ಇಂತೀಪರಿ ಗಡ್ಡೀಬೇನೆಯಿಂದ ಕನಕಪುರಿ ಸರ್ವನಾಶವಾಗುವ ಸ್ಥಿತಿಗೆ ತಲುಪಿರುವ ಸಂಗತಿಯ ತಿಳಿದು ನಿನ್ನಡಿಗೆ ಖೇದವಾಯಿತು. ಎಲ್ಲಿಯೋ ಯಾವುದೋ ರೋಗ ಹಬ್ಬುತ್ತಿದೆ ಅಂದಾಗ ಶಿವಾಪುರದ ವೈದ್ಯರು ಸುಮ್ಮನಿರಬಾರದಲ್ಲ, ಕೈಲಾದಷ್ಟು ಸೇವೆ ಮಾಡೋಣವೆಂದು ನಿನ್ನಡಿಯು ಚಂಡೀದಾಸ, ಕುರುಮುನಿಯೊಂದಿಗೆ ಕನಕಪುರಿಗೆ ಬಂದ.

ಅಂಗಡಿ ಮುಗ್ಗಟ್ಟು ಮನೆಗಳೆಷ್ಟೊ ಸುಟ್ಟು ಬಿದ್ದಿದ್ದವು. ಅರೆಸುಟ್ಟ ಮನೆಗಳು, ಪೂರ್ತಿ ಸುಟ್ಟವುಗಳು, ಇನ್ನೂ ಹೊಗೆಯಾಡುತ್ತಿರುವ ಮನೆಗಳು…. ದಾರಿ ತುಂಬ ಎಲ್ಲೆಂದರಲ್ಲಿ ಹೆಣಗಳು! ಅರೆಬೆಂದ ಹೆಣಗಳು, ಹಸಿ ಹೆಣಗಳು, ಹೊಸ್ತೀಲ ಮೇಲೆ ಬಿದ್ದ ಹೆಣಗಳು, ತಿಪ್ಪೆ ಗುಂಡಿಗಳಲ್ಲಿ ಹೆಣಗಳು, ಅಂತ್ಯ ಕ್ರಿಯೆಗೆ ದಿಕ್ಕಿಲ್ಲದ ಹೆಣಗಳು! ಜನಗಳ್ಯಾರೋ ಹೆಣಗಳ್ಯಾರೋ – ಹದ್ದು ಕಾಗೆಗಳು ಹೆಣಗಳ ಮ್ಯಾಲೆ ಎಗರುತ್ತ ಒಮ್ಮೊಮ್ಮೆ ಆ ಕಡೆ ಬಂದವರ ಮ್ಯಾಲೂ ಎಗರುತ್ತಿದ್ದವು! ಊರು ಸ್ಮಶಾನಕ್ಕಿಂತ ಕಡೆಯಾಗಿತ್ತು. ಗಾಳಿ ಧೂಳುಗಳಲ್ಲಿ ಬೆಂದ, ಬೇಯದ ಹೆಣಗಳ ದುರ್ನಾತ ತುಂಬಿಕೊಂಡಿತ್ತು.

ನೋಡಿ ನೋಡಿ ಮೂವರೂ ಒಂದು ಮನೆಯ ಕಟ್ಟೆಯ ಮೇಲೆ ಕುಂತರು. ಮೂವರ ಬಾಯಿಂದಲೂ ಮಾತು ಬರಲಿಲ್ಲ. ತುಸು ಹೊತ್ತು ಹೀಗೇ ಕೂತಿದ್ದು ಆಮೇಲೆ ಮೆಲ್ಲಗೆ ನಿನ್ನಡಿ ಎದ್ದು ಕಟ್ಟೆಯ ಮೇಲಿದ್ದ ಗೋಣಿ ತಟ್ಟನ್ನು ತಗೊಂಡು ಹೊರಟ. “ಎಲ್ಲಿಗೆ?” ಅಂದ ಕುರುಮುನಿ. ಈಗಲೂ ನಿನ್ನಡಿ ಮಾತಾಡಲಿಲ್ಲ. ಅಲ್ಲೇ ಬಿದ್ದಿದ್ದ ಒಂದು ಹೆಣವನ್ನು ಗೋಣೀ ತಟ್ಟಿನಲ್ಲಿ ಸುತ್ತಿ ಕೂಟದ ಬಯಲಕಿನ ಮಧ್ಯೆ ಇಟ್ಟ.

“ಏನ್ ಮಾಡ್ತೀಯಪ್ಪ?” ಅಂದ ಚಂಡೀದಾಸ.

“ಮೊದಲು ಹೆಣ ಸುಡೋಣ. ದೊಡ್ಡ ರೋಗ ಆಗಲೇ ಜನಗಳನ್ನ ನುಂಗಿ ಹಾಕಿದ!” ವರ್ತಕರಾಗಲೇ ಊರು ಬಿಟ್ಟಿದ್ದರು. “ಏನೇ ಆದರೂ ಕನಕಪುರಿಯ ಬಿಡಲಾರೆವೆಂದ ವೃದ್ಧರು, ದುರ್ಬಲರು, ಕುರುಡರು, ಕುಂಟರು, ಅನಾಥರು ಮಾತ್ರ ಊರೊಳಗೆ ಉಳಿದಿದ್ದರು. ಅರಮನೆಯಲ್ಲಿ ಧಾನ್ಯ ಸಿಕ್ಕ ಮೇಲೆ ಅನೇಕ ಬಡವರು ಗುಳೆ ಏಳುವುದನ್ನು ಬಿಟ್ಟು – “ಬೇರೆ ಊರುಗಳಿಗೆ ಹೋದರೆ ಇಷ್ಟಾದರೂ ಧಾನ್ಯ ಸಿಕ್ಕುವುದೆಂಗ ಭರವಸೆ ಏನು? ಬಂದದ್ದು ಬರಲಿ, ಕೊಲ್ಲೋ ದೇವರಿಗೆ ಯಾವ ಸ್ಥಳವಾದರೇನು? – ಎಂದುಕೊಂಡು ಅವರೆಲ್ಲ ಇಲ್ಲೇ ಉಳಿದರು. ಆದರೆ ಎಗರುವ ಹದ್ದುಗಳಿಗೆ, ದರೋಡೆಕೋರರಿಗೆ ಹೆದರಿ ರಸ್ತೆಗೆ ಬರುವ ಧೈರ್ಯ ಯಾರಿಗೂ ಇರಲಿಲ್ಲ.

ಇದನ್ನೆಲ್ಲ ನಿವಾರಿಸಿಕೊಂಡು ಅಂತೂ ಹೊತ್ತು ಮುಳುಗುವ ಸಮಯಕ್ಕೆ ಮೂವರೂ ಸೇರಿ ಇಪ್ಪತ್ತು ಹೆಣಗಳನ್ನು ಸುಟ್ಟರು. ಮನೆಗಳಲ್ಲಿ ಜೀವಂತ ಇದ್ದವರು ಕದ್ದು ಮನೆಗಳ ಕಿಂಡಿಗಳಿಂದ ನೋಡಿದರೇ ವಿನಾ ಯಾರೂ ಹೊರಗೆ ಬರಲಿಲ್ಲ. ಇವರಿಗಿದು ಗೊತ್ತಿದ್ದರೂ ಅವರ ಸಹಾಯವನ್ನು ನಿರೀಕ್ಷಿಸಲಿಲ್ಲ.

ಆಮೇಲೆ ಮಲಗಲು ಸ್ಥಳ ಹುಡುಕಿಕೊಂಡು ಊರ ಹೊರಗೆ ಹೋದರು. ಹೆಣ, ಕಟ್ಟಿಗೆ ಹೊತ್ತು ಮೂವರಿಗೂ ದಣಿವಾಗಿತ್ತು. ಊರ ಹೊರಗಿನ ಶ್ವಾನಕೊಪ ನೋಡಿ ಸಮಾಧಾನವಾಯಿತು. ನಾಳೆ ಬೆಳಿಗ್ಗೆ ಯಾರು ಯಾರು ಏನೇನು ಮಾಡುವುದೆಂದು ಮಾತಾಡಿಕೊಂಡು ಮಲಗಿದರು.

ಮಾರನೇ ಬೆಳಿಗ್ಗೆ ಶ್ವಾನಕೂಪವೇ ಇದ್ದುದರಲ್ಲಿ ಪ್ರಶಸ್ತವಾದ ಸ್ಥಳವೆಂದು ತೀರ್ಮಾನಿಸಿ ಕುರುಮುನಿ ಅಲ್ಲಿ ಮ್ಯಾಲೆ ಸೊಪ್ಪು ಸದೆ ಹೊದಿಸಿ, ಚಪ್ಪರ ಹಾಕಿ ಜನರಿಗೆ ಗಂಜೀ ವ್ಯವಸ್ಥೆ ಮಾಡುವುದೆಂದು ಚಂಡೀದಾಸ ಕಾಡಿಗೆ ಹೋಗಿ ಮದ್ದು ತಂದು ಬಂದವರಿಗೆ – ರೋಗಿಗಳಿಗೆ, ರೋಗ ಬಾರದವರಿಗೂ ಮದ್ದು ಕೊಡುವುದೆಂದು, ನಿನ್ನಡಿ ಊರೊಳಗಿನ ಹೆಣಗಳನ್ನು ಸುಡುವುದೆಂದು ಕೆಲಸ ಹಂಚಿಕೊಂಡು ನಡೆದರು.

ನಿನ್ನಡಿ ಬಂದು ನಿನ್ನೆ ಸುಟ್ಟ ಸ್ಥಳದಲ್ಲಿಯೇ ಹೆಣಗಳನ್ನು ತಂದು ಇಡತೊಡಗಿದ. ನಿನ್ನೆ ಕೂಡಿಟ್ಟ ಕಟ್ಟಿಗೆಯೇ ಇನ್ನೂ ಉಳಿದಿತ್ತು. ನಿನ್ನೆ ಸಮೀಪದ ಶವಗಳನ್ನು ಮಾತ್ರ ಸುಟ್ಟಿದ್ದರು. ಇವತ್ತು ಸ್ವಲ್ಪ ದೂರದ ಹೆಣಗಳನ್ನು ತರಬೇಕಾಗಿತ್ತು. ಕೊಳೆಯುವ ಹೆಣಗಳು ಹೆಚ್ಚು ಅಪಾಯಕಾರಿಯಾದುದರಿಂದ ಅವನ್ನೇ ಮೊದಲು ಸುಡಬೇಕಾಗಿತ್ತು. ಆದರೆ ಹಿಡಿದೆತ್ತಿದರೆ ಕೆಲವು ಹೆಣಗಳ ಅಂಗಾಂಗಗಳು ಕೈಗೇ ಬರುತ್ತಿದ್ದುದರಿಂದ ಜೋಪಾನವಾಗಿ ಎತ್ತಬೇಕಾಗಿತ್ತು. ತರುವಾಗ ಕೂಡ ಕತ್ತರಿಸಿ ಬೀಳದಂತೆ, ತಟ್ಟಿನಲ್ಲಿ ಸುತ್ತಿ ಕಟ್ಟಿ ತರಬೇಕಾಗಿತ್ತು. ನಿನ್ನಡಿ ಆ ಕಡೆ ಈ ಕಡೆ ನೋಡದೆ ತದೇಕ ಧ್ಯಾನದಿಂದ ಈ ಕೆಲಸ ಮಾಡುತ್ತಿದ್ದ.

ಅನತಿ ದೂರದ ಅರೆಬೆಂದ ಅಂಗಡಿಯ ಕಟ್ಟೆಯ ಮೇಲೆ, ದೊಗಳೆ ಅಂಗಿಯ ದಡಿಧೋತ್ರ ಉಟ್ಟಿದ್ದ ಚಿಕ್ಕ ತಲೆ, ಬಿಳಿಯ ಜೊಂಡು ಮೀಸೆಯ ಒಬ್ಬ ಮುದುಕ ಕೂತಿದ್ದ. ಮೈಮ್ಯಾಲೆ ಹೊಸ ಬಟ್ಟೆ ಇದ್ದುದರಿಂದ ಸಿಂಗಾರಗೊಂಡ ಹೆಣ ಇರಬೇಕೆಂದು ನಿನ್ನಡಿ ಸುಮ್ಮನಾದ. ನಿನ್ನಡಿ ಹೆಣ ಕೂಡಿಸುತ್ತಿರುವುದನ್ನು ನೋಡಿ ಕುತೂಹಲ ತಾಳದೆ ಆ ಮುದುಕ ಎದ್ದು ಬಂದ. ಸೊಂಟದ ಮೇಲೆ ಕೈ ಇಟ್ಟುಕೊಂಡು ಇವನ ಮುಖವನ್ನೇ ನೋಡುತ್ತ ತುಸು ಹೊತ್ತು ನಿಂತ. ವಿಶ್ವಾಸ ಮೂಡಿತೆಂದು ತೋರುತ್ತದೆ ಇನ್ನಷ್ಟು ಸಮೀಪ ಬಂದು ನಿಂತ. ಅಷ್ಟರಲ್ಲಿ ನಿನ್ನಡಿ ಹೆಗಲ ಮೇಲೆ ಹೊತ್ತು ತರುತ್ತಿದ್ದ ಹೆಣದ ಕೈ ಕಳಚಿತು, ಮತ್ತೆ ಬಂದರಾಯಿತೆಂದು ನಿನ್ನಡಿ ಹಾಗೇ ಮುಂದುವರೆದ. ಮುದುಕ ಆ ಕೈ ತಗೊಂಡು ನಿನ್ನಡಿಯ ನಿಂದಿನಿಂದ ಹೋದ.

ಒಟ್ಟಿದ ಕಟ್ಟಿಗೆಯ ಮೇಲೆ ನಿನ್ನಡಿಗಿಂತ ಮೊದಲು ಆ ಕೈ ಇಟ್ಟ. ಹೆಣ ಇಟ್ಟು ನಿನ್ನಡಿ ಇನ್ನೊಂದು ಹೆಣ ತರಲು ಹೊರಟಾಗ ಇವನನ್ನು ನೋಡಿ, ಹೇಳಿದ:

“ದೊಡ್ಡ ರೋಗದ ಆರ್ಭಟ ಹೆಚ್ಚಾಗಿದೆ. ಮೊದಲು ಇಲ್ಲಿಂದ ಜಾಗ ಖಾಲಿ ಮಾಡು. ರೋಗ ಇದ್ದರೂ ಇಲ್ಲದಿದ್ದರೂ ಶ್ವಾನಕೊಪಕ್ಕೆ ಹೋಗು. ಅಲ್ಲಿ ಮದ್ದು ಕೊಡ್ತಾರ, ತಗೊ. ಇನ್ನೂ ಯಾರಾದರೂ ಇದ್ದರೆ ಅವರನ್ನೂ ಕರೆದುಕೊಂಡು ಹೋಗು”.

ಈ ಹುಡುಗ ಕೋಪದಲ್ಲಿ ಮಾತಾಡಿದನೋ, ಕಾಳಜಿಯಿಂದ ಮಾತಾಡಿದನೋ? ತಿಳಿಯಲಿಲ್ಲ. ಶ್ವಾನಕೊಪದಲ್ಲಿ ಮದ್ದು ಕೊಡ್ತಾರೆ ಅಂದನಲ್ಲ. ಮಾತು ಕೊಂಚ ಒರಟು. ಪ್ರೀತಿಯಿಂದಲೇ ಹೇಳಿರಬೇಕೆಂದುಕೊಂಡು ಇವನ ಕೆಲಸವನ್ನೇ ನೋಡುತ್ತ ಹಾಗೇ ನಿಂತ. ನಿನ್ನಡಿ ಮತ್ತೆ “ದೊಡ್ಡ ರೋಗ, ನಿರ್ಲಕ್ಷ ಮಾಡಬಾರದು ಅಜ್ಜಾ! ಹೊರಡು” ಎಂದು ಮುದುಕನನ್ನು ಕಳಿಸಿದ.

ಅಂತೂ ನಿನ್ನಡಿ ಒಂದು ವಾರದಲ್ಲಿ ಕಷ್ಟಪಟ್ಟಿ ಮುಖ್ಯ ರಸ್ತೆಗಳ ಹೆಣಗಳನ್ನು ಸುಟ್ಟಿದ್ದ. ಹೊರಕೇರಿಯಿನ್ನೂ ಬಾಕಿ ಇತ್ತು. ಕುರುಮುನಿ ಗಂಜಿ ಮಾಡಿ ಹಾಕುತ್ತಿದ್ದ. ಬಿಡುವಾದಾಗ ಒಬ್ಬ ಅಲ್ಲೇ ಉಳಿದು ಇನ್ನೊಬ್ಬ ನಿನ್ನಡಿಯ ಸಹಾಯಕ್ಕೆ ಬರುತ್ತಿದ್ದ. ಚಂಡೀದಾಸ ನೂರಾರು ರೋಗಿಗಳಿಗೆ ಮದ್ದು ಕೊಟ್ಟು ವಾಸಿ ಮಾಡಿದ್ದ. ಕೆಲವರಿಗೆ ರೋಗ ಬಾರದ ಹಾಗೆ ಮುಂಜಾಗ್ರತೆಯ ಮದ್ದು ಕೊಟ್ಟಿದ್ದ. ಅವರಲ್ಲಿಯ ಅನೇಕರು ಸೇರಿ ಶ್ವಾನಕೊಪದ ಮೇಲೆ ಸೊಪ್ಪು ಸದೆ ಹೊದಿಸಿ ದೊಡ್ಡ ಚಪ್ಪರ ಹಾಕಿ, ರೋಗಿಗಳಿಗೆ ಅಲ್ಲೇ ವಾಸಕ್ಕೆ ಅನುಕೂಲ ಮಾಡಿ ತಾವೂ ಅಲ್ಲೇ ಉಳಿದಿದ್ದರು. ಅಲ್ಲದೆ ಅದನ್ನೇ ದಾಸೋಹದ ಮನೆಯನ್ನಾಗಿಯೂ ಪರಿವರ್ತಿಸಿಕೊಂಡಿದ್ದರು. ಗುಣ ಹೊಂದಿದವರು ಬಹಳಷ್ಟು ಜನ ಹೊರಕೇರಿಯ ಹೆಣಗಳನ್ನು ಸುಡಲು ತಾವಾಗಿ ಮುಂದೆ ಬಂದರು. ಅವರಲ್ಲಿಯ ಅನೇಕರು ತಮ್ಮಲ್ಲಿಯ ಧಾನ್ಯ ತಂದು ಇಲ್ಲಿಯ ತನಕ ಗಂಜಿಯ ವ್ಯವಸ್ಥೆ ನೋಡಿಕೊಂಡಿದ್ದರು.

ಈಗ ಮಾತ್ರ ರೋಗಿಗಳೊ, ಗುಣವಾದ ಆರೋಗ್ಯವಂತರೂ ಹೆಚ್ಚಾಗಿ ಧಾನ್ಯದ ಕೊರತೆ ಕಂಡು ಬಂತು. ಅರಮನೆಯಲ್ಲಿ ಪುಷ್ಕಳ ಧಾನ್ಯ ಸಂಗ್ರಹ ಇದೆ. ಕೇಳಿದರೆ ಮಹಾರಾಜರು ಇಲ್ಲ ಅನ್ನಲಿಕ್ಕಿಲ್ಲವೆಂದು ಅರಮನೆಗೆ ಹೊರಟರು.

ಹೊರಗೆ ಇಷ್ಟೆಲ್ಲ ನಡೆಯುತ್ತಿದ್ದರೂ ಶಿಖರಸೂರ್ಯ ಮಾತ್ರ ಅರಮನೆಯ ತನ್ನ ಕೋಣೆ ಬಿಟ್ಟು ಹೊರಗೆ ಬರಲೇ ಇಲ್ಲ. ಬಾಗಿಲು ಕಿಟಕಿ ಮುಚ್ಚಿಕೊಂಡು ದಿನಕ್ಕರಡು ಬಾರಿ, ಅದೂ ಸೇವಕರ ಹೊರತು ಇನ್ಯಾರೂ ಇಲ್ಲವೆಂದು ಖಾತ್ರಿಯಾದರೆ ಮಾತ್ರ ಬಾಗಿಲು ತೆರೆದು ಅವರ ಸೇವೆಗೆ ಅವಕಾಶ ಮಾಡಿಕೊಡುತ್ತಿದ್ದ. ಅದು ಮುಗಿದು ತನ್ನ ಕೋಣೆಯನ್ನೊಮ್ಮೆ ಸೇರಿಕೊಂಡರಾಯ್ತು – ಏನು ಮಾಡಿದರೂ ಬಾಗಿಲು ತೆರೆಯುತ್ತಿರಲಿಲ್ಲ. ಮೌನಿಯಾಗಿದ್ದ; ಒಳಗೊಳಗೇ ಒಂಟಿ ಸಲಗನಂತೆ ಅಲೆದಾಡುತ್ತಿದ್ದ. ಗೋಡೆ ಗುದ್ದಿ ತನ್ನ ಅಸಹಾಯಕತೆಯನ್ನ ಅಭಿವ್ಯಕ್ತಿಸುತ್ತಿದ್ದ. ನಿದ್ದೆ ಕೂಡ ಬಾರದೆ ಚಡಪಡಿಸುತ್ತಿದ್ದ. ಅಳಿದುಳಿದ ಒಂದು ಕಡಿಮೆ ಇಪ್ಪತ್ತು ಜನ ಭಂಟರನ್ನು ಇಟ್ಟುಕೊಂಡು ಅರಮನೆ ಕಾಯುತ್ತ ಸುಕ್ರ ಬಂಡೆಯರಿದ್ದರು.

ದರ್ಶನದಿಂದ ದರ್ಶನಕ್ಕೆ ಶಿಖರಸೂರ್ಯನ ಚೇರಾಪಟ್ಟೆ ಬದಲಾಗುತ್ತಿರುವುದನ್ನು ಸೇವಕರು ಗಮನಿಸಿದ್ದರು. ಮುಖ ಕಪ್ಪಾಗಿತ್ತು. ಮೂಗು ಇಳಿಬಿದ್ದು ತುಟಿಯ ಮ್ಯಾಲೊರಗಿತ್ತು. ಹುಬ್ಬು ಜೋತು ಬಿದ್ದು ಒಳಸೇರಿದ ಕಣ್ಣು ನಂದಲಿರುವ ಕಿಡಿಯಂತೆ ಕಾಣುತ್ತಿದ್ದವು. ಕಿವಿಯ ಮತ್ತು ತಲೆಯ ಕೂದಲು ಗಡ್ಡಗಳೆಲ್ಲ ಧೂಳು ಅಡರಿ ಜಡೆಗಟ್ಟಿದ್ದವು. ಸೇವಕರಿದ್ದಾಗ ಅವರಿಂದ ಸ್ವತಂತ್ರನಾಗಿ ಏಕಾಂತಕ್ಕೆ ಹೋಗಲು ಅವಸರ ಮಾಡುತ್ತಿದ್ದ. ಈಗೀಗ ಇವರು ಅನಗತ್ಯವಾಗಿ ತನ್ನ ಬಳಿ ಹೆಚ್ಚು ಸಮಯ ಕಳೆಯುತ್ತಾರೆಂದು ಸೇವಕರನ್ನು ಅನುಮಾನದಿಂದ ನೋಡಲಿಕ್ಕೆ ಸುರು ಮಾಡಿದ್ದ.

ಹಗಲು ರಾತ್ರಿಗಳು ದರ್ಶನಕ್ಕೆ ದೊಡ್ಡವಾಗುತ್ತಿದ್ದವು. “ನನ್ನಿಂದ ಅನಿಸಿಕೆಗಳು ನಾಶವಾಗಿ ಆಕಳಿಸುವುದೊಂದೇ ಕೆಲಸವಾಗಿದೆ!” ಎಂದುಕೊಂಡ. ದೀಪದೆದುರು ಕೈ ಚಾಚಿ ನೋಡಿಕೊಂಡ. ಭವಿಷ್ಯ ಸೂಚಿಸಬಲ್ಲ ಒಂದು ಗೆರೆಯೂ ಅಂಗೈಯಲ್ಲಿರಲಿಲ್ಲ. ಹೃದಯ ಖಾಲಿ, ಮನಸ್ಸು ಖಾಲಿ, ಮ್ಯಾಲೆ ಆಕಾಶವಿದೆ, ಒಂದು ಚಿಕ್ಕೆಯಿಲ್ಲ. ಕೆಳಗೆ ಭೂಮಿಯಿದೆ, ಒಂದು ಬೆಳಕಿನ ಕಿರಣವಿಲ್ಲ. ಎಲ್ಲ ಖಾಲಿ ಕತ್ತಲು. ಓಡಿಹೋಗಬೇಕೆಂದುಕೊಂಡ. ಎಲ್ಲಿಗೆ? ಗರುಡನ ಬೆಟ್ಟವೊಂದೇ ತನ್ನನ್ನು ಸ್ವೀಕರಿಸುವ, ನೆಮ್ಮದಿಯಿಂದ ಇರಗೂಡುವ ಸ್ಥಳ! ಆದರೆ ಈಗ ಗರುಡನ ಬೆಟ್ಟ ಹತ್ತುವ ಶಕ್ತಿ ತನ್ನಲ್ಲಿಲ್ಲ ಎನ್ನಿಸಿತು.

ಹೊರಗಿನ ಕತ್ತಲೆ ಸಾವಿನಷ್ಟೇ ತಂಪಾಗಿತ್ತು. ಹಿಂದೆ ಹೀಗೇ ರಾತ್ರಿ ಸಮಯ ಕೂತಿದ್ದ. ಆದರೆ ಅಂದಿನ ಆಗಸದಲ್ಲಿ ಚಿಕ್ಕೆ ತಾರೆಗಳಿದ್ದವು, ಚಂದ್ರನಿದ್ದ, ತನಗಾಗ ಪ್ರಾಯವಿತ್ತು, ಉತ್ಸಾಹವಿತ್ತು, ಆಸೆಯಿತ್ತು, ಶಕ್ತಿಯಿತ್ತು, ಮೂರ್ಖತನ ಇತ್ತು. ಸೊಕ್ಕು ಇತ್ತು. ಈಗ ಚಲಿಸದ ಸಮಯ ಒಂದನ್ನು ಬಿಟ್ಟು ಏನೇನು ಇರಲಿಲ್ಲ. ಬೆಳಗಾದರೂ ಬಹಳ ಹೊತ್ತು ಪ್ರಾತರ್ವಿಧಿಗೆ ಏಳದೆ ಹಾಗೇ ಅಲ್ಲೇ ಒರಗಿದ್ದ. ಸೇವಕರಾಗಲೇ ನಾಕೈದು ಸಲ ಬಂದು ಹೋಗಿದ್ದರು. ಮುಂಜಾನೆ ಹೋಗಿ ಮಧ್ಯಾಹ್ನವಾಗಿ, ಮಧ್ಯಾಹ್ನ ಕಳೆದು ಇಳಿಹೊತ್ತಾದರೂ ಹಾಗೇ ಒರಗಿದ್ದ.

