ಅದಾಗಿ ಒಂದು ತಿಂಗಳಾದ ಮೇಲೆ ಕುರುಮುನಿಯು ಜಯಸೂರ್ಯನಿಗೆ ಸಸ್ಯಹೃದಯವನ್ನು ಕೊಟ್ಟ. ಗ್ರಂಥ ಕೈಗೆ ಬಂದುದೇ ತಡ ಏಕಾಂತಕ್ಕೆ ಹೋಗಿ ಅದು ನಿಜವಾದ ಸಸ್ಯಹೃದಯವೇ? ಅಲ್ಲವೆ?-ಅಂತ ಪರೀಕ್ಷೆ ಮಾಡಿದ. ಬಹಳ ಹಿಂದೆ ಬರೆದ ಗ್ರಂಥವಾದುದರಿಂದ ತಾಡೋಲೆಯ ಕೆಲವು ಪುಟಗಳ ತುದಿಗಳ ಅತಿಬಳಕೆಯಿಂದ ಹರಿದಿದ್ದವು. ಗ್ರಂಥವು ಶಿಥಿಲವಾಗಿತ್ತು. ಓದುತ್ತ ಹೋದ ಹಾಗೆ ವಿಶ್ವಾಸ ಮೂಡಿತು. ಬಹಳ ಹಿಂದೆ ಆ ಗವಿಯಲ್ಲಿದ್ದ ಒಬ್ಬ ಶಿವಪಾದನೇ ಬರೆದಿದ್ದ ಗ್ರಂಥವದು. ಪ್ರಸ್ತಾವನೆಯಲ್ಲಿ ಅಮ್ಮನ ವರ್ಣನೆ, ಆಮೇಲೆ ಸುಂದರವಾದ ಕಾಡಿನ ವರ್ಣನೆ ಬರುತ್ತದೆ.

“ಸ್ವಚ್ಛಂದವಾಗಿ ಬೆಳೆದ ಈ ಕಾಡಿನಲ್ಲಿರುವ ತರುಮರಾದಿಗಳು ತಾಯಿ ಆಕಾಶದಲ್ಲಿರುವಳೋ ಎಂದು ಭಾವಿಸಿ ಅವಳ ಪಾದಸ್ಪರ್ಶಕ್ಕಾಗಿ ಎತ್ತರ ಎತ್ತರವಾಗಿ ಬೆಳೆದಿವೆ. ಈ ಮರಗಳು ಹೂ ಹಸಿರುಗಳಿಂದ ಬೀಗುತ್ತ ಬಳಕುತ್ತ ಚೇಷ್ಠೆ ಮಾಡುವ ಗಾಳಿಗೆ ನಲಗುತ್ತವೆ. ಇಲ್ಲಿಯ ಒಂದೊಂದು ಮರದಲ್ಲೂ ಅದು ಇವತ್ತೇ ಹುಟ್ಟಿದಷ್ಟು ತಾಜಾತನ ಇರುತ್ತದೆ. ಮತ್ತು ಅದು ಅಲೌಕಿಕವಾದ ಪರಿಮಳವನ್ನು ಪಸರಿಸುತ್ತದೆ. ತಾಯಿಯ ಒಡೆತನವಿರುವ ಈ ಕಾಡಿನಲ್ಲಿ ಒಟ್ಟು ಸಾವಿರದಾ ಒಂಬೈನೂರು ಜಾತಿಯ ಮರಗಳು, ಸಾವಿರದಾ ಮುನ್ನೂರು ಜಾತಿಯ ಬಳ್ಳಿಗಳು, ನಾಲ್ಕುಸಾವಿರದಾ ಎಂಟನೂರು ಮೂಲಿಕೆಗಳ ಇವೆ. ಅಲ್ಲದೆ ಕೈಲಾಸದ ಶಿವನಿಗೆ ಪ್ರಿಯವಾದ ಒಂದುಜಾತಿಯ ಪತ್ರಿಯ ಮರ ಇಲ್ಲಿದ್ದು ಅದು ಹಿಮಾಲಯದಲ್ಲೂ ಇಲ್ಲ! ಇಲ್ಲಿಯ ತರುಮರ ನಾರು ಬೇರು ಮೂಲಿಕೆಗಳನ್ನು ಕೀಳುವವರು ಮೊದಲು ಅಮ್ಮನಿಗೂ ಆಮೇಲೆ ಕಾಡಿಗೂ ಪ್ರಾರ್ಥನೆ ಮಾಡಿ ಆಮೇಲೆ ಸದರಿ ಸಸ್ಯಕ್ಕೂ ಪ್ರಾರ್ಥಿಸಿ, -ಅನಿವಾರ್ಯವಾದುದರಿಂದ ಮತ್ತು ಒಂದು ಜೀವವ ಉಳಿಸಬೇಕಾಗಿರುವುದರಿಂದ ಕೇಳುತ್ತಿದ್ದೇನೆ; ದಯಪಾಲಿಸಬೇಕು – ಎಂದು ಕೇಳಿ ಅದರ ಸಮ್ಮತಿಯೊಂದಿಗೆ ಅದನ್ನು ಪಡೆಯಬೇಕು.”

