ಕಂಬಾರರು ಕೆಲವು ದಶಕಗಳ ಹಿಂದೆ ಒಂದು ರೇಡಿಯೋ ಸಂದರ್ಶನದಲ್ಲಿ ಹೇಳಿದ್ದು ನನಗಿನ್ನೂ ಚೆನ್ನಾಗಿ ನೆನಪಿದೆ: “ನಾನು ಕವಿಯಾದರೆ ಸಿಲಪ್ಪದಿಗಾರಂನ ಕವಿಯ ಹಾಗಾಗಬೇಕು.”

ಅವರ ಈ ಹೊಚ್ಚಹೊಸ ಕೃತಿ ಆ ಹೆಬ್ಬಯಕೆಯ ಮಾನಾಡಿ ಫಸಲು. ವಿಚಿತ್ರವೆಂದರೆ ಕಂಬಾರರು ವ್ಯಾಸ, ವಾಲ್ಮೀಕಿ, ಪಂಪ-ರನ್ನಾದಿಗಳ ಮೇರುಕೃತಿಗಳ ಬದಲಿಗೆ ದ್ರಾವಿಡ ಸಂಸ್ಕೃತಿಯ ಮೂಲಮಾತೃಕೆಯಂತಿರುವ ಇಳಂಗೊ ಅಡಿಗಳ ಕೃತಿಯನ್ನು ತಮ್ಮ ಮಾದರಿಯನ್ನಾಗಿ ಹೆಸರಿಸಿದ್ದು. ಅವರ ಸ್ಫೂರ್ತಿಯ ಜಲಕಣ್ಣಿರುವುದು ಬಹುಪಾಲು ಮಂದಿ ಯಾವುದನ್ನು ಭಾರತೀಯ ಅಥವಾ ಕನ್ನಡ ಸಂಸ್ಕೃತಿಯ ಪ್ರಧಾನ ಧಾರೆಯೆಂದು ತಿಳಿದಿದ್ದಾರೋ ಅದರಲ್ಲಲ್ಲ. ರಾಷ್ಟ್ರೀಯವಾದಿ ಸಾಂಸ್ಕೃತಿಕ ಚೌಕಟ್ಟಿನ ಹೊರಗೆ ದೂಡಲ್ಪಟ್ಟಿರುವ ಮಹಾನ್‌ಆರ್ಯೇತರ ಪರಂಪರೆಗಳ ಸ್ಮೃತಿಕೋಶಗಳಿಂದ ಅವರು ತಮ್ಮ ಸ್ಫೂರ್ತಿ ಮತ್ತು ದ್ರವ್ಯಗಳನ್ನು ಪಡೆದುಕೊಳ್ಳುತ್ತಾರೆಂಬುದು ಇದರಿಂದ ಸೂಚಿತವಾಗುತ್ತೆ.

“ಸಾಗರಕ್ಕೆ ಮೇರೆಯಂಟಲ್ಲದೆ ನದಿಗೆ ಮೇರೆಯುಂಟೆ?” – ಇದು ಬಸವಣ್ಣನವರ ವಚನವೊಂದರ ಮಾತು. ದಕ್ಷಿಣದ ಜೀವನದಿಯಾದ ಕಾವೇರಿಗೂ ಸಿಲಪ್ಪದಿಕಾರಂಗೂ ಅವಿನಾ ನಂಟು. ಕಾವೇರಿ ಆ ಮಹಾಕಾವ್ಯದ ಬಹುಮುಖ್ಯ ಭಾಗಗಳಲ್ಲಿ ಜುಳುಜುಳು ಹರಿಯುತ್ತಿರುತ್ತೆ. ಜೊತೆಗೆ ಅದರ ಒಟ್ಟಂದವೇ ಕಾವೇರಿಯ ಹಾಗೆ: ಹಲಬಗೆಯ ಕತೆಗಳನ್ನು, ಸ್ಮೃತಿಗಳನ್ನು, ಶ್ರುತಿಗಳನ್ನು, ಕವಿತೆಗಳನ್ನು, ಗಾದೆ-ನಾಣ್ನುಡಿಗಳನ್ನು, ಕುಣಿತ-ಭಣಿತಗಳನ್ನು, ಕಲೆಗಳನ್ನು, ಹೊತ್ತು-ಗೊತ್ತುಗಳನ್ನು ತನ್ನ ಫಲವತ್ತಾದ ಬಸಿರಿನೊಳಕ್ಕೆ ಸೆಳೆದುಕೊಳ್ಳುತ್ತಾ ಅದು ಮುಂಬರಿಯುತ್ತೆ.

ಅಂದಮಾತ್ರಕ್ಕೆ ಈ ಎರಡು ಕೃತಿಗಳ ನಡುವಿನ ಮಹದಂತರಗಳನ್ನು ಮರೆಯುವಂತಿಲ್ಲ. ಯಾಕಂದರೆ ಅವುಗಳ ಸೆಳವುಗಳು ಬೇರೆಬೇರೆಯೇ. ಎನಿತಪಾಯ ಕೋಟಿಗಳಿವೆಯೋ ಅನಿತಕ್ಕೂ ಗೇಹವಾದ ದೇಹ, ದೇಶ, ಕಾಲಗಳಾಚೆಗಿನ ಲೋಕಪರಾಙ್ಮುಖವಾದ ಜೈನ ದೃಷ್ಟಿ ಸಿಲಪ್ಪದಿಗಾರಂನ ಹೃದಯದಲ್ಲಿದೆ. ‘ಶಿಖರಸೂರ್ಯ’ದಲ್ಲಿ ಹಾಸುಹೊಕ್ಕಾಗಿ, ಅಲ್ಲಿನ ಎಲ್ಲವನ್ನೂ ಈಕ್ಷಿಸುವ ತಾಯಿಧರ್ಮದ ನೋಟ ಲೋಕಮುಖಿಯಾಗಿ ಇಹ-ಪರ, ಕೇಡು-ಒಳಿತು, ಕತ್ತಲು-ಬೆಳಕು ಇವೇ ಮುಂತಾದ ಎಲ್ಲ ದಂದುಗಳನ್ನೂ, ದ್ವಂದ್ವಗಳನ್ನೂ ಹೆತ್ತು ಹೊತ್ತು ಪೊರೆಯುವಂಥದು.

