ಇನ್ನೂ ಒಂದು ವಾರ ಕಳೆದ ಮೇಲೆ ಇನ್ನಷ್ಟು ನಡೆದಾಡುವಂತಾದ. ಜಟ್ಟಿಗನಿಗೆ ಅಮ್ಮನಡಿಯ ಅಂದರೆ ಶಿವಪಾದನ ವಾಕ್ಯ ನೆನಪಿತ್ತು. ಈಗ ಜಯಸೂರ್ಯನ ಕಾಲು ಮತ್ತು ಬೆನ್ನುಮೂಳೆ ಸರಿಹೋಗಿರುವುದರಿಂದ ಅವನ್ನು ಸಾಗಹಾಕಲು ಯೋಚಿಸಿ ಶಿವಪಾದನ ಸಮಯಕ್ಕಾಗಿ ಕಾಯುತ್ತಿದ್ದ.

ಜಯಸೂರ್ಯ ದಿನೇ ದಿನೇ ಹೆಚ್ಚು ಹೆಚ್ಚು ಆಸಕ್ತಿಯಿಂದ ಬೆಳ್ಳಿಯನ್ನು ಗಮನಿಸುತ್ತಿದ್ದ. ಕಾಡಿಗೂ ಬೆಳ್ಳಿಗೂ-ಬೇರೆಯವರಿಗಿಂತ ಹೆಚ್ಚಾಗಿ-ಒಂದು ಆತ್ಮೀಯವಾದ ಸಂಬಂಧವಿತ್ತು. ತನಗೆ ಗೊತ್ತೇ ಇಲ್ಲದ ಅನೇಕ ಗಿಡ ಮರ ಮೂಲಿಕೆಗಳ ಅವಳಿಗೆ ಗೊತ್ತಿದ್ದವು. ಕೆಲವು ಸಸ್ಯಗಳನ್ನಂತೂ ಆಕೆ ದೂರದಿಂದ ವಾಸನೆಯಿಂದಲೇ ಗುರುತಿಸಿ ಅವು ತನ್ನ ಹೆಸರುಗಳು, ಅವು ಹುಟ್ಟುವು, ಹೊಂದುವ, ಬೆಳೆವ, ಅರಳುವ, ಕೊನೆಗೆ ಭೂಮಿಗುದುರುವ ಕಾಲ ಮತ್ತು ಹಂಗಾಮಳು ಅವಳಿಗೆ ವಿವರವಾಗಿ ಗೊತ್ತಿದ್ದವು. ಯಾವ ತರುಮರ ಯಾವ ನಾರುಬೇಕು ಏನಕ್ಕುಪಯೋಗವೆಂದು ಹೇಳುತ್ತಿದ್ದಳು. ಜಯಸೂರ್ಯ ತನ್ನ ಹೊಸ ಜೀವನದ ಮೊದಲ ಹೆಜ್ಜೆ ಇದೇ ಎಂದು ತೀರ್ಮಾನಿಸಿ ಬೆಳ್ಳಿ ಇದ್ದಲ್ಲಿಗೆ ಹೋಗಿ,

“ಬೆಳ್ಳಿ, ಎಲ್ಲೋ ಸತ್ತು ಬಿದ್ದವನನ್ನು ಎತ್ತಿ ತಂದು ಮದ್ದು ಕೊಟ್ಟು ಬದುಕಿಸಿದಿರಿ. ನಿನಗೂ ಜಟ್ಟಿಗನಿಗೂ ನಮಸ್ಕಾರ.”

ಎಂದು ಹೇಳಿ ಕೈಮುಗಿದ. ಬೆಳ್ಳಿ ‘ಹೋ’ ಅಂತ ಎಲೆ ತಿಂದ ಜೊಲ್ಲು ಸುತ್ತ ಸಿಡಿಸಿ ಕಿಲ ಕಿಲ ನಕ್ಕಳು. ಯಾಕೆಂದರೆ ಹೀಗೆ ಕೃತಜ್ಞತೆ ಹೇಳುವ ಪರಿಪಾಠ ಅವಳಿಗೆ ಹೊಸದು. ಇನ್ನೂ ಕೈ ಮುಗಿದೇ ಮತ್ತೆ ಹೇಳಿದ:

“ಬೆಳ್ಳಿ, ಇಂದಿನಿಂದ ನಿನ್ನ ವೈದ್ಯವಿದ್ಯೆ ಕಲಿಯಬೇಕೆಂದು ತೀರ್ಮಾನ ಮಾಡಿಬಿಟ್ಟಿದ್ದೇನೆ. ನನಗೆ ಕಲಿಸಿಕೊಡು.”

“ನನಗಷ್ಟೆಲ್ಲಾ ಎಲ್ಲಿ ಗೊತ್ತಾದೀತು? ಜಟ್ಟಿಗ ಹೇಳ್ತಾನೆ ಬೇಕಾದರೆ.”

“ನಿನಗೆ ಗೊತ್ತಿರುವಷ್ಟು ಹೇಳು. ಜಟ್ಟಿಗನನ್ನು ಆಮೇಲೆ ಕೇಳುತ್ತೇನೆ.”

“ಏನೇಳ್ಲಿ?”

“ನನ್ನ ಮೊಳಕಾಲು ಮುರಿಯಿತಲ್ಲ, ನೀನಿದಕ್ಕೆ ದಿನಾಲು ಸವರುತ್ತಿದ್ದ ಮದ್ದು ಯಾವುದು?-ಇಲ್ಲಿಂದಲೇ ಸುರುಮಾಡೋಣ”.

“ಅದಾ? ಹೇಳ್ತಿನಿರು.”

-ಅಂದು ಅವನನ್ನು ಅಲ್ಲೇ ಕಟ್ಟೇಮೇಲೆ ಕೂರಿಸಿ, ತಾನು ಮಾಡುತ್ತಿದ್ದ ಕೆಲಸವನ್ನ ಮುಗಿಸಲೆತ್ನಿಸಿದಳು. ಆ ಕೆಲಸಗಳು ಜಯಸೂರ್ಯನಿಗೆ ಅಪರಿಚಿತವಾದ್ದರಿಂದ ಅವುಗಳ ಅಗತ್ಯ ಮತ್ತು ಉಪಯೋಗದ ಮಹತ್ವ ಇವನಿಗೆ ಗೊತ್ತಾಗಲಿಲ್ಲ. ಆಮೇಲೆ ಇವನಂತೆಯೇ ಬೀಸುದೇಹದ, ಮೈ ಚರ್ಮಕ್ಕಂಟಿ ಸಪೂರ ದೇಹಾಕೃತಿಯ ಜಟ್ಟಿಗ ಬಂದು ಆಕೆಗೆ ಸಹಾಯ ಮಾಡಿದ. ಆಮೇಲೆ ಜಟ್ಟಿಗ ಮತ್ತು ಬೆಳ್ಳಿ ಎಲಡಿಕೆ ವಿನಿಮಯ ಮಾಡಿಕೊಂಡು ತಿಂದರು. ಬೆಳ್ಳಿ ಒಂದು ಸಾರಿ ಕೆಂಪಾದ ಜೊಲ್ಲನ್ನು ಇಷ್ಟು ದೂರ ಚಿಮ್ಮುವ ಹಾಗೆ ಉಗಿದು “ನಡಿ ತೋರಿಸುವಾ” ಅಂತ ಹೇಳಿ ಎದ್ದು ಬಾಕಿ ಕೆಲಸ ಮುಂದುವರಿಸಲು ಜಟ್ಟಿಗನಿಗೆ ಹೇಳಿ ಹೊರಟಳು. ‘ಇನ್ನೇನು ಪರ್ವ ಬಂತಲ್ಲ. ಅದು ಮುಗಿದ ಮೇಲೆ ಇವಯ್ಯನನ್ನು ಊರು ಬಿಡಿಸಿದರಾಯ್ತೆಂದು’ ಬೆಳ್ಳಿ ಅಂದುಕೊಂಡಳು. ಜಟ್ಟಿಗನೂ ಹಾಗೇ ಅಂದುಕೊಂಡ.