ಹೊರಗೆ ಜನಜಂಗುಳಿಯ ಸದ್ದು ಕೇಳಿ ಮಹಾರಾಜ ಚುರುಕಾದ. ಕಿವಿಗೂದಲು ನಿಮಿರಿ ಕಣ್ಣಗಲಿಸಿದ. ಚಂಚಲ ದೃಷ್ಟಿಯಿಂದ ಬಾಗಿಲು ಕಿಟಕಿಗಳನ್ನ ನೋಡಿದ. ಭದ್ರವಾಗಿದ್ದವು. ಕಿಟಕಿಯ ಕಿಂಡಿಯ ಮೂಲಕ ಹೊರಗೆ ನೋಡಿದ. ಜನಜಂಗುಳಿ ದೂರ ನಿಂತುದರಿಂದ ಕಾಣಿಸಲಿಲ್ಲ. ಅಷ್ಟರಲ್ಲಿ ಕಿಂಡಿಯಲ್ಲಿ ಬಂಟನೊಬ್ಬನ ಅರ್ಧ ಮುಖ ಕಂಡಿತು. ಆತ ಕಿಟಕಿಯ ಬಳಿಯೇ ಬಾಯಿ ತಂದು –

“ಮಹಾಪ್ರಭು, ಜನ ಬಂದು ಕಾಳು ಕೇಳುತ್ತಿದ್ದಾರೆ. ಅರಮನೆಯಲ್ಲಿ ಬೇಕಾದಷ್ಟು ಬಿದ್ದಿದೆ. ಕೂಡಲೆ ಮಹಾಪ್ರಭು?”

– ಎಂದು ಕೇಳಿದ. ಶಿಖರಸೂರ್ಯ ಅಸಹನೆಯಿಂದ,

“ಯಾರಪ್ಪನ ಮನೆ ಕಾಳು ಕೊಡ್ತೀಯೋ ಬೋಸಡೀ ಮಗನೇ? ಕೊಡೋದಿಲ್ಲ ಅಂತ ಹೇಳಿ ಕಳಿಸು”

– ಎಂದು ಒಳಗಿನಿಂದಲೇ ಗುಡುಗಿದ. ಬಂಟ ನಡಗುತ್ತ ದೂಸರಾ ಮಾತಿಲ್ಲದೆ ಓಡಿಹೋದ.

ಧಾನ್ಯ ಕೊಡುವುದಿಲ್ಲವೆಂಬ ರಾಜನ ಮಾತಿಗೆ ಜನ ಕನಲಿ ಕಂಗೆಟ್ಟರು. “ಕೊಲೆಗಡುಕ, ನೀಚ” ಎಂದೊಂದು ದನಿ ಕೇಳಿಸಿತು. “ಬೆಳಗಿನಿಂದ ಎದ್ದಿಲ್ಲ ಅಂದೆ – ಸತ್ತ ಅಂತ ಅಂದುಕೊಂಡಿದ್ದೆವಲ್ಲ!” ಅಂತ ಇನ್ನೊಬ್ಬನಂದ. “ಮಲೆಯಾಳ ಮಾಂತ್ರಿಕನನ್ನ ಹೊರದಬ್ಬಿರಯ್ಯಾ” ಎಂದು ಇನ್ನೊಬ್ಬ. ಮಹಾರಾಜ ಕೋಪಾವೇಶದಿಂದ ಜೋರಾಗಿ ಪೀಠದ ಮೇಲೆ ಗುದ್ದಿದ. ಎದುರಿಗೆ ಹಿಂದೆ ಚಿನ್ನವಾಗಿದ್ದು ಈಗ ಧಾನ್ಯವಾಗಿ ತುಂಬಿದ ತಟ್ಟೆಯಿತ್ತು. ರಭಸದಿಂದ ಒದ್ದ. ಅದು ಎದುರಿನ ಗೋಡೆಗೆ ಅಪ್ಪಳಿಸಿ ಧಾನ್ಯವೆಲ್ಲ ಕೋಣೆಯ ತುಂಬ ಚೆಲ್ಲಾಡಿ ಬಿತ್ತು. ತಕ್ಷಣ ಇದು ಜನಕ್ಕೆ ಗೊತ್ತಾಯಿತೇ?” ಎಂದು ಆತಂಕಪಟ್ಟು ಕಿಡಿಕಿಗೆ ಹೋಗಿ ನೋಡಿದ ಜನ ಕಾಣಿಸಲಿಲ್ಲ. ಆದರೆ “ಜಾಗಟೆ ಬಾರಿಸುತ್ತಿದ್ದಾನೇನಯ್ಯಾ ನಿನ್ನ ರಾಜ?” – ಎಂದು ಮತ್ತೊಂದು ದನಿ ಕೇಳಿಸಿ ಅವಮಾನಿತನಾಗಿ ಮುಖ ಕಿವುಚಿದ.

ಆ ದನಿಯ ಮೂಲಕ ಅವರಿರುವ ದೂರವನ್ನು ಅಂದಾಜು ಮಾಡಿ ಮೆಲ್ಲಗೆ ಕಿಡಿಕಿ ಬಾಗಿಲು ತೆರೆದು ನೋಡಿದ. ಜನ ಚದುರಿರಲಿಲ್ಲ. ಬಂಟನನ್ನು ಸುತ್ತುಗಟ್ಟಿ ನಿಂತು ಚರ್ಚಿಸುತ್ತಿದ್ದರು. ಮಂಕಿ ಕವಿದ ಮುಖದವರು ರೋಗ ಹಸಿವೆಗಳಿಂದ ಕೃಶರಾದವರು, ಸುಸ್ತಾದವರು, ಕೆಲವರು ನಿಲ್ಲಲೂ ಶಕ್ತಿ ಸಾಲದೆ ಅಲ್ಲೇ ಕೂತು ಏನೇನೋ ಪ್ರಶ್ನೆಗಳನ್ನು ಕೇಳಿ ಬಂಟನ ಗೊಂದಲವನ್ನು ಹೆಚ್ಚಿಸುತ್ತಿದ್ದರು. ಒಬ್ಬ ರೈತ “ತಿನ್ನೋ ಅನ್ನವನ್ನ ಚಿನ್ನ ಮಾಡಿಟ್ಟರಲ್ಲಪ್ಪ ನಿನ್ನ ರಾಜರು! ಈಗ ಹಸಿದಿದ್ದೇವೆ ಅಂದರೂ ಹಿಡಿ ಕಾಳು ಕೋಡೋದಿಲ್ಲ ಅಂತಾರಲ್ಲಾ! ಎಂಥಾ ಪುಣ್ಯವಂತರಿರಬೇಕು!” ಎಂದು ಹಂಗಿಸಿದ. “ನಾವು ಉಪವಾಸ ಸಾಯ್ತಿದ್ದರೆ ಅರಮನೆಯಲ್ಲಿ ಧಾನ್ಯ ಕೋಳೀತಿದ್ದರೂ ಕೊಡೋದಿಲ್ಲ ಅಂತಾರಲ್ಲಪ್ಪ ನಿಮ್ಮ ರಾಜರು!” ಎಂದ ಒಬ್ಬ ರೋಗಿ ಮುದುಕ. ಇನ್ನೊಬ್ಬ “ಪ್ರಜೆಗಳು ಅಂದರೆ ರಾಜನಿಗೆ ಮಕ್ಕಳಲ್ಲೇನಪ್ಪ? ಅಷ್ಟೊಂದು ಧಾನ್ಯ ಇಟ್ಟುಕೊಂಡು ಮಕ್ಕಳಿಗೇ ಇಲ್ಲ ಅಂತಾನಲ್ಲಪ್ಪ. ನಿನ್ನ ರಾಜ!” ಅಂದರೆ ಒಬ್ಬ ಹುಡುಗ “ಸ್ವಂತ ಮಕ್ಕಳನ್ನೇ ನೋಡಲಿಲ್ಲ ಅವನು! ಇನ್ನು ನಮ್ಮನ್ನ ಮಕ್ಕಳ ಹಾಗೆ ನೋಡಿಕೊಳ್ತಾನೋ! ಎಂದು ವ್ಯಂಗಮಾಡಿದ.

ಹೀಗೆ ಒಬ್ಬೊಬ್ಬರು ತಲೆಗೊಂದು ಮಾತಾಡುತ್ತಿರಬೇಕಾದರೆ ಅನತಿ ದೂರದಲ್ಲಿ ದೊಡ್ಡ ರುಮಾಲು ಸುತ್ತಿಕೊಂಡ, ದೊಗಳೆ ಅಂಗಿಯ ಜೊಂಡು ಮೀಸೆಯ ಮುದುಕ ತನ್ನ ಕೈ ಎತ್ತಿ ಒಬ್ಬ ಹುಡುಗನನ್ನು ತೋರಿಸಿ ಜೋರು ದನಿಯಲ್ಲಿ ಏನನ್ನೋ ಪ್ರತಿಪಾದಿಸುತ್ತಿದ್ದ. ಆಗಾಗ ತಕರಾರಿನ ದನಿಯಲ್ಲಿ ಮಾಂತ್ರಿಕ, ಮಾಟಗಾರ, ವಾಮಾಚಾರಿ…. ಅಂತ ಏನೇನೋ ಅಂದು ಮಹಾರಾಜನಿದ್ದ ಕೋಣೆಯ ಕಡೆಗೆ ತೋರು ಬೆರಳು ತೋರಿಸುತ್ತಿದ್ದ. ಇದ್ಯಾವುದರ ಪರಿವೆಯಿಲ್ಲದೆ ಹುಡು ತುದಿಗಾಲ ಮೇಲೆ ನಿಂತು ಅರಮನೆಯನ್ನು ನೋಡುತ್ತಿದ್ದ. ಶಿಖರಸೂರ್ಯ ಕಿಡಕಿಯ ಬಾಗಿಲನ್ನ ಇನ್ನಷ್ಟು ತೆರೆದು ನೋಡಿದ. ವಿಶಾಲ ಭುಜಗಳ ಮ್ಯಾಲೆ ಚೆಲ್ಲಿಕೊಂಡ ಒಂದು ಧೋತ್ರ ಹಾಗೂ ಸೊಂಟಕ್ಕೆ ಸುತ್ತಿಕೊಂಡ ಇನ್ನೊಂದು ಧೋತ್ರ ಬಿಟ್ಟು ಹುಡುಗನ ಮೈ ಮೇಲೆ ಬೇರೆ ಬಟ್ಟೆ ಇರಲಿಲ್ಲ. ಇವನನ್ನು ಎಲ್ಲಿ ಕಂಡಿದ್ದೇನೆ? ಹೌದು ಈತ ನಿನ್ನಡಿ! ಇಲ್ಲಿಗೂ ಬಂದನೇ ಚಂಡಾಲ! ಇತ್ತೀಚೆಗೆ ಕೆಲ ವರ್ತಕರು ಇವನನ್ನ ಭೇಟಿಗಾಗಿ ನೀನೇ ಬಂದು ನಿನ್ನ ಹಕ್ಕಿನ ಕನಕಪುರಿಯನ್ನಾಳಬೇಕೆಂದು ಕೇಳಿಕೊಂಡಿದ್ದ ಸುದ್ದಯೂ ನೆನಪಾಗ ಅಂಗಾಲಿನಿಂದ ನೆತ್ತಿಯತನಕ ಉರಿದುರಿದು ಉರಿದ. ಯಾರನ್ನ ಕೇಳಿ ಇಲ್ಲಿಗೆ ಬಂದ? ಯಾಕೆ ಬಂದ? ಎಂದು ತಂತಾನೇ ಕೇಳಿಕೊಂಡು ನಾನೀಗ ರಾಜನೇ ಅಲ್ಲವೆಂದು ಮನಗಂಡು ಖಿನ್ನನಾದ. ಮಾಂಡಳಿಕರು ಕಳ್ಳಕಾಕರು ಬಂದು ಕನಕಪುರಿಯನ್ನ ಲೂಟಿ ಮಾಡಿಕೊಂಡ ಹೋಗುತ್ತಿದ್ದಾರೆಂದರೆ ತಾನೆಂಥ ಕನಕಪುರಿ ರಾಜ! ಅಷ್ಟರಲ್ಲಿ ಕಿಡಕಿಯ ಬಳಿ ಯಾರೋ ಸುಳಿದಂತಾಯಿತು. ಹಿಂದೆ ಸರಿದು ಕಾಣದ ಹಾಗೆ ನಿಂತುಕೊಂಡ. ಹಾಗೆ ಹೆದರಿ ನಿಂತುದಕ್ಕೆ ನಾಚಿಕೆಯೆನ್ನಿಸಿತು.

ಯಾವುದೇ ಬೆಲೆಯುಳ್ಳ ವಸ್ತುವನ್ನ ಕಂಡರೂ ಅದರಲ್ಲಿ ತನ್ನ ಭಾಗವಿದೆಯೆಂದು ನಂಬುವ, ಯಾವುದೇ ಪ್ರದೇಶ ಕಂಡರೂ ಅದು ತನ್ನ ರಾಜ್ಯಕ್ಕೆ ಸೇರಿದ್ದೆಂಬಂತೆ ನೋಡುವ, ಗೆದ್ದ ರಾಜ್ಯವೊಂದರ ದೇವಸ್ಥಾನಕ್ಕೆ ಹೋಗಿದ್ದಾಗ ಅಲ್ಲಿದ್ದ ದೇವರು ಅಪ್ಪಟ ಚಿನ್ನದ್ದೆಂದು ಪೂಜಾರಿ ಹೆಮ್ಮೆಯಿಂದ ಹೇಳಿದಾಗ, ಅದರಲ್ಲಿ ತನ್ನ ಭಾಗವೆಷ್ಟೆಂದು ಕೇಳಿದ್ದ ಶಿಖರಸೂರ್ಯನಿಗೆ – ದೇವರು ಅಥವಾ ಮನುಷ್ಯ ಎರಡೂ ಆಗಬಲ್ಲ ಶಕ್ತಿ ಇದ್ದ ಶಿಖರಸೂರ್ಯನಿಗೆ ಇಂಥ ಭಯ, ನಾಚಿಕೆ ಸಹಜವೆ? ಈಗಲೂ ಆತ ಮನಸ್ಸು ಮಾಡಿದ್ದರೆ ಇದ್ದಷ್ಟು ಸೈನಿಕರಿಂದಲೇ ಹಾಳು ಕನಕಪುರಿಯನ್ನ ನಿಭಾಯಿಸಬಹುದಿತ್ತು; ಕಟ್ಟಬಹುದಿತ್ತು. ಹುಟ್ಟಿನಿಂದಲೇ ಮಹತ್ವಾಕಾಂಕ್ಷೆಯಾಗಿದ್ದವನು ಹೀಗೆ ಹೆಂಗಾಧ? ಆತ ಹೇಡಿಯಲ್ಲ, ವೈರಿಗಳಲ್ಲಿ ಹೊಕ್ಕರೆ ಒಬ್ಬನೇ ನೂರಾರು ಜನರನ್ನು ಕೊಲ್ಲಬಲ್ಲ ವಜ್ರದೇಹಿ – ಈ ಮನಸ್ಥಿತಿಗೆ ಹ್ಯಾಗೆ ಬಂದ? ಇದು ನಮ್ಮ ತಿಳುವಳಿಕೆಗೆ ನಿಲುಕುವಂಥ ಮಾತಲ್ಲ. ಬಹುಶಃ ತನ್ನ ಕೈಯಲ್ಲಿಯ ಸೈನ್ಯಶಕ್ತಿ ಮತ್ತು ಚಿನ್ನಶಕ್ತಿ ಏಕಕಾಲಕ್ಕೆ ಮಾಯವಾಗಿ ಆಘಾತ ಹೊಂದಿರಬಹುದು. ಮಗಳು ದೂರವಾದಳೆಂಬುದಿರಲಿ, ಮಗ ಮತ್ತು ಪ್ರೇಯಸಿ ಒಂದೇ ದಿನ ದಿವಂಗತರಾಗಿದ್ದುದು ಅವನನ್ನ ದುರ್ಬಲಗೊಳಿಸಿರಬಹುದು ಅಥವಾ ನಿನ್ನಡಿಯೇ ಅವನ ಪಶ್ಚಾತ್ತಾಪವನ್ನ ಒಳಗೊಳಗೇ ಕೆರಳಿಸಿರಬಹುದು ಅಥವಾ ಅವನು ನಿಜವಾಗಿ ದುಷ್ಟನೇ ಇರಬಹುದು.

ದೊಡ್ಡರೋಗ ತಹಬಂದಿಗೆ ಬಂದಿತ್ತು. ಹೋಗುವುದಕ್ಕೆ ಸಾಧ್ಯವಿದ್ದರೆಲ್ಲ ವಲಸೆ ಹೋಗಿದ್ದರು. ಇದ್ದವರಲ್ಲಿ ಬಹುಪಾಲು ಜನ ಈಗ ಅರಮನೆಯ ಮುಂದೆ ಸೇರಿದ್ದರು. ಇವರೆಲ್ಲ ಅನ್ನ ಮತ್ತು ಮದ್ದಿಗಾಗಿ ನಿನ್ನಡಿಯ ಆಸರೆಗೆ ಹೋದವರು. ಆರೋಗ್ಯವನ್ನ ಮರಳಿ ಪಡೆದವರು. ಹೆಣಗಳನ್ನು ಸುಡುವುದಕ್ಕೆ ಊರನ್ನ ಸ್ವಚ್ಛವಾಗಿಡಲಿಕ್ಕೆ ಸಹಾಯ ಮಾಡಲು ಮುಂದೆ ಬಂದವರು. ಹಳೆಯದನ್ನ ಮರೆತು ಹೊಸ ಕನಕಪುರಿಯನ್ನ ಕಟ್ಟುವುದಕ್ಕೆ ತಯಾರಾದವರು. ನಿನ್ನಡಿ ಒಬ್ಬ ಸಂತ ವೈದ್ಯನೆಂದು ಬಲ್ಲವರೇ ವಿನಾ ಚಿಕ್ಕಮ್ಮಣ್ಣಿಯ ಮಗನೆಂದಾಗಲೆ, ಕನಕಪುರ ಸಿಂಹಾಸನದ ಹಕ್ಕುದಾರನೆಂದಾಗಲಿ ಬಹಳ ಜನ ತಿಳಿದವರಲ್ಲ. ಸುಕ್ರನಿಗೆ ಕೂಡ ಚಿಕ್ಕಮ್ಮಣ್ಣಿಯ ಮಗ ತರುಣಚಂದ್ರ ಶಿವಾಪುರದಲ್ಲಿದ್ದಾನೆಂದು ತಿಳಿದಿತ್ತು. ನಿನ್ನಡಿ ಕೂಡ ಅಂಥ ಯಾವ ಹಕ್ಕುಗಳನ್ನು ಕೇಳಿರಲಿಲ್ಲ. ಕನಕಪುರಿಯ ಪತನ ತನ್ನದೇ ಸೃಷ್ಟಿ ಎಂದು ಒಪ್ಪಿಕೊಳ್ಳಲು ಶಿಖರಸೂರ್ಯ ಸಿದ್ಧನಿರಲಿಲ್ಲ. ಈಗಲೂ ನಿನ್ನಡಿಯ ವಾಮವಿದ್ಯೆಯ ಕುತಂತ್ರವೇ ಕಾರಣವೆಂದು ಅವನನ್ನು ಅವಾಚ್ಯ ಶಬ್ದಗಳಿಂದ ಬಯ್ಯುತ್ತ ಸಮಾಧಾನ ತಂದುಕೊಳ್ಳುತ್ತಿದ್ದ. ನನ್ನ ಶೋಕದಲ್ಲಿ ಭಾಗಿಯಾಗಲು ಹತ್ತಿರದವರಿಲ್ಲ, ಹೊಂದಿದವರಿಲ್ಲ, ಬಂಧು ಬಳಗವಿಲ್ಲ. ನನ್ನಿಂದ ಶ್ರೀಮಂತನಾದ ಒಬ್ಬ ವರ್ತಕನಿಲ್ಲ, ಉಪಕೃತನಾದ ಒಬ್ಬ ಪ್ರಜೆಯಿಲ್ಲ! ಅಯ್ಯೋ ನನ್ನ ಜೀವನವೇ! – ಎಂದೊಂದು ಕ್ಷಣ ಅಪರೂಪಕ್ಕೆ ಹಳಹಳಿಸುತ್ತಿರುವಲ್ಲಿ ಬಾಗಿಲು ಬಡಿದ ಸದ್ದಾಯಿತು.

ಮೆಲ್ಲಗೆ ಹೋಗಿ ಕಿಡಕಿಯ ಹತ್ತಿರ ನಿಂತ.

“ನಾನು ಒಡೆಯಾ ಸುಕ್ರ ಬಂದಿದ್ದೀನಿ.”

– ಅಂತ ಹೊರಗಿನಿಂದ ಬಂದ ದನಿ ಗುರುತಾಗಿ ಮೆಲ್ಲಗೆ ಹೋಗಿ ಬಾಗಿಲು ತೆರೆದ. ಸುಕ್ರ ಒಳಬಂದು ನಮಸ್ಕಾರವನ್ನಾಚರಿಸಿ ಆಜ್ಞೆಗಾಗಿ ಕಾದಂತೆ ಮುಖ ಕೆಳಗೆ ಹಾಕಿ ನಿಂತ.

“ಈ ಜನ ಯಾರು ಸುಕ್ರ”?

“ಯಾರ್ಯಾರೋ ಬಂದವರೆ ನನ್ನೊಡೆಯಾ. ಹೊಟ್ಟೆಗೆ ಕೂಳಿಲ್ಲ. ಕಾಳು ಬೇಕು. ಅರಮನೆಯಲ್ಲಿ ಬೇಕಾದಷ್ಟಿದೆ. ಕೊಡಲಾ ಒಡೆಯಾ?”

– ಎಂದು ತಾನು ಪ್ರಧಾನಿ ಎಂಬುದನ್ನೂ ಮರೆತು ವಿನಯದಿಂದ ಕೇಳಿದ. ಇವನೂ ಜನಗಳ ಪರವಾಗಿ ಮಾತಾಡುವಂತಾಯಿತೇ ಎಂದು ಮಹಾರಾಜ ಶಿಖರಸೂರ್ಯನಿಗೆ ನಿರಾಸೆಯಾಯಿತು. ಅದನ್ನು ಹೊರಗೆ ತೋರಿಸದೆ, –

“ಹೌದೋ, ಆ ಜೊಂಡುಮೀಸೆಯ ಮುದುಕ ಏನೋ ಹೇಳುತ್ತಿದ್ದಾನಲ್ಲಾ, ಏನದು”?

“ತೆವಲಿಗೆ ಏನೇನೋ ಏಳ್ತವ್ನೆ ಒಡೆಯಾ”

– ಎಂದು ಮುದುಕನ ಬಗೆಗಿನ ತಿರಸ್ಕಾರದಿಂದ ಅದು ಗಮನಿಸಬೇಕಾದ ಸಂಗತಿಯಿಲ್ಲವೆಂಬಂತೆ ಸುಕ್ರ ಹೇಳಿದ: ಶಿಖರಸೂರ್ಯ ಸಿಡಿದ.

“ಮೂರ್ಖಾ ಅದೇನು ಬೊಗಳುತ್ತಿದ್ದಾನೆ ಅಂತ ಹೇಳು.”

ಸುಕ್ರ ಗಾಬರಿಯಾದ. ಇನ್ನಷ್ಟುಮ ಕಂಪಿಸುವ ದನಿಯಲ್ಲಿ ಮಹಾರಾಜನ ಕಿವಿಯಲ್ಲಿ ಹೇಳುವಂತೆ ಬಾಗಿ ಹೇಳಿದ:

“ಆ ಹುಡುಗ ನಿನ್ನ ಅಳಿಯ ಅಂದ.”

“ಅದಕ್ಕೆ?”

“ಅದು ನಿಜವ ಒಡೆಯಾ?”

ಅವನ ಪ್ರಶ್ನೆಯನ್ನ ನಿವಾರಿಸಲು ಕೇಳಿದ:

“ಸುಕ್ರ ನಿನ್ನ ಹತ್ತಿರ ಬಂಟರೆಷ್ಟು ಜನ ಇದ್ದಾರೆ?”

“ಎಲ್ಲಾ ಸೇರಿ ಒಂದು ಕಡಿಮೆ ಇಪ್ಪತ್ತಿರಬಹುದು.”

“ಇಲ್ಲಿ ಎಷ್ಟು ಜನ ಇದ್ದಾರೆ?”

ಹತ್ತು ಮಂದಿ. ಉಳಿದವರು ಕಳ್ಳರನ್ನಟ್ಟಿಸಿಕೊಂಡು ಹೋಗಿದ್ದಾರೆ ಒಡೆಯಾ”

“ಸುಕ್ರ, ಆ ಹುಡುಗ ಇದ್ದಾನಲ್ಲಾ, ಅವನೇ ಕಣೋ ಕನಕಪುರಿಯನ್ನ ಹಾಳು ಮಾಡಿದವನು.”

“ಒಡೆಯಾ?”

– ಎಂದು ಸುಕ್ರ ನಂಬದೆ ಆಶ್ಚರ್ಯದಿಂದ ಅಂದ.

“ಬೆಟ್ಟದಯ್ಯನ ಆಣೆಗೂ ಅವನೇ ಕಣೋ ಕನಕಪುರಿಗೆ ಬೆಂಕಿ ಇಟ್ಟವನು!”

– ಎಂದು ಉದ್ವೇಗದಿಂದ ಹೇಳಿ ದಡಾರನೆ ಬಾಗಿಲು ತೆಗೆದು ಹೊರಕ್ಕೆ ಬಂದು ಜನರಿದುರಿಗೆ ರಾಜಠೀವಿಯಿಂದ ನಿಂತ. ತನ್ನ ದರ್ಶನಕ್ಕೆ ಹ್ಯಾಗೆ ಸ್ಪಂದಿಸುವರೆಂದು ಸುತ್ತ ನೋಡಿದ. ಜನರೆಲ್ಲರೂ ಸದ್ದು ಮಾಡದೆ ಇನವ ಕಡೆ ನೋಡಿದರು. ಒಬ್ಬಿಬ್ಬರು ಕೈ ಎತ್ತಿ ನಮಸ್ಕಾರ ಮಾಡಿದರು. ಆಮೇಲೆ ಮರಮರ ಸಣ್ಣ ದನಿಯಲ್ಲಿ ತಕರಾರು ತೆಗೆದಂತೆ ಮಾತಾಡಲು ಸುರುಮಾಡಿದರು.

ಶಿಖರಸೂರ್ಯ ತಕ್ಷಣ ಚುರುಕಾಗಿ ಜನಗಳ ಮ್ಯಾಲೇರಿ ಹೋಗುವಂತೆ ನಾಲ್ಕು ಹೆಜ್ಜೆ ಮುಂದೆ ಬಂದು,

“ಎಲ್ಲಿ ಆ ಮಂತ್ರಮಾಟದ ಭಂಡ ವೈದ್ಯ?”

– ಎಂದು ಕೇಳಿದ.

“ಅವನ್ಯಾಕೆ ಬೇಕು?”

– ಎಂದು ಮೀಸೆ ಮುದುಕ ಕೇಳುತ್ತ ಜನಗಳ ಮಧ್ಯದಲ್ಲಿದ್ದವನು ಮುಂದೆ ಬರುತ್ತಿರಬೇಕಾದರೆ ಇಬ್ಬರು ಬಂಟರು ನುಗ್ಗಿ ಜನಗಳ ಮಧ್ಯೇ ಇದ್ದ ನಿನ್ನಡಿಯನ್ನು ತೋಲು ಹಿಡಿದು ಮುಂದೆ ತಂದು ನಿಲ್ಲಿಸಿದರು. ಈಗ ಎಲ್ಲರ ಕಣ್ಣು ನಿನ್ನಡಿಯ ಕಡೆಗೊಮ್ಮೆ, ಕಹಾರಾಜನ ಕಡೆಗೊಮ್ಮೆ ಹರಿದಾಡಿದವು. ನಿನ್ನಡಿ ವಿಧೇಯ ಭಂಗಿಯಲ್ಲಿ ನಿಂತುಕೊಂಡ. ಈಗ ಎಂಟು ದಿನಗಳಿಂದ ಹೆಣಗಳ ಹೊತ್ತು, ಕಣ್ಣು ತುಂಬ ನಿದ್ದೆ ಕೂಡ ಇಲ್ಲದೆ ಮುಖ ಬಡಕಲಾಗಿ ಹತಾಶೆಯಿಂದ ಜೋತು ಬಿದ್ದಿತ್ತು. ಕೂದಲು ಕೆದರಿತ್ತು. ಹೆಣಗಳನ್ನು ಹೊತ್ತು ಧೋತ್ರ ಕೊಳೆಯಾಗಿತ್ತು. ಕೆಸರು ಮೆತ್ತಿದ್ದ ದಪ್ಪ ಕಾಲ್ಮರಿ ಮೆಟ್ಟಿದ್ದ. ಆದರೆ ಆತನ ಬಗ್ಗೆ ಮಹಾರಾಜ ಹಗುರವಾಗಿ ಮಾತಾಡಿದನೆಂದು ಜನ ಅಸಮಾಧಾನಪಟ್ಟುಕೊಂಡರು. ಆತ ಅನ್ನಾಹಾರ ನಿದ್ದೆ ನೀರು ಬಿಟ್ಟು ಹೆಣಗಳ ಹೊತ್ತು ಸುಟ್ಟದನ್ನ ಎಲ್ಲರೂ ನೋಡಿದ್ದರಲ್ಲದೆ ಸಂಜೆ ಮತ್ತೆ ಕುರುಮುನಿ ಚಂಡೀದಾಸರೊಂದಿಗೆ ಸೇರಿ ಮದ್ದು ಕೊಡುತ್ತಿದ್ದ. ಗುಣ ಹೊಂದಿದವರು ಸ್ವಯಂಸ್ಫೂರ್ತಿಯಿಂದ ಅವನ ಸೇವಾ ಬಳಗ ಸೇರಿಕೊಂಡಿದ್ದರು. ಆತ ಶಿವಾಪುರದ ಶಿವಪಾದನೆಂಬುದನ್ನು ಖಚಿತವಾಗಿ ಬಲ್ಲ ಒಬ್ಬಿಬ್ಬರು ಆ ಗುಂಪಿನಲ್ಲಿದ್ದರು.

ನಿನ್ನಡಿಯನ್ನು ನೋಡಿದ್ದೇ ಶಿಖರಸೂರ್ಯನಲ್ಲಿ ಹಿಂದಿನ ಎಲ್ಲ ಕೋಪತಾಪ ಸಿಟ್ಟು ಸೆಡುವು ಸೇಡುಗಳು ಒಟ್ಟಾಗಿ ಮುಖ ಹೀರಿ ಒಗೆದಂತೆ ಕಪ್ಪಗಾಯ್ತು. ಮಸೆದ ಆಯುಧದಂತೆ ಕಣ್ಣು ಹೊಳೆದವು. ಇವನೇ ನನ್ನ ಚಿನ್ನಕ್ಕೆ, ಸೈನ್ಯಕ್ಕೆ ತಿರುಮಂತ್ರ ಹಾಕಿಚವನೆಂದು ಖಚಿತವಾಗಿತ್ತು. ಕಿವಿಗೊದಲು ನಿಮಿರಿದವು. ಆವೇಶ ಬಂದವನಂತೆ ಜೋರು ದನಿಯಲ್ಲಿ ಕಿರಿಚಿದ:

“ಬಂಟರೇ ಇಗೋ ಈ ಭಂಡ ವೈದ್ಯ ಇದ್ದಾನಲ್ಲಾ ಇವನು – ಇವನೇ ಮದ್ದು ಮಾಟದ ಮಾಂತ್ರಿಕ. ಕನಕಪುರಿಯ ಚಿನ್ನವನ್ನ ಧಾನ್ಯವಾಗಿ ಪರಿವರ್ತಿಸಿದವನು. ?”

ಇವನೇನು ಮಾತಾಡುತ್ತಿದ್ದಾನೆಂದು ನಿನ್ನಡಿಗೆ ಕೂಡಲೇ ತಿಳಿಯಲಿಲ್ಲ. ಈಗ ಅಲ್ಲಿಂದ ಕದಲುವುದೂ ಸಾಧ್ಯವಿರಲಿಲ್ಲ. ವಿನಯದಿಂದ ಕೈ ಮುಗಿದು ದೈನ್ಯದಿಂದ ರಾಜನ ಕಡೆಗೆ ನೋಡಿ “ಗಂಜಿ ಕಾಡಲು ದಯಮಾಡಿ ಕೊಂಚ ಧಾನ್ಯವನ್ನು ಕೊಡುವುದಾಗಬೇಕು ರಾಜಾ” ಅಂದ. ಮಹಾರಾಜ ನಿನ್ನಡಿಯ ಕಡೆಗೆ ನೋಡಲೇ ಇಲ್ಲ. ಎರಡು ಮೆಟ್ಟಲಿಳಿದು ಬಂದು ಬಂಟರಿಗೆ ಎಡಗೈಯಿಂದ ನಿನ್ನಡಿಯನ್ನು ತೋರಿಸುತ್ತ

“ಮೊದಲು ಈ ಮಾಟಗಾರ, ದೇಶದ್ರೋಹಿಯನ್ನು ಬಲಿ ಕೊಡಿರಯ್ಯಾ?”

– ಎಂದು ಹರಿತವಾದ ದನಿಯಲಕ್ಲಿ ಕಿರಿಚಿದ.

ಅಷ್ಟರಲ್ಲಿ ಜೊಂಡು ಮೀಸೆಯ ಮುದುಕ ಮುಂದೆ ಬಂದು,

“ಮಾಟ ಮಂತ್ರಕ್ಕೂ ಇವನಿಗೂ ಏನು ಸಂಬಂಧ?”

– ಎಂದು ಕೇಳಿದ. ಅನೇಕರ ತರ್ಕ ಮತ್ತು ವಿವೇಕಗಳಿಗೆ ಈ ಮಾತು ಸರಿ ಅನ್ನಿಸಿತು. ಆದರೆ ಮಹಾರಾಜನ ಕಟ್ಟಾ ಅಭಿಮಾನಿಗಳೂ ಕೆಲವರಿದ್ದರು. ಅವರಿಗೆ ನಿನ್ನಡಿಯ ಬಗ್ಗೆ ತಿಳಿವಳಿಕೆ ಇರಲಿಲ್ಲವಾಗಿ ಮಹಾರಾಜನ ಮಾತಿಗೆ “ಹೌದೆ?” ಎಂದು ಅನುಮಾನ ವ್ಯಕ್ತಪಡಿಸಿ “ಮಹಾರಾಜರ ಮಾತುಗಳನ್ನ ಕೇಳ್ರೆಪ್ಪಾ” ಎಂದ ಅವರಲ್ಲೊಬ್ಬ. ಮಹಾರಾಜ ಈಗ ಹುರುಪಾದ, –

“ಹೆಣಗಳನ್ನು ಸುಡೋದು ಯಾವುದೋ ವಾಮಾಚಾರದ ಸಿದ್ಧಿಗಾಗಿ ಕಣ್ರಪ್ಪ – ಮೊದಲವನ ಬಲಿ ಕೊಡಿ!”

ಅಂದ. ಜನರಲ್ಲಿ ವಟವಟ ಮರ್ಮರ ಸುರುವಾಯಿತು. ಅಷ್ಟರಲ್ಲಿ ಮುದುಕ ಕೈ ಎತ್ತಿ –

“ಹೆಣ ಸುಡೋದಿರಲಿ, ನಮಗೆಲ್ಲ ಮದ್ದು ಕೊಟ್ಟು ಗುಣಪಡಿಸಿದನಲ್ಲ, ಅದ್ಯಾವ ಸಿದ್ಧಿಗಾಗಿ?”

– ಅಂದ. ಅಷ್ಟರಲ್ಲಿ ಮಹಾರಾಜನ ಪರವಾಗಿದ್ದವರಿಗೂ ಅಕ್ಕಪಕ್ಕದವರ ವಿವೇಕದ ಮಾತು ಸರಿಯೆನಿಸಿ ನಿಲುವು ಬದಲಿಸಿದ್ದರು. ಒಬ್ಬ ಧೈರ್ಯ ಮಾಡಿ, “ಈಗೇನು ಕಾಳು ಕೊಡುತ್ತೀರೊ? ಅವನನ್ನ ನಿಂದಿಸುತ್ತ ನಿಲ್ಲುತ್ತೀರೊ?” ಅಂದ. ಇನ್ನೊಬ್ಬ “ಕಾಳು ಬೇಕು ಕಾಳು” ಮತ್ತೊಬ್ಬ “ಏನೇನೋ ಖ್ಯಾತೆ ತೆಗೆಯಬೇಡ ಧಾನ್ಯ ಕೊಡಪ್ಪಾ ನೀನು!” ಅಂದ.

“ಧಾನ್ಯ ತಗೀಯಪ್ಪಾ, ಮಾಟಮಂತ್ರ ಆಮೇಲೆ ನೋಡೋಣ”

“ಎಲ್ಲಾ ನೀನೊಬ್ಬನೇ ತಿಂತೀಯೇನಪ್ಪ? ನಮಗೂ ಒಂದೆರಡು ಕಾಳು ಕೊಡು”

“ಲೋ ತಗೀಯಲೊ”

ಹೀಗೆ ತಲೆಗೊಂದು ಮಾತಾಡುತ್ತ ಮೆಲ್ಲಗೆ ಜನ ನೂಕು ನುಗ್ಗಲಲ್ಲಿ ಇಂಚಿಂಚು ಮುಂದೆ ಸರಿಯುತ್ತಿದ್ದರು. ಜನರ ಮುಂದೆ ಭಲ್ಲೆ ಹಿಡಿದ ಭಂಟರಿದ್ದರು. ಅವರ ಮುಂದೆ ನಿಂತಿದ್ದವರು ಹಿಂದಿನಿಂದ ತಳ್ಳುತ್ತಿರುವವರನ್ನು ಭಾರೀ ಪ್ರಯತ್ನದಿಂದ ಹಿಂದಕ್ಕೆ ತಡೆ ಹಿಡಿದಿದ್ದರು. ಅಷ್ಟರಲ್ಲಿ ಶಿಖರಸೂರ್ಯ ನಿರ್ಭಾವದಿಂದ ನಿಂತಿದ್ದ ನಿನ್ನಡಿಯನ್ನ ನೋಡಿ ತಾಳ್ಮೆ ಕಳೆದುಕೊಂಡು ವೀರಾವೇಶದಿಂದ –

“ಬೆಟ್ಟದಯ್ಯನಿಗೆ ಈ ರಾಜದ್ರೋಹಿಯನ್ನು ಬಲಿ ಕೊಡ್ರೋ, ಇದು ರಾಜಾಜ್ಞೆ!”