ಕಂಬಾರರ ಹಾಗೆ ಕೃತಿಯಿಂದ ಕೃತಿಗೆ ಬೆರಗುಗೊಳಿಸುವ ಬೆಳವಣಿಗೆ ತೋರುತ್ತಾ ಹೋದ ಕವಿಗಳು ಕನ್ನಡದಲ್ಲಿ ಬೆರಳೆಣಿಕೆಗೆ ಸಿಗುವಷ್ಟು ವಿರಳ. ಅವರ ಹಾಗೆ ತಮ್ಮ ಕೃತಿಗಳ ಮೂಲಕ ಒಂದು ಸುಸಂಬದ್ಧವಾದ ಮಿಥಿಕ ಸಂಕೇತಗಳ ಏರ್ಪಾಡನ್ನು ಕಟ್ಟಿಕೊಂಡವರು ಇನ್ನೂ ಅಪರೂಪ. ಅವರ ಕೃತಿಗಳಲ್ಲಿ ಚಿತ್ರಿತವಾಗುವ ನೋವು-ನಲಿವುಗಳು ಅವರ ಪ್ರತಿಭೆ ಕಟ್ಟಿದ ಒಂದು ಮಿಥಿಕ ಮಾಯಾಲೋಕದ ಗಾಳಿಯಲ್ಲಿ ಉಸಿರಾಡುತ್ತವೆ. ಆ ಲೋಕದ ಕೇಂದ್ರವಾದ ಶಿವಾಪುರವೆಂಬುದು ಕೇವಲ ಗತದ ಹಳವಂಡವಲ್ಲ, ಅನಾಗತದ, ಕಾಲಾತೀತದ ಒಂದು ಶಿವಾಂಡ ಕೂಡ. ಅಲ್ಲಿನ ಫಲವಂತಿಕೆಯ ಮಣ್ಣಲ್ಲಿ ಬೇರೂರಿದ ಕರ್ತಾರಶಕ್ತಿಯ ರುದ್ರವಿಲಾಸ, ಶಿವಕರುಣೆಗಳು ಇತರ ಕಾಲದೇಶಗಳನ್ನು, ವರ್ತಮಾನದ, ತತ್‌ಕ್ಷಣದ ತುಮುಲಗಳನ್ನು ಕೆಲವು ಸಲ ಪ್ರತಿಮೆಗಳ ಮೂಲಕ, ಕೆಲವು ಸಲ ಸತ್ವಾತಿಶಯಗಳ ಮೂಲಕ ಆವರಿಸಿಕೊಳ್ಳುವದರಿಂದ ವಿಶಿಷ್ಟವಾದ ಸಾಧಾರಣೀಕರಣವನ್ನು ಅವರ ಕೃತಿಗಳು ಪಡೆದುಕೊಳ್ಳುತ್ತವೆ. ಈ ಚಮತ್ಕಾರದ ಒಂದು ಮುಖ್ಯ ಪರಿಣಾಮ: ವ್ಯಕ್ತಿಗತ ಸಾಂಕೇತಿಕ ಭಾಷೆಯ ಮೂಲಕ ಮಾತಾಡುವ ಪಡುವಣ ನಾಡುಗಳ ಯೇಟ್ಸ್‌, ರಿಲ್ಕೆ ಇತ್ಯಾದಿ ಆಧುನಿಕ ಕವಿಗಳಲ್ಲಾಗುವಂಥ ಗೋಜಲು ಕಂಬಾರರ ಕೃತಿಗಳಲ್ಲಿ ಉಂಟಾಗುವುದಿಲ್ಲ. ಕೆಳಗೇಳು ಮಂಜಿನ ನಗರಗಳಿದ್ದರು ಮೇಲಿನ ಆವಿಯ ಹಗುರ ಅವರ ಕೃತಿಗಳಿಗೆ ಸರಳತೆಯ ಲೀಲಾಜಾಲದ ಲೇಪವನ್ನು ಕೊಡುತ್ತದೆ. ಅವರ ಕೃತಿಗಳನ್ನು ಸವಿಯುವುದಕ್ಕೆ ಘನಘೋರ ಪಾಂಡಿತ್ಯದ ಆಶ್ರಯ ಬೇಕಿಲ್ಲ. ಅದರ ಸವಿ ಸುಲಿದ ಬಾಳೆಯ ಹಣ್ಣಿನಂತೆ.

ಕಂಬಾರರ ಕೃತಿಗಳಲ್ಲಿ ಇನ್ನೂ ಒಂದು ವಿಶೇಷವಿದೆ: ಅವರ ಕಾವ್ಯ, ನಾಟಕ, ಕಾದಂಬರಿಗಳ ನಡುವಣ ಕಾಳಜಿ ಮತ್ತು ವಿವರಗಳ ಒಳನಂಟಿನಿಂದುಂಟಾಗುವ ಅಖಂಡತೆ; ಪರಸ್ಪರಾವಲಂಬಿಯಾಗುವ ಚಿತ್ರಗಳ, ಬಿಂಬಗಳ, ದನಿಗಳ, ಮಾರ್ದನಿಗಳ ಅನುರಣನಗಳ ಮೇಳ. ಎಲ್ಲಿ ಸವಿದರೂ ಕಬ್ಬಿನ ರುಚಿ ಅದೇ ಆಗಿರುವಂತೆ ಕಂಬಾರರ ಎಲ್ಲ ಕೃತಿಗಳ ಬಿಡಿಭಾಗಗಳ ವಿವಿಧ ರುಚಿಗಳ ನಡುವೆ ಒಂದು ತೆರನ ಏಕರಸಾತ್ಮಕತೆಯಿದೆ.

