ಶಿವಪಾದನ ಬೃಹದಾಕಾರದ ವ್ಯಕ್ತಿತ್ವ ನೋಡಿ ಜಯಸೂರ್ಯನಿಗೆ ಭಯವಾಯಿತು. ತಾನು ಹಿಂದೆಂದೂ ಕಂಡಿರದಷ್ಟು ಎತ್ತರದ ಭವ್ಯ ಆಸಾಮಿ! ಜೋತು ಬಿದ್ದ ಕೆನ್ನೆ, ಸುಕ್ಕುಗಟ್ಟಿದ ಮುಖ, ಬಿಳಿಯ ಉದ್ದನೆಯ ಗಡ್ಡ ಮತ್ತು ಅಲಂಕಾರಿಕವಾಗಿ ಎಂಬಂತೆ ಮೇಲ್ದುಟಿಯ ಎರಡೂ ಬದಿಗಳಿಂದ ಗದ್ದ ದಾಟಿ ಇಳಿಬಿದ್ದ ಮೀಸೆ, ಹಿಮದಂತೆ ಸ್ವಚ್ಛಂದವಾಗಿ ಹರಡಿದ್ದ ಜಡೆಗಳು… ನೇರವಾದ ಮೂಗು ಪ್ರಾಯಾಧಿಕ್ಯದಿಂದ ತುದಿಯಲ್ಲಿ ಕೆಳಗಿಳಿದು ಮೀಸೆಗಳಲ್ಲಿ ಹುದುಗಿತ್ತು. ಗವಿಯ ನೆತ್ತಿಯ ಕಿಂಡಿಯಿಂದಿಳಿದ ಬಿಸಿಲಕೋಲು ನೆಲದ ಮ್ಯಾಲೆ ರಂಗೋಲಿ ಬರೆದಿತ್ತು. ಅದು ಅವನ ಕಣ್ಣುಗಳಲ್ಲಿ ಪ್ರತಿಫಲಿಸಿ ಕಣ್ಣು ತುಪ್ಪದ ಸೊಡರುಗಳಂತೆ ಕಾಣುತ್ತಿದ್ದವು. ಸುದೀರ್ಘವಾದ, ಮುಂಚಾಚಿರುವ ಮೂಳೆಗಳೇ ಕಾಣುತ್ತಿದ್ದ ಬಾಹುಗಳು, ಮೊರದಗಲ ಅಂಗೈ ಮತ್ತು ಪಾದಗಳು… ಮೈ ಮತ್ತು ಮೊಳಕೈಗಳಲ್ಲಿ ಇಳಿಬಿದ್ದ ಚರ್ಮವಂತೂ ಜೋತುಬಿದ್ದು ತೋಳಿನ ಸಡಿಲು ಅಂಗಿ ತೊಟ್ಟುಕೊಂಡ ಹಾಗೆ ಕಾಣುತ್ತಿತ್ತು. ಆ ಚರ್ಮ ನೋಡಿ ಹೌದಂಬೋ ಹಂಗಾಮದಲ್ಲೀತ ಕೊನೇಪಕ್ಷ ಆನೆಗಾತ್ರದವನಾಗಿರಬೇಕೆಂದು ಸಹಜವಾಗಿ ಊಹಿಸಬಹುದಾಗಿತ್ತು. ಸೊಂಟದ ಮ್ಯಾಗಿನ ಕಂದು ಬಟ್ಟೆಯ ವಿನಾ ಮೈಮೇಲೆ ಬಟ್ಟೆಯಿರಲಿಲ್ಲ. ಬಿಸಿಲ ಬೇಗೆಯ ತಾಳದೆ ಮರದ ನೆರಳಲ್ಲಿ ಮಲಗಿದ್ದ ಮುದಿಸಿಂಹದ ಹಾಗಿದ್ದ ಮುದುಕ!