ಎಂದು ಬರೆದದ್ದನ್ನು ಓದಿ ಜಯಸೂರ್ಯ ಚಕಿತನಾದ.

ಈ ಕಾಡಿನಲ್ಲಿ ಹರಿದು ಬೆಟ್ಟದಿಂದ ಜಿಗಿದು, ಕೆಳಗೆ ಮಡುವಾಗಿ, ಆಮೇಲೆ ತೊರೆಯಾಗಿ ಹೊಳೆಯಾಗಿ ಹರಿವ ಘಟಪ್ರಭೆಯ ಮತ್ತು ತಾಯಿಯ ಬಗ್ಗೆ ಮೂರು ಪದ್ಯಗಳಿವೆ:

“ಘಟಪ್ರಭೆಯ ಸ್ವಚ್ಛವಾದ ನೀರು ಹೃದಯಕ್ಕೆ ಆಹ್ಲಾದಕಾರಿ ಹಾಗೂ ಇಂದ್ರಿಯಗಳಿಗೆ ಚೈತನ್ಯದಾಯಕವಾಗಿರುತ್ತದೆ. ಚಿಕಿತ್ಸೆಗೆ ಸಹಾಯಕಾರಿಯಾಗಿರುವ, ಶಕ್ತಿಭರಿತ ಖನಿಜಾಂಶಗಳನ್ನೂ, ರಾಸಾಯನಿಕ ಸಂಯುಕ್ತಗಳನ್ನೂ ಒಳಗೊಂಡ ಶುಭ್ರವಾದ ಈ ನೀರು ಜಲತರಂಗಗಳಲ್ಲಿ ಸಂಗೀತವನ್ನುಂಟು ಮಾಡುತ್ತ ಹರಿಯುತ್ತದೆ. ಈ ನೀರು ಕುಡಿದವರಿಗೆ ಮುಪ್ಪು ಆವರಿಸುವುದಿಲ್ಲ. ಅವರ ಇಂದ್ರಿಯಗಳು ಕ್ಷೀಣಿಸುವುದಿಲ್ಲ. ನಿತ್ಯವೂ ತಾಯಿಯ ಪೂಜ್ಯಪಾದಗಳನ್ನು ತೊಳೆವ ಘಟಪ್ರಭೆಗೆ ನಮಸ್ಕಾರ.

ತಾನೇ ಬೆಟ್ಟದ ತರುಮರಗಳಾಗಿ, ಹೂ ಹಸಿರಾಗಿ ಹೂವಿನ ಪರಿಮಳವಾಗಿ ತನ್ನ ಪರಿಮಳವನ್ನ ತಾನೆ ಆಘ್ರಾಣಿಸಿ ಆನಂದಿಸುವ ತಾಯಿಗೆ ನಮಸ್ಕಾರ.

ದೇವಾನುದೇವತೆಗಳನ್ನು, ದೇವತೆಗಳಂಥ ಶಿವಾಪುರದ ಮಾನವರನ್ನು ತಾಮಸ ರಜೋಗುಣ ರಹಿತರಾದ ಬೆಟ್ಟದ ಸಿದ್ಧರನ್ನು ಕಾಪಾಡುವ ತಾಯಿಗೆ ನಮಸ್ಕಾರ.”

