ್ಲ. ಮಾತಾಡುವುದಕ್ಕೆ ಬೇರೆ ದನಿಯಿಲ್ಲ. ಬೋರುಬೋರಾಗಿ ಕುಂಯೋ ಮರ್ಯೋ ಅಂತ ಹಾಡು ಒದರಿದರೆ ನಾಯಿ ಅತ್ತಂತೆ ಕೇಳಿಸಿ ಬಾಯಿ ಮುಚ್ಚುತ್ತಿದ್ದಳು. ಅವಳಿಗೆ ಸಮಾಧಾನ ತಂದ ಎರಡು ಸಂಗತಿಗಳೆಂದರೆ ಅರಮನೆಯ ಅನತಿದೂರದಲ್ಲೇ ಇದ್ದ ಶಿವದೇವಾಲಯ ಮತ್ತು ಅದರ ಸುತ್ತಲೂ ಹಬ್ಬಿದ್ದ ಹಚ್ಚ ಹಸಿರು ಕಾಡು.

ಸೋಮವಾರ ಬಿಟ್ಟರೆ ಉಳಿದ ದಿನಗಳಲ್ಲಿ ಆ ದೇವಸ್ಥಾನಕ್ಕೆ ಬರುತ್ತಿದ್ದ ಜನ ಕಡಿಮೆ. ಇದರಿಂದ ಹೆಚ್ಚು ಸಮಯ ದೇವಸ್ಥಾನದಲ್ಲೇ ಕಳೆಯಲು ಅನುಕೂಲವಾಯಿತು. ಸಂಜೆ ಸೂರ್ಯಾಸ್ತದ ಸಮಯದಲ್ಲಿ ದೇವಾಲಯದ ಹಿಂದಿನ ಬಂಡೆಯ ಮೇಲೇರಿ ಕ್ಷಿತಿಜವನ್ನು ನೋಡುತ್ತ ಕೂರುವುದು ಅವಳಿಗೆ ಪ್ರಿಯವಾದ ಹವ್ಯಾಸ. ಕ್ಷಿತಿಜ ಬಹುಬೇಗ ಅವಳ ಕಣ್ಣುಗಳನ್ನು ತನ್ನ ಕಡೆಗೆ ಸೆಳೆಯುತ್ತಿತ್ತು. ಮತ್ತು ತದೇಕ ಧ್ಯಾನದಿಂದ ತನ್ನ ಕಡೆಗೇ ನೋಡುತ್ತ ಕೂತಿರುವುದನ್ನು ಅದು ಅವಳಿಗೆ ಕಲಿಸಿಕೊಟ್ಟಿತು. ಹಾಗೆ ಕೂತಿರುವಂತೆಯೇ ಕಣ್ಣು ಕ್ಷಿತಿಜದಾಚೆಯ ಆಳಕ್ಕೆ ಪ್ರವೇಶಿಸಿ ಅದರೊಳಗಿಂದ ಬರುವ ಚಂದ್ರ ಚಿಕ್ಕೆ ತಾರೆಗಳನ್ನ ಆಕೆ ತನಗೆ ಮಾತ್ರ ಸಂದೇಶ ತಂದಂತೆ ತೋರುತ್ತಿತ್ತು. ಅಂಥ ಹಕ್ಕಿಯ ದರ್ಶನವಾದೊಡನೆ ಮೊದಲಿನ ಗೌರಿ ಇನ್ನೊಬ್ಬಳಾಗಿ ಇನ್ನೊಂದು ಲೋಕದವಳಾಗಿ, ಬಹುಶಃ ದೇವತೆಯಾಗಿ ಪರಿವರ್ತನೆ ಹೊಂದುತ್ತಿದ್ದಳು. ಆವಾಗ ತಾನಿದ್ದ ವಾತಾವರಣಕ್ಕೆ ತೀರ ಅಪರಿಚಿತಳಾಗಿ, ಅಥವಾ ಇದೆಲ್ಲದರಿಂದ ಗಾಬರಿಗೊಂಡು ಇದೆಲ್ಲ ಹಿಂಗ್ಯಾಕಾಗುತ್ತದೆ? ಇದರ ಅರ್ಥವೇನು? ಇವರ್ಯಾರು? ನಾನ್ಯಾರು? ಕ್ಷಿತಿಜವೆಂದರೇನು? ಅದರಾಚೆ ಯಾರಿದ್ದಾರೆ? ಆಕಾಶವ್ಯಾಕೆ? ತಂದೆ ತಾಯಿ ಯಾಕೆ? ಇತ್ಯಾದಿ ಕೇಳಿಕೊಂಡು ಕಳವಳಗೊಳ್ಳುತ್ತಿದ್ದಳು. ಆಮೇಲೆ ಕ್ಷಿತಿಜ ಬೂದುಬಣ್ಣಕ್ಕೆ ತಿರುಗಿ ಬರಬರುತ್ತ ಮಸಿಯಿಂದ ಬರೆದಂತೆ ಕಪ್ಪುಬಣ್ಣಕ್ಕೆ ತಿರುಗಿದಾಗ ಅರಮನೆಗೆ ಹಿಂದಿರುಗುತ್ತಿದ್ದಳು. ಅವಳು ದೇವಾಲಯದಿಂದ ಬಾರದಿರುವುದನ್ನು ಅಜ್ಜಿಯ ಶಿವಾಯಿ ಬೇರೆ ಯಾರೂ ಗಮನಿಸುತ್ತಿರಲಿಲ್ಲ.

ಅರಮನೆಯಲ್ಲಿ ಕೂಡ ಅವಕಾಶ ಸಿಕ್ಕಾಗಲ್ಲೆಲ್ಲ ಗೌರಿ ಚಂಡೀದಾಸ ಕೊಟ್ಟ ಅಡಿಕೆ ಹಿಡಿದುಕೊಂಡು ಕಣ್ಣಮುಚ್ಚಿ ತನ್ನ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದಳು. ಕೆಲವು ಸಲ ಹಾಗೇ ನಿದ್ದೆ ಬಂದು ಕನಸು ಕಾಣುತ್ತ ಕೂರುತ್ತಿದ್ದಳು.

ಒಂದು ದಿನ ಎಡಗೈಯಲ್ಲಿ ಆರು ಬೆರಳಿದ್ದ ಹುಡುಗನೊಬ್ಬ ತನ್ನ ಹಿಂದೆ ನಡೆದು ಬರುವುದನ್ನು ಕನಸಿನಲ್ಲಿ ಕಂಡಳು. ಬಿಳಿಬಟ್ಟೆ ತೊಟ್ಟಿದ್ದ. ಎತ್ತಿನ ಮ್ಯಾಲೆ ಕೂತುಕೊಂಡು ಕಾಡಿನಲ್ಲಿ ಭೇಟಿಯಾದ. ದೇವಸ್ಥಾನಕ್ಕೆ ಹೋದಾಗ ಹೊರಗೆ ಅದೇ ಅಥವಾ ಅಂಥದೇ ಎತ್ತು ನಿಂತುಕೊಂಡಿತ್ತು! ಎತ್ತಿನ ಬಳಿ ಅವನಿರಲಿಲ್ಲ. ಆತ ಮತ್ತು ಆ ಎತ್ತು ದೈವವೋ? ಭೂತವೊ? ಗೊತ್ತಾಗದೆ ಹೆದರಿದಳು. ಆದರೆ ನೋಡುವುದಕ್ಕೆ ಚಂದ ಇದ್ದ ಹುಡುಗ. ದೈವವೇ ಇರಬೇಕೆಂದು ಸಾಮಾಧಾನ ಮಾಡಿಕೊಂಡಳು.