ಸಾವಯವ ಸಂಬಂಧವುಳ್ಳ ಸಂಸ್ಕೃತಿಯೊಂದು ಹೊರಗಿನ ಹಲ್ಲೆಗಳಿಂದ ದಿಕ್ಕಾಪಾಲಾಗುವುದರ ದುರಂತ ಕಂಬಾರರ ಕೃತಿಗಳಲ್ಲಿ ಮೊದಲಿನಿಂದ ಚಿತ್ರಿತವಾದಂತೆ ಮೇಲುನೋಟಕ್ಕೆ ತೋರುತ್ತದೆಯಾದರೂ, ಅದರಲ್ಲಿ ನಿಜವಾಗಿಯೂ ಇರುವುದು ಸಂಸ್ಕೃತಿಯೊಂದು ತನ್ನೊಳಗಿನ ಹುಳುಕುಗಳಿಂದ ಪತನವಾಗುವುದರ ಚಿತ್ರಣ. ನಾಶವಾದ ಜನಾಂಗಗಳ ಸ್ವತಂತ್ರ ಇಚ್ಛಾಶಕ್ತಿಯನ್ನು ಇಲ್ಲವೆನ್ನುವ ಇಂದಿನ ಬಹುತೇಕ ಪ್ರಗತಿವಾದೀ ಸಿದ್ಧಾಂತಗಳಿಗಿದು ಹೊರಗು. ಕಂಬಾರರ ‘ಬೆಳ್ಳಿಮೀನು’ವರೆಗಿನ ಕೃತಿಗಳು ಈ ಅನುಭವದ ದುರಂತವನ್ನು ಉದ್ವಿಗ್ನತೆಯ ಭಾಷೆಯಲ್ಲಿ ಪ್ರಧಾನವಾಗಿ ಬಿಡಿಸಿವೆ. ಆದರೆ ಆನಂತರದ ಕೃತಿಗಳ ಭಾಷೆ ಹೆಚ್ಚು ಹೆಚ್ಚು ನಿರುದ್ವಿಗ್ನವೂ, ಶಾಂತವೂ ಆಗತೊಡಗಿತು. ಹಾಗೆಯೇ ದುರಂತದ ಅಂಶವೂ ಕಮ್ಮಿಯಾಯಿತು. ಈ ಬೆಳವಣಿಗೆಗಳ ಪರಿಣಾಮ ಗೋಚರವಾಗುವುದು ‘ಮಹಾಮಾಯಿ’ ಮತ್ತು ‘ಚಕೋರಿ’ಗಳಲ್ಲಿ. ಅವರ ಇತ್ತೀಚಿನ ಅಪ್ರಕಟಿತ ಕವಿತೆಗಳಲ್ಲೂ ಇದನ್ನು ನಾನು ಕಂಡಿದ್ದೇನೆ. ಇದೇ ಸಮಯದಲ್ಲಿ ಅನೇಕಾಂತವಾದಿಯಾದ, ಬಹುಮುಖಿಯಾದ, ಹಲರಂಗಿನ ಎಪಿಕ್‌ ವ್ಯಾಪಕತೆಯ ರಚನೆ ಅವರ ಕೃತಿಗಳಿಗೆ ಒದಗಿ ಬಂತು. ಈ ವಿಸ್ಮಯಕಾರೀ ಬೆಳವಣಿಗೆಯ ಒಂದು ದೊಡ್ಡ ಸಾಧನೆಯಾಗಿ ‘ಶಿಖರಸೂರ್ಯ’ ಕಾಣುತ್ತಿದೆ.

‘ಚಕೋರಿ’ ಅಪಾರ ನಾಟ್ಯಶಕ್ತಿಯುಳ್ಳ ಮೋಹಕ ಕೃತಿ. ಚಂದಮುತ್ತನೆಂಬ ಕಲಾಕಾರನ ಉತ್ಕಟ ಹೋರಾಟವನ್ನು, ಆಖೈರಿನ ದುರಂತವನ್ನು ಅದು ಬೆಳದಿಂಗಳ ಕನ್ನಡದಲ್ಲಿ ರೇಖಿಸಿದೆ. ಅಲ್ಲಿನ ದುರಂತ ಈಸ್ಕಲಸ್‌ನ ನಾಟಕಗಳ ದುರಂತದ ಹಾಗೆ ಕ್ರಿಯೆಯ ಒಳತರ್ಕದಿಂದಾಗಲೀ, ಇಳಂಗೋ ಅಡಿಗಳ ಕೃತಿಯ ಅಡಿಪಾಯವಾಗಿರುವ ಜೈನಶಾಸನದ ಕರ್ಮಸಿದ್ಧಾಂತದ ಹೊರತರ್ಕದಿಂದಾಗಲೀ ಬಾರದೆ ಕೃತಿಕಾರರ ಸ್ವಾತಂತ್ರ್ಯದಿಂದ ಬಂದಂತೆ ತೋರುತ್ತೆ. ಚಕೋರಿಯ ಕತೆ ಅಲ್ಲಿಗೇ ಮುಗಿದಿದ್ದರೆ ಅದೊಂದು ಸೂಕ್ಷ್ಮ ಕೊರತೆಯಾಗುತ್ತಿತ್ತೇನೊ. ಆದರೆ ಅ ಕತೆ ಅಲ್ಲಿಗೆ ಮುಗಿಯದೇ ‘ಶಿಖರಸೂರ್ಯ’ದಲ್ಲಿ ಮುಂದುವರಿದು ಇನ್ನೊಂದು ವಿನ್ಯಾಸ ಪಡೆದುಕೊಂಡಿದೆ. ‘ಚಕೋರಿ’ ಈಗ ‘ಶಿಖರಸೂರ್ಯ’ದ ಪೂರ್ವಪೀಠಿಕೆಯಾಗಿದೆ. ಹೀಗಾಗಿ ಈ ಎರಡೂ ಕೃತಿಗಳು ಕಂಬಾರರ ಒಟ್ಟು ಕೃತಿಗಳ ಹಿನ್ನೆಲೆಯಲ್ಲಿ ಎರಡೂ ಕೃತಿಗಳಲ್ಲಿ ಅಂತರ್ಗತವಾಗಿದ್ದು, ಎರಡನ್ನೂ ದಾಟಿದ ಮೂರನೆಯ ಅರ್ಥವನ್ನು ಹೊರಡಿಸುತ್ತವೆ.

