ಅದು ನಡೆದದ್ದು ಹೀಗೆ: ಈ ಸಲದ ಯುಗಾದಿಯಾಗಿ ಕೊಯ್ಲಿನ ಹುಣ್ಣಿಮೆ ಮಂಗಳವಾರ ಬಂದಿತ್ತು. ಅದು ನಡೆಯುವುದು ಗವಿಯ ಮುಂದೆ. ಆ ದಿನ ಸಂಜೆ ಸಮಯದಲ್ಲಿ ಸೀಮೆಯ ಒಂದು ಕಡಿಮೆ ನಲವತ್ತು ಹಟ್ಟಿಯ ಭಕ್ತಾದಿಗಳು ಗವಿಯ ಮುಂದೆ ಸೇರಿ ಕುಣಿಯುವುದು, ಕಾರಣಿಕ, ಪ್ರಸಾದ-ಇತ್ಯಾದಿ ಪಾರಂಪರಿಕ ಕಾರ್ಯಕ್ರಮಗಳಿದ್ದವು.

ಜಯಸೂರ್ಯ ತನಗೆ ಬೇಕಾದ ಎಲ್ಲ ಜ್ಞಾನವನ್ನು ಗ್ರಹಿಸಿಯಾಗಿತ್ತು. ಪ್ರಕೃತಿಗೆ ವಿರೋಧವಾದ ವಿಷವಿದ್ಯೆಯನ್ನು ಗವಿಯ ಪರಂಪರೆ ತಿರಸ್ಕರಿಸಿತ್ತು. ಶಿವಪಾದನಿಗೆ ತಿಳಿಸದೆ ಆ ವಿದ್ಯೆಯನ್ನ ಈತ ಕಲಿತುದೇ ಅಲ್ಲದೆ ಅದರ ಸಾಧ್ಯತೆಗಳ ಆಧಾರದಲ್ಲಿ ಹೊಸ ಪ್ರಯೋಗಗಳನ್ನೂ ಮಾಡಿದ್ದ. ಶಿವಪಾದನಿಗಿದು ತಿಳಿದರೆ ಅವನ ಕೋಪಕ್ಕೆ ಗುರಿಯಾಗುವುದು ನಿಶ್ಚಿತವೆಂದು ಅವನಿಗೆ ಗೊತ್ತಿತ್ತು.

ಕೊಯ್ಲಿನ ಹಬ್ಬದಂದು ಗವಿಯ ಹಿರಿಕಿರಿಯ ಶಿಷ್ಯರು ಎಲ್ಲೆಲ್ಲಿದ್ದರೆ ಅಲ್ಲಲ್ಲಿಂದ ಬಂದು ಅಮ್ಮ ಮತ್ತು ಶಿವಪಾದರಿಗೆ ಭಕ್ತಿ ಸಲ್ಲಿಸುವುದು ವಾಡಿಕೆ. ಸೋಮವಾರ ಬೆಳಿಗ್ಗೆಯಿಂದಲೇ ಶಿವಪಾದನ ದೂರ ದೂರದ ಶಿಷ್ಯರು ಬಂದು ಗವಿಯಲ್ಲಿ ಸೇರತೊಡಗಿದ್ದರು. ಅವರ ಆತಿಥ್ಯವನ್ನೆಲ್ಲ ಕುರುಮುನಿಯೇ ನೋಡಿಕೊಳ್ಳಬೇಕಾಗಿತ್ತು. ಜಯಸೂರ್ಯ ಇಂಥ ಜವಾಬ್ದಾರಿಗಳನ್ನು ಹೊರುವ ಪೈಕಿ ಅಲ್ಲ. ಈ ಗದ್ದಲದಲ್ಲಿ ಜಯಸೂರ್ಯನಿಗೆ ಶಿವಪಾದನಿರಲಿ, ಕುರುಮುನಿ ಸಿಕ್ಕುವದೂ ಸಾಧ್ಯವಿರಲಿಲ್ಲ. ಬಂದ ಶಿಷ್ಯರನ್ನು ಅಮ್ಮನ ಚೀಲಾಗಳೆಂದು ಟೀಕಿಸಿ ಒಳಗೊಳಗೇ ನಗುತ್ತಿದ್ದ. ಇವರ ಉಸಾಬರಿಯೇ ಬೇಡವೆಂದು ಆ ದಿನ ಕಾಡಿನಲ್ಲಿ ಕಣ್ಮರೆಯಾದ.

ಪುಣ್ಯಾತ್ಮ ಇಷ್ಟು ವರ್ಷ ಗವಿಯಲ್ಲಿದ್ದವನು ತಪ್ಪಿಕೂಡ ಬೆಳ್ಳಿಯನ್ನಾಗಲಿ, ಜಟ್ಟಿಗನನ್ನಾಗಲಿ ನೆನೆದವನಲ್ಲ. ಅಷ್ಟೇ ಯಾಕೆ ಮೂಲ ಹಟ್ಟಿಯನ್ನು ಕೂಡ ಜ್ಞಾಪಿಸಿಕೊಂಡವನಲ್ಲ. ಅವನ ಬಗ್ಗೆ ಮಾತಾಡುವಾಗ “ಕಲ್ಲಿನ ಮನುಷ್ಯ” ಎಂದು ಕುರುಮುನಿ ಸರಿಯಾಗಿಯೇ ಹೇಳಿದ್ದಾನೆಂದು ಶಿವಪಾದ ಅಂದುಕೊಳ್ಳುವುದಿತ್ತು. ತಾನು ಹುಟ್ಟಿದ ಹಟ್ಟಿಯ ಬಗ್ಗೆಯಾಗಲಿ, ಪ್ರದೇಶದ ಬಗ್ಗೆಯಾಗಲಿ, ಯಾವುದೇ ಅರ್ದ್ರ ಭಾವನೆಗಳು ಅವನಲ್ಲಿರಲಿಲ್ಲ.

“ನಿನ್ನ ಹಟ್ಟಿ ಯಾವುದು?”

ಎಂದು ಕುರುಮುನಿ ಕೇಳಿದರೆ ಗೊತ್ತಿಲ್ಲವೆಂದೇ ಹೇಳಿದ್ದ!

“ಹೋಗಲಿ ನಿನ್ನ ಅವ್ವ, ಅಪ್ಪ, ಯಾರು? ಅದನ್ನಾದರೂ ಹೇಳು ಮಾರಾಯಾ” ಅಂದರೆ “ನನಗೆ ಯಾರ ಉಸಾಬರಿಯೂ ಬೇಕಿಲ್ಲ; ನನ್ನ ಉಸಾಬರಿಗೆ ಯಾರೂ ಬರಕೂಡದು, ಅಷ್ಟೆ.”

ಎಂದಿದ್ದ ಅಷ್ಟೇ ಅಲ್ಲ ಶಿವಪಾದನ ಬಗ್ಗೆ ಗೌರವ ಭಾವನೆ ಇದ್ದರೂ ಒಪ್ಪಿಕೊಂಬ ಸಹನೆ ಅವನಲ್ಲಿರಲಿಲ್ಲ. “ಅಖಂಡ ನಾನೇ ನಾನಾಗಿ ಯಾರ ಹಂಗಿಲ್ಲದೆ ನನ್ನ ಸಾಮರ್ಥ್ಯ ಮತ್ತು ಪ್ರತಿಭೆಗಳಿಂದಲೇ, ಸ್ವಯಂನಿರ್ಮಿತನಾದ ಸೂರ್ಯ ನಾನು!” ಎಂದಿದ್ದ. ಆದ್ದರಿಂದ ಪುಣ್ಯಾತ್ಮ ಯಾವ ಸ್ಥಳಕ್ಕೆ ಹೋದರೂ ಹೊಸಬನಾಗಿಯೇ ಇರಬಯಸುತ್ತಿದ್ದ. “ಆತ ಗಾಯಗೊಂಡ ಜಂಬಗಳುಳ್ಳಾತ. ಅವನ ಆತ್ಮ ಕೀವುಗಟ್ಟಿದ ವ್ರಣಗಳಿಂದ ಹೊಲಸು ನಾರುತ್ತಿದೆ” ಎಂದು ಕುರುಮುನಿ ತೀರ್ಮಾನಿಸಿ ಬಿಟ್ಟಿದ್ದ.

ಕಾಡು ಹೊಕ್ಕನಲ್ಲ-ಅಲೆದಾಡುತ್ತ, ಸುಮಾರು ಇಳಿಹೊತ್ತಿನಲ್ಲಿ ಜಟ್ಟಿಗನ ಹಟ್ಟಿಯ ಸಮೀಪದ ದೊಡ್ಡ ಹುಲುಗಲು ಮರದ ಹತ್ತಿರ ಬಂದಿದ್ದಾಗ-ಮರದ ಕೆಳಗಡೆಯಿಂದ ಬೀಸಿ ಬರುತ್ತಿದ್ದ ಸೂಸುಗಾಳಿ ಕಾರಣವಾಗಿ ಜಯಸೂರ್ಯನಿಗೆ ಬೆಳ್ಳಿಯ ನೆನಪಾಯಿತು. ಜೋರಾಗಿ ಉಸಿರು ಒಳಗೆ ತಗೊಂಡ. ಮೆಲ್ಲಗೆ ಚಿಗುರೆಲೆಗಳ ಸ್ಪರ್ಶಿಸಿ, ಮುದ್ದಿಸಿ ಅಲುಗಿಸುತ್ತ, ಮುಟ್ಟಿದಲ್ಲಿ ಮುದ ನೀಡುತ್ತ, ತಾನೂ ಮುದಗೊಳ್ಳುವ ಪ್ರೇಮಿಯ ಹಾಗೆ, ಅಥವಾ ಮೈಮರೆಸಿ ಕೆಡಿಸುವ ಅತ್ಯಾಚಾರಿಯ ಹಾಗೆ ಗಾಳಿಯ ನಡಾವಳಿಯಿತ್ತು. ಮ್ಯಾಲೆ ಮುತ್ತಿಕ್ಕಿದ ತೆಳುಮೋಡಗಳಿಂದ ಸೂರ್ಯನ ಮೋರೆ ರಾಡಿಯಾಗಿತ್ತು.

