ಬರುವಾಗ ಸಾರಥಿಯಿಂದ ತನ್ನ ಮನೆತನದ ಹುವೇನವೇ ತಿಳಿದು ರವಿಕೀರ್ತಿಗೆ ಆಘಾತವಾಯ್ತು. ಕನಕಪುರಿಯ ರಾಜ, ಮಹಾರಾಣಿಯವರ ಬಗ್ಗೆ ಕೋಪ ತಾಪ ಉಕ್ಕಿ ಬಂದಂತೆಯೇ ತಂದೆಯ ಬೇಜವಾಬ್ದಾರಿತನವೂ ಇದರಲ್ಲಿದೆ ಅನ್ನಿಸಿತು. ಶಿಖರಸೂರ್ಯ ತನ್ನ ಶಿಕ್ಷಣದ ಖರ್ಚುವೆಚ್ಚಗಳ ಬಗ್ಗೆ ಕಂಚಿಯಲ್ಲಿ ಮೊದಲೇ ಹಣ ತೆಗೆದಿಟ್ಟದ್ದು ಗೊತ್ತಿತ್ತು. ಹಾಗೆ ತೆಗೆದಿಡುವಾಗಲೇ ತಾನು ಕಾಣೆಯಾಗುವುದನ್ನು ಆಲೋಚಿಸಿದ್ದನೆ? ಎಷ್ಟೇ ಅವಮಾನವಾಗಿರಲಿ, ಆತ ಆತ್ಮಹತ್ಯೆ ಮಾಡಿಕೊಳ್ಳುವಾತನಲ್ಲ, ಎಂಬುದೊಂದು ಖಾತ್ರಿಯಿತ್ತು. ಹಾಗಿದ್ದರೆ ಈಗ ಎಲ್ಲಿದ್ದಾನೆ? ಹ್ಯಾಗಿದ್ದಾನೆ? ಏನಾಗಿದ್ದಾನೆ? ಇದೆಲ್ಲ ಹೇಗೆ ನಡೆಯಿತೆಂದು ಯೋಚಿಸುತ್ತ, ಈ ವಿಷಯ ತನಗೆ ತಿಳಿಸದೇ ಇದ್ದ ಎಲ್ಲರ ಬಗ್ಗೆ ಸಿಟ್ಟು ಬಂತು. ಈಗ ತಂಗಿ, ತಾಯಿ, ಅಜ್ಜಿಯರ ಬಗ್ಗೆ ಕಾಳಜಿಯಾಯಿತು. ಈ ಮೂವರಿಗೂ ತನೇ ದಿಕ್ಕು. ಆದರೆ ಈ ದುರಂತವಾಗುತ್ತಿದ್ದಾಗ ತಾನೇ ಇರಲಿಲ್ಲವೆಂದರೆ ನಾಚಿಕೊಳ್ಳಬೇಕಾದ ವಿಚಾರವಲ್ಲವೆ? ಈಗ ಮಾತ್ರ ಬಿಳಿಗಿರಿ ಯಾವಾಗ ಬಂದೀತು, ಯಾವಾಗ ತಂಗಿ, ತಾಯಿ, ಅಜ್ಜಿಯರನ್ನ ನೋಡೇನೆಂದು ಕಾತರಗೊಂಡ. ಹಳ್ಳ ಕೊಳ್ಳಗಳಲ್ಲಿ ಗಾಡಿಯ ಕುಲುಕಾಟ ಅವನ ಕಾತರದ ದೇಹಕ್ಕೆ ಗೊತ್ತಾಗಲೇ ಇಲ್ಲ. ಬೊಂತೆಯ ನಿದ್ರಿಸುತ್ತಿದ್ದ. ಸಾರಥಿ ತಗ್ಗು ದಿನ್ನೆಗಳಲ್ಲಿ ಗಾಡಿಯನ್ನು ಹುಷಾರಾಗಿ ನಡೆಸುತ್ತಿದ್ದ.

ಕೊನೆಗೂ ನಾಲ್ಕು ದಿನ ಪ್ರವಾಸದ ಬಳಿಕ ಬಿಳಿಗಿರಿಯ ಪರಿಚಿತ ಬೆಟ್ಟಗಳು ಕಾಣಿಸುತ್ತಿದ್ದಂತೆ ರವಿಯ ಕಾತರ ಹೆಚ್ಚಾಯಿತು. ಕೊನೆಗೂ ಒಮ್ಮೆ ಬಿಳಿಗಿರಿಯ ಅಗಸೆಗೆ ಬಂದೊಡನೆ ಗಾಡಿಯಲ್ಲಿ ಎದ್ದುನಿಂತು “ಬಿಳಿಗಿರಿ ಬಂತು!” ಎಂದು ಕೂಗಿದ. ಗಾಡಿ ಮೆಲ್ಲಗೆ ತೆವಳುತ್ತಿದೆ ಎನ್ನಿಸಿ ತಾಳ್ಮೆಗೆಟ್ಟು ಟಣ್ಣನೆ ಗಾಡಿಯಿಂದ ಕೆಳಗೆ ಹಾರಿ ಸಣ್ಣ ಅರಮನೆಯ ಕಡೆಗೆ ಓಡತೊಡಗಿದ. ಎದುರಾದವರು ಪರಾರಿಯಾಗುತ್ತಿದ್ದಂತೆ ಓಡುತ್ತಿದ್ದ ಇವನನ್ನು ನೋಡಿ ಬೆರಗಾದರು.

