ಈಗ ಶಿವಾಪುರದ ಭೂಗೋಳದ ವಿವರಗಳನ್ನು ಹೇಳದಿದ್ದಲ್ಲಿ ನಿಮಗೆ ಗೊಂದಲವಾಗಬಹುದಾದ್ದರಿಂದ ಮೊದಲು ಅದನ್ನೇ ಹೇಳುತ್ತೇವೆ; ಕೇಳಿರಿ:

ಅಮ್ಮನ ಬೆಟ್ಟದ ತಳಕ್ಕಂಟಿ ಕರಿಕೆಯಂತೆ ಹಬ್ಬಿರುವ ಎರಡು ಸಾಲು ಮನೆ ಗುಡಿಸಲುಗಳ ಪುಟ್ಟ ಹಳ್ಳಿ ಶಿವಾಪುರ. ಒಂದು ಕಡಿಮೆ ನಲವತ್ತು ಮನೆ-ಗುಡಿಸಲುಗಳು ಒಂದು ಸಾಲಾಗಿ, ಸುಮಾರು ಅಷ್ಟೇ ಮನೆ-ಗುಡಿಸಲುಗಳಿಗಿರುವ ಇನ್ನೊಂದು ಸಾಲು ಮುಗಿಯುವಲ್ಲಿ ಒಂದು ಮಂಟಪವಿದೆ. ಎಲ್ಲ ಮನೆ ಗುಡಿಸಲುಗಳಿಗಿಂತ ಎತ್ತರ ಮತ್ತು ವಿಶಾಲವಾದ ಕಟ್ಟಡವೆಂದರೆ ಆ ಹಟ್ಟಿಗೆಲ್ಲ ಅದೊಂದೇ. ಜನ ಸಭೆ ಸೇರುವುದೂ ನ್ಯಾಯ ನಿರ್ಣಯ ಮಾಡುವುದೂ, ಕುಣಿತ, ಬಯಲಾಟ, ಸೋಗುಗಳ ತಾಲೀಮು ಮಾಡುವುದೂ ಅಲ್ಲಿಯೇ. ಹುಡುಗ ಹುಡುಗಿಯರು ಕೂಡುವ ಮುನ್ನ ಪಿಸುನುಡಿಯಲಿಕ್ಕೆ, ಹೊಳಪುಳ್ಳ ಕೆನ್ನೆಯ ಮಕ್ಕಳು ಹಾಡು ಕುಣಿತ ಕಲಿಯುತ್ತ ತಮ್ಮ ಹಸನಾದ ನಗೆಗಳನ್ನು ತುಂಬಲಿಕ್ಕೆ ಕಟ್ಟಿಸಿದ ಮಂಟಪ ಅದು. ಬೇರೆ ಹಟ್ಟಿಯವರು ಬಂದರೆ ತಂಗುವುದು, ವ್ಯವಹರಿಸುವುದು ಕೂಡ ಆ ಮಂಟಪದಲ್ಲಿಯೇ.

ಊರಿಂದ ಹೊರಕ್ಕೆ ಹೋಗುವುದಕ್ಕೂ, ಹೊರಗಿನಿಂದ ಬರುವುದಕ್ಕೂ ಇರುವುದು ಮಂಟಪದಿಂದ ಸುರುವಾಗಿ ಮೂಡುದಿಕ್ಕಿಗೆ ಹೋಗುವ, ಎಡಬಲ ಸಾಲು ಮನೆಗಳ ಮಧ್ಯೆ ಇರುವ ಈ ದಾರಿಯೊಂದೇ. ಪ್ರತಿ ನಿವಾಸಕ್ಕೊಂದು ಅಂಗಳ, ಹಿತ್ತಲವಿದ್ದು ಹಿತ್ತಲಲ್ಲಿ ತಮಗೆ ಅಗತ್ಯವಾದ ತರಕಾರಿ ಬೆಳೆಯುತ್ತಾರೆ. ಅದರ ಪಕ್ಕದಲ್ಲಿ ಒಂದು ಕೊಟ್ಟಿಗೆಯೂ ಇರುತ್ತದೆ. ಮುಂಜಾನೆ ದನಗಳನ್ನು ಕಾಡಿಗಟ್ಟುವಾಗ, ಸಂಜೆ ಕಾಡಿನಿಂದ ದನ ಬರುವಾಗ ಸಣ್ಣದಾಗಿ ಗೋಧೂಳಿ ಎದ್ದು ಮತ್ತೆ ನೆಲ ಹಿಡಿದರೆ ಉಳಿದಂತೆ ಹಟ್ಟಿ ತಂಪಾಗಿ ನಿಸ್ತರಂಗ ಮಡುವಿನಂತಿರುತ್ತದೆ. ಆಗೀಗ ದೊಡ್ಡ ಗಾಳಿ ಬೀಸುವುದೂ ಇದೆ. ತುಸು ಧೂಳು ಬಿಳುವುದೂ ಇದೆ. ಆಗ ಒಂದೆರಡು ಹನಿ ಮಳೆ ಉದುರಿ ಹಸಿರನ್ನೂ ಮನಸ್ಸುಗಳನ್ನೂ ತೊಳೆದುಬಿಡುತ್ತದೆ.

ಶಿವಾಪುರದ ಜನ ಮಣ್ಣಿನಲ್ಲಿ ಹುಟ್ಟಿ ಮರಗಳ ಜೊತೆ ಬೆಳೆದವರು. ಬೇಸಾಯ, ಜೇನು ಮತ್ತು ಬೇಟೆಯಿಂದಲೇ ಬದುಕುವ, ಸಣ್ಣ ದೊಡ್ಡವರು ಸೇರಿ ಸುಮಾರು ಮುನ್ನೂರು ಜನರಿರುವ ಹಟ್ಟಿಯಿದು. ಇದರಂಥ ಇನ್ನೂ ಮೂವತ್ತೆಂಟು ಹಟ್ಟಿಗಳು ಸೇರಿ ಶಿವಾಪುರದ ಸೀಮೆಯಾಗುತ್ತದೆ. ಈ ಸೀಮೆಯ ಜನ ಸಪೂರ ನಿಲುವಿನ, ನೀಳ ಕೈಕಾಲುಳ್ಳ, ಗೋಧಿ ಬಣ್ಣದ ಮೈಕಾಂತಿಯುಳ್ಳವರು. ಗಂಡಸರಾದರೆ ಸೊಂಟಕ್ಕೊಂದು ಲಂಗೋಟಿ, ಬಗಲಿಗೊಂದು ಕಂಬಳಿ ಹೊದ್ದರಾಯ್ತು. ತಲೆಗೊಂದು ಅರಿವೆ ಸುತ್ತಿದ್ದರೆ ಹೆಚ್ಚಾಯಿತು. ಪರವೂರಿಗೆ ಹೊರಟಾಗ ಲಂಗೋಟಿಯ ಮ್ಯಾಲೊಂದು ಧೋತ್ರ ಉಡುತ್ತಾರೆ. ಹೆಂಗಸರಾದರೆ ಕಾಡಿನ ಗಿಡಮರಗಳು ಚಿತ್ರವತ್ತಾಗಿ ಮೈಪರಚಿದಂತಿರುವ ಹಚ್ಚೆಯ, ಬಿಗಿಯಾಗಿ ತಲೆಬಾಚಿ ಕಟ್ಟಿದ ತುರುಬಿನ, ಹಣೆ ತುಂಬ ಕುಂಕುಮದ ಕಾಡಿನ ಮರಗಳಂಥವರು. ಎದೆ ಮತ್ತು ಮೊಳಕಾಲು ಮುಚ್ಚುವಂತೆ ಸೀರೆ ಸುತ್ತಿಕೊಂಡು ಕತ್ತಿನ ತುಂಬ ಕರಿಮಣಿ ಸರಗಳನ್ನು ಹಾಕಿಕೊಂಡರೆ ಅವರಂಥ ಚೆಲುವೆಯರಿನ್ನಿಲ್ಲ. ತಮ್ಮ ಸ್ತ್ರೀಯರನ್ನು ನೋಡಿ ಬಳ್ಳಿಗಳೂ, ನವಿಲುಗಳೂ ನಾಚುತ್ತವೆಂದು ಹೇಳುವ ಹಾಡೊಂದು ಅವರಲ್ಲಿದೆ.

ಈ ಜನ ವಯಸ್ಸಾದವರಿಗೆ ಹೆಚ್ಚು ಗೌರವ ಕೊಡುವವರು. ಕೆಲಸದ ಬಗ್ಗೆ ಆದಮ್ಯ ಪ್ರೀತಿ ಇದ್ದವರು. ತಮ್ಮ ಕೆಲಸ ಮುಗಿದು ಖಾಲಿ ಕೂರುವಂತಾದರೆ ಇನ್ನೊಬ್ಬರಿಗೆ ಸಹಾಯ ಮಾಡಿಯಾದರೂ ಕೆಲಸದಲ್ಲಿ ತೊಡಗಿಸಿಕೊಂಬವರು. ಈ ಜನಗಳ ಹೃದಯದ ಮರ್ಮಸ್ಥಳವೆಂದರೆ ಅಮ್ಮ!

ಶಿವಾಪುರಕ್ಕಂಟಿ ಎತ್ತರವಾದ, ಬಂಡೆಯನ್ನೇ ಕೊರೆದಿಟ್ಟಂತೆ ಬೆಟ್ಟವಿದೆ. ಹಳ್ಳಿಯಲ್ಲಿ ನಿಂತು ಬೆಟ್ಟದ ತುದಿಯನ್ನು ನೋಡುವುದು ಸಾಧ್ಯವಿಲ್ಲ. ಮ್ಯಾಲೆ ನೋಡಿದರೆ ಹಿಂದೆ ಬಾಗಿದ ತಲೆ ನೆಲ ಮುಟ್ಟುತ್ತದೆ. ಮ್ಯಾಲಿಂದ ಕೆಳಕ್ಕೆ ನೋಡಿದರೆ ಭಯವಾಗುತ್ತದೆ. ಬೆಟ್ಟದಲ್ಲಿ ತರುಮರಗಳ ಜೊತೆಗೆ ದಟ್ಟವಾದ ಹುಲ್ಲು ಬೆಳೆದ ಕಾಡಿದೆ. ಪರಿಚಿತರು ಕೂಡ ದಾರಿ ತಪ್ಪುವಷ್ಟು ದಟ್ಟವಾಗಿ ಕಾಡುಹುಲ್ಲು ಬೆಳೆದಿರೋದರಿಂದ ಮೊದಮೊದಲು ಶಿವಪಾದ ಕೂಡ ಕೆಳಗಿನ ಹಟ್ಟಿಗೆ ಬರಬೇಕಾದರೆ ವಾಪಸಾಗುವಾಗ ದಾರಿಯ ಗುರುತಿರಲೆಂದು ಹುಲ್ಲುಹುಲ್ಲಿಗೆ ಗಂಟು ಹಾಕುತ್ತ ಇಳಿದು ಬರುತ್ತಿದ್ದ, ಹೋಗುವಾಗ ಗಂಟು ಬಿಚ್ಚುತ್ತ ಹೋಗುತ್ತಿದ್ದನಂತೆ!

