ಇತ್ತ, ಜಯಸೂರ್ಯನಲ್ಲಿ – ಮೂರು ವರ್ಷದಿಂದ ತಾನೇ ಹಾಕಿಕೊಂಡಿದ್ದ ಬ್ರಹ್ಮಚರ್ಯದ ಕಟ್ಟುಪಾಡುಗಳೆಲ್ಲ ಕಳಚಿಬಿದ್ದು ಕಾಮನೆಯ ಬೆಂಕಿ ಧಗ ಧಗ ಉರಿಯ ತೊಡಗಿತು. ಹಲ್ಲುಕಚ್ಚಿ ಮನಸ್ಸನ್ನು ತಹಬಂದಿಗೆ ತಂದುಕೊಳ್ಳಲು ಪ್ರಯತ್ನಿಸಿದಷ್ಟೂ ಸೋಲುತ್ತಿರುವ ಅನುಭವವಾಯಿತು. ಬೆಟ್ಟದ ಮ್ಯಾಲೊಂದು ಹದ್ದು ಕೂತು ಕೋಪದಿಂದ ಕಣ್ಣು ಬಿರಿಯುವಂತೆ ತನ್ನನ್ನೇ ನೋಡುತ್ತಿರುವಂತೆ ಕಂಡಿತು. ಮುಖ ಈ ಕಡೆ ತಿರುಗಿಸಿದ. ಹೊನ್ನೆ ಮರ ಕಂಡಿತು. ಸೊಕ್ಕಿದ ಈ ಮರವೇ ನನ್ನ ಮೈತುಂಬಿ ಹೀಗೆ ಮಾಡಿಸುತ್ತಿದೆಯೆನ್ನಿಸಿತು. ಯಾಕೆಂದರೆ ಮರದ ಮುಖವೂ ಎಳೆ ಬಿಸಿಲಲ್ಲಿ ಹೊಳೆಯತೊಡಗಿತ್ತು. ಬೆಟ್ಟವನ್ನು ಪುಡಿಮಾಡುವ ತನ್ನ ಆತ್ಮವಿಶ್ವಾಸಕ್ಕೆ ಏನಾಗಿದೆ ಇವತ್ತು? ಜಯಸೂರ್ಯನೇ ನಾನು? ರಕ್ತದ ಒತ್ತಡ ಹೆಚ್ಚಾಗಿ ವಜ್ರಕಾಯದಲ್ಲಿ ನಡುಕ ಉಂಟಾಯಿತು. ಕೆನ್ನೆ ಕಿವಿ ಕಂಕುಳಲ್ಲಿ ಬೆವರು ಹನಿ ಮೂಡಿದವು. ಚಕ್ಕನೆ ಎದ್ದು ಮಡುವಿನ ಕಡೆಗೆ ನಡೆದ. ಹೊಲೆಬಂಡೆಯ ಮೇಲೆ ಹೋಗಿ ದೇಹದಂಡನೆ ಮಾಡಲೆಂದು ಕಣ್ಣು ಮುಚ್ಚಿದ.

ಇತ್ತ ಗವಿಯ ಒಳಗಡೆಯಿಂದ ಬೆಳ್ಳಿ ಮತ್ತು ಜಟ್ಟಿಗರಿಗೆ ಶಿವಪಾದನಿಂದ ಕರೆ ಬಂತು. ಇಬ್ಬರೂ ಒಳಗೋಡಿ ಅಮ್ಮನಿಗೆ ಅಡ್ಡಬಿದ್ದು, ಶಿವಪಾದನ ಪಾದ ಪಡಕೊಂಡು ಯಥೋಚಿತ ಗೌರವಾರ್ಪಣೆ ಮಾಡಿದರು. ಶಿವಪಾದ ಹೇಳಿದ:

“ಇಂದಿಗೆ ನಿನ್ನ ವ್ರತ ಮುಗಿಯಿತು ಮಗಳೆ. ಮುಂದಿನ ಶಿಪವಾದನ ಅವತಾರವಾಗಿದೆ! ಅಮ್ಮ ಆರಿಸಿದ ಆತನ ತಂದೆ ತಾಯಿಗಳು ನೀವೇ! ಸಕಾಲದಲ್ಲಿ ಗುರುತು ತೋರಿಸಿ ತಾಯಿ ನಿನ್ನ ಉಡಿ ತುಂಬುತ್ತಾಳೆ ಮಗಳೆ. ಇಬ್ಬರನ್ನೂ ಅಮ್ಮ ಕಾಪಾಡಲಿ.”