‘ಚಕೋರಿ’ಯ ರಚನೆ ದುರಂತಪ್ರಧಾನ. ‘‘ಶಿಖರಸೂರ್ಯ’’ನದು ಎಪಿಕ್‌ತರಹದ್ದು. ದುರಂತ ನಿಜದ ಬಿಡಿನೋಟ. ಆದರೆ ಮಹಾಕಾವ್ಯಕ್ಕೆ ಎಲ್ಲವನ್ನೂ ಹೇಳಬೇಕೆಂಬ ಛಲ. ದುರಂತದ್ದು ಏಕಾಂತವಾದವಾದರೆ ಮಹಾಕಾವ್ಯದ್ದು ಅನೇಕಾಂತವಾದ. ಆದ್ದರಿಂದಲೇ ಮಹಾಕಾವ್ಯಗಳು ನಾಗರೀಕತೆಗಳ ನಡೆ-ನುಡಿಗಳು ಹದಕ್ಕೆ ಬರುವ ತನಕ ಜನ್ಮತಾಳಲಾರವೆಂದು ಟಿ.ಎಸ್‌. ಎಲಿಯಟ್ ತನ್ನೊಂದು ಬರಹದಲ್ಲಿ ವಾದಿಸಿದ್ದು. ಇನ್ನೊಂದು ವ್ಯತ್ಯಾಸ: ತುಮುಲಗಳು ದುರಂತದೃಷ್ಟಿಯ ಹುರುಳು; ತುಮುಲಗಳನ್ನು ಹೊಟ್ಟೆಯಲ್ಲಿ ಹಾಕಿಕೊಂಡ ಒಳಗೊಳ್ಳುವಿಕೆ ಮಹಾಕಾವ್ಯದ ತಿರುಳು. ಹಾಗಿರದ ಮಹಾಕಾವ್ಯಗಳು ಗಾತ್ರದಲ್ಲಿ ಮಾತ್ರ ಮಹಾ ಆಗುತ್ತವೆ.

ಮಹಾಕಾವ್ಯದ ಮಹದಾಶೆಯನ್ನು ‘ಶಿಖರಸೂರ್ಯ’ ಸಾಧಿಸುವ ಬಗೆಯೂ ವಿಶೇಷ. ಮಹಾಕಾವ್ಯದ ರಚನೆಯುಳ್ಳ ಕೃತಿಗಳು ಕಾಲದೇಶಬದ್ಧ ವಿವರಗಳನ್ನು ತಮ್ಮ ವರ್ಣನೆ-ಕಥನಗಳ ಮೂಸೆಯಲ್ಲಿ ತರಲೆಳೆಸುತ್ತವೆ. ಭಾವಗೀತೆಯ ಹಾಗೆ ದುರಂತ ಕೃತಿ ವಿವರಗಳನ್ನು ಕರಗಿಸಿ, ಕುದಿಸಿ ಸಾಂಕೇತಿಕತೆಯ ಪಾಕವನ್ನು ತಯಾರಿಸುತ್ತದೆ. ಒಂದು ವಿಕಾಸದ ಹಾದಿ, ಇನ್ನೊಂದು ಸಂಕೋಚದ ಹಾದಿ.

ಇಳಂಗೋ ಅಡಿಗಳ ಕೃತಿ ತಮಿಳಿನ ಮೂರು ಮಹಾನ್‌ ನಗರಕೇಂದ್ರಿತ ಸಾಮ್ರಾಜ್ಯಗಳ ಕತೆ. ಬೆಟ್ಟ, ಬಯಲು, ಕಾಡು-ಮೇಡು, ನದಿ ಮತ್ತು ಕಡಲದಂಡೆಗಳು, ಬಂಜರು ಮತ್ತು ಹೊತ್ತು-ಬಿತ್ತ ನೆಲ ಇತ್ಯಾದಿ ಗೊತ್ತಿನ ಬಗೆಗಳಲ್ಲಿ; ಅಲೆಮಾರಿ ಗೋವಳಿಗರ, ನೆಲೆನಿಂತ ಬೇಸಾಯಗಾರರ, ಕಾಡಿನ ಜನರ, ಊರು ಪಟ್ಟಣಗಳ ಹಲಬಗೆಯ ನಡೆಗಟ್ಟುಗಳ ಹಲವು ಹೊತ್ತುಗಳ ಚೌಕಟ್ಟುಗಳಲ್ಲಿ ಅಲ್ಲಿನ ಪಾತ್ರಗಳು, ಘಟನೆಗಳು ಹಬ್ಬಿ ಬೆಳೆಯುತ್ತವೆ. ಇದೇ ರೀತಿಯಲ್ಲಿ ತೊಲ್ಸ್ತೋಯ್‌ನ ‘ಕದನ ಮತ್ತು ಶಾಂತಿ’ ಕಾದಂಬರಿಯ ಕಥನದ ಹರಹು ಹೊತ್ತು-ಗೊತ್ತುಗಳೆರಡರಲ್ಲೂ ಹಬ್ಬಿಕೊಳ್ಳುವ ಬೆರಗನ್ನು ಇ.ಎಂ. ಫಾರ್ಸ್ಟರ್‌ತನ್ನ ವಿಶ್ಲೇಷಣೆಯಲ್ಲಿ ತೋರಿಸಿದ್ದಾನೆ. ಒಟ್ಟಿನಲ್ಲಿ ಕಾಲ-ದೇಶಗಳ ಆಯಾಮಗಳೆರಡರಲ್ಲೂ ಘಟನೆಗಳನ್ನು ಗ್ರಹಿಸುವುದು ಮಹಾಕಾವ್ಯದ ಪಾರಂಪರಿಕ ಜವಾಬುದಾರಿ. ‘ಶಿಖರಸೂರ್ಯ’ ಕ್ರಮಿಸುವ ಹಾದಿ ಇಂತಹದಲ್ಲ. ಈ ಕೃತಿಯ ಹಾದಿ ಹೆಚ್ಚು ಮಿಥೋಪೋಯಿಕ್‌ಆಗಿದ್ದು ಓವಿದ್‌ನ ‘ಮೆಟಪಾರ್ಫಸಿಸ್‌’ ಅನ್ನು ಅಥವಾ ಷೇಖಾ ಸಾದಿಯ ‘ಗುಲಿಸ್ಥಾನ್‌’ ಅನ್ನು ಹೋಲುವಂಥದ್ದು. ಇಲ್ಲಿ ಹಲಬಗೆಯ ಪಾತ್ರ-ಘಟನೆಗಳನ್ನು ಹಿಡಿದಿರುವುದು ಸತ್ವಾತಿಶಯಗಳ ರೂಪದಲ್ಲಿ.