ಬೆಟ್ಟದ ಎಡಗಡೆಯಿಂದ ಕೆಳಕ್ಕೆ ಧುಮುಕೋದೇ ನವಿಲುತೊರೆ. ಅದು ಧುಮುಕುವಲ್ಲಿ ಸುಂದರವಾದ ಮಡುವಿದೆ. ಮಡುವಿನಂದ ಹಳ್ಳವಾಗಿ, ಮುಂದೆ ಹೊಳೆಯಾಗಿ ಹರಿಯುವುದೇ ಘಟಪ್ರಭೆ. ಬೆಟ್ಟದ ಹಿನ್ನೆಲೆಯಿಂದಾಗಿ ಮಡುವು ಮಣ್ಣಿನ ಕೊಡದಂತೆ ಕಾಣುವುದರಿಂದ ನದಿಗೆ “ಘಟಪ್ರಭೆ” ಎಂದು ಹೆಸರು. ನೀರು ಧುಮುಕುವ ಪ್ರಾರಂಭದ ಎತ್ತರದಲ್ಲಿ ಒಂದು ಬಂಡೆ ಇದೆ. ಅದಕ್ಕೆ ಹೊಲೆಬಂಡೆ ಎನ್ನುತ್ತಾರೆ. ಮಳೆಗಾಲದಲ್ಲಿ ಬೆಟ್ಟದ ಮೇಲಿನ ನೆಲ ಕೊಚ್ಚಿ ಕೊರೆದು ರಭಸದಿಂದ ಹರಿದು ಹೊಲೆಬಂಡೆಯಿಂದ ಸುರಿದುಬಂದು ಮುಖ್ಯ ತೊರೆಗೆ ಸೇರುವುದರಿಂದ ಆ ಬಂಡೆಯಿರುವ ಸ್ಥಳದಿಂದ ನೀರು ಕೆಂಪಾಗಿರುತ್ತದೆ. ಅದಕ್ಕೆ ಈ ಜನ “ಹೊಳೆ ಮುಟ್ಟಾಗಿದೆ” ಎನ್ನುತ್ತಾರೆ. ಆ ಮೂರೂ ದಿನ ಜನ ಏನೂ ಕೆಲಸ ಮಾಡುವುದಿಲ್ಲ!

ಬೆಟ್ಟದ ಮ್ಯಾಲೊಂದು ಅಖಂಡ ಕಲ್ಲಿನಲ್ಲಾದ ಗವಿಯಿದೆ. ಅದನ್ನೇ ಜನ ಅಮ್ಮನ ಬೀಡು, ಗುಡಿಯೆಂದು ಹೇಳುತ್ತಾರೆ. ಹೊರಭಾಗದಲ್ಲಿ ಗವಿ ದೊಡ್ಡದು. ಗವಿಯೊಳಕ್ಕೆ ಹೆಜ್ಜೆ ಇಟ್ಟರೆ ಒಳಗಿನ ಕತ್ತಲೆ, ತಂಪು ಮತ್ತು ಘನವಾದ ಮೌನ ಒಮ್ಮೆಲೆ ಕಣ್ಣು, ಮೈ ಮನಸ್ಸಿಗೆ ಮೆತ್ತಿಕೊಂಡು ಬಿಡುತ್ತವೆ. ಹಾಗೇ ತುಸು ಹೊತ್ತು ನಿಂತರೆ ಅದರಾಳದ ಸ್ಥೂಲ ಪರಿಚಯವಾಗುತ್ತದೆ. ಮೆಲ್ಲಗೆ ಒಳಒಳಕ್ಕೆ ಆಳ ಆಳಕ್ಕೆ ಹೋದರೆ ಗವಿ ಚಿಕ್ಕದಾಗುತ್ತಿರುವುದು ಗೊತ್ತಾಗುತ್ತದೆ. ಗವಿ ಮುಗಿಯುವಲ್ಲಿ ಒಂದು ಕೆಂಪು ಕಲ್ಲಿದೆ. ಮಧ್ಯಾಹ್ನ ಹೋದರೆ ಗವಿಯ ನೆತ್ತಿಯ ಕಿಂಡಿಯಿಂದ ಬೆಳಕಿನ ಶಲಾಕೆಯಂತೆ ಬಿಸಿಲುಕೋಲು ನೇರ ಆ ಕಲ್ಲಿನ ಮೇಲೆ ಬೀಳುತ್ತದೆ. ಅದರ ಮೈತುಂಬ ದಟ್ಟವಾದ ಅರಿಷಿಣ ಕುಂಕುಮದ ಲೇಪವಿದೆ. ಅದರ ನೆತ್ತಿಯಡಿ ಕೆಂಪು ಮತ್ತು ಕಪ್ಪು ಬಣ್ಣದಲ್ಲಿ ಬರೆದ, ನೋಡಿದರೆ ಹೆದರಿಕೆಯಾಗುವ ಎರಡು ಕಣ್ಣಿವೆ, ಸ್ವಲ್ಪ ಹೊತ್ತು ಹಾಗೇ ನೋಡಿದರೆ: ಮೊಳಕಾಲುಗಳ ಕೊಂಚ ಬಗ್ಗಿಸಿ ತೊಡೆ ಅಗಲಿಸಿ ನಿಂತು ಕೂಸಿಗೆ ಜನನ ನೀಡುತ್ತಿರುವ ಹೆಣ್ಣಿನ ಶಿಲ್ಪವಿದೆಂದು ತಿಳಿಯುತ್ತದೆ. ಇದೇ ಬೆಟ್ಟದ ಅಮ್ಮ !

ಆದರೆ ಗವಿಯೊಳಗೆ ಹಬ್ಬದ ದಿನವಲ್ಲದೆ ಬೇರೆ ದಿನಗಳಲ್ಲಿ ಹೆಂಗಸರಿಗೆ ಪ್ರವೇಶವಿಲ್ಲ. ಇದು ತಾಂತ್ರಿಕರ ದೇವತೆ. ಉಪಾಸಕರೆಲ್ಲ ತಾಂತ್ರಿಕರು. ಅವರು ಯಂತ್ರಮಂತ್ರಾದಿ ತಪಸ್ಸಾಧನೆಗಳಿಂದ ಎಷ್ಟೆಷ್ಟೋ ಸಿದ್ದಿಗಳನ್ನ ಪಡೆದವರು. ಕೆಲವು ಸಿದ್ದಿಗಳಂತೂ ಇಲ್ಲಿ ಸಾಧನೆ ಮಾಡಿದವರಿಗೆ ಮಾತ್ರ ಸಿದ್ದಿಸುತ್ತವೆಂದೂ, ಇಲ್ಲಿಯ ಶಿವಪಾದನಿಗೆ ತಾಂತ್ರಿಕರ ಮೇಲೆ ವಿಶೇಷ ಅಧಿಕಾರವಿದೆಯೆಂದೂ, ಇವನ ಆಶೀರ್ವಾದ, ಸಮ್ಮತಿ ಇಲ್ಲದೆ ಕೆಲವು ಸಿದ್ದಿಗಳ ಪ್ರಯೋಗ ಮಾಡುವಂತಿಲ್ಲವೆಂದೂ ತಾಂತ್ರಿಕರಲ್ಲಿ ಗುಪ್ತ ನಂಬಿಕೆಗಳಿವೆ. ಇವರ್ಯಾರೂ ದಾಂಧಲೆಯವರಲ್ಲ, ಎಲ್ಲಿಂದಲೋ ಯಾವಾಗಲೋ ಬಂದು ಶಿವಪಾದನ ಪಾದವ ಪಡೆದುಕೊಂಡು ಅವನು ಕೊಡುವ ಉಪದೇಶ, ಸಲಹೆ ಸೂಚನೆಯಿತ್ಯಾದಿ ಮಾರ್ಗದರ್ಶನ ಪಡೆದು ಮರೆಯಾದರಾಯ್ತು, ಅವರೆಂದೂ ಹಳ್ಳಿಯ ಗೋಜಿಗೆ ಬಂದವರಲ್ಲ.

ಶಿವಪಾದನ ದೇಹದಲ್ಲಿ ಸಾಕ್ಷಾತ್‌ ಶಿವನು ವಾಸ ಮಾಡುವನೆಂದೂ, ಆದ್ದರಿಂದಲೇ ಶಿವಪಾದ ನಡೆದರೆ ಒಂದು ಹೆಜ್ಜೆ ಮಾತ್ರ ಮೂಡಿ ಇನ್ನೊಂದು ಅದೃಶ್ಯವಾಗಿರುವುದೆಂದೂ ಆ ಅದೃಶ್ಯ ಹೆಜ್ಜೆ ಶಿವನದೆಂದೂ ಜನ ಹೇಳುತ್ತಾರೆ; ಅಂತೇ ನಂಬುತ್ತಾರೆ. ಶಿವಪಾದರು ಸಾಮಾನ್ಯವಾಗಿ ದೀರ್ಘಾಯುಷಿಗಳು, ಇಚ್ಛಾಮರಣಿಗಳು, ತಪಸ್ಸಿನಲ್ಲೆಂತೋ ಅಂತೆ ವೈದ್ಯದಲ್ಲೂ ಪರಿಣತರು. ಮನುಷ್ಯನನ್ನು ಚಿರಂಜೀವಿಯಾಗಿಸುವಷ್ಟು ವೈದ್ಯ ಗೊತ್ತಿದ್ದರೂ ಅವರ್ಯಾರೂ  ಚಿರಂಜೀವಿಗಳಾಗಿಲ್ಲ. ತನ್ನ ಕಾಲ ಮುಗಿಯಿತೆಂದು ಶಿವಪಾದನಿಗೆ ಅನ್ನಿಸಿದಾಗ ಅಮ್ಮನಿಂದ ಸೂಚನೆ ಬರುತ್ತದೆ. ಆಗ ಅರ್ಹನನ್ನು ಶಿವಪಾದನೆಂದೂ ಕೂಗಿ ಅಧಿಕಾರ ಕೊಟ್ಟು ಎಡಗೈಯಲ್ಲಿ ಸೊಡರು ಹಿಡಿದುಕೊಂಡು ಗವಿಯೊಳಗೇ ಅಟ್ಟದಂತಿರುವ ‘ಅಂತರಂಗ’ಕ್ಕೆ ಹೋಗುತ್ತಾನೆ. ಅಲ್ಲಿ ಒಂದು ಮಾಡದಲ್ಲಿ ಅವನಿಗಿಂತ ಹಿಂದಿನ ಶಿವಪಾದನ ಆಸ್ಥಿಪಂಜರವನ್ನು ಒಳಕ್ಕೆ ತಳ್ಳಿ ಅದೇ ಸ್ಥಳದಲ್ಲಿ ಕಣ್ಣು ಮುಚ್ಚಿ ಸಮಾಧಿಸ್ಥನಾದರೆ ಮುಗಿಯಿತು. ಮುಂದೆ ಹೊಸ ಶಿವಪಾದನಿಗೆ ಇವನೇ ಪೀಠವಾಗುತ್ತಾನೆ. ಹೀಗೆ ಒಳಕ್ಕೆ ತಳ್ಳಿದ ಶಿವಪಾದರ ಆಸ್ಥಿಪಂಜರಗಳೇ ನೂರಕ್ಕೂ ಹೆಚ್ಚಿಗಿವೆಯಂತೆ! ಎಷ್ಟು ಶಿವಪಾದರನ್ನು ತಳ್ಳಿದರೂ ಆ ಮಾಡದ ಆಳ ಮುಗಿಯದೆಂದೂ, ಅದರ ಇನ್ನೊಂದು ತುದಿ ಕೈಲಾಸದಲ್ಲಿ ತೆರೆದಿದೆಯೆಂದೂ ಅವರ ನಂಬಿಕೆ.

