ಆಮೇಲೆ ಎಷ್ಟು ದಿನಗಳಾದರೂ ಶಿವಪಾದ ಸಿಕ್ಕಲೇ ಇಲ್ಲ. ತನ್ಮಯತೆಯ ಬಗ್ಗೆಯೇ ಬೇಕಾದಷ್ಟು ತಿಳಿಯಬೇಕಾಗಿತ್ತು. ಗವಿಯಲ್ಲಿದ್ದವರು ನಾವು ಮೂವರೇ ಎಂದು ಜಯಸೂರ್ಯ ನಂಬಿದ್ದೂ ಈಗ ಹುಸಿಯಾಗಿತ್ತು. ಹಗಲು ಹೊತ್ತು ಮೂವರೇ ಇರುತ್ತಿದ್ದರು. ನಿಜ. ಹಟ್ಟಿಯವರ್ಯಾರೂ ಮಂಗಳವಾರ ವಿನಾ ಬೇರೆ ದಿನಗಳಲ್ಲಿ ಅಮ್ಮನ ಬಳಿಗೆ ಬರುತ್ತಿರಲಿಲ್ಲ, ಅಥವಾ ಇನ್ನೇನೋ ತೀರಾ ಅಗತ್ಯದ ಕೆಲಸ ಇದ್ದರೆ, ಹಬ್ಬ ಹುಣ್ಣಿಮೆಗಳಾದರೆ ಶಿವಪಾದನನ್ನು ನೋಡಲಿಕ್ಕೆ ಬರುತ್ತಿದ್ದರು. ಇಲ್ಲದಿದ್ದರೆ ಕಾಡಿನ ತುದಿಯ ಗವಿ ಭಿಕೋ ಎನ್ನುತ್ತಿತ್ತು. ಆದರೆ ಮಧ್ಯರಾತ್ರಿಯ ಸುಮಾರಿಗೆ ಎಲ್ಲೆಲ್ಲಿಂದಲೋ ಸಾಧಕರು, ಸನ್ಯಾಸಿಗಳು ಶಿವಪಾದನ ಬಳಿಗೆ ಬರುತ್ತಿದ್ದರು. ಚರ್ಚಿಸುತ್ತಿದ್ದರು. ಸಲಹೆ ಕೇಳುತ್ತಿದ್ದರು. ಅವರ ಭಾಷೆ ಒಮ್ಮೊಮ್ಮೆ ಅರ್ಥವಾಗುತ್ತಿತ್ತು. ಕೆಲವು ಸಲ ಏನೇನೂ ತಿಳಿಯುತ್ತಿರಲಿಲ್ಲ. ಆದರೆ ಇಷ್ಟಂತೂ ನಿಜ, ಬಂದವರೆಲ್ಲರೂ ಶಿವಪಾದನ ಬಗ್ಗೆ ಅಪಾರ ಗೌರವ ಭಕ್ತಿಗಳನ್ನಿಟ್ಟು ಕೊಂಡವರು, ಗಂಭೀರ ಪ್ರಶ್ನೆಗಳನ್ನು ತಂದವರು. ಅವನ ಸೇವೆ ಮಾಡುವ ಯಾವ ಸಣ್ಣ ಅವಕಾಶವನ್ನೂ ಬಿಡುತ್ತಿರಲಿಲ್ಲ.

ಶಿವಪಾದನೂ ಅಷ್ಟೆ. ದೊಡ್ಡ ವ್ಯಕ್ತಿತ್ವದವನು, ವಯಸ್ಸಿಗೆ (ಅದೆಷ್ಟೆಂದು ಯಾರಿಗೂ ತಿಳಿದಿಲ್ಲವೆಂದು ಎಲ್ಲರ ಹೇಳಿಕೆ) ಸಹಜವಾದುದಕ್ಕಿಂತ ಹೆಚ್ಚು ಎತ್ತರವಾಗಿದ್ದ. ಮಿಂಚುವ ಕಣ್ಣು, ಅಭಿಮಾನದಿಂದ ಬೀಗುವ ಶಕ್ತಿಯುತ ಕತ್ತು, ಕಟ್ಟಿದ್ದರೂ ಬಿಚ್ಚಿಕೊಂಡು ಸ್ವಚ್ಛಂದವಾಗಿ ಹಾರಾಡುವ ಬೆಳ್ಳಿಯ ಕೂದುಲು, ಹೊಕ್ಕಳುವರೆಗೆ ಇಳಿಬಿದ್ದ ಗಡ್ಡ, ಕಿವಿಯವರೆಗಿನ ಮೀಸೆ –ಇವೆಲ್ಲ ಅವನ ಪೌರುಷ ಮತ್ತು ಆತ್ಮವಿಶ್ವಾಸಗಳನ್ನು ಪ್ರದರ್ಶಿಸುತ್ತಿದ್ದವು. ಶಿಷ್ಯರ ಪ್ರಶ್ನೆಗಳಿಗೆ ವಿವರವಾಗಿ ಉತ್ತರಿಸುತ್ತ ನಡೆದಾಡುವಾಗ ದೇಹದ ಏರಿಳುವುಗಳಲ್ಲಿ ಸಹಜವಾಗಿ ಉಂಟಾಗುವ ಲಯಗಾರಿಕೆಯನ್ನ ಕಂಡಾಗ ‘ರಾಜರೇನು, ದೇವರಲ್ಲಾದರೂ ಇವನಂಥ ಘನತೆ ಗಾಂಭೀರ್ಯಗಳು ಇರುವುದು ಸಾಧ್ಯವೆ?’ ಅನಿಸುತ್ತಿತ್ತು.

ಶಿವಪಾದ ದಣಿವರಿಯದೆ ಶಿಷ್ಯರ ಸಂದೇಹಗಳನ್ನು ಪರಿಹರಿಸುತ್ತಿದ್ದ. ಕೇಳಿ ತಿಳಿದ ಮೇಲೆ ಶಿಷ್ಯರ ಮುಖ ಆನಂದದಿಂದ ಅರಳುತ್ತಿದ್ದವು. ಒಮ್ಮೊಮ್ಮೆ ಬಂದವರೊಂದಿಗೆ ಕುರುಮುನಿಯೂ ಚರ್ಚೆಗಿಳಿಯುವುದಿತ್ತು. ಶಿವಪಾದನೇ ಅವನನ್ನು ಮಾತಾಡಲು ಪ್ರಚೋದಿಸುತ್ತಿದ್ದ ಮತ್ತು ಅವನ ಅಭಿಪ್ರಾಯಗಳನ್ನು ಗಂಭೀರವಾಗಿ ಕೇಳಿಸಿಕೊತ್ತಿದ್ದ. ಆದರೆ ಜಯಸೂರ್ಯ ಮಾತ್ರ ಅವರ ಚರ್ಚೆಯಲ್ಲಿವಾದ್ದರಿಂದ ಇವನ ಹಾಜರಾತಿಗೆ ಅಲ್ಲಿ ಮಹತ್ವವೂ ಇರಲಿಲ್ಲ. ಅಂಥ ಸಂದರ್ಭಗಳಲ್ಲಿ ಈತ ಬೇರೆ ಕಡೆಗೆ ಹೋಗಿ ತನ್ನ ಒಂಟಿತನವನ್ನು ಕಾಪಾಡಿಕೊಳ್ಳುತ್ತಿದ್ದ. ಬೆಳಿಗ್ಗೆದ್ದು ನೋಡಿದರೆ ಅದೆಲ್ಲ ಕನಸೆಂಬಂತೆ ರಾತ್ರಿ ಬಂದವರು ಒಬ್ಬರೂ ಕಾಣಿಸುತ್ತಿರಲಿಲ್ಲ. ಗವಿ ಮತ್ತೆ ಬರೀ ಮೂವರಿಂದ ಭಿಕೋ ಎನ್ನವಂತೆ ಕಾಣುತ್ತಿತ್ತು.

ಒಂದು ದಿನ ಕುರುಮುನಿ ಗವಿಯಲ್ಲಿರಲಿಲ್ಲ. ಉತ್ತರದ ಕಡೆಗೆ ಶಿವಪಾದನ ದೂತನಾಗಿ ಹೋಗಿದ್ದ. ಜಯಸೂರ್ಯನಿಗೆ ಸಸ್ಯಹೃದಯ ಬಿಟ್ಟು ಬೇರೆ ಸಂಗಾತಿಗಳಿರಲಿಲ್ಲ. ಶಿವಪಾದ ಸಾಮಾನ್ಯವಾಗಿ ಸೂರ್ಯಾಸ್ತದ ಸಮಯ ಹೊರಗಡೆ ಇರುತ್ತಿರಲಿಲ್ಲ. ಇವತ್ತು ಮಾತ್ರ ಅದ್ಯಾಕೋ ಹೊನ್ನೆಮರದ ಕಟ್ಟೆಯ ಬಳಿ ಅತ್ತಿತ್ತ, ಹೆಜ್ಜೆ ಹಾಕುತ್ತ ಏನನ್ನೋ ಧ್ಯಾನಿಸುತ್ತಿದ್ದ. ಜಯಸೂರ್ಯ ಅಲ್ಲಿಗೆ ಹೋದ.

“ವೈದ್ಯಶಾಸ್ತ್ರದ ಅಂತಿಮ ಗುರಿ ಆಯುಷ್ಯವೃದ್ಧಿ ಅಲ್ಲವೆ?”

ಅಂದ, ಧ್ಯಾನಭಂಗವಾದುದಕ್ಕೆ ಶಿವಪಾದನಿಗೆ ಅಸಮಾಧಾನವಾಯಿತಾದರೂ “ಹೌದು” ಅಂದ.

“ಇಷ್ಟೇ ಆದರೆ ಇದರಲ್ಲಿ ಅಂಥ ವಿಶೇಷವೇನಿದೆ? ಮನುಷ್ಯನನ್ನು ಅಮರನಾಗಿಸುವ, ಚಿರಂಜೀವಿಯಾಗಿಸುವ ಗುರಿ ಹೊಂದಿದ್ದರೆ ಅದು ದೊಡ್ಡದಾಗುತ್ತಿರಲಿಲ್ಲವೆ?”

“ಪ್ರಕೃತಿಗೆ ವಿರುದ್ಧವಾದ ಸಿದ್ಧಿಗಳನ್ನು ಬೋಧಿಸುವುದು ನಮ್ಮ ಗವಿಯ ಪರಂಪರೆ ಅಲ್ಲ. ಅದಕ್ಕೇ ಸಸ್ಯಹೃದಯಕ್ಕೆ ಅಂಥ ಮಹತ್ವಾಕಾಂಕ್ಷೆ ಇಲ್ಲ. ಕುರುಮುನಿಯಲ್ಲಿ ಅದನ್ನು ಬೋಧಿಸುವ ಗ್ರಂಥಗಳಿವೆ, ಬೇಕಿದ್ದರೆ ನೋಡಿಕೊ.”

-ಎಂದ. ದನಿ ಬಿರುಸಾದುದನ್ನು ಜಯಸೂರ್ಯ ಗಮನಿಸಲಿಲ್ಲ.

“ನಿಮಗೆ ಅದರಲ್ಲಿ ಆಸಕ್ತಿ ಇಲ್ಲವೆ?”

“ಇಲ್ಲ”

-ಎಂದಷ್ಟೇ ಹೇಳಿ ಶಿವಪಾದ ಸುಮ್ಮನಾದ. ಆದರೆ ಮುದುಕ ಇಷ್ಟು ಸುಧೀರ್ಘ ಅವಧಿ ಬದುಕಿದ್ದ ಸುಳ್ಳೆ? ತನ್ನೆದುರಿಗೆ ಗುಟ್ಟು ಬಚ್ಚಿಟ್ಟುಕೊಳ್ಳುತ್ತಿದ್ದಾನೆಂದೇ ಜಯಸೂರ್ಯ ಚಿತ್ತಸಂಶಯ ತಾಳಿದ. ಅಂದಿನಿಂದ ಶಿವಪಾದ ಮಾತ್ರ ಜಯಸೂರ್ಯನ ಉಸಾಬರಿ ತೊರೆದು ಬಿಟ್ಟ. ಜಯಸೂರ್ಯ ಏನನ್ನಾದರೂ ಕೇಳಿದರೆ ಕುರುಮುನಿಯ ಮೂಲಕ ಉತ್ತರಿಸುತ್ತಿದ್ದ.

ಕುರುಮುನಿಯಿಂದ ತನಗೆ ಬೇಕಾದ ಗ್ರಂಥಗಳನ್ನು ಪಡೆದ ಮೇಲೆ ಜಯಸೂರ್ಯನ ಅಧ್ಯಯನ ಸ್ವತಂತ್ರವಾಗಿಯೇ ಸಾಗಿತ್ತು. ಗ್ರಂಥಗಳನ್ನು ಪಠಿಸುವ ಮತ್ತು ಅರ್ಥೈಸುವ ಕ್ರಮ ಅವನಿಗೆ ಗೊತ್ತಾಗಿದ್ದುದರಿಂದ ಈಗ ಶಿವಪಾದನ ಅಗತ್ಯವೂ ಕಾಣಲಿಲ್ಲ. ಬೇಕೆನಿಸಿದಾಗ ಒಬ್ಬನೇ ಕಾಡಿನಲ್ಲಿ ಕಣ್ಮರೆಯಾಗುತ್ತಿದ್ದ. ಮೊದಮೊದಲು ದಿನ ಬಿಟ್ಟು ದಿನ ಕುರುಮುನಿಯ ಭೇಟಿಯಾಗುತ್ತಿದ್ದವನು ಈಗ ಅದೂ ಅಪರೂಪವಾಯಿತು. ಅಲ್ಲದೆ ಕುರುಮುನಿಯ ಜವಾಬ್ದಾರಿಗಳೂ ಜಾಸ್ತಿಯಾಗಿದ್ದವು. ಈ ಸಂದರ್ಭವನ್ನೇ ಉಪಯೋಗಿಸಿಕೊಂಡು ಜಯಸೂರ್ಯ ವಿಷವಿದ್ಯೆಯಲ್ಲಿ ಪರಿಣತನಾದ. ರಸವಿದ್ಯೆ ಹತ್ತಲಿಲ್ಲ.

ಕೆಲವು ಅಮೂಲ್ಯ ಮೂಲಿಕೆಗಳಿಂದ ರಸಗಳನ್ನು ಸಿದ್ಧಪಡಿಸಿ, ತಾನೇ ಸೇವಿಸಿ ಅವುಗಳ ಪರಿಣಾಮದ ಬಗ್ಗೆ ಖಾತ್ರಿ ಮಾಡಿಕೊಂಡ. ಗುರುಮುಖೇನ ಬಂದಲ್ಲದೆ ಮುಟ್ಟಲೇಬಾರದ ಕೆಲವು ರಸಗಳನ್ನು ಕುರುಮುನಿಯ ತಿಳಿವಳಿಕೆಗೂ ಬಾರದಂತೆ ತನ್ನ ಮೇಲೆಯೇ ಪ್ರಯೋಗಿಸಿ ಖಚಿತಪಡಿಸಿಕೊಂಡ. ಜಯಸೂರ್ಯನ ದೇಹದಲ್ಲಾದ ವಿಕಾಸ ಮತ್ತು ಮಾರ್ಪಾಡುಗಳನ್ನು, ದೇಹಕ್ಕೆ ಅಡರಿದ ಲೋಹದ ಕಾಂತಿಯನ್ನು ಕುರುಮುನಿ ಗಮನಿಸಿದ್ದ. ಅದಕ್ಕೇ ಸಂಶಯ ಬಂದು ಗುರುವಿನ ಗಮನಕ್ಕೆ ತರುವುದು ಉಚಿತವೆಂದು ಪ್ರಯತ್ನ ಮಾಡಿದ. ಆದರೆ ಶಿವಪಾದ ಮಾತ್ರ ಜಯಸೂರ್ಯನ ಬಗೆಗಿನ ಯಾವ ಸಂಗತಿಯನ್ನೂ ಕಿವಿಯ ಮೇಲೆ ಹಾಕಿಕೊಳ್ಳದಿರಲು ತೀರ್ಮಾನಿಸಿದಂತಿತ್ತು.

ಈ ಸಲದ ಯುಗಾದಿ ಮುಂಚಿನ ಒಂದು ದಿನ ಮಧ್ಯಾಹ್ನ ಕುರುಮುನಿ ಮತ್ತು ಜಯಸೂರ್ಯ ಬೆಟ್ಟದಡಿಯ ಮಡುವಿನಲ್ಲಿ ಮೀಯುತ್ತಿದ್ದರು. ನಿಚ್ಚಳವಾದ ಬಿಸಿಲಿನಿಂದಾಗಿ ಹೊಸ ಚಿಗುರುಟ್ಟ ಬೆಟ್ಟ ಚಿನ್ನದ ಕಾಂತಿಯಿಂದ ಹೊಳೆಯುತ್ತಿತ್ತು. ಹೊರಗಡೆ ಹರಿತವಾದ ಬಿಸಿಲಿನಿಂದಾಗಿ ಮಡುವಿನ ತಂಪು ನೀರು ಹಿತಕರವಾಗಿತ್ತು. ಮಡುವಿನಲ್ಲಿ ಮೂಡಿದ ಸೂರ್ಯ ಉರಿಬಿಸಿಲಿಗೆ ನೀರಲ್ಲಿ ಬಿದ್ದು ಮುಳುಗೇಳುತ್ತಿರುವಂತೆ ಕಂಡಿತು. ಅಷ್ಟರಲ್ಲಿ ಬೆಟ್ಟದ ಮೇಲಿನ ಹೊಲೆಬಂಡೆಯ ಬದಿಯಿಂದ ಸಣ್ಣ ಬಂಡೆಯೊಂದು ಉರುಳಿ ಬೀಳುತ್ತಿರುವ ಸದ್ದಾಯಿತು. ಕುರುಮುನಿ ಮೊದಲು ಗಮನಿಸಿ “ತಮ್ಮಾ ಇತ್ತ ಸರಿ” ಎಂದು ಕೂಗಿದ. ಬಂಡೆಯ ಉರುಳುವ ಸದ್ದನ್ನಾಗಲೇ ಕೇಳಿಸಿಕೊಂಡಿದ್ದ ಜಯಸೂರ್ಯ ಮೇಲೆ ನೋಡಿದ. ಅದೇನು ಆವೇಶ ಬಂತೋ – ಅವಸರದಿಂದ ಸರಿದು ಆ ಬಂಡೆ ಬೀಳುವ ಸ್ಥಳದಲ್ಲೇ ತನ್ನ ಮೈಯೊಡ್ಡಿ ನಿಂತುಬಿಟ್ಟ! ಕ್ಷಣಾರ್ಧದಲ್ಲಿ ಬಂಡೆ ಸದ್ದಿನೊಂದಿಗೆ ಉರುಳಿ ಜಯಸೂರ್ಯನ ದೇಹಕ್ಕೆ ಸದ್ದಿನೊಂದಿಗೆ ಅಪ್ಪಳಿಸಿ ಒಡೆದು ಪುಡಿಯಾಗಿ ಬಿದ್ದಿತು! ಜಯಸೂರ್ಯ ಕುರುಮುನಿಯನ್ನೇ ನೋಡುತ್ತ ಹೆಮ್ಮೆಯಿಂದ ತನ್ನ ದೇಹವನ್ನ ತಟ್ಟಿಕೊಂಡು ಗಹಗಹಿಸಿ ನಗತೊಡಗಿದ. ಕುರುಮುನಿ ಅಘಾತ ಹೊಂದಿ ತೆರೆದ ಕಣ್ಣು ತೆರೆದಂತೇ ಬರೆದ ಚಿತ್ರದ ಹಾಗೆ ನಿಂತುಕೊಂಡೇ ಇದ್ದ!

ಜಯಸೂರ್ಯ ಕ್ಷೇಮವಾಗಿಯೇ ನಗುತ್ತಿರುವುದನ್ನು ನೋಡಿ ಆಮೇಲೆ ಅರಿವಾಗಿ ಕೇಳಿದ:

“ನೀನು ವಜ್ರಕಾಯನಾಗಿದ್ದೀಯ ತಮ್ಮಾ?”

“ಇನ್ನೂ ಗೊತ್ತಾಗಲಿಲ್ಲವೆ ಅಣ್ಣಾ?”

-ಎಂದು ವ್ಯಂಗ್ಯ ಬೆರೆತ ಹೆಮ್ಮೆಯಿಂದ ಬೀಗಿ ಹೇಳುತ್ತ ಈ ಸಲ ಇನ್ನೂ ಜೋರಾಗಿ ನಕ್ಕ.

“ನನಗೆ ಹೇಳಲೇ ಇಲ್ಲವಲ್ಲೋ ತಮ್ಮ!”

“ಈಗಲಾದರೂ ತಿಳೀತಲ್ಲ ಅಣ್ಣಾ?”

“ಗುರುಗಳಿಗಾದರೂ ಹೇಳಿದ್ದೀಯೋ? ಇಲ್ಲೊ?”

“ಹೋಗಿ ನೀ ಹೇಳು.”

ಅಂದ. ಇದು ಸೊಕ್ಕಿನ ಮಾತೆನ್ನಿಸಿತು ಕುರುಮುನಿಗೆ. ಆಘಾತದಿಂದ ಜಯಸೂರ್ಯನನ್ನು ನೋಡಿದ. ಹಸನಾದ ಬಿಸಿಲು ಅವನ ಮ್ಯಾಲೆ ಬಿದ್ದು ಮೈ ಮಸೆದ ಆಯುಧದಂತೆ ಮಿರಿ ಮಿತಿ ಮಿಂಚುತ್ತಿತ್ತು. ಬಿಗಿದ ಬೋಲ್ಟಿನ ಯಂತ್ರದ ಹಾಗೆ ದೇಹವಿಡೀ ಸಿಡಿವ ಕಿಡಿಯಂತೆ ಹೊಳೆಯುತ್ತಿತ್ತು. ಅವನ ಕಣ್ಣು ಮತ್ತು ನಗುವಿನಲ್ಲಿ ಹೊಸ ಸೀಮೆ ಗೆದ್ದವನ ಅಹಂಕಾರ ಮತ್ತು ಕ್ರೌರ್ಯಗಳು ಕಂಡವು. ಅರ್ಥಾಥ್ ಅವನೆದುರಿಗೆ ಈಗ ಯಾರಿದ್ದರೂ ಹೆದರಿ ಹಿಂಜರಿಯಬೇಕಾದ ಸ್ಥಿತಿಗೆ ತಲುಪುತ್ತಿದ್ದರು. ಈ ವಿಷಯ ಬಹುಶಃ ಶಿವಪಾದನಿಗೂ ಗೊತ್ತಿಲ್ಲವೆಂದು ಕುರುಮುನಿಗನ್ನಿಸಿ ಆತಂಕವಾಯಿತು. ವಿದ್ಯಾರ್ಥಿಯಾದವನಲ್ಲಿರಬೇಕಾದ ಕಿಂಚಿತ್ ಮುಗ್ಧತೆಯೂ ಜಯಸೂರ್ಯನಲ್ಲಿರಲಿಲ್ಲ. ಬದಲಾಗಿ ಬಲವಾದ ಬುದ್ಧಿವಂತಿಕೆ ಮತ್ತು ಸದಾ ಜಾಗೃತವಾದ ಬೆರಿಕಿತನವಿತ್ತು. ಇಂಥವರ ಕೈಗೆ ಏನು ಸಿಕ್ಕರೂ ಅದನ್ನವರು ಅಪಾಯಕಾರಿಯಾದ ಆಯುಧವಾಗಿ ಮಾರ್ಪಡಿಸಿಕೊಳ್ಳಬಲ್ಲರು.

ಇದಾಗಿ ಅಮ್ಮನ ಪರ್ವದ ಮೂರನೇ ರಾತ್ರಿ ಜಯಸೂರ್ಯ ಇಲ್ಲಿಂದ ಪರಾರಿಯಾಗಿ ಕನಕಪುರಿಯಲ್ಲಿ ಬೇರೊಂದು ಹೆಸರಿನೊಂದಿಗೆ ಅವತರಿಸಿದ.