ಎಂದು ವಚನ ಹೇಳಿ ದಂಪತಿಗಳು ಆನಂದ ಆಶ್ಚರ್ಯಗಳನ್ನು ಅನುಭವಿಸಲಿಕ್ಕೂ ಬಿಡದೆ ಬೆಳ್ಳಿಯ ಉಡಿಯಲ್ಲಿ ಫಲಪುಷ್ಪ ಹಾಕಿ, ಆಶೀರ್ವದಿಸಿ ಅವಳ ಮಸ್ತಕದ ಮೇಲೆ ಹಸ್ತ ಊರಿದ್ದೇ ಆಯ್ತು, – ಬೆಳ್ಳಂಬೆಳಗು ಕುಣಿದಾಡಿದ ದಣಿವಾಗಲಿ, ಹುಡುಗಾಟಿಕೆಯಾಗಲಿ-ಎಲ್ಲ ಮಾಯವಾದುವು. ದೊಡ್ಡ ಜವಾಬ್ದಾರಿಯೊಂದು ತಮ್ಮ ಮೇಲಿದೆ ಎಂದು ಅರಿವಾಗಿ ಜಟ್ಟಿಗ ಮತ್ತು ಬೆಳ್ಳಿ ಪುಳಕಿತರಾದರು. ಇಬ್ಬರ ಮುಖಗಳೂ ಪ್ರಸನ್ನವಾಗಿ ಕಣ್ಣಲ್ಲಿ ಆನಂದದ ನೀರು ಹರಿದಾಡಿತು. ಇಬ್ಬರ ಕಣ್ಣುಗಳಲ್ಲಿ ದೃಢವಾದ ಸಂಕಲ್ಪ ಮತ್ತು ಸೌಜನ್ಯಗಳು ವಿಜೃಂಭಿಸಿದವು. ಒಳ್ಳೆಯ ವಚನ ಅನುಗ್ರಹಿಸಿದ ಶಿವಪಾದನ ಪಾದಗಳನ್ನು ಇಬ್ಬರೂ ಭಕ್ತಿಯಿಂದ ಮುಟ್ಟಿ ಹಣೆಗೊತ್ತಿಕೊಂಡು ಧನ್ಯತೆಯನ್ನು ಅನುಭವಿಸಿದರು.

ಈ ಸುದ್ದಿ ಮಿಂಚಿನಂತೆ ಹರಿದಾಡಿ ಇಡೀ ಸಮೂಹದ ಹೃದಯ ಆನಂದದಿಂದ ತುಂಬಿ ಬಂತು. ಗಂಡಸರು ಜಟ್ಟಿಗನನ್ನು ತಬ್ಬಿಕೊಂಡು ಅಭಿನಂದಿಸಿದರೆ ವಯಸ್ಸಾದವರು ಇಬ್ಬರ ನೆತ್ತಿಯ ಮ್ಯಾಲೆ ಹಸ್ತ ಊರಿ ಹರಿಸಿದರು. ಹೆಂಗಸರು ಬೆಳ್ಳಿಯ ಮುಡಿಗೆ ಕಾಡುಹೂ ಮುಡಿಸಿದರು. ಕೆಲವರಂತೂ ಮಕ್ಕಳನ್ನು ಅವಳ ಪಾದಗಳ ಮ್ಯಾಲೆ ಚೆಲ್ಲಿದರು. ಹುಡುಗಿಯರು ಬೆಳ್ಳಿಯ ಪಾದ ಮುಟ್ಟಿ ನಮಸ್ಕರಿಸಿದರು. ಗರತಿಯರು ಸೋಬಾನೆ ಹಾಡತೊಡಗುತ್ತಲೂ ಹಿರಿಯರು ಬೆಳ್ಳಿ ಜಟ್ಟಿಗರನ್ನು ಜೊತೆಗೂಡಿಸಿ ಮಂಗಳವಾದ್ಯ ಸಮೇತ ಮೆರವಣಿಗೆಯಲ್ಲಿ ನಡೆಸಿಕೊಂಡು ಅವರ ಗೂಡಿನತನಕ ಬಂದು ಬಿಟ್ಟು ಹೋದರು. ಮೆರವಣಿಗೆ ಅವರ ಗೂಡು ತಲುಪಿದಾಗ ನಾಕು ತಾಸು ಹೊತ್ತೇರಿತ್ತು. ಅಲ್ಲಿಯತನಕ ಬೆಳ್ಳಿ ಜಟ್ಟಿಗರು ಏನೂ ಮಾಡಲಾಗದೇ ತಮ್ಮನ್ನು ತಾವು ಜನರ ಪ್ರೀತಿಗೆ ಅರ್ಪಿಸಿಕೊಂಡು ಆನಂದ ಭಾಷ್ಪಗಳನ್ನು ಉದುರಿಸುತ್ತ ಬಂದರು. ಬಂದ ಮುತ್ತೈದೇರು ಲಟಿಕೆ ಮುರಿದು ದೃಷ್ಟಿ ತೆಗೆದು, ಆಶೀರ್ವದಿಸಿ ದಂಪತಿಗಳನ್ನು ಮನೆ ಹೋಗಿಸಿ ಹೋದರು.

