ಕಾರ್ಯಕಾರಣಗಳಿಲ್ಲದೆ ಇತಿಹಾಸ ಸ್ವತಂತ್ರವಾಗಿ ಚಲಿಸುವುದೇ ಇಲ್ಲ. ಯಾವುದೋ ಕಾರಣ ನೆಪವಾಗಿ ಕ್ರಿಯೆ ಜರಗುತ್ತದೆ. ಅದರ ಪರಿಣಾಮ ಬೆಂಬತ್ತಿ ಬರುತ್ತದೆ. ಒಂದು ಕಾರಣ ಮರಿ ಹಾಕಿ ಇನ್ನೊಂದು ಪರಿಣಾಮ ಹುಟ್ಟುತ್ತದೆ. ಹೀಗೇ ಕಾರಣಗಳು ಹುಟ್ಟುತ್ತವೆ. ಹಿಂದಿನಿಂದ ಪರಿಣಾಮಗಳು… ಹೀಗೆ ತಾನೇ ನೇಯ್ದ ಜಾಲದಿಂದ ಇತಿಹಾಸಕ್ಕೆ ಮುಕ್ತಿಯೇ ಇಲ್ಲ. ಅದಕ್ಕೇ ಪುನರಾವರ್ತಿಸುತ್ತ ಮುಂದುವರಿಯುತ್ತದೆ. ಇದನ್ನು ಪ್ರತಿ ಎಂದು ಕರೆದು ಬೆಲೆಗಟ್ಟಲಿಕ್ಕೂ ಅದು ನಾಚುವುದಿಲ್ಲ. ಬಡವರ ಗುಡಿಸಲುಗಳನ್ನು ಕೆಡವಿ ಆ ಸ್ಥಳದಲ್ಲೊಂದು ದೊಡ್ಡ ಅರಮನೆ ಕಟ್ಟಿ ಅದನ್ನು ಪ್ರಗತಿ ಎಂದು ಕರೆಯುವಷ್ಟು ಹೊಣೆಗೇಡಿತನ ಇತಿಹಾಸವನ್ನು ಬಿಟ್ಟು ಇನ್ನೆಲ್ಲಿ ಸಿಕ್ಕೀತು?

ಪ್ರಸ್ತುತ ಕನಕಪುರಿಯ ವಿಷಯ ನೋಡುವಾ;

ಈಗೊಂದು ತಿಂಗಳ ಹಿಂದೆಯೇ ಕನಕಪುರಿಯ ಹೊರ ಅಂಚಿನಲ್ಲಿ ದೊಡ್ಡ ರೋಗ ಸುರುವಾಗಿದ್ದನ್ನ ಚಂಡೀದಾಸ ವರ್ತಕರ ಗಮನಕ್ಕೆ ತಂದಿದ್ದ. ಸ್ವಯಂ ಮಹಾರಾಜನೇ ವೈದ್ಯನಾಗಿರುವಾಗ ಅವನಿಗೆ ಈ ವಿಷಯ ತಿಳಿಯದಿದ್ದೀತೆ? ಎಂದು ವರ್ತಕರು ಯಾಮಾರಿದರು. ದೊಡ್ಡರೋಗ ದಲಿತರ ಕೇರಿ ಹಾಗೂ ಹೊರಕೇರಿಗಳಲ್ಲಿ ಕಾಣಿಸಿಕೊಂಡುದರಿಂದ ಅದರ ಭಯಾನಕತೆ ಅರಮನೆಗೆ ಕೂಡಲೇ ತಿಳಿದಿರಲಿಕ್ಕಿಲ್ಲ. ಆದರೆ ಹೊರಕೇರಿಯಲ್ಲಿ ಯಾವಾಗ ಒಂದೇ ದಿನ ಎಂಟು ಹೆಣಗಳು ಬಿದ್ದವೋ ಆಗ ಮಾತ್ರ ವರ್ತಕರು ಗಾಬರಿಯಾದರು.

ವರ್ತಕ ಸಂಘದ ಸದಸ್ಯರು ತುರ್ತಾಗಿ ಸಭೆ ಸೇರಿ ಮಹಾರಾಜನನ್ನು ನೋಡಲು ಅರಮನೆಗೆ ಹೋದರು. ಅರಮನೆಯಲ್ಲಿ ಮಹಾರಾಜನಿರಲಿಲ್ಲ. ಪ್ರಧಾನಿ ಸುಕ್ರನ ಕೇಳಿದರೆ ಅವನು ಹತಾಶನಾಗಿ ಬೆಟ್ಟದಯ್ಯನ ನೆನೆದು ಮಹಾರಾಜರು ಬರಲಿ ಎಂದು ಸಮಾಧಾನ ಮಾಡಿ ಕಳಿಸಿದ.

“ದೊಡ್ಡ ರೋಗದಿಂದ ಕನಕಪುರಿಯನ್ನ ಪಾರು ಮಾಡಬೇಕಿದೆ. ಆದರೆ ಈ ಬಗ್ಗೆ ತೀರ್ಮಾನ ತಗೋಬೇಕಾದವರು ಮಹಾರಾಜರು; ತಾವೇನಿದ್ದರೂ ಹೇಳಿದಂತೆ ಕೇಳುವವರು ಮಾತ್ರ” ಎಂಬ ಸತ್ಯ ಈಗ ಎಲ್ಲರಿಗೂ ಗೊತ್ತಾಯಿತು. ರೋಗದ ಭಯದಿಂದ ಪ್ರೇರಿತರಾಗಿ ಅನೇಕರು ಅಸಂಬದ್ಧ ಉಪಾಯಗಳನ್ನು ಸೂಚಿಸಿದರಾದರೂ ಅದಾಗಲೇ ಎದುರಿಸಲಾರದಷ್ಟು ಅಪಾಯಕಾರಿಯಾಗಿ ಹಬ್ಬಿದೆಯೆಂದು ಅಂದುಕೊಂಡು ಮನೆಗಳಿಗೆ ಹೋದರು.

ಕನಕಪುರಿಯ ವ್ಯವಹಾರವೂ ಅಪಾಯದಂಚೆಗೆ ಬಂದು ನಿಂತಿತ್ತು. ಚೆನ್ನದ ಬೆಲೆ ಎಷ್ಟು ಕನಿಷ್ಟಕ್ಕೆ ಹೋಗಿತ್ತೆಂದರೆ ಹಿಡಿ ಧಾನ್ಯಕ್ಕೆ ಹಿಡಿ ಚಿನ್ನ ಕೊಡುತ್ತೇವೆಂದರೂ ಮಾರುವವರಿರಲಿಲ್ಲ. ತರಕಾರಿಗೆ ಸಮ ತೂಕದಲ್ಲಿ ಚಿನ್ನ ಕೊಡುತ್ತೇವೆಂದರೂ ತರಕಾರಿ ಸಿಗುತ್ತಿರಲಿಲ್ಲ. ಆಳುಗಳನ್ನು ಕೊಳ್ಳುವವರು, ಜೀತಕ್ಕೆ ಇಟ್ಟುಕೊಂಬವರು ಒಬ್ಬರೂ ಸಿಗುತ್ತಿರಲಿಲ್ಲ. ಯಾಕೆಂದರೆ ಯಾವ ಆಳು ಯಾವಾಗ ತಿರುಗಿ ಬಿದ್ದಾನೆಂದು ನಂಬಿಕೆಯಿರಲಿಲ್ಲ. ಆಳುಗಳು ಕೆಲಸ ಇಲ್ಲದೆ ಒದ್ದಾಡುತ್ತಿದ್ದರು.

ಬಡವರು ದೊಂಬಿ ಏಳುವ ಎಲ್ಲ ಲಕ್ಷಣಗಳು ವಾತಾವರಣದಲ್ಲಿದ್ದವು. ಈ ಬಗ್ಗೆ ವರ್ತಕರು ಮಹಾರಾಜನೊಂದಿಗೆ ಚರ್ಚಿಸಬಯಸಿದರೂ ಮಹಾರಾಜನು ಸಿಕ್ಕಿರಲಿಲ್ಲ. ರೈತರು ತರಕಾರಿ ಹಣ್ಣು ಮುಂತಾದ ವಸ್ತುಗಳನ್ನು ಸಂತೆಗೆ ತರಲು ಹಿಂಜರಿದಿದ್ದರಿಂದ ಸಂತೆ ಬೆಕೋ ಎನ್ನುತ್ತಿತ್ತು. ಉಳಿದಂತೆ ಚಾಕು ಚೂರಿ ಮಾರಾಟದ ವ್ಯಾಪಾರಿಗಳನ್ನು ಕೇಳುವವರಿರಲಿಲ್ಲ! ಹಸಿದ ಬಡವರ ತಂಡವೊಂದು ಕನಕಪುರಿ ಗುರಿಯಾಗಿ ಹೊರಟಿದೆ ಎಂದು ಸುದ್ದಿ ಬಂದಿತ್ತು. ಅದಿನ್ನೂ ಬಂದಿರಲಿಲ್ಲ.

