ನಗರೇಶ್ವರ ದೇವಸ್ಥಾನ, ಬಂಕಾಪುರ

ಜಿಲ್ಲಾ ಕೇಂದ್ರದಿಂದ ದೂರ : ೨೦ ಕಿ.ಮೀ.
ತಾಲ್ಲೂಕು ಕೇಂದ್ರದಿಂದ ದೂರ: ೧೨ ಕಿ.ಮೀ.

ಶ್ರೀ ನಗರೇಶ್ವರ ದೇವಸ್ಥಾನ

ಮಹಾಕವಿ ರನ್ನನ ಕರ್ಮಭೂಮಿಯಾದ ಬಂಕಾಪುರದಲ್ಲಿ ಕದಂಬ ಶೈಲಿಯ ನಗರೇಶ್ವರ ದೇವಸ್ಥಾನವಿದೆ. ಈ ದೇವಸ್ಥಾನವು ೬೬ ಕಂಬಗಳನ್ನು ಹೊಂದಿದ್ದು, ನೋಡಲು ಮನಮೋಹಕವಾಗಿದೆ. ಪ್ರಸಿದ್ಧ ಗವಿಯೂ ಇದೆ. ಈ ಗವಿಯು ಒಳಗಿನಿಂದ ಸುರಂಗಮಾರ್ಗವನ್ನು ಹೊಂದಿದ್ದು, ಹಾನಗಲ್‌ನ ತಾರಕೇಶ್ವರ ದೇವಸ್ಥಾನಕ್ಕೆ ಮಾರ್ಗವನ್ನು ಹೊಂದಿದೆ.

ಭಾರತೀಯ ಪುರಾತತ್ವ ಇಲಾಖೆಯ ಮಾನ್ಯತೆ ಪಡೆದ ಈ ಸ್ಥಳವು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಬಂಕಾಪುರವು ೧೯೪೨ರ ವರೆಗೆ ತಾಲೂಕಾ ಕೇಂದ್ರವಾಗಿತ್ತು. ನಂತರದಲ್ಲಿ ಶಿಗ್ಗಾಂವ ತಾಲೂಕಾ ಕೇಂದ್ರವಾಗಿದೆ.ಬಂಕಾಪುರವು ಕಾಲಕಾಲಕ್ಕೆ ಈ ಕೆಳಕಂಡ ರಾಜಮನೆತನಗಳ ಆಡಳಿತಕೊಳ್ಳಪಟ್ಟಿತ್ತು.

೧)ರಾಷ್ಟ್ರಕೂಟರು ೨) ಸಮಂತ ಚನ್ನಕೇತನರು ೩) ಕಲ್ಯಾಣದ ಚಾಲುಕ್ಯರು ೪)ಗೋವೆಯ ಕದಂಬರು ೫) ಬನವಾಸಿ ಕದಂಬರು ೬) ಮಂಡಲೇಶ್ವರದ ಕಲಿಯಮರಸರು ೭) ಹೊಯ್ಸಳರು ೮) ವಿಜಯನಗರದ ಬಹಮನಿ ಅರಸರು ೯)ಕೆಳದಿ ಅರಸರು ೧೦) ಬಿಜಾಪುರ ೧೧) ಹೈದರಾಲಿ ಟಿಪ್ಪುಸುಲ್ತಾನ ೧೨) ಹಂಡೆ ಪಾಳೆಗಾರರು ೧೩) ನರಗುಂದ ಸಂಸ್ಥಾನ.

 

ನವಿಲುಧಾಮ, ಬಂಕಾಪುರ

ಜಿಲ್ಲಾ ಕೇಂದ್ರದಿಂದ ದೂರ : ೨೦ ಕಿ.ಮೀ.
ತಾಲ್ಲೂಕು ಕೇಂದ್ರದಿಂದ ದೂರ : ೧೨ ಕಿ.ಮೀ.

ಬಂಕಾಪುರದಲ್ಲೊಂದು ನವಿಲುಧಾಮವಿದ್ದು, ಇಲ್ಲಿ ಹೇರಳವಾಗಿ ನವಿಲುಗಳು ವಾಸವಾಗಿವೆ.

ಸುಮಾರು ೧೫೦ ಎಕರೆಯಷ್ಟು ವಿಸ್ತಾರವನ್ನು ಹೊಂದಿದ ಈ ನವಿಲು ಧಾಮದಲ್ಲಿ ವಿವಿಧ ಬಣ್ಣದ ನವಿಲುಗಳಿವೆ. ಅಲ್ಲದೇ ಮೊಲಗಳೂ ಇವೆ. ಇಲ್ಲಿ ಮೊಲಗಳ ಸಾಕಾಣಿಕೆ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಹಲವಾರು ತಳಿಯ ಮೊಲಗಳು ನೋಡಲು ಸಿಗುತ್ತವೆ.