ಆಮೇಲೆ ದಂಪತಿಗಳು ಕುಲದೇವರಿಗೆ, ಹೆತ್ತಯ್ಯ ಮುತ್ತಯ್ಯರಿಗೆ ದೊಡ್ಡ ನಮಸ್ಕಾರಗಳನ್ನಾಚರಿಸಿ ಮಧುರಭಾವದಿಂದ ಮಾತು ಬಾರದೆ ಪರಸ್ಪರ ಮಂದಹಾಸ ಬೀರಿ ನೋಡುತ್ತ ನಿಂತುಕೊಂಡರು. ಆಮೇಲೆ ಬೆಳ್ಳಿ ಜಟ್ಟಿಗನನ್ನು ತಬ್ಬಿ ಅವನೆದೆಯ ಮೇಲೊರಗಿ ಆನಂದದ ಕಣ್ಣೀರು ಸುರಿಸಿದಳು. ಜಟ್ಟಿಗನೂ ಆರ್ದನಾಗಿ ಮಡದಿಯ ಬೆನ್ನಮೇಲೆ ಕೈಯಾಡಿಸಿ ಆನಂದಭಾಷ್ಟ ಉದುರಿಸುತ್ತಿದ್ದಾಗ ಬೆಳ್ಳಿ ಅವನ ಅಪ್ಪುಗೆಯಿಂದ ಬಿಡಿಸಿಕೊಂಡು ಹಣ್ಣಿಗೆ ಜೋತು ಬೀಳುವ ಗಿಣಿಯಂತೆ ಅವನ ಮುಖವನ್ನು ತನ್ನಡೆಗೆ ಸೆಳೆದುಕೊಂಡು ಕೆನ್ನೆ ಮೂಗು ಗದ್ದ ತುಟಿಗಳನ್ನು ಕಚ ಕಚ ಕಚ್ಚಿ –ಆತ ನೋವಿನಿಂದ ನರಳಿದಾಗ ಕಿಲ ಕಿಲ ನಗುತ್ತ ಒಳಗೋಡಿದಳು. ಜಟ್ಟಿಗ ಪ್ರೀತಿಯಿಂದ ಮುಖದ ಜೊಲ್ಲು ಒರೆಸಿಕೊಳ್ಳುತ್ತ ಹೆಮ್ಮೆಯಿಂದ ಮಡದಿಯ ಕಡೆಗೆ ನೋಡುತ್ತ ನಿಂತ.

ಸಂಜೆಯ ಗೋಧೂಳಿ ಸಮಯವಾಗಿ ಕಾಡಿನಿಂದ ದನ ಬಂದವು. ಬೆಳ್ಳಿ ಅವುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಹುಲ್ಲು ಹಾಕಿ ಅಕ್ಕಚ್ಚು ಎರೆದು ಹಾಲು ಕರೆದಳು. ಅಷ್ಟರಲ್ಲಿ ಮುತ್ತೈದೆಯರು ಮತ್ತೆ ಬಂದು ಅಂಗಳದ ಕಸ ಗುಡಿಸಿ ಬಣ್ಣದ ಗೆರೆ ಎಳೆದು ರಂಗೋಲಿ ಬಿಡಿಸಿದರು. ಕುಲದೇವರ ಮುಂದೆ ಕಪಿಲೆ ಹಸುವಿನ ತುಪ್ಪದ ಸೊಡರಿಟ್ಟರು. ಸತ್ಯದ ಮಹಾತಾಯಿ ಸಹಾಯ ಮಾಡಿದಳೆಂದು ಪದ ಪಾಡುತ್ತ, ಮಿಂದು ಬರಲು ಜಟ್ಟಿಗನ ಮಡುವಿಗಟ್ಟಿ, ಬೆಳ್ಳಿಯ ತಣ್ಣೀರಲೊಮ್ಮೆ ಬಿಸಿನೀರನಲ್ಲೊಮ್ಮೆ ಮೀಯಿಸಿದರು. ಫಲಬಿರಿವ ಹದವಂತಿಯ ತಲೆಬಾಚಿಕ, ಮುಡಿಕಟ್ಟಿ ಹೂಮುಡಿಸಿ, ಸೆಳೆನೂಲುಡಿಸಿದರು. ಕಣ್ಣಿಗೆ ಕೋಲು ಕಾಡಿಗೆ ಬರೆದು ನೊಸಲಲ್ಲಿ ಚಂದ್ರನ ಬೊಟ್ಟಿಟ್ಟರು. ಅಷ್ಟರಲ್ಲಾಗಲೇ ಮೂರು ತಾಸು ರಾತ್ರಿಯಾಗಿ ಉಂಡು ಮಲಗುವ ಸಮಯವೆಂದು ಇಬ್ಬರಿಗೂ ರುಚಿಕರ ಅಡಿಗೆಯಟ್ಟು, ಎರಡು ಬಾಳೆಲೆಯಿಟ್ಟು, “ಇನ್ನು ಮ್ಯಾಕೆ ನಾವ್ಯಾಕೆ? ನೀನಿಲ್ಲೇ ನಿನ್ನ ಇನಿಯನಿಲ್ಲೇ?” ಎಂದು ನಗಾಡುತ್ತ ಮುತ್ತೈದೇರು ಬಾಗಿಲು ಮುಂದೆ ಮಾಡಿಕೊಂಡು ಹೋದರು. ಒದಗಲಿರುವ ಸೌಭಾಗ್ಯದ ಸುಖ ನೆನೆದು ಬೆಳ್ಳಿ ಅಡಿಯಿಂದ ಮುಡಿತನಕ ಜಟ್ಟಿಗನಿಗಾಗಿ ಕಾಯುತ್ತ ಬಾಗಿಲು ನೋಡುತ್ತ ಕುಂತಳು.

ಬಿಸಿಲು ಚಳಿಯೆನ್ನದೆ ಉಂಡು ಮಲಗುವ ಸಮಯದ ತನಕ ಜಯಸೂರ್ಯ ಹೊಲೆಬಂಡೆಯ ಮೇಲೆ ಹಾಗೇ ಕೂತಿದ್ದವನು ಯಾರೋ ಮೀಯುವ ಸದ್ದಾಗಿ ಕೆಳಗೆ ನೋಡಿದ. ಮಡುವಿನಲ್ಲಿ ಜಟ್ಟಿಗ ಮುಳುಗು ಹಾಕುತ್ತಿದ್ದ. ಈವರೆಗಿನ ನಿಯಂತ್ರಣವೆಲ್ಲ ಹರಿದು ತುಂಡಾಗಿ ಬಿದ್ದು ಒಳಗೊಳಗೆ ಅಸೂಯೆಯ ಧಗೆ ಧಗೆ ಧಗೆ ಎದೆ ಸುಟ್ಟ ಅನುಭವವಾಯಿತು. ಮ್ಯಾಲೆ ನೋಡಿದರೆ ಬಾಲ ನಿಗುರಿದ ಚಿರತೆಯೊಂದು ಬೆಟ್ಟದ ನೆತ್ತಿಯ ಮ್ಯಾಲೆ ಬೆಂಕಿಗಣ್ಣಿಂದ ನೋಡಿ ಇವನೆದೆಯನ್ನು ಇರಿದಂತಾಯಿತು. ಕಿಟಾರನೇ ಕಿರಿಚಿ ಏನು ಮಾಡುತ್ತಿದ್ದೇನೆಂಬುದೂ ಅರಿವಾಗದೆ ಮಡುವಿನಲ್ಲಿ ಮೂರು ಮೂರು ಮುಳುಗು ಹಾಕಿ ಏಳುತ್ತಿದ್ದ ಜಟ್ಟಿಗನ ಮೇಲೆ ದೊಡ್ಡ ಬಂಡೆಯೊಂದನ್ನತ್ತಿ ಎಸೆದುಬಿಟ್ಟ! ಬಂಡೆ ಬಿದ್ದ ಸದ್ದೆಷ್ಟೋ ಅಷ್ಟೆ, ಆಮೇಲೆ ಅತ್ತಿತ್ತ ನೋಡದೆ ಸೀದಾ ಜಟ್ಟಿಗನ ಮನೆಗೆ ನಡೆದ.

ಆಗಲೇ ಕತ್ತಲಾಗಿ ಹಟ್ಟಿಯ ಜನ ಮಲಗಿದ್ದರು. ಸೀದಾ ಜಟ್ಟಿಗನ ಮನೆಗೆ ಹೋಗಿ ಬಾಗಿಲು ನೂಕಿದ. ಮೆಲ್ಲಗೆ ಪಡುಕೋಣೆಗೆ ಹೋಗಿ ಹಣಿಕಿ ಹಾಕಿದ. ಬೆಳ್ಳಿ ದಣಿದು ಜಟ್ಟಿಗನಿಗಾಗಿ ಕಾಯುತ್ತ ಒರಗಿ ಹಾಗೇ ನಿದ್ದೆ ಹೋಗಿದ್ದಳು. ಕುಲದೇವರ ಮುಂದಿನ ನಂದಾದೀಪವ ಆರಿಸಿ ಮೆಲ್ಲಗೆ ಬೆಳ್ಳಿಯ ಬಳಿಗೆ ಸರಿದ.

ತುಸು ಸಮಯದಲ್ಲೇ ಬೆಳ್ಳಿ ಉನ್ಮಾದ, ಹಿಂಸೆ ಬೆರೆತ ನೋವಿನಲ್ಲಿ ಮುಲುಗ ತೊಡಗಿದಳು. ದೇಹಂತ ದೇಹ ಕುದಿಯುತ್ತಿರುವಂತೆನ್ನಿಸಿತು. ಅಸಹಜವಾಗಿ ದನಿ ತೆಗೆದು ನರಳಿದಳು. ಉಸಿರುಗಟ್ಟುವಂತೆ ಬಿಗಿಹಿಡಿದು ಯಾರೋ ಕಬ್ಬಿಣದ ಕೈಗಳಿಂದ ತನ್ನನ್ನ ಬಂಧಿಸಿ ತಿನ್ನುತ್ತಿರುವ ಅನುಭವವಾಗಿ, ತನ್ನ ಅಷ್ಟೂ ಬಲದಿಂದ ಎರಡೂ ಕೈಗಳನ್ನ ಬಿಡಿಸಿಕೊಂಡು ತನ್ನ ಮ್ಯಾಲೆ ಆಕ್ರಮಣ ಮಾಡಿದವನ ಮುಖ ಹಿಡಿದು ತಳ್ಳುತ್ತಿದ್ದಾಗ ಕಿವಿಯಲ್ಲಿ ಕೂದಲ್ಲಿದ್ದುದು ತಿಳಿವಿಗೆ ಬಂತು! ಇದು ಜಟ್ಟಿಗನಲ್ಲವೆಂದು ಕಿಟಾರನೆ ಕಿರಿಚಿ, ಯಾವುದೋ ಮಾಯೆಯಿಂದ ಆಕ್ರಮಣಕಾರನಿಂದ ಬಿಡಿಸಿಕೊಂಡು ಎರಡೂ ಕಾಲುಗಳಿಂದ ಝಾಡಿಸಿ ಒದ್ದಳು. ಜಯಸೂರ್ಯನ ಎದೆಗೇ ದೊಡ್ಡ ಏಟು ಬಿದ್ದು ಅಷ್ಟು ದೂರ ಹೋಗಿ ಬಿದ್ದ. ಕ್ಷಣಾರ್ಧದಲ್ಲಿ ಜಯಸೂರ್ಯ ಅಲ್ಲಿಂದ ಮಾಯವಾದ. ಬೆಳ್ಳಿ ಎದ್ದು ಕಿರುಚುತ್ತಲೇ ಇದ್ದಳು.