– ಎಂದು ಒದರಿದ. ಗುಂಪು ಈಗ ತಳ್ಳಾಟದಿಂದ ಹಿಂದೆ ಮುಂದೆ ವಾಲುತ್ತ ಕಷ್ಟಪಟ್ಟು ನಿಂತಿತ್ತು. ಮತ್ತೆ ಮಹಾರಾಜ “ಲೇ ಸುಕ್ರ ರಾಜಾಜ್ಞೆ ಕೇಳಲಿಲ್ಲವೇನೋ?” ಎಂದು ಕಿರಿಚಿದ್ದು ಅವಿಶ್ರಾಂತ ಗುಂಪಿನ ಸಹನೆಗೆ ವಿಚಿತ್ರವಾದ ಚಲನೆ ನೀಡಿತು. ತಕ್ಷಣ ಜೊಂಡು ಮೀಸೆಯ ವರ್ತಕ ಮುದುಕ ಮುಂದೆ ಬಂದು ನಿನ್ನಡಿಯ ಎಸಬಲದ ಬಂಟರನ್ನು ಸರಿಸಿ ಅವನ ನೆವರಿಬೆ ನಿಂತ ನೋಡು – ಚಡಪಡಿಸುತ್ತಿದ್ದ ಗುಂಪಿಗೆ ಅಸಮಾಧಾನವಾಯಿತು. ಭಲ್ಲೆಗಳನ್ನು ಕೋಲಿನ ಹಾಗೆ ಅಡ್ಡ ಚಾಚಿ ಜನರ ಪ್ರಬಲವಾದ ಅಲೆಯನ್ನು ನಿತಂತ್ರಿಸಲು ಬಂಟರು ಪ್ರಯತ್ನಿಸುತ್ತಿದ್ದರು. ಜನಗಳ್ಯಾಕೆ ನೂಕು ನುಗ್ಗಲು ಮಾಡುತ್ತಿರುವರೆಂದು ಚಕಿತನಾದ ನಿನ್ನಡಿ ಸುತ್ತಲೂ ನೋಡಿದ. ಅಷ್ಟರಲ್ಲಿ ಬಂಟನೊಬ್ಬ ಜೊಂಡುಮೀಸೆಯ ಮುದುಕನನ್ನು ತಳ್ಳಿ ಕೆಳಕ್ಕೆ ಚೆಲ್ಲಿದ. ಜನಗಳ ನೂಕು ನುಗ್ಗಲು ಹೆಚ್ಚಾಗಿ ಕೆಲವರು “ಹಾ!” ಎಂದು “ಎಲಾ ಶಿವನೇ!” ಎಂದು ಉದ್ಗಾ ತೆಗೆದರು. ಮುದುಕನ ಬಾಯಿಂದ “ಅಯ್ಯೋ” ಎಂದು ಗೋಳಿನ ದನಿ ಕೇಳಿಸಿತು.

ಈಗ ದೊಂಬಿಯನ್ನು ನಿಯಂತ್ರಿಸುವುದೇ ಅಸಾಧ್ಯವಾಯಿತು. ನಿನ್ನಡಿ ಕಷ್ಟಪಟ್ಟು ಜನಗಳನ್ನು ತಳ್ಳಿ ಮುದುಕನನ್ನು ಎಬ್ಬಿಸಿ ಹಾಗೇ ತಮ್ಮಕೊಂಡಿದ್ದ. ಜನರ ರಭಸ ಮುದುಕನನ್ನು ತಳ್ಳಿದ ಭಂಟನ ಕಡೆಗೆ ತಿರುಗಿತು.

ಮುದುಕ ಕಷ್ಟಪಟ್ಟು ಎದ್ದು ನಿಂಉ ಕರ್ಕಶ ದನಿಯಲ್ಲಿ ಎಲ್ಲರನ್ನು ಕುರಿತು ತುಂಡು ವಾಕ್ಯಗಳಲ್ಲಿ ಮಾತಾಡಿದ. ಅವನ ಮಾತು ಮೊದಮೊದಲು ತಿಳಿಯಲಿಲ್ಲ. ಒಂದು ವಾರದಿಂದ ಜನರು ನಿನ್ನಡಿಯನ್ನ ಕಂಡವರಾದುದರಿಂದ ಬಹುಬೇಗ ಅವನು ನಿನ್ನಡಿಯ ಬಗ್ಗೆ ಮಾತಾಡುತ್ತಿರುವನೆಂದು ತಿಳಿದುಕೊಂಡರು. ಅವನ ಮಾತಿನ ಕರ್ತೃ ಯಾರೆಂದು ಗೊತ್ತಾದ ಮೇಲೆ ಮುದುಕನ ಮಾತಿನ ತರ್ಕಸರಣಿಯನ್ನು ಒಪ್ಪಿಕೊಂಡರು.

ಆತ ಹೇಳಿದ್ದಿಷ್ಟು:

“ಹತ್ತು ದಿನಗಳಿಂದ ನಾರುವ ಹೆಣಗಳ ಹೊತ್ತು ತಂದು ಸುಟ್ಟ. ಎಲ್ಲೆಂಲ್ಲಿಂದಲೋ ಧಾನ್ಯ ತಂದು ದಾಸೋಹ ನಡೆಸಿದ. ಮದ್ದುಕೊಟ್ಟು ಸಾವಿರ ಮಂದಿಗೆ ಜೀವಾ ಕೊಟ್ಟ, ಅನ್ನಕೊಟ್ಟ. ಆವಾಗ ಯಾರಾದರೂ ಕನಕಪುರಿಯವರು ಸಹಾಯಕ್ಕೆ ಬಂದರ? ರಾಜ ಬಂದನ? ಬಂಟರು ಬಂದರ? ಸ್ವಯಂಸ್ಫೂರ್ತಿಯಿಂದ ನಾವೂ ನೀವೂ ಮೂರು ದಿನಗಳ ಹಿಂದೆಷ್ಟೇ ಅವನ ಜೊತೆ ಸೇರಿಕೊಂಡಿವೆ. ಅಷ್ಟೆ!

ಹೋಗಲಿ ಕನಕಪುರಿಯ ಹೆಣ ಸುಡಲು ನೀ ಯಾರ? ನಿನಗೇನು ಅಧಿಕಾರ ಇದೆ? – ಅಂತಾದರೂ ಬಂಟರು ಕೇಳಬೇಕಿತ್ತಲ್ಲ? ಕೇಳೋದಿರಲಿ, ಅವನ ಹತ್ತಿರ ಸುಳಿಯಲಿಲ್ಲ. ಅಷ್ಟೇ ಅಲ್ಲ ಇದೇ ಬಂಟರು ತಮ್ಮ ಹೆಂಡಿರು ಮಕ್ಕಳನ್ನು ಮದ್ದಿಗಾಗಿ ಅವನ ಚಪ್ಪರಕ್ಕೆ ಕಳಿಸಿದರು. ಆವಾಗ ಮಹಾರಾಜನಿಗೆ ಇವನೊಬ್ಬ ಮಾಟಗಾರ ಅಂತ ಯಾಕನ್ನಿಸಲಿಲ್ಲ? ಈಗ ದೊಡ್ಡ ರೋಗ ಹದ್ದು ಬಸ್ತಿಗೆ ಬಂದಿದೆ. ಜನರಿಗೆ ಗಂಜಿಗೆ ಧಾನ್ಯ ಕಡಿಮೆ ಬಿದ್ದಿದೆ. ಅರಮನೆಯೊಳಗೆ ಕೊಳೆಯುತ್ತಿರುವ ಧಾನ್ಯರಾಶಿಯ ಅಲ್ಪ ಭಾಗವನ್ನು ಜನತೆಗೆ ಕೊಡಿ ರಾಜರೇ ಅಂದರೆ ಅವನು ದೇಶದ್ರೋಹಿ, ರಾಜದ್ರೋಹಿ ಆದನ?”

ಮುದುಕನ ಮಾತು ಇನ್ನೂ ಮುಗಿದಿರಲಿಲ್ಲ. ಮಾತು ಯಾರನ್ನು ಗುರಿಯಿಟ್ಟಿದೆಯೆಂದು ಶಿಖರಸೂರ್ಯನಿಗೆ ತಿಳಿದು ಹೋಯಿತು. ಸುಲಭವಾಗಿ ಆವೇಶಕ್ಕೆ ಒಳಗಾಗುವ ಜನ ಸುಲಭವಾಗಿ ಕೋಪಕ್ಕೂ ಒಳಗಾಗುತ್ತಾರೆ. ಇವರಿಗೆ ಕನಕಪುರಿಯ ಎಲ್ಲ ತಪ್ಪುಗಳನ್ನು ಹೊರುವಂಥ ಒಂದು ಬಲಿ ಕೊಟ್ಟರೆ ಎಲ್ಲವೂ ತಣ್ಣಗಾಗುತ್ತದೆಂದು ಲೆಕ್ಕ ಹಾಕಿ ಮಹಾರಾಜ ನಿನ್ನಡಿಯ ಕಡೆಗೆ ಬೆರಳು ಮಾಡಿ “ಬೆಟ್ಟದಯ್ಯನಿಗೆ ಬಲಿ ಕೊಡ್ರೋ ಆ ದುಷ್ಟನನ್ನ!” ಎಂದು ವಿಕಾರವಾಗಿ ಚೀರಿದ. ಸುಕ್ರ ವಿಚಿತ್ರ ಆವೇಶಕ್ಕೆ ಒಳಗಾಗಿ ನಿನ್ನಡಿಗೆ ಗುರಿ ಹಿಡಿದು ಭಲ್ಲೆಯ ಎಸೆದ. ತಕ್ಷಣ ವರ್ತಕ ಮುದುಕ ಅಡ್ಡ ಬಂದು ಅವನ ಬೆನ್ನಿಗೇ ಭಲ್ಲೆ ತಾಗಿ ಅಲ್ಲೇ ಬಿದ್ದುಬಿಟ್ಟ.

ಜನ ಹೋ ಎಂದು ಕಿರಿಚಿ ಒಂದು ಕ್ಷಣ ನಿಶ್ಯಬ್ದರಾದರು, ಮರುಕ್ಷಣವೇ ನೂಕುನುಗ್ಗಲು ಸುರುವಾಯಿತು. ದೊಂಬಿಯ ಕೋಪಾಟೋಪಗಳನ್ನು ನಿಯಂತ್ರಿಸುವುದೇ ಅಸಾಧ್ಯವಾಯಿತು. ಇಬ್ಬರು ಓಡಿಹೋಗಲಿದ್ದ ಒಬ್ಬ ಬಂಟನ ಜುಟ್ಟು ಹಿಡಿದೆಳೆದು ಕೆಳಗೆ ಹಾಕಿ ಕಚಪಚ ತುಳಿದರು. ಇನ್ನೊಬ್ಬ ಅವನ ಕತ್ತಿನ ಮೇಲೆ ಕಲ್ಲಿ ಹಾಕಿ ಭಯ, ಬೆರಗಿನಲ್ಲಿ ಭಯಂಕರವಾಗಿ ಕೂಗಿದ. ಮುದುಕನ ಬೆನ್ನಲ್ಲೀ ನೆತ್ತರು ಸೋರಿ ದೊಗಳೆ ಅಂಗಿ ನೆತ್ತರಲ್ಲಿ ತೊಯ್ದು, ಅದರಿಂದಲೂ ಸೋರತೊಡಗಿತು. ಮುದುಕನ ದೇಹವನ್ನು ತನ್ನ ತೊಡೆಯ ಮೇಲಿಟ್ಟುಕೊಂಡು ಹರಿಯುವ ನೆತ್ತರನ್ನು ತಡೆಯುವ ಪ್ರಯತ್ನದಲ್ಲಿ ನಿನ್ನಡಿ ತೊಡಗಿದ.

ರೊಚ್ಚಿಗೆದ್ದ ಜನ ಕೈಗೆ ಏನು ಸಿಕ್ಕರೆ ಅದನ್ನು ತಗೊಂಡು ಬಂಟರು ಮತ್ತು ಮಹಾರಾಜನ ಕಡೆಗೆ ಎಸೆಯುತ್ತ ಮುನ್ನುಗ್ಗಿದರು. ಬಂಟರು ಓಡಿಹೋದರು. ಶಿಖರಸೂರ್ಯ ಸಮಯ ಸಂದರ್ಭ ಅರಿತು ತಕ್ಷಣ ಕಾಲಿಗೆ ಬುದ್ಧಿ ಹೇಳಿ ಮೆಟ್ಟಲೇರಿ ಮೇಲಿನ ಕೋಣೆಯ ಬಳಿ ನಿಂತುಕೊಂಡ.

ಇನ್ನು ಬಂಟರನ್ನಾಗಲಿ ಮಹಾರಾಜನನ್ನಾಗಲಿ ಯಾರೂ ಕಾಪಾಡಲಾರರೆಂದು ಜನರೇ ತೀರ್ಮಾನಿಸಿ ನುಗ್ಗಿದರು. ಒಬ್ಬ ಬಂಟನನ್ನ ಭಲ್ಲೆ ಸಮೇತ ಎಳೆದು ಕೆಳಕ್ಕೆ ಹಾಕಿ, ಅವನದೇ ಭಲ್ಲೆಯಿಂದಿರಿದು ಕೊಂದ.