ಈ ತೆರನ ಹಿಡಿತವನ್ನು ಸಾಧಿಸಲು ಕಂಬಾರರು ತಮ್ಮ ಕಥನದ ಅಗತ್ಯದಂತೆ ವಾಸ್ತವತಾವಾದಿಯಲ್ಲದ ಒಂದು ಸಾಂಕೇತಿಕ ಚರಿತ್ರೆ-ಭೂಗೋಳವನ್ನು ತಮ್ಮ ಈ ಹಿಂದಿನ ಕೃತಿಗಳ ಭಿತ್ತಿಯಲ್ಲಿ ಚಲ್ಲುವರಿದಿರುವ ಬಿಡಿವಿವರಗಳನ್ನು ಒಟ್ಟುಗೂಡಿಸಿ ಕಟ್ಟಿದ್ದಾರೆ. ಈ ಕೆಲಸವನ್ನು ಎಷ್ಟು ಅಚ್ಚುಕಟ್ಟಾಗಿ ಮಾಡಿದ್ದಾರೆಂದರೆ ಈ ಕೃತಿಯನ್ನು ಓದಿ ಸವಿಯಲು ಇಂದಿನ ಕೃತಿಗಳ ಪರಿಚಯವಿಲ್ಲದಿದ್ದರೂ ನಡೆಯುತ್ತದೆ. ಈ ಜಗತ್ತಿನ ಒಂದು ತುದಿ ಎಲ್ಲ ನಡೆಗಟ್ಟುಗಳ, ನಾಗರಿಕತೆಗಳ ತಾಯಿ ಬಸಿರಿನಂತಿರುವ ಶಿವಾಪುರದ ಗುಡ್ಡ; ಇನ್ನೊಂದು ತುದಿ ಎಲ್ಲವನ್ನೂ ತಿಂದು ತೇಗುವ ಕನಕಪುರಿ. ಇವೆರಡರ ನಡುವೆ ಘಟನೆಗಳ ಕಾರ್ಯಕಾರಣದೊಂದಪೂರ್ವ ನಟನೆ. ಇಲ್ಲಿನ ಹೆಸರುಗಳನ್ನು ಗಮನಿಸಿ. ಎಲ್ಲ ಹೆಸರುಗಳೂ ಸಾಂಕೇತಿಕ. ಇಷ್ಟಾಗಿಯೂ ಈ ಸಾಂಕೇತಿಕ ಲೋಕದ ಜೀವಿಗಳಿಗೆ ಜೀವಂತಪಾತ್ರಗಳ ಕಾವಿರುವುದರಿಂದ ಅವು ಪೂರ್ತಿ ಅಲೆಗಾರಿಕಲ್‌ ಆಗುವುದಿಲ್ಲ, ಸಪಾಟಾಗುವದಿಲ್ಲ. ಘಟನೆಗಳೂ ಅಷ್ಟೆ: ದಟ್ಟವಾಗಿ ಕಟ್ಟಿಕೊಳ್ಳುತ್ತಾ ಹೋಗುತ್ತವೆ, ಜೀವದಾಳುತ್ತವೆ.