ಒಂದು ದಿನ ಜಟ್ಟಿಗ ಮನೆಮುಂದಿನ ಎತ್ತರ ಕಟ್ಟೆಯ ಮೇಲೆ ನಿಂತು ಕಂಬಳಿಗಾಗಿ ಉಣ್ಣೆಯ ನೂಲು ಹೊಸೆಯುತ್ತಿದ್ದ. ಉಣ್ಣೆಯ ಹೊಸೆದು ಕುಕ್ಕಡಿಯನ್ನ ತಿರುಗಿಸಲು ಜಯಸೂರ್ಯ ಬಂದ. ಇವನನ್ನು ನೋಡಿದ್ದೇ “ಬೆಳ್ಳಿ ಕಾಡಿಗೆ ಓಗವ್ಳೆ” ಅಂದ. ಆದರೂ ಈತ ಪಕ್ಕದ ಕಟ್ಟೆಯ ಮೇಲೆ ಕೂತ. ನೆರೆಗುಡಿಸಲಿನ ಒಂದೆರಡು ಮಕ್ಕಳು ಇವನನ್ನು ಕಂಡು ಹೆದರಿ ದೂರ ಹೋದವು. ಪಡಸಾಲೆಯಲ್ಲಿ ನೇತುಹಾಕಿದ್ದ ಚಿರತೆಯ ಚರ್ಮ ಇವನ ಕಣ್ಣಿಗೆ ಬಿತ್ತು. ಅದನ್ನೇ ನೋಡುತ್ತಿದ್ದಾಗ ಜಟ್ಟಿಗನೇ ಹೆಮ್ಮೆಯಿಂದ ಹೇಳಿದ: “ಬೆಳ್ಳಿ ಬೇಟೆಯಾಡಿ ಕೊಂದದ್ದು!” ಆಮೇಲೆ ಯಾಕೋ ಚರ್ಮವನ್ನು ನೋಡಲಾಗದೆ ಮತ್ಸರದಿಂದ ಜಟ್ಟಿಗನನ್ನೇ ನೋಡುತ್ತ ಕೇಳಿದ:

“ಬೆಳ್ಳಿ ನಿನಗೇನಾಗಬೇಕು ಜಟ್ಟಿಗ?”

“ಮಡದಿ”

ಆಘಾತವಾಯ್ತು ಜಯಸೂರ್ಯನಿಗೆ. ಅವನ ಮಾತಿನಲ್ಲಿ ನಂಬಿಕೆ ಬಾರದೆ

“ಅಂದ್ರೆ?” ಅಂದ.

ಜಟ್ಟಿಗ ತಿಳಿಸಿ ಹೇಳುವಂತೆ “ಹೆಂಡತಿ” ಅಂದ.

ಜಯಸೂರ್ಯ ಜಲ ಜಲ ಬೆವರಿದ. ಕೂತ ಕಟ್ಟೆ ಒದ್ದೆಯಾದ ಮೇಲೆ ಮಾತಿಲ್ಲದೆ ಜಟ್ಟಿಗನ ನೋಡಿದ. ಮಾಂಸಖಂಡಗಳು ತುಂಬಿ ದೇವಸ್ಥಾನದ ಕಲ್ಲಿನ ದ್ವಾರಪಾಲಕನಂಥ ಮೈಕಟ್ಟಿನ, ಎತ್ತರ ನಿಲುವಿನ ಆಜಾನುಬಾಹು ಆಳು! ಸೊಂಟಕ್ಕೆ ಕಟ್ಟಿಕೊಂಡ ಗೊಂಡೇದ ಲಂಗೋಟಿ ವಿನಾ ಮೈಮೇಲೆ ಬಟ್ಟೆಯಿರಲಿಲ್ಲ. ಚಿನ್ನದ ಬಿಸಿಲಿನಲ್ಲಿ ಮೈ ಮಿರಿ ಮಿರಿ ಹೊಳೆಯುತ್ತಿತ್ತು. ತೊಡೆಯ ಮ್ಯಾಲೆ ಉಣ್ಣೆಯ ಹೊಸೆದು ಕುಕ್ಕಡಿಯನ್ನು ಕೆಳಕ್ಕೆಸೆದು ತಿರುಗಿಸುವಾಗಲಂತೂ ಸ್ನಾಯುಗಳು ಬಿಗಿದು ಸಡಿಲಾಗಿ ಮೈಯಲ್ಲಿ ಒಂದು ಬಗೆಯ ಲಯಬದ್ದ ಚಲನೆ ಉಂಟಾಗಿ ಯಾವನೋ ಬಲಾಢ್ಯ ದೇವರು ಕುಕ್ಕಡಿ ಹೊಸೆಯುವುದನ್ನ ಮಾನವರಿಗೆ ತೋರಿಸಲಿಕ್ಕೆ ನಿಂತ ಹಾಗೆ ಕಾಣುತ್ತಿದ್ದ. ಮಾತಿಲ್ಲದೆ ಜಯಸೂರ್ಯ ಎದ್ದು ನಡೆದ. ಆತ ಹೇಳದೆ ಕೇಳದೆ ಹೋಗುತ್ತಿದ್ದುದಕ್ಕೆ ಜಟ್ಟಿಗನಿಗೂ ಆಶ್ಚರ್ಯವಾಯಿತು.

ಜಟ್ಟಿಗ ಮಾತಿಗೊಮ್ಮೆ ಬೆಳ್ಳಿ ಅನ್ನುತ್ತಿದ್ದದು ಯಾಕೆಂದು ಈಗ ತಿಳಿಯಿತು. ಅವಳಿಲ್ಲದೆ ತಾನಿಲ್ಲವೆಂಬುದನ್ನು, ಅವಳಿಲ್ಲದೆ ಶಿವಾಪುರವಿಲ್ಲ ಎನ್ನುವುದನ್ನಾತ ಸೂಚಿಸಿದ್ದ. ಮಾತ್ರವಲ್ಲ ಇಹಪರ, ಕಾಡು ಮತ್ತು ಹಸಿರು, ಹೊಳೆ ಮತ್ತು ಹೆಣ್ಣು ಗಂಡು ಮತ್ತು ಮಳೆ ಬೆಳೆ ಮತ್ತು ಅಮ್ಮ ಮತ್ತು ಇವೆಲ್ಲವೂ ಬೆಳ್ಳಿ ಎಂಬಂತೆ ಮಾತಾಡಿದ್ದ. ಜಯಸೂರ್ಯ ಬೆಪ್ಪನಂತೆ ಕೇಳಿದ್ದ. ತಮ್ಮಿಬ್ಬರ ಮಧ್ಯದ ಉನ್ಮಾದ ಒಂದೇ, ಆದರೆ ಆತ ಹೆಚ್ಚು ಅರ್ಹ ! ತಕ್ಷಣ ಜಟ್ಟಿಗ ಸಾಯಬೇಕಲ್ಲ – ಎನಿಸಿತು. ಹೆಣದ ಭಂಗಿಯಲ್ಲಿ ಅವನನ್ನು, ವಿಧವೆಯ ರೂಪದಲ್ಲಿ ಬೆಳ್ಳಿಯನ್ನು ಕಲ್ಪಿಸಿಕೊಂಡು ಸಮಾಧಾನ ಮಾಡಿಕೊಡಲು ಪ್ರಯತ್ನಿಸಿದ, ಆಗಲಿಲ್ಲ.

ನಿರಾಸೆ ಮತ್ತು ಆಶ್ಚರ್ಯಗಳಿಂದ ಜಯಸೂರ್ಯ ಜರ್ಜರಿತನಾದ. ನಿರಾಸೆ ಯಾಕೆಂದರೆ ಬೆಳ್ಳಿಗಿನ್ನೂ ಮದುವೆಯಾಗಿಲ್ಲವೆಂದುಕೊಂಡಿದ್ದ; ಆಗಿದ್ದುದಕ್ಕೆ! ಮದುವೆಯಾಗಿದೆ ಮಾತ್ರವಲ್ಲ, ಎಲ್ಲ ವಿಧದಲ್ಲಿ ತನಗಿಂತ ಉತ್ತಮನಾದ ಗಂಡ ಜಟ್ಟಿಗ ಇದ್ದಾನೆ! ಆಶ್ಚರ್ಯ ಯಾಕೆಂದರೆ ಬೆಳ್ಳಿಯನ್ನು ಈಗಷ್ಟೆ ಪ್ರಾಯಕ್ಕೆ ಬಂದ ಹುಡುಗಿ ಅಂದುಕೊಂಡಿದ್ದ.

ಮೂರನೇ ಬೆಳಗ್ಗೆ ಝುಮು ಝುಮು ಚಳಿಯಲ್ಲಿ ಬಾಗಿಲು ಬಡಿದ ಸದ್ದು ಕೇಳಿ ಇನ್ನೂ ಮಲಗಿದ್ದ ಜಯಸೂರ್ಯನಿಗೆ ಭಯವಾಯಿತು. ಗಡಬಡಿಸಿ ಎದ್ದು ಬಂದು ಬಾಗಿಲು ತೆರೆದರೆ “ಏನಯ್ಯಾ ನಿನಗಿನ್ನೂ ಬೆಳಗಾಗಿಲ್ಲವೇ?” ಎನ್ನುತ್ತ ಬಾಗಿಲಲ್ಲಿ ಬೆಳ್ಳಿ ನಿಂತಿದ್ದಾಳೆ! ‘ಬಾ’ ಎನ್ನುವುದಕ್ಕೂ ಅವಕಾಶ ಕೊಡದೆ ಒಳಬಂದು ‘ಕೂರು’ ಎನ್ನುವ ಮುನ್ನವೇ ನೆಲದ ಮೇಲೆ ಕೂತೂ ಬಿಟ್ಟಳು! ಮಾತು ಸುರುಮಾಡುವ ಮುನ್ನ ಅವಳೇ “ಬಂದಿದ್ದೆಯಂತಲ್ಲ, ಯಾಕೆ?” ಅಂದಳು. ಮಾತಿನ ಭರಾಟೆಯಲ್ಲಿ ಅವಳ ಪ್ರಶ್ನೆ ಯಾವುದು, ಸಾದಾ ಮಾತು ಯಾವುದೆಂದು ಪ್ರತ್ಯೇಕಿಸಲಾಗದೆ ಜಯಸೂರ್ಯ ಸುಮ್ಮನೆ ನಿಂತ. ಪುನಃ ಅದೇ ಪ್ರಶ್ನೆ ಕೇಳಿದ ಮೇಲೆ “ನನಗೆ ಒಂದೆರಡು ಬೇರುಗಳು ಬೇಕಾಗಿದ್ದವು” ಅಂದ.