ಕನಕಪುರಿ ವ್ಯವಹಾರದಲ್ಲಿ ನಂಬಿಕೆಯಿಲ್ಲದ ವರ್ತಕರು ಯಾವುದಕ್ಕೂ ಇನ್ನೊಂದು ಕಡೆಗೆ ಬೇರೂರುವುದು ಒಳ್ಳೆಯದೆಂದು ವಲಸೆ ಹಾಗೊವುದು ಸುರುವಾಗಿತ್ತು. ಬೇರೆ ರಾಜಧಾನಿಗಳಲ್ಲಿ ಅವಕಾಶ ಸಿಕ್ಕುವಂತಿದ್ದರೆ ಕೂಡಲೇ ಹೊರಟು ಬಿಡುತ್ತಿದ್ದರು. ಅಂಥವರು ಸಾಮಾನ್ಯವಾಗಿ ರಾತ್ರಿ ಹೊತ್ತು ಹೋಗುವುದೇ ಹೆಚ್ಚು. ವಲಸೆ ಹೋಗುವುದು ಅವಮಾನಕರವೆಂದು ಹೋಗುವಾಗ ಸರಿಕರಿಗೆ ಹೇಳುತ್ತಿರಲಿಲ್ಲ. ನೆರೆಹೊರೆಯವರಿಗೆ ಮಾತ್ರ “ನೀವಿರುವಷ್ಟು ದಿನ ನಮ್ಮ ಮನೆ ಕಡೆಗೂ ಒಂದು ಕಣ್ಣೀಡಿ. ಮುಂದೆ ಸಾಧ್ಯವಾದರೆ ಭೇಟಿಯಾಗೋಣ” ಎಂದು ಹೇಳಿ ಹೋಗುತ್ತಿದ್ದರು.

“ಇಷ್ಟು ದಿನ ವೈಭವದಿಂದ ಮೆರೆದ ಕನಕಪುರಿಗೆ ಈ ಗತಿ ಬಂತೆ? ಎಂಬ ಮಾತನ್ನು ವರ್ತಕರು ಬೇರೆ ಬೇರೆ ದನಿಗಳಲ್ಲಿ ನಿಟ್ಟುಸಿರಿನೊಂದಿಗೆ ಹೇಳುತ್ತಿದ್ದರು. ಹಾಗೆ ಹೇಳಿದಾಗೊಮ್ಮೆ “ವಿಧಿಯ ಆಟ!” ಎಂದು ಆಕಾಶದ ಕಡೆಗೆ ನೋಡಿ, ತಮ್ಮ ಅಸಹಾಯಕ ಭಾವನೆಯನ್ನು ವ್ಯಕ್ತಪಡಿಸುತ್ತಿದ್ದರು.

ಪರಿಸ್ಥಿತಿ ಇಂತಿರುವಲ್ಲಿ ಶಿಖರಸೂರ್ಯ ಶಿವಾಪುರದ ಅಸಲಿ ಚಿನ್ನ ಮತ್ತು ಧಾನ್ಯಗಳಿಂದ ತನ್ನ ರಾಜ್ಯದ ಅರ್ಥಿಕತೆಯನ್ನು ತಹಬಂದಿಗೆ ತರಬಹುದೆಂದುಕೊಂಡಿದ್ದ. ಮಹಾರಾಜ ಶಿವಾಪುರದಲ್ಲಿದ್ದ ಕೊನೆಯ ದಿನ ಏನಾಯಿತೆಂದು ನಿಮಗೇ ಗೊತ್ತಿದೆ. ಅವನ ಇಡೀ ಸೈನ್ಯ ಬಲವೆಲ್ಲ ಕಸವಾಗಿ, ಕಾಲ್ಕೆಳಗೆ ಬಿದ್ದು, ಮೌಲ್ಯ ವ್ಯವಸ್ಥೆ ಕುಸಿದು ಚಿನ್ನವೆಂದುದೆಲ್ಲ ಧಾನ್ಯವಾಗಿ ಸೈನ್ಯವೆಂದುದು ಕಸವಾಗಿ ಪರಿವರ್ತನೆ ಹೊಂದಿತ್ತು!

ಮಾರನೇ ಬೆಳಿಗ್ಗೆ ಕನಕಪುರಿ ಎಚ್ಚತ್ತು ಕಣ್ಣುಜ್ಜಿಕೊಂಡು ಹೊರಗಡೆ ಬಂದು ನೋಡಿದರೆ ಏನಿದೆ? ಕಾವಲು ಬಂಟರಿಲ್ಲ! ಸೈನಿಕರಿಲ್ಲ! ರಸ್ತೆಗಳ ತುಂಬ ಚೆಲ್ಲಾಪಿಲ್ಲಿಯಾದ ಕಸ, ಹುಲ್ಲು ಮೇವು ತಿಪ್ಪೆ ರಾಶಿಯಾಗಿ ಬಿದ್ದಿದೆ! ರಸ್ತೆಗಳ ಮೌನಕ್ಕೆ ಹೆದರಿ ಬಾಯಿ ಕಳೆದುಕೊಂಡಂತೆ ಕನಕಪುರಿ ನಿಶ್ಯಬ್ದವಾಗಿದೆ!

ಯಾವಾಗ ಮನೆ ಅಂಗಡಿಗಳಲ್ಲಿ ಇಟ್ಟಿದ್ದ ಚಿನ್ನ ಬೆಳಗಾಗುವುದರೊಳಗೆ ಧಾನ್ಯವಾದುದು ಕಣ್ಣಿಗೆ ಬಿತ್ತೋ – ವರ್ತಕರ ಎದೆ ಒಡೆದವು! ನಿಜವಾಗಿಯೂ ಧಾನ್ಯವಾಯಿತೇ? ಎಂದು ಅಂಗೈಯಲ್ಲಿಟ್ಟುಕೊಂಡು ನೋಡಿದರು. ಹತಾಶೆಯಿಂದ ಸುರಿದು ನೋಡಿದರು. ಅದು ಧಾನ್ಯವೇ ಎಂದು ಖಾತ್ರಿಯಾದೊಡನೆ “ಮೋಸ! ಮೋಸ!” ಎಂದು ಕಿರಿಚಿ ನಾಲ್ಕು ಜನ ವರ್ತಕರು ನಿಂತಲ್ಲೇ ಕುಸಿದು ದೈವಾಧೀನರಾದರು. ಇಬ್ಬರು ಬೊಗಸೆ ತುಂಬ ಧಾನ್ಯ ಹಿಡಿದುಕೊಂಡು ರಸ್ತೆಗೆ ಬಂದು “ಘಾತವಾಯ್ತೋ!” ಎಂದು ಕಿರಿಚಿ ಸತ್ತರು. ಇನ್ನು ಕೆಲವರು ಎದೆ ಎದೆ ಬಡಿದುಕೊಳ್ಳುತ್ತ ಅರಮನೆಯ ಕಡೆಗೆ ಮಣ್ಣು ತೂರಿ ಮಹಾರಾಜನಿಗೆ ಶಾಪ ಹಾಕಿದರು. ಒಂದು ಅಂಗಡಿಯ ಮುಂದೊಬ್ಬ ಭಿಕ್ಷುಕ ಬಂದಾಗ ವರ್ತಕ, ಅವನನ್ನು ಅಂಗಡಿಯೊಳಕ್ಕೆ ಬರಮಾಡಿಕೊಂಡು, ಕಾಲು ಮುಟ್ಟಿ ನಮಸ್ಕಾರ ಮಾಡಿ ತಾನು ಹೊರಗೆ ಹೋದ!

ಕೆಲವೇ ಧೈರ್ಯವಂತ ವರ್ತಕರು ರೂಢಿಗತ ಅಭ್ಯಾಸ ಬಿಡಲಾರದೆ ಅಂಗಡಿಗಳ ಬಾಗಿಲು ತೆರೆದು ಶೂನ್ಯ ದೃಷ್ಟಿಯಿಂದ ರಸ್ತೆಗಳನ್ನು ನೋಡುತ್ತ ಕುಳಿತುಕೊಂಡಿದ್ದರು. ಯಾರೊಬ್ಬರು ಕಾಣಿಸಿಕೊಂಡರೂ ಓಡಿ ಹೋಗಿ ಅವರನ್ನು ನಿಲ್ಲಿಸಿ ಏನಾಯಿತೆಂದು ತಿಳಿಯಲು ಕಾತರರಾಗಿದ್ದರು. ದುರ್ದೈವಕ್ಕೆ ಯಾರು ಬಂದರೂ ಇವರಿಗಿಂತ ಮುಂಚೆಯೇ ಏನಯಿತೆಂದು ಇವರನ್ನೇ ಕೇಳುತ್ತಿದ್ದರು.

ಗಿರಾಕಿಗಳನ್ನು ಸೌಜನ್ಯದಿಂದ ಕೂಗುವ ವ್ಯಾಪಾರಿಗಳ ದನಿ ಕೇಳಿಸುತ್ತಿರಲಿಲ್ಲ. ಕೂಗುವುದಕ್ಕೆ ಯಾರಾದರೂ ಹಾದಾಡಿದರಲ್ಲವೆ? ಎಲ್ಲರೂ ಕಣ್ಣಗಲಿಸಿಕೊಂಡಿ ಕಾಯುತ್ತಿದ್ದರು. ಬೀದಿ ಓಣಿ ಪೇಟೆಗಳಲ್ಲಿ ನರಪಿಳ್ಳೆಯ ಸಂಚಾರವಿರಲಿಲ್ಲ. ಬೀದಿ ಮಾರಾಟಗಾರರು, ಕಲಬೆರಕೆ ಮಾರಾಡಗಾರರೂ ಇರಲಿಲ್ಲ. ರಸ್ತೆಗಳಲ್ಲಿ ಹುಲ್ಲು ಕಸ, ಸೆಗಣಿ ಲದ್ದಿ ಎರಚಾಡಿದಂತೆ ಬಿದ್ದಿತ್ತು.

ಊರಲ್ಲಿದ್ದ ಹಸಿದ ಬಡವರನ್ನು ತಡೆಯುವುದು ಕಷ್ಟವಾಗಿತ್ತು. ಜನ ದಂಗೆ ಏಳಲಿಲ್ಲ. ಅರಮನೆಯಲ್ಲಿ ಈಗ ಹೇರಳವಾಗಿರುವ ಧಾನ್ಯ ಸಂಗ್ರಹದಿಂದ ತಾವೂ ಒಂದಷ್ಟು ಧಾನ್ಯ ತಂದು ಮನೆ ಗುಡಿಸಲುಗಳಲ್ಲಿ ತುಂಬಿಕೊಂಡರೇ ವಿನಾ ಇವರ್ಯಾರೂ ರಾಜನ ವಿರುದ್ಧ ದಂಗೆ ಎದ್ದವರಲ್ಲ. ಇವನಿಗಿಂತ ಉತ್ತಮ ರಾಜ ಬರಲೆಂದು ಇನ್ನೊಂದು ಒಳ್ಳೆಯ ವ್ಯವಸ್ಥೆ ಬರಲೆಂದು ಅಂದವರಲ್ಲ. ನಮಗೆ ಈಗ ಊಟ ಮಾಡಲಿಕ್ಕೆ ಒಂದಷ್ಟು ಧಾನ್ಯ ಬೇಕು; ಅದು ಸಿಕ್ಕರಾಯಿತೆಂದು ಅಂದುಕೊಂಡು ಅರಮನೆಗೆ ನುಗ್ಗಿದರು. ಉಡಿತುಂಬ ಧಾನ್ಯ ಸಿಕ್ಕದ್ದೇ ತೃಪ್ತರಾಗಿ ಮತ್ತೆ ಮತ್ತೆ ಬಂದು ತಗೊಂಡು ಹೋದರು.

ಮಹಾರಾಜರಿಲ್ಲವೆಂದು, ಕೊಲೆಯಾಗಿರುವರೆಂದು, ಹಿಂದಿನ ಮಹಾರಾಣಿಯ ಭೂತ ಅವರನ್ನ ಕೊಂಡು ಹಾಕಿತೆಂದು ಕತೆಗಳು, ಕಿಂವದಂತಿಗಳು ಹಬ್ಬಿದವು. ವೃದ್ಧ ವಿಧವೆಯೊಬ್ಬಳು ಬಟ್ಟೆಯಲ್ಲಿ ಹೆಣವ ಸುತ್ತಿಕೊಂಡು ಆಕಾಶದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಮಧ್ಯರಾತ್ರಿ ಚಲಿಸುವಳೆಂದು, ಯಾರು ಬೇಕಾದರೂ ಈ ದೃಶ್ಯ ನೋಡಬಹುದೆಂದು ಸುದ್ದಿ ಹಬ್ಬಿತು. ಇವುಗಳ ಪರ ವಿರೋಧವಾಗಿ ಯಾರೂ ದನಿ ಎತ್ತಲಿಲ್ಲ. ಸಂಜೆಯಾಗುವುದರೊಳಗೆ ಕನಕಪುರಿ ಹುಯಿಲು ಗಡಿಬಿಡಿಗಳಿಂದ ತುಂಬಿ ಹೋಯ್ತು.

ಸೈನ್ಯದ ಬಗ್ಗೆ ಮೊದಲು ಗೊಂದಲವಿತ್ತು. ರಾತ್ರಿ ಮಲಗುವ ಮುನ್ನ ಇದ್ದ ಸೈನ್ಯ ಬೆಳಿಗ್ಗೆ ಮಾಯವಾಗುವುದೆಂದರೇನು? ಆಜ್ಞೆ ಕೊಡುವ ಅಧಿಕಾರಿಗಳೇ ಮಾಯವಾಗಿದ್ದಾರೆ! ಅವರೇನಾದರು? ಎಲ್ಲಿ ಹೋದರು? ಈ ಪ್ರಶ್ನೆಗಳಿಗೆ ಉತ್ತರಿಸುವವರು ಯಾರೂ ಇರಲಿಲ್ಲ.

ಬಂಡೆಯನೊಬ್ಬ ಅಳಿದುಳಿದ ನಲವತ್ತು ಬಂಟರನ್ನ ಕಟ್ಟಿಕೊಂಡಿದ್ದ ಅಷ್ಟು ಜನರಿಂದ ಏನಾದೀತು? ಊರು ನೋಡಿಕೊಳ್ಳಬೇಕೆ? ಅರಮನೆ ಕಾಯಬೇಕೆ? ಅರಮನೆಯಲ್ಲಿ ರಾಜನಿಲ್ಲ. ಮಂತ್ರಿಯಿಲ್ಲ. ಊರಲ್ಲಿ ವರ್ತಕ ಸಂಗವಿಲ್ಲ. ಹೇಳುವವರಿಲ್ಲ. ಕೇಳುವವರಿಲ್ಲ.

ಹುಚ್ಚು ಹತ್ತಿದ ಮಗ ತನ್ನ ಗುರುತು ಹಿಡಿಯದಿದ್ದ ದಿನವೇ ಛಾಯಾದೇವಿ ದೈವಾಧೀನಳಾಗಿದ್ದಳು. ದೊಡ್ಡ ರೋಗಕ್ಕೆ ಹೆದರಿ ಅವಳ ಚಿತೆಗೆ ಜನಗಳಾಗಲಿ ಬಂಧುಗಳಾಗಲಿ ಯಾರೂ ಬರಲಿಲ್ಲ. ಇನ್ನುಳಿದವಳು ಚಿಕ್ಕಮ್ಮಣ್ಣಿ. ಅರಮನೆಯೆಲ್ಲ ಖಾಲಿಯಾದರೂ ಪರಿಚಿತರು ಅರಮನೆ ಬಿಟ್ಟರೂ ಊರು ಬಿಟ್ಟು ಬಾ ಎಂದು ಬಿಳಿಗಿರಿಯ ನೆಂಟರು ಗೋಗರೆದರೂ ಹೋಗಲಿಲ್ಲ. ಅವಳು ಇಲ್ಲಿದ್ದರೂ ಸದಾಕಾಲ ತೂಕಡಿಸುತ್ತಿದ್ದಳಾಗಿ ಲೆಕ್ಕಕ್ಕಿರಲಿಲ್ಲ.

ಮಹಾರಾಜನಿಲ್ಲವೆಂದು ಯಾವಾಗ ಗುಲ್ಲೆದ್ದಿತೋ ಮಣ್ಣು ಮುಕ್ಕಿದ್ದ ಕಳ್ಳಕಾಕರು, ಪುಂಡುಪೋಕರಿಗಳು, ಮಾಂಡಳಿಕರು, ಕೇಡಿಗಳು ಚಿಗುರಿಕೊಂಡರು. ನೋಡಿದವರ ಕಣ್ಣು ಕುಕ್ಕುವಂಥ ಮೆರಗಿನ ಕನಕಪುರಿ, ಪ್ರತಿಯೊಂದು ಕಾಸಿಗೂ ಒಬ್ಬ ಕಳ್ಳನಿರುತ್ತಾನೆಂದು ನಂಬಿದ್ದ ಕನಕಪುರಿ ಅನಾಥವಾದಾಗ ಇನ್ನೇನಾದೀತು? ಕಳ್ಳಕಾಕರ ದಾಳಿ ಸುರುವಾದವು.

ಬಂಡೆಯ ಒಬ್ಬನೇ ಹತಾಶನಾಗಿ ಅರಮನೆಯ ಮುಂಗೋಣೆಯಲ್ಲಿ ತಲೆಯ ಮೇಲೆ ಕೈ ಹೊತ್ತು ಕೂತು ಬಿಟ್ಟ. ಅಲ್ಲಿಗೂ ಒಬ್ಬ ವರ್ತಕ ಓಡಿಬಂದು –

“ಸ್ವಾಮೀ ದಂಡನಾಯಕರೇ ಕೊನೇ ಪಕ್ಷ ಓಡಿ ಹೋಗುವುದಕ್ಕಾದರೂ ದಯಮಾಡಿ ನಮಗೆ ರಕ್ಷಣೆ ಕೊಡಿ.

– ಎಂದು ಕೈ ಮುಗಿಯುತ್ತಿದ್ದ.

ಯಾರು ಯಾರ ಮನೆ ಅಥವಾ ಅಂಗಡಿಗಳಿಗೆ ನುಗ್ಗಿದರು, ಏನನ್ನು ಒಯ್ದರೆಂದು ಹೇಳಕೇಳವವರು ಯಾರೂ ಇರಲಿಲ್ಲ. ಅರಮನೆಯಲ್ಲಿ ಧಾನ್ಯವಿದೆ ಎಂದು ಕೇಳಿ ಓಡಿ ಬಂದ ಜನರನ್ನು ತಡೆದು ಅನೇಕ ಬಂಟರು ತಾವೇ ಚೀಲಗಳಲ್ಲಿ ಧಾನ್ಯ ತುಂಬಿಕೊಂಡು ಕೂಲಿಗಳಂತೆ ಹೊತ್ತುಕೊಂಡು ಓಡಿಹೋಗುವ ದೃಶ್ಯ ಹಾಸ್ಯಾಸ್ಪದ ಮತ್ತು ಕರುಣಾಜನಕವಾಗಿತ್ತು. ಬೇಲಿಯೇ ಎದ್ದು ಹೊಲ ಮೇಯ್ದಂತೆ ಕನಕಪುರಿಯ ಭಂಟರೇ ಅರಮನೆಯ ಧಾನ್ಯ ಲೂಟಿ ಮಾಡಿಕೊಂಡು ಓಡಿ ಹೋಗುವಾಗ ಸಾಮಾನ್ಯ ಪ್ರಜೆಗಳು “ಏ ಕಳ್ಳರನ್ನ ಹಿಡೀರಯ್ಯಾ” ಎಂದು ಕೂಗಿದ್ದೇ ಆಯ್ತು ಬಂಟರು ಸತ್ತೆವೋ ಕೆಟ್ಟೆವೋ ಎಂದು ಶಿವಮಂದಿರ ದಾಟಿ ಓಡಿದರು!

ಪೇಟೆಯ ಪರಿಸ್ಥಿತಿ ಇನ್ನೂ ಭಯಾನಕವಾಗಿತ್ತು. ಅರಮನೆಯಾದರೆ ಕಾವಲುಗಾರರು ಅಡಗಿರಬಹುದೆಂಬ ಭಯವಾದರೂ ಇರುತ್ತಿತ್ತು. ಇಲ್ಲಿ ಅದೂ ಇರಲಿಲ್ಲ. ಈ ಸಂದರ್ಭದಲ್ಲಿ ವರ್ತಕರು ಲೂಟಿ ಮಾಡುವವರನ್ನು ಜೀವಭಯದಿಂದ ಎದುರು ಹಾಕಿಕೊಳ್ಳಲೇ ಇಲ್ಲ. ರಕ್ಷಿಸುವ ಭಂಟರೇ ಕಾಲಕಸವಾಗಿ ನೆಲ ಕಚ್ಚಿರುವಾಗ ವರ್ತಕರಾದವರು ಪ್ರತಿಭಟಿಸುವುದು ಸಾಧ್ಯವೆ? ದರೋಡೆಕೋರರು, ಬಂಟರು, ಕಳ್ಳಕಾಕರು ಅಂಗಡಿ ಮನೆಯೊಳಗೆ ನುಗ್ಗಿದರೆ ವರ್ತಕರು ಎದುರು ಕೂಡ ಸುಳಿಯಲಿಲ್ಲ. ಹೆಂಗಸರು ಮಕ್ಕಳನ್ನು ಹೊರಗಡೆ ಕೂಡು ಹಾಕಿ ಇಡೀ ಮನೆ ಅಥವಾ ಅಂಗಡಿಯನ್ನ ಅವರ ವಶಕ್ಕೊಪ್ಪಿಸಿದರು. ಪ್ರತಿರೋಧ ಬಾರದೆ ಇದ್ದುದರಿಂದ ಪ್ರೋತ್ಸಾಹಗೊಂಡ ಲೂಟಿಕಾರರು ತಾವು ದೋಚಿದ ಅಂಗಡಿ ಮನೆಗಳಿಗೆ ಬೆಂಕಿಯಿಟ್ಟು ಹೋದರು. ದಟ್ಟವಾಗಿ ಹಬ್ಬಿದ್ದ ಊರಿಗೆ ಒಂದು ಕೊಳ್ಲಿ ಸಾಕಲ್ಲ. ಕನಕಪುರಿ ಉರಿಯತೊಡಗಿತು.

ಈಗ ಲೆಕ್ಕವಿಲ್ಲದಷ್ಟು ಅಸಂಗತ ಮತ್ತು ಕರುಳಿರಿಯುವ ಸಂಗತಿಗಳು ನಡೆದವು. ತಲೆ ಬೋಳಿಸಿಕೊಂಡ, ಅಸ್ತವ್ಯಸ್ಥ ಮೇಲಂತಿಯ, ಕೆಳಗೆ ನೂಕುನುಗ್ಗಲಿಗೆ ಸಿಕ್ಕು ಹರಿದ ಧೋತ್ರವುಟ್ಟ ಜೊಂಡು ಮೀಸೆಯ ವರ್ತಕ ಮುದುಕ ಹತಾಶೆಯಲಕ್ಲಿ ಲೂಟಿಯಾದ ತನ್ನ ಅಂಗಡಿಯ ಅಷ್ಟೂ ಬಾಗಿಲುಗಳನ್ನು ತೆರೆದು ಮೂಕರೋದನ ಮಾಡುತ್ತಿದ್ದ. ಆಕಾಶದ ಕಡೆಗೆ ಕೈಮಾಡಿ ಎಲ್ಲ ಹೋಯಿತೆಂಬಂತೆ ಹಸ್ತಗಳನ್ನು ತಿರುವುತ್ತಿದಿದ. ತಂತಾನೇ ವಾದ ಮಾಡುತ್ತಿದ್ದ.

ದಿನ ನಿತ್ಯ ಅಸಂಖ್ಯಾತ ಜನ ಸಾಯುತ್ತಿದ್ದರು. ಅವರಲ್ಲಿ ದೊಡ್ಡ ರೋಗದಿಂದ ಸತ್ತವರ‍್ಯಾರೊ! ಕೊಲೆಯಾಗಿ ಸತ್ತವರು ಯಾರೋ! ಸಂಧರ್ಭ ಇಂತಿರುವಲ್ಲಿ ಶೀಕರಸೂರ್ಯ ಮಹಾರಾಜರ ಸವಾರಿ ಕನಕಪುರಿಗೆ ಚಿತ್ತೈಸಿತು!