ಇವನನ್ನು ಎಲ್ಲೋ ಕಂಡಿರುವೆನಲ್ಲಾ ಎನಿಸಿತು ಜಯಸೂರ್ಯನಿಗೆ! ಎಲ್ಲಿ? ನಿನ್ನೆ ಕನಸಿನಲ್ಲಿ ತಾನು ಕಾಡಿನೊಂದಿಗೆ ಮಾತಾಡಿದಂತಿತ್ತು; ಅಲ್ಲವೆ? ಕಾಡು ಹ್ಯಾಗೆ ಮಾತಾಡಿತು? ಏನಂತ ಮಾತಾಡಿತು? ನೆನಪು ಮಾಡಿಕೊಳ್ಳಲು ಪ್ರಯತ್ನಿಸಿದ. ತಲೆ ಕೆದರಿಕೊಂಡು ಬೆಟ್ಟದೆತ್ತರದ ಹೊನ್ನೆಮರವೇ ಈ ಮುದಿಕನಾದಂತಿತ್ತು! ರೆಂಬೆ ಕೊಂಬೆ ಅಲುಗಿ ಮಾತಾಡಿತು! ಏನನ್ನು ಹೇಳಿತು? ನೆನಪಿಲ್ಲ. ಹೋಗಲಿ ತಾನಾದರೂ ಏನು ಮಾತಾಡಿದೆ ? ಅದೂ ನೆನಪಿರಲಿಲ್ಲ. ಈಗ ಮಾತ್ರ ಉದ್ವೇಗಗೊಂಡ. ಆದರೆ ಇವನನ್ನು ನೋಡಿದಾಗಲೇ ಶಿವಪಾದ ಹುಬ್ಬು ಗಂಟು ಹಾಕಿದ್ದ. ಜಟ್ಟಿಗ ಹೇಳಿದ-
“ಕಾಲ್ಮುರಿದುಕೊಂಡು ಕಮರೀ ಒಳಗ ಬಿದ್ದುಕೊಂಡಿದ್ದ ಅಂತ ಹೇಳಿದ್ದೆನಲ್ಲ, ಈವಯ್ಯನೇ, ನಾರು ಬೇರು ಸವರಿ ಕಾಲುಸಮ ಆಗಿದೆ. ಏನೋ ಕೇಳಬೇಕಂತೆ, ಕೇಳಿಕೊಳ್ಳಯ್ಯಾ”
ಎಂದು ಜಯಸೂರ್ಯನ ಕಡೆ ತಿರುಗಿ ಹೇಳಿದ. ಶಿವಪಾದ ಹುಬ್ಬು ಗಂಟುಹಾಕಿ ನೋಡುವಾಗೆಲ್ಲ ಹಣೆಯ ಮೇಲೆ ಹಾಗೂ ಕಣ್ಣಿನ ಸುತ್ತ ಹೆಚ್ಚು ಸುಕ್ಕುಗಳು ರಚನೆಯಾಗುತ್ತಿದ್ದವು. ಬಹಳ ಹೊತ್ತು ಹಾಗೇ ಇದ್ದಾಗ ಸುಕ್ಕುಗಳು ನಿರಿನಿರಿಯಾಗಿ ಕಣ್ಣು ಮಿನುಗುತ್ತಿದ್ದವು. ಆಗ ಅವನು ಯಾರನ್ನು ನೋಡಿದರೂ ದೃಷ್ಟಿ ನಾಟುತ್ತಿತ್ತು. ಅದರ ಅನುಭವವಾಗಿ ಜಯಸೂರ್ಯನ ಗಂಟಲೊಣಗಿ ತುಟಿ ನಡುಗಿದವು. ಆತ ಅದ್ಯಾಕೆ ನನ್ನನ್ನ ಹಾಗೆ ನೋಡುತ್ತಿದ್ದಾನೆ? ನನ್ನಲ್ಲಿ ಅದೇನನ್ನೋ ಹುಡುಕುವ ಹಾಗೆ, ನನ್ನನ್ನ ಸೀಳಿ ವಿವರಗಳನ್ನ ಬಗಿಯುವ ಹಾಗೆ ನೋಡುತ್ತಾನಲ್ಲ! ನನ್ನ ಭೂತಕಾಲ ಇವನಿಗೆ ಗೊತ್ತೆ?
“ನಾಡಿನವನೊ?” ಶಿವಪಾದ ಕೇಳಿದ.
“ಹೌದು”
ಎಂದು ಕತ್ತು ಹಾಕಿದ ಜಯಸೂರ್ಯ. ಮುಖ ಬಿಳಿಚಿಕೊಂಡಿತ್ತು. ಅವನು ತನ್ನ ಗುಟ್ಟನ್ನು ಕೇಳುವ ಮೊದಲು ತಾನೇ ಅವನನ್ನು ಮೈಮರೆಸಬೇಕೆಂದು,
“ಪ್ರಶ್ನೆಗಳಿದ್ದವು, ಕೇಳೋಣ ಅಂತ ಬಂದೆ” ಅಂದ.
“ಆಯ್ತು”
“ನಿಮ್ಮ ವೈದ್ಯವಿದ್ಯೆಯಿಂದ ಚಿರಂಜೀವಿತ್ವ ಸಾಧ್ಯವೆ?”
“ಸಾಧ್ಯ, ಸಸ್ಯ ಹೃದಯ ತಿಳಿದರೆ.”
“ಸಸ್ಯ ಹೃದಯ ಅಂದರೆ?”
“ಜಗತ್ತು ಅಸ್ತಿತ್ವಕ್ಕೆ ಬಂದಿರೋದು ಶಿವನಿಂದಾದರೂ ಜಗತ್ತಿನ ವ್ಯವಹಾರ ನಡೆಯುವುದು ಓಂಕಾರದಿಂದ. ಓಂಕಾರವೆಂಬುದು ಒಂದು ಲಯ. ಇರಿವೆಂಭತ್ತು ಲಕ್ಷ ಜೀವರಾಶಿ ಪರಸ್ಪರ ವ್ಯವಹರಿಸುವುದು ಈ ಲಯದಿಂದ. ನಿನ್ನ ಲಯವನ್ನು ವೈದ್ಯ ನಾಡಿಯಿಂದ ತಿಳಿಯುತ್ತಾನೆ. ಹಾಗೆಯೇ ಸಸ್ಯಗಳಿಗೂ ಲಯ ಇದೆ. ನೆಲ ಜಲದೊಂದಿಗೆ ವಾಯು ತಿರ್ಯಕ್ ಜಂತುಗಳಿಗೆ ಅವು ವ್ಯವಹಿಸುವ ಭಾಷೆ ಈ ಲಯ, ಅದೇ ಸಸ್ಯ ಹೃದಯ. ಅದನ್ನರಿತು ಉಪಯೋಗಿಸಿದರೆ ದೇಹ ವಜ್ರದೇಹವಾಗುತ್ತದೆ. ಅದರಾಚೆಯದೇ ವಿದೇಹತ್ವ. ಚಿರಂಜೀವಿತ್ವ ಅಂದರೆ ಇದೇ. ದೇಹವನ್ನು ವಿದೇಹ ಮಾಡಿಕೊಳ್ಳಬೇಕಾದರೆ ದೇಹದ ಕರ್ಮ ಕಳೆದುಕೊಳ್ಳಬೇಕು. ದೇಹದ ಕರ್ಮ ಕಳೆದುಕೊಳ್ಳಬೇಕಾದರೆ ತಪಸ್ಸು ಮಾಡಬೇಕು, ಸಾಧನೆ ಮಾಡಬೇಕು. ಎರಡೂ ಸೇರಿ ಚಿರಂಜೀವಿತ್ವ.”
“ನೀವು ಚಿರಂಜೀವಿಗಳ?”
“ಅಲ್ಲ, ನಾನಗಲೇ ದೀರ್ಘಕಾಲ ಬದುಕಿ ಈಗ ಅಮ್ಮನ ಅಪ್ಪಣೆಗಾಗಿ ಕಾಯುತ್ತಿದ್ದೇನೆ.”
“ಜ್ಞಾನದಿಂದ ಕರ್ಮ ಸವೆಯುವುದಿಲ್ಲವೆ?”
“ಇಲ್ಲ. ಬೇರೆ ಹೆಸರಿಟ್ಟುಕೊಂಡರೆ ಹಳೆಯ ಹೆಸರು ಹ್ಯಾಗೆ ನೆನಪಿಗೆ ಅಂಟಿಕೊಂಡಿರುತ್ತದೆಯೋ ಹಾಗೆಯೇ ಸಂಚಿತ ಕರ್ಮ ಆತ್ಮ ದೇಹಗಳಿಗೆ ಅಂಟಿಕೊಂಡೇ ಇರುತ್ತದೆ. ಅದರ ಕ್ಷೇಮಕ್ಕಾಗಿ ತಪಸ್ಸು ಬೇಕು.”
ಒಂದು ಕ್ಷಣ ಜಯಸೂರ್ಯ ಅಪ್ರತಿಭನಾದ. ತಾನು ಹೆಸರು ಬದಲಿಸಿಕೊಂಡಿದ್ದನ್ನು ಹೀಗೆ ವ್ಯಂಗ್ಯವಾಗಿ ಸೂಚಿಸಿರಬಹುದೆ? ತನ್ನ ರಕ್ಷಣೆ ಮಾಡಿಕೊಳ್ಳಬೇಕು ಎಂದುಕೊಂಡು ಭಂಡತನದಿಂದ ಕೇಳಿದ:
“ಉಗ್ರ ತಪಸ್ಸು ನನ್ನಿಂದ ಸಾಧ್ಯವೆಂದು ಅನ್ನಿಸುತ್ತದೆಯಾ?”
“ಅದು ನಿನಗೇ ಗೊತ್ತು.”
“ನೀವು ಅನುಗ್ರಹಿಸಿದಲ್ಲಿ ವೈದ್ಯ ವಿದ್ಯೆ ಕಲಿಯಲು ನನಗೆ ಆಸಕ್ತಿ ಇದೆ. ಒಪ್ಪಿಕೊಳ್ಳಬೇಕು.”
ಶಿವಪಾದ ಬಾಯಿ ಕಟ್ಟಿದವರಂತೆ ಸುಮ್ಮನಾದ. ಇಂಥವನಿಗೆ ವಿದ್ಯೆಯ ಧಾರೆಯೆರೆದು ದುರುಪಯೋಗವಾದರೆ…. ತಮ್ಮ ಪ್ರಸ್ಥಾನದ ಪರಂಪರೆಯ ನೆನಪಾಗಿ ಚಿಂತಿತನಾದ. ಹಣೆ ಮತ್ತು ಕಣ್ಣ ಸುತ್ತಿನ ಸುಕ್ಕುಗಳು ಬಿಗಿದುಕೊಂಡವು. ಜಟ್ಟಿಗನಿಗೂ ಶಿವಪಾದನ ಮುಖ ನೋಡಿ ಹಿತವೆನಿಸಲಿಲ್ಲ. ಟಕಮಕ ಇಬ್ಬರ ಮುಖ ನೋಡುತ್ತ ಕೂತ. ಕೊನೆಗೆ ಶಿವಪಾದನೇ ದೊಡ್ಡ ಮನಸ್ಸು ಮಾಡಿ ಹೇಳಿದ:
“ನೋಡಯ್ಯ, ಅಮ್ಮನ ಮುಂದೆ ವಿದ್ಯೆ ಕೇಳಿದಾಗ ಇಲ್ಲ ಅನ್ನುವಂತಿಲ್ಲ. ವಿದ್ಯೆಯ ದುರುಪಯೋಗವಾದರೆ ಆ ಕರ್ಮ ನಿನ್ನದೇ. ಇಲ್ಲಿಗೆ ಬಂದಮೇಲೆ ಗವಿಯ ನಿಯಮಗಳ ರೀತ್ಯಾ ಇರಬೇಕು. ಶಿವಸಂಕಲ್ಪವನ್ನು ಮುರಿಯುವುದು ಯಾರಿಂದಲೂ ಸಾಧ್ಯವಿಲ್ಲ. ನಾಳೆ ಗೋಧೂಳಿ ಲಗ್ನಕ್ಕೆ ಬಾ. ಈಗ ಇಬ್ಬರೂ ಹೊರಡಿರಿ.”
ಜಟ್ಟಿಗ ಮತ್ತು ಜಯಸೂರ್ಯ ಗವಿಯ ಹೊರಗೆ ಬಂದಾಗ ಕಾಡಿನ ಕಡೆಯಿಂದ ಮಳೆಯಗಾಳಿ ಬೀಸತೊಡಗಿತ್ತು. ದೊಡ್ಡ ಗಿಡಮರಗಳು ಕೂಡ ಹೊಯ್ದಾಡುತ್ತಿದ್ದವು. ಒಣ ಎಲೆಗಳು ಹಾರಿ ಬಂದು ಜಯಸೂರ್ಯನ ಕಣ್ಣಿಗೆ ರಾಚಿದವು. ಒಂದೆರಡು ಮಳೆ ಹನಿಗಳು ರಪ್ಪೆಂದು ಅವನ ಕೆನ್ನೆಗೆ, ಹಣೆಗೆ ಹೊಡೆದವು. ತುಟಿಯ ಮ್ಯಾಲೊಂದು ಹನಿ ಬಿತ್ತು, ನೆಕ್ಕಿದ. ಕಾಡಿನ ಯಾವುದೋ ಹೂವಿನ ರುಚಿಯಿದ್ದಂತಿತ್ತು.
ಮೂರನೇ ದಿನ ಶಿವಪಾದ ಹೇಳಿದ ಸಮಯಕ್ಕೆ ಸರಿಯಾಗಿ ಗವಿಗೆ ಹೋದ.
Leave A Comment