ಮುಂದಿನ ಶಿವಪಾದ ಯಾರಾಗಬೇಕೆಂದು ನಿರ್ಧರಿಸಿಯೇ ಇಂದಿನ ಶಿವಪಾದ ಸಮಾಧಿಸ್ಥನಾಗಬೇಕು. ಶಿವಪಾದರು ಮದುವೆಯಾಗಿ ಸಂಸಾರಸ್ಥರೂ ಆಗಬಹುದು. ಬ್ರಹ್ಮಚಾರಿಗಳೂ ಆಗಿರಬಹುದು. ಅದು ಅವರವರ ಇಚ್ಛೆಗೆ ಬಿಟ್ಟ ವಿಚಾರ. ಆ ಕ್ಷೇತ್ರದ ಎಲ್ಲ ಜ್ಞಾನಕ್ಕೆ ಅವರೇ ಅಧಿಕಾರಿಗಳು. ಒಮ್ಮೊಮ್ಮೆ ಅರ್ಹನಾದವನು ಸಿಕ್ಕದಿದ್ದಲ್ಲಿ ಯೋಗ್ಯ ದಂಪತಿಗಳನ್ನು ಗುರುತಿಸಿ ನಿಮ್ಮಲ್ಲಿ ಜನಿಸುವ ಮಗುವೇ ಮುಂದಿನ ಶಿವಪಾದನೆಂದು ಹೇಳಿ ಅವರು ಕೂಡುವುದಕ್ಕೆ ಸಮಯ ಮುಹೂರ್ತಗಳನ್ನು ತಿಳಿಸುವುದಿದೆ. ಆತ ಹೇಳಿದ ಸಮಯದಲ್ಲಿ ಅವರು ಕೂಡಿ ಮುಂದಿನ ಶಿವಪಾದನ ಜನನವಾಗಬೇಕು. ಶಿವಪಾದನಾದವನು ಊರಲ್ಲಿದ್ದಾಗ ಅಮ್ಮನ ಬೆಳಗಿನ ಹನಿಪೂಜೆ, ಮಧ್ಯಾಹ್ನದ ಮಹಾಪೂಜೆ, ರಾತ್ರಿಯ ಶಾಂತಿ ಪೂಜೆಗಳನ್ನು ಅವನೇ ಮಾಡಬೇಕು. ಪಯಣವಾದಲ್ಲಿ ಅಮ್ಮನ ಪೂಜೆಯ ವ್ಯವಸ್ಥೆ ಶಿಷ್ಯನೊಬ್ಬನ ಕೈಗಿಟ್ಟು ಹೋಗಿರಬೇಕು. ಶಿವಪಾದನಿಗೆ ಅಗತ್ಯವಾದ ಅಕ್ಕಿ ಮುಂತಾದ ಸೀಮೆಯ ಒಂದು ಕಡಿಮೆ ನಲವತ್ತು ಹಟ್ಟಿಗಳ ಮ್ಯಾಲೆ ಹಕ್ಕಿನ ಒಡೆತನವಿದೆ. ಆತ ಅಮ್ಮನಿಗಲ್ಲದೆ ಯಾವುದೇ ರಾಜನಿಗೆ ಮಾಂಡಳಿಕನಲ್ಲ.

ಶಿವಪಾದ ಮತ್ತು ಅಮ್ಮನ ಬಗ್ಗೆ ಜನ ಹೀಗೆ ಹೇಳುತ್ತಾರೆ:

“ಅಮ್ಮ ಆಕಾಶದೊಂದಿಗೆ ಜಗಳಾಡಿ ಮಳೆಗಾಳಿ ಮೋಡಗಳ ಉಡಿತುಂಬ ತಂದಾಕೆ! ಕ್ಷಿತಿಜದ ಜೊತೆ ಜಗಳಾಡಿ ನಮ್ಮ ಕಣ್ಣುಗಳಲ್ಲಿ ಬೆಳಕಾಡಿಸಿದಾಕೆ! ಅಮ್ಮನ ಸೇವೆಗೆ ಒಂದಾಯುಷ್ಯ ಸವೆಯಬೇಕು. ಹೇಳಿ ಕೇಳಿ ಬೆಂಕಿಯಂಥ ದೇವತೆ. ಅವಳ ಸೇವೆ ಅಂದರೆ ಸೆರಗಿನಲ್ಲಿ ಬೆಂಕಿ ಕಟ್ಟಿಕೊಂಡ ಹಾಗೆ. ಮಲಮೂತ್ರ ಜಳಕ ಜಪಾತಿ-ಅಷ್ಟೇ ಅಲ್ಲದೆ ಹಸಿವು ಬಾಯಾರಿಕೆಗೂ ಒಂದು ಸಮಯ, ಒಂದು ನೇಮ ಅಂತಿರಬೇಕು. ಕೂದಲೆಳೆಯಷ್ಟೂ ಕ್ರಮ ತಪ್ಪಬಾರದು. ಇದೆಲ್ಲಾ ಶರೀರ ಧರ್ಮಕ್ಕಾಯ್ತು. ಇದರ ಜೊತೆಗೆ ಮನಸ್ಸು ಕೂಡ ಹಸನಾಗಿ ಬೆಳ್ಳಂಬೆಳ್ಳಗಿರಬೇಕು. ಅಂದರೆ ಮಾತ್ರ ‘ಆಹಾ! ನನ್ನ ಕಂದ ಎಷ್ಟು ಹಸನಾಗಿದ್ದಾನಲ್ಲಾ!’ ಅಂತ ಅಮ್ಮ ಬಂದು ಶಿವಪಾದನ ಮೈ ತುಂಬಿ ಆವೇಶವಾಗುತ್ತಾಳೆ. ಕಷ್ಟು ಹೇಳು-ಎತ್ತಿ ಒಗೆಯುತ್ತಾಳೆ! ಸುಖ ಕೇಳು-ಉಡಿ ತುಂಬುತ್ತಾಳೆ! ನಿಂತ ನೆಲ, ಬೆಳಗೋ ಸೂರ್ಯ ಚಂದ್ರ, ಸುರಿಯೋ ಮಳೆ, ಬೀಸೋಗಾಳಿ ಇರೋತನಕ ತಾಯಿ ಇದನ್ನ ನಡೆಸಿಕೊಡುತ್ತೇನೆ ಅಂತ ಶಿವಾಪುರಕ್ಕೆ ಮಾತು ಕೊಟ್ಟಿದ್ದಾಳೆ”… ಇತ್ಯಾದಿ.