ಬಂಕಾಪುರ ಕೋಟೆ, ನಗರೇಶ್ವರ ದೇವಸ್ಥಾನ ಹಾಗೂ ನವಿಲುಧಾಮ ನೋಡಲು ಒಂದೇ ಕಡೆಗೆ ಸಿಗುತ್ತವೆ. ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಈ ನವಿಲುಧಾಮವಿದ್ದು, ನೋಡುಗರನ್ನು ಆಕರ್ಷಿಸುತ್ತಿದೆ.

 

ಶಿಶುನಾಳ ಶರೀಫರ ಗದ್ದುಗೆ, ಶಿಶುನಾಳ

ಜಿಲ್ಲಾ ಕೇಂದ್ರದಿಂದ ದೂರ : ೪೬ ಕಿ.ಮೀ.
ತಾಲ್ಲೂಕು ಕೇಂದ್ರದಿಂದ ದೂರ: ೨೦ ಕಿ.ಮೀ.

ಶ್ರೀ ಶಿಶುನಾಳ ಶರೀಫರ ಗದ್ದುಗೆ

ಹಾಡುಗಳ ಮೂಲಕ ಬದುಕಿನಲ್ಲಿ ಮಾನವನಲ್ಲಿರಬೇಕಾದ ನೈತಿಕತೆಯನ್ನು ತಿಳಿಸುತ್ತಾ ಬದುಕಿನ ಶೈಲಿಯನ್ನು ತಿದ್ದಲು ಪ್ರಯತ್ನ ಮಾಡಿದ ಸಂತ ಶಿಶುನಾಳ ಶರೀಫರ ಗದ್ದುಗೆ ಹಾಗೂ ದೇವಸ್ಥಾನವು ಶಿಶುನಾಳ ಗ್ರಾಮದಲ್ಲಿದೆ.

“ಭೂಮಿ ನಿನ್ನದಲ್ಲ, ಹೇಮ ನಿನ್ನದಲ್ಲ, ಕಾಮಿ ನಿನ್ನದಲ, ನಿನ್ನೊಡವೆ ಜ್ಞಾನರತ್ನ” ಎಂದು ಅಲ್ಲಮಪ್ರಭುಗಳು ಮತ್ತು ಶರೀಫರು ಜೀವನದಲ್ಲಿ ವೈರಾಗ್ಯವನ್ನು ತಾಳಿದರು. ಇಂತಹ ಮಹಾತ್ಮರ ತತ್ವದಪದಗಳನ್ನು ಅರ್ಥ ಮಾಡಿಕೊಂಡರೆ ಮಾನವರ ಜನ್ಮ ಸಾರ್ಥಕ.

ಶಿಶುನಾಳದಲ್ಲಿ ಪ್ರತಿವರ್ಷವೂ ವಿಜೃಂಭಣೆಯಿಂದ ಜಾತ್ರೆ ಜರುಗುತ್ತದೆ. ಈ ಜಾತ್ರೆ ಹಾಗೂ ದೇವಸ್ಥಾನಗಳ ವಿಶೇಷವೆಂದರೆ ಇಲ್ಲಿ ಹಿಂದೂ-ಮುಸ್ಲಿಂ ಜನರು ಐಕ್ಯತಾಭಾವದಿಂದ ಭಾಗವಹಿಸುತ್ತಾರೆ. ಧರ್ಮ, ಜಾತಿಗಳ ನಡುವಿನ ಅಂತರವನ್ನು ತೊಡೆದುಹಾಕುವಲ್ಲಿ ಇಂತಹ ದೇವಸ್ಥಾನಗಳು ಪ್ರಮುಖ ಪಾತ್ರವಹಿಸುತ್ತವೆ.

 

ಕನಕ ಬಾಡ

ಜಿಲ್ಲಾ ಕೇಂದ್ರದಿಂದ ದೂರ : ೨೫ ಕಿ.ಮೀ.
ತಾಲ್ಲೂಕು ಕೇಂದ್ರದಿಂದ ದೂರ: ೧೫ ಕಿ.ಮೀ.

ದಾಸ ಶ್ರೇಷ್ಠರಾದ ಕನಕದಾಸರು ಹುಟ್ಟಿದ್ದು ಕುರುಬ ಜಾತಿಯಲ್ಲಾದರೂ ಹರಿಯ ಸಾಕ್ಷಾತ್ಕಾರ ಪಡೆದು ಹರಿದಾಸರೆನಿಸಿದರು. ನೂರಾರು ಕೀರ್ತನೆಗಳು, ಹರಿಭಕ್ತಿಸಾರ, ನಳಚರಿತ್ರೆ, ರಾಮಧಾನ್ಯ ಚರಿತ್ರೆ ಹಾಗೂ ಮೋಹನ ತರಂಗಿಣಿ ಎಂಬ ಕಾವ್ಯಗಳನ್ನು ರಚಿಸಿದರು.