ಪೌಳಿಯನ್ನು ದಾಟಿ ಸಣ್ಣ ಅರಮನೆಯ ಅಂಗಳಕ್ಕೆ ಬಂದಾಗ ಸಾಯಂಕಾಲವಾಗಿ ಸೇವಕರು ದೀಪ ಹಚ್ಚುವ ತಯಾರಿ ಮಾಡುತ್ತಿದ್ದರು. ಒಬ್ಬ ಸೇವಕನಿಗೆ ಇವನ ಗುರುತು ಸಿಕ್ಕದೆ ಅಡ್ಡನಿಂತು “ಯಾರು ನೀನು?” ಅಂದ.

“ನಾನು ನಾನು ನಾನೋ ಕತ್ತೆ, ರವಿ!”

-ಎಂದು ಅವನನ್ನು ಸರಿಸಿ ದಡಬಡ ಮೆಟ್ಟಿಲೇರಿ ಒಳಕ್ಕೋಡಿದ. ಆಮೇಲೆ ಕನಕಪುರಿಯ ಸೇವಕ ಹೇಳಿದ ಮೇಲೆ ಸ್ಥಳೀಯ ಸೇವಕರೂ ಉತ್ಸಾಹದಿಂದ “ಚಿಕ್ಕ ಬುದ್ಯೋರು” ಎನ್ನುತ್ತ ಒಳಗೋಡಿದರು.

ಮೊಗಸಾಲೆಯಲ್ಲಿ ಆಗಲೇ ದೀಪ ಹಚ್ಚಿದ್ದರು. ಮಧ್ಯ ನಿಂತು, “ಮುದ್ದೂ, ಅಜ್ಜೀ, ಅಮ್ಮ…. ಯಾರಲ್ಲಿ?” ಎಂದು ಬೆಟ್ಟದಲ್ಲಿ ಕೂಗುವಂತೆ ದೊಡ್ಡ ದನಿಯಲ್ಲಿ ಕರೆದು ತಕ್ಷಣ ಇದು ನಮ್ಮ ಮನೆಯಲ್ಲವೆಂದು ಮೆತ್ತಗಾದ. ಅಂಗಳದಲ್ಲಿ ಎದುರಾದ ಸೇವಕ ಬಂದು, “ಅಮ್ಮಾವ್ರೆ ಚಿಕ್ಕ ಬುದ್ಯೋರು ಬಂದವ್ರೆ” ಎಂದು ದನಿಯಾಡಿಸಿದ. ಒಳಗಡೆಯಿಂದ ಬಂದವಳು ಛಾಯಾದೇವಿ. ಮೂಕವಿಸ್ಮಿತಳಾಗಿ, ಎದುರಿಗಿದ್ದವನು ‘ತನ್ನ ಮಗನೇ?’ ಎಂಬ ಸಂಶಯದಲ್ಲಿ ಕೆಲವು ಕ್ಷಣ ನಿಂತು, ಮಗನೆಂದು ಖಾತ್ರಿಯಾಗಿ ಆನಂದ ವಿಸ್ಮಯಗಳಿಂದ ಕಣ್ಣೀರುಕ್ಕಿ, ಮಾತುಬಾರದೆ ಗದ್ಗದಿತಳಾಗಿ, “ಮಗನೇ!” ಎಂದು ಉದ್ಗಾರ ತೆಗೆದು ಓಡಿಬಂದು ತಬ್ಬಿಕೊಂಡಳು. ಹಾಗೇ ಮಗನ ತೆಕ್ಕೆಯಲ್ಲಿ ಮೂರ್ಛಾಗತಳಾದಳು.

“ಚಿಕ್ಕಧಣಿ ಬಂದರೋ!” ಎಂದು ಸೇವಕ ಆ ಕಡೆ ಓಡಾಡಿ ತಿಳಿಸಿದ. ಕೆಲವೇ ಕ್ಷಣಗಳಲ್ಲಿ ಕನಕಪುರಿಯಿಂದ ಬಂದ ಸೇವಕರು ಮೊಗಸಾಲೆಯ ಮೂಲೆಯಲ್ಲಿ ಗುಂಪುಗೂಡಿ ಚಿಕ್ಕದಣಿಯ ಬೆಳೆದ ರೂಪವನ್ನು ಕಣ್ಣಾರೆ ಹೀರುತ್ತ ಮನಸಾರೆ ಸಂತೋಷಪಡುತ್ತ ಆ ಕ್ಷಣಗಳನ್ನು ಆಚರಿಸುತ್ತಿದ್ದರು. ಬಿಳಿಗಿರಿಯ ಸೇವಕರೂ ಅವರೊಂದಿಗೆ ಸೇರಿದರು. ಯಾರೊಬ್ಬರೂ ತಾಯಿ ಮಗನ ಕಡೆಗೆ ಸುಳಿಯಲಿಲ್ಲ. ಅವರಿಂದ ಕಣ್ಣುಗಳನ್ನು ಕೀಳಲೂ ಇಲ್ಲ.

