ನಾಸಿಕ್ ಜಿಲ್ಲೆಯ ಮಾಲೆಗಾಂವ್‌ನಲ್ಲಿ ಒಬ್ಬ ಡಾಕ್ಟರಿದ್ದರು. ಶಸ್ತ್ರ ಚಿಕಿತ್ಸಾ ನಿಪುಣರು. ಹಸ್ತಗುಣ ಒಳ್ಳೆಯದೆಂಬ ಕೀರ್ತಿಯೂ ಇತ್ತು. ಒಮ್ಮೆ ಅವರ ಅಣ್ಣನ ಮಗ ಖಾಯಿಲೆ ಬಿದ್ದ. ಪರೀಕ್ಷೆಯಿಂದ ಅದು ಕ್ಯಾನ್ಸರ್ ಎಂದು ತಿಳಿಯಿತು. ಯಾವ ಚಿಕಿತ್ಸೆಗೂ ಬಗ್ಗಲಿಲ್ಲ. ಡಾಕ್ಟರು ಆಸೆ ಬಿಟ್ಟರು. ತಂದೆ ತಾಯಿ ದುಃಖಿತರಾದರು. ಎಲ್ಲಾ ದೇವರಿಗೂ ಹರಕೆ ಹೊತ್ತರು. ಹುಡುಗನ ಸ್ಥಿತಿ ದಿನ-ದಿನಕ್ಕೆ ಹದಗೆಟ್ಟಿತು. ಯಾರೋ, ’ಶಿರಡಿ ಸಾಯಿಬಾಬರಿಗೆ ಶರಣು ಹೋಗಿರಿ. ಅವರೊಬ್ಬರೇ ಮಗುವನ್ನು ಬದುಕಿಸಬಲ್ಲರು’ ಎಂದು ಹೇಳಿದರು. ತಾಯಿ ತಂದೆ ಮಗುವಿನೊಡನೆ ಶಿರಡಿಗೆ ಹೋದರು. ಬಾಬಾರ ಪಾದಗಳಲ್ಲಿ ಮಗುವನ್ನರಿಸಿ ಆರ್ತರಾಗಿ ಬೇಡಿಕೊಮಡರು. ಬಾಬಾರ ಹೃದಯ ಕರಗಿತು. “ಅಲ್ಲಾ ಮಾಲಿಕ್! ಇನ್ನು ನೀವು ನಿಶ್ಚಿಂತರಾಗಿರಿ. ಈ ಮಸೀದಿ ಸಾಮಾನ್ಯವಾದುದಲ್ಲ. ಇದು ದ್ವಾರಕಾಮಾಯಿ. ಈ ತಾಯಿಯ ಆಶ್ರಯಕ್ಕೆ ