ಶಿವಾಪುರದ ಕತೆಗೆ ಬರುತ್ತೇವೆ. ಕನಕಪುರಿ ಇತಿಹಾಸಕ್ಕಿರುವಂತೆ ಶಿವಾಪುರದ ಚರಿತ್ರೆಗೊಂದು ತರ್ಕವಿಲ್ಲ. ಇಲ್ಲಿ ಸಮಯ ಸರಿಯುವುದೇ ಇಲ್ಲ. ಇಲ್ಲಿಯ ಜನ ಸೀಸದಿಂದ ಮಾಡಿದ ರಥಕ್ಕೆ ಕಬ್ಬಿಣದ ಗಾಲಿಯ ಮಾಡಿ, ಸಮಯವನ್ನು ಅದರಲ್ಲಿ ಕೂರಿಸಿ, ಕೋಮಲವಾದ ರುತುಗಳನ್ನ ಹೂಡುತ್ತಾರೆ. ಆ ರುತುಗಳೇ ಪುನರಪಿ ಅವೇ ಹೆಜ್ಜೆಗಳನ್ನ ಅದೇ ಅದೇ ಸ್ಥಳದಲ್ಲಿಡುತ್ತ ಭಾರವಾದ ಆ ರಥವನ್ನ ವರ್ಷಕ್ಕೊಂದು ಹೆಜ್ಜೆ ಮುಂದೆ ಸರಿಸಿದರೆ ಅದೇ ಹೆಚ್ಚು. ಅಷ್ಟರಲ್ಲಿ ಬಲಾಢ್ಯವಾದ ನೆನಪುಗಳು ಆ ರಥವನ್ನ ಹತ್ತು ಹೆಜ್ಜೆ ಹಿಂದೆ ಸರಿಸಿರುತ್ತವೆ!

ಕನಕಪುರಿಗಾದರೆ ನಿನ್ನೆ ನಡೆದುದೆಲ್ಲ ನೆನಪುಗಳಿಂದ ಜಾರಿ ಇತಿಹಾಸವಾಗಿ ದಾಖಲಾಗಿರುತ್ತದೆ. ಶಿವಾಪುರದ ನೆನಪುಗಳೋ ಅಗಾಧ ಶಕ್ತಿಯಿರುವಂಥವು. ಪುರಾಣ ಕಾಲದ ದೇವರು ಕೂಡ ಅವರಲ್ಲಿ ಈಗಲೂ ಜೀವಂತವಾಗಿದ್ದು ಅವರೊಂದಿಗೆ ನಿತ್ಯ ವ್ಯವಹರಿಸುತ್ತಾರೆಂದರೆ ಅವರ ನೆನಪುಗಳ ಶಕ್ತಿ ಎಷ್ಟಿರಬೇಕೆಂದು ಅಳತೆ ಮಾಡಿಕೊಳ್ಳಿರಿ! ತಿರುಪತಿ ತಿಮ್ಮಪ್ಪ ಎಂಬ ದೇವರು ಪುರಾಣ ಕಾಲದಲ್ಲಿ ಪದ್ಮಾವತಿ ಎಂಬ ದೇವತೆಯನ್ನು ಮದುವೆಯಾಗುವಾಗ ಏಳು ಕೋಟಿ ಸಾಲ ಮಾಡಿದ್ದನಂತೆ. ಇತಿಹಾಸ ಕಾಲದ ಈಗಿನ ಜನ ಆ ಸಾಲ ತೀರಿಸಲು ಅವನ ಹುಂಡಿಯಲ್ಲಿ ಈಗಲೂ ಹಣ ಹಾಕುತ್ತಾರೆಂದರೆ ಕನಕಪುರಿಯವರು ನಂಬೋ ಮಾತ ಇದು? ಅಷ್ಟೇ ಅಲ್ಲ ಆ ಜನ ದೇವರೊಂದಿಗೆ ನಿತ್ಯ ವ್ಯವಹಾರ ಮಾಡುತ್ತಾರೆ. ನಮ್ಮ ವ್ಯವಹಾರದಲ್ಲಿ ಇಷ್ಟು ಲಾಭವಾದರೆ ಅದರಲ್ಲಿ ಇಷ್ಟು ಭಾಗ ನಿನ್ನ ಹುಂಡಿಗೆ ಹಾಕುತ್ತೇವೆಂದು ಹರಕೆ ಹೊರುತ್ತಾರೆ! ಅಂದರೆ ಅವರ ಲೇನಾದೇನಾ ವ್ಯವಹಾರದಲ್ಲಿ ದೇವರೂ ಪಾಲುದಾರನಾಗಿರುತ್ತಾನೆ!

ಈ ಜನಕ್ಕೆ ಕಾಲ ಅಂದರೆ ಒಂದು ಅಖಂಡ ಘಟಕ. ತಾವು ಬದುಕಿರುವಾಗ ತಮ್ಮೊಂದಿಗೆ ತಮ್ಮ ಹಿಂದನ ಎಲ್ಲ ಶತಮಾನಗಳ ಅನುಭವಗಳನ್ನ ಇತಿಹಾಸದಲ್ಲಿದ್ದೂ ಬದುಕುತ್ತಾರೆ. ಅಂದರೆ ನೆನಪುಗಳೇ ಇಲ್ಲಿಯ ಕಾಲವನ್ನ ಹಿಂದೆ ಮುಂದೆ ತಳ್ಳುತ್ತವೆ. ಇದನ್ನೇ ಅವರು ಪರಂಪರೆ ಅನ್ನುತ್ತಾರೆ. ಆದ್ದರಿಂದ ಶಿವಾಪುರದ ಸಂಗತಿಯನ್ನ ಯಾವಾಗ ಮುಂದುವರಿಸಿದರೂ ಚರಿತ್ರೆಗೆ ತೊಂದರೆಯಿಲ್ಲವೆಂದು ಬಿಟ್ಟಿದ್ದೆವು. ನಮ್ಮ ಕಥಾನಾಯಕ ಚಿನ್ನಮುತ್ತ ಯಾನೆ ಜಯಸೂರ್ಯ ಯಾನೆ ಶಿಖರಸೂರ್ಯನೇ ಶಿವಾಪುರದ ಚರಿತ್ರೆಯಲ್ಲಿ ಕೊಂಚ ಬದಲಾವಣೆ ಮಾಡಿದವನು, ಅದನ್ನು ನೋಡಿರಿ;

ಬೆಳ್ಳಿಯಿಂದ ಒದೆ ತಿಂದು ನಮ್ಮ ನಾಯಕ ಆಗಿನ ಜಯಸೂರ್ಯ ಓಡಿ ಬಂದವನಲ್ಲ, ರಾತ್ರಿಯ ಆ ಕ್ಷಣದಿಂದಲೇ ಇಡೀ ಊರು ಮತ್ತು ಅಮ್ಮನ ಬೆಟ್ಟ ನಿದ್ದೆ ಕಳೆದುಕೊಂಡವು. ಗಂಡಸರಲ್ಲಿ ಕೆಲವರು ಜಯಸೂರ್ಯನನ್ನು ಹುಡುಕಲು ಕಾಡಿಗೆ, ಕೆಲವರು ಶಿವಪಾದನಿಗೆ ಸುದ್ದಿ ಮುಟ್ಟಿಸಲು ಬೆಟ್ಟಕ್ಕೆ ದೌಡಾಯಿಸಿದರು. ಇನ್ನು ಕೆಲವರು ಜಟ್ಟಿಗನನ್ನು ಹುಡುಕುವುದಕ್ಕೆ ಹೋದರು. ಕೆಲವರು ಹೆಂಗಸರು ಬೆಳ್ಳಿಯನ್ನು ಸಮಾಧಾನ ಮಾಡಲಿಕ್ಕೆ ನಿಂತರೆ ಇನ್ನು ಕೆಲವರು ನೆಲವನ್ನ ಕೈಯಿಂದ ಬಡಿಯುತ್ತ, ಹಲ್ಲು ಕಚ್ಚಿ ಜಯಸೂರ್ಯನಿಗೆ ಶಾಪಗಳನ್ನ ಒದರಿದರು. ಬೆಳ್ಳಿ ಮಾತ್ರ ಮಾರನೆ ಬೆಳಿಗೆದ್ದು ಜಟ್ಟಿಗನ ಸಾವಿನ ಸುದ್ದಿ ತಿಳಿದು ಹಾಗೇ ಕುಸಿದಳು.

ಶವ ಮಡುವಿನ ಬಳಿ ಬಿದ್ದಿತ್ತು. ಬೋರಲಾಗಿ ಬಿದ್ದ ಜಟ್ಟಿಗನ ಹೆಣ ಹೆಣದ ಹಾಗೆ ಕಾಣಲೇ ಇಲ್ಲ. ಈಜಿ ಸುಸ್ತಾಗಿ ವಿಶ್ರಾಂತಿಗಾಗಿ ಡಬ್ಬು ಮಲಗಿದ ಹಾಗಿತ್ತು ಅದರ ಭಂಗಿ. ಕಬ್ಬಿಣದಂಥ ದೇಹ, ಉದ್ದಕ್ಕೆ ಚಾಚಿದ್ದ ಕಾಲು, ಮುಖದ ಎಡಬಲ ಮಡಿಚಿ ಬಿದ್ದ ದಷ್ಟಪುಷ್ಟ ಕೈಗಳು, ನಿದ್ರೆಯನ್ನಣಕಿಸುತ್ತ ಬಿದ್ದ ಸಾವು ಮಲಗಿದಂತಿದ್ದ ಹೆಣ ನೋಡಿದರೆ ಮೊದ ಮೊದಲು ಅನೇಕರಿಗೆ ದುಃಖ ಬರಲೇ ಇಲ್ಲ. ಮಲಗಿದವನನ್ನ ಎಬ್ಬಿಸಬೇಕೆನ್ನಿಸಿತು. ಅಷ್ಟರಲ್ಲಿ ಹೊಟ್ಟೆಯ ಕೆಳಗೆ ಹರಿದ ರಕ್ತ ಮಡುಗೊಂಡು ಹೆಪ್ಪುಗಟ್ಟಿದ್ದನ್ನ ನೋಡಿದಾಗ ಮಾತ್ರ ಜಟ್ಟಿಗ ಕಾಯಬಿಟ್ಟು ಕೈಲಾಸಕ್ಕೆ ಸಂದಿದ್ದ ವಿಷಯ ಗೊತ್ತಾಯಿತು. ಶವ ನೋಡಿ ಎಷ್ಟೆಷ್ಟೋ ಪರಿಯ ಸಾವುಗಳನ್ನ ಕಂಡ ಜನರ, ನೀರು ಬರುವ ಕಣ್ಣಲ್ಲಿ ನೆತ್ತರು ಬಂತು.

ಶವದ ತೀರ್ಥದಲ್ಲಿ ಮೀಯಿಸಿ ಹೊಸಬಟ್ಟೆಯ ಮುಸುಕು ಹಾಕಿದರು. ಶವವನ್ನು ಶಿವಪಾದನ ನೇತೃತ್ವದಲ್ಲಿ ಹೆಗಲಿಗೇರಿಸಿಕೊಂಡು ಜಟ್ಟಿಗನ ಗದ್ದೆಯ ಹೊನ್ನೆಮರದ ಬಳಿಯ ದಿನ್ನೆಗೆ ಒಯ್ದರು. ಕೂಡು ಹಾಕಿದ್ದ ಗಂಧದ ಕಾಷ್ಟಕ್ಕೆ ಮೂರು ಸುತ್ತು ಬಂದು ಕಾಷ್ಟದಲ್ಲಿರಿಸಿ, ಶಿವಪಾದನೇ ಮುಂದೆ ಬಂದು ಸಿರಿಕೊಳ್ಳಿಯ ನೀರು ಬಿಟ್ಟು ಕಾಷ್ಟಕ್ಕೆ ಬೆಂಕಿಯಿಟ್ಟನು. ಜಟ್ಟಿಗ ಆಕಾಶಕ್ಕೆ ಹೊಗೆಯಾಗಿ ಭೂಮಿಗೆ ಬೂದಿಯಾದ. ಹೊಸ ಗಡಿಗೆಯಲ್ಲಿ ಗಂಧದ ಕೆಂಡ ಹಾಕಿ ಕಾಷ್ಟದ ಬಳಿಗೆ ತಂದು, ಅಪಸವ್ಯವಾಗಿ ಒಡೆದು ಜಟ್ಟಿಗನ ಬೆಂಕಿ ಗಡಿಗೆ ಸಂದಿತೆಂದ. ಗೆರಸಿಗೆ ಒಂದು ಸೇರಿ ಬಳ್ತಿಗೆ ಹಾಕಿ, ಒಂದು ತೆಂಗಿನಕಾಯಿ, ಐದು ವೀಳೆಯದೆಲೆ ಒಂದಡಿಕೆ ಇಟ್ಟ. ನೊಗದ ತುಂಡನ್ನಿಟ್ಟ. ತೆಂಗಿನಕಾಯಿ ಗರಿಯಲ್ಲಿ ಕಪಿಲೆ ಹಸುವಿನ ಬಿಳಿಯ ತುಪ್ಪವ ಎರೆದ. ಒಂದು ಬತ್ತಿ ಹಾಕಿ ತೆಂಗಿನ ಕಾಯಿ ಗಡಿಗೆಯಲ್ಲಿ ಸೊಡರು ಹೊತ್ತಿಸಿ ಜಟ್ಟಿಗನ ಚಿತೆಯ ಬಳಿ ತಂದು, ಚಿತೆಗೆ ಮೂರು ಸುತ್ತು ಬಂದ. ಚಿತೆಯ ನಡುವಿಗೆ ಅಪಸವ್ಯವಾಗಿ ಬಿಸಾಡಿದ.

“ಜಟ್ಟಿಗನೇ, ನಿನ್ನ ಪರಿಕೆಯಡಿ ಸಂದಿತು. ಮನಸ್ಸಿನಲ್ಲಿ ಯಾವೊಂದು ಬೇಸರ ಇಟ್ಟುಕೋಬೇಡ. ಗಂಧದ ಚಿತೆಯಲ್ಲಿ ಮೂರು ಮುಕ್ಕಾಲು ಗಳಿಗೆಯಲ್ಲಿ ಉರಿದು ಹೋಗು”

-ಎಂದು ಹೇಳಿದಾಗ ಒಂದು ಬಣ್ಣದ ಹಕ್ಕಿ ಹಾರಾಡುತ್ತ ಮ್ಯಾಲಿನ ಮಿರಿಲೋಕಕ್ಕೆ ಹೋಯಿತು!

ಬೆಳ್ಳಿಯ ಈಗಿನ ಸ್ಥಿತಿ ಮಾತ್ರ ಚಿಂತಾಜನಕವಾಗಿತ್ತು. ಎರಡೂ ದಡಗಳ ಕೊಚ್ಚಿ ಹರಿವ ನದಿಯಂತೆ ಜಲ ಜಲ ಕಣ್ಣೀರು ಸುರಿಸಿದಳು. ಸದ್ದಿಲ್ಲದೆ ಸುರಿವ ಜಲಪಾತದಂತೆ ಮೌನವಾಗಿ ಕಣ್ಣೀರುಗರೆದಳು. ಅವಳನ್ನು ಹ್ಯಾಗೆ ಸಮಾಧಾನ ಮಾಡುವುದೆಂದು ಊರಿಗೂರೇ ಕಾಳಜಿ ಮಾಡಿ ಶಿವಪಾದನಲ್ಲಿ ಮೊರೆಯಿಟ್ಟಿತು. ಘಟನೆಯೊದಗಿ ಮೂರು ದಿನ ಕಳೆದರೂ ಆಕೆ ಬಾಯಲ್ಲಿ ಹನಿ ನೀರು ಹಾಕಿರಲಿಲ್ಲ. ಊರವರೆಲ್ಲ ಅವಳಿಂದ ಒಂದು ಮಾತು ಆಡಿಸಲು ಪ್ರಯತ್ನಿಸಿ ಸೋತಿದ್ದರು. ಮೂರು ಹಗಲು ಮೂರು ರಾತ್ರಿ ಕಣ್ಣಿಗೆ ಕಣ್ಣು ಹಚ್ಚದೆ ಬೆಟ್ಟದ ಕಡೆಗೆ ನೋಡುತ್ತ ಕೂತುಬಿಟ್ಟಿದ್ದಳು!

ನಾಕನೇ ದಿನ ಮಧ್ಯರಾತ್ರಿಯಾಗಿತ್ತು. ಆಸುಪಾಸಿನವರೆಲ್ಲ ಗಾಢ ನಿದ್ದೆಯಲ್ಲಿದ್ದರು. ಎದ್ದು ಒಬ್ಬಳೇ ಹೊರಗೆ ನಡೆದಳು. ಊರು ದಾಟಿ ಗದ್ದೆಗೆ ಬಂದು ಜಟ್ಟಿಗನ ಸಮಾಧಿಯ ಬಳಿ ಕೂತಳು. ಕತ್ತಲೆಯಿತ್ತು. ಗಾಳಿಯಿರಲಿಲ್ಲ. ನಕ್ಷತ್ರಗಳ ವಿನಾ ಬೇರೇನೂ ಬೆಳಕಿರಲಿಲ್ಲ. ಎಷ್ಟು ಹೊತ್ತು ಕೂತಿದ್ದಳೋ ಬೆಳಗಿನ ತಂಗಾಳಿ ತೀಡಿ ಸಪನಿದ್ದೆಗೆ ಸಲ್ಲುತ್ತಿರುವಾಗ ಯಾರೋ ಹೆಂಗಸು ತನ್ನ ಹಿಂಬದಿಯಲ್ಲಿ ಕೂತಿದ್ದಾಳೆ ಅನ್ನಿಸಿತು. ಮೆಲ್ಲಗೆ ಹಿಂದಿರುಗಿ ನೋಡಿದಳು. ಹಿಂದೆ ಕೂತಿದ್ದವಳು ಕರಗಿ ಹೋದಳು! ತನಗೆಲ್ಲೋ ಭ್ರಮೆ ಎಂದುಕೊಂಡಳು. ತುಸು ಹೊತ್ತಾದ ಬಳಿಕ ಮತ್ತೆ ಆಕೆ ಹಿಂಬದಿಗೆ ಬಂದು ಕೂತ ಹಾಗನ್ನಿಸಿತು. ಈ ಸಲವೂ ಹಿಂದಿರುಗಿ ನೋಡಿದರೆ ಕರಗಿ ಹೋದಳು. ತಾಯಿ ಇರಬಹುದೆ? ಮೂರನೇ ಸಲವೂ ಆಕೆ ಹಾಗೇ ಕೂತಾಗ ಹಿಂದಿರುಗದೆ,

“ಯಾರದು?” ಅಂದಳು.

“ಇಗೊಳ್ಳವ್ವ! ಹುಟ್ಟಿದ ಕೂಸೇ ತಾಯಿಯನ್ನ ತೊಟ್ಟಿಲಲ್ಲಿ ಮಲಗಿಸಿ ತೂಗ್ತಾ ಇದೆ! ಕಂಡೀರೇನ್ರವ್ವಾ ಹೊಯ್ಕಾನ!”

“ಅದೆಲ್ಲವ್ವ ಅಂಥ ಹೊಯ್ಕಾ ಕಂಡೆ?” ಎಂದಳು ಬೆಳ್ಳಿ.

“ನೋಡೇ ಜೋಗುಳ ಹಾಡಿ ಹಾಡಿ ಕೂಸು ಮಲಗಿದೆ. ನಿನಗೆ ಎಚ್ಚರವೇ ಇಲ್ಲ!”

-ಎಂದು ಹೇಳುತ್ತ ಹಿಂದೆ ಕೂತಿದ್ದವಳು ಕಾಣಲಿಲ್ಲವಾಗಿ ಇದು ತನ್ನ ಭ್ರಮೆ ಎಂದು ಖಾತ್ರಿಯಾಗಿ ಸುಮ್ಮನಾದಳು. ಈಗ ದನಿ ಮುಂದಿನಿಂದ ಕೇಳಿಸಿತು:

“ನಿನ್ನ ಕೂಸು ನಿನಗೇ ಗೊತ್ತಿಲ್ಲ; ನೀನೆಂಥ ತಾಯಿಯೇ? ತಗೊ ತಗೊ ಹಸಿದಿದ್ದಾನೆ, ಮೊಲೆಯುಣ್ಣಿಸೇ ಬೆಳ್ಳಿ!”

-ಎಂದು ದನಿ ಕೇಳಿ ಬೆಳ್ಳಿಗೆ ಎಚ್ಚರವಾಯಿತು. ಕಣ್ಣು ತೆರೆದಳು. ಆಗಲೇ ಕೊಟ್ಟಿಗೆಯ ಕೋಳಿ ಕೂಗಿ ಬೆಳಗಿನ ತಂಗಾಳಿ ಬೀಸಿ ಮೂಡಲು ಹರಿದಿತ್ತು. “ಇದೇನು ವಿಚಿತ್ರ ಕನಸು ತಾಯೀ!” ಎಂದು ಮೈಮುರಿಯುವಾಗ ತೊಡೆ ಭಾರವಾಯ್ತು. ನೋಡಿದರೆ ತೊಡೆಯ ಮ್ಯಾಲೆ ಕಣ್ಣು ಕಣ್ಣು ಬಿಡುತ್ತ ನಿನ್ನಡಿ ಮಲಗಿದ್ದಾನೆ!