ಮಂಟಪದಲ್ಲಿದ್ದ ಅತಿಥಿಗಳನ್ನು ನೋಡಿಕೊಳ್ಳಲು ಬಂದಿದ್ದ ಕುರುಮುನಿಗೆ ಜಯಸೂರ್ಯ ರಭಸದಿಂದ ಓಡಿಬರುತ್ತಿರುವುದು ಕಂಡಿತು. ಅವನ ಆಕಾರ ಮತ್ತು ಬೆಳ್ಳಿಯ ಕಿರುಚಾಟ ಕೇಳಿದ್ದೇ ಅವನಿಗೆದುರಾಗಿ ನಿಂತ. ಅಕಸ್ಮಾತ್‌ ಎದುರಾದ ಎರಡು ಸಹಜ ವೈರವುಳ್ಳ ಪ್ರಾಣಿಗಳ ಹಾಗೆ, ಒಂದರ ಸಾಮರ್ಥ್ಯ ಇನ್ನೊಂದಕ್ಕಾಗದೆ, ಹ್ಯಾಗೆ ಎದುರಿಸಬೇಕೆಂದು ಉಪಾಯಗಳ ಹೊಂಚುತ್ತ ಇಬ್ಬರೂ ಎದುರು ಬದುರು ನಿಂತರು. ಜಯಸೂರ್ಯನಿಗೆ ಇದು ಅನಿರೀಕ್ಷಿತವಾದ್ದರಿಂದ ಎದುರಿಸಲಾರದೆ ಓಡುವುದಕ್ಕೆ ಇನ್ನೊಂದು ಹೆಜ್ಜೆ ಹಾಕಿದ. ಕುರುಮುನಿ ಅಲ್ಲಿಗೂ ನೆಗೆದು ಎದುರಾದ. ಕುರುಮುನಿಗೆ ಎಲ್ಲವೂ ಗೊತ್ತಾಗಿ ನಾಶಮಾಡಲೆಂದೇ ಎದುರು ನಿಂತಿರುವನೆಂದು ಸ್ಪಷ್ಟವಾಯಿತು. ತಾನಾಯಿತು, ತನ್ನ ಗುರುನಾಮಸ್ಮರಣೆಯಾಯಿತು ಎಂದು ಮಗುವಿನಂತೆ ಆಡಿಕೊಂಡಿದ್ದ ಕುರುಮುನಿ ಈ ದಿನ ಸಾಕ್ಷಾತ್‌ ಭೈರವನಾಗಿ ಕಣ್ಣಿಂದ ಕಿಡಿ ಸಿಡಿಸುತ್ತ ಬಲದ ಹಸ್ತವ ಅಗಲಿಸಿ ಜಯಸೂರ್ಯನ ಕೆನ್ನೆಗೊಂದು ಏಟು ಬಿಟ್ಟ! ವಜ್ರಕಾಯನಾದ ಜಯಸೂರ್ಯ ನೆಲದ ಮೇಲೆ ಅಂಗಾತ ಬಿದ್ದು ವಿಲ ವಿಲ ಒದ್ದಾಡಿದ. ಓಡಬೇಕೆಂದಾಗ ಕುರುಮುನಿ ಹಿಡಿ ಮಣ್ಣು ತಗೊಂಡು “ನಿತ್ಯವೂ ಶಾಪಗಳಿಗೆ ಗುರಿಯಾಗುತ್ತ ಚಿರಂಜೀವಿಯಾಗು ಪಿಶಾಚಿ!” ಎಂದು ಅವನ ಮ್ಯಾಲೆಸೆದ. ಅದು ಬೆಂಕಿಯ ಕಿಡಿಯ ಹಾಗೆ ಮೈತುಂಬ ಸಿಡಿದು ಸತ್ತೆನೋ ಕೆಟ್ಟೆನೋ-ಎಂದು ವಿಕಾರವಾಗಿ ಕಿರುಚುತ್ತ ಓಡಿದ.

ಇಡೀ ಶಿವಾಪುರ ಸೀಮೆ ತನ್ನ ಮೇಲೆ ಕೆಂಡದ ಮಳೆ ಸುರಿದಂತಾಗಿ ಶಿವಪಾದನ ವಚನ ಹುಸಿಹೋಯಿತೇ ಎಂದು ಆಘಾತ ಹತಾಶೆಗಳಿಂದ ಬೆಟ್ಟದ ಕಡೆ ನೋಡುತ್ತ, ನಿಶ್ಯಬ್ದವಾಯಿತು!