“ಹೆಸರು ಹೇಳಿ ಬರಬಾರದಿತ್ತೇ? ತರ್ತಿದ್ದೆ, ಹೋಗಲಿ ಯಾ ಬೇರು ಹೇಳು” ಅಂದಳು. ಯಾವುದೋ ಒಂದೆರಡು ಬೇರಿನ ಹೆಸರು ಹೇಳಿದೊಡನೆ,-

“ನಿನಗದು ನಾಳೆ ಸಿಕ್ಕೀತು.”

ಎಂದುಸುರಿ ಮತ್ತೆ ಅದೇ ಉಸುರಿನಲ್ಲಿ “ಮರ್ತೆ” ಎಂದೂ ಹೇಳಿ ತನ್ನ ಉಡಿಯಲ್ಲಿಂದ ಹಸಿರು ಕಾಯಿ ತೆಗೆದು,

“ಇದನ್ನ ಜೇನುತುಪ್ಪದಲ್ಲಿ ಅದ್ದಿ ತಿಂದರೆ ಸಾಕು, ನಾಕು ತಾಸು ಹೊಟ್ಟೆ ಗಟ್ಟಿಯಾಗಿರ್ತದೆ. ತಗೋ”

ಎಂದು ಕಾಯಿಕೊಟ್ಟು ಅಲ್ಲೇ ನೆಲಿವಿನ ಮ್ಯಾಲಿದ್ದ ಜೇನು ತುಪ್ಪದ ಮಡಕೆಯನ್ನೂ ತೆಗೆದಿಟ್ಟು “ತಿನ್ನು” ಎಂದಳು. ಅವನು ತಿನ್ನಲಿಲ್ಲ. “ಇನ್ನೂ ಜಳಕ ಆಗಿಲ್ಲ.” ಅಂದ

“ಆಮ್ಯಾಕೆ ತಿನ್ನು” ಎಂದು ಹೇಳಿ ಹೊರಟೇ ಬಿಟ್ಟಳು. ಇಷ್ಟು ಅವಸರದಲ್ಲಿ ಅವಳು ಹೋಗುವುದು ಬೇಕಿರಲಿಲ್ಲ, – “ಬೆಳ್ಳೀ” ಅಂದ.

“ನಾಳೆ ನಿನಗೆ ಆ ಬೇರು ಮುಟ್ಟಿಸ್ತೇನೆ ಮಾರಾಯಾ”

ಅಂದಾಗ ಅನಿವಾರ್ಯವಾಗಿ “ಆಯ್ತು” ಅಂದ. ಕನಸಿನಲ್ಲಿ ಬಂದು ಹೋದಂತೆ ಬೆಳ್ಳಿ ಕಣ್ಮರೆಯಾದಳು.

ಅಂದೇ ಇಳಿಹೊತ್ತಿನಲ್ಲಿ ನೇರಳೆ ಮೆಳೆಯ ದೊಡ್ಡ ಹುಲುಗಲ ಮರದ ಹತ್ತಿರ ತಾನು ಬೆಳಿಗ್ಗೆ ಬೆಳ್ಳಿಗೆ ಹೇಳಿದ್ದ ಬೇರಿನ ಗಿಡ ಕಂಡು ಜಯಸೂರ್ಯ ಹುರುಪಾದ. ಅದರ ಜೊತೆಯಲ್ಲಿ ಇನ್ನೊಂದು ಗಿಡ ಇತ್ತು. ಬೆಸೆದುಕೊಂಡಂತೆ ಉಜ್ಜುಜ್ಜಿಕೊಳ್ಳುತ್ತ ಬೆಳೆದ ಎರಡನ್ನೂ ಪ್ರತ್ಯೇಕಿಸಿ ತನಗೆ ಬೇಕಾದ್ದನ್ನು ಕಿತ್ತುಕೊಂಡು ಹಟ್ಟಿಯ ಕಡೆಗೆ ನಡೆದ. ಇನ್ನೊಂದು ಮಳೆಯಲ್ಲಿ ಬೆಳ್ಳಿ ಈಗ ಹೇಳಿದ ಇನ್ನೊಂದು ಬೇರನ್ನು ಬಿಡಿಸಿಕೊಳ್ಳುತ್ತಿದ್ದಳು. ಇವನನ್ನು ನೋಡಿ “ನೀನೂ ಬಂದೆಯ ಅಯ್ಯ?” ಅಂದಳು.