* * *

ಇಂತಪ್ಪ ಸಸ್ಯಹೃದಯ ಓದಿದ ಮೇಲೆ ಜಯಸೂರ್ಯ ಕಾಡನ್ನು ನೋಡತೊಡಗಿದ. ಈ ತನಕ ಕಾಡಿನಲ್ಲಿ ಒಂದೇ ಹಸಿರು ಕಾಣಿಸುತ್ತಿದ್ದದ್ದು ಈಗ ಗಿಣಿಹಸಿರು, ಕಡುಹಸಿರು, ಬಂಗಾರ ಹಸಿರು, ತೆಳು ಹಸಿರು ಇತ್ಯಾದಿ ಅನೇಕ ವಿಧಗಳಿರುವುದನ್ನು ಕಂಡುಕೊಂಡ. ಜೀವರಸದಿಂದ ತುಂಬಿದ ಲಾವಣ್ಯಗಳನ್ನು ಸುತ್ತ ರಚಿಸಿಕೊಂಡು ಆನಂದಪರವಶ ಹಸಿರನ್ನ ಕಂಡಾಗ ಅದರ ಉಪಯುಕ್ತತೆಯ ಅರಿವಾಗಿ ಹೊಸ ಉತ್ಸಾಹ ಮತ್ತು ಸಡಗರ ಅವನೊಳಗೆ ತುಂಬಿದಂತಾಗುತ್ತಿತ್ತು.

ಈಗ ಜಯಸೂರ್ಯನ ದಾಹಕ್ಕೆ ಕುರುಮುನಿಯ ತಿಳುವಳಿಕೆ ಸಾಲದಾಯಿತು. ಶಿವಪಾದ ಸಿಕ್ಕುವುದು ಕಡಿಮೆ, ಸಿಕ್ಕರೂ ಮಾತಾಡುವುದು ಕಡಿಮೆ. ಬೆಳಗಿನ ಸಮಯ ಸುಮಾರು ಒಂದು ತಾಸು ಗವಿಯಿಂದ ಹೊರಗೆ ಸ್ವಲ್ಪ ಹೊತ್ತು ಅಡ್ಡಾಡುವುದಿತ್ತು. ಅದು ಮುಗಿದು ಒಳಹೊಕ್ಕರೆ ಪುನಃ ಮೂರನೇ ದಿನವೇ ಅವನ ಭೇಟಿ. ಅದೂ ಗವಿಯ ಹೊರಗೆ ಬಂದರೆ ಮಾತ್ರ. ಬೇರೆ ಸಮಯದಲ್ಲಿ ಅನೇಕ ಬಾರಿ ಗವಿಯಲ್ಲಿ ಹುಡುಕಿದ್ದಾನೆ. ಆತ ಸಿಕ್ಕಿಲ್ಲ. ಒಮ್ಮೊಮ್ಮೆ ಬೆಟ್ಟದ ಮೇಲೆ ಸುತ್ತಾಡುವುದಿದೆ. ಇನ್ನು ಕೆಲವು ಸಲ ತಿಂಗಳಾದರೂ ಕಾಣಿಸಿಕೊಂಬುದೇ ಇಲ್ಲ. ಸಸ್ಯಹೃದಯದ ಬಗ್ಗೆಯೇ ಅನುಮಾನಗಳು ಮೂಡಿ ಕುರುಮುನಿಯಿಂದ ಸಮಾಧಾನಕರ ಉತ್ತರ ಸಿಕ್ಕದಿದ್ದಾಗ ಜಯಸೂರ್ಯ ಚಡಪಡಿಸಿದ. ಒಮ್ಮೆ ಕುರುಮುನಿ ಹೇಳಿದ:

“ಹಂಗ್ಯಾಕೆ ಅವಸರ ಮಾಡ್ತಿಯೋ ತಮ್ಮಾ ? ನಿನ್ನಲ್ಲಿ ಖರೇನs!’ ಅನ್ನು, ಅವ ಹ್ಯಾಂಗೋ ಹಾದೀ ತೋರಸ್ತಾನ!”

“ಹೆಂಗೋ ಅಂದರ?”

“ಕನಸಿನಾಗs ಬಂದಾನು”

ಜಯಸೂರ್ಯನಿಗೆ ಸಮಾಧಾನವಾಗಲಿಲ್ಲ. ಕುರುಮುನಿಯ ಮಾತಿನಲ್ಲಿ ನಂಬಿಕೆಯೂ ಬರಲಿಲ್ಲ. ಅವನ ಮಾತಿಗೆ, ಕುರುಮುನಿ ಅವಮಾನಿತನಾಗುವ ಹಾಗೆ ದೊಡ್ಡದಾಗಿ ನಕ್ಕುಬಿಟ್ಟ.

ಆ ದಿನ ರಾತ್ರಿ ಅವನಿಗೆ ಆಶ್ಚರ್ಯ ಕಾದಿತ್ತು. ಒಬ್ಬನೇ ಮರಡಿ ಪ್ರದೇಶದಲ್ಲಿ ಹೊರಟ ಹಾಗೆ ಕನಸಾಯ್ತು. ಮರಡಿಯಲ್ಲಿ ಸುಂದರವಾದ, ಚಿನ್ನದ ಬಣ್ಣದ ಒಂಟಿ ಹೂ ಅರಳಿತ್ತು. ‘ಒಂಟಿ ಹೂ ಅರಳಿದೆಯಲ್ಲಾ!’ ಎಂದು ಅದರ ಸಮೀಪ ಹೋಗಿ ನೋಡಿದ. ಕೋಮಲವಾಗಿತ್ತು. ದಳಗಳು ಕಮಲದ ದಳಗಳಂತಿದ್ದರೂ ಕೆಳಗೆ ನೀರಿರಲಿಲ್ಲ.

‘ಹೆಸರು ಗೊತ್ತಿಲ್ಲದ ಹೂವೇ ಒಂಟಿಯಾಗಿರಲು ಬೇಸರವಾಗುವುದಿಲ್ಲವೆ?’

ಅಂತ ತಂತಾನೇ ಅಂದುಕೊಂಡಂತೆ ಹೇಳಿ ಮುಂದೆ ನಡೆದ. ಒಂದೆರಡು ಹೆಜ್ಜೆ ಇಡುವಷ್ಟರಲ್ಲಿ ಅಪೂರ್ವವಾದ ಲಯ ಕೇಳಿಸಿತು. ಹಾಗೆಯೇ ಆಲಿಸುತ್ತ ನಿಂತಿದ್ದಾಗ ಕೇಳಿಸಿತು:

“ಇಲ್ಲವಲ್ಲ! ನಾನು ಎಲ್ಲವನ್ನು ಒಳಗೊಂಡಿರುವುದರಿಂದ ಇಡೀ ಪ್ರಕೃತಿ ನನ್ನೊಂದಿಗಿದೆ. ನಾನು ಒಬ್ಬಂಟಿ ಹ್ಯಾಗಾದೇನು? ನೀನು ನನ್ನಲ್ಲಿ ಇಲ್ಲದಿದ್ದರೆ ಹೀಗೆ ಕೇಳುತ್ತಿದ್ದೆಯೇನು?

-ಜಯಸೂರ್ಯ ನಾಚಿಕೊಂಡು ಸುತ್ತ ನೋಡಿದ. ಹೂವು ಕಿಲಕಿಲ ನಗುವಂತೆ ಅಲುಗಾಡಿತ್ತು. ತನಗೆ ಕೇಳಿಸಿದ್ದು ಹೂವಿನ ದನಿಯ? ಇಲ್ಲಾ ಯಾವುದಾದರೂ ದೇವತೆಯ ದನಿಯ?-ಅಂತ ಅನುಮಾನ ಬಂತು!

-ಎಚ್ಚರಾಯ್ತು!

ಮೂರನೇ ದಿನ ಬೆಳಗ್ಗೆ ಮರದ ಕಟ್ಟೆಯ ಮೇಲೆ ಶಿವಪಾದ ಕುಂತಿದ್ದ. ಜಯಸೂರ್ಯ ಅಲ್ಲಿಗೆ ಹೋಗಿ ಅನುಮಾನಗಳನ್ನು ಬಗೆಹರಿಸಿಕೊಳ್ಳಲು ಬಾಯಿ ತೆರೆಯುವಷ್ಟರಲ್ಲಿ ಶಿವಪಾದನೇ ಪ್ರಶ್ನೋತ್ತರಿಸಿದ.

“ಲಯ ಅಂದರೇನು?”

“ಸಸ್ಯವು ನೆಲ, ಜಲ, ವಾಯು ಮತ್ತು ತಿರ್ಯಕ್‌ಜೀವಗಳೊಂದಿಗೆ ಮಾತಾಡುವುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡೋದೇ ಸಸ್ಯರಹಸ್ಯ. ಅದನ್ನು ಅರ್ಥ ಮಾಡಿಕೊಳ್ಳಲು ತನ್ಮಯತೆ ಬೇಕು. ನಿಸರ್ಗದ ತನ್ಮಯತೆಯೊಂದಿಗೆ ನಿನ್ನ ತನ್ಮಯತೆ ಸಮರಸಗೊಂಡಾಗ ಇಬ್ಬರ ಮಧ್ಯೆ ಹರಿವ ಲಯ ಕೇಳಿಸುತ್ತದೆ, ಅನಾಹತ ನಾದದ ಹಾಗೆ! ಈ ಛಂದಸ್ಸನ್ನ ತಿಳಿದವನೇ ಕವಿರಾಜ, ಸಿದ್ಧ ವೈದ್ಯ. ಇದನ್ನು ಮೊದಲು ಅಮ್ಮನಿಗೆ ಬೋಧಿಸಿದವನು ಶಿವ. ಅದಕ್ಕೇ ನಾದಪ್ರಿಯನೆಂಬರು ಶಿವನ! ಅಮ್ಮ ಕವಿರಾಜನಿಗೆ ಬೋಧಿಸಿದಳಾಗಿ ಅಮ್ಮನೇ ಸಸ್ಯಹೃದಯದ ಅಭಿಮಾನಿ ದೇವತೆ.”

“ಮನುಷ್ಯನಿಗೆ ರೋಗ ಯಾಕೆ ಬರುತ್ತದೆ?”

“ಪ್ರಕೃತಿ ಅಂದರೆ ಅಮ್ಮ. ತಾಯಿ ಸಹಜವಾಗಿಯೇ ಆರೋಗ್ಯಪೂರ್ಣೆಯಾಗಿರುತ್ತಾಳೆ. ಆದರೆ ಮನುಷ್ಯ ತನ್ನ ವಿಕಾರದಿಂದ ಪ್ರಕೃತಿಗೆ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತ ರೋಗಕ್ಕೆ ಗುರಿಯಾಗುತ್ತಾನೆ. ಅದನ್ನು ಗುಣಪಡಿಸಬಲ್ಲವಳು ಪ್ರಕೃತಿ ಮಾತ್ರ. ಅದಕ್ಕಾಗಿಯೇ ತನ್ನಲ್ಲಿ ಸಸ್ಯಗಳನ್ನು ಇಟ್ಟುಕೊಂಡಿದ್ದಾಳೆ. ಆ ಸಸ್ಯಗಳನ್ನು ಗುರುತಿಸಬೇಕು.”

“ಅಂಥ ಸಸ್ಯಗಳ ಲಕ್ಷಣಗಳೇನು?”

“ಮಣ್ಣಲ್ಲಿದ್ದಾಗ ಅದು ಹ್ಯಾಗೆ ಜೀವಂತವಾಗಿರುತ್ತ, ಗಾಳಿ ಮಳೆಗೆ ಸ್ಪಂದಿಸುತ್ತ ಬೆಳೆಯುತ್ತದೋ ಹಾಗೆ ರೋಗಿಯ ದೇಹದಲ್ಲೂ ಅದು ಗುಣರೂಪದಲ್ಲಿ ಬೆಳೆದು ರೋಗವನ್ನ ನಾಶ ಮಾಡಬೇಕು.”

