‘ಶಿಖರಸೂರ್ಯ’ ಕೃತಿಯನ್ನು ಸ್ವತಂತ್ರ ಕಾದಂಬರಿಯೆಂದಾದರೂ ನೋಡಬಹುದು, ‘ಚಕೋರಿ’ಯ ಎರಡನೆಯ ಭಾಗವೆಂದಾದರೂ ನೋಡಬಹುದು. ‘ಚಕೋರಿ’ ಒಬ್ಬ ಕಲಾವಿದನ ಪರಿಪೂರ್ಣತೆಯ ಅನ್ವೇಷಣೆಯನ್ನ ಹೇಳುವ ಕೃತಿಯಾದರೆ ‘ಶಿಖರಸೂರ್ಯ’ ವಿದ್ಯೆಯ ಮೂಲಕ ಅಧಿಕಾರದ ಅನ್ವೇಷಣೆ ಮಾಡುವಾತನ ಕಥೆ. ಅಂದರೆ ಇಲ್ಲಿಗೆ ಚಕೋರಿಯಲ್ಲಿ ಬರುವ ಕಲೆ ಮತ್ತು ವಿದ್ಯೆಗಳಿಗೆ ಸಂಬಂಧಪಟ್ಟ ಪುರಾಣದ ವಿವರಣೆ ಸಂಪೂರ್ಣವಾಗುತ್ತದೆ.

ಕಾದಂಬರಿ ಎಂಬುದು ಇತಿಹಾಸದ ಅಗತ್ಯಗಳನ್ನು ಪೂರೈಸಲು ಮಹಾಕಾವ್ಯದ ಬದಲು ಹುಟ್ಟಿಕೊಂಡಿರುವ ಸಾಹಿತ್ಯಪ್ರಕಾರ. ಆದ್ದರಿಂದ ‘ಚಕೋರಿ’ಗೂ ಇದಕ್ಕೂ ರಚನಾ ವಿಧಾನದಲ್ಲಿ ವ್ಯತ್ಯಾಸವಿದೆ. ‘ಚಕೋರಿ’ಯು  ‘ವಚನ ಕಥಾನಕ’ವೆನ್ನುವುದಾದರೆ (ಹಿಂದೆ ಇದನ್ನು ಮಹಾಕಾವ್ಯವೆಂದಿದ್ದೆ) ‘ಶಿಖರಸೂರ್ಯ’ ಕಾದಂಬರಿ; ‘ಚಕೋರಿ’ಯನ್ನು ಕನಸುಗಳು ಹೇಳಿದರೆ ‘ಶಿಖರಸೂರ್ಯ’ ಕಾದಂಬರಿಯನ್ನು ಇತಿಹಾಸಕಾರರು ನಿರೂಪಿಸುತ್ತಾರೆ. ಹೇಳುವವರು ಇತಿಹಾಸಕಾರರಾದ್ದರಿಂದ ನಿರೂಪಣೆಯ ಭಾಷೆಯನ್ನು ನಿರ್ಭಾವುಕ ಹಾಗೂ ನಿರ್ಲಿಪ್ತವಾಗಿಸುವ ಕಡೆಗೆ ಗಮನ ಕೊಟ್ಟಿದ್ದೇನೆ.

ಈ ಕಾದಂಬರಿಯಲ್ಲಿ ವಾಸ್ತವಿಕದಲ್ಲಿರುವ ಕೆಲವು ಹಟ್ಟಿ, ಊರುಗಳ ಹೆಸರುಗಳನ್ನು ಹಾಗೆ ಹಾಗೇ ಬಳಸಿರುವೆನಾದರೂ ಅವೆಲ್ಲ ಕಾಲ್ಪನಿಕ ಸ್ಥಳಗಳು, ಅವುಗಳ ‘ಭೂಗೋಳ’ ಕೂಡಾ ವಾಸ್ತವವಾಗಿಲ್ಲ. ಕಾದಂಬರಿಯ ಜೀವಜಗತ್ತು ಸಂಚರಿಸುವ ಸ್ಥೂಲವಾದ ‘ಭೂಗೋಳ’ ಹೀಗಿದೆ:

ಶಿವಾಪುರ ಸೀಮೆಯೆಂದರೆ ಒಂದು ಕಡಿಮೆ ನಲವತ್ತು ಹಟ್ಟಿಗಳ ಕಾಡುಪ್ರದೇಶ, ಅವುಗಳಲ್ಲಿ ಶಿವಾಪುರವೇ ಮುಖ್ಯವಾದುದು. ಅಮ್ಮನ ಬೆಟ್ಟವಿರೋದು ಇಲ್ಲಿಯೇ, ಇಲ್ಲಿಂದ ದಕ್ಷಿಣಕ್ಕೆ ಸುಮಾರು ಇನ್ನೂರು ಕಿಲೋಮೀಟರ್ ಅಂತರದಲ್ಲಿ ಕನಕಪುರಿ ಇದೆ.

ಕನಕಪುರಿ ‘ಛಪ್ಪನ್ನೈವತ್ತಾರು’ ದೇಶಗಳ ಪೈಕಿ ಒಂದು ರಾಜ್ಯ. ಅದರ ರಾಜಧಾನಿ ಕನಕಪುರಿ. ಅಂದಿನ ರಾಜಧಾನಿಗಳಲ್ಲೆಲ್ಲ ಶ್ರೀಮಂತಿಕೆಯ ವೈಭವದಿಂದ ಮೆರೆದ, ಸರೀಕ ರಾಜರ ಅಸೂಯೆಗೆ ಪಾತ್ರವಾದ ಪುರ. ಕನಕಪುರಿಯ ಆಗ್ನೇಯ ದಿಕ್ಕಿಗೆ ತಿಗಳರ ದೇಶವಿದೆ. ಅದರ ರಾಜಧಾನಿ ಕಂಚಿ. ಕನಕಪುರಿಯಿಂದ ಕಂಚಿಗೆ ಕುದುರೆಗಾಡಿಯಲ್ಲಿ ನಾಲ್ಕು ದಿನಗಳ ದಾರಿ.

ಕನಕಪುರಿಯ ಪಶ್ಚಿಮಕ್ಕೆ ಮೂರು ದಿನಗಳ ದಾರಿಯ ಅಂತರದಲ್ಲಿ ಘಟ್ಟ, ಮತ್ತು ಘಟ್ಟದ ಮೇಲೆ ಬಿಳಿಗಿರಿ ಇದೆ. ಬಿಳಿಗಿರಿಯ ಉತ್ತರಕ್ಕೆ ಎರಡು ದಿನಗಳ ದಾರಿಯಾದ ಮೇಲೆ ಹದ್ದಿನ ಕೊಳ್ಳ ಸಿಗುತ್ತದೆ. ಅದರ ಪಶ್ಚಿಮದಂಚಿನಲ್ಲಿ ಅನೇಕ ದಿನ ಕಾಲ್ನಡಿಗೆಯ ನಂತರ ಗರುಡನ ಬೆಟ್ಟ ಸಿಕ್ಕುತ್ತದೆ. ಇದು ಸ್ಥೂಲವಾಗಿ ಈ ಕಾದಂಬರಿಯ ಪಾತ್ರಗಳು ಚಲಿಸುವ, ಘಟಾನುಘಟನೆಗಳು ಘಟಿಸುವ ಕರ್ಮಭೂಮಿ.

ಮಹರ್ಷಿ ಟಾಲ್‌ಸ್ಟಾಯ್‌ ಬೆಪ್ಪುತಕ್ಕಡಿ ಬೋಳೇಶಂಕರ ಎಂಬೊಂದು ಕತೆ ಬರೆದಿದ್ದಾರೆ. ಈ ಹಿಂದೆ ಅದನ್ನಾಧರಿಸಿ ನಾಟಕವೊಂದನ್ನು ಬರೆದಿದ್ದೆ. ಆಮೇಲೆ ನಮ್ಮ ಭಾಷೆಯಲ್ಲಿ ಸಿಕ್ಕ ಅದರ ಮೂರು ಪಾಠಾಂತರಗಳನ್ನು ನೋಡಿ ಆಶ್ಚರ್ಯವಾಯಿತು. ಆ ಮೂರೂ ಕಥೆಗಳು ಹಾವೇರಿ ಬಳಿಯ ನಾಗಾವಿಯಲ್ಲಿದ್ದನೆಂದು ಭಾವಿಸಲಾದ ನಾಗಾರ್ಜುನನೊಂದಿಗೆ ಬೆಸೆದುಕೊಂಡಿವೆ. ಅವುಗಳಲ್ಲಿ ಒಂದು ಕಥೆ ಕನ್ನಡದ ಬ್ರಹ್ಮಶಿವನಲ್ಲೂ, ಇನ್ನೊಂದು ತುಂಡು ಸಂಸ್ಕೃತದ ದಂಡಿಯಲ್ಲೂ ಸಿಕ್ಕುತ್ತದೆ. ನಾಗಾರ್ಜುನ ಹುಚ್ಚುಹತ್ತಿದಾಗ ಗಿಡಮೂಲಿಕೆಗಳಿಂದ ಮಾಡಿದ ಚಿನ್ನ ಗದಗಿನ ಬಳಿಯ ಕಪ್ಪತಗುಡ್ಡದಲ್ಲಿ ಬಿದ್ದಿತ್ತೆಂದು ಜನ ಹೇಳುವುದಿದೆ. ‘ಕಪ್ಪತಗುಡ್ಡ ಕಣ್ಣಿಗೆ ಛಾಯಾ ಹೋದೇನಂತಿಯೋ ನೀನಾ…’ ಎಂದು ‘ಸಂಗ್ಯಾಬಾಳ್ಯಾ’ದ ಒಂದು ಹಾಡಿನಲ್ಲಿದೆ. ವಿದ್ಯೆಯ ಬೆನ್ನುಹತ್ತಿ ಆತ್ಮನಾಶ ಮಾಡಿಕೊಂಡವನ ಕಥೆಯಾಗಿ ಹಾವೇರಿಯ ಕಥೆಯನ್ನೇ ಆಧಾರವಾಗಿಟ್ಟುಕೊಂಡಿದ್ದೇನೆ. ಅದರ ಸುಮಾರು ಎರಡು ಪುಟಗಳ ಕಥೆ ಕಾದಂಬರಿಯಾಗಿ ನಿಮ್ಮ ಕೈಯಲ್ಲಿದೆ.

ಈ ಕಾದಂಬರಿಯ ಕಾಲವನ್ನು ಆಧುನಿಕವಲ್ಲದ ಹಿಂದಿನ ಯಾವುದಾದರೂ ಕಾಲಮಾನದಲ್ಲಿ ನಡೆದದ್ದೆಂದು ಭಾವಿಸಬೇಕು.

* * *

ಒಪ್ಪವಾದ ಮುನ್ನಡಿಯೊಂದನ್ನು ಬರೆದು ಈ ಕೃತಿಯ ಬೆಲೆಯನ್ನು ಹೆಚ್ಚಿಸಿದ ಕನ್ನಡದ ಮಹತ್ವದ ಕವಿ ಎಚ್‌.ಎಸ್‌. ಶಿವಪ್ರಕಾಶ್ ಅವರಿಗೆ ನನ್ನ ವಿಶೇಷ ಕೃತಜ್ಞತೆಗಳು ಸಲ್ಲಬೇಕು. ಹಾಗೆಯೇ, ಈ ಕೃತಿಯಲ್ಲಿ ಬರುವ ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಒದಗಿಸಿಕೊಟ್ಟ ರಾಜಾ ಶೈಲೇಶಚಂದ್ರ ಗುಪ್ತ ಅವರಿಗೂ ನನ್ನ ವಂದನೆ. ಎಂದಿನ ಪ್ರೀತಿಯಿಂದ ಪ್ರಕಾಶಪಡಿಸಿದ ‘ಅಂಕಿತ ಪುಸ್ತಕ’ದ ಮಿತ್ರ ಪ್ರಕಾಶ ಕಂಬತ್ತಳ್ಳಿ ಅವಿಗೂ ನಾನು ಋಣಿ.

ಚಂದ್ರಶೇಖರ ಕಂಬಾರ