ಇವನು ತನಗೆ ಸಿಕ್ಕ ಬೇರಿನ ಸಮೇತ ಕಿತ್ತುತಂದ ಗಿಡವನ್ನು ಹೆಮ್ಮೆಯಿಂದ ತೋರಿಸಿದ. ಬೆಳ್ಳಿ ನಾಚಿ ನಕ್ಕಳು.

“ಇದರ ಜೊತೆ ಇನ್ನೊಂದು ಗಿಡ ಇತ್ತಲ್ಲವ?”

“ಇದೆ.”

“ಜೊತೆಗೂಡಿದ ಗಿಡ ಕೀಳಬಾರದು ಅಂತ ಗೊತ್ತಿಲ್ಲವೇನಯ್ಯಾ?”

“ಯಾಕೆ?”

“ಯಾಕೆಂದರೆ ಮದುವೆ ಮಾಡಿದ ಜೋಡಿ ಅವು! ನಾನು ಮತ್ತು ಜಟ್ಟಿಗ ಸೇರಿ ಮದುವೆ ಮಾಡಿದ್ದು. ಬಾ ಇದನ್ನ ಅಲ್ಲೇ ನೆಟ್ಟು ಬರುವಾ.”

-ಎಂದು ಹೇಳಿ ಅವನನ್ನ ಪುನಃ ಹುಲುಗಲ ಮರದ ಬಳಿಗೇ ಕರೆತಂದಳು. ಪುನಃ ನೀರು ತಂದು ಆ ನೆಲವನ್ನು ಒದ್ದೆ ಮಾಡಿ ಸದರಿ ಗಿಡವನ್ನು ನೆಟ್ಟು ಸುತ್ತ ಮಣ್ಣು ಹಾಕಿ ನಮಸ್ಕರಿಸಿದಳು. ಜಯಸೂರ್ಯನಿಗೆ ಮೋಜೆನಿಸಿತು. “ಗಿಡಗಳಿಗೆ ಮದುವೆ!” ಎಂದು ತಂತಾನೇ ನಕ್ಕ.

“ನಗಬೇಡಯ್ಯಾ, ಎರಡು ಗಿಡಗಳಿಗೆ ಮದುವೆ ಮಾಡಿದರೆ ಪುಣ್ಯ ಬರತೈತಿ! ನೋಡ್ತಾ ಇರು. ಒಂದು ವಾರದಲ್ಲಿ ಎರಡೂ ಹೆಂಗೆ ತಬ್ಬಿಕೊಂಡಿರ್ತಾವಂತ! ಇಕಾ ಇಲ್ಲಿದೆಯಲ್ಲ ಇದು ನಾನು ನೆಟ್ಟದ್ದು. ನೀನು ಕಿತ್ತಿದ್ದೆಯಲ್ಲ? ಇದು ಜಟ್ಟಿಗನದು”

-ಎಂದು ಹೇಳುತ್ತ ಹುಲುಗಲದ ನೆರಳಲ್ಲಿ ಕೂತಳು. ಮಾಗಿದ ಬಿಸಿಲಿನ್ನೂ ಹರಿತವಾಗಿದ್ದರಿಂದ ತಂಪು ನೆರಳು ಹಿತವಾಗಿತ್ತು. ಬೆಳ್ಳಿ ಎಲಡಿಕೆಯ ಸಂಚಿಯ ಬಿಚ್ಚಿದಳು. ಈಗೀಗ ಬೆಳ್ಳಿಯ ಜೊತೆಗೆ ತುಸು ಸಲಿಗೆಯೂ ಬೆಳೆದುದರಿಂದ ಮೈ ಬಿಸಿಯೇರಿತು. ಸುತ್ತ ಯಾರೂ ಇರಲಿಲ್ಲ. ‘ಇವಳನ್ನ ಗಪ್ಪನೆ ಹಿಡಿದುಕೊಂಡು ಯಾಕೆ ಮುದ್ದಿಸಬಾರದು?’ ಅಂದುಕೊಂಡ.