ವರ್ಷಕ್ಕೊಮ್ಮೆ ಯುಗಾದಿಯ ಮುನ್ನ ಬರುವ ಹುಣ್ಣಿಮೆಯಂದು ಅಮ್ಮನ ಪರ್ವ ನಡೆಯುತ್ತದೆ. ಗವಿಯ ಮುಂದುಗಡೆ ಒಂದು ಕಡಿಮೆ ಹೆಜ್ಜೆ ದೂರದಲ್ಲಿ ಬೆಟ್ಟವನ್ನೇ ವ್ಯಾಪಿಸಿರುವಂತೆ ಪ್ರಾಚೀನ ಕಾಲದಿಂದಿರುವ ಹೊನ್ನೆ ಮರವಿದೆ. ಅಡ್ಡಾದಿಡ್ಡಿ ದೈತ್ಯಾಕಾರವಾಗಿ ಬೆಳೆದ ಅದರ ಬೊಡ್ಡಿಯ ಸುತ್ತಳತೆ ಹತ್ತಾಳು ಕೈ ಕೈ ಮಿಲಾಯಿಸಿ ತುಂಬುವಷ್ಟಿದೆ. ಉಳಿದೆಲ್ಲ ಮರಗಳಿಗಿಂತ ಹತ್ತುಪಟ್ಟು ಎತ್ತರ ಮತ್ತು ವಿಶಾಲವಾದ ಮರ ಅದು. ಬೊಡ್ಡಿಯ ತೊಗಟೆಯ ಮೇಲೆ ಜನ ಪರಚಿದ ಎಷ್ಟೋ ಹಳೆ ಹೊಸ ಗೀರುಗಳಿವೆ. ಹಾಗೆಯೇ ಭಕ್ತಾದಿಗಳು ಬುಡದಲ್ಲಿ ಎಣ್ಣೆ ಸುರಿದು ಕುಂಕುಮ ಸವರಿದ ಜಿಡ್ಡಿದೆ. ಬೇಕಾಬಿಟ್ಟಿ ಚಾಚಿಕೊಂಡ, ಗಂಟು ಗಂಟಾದ ಟೊಂಗೆ ಟಿಸಿಲುಗಳಿಂದ ಕೂಡಿದ ಮರ ಬೆಟ್ಟದ ಕಾವಲಿಗೆ ನಿಂತ ದೈತ್ಯನಂತಿವೆ. ಆದರೆ ಹಕ್ಕಿಗಳು ಹಾಡುತ್ತ, ಹಾರುತ್ತ ಬಂದು ಕುಣಿಯುತ್ತ ಚಿಲಿಪಿಲಿ ಗುಟ್ಟತೊಡಗಿದರೆ ಈ ಮರದ ಸಡಗರ ಹೇಳತೀರದು.

ಅಮ್ಮನ ಪರ್ವ ನಡೆಯುವುದು ಈ ಮರದ ಅಡಿಯಲ್ಲಿ. ಶಿವಾಪುರ ಸೀಮೆಯ ಗುಡ್ಡರೆಲ್ಲ ಆ ದಿನ ಬಂದು ಸೇರುತ್ತಾರೆ. ಆಗ ಈ ಮರದ ಬಯಲಿನಲ್ಲಿ ಪ್ರಾಣಿಬಲಿಯ ನೆತ್ತರು ಹರಿದಾಡುವುದಿದೆ. ಬಲಿಯ ಬಾಡು ಮತ್ತು ಆ ವರ್ಷದ ಧಾನ್ಯಗಳನ್ನು ಕುದಿಯಲಿಡುತ್ತಾರೆ. ಹಾಗೆಯೇ ವರ್ಷದ ಅಕ್ಕಿ ಮತ್ತು ಬೆಲ್ಲದಿಂದ ‘ಗೊಳಬಾರಸ’ವೆಂಬ ಮದ್ಯವನ್ನು ತಯಾರಿಸುತ್ತಾರೆ. ಅಡಿಗೆ ಅಟ್ಟಮೇಲೆ ಶಿವಪಾದ ಬಂದು ಕುದಿಯುತ್ತಿರುವ ಕಡಾಯಿಗೇ ಕೈಹಾಕಿ ಮೂರು ಬೊಗಸೆ ಅನ್ನ, ಮೂರು ಬೊಗಸೆ ರಸ ತೆಗೆದು ಅಮ್ಮನಿಗೆ ನೈವೇದ್ಯವಾಗಿ ನೀಡುತ್ತಾನೆ. ತಿರುಗಿ ನೋಡಿದರೆ ಅಮ್ಮನ ಮುಂದೆ ಎರಡೇ ಬೊಗಸೆ ಅನ್ನ, ಎರಡೇ ಬೊಗಸೆ ರಸ ಇರುತ್ತದೆ! ಯಾಕೆಂದರೆ ಅಮ್ಮ ಬಂದು ಒಂದು ಬೊಗಸೆ ರಸ ಕುಡಿದು ಒಂದು ಬೊಗಸೆ ಅನ್ನ ಉಂಡಿರುತ್ತಾಳಂತೆ! ಉಳಿದೆರಡು ಬೊಗಸೆ ಅನ್ನ ಮತ್ತು ರಸವನ್ನ ಮೂಲ ಕಡಾಯಿಗೆ ಸೇರಿಸಿ ಪ್ರಸಾದವಾಗಿ ಎಲ್ಲರಿಗೂ ಹಂಚುತ್ತಾರೆ. ರಸ ಸೇವಿಸಿ ಪ್ರಸಾದ ತಿಂದು ಗಂಡು ಹೆಣ್ಣೆನ್ನದೆ ಎಲ್ಲರೂ ಕೂಡಿ ಬೆಳ್ಳಂಬೆಳಗು ಕುಣಿಯುತ್ತಾರೆ. ಇದೇ ಸಂದರ್ಭದಲ್ಲಿ ಪರಸ್ಪರ ಇಷ್ಟಪಡುವ ಹುಡುಗ ಹುಡುಗಿಯರು ಜೋಡಿಯಾಗಿ ಕುಣಿಯುವಾಗ ಹುಡುಗ “ಕಾಡಿಗೆ ಬರ್ತೀಯಾ?” ಅಂತ ಕೇಳಿ ಹುಡುಗಿ ಒಪ್ಪಿದರೆ ಇಬ್ಬರೂ ಕಾಡಿನಲ್ಲಿ ಕಣ್ಮರೆಯಾಗಬಹುದು. ಬೆಳಿಗ್ಗೆ ಬರುವ ಅವರನ್ನು ಗಂಡ ಹೆಂಡತಿ ಎಂದು ಊರವರು ಒಪ್ಪಿಬಿಡುತ್ತಾರೆ. ಇದೆಲ್ಲವೂ ನಡೆಯುವುದು ಶಿವಪಾದನ ನೇತೃತ್ವದಲ್ಲಿ.

* * *

ಒಂದೆರಡು ದಿನಗಳಲ್ಲಿ ಜಯಸೂರ್ಯ ನಡೆದಾಡುವಂತಾದ. ಜಟ್ಟಿಗ ಮತ್ತು ಬೆಳ್ಳಿ ಇಬ್ಬರ ಶಿವಾಯಿ ಜಯಸೂರ್ಯನಿಗೆ ಬೇರೆಯವರ ಸಂಪರ್ಕ ಬರಲಿಲ್ಲ. ಇವನು ಬಯಸಲೂ ಇಲ್ಲ. ಮೆಲ್ಲಗೆ ಹೆಜ್ಜೆ ಊರುತ್ತಾ ಮಂಟಪದ ಹೊರಗಡೆ ಬಂದು ಕೂತರೆ ಜನ ದೂರದಿಂದಲೇ ಇವನೊಬ್ಬ ವಿಚಿತ್ರ ಪ್ರಾಣಿಯೆಂಬಂತೆ ನೋಡುತ್ತ ಹೋಗುತ್ತಿದ್ದರು. ಕಣ್ಣಿಗೆ ಕಣ್ಣು ಕೂಡಿದರೆ ಹೆದರಿ, ಪೀಡೆಯ ಪರಿಹಾರಕ್ಕೆಂಬಂತೆ ಎರಡೂ ಕೈಗಳಿಂದ ನೆಲ ಬಡಿದು, ಅಮ್ಮನ ಹೆಸರುಗೊಂಡು ಮುಂದೆ ಹೋಗುತ್ತಿದ್ದರು; ಹಾಗಿತ್ತು ಅವನ ಆಕಾರ!

ಸುಮಾರು ಜಟ್ಟಿನಗಷ್ಟೇ ಎತ್ತರವಾದ ದೇಹಕ್ಕೆ ಅಗಲವಾದ ಭುಜಗಳು, ದೇಹದ ಪ್ರಮಾಣಕ್ಕಿಂತ ತುಸು ದೊಡ್ಡದಾದ ತಲೆ, ಕಪ್ಪಗೂ ಅಲ್ಲದ ನರೆತದ್ದೂ ಅಲ್ಲದ ತೆಳುಕೂದಲಿನಿಂದಾಗಿ ಜಯಸೂರ್ಯನ ವಯಸ್ಸನ್ನು ಅಂದಾಜು ಮಾಡುವುದಿರಲಿ, ಯಾರೂ ಜಯಿಸಲಾರದಂಥ ಒಂದು ಸಾಮರ್ಥ್ಯ ಅವನಲ್ಲಿದೆಯೆಂದು ಅನಿಸುತ್ತಿತ್ತು. ಸದಾ ಕೆಂಪಾದ ಮೂಗಿನ ತುದಿ ಬಾಗಿ ತುಟಿಯ ಮೇಲೊರಗಿದ್ದು ದೊಡ್ಡ ಹಕ್ಕಿಯ ಚುಂಚಿನಂತೆ ಕಾಣುತ್ತಿದ್ದಿತಲ್ಲದೆ ಹೊಳೆಯುವ ಕಣ್ಣಗಳೂ ಸೇರಿ ಅವನ ಮುಖಕ್ಕೆ ರಣಹದ್ದಿನ ಕಳೆ ಕೊಟ್ಟಿದ್ದವು. ನೆಟ್ಟ ನೋಟದಿಂದ ಇರಿವಂತಿದ್ದ ಆ ಕಣ್ಣುಗಳು ನೋಡಿದವರನ್ನು ಬಹುಬೇಗ ಆಕರ್ಷಿಸುತ್ತಿದ್ದವು; ಹಾಗೆಯೇ ಅವನ ಬಗ್ಗೆ ಭಯ ಮೂಡುವಂತೆಯೂ ಮಾಡುತ್ತಿದ್ದವು. ಆತ ಮುಗುಳು ನಕ್ಕಾಗ ಕೂಡ ಎಡಬಲಗಳಲ್ಲಿ ತುಟಿಗಳು ಹಿಗ್ಗುತ್ತಿದ್ದುವೇ ಹೊರತು ಕಣ್ಣಲ್ಲಿ ಆ ನಗೆ ಪ್ರತಿಬಿಂಬಿಸುತ್ತಿರಲಿಲ್ಲ. ಅಲ್ಲದೆ ಅವನ ನಗುವಿನಲ್ಲಿ ಚಲನೆ ಎಂಬುದಿರಲಿಲ್ಲ. ನಕ್ಕಾಗ ಅವನು ಇನ್ನಷ್ಟು ಕ್ರೂರವಾಗಿ ಕಾಣುವುದಕ್ಕೆ ಅವನ ಅಗಲವಾದ ಕಿವಿಗಳಲ್ಲಿ ಪೊದೆಯಾಗಿ ಬೆಳೆದ ಕೂದಲೂ ಕಾರಣವಾಗಿರಬಹುದು.

ಬೆಳ್ಳಿ, ಜಟ್ಟಿಗರ ಬಿಟ್ಟು ಉಳಿದವರ್ಯಾರೂ-ಶಿವಾಪುರ ಕೂಡ-ಜಯಸೂರ್ಯನ ಆಸಕ್ತಿಯನ್ನು ಕೆರಳಿಸಲೇ ಇಲ್ಲ. ‘ಏನಿದೆ ಇಲ್ಲಿ? ಮೇದು, ತೇಲುಗಣ್ಣನಲ್ಲಿ ಮೆಲುಕಾಡಿಸುತ್ತ ಮಲಗಿರುವ ದನಗಳಂತೆ ಕಾಣುವ ಮನೆ-ಗುಸಿಸಲುಗಳು; ತೃಪ್ತರಾಗಿ, ಆನಂದ ತುಂದಿಲರಾಗಿ, ಒಂದಿಲ್ಲೊಂದು ಕೆಲಸದಲ್ಲಿ ತೊಡಗಿರುವ ಜನಗಳು, ಪ್ರಾಣಿಗಳೊಂದಿಗೆ ಪಂಥ ಕಟ್ಟುವ ಮಕ್ಕಳು… ಒಬ್ಬರಿಗೂ ಮಹತ್ವಾಕಾಂಕ್ಷೆಯಿಲ್ಲ, ದೊಡ್ಡ ಹಸಿವಿಲ್ಲ, ಅಸಾಧ್ಯದ ಹಂಬಲವಿಲ್ಲ, ಬೇರೆ ಮನುಷ್ಯರ ಬಗ್ಗೆ ಕುತೂಹಲವಿಲ್ಲ, ಸಾಹಸದ ಮನಸ್ಸುಗಳಿಲ್ಲ… ದೇವರ ಬಗ್ಗೆಯಂತೂ ಭಾರೀ ನಂಬಿಕೆ ಇದ್ದವರು. ದೇವರು ಅನ್ಯಾಯವನ್ನು ಕೂಡ ಮಾಡಬಲ್ಲ-ಎಂಬಂಥ ವಿಚಾರಗಳಂತೂ ಇವರ ತಲೆಯಲ್ಲಿ ಸುಳಿಯುವುದಿರಲಿ, ಹೊರಗಿನಿಂದ ಸೇರುವುದೂ ಸಾಧ್ಯವಿರಲಿಲ್ಲ. ಇಂತಿರಲು ಇವರ ಊರಿಗೆ ತೊಂದರೆ ತಾನೇ ಎಲ್ಲಿಂದ, ಹ್ಯಾಗೆ ಬರುವುದು ಸಾಧ್ಯ? ‘ಏನು ಜನಗಳೋ! ಮಾನವಾಕಾರದ ನೆರಳುಗಳು!’ ಎಂದು ತೀರ್ಮಾನಿಸಿಬಿಟ್ಟಿದ್ದ.

