ಎಚ್ಚರವಾದಾಗ ತಾನೆಲ್ಲಿದ್ದೇನೆಂದು ಚಿನ್ನಮುತ್ತನಿಗೆ ತಿಳಿಯಲಿಲ್ಲ. ಮನಸ್ಸಿನಲ್ಲಿ ಒಂದು ಸಣ್ಣ ಭಾವನೆ ಕೂಡ ಇರಲಿಲ್ಲ. ‘ಇದೇನಿದು ಮರೆವಿನ ಸ್ಥಿತಿ?’ ಎಂದು ಕಣ್ಣಗಲಿಸಿ ನೋಡಿದ. ಈಗಲೂ ಬೆಳಕು ಮಂದವಾಗಿ ಹಾಗೇ ಇತ್ತು. ಸ್ವಲ್ಪ ಹೊತ್ತು ಹಾಗೇ ಇದ್ದ.

ಬಂಗಾರ ಬಣ್ಣದ ಬೆಳಕಿನ ಕೋಲೊಂದು ಮ್ಯಾಲಿನಿಂದಿಳಿದು ತನ್ನ ಕಾಲಡಿ ನೆಲದ ಮ್ಯಾಲೆ ಚಿತ್ತಾರ ಬರೆದದ್ದು ಕಂಡಿತು. ಹಗಲು ಹೊತ್ತೆಂದು ಖಾತ್ರಿಯಾಗಿ ಸುತ್ತ ನೋಡಿದ. ಅದೊಂದು ಸುಮಾರು ನೂರು ಜನ ಕೂರುವಷ್ಟು ವಿಶಾಲವಾದ ಮಂಟಪ. ಗೋಡೆಗಳಿಗೆ ಮದ್ದಳೆ, ಡೊಳ್ಳು, ದುಡಿಗಳನ್ನು ತೂಗುಹಾಕಿದ್ದರು. ಗೋಡೆಯ ಮೇಲೆ ತರುಮರ, ಪ್ರಾಣಿ ಪಕ್ಷಿ, ಸೂರ್ಯ ಚಂದ್ರ, ಬೇಟೆಗಾರರು; ಹುಡುಗ ಹುಡಿಗಿಯರು ಕುಣಿಯುವ ರೇಖಾ ಚಿತ್ರಗಳಿದ್ದವು. ಹೊರಗೆ ಗಾಳಿ ಮರಗಳಲ್ಲಿ ಮಾಡುವ ಮರ್ಮರ ಕೂಡ ಕೇಳಿಸುತ್ತಿತ್ತು. ತನ್ನ ತಲೆಯ ಕಡೆಗೊಂದು ಬೆಂಕಿಯ ಕೊಂಡವಿತ್ತು. ಕೊಂಡದಲ್ಲಿನ್ನೂ ಬೆಂಕಿಯಿದ್ದು ಮೆಲ್ಲಗೆ ಏಳುತ್ತಿದ್ದ ತೆಳುವಾದ ಹೊಗೆಯೊಂದಿಗೆ ಸೂರ್ಯನ ಕೋಲುಕಿರಣಗಳು ಆಟ ಆಡುತ್ತಿದ್ದವು. ಅದರಾಚೆ ಕಟ್ಟಡದ ಬೆನ್ನು ಹುರಿಯಂತೆ ಏಣಿಯಿದ್ದು ಅದರ ತುದಿಗೊಂದು ಅಟ್ಟವಿತ್ತು. ಅಟ್ಟದ ಮ್ಯಾಲೆ ದೇವಾನುದೇವತೆಗಳ ಮರದ ಮುಖವಾಡಗಳು. ಇನ್ನಷ್ಟು ಚರ್ಮವಾದ್ಯಗಳನ್ನು ನೇತು ಹಾಕಿದ್ದರು. ಎಡಬಲ ಬೆಳಕಿಂಡಿಗಳಿಂದಲೇ ಗಾಳಿ ಬರಬೇಕು. ಮಂಟಪದ ತುದಿಯ ಛಾವಣಿ ಆಕಾಶವನ್ನಿರಿಯುವಂತೆ ಉದ್ದಕ್ಕೆ ಮ್ಯಾಲೆ ಹೋಗಿ ಕೊನೆಯಲ್ಲಿ ಮೊನೆಯಾಗಿತ್ತು. ಇಂಥ ಮಂಟಪಗಳ ಪರಿಚಯ ಚಿನ್ನಮುತ್ತನಿಗೆ ಹೊಸದಲ್ಲ. ತಮ್ಮ ಹಟ್ಟಿಯಲ್ಲೂ ಇಂಥದೊಂದು ಮಂಟಪವಿತ್ತು. ಆದರಿದನ್ನು ಹೆಚ್ಚು ಭದ್ರವಾದ, ಹೆಚ್ಚು ಅಚ್ಚುಕಟ್ಟಾದ ಭಾರೀ ತೊಲೆಗಳಿಂದ ಮಾಡಿದ್ದರು. ಬಹಳ ಹಳೆಯ ಮಂಟಪವೆಂದು ಅದಕ್ಕುಪಯೋಗಿಸಿದ ತೊಲೆ ಮತ್ತು ಜಂತಿಗಳಿಂದ ತಿಳಿಯುತ್ತಿತ್ತು. ಬೇರೇನೂ ಕಾಣಲಿಲ್ಲ. ತಾನು ಇಲ್ಲಿಗೆ ಹ್ಯಾಗೆ ಬಂದೆನೆಂದು ನೆನಪು ಮಾಡಿಕೊಳ್ಳಲು ಪ್ರಯತ್ನಿಸಿದ.

ಬರೀ ಹಳವಂಡಗಳೇ ಕಂಡವು. ದರೋಡೆಗೊಳಗಾದವನ, ಸೋತವನ ಅವಮಾನಗಳ ನೆನಪಾಗಿ ಮುಖ ಬಿಳಿಚಿ ತುಟಿ ನಡುಗಿದವು. ಕಳೆಗುಂದಿದ ಕಣ್ಣುಗಳ ಮ್ಯಾಲೆ ಹುಬ್ಬು ಗಂಟಿಕ್ಕಿಕೊಂಡವು. ಗಟ್ಟಿಯಾಗಿ ಎರಡು ಸಾರಿ ನಿಟ್ಟುಸಿರು ಬಿಟ್ಟ. ಹಳವಂಡಗಳು ಬಿಡಲಿಲ್ಲ; ಬಿಸಿ ಉಸಿರಿನಲ್ಲಿ ಹುರಿದ ಅರಳಿನಂತೆ ಸಿಡಿಯತೊಡಗಿದವು : ಮಹಾನುಭಾವನನ್ನ ತಾನು ಅಮಾನುಷವಾಗಿ ಹೊಡೆದದ್ದು, ಕಣ್ಣು ಕಳಚಿಬಿದ್ದು ಆತ ದೆವ್ವಿನ ಹಾಗೆ ವಿಕಾರವಾಗಿ ಕಿರುಚುತ್ತ ಹಾರಾಡಿದ್ದು, ಅದಾಗಿ ದಿಕ್ಕಿಲ್ಲದೆ ಎಲ್ಲೆಲ್ಲೊ ಮೂರು ವರ್ಷ ಅಲೆದಾಡಿದ್ದು, ಆತ್ಮಹತ್ಯೆಗಾಗಿ ತಾನು ಕಮರಿಗೆ ಹಾರಿದ್ದು ನೆನಪಾಗಿ ಉಳಿದದ್ದನ್ನು ಊಹಿಸಿ ತಿಳಿದುಕೊಂಡು ‘ಅಯ್ಯೋ’ ಎಂದು ಸಣ್ಣದಾಗಿ ನರಳಿದ. ಅಷ್ಟರಲ್ಲಿ ಯಾರೋ ಬರುವ ಸದ್ದಾಗಿ, ನರಳಿದ್ದಕ್ಕೆ ನಾಚಿಕೆಯಾಗಿ ಗಪ್ಪನೆ ಕಣ್ಣು ಮುಚ್ಚಿದ.

ಬಹಳ ಹೊತ್ತು ಹಾಗೇ ಇದ್ದ, ಒಳಕ್ಕೆ ಯಾರೂ ಬಂದಿಲ್ಲವೆಂದು ಮೆಲ್ಲನೆ ಕಣ್ದೆರೆದ. ಕಾಲ್ದೆಸೆಗೊಬ್ಬ ಹುಡುಗಿ ಕುಂತಿದ್ದಳು. ಕೂಡಲೇ ಏಳಲಿಕ್ಕೆ ನೋಡಿದ. ಬೆನ್ನುಹುರಿ ಹರಿದಂತೆ ನೋವಾಗಿ ಏಳುವುದು ಅಸಾಧ್ಯವೆನ್ನಿಸಿ ಮತ್ತೆ ಹಾಗೇ ಒರಗಿದ.

