ಮೊದಮೊದಲು ಗವಿಯ ಜೀವನಕ್ಕೆ ಹೊಂದಿಕೊಳ್ಳುವುದು ಜಯಸೂರ್ಯನಿಗೆ ಕಷ್ಟವಾಯಿತು. ಮೊದಲನೆಯ ಕಷ್ಟ ದೇವರಿಂದಲೇ ಸುರುವಾಯಿತು. “ನೀನು ನಾಸ್ತಿಕನೋ?” ಎಂದು ಕೇಳಿದ ಶಿವಪಾದ.

“ಹೌದು”

“ನಾಸ್ತಿಕನೋ, ಆಸ್ತಿಕನೋ-ಯಾರಾದರು ಆಗಿರು. ಇಲ್ಲಿರುವತನಕ ನೀನು ಅಮ್ಮನಲ್ಲಿ ನಂಬಿಕೆ ಇಡಲೇಬೇಕು. ನಿನ್ನ ಧ್ಯಾನ ಜಪತಪಗಳ ಗುರಿ ಅಮ್ಮನೇ ಆಗಬೇಕು. ಅಂದರೇ ನಿನಗೆ ಸಸ್ಯಹೃದಯ ದಕ್ಕೋದು. ಅಮ್ಮನೇ ಆಗಬೇಕಂತಲೂ ಹೇಳಲಾರೆ, ನೀನು ನಂಬುವ ದೇವರೊಂದಾದರೆ ಸಾಕು.”

-ಎಂದು ತಾಕೀತು ಮಾಡಿಯೇ ಜಯಸೂರ್ಯನನ್ನು ಒಪ್ಪಿಸಿದ. ಜಯಸೂರ್ಯ ಮಾಡಿಕೊಂಡ ಒಂದು ಬದಲಾವಣೆಯೆಂದರೆ ಅಮ್ಮನ ಬದಲು ಸೂರ್ಯನನ್ನು ಅಂದರೆ ತನ್ನ ಕುಲದೇವರನ್ನು ನಂಬಿದ. ತನ್ನ ಜಪತಪಾದಿಗಳಿಗೆ ಅವನನ್ನೇ ಗುರಿಯಾಗಿಟ್ಟುಕೊಂಡ. ಆದರಿದನ್ನು ಶಿವಪಾದನಿಗೆ ತಿಳಿಸಲಿಲ್ಲ, ತಿಳಿಸುವ ಅಗತ್ಯವೂ ಕಾಣಲಿಲ್ಲ.

ಪ್ರಾರಂಭದ ದಿನಗಳಲ್ಲಿ ರೂಢಿಯಾಗುವತನಕ ಇರಲೆಂದು ಜಯಸೂರ್ಯನೊಂದಿಗೆ ಕುರುಮಿನಿಯೆಂಬ ಇನ್ನೊಬ್ಬ ಸಾಧಕನನ್ನು ಜೋಡಿಸಲಾಯಿತು. ಕುರುಮುನಿ ಸುಮಾರು ಮಧ್ಯವಯಸ್ಸಿನ ಕುಳ್ಳ. ದಟ್ಟವಾದ ಉದ್ದ ಕೂದಲು, ದೊಡ್ಡ ಮೂಗು, ಬೆಕ್ಕಿನ ಕಣ್ಣಿನ ದಢೂತಿ ಕುಳ. ಅವನ ಮೂಗು ಸದಾ ಮುಗಿಲು ನೋಡುವಂತೆ ಮುಖ ಮ್ಯಾಲೆತ್ತಿಕೊಂಡೇ ಇರುತ್ತಿದ್ದ. ಮಲೆಯಾಳದ ಮಂತ್ರತಂತ್ರಠಾದಿಗಳನ್ನ ಆಗಲೇ ರೂಢಿಸಿಕೊಂಡಿದ್ದ ವಾಮಾಚಾರಿ. ಮರದ ತುಂಡಿನಂತೆ ಕೈ ಕಾಲುಗಳಿಗೆ ಬೆಂಕಿ ಹಚ್ಚಿಕೊಳ್ಳುವುದು, ತಂಬಾಕು ಸೇದುವ ಸಾಧಕರಿಗೆ ಚಿಟಿಕೆ ಹಾರಿಸಿ ತೋರುಬೆರಳಲ್ಲಿ ಉರಿ ಮಾಡಿ ಚಿಲುಮೆ ಹೊತ್ತಿಸುವುದು ಇತ್ಯಾದಿ ಮಾಡಿ ಎಲ್ಲರನ್ನು ನಗಿಸುತ್ತಿದ್ದ. ನೋಡಿದೊಡನೆ ಶಿವಪಾದ ಅವನನ್ನು ಕುರುಮುನಿ ಎಂದು ಕರೆದ. ಮುಂದೆ ಅವನೆಂದೂ ತನ್ನ ಮೂಲಹೆಸರನ್ನು ಯಾರಿಗೂ ಹೇಳಲಿಲ್ಲ. ಶಿವಪಾದನ ಬಗ್ಗೆ ಮಾತ್ರ ಪ್ರಾಣ ಕೊಡುವಷ್ಟು ಭಕ್ತಿಯಿದ್ದವ. ಶಿವಪಾದನಿಗೂ ಇವನ್ನು ಕಂಡರೆ ಬಲು ಪ್ರೀತಿ. ಆದರೆ ಈತ ವಿದ್ಯೆಗಳ ಬಗ್ಗೆ ಆಸೆಬುರುಕ, ತನಗೆ ಬೇಡವೆಂದು ಶಿಷ್ಯರು ಬಿಟ್ಟ ವಿದ್ಯೆಗಳನ್ನೆಲ್ಲ ನನಗವು ಬೇಕು ಎಂದು ಪಡೆಯುತ್ತಿದ್ದ.

ಆ ಮೊದಲು ರಾತ್ರಿ ಮಲಗಿ ಇನ್ನೂ ನಿದ್ದೆ ಕೂಡ ಹತ್ತಿರಲಿಲ್ಲ. ‘ಏಳು ಶಿವಾ’ ಎಂದು ಕುರುಮುನಿ ಅವನನ್ನು ಎಬ್ಬಿಸಿ ಮಿಂದು ಬರಲು ಮಡುವಿಗೆ ಕರೆದೊಯ್ದ. ಗವಿಯಿಂದ ಮಡು ದೂರವಿತ್ತು. ಕಾಡಿನಲ್ಲಿ ನಡೆಯಬೇಕು. ಒಂದು ಸಲ “ಹೆಜ್ಜೆ ಇಡಬೇಡ ಹುಳ ಇದೆ” ಅಂದ. ಅಲ್ಲಿ ಹೆಜ್ಜೆ ಇಡಲಿಲ್ಲ. ಆದರೆ ಹುಳವೂ ಕಾಣಲಿಲ್ಲ. ಕಾಲೋಚಿತ ಕರ್ಮಂಗಳ ಮುಗಿಸಿ, ಮಡುವಿನಲ್ಲಿ ಇನ್ನೇನು ಕಾಲಿಡಬೇಕು-ಆಚೆ ದಡದಲ್ಲಿ ಹುಲಿಯೊಂದು ತನ್ನೆರಡು ಮರಿಗಳೊಂದಿಗೆ ದಂಡೆಯಲ್ಲಿ ನಿಂತಿತ್ತು. ನೋಡಿ ಗಾಬರಿಯಾದ. ಕುರುಮುನಿ ತನ್ನ ಪಾಡಿಗೆ ತಾನು ಮುಳುಗಿದ. ಹೆದರುತ್ತಲೇ ಇವನೂ ಅವನನ್ನು ಅನುಸರಿಸಿದ. ಒದ್ದೆಯಲ್ಲೇ ಗವಿಗೆ ಬಂದ ಮೇಲೆ ಕುರುಮುನಿಯ ವ್ರತಬೋಧನೆ ಸುರುವಾಯಿತು. ಮೊದಲು ಯೋಗ, ಧ್ಯಾನ ಅನಂತರ ಅಧ್ಯಯನ ಮೊದಲಾಗಿ ಮೂರು ತಾಸು ಹೊತ್ತೇರುವತನಕ ಸಾಗಿತು.

ಆಹಾರಕ್ಕೆ ಶಿಷ್ಯರೇ ಕಾಡಿಗೆ ಹೋಗಬೇಕು. ಸಿಗುವ ಹಣ್ಣು ಹಂಪಲ ತಿಂದು ಬರಬೇಕು. ಬೇಕಾದರೆ ಅಕ್ಕಿಯ ತಮ್ಮ ಗಂಜಿ ತಾವೇ ಕುದಿಸಿಕೊಳ್ಳಬೇಕು. ಹಾಸಿ ಹೊದೆಯಲಿಕ್ಕೆ ಸಿಕ್ಕೋದು ಒಂದು ಕಂಬಳಿ, ಎರಡು ಲಂಗೋಟಿ, ಮಾರುದ್ದದ ಎರಡು ದಟ್ಟಿ ಬಿಟ್ಟರೆ ಬೇರೆ ಬಟ್ಟೆಗಳೇ ಇಲ್ಲ.