“ಅಕಾ ಅಲ್ಲೊಂದು ಕಾರೀ ಕಂಟಿಯಿದೆ ಕಂಡೆಯಾ?” ಅಂದಳು ಬೆಳ್ಳಿ.

“ಹೌದು ಗೊಂಜಾಳ ಕಾಳಿನಷ್ಟೇ ಚಿಕ್ಕದಾದರೂ ಅದರ ಹಣ್ಣು ಬಹಳ ರುಚಿ. ತರ್ತೀನಿರು.”

ಎಂದು ಹೇಳಿ ಜಯಸೂರ್ಯ ಹೋಗಿ ಕಾರೀ ಕಂಟಿಗೆ ಕೈ ಹಾಕಿದ. ಚಕ್ಕಂತ ಕೈ ಹಿಂತೆಗೆದು ನೋಡಿಕೊಂಡ. ಮುಳ್ಳು ತರಿದು ನಾಲ್ಕೈದು ಕಡೆ ಹಿಂಗೈಗೆ ರಕ್ತ ಬಂದಿತ್ತು, ಚೇಳು ಕಡಿದಂತೆ ಭಾರೀ ಉರಿ ಇತ್ತು. ಬೆಳ್ಳಿ ಬಹಳ ಹರ್ಷದಿಂದ ಸದ್ದು ಮಾಡುತ್ತ ಕಿಲ ಕಿಲ ನಕ್ಕಳು,

“ನೋಡಿದೆಯೇನಯ್ಯಾ ಕಾರಿಯ ಕಂಟಿಯನ್ನ? ನೋಡಿದರೆ ಗಿಡವಲ್ಲ, ಮರವಲ್ಲ, ಚೋಟುದ್ದ ಕಂಟಿ! ಗೊಂಜಾಳದ ಕಾಳಿನ ಗಾತ್ರದ ಹಣ್ಣು. ತಿನ್ನಲಿಕ್ಕೆ ಚಂದ! ಸಣ್ಣ ಕಂಟಿ ತನ್ನ ಹಣ್ಣುಗಳನ್ನ ಕಾಪಾಡಿಕೊಳ್ಳೋದಕ್ಕ ಒಳಗ ಕಾಣದ ಜಾಗದಲ್ಲಿ ಮುಳ್ಳಿಟ್ಟುಕೊಂಡು ಹೆಂಗೆ ಹೊಂಚಿತ್ತು, ನೋಡಿದೆಯಾ? ದೊಡ್ಡ ಮನುಷ್ಯ ಹರೀಬೇಕಂತ ಕೈ ಹಾಕಿದರೆ- ಹಣ್ಣಿಗೂ ಮುಂಚೆ ಮುಳ್ಳು ಮುಂಬಂದು ಸಿಕ್ಕಷ್ಟು ಚರ್ಮ ಕಿತ್ತುಕೊಂಡೇ ಹಿಂದ ಸರಿಯಿತಲ್ಲಪ್ಪ! ಕಂಟಿಯಂಥ ಕಂಟಿಗೂ ತನ್ನನ್ನ ತಾನು ಕಾಪಾಡಿಕೊಳ್ಳೋದು ಗೊತ್ತು ಕಣಣ್ಣಾ!

‘ಈ ಮಾತನ್ನವಳು ತನ್ನನ್ನ ಕುರಿತೇ ಆಡಿರಬಹುದು?’ ಅಂದುಕೊಂಡ. ಹಾಗಿದ್ದರೆ ಈಗ ತಾನು ಹುಷಾರಾಗಿ ಅದನ್ನು ನಿವಾರಿಸಬೇಕೆಂದು,

“ಬೆಳ್ಳಿ, ನೀರು ಮಾಡೋ ವೈದ್ಯದಲ್ಲಿ ನಿನಗೆ ನಂಬಿಕೆ ಇದೆಯ?” ಅಂದ.

“ತಗಳಪ್ಪ! ಇದೇನಯ್ಯಾ ಹಿಂಕೇಳ್ತಿಯಾ? ನಾ ವೈದ್ಯ ಮಾಡಿದ್ದರಿಂದಲ್ಲೇನು ನಿನ್ನ ಮುರಿದ ಕಾಲು ಸಮ ಆಯ್ತು?”

“ಹೌದು.”

“ಮತ್ಯಾಕೆ ಅನುಮಾನ ಬಂತು?”