ಒಂದು ದಿನ ಸರಿ ರಾತ್ರಿ ಇದ್ದೀತು, ಕನಸಿನಲ್ಲಿ ಎತ್ತು ಢುರುಕೀ ಹೊಡೆದದ್ದು ಕೇಳಿಸಿ ಫಕ್ಕನೆ ಎದ್ದು ಕೂತಳು. ಎಲ್ಲರೂ ಗಾಢನಿದ್ದೆಯಲ್ಲಿದ್ದರು. ಕನಸೆ? ನಿಜವೆ? ದನಿ ಮಾತ್ರವಲ್ಲ, ಎತ್ತಿನ ಕಿಣಿಕಿಣಿ ಗಂಟೆಯ ನಾದವನ್ನೂ ಕೇಳಿಸಿಕೊಂಡ ನೆನಪಾಯಿತು. ಹಾಗಿದ್ದರೆ ದೇವಸ್ಥಾನದ ಎತ್ತು ಅರಮನೆಗೆ ಬಂದಿರಬಹುದೆ, ಎತ್ತಿನ ಜೊತೆ ಆರು ಬೆರಳಿನ ಹುಡುಗ ಬಂದಿರಬಹುದೆ? – ಎಂದು ಮೆಲ್ಲಗೆ ಕಿಡಿಕಿಯ ಬಳಿ ಹೋಗಿ ಹೊರಗೆ ನೋಡಿದಳು. ಎದುರು ಮರದಾಚೆ ಎತ್ತು ನಿಂತಿತ್ತು! ಎತ್ತಿನೊಂದಿಗೆ ಬೆಳಕು ಹಿಡಿದುಕೊಂಡು ತನ್ನ ಕಡೆಗೇ ನೋಡುತ್ತ ಆತ ನಿಂತುಕೊಂಡಿದ್ದ! ಗಡಗಡ ನಡುಕ ಹುಟ್ಟಿ ಓಡಿಬಂದು ಗಟ್ಟಿಯಾಗಿ ಅಜ್ಜಿಯನ್ನು ತಬ್ಬಿಕೊಡು ಮಲಗಿದಳು. ಅಜ್ಜಿಗೆ ಎಚ್ಚರವಾಗಿ ಮೊಮ್ಮಗಳನ್ನು ತಾನೂ ಬಿಗಿಯಾಗಿ ತಬ್ಬಿಕೊಂಡು ಇಬ್ಬರ ಹೊದಿಕೆಯನ್ನ ಮ್ಯಾಲೆಳೆದುಕೊಂಡು ಮಲಗಿದಳು. ಮೊಮ್ಮಗಳಿಗೆ ಚಳಿಜ್ವರ ಬಂದುದು ಅಜ್ಜಿಗೆ ತಿಳಿಯಲಿಲ್ಲ. ಇವಳೂ ಹೇಳಲಿಲ್ಲ.

ಆ ರಾತ್ರಿ ಬೆಳ್ಳಂಬೆಳಗು ಆ ಹುಡುಗನ, ಮತ್ತವನ ಎತ್ತಿನ ಹಳವಂಡಗಳು ಮಾಯವಾಗಲಿಲ್ಲ. ಎತ್ತು ಮೇಲಿಂದ ಮೇಲೆ ಗುಟುರು ಹಾಕುತ್ತಲೇ ಇತ್ತು. ಬೆಳಗಿನ ತಂಪುಗಾಳಿ ಬೀಸಿದಾಗ ಸಪನಿದ್ದೆಗೆ ಸಂದಳು. ಕನಸಿನಲ್ಲಿ ಮತ್ತೆ ಎತ್ತಿನ ಗುಟುರು ಕೇಳಿಸಿತು. ಇವಳು ಶಿವಲಿಂಗದೆದುರು ನೈವೇದ್ಯ ಇಟ್ಟು ಕೈ ಮುಗಿದಳು. ಆರುಬೆರಳಿನ ಹುಡುಗ ಈಗ ಜಂಗಮವೇಷದಲ್ಲಿದ್ದ.