ಆ ದಿನ ಸುಮಾರು ಇದೇ ಹೊತ್ತಿನಲ್ಲಿ ಇದೇ ಮರದ ಬಳಿಗೆ ಬೆಳ್ಳಿ ಮತ್ತು ಜಯಸೂರ್ಯ ಬಂದಿದ್ದರು. ಲಯಾನುಸಾರ ಹೆಜ್ಜೆಯಿಡುತ್ತ ಕಾಡುಪರಿಮಳ ಸೂಸುತ್ತ ಬೆಳ್ಳಿ ಬಂದು ಕೂತಾಗ ಇವನ ಮನವೆಂಬ ನವಿಲು ರೆಕ್ಕೆ ಬಿಚ್ಚಿ ಕುಣಿಯತೊಡಗಿತ್ತು. ‘ಇನ್ನವಳ ಮಾದಕರೂಪ… ಬಿಗಿದ ಹೆದೆಯಂಥ ಎದೆಯೊಂದೇ ಸಾಕಯ್ಯ ಹುಚ್ಚು ಹಿಡಿಸುವುದಕ್ಕೆ!’ ಎಂದುಕೊಂಡ. ಮೈ ಬಿಸಿಯೇರಿತು, ತಕ್ಷಣ ಬರಸೆಳೆದು ಕನಸಿಗೆ ಕರೆದೊಯ್ದ;

ತಾವಿಬ್ಬರೂ ಅಲೆದಾಡಿದ ಸ್ಥಳಗಳಲ್ಲಿ ಅಲೆದಾಡಿದ. ಆಯಾಯಾ ಸ್ಥಳಗಳಲ್ಲಿ ಅವಳಾಡಿದ ಮಾತುಗಳನ್ನು ಅವಳ ಧಾಟಿಯಲ್ಲೇ ಆಡಿದಂತೆ ಕಲ್ಪಿಸಿಕೊಂಡ. ಅವಳೊಂದಿಗಿದ್ದೇನೆಂದೇ ಭಾವಿಸಿ, ಆ ದಿನ ಕೂತ ಹಾಗೇ ಕೂತು, ನಡೆದ ಹಾಗೇ ನಡೆದು ಆನಂದಿಸಿದ. ಏನೆಂದು ವಿವರಿಸಲಾಗದ ಅನುಭವಗಳ ಬಿರುಗಾಳಿಗೆ ಸಿಕ್ಕು ಏನು ಮಾಡಲೂ ತೋಚದೆ ಕಾಲು ದಣಿಯುವತನಕ ಅಲೆದಲೆದು ಕೂತ. ಅವಳ ಎಲಡಿಕೆ ತಿಂದ ಒದ್ದೆ ತುಟಿಗಳ ಜ್ಞಾಪಿಸಿಕೊಂಡ. ಸಂತೋಷವಾದಾಗ ಅವಳ ಮೂಗು ಕೆಂಪಾಗಿ ಬಿರುಸಾದುದನ್ನು ಜ್ಞಾಪಿಸಿಕೊಂಡ. ಸಂತೋಷವಾದಾಗ ಅವಳ ಮೂಗು ಕೆಂಪಾಗಿ ಬಿರುಸಾದುದನ್ನು ಹೊಳೆಯುವುದನ್ನು ಜ್ಞಾಪಿಸಿಕೊಂಡ. ಆಗ ಅವಳ ಇಡೀ ಮುಖ ತೊಳೆದ ಕನ್ನಡಿಯಂತೆ ಸ್ವಚ್ಛವಾಗಿ ಆಕಾಶ, ಹಸಿರು, ಹೂಗಳನ್ನ ಪ್ರತಿಬಿಂಬಿಸುವುದನ್ನ ಜ್ಞಾಪಿಸಿಕೊಂಡ.

ಕೊನೆಗೆ ಬೆಳ್ಳಿ ಮದುವೆ ಮಾಡಿದ ಗಿಡಗಳ ಬಳಿಗೆ ಹೋದ. ಒಂಟಿ ಗಿಡ ಇತ್ತು. ಈಗ ದೊಡ್ಡದಾಗಿತ್ತು. ಉಳಿದೊಂದು ಗಿಡ ಬೆಳ್ಳಿಯದೋ? ಜಟ್ಟಿಗನದೋ? ಗೊತ್ತಾಗಲಿಲ್ಲ. ಕಾರೇ ಹಣ್ಣಿಗಾಗಿ ತಾನು ಹೊದದ್ದು, ಕಾರೀ ಮುಳ್ಳು ತರಚಿ ಕೈಗೆ ರಕ್ತ ಬಂದದ್ದು ನೆನಪಾಗಿ ವಾಸ್ತವ ಲೋಕಕ್ಕೆ ಬಂದ. ಬೆಳ್ಳಿಯ ಕನಸು ಕಾಂಬುದು ಸಲ್ಲದೆಂದು ಬೆಟ್ಟ ಏರತೊಡಗಿದ.

ನೆನಪುಗಳು ಈ ಪರಿ ಕಾಡಿದ್ದಕ್ಕೆ ಆಶ್ಚರ್ಯಪಡುತ್ತ ಬೆಟ್ಟ ಹತ್ತಿ, ಅದರ ನೆತ್ತಿಗೆ ತಲುಪುವಾಗ ಹುಣ್ಣಿವೆ ಬೆಳ್ದಿಂಗಳು ಬಲಿತ್ತಿತ್ತು. ಬೆಟ್ಟದ ತುಂಬ ಗುಡ್ಡರು ಸೇರಿ ಗದ್ದಲವಾಗುತ್ತಿತ್ತು. ಗವಿಯೊಳಗೆ ಪ್ರವೇಶಿಸುವುದಂತೂ ಬೇಕಿರಲಿಲ್ಲ. ಗವಿಯ ಮುಂದಿನ ಬಯಲಿನಲ್ಲಿ ಮಧ್ಯೆ ಆಯಕಟ್ಟಾದ ಜಾಗದಲ್ಲಿ ದೊಡ್ಡ ದೊಡ್ಡ ಮರದ ದಿಮ್ಮಿಗಳನ್ನು ಹಾಕಿ ಬೆಂಕಿ ಮಾಡಿದ್ದರು. ಅದರ ಸುತ್ತ ಕುಣಿಯುವವರಿಗೆ ಜಾಗ ಬಿಟ್ಟು ಜನ ಕೂತಿದ್ದರು. ಅವರ ಮಧ್ಯೆ ಇವನೂ ಕೂತ. ಯಾರೊಂದಿಗೂ ಸಂಪರ್ಕವಿರಲಿಲ್ಲವಾಗಿ ಟಕಮಕ ಅವರಿವರನ್ನು ನೋಡುತ್ತ, ಅವರ ಬೆರಗಿನ ನೋಟಗಳಿಗೆ ಗುರಿಯಾಗುತ್ತ ಆಸೀನನಾದ. ಬೆಟ್ಟಕ್ಕೆ ಬಂದ ಥರಾವರಿ ಬಟ್ಟೆಯ ಜನರ್ಯಾರೂ ಇವನನ್ನ ಆಕರ್ಷಿಸಲೇ ಇಲ್ಲ. ಹೆಂಗಸರ ಮಧ್ಯೆ ಕಣ್ಣಿಂದಲೇ ಬೆಳ್ಳಿಯನ್ನು ಹುಡುಕಿದ. ಕಾಣಿಲಿಲ್ಲ. ಜಟ್ಟಿಗನೂ ಸಿಕ್ಕಲಿಲ್ಲವಾಗಿ ಬೋರುಬೋರಾಯಿತು. ಆಮೇಲೆ ದೊಡ್ಡ ಮರದಾಚೆ ದುಡಿಗಳ ರಭಸದ ದನಿ ಕೇಳಿಸಿತು. ಬಯಲಿನಲ್ಲಿ ಕೂತಿದ್ದ ಜನರ ಉತ್ಸಾಹ ಕೆರಳಿ ‘ಹೋ’ ಎಂದು ಎದ್ದು ಗಲಾಟೆ ಮಾಡಲಾರಂಭಿಸಿದರು. ಆಮೇಲೆ ಗೊತ್ತಾಯಿತು: ಅಮ್ಮನ ಪೂಜೆ ಜರುಗಿ ಪ್ರಸಾದ ವಿತರಣೆ ಸುರುವಾಯಿತೆಂದು.

ಬಹಳಷ್ಟು ಜನ ಎಲೆಗಳಲ್ಲಿ ಪ್ರಸಾದ ತಗೊಂಡರು. ಉಳಿದವರು ಅಂಗೈಗಳಲ್ಲೇ ಪ್ರಸಾದ ತಗೊಂಡು ತಿಂದರು, ಕುಡಿದರು. ಬೆಳಕಿನ ಬಳೆ ನಗುತ್ತ ನೀಲ ನೆಮ್ಮದಿಯಲ್ಲಿಯ ಚಂದ್ರ ಬೆಟ್ಟದ ಮೇಲೆ ಹಾಲು ಸುರಿಯುತ್ತಿದ್ದ, ಅದನ್ನೂ ಕುಡಿದರು. ಒಂದು ಮೂಲೆಯಲ್ಲಿ ಉತ್ಸಾಹದ ಹುಡುಗರು ಜಟ್ಟಿಗನ ಹಿರಿತನದಲ್ಲಿ ದುಡಿಗಳನ್ನು ಬಿಗಿದುಕೊಂಡು ನುಡಿಸತೊಡಗಿದರು. ಅಷ್ಟರಲ್ಲಿ ದೊಡ್ಡ ಪಂಜನ್ನು ದೊಡ್ಡ ಪಂಜನ್ನು ಎತ್ತಿಕೊಂಡು ಒಬ್ಬ ಹುಡುಗ ಓಡೋಡಿ ಬಂದ. ಅವನ ಹಿಂದಿನಿಂದ ಹಿರಿಯನೊಬ್ಬ ಬಗೆಬಗೆ ಬಣ್ಣ ಮತ್ತು ಹೂಗಳಿಂದ ಅಲಂಕೃತವಾದ ಮಡಕೆಯನ್ನು ತಲೆಯ ಮೇಲಿಟ್ಟುಕೊಂಡು ಬಂದ. ಇಬ್ಬರೂ ಒಂದು ಸಾರಿ ಬಯಲ ಮಧ್ಯದ ಬೆಂಕಿಯನ್ನು ಸುತ್ತಿ ಆ ಮೂಲಕ ಜನರನ್ನು ದೂರ ಸರಿಸಿ ದೊಡ್ಡ ಮರದಡಿ ಮಡಕೆಯನ್ನಿಟ್ಟರು. ಈಗ ಜನ ತಲೆ ಮೇಲೆ ಮುಗಿದ ಕೈ ಹೊತ್ತುಕೊಂಡು ಗವಿಯ ಕಡೆ ನೋಡುತ್ತ ಕಾದರು. ಅವರ ನಿರೀಕ್ಷೆ ಹುಸಿಯಾಗಿಲಿಲ್ಲ. ಶಿವಪಾದ ಬಂದ! ಈಗ ಜನರ ಉತ್ಸಾಹ ಮೇರೆ ಮೀರಿತು. ಪಾದಮುಟ್ಟಿ ನಮಸ್ಕರಿಸುವವರು, ಅಡ್ಡ ಬೀಳುವವರು, ಮಕ್ಕಳನ್ನು ಅಡ್ಡ ಚೆಲ್ಲುವವರು-ಶಿವಪಾದ ಎಲ್ಲರನ್ನೂ ದಾಟುತ್ತ ಮಡಿಕೆಯ ಬಳಿ ಬಂದು ಕೂತ. ಆಗಲೂ ಜನರ ನೂಕುನುಗ್ಗಲು ತಗ್ಗಲಿಲ್ಲ. ಜಟ್ಟಿಗ ಮುಂದಾಗಿ ಜನರನ್ನ ಚೆದುರಿಸಿ ಶಿವಪಾದದ ಪಾದ ಮುಟ್ಟಿ ಅಪ್ಪಣೆ ಕೇಳಿದ. ಶಿವಪಾದ ಸಮ್ಮತಿಸಿದ ಮೇಲೆ ಮೇಳಗಳಿಗೆ ಕುಣಿಯಿರಯ್ಯಾ ಎಂದು ಸನ್ನೆ ಮಾಡಿದ.