‘ಶಿಖರಸೂರ್ಯ’ ಶ್ರೇಷ್ಠ ಮಹಾಕಾವ್ಯಗಳ ಹಾಗೆ ವಿಶ್ವಕೋಶಾತ್ಮಕ ಗುಣಗಳನ್ನು ಹೊಂದಿದೆ. ದಿಗ್ಭ್ರಮೆಗೊಳಿಸುವ ವಯವಿಧ್ಯಮಯ ಅನುಭವಸಾಧ್ಯತೆಗಳು, ನಡೆಗಟ್ಟುಗಳ ಹಂತಗಳು, ನುಡಿಗಟ್ಟಿನ ಬಗೆಗಳು, ಹಿಡಿಗಟ್ಟಿನ ತರಹಗಳು, ಘಟನಾ ಮಾದರಿಗಳು ಇಲ್ಲಿ ಒಂದಾಗಿ ಹಲರಂಗಿನ ಚಿತ್ರವಾಗಿದೆ; ಹಲವು ಸ್ವರಗಳ ಮೇಳವಾಗಿದೆ; ಹಲವು ನದಿಗಳ ಕಡಲಾಗಿದೆ. ಇಲ್ಲಿ ಒಂದು ಕಲಾಪ್ರಕಾರದೊಳಗೆ ಹಲಬಗೆಯ ಕಲಾಪ್ರಕಾರಗಳನ್ನೊಳಗೊಳ್ಳುವ ಬಗೆಯೂ ಬೆರಗುಂಟುಮಾಡುತ್ತದೆ. ವಿಶೇಷವಾಗಿ ಈ ಗುಣದಲ್ಲಿ ‘ಶಿಖರಸೂರ್ಯ’, ‘ಗುಲಿಸ್ತಾನ್‌’, ‘ಮಸ್ನವಿ’ ಮುಂತಾದ ಸೂಫೀ ಮಹಾಕಾವ್ಯಗಳನ್ನು ಹೋಲುತ್ತದೆ. ಕತೆ, ಪುರಾಣ, ಹಾಡು, ಕುಣಿತ, ಸಂಗೀತ, ಕವಿತೆ, ಗದೆ, ಒಗಟು, ಯುದ್ಧಕಲೆ ಎಲ್ಲಕ್ಕೂ ಇಲ್ಲಿ ಜಾಗವುಂಟು. ಕಾಲ್ಪನಿಕ ಭೂಗೋಳದಲ್ಲಿ ಆ ತುದಿಯಿಂದ ಈ ತುದಿಗೆ, ಈ ತುದಿಯಿಂದ ಆ ತುದಿಗೆ ನಡೆಯುವ ಯಾತ್ರೆಗಳ ಪುನರ್ನಟನೆ ಮಹಾಕಾವ್ಯಗಳಲ್ಲಿ ಹಾಸುಹೊಕ್ಕಾಗಿರುವ ಯಾತ್ರೆಗಳ ಮೋಟಿಫ್‌ ಅನ್ನು ನೆನಪಿಸುತ್ತದೆ. ಕಥಾನಾಯಕಿ ಕತೆಯ ಉತ್ತರಾರ್ಧದಲ್ಲಿ ಗುಂಪಿನ ಜೊತೆ ಶಿವಾಪುರಗುಡ್ಡಕ್ಕೆ ಯಾತ್ರೆ ಹೋಗುವಾಗ ಅವಳ ಕಿವಿಗೆ ಬೀಳುವ ಪುಣ್ಯಕೋಟಿ ಮೊದಲಾದ ಕತೆಗಳನ್ನು ಸಂಕಲಿಸಿದರೆ ಅದೇ ಒಂದು ಅದ್ಭುತ ಕಿರುಗತೆಗಳ ಕಟ್ಟಾದೀತು.

ಆದಿಮ ಕತೆಗಳ ಬ್ರಹ್ಮಾಂಡಕಲ್ಪನೆಯ ರಚನೆಯೊಳಗಡೆ ಇಂದಿನ ದಂದುಗಗಳನ್ನು ಕವಿ ಕಂಬಾರರು ಹೊಂದಿಸಿರುವ ರೀತಿಯೂ ನಮ್ಮನ್ನು ಅಚ್ಚರಿಗೊಳಿಸುತ್ತದೆ. ಇಡೀ ಕೃತಿಯಲ್ಲಿ ಆದಿಮಕತೆಯ ಪೂರ್ಣತ್ವದ ದರ್ದಿನ ಜೊತೆಗೆ ನಮ್ಮ ಕಾಲದ ‘ಮಾನವ ಮೂರ್ಖತನಗಳ ಪುನರಾವರ್ತನೆ’ಯ ತೀವ್ರ ಪರಿವೆಯೂ ಕಾಳುಗಟ್ಟಿದೆ.

‘ಚಕೋರಿ’ಯಲ್ಲಿ ನಾಯಕ ಚಂದ್ರಮುತ್ತ ಅಹಂ ನಿರಸನದ ಕಲೆಯ ಮಾರ್ಗ ಹಿಡಿದು ದುರಂತಕ್ಕೆ ಪಕ್ಕಾಗುತ್ತಾನೆ. ಇಲ್ಲಿಯಾದರೋ ಚಿನ್ನಮುತ್ತ-ಜಯಸೂರ್ಯ-ಶಿಖರಸೂರ್ಯ ತಂತ್ರಜ್ಞಾನದ ಅಹಂಕಾರ ಸ್ವಾರ್ಥಗಳ ಹಾದಿ ಹಿಡಿದು ಇನ್ನೂ ದಾರುಣ ದುರಂತದ ದವಡೆ ಸೇರುತ್ತಾನೆ. ಇವರಿಬ್ಬರಿಗೂ ಶಿವಾಪುರಗುಡ್ಡದ ಸೃಷ್ಟಿ ರಹಸ್ಯಗಳ ಗರ್ಭದಲ್ಲಿ ಕಳ್ಳು-ಬಳ್ಳಿಯ ನಂಟು. ಈ ಎರಡು ಪಾತ್ರಗಳು ತಮ್ಮೆಲ್ಲ ಮೌಲ್ಯಗಳೊಂದಿಗೆ ಎದುರುಬದುರಾಗುತ್ತವೆ. ಇಲ್ಲಿ ತಾಯಿ ಮೌಲ್ಯವೆಂದರೆ ಕಾಳನ್ನು ಹೊನ್ನಾಗಿಸಬಲ್ಲ ಮತ್ತು ವಾಪಸ್ಸು ಹೊನ್ನನ್ನು ಕಾಳಾಗಿಸಬಲ್ಲ ಚಮತ್ಕಾರ; ಇದಕ್ಕೆ ವ್ಯತಿರಿಕ್ತವಾದದ್ದು ಕಾಳನ್ನು ಹೊನ್ನಾಗಿಸಬಲ್ಲುದೇ ಹೊರತು ಮತ್ತೆ ಹೊನ್ನನ್ನು ಕಾಳಾಗಿಸಲರಿಯದು.