“ಅದಲ್ಲ ನಾ ಕೇಳಿದ್ದು, ವೈದ್ಯದಿಂದ ಮನುಷ್ಯ ಚಿರಂಜೀವಿ ಆಗ್ತಾನಂತೆ, ಅಂಥ ವೈದ್ಯದಲ್ಲಿ ನಿನಗೆ ನಂಬಿಕೆ ಇದೆಯ? ಅಂದೆ”

“ಚಿರಂಜೀವಿ ಅಂದರ ಸಾಯೋದಿಲ್ಲ-ಅದೇ ಅಲ್ಲವ? ನೀ ಕೇಳೋದು?”

“ಹೌದು”

“ಈ ವಿಸ್ಯ ನಿಂಗೇಳಬೇಕಾದರೆ ಶಿವಪಾದನೇ ಸೈ.”

“ಶಿವಪಾದನಿಗೆ ವೈದ್ಯವೂ ಗೊತ್ತ?”

“ಗೊತ್ತ ಅಂದರ? ವೈದ್ಯರ ಗುರು ಅವನು! ಅವನು ಕಲಿಸಿದ್ದೇ ಆಟು ಈಟು ನಾರುಬೇರು ನಾವು ಮಾಡೋದು. ಅವನಿಗೆ ಎಷ್ಟು ವಯಸ್ಸು ಅಂದುಕೊಂಡೆ?”

ಎಂದು ಹೇಳುತ್ತ ಎರಡೂ ಹಸ್ತ ಅಗಲಿಸಿ, ಹತ್ತೂ ಬೆರಳು ತೋರಿಸಿ,-

“ಅವನಿಗೆ ಇಷ್ಟು ಇಪ್ಪತ್ತು ವರ್ಷ ವಯಸ್ಸು! ನಾನು ಈಟಿದ್ದಾಗ ಹೆಂಗಿದ್ನೋ ಈಗಲೂ ಹಂಗೇ ಇದ್ದಾನೆ ಪುಣ್ಯಾತ್ಮ! ಅವನು ಇಚ್ಛಾಮರಣಿ! ಲೋಕದಾಟ ಬೇಡ ಅಂದಾಗ ಗವೀ ಒಳಗಿನ ಅಂತರಂಗ ಸೇರಿ ನಿರ್ವಾಣವಾಗ್ತಾನ. ಶಿವನ ಜೊತೆ ಮಾತಾಡ್ತಾನಪ್ಪ! ನೀ ಅವನ್ನ ಕೇಳಿದರ ಹೇಳಿಯಾನು ನೋಡು.”

“ಅಷ್ಟು ವರ್ಷ ಬದುಕಬೇಕಂತ ನಿನಗನ್ನಿಸೋದಿಲ್ಲವ?”

“ನಮಗ್ಯಾಕಯ್ಯ ಅಷ್ಟೊಂದು ಆಯುಷ್ಯ? ನಾವೇನು ಮನುಷ್ಯರನ್ನ ಉದ್ಧಾರ ಮಾಡಬೇಕ? ಅವನಾದರೆ ನಮ್ಮ ಸೀಮಿ ಕಾಪಾಡಬೇಕು. ಗುಡ್ಡರು ಮಕ್ಕಳು ಮರಿಗಳಿಗೆ ರೋಗ ರುಜಿನ ಬರದಾಂಗ ನೋಡಿಕೋಬೇಕು. ತಮ್ಮ ತಮ್ಮಲ್ಲಿ ಜಗಳವಾಡಧಾಂಗ ನೋಡಿಕೋ ಬೇಕು. ಅದಕ್ಕೇ ಅವನು ಸಾವಿರ ವರ್ಷ ಬದುಕೋದು!”

“ಶಿವಪಾದನ್ನ ಯಾವಾಗ ಭೇಟಿ ಮಾಡಿಸ್ತಿ?”

“ನಾನಲ್ಲಪ್ಪೋ – ಜಟ್ಟಿಗ ಕರಕೊಂಡೋಗ್ತಾನ. ಮೊದಲು ಶಿವಪಾದನ ಅಪ್ಪಣೆ ಕೇಳಿಕೋಬೇಕು. ಆಮ್ಯಾಲೆ ಅವನತ್ರ ಹೋಗಬೇಕು. ಜಟ್ಟಿಗ ಎಲ್ಲಾ ಮಾಡ್ತಾನೇಳು.”

ಎಂದೆದ್ದು “ಶಿವಪಾದನಲ್ಲಿ ಇವಯ್ಯನ್ನ ಬಿಟ್ಟರಾಯ್ತು “ಗುರುಬಲ, ಇವಗೆ ಬಲ” ಎಂದು ಅಂದುಕೊಳ್ಳುತ್ತ ನಡೆದಳು. ಜಯಸೂರ್ಯ ಅವಳ ಹಿಂದಿನಿಂದ ನಡೆದ.