“ಅಮ್ಮ ಮುದ್ದು ಎಲ್ಲಿ? ಅಜ್ಜೀ ಎಲ್ಲಿ?”

ಛಾಯಾದೇವಿ ಮೆಲ್ಲಗೆ ಅರಿವಿಗೆ ಬಂದಳು. ನೀರಲ್ಲಿಯ ಸೊಡರಿನಂತೆ ಉರಿವ ಕಣ್ಣುಗಳಲ್ಲಿ ಮಗನನ್ನು ತುಂಬಿಕೊಳ್ಳುತ್ತ “ಮಗನೇ ನಿನ್ನ ತಂದೆ….” ಎನ್ನುತ್ತ ಮುಂದೆ ಮಾತು ಬಾರದೆ ನಿಂತುಬಿಟ್ಟಳು. ಮುಖ ಕೆಂಪಗಾಗಿ ನಗುತ್ತಿರುವಳೋ ಅಳುತ್ತಿರುವಳೋ ಹೇಳುವುದೇ ಕಷ್ಟವಾಗಿತ್ತು. ಆಗಾಗ “ಮಗನೇ ನಿನ್ನ ತಂದೆ….” ಎನ್ನುತ್ತ ಆದರೆ ಆತನನ್ನು ದೂರ ಹೋಗಲು ಬಿಡದೆ ಮತ್ತೆ ಮತ್ತೆ ತಬ್ಬಿಕೊಳ್ಳುತ್ತ ಬೇರೆ ಮಾತು ಬಾರದೆ ಮಗನೇ ಎನ್ನುತ್ತ ನಿಂತುಬಿಟ್ಟಳು. ರವಿ ಅವಳನ್ನು ಎಚ್ಚರಿಸುವಂತೆ,

“ಅಮ್ಮ ಮುದ್ದು ಎಲ್ಲಿ?”

“ಮಗನೇ ನಿನ್ನ ತಂದೆ….!”

-ಎಂದು ಹೇಳುತ್ತ ಛಾಯಾದೇವಿ ತಬ್ಬಿಕೊಂಡು ಮತ್ತೆ ಅಳತೊಡಗಿದಳು.

ಅಷ್ಟರಲ್ಲಿ ದೇವಾಲಯಕ್ಕೆ ಹೋಗಿದ್ದ ತಂಗಿ ಮುದ್ದು ಗೌರಿ ಮತ್ತು ಅಜ್ಜಿ ತೊಲೆ ಬಾಗಿಲಲ್ಲಿ ನಿಂತಿದ್ದವರು ಗದ್ದಲ ಕೇಳಿಸಿಕೊಂಡು ಒಳಬಂದರು. ರವಿಕೀರ್ತಿಯನ್ನು ನೋಡಿದ್ದೇ ‘ಅಣ್ಣಾs’ ಎಂದು ಕಿಟಾರನೆ ಕಿರಿಚಿ ನಿಂತಲ್ಲಿಂದ ಎರಡೇ ಹೆಜ್ಜೆಗಳಲ್ಲಿ ನೆಗೆದುಬಂದು ಗೌರಿ ಅಮ್ಮನಿಂದ ಅಣ್ಣನನ್ನು ಕಸಿದು ಅಲಂಗಿಸಿಕೊಂಡು ‘ಅಣ್ಣಾs’ ಎಂದು ಆನಂದದಿಂದ ಅಳತೊಡಗಿದಳು. ಇಷ್ಟು ದಿನ ಯಾಕೆ ಬರಲಿಲ್ಲ.? ಎಂದು ಅವನ ಎದೆ ತುಂಬ ಗುದ್ದಿ ಅತ್ತಳು. ಅಣ್ಣಾ ಎಂದು ಅವನ ಕತ್ತಿಗೆ ಜೋತುಬಿದ್ದು ಅಣ್ಣನನ್ನೇ ಕಣ್ಣಗಲಿಸಿ ನೋಡುತ್ತ ಹರ್ಷೋತ್ಕರ್ಷದಿಂದ ನಗತೊಡಗಿದಳು. ಆತ “ಮುದ್ದು ಮುದ್ದೂ” ಎಂದು ತಂಗಿಯನ್ನು ತಬ್ಬಿಕೊಂಡು ದುಃಖಮಿಶ್ರಿತ ಆನಂದಪಡುತ್ತಿದ್ದರೆ ಚಿಕ್ಕಮ್ಮಣ್ಣಿಗೆ ತಂದೆ ಮಕ್ಕಳ ಅಗಲಿಕೆ, ಕನಕಪುರಿಯ ಕ್ರೌರ್ಯಗಳ ನೆನಪಾಗಿ ‘ಕಂದಾs’ ಎಂದು ಹೇಳುತ್ತ ಅಲ್ಲೇ ಕುಸಿದಳು. ಸೇವಕಿಯರು ಓಡಿಬಂದು ಚಿಕ್ಕಮ್ಮಣ್ಣಿಯನ್ನು ಪೀಠದಲ್ಲಿ ಒರಗಿಸಿ ಗಾಳಿ ಬೀಸತೊಡಗಿದರು.

ಒಬ್ಬೊಬ್ಬರು ತಮಗಿಷ್ಟವಾದಂತೆ ರವಿಯನ್ನು ಕರೆಯುತ್ತ, ಆಲಂಗಿಸುತ್ತ ಆನಂದಭಾಷ್ಪಗಳ ಸುರಿಸುತ್ತ, ಚೀರುತ್ತ, ಶಿಖರಸೂರ್ಯನ ಅಗಲಿಕೆ ಮತ್ತು ರವಿ ಬಂದು ಸೇರಿಕೊಂಡ ದುಃಖಮಿಶ್ರಿತ ಆನಂದವನ್ನ ಆಚರಿಸಿದರು. ಗೌರಿಯಂತೂ ಎಲ್ಲರಿಂದ ಅಣ್ಣನ ಲಕ್ಷ್ಯ ಮತ್ತು ಸಾಮೀಪ್ಯವನ್ನು ಕಸಿದುಕೊಳ್ಳುತ್ತಿದ್ದಳು. ಗುಂಪುಗೂಡಿದ್ದ ಸೇವಕರು ಆರಾಧಕ ನೇತ್ರಗಳಿಂದ ಚಿಕ್ಕದಣಿಯನ್ನು ನೋಡುತ್ತ, ಅವನ ಚಲನವಲನಗಳನ್ನು ಏಕಾಗ್ರತೆಯಿಂದ ನೋಡುತ್ತ ಸಂತೋಷಪಡುತ್ತ ಹೊರಗಿನ ಲೋಕವನ್ನ ಮರೆತಿದ್ದರು. ಗೌರಿಯಂತೂ ಅಮ್ಮನಿಗೆ “ನನ್ನಣ್ಣ ಎಷ್ಟು ದೊಡ್ಡವನಾಗಿದ್ದಾನೆ ನೋಡಮ್ಮ!” ಎಂದು ಅವನ ಚಿಗುರುಮೀಸೆಯನ್ನು ಹಿಡಿದಲುಗಿಸಿ ಅವನು ಅಯ್ಯೋ ಎಂದು ನೋವಿಂದ ಒದರಿದರೆ ಕೇಕೆ ಹಾಕಿ ನಕ್ಕಳು.

ಸುತ್ತಲೂ ಆನಂದಭಾಷ್ಪಗಳಿಂದ ತುಂಬಿದ ಕಣ್ಣುಗಳು, ಕೆಂಪೇರಿದ ಮುಖಗಳು, ತನ್ನನ್ನು ಆಲಂಗಿಸಲು ಹಾರೈಸುವ ತೋಳುಗಳು, ಹುಚ್ಚಿಯಂತೆ ಆನಂದದಿಂದ ನಗುತ್ತಿರುವ ತಂಗಿ ಮುದ್ದುವನ್ನ ಕಣ್ತುಂಬ ನೋಡಿ ತಕ್ಷಣ ರವಿ ಗಂಭೀರವಾಗಿ ಹಿಂದೆ ಸರಿದು ನೋಡಿದ. ಅವಳೀಗ ಹದಿನಾರರ ಚೆಲುವೆ! ಈ ಆನಂದ, ಉತ್ಸಾಹ, ಭಾವೋದ್ರೇಕದ ಸಮಯದಲ್ಲಂತೂ ಆಕೆ ವಯಸ್ಸಿಗೆ ಬಂದ ದೇವತೆಯಂತೆ ಕಂಗೊಳಿಸುತ್ತಿದ್ದಾಳೆ. ತಕ್ಷಣ ದೂರನಿಂತು ತನ್ನನ್ನೇ ನೋಡುತ್ತಿರುವನೆಂದು ಗೊತ್ತಾಗಿ ಗೌರಿ ಅವನ ಕಣ್ಣುಗಳಲ್ಲಿ ಕಣ್ಣು ಕೀಲಿಸಿ ಅವನ ಬಳಿ ಸುಳಿದು ಅವನ ಎದೆಯನ್ನು ಜೋರಾಗಿ ಜಿಗುಟಿದಳು. ಅವನು ‘ಹಾs’ ಎಂದು ಕೂಗಿದೊಡನೆ ಬಿಟ್ಟು ಆನಂದದಿಂದ ಜೋರಾಗಿ ನಕ್ಕಳು.

ಅಷ್ಟರಲ್ಲಿ ಚಿಕ್ಕಮ್ಮಣ್ಣಿ ಎದ್ದು ಮೆಲ್ಲಗೆ ಮೊಮ್ಮಗನ ಬಳಿಗೆ ಬಂದಳು. ಮೊಮ್ಮಗನನ್ನು ತಬ್ಬಿಕೊಂಡು ಬಿಕ್ಕಿಬಿಕ್ಕಿ ಅತ್ತಳು. ರವಿಯ ಕೆನ್ನೆ ಸವರಿದಳು. ರವಿ ಅಜ್ಜಿಯ ಕಾಲುಮುಟ್ಟಿ ನಮಸ್ಕರಿಸಿದ. ತಲೆ ನೇವರಿಸಿ ನೆತ್ತಿಯ ಮೂಸಿ ನೋಡಿ ಹೃತ್ಪೂರ್ವಕ ಎರಡೂ ಕೈ ನೆತ್ತಿಯ ಮೇಲೆ ಊರಿ “ಆಯುಷ್ಯವುಳ್ಳವನಾಗು ಕಂದಾ” ಎಂದು ಮತ್ತೆ ಬಿಕ್ಕಿದಳು. ಮತ್ತೆ ಗೌರಿ ಬಂದು ಅಜ್ಜಿಯಿಂದ ಅವನನ್ನು ಕಸಿದುಕೊಂಡು ಆಲಂಗಿಸಿದಳು. ಅಜ್ಜಿ, ತಾಯಿ, ಸೇವಕಿಯರು ಎಲ್ಲರೂ ಮುದ್ದುವಿನ ಪ್ರೀತಿ ಇವನ್ನೆಲ್ಲ ನೋಡುತ್ತ ಕನಸು ಹೊಸೆಯುತ್ತ ಆನಂದಭಾಷ್ಪ ಸುರಿಸುತ್ತಿದ್ದರು.

ಅಣ್ಣ ತಂಗಿಯರಿಬ್ಬರೂ ಊಟ ಮಾಡಿ ಕೂಡಲೇ ಮಲಗಲೇ ಇಲ್ಲ. ಮೊಗಸಾಲೆಯಲ್ಲಿ ಕೂತು ಸಣ್ಣ ದನಿಯಲ್ಲಿ ಇಬ್ಬರೂ ಅಗಲಿದಾಗಿನಿಂದ ಹಿಡಿದು ಇವತ್ತಿನವರೆಗೆ ತಂತಮ್ಮ ಸುತ್ತ ನಡೆದ ಸಾವಿರ ವಿಷಯ ಮಾತನಾಡಿದರು. ತಂದೆಯ ಬಗ್ಗೆ ರವಿಕೀರ್ತಿಯ ಕೋಪವಿನ್ನೂ ಆರಿರಲಿಲ್ಲ. “ಕನಕಪುರಿಯವರು ಹೇಳಿಕೇಳಿ ದುಷ್ಟರು. ಇವನು ಹೆಂಡತಿ ಮಕ್ಕಳನ್ನು ಬಿಟ್ಟುಹೋದದ್ದು ತಪ್ಪು! ಮುಚ್ಚುಮರೆ ಇಲ್ಲದೆ ಹೇಳು. ಅಪ್ಪನ ವರ್ತನೆ ಹೊಣೆಗೇಡಿತನದ್ದಲ್ಲವೆ?” ಎಂದ ರವಿ.

ಅದಕ್ಕೆ ಗೌರಿ ಹೇಳಿದಳು-

“ಸರಿಯಾಗಿ ಅಪ್ಪನನ್ನು ತಿಳಿದರೆ ಆತ ತಪ್ಪು ಮಾಡಿದ್ದರೂ ಕ್ಷಮಿಸಬೇಕೆನಿಸುತ್ತದೆ. ನಿನಗೆ ಬೌದ್ಧಿಕ ಅಹಂಕಾರವಿದೆ ಕಣೋ. ತಂದೆಯನ್ನ ವಿಮರ್ಶಿಸೋದು ಯೋಗ್ಯ ನಡೆಯಲ್ಲ. ನನಗಂತೂ ಅವನ ಬಗ್ಗೆ ಗೌರವ ಭಾವನೆ ಇದೆ. ಆದರೆ ಇಷ್ಟೆ, ದೇವರನ್ನ ನಂಬುವವರ ಬಗ್ಗೆ ಅಪ್ಪನ ಧೋರಣೆ ಸರಿ ಇಲ್ಲ.”

ಹೀಗೆ ಕನಕಪುರಿ, ರಾಜ, ರಾಣಿ, ಬದೆಗ ಇತ್ಯಾದಿ ಪರಸ್ಪರ ಪ್ರಶ್ನೆ ಕೇಳಿ ಉತ್ತರ ಪಡೆದರೋ ಬರಿ ಪ್ರಶ್ನೆ ಕೇಳಿಕೊಂಡರೋ ಬರೀ ಹರಟೆ ಹೊಡೆದರೋ ಅಂತೂ ಮಾತನಾಡಿದರು. ಅಣ್ಣನ ಪ್ರತಿಮಾತಿಗೂ ಗೌರಿ ನಕ್ಕಳು. ಈ ಮಧ್ಯೆ ಅವನ ಮೀಸೆಗಳ ಮೇಲೆ ಅನೇಕ ಬಾರಿ ಕೈಯಾಡಿಸಿ “ಅಣ್ಣಾ ನೀನು ಗಡ್ಡ ಬೆಳೆಸಬೇಡ, ಸನ್ಯಾಸಿಯ ಹಾಗೆ ಕಾಣುತ್ತಿ” ಎಂದೂ ಸಲಹೆ ಮಾಡಿ ಅದಕ್ಕೆ ಅವನನ್ನು ಒಪ್ಪಿಸಿಯೂ ಬಿಟ್ಟಳು. ಅಷ್ಟರಲ್ಲಿ ಚಿಕ್ಕಮ್ಮಣ್ಣಿ,

“ಮುದ್ದೂ ನಿನ್ನಣ್ಣ ನಾಲ್ಕು ದಿನಗಳಿಂದ ಪ್ರವಾಸ ಮಾಡಿ ದಣಿದಿದ್ದಾನೆ, ಮಲಗಲಿ, ನಾಳೆ ಮಾತನಾಡಿದರಾಗದೆ? ನೀನೂ ಮಲಗು ಬಾ”

-ಎಂದು ಕರೆದಳು. “ಆಯ್ತಜ್ಜಿ” ಎಂದು ಹೇಳಿ ಹೋಗಲಿದ್ದವಳು ಆಮೇಲೆ ಇಬ್ಬರೂ ಪಿಸುದನಿಯಲ್ಲಿ ಒಂದು ಗಂಟೆ ಕಾಲ ಮಾತಾಡಿ, ಮಲಗಲು ಹೋದಳು.

ಮಾರನೇ ಮುಂಜಾನೆ ಮೂರು ತಾಸು ಹೊತ್ತೇರಿದರೂ ರವಿ ಎದ್ದಿರಲಿಲ್ಲ. ಅಷ್ಟರಲ್ಲಿ ಹತ್ತು ಸಾರಿ ಗೌರಿ ಬಂದು ಹೋಗಿದ್ದಳು. ಪ್ರತಿಸಲ ಬಂದಾಗಲೂ ಇನ್ನೂ ಎದ್ದಿಲ್ಲ ಪುಣ್ಯಾತ್ಮ; ಅದೆಷ್ಟು ದಣಿದಿದ್ದಾನೋ?” ಎಂದುಕೊಂಡು ಹೋದಳೇ ವಿನಾ ಎಬ್ಬಿಸುವ ಮನಸ್ಸು ಮಾಡಲಿಲ್ಲ.

ರವಿ ಕಣ್ಣುಜ್ಜಿಕೊಂಡು ಅಂಟಿಕೊಂಡ ರೆಪ್ಪೆಗಳನ್ನು ಬಿಚ್ಚಿ ನೋಡಿದರೆ ಕಿಡಿಕಿಯ ಮೂಲಕ ಬಲಿತ ಬಿಸಿಲು ಒಳಬಂದು ಇಡೀ ಕೋಣೆಯನ್ನು ಬೆಳಗುತ್ತಿತ್ತು. “ಅಯ್ಯೋ ಆಗಲೇ ಮೂರು ತಾಸು ಹೊತ್ತೇರಿದೆ” ಎನ್ನುತ್ತ ಎದ್ದ. ಬಾಗಿಲಲ್ಲಿ ನಿಂತಿದ್ದ ತಂಗಿ,

“ಮೂರಲ್ಲ, ನಾಲ್ಕು ತಾಸು ಹೊತ್ತೇರಿದೆ, ಏಳು”

-ಎಂದು ಒಳಬಂದಳು. ತಕ್ಷಣ ರವಿ ಮೈತುಂಬ ಹೊದಿಕೆ ಹೊದ್ದುಕೊಂಡು ಗಾಬರಿಯಿಂದ,

“ಮುದ್ದೂ ಹಾಗೆಲ್ಲ ಗಂಡಸರಿದ್ದಲ್ಲಿ ಯಾವಾಗೆಂದರೆ ಆವಾಗ ಹುಡಿಗೇರು ಬರಬಾರದು, ಹೊರಗೆ ನಡೆ” ಎಂದ.

ಗೌರಿಗೆ ಆಶ್ಚರ್ಯವಾಯಿತು; ಆಘಾತದಿಂದ ಕೆಲ ಕಣ ಹಾಗೇ ನಿಂತು ಆಮೇಲೆ ತಿಳವಳಿಕೆ ಬಂದು ದಿಗಿಲಿನಿಂದ ಅಣ್ಣನನ್ನು ಒಮ್ಮೆ ನೋಡಿ ಹೊರನಡೆದಳು. ಹೋಗುವಾಗ ತೆರೆದ ಬಾಗಿಲನ್ನು ಮುಚ್ಚಿಕೊಂಡು ಗೊಳ್ಳನೆ ನಗುತ್ತ ಓಡಿದಳು.

ರವಿಯೀಗ ದೊಡ್ಡವನಾಗಿದ್ದ. ಗಂಭೀರನಾಗಿದ್ದ. ಅಗತ್ಯವಿದ್ದಾಗ ಮಾತ್ರ ಮಾತಾಡುತ್ತಿದ್ದ. ಪ್ರಣಯದ ಭಾವನೆಗಳು ಸುಳಿದಾಗ ಬಿಳಿಗಿರಿಯ ಹುಡುಗಿಯರಲ್ಲಿ ತನ್ನ ಮನಸ್ಸು ಮತ್ತು ಮರ್ಯಾದೆಗೆ ಸಮನಾದವರು ಯಾರೂ ಇಲ್ಲವೆಂದು, ಅಂಥವರ ಜೊತೆ ಮಾತಾಡುವುದು ಅಲ್ಪರೊಂದಿಗಿನ ವ್ಯರ್ಥ ತಲೆಹರಟೆಯೆಂಬಂತೆ ನಡೆದುಕೊಳ್ಳುತ್ತಿದ್ದ. ವಯೋಮಾನದಿಂದ ತರುಣರೊಂದಿಗೆ ಸ್ನೇಹ ಬೆಳೆಸಬೇಕಾದ ಅವನು ಕಂಚೀಪಟ್ಟಣದಲ್ಲಿ ವಿದ್ಯೆಗಳಿಸಿದ ಹೆಚ್ಚುಗಾರಿಕೆ ಮತ್ತು ಡೌಲಿನಿಂದಾಗಿ ಯಾವಾಗಲೂ ತನಗಿಂತ ಹಿರಿಯರೊಂದಿಗೇ ಮಾತಾಡುತ್ತಿದ್ದ. ಇತರರಿಗೆ ತಿಳಿಯದ ಸಂಗತಿಗಳು, ಅನುಭವಗಳು ತನಗೆ ಗೊತ್ತಿವೆಯೆಂಬ ಬೌದ್ಧಿಕ ಅಹಂಕಾರವೂ ಅವನಲ್ಲಿತ್ತು. ಆದರೆ ಮಹಾರಾಜ ಮಾತ್ರ ಇದ್ಯಾವುದನ್ನೂ ಗಮನಿಸಿರಲಿಲ್ಲ. ತಂದೆಯಂತೆಯೇ ಮೈಕಟ್ಟಿನ ರವಿಯನ್ನು ಹುಡುಕಿ ಅವನು ಕಣ್ಣಿಗೆ ಬಿದ್ದರೆ ಸಂತೋಷಪಡುತ್ತ ತನಗಾದ ಆನಂದವನ್ನು ಅನೇಕ ರೀತಿಯಲ್ಲಿ ವ್ಯಕ್ತಮಾಡುತ್ತಿದ್ದ ಮತ್ತು ಕುಮಾರಿ ಜಯರಾಣಿಯೊಂದಿಗೆ ಈತನ ಕನಸು ಕಾಣುತ್ತಿದ್ದ. ಚಿಕ್ಕಂದಿನ ಆಟಗಳನ್ನು ನೆನಪಿಸುತ್ತಿದ್ದ. ಆದರೆ ರವಿ ಮಾತ್ರ ಅವೆಲ್ಲ ಬಾಲ್ಯದ ಹುಡುಗಾಟಗಳೆಂದು ನಕ್ಕು ನಿವಾರಿಸುತ್ತಿದ್ದ.

ಆದರೆ ತಂಗಿಯೊಂದಿಗೆ ಮಾತ್ರ ಈ ಯಾವ ನಿರ್ಬಂಧಗಳಿರಲಿಲ್ಲ. ಬೇಕಾದಷ್ಟು ಹರಟುತ್ತಿದ್ದ. ಅಣ್ಣ ತನ್ನೊಂದಿಗೆ ಮಾತ್ರ ಸಲುಗೆಯಿಂದ ನಗಾಡುವನೆಂದು ಅವಳಿಗೂ ಹೆಮ್ಮೆ. ಇಬ್ಬರೂ ದೇವಾಲಯದ ಹಿಂದಿನ ಬಂಡೆಯ ಮೇಲೆ ಕೂತು ರವಿ ಕಂಚಿಗೆ ಹೋದಾಗಿನಿಂದ ಹಿಡಿದು ಈವರೆಗಿನ ಘಟನೆ, ಅನುಭವಗಳನ್ನು ಹಂಚಿಕೊಂಡರು. ಚಂಡೀದಾಸ ಅಡಕೆ ಕೊಟ್ಟುದರಿಂದ ಹಿಡಿದು ಹೋರಿಯ ಹುಡುಗನ ಕನಸಿನವರೆಗೆ ಗೌರಿ ಹೇಳಿದರೆ ವಾಸಂತಿಯ ಬಗ್ಗೆ ರವಿ ಹೇಳಿದ. ಆಮೇಲೆ ತಂದೆಯ ಅಸಂಗತ ವರ್ತನೆಯ ಬಗ್ಗೆ ಮಾತಾಡಿದರು. ತಂದೆಯ ಬಗ್ಗೆ ಏನೂ ತಿಳಿಯಲಿಲ್ಲವಾದರೂ ಹಿಂದುರಿಗಿ ಬಂದೇ ಬರುವನೆಂಬ ಗೌರಿಯ ಭರವಸೆಯೊಂದಿಗೆ ಅರಮನೆಗೆ ಹಿಂದಿರುಗಿದರು.

ಆ ರಾತ್ರಿ ಬೆಳಗಿನ ಸಮಯ ಗೌರಿಗೊಂದು ಕನಸಾಯಿತು:

ಬೆಳ್ದಿಂಗಳಿತ್ತು. ಒಂದು ತಟ್ಟೆ ತಗೊಂಡು ಅದರಲ್ಲಿ ನೀರು ಹಾಕಿಕೊಂಡು ತೊಡೆಯ ಮೇಲೆ ಇಟ್ಟುಕೊಂಡು ಅಂಗಳದಲ್ಲಿ ಕೂತಳು. ಆಕಾಶದ ಚಂದ್ರ ಬಂದು ತಟ್ಟೆ ನೀರಲ್ಲಿ ಚಂಗನೆ ನೆಗೆದಂತಾಯಿತು! ನೋಡಿದರೆ ಚಂದ್ರ ತಟ್ಟೆಯ ತುಂಬ ಕುಣಿದಾಡುತ್ತಿದ್ದ. ಚಿಕ್ಕೆ ತಾರೆಗಳೂ ಬಂದು ಅವೂ ಚಂದ್ರನೊಂದಿಗೆ ಕುಣಿಯತೊಡಗಿದವು! ಎಲ್ಲವೂ ಗೌರಿಯ ಕೈ ಹಿಡಿದೆಳೆಯುತ್ತ “ನೀನೂ ನಮ್ಮ ಜೊತೆ ಬಾ” ಅಂತ ಕರೆದವು. ನೋಡಿದರೆ ಆಗಲೇ ಇವಳೂ ಚಂದ್ರ ಚಿಕ್ಕೆ ತಾರೆಯರ ಜೊತೆ ಸೇರಿ ಬೆಳ್ದಿಂಗಳಲ್ಲಿ ಈಜುತ್ತ ತೇಲುತ್ತ ಆಕಾಶದ ತುಂಬ ಆಡಿದಳು. ಆಟ ಮುಗಿದ ಮೇಲೆ ಚಂದ್ರ ಎಷ್ಟು ಒಳ್ಳೆಯ ಚಂದೂಮಾಮ!- “ನಿನಗೇನು ಬೇಕು ಮರಿ?” ಅಂದ! ಆದರೆ ತನಗೇನು ಬೇಕೆಂದು ಗೊತ್ತಾಗಲೇ ಇಲ್ಲ. ಗೊತ್ತಾಗದ್ದಕ್ಕೆ ಅಳುಬಂತು. ಆವಾಗ ಚಂದ್ರನೇ ಮುಂದೆ ಬಂದು ತನ್ನ ಕಣ್ಣೀರೊರೆಸಿ ಸಮಾಧಾನ ಮಾಡಿ ಅಂಗೈಯಲ್ಲೊಂದು ಚಿಕ್ಕೆ ಇಟ್ಟು ಕಳಿಸಿಕೊಟ್ಟ.

ಬೆಳಿಗ್ಗೆ ಎಚ್ಚರವಾಗಿ ನೋಡಿದರೆ ಗೌರಿಯ ಕೈಯಲ್ಲಿ ಏನೋ ಇದೆ! ಚಕ್ಕನೆ ಎದ್ದು ಕೈ ತೆರೆದು ನೋಡಿಕೊಂಡಳು. ಚಂಡೀದಾಸ ಕೊಟ್ಟ ಅಡಿಕೆ ಅಂಗೈಯಲ್ಲಿದೆ! ಸ್ಪರ್ಶಿಸಿ ನೋಡಿದಳು. ಪಳಪಳ ಪುಳಕವೆದ್ದು ಕಣ್ಣಗಲಿಸಿದಳು. ಅಡಿಕೆಯ ಮ್ಯಾಲೆ ಕೆಳಗೆ ಎರಡೂ ಹಸ್ತಗಳನ್ನು ಮುಗಿದು ಎದೆಗೊತ್ತಿಕೊಂಡು ನಿಶ್ಯಬ್ದಳಾಗಿ ಕೂತಳು. ಅಷ್ಟರಲ್ಲಿ ಹೊರಗೆ ಚಂಡೀದಾಸ ಬಂದು ದೇವಾಲಯದಲ್ಲಿ ಬೀಡು ಬಿಟ್ಟ ಸಂಗತಿಯನ್ನು ಚಿಕ್ಕಮ್ಮಣ್ಣಿಗೆ ಯಾರೋ ತಿಳಿಸಿದ್ದು ಕೇಳಿಸಿತು. ಚಕ್ಕನೆ ಎದ್ದಳು.