ನಾವು ಕನಕಪುರಿಯ ಇತಿಹಾಸಕಾರರು.

ಇತಿಹಾಸವೆಂದರೆ ಹೀಗಿತ್ತು, ಹೀಗಾಯಿತೆಂದು; ಘಟಾನುಘಟನೆಗಳ, ಪರಿಣಾಮಕಾರಿಯಾದ ಬದಲಾವಣೆಗಳ ದಾಖಲೆ ಮಾಡುವುದೇ ಇತಿಹಾಸ. ನಡೆದಿರುವಂಥ ಘಟನೆಯ ವಾಸ್ತವಿಕ ನಿರೂಪಣೆಯೇ ಇತಿಹಾಸ.

ಐಲೀಕಡೆ ಶಿವಾಪುರದ ಹೆಳವರು ತಾವೂ ಇತಿಹಾಸಕಾರರೆಂದು ಹೇಳಿಕೊಳ್ಳುವುದನ್ನು ಕೇಳಿದ್ದೇವೆ. ಆದರೆ ಅವರಿಗೂ ನಮಗೂ ವ್ಯತ್ಯಾಸಗಳಿವೆ.

ಹೆಳವರು ನಡೆದ ಘಟನೆಯನ್ನು ಕಥೆ ಮಾಡಿ ಹೇಳಿ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಅದನ್ನು ಮತ್ತೆ ಮತ್ತೆ ಹೇಳಿ ನಾಲಗೆಯಿಂದ ನಾಲಗೆಗೆ ತಲೆಮಾರಿನಿಂದ ತಲೆಮಾರಿಗೆ ತೋಂಡಿಯಾಗಿ ದಾಟಿಸುತ್ತಾರೆ. ಒಬ್ಬ ಕಥೆಗಾರ ಇನ್ನೊಬ್ಬರಿಗೆ ಹೇಳುವಾಗ ಆ ಘಟನೆಗೆ ಸ್ಥಳೀಯ ವಿವರಗಳನ್ನು ಸೇರಿಸಿ ಸದರಿ ಘಟನೆಯನ್ನ ಪ್ರಸ್ತುತವಾಗಿಸುತ್ತಾನೆ. ಒಬ್ಬನೇ ಕಥೆಗಾರ ಒಂದು ಕಥೆಯನ್ನು ಎರಡು ಸಲ ಹೇಳುವುದು ಸಾಧ್ಯವಿಲ್ಲವೆಂದೂ ಪಂಡಿತರು ಹೇಳುತ್ತಾರೆ. ಯಾಕೆನೆ ಅದೇ ಕಥೆಯನ್ನ ಇನ್ನೊಮ್ಮೆ ಹೇಳುವಾಗ ಕೇಳುವವರು ಬೇರೆಯಾಗುವುದರಿಂದ ಅವರಿಗೆ ಪ್ರಸ್ತುತವಾಗಿಸಲು ನಡೆದ ಘಟನೆಗೆ ಹೊಸ ಹೊಸ ಸಂಗತಿಗಳನ್ನು ಸೇರಿಸುತ್ತಾನೆ. ಮೂಲದ ಕೆಲವು ವಿವರಗಳನ್ನು ಬಿಡುತ್ತಾನೆ. ಅಂದರೆ ಮೂಲಘಟನೆಯನ್ನ ಪ್ರತಿಯೊಬ್ಬ ಕಥೆಗಾರ ಪ್ರತಿಯೊಂದು ಸಾರಿ ಹೇಳುವಾಗ ಪುನಃ ಸೃಷ್ಟಿ ಮಾಡುತ್ತಾನೆ! ಒಬ್ಬ ಕಥೆಗಾರ ಕಥನವೇ ಹಿಂಗಾದರೆ ಇನ್ನು ‘ತಲೆಮಾರಿನಿಂದ ತಲೆಮಾರಿಗೆ’ ಪಡೆಯುತ್ತ ಬಂದವರ ಕಥೆಯೇನಾಗಬೇಕು?