ಹೀಗೆ ಮೂರು ತಿಂಗಳು ಕಳೆದ ಮೇಲೆ ಕುರುಮುನಿ ಮೊದಲನೆ ಮಂತ್ರ ಹೇಳಿದ. ಎಷ್ಟು ಸಲ ಪ್ರಯತ್ನಿಸಿದರೂ ಕುರುಮುನಿಯಂತೆ ಹೇಳಲು ಸಾಧ್ಯವಾಗಲಿಲ್ಲ. ‘ಮನಸ್ಸಿನ ಏಕಾಗ್ರತೆ ಸಾಧ್ಯವಾಗುತ್ತಿಲ್ಲ. ನಿನ್ನ ಮಾತು ತಿಳೀವಲ್ದು, ಏನು ಮಾಡಲಿ?’ ಅಂದ.

“ನೋಡಪಾ”-ಕುರುಮುನಿ ಹೇಳಿದ-“ಮನಿಶ್ಯಾನ ಮನಸು ಮಂಗ್ಯಾನ್ಹಾಂಗ ಭಾಳ ಚಂಚಲ. ಕುಂತಲ್ಲಿ ಕುಂದ್ರಾಣಿಲ್ಲ, ನಿಂತಿಲ್ಲಿ ನಿಂದ್ರಾಣಿಲ್ಲ. ಅದು ಅದರ ವೃತ್ತಿ, ಅದಕ್ಕ ನೀ ಏನ ಮಾಡಬೇಕು? ಅದನ್ನ ಕೈಯಾಗಿಟಕೋಬೇಕು. ಅಂದರ ಅದರ ವೃತ್ತಿ ಮ್ಯಾಗ ನಿನ್ನ ಹಿಡಿತ ಇಡಬೇಕು. ಈಗ ನೋಡಪಾ ನಾ ಹೇಳಿದ್ದು ನಿನ್ನ ತಲ್ಯಾಗ ಇಳೀತೈತಿ.”

ಹಲ್ಲು ಕಚ್ಚಿ ಚಿತ್ತಕ್ಕೆ ಸಹಜವಾದ ವ್ಯಭಿಚಾರ ವೃತ್ತಿಯನ್ನು ನಿಯಂತ್ರಿಸಿಕೊಂಡು ಛಲದಿಂದ ಸಾಧನೆ ಸುರು ಮಾಡಿದ.

ಪ್ರಾರ್ಥನೆ ಮತ್ತು ಪ್ರಸ್ತಾವನೆಯ ಮಂತ್ರ ಹೇಳಿ ಇನ್ನೆರಡು ತಿಂಗಳು ಕಳೆದೂ ಕುರುಮುನಿ ಮುಂದಿನ ಮಂತ್ರ ಹೇಳಲೇ ಇಲ್ಲ. ಜಯಸೂರ್ಯನ ಮನಸ್ಸಿನಲ್ಲಿ ಅನುಮಾನ ಸುರುವಾಯಿತು. ಮುದುಕ ತನ್ನನ್ನು ನಂಬಿಲ್ಲವೆಂದು, ಇಲ್ಲಿಯ ಕಠಿಣ ಜೀವನಶೈಲಿಗೆ ಬೆದರಿ ಮಧ್ಯದಲ್ಲೇ ಬಿಟ್ಟು ಓಡಿಹೋಗುವನೆಂದುಕೊಂಡನೋ? ಅಥವಾ ಅದೇ ಅದೇ ಮಂತ್ರವನ್ನು ಮತ್ತೆ ಮತ್ತೆ ಹೇಳಿ ಬೋರಾಗಿ ಜಾಗ ಕಾಲಿ ಮಾಡುವನೆಂದುಕೊಂಡನೋ? ಮಧ್ಯಾಹ್ನ ಶಿವಪಾದನ್ನು ಕೇಳಿಯೇ ಬಿಟ್ಟ. ಶಿವಪಾದ ಹೇಳಿದ:

“ನೋಡಯ್ಯಾ ವಿದ್ಯೆ ದಕ್ಕಬೇಕೆಂದರೆ ವಿದ್ಯಾರ್ಥಿಯಾದಾತ ಆತುರಕ್ಕೆ ವಶನಾಗಬಾರದು. ಹಾಗಂತ ಆತುರವನ್ನೂ ಬಿಡಬಾರದು. ಮನಸ್ಸನ್ನ ನಿಯಂತ್ರಣದಲ್ಲಿಟ್ಟುಕೊಂಡವನೇ ವಿದ್ಯೆಯನ್ನು ವಶಮಾಡಿಕೊಳ್ಳಬಲ್ಲ. ನೀನು ಮಂತ್ರ ಹೇಳಿದರೆ ಅದು ಮನುಷ್ಯ, ಪ್ರಾಣಿ ಸಸ್ಯಾದಿ ತಿರ್ಯಕ್ ಜಗತ್ತಿಗೆ ತಲುಪುವಂತಿರಬೇಕು. ಈಗ ನಿನ್ನ ಮಂತ್ರ ತಲುಪುತ್ತಿರುವುದು ಆ ಮಂತ್ರವನ್ನ ಮೊದಲೇ ಬಲ್ಲ ಮನುಷ್ಯರಿಗೆ ಮಾತ್ರ. ಆದ್ದರಿಂದ ನಿನ್ನ ಮಂತ್ರಪಠಣ ಹೆಂಗಿರಬೇಕು ಮೊದಲು ತಿಳಿದುಕೊ. ಹೋಗಲಿ, ನಿನ್ನ ಮಂತ್ರಪಠಣಕ್ಕೂ ಕುರುಮುನಿಯ ಮಂತ್ರಪಠಣಕ್ಕೂ ವ್ಯತ್ಯಾಸ ತಿಳಿಯುವುದೇನಯ್ಯ? ಸಸ್ಯಹೃದಯದಲ್ಲಿರೋದು ಬರೀ ವರ್ಣಗಳು. ಅವುಗಳನ್ನು ಅವುಗಳ ಸಹಜ ಲಯದಲ್ಲಿ ಹೇಳಿದರೇ ಅವು ಮಂತ್ರವಾಗೋದು; ಮಂತ್ರ ಕೇಳಿದರೆ ಮಾತ್ರ ಅಭಿಮಾನಿ ದೇವತೆ ಪ್ರಸನ್ನವಾಗೋದು.”

ಜಯಸೂರ್ಯನಿಗೆ ತನ್ನ ತಪ್ಪಿನ ಅರಿವಾಯಿತು. ಒಂದು ಮಂತ್ರವನ್ನ ಅದರ ನೈಜ ಲಯದಲ್ಲಿ ಉಚ್ಛರಿಸುತ್ತ ಹೋದಂತೆ ಅದರ ಪರಿಣಾಮ ದೇಹದ ನರಮಂಡಲದಲ್ಲಿ ಕಂಪನ ಹುಟ್ಟಿಸುತ್ತ, ಚಿತ್ತದ ವ್ಯಭಿಚಾರಿ ವೃತ್ತಿಯನ್ನು ನಿಯಂತ್ರಿಸುವುದನ್ನು ಅನುಭವಿಸಿದ. ಅದೊಮ್ಮೆ ಏಕಾಗ್ರಗೊಂಡಾದ ಮೇಲೆ ಮಂತ್ರದ ಅಭಿಮಾನಿ ದೇವತೆಯನ್ನು ಧ್ಯಾನಿಸುತ್ತ ಮಂತ್ರ ಪಠಿಸಿದಾಗ ಬಹಳ ಹೊತ್ತಾದ ಬಳಿಕ ತನಗೇ ತಿಳಿಯದಂತೆ ತನ್ನೊಳಗೆ ಲಯದ ಕಂಪನಗಳು ಹುಟ್ಟಿ ವ್ಯಾಪಿಸುತ್ತಿರುವ ಅನುಭವವಾಯಿತು.

ಇನ್ನೊಂದು ದಿನ ಶಿವಪಾದನೇ ಮಂತ್ರೋಚ್ಛಾರಣೆ ಮಾಡಿ ಜಯಸೂರ್ಯನಿಗೆ ತನ್ನೊಂದಿಗೆ ಉಚ್ಛರಿಸಲು ಹೇಳಿದ. ಹಾಗೆ ಉಚ್ಛರಿಸುತ್ತಿದ್ದಂತೆ ಒಮ್ಮೆಲೆ ತನ್ನ ಚಿತ್ರ ಸ್ವರೂಪದಲ್ಲಿ ಬದಲಾವಣೆಯಾಗಿ ಶಿವಪಾದನ ಕಡೆಗೆ ನೋಡಿದ. ಅವನು ಮುಗುಳು ನಗುತ್ತ ಮಂತ್ರ ಪಠಿಸುತ್ತಲೇ ಇದ್ದ. ಬರುಬರುತ್ತ ತನ್ನ ಹೆಸರು ಮತ್ತು ವೃತ್ತಿ ಮರೆತು ಹೋದಂತೆ ಮಂತ್ರ ಪಠಿಸುತ್ತಲೇ ಇದ್ದ. ಬರಬರುತ್ತ ತನ್ನ ಹೆಸರು ಮತ್ತು ವೃತ್ತಿ ಮರೆತು ಹೋದಂತೆ ಭಾಸವಾಯಿತು. ಮಂತ್ರ ದೇಹದಾದ್ಯಂತ ವ್ಯಾಪಿಸಿ ಅದರ ಕಂಪನಗಳಿಗೆ ನರಮಂಡಳದ ಹುರಿ ಬಿಗಿದಂತೆನಿಸಿತು. ಮಂತ್ರವನ್ನು ತಾನು ಅಥವಾ ತನ್ನ ದೇಹ ಉಸಿರುತ್ತಿದೆಯೋ ಅಥವಾ ಮಂತ್ರವೇ ತನ್ನನ್ನು ಮೀಟಿ ಮಂತ್ರದ ನಾದ ಹೊಮ್ಮುವಂತೆ ಮಾಡುತ್ತಿದೆಯೋ? ತಿಳಿಯದಾಯಿತು. ಅದೇ ಅದೇ ಮಂತ್ರವನ್ನು ಮತ್ತೆ ಮತ್ತೆ ನುಡಿಯುತ್ತಿದ್ದಂತೆ ಅದರ ಕಂಪನಗಳಿಂದ ತನ್ನ ಸುತ್ತ ಉಗುರು ಬೆಚ್ಚಗಿನ ಒಂದು ಶಾಖದ ವಲಯ ನಿರ್ಮಾಣವಾದಂತಾಯಿತು. ಮೆಲ್ಲಗೆ ಈಗ ಅಮ್ಮನ ಕಲ್ಲಿನ ಕಡೆಗೆ ನೋಡಿದ. ಆದರೆ ಅಲ್ಲಿ ದೊಡ್ಡಕಣ್ಣುಗಳುಳ್ಳ ಅಮ್ಮನ ಒರಟು ಮೂರ್ತಿ ಇರಲಿಲ್ಲ. ಒಂದು ದೊಡ್ಡ ಗರುಡ ಪ್ರತ್ಯಕ್ಷವಾಗಿತ್ತು! ಇರಿವ ಕಣ್ಣಿನ ಆ ಪಕ್ಷಿಯ ನೋಟ ಭಯಾನಕವಾಗಿತ್ತು. ಚೂಪಾದ ಕೆಂಪು ತುದಿ ಮುಂದೆ ಬಾಗಿತ್ತು. ಈಗಷ್ಟೆ ಹಾರಿ ಬಂದು ಕೂತಂತಿದ್ದ ಅಥವಾ ಇನ್ನೇನು ಹಾರಲಿರುವಂತಿದ್ದ ಹಕ್ಕಿ ಬಲಾಢ್ಯವಾದ ರೆಕ್ಕೆಗಳನ್ನು ಪೂರ್ತಿ ಮುಚ್ಚಿಕೊಂಡಿರಲಿಲ್ಲ. ಪಕ್ಷಿಯನ್ನು ನೋಡುತ್ತಿದ್ದಂತೆ ಆಸ್ಮಿತಾವೃತ್ತಿ ಹುಟ್ಟಿ ಮನೋಬುದ್ದಿಗಳು ಜಾಗೃತವಾಗಿ ದೇಹಭಾವ ಮೂಡಿತು. ಮೆಲ್ಲನೆ ಶಿವಪಾದನ ಕಡೆಗೆ ನೋಡಿದ. ಸಮಾಧಿಯಲ್ಲಿದ್ದ ಆತನ ಹುಬ್ಬು ಗಂಟು ಬಿದ್ದಿದ್ದವು. ಮುಚ್ಚಿದ ಕಣ್ಣುಗಳಲ್ಲಿ ಆತ ತಾನು ಕಂಡ ಹಕ್ಕಿಯನ್ನು ಕಂಡಂತಿತ್ತು!