ಒಂದು ‘ಸರ್ವಂ ಸರ್ವಾಂತರ್ಗತಂ’ ಎಂದು ನಂಬುವ ಚಕ್ರೀಯ ಮೌಲ್ಯಗಳ ಅಭಿವ್ಯಕ್ತಿ; ಇನ್ನೊಂದು ಸರ್ವಭಕ್ಷಕವಾದ ಸರಳರೇಖಾತ್ಮಕ ಪ್ರಗತಿಯ ಮೌಲ್ಯ. ಈ ಎರಡನೆಯದೇ ಪ್ರಸ್ತುತ ಕರ್ನಾಟಕ ಮತ್ತು ಕೇಂದ್ರ ಸರ್ಕಾರಗಳ ಹಾಗೇ ಜಗದ್ವ್ಯಾಪಿಯಾದ ಗೋಳೀಕರಣದ (ಗ್ಲೋಬಲೈಸೇಷನ್‌) ಮೂಲಮಂತ್ರ. ಇದರ ತರ್ಕವೇ ಶಿಖರಸೂರ್ಯನ ಬದುಕು: ಗಳಿಸಿದಷ್ಟೂ ಗೋಳು; ಉಂಡಷ್ಟೂ ಹಸಿವು; ಕುಡಿದಷ್ಟೂ ದಾವರ; ಪಡೆದಷ್ಟೂ ಬಡತನ. ಗ್ರೀಕ್‌ ನಾಟಕದ ದುರಂತನಾಯಕನ ಹಾಗೆ ದುರಹಂಕಾರದಿಂದ, ಹ್ಯೂಬ್ರಿಸ್‌ನಿಂದ ಮೇರೆವರಿಯದೆ ಮೆರೆಯುವ ಅವನ ಗೆಲುವಿನಲ್ಲೇ ಅವನ ಸೋಲೂ ಇದೆ. ಆದರವನಿಗೆ ಅದು ಗೊತ್ತಿಲ್ಲ. ನಮ್ರತೆಯ ಸಾಕಾರ ಮೂರ್ತಿಯಾದ ನಿನ್ನಡಿಗೆ ಅದು ಗೊತ್ತಿದೆ. ಆದ್ದರಿಂದ ಅವನು ಹೀರೋ ಆಗಲು ಹೋಗುವುದೇ ಇಲ್ಲ; ಗುರು ಶಿವಪಾದನು ಅವನನ್ನು ಹಗೆಯಿಂದ ಬಿಡುಗಡೆಗೊಳಿಸಿದ್ದಾನೆ. ಆದರೆ ಜವಾಬುದಾರಿಗಳಿಂದ ಅಲ್ಲ. ಕನಕಪುರಿಯ ಹೆಣಗಳನ್ನು ಸಾಗಿಸುವುದರಲ್ಲಿ ಅವನಿಗೆ ಚೂರು ಬೇಸರವಿಲ್ಲ. ‘ಮಹಾಮಾಯಿ’ಯ ಕಥಾನಾಯಕ ಗುಣಪಡಿಸುವುದು ಕೇವಲ ರಾಜಕುಮಾರಿಯನ್ನು. ನಿನ್ನಡಿಯಾದರೋ ಇಡೀ ಸೃಷ್ಟಿಗೇ ವೈದ್ಯ…. ‘ಬಂದುದೆಲ್ಲವ ನುಂಗಿ, ಬಾರದುದೆಲ್ಲವ ಹಿಂಗಿದ’ ಸ್ಥಿತಿ ಅವನಿಗಾಗಿದೆ.

ಈ ಕೃತಿಯ ಹೆಣ್ಣು ಪಾತ್ರಗಳ ವೈವಿಧ್ಯವೂ ಗಮನಾರ್ಹ. ಇಲ್ಲಿ ಗೌರಿಯಾಗಿರುವ ಯಕ್ಷಿ ಒಂದು ತುದಿಯಾದರೆ ‘ರಾಜಸೂಳೆ’ಯಾಗಿರುವ ಮಹಾರಾಣಿ ಷೇಕ್‌ಸ್ಪಿಯರ್‌ನ ಕ್ಲಿಯೋಪಾತ್ರಳಂಥ ತೀವ್ರತೆಯುಳ್ಳ ಪಾತ್ರ. ಶಿಖರಸೂರ್ಯನ ಖಳನಾಯಕತ್ವ ಷೇಕ್‌ಸ್ಪಿಯರನ ಆಯಾಗೋನನ್ನು ಹೋಲುವಂಥದು.