ಕನಕದಾಸರ ಜನ್ಮಸ್ಥಳ ಕರ್ನಾಟಕ ರಾಜ್ಯದ ಮದ್ಯಭಾಗದಲ್ಲಿರುವ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಬಾಡ ಎಂಬ ಗ್ರಾಮವಾಗಿದೆ. ಕರ್ನಾಟಕ ಘನ ಸರ್ಕಾರವು ಪ್ರತಿ ವರ್ಷ ಕನಕಜಯಂತಿಯ ನಿಮಿತ್ತ ಸಾರ್ವತ್ರಿಕ ರಜೆ ಘೋಷಿಸಿದೆ.

ಬಾಡ ಗ್ರಾಮಕ್ಕೆ ಹೋಗಬೇಕಾದರೆ ಬಂಕಾಪುರದಿಂದ ಹೋಗಬೇಕು. ’ಕನಕ ಬಾಡ’ ಎಂದೇ ಪ್ರಸಿದ್ಧಿಯನ್ನು ಪಡೆದ ಈ ಗ್ರಾಮ ಪ್ರವಾಸಿಗರನ್ನು ಆಕರ್ಷಿಸುತ್ತದೆ.

 

ಶ್ರೀ ಗಾಯತ್ರಿ ತಪೋಭೂಮಿ, ತಡಸ

ಜಿಲ್ಲಾ ಕೇಂದ್ರದಿಂದ ದೂರ : ೫೦ ಕಿ.ಮೀ.
ತಾಲ್ಲೂಕು ಕೇಂದ್ರದಿಂದ ದೂರ: ೨೦ ಕಿ.ಮೀ.

ಶ್ರೀ ಗಾಯತ್ರಿ ತಪೋವನ

ಗಾಯತ್ರಿ ತಪೋಭೂಮಿಯ ಮಹಾಪುರುಷರಾದ ಶ್ರೀ ವಲ್ಲಭ ಚೈತನ್ಯ ಸದ್ಗುರುಗಳು ಮಹಾಮಂತ್ರವಾದ ಗಾಯತ್ರಿ ಮಂತ್ರದ ಅನುಷ್ಠಾನದ ಮಹತ್ವವನ್ನು ಇಡೀ ದೇಶಾದ್ಯಂತ ಜನರಿಗೆ ತಿಳಿಸಿಕೊಟ್ಟಿದ್ದಾರೆ.

ಭಕ್ತರ ವರದಾಯಿಯಾದ ವೇದಮಾತೆ ಎಂದು ವೇದದಲ್ಲಿ ವರ್ಣಿಸಲ್ಪಟ್ಟಿರುವ ಶ್ರೀ ಗಾಯತ್ರಿ ಮಾತೆಯ ಸುಂದರವಾದ ದೇವಸ್ಥಾನವನ್ನು ನಿರ್ಮಿಸಿ, ನಿತ್ಯ ತ್ರಿಕಾಲ ಪೂಜಾ, ಭಜನೆ, ಆರತಿಯಿಂದ ಆರಾಧಿಸಲ್ಪಡುವ ತೇಜಃಪುಂಜವಾದ ಶ್ರೀ ಗಾಯತ್ರಿ ಮಾತೆಯನ್ನು ಅತ್ಯಂತ ವೈಭವದಿಂದ ಶ್ರೇಷ್ಠ ವೈದಿಕ ವೃಂದದಿಂದ ಅನೇಕ ಮಹಾತ್ಮರ ಹಾಗೂ ಅಸಂಖ್ಯಾತ ಭಕ್ತಜನರ ಜೈಕಾರದ ಮಧ್ಯೆ ೨೦೦೦ ನೇ ಇಸ್ವಿ ಫೆಬ್ರುವರಿಯಲ್ಲಿ ಸ್ಠಾಪನೆ ಮಾಡಿದರು. ಶ್ರೀ ಗಾಯತ್ರಿ ಮಾತೆಯ ಮೂರ್ತಿಯೊಂದಿಗೆ, ಶ್ರೀ ಗಣೇಶ, ಶ್ರೀ ಸುಬ್ರಮಣ್ಯ, ಶ್ರೀ ಅನ್ನಪೂರ್ಣೇಶ್ವರಿ ದೇವತೆಗಳ ಮೂರ್ತಿಗಳನ್ನೂ ಸ್ಢಾಪಿಸಲಾಗಿದೆ. ದೇಶದ ಎಲ್ಲಾ ಕಡೆಗಳಿಂದ ಭಕ್ತ ಜನರು ಬಂದು ದೇವತೆಯ ಕೃಪಾಶೀರ್ವಾದಕ್ಕೆ ಪಾತ್ರರಾಗುತ್ತಿದ್ದಾರೆ.