ಏನೊಂದನ್ನೂ ಮಾತಾಡದೆ ಸೀದಾ ಪಾದವ ಬೆಳೆಸಿದ ಗರ್ಭಗುಡಿಗೆ; ಗಬಗಬ ನೈವೇದ್ಯ ತಿಂದು ಬಾಯೊರೆಸಿಕೊಡ. ಶಿವಲಿಂಗದ ಮ್ಯಾಲಿನ ಪತ್ರಿಯೆಲೆ ಇವಳ ಕೈಗಿಟ್ಟು ಕತ್ತಲೆಯಲ್ಲಿ ಮಾಯವಾದ! ಹಕ್ಕಿಯ ಕನವರಿಕೆ ಕೇಳಿಸಿತು. ಎಚ್ಚರಗೊಂಡಳು.

ಎಚ್ಚರವಾದಾಗ ಜ್ವರ ಕಮ್ಮಿಯಾಗಿ ಆಕಾಶದಲ್ಲಿ ಮೂಡಲು ಹರಿದ ಬೆಳಕು ಮೂಡಿತ್ತು. ಹಾಗೇ ಮಲಗಿದ್ದಳು. ‘ಆರು ಬೆರಳಿನ ಈ ಹುಡುಗ ತನ್ನ ಸೋದರಮಾವ ತರುಣಚಂದ್ರನಾಗಿರಬಹುದೆ?’ ಹೀಗೆಂದುಕೊಂಡೊಡನೆ ಹೌದೆಂದು ರೋಮಾಂಚಿತಳಾದಳು. ತುಸು ಹೊತ್ತಾದ ಬಳಿಕ ಕಿಡಿಕಿಯೊಳಗಿಂದ ಬೆಳಕು ಒಳಗೂ ನುಗ್ಗಿ ಅದರೊಂದಿಗೆ ದೇಹಕ್ಕೆ ಅನಾಯಾಸದ ಬಲವೂ ಬಂತು. ಈಗ ಕನಸನ್ನು ನೆನೆಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ “ಮುದ್ದು ಎದ್ದೇಳೆ” ಎಂಬ ಅಜ್ಜಿಯ ದನಿ ಕೇಳಿಸಿತು. ಹಾಗೇ ಎದ್ದು ಹಾಸಿಗೆಯಲ್ಲೇ ಇನ್ನೂ ಕೂತಿದ್ದ ಅಜ್ಜಿಯ ತೊಡೆಯ ಮೇಲೆ ತಲೆಯಿಟ್ಟು ಒರಗಿದಳು. ಗೌರಿಯ ಮುಖ ಹಳವಂಡಗಳಿಂದ ಬಾಡಿತ್ತು. ಜ್ವರ ಹಿಡಿದಿಳಿದು ಮೈ ಭಾರವಾಗಿತ್ತು.

“ಮುದ್ದು, ಮುಖ ತೊಳೆಯಬೇಕಲ್ಲ?”

-ಎಂದಳು ಚಿಕ್ಕಮ್ಮಣ್ಣಿ ಅವಳ ತಲೆಯಲ್ಲಿ ಬೆರಳಾಡಿಸುತ್ತ. ಗೌರಿ ಹೇಳಿದಳು:

“ಬೆಳ್ಳಂ ಬೆಳಗು ಎತ್ತು ಗುಟುರು ಹಾಕುತ್ತಿತ್ತು ಅಜ್ಜಿ.”

“ಎತ್ತಿನ ಗುಟುರು? ಅದ್ಯಾವ ಎತ್ತೇ ಮಾರಾಯಳೆ! ಅರಮನೆಯಲ್ಲಿ ಎಲ್ಲೂ ಎತ್ತೆಂಬೊ ಶಬ್ಧವೇ ಇಲ್ಲವಲ್ಲ! ಕನಸು ಗಿನಸು ಕಂಡೆಯೋ ಏನೊ!”

‘ಹೌದೇನೊ! ಕನಸಿನಲ್ಲಿ ಆರುಬೆರಳಿನ ಆ ಹುಡುಗನೂ ಬಂದಿದ್ದ ಅಜ್ಜಿ.”

“ಆರು ಬೆರಳಿನ ಹುಡುಗ” ಅಂದ ತಕ್ಷಣವೆ ಚಿಕ್ಕಮ್ಮಣ್ಣಿಗೆ ಆನಂದ ಸಂತಾಪಗಳ ಭಾವನೆಗಳಡರಿ “ಆರುಬೆರಳಿನ ಹುಡುಗ” ಎಂದು ತಂತಾನೇ ಅಂದುಕೊಳ್ಳುತ್ತ ಮಳಮಳ ಗೌರಿಯ ಮುಖ ನೋಡಿದಳು. “ಆರು ಬೆರಳಿನ ಹುಡುಗನ ಬಗ್ಗೆ ನಿನಗೆ ಯಾರು ಹೇಳಿದರು ಕೂಸೇ?” ಅಂದಳು.

“ಯಾರಿಲ್ಲ. ಆ ಹುಡುಗ ಎತ್ತಿನ ಜೊತೆ ಆಗಾಗ ನನ್ನ ಕನಸಿನಲ್ಲಿ ಬರ್ತಾನಜ್ಜಿ

‘ಬಹುಶಃ ತರುಣಚಂದ್ರನ ಬಗ್ಗೆ ನಾವು ಮಾತಾಡುವುದನ್ನ ಯಾವಾಗಲೋ ಕೇಳಿಸಿಕೊಂಡಿದೆ ಕೂಸು’ ಎಂದುಕೊಂಡು

“ಏಳೇಳು ಮುಖ ತೊಳೆಯೇಳು”

ಎಂದು ಕಣ್ಣೀರು ಮಿಡಿಯುತ್ತ ಎದ್ದಳು.

ಆ ದಿನ ಮಧ್ಯಾಹ್ನ ಭಾರೀ ಬಿಸಿಲಿತ್ತು. ಕೋಣೆಯ ಕಿಡಿಕಿಯಲ್ಲಿ ಒಬ್ಬಳೇ ನಿಂತುಕೊಂಡು ಗೌರಿ ತನ್ನೊಂದಿಗೆ ತಾನೇ ಮಾತಾಡಿಕೊಳ್ಳುತ್ತಿದ್ದಳು. ಇಬ್ಬರ ಮಾತುಗಳನ್ನ ಒಬ್ಬಳೇ ಆಡುತ್ತಿದ್ದಳು. ಆ ಇನ್ನೊಬ್ಬರು ಯಾರೆಂದು ತಿಳಿಯುತ್ತಿರಲಿಲ್ಲ. ಇಬ್ಬರ ಮಾತುಗಳನ್ನು ಪ್ರತ್ಯೇಕದನಿ ಮತ್ತು ಶೈಲಿಗಳಲ್ಲಿ ಮಾತಾಡುತ್ತಿದ್ದು. ಒಂದು ಸಲ “ನಿನಗೆ ಆರು ಬೆರಳಿವೆಯಲ್ಲ, ಯಾಕೆ?” ಎಂದೂ ಕೇಳಿದಳು. ಈ ಸಂಭಾಷಣೆಯನ್ನು ಕದ್ದು ಕೇಳಿಸಿಕೊಂಡ ಛಾಯಾದೇವಿ –ಹೀಗೆ ಬಿಟ್ಟರೆ ಹುಚ್ಚು ಹಿಡಿದೀತೆಂದು ವರನನ್ನು ಹುಡುಕಲು ತಾಯಿಗೆ ದಂಬಾಲು ಬಿದ್ದಳು. ಇದಾಗಿ ಒಂದು ವಾರದಲ್ಲಿ ಚಂಡೀದಾಸನ ಸಂದೇಶ ಬಂತು: ‘ಗೌರಿಯನ್ನು ನೋಡಲು ವರನನ್ನು ಕರೆತರುತ್ತಿದ್ದೇನೆ.’ ಆ ದಿನವೇ ರವಿಕೀರ್ತಿಯನ್ನು ಕರೆತರಲು ಕಂಚಿಗೆ ಕುದುರೆ ಗಾಡಿಯನ್ನು ಕಳಿಸಲಾಯಿತು.