ಹುಡುಗಿ ತನ್ನನ್ನೇ ನೋಡುತ್ತ ಕುಂತಿದ್ದಳು. ಇವನ ಮುಖದಲ್ಲಿಯ ನೋವು ನೋಡಿ ನೆಲುವಿನ ಮ್ಯಾಲಿದ್ದ ಮಡಕೆಯಿಂದ ಹಸಿರು ರಸ ತಂದು ಮೊಳಕಾಲಿನ ಗಾಯಕ್ಕೆ ಮೆಲ್ಲಗೆ ಸವರುತ್ತ ಕುಂತಳು. ಕೆಂಪಗೆ ತೊಳೆದ ತಾಮ್ರದ ಪಾತ್ರೆಯ ಹಾಗೆ ಮುಖವುಳ್ಳ ಆ ಹುಡುಗಿಯ ಇಡೀ ಚಹರೆ ಕಾಂತಿಯುತವಾಗಿತ್ತು. ಹಸಿರಿಗೆ ಜೋತುಬಿದ್ದ ಹಣ್ಣು ಎಳೆ ಬಿಸಿಲಿನಲ್ಲಿ ಹೊಳೆಯುವಂತೆ ಅವಳ ಮುಖದ ಕಾಂತಿ ಸ್ವಚ್ಛವಾಗಿತ್ತು. ಈತ ಎಚ್ಚರಗೊಂಡುದರಿಂದ ಅವಳಿಗೆ ಸಂತೋಷವಾಗಿತ್ತೆಂದು ಅವಳ ಮುಖದಿಂದಲೇ ತಿಳಿಯುತ್ತಿತ್ತು. ಕಣ್ಣುಗಳಲ್ಲಿ ಮುಗ್ಧ ಆನಂದದ ಬೆಳಕಾಡುತ್ತಿತ್ತು. ಚಿಕ್ಕ ಗಿಣಿಮೂಗು, ಪುಟ್ಟ ಬಾಯಿ, ಕತ್ತಿನ ತುಂಬ ಹಿಡಿ ಹಿಡಿ ಕರಿಮಣಿ ಸರದ, ಎದೆಯಿಂದ ಕೆಳಗುಟ್ಟ ದಟ್ಟಿಯ ಹುಡುಗಿ ಎಲಡಿಕೆ ಹಾಕಿದ್ದಳಾಗಿ ಒಂದು ಕಡೆ ಗಲ್ಲ ಉಬ್ಬಿ ಕೆಂಪು ಜೊಲ್ಲು ಬಾಯಿ ತುಂಬಿ ತುಟಿಗಳ ಅಂಚಿನಲ್ಲಿ ತುಳುಕಿ ಸೋರುತ್ತಿತ್ತು.

“ಯಾವ ಹಟ್ಟಿಯಾಯ್ತು ನಿಂದು?”

ಮಾತಾಡಲಿಕ್ಕೆ ನೋಡಿದ, ಬೆನ್ನು ನೋಯುವಂತೆನಿಸಿ ಸುಮ್ಮನಾದ.

“ಕಾಡಿಗೆ ಹೊಸಬನ?”

ಹಾಗೇ ಹೌದೆಂದು ಕತ್ತು ಹಾಕಿದ.

“ಕಮರಿಗೆ ಬಿದ್ದುಕೊಂಡೆಯಲ್ಲಾ, ಕಣ್ಣು ಕಾಣಿಸಲಿಲ್ಲವೇನಪ್ಪಾ?”

ಎನ್ನುತ್ತ ಈತನ ದಡ್ಡತನಕ್ಕೆ ಕಿಲಕಿಲ ನಕ್ಕುಬಿಟ್ಟಳು. ಹುಡುಗಿಯ ಹಲ್ಲು, ತಿಂದ ವೀಳ್ಯದಿಂದಾಗಿ ದಾಳಿಂಬೆ ಬೀಜದಂತೆ ಚಂದಾಗಿ ಹೊಳೆದವು.

“ಕಾಡು ಅಂದರೆ ಹಂಗೇನೇ! ಹೊಸಬರನ್ನ ಕಂಡರೆ ಭಾರೀ ಕುಸಿ ಅದಕ್ಕೆ. ಥರಾವರಿ ಹಸಿರು ತೋರಿಸಿ ಕೈಮಾಡಿ ಕರೀತೈತಿ, ಬೇಕಾದರೆ ಹಾಂಗೆ ಹೀಂಗೆ ಒನೆದಾಡಿ ಪರುಮಳ ಬರೋಹಂಗೆ ಹೂಸತೈತಿ. ನೀ ಏನಾರ ಎಲಾ ಶಿವನೆ, ಎಂಥಾ ಪರುಮಳದ ಹೂವಿದು! ಅಂತ ಹೋದೆ ಅನ್ನು, ಬಾ ಅಂತ ಪಾತಾಳಕ್ಕೇ ಸೆಳೀತೈತಿ! ಬಲು ಮೋಸಗಾರ್ತಿ ಈ ಕಾಡು!”

ಅವಳು ಬಳಸಿದ ಕೆಲವು ಶಬ್ದಗಳ ಬಗ್ಗೆ ಇವನಿಗೆ ಅಸಮಾಧಾನವಾದರೂ ಅವಳ ಮಾತಿಗೆ ಒಟ್ಟಾರೆಯಾಗಿ ಮನಸ್ಸು ಅರಳಿತು. ಕಂಚು ಬಾರಿಸಿದಂಥ ಅವಳ ದನಿ, ಪ್ರತಿಯೊಂದು ಶಬ್ದ ತನ್ನ ಆಕಾರಕ್ಕೆ ತಕ್ಕಂತೆ ಅವಳ ತುಟಿ ಮತ್ತು ಕಣ್ಣುಗಳನ್ನು ಹಿರಿದು ಕಿರಿದುಗೊಳಿಸಿ ಬೆಳಕನ್ನು ಪ್ರತಿಫಲಿಸುವ ರೀತಿ, ಎದುರಿಗೆ ಕಮರಿ ಇದೆಯೆಂದೂ ತಿಳಿಯದ ದಡ್ಡನೆಂದು ತನ್ನ ಬಗೆಗಿನ ಮರುಕದಿಂದ ಮೋಜು ತಗಂಬ ಪರಿ – ಇವೆಲ್ಲಕ್ಕಿಂತ ಹೆಚ್ಚಾಗಿ ತಾನು ಈತನಕ ಕೇಳಿಲ್ಲದ ಮಾತಿನ ಧಾಟಿಗಳಿಂದ ಚಿನ್ನಮುತ್ತ ಮುದಗೊಂಡ. ಎಳೆಮನದ ಸರಳೆಯೆಂದು ಅವಳ ಕೆಂಪು ನಗೆಯನ್ನೇ ನೆನೆಯುತ್ತ ಕೂತ. ಅವಳು ಯಾವಾಗಲೋ ಹೋಗಿದ್ದಳು.

ಆಮೇಲೆ ಕತ್ತಲಾಗಿ ಮಂಟಪದ ಒಳಗೊಂದು ಉರಿವ ಸೊಡರು ತಂದಿಟ್ಟಳು. ಎಷ್ಟು ಸಮಯ ಕಳೆದರೂ ತಿರುಗಾಮುರುಗಾ ಆ ಹುಡುಗಿಯೊಂದೇ ಒಳಗೆ ಹೊರಗೆ ಸುಳಿದಳೇ ವಿನಾ ಇನ್ನಾರೂ ಅಲ್ಲಿಗೆ ಬರಲಿಲ್ಲ. ಬಹಳ ಸಮಯ ಕಳೆದ ಮೇಲೆ ಅವಳೇ ಒಂದು ಪರಿಯಾಣದಲ್ಲಿ ಗಂಜಿ ತಂದು ಚಿನ್ನಮುತ್ತನನ್ನು ಎಬ್ಬಿಸಿ, ಕುಡಿಸಿ ಮಲಗಿಸಿದಳು.

ನಿದ್ದೆಯಲ್ಲಿದ್ದಷ್ಟು ಹೊತ್ತು ತನಗಾಗದ ಯಾರಿಗೋ ಹಿಂಸೆ ಮಾಡಿದ ಹಾಗೆ, ಅವರು ತನಗೆ ಪ್ರತಿಹಿಂಸೆ ಮಾಡಿದ ಹಾಗೆ ಕನಸು ಕಾಣುತ್ತಿದ್ದ. ತಮ್ಮಿಬ್ಬರಲ್ಲಿ ಯಾರು ಹೆಚ್ಚು ನೊಂದರೆಂದು ಕಂಡು ಹಿಡಿಯಲು ಪ್ರಯತ್ನಿಸುತ್ತಿದ್ದಾಗ ಹುಡುಗಿಯ ದನಿ ಕೇಳಿ ಎಚ್ಚರವಾಯಿತು.

“ಹೋಗಪ್ಪಾ ಹೋಗು, ಅವನೇ ಬೆನ್ನುಮೂಳೆ ಮುರಿದುಕೊಂಡು ಬಿದ್ದಾನ. ಸಾಲದು ಅಂತ ಇವಯ್ಯ ಬಂದ ದೊಡ್ಡ ಮನುಷ್ಯ! ಹೋಗೋ ಮೂಳಾ!”

ಎಂದು ಯಾರಿಗೋ ಗದರುತ್ತಾ ಒಳಗೆ ಬಂದಳು. ಚಿನ್ನಮುತ್ತ ಮಲಗಿರುವುದನ್ನು ನೋಡಿ ಮತ್ತೆ ಹೊರಗೆ ಹೋದಳು.

ಈಗ ಮತ್ತೆ ಹಳೆಯ ಹಳವಂಡಗಳು ಕಾಡತೊಡಗಿದವು. ಮಹಾನುಭಾವ ಸತ್ತು ಹೋದದ್ದು, ಹಟ್ಟಿಯಲ್ಲಿ ತನ್ನ ತಂದೆ ಅಧಿಕಾರ ದಂಡವ ಅಬ್ಬೆಯ ಕೈಗಿತ್ತು ಸತ್ತಿದ್ದು, ಚಂದಮುತ್ತ ಕಲ್ಲಾದದ್ದು-ಎಲ್ಲ ನೆನಪಾದವು. ತಾನು ಸತ್ತೆನೆಂದು ತಂದೆ ನಂಬಿದ್ದೇ ಒಳ್ಳೆಯದಾಯಿತು. ಇಲ್ಲದಿದ್ದರೆ ಇಷ್ಟಕ್ಕೆಲ್ಲ ಕಾರಣನಾಗಿ ಯಾವ ಮುಖ ಹೊತ್ತು ಹಟ್ಟಿಗೆ ಹೋಗುವುದು? ಸೋಲಿನ ನೆನಪುಗಳಿಂದ ಮುಕ್ತವಾದ ಹೊಸತೊಂದು ಪ್ರಾರಂಭ ತನ್ನ ಬದುಕಿಗೆ ಬೇಕೆನಿಸಿತು. ಗತಿಸಿದ ತನ್ನ ಬದುಕಿನ ಬಗ್ಗೆ ಹೇಸಿಕೆಯಾಯಿತು. ಈ ಹಟ್ಟಿಯಲ್ಲಿ ಆಳಾಗಿ ದುಡಿದರೂ ಸೈ; ತನ್ನ ಹಟ್ಟಿಗಂತೂ ವಾಪಾಸಾಗುವುದು ಬೇಡವೆಂದು ಜೀವ ಗಟ್ಟಿ ಮಾಡಿದ. ಹಾಗಿದ್ದರೆ ಇಲ್ಲಿದ್ದೇನು ಮಾಡುವುದು?

ಮುಂಜಾನೆ ಸೂರ್ಯೋದಯವಾದ ಮೇಲೆಯೇ ಅವಳ ದರ್ಶನವಾಯಿತು. ಬಿಸಿಗಂಜಿ ತಂದಿದ್ದಳು. ಕುಡಿಸಿ ಮದ್ದರೆದು ಬೆನ್ನಿಗೂ ಮೊಳಕಾಲಿಗೂ ಸವರಿದಳು. ಈಗ ಚಿನ್ನಮುತ್ತ ಕೂರುವಂತಾಗಿದ್ದ. ಮೆಲ್ಲಗೆ “ಹುಡುಗೀ” ಅಂದ. ಆಕೆ ತಕ್ಷಣವೇ ತಿರುಗಿ ಯಾರು ಕರೆದರೆಂದು ನೋಡಿದಳು.

“ನಿನ್ನ ಹೆಸರೇನು”

“ಬೆಳ್ಳಿ ಅನ್ನು”

“ಬೆಳ್ಳಿ, ರಾತ್ರಿ ನೀನು ಯಾರೊಂದಿಗೋ ಮಾತಾಡಿದೆಯಲ್ಲ, ಇವನೇ ಬೆನ್ನುಮೂಳೆ ಮುರಿದು ಬಿದ್ದಿದ್ದಾನೆ, ಇವನು ಬೇರೆ ಬಂದ ದೊಡ್ಡ ಮನುಷ್ಯ! ಅಂತ. ಯಾರದು?”

“ಓ ಅದಾ? ಹುಳಾ ಬಂದಿತ್ತು ಕಣಪ್ಪ. ಹೊಸಬರ್ನ ಕಂಡರೆ ಭಾರೀ ಕುಸಿ ಅದಕ್ಕೆ. ಮೂಗು ಬಲೆ ಚುರುಕು. ವಾಸನೆಯಿಂದಲೇ ನೀನಿಲ್ಲಿರೋದು ಗೊತ್ತಾಗಿ, ನೋಡೋವಾ ಒಂದಪ ಹೊಸನಾತ! ಅಂತ ಬಂದಿತ್ತು. ಹೇಗೋ ಮೂಳಾ ಅಂತ ಬೈದೆ ನೋಡು, ಹೊಂಟೋಯ್ತು!”

“ನಿನ್ನ ಮಾತು ಕೇಳಿ ಹೊಂಟೋಯ್ತ?”

“ಹೊಂಟೋಗದಿದ್ದರ ಬಿಡ್ತೀನ ನಾನು?”

ರಾತ್ರಿ ಹುಳಾ (ಹಾವು) ಬಂದದ್ದು, ಇವಳಿಗೆ ತಿಳಿದದ್ದು, ಅದರೊಂದಿಗೆ ಇವಳು ಮನುಷ್ಯನೆಂಬಂತೆ ಮಾತಾಡಿದ್ದು, ಇವಳ ಮಾತು ಕೇಳಿ ಅದು ಹೊರಟು ಹೋದದ್ದು ಕೇಳಿ ಆಶ್ಚರ್ಯವಾಯಿತು. “ಅದು ಯಾವ ಜಾತಿ ಹಾವು?” ಅಂತ ಕೇಳಬೇಕೆಂದಾಗ ಜಟ್ಟಿಗ ಬಂದ.

ಮೊಳಕಾಲಿನ ಚಿಪ್ಪು ತಾನು ಅಂದಾಜು ಮಾಡಿದ್ದಕ್ಕಿಂತ ಹೆಚ್ಚು ಬೇಗ ಕೂಡಿಕೊಂಡದ್ದನ್ನು ನೋಡಿ ಜಟ್ಟಿಗನಿಗೆ ಸಂತೋಷ ಮತ್ತು ಆಶ್ಚರ್ಯವಾಯಿತು. ಸಮಾಧಾನದಿಂದ ಬೆನ್ನುತಟ್ಟುತ್ತ, “ಯಾವ ಹಟ್ಟಿಯಾಯ್ತು?” ಅಂದ. ಬಾಯ್ಗೆ ಬಂದ ಮಾತನ್ನು ತುಟಿಯಿಂದ ತಡೆಹಿಡಿದು ಚಿನ್ನಮುತ್ತ ಗೊತ್ತಿಲ್ಲವೆಂಬಂತೆ ಕತ್ತಲುಗಿದ.

“ಜನ ಕೂಗುವ ಹೆಸರೇನು?”

ಒಂದು ಕ್ಷಣ ತಬ್ಬಿಬ್ಬಾಗಿ ತಕ್ಷಣ ಸುಧಾರಿಸಿಕೊಂಡು,

“ಜಯಸೂರ್ಯ”

ಅಂದ! ಬದಲಿ ಹೆಸರು ಹೇಳಿದ್ದಕ್ಕೆ ತನ್ನ ಬಗ್ಗೆ ತನಗೇ ಆಶ್ಚರ್ಯವಾಯ್ತು. ತಾನು ಹೇಳಿದ್ದನ್ನು ಇವರು ನಂಬಲಿಲ್ಲವೆಂದು ಭಯ ಮತ್ತು ನಾಚಿಕೆಯಾಗಿ ಮಳ ಮಳ ಅವರ ಮುಖಗಳನ್ನೇ ನೋಡಿದ. ಈಯಪ್ಪ ನಾಡಿನವನೇ ಇರಬೇಕು. ಇಲ್ಲದಿದ್ದರೆ ಈಟೊಂದು ಚಂದ ಹೆಸರು ಇರುತ್ತಿತ್ತೇ ಅಂದುಕೊಂಡು “ಜಯಸೂರ್ಯ!” ಎಂದು ರಾಗವಾಗಿ ಎಳೆದು ಉರುಹೊಡೆದಳು ಬೆಳ್ಳಿ!

ಅವರು ಹೋದಮೇಲೆ ಚಿನ್ನಮುತ್ತನಿಗೆ ತನ್ನ ಹೊಸ ಹೆಸರು ಜಯಸೂರ್ಯ ಎಂದು ಹೊಳೆದುದಕ್ಕೆ ಸಮಾಧಾನವೇ ಆಯಿತು. ಮುಖಮರೆಸಿಕೊಂಡಿರಲಿಕ್ಕೆ ಸಧ್ಯ ಒಳ್ಳೆಯ ಹೆಸರೇ ಸಿಕ್ಕಿತೆಂದು ಮೋಜುಗೊಂಡ. ಜಟ್ಟಿಗ ಮತ್ತು ಬೆಳ್ಳಿ ತನ್ನ ಸುಳ್ಳನ್ನು ನಂಬಿದರೆಂದೂ ನಂಬಿದ. ಆ ರಾತ್ರಿ ಕನಸಾಯಿತು:

ಕಾಡಿನ ಒಂದು ಬಂಡೆಯ ಮೇಲೆ ಕೂತಿದ್ದಾಗ ಒಬ್ಬ ಪುಟ್ಟ ಬಾಲಕ, ಕಂಟಿಯ ಮರೆಯಲ್ಲಿ ಅಡಗಿದ್ದವ ಇವನ ಕಂಡೊಡನೆ ನಗುತ್ತ ಹೊರಬಂದ. ಇವನ ಕೈ ಹಿಡಿದು ಎಳೆದುಕೊಂಡು ಮುಂದೆ ಓಡತೊಡಗಿದ. ‘ಎಲ್ಲಿಗೆ?’ ಅಂದ. ಹುಡುಗ ಈಗಲೂ ನಗುತ್ತ ಓಡುತ್ತಿದ್ದ. ಬರಬರುತ್ತ ಹುಡುಗನ ತಲೆಯ ಮೇಲೆ ಹೊಳಪುಳ್ಳ ಕಿರೀಟವಾಯಿತು. ಹುಡುಗ ಮಾತ್ರ ಕಪ್ಪು ಬಣ್ಣಕ್ಕೆ ತಿರುಗಿದ್ದ. ನಕ್ಕಾಗ ಕರಿಯ ಮುಖದಲ್ಲಿ ಬಿಳಿಯ ಹಲ್ಲಿನ ಸಾಲು ಫಳ್ಳನೆ ಹೊಳೆದವು. “ನಿನ್ನ ಹೆಸರೇನು ಬಾಲಕಾ?” ಅಂದ. ಹುಡುಗ ಹಾಗೇ ನಗುತ್ತ, “ಚಿನ್ನಮುತ್ತ!” ಅಂದ!.

ತಕ್ಷಣ ಎಚ್ಚರವಾಯಿತು. ಚಿನ್ನಮುತ್ತ ಬೆವರಿದ್ದ. ಕನಸಿನ ಭಾಷೆ ತನ್ನದಲ್ಲವೆಂದು ಆ ಯೋಚನೆಯನ್ನೇ ಬಿಡಬೇಕೆಂದ. ಸಾಧ್ಯವಾಗಲಿಲ್ಲ. ಅವನು ಹಾಗೇ ಇರಲಿ. ಓದುಗರಿಗೆ ಗೊಂದಲವಾಗದಿರಲೆಂದು ಎರಡರ ಬದಲು ಒಂದೇ ಹೆಸರಿಟ್ಟುಕೊಂಡು ಚಿನ್ನಮುತ್ತನನ್ನು ಇನ್ನುಮುಂದೆ ನಾವೂ ಜಯಸೂರ್ಯನೆಂದೇ ಕರೆಯುತ್ತೇವೆ; ಗಮನಿಸಿರಿ.

ಹಟ್ಟಿಗೆ ಹೊಸಬರನ್ನು ಕರೆತಂದ ಮೇಲೆ ಅಮ್ಮನಿಗೆ ಈ ಸುದ್ದಿ ಹೇಳಬೇಕಲ್ಲ. ಮೂರನೇ ಬೆಳಗ್ಗೆಯೇ ಜಟ್ಟಿಗ ಬೆಟ್ಟ ಹತ್ತಿ ಅಮ್ಮನ ಗವಿ ಹೊಕ್ಕು, ಮಧ್ಯದ ಕೊಂಡದ ಮುಂದೆ ಬೆಂಕಿ ಕಾಯಿಸುತ್ತ ಕೂತಿದ್ದ ಶಿವಪಾದನ ಪಾದವ ಪಡಕೊಂಡು ಹೇಳಿದ:

“ನಮ್ಮ ಸೀಮೆಯಾಚೆಯ ಕಮರಿಯಲ್ಲಿ ಒಬ್ಬ ಹುಡುಗ ನರಳುತ್ತ ಬಿದ್ದಿದ್ದ, ಇನ್ನೂ ಬದುಕುವ ಆಸೆ ಇದ್ದುದರಿಂದ ಹೊತ್ತುಕೊಂಬಂದು ಮಂಟಪದಲ್ಲಿ ಇಟ್ಟಿದೀನಿ. ಮುಂದಿನದು ಅಮ್ಮನ ಚಿತ್ತ”

ನಿರೀಕ್ಷೆಯಂತೆ ಶಿವಪಾದ ‘ಯಾರು? ಏನು ? ಏತ್ತ?’ ಕೇಳಲಿಲ್ಲ. ಸುದ್ದಿ ಆಗಲೇ ಗೊತ್ತಾಗಿದ್ದಂತೆ ಮ್ಯಾಲೆ ಕೆಳಗೆ ಕತ್ತು ಹಾಕುತ್ತಾ, ಎರಡೂ ಕೈಗಳನ್ನ ಬೆಂಕಿಯ ಮುಂದೆ ಊರಿ, ಹುಬ್ಬು ಮುರಿದು, ಹರಿತವಾದ ನೋಟವನ್ನ ಗವಿಯ ಕಿಂಡಿಯ ಕಡೆಗೆ ನೆಟ್ಟ. ಕಿಂಡಿಯಲ್ಲಿ ಕಣ್ಣಿದ್ದರೂ ನೋಟ ಅದರಾಚೆಯದೇನನ್ನೋ ನೋಡುತ್ತಿರುವುದು ಸ್ಪಷ್ಟವಿತ್ತು. ಕಾಣುತ್ತಿರುವುದು ಸುಖಮಯವಾಗಿರಲಿಲ್ಲವೆಂದು ತೋರುತ್ತದೆ, ಮುಖ ಗಂಭೀರವಾಗಿತ್ತು. ತುಸು ಹೊತ್ತು ಹಾಗೇ ಇದ್ದ. ಆಮೇಲೆ ಸಂಚಾರದಲ್ಲಿದ್ದ ಮನಸ್ಸು ಹಿಂದಿರುಗಿ ಬಂದುದನ್ನು ಸೂಚಿಸುವಂತೆ ಮುಖದ ಮ್ಯಾಲೆ ಸಮಾಧಾನ ನೆಲೆಯೂರಿತು. ಈ ತನಕ ಹೊಗೆಯಾಡುತ್ತಿದ್ದ ಕೊರಡಿಗೆ ಉರಿ ಹತ್ತಿ ಜ್ವಾಲೆಗಳು ಮ್ಯಾಲೆದ್ದು ಒಲೆದಾಡಿದವು. ಅವುಗಳಾಚೆ ಇದ್ದ ಜಟ್ಟಿಗ ಜ್ವಾಲೆಯ ಒಲೆದಾಟಕ್ಕೆ ಗಡಗಡ ನಡುಗಿದ ಹಾಗೆ ಕಂಡ.

ಬಹಳ ಹೊತ್ತು ಶಿವಪಾದ ಕತ್ತು ಹಾಕಿದನೇ ವಿನಾ ಮಾತಾಡಲಿಲ್ಲ. ಜಟ್ಟಿಗನೂ ಟಕಮಕ ಶಿವಪಾದನ ಮುಖವನ್ನೇ ನೋಡುತ್ತ, ಏನಪ್ಪಣೆ ಕಾದಿದೆಯೋ ಎಂದು ಆತಂಕದಿಂದ ಕೂತ. ಕೊನೆಗೂ ಹಿತಮಿತವಾಗಿ ನಕ್ಕು ನುಡಿದ:

“ಲಲಾಟ ಲಿಖಿತವ ಪಲ್ಲಟ ಮಾಡಲುಂಟೆ ಮಗನೆ? ಒಳ್ಳೆಯ ಕೆಲಸ ಮಾಡಿದ್ದೀಯ, ನೆನೆಯಬೇಕಾದವನು ಅವನು. ನೆನೆಯದಿದ್ದರೆ ಅದು ಅವನ ಕರ್ಮ. ಗುಣಪಡಿಸಿ ಅಟ್ಟು. ಮುಂದಿನದು ಅಮ್ಮನಿಚ್ಚೆ”

ಬದುಕಿದೆ ಅಂದುಕೊಂಡು ಜಟ್ಟಿಗ ಶಿವಪಾದನಿಗೂ ಅಮ್ಮನಿಗೂ ಅಡ್ಡಬಿದ್ದು ಹಿಂದುರುಗಿದ.

ಆದರೆ ಶಿವಪಾದನ ವಾಕ್ಯಗಳಲ್ಲಿ ಅನಿಷ್ಟ ಸೂಚನೆಯಿರುವುದನ್ನು ಸ್ಪಷ್ಟವಾಗಿಯೇ ಗುರುತಿಸಿದ ಜಟ್ಟಿಗನಿಗೆ ಸಂತೋಷವಾಗಲಿಲ್ಲ. ಗೂಡಿಗೆ ಬಂದು ಬೆಳ್ಳಿಯ ಕರೆದು ಅಮ್ಮನ ವಾಕ್ಯ ಹೇಳಿದ. ಇಬ್ಬರೂ ಬಹಳ ಹೊತ್ತು ಚಿಂತೆ ಮಾಡಿದರು. ಮಾಡುವಷ್ಟು ಚಿಂತೆಮಾಡಿ, ಅಮ್ಮನ ನೆನೆದು ಕಾಪಾಡಬೇಕಾದ ಜವಾಬ್ದಾರಿಯನ್ನೂ ಅವಳ ಮ್ಯಾಲೇ ಹೊರಿಸಿ ಕೆಲಸಕ್ಕೆ ತೊಡಗಿದರು.