ಶಿಖರಸೂರ್ಯ ಮತ್ತು ಸುಕ್ರರು ಕನಕಪುರಿಗೆ ಬಂದಾಗ ಸೂರ್ಯ ರೋಗಿಯಂತೆ ಬಿಳಿಚಿಕೊಂಡು ಪಡುವಣಕ್ಕೆ ಹೊರಳಿದ್ದ. ಸದಾ ಗಿಜಿ ಗಿಜಿ ಅನ್ನುತ್ತಿದ್ದ ಊರು ಜನಗಳಿಲ್ಲದೆ ಹಾಳು ಸುರಿಯುತ್ತಿತ್ತು. ಗಿರಾಕಿಗಳ ಗಡಿ ಬಿಡಿ, ಮಕ್ಕಳ ಕಿರುಚಾಟ, ಯಾವುದೂ ಇರಲಿಲ್ಲ. ನಯಿಗಳು ಕೂಡ ಬೊಗಳುವುದನ್ನು ಮರೆತು ಮುಪ್ಪಾದಂತೆ ಮುದುಡಿಕೊಂಡು ಅಂಗಡಿ ಮುಂಗಟ್ಟುಗಳ ಮುಂದೆ ಬಿದ್ದುಕೊಂಡಿದ್ದವು.

ಚೆಲ್ಲಾಪಿಲ್ಲಿಯಾಗಿ ಬಿದ್ದ ಒಣ ಮೇವು, ಹುಲ್ಲು ದಂಟಿನ ಕಸದ ರಾಶಿಯನ್ನು ತುಳಿಯುತ್ತ ಕುದುರೆಗಳು ಅರಮನೆಯ ಕಡೆಗೆ ನಡೆದವು. ಅರೆಬೆಂದ ಮನೆಗಳು, ಹಾದಿ ಬೀದಿಯ ಹೆಣಗಳು ಗಬ್ಬೆದ್ದು ನಾರುತ್ತಿದ್ದವು. ಹೆಣಗಳಂತೆ ಎದುರು ಬಂದ ಒಬ್ಬಿಬ್ಬರು ಅಲೆದಾಡುತ್ತ ದಾಟಿ ಹೋದರು. ಒಂದು ಹಣ್ಣು ಮುದುಕಿ ಶವದ ಬಳಿ ಕುಳಿತು ವಿಕಾರವಾಗಿ ಚೀರುತ್ತದ್ದ ಕೂಸಿನ ಹತ್ತಿರ ಹೋಗಿ ಎತ್ತಿಕೊಂಡಳು. ಕಣ್ಣೀರೊರೆಸಿ ಸಮಾಧಾನ ಮಾಡಲು ಪ್ರಯತ್ನಿಸಿದಳು. ಮಗು ಹಸಿದಿತ್ತು. ಅಳು ನಿಲ್ಲಿಸಲೇ ಇಲ್ಲ. ಮುದುಕಿ ಪ್ರಯತ್ನವನ್ನೂ ಬಿಡಲಿಲ್ಲ. ಮಗುವನ್ನ ರಮಿಸುತ್ತ ಆ ಈ ಕಡೆಗೆ ತಿರುಗಿದಾಗ ಶಿಖರಸೂರ್ಯನಿಗೆ ಗುರುತು ಸಿಕ್ಕಿತು – ಆ ಮುದುಕಿ ಚಿಕ್ಕಮ್ಮಣ್ಣಿ! ತಕ್ಷಣ ಶಿಖರಸೂರ್ಯ ಕುದುರೆಯನ್ನ ಅರಮನೆಯೊಳಕ್ಕೆ ಓಡಿಸಿದ!

ಅರಮನೆ ಬಿಕೋ ಎನ್ನುತ್ತಿತ್ತು. ಸದಾ ಹೋಗಿಬರುವ ಜನಗಳಿಂದ, ಬರಿಗೈಯಲ್ಲಿ ಮಹಾಪ್ರಭುಗಳನ್ನು ನೋಡಬಾರದೆಂದು ಹಣ್ಣು ತರಕಾರಿಗಳನ್ನಾದರೂ ತರುತ್ತಿದ್ದ ಬುಡಕಟ್ಟು ನಾಯಕರಿಂದ, ಲಾಭದಾಯಕ ಆಸೆಗಳಿಂದ ಹೊಳೆಯುವ ಕಣ್ಣುಗಳಿಂದ ಬರುತ್ತಿದ್ದ ವರ್ತಕ ಶ್ರೇಷ್ಠರಿಂದ, ಅರಮನೆಯ ವೈಭವವನ್ನು ಕಣ್ದಣಿಯುವಂತೆ ನೋಡಿ ನಲುಯುತ್ತಿದ್ದ ಹಟ್ಟಿ ಹಳ್ಳಿಗಳ ಸಾಮಾನ್ಯರಿಂದ ತುಂಗಿರುತ್ತಿದ್ದ ಅರಮನೆಯ ಅಂಗಳ ಈಗ ನಿರ್ಜನವಾಗಿತ್ತು. ಇವರು ಬಂದಾಗ ಮಹಾರಾಜರ ಕುದುರೆ ಹಿಡಿದುಕೊಳ್ಳಲು ತಡವಾಗಿ ಒಬ್ಬ ಸೇವಕ ಬಂದ. ಶಿಖರಸೂರ್ಯ ಒಳಗೆ ಯಾರನ್ನೂ ಬಿಡಬೇಡವೆಂದು ಸೇವಕನಿಗೆ ಹೇಳಿ ತನ್ನ ಕೋಣೆಯಲ್ಲಿ ಮರೆಯಾದ.

ಸುಕ್ರ ಗರಬಡಿದಂತೆ ಕಣ್ಣಗಲ ಮಾಡಿಕೊಂಡು ಕುದುರೆಬಿಟ್ಟು ಅರಮನೆಯ ಕಟ್ಟೆಯ ಮೇಲೆ ಕುಸಿದ. ಏನಾಯಿತೆಂದು ಯಾರನ್ನಾದರೂ ಕೇಳೋಣವೆಂದರೂ ಒಬ್ಬ ಬಂಟ ಸುಳಿಯಲಿಲ್ಲ. ಎರಡೂ ಕೈ ತಿರುವುತ್ತ ಸನ್ನೆ ಭಾಷೆಯಲ್ಲಿ ತಂತಾನೇ ಮಾತಾಡಿಕೊಳ್ಳುತ್ತ ಎರಡೂ ಕೈಗಳಿಂದ “ಏನೇನಿಲ್ಲ! ಯಾರು ಇಲ್ಲ! ಎಲ್ಲಾ ಹೋಯ್ತು” ಎಂಬಂತೆ ಆಡಿಸುತ್ತ ಕೂತ.

ಮಹಾರಾಜ ಬಂದ ಸುದ್ದಿ ತಿಳಿದೊಡನೆ ರಾಜಧಾನಿಯಲ್ಲಿ ಏನೇನು ನಡೆಯುತ್ತಿದೆ ಎಂದು ಹೇಳಲು, ಕೇಳಲು ಒಬ್ಬರಾದ ಮೇಲೆ ಒಬ್ಬರು ಅಳಿದುಳಿದ ವರ್ತಕರು ಬಂದರು. ಒಳಗೆ ಬಿಡಬಾರದೆಂಬ ಮಹಾರಾಜರ ಆಜ್ಞೆ ಕೇಳಿ ನಿರಾಸೆಯಿಂದ ವಾಪಸಾದರು. ಕೆಲವರು ತಾವು ತಂದ ಸಮಾಚಾರ ಭಾರೀ ಅಪಾಯಕಾರಿ, ಭಯಾನಕ ಎಂದು ತಿಳಿಸಿ ಹೇಳಿದರೂ ಸೇವಕ ಒಳಗೆ ಬಿಡಲಿಲ್ಲ. ಅಂತವರು ಇನ್ನಷ್ಟು ನಿರಾಸೆಯಿಂದ ನೆಲವೊದ್ದು ಸೇವಕನನ್ನು ದುರುಗುಟ್ಟಿ ನೋಡುತ್ತ ಹೋದರು.