ಈಗ ಅನೇಕರು ಮೇಳವಾಗಿ ಒಂದೇ ತಾಳದಲ್ಲಿ ದುಡಿ ನುಡಿಸತೊಡಗಿದರು. ಜಟ್ಟಿಗನೂ ತನ್ನ ದುಡಿ ತಗೊಂಡು ಅವರನ್ನು ಸೇರಿಕೊಂಡ. ಈಗ ಮೆಳೆಯ ಕಡೆಯಿಂದ ಒಂದೊಂದು ಹಟ್ಟಿಯ ಹೆಂಗಸರು ಹಿಂಡು ಹಿಂಡಾಗಿ ಬಂದು ಬೆಂಕಿಯ ಸುತ್ತ ಕುಣಿದರು. ಆಮೇಲೆ ಹುಡುಗರ ತಂಡ ಬಂತು. ಹುಡುಗಿಯರ ತಂಡಗಳು ಬಂದವು. ಕುಂತ ನಿಂತ ಜನ ಹುರುಪಾದರು.

ಈಗ ಬಂದ ಹುಡುಗಿಯರ ತಂಡ ಎಲ್ಲ ಅರ್ಥಗಳಲ್ಲಿ ಮೇಲಾಗಿತ್ತು. ಇವರ ಕುಣಿತದಲ್ಲಿ ಪರಿಣತಿ ಇತ್ತು. ತಂಡವಾಗಿ ಕುಣಿವ ಹೊಂದಾಣಿಕೆ ಇತ್ತು. ಜಯಸೂರ್ಯನಿಗೆ ಇದು ಇನ್ನೂ ಪ್ರಿಯವಾದ ತಂಡವಾಯ್ತು. ಯಾಕೆಂದರೆ ಇದರಲ್ಲಿಯೇ ಬೆಳ್ಳಿ ಇದ್ದಳು. ಅವಳ ತೆಳುವಾದ ಮೈಗೆ ಸಪೂರವಾದ ಕೊರಳು, ಎಣ್ಣೆ ಹಚ್ಚಿ ಬಾಚಿಕೊಂಡು ನಿಯಂತ್ರಣದಲ್ಲದ್ದೂ ಚಂದ ಕಾಣುವ ಕೂದಲಿತ್ತು. ಎಲಡಿಕೆ ಹಾಕಿಕೊಂಡ ಬಾಯಲ್ಲಿ ಒಂದು ಬದಿಗೆ ಗಲ್ಲ ಉಬ್ಬಿ ರಸ ತುಟಿಗಳ ಮ್ಯಾಲೆ ತುಳುಕುತ್ತಿತ್ತು. ತಮ್ಮ ಹೆಜ್ಜೆಗಳ ತಾಳಕ್ಕೆ ಹೊಂದಿಕೊಂಡವೆಂದು ತೋರಿದೊಡನೆ ತಂಡದ ಎಲ್ಲರೂ ಚುರುಕಿನಿಂದ ಹೆಜ್ಜೆ ಹಾಕತೊಡಿದರು. ಕೂಡಿದವರೆಲ್ಲ ಹೋ ಎಂದು ಕೂಗಿ ಸಂತೋಷದ ನಗೆಯಲೆ ಎಬ್ಬಿಸಿ ಸ್ವಾಗತಿಸಿದರು. ದುಡಿಗಳೊಂದಿಗೆ ಪ್ರೇಕ್ಷಕರೂ ಚಪ್ಪಾಳೆ ತಟ್ಟಿ ತಾಳ ಕುಟ್ಟಿದರು. ಬೆಳ್ಳಿ ಮಿಂಚಿನಂತೆ ಜಿಗಿಯುತ್ತ ಪ್ರತಿಯೊಬ್ಬ ಹುಡುಗಿಯ ಎಡಗೈಗೆ ಹೊಡೆದು ಇನ್ನೊಂದು ಪೆಟ್ಟಗೆ ಸೊಂಟದ ಮೇಲೆ ಕೈ ತಂದು ಎರಡು ಹೆಜ್ಜೆ ಕುಣಿದು ಮೂರನೇ ಏಟಿಗೆ ಬಲಗಾಲಿನ ಹಿಂಬಡದಿಂದ ನೆಲಕ್ಕೆ ಏಟು ಹಾಕಿ ಹಾರಿ ಕುಣಿದಳು. ಜಟ್ಟಿಗನಿಗೆ ಇದರಿಂದ ಭಾರೀ ಪ್ರೋತ್ಸಾಹವಾಯಿತು. ಮುಂದೆ ಮುಂದೆ ಸರಿಯುತ್ತ ಬಂದು ಬೆಳ್ಳಿಯ ಮುಂದೇನೇ ನಿಂತು ಕುಣಿ ಎಂದು ಕಣ್ಣಿನಲ್ಲೇ ಆಹ್ವಾನ ಕೊಡುತ್ತ ದುಡಿ ನುಡಿಸಿದ.

ಬೆಳ್ಳಿ ಕೆಲವು ತಿಂಗಳ ಹಿಂದೆಯಷ್ಟೇ ಹಲಿವುಳ್ದಳಾಗಿ ತುಂಬ ನೊಂದಿದ್ದಳು. ಅವಳನ್ನು ಸಮಾಧಾನ ಪಡಿಸಲಿಕ್ಕೆ ಊರಿನ ಹೆಂಗಸರೆಲ್ಲ ಪ್ರಯತ್ನಿಸಿ ಕೊನೆಗೆ ಅವಳ ಬಗ್ಗೆ ಕಾಳಜಿ ಮಾಡದ ಅಮ್ಮನಿಗೇ ಶಾಪ ಹಾಕಿದ್ದರು. ಈಗ ಗಂಡ ಹೆಂಡತಿ ಹಳೆಯ ದುಃಖವ ಮರೆತು ಹುಡಗ ಹುಡಿಗಿಯರಾಗಿ ಕುಣಿಯುವುದು ಕಂಡು ಇಡೀ ಸಮೂಹ ‘ಹೋ’ ಎಂದು ಚಪ್ಪಾಳೆ ತಟ್ಟಿ ಆನಂದಿಸಿದತು!

ಜಯಸೂರ್ಯ ಋತು ತಾಗಿದ ಮರದ ಹಾಗೆ ಚುರುಕಾದ. ಅವನಾಗಲೇ ಸಲ್ಲದು ಸಲ್ಲದೆಂದುಕೊಂಡರೂ ಕಣ್ಣತುಂಬ ಬೆಳ್ಳಿಯ ಕನಸು ತುಂಬಿಕೊಂಡಿದ್ದ. ತನ್ನ ಕಡೆಗೆ ಯಾರೋ ನೋಡುತ್ತಿರುವರೆನ್ನಿಸಿ ಯಾರೆಂದು ನೊಡಿದ. ಜಟ್ಟಿಗ ಇವನನ್ನೇ ನೋಡುತ್ತಿದ್ದ ! ತಕ್ಷಣ ಮನಸ್ಸಿನಲ್ಲಿ ‘ಜಟ್ಟಿಗ ಸಾಯಬಾರದೆ?’ ಎಂದೂ ಒಂದಾಸೆ ಮೂಡಿ ಕಣ್ಣು ಫಳ್ಳನೆ ಹೊಳೆದವು. ಅದು ಅಸಾಧ್ಯವೆನ್ನಿಸಿ, ನಾಚಿ ತಂತಾನೆ ಸಂಕೋಚಗೊಂಡು ಬೇರೆ ಹುಡುಗಿಯರನ್ನ ನೋಡಿ ಆ ಭಾವನೆಯಕನ್ನು ಮರೆಯಲು ಪ್ರಯತ್ನಿಸಿದ. ಈಗ ಎಲ್ಲರ ಕಣ್ಣು ಕುಣಿವ ಬೆಳ್ಳಿಯ ಮ್ಯಾಲೆ ನೆಟ್ಟು ಹೊಳೆಯತೊಡಗಿದವು. ಇಡೀ ಕಾಡು ಬಾಯಿ ಮುಚ್ಚಿಕೊಂಡು ಮೈಯೆಲ್ಲ ಕಣ್ಣು ಕಿವಿಯಾಗಿ ತೆರೆದುಕೊಂಡು ಮೆಚ್ಚುಗೆಯಿಂದ ಕುಣಿತ ನೋಡುತ್ತಿರುವಂತೆ ಕಂಡಿತು.

ಆಮೇಲೆ ಉಳಿದ ತರುಣರ ಹಿಂಡು ಬಂದು ಜಟ್ಟಿಗನನ್ನು ಕೂಡಿಕೊಂಡಿತು. ಎಲ್ಲರೂ ಯೌವನದ ಸೊಕ್ಕನ್ನು ಪ್ರದರ್ಶಿಸುತ್ತ, ಬಡಿತಕ್ಕೆ ಅನುಗುಣವಾಗಿ ಮೈಗಳ ಕುಣಿಸುತ್ತ, ಎಲೆತಿಂದ ಕೆಂಪು ನಗೆಗಳ ನಗುತ್ತ, ಪೆಟ್ಟಿಗನುಗುಣವಾಗಿ ಆಗಾಗ ಹಾರಾಡಿ ಸ್ಥಳ ಬದಲಿಸುತ್ತ, ಹುಡುಗಿರಯ ಕಡೆಗೆ ಪ್ರೇಮದ ನೋಟಗಳ ಬೀರಿ ಅರ್ಥಪೂರ್ಣವಾಗಿ ಭುಜಗಳ ಹಾರಿಸುತ್ತ ದುಡಿಗಳ ನುಡಿಸಿದರು. ಜನ ಅಳತೆಮೀರಿ ಆನಂದಪಡುತ್ತ, ಸಹಜವಾಗಿ ನಗುವುದಕ್ಕಿಂತ ಹೆಚ್ಚಾಗಿ ನಕ್ಕರು. ಅಪರಿಚಿತವಾದ ಲೋಕವೊಂದರಲ್ಲಿ ಆನಂದದಿಂದ ನಲಿದಾಡುತ್ತಿರುವಂತೆ, ಅಥವಾ ಮರೆತದ್ದನ್ನು ಪುನಃ ಪಡೆದಂತೆ ಆನಂದಗೊಂಡರು. ನಿಜ ಹೇಳಬೇಕೆಂದರೆ ಆ ದುಡಿಯ ಏಟು ಹಾಗೂ ಆ ಕುಣಿತ ಇವುಗಳ ವಿನಾ ಜಗತ್ತಿನಲ್ಲಿ ಇನ್ನೊಂದಿದೆ ಎಂಬುದನ್ನೇ ಮರೆತರು.

ಜಯಸೂರ್ಯನಿಗಂತೂ ಬೆಳ್ಳಿ ತನ್ನ ಹೃದಯದಲ್ಲಿ ಹೆಜ್ಜೆಯಿಟ್ಟು ಕುಣಿದಂತಿತ್ತು. ಸ್ವಚ್ಛಂದವಾದ, ಉಜ್ವಲವಾದ ಆನಂದ ಅವಳ ಮುಖ ಮತ್ತು ಕಣ್ಣುಗಳಲ್ಲಿ ಹೊಳೆಯುತ್ತಿದ್ದುದನ್ನು ಈತ ಕಣ್ತುಂಬ ನೋಡಿದ. ನೋಡಿದ ಎನ್ನುವುದಕ್ಕಿಂತ ಹೀರಿದ ಎನ್ನುವುದು ಹೆಚ್ಚು ಉಚಿತ. ಅಥವಾ ವಸಂತದ ಸಾರಸಾರಾಂಶದಂತಿದ್ದ ಅವಳ ಸೌಂದರ್ಯವನ್ನು ತನ್ನ ಹೃದಯಕ್ಕೆ ಬಗ್ಗಸಿಕೊಂಡ ಎನ್ನುವುದೇ ಸರಿಯಾದ ಮಾತು. ಕಾಡಿನ ಹೂಗಳ ಸೌಂದರ್ಯವಾಗಿ, ಬೆಳ್ದಿಂಗಳ ಮಾದಕತೆಯಾಗಿ, ಸುತ್ತಲ ಪರಿಸರದ ಚೈತನ್ಯವಾಗಿ ನಳನಳಿಸಿದಳು ಬೆಳ್ಳಿ!

ಬರಬರುತ್ತ ಒಬ್ಬೊಬ್ಬರೇ ಹುಡಿಗಿಯರು ದಣಿದು ದುಡಿ ಮತ್ತು ಬೆಳ್ಳಿಯ ವೇಗಕ್ಕೆ ಹೊಂದಿಕೊಳ್ಳಲಾರದೆ ಹಿಂದೆ ಸರಿದರು. ಅವರು ಹಿಂದೆ ಸರಿದರು. ಅವರು ಹಿಂದೆ ಸರಿದಷ್ಟೂ ಬೆಳ್ಳಿಯ ಉತ್ಸಾಹ ಹೆಚ್ಚಾಯಿತು. ಜಟ್ಟಿಗನಿಗೆ ಮಂದಹಾಸ ಬೀರಿ ಇಬ್ಬರೂ ಪರಸ್ಪರ ಮೆಚ್ಚುಗೆಯ ನೋಟಗಳನ್ನು ವಿನಿಮಯ ಮಾಡಿಕೊಂಡರು. ಕುಣಿತ ಮತ್ತು ದುಡಿಯ ಲಯ ಅವರ ಮೈಯ ರೋಮರೋಮಗಳಲ್ಲಿ ವ್ಯಕ್ತವಾಗುತ್ತಿದ್ದವು. ಆನಂದ ಮತ್ತು ಆಶ್ಚರ್ಯಗಳ ಮಿಶ್ರಣದ ಕಾಡು ಮೈಮರೆತು ಸ್ತಬ್ದವಾಗಿತ್ತು. ಕಗ್ಗತ್ತಲಿಂದ ಭರಿತವಾಗಿದ್ದ ಜಯಸೂರ್ಯನ ಹೃದಯದಲ್ಲಿ ಕಾಮನೆಗಳು ತುಳುಕಿದವು.

ದುಡಿ ಈಗ ಪ್ರಾರಂಭದ ಲಯಕ್ಕೆ ತಿರುಗಿತು. ದುಡಿಯ ಕಲಾವಿದ ಸೋತಿದ್ದ. ಬೆಳ್ಳಿಯ ಮುಖ ಕೆಂಪಾಗಿ ಬೆಂಕಿಯ ಬೆಳಕಿನಲ್ಲಿ ಕಣ್ಣು ಗುಲಗಂಜಿಯಂತೆ ಹೊಳೆಯುತ್ತಿದ್ದವು. ಹಣೆ, ಕೆನ್ನೆ, ಕತ್ತಿನ ತುಂಬ ಬೆವರು ಹರಿದಾಡುತ್ತಿತ್ತು. ಚಲನಶೀಲ ಸಂಭ್ರಮದಿಂದ ಇಡೀ ದೇಹ ನಡುಗುತ್ತಿತ್ತು. ಆನಂದ ಹೆಮ್ಮೆಗಳಿಂದ ಬೀಗುತ್ತ ಜಯಸೂರ್ಯನ ಕಡೆಗೊಮ್ಮೆ ನೋಡಿದಳು. ಜಯಸೂರ್ಯ ಮುಖ ಕೆಳಗೆ ಹಾಕಿದ. ದುಡಿ ನಿಂತದ್ದೇ ಆಯ್ತು. ಮೌನ ಆವರಿಸಿ ಬಯಲಿನಲ್ಲಿ ಹೆಪ್ಪುಗಟ್ಟಿತು. ಅಪೂರ್ವವಾದ ಆನಂದದ ಅನುಭವದಲ್ಲಿ ಅವರೆಲ್ಲ ಮೂಕವಿಸ್ಮಿತರಾಗಿದ್ದರು. ಅಷ್ಟರಲ್ಲಿ ಘನವಾದ ಮೌನವನ್ನು ತುಂಬಿಕೊಂಡ ಬೆಟ್ಟ ಕೊಳ್ಳಗಳಲ್ಲಿ ಕಾರಣಿಕ ಪ್ರತಿಧ್ವನಿಸಿತು:

ಒಂದು ಕಾಲಾಗ ತಕ್ಕಡಿ, ಒಂದು ಕಾಲಾಗ ಕತ್ತಿ ಹಿಡಿದುಕೊಂಡು
ರಣಹದ್ದು ಬಂದು
ಬೆಟ್ಟದ ನೆತ್ತೀಮ್ಯಾಲೆ ಕುಂತು ಹಟ್ಟೀ ಕಡೆ ನೋಡ್ಯಾವಲೇ ||
ಬ್ರಹ್ಮನ ಅವತಾರ ಮುಗಿದು
ಶಿವಪಾರ್ವತಿಯರು ಅವತಾರಕ್ಕಾಗಿ
ತುದಿಗಾಲಲ್ಲಿ ನಿಂತಾರಲೇ ||

ಕೇಳಿದ ಸಮಸ್ತ ಜನ ಆಘಾತ ಹೊಂದಿ ಸ್ತಬ್ಧರಾದರು. ಯಾಕೆಂದರೆ ಈ ಸಲದ ಕಾರಣಿಕ ಎಂದಿನಿಂತಿರಲಿಲ್ಲ. ಪ್ರತಿವರ್ಷ ಮಳೆ ಬೆಳೆ, ದನಕರುಗಳ, ಮಕ್ಕಳು ಮರಿಗಳ ವಿಚಾರ ಬರುತ್ತಿದ್ದುದೇ ಹೆಚ್ಚು. ಈ ಸಲ ಅದ್ಯಾವುದರ ಪ್ರಸ್ತಾಪವನ್ನು ಮಾಡದೆ ತಾಯಿ ರಣಹದ್ದಿನ ವಿಷಯ ಹೇಳಿದ್ದಳು. ರಣಹದ್ದು ಅಂದರೆ ಯಾವುದು? ಬೆಟ್ಟದ ಮ್ಯಾಲೆ ನಿಂತು ಹಟ್ಟೀ ಕಡೆ ನೋಡುವುದೆಂದರೇನು? ಅಮ್ಮನ ಕಾರಣಿಕ ಕೇಳಿ ಕೇಳಿ ಅದರ ಮಂಡಿಗೆ ಒಡೆಯುವುದರಲ್ಲಿ ತಜ್ಞರಾದ ಹಿರಿಯ ಗುಡ್ಡರಿಗೂ ಬಗೆಹರಿಯಲಿಲ್ಲ. ಅದು ನೆಮ್ಮದಿಯ ಕಾರಣಿಕವಂತೂ ಅಲ್ಲವೆಂದು ಮಾತ್ರ ಖಾತ್ರಿಯಾಗಿತ್ತು. ಅಷ್ಟರಲ್ಲಿ ತೇಜೋಮಯವಾದ ಸೂರ್ಯೋದಯವಾಗಿ ಎಳೆಯರು ರಾತ್ರಿಯ ಕುಣಿತದ ಭಾವಲಹರಿಯಲ್ಲಿ ತೇಲುತ್ತಲೂ, ಹಿರಿಯರು ಕಾರಣಿಕದ ಕಗ್ಗಂಟು ಬಿಡಿಸುತ್ತಲೂ ಇರುವಾಗ-