ಮುಂದೊಂದು ಮುದುಕಿ ಕುಂತಿದೆ!

ಇದು ಬೆಟ್ಟದಮ್ಮನ ಕಿತಾಪತಿಯೆಂದು ಖಾತ್ರಿಯಾಯಿತು. ಬೇರೆ ಸಂದರ್ಭಗಳಲ್ಲಾದರೆ ರೋಮಾಂಚಿತಳಾಗಿ ಸಡಗರ ಮಾಡುತ್ತಿದ್ದಳು. ಈಗ ‘ಗಂಡನನ್ನೇ ಕಳೆದುಕೊಂಡವಳಿಗೆ ಬೆಟ್ಟದಮ್ಮನ ಹಂಗೇನು?’-ಎಂದು ಮುದುಕಿಗೆ ತಿರುಗೇಟು ಕೊಟ್ಟಳು ನೋಡು:

“ಗಂಡನನ್ನು ಅಗಲಿಸಿ ಎದೆತುಂಬ ಕಣ್ಣೀರು ಕೊಟ್ಟೆ. ಈಗ ವಿಧವೆಗೆ ಕೂಸು ಕೊಟ್ಟೆ! ಇದಕ್ಕೆ ನಾನೇ ತಾಯಿ ಅಂಬೋದಕ್ಕೆ ಗುರುತೇನು ಕೊಟ್ಟಿಯೇ ಮುದಿಮೂಳಿ?”

“ಈ ಕೂಸಿಗೆ ನೀನೇ ತಾಯಿ, ಜಟ್ಟಿಗನೇ ತಂದೆಯಾದರೆ ನಿನ್ನ ಮೊಲೆಯಿಂದ ಹಾಲುಕ್ಕಲಿ. ಇಲ್ಲದಿದ್ದರೆ ಕಣ್ಣೀರುಕ್ಕಲಿ!

ಎತ್ತಿಕೊಂಡಾದರೂ ನೋಡೇ ಮರುಳು ಮಗಳೇ!”

-ಎಂದು ಮುದುಕಿ ಜೋರು ಮಾಡಿದಳು. ಬೆಳ್ಳಿ ಬೆಟ್ಟದ ಕಡೆಗೆ ನೋಡಿದಳು. ಬೆಟ್ಟದ ನೆತ್ತಿಯ ಮ್ಯಾಲೆ ಸೂರ್ಯನಾಗಲೇ ಎಳೆಬಿಸಿಲನ್ನು ಸಿಂಪಡಿಸಿದ್ದ. ನಿನ್ನಡಿಯನ್ನು ನೋಡಿದ್ದೇ ತಡ ಎದೆಯ ಕಟ್ಟೊಡೆದು ಹರಿದ ಅನುಭವವಾಯಿತು. ಅವಳ ದುಃಖ ದುಗುಡ ಆಯಾಸಗಳು ಮಾಯವಾದವು. ತೊಡೆಯ ಮ್ಯಾಲಿನ ನಿನ್ನಡಿಯ ಸಾನಿಧ್ಯವೇ ಸುಖಕೊಡುವ ಆನಂದದಾಯಕ ದೃಶ್ಯವಾಗಿ ಮೈಮನಸ್ಸುಗಳನ್ನ ವ್ಯಾಪಿಸಿತು. ಕಳೆದುಹೋದ ಮಗ ತಿರುಗಿ ಸಿಕ್ಕಂತೆ ಸಡಗರಗೊಂಡು ಆನಂದಪರವಶಳಾದಳು. “ನನ್ನ ಕಂದಾ!” ಎಂದು ತಬ್ಬಿಕೊಂಡೊಡನೆ ಅವಳ ಎರಡೂ ಮೊಲೆ ಹಾಲುಕ್ಕಿ ಮೈಯಂತ ಮೈಯೆಲ್ಲಾ ರೋಮಾಂಚನಗೊಂಡಳು! ಅಷ್ಟರಲ್ಲಿ ನಿನ್ನಡಿ “ಅಬ್ಬೇ” ಎಂದು ಎದ್ದು ಕೂತ. ತಾಯಿ ಅವನನ್ನ “ನನ್ನ ಕಂದಾ! ಮಗಾ! ಮಗನೇ!” ಎನ್ನುತ್ತ ಮುಖದ ತುಂಬ ಮುದ್ದಿಟ್ಟು ಮತ್ತೆ “ಮಗನೇ!” ಎಂದು ಮಳ ಮಳ ಮುಖ ನೋಡಿ ಹುಚ್ಚು ಹತ್ತಿದ ಹಾಗೆ ತಬ್ಬಿಕೊಂಡು ಅವನ ಬಾಯಿಗೆ ಹಾಲು ತುಂಬಿದ ಮೊಲೆಯಿಟ್ಟಳು!

ಮನೆಗೆ ಬಂದಾಗ ಬೆಳ್ಳಂ ಬೆಳಕಾಗಿ ಮುಂದಿನ ಕಟ್ಟೆಯ ಮೇಲೆ ಶಿವಪಾದ ಕೂತಿದ್ದಾನೆ! ಅವನ ಸಮೀಪ ಬರುತ್ತಿದ್ದಂತೆ ಅವನು ಮಾತ್ರವಲ್ಲ ಅವನ ಆಜು ಬಾಜುವಿನ ಪ್ರತಿಯೊಂದು ವಸ್ತುವೂ ಪ್ರಕಾಶಮಾನವಾಗಿ, ಹರ್ಷದಾಯಕವಾಗಿ, ಉತ್ಸವ ಶೀಲವಾಗಿ ರಾರಾಜಿಸತೊಡಗಿದೆ! ಹಿತಕರವೂ ಸ್ವರ್ಗೀಯವೂ ಆದ ಪ್ರಭಾವಳಿಯ ಕಿರಣಗಳನ್ನು ಚೆಲ್ಲುತ್ತ ಶಿವಪಾದ ಹತ್ತಿರವಾದಂತೆ ಅವನ ಪ್ರಭಾವಳಿಯ ಕಿರಣಗಳಲ್ಲಿ ಇವಳೂ ಬೆಚ್ಚಗಾದಂತೆನಿಸಿತು. ಶಿವಪಾದ ಶಾಂತವಾಗಿ,

“ಮಗ ಸಿಕ್ಕನೇ ಮಗಳೇ?”

-ಅಂದ. ಅವನ ಮಾತು ಸುಮಧುರ ಸಂಗೀತದಂತೆ ಕೇಳಿಸಿ ಸ್ವರ್ಗಸುಖದಲ್ಲಿ ತೇಲಾಡಿದಳು ಬೆಳ್ಳಿ! ಉಲ್ಲಾಸದಿಂದ, ಮುಗ್ಧತೆಯಿಂದ, ತಪಸ್ಸಿನ ವರ್ಚಸ್ಸಿನಿಂದ ಕಂಗೊಳಿಸುತ್ತಿದ್ದ ಆತನ ಮುಖದಲ್ಲಿ ಎಳೆಯ ಬಾಲಕನ ಕಳೆ ನಲಿದಾಡುತ್ತಿತ್ತು. ಬೆಳ್ಳಿ ಮತ್ತು ಶಿವಪಾದ ಇಬ್ಬರೂ ಆನಂದಬಾಷ್ಟ ಸುರಿಸಿದರು. ಬೆಳ್ಳಿ ಶಿವಪಾದನಿಗೆ ನಮಸ್ಕರಿಸಿ ಪಾದಗಳನ್ನು ಹಣೆಗೊತ್ತಿಕೊಂಡಳು. ಶಿವಪಾದ ಹೇಳಿದ:

“ಅಮ್ಮ ತನ್ನ ಸಾಲವನ್ನು ವಸೂಲ್ಮಾಡದೆ ಬಿಡೋದಿಲ್ಲ ಮಗಳೆ. ನಿನ್ನಿಂದ ಮಗ ಬೇಕೆಂದಳು. ಅವನನ್ನು ಪಡೆದೂ ಬಿಟ್ಟಳು. ನೋಡಿಕೊ.”

-ಎಂದು ಹೇಳಿ ಕೋಲೂರುತ್ತ ಬೆಟ್ಟದತ್ತ ನಡೆದ.

ಮೇಲಿನದು ಹೇಳಿ ಕೇಳಿ ಕತೆ. ನಿನ್ನಡಿ ಎಂಬ ಬಾಲಕನ ಬಗ್ಗೆ ಓದುಗರ ಆಸಕ್ತಿ ಸಹಜವಾದದ್ದೇ, – ಎಂದು ನಾವು ಮುಂಗಂಡು ಹೇಳುತ್ತೇವೆ. ಈತ ಒಬ್ಬ ಬುಡಕಟ್ಟು ಹೆಂಗಸಿನ ಬಳಿಯಿದ್ದ ಎಳೆಯ ಬಾಲಕ. ಆಕೆ ಬಡತನದಿಂದ ತಾನವನನ್ನ ಸಾಕಲಾರೆನೆಂದು ಹಬ್ಬದ ಮಾರನೆ ದಿನ ಶಿವಪಾದನ ಬಳಿ ಬಿಟ್ಟು ಹೋದಳು. ಶಿವಪಾದ, ಬಾಲಕನನ್ನ ಒಪ್ಪಿಕೊಂಡು ‘ನಿನ್ನಡಿ’ ಎಂದು ಹೆಸರು ಕೂಗಿ ತನ್ನ ಬಳಿ ಇಟ್ಟುಕೊಂಡಿದ್ದ. ಈ ಕೂಸನ್ನೇ ಶಿವಪಾದ ಬೆಳ್ಳಿಯ ಉಡಿಗೆ ಹಾಕಿದ್ದು. ಈ ಸಂಗತಿಯ ಹಿಂದೆ ಏನೇನಿವೆಯೋ!-ನಿನ್ನಡಿ ಮಾತ್ರ ಬೆಳೆದು ದೊಡ್ಡವನಾಗಿ ಜವಾಬ್ದಾರಿಯನ್ನು ಅರಿತುಕೊಂಡು ತನ್ನ ವಯಸ್ಸಿಗಿಂತ ಹೆಚ್ಚು ಪ್ರೌಢನಾದ. ಹೆಚ್ಚು ಕ್ರಿಯಾಶೀಲನಾದ. ತಾಯಿಯ ಮಾರ್ಗದರ್ಶನದಂತೆ ಜಟ್ಟಿಗನ ಗೋರಿಯ ಮೇಲೆ ಹದಿನೆಂಟು ಕಂಬದ ಗುಡಿ ಕಟ್ಟಿಸಿ ಕಂಬಕ್ಕೊಂದು ಗೊಂಬೆ ನಿಲ್ಲಿಸಿದ, ಹೆಂಚು ಹಾಕಿಸಿ ಕಲಶ ಇಡಿಸಿದ, ನಾಲ್ಕು ದಿಕ್ಕುಗಳಲ್ಲಿ ನಾಲ್ಕು ದೇವತೆಗಳ ನಿರ್ಮಿಸಿ ಅಂಗಳದಲ್ಲಿ ಆನೆ ಕಲ್ಲಿನ ಕೆಲಸ ಮಾಡಿಸಿದ. ನಿತ್ಯವೂ ಪೂಜೆ ಪುನಸ್ಕಾರ ಮಾಡಿಸಿ ಹಾಲು ಅಕ್ಕಿಯ ನೈವೇದ್ಯ ಅರ್ಪಿಸಿ ವರ್ಷಕ್ಕೊಮ್ಮೆ ನೇಮ ಉತ್ಸವದ ವ್ಯವಸ್ಥೆ ಮಾಡಿದ.

ನಿನ್ನಡಿ ದೊಡ್ಡವನಾದಂತೆ ಮನಸೆಳೆವ ಮೈತ್ರಿಯ ವರ್ತನೆಯಿಂದ, ಸರಸಾಂತಃಕರಣದಿಂದ, ಕಪಟವರಿಯದ ನಡೆನುಡಿಗಳಿಂದ ಎಲ್ಲರಿಗೂ ಬೇಕಾದವನಾದ. ಓರಗೆಯವರು ಅವನ ಸ್ನೇಹಕ್ಕಾಗಿ ಹಲುಬುವಂತೆ ಮಾಡಿದ. ಗೌರವದ ಕೊರತೆಯಾಯಿತೆಂದು ಹಿರಿಯರೆಂದೂ ಅಂದುಕೊಳ್ಳದ ಹಾಗೆ ನಡೆದುಕೊಂಡ.

ಶಿವಪಾದನೀಗ ನಿನ್ನಡಿಯನ್ನು ಶಿಷ್ಯನೆಂದು ಸ್ವೀಕರಿಸಿ, ಬೆಳ್ಳಿಯ ಮನೆ ಬಿಡಿಸಿ ತನ್ನ ಸನ್ನಿಧಿಗೆ ತಗೊಂಡು ಎಡೆಬಿಡದೆ ಬೋಧನೆ, ಸುರುಮಾಡಿದ.

ಇದು ಐದು ವರ್ಷ ನಡೆಯಿತು. ನಿನ್ನಡಿ ಈಗ ಸದಾ ಹೊಸ ತಿಳುವಳಿಕೆಯನ್ನ, ಹೊಸ ಒಳನೋಟಗಳನ್ನ ಹುಡುಕುತ್ತಿದ್ದ. ಅವನ ಕಣ್ಣಲ್ಲಿ ಕಾವ್ಯದ ಬೆಳಕಿತ್ತು. ಶಿವಪಾದ ಕೊಟ್ಟ ಗ್ರಂಥಗಳಲ್ಲಿಯ ಕಾವ್ಯದ ಭಾಗಗಳನ್ನು ಮತ್ತೆ ಮತ್ತೆ ಓದಿ ಸಂತೋಷ ಪಡುತ್ತಿದ್ದ. ಸರಿಕರಿಗೂ ಅಬ್ಬೆಗೂ ಓದು ಹೇಳುತ್ತಿದ್ದ. ನಿನ್ನಡಿಯ ಜ್ಞಾನ ಮತ್ತು ಅದನ್ನವನು ಪ್ರೀತಿಯಿಂದ ತನ್ನದನ್ನಾಗಿ ಮಾಡಿಕೊಂಡು ಉಪಯೋಗಿಸುತ್ತಿದ್ದ ರೀತಿಯಿಂದ ಶಿವಪಾದ ಸಂತೋಷಪಡುತ್ತಿದ್ದ. ಕೊಡುವ ವಿದ್ಯೆ ಕೊಡುತ್ತ ಮೇಲೆ ಪರೀಕ್ಷೆಯನ್ನೂ ಸುರು ಮಾಡಿದ.