“ರೋಗವು ನಿನ್ನ ದೇಹದ ಲಯವನ್ನರಿತು ಹ್ಯಾಗೆ ನಿನ್ನನ್ನು ಪ್ರವೇಶಿಸುತ್ತದೋ ಅದೇ ರೀತಿ ಸಸ್ಯ ಕೂಡ ನಿನ್ನ ರೋಗ ಮತ್ತು ಲಯಗಳನ್ನರಿತು ಪಸರಿಸಬೇಕು. ಹಾಗೆ ಪಸರಿಸಿದ್ದು ತಿಳಿಯಬೇಕಾದರೆ ಸಸ್ಯಹೃದಯ ತಿಳಿದಿರಬೇಕು.”

“ಸಸ್ಯಹೃದಯ ತಿಳಿಯತೆಂದು, ಹ್ಯಾಗೆ ಗೊತ್ತಾಗುತ್ತದೆ? ಅದಕ್ಕೆ ನಮ್ಮ ಪೂರ್ವ ಸಿದ್ಧತೆಗಳೇನು?”

“ನೀನು ಆ ಸಸ್ಯವನ್ನು ಮುಟ್ಟುತ್ತೀಯಲ್ಲ. ಅದರ ಮಿಡಿತ ನಿನ್ನಲ್ಲಿ ಪ್ರವೇಶ ಮಾಡುತ್ತದೆ. ಅದು ನಿನಗೂ ಗೊತ್ತಾಗುತ್ತದೆ. ಯಾಕೆಂದರೆ ನಿನಗೆ ಅಪರಿಚಿತವಾದೊಂದು ಲಯಗಾರಿಕೆ ನಿನ್ನ ನಾಡಿಗೆ ಬಡಿಯುತ್ತಿರುತ್ತದೆ. ಆಗ ನಿಧಾನವಾಗಿ ನಿನ್ನ ದೇಹ ಒಂದು ಸಸ್ಯವಾದ ಅನುಭವವಾಗುತ್ತದೆ! ಮೈತುಂಬ ಎಲೆ ಚಿಗುರು ಮೂಡಿ ಗಾಳಿಗೆ ಅಲುಗಾಡಿದ ಅನುಭವವಾಗುತ್ತದೆ. ನಿನ್ನ ಕಾಲು ಅದರೊಂದಿಗೆ ಬೇರು ಬಿಟ್ಟಿವೆ ಅನಿಸುತ್ತದೆ. ಆಗ ನೀನು ಆ ಎಲ್ಲದರ ಒಂದು ಭಾಗವಾದುದರ ಅನುಭವ ನಿನಗಾಗುತ್ತದೆ. ಈಗ ರೋಗವನ್ನು ಅನುಭವಿಸುವ ದೇಹವೂ ನೀನೇ! ಅದನ್ನು ಗುಣಪಡಿಸುವ ಸಸ್ಯವೂ ನೀನೇ! ರೋಗದಂಥ ಕೃತಕತೆ ಇಲ್ಲಿದೆಯಲ್ಲಾ ಅಂತ ಅನ್ನಿಸಿ ಅದನ್ನು ಗುಣಪಡಿಸುವ ಚಡಪಡಿಕೆ ನಿನ್ನಲ್ಲಿ ಉಂಟಾಗುತ್ತದೆ. ಇದು ಶಿವಾಪುರದ ಗವಿಯ ವೈದ್ಯ.

ಇದು ತಿಳಿಯಬೇಕಾದರೆ, ಪೂರ್ವಸಿದ್ಧತೆ ಎಂದರೆ ಅಮ್ಮನ ಬಗ್ಗೆ ನಿರ್ಮಲವಾದ ಭಕ್ತಿ ನಿನ್ನಲ್ಲಿರಬೇಕು. ಅದಿಲ್ಲದಿದ್ದಲ್ಲಿ ಅಂಥ ವೈದ್ಯಗಾರಿಕೆ ಒಂದು ಪಿಶಾಚಿ ಕೃತ್ಯ!”