ಹೆಳವರು ಹೇಳುವುದು ಕಥೆಯನ್ನ! ಅದರಲ್ಲಿ ಮನುಷ್ಯರು, ದೇವರು, ದಿಂಡರು, ಭೂತಪ್ರೇತಾದಿಗಳು, ಪ್ರಾಣಿಗಳು ಕೂಡ ಪ್ರವೇಶಿಸಿ ವಾಸ್ತವ ಘಟನೆಗಳಿಗೆ ಕಲ್ಪನೆ, ಪವಾಡ, ಮೂಢನಂಬಿಕೆಗಳನ್ನ ಬೆರೆಸಿ, ಕಥೆಮಾಡಿ ಹೇಳುತ್ತಾರೆ; ಅದನ್ನವರು ಇತಿಹಾಸವೆನ್ನುತ್ತಾರೆ! ಮಹಾಭಾರತ ಅವರ ಮಾದರಿ ಇತಿಹಾಸ!

ಅದಕ್ಕೇ ಅವರ ಕಥೆಗಳನ್ನ ನಂಬಲಾಗುವುದಿಲ್ಲ. ನ್ಯಾಯ ನಿರ್ಣಯಗಳಲ್ಲಿ ಪ್ರಮಾಣವಾಗಿ ಪರಿಗಣಿಸಲಾಗುವುದಿಲ್ಲ. ಇನ್ನೇನಪ್ಪಾ ಅಂದರೆ ಆ ಕಥೆಯ ಪ್ರೇರಣೆಗಳು ಅವರ ನೆನಪಿನಲ್ಲಿ ಭದ್ರವಾಗಿರುತ್ತವೆ. ಇಂಥ ನೆನಪುಗಳಿಂದ ಅವರು ಆಗಾಗ ಮಾರ್ಗದರ್ಶನ ಪಡೆಯುತ್ತಾರೆ.

ಇತಿಹಾಸ ನಿರ್ಮಿಸುವ ರಾಜ ಮಹಾರಾಜರಿಗೆ ತಮ್ಮ ಇತಿಹಾಸದ ನೆನಪು ಇರುವುದಿಲ್ಲ. ದಾಖಲೆಯಲ್ಲಿದ್ದರೂ ಅದರ ಮಾರ್ಗದರ್ಶನ ಪಡೆಯುವುದಿಲ್ಲ. ಅದಕ್ಕೇ ಅವರ ಇತಿಹಾಸ ಮತ್ತೆ ಮತ್ತೆ ಅವೇ ಯುದ್ಧಗಳನ್ನು ಮಾಡಿ ತನ್ನನ್ನು ತಾನು ಪುನರಾವರ್ತಿಸುತ್ತದೆ.

ಕಾಲದ ಕಲ್ಪನೆಯ ಬಗ್ಗೆಯೇ ನಮ್ಮಿಬ್ಬರಲ್ಲಿ ಮೂಲಭೂತ ವ್ಯತ್ಯಾಸವಿದೆ. ಕಾಲವನ್ನ ಭೂತ, ಭವಿಷ್ಯತ್ ಎಂದು ನಾವು ವಿಭಾಗಿಸಿದರೆ ಅವರು ಅದನ್ನ ಅಖಂಡ, ಅವಿಚ್ಛಿನ್ನ ಎನ್ನುತ್ತಾರೆ. ರಾಮಾಯಣದ ಹನುಮಂತ ಮಹಾಭಾರತದಲ್ಲೂ ಬರುತ್ತಾನೆ. ಸ್ಥಳೀಯ ಸಾಮಗ್ರಿಯಲ್ಲಿ ಪ್ರತ್ಯಕ್ಷನಾಗಿ ಈಗಲೂ ಇಂದಿನ ಜನರೊಂದಿಗೆ ವ್ಯವಹರಿಸುತ್ತಾನೆ. ಹೆಳವರ ಪ್ರಕಾರ ಪುರಾಣ ಇತಿಹಾಸಗಳಲ್ಲಿ ವ್ಯತ್ಯಾಸವೇ ಇಲ್ಲ. ಪುರಾಣ ಕಾಲದ ದೇವರೊಂದಿಗೆ ಇತಿಹಾಸದಲ್ಲಿರುವ ಇಂದಿನವರು ಬೇಕಾದಷ್ಟು ಲೇನಾದೇನಾ ವ್ಯವಹಾರ ಇಟ್ಟುಕೊಂಡಿದ್ದಾರೆ! ಪುರಾಣ ಕಾಲದ ತಿರುಪತಿ ತಿಮ್ಮಪ್ಪನೆಂಬ ದೇವರು ಪದ್ಮಾವತಿಯೆಂಬ ದೇವತೆಯೊಂದಿಗೆ ಮದುವೆಯಾಗುವ ಕಾಲಕ್ಕೆ ಮಾಡಿದ ಏಳು ಕೋಟಿ ಸಾಲವನ್ನ ಈಗಿನವರು ಈಗಲೂ ಹುಂಡಿಯಲ್ಲಿ ಹಣ ಹಾಕಿ ತೀರಿಸುತ್ತಿದ್ದಾರಂತೆ! ಇನ್ನು ಇಂದಿನ ದಿನಪತ್ರಿಕೆ ನಿನ್ನೆಯ ಇತಿಹಾಸವೆನ್ನುವ ನಾವು ಇಂಥವರ ಜೊತೆ ಹ್ಯಾಗೆ ವ್ಯವಹರಿಸೋಣ?