ದಿನಾಲು ಅವನಿಗೆ ಸಿಗುತ್ತಿದ್ದುದು ಒಂದು ಗೆಣಸು, ಅದರೊಂದಿಗೆ ಸ್ವಲ್ಪ ಜೇನುತುಪ್ಪ. ಅದು ಒಂದು ಹೊತ್ತು ಮಾತ್ರ. ಈಗ ಯಾವಾಗಂದರೆ ಆವಾಗ ಬೆಳ್ಳಿಯ ಮನೆಗೆ ಹೋಗುವಂತಿರಲಿಲ್ಲ. ಗುರುಸೇವೆ, ಇಲ್ಲವೆ ಧ್ಯಾನ ಇಲ್ಲವೆ ಇವುಗಳ ಜೊತೆಗೆ ಧೈರ್ಯ, ನಂಬಿಕೆ, ಗ್ರಹಿಕೆ, ಆತ್ಮಸಂಯಮ, ರಹಸ್ಯ ಪಾಲನೆ ಇತ್ಯಾದಿ ಗುಣಗಳ ಬೋಧನೆಯೂ ಸುರುವಾಯ್ತು.

ಒಮ್ಮೆ ಅವನಿಗೆ ಸಿಕ್ಕುವ ಒಂದು ಹೊತ್ತಿನ ಊಟದ ಸಮಯದಲ್ಲಿಯೇ ಒಬ್ಬ ವೃದ್ಧಮುನಿ ಅತಿಥಿಯಾಗಿ ಬಂದ. ಶಿವಪಾದ ತಕ್ಷಣ ನಿನ್ನಡಿಗೆ “ನಿನ್ನ ಪಾಲಿನ ಊಟ ಅವನಿಗೆ ಕೊಡು” ಅಂದ. ಇದು ಬಿಟ್ಟರೆ ನಾಳೆಯವರೆಗೆ ತನಗೆ ಆಹಾರವಿಲ್ಲವೆಂದು ಗೊತ್ತಿದ್ದರೂ ಹಿಂದೆ ಮುಂದೆ ನೋಡದೆ ಮುನಿಯ ಎದುರಿಗೆ ತನ್ನ ಪಾಲಿನ ಊಟವನ್ನಿಟ್ಟ. ಇಡುವಾಗ ಕಿಂಚಿತ್ತಾದರೂ ಹಳಹಳಿಯಾಗಲಿ, ಬೇಸರವಾಗಲಿ, ನಿರಾಸೆಯಾಗಲಿ ಕಾಣಲಿಲ್ಲವಾಗಿ ಮುನಿ ಮತ್ತು ಶಿವಪಾದ ಇಬ್ಬರೂ ಆನಂದಪಟ್ಟರು. ಊಟವಾದ ಮೇಲೆ ಮುನಿ ನಿನ್ನಡಿಯನ್ನು ಕರೆದು ಅವನ ತಲೆಯ ಮೇಲೆ ಕೈಯಿಟ್ಟು ಆಶೀರ್ವದಿಸಿದ.

ಇನ್ನೊಮ್ಮೆ ಶಿವಪಾದ ಮತ್ತು ನಿನ್ನಡಿ ಬೇರೆ ಹಟ್ಟಿಗೆ ಹೋದವರು ಸಾಯಂಕಾಲ ಬೆಟ್ಟಕ್ಕೆ ಬರುತ್ತಿದ್ದರು. ಶಿವಪಾದ ಎತ್ತನ್ನೇರಿದ್ದ. ನಿನ್ನಡಿ ನಡೆದುಕೊಂಡು ಬರುತ್ತಿದ್ದ. ಕಾಡಿನ ದಾರಿಯಾದರೂ ಹೆಚ್ಚು ಮರಗಳಿರಲಿಲ್ಲ. ಇಕ್ಕೆಲಗಳಲ್ಲಿ ಬಯಲಿತ್ತು. ದಾರಿಯ ತಿರುವು ದಾಟಿದ ಕೂಡಲೇ ಶಿವಪಾದ ಎತ್ತನ್ನು ತರುಬಿದ. ಯಾಕೆನೆ ದಾರಿಯ ಮಧ್ಯದಲ್ಲಿ ಆನೆ ಗಾತ್ರದ ಭಾರೀ ಹೋರಿಗೂಳಿ ಇವರನ್ನೇ ನೋಡುತ್ತ ನಿಂತಿತ್ತು. ಎರಡಡಿ ಉದ್ದದ ಕೊಂಬುಗಳು ಈಗಷ್ಟೇ ಒರೆಯಿಂದ ಹಿರಿದ ಖಡ್ಗಗಳಂತೆ ಕಾಣುತ್ತಿದ್ದವು. ಕೆಂಗಣ್ಣು ಪಿಳುಕಿಸದೆ ಇವರನ್ನೇ ನೋಡುತ್ತಿತ್ತು. ಮೈಮ್ಯಾಲೇರಿ ಬರುವ, ಇರಿವ ತಯಾರಿಯನ್ನು ಮೊದಲೇ ಮಾಡಿಕೊಂಡೇ ನಿಂತಂಗಿತ್ತು. ಬೆನ್ನ ಮೇಲಿನ ಇಣಿಯಂತೂ ಇರಿಯಲು ಅಂದಾಜು ಮಾಡುತ್ತಿರುವಂತೆ ನಡುಗುತ್ತಿತ್ತು. ಮುಸ ಮುಸ ತೇಗುವ, ಮೂಗಿನ ತುದಿ ಕಾದ ಕಬ್ಬಿಣದಂತೆ ಕೆಂಪಗಿತ್ತು. ಒಂದು ಕ್ಷಣ ಮೈಮ್ಯಾಲೇರಿ ಬಂದರೆ ಏನು ಮಾಡುವುದೆಂದು ನಿನ್ನಡಿ ಯೋಚಿಸಿದ. ತಾನೇನೋ ಓಡಬಹುದು. ಆದರೆ ಶಿವಪಾದನನ್ನು ಹ್ಯಾಗೆ ಪಾರು ಮಾಡುವುದು? ಅದಕ್ಕೆದುರಾಗಿ ತನ್ನ ಬಲ ಸಾಲಬಹುದೆ?-ಎಂದು ಯೋಚಿಸಿದ. ಗೂಳಿ ಬಾಲ ಎತ್ತಿ ಆಕ್ರಮಣದ ಅಂದಾಜು ಮಾಡುವಂತೆ ಅತ್ತ ಇತ್ತ ಅಲುಗಿ ಮುಖವನ್ನ ಕೆಳಗೆ ತಂದರೂ ಕಣ್ಣು ಮಾತ್ರ ಇವನಲ್ಲೇ ನೆಟ್ಟಿದ್ದವು. ಅಷ್ಟರಲ್ಲಿ ಗೂಳಿ ಒಂದು ಹೆಜ್ಜೆ ಮುಂದಿಟ್ಟಿತು. “ಓಡು” ಎಂದ ಶಿವಪಾದ. ನಿನ್ನಡಿ ಹಿಂದಿರುಗಿ ನೋಡಲೂ ಇಲ್ಲ. ಓಡಲೂ ಇಲ್ಲ. ಶಿವಪಾದನ ಎತ್ತನ್ನು ಹಿಂದೆ ಹಾಕಿ ಮುಂದೆ ಬಂದು ನಿಂತ. ಹೋರಿಗೂಳಿ ಅಲುಗಲಿಲ್ಲ. ಅದರ ಆ ಕಡೆಯ ತೊಡೆಗೆ ಗಾಯವಾಗಿತ್ತು. “ಗೂಳಿಯ ತೊಡೆಯೆಲುಬು ಉಳುಕಿದೆ ತಂದೆ!” ಅಂದ. ಇವನನ್ನು ನೋಡಿ ಗೂಳಿ ಹಿಂದೆ ಸರಿಯಿತು. ಹಿಂದೆ ಸರಿದಾಗ ಅದು ಕುಂಟುತ್ತಿರುವ ವಿಷಯ ಗೊತ್ತಾಗಿ ನಿನ್ನಡಿಯ ಬಗ್ಗೆ ಶಿವಪಾದನಲ್ಲಿ ಅಭಿಮಾನ ಮೂಡಿತು.

ಮುಂದೆ ಕೆಲದಿನ ಕಳೆದ ಮೇಲೆ ನೋಡಿದರೆ ಬೆಟ್ಟದ ಅಮ್ಮನ ಗುಡಿಗೆ ಆ ಗೂಳಿ ಬಂದಿತ್ತು! ಇನ್ನೂ ಕುಂಟುತ್ತಿತ್ತು. “ಅದರ ಕಾಲು ಸರಿಪಡಿಸಿ ಬೇಕಾದರೆ ಅದನ್ನೇ ನಿನ್ನ ವಾಹನವನ್ನಾಗಿ ಮಾಡಿಕೊ. ನಿನಗೂ ಒಂದು ವಾಹನ ಬೇಕಲ್ಲ!” ಅಂದ ಗುರುಪಾದ. ಅದರ ಕಾಲು ಸರಿಪಡಿಸುವ ಕೆಲಸವನ್ನಂತೂ ನಿನ್ನಡಿ ಒಪ್ಪಿಕೊಂಡ. ದಿನಾ ಎರಡು ಹೊತ್ತು ಅದರ ಕಾಲುಜ್ಜುತ್ತ, ಮಧ್ಯಾಹ್ನ ಹೊಂಡದಲ್ಲಿ ಈಜು ಬಿಡುತ್ತ ಅಂತೂ ಅದರ ಕಾಲು ವಾಸಿಯಾಗುವಂತೆ ಮಾಡಿದ. ಕೊನೆಗೆ ಒಂದು ದಿನ ಶಿವಪಾದನೇ ಕೇಳಿದ:

“ಅದರ ಕಾಲು ಕುಂಟಿದರೂ ನೀನು ನಿರಾಶನಾಗದೆ ಅದರ ಕಾಲನ್ನ ಗುಣಪಡಿಸೋದಕ್ಕೆ ನೋಡಿದೆಯಲ್ಲ? ನಿನಗೆ ಯಾಕೆ ವಿಶ್ವಾಸ ಮೂಡಿತು?”

“ನೀನು ಹೇಳಿದ ಮ್ಯಾಲೆ ಅದು ಗುಣವಾಗಲೇಬೇಕೆಂದು ನಂಬಿಕೆ ಇತ್ತು; ಅಷ್ಟೆ” -ಅಂದ ನಿನ್ನಡಿ.

ಇದು ಅವನ ನಂಬಿಕೆಯನ್ನ ಪರೀಕ್ಷಿಸಿದ ಪರಿ. ಇಂಥ ನೂರಾರು ಪರೀಕ್ಷೆಗಳನ್ನೊಡ್ಡಿ ಅವನ್ನೆಲ್ಲ ನಿನ್ನಡಿ ದಾಟಿದ ಮ್ಯಾಲೆ ಕೊನೆಗೊಂದು ನಿರ್ದಿಷ್ಟ ಮಂತ್ರವನ್ನ ಹೇಳಿ ಒಂದು “ಚಿಲ್ಲರೆ ವಿದ್ಯೆ”ಯನ್ನೂ ಕಲಿಸಿದ. ಅದರಿಂದ ಧಾನ್ಯವನ್ನ ಚಿನ್ನವನ್ನಾಗಿ, ಹುಲ್ಲೆಸಳನ್ನ ಸೈನಿಕರನ್ನಾಗಿ ಪರಿವರ್ತಿಸಬಹುದಾಗಿತ್ತು. ನಿನ್ನಡಿ ವರ್ಷಂಪೂರ್ತಿ ತನ್ನ ಚಲ್ಲಾಟಗಳನ್ನು ಮರೆತು ಮಂತ್ರ ಸಿದ್ಧಿ ಮಾಡಿಕೊಂಡು ಗುರುವಿಗೆ ಹೇಳಿದ. ಶಿವಪಾದನಿಗೆ ಸಹಜವಾಗಿಯೇ ಆನಂದವಾಯಿತು. “ಹೋಗು ನಿನ್ನ ಸಾಧನೆಯನ್ನ ನಿನ್ನ ಗೆಳೆಯರಿಗೆ ತೋರಿಸಿ ಬಾ” ಎಂದ.

ಬಹಳ ದಿನಗಳಾದ ಮೇಲೆ ನಿನ್ನಡಿ ತಾಯ ಮನೆಗೆ ಬಂದ. ಮಂಟಪದಲ್ಲಿ ಗೆಳೆಯರು ಸೇರಿ ಅದು ಇದು ಮಾತಾಡುತ್ತಾ ಇರುವಾಗ “ತಾನೊಂದು ಜಾದೂಗಾರಿಕೆ ತೋರಿಸುತ್ತೇನೆ” ಅಂದ. ಒಂದು ಹುಲ್ಲಿನ ಸಿವುಡು ತರಿಸಿದ. ಒಂದು ಚೀಲ ಜೋಳ ತರಿಸಿದ. ಅದೇನಪ್ಪ ಅಂತಾದ್ದು ಕಲ್ತಿದ್ದಾನೆ ನಮ್ಮ ಹುಡುಗ, ಅಂತ ಜನ ಸೇರಿದರು. ಮಂಟಪದ ಹೊರಬಂದು ಮಂತ್ರ ಅಂದು ಜೋಳದಲ್ಲಿ ಬಲಗೈ ಹಾಕಿದ. ಅಷ್ಟೂ ಧಾನ್ಯ ಚಿನ್ನದ ಧಾನ್ಯವಾಯಿತು! ಎಡಗೈಯಿಂದ ಹುಲ್ಲಿನ ಸಿವುಡು ಮುಟ್ಟಿದ – ಸುಮಾರು ನಾಕಿಪ್ಪತ್ತು ಜನ ಸೈನಿಕರಾದರು! ಜನ ಗಾಬರಿಯಾಗಿ ದೂರ ಸರಿದರು. ಹುಡುಗಿಯರು, ಹೆಂಗಸರು ಚೀರಿ ಮನೆಗಳಿಗೆ ಓಡಿಹೋಗಿ ಬಾಗಿಲಲ್ಲಿ ನಿಂತು ನೋಡತೊಡಗಿದರು. ನಿನ್ನಡಿ ನಗುತ್ತ “ಲೋ ಒಂದು ಕವಾಯತು ಮಾಡಿ ತೋರಿಸ್ರೋ ನಮ್ಮ ಜನಕ್ಕೆ” ಅಂದ. ಸೈನಿಕರೆಲ್ಲ ಅವನು ಹೇಳಿದ ಹಾಗೆಯೇ ಕವಾಯತು ಮಾಡತೊಡಗಿದರು. ಜನ ಬೆಕ್ಕಸ ಬೆರಗಾಗಿ ಕೆಲವರು ತಮ್ಮ ಕಣ್ಣು ತಾವೇ ನಂಬದಾದರು. ಚೀರಿ ಓಡಿದವರು ನಿನ್ನಡಿ ಮಧ್ಯೆ ನಿಂತು ಸೈನಿಕರಿಗೆ ಆಜ್ಞೆ ಕೊಡುತ್ತಿದ್ದನಾದ್ದರಿಂದ ಧೈರ್ಯ ತಗೊಂಡು ಬಳಿ ಬಂದರು. ಜನ ಚಪ್ಪಾಳೆ ತಟ್ಟಿದರು, ಕೂಗಿದರು, ನಕ್ಕರು, ಕುಣಿದರು, ಹಾರಾಡಿದರು, ನಿನ್ನಡಿಯನ್ನು ಹೊಗಳಿದರು.

ಇದನ್ನೆಲ್ಲ ನೋಡುತ್ತಿದ್ದ ಬೆಳ್ಳಿ ಬಹಳ ಸಂತೋಷಪಟ್ಟಳು. ಅವಳ ಆನಂದ ನೋಡಿ ನಿನ್ನಡಿಗೆ ಹೆಮ್ಮೆ. ಹತ್ತಿರ ಬಂದು “ಹೆಂಗೈತಬ್ಬೆ?” ಅಂದ.

“ಆದರೆ ಮಗಾ, ಉಣ್ಣೋ ಅನ್ನ, ದನಿನ ಮೇವು ಹಾಳ್ಮಾಡಬಾರದು ನನ್ನಪ್ಪಾ. ಈ ವಿದ್ಯೆ ನಿನಗಲ್ಲ” ಎಂದುಬಿಟ್ಟಳು.

ತಕ್ಷಣ ನಿನ್ನಡಿಯ ಅಹಂಕಾರದ ಬೆಟ್ಟ ಕರಗಿ ನೀರಾಯಿತು. ವಿವರಣೆಯ ಅಗತ್ಯ ಬೀಳಲಿಲ್ಲ. ಯಾರಿಗೂ ಹೇಳದೆ ಕೇಳದೇ ಬೆಟ್ಟಕ್ಕೆ ಓಡಿದ. ಬಿಟ್ಟ ಬಾಣದ ಹಾಗೆ ಓಡಿಬಂದು ಶಿವಪಾದನ ಪಾದ ಹಿಡಿದು,

“ತಂದೇ” ಎಂದ.

“ಯಾಕೊ ಮಗ? ಏನು ವಿಷಯ?” ಅಂದ ಶಿವಪಾದ, ಆಶ್ಚರ್ಯದಿಂದ.

“ಮನುಷ್ಯರು ತಿನ್ನೋ ಅನ್ನ, ದನ ತಿನ್ನೋ ಹುಲ್ಲು ಕಸಿದುಕೊಂಬಂದು ಚಿನ್ನ, ಸೈನ್ಯ ಮಾಡಿಟ್ಟರೆ ಎದಕ್ಕೆ ಬಂತು ನನ್ನಯ್ಯಾ? ಚಿನ್ನವನ್ನ ಪುನಃ ಧಾನ್ಯವನ್ನಾಗಿಸುವ, ಸೈನಿಕರನ್ನ ಪುನಃ ಹುಲ್ಲು ಮಾಡೋ ವಿದ್ಯಾ ಕೊಡು ತಂದೇ”

ಶಿವಪಾದನಿಗೆ ಹೊಯ್ಕಾಯಿತು. ನಿನ್ನಡಿ ಇಷ್ಟು ಬೇಗ ಈ ತಿಳುವಳಿಕೆಗೆ ತಲುಪಬಹುದೆಂದು ಊಹಿಸಿರಲಿಲ್ಲ. ಸಂತೋಷವಾದರೂ ತೋರಿಸಿಕೊಳ್ಳದೆ, ಹೇಳಿದ:

“ಜನಕ್ಕೆ ಚಿನ್ನ ಬೇಕು. ರಾಜ್ಯ ಆಳಲಿಕ್ಕೆ ಸೈನ್ಯ ಬೇಕು. ಇರಲಿ ಇಟ್ಟುಕೊಳ್ಳಪ್ಪ”

“ಉಂಟೆ ನನ್ನಯ್ಯ? ಜನ ದನಗಳ ಹೊಟ್ಟೆ ಮ್ಯಾಲೆ ಹೊಡೆದು ಇಂಥ ಆಟ ಆಡಿದರೆ ಅಮ್ಮ ಮೆಚ್ಚಭೌದ? ಈ ವಿದ್ಯೆ ನನಗೆ ಬೇಡ”

-ಎಂದು ತಿರುಮಂತ್ರ ಬೋಧಿಸಿದ.” ಇದಕ್ಕಾಗಿ ನೀನು ಕಾಯಬೇಕಿಲ್ಲ. ಈಗಲೇ ಇಲ್ಲಿಂದಲೇ ಪ್ರಯೋಗಿಸಿ ನೋಡು” ಅಂದ ಶಿವಪಾದ.

ಪರಿವರ್ತಿಸಿದ ಚಿನ್ನವನ್ನ ಪುನಃ ಧಾನ್ಯವಾಗಿಸಿ, ಸೈನಿಕರನ್ನ ಹುಲ್ಲಿನ ಸಿವುಡಾಗಿ ಪರಿವರ್ತಿಸಿ ಕುರುಮುನಿಗೆ ಆ ವಿದ್ಯೆಯ ನೀಡಿ ಶಿವಪಾದನ ಅನುಮತಿ ಇಲ್ಲದೆ ಪ್ರಯೋಗಿಸಕೂಡದೆಂದು ಆಣೆಯ ಹಾಕಿ ನೆಮ್ಮದಿಯ ನಿಟ್ಟುಸಿರಿಟ್ಟ. ಶಿವಪಾದ ಮತ್ತು ಬೆಳ್ಳಿ-ಇಬ್ಬರಿಗೂ ನೆಮ್ಮದಿಯಾಯಿತು. ತನಗೆ ಗೊತ್ತಿದ್ದ ಎಲ್ಲದಕ್ಕೂ ಒಬ್ಬ ಅರ್ಹ ಅಧಿಕಾರಿಯನ್ನ ಕರುಣಿಸಿದ್ದಕ್ಕೆ ಶಿವಪಾದ ಅಮ್ಮನಿಗೆ ಕೃತಜ್ಞತೆ ಹೇಳಿ ತನ್ನೆಲ್ಲ ವಿದ್ಯೆಯನ್ನು ನಿನ್ನಡಿಗೆ ಧಾರೆಯೆರೆದ.