‘ಇಲ್ಲಿದೆ ದೈವಸೃಷ್ಟಿಯ ವಿಪುಲತೆ’ ಷೇಕ್‌ಸ್ಪಿಯರನ್ನು ಕುರಿತು ಡ್ರೈಡನ್‌ ಹೇಳಿದ ಮಾತು ಕಂಬಾರರ ಈ ವಿಪುಲ ಕೃತಿಗೂ ಅನ್ವಯಿಸುತ್ತದೆ. ಇಂದಿನ ಗೋಳೀಕೃತ (ಗ್ಲೋಬಲೈಸ್ಡ್‌) ಜಗತ್ತಿನ ಒಣಗತ್ತುಗಳನ್ನು, ತಂತ್ರಜ್ಞಾನದ ಠೇಂಕಾರಗಳನ್ನು, ಈ ಮೃತ್ಯುವಿನ ಸ್ಥಿತಿಯಲ್ಲಡಗಿರುವ ಮರುಹುಟ್ಟಿನ ಅಸೀಮ ಸಾಧ್ಯತೆಗಳನ್ನು ಇಷ್ಟು ಸಮಗ್ರವಾಗಿ ಹಿಡಿದಿಡುವ ಕೃತಿಗಳು ನನಗೆ ಗೊತ್ತಿದ್ದ ಮಟ್ಟಿಗೆ ಇವತ್ತಿನ ಸಾಹಿತ್ಯದಲ್ಲಿ ವಿರಳ. ಕ್ಷಣಭಂಗುರವಾದ ಉಪಭೋಗೀಕ್ರಿಯೆಯ ಪ್ರತಿಬಿಂಬವಾಗಿ, ತನ್ನೆಲ್ಲ ಇಚ್ಛಾಶಕ್ತಿಯನ್ನೂ ಬಿಟ್ಟುಕೊಟ್ಟಿರುವ ಇಂದಿನ ಕನ್ನಡ ಸಾಹಿತ್ಯದಲ್ಲಂತೂ ಇಂತಹ ಮಿಥೋಪೋಯಿಕ್‌ ಮಹತ್ವಾಕಾಂಕ್ಷೆ ಮಟಾಮಾಯವಾಗಿದೆ. ನವೋದಯದ ಉತ್ಪ್ರೇಕ್ಷಾ ದೃಷ್ಟಿ, ನವ್ಯದ ದಿಸ್ತೋಪಿಯನ್‌ ದೃಷ್ಟಿ, ಬಂಡಾಯದ ಸರಳೀಕೃತ ಯತೋಪಿಯನ್‌ ದೃಷ್ಟಿಗಳನ್ನು ದಾಟಿದ ಅಂದಿಂಗೆ ಹಳೆಯ, ಇಂದಿಂಗೆ ಎಳೆಯ ಸೃಷ್ಟಿ ‘ಶಿಖರಸೂರ್ಯ’ದಲ್ಲಿದೆ.

ಕಂಬಾರರ ಕಾವ್ಯತಪಸ್ಸಿನ ಪಕ್ವಫಲವಾದ ಈ ಕೃತಿ ಜಾನ್‌ ಡನ್‌ನ ಸಾಲನ್ನು ನೆನಪಿಸುತ್ತದೆ:

ಈ ಮಾಗಿಯ ಮುಖದಲ್ಲಿ
ನಾ ಕಂಡ ಚೆಲವು
ಯಾವ ವಸಂತದಲ್ಲೂ ಇಲ್ಲ!

ಇಂಥ ಚೆಲುವಿನ ಆಗರವಾದರೂ ಹ್ಯಾಗೆ ಮಾಗಿ ಮತ್ತೆ ವಸಂತಕ್ಕೆ ದಾರಿ ಮಾಡಿಕೊಡುತ್ತದೋ ಹಾಗೆಯೇ ಶಿಖರಸೂರ್ಯನ ಸೋಲಾಗಲೀ, ನಿನ್ನಡಿಯ ಗೆಲುವಾಗಲಿ ಆಖೈರಾದುವಲ್ಲ. ಯಾಕೆಂದರೆ ಇವರಿಬ್ಬರೂ ಶಿವಾಪುರದ ಪಿಂಡದಲ್ಲಿ ಭ್ರೂಣರೂಪಿಯಾಗಿ ಸದಾ ನೆಲೆಸಿದ್ದು ಮರ ಕಾಲವಶದಲ್ಲಿ ಪತ್ರಫಲಗಳನ್ನು ತೋರುವ ಹಾಗೆ ಅಮ್ಮನ ಲೀಲಾನುಸಾರವಾಗಿ ಬೇರೆ ಬೇರೆ ಕಥನ ವಿನ್ಯಾಸಗಳಲ್ಲಿ ಪ್ರಕಟವಾಗುತ್ತಾ ಇರುತ್ತಾರೆ. ಆದ್ದರಿಂದ ಕಥೆಗಳಿಗೆ ಕೊನೆಯೇ ಇಲ್ಲ. ಎಲ್ಲ ಕೊನೆಯೂ ಮತ್ತೊಂದರ ಮೊದಲು; ಎಲ್ಲ ಮೊದಲೂ ಮತ್ತೊಂದರ ಕೊನೆ. ತಕ್ಷಣವನ್ನೇ ಕೊಟ್ಟಕೊನೆಯೆಂದು ನಂಬಿಸುವ ಜೂಡೋಕ್ರಿಶ್ಚಿಯನ್‌ ಪರಂಪರಾನುಗತ ಸರಳ ರೇಖಾತ್ಮಕವಾದ ತತ್ವ ಇಂದಿನ ಗೋಳೀಕರಣ (ಗ್ಲೋಬಲೈಸೇಷನ್‌)ದಲ್ಲಿ ತನ್ನ ಪರಾಕಾಷ್ಠತೆಯನ್ನು ಮುಟ್ಟಿರುವಾಗ, ಅದಕ್ಕನುಸಾರವಾದ ಲೋಕದೃಷ್ಟಿಗಳನ್ನು, ತನ್ನರಿವುಗಳನ್ನು ಬಿತ್ತರಸುತ್ತಿರುವಾಗ ಆ ಇಡೀ ತರ್ಕವನ್ನು ಇಲ್ಲಿರುವ ಕಾಲಕಲ್ಪನೆ ತಿರುಗುಮುರುಗಾಗಿಸುತ್ತದೆ. ಆದ್ದರಿಂದ ‘ಶಿಖರಸೂರ್ಯ’ ಕೇವಲ ಉತ್ಕೃಷ್ಟ ಕಾವ್ಯ ಮಾತ್ರವಲ್ಲ; ಅದು ಸಾಂಸ್ಕೃತಿಕ ಮತ್ತು ದಾರ್ಶನಿಕ ಸ್ವಾಯತ್ತತೆಯನ್ನು ಸಾಧಿಸುವ ಕೃತಿಯೂ ಆಗಿದೆ.

ಎಚ್‌.ಎಸ್‌. ಶಿವಪ್ರಕಾಶ್
ಜವಾಹರ್‌ಲಾಲ್‌ ನೆಹರೂ ವಿಶ್ವವಿದ್ಯಾಲಯ,
ನವದೆಹಲಿ
೧೮-೧೦-೨೦೦೬