ಸ್ವಭಾವತಃ ಜಯಸೂರ್ಯ ಯಾರನ್ನೂ ನಂಬಿದವನಲ್ಲ. ಯಾರೇ ಇರಲಿ, ತನಗೆ ಒದಗುವವರಾದರೆ ಮಾತ್ರ ಆಸೆಯಿಂದ ಅವರ ಕಡೆಗೆ ನೋಡುವಾತ ಮತ್ತು ಅದಕ್ಕಾಗಿ ಹೊಂಚಿ ಕೊನೆಗೂ ಪ್ರಯೋಜನ ಪಡೆವಾತ. ತನಗೆ ಬೇಕಾದ್ದನ್ನು ಆತ ಎಂದೂ ಮರೆತವನಲ್ಲ. ಅಡ್ಡಿಪಡಿಸಿದವರನ್ನು ಕ್ಷಮಿಸಿದವನಲ್ಲ. ಅದು ಸಿಕ್ಕುವತನಕ ಹಿಂದಿರುಗಿದವನಲ್ಲ. ಪರಂತು ತನ್ನ ಆಸೆಯನ್ನ ಇನ್ನೊಬ್ಬರಿಗೆ ಹೇಳಿದವನಲ್ಲ. ಅದನ್ನ ಗೌಪ್ಯವಾಗಿ ಹೃದಯದ ಕತ್ತಲಲ್ಲಿ ಯಾರಿಗೂ ಕಾಣದಂತೆ ಅಡಗಿಸಿಟ್ಟು, ಯಾರಿಲ್ಲದಾಗ ಅದರ ಮ್ಯಾಲೆ ಬೆರಳಾಡಿಸಿ ಆನಂದ ಪಡುವಾತ. ಅದೂ ಒಂದೆರಡು ಕ್ಷಣ ಮಾತ್ರ ಅದಿನ್ನೂ ಸಿಕ್ಕಲ್ಲವೆಂದೂ ನೆನಪಾದ ತಕ್ಷಣವೆ ಕೋಪದಿಂದ ಕುದಿವಾತ. ಅವನಾಸೆ ಈಡೇರದೆ ಅವಮಾನವಾದ ಒಂದೇ ಒಂದು ಸಂದರ್ಭವೆಂದರೆ ಚಂದಮುತ್ತನಂತೆ ಆತ ಸಂಗೀತಗಾರನಾಗಲಿಲ್ಲ. ಅದನ್ನು ನೆನೆದರೆ ಅನೇಕ ಸಲ ಅವನ ಮನಸ್ಸು ವಿಷಮಯವಾಗುತ್ತಿತ್ತು. ವಿಷ ಹೆಚ್ಚಾದಾಗ ಅದನ್ನ ಹೊರಗೆ ಹಾಕಬೇಕೆಂದು ಹಾವು ನೆಪ ಹುಡುಕುವಂತೆ ಇವನೂ ಚಡಪಡಿಸುತ್ತಿದ್ದ. ಆವಾಗ ಸೇಡನ್ನ ಮೇಲುಕುತ್ತ, ದುಃಖವ ಬಿಕ್ಕುತ್ತ, ವೈರಿಯ ಒಕ್ಕಲಿಕ್ಕುವ ಕನಸು ಕಾಣುತ್ತಿದ್ದ. ಚಂದಮುತ್ತ ಮುಕ್ತನಾದುದರಿಂದ ಆ ಕನಸಿಗೂ ಈಗ ಕೊನೆ ಹಾಡಿ ಹಳಹಳಿಸಿದ್ದ. ಇದೆಲ್ಲ ಗೊತ್ತಿಲ್ಲದಿದ್ದರೂ ಇಂಥ ವಿಲಕ್ಷಣ ಲಕ್ಷಣಗಳ ವ್ಯಕ್ತಿಯ ಸ್ನೇಹ ಮಾಡುವುದಕ್ಕೆ ಯಾರಾದರೂ ಯಾಕೆ ಮುಂದೆ ಬರುತ್ತಾರೆ?

ಜಟ್ಟಿಗ ಬೆಳ್ಳಿಯೊಂದಿಗೆ ದಿನಾ ಬಂದು ಮೊಳಕಾಲು ಬೆನ್ನುಗಳನ್ನು ಮುಟ್ಟಿ ನೋಡಿ, ಮದ್ದನರೆದು, ಉಪಚರಿಸಬೇಕಾದ ಸೂಚನೆಗಳನ್ನು ಬೆಳ್ಳಿಗೆ ಹೇಳುತ್ತಿದ್ದ. ಉಪಚರಿಸಿ ಇಬ್ಬರೂ ಹೋದ ಮೇಲೆ ಈತ ಮುಂದೇನೆಂದು ಯೋಚಿಸುತ್ತ ಕೂರುತ್ತಿದ್ದ. ಅದೂ ಬೋರಾದರೆ ಕಾಡು ಹೂವಿನಂತೆ ನಾರುವ ಬೆಳ್ಳಿಯ ಅನಾಗರಿಕ ಸೌಂದರ್ಯವನ್ನ ನೆನೆಯುತ್ತ ಕೂರುತ್ತಿದ್ದ.