ಅಷ್ಟರಲ್ಲಿ ಜನ ಸುಕ್ರನ ಬೆನ್ನು ಹತ್ತಿದರು. ಸುಕ್ರ ಹೆದರಿ ಓಡಿದ. ಕೊನೆಗೆ ಅಂತಃಪುರದ ಮೆಟ್ಟಲೇರಿ ಕೆಳಕ್ಕೆ ಹಾರಿ ಬಿದ್ದ. ಜನ ಅಲ್ಲಿಗೂ ನುಗ್ಗಿ ಅವನನ್ನ ಹಿಡಿದು ಮೈ ನೀಲಿಗಟ್ಟುವತನಕ ಹೊಡೆದರು. ಅವನು ಸತ್ತದ್ದು ಖಾತ್ರಿಯಾದ ಮೇಲೆಕೆಲವರು ಅವನ ಕಾಲು ಹಹಿಡಿದೆಳೆಯುತ್ತ ಜನ ಸಂಚಾರವಿಲ್ಲದ್ದಲ್ಲಿ ಚೆಲ್ಲಿ ಬಂದರು. ಇನ್ನು ಕೆಲವರು ಅರಮನೆಯ ಧಾನ್ಯವನ್ನು ಚೀಲದಲ್ಲಿ ತುಂಬೆ ದಾಸೋಹಕ್ಕೆ ಸಾಗಿಸುವ ಕಾರ್ಯದಲ್ಲಿ ತೊಡಗಿದರು. ಉಳಿದ ಜನ ರಾಜನ ಕೋಣೆಯ ಕಡೆಗೆ ಧಾವಿಸಿದರು.

ಆದರೆ ಆಗಲೇ ತನ್ನ ಕೋಣೆಯ ಬಾಗಿಲಲ್ಲಿ ನಿಂತಿದ್ದ ಮಹಾರಾಜನಿಗೆ ದೊಂಬಿಯವರು ಎಸೆದ ಚಪ್ಪಲಿಯೊಂದು ಕಣ್ಣಿಗೆ ತಾಗಿ ಮಹಾರಾಜ ಕಣ್ಣು ಹಿಡಿದುಕೊಂಡಿ ಓಡಿಹೋಗಿ ಕೋಣೆಯ ಬಾಗಿಲಿಕ್ಕಿಕೊಂಡ. ಜನ ಬಾಗಿಲು ಬಡಿಯತೊಡಗಿದರು. ಉಳಿದವರು ಅವಮಾನಕರ ಶಬ್ದಗಳಿಂದ ಮಹಾರಾಜನನ್ನ ನಿಂದಿಸತೊಡಗಿದರು.

ಬೇಟೆಗಾರರು ತಪ್ಪಿಸಿಕೊಂಡ ಮಿಕವ ಹುಡುಕುವಂತೆ ಅವನ ಕೋಣೆಯ ಹಿಂದೆ ಮುಂದೆ ಸಂದಿಗೊಂದಿಗಳ ತಳ ಬುಡ ಸೋಸಿ ಪ್ರವೇಶಕ್ಕಾಗಿ ತಡಕಾಡತೊಡಗಿದರು. ಮಹಾರಾಜ ಕೇಳಿ ಕೆರಳುವಂಥ ಅಶ್ಲೀಲ ಪದಗಳಿಂದ ಒದರಿ ಕರೆದರು. ರಾಜನ ಕೋಣೆಯ ಮೊಗಸಾಲೆಯ ಪೀಠೋಪಕರಣ ಶೃಂಗಾರ ವಸ್ತುಗಳನ್ನು ಮುರಿದೆಸೆದು ಪರದೆಯ ಬಟ್ಟೆಗಳನ್ನು ಹರಿದು ಹಾಕಿದರು. ಇನ್ನೇನು ಸೂರ್ಯ ಮುಳೂಗಬೇಕು – ಅಷ್ಟೊತ್ತಿನಲ್ಲಿ ನೋಡಿದರೆ – ಮಹಾರಾಜ ಒಡ್ಡೋಲಗದ ಮೇಲಿನ ಗೋಪುರದ ಕಳಸವನ್ನ ತಬ್ಬಿಕೊಂಡು ನಿಂತುದನ್ನು ಜನ ನೋಡಿ ಬೆರಗಾದರು! ಅಷ್ಟು ಎತ್ತರದ ಗೋಪುರವನ್ನು ಹಗ್ಗ ಅಥವಾ ಏಣಿಯ ನೆರವಿಲ್ಲದೆ ಹ್ಯಾಗೆ ಹತ್ತಿದನೆಂದು ಜನಕ್ಕೆ ಆಶ್ಚರ್ಯವಾಯಿತು. ಆಶ್ಚರ್ಯದಲ್ಲಿ ಸ್ವಲ್ಪ ಹೊತ್ತು ವೈರ ಮರೆತು ನೋಡಿದರು.

ಅಷ್ಟರಲ್ಲಿ ಜನಗಳ ಪೈಕಿ ಒಬ್ಬ, –

“ನೋಡಿದಿರಾ? ಶಿಖರಸೂರ್ಯನೆಂಬ ತನ್ನ ಹೆಸರನ್ನ ಸಾರ್ಥಕ ಮಾಡಿಕೊಂಡ ನಮ್ಮ ರಾಜ!”

– ಎಂದು ಕೂಗಿ ವ್ಯಂಗವಾಡಿದ. ಜನ ಹೋ ಎಂದು ರಾಜನ ಕಡೆಗೆ ಕೈ ಮಾಡಿ ನಕ್ಕರು. ಕೋತಿ ಎಂದು ಮತ್ತಷ್ಟು ನಕ್ಕರು. ಎಷ್ಟು ಜೋರಿನಿಂದ ಎಸೆದರೂ ಅಷ್ಟು ಎತ್ತರಕ್ಕೆ ಕಲ್ಲಿ ತಲುಪುವಂತಿರಲಿಲ್ಲ. ಆದ್ದರಿಂದ ಜನ ಈಗ ಅವನು ಹ್ಯಾಗೆ ಇಳಿಯುವನೆಂದು ನೋಡಲು ಕಾತರರಾದರು!

ಜನರ ಭಯದಲ್ಲಿ ಎತ್ತರದ ಅರಿವಿಲ್ಲದೆ ಹ್ಯಾಗೋ ಹತ್ತಿದ. ಆದರೆ ಹ್ಯಾಗೋ ಇಳಿಯುವುದು ಸಾಧ್ಯವಿಲ್ಲವೆಂದು ಮಹಾರಾಜನಿಗೆ ಗೊತ್ತಾಯಿತು. ಅಲ್ಲದೆ ಅಲ್ಲಿಂದ ಕೊಂಚ ಕೈ ಜಾರಿದರೂ ಪಾತಾಳಕ್ಕೆ ಬೀಳುವುದು ಖಚಿತವಿತ್ತು. ಕೆಳಗೆ ನೋಡಿದ! ಜನ ನಾಯಿ ಗಾತ್ರದ ಜೀವಿಗಳಂತೆ ಕಂಡರು. ಇಂಥ ಅಪಾಯಕಾರಿ ಗೋಪುರವನ್ನ ಹ್ಯಾಗೆ ಹತ್ತಿ ಬಂದನೆಂದು ಸ್ವಯಂ ಮಹಾರಾಜನಿಗೇ ಆಶ್ಚರ್ಯ ಮತ್ತು ಭಯವಾಯಿತು. ಕೆಳಗೆ ಜಮಾಯಿಸಿದ ಜನಗಳನ್ನು ನೋಡಿ ಇನ್ನಷ್ಟು ಭಯವಾಯಿತು. ಜೊತೆಗೆ ನಾಚಿಕೆ ಕೂಡಾ. ಮುಳುಗುತ್ತಿರುವ ಸೂರ್ಯನ ಕಂಡು ಮತ್ತೂ ಭಯವಾಯಿತು.

ಎರಡೂ ಕಾಲೂರಿ ನಿಲ್ಲುವುದಕ್ಕೆ ಸ್ಥಳಸಾಲದೆ, ಎರಡೂ ಕೈಗಳಿಂದ ಕಳಸವನ್ನ ತಬ್ಬಿಕೊಂಡೇ ನಿಂತಿರಬೇಕಿತ್ತು. ಒಂದು ಕಾಲು ಸೋತರೆ ಇನ್ನೊಂದರ ಮೇಲೆ ಭಾರಹಾಕಿ ನಿಲ್ಲಬೇಕಾಗಿತ್ತು.

ಅಷ್ಟರಲ್ಲಿ

“ಈಗ ಉಳಿದಿರೋದು ಒಂದೇ ದಾರಿ!”

– ಎಂದು ದನಿ ಕೇಳಿಸಿತು. ದನಿಯ ಗುರುತ ಸಿಕ್ಕಿತು, ಕರಿ ಹುಡುಗ! ಇವನೆಲ್ಲಿದ್ದಾನೆಂದು ನೋಡಿದರೆ ತನ್ನಂತೆಯೇ ಶಿಖರದ ಇನ್ನೊಂದು ಬದಿಗೆ ಅದರ ತುದಿ ತಬ್ಬಿ ನಿಂತಿದ್ದಾನೆ! ಆದರೆ ತನ್ನಂತೆ ಆತ ಕಷ್ಟಪಡುತ್ತಿರಲಿಲ್ಲ. ಸಾಲದ್ದಕ್ಕೆ ನಗುತ್ತಿದ್ದಾನೆ! ಅವನ ನಿರಾತಂಕ ತೃಪ್ತಿಯ ನಗೆ ನೋಡಿ ರುದ್ರಗೋಪ ಬಂತು. ಆದರೆ ಪ್ರಸ್ತುತದಲ್ಲಿ ಕೋಪವೂ ವ್ಯರ್ಥವೆಂದು ಅರಿವಾಗಿ, ಪಾರುಮಾಡೆಂದು ಅಂಗಲಾಚುವಂತೆ ಅವನನ್ನೇ ನೋಡಿದ. ಉಕ್ಕೆಬಂದ ನಗೆಯನ್ನು ತಡೆದುಕೊಂಡು ಹುಡುಗ ಹೇಳಿದ:

“ಮಹಾರಾಜನಾಗಿ ದರ್ಪದಿಂದ ಆಳಿದವನು ಹೀಗೆ ಜೀವಭಯದಲ್ಲಿ ಗೋಪುರದ ಕಳಸ ತಬ್ಬಿಕೊಂಡು, ಪ್ರಜೆಗಳೆದುರಿಗೆ ಹಾಸ್ಯಾಸ್ಪದನಾಗಿ ನಿಲ್ಲುವುದು ನಾಚಿಕೆಯ ವಿಷಯ. ನಿನ್ನನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡುವವರು ಯಾರೂ ಇಲ್ಲ. ಕೆಳಗಿನ ಜಂಗುಳಿಯ ಎಲ್ಲರೂ ಹೋದ ಮೇಲೆ ಕೂಡ ಗೋಪುರದಿಂದ ಕೆಳಗಿಳಿಯುವುದು ಸಾಧ್ಯವಿಲ್ಲ. ಈಗ ಇರುವುದೊಂದೇ ದಾರಿ: ಕೈ ಬಿಟ್ಟು ಕೆಳಕ್ಕೆ ಹಾರುವುದು!”

ಹತಾಶೆಯಿಂದ ಕಂಗಾಲಾಗಿ ಕೇಳಿದ:

“ನಿಜ ಹೇಳು, ಯಾರು ನೀನು?”

“ನಿನ್ನ ಗುರು ನಾಗಾರ್ಜುನ!”

– ಎಂದು ಹುಡುಗ ಗಹಗಹಿಸಿ ನಕ್ಕು ಉಕ್ಕಿಬಂದ ಸಂತೋಷದಿಂದ ಹೇಳಿದ: ಈಗ ನಿನಗೂ ನನ್ನ ಹಾಗೆ ಗರುಡನ ಬೆಟ್ಟವೇ ಆಸರೆ. ನೀನು ಗಳಿಸಿದ ಚಿನ್ನದ ವಿದ್ಯೆಯನ್ನ ಅರ್ಹನಿಗೆ ದಾನ ಮಾಡಿದಾಗಲೇ, ಅವನೂ ಹದ್ದಾಗಿ ಬೆಟ್ಟದಾಸರೆಗೆ ಬಂದಾಗಲೇ ನಿನಗೆ ಮುಕ್ತಿ!”

ಕೋಪ, ನಿರಾಸೆ, ಆಘಾತಗಳನ್ನು ತಡೆದುಕೊಳ್ಳಲಾರದೆ ಮಹಾರಾಜ ಕಣ್ಣು ಮುಚ್ಚಿ ಕೈ ಬಿಟ್ಟು ಕಳಸವನ್ನೊದ್ದು ಹಾರಿಯೇ ಬಿಟ್ಟ! ಜನ ಹೋ ಎಂದು ಕಿರಿಚಿದರು. ಎರಡೂ ಕೈ ಕಾಲು ಚಾಚಿ ಬೀಳುವಾಗ ಕೆಳಗಿನವರಿಗೆ ನಿಧಾನ ಹಾರುವ ಹದ್ದಿನಂತೆ ಕಂಡ!

ಇನ್ನೇನು ಕಲ್ಲಿನ ನೆಲಗಟ್ಟಿಗೆ ತಲೆ ಅಪ್ಪಳಿಸಿ ಸಾಯುವೆನೆಂದು ಹೆದರಿದ್ದವನಿಗೆ ತೇಲಿದಂತೆ ಅನುಭವವಾಯಿತು. ಕಣ್ತೆರೆದು ನೋಡಿದರೆ – ಹದ್ದಿನಂತೆ ಹಾರುತ್ತಿದ್ದಾನೆ! ಕೈಗಳಿಗೆ ಮೂಡಿದ ರೆಕ್ಕೆಯನ್ನು ಬೀಸುತ್ತ ಹದ್ದಾಗಿ ರೂಪಾಂತರಗೊಂಡಿದ್ದಾನೆ! ಸಂತೋಷ ಆಶ್ಚರ್ಯಗಳಿಂದ ಹದ್ದುತನವನ್ನ ಅನುಭವಿಸುತ್ತಿದ್ದಾಗ ನಾಗಾರ್ಜುನ ಹೇಳಿದ ಹಾಗಾಯಿತು:

ಅಂತ್ಯ ಕಾಲದಲ್ಲಿ ನೀನೂ ನನ್ನ ಹಾಗೆ ಹದ್ದಾಗಿ ಇದೇ ಗರುಡನ ಬೆಟ್ಟದಲ್ಲಿ ಒಂಟಿಯಾಗಿ ವಾಸವಾಗಿರುತ್ತೀಯಣ್ಣ! ಕಲಿತ “ಧಾನ್ಯಚಿನ್ನದವಿದ್ಯೆ”ಯನ್ನು ಇನ್ನೊಬ್ಬರಿಗೆ ಬೋಧಿಸದ ಹೊರತು ನಿನಗೆ ಬಿಡುಗಡೆಯಿಲ್ಲ!”

ನಾಗಾರ್ಜುನನ ಮಾತುಗಳನ್ನ ನೆನೆದು ಖೇದವಾಯಿತು. ರೆಕ್ಕೆ ಬೀಸುತ್ತ ಪಡುವಣದ ಗರುಡನ ಗಿರಿಯ ಕಡೆಗೆ ಮುಖ ಮಾಡಿ ಹಾರುತ್ತ ಹಾರುತ್ತಾ ಕನಕಪುರಿಯಾಚೆಗಿನ ಇನ್ನೊಂದು ಅಂತರಿಕ್ಷದಲ್ಲಿ ಮಾಯವಾದ!

* * *

ಇದೇನಿದು ಚರಿತ್ರೆಯೆಂದು ಸುರುವಾದದ್ದು ಜನಪದ ಕತೆಯಾಗಿ ಮುಗಿಯಿತಲ್ಲ ಎಂದು ನಿಮಗೆ ಆಶ್ಚರ್ಯವಾಗಬಹುದಲ್ಲವೆ? ಚರಿತ್ರೆಯೂ ಒಂದು ಕಥಾನಕವೆಂದು, ಜನಪದ ಕಥೆ ಕೂಡ ಚರಿತ್ರೆಯನ್ನು ಬಚ್ಚಿಟ್ಟ ರೂಪಕವೆಂದು ಹೇಳುವ ಪಂಡಿತರಿದ್ದಾರೆಂಬುದು ನಿಮಗೆ ತಿಳಿದಿರಲಿ. ಶಿಖರಸೂರ್ಯ/ಜನಸೂರ್ಯ/ಚಿನ್ನಮುತ್ತನ ಅಂತ್ಯ ಹೇಗಾಯಿತೆಂದು ನಿಖರವಾಗಿ ನಮಗೂ ತಿಳಿದಿಲ್ಲ. ಆ ಬಗ್ಗೆ ಬರವಣಿಗೆಯ ದಾಖಲೆಗಳಿಲ್ಲ. ನಮಗೆ ಸಿಕ್ಕಿರೋದು ಬರೀ ಚಾಡಿಗಳು, ಇಲ್ಲಗೆ ಜನಪದ ಕಥಾನಕಗಳು. ಆತ್ಮಹತ್ಯೆ ಮಾಡಿಕೊಂಡನೆಂದು ಚಾಡಿಗಳು ಕಥಾನಕಗಳು ಹೇಳುತ್ತವೆ. ಎರಡೂ ಸುಳ್ಳು ಎಂದು ತಾರ್ಕಿಕರು ಬುದ್ಧಿಜೀವಿಗಳು ವಾದಿಡಿದರೆ ಶಿಖರಸೂರ್ಯನಂಥವರು ಈಗಲೂ ಇಲ್ಲವೆ? ಎಂದು ಕಥಾನಕರು ವಾದಿಸುತ್ತಾರೆ. ಧಾನ್ಯದಿಂದ ಚಿನ್ನ ಮಾಡಿ ಶೋಷಿಸುವವರಿರೋತನಕ ನಮ್ಮ ಕಥಾನಕ ಪ್ರಸ್ತುತವೇ ಎಂದು ಜಾನಪದ ಶಾಸ್ತ್ರಿಗಳು ಹೇಳುತ್ತಾರೆ. ಅವರಿವರ ಮಾತು ವಾದಗಳಿರಲಿ, ಇಂಥವರನ್ನ ನಾವೇ ಪ್ರತ್ಯಕ್ಷವಾಗಿ ಕಾಣುತ್ತಿದ್ದೇವಲ್ಲ! ಆದ್ದರಿಂದ ಶಿಖರಸೂರ್ಯ ಮುಂದಿನ ಶಿಷ್ಯ/ಗಿರಾಕಿಗಾಗಿ ಕಾಯುತ್ತ ಗರುಡನಗಿರಿಯಲ್ಲಿ ಈಗಲೂ ಇದ್ದಾನೆಂದು ನಂಬುವುದೇ ಸೂಕ್ತವೆಂದು ಅಂತ್ಯಗೊಳಿಸುವಷ್ಟರಲ್ಲಿ –

ದೂರದ ಅರೆಬೆಂದ ಅಂಗಡಿಯ ಮುಂಭಾಗದ ಕಟ್ಟೆಯ ಮೇಲೆ ಒಬ್ಬ ಮುದುಕಿ ಕಂಭಕ್ಕೆ ಆಧಾರವಾಗಿ ಸತ್ತವರಂತೆ ಕುಂತಿದ್ದಳು. ನಿನ್ನಡಿ, ಕುರುಮುನಿ, ಚಂಡೀದಾಸರು ಕೂಟದ ಬಯಲಿನಲ್ಲಿ ಸೌದೆ ಕಟ್ಟಿಗೆಯ ರಾಶಿಯ ಮೇಲೆ ಹೆಣಗಳನ್ನು ಜೋಡಿಸುತ್ತಿದ್ದರು. ಹೆಣಗಳ ಕೂಡಿಸುತ್ತಿರುವುದನ್ನು ಕಂಡು ಅವಳೂ ಇವರಿದ್ದಲ್ಲಿಗೇ ಮೆಲ್ಲಗೆ ಬರತೊಡಗಿದಳು. ಆ ಮುದುಕಿಯನ್ನು ತೋರಿಸಿ, – ಕುರುಮುನಿ ಹೇಳಿದ –

“ಅದೇನು ಮುದುಕಿಯಪ್ಪ! ದಿನಾ ಒಂದೊಂದು ಕೂಸನ್ನ ಹಿಡಕೊಂಬಂದು ನನ್ನ ಕೂಸು ಉಪವಾಸ ಇದೆ ಅಂಬಲಿ ಕೊಡಿಯಪ್ಪಾ ಅಂತ ಬರ್ತದೆ. ಈ ದಿನ ಯಾಕೋ ಅವಳ ಕೈಯಲ್ಲಿ ಕೂಸಿಲ್ಲ!”

ಮುದುಕಿ ಇವರಿದ್ದಲ್ಲಗೇ ಬಂದು ಇವರ ಸಾಮರ್ಥ್ಯದ ಅಂದಾಜು ಮಾಡುವಂತೆ, ನೋಡುತ್ತ ನಿಂತಳು. ಇನ್ನಷ್ಟು ಸಮೀಪ ಬಂದು,

“ತಾಯಿ ನಾನು, ಒಂಚೂರು ರೊಟ್ಟಿ ಇದೆಯ ನನ್ನಪ್ಪ?”

– ಎಂದು ಕೈ ಒಡ್ಡಿ ಅಂಗಲಾಚಿದಳು. ಚಂಡೀದಾಸ

“ಚಪ್ಪರಕ್ಕೆ ಹೋಗು ತಾಯೀ! ಅಲ್ಲಿ ಊಟ ಇದೆ”. ಎಂದು ತಲೆಯೆತ್ತಿ ಮುದುಕಿಯನ್ನೇ ನೋಡಿದ. “ಈಕೆ ಚಿಕ್ಕಮ್ಮಣ್ಣಿಯೆ?” ಎಂದು ಅನುಮಾನವಾಯಿತು.

“ಅಯ್ಯಾ ನಿನ್ನಡಿ ನೀನೇ ಈ ಅಮ್ಮನನ್ನ ಕರೆದುಕೊಂಡು ಹೋಗಿ ಊಟ ಮಾಡಿಸು. ಹೋಗು”

– ಎಂದು ಹೇಳಿ “ಇಲ್ಲಿಯ ಕೆಲಸ ನಾವು ನೋಡಿಕೊಳ್ತೀವಿ; ನೀನು ಹೋಗು, ತಾಯಿ ಹಸಿದಿದ್ದಾಳೆ”

– ಎಂದ. ನಿನ್ನಡಿ ಇನ್ನೊಂದಾಡದೆ “ಬಾರ ಬೇ” ಎಂದು ಹೇಳಿ ನಿಲ್ಲಲಾರದೆ ಕುಸಿಯುತ್ತಿದ್ದ ಅವಳ ತೋಳಿಗೆ ಕೈಹಾಕಿ ಮೆಲ್ಲಗೆ ಕರೆದುಕೊಂಡು ಹೊರಟ. ಚಂಡೀದಾಸ ನಿಂತಿರಲಾರದೆ ಮುದುಕಿಯ ಬಳಿ ಬಂದು ಇನ್ನೊಮ್ಮೆ ಅವಳನ್ನು ನೋಡಿ, –

“ಗುರುತು ಸಿಕ್ಕಿತ ಮಹಾರಾಣಿ? ನಾನು ಚಂಡೀದಾಸ!”

ಎಂದು ತನ್ನೆದೆ ತಟ್ಟಿಕೊಂಡು ಹೇಳಿ ಅವಳೆದುರು ನಿಂತ. ನಿನ್ನಡಿ ಹೊಯ್ಕಿನಿಂದ ಚಂಡೀದಾಸನನ್ನೇ ಆಸೆಯ ಕಣ್ಣಿನಿಂದ ನೋಡುತ್ತ “ನನ್ನ ಅಬ್ಬೆಯೆ?” ಅಂದ. ಚಂಡೀದಾಸ ಉತ್ತರಿಸದೆ ಮುದುಕಿಯನ್ನೇ ನೋಡುತ್ತ, –

“ಈತ ನಿನ್ನ ಮಗ ತರುಣಚಂದ್ರ!”

– ಅಂದ. ನಿನ್ನಡಿ ದುಃಖ ಸಂತೋಷಗಳ ಆವೇಶದಲ್ಲಿ “ಅಬ್ಬೇ!” ಎಂದು ಮುದುಕಿಯನ್ನ ತಬ್ಬಿಕೊಂಡ. ಇದ್ಯಾವುದನ್ನೂ ತಿಳಿಯುವ ಸ್ಥಿತಿಯಲ್ಲಿ ಚಿಕ್ಕಮ್ಮಣ್ಣಿ ಇರಲಿಲ್ಲ. ಮುಂದೆ ಮುಂದೆ ಹೆಜ್ಜೆ ಊರಿಯೂ ಊರದಂತೆ ಮಗನ ಮೇಲೆ ಭಾರ ಹಾಕಿ ನಡೆಯುತ್ತ,-

“ತಾಯಿ ನಾನು, ಏನೂ ತಿಂದಿಲ್ಲ. ಒಂಚೂರು ರೊಟ್ಟಿಯೋ ಅಂಬಲಿಯೋ ಕೊಡು ನನ್ನಪ್ಪ”.

– ಎಂದಳು ಭಿಕ್ಷುಕಿಯ ಸ್ವರದಲ್ಲಿ. ಗೆಳೆಯರಿಬ್ಬರೂ ಜಲಜಲ ಕಣ್ಣೀರು ಹರಿಸಿದರು. ಕೂಡಲೇ ನಿನ್ನಡಿ ಚಿಕ್ಕಮ್ಮಣ್ಣಿಯನ್ನು ಮಗುವಿನಂತೆ ಎತ್ತಿಕೊಂಡು ದಾಸೋಹದ ಚಪ್ಪರದ ಕಡೆಗೆ ನಡೆದ. ಮಗನ ತೋಳಿನಲ್ಲಿದ್ದ ತಾಯಿ ಕಣ್ಣು ತೆರೆದು “ತಾಯಿ ನಾನು….” ಎಂದು ಹೇಳಿ, ನಿನ್ನಡಿಯ ಮುಖ ನೋಡಿ ಮಾತಾಡದೆ ನೆಮ್ಮದಿಯಿಂದ ಮುಗುಳುನಕ್ಕಳು!

ಇಲ್ಲೀಗಿ ಹರಹರ
ಇಲ್ಲೀಗಿ ಶಿವಶಿವ
ಇಲ್ಲಿಂದ ಶಿವಲಿಂಗ ಶರಣೆನ್ನಿರೋ!!