ಬಹಳ ಹೊತ್ತಾದ ಮೇಲೆ ಮಹಾರಾಣಿ ಛಾಯಾದೇವಿಯ ಸಾನಿನ ಬಗ್ಗೆ ಹೇಳಬೇಕಾದ್ದು ಬಹಳಷ್ಟಿದೆ ಅಂತ ಅನ್ನಿಸಿ ಒಬ್ಬ ಸೇವಕ ಧೈರ್ಯ ಮಾಡಬೇಕೆಂದ. ಅಷ್ಟರಲ್ಲಿ ವರ್ತಕರು ಬಂದುದರಿಂದ ಅನುಕೂಲವಾಯಿತೆಂದು ಅದೇ ನೆಪದಲ್ಲಿ ಮೆಲ್ಲಗೆ ಒಳಗೆ ಪ್ರವೇಶಿಸಿದ. ಮಹಾರಾಜರು ಎಲ್ಲಿದ್ದಾರೆಂದು ಗೊತ್ತಾಗಲಿಲ್ಲ. ಕಿಟಕಿಯ ಬಾಗಿಲು ಮುಚ್ಚಿದ್ದುದರಿಂದ ಹೊರಗಿನ ಬೆಳಕು ಅಷ್ಠಗಿ ಪ್ರವೇಶಿಸುತ್ತಿರಲಿಲ್ಲ. ಒಳಗೆ ಗಾಳಿಯೂ ಇರಲಿಲ್ಲ. ಸ್ವಲ್ಪ ಹೊತ್ತು ಹಾಗೇ ನಿಂತ ಮೇಲೆ ಗೊತ್ತಾಯಿತು: ಪೀಠದಲ್ಲಿ ಮಹಾರಾಜರು ಕೂತು ಹಾಗೇ ಒರಗಿದ್ದರು! ಹಗಲುಹೊತ್ತಿನಲ್ಲಿ ಮಹಾಪ್ರಭುವೆಂದೂ ಹೀಗೆ ಕೈ ಕಟ್ಟಿಕೊಂಡು ಕೂತವರಲ್ಲ. ಚಲನಶೀಲನಾಗಿ ಅದು ಇದರಲ್ಲಿ ತೊಡಗಿ ಅವರಿವರನ್ನು ಬಯ್ಯುತ್ತ ಇಲ್ಲವೆ ತಕರಾರು ತೆಗೆಯುತ್ತ ಪಾದರಸದಂತೆ ಅತ್ತಿತ್ತ ಹರಿದಾಡುತ್ತಿದ್ದ ಮಹಾಪ್ರಭು ಹೀಗೆ ಕೈ ಕಟ್ಟಿಕೊಂಡು ಕತ್ತಲಲ್ಲಿ ಕೂತಿದ್ದನ್ನ ನೋಡಿ ಸೇವಕನ ಕಣ್ಣು ಒದ್ದೆಯಾದವು.

ಸೇವಕ ಮೆಲ್ಲಗೆ ಹೋಗಿ ಕಿಟಕಿ ಬಾಗಿಲು ತೆರೆದ. ಕಣ್ಣ ಮೇಲೆ ಬೆಳಕು ಬಿದ್ದು ಎಚ್ಚರಾಯ್ತು. ಕಣ್ಣು ತೆರೆದ. ಎದುರಿಗೆ ಕಿಟಕಿಯಲ್ಲಿ ಸ್ವಚ್ಛವಾದ ನೀಲಿ ಕಂಡಿತು. “ಈ ಆಕಾಸ ಅರ್ಥವಾಗೋದೇ ಇಲ್ಲ!” ಎಂದು ತಂತಾನೇ ಗೊಣಗುತ್ತ ಆಕಳಿಸಿದ. ಆಮೇಲೆ ಎದ್ದು ಕೈ ಹಿಂದೆ ಕಟ್ಟಿಕೊಂಡು ಕೋಣೆಯಲ್ಲಿ ಮೂಲೆಯಿಂದ ಮೂಲೆಗೆ ಅಡ್ಡಾಡತೊಡಗಿದ. ಸೇವಕ ಮೆಲ್ಲಗೆ ಹೇಳಿದ:

“ಮಹಾಪ್ರಭು ಮಹಾರಾಣಿಯವರು…..”

“ಹುಚ್ಚುಮಗನ ಆಕಾರ ನೋಡಿ ಹೌಹಾರಿ ಸತ್ತಳು. ಅದೇ ತಾನೆ? ಹೊರಡು”

ವರ್ತಕರು ದರ್ಶನಕ್ಕೆ ಬಂದಿದ್ದಾರೆ”

“ಕಾದಿರಲಿಕ್ಕೆ ಹೇಳು”

ಎಂದು ಹೇಳಿ ತಕ್ಷಣ “ಬೇಡ ಈಗಲೇ ಬರುತ್ತೀನಿರು” ಎಂದು ಹೇಳಿದ.

ಸೇವಕ ಹೋದ ಮೇಲೆ ಕೋಣೆಯ ಇನ್ನೊಂದು ಬಾಗಿಲಿನಿಂದ ಹೊರಬಂದ. ಯಾರೂ ಇರಲಿಲ್ಲ. ನೇರ ದೇವಾಲಯಕ್ಕೆ ಹೋದ.

“ದೇವಸ್ಥಾನದಲ್ಲಿ ತಾನು ಭೇಟಿಯಾಗಬೇಕಾದವರು ಯಾರಿದ್ದಾರೆ? ದೇವರಂತೂ ಇಲ್ಲ!”

“ದೇವರಿಲ್ಲವೆಮದರೆ ಉಳಿದವರು ಯಾರು?”

“ನಾನೇ!”

ಎಂದುಕೊಂಡು ಮತ್ತೆ ಅರಮನೆಯ ತನ್ನ ಕೋಣೆಗೇ ಬಂದ. ಸೇವಕ ಪುನಃ ಬಂದು,

“ವರ್ತಕರು ಕಾಯುತ್ತಿದ್ದಾರೆ ಪ್ರಭು”

– ಎಂದು ಮತ್ತೆ ನೆನಪು ಮಾಡಿಕೊಟ್ಟ.

‘ಊರು ಕೊಳ್ಳೆ ಹೋದ ಮೇಲೆ ತಾನೇನಾದರೂ ಮಾಡುವುದು ಉಳಿದಿದೆಯೆ? ಏನಿಲ್ಲ’ವೆಂದು ತಾನೇ ಉತ್ತರಿಸಿಕೊಂಡ. ತನ್ನ ಆಜ್ಞೆಗಳನ್ನು ಕೇಳುವವರು ಯಾರಿದ್ದಾರೆ? “ಕೇಳಿ ಯಾರನ್ನ ಮತ್ತು ಏನ್ನ ಕಾಪಾಡಬೇಕಾದ್ದಿದೆ? ಆಜ್ಞೆ ಕೊಡೋದಕ್ಕೆ ಮಹಾರಾಜನೆಲ್ಲಿದ್ದಾನೆ? ರಾಜನಿದ್ದಿದ್ದರೆ ಪುಡುಗೋಶಿ ಪುಂಡು ಪೋಕರಿಗಳು ಬಂದು ಅರಮನೆ ಲೂಟಿ ಮಾಡುತ್ತಿದ್ದರೆ?”

“ಮಹಾರಾಜನಿಲ್ಲ ಅಂತ ಹೇಳು”

– ಎಂದು ಹೇಳಿ ಸುಮ್ಮನಾದ. ಸೇವಕ ಮಳಮಳ ಶಿಖರಸೂರ್ಯನನ್ನೇ ನೋಡಿ ಹೆದರಿ ಅವಸರದಿಂದ ಮರೆಯಾದ.

ಶಿಖರಸೂರ್ಯ ಕನಕಪುರಿಯ ಹೃದಯ ದೇವತೆಯೆಂದು ತನ್ನನ್ನು ತಾನೇ ನಂಬಿದವನು. ವರ್ತಕರ ಮೇಲೆ ಚಿನ್ನದ ಮಳೆಗರೆದವನೆಂದೇ ವರ್ತಕರು ಹೊಗಳಿದ್ದರು. ಹಾಗೆ ಹೊಗಳಿದಾಗ ಇವನೂ ಹೌದೆಂಬಂತೆ, ಪವಾಡ ಮೆರೆದ ದೇವರಂತೆ ಅಭಿನಯಿಸಿದ್ದ ಪ್ರಜೆಗಳ ಚಟುವಟಿಕೆ, ನಡಾವಳಿಗಳ ಮೇಲೆ ಮಾತ್ರವಲ್ಲ; ಅವರ ಮನಸ್ಸಿನ ಭಾವನೆಗಳನ್ನು ಕೂಡಾ ನಿಯಂತ್ರಿಸುವ ದೈವದಂತೆ ಅಭಿನಯಿಸಿದ್ದೂ ಇದೆ. ಇಂಥ ಭಾವನೆ, ಹೊಗಳಿಕೆಗಳಿಗೆ ಅವನು ಒಗ್ಗಿಕೊಂಡಿದ್ದ ಮತ್ತು ಅವುಗಳಿಂದ ತೃಪ್ತನಾಗಿದ್ದ.

ಅದೆಲ್ಲವನ್ನು ಈಗ ಕಸಿದುಕೊಂಡು ತನ್ನನ್ನು ಬರಿಗೈ ಭಿಕ್ಷುಕನನ್ನಾಗಿ ಮಾಡಿದ್ದನ್ನು ಮಾನಸಿಕವಾಗಿ ಇನ್ನೂ ನಂಬಲಾರದವನಾಗಿ ನಿಂತಿದ್ದ. ಸಂಬಂಧಿಕರು ಸತ್ತಿದ್ದರು. ಮಗ, ಹೆಂಡತಿ, ಪ್ರೇಯಸಿ – ಒಬ್ಬರಾದ ಮೇಲೊಬ್ಬರು ಹೋಗಿದ್ದರು. ವರ್ತಕರು ನಾಶವಾಗಿದ್ದರು, ಇಲ್ಲವೆ ವಲಸೆ ಹೋಗಿದ್ದರು. ಜನ ಕಂಗಾಲಾಗಿ ಬೀದಿಗೆ ಬಿದ್ದು ಅರಮನೆಯನ್ನೇ ದೋಚಿದ್ದರು. ಸೇವಕರು ಸಿಕ್ಕದ್ದನ್ನು ತಗೊಂಡು ಪರಾರಿಯಾಗಿದ್ದರು. ಜೀವಮಾನದಲ್ಲೇ ಮೊಟ್ಟ ಮೊದಲ ಸಲ ಭಯವಾಯಿತು. ತಾನು ಈ ನಗರಕ್ಕೆ ಸಂಬಂಧಪಟ್ಟವನಲ್ಲ ಎನ್ನಿಸಿತು. ಇಂಥ ನಗರಕ್ಕೆ ತಾನು ವಾರಸುದಾರನೆಂಬುದೂ ಹುಸಿ. ತಾನಿದನ್ನು ಕೆಲವು ದಿನ ಆಳಿದನೆಂಬುದು ಹುಸಿ.

ಊರ ತುಂಬ ಭೂತಗಳು, ನೆರಳೆದ್ದು ಬಂದಂಥ ಭೂತಗಳು! ಬೆಂಕಿಯೇ ಆಕಾರಗೊಂಡಂಥ ಭೂತಗಳು. ಸೇಡಿಗಾಗಿ ಕಾದ ಭೂತಗಳು ಅಸ್ಥಿಪಂಜರಗಳ ಭೂತಗಳು!

ಎಲ್ಲವೂ ಎಲ್ಲರೂ ತನ್ನಿಂದ ದೂರವಾಗಿ ದುರ್ಬಲನಾಗಿ ಏಕಾಂಗಿಯಾಗಿರುವಂತೆ ಅನ್ನಿಸಿತು. ಕಣ್ಣು ಮುಚ್ಚಿ ಪೀಠದಲ್ಲಿ ಕುಸಿದ.