ಇತ್ತೀಚೆಗೆ ಶ್ರೀಸಾಮಾನ್ಯನನ್ನೇ ಮುಂದಿಟ್ಟುಕೊಂಡು ಇತಿಹಾಸವನ್ನು ಅರ್ಥೈಸುವ ಪ್ರಯತ್ನಗಳು ನಡೆದಿವೆ. ಅವರು ಎಲ್ಲಿಯ ತನಕ ಹೋಗುವರೋ ಗೊತ್ತಿಲ್ಲ. ನಮ್ಮ ಪ್ರಕಾರ ಶ್ರೀಸಾಮಾನ್ಯ ಘಟನೆಗೆ ಕಾರಣಕರ್ತನಾಗುವುದೇ ಇಲ್ಲ. ಆಯಾ ಪ್ರದೇಶದ ರಾಜ ಮಹಾರಾಜರೇ ಅಥವಾ ತತ್ಸಮಾನ ಅಧಿಕಾರಿಗಳೇ, ಅಥವಾ ಬದಲಾವಣೆಗೆ ಕಾರಣನಾಗುವ ಯಾರೇ ಆಗಲಿ, – ಅಂಥವರೇ ಇತಿಹಾಸ ಮಾಡುವವರು. ಶ್ರೀಸಾಮಾನ್ಯನೇನಿದ್ದರೂ ಘಟನೆಗಳ ಫಲಾಫಲಗಳನ್ನು ಅನುಭವಿಸುವಾತ; ಅಷ್ಟೆ.

ಇತಿಹಾಸವೂ ಕಥಾನಕವೇ ಎಂದು ಹೇಳುವವರಿದ್ದಾರೆ. ಅವರ ತರ್ಕದಲ್ಲೂ ಅರ್ಥ ಇದೆ! ಅದೇನಂತೀರೋ? ನಡೆದ ಎಲ್ಲವನ್ನು ಇತಿಹಾಸ ಸಾಕ್ಷಿಯಾಗಿ ನೋಡುತ್ತದೆ ನಿಜ. ಆದರೆ ಸತ್ಯಕ್ಕೆ ಒಂದೆರಡೇ ಮಗ್ಗಲುಗಳಿಲ್ಲವಲ್ಲ. ಶಿವಾಪುರದ ಶಿವಪಾದ ಹೇಳುವಂತೆ ಎಷ್ಟು ಕಣ್ಣುಗಳೋ ಅಷ್ಟು ಸತ್ಯಗಳು ! ಅಷ್ಟಲ್ಲದಿದ್ದರೂ ಸತ್ಯವನ್ನು ಸಮಗ್ರವಾಗಿ ಒಂದು ಶಾಸ್ತ್ರದಿಂದ ಕಾಣಲಾಗುವುದಿಲ್ಲ. ಇಷ್ಟನ್ನು ಮಾತ್ರ ನಿಮಗೆ ಭರವಸೆ ಕೊಡುತ್ತೇವೆ: ಘೋಡಗೇರಿಯ ಕಂಬಾರ ಬಸವಣ್ಣಪ್ಪ, ಭೂಸನೂರು ಮಠದ ಸಂಗಯ್ಯಸ್ವಾಮಿ ಹಾಗೂ ಸಾವಳಗಿ ಶಿವಲಿಂಗೇಶ್ವರ ಮಠದ ಶಿವಯೋಗಿ ಸಿದ್ಧರಾಮ ಸ್ವಾಮಿಗಳ ಶ್ರೀಪಾದ ಸಾಕ್ಷಿಯಾಗಿ ನಡೆದದ್ದನ್ನ ನಡೆದ ಹಾಗೆ, ಕಂಡದ್ದನ್ನ ಕಂಡ ಹಾಗೆ ವಸ್ತುನಿಷ್ಠವಾಗಿ ಹೇಳುತ್ತೇವೆ. ಅಂದರೆ ಸದರಿ ಇತಿಹಾಸ ಸಂಪುಟಗಳನ್ನ ನಿಮ್ಮೆದುರು ತೆರೆದಿಡುತ್ತ ಅರ್ಥಶೋಧನೆ ಮಾಡುವುದು ನಮ್ಮ ಗುರಿ. ಮುಂದೆ ಬರುವವರಿಗೆ ತಂತಮ್ಮ ಶಕ್ತ್ಯಾನುಸಾರ ಅರ್ಥೈಸುವ ಅಧಿಕಾರ ಇದ್ದೇ ಇದೆ.

ಕನಕಪುರಿಯನ್ನಾಳಿದ ಹಿಂದಿನ ರಾಜರ ಇತಿಹಾಸದ ಸಂಪುಟಗಳು ಅರಮನೆಯಲ್ಲಿವೆ. ಆಸಕ್ತರು ಹೋಗಿ ನೋಡಬಹುದು. ನಾವೀಗ ಶೋಧಿಸುತ್ತಿರೋದು ಕನಕಪುರಿಯ ಕೊನೆಯ ದೊರೆ ಶಿಖರಸೂರ್ಯನ ಇತಿಹಾಸವನ್ನ.

ಶಿಖರಸೂರ್ಯ ಮಹಾರಾಜನ ಇತಿಹಾಸ ಶಿವಾಪುರದಿಂದ ಸುರುವಾಗೋದು ಯಾರಿಂದಲಾದರೂ ಊಹಿಸಲು ಸಾಧ್ಯವೇ? ಅವನ ಕುಲಮೂಲಗಳೂ ನಮಗೆ ಲಭ್ಯವಿಲ್ಲ. ಅವೆಲ್ಲ ಚಂದಮುತ್ತನ ಕಥೆಯಲ್ಲಿ ಮುಳುಗಿಹೋಗಿವೆ. ಬದುಕಿದ್ದಾಗಲೇ ಕಥೆಯಾಗಿ, ಲಾವಣಿಯಾಗಿ, ದೇವತೆಯಾಗಿ ಪವಾಡಗಳ ಮೆರೆದ ಚಂದಮುತ್ತನ ಭಾಗಾದಿ ನಮ್ಮ ನಾಯಕ ಶಿಖರಸೂರ್ಯ! ಇವನೂ ಕಲಾವಿದನಾಗಲು ಖಟಪಟಿ ಮಾಡಿ, ಸಾಧ್ಯವಾಗದೆ ಮಲೆಯಾಳ ಮಂತ್ರತಂತ್ರಾದಿ ವಾಮಾಚಾರ ಅನುಸರಿಸಿ, ಆಗಲೂ ಸಾಧ್ಯವಾಗದೆ, ಗುರುಶಾಪಕ್ಕೆ ಗುರಿಯಾಗಿ ಎರಡು ಮೂರು ವರ್ಷ ಅಲ್ಲಲ್ಲಿ ಅಲೆದಾಡಿ, ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳಲೆಂದು ಕಾಡಿನ ಕಮರಿಗೆ ಜಿಗಿದು ಸ್ಮೃತಿ ತಪ್ಪಿ ಬಿದ್ದವನು. ಅಂಥವನನ್ನ ಶಿವಾಪುರದ ಜಟ್ಟಿಗ ಎತ್ತಿ ತಂದು ಉಪಚರಿಸಿ ಕನಕಪುರಿಯ ಇತಿಹಾಸಕ್ಕೆ ಕಾಣಿಕೆಯಾಗಿ ಕೊಟ್ಟ. ಕಾಡಿನ ಕಮರಿಯಲ್ಲಿ ಬೇಹುಷಾರಾಗಿ ಬಿದ್ದಿದ್ದ ಚಿನ್ನಮುತ್ತನನ್ನು ಜಟ್ಟಿಗ ದಯಮಾಡಿ ಶಿವಾಪುರಕ್ಕೆ ಎತ್ತಿಕೊಂಬಂದನಲ್ಲ, ಅಲ್ಲಿಂದ ಮುಂದಿನ ಅವನ ಇತಿಹಾಸವನ್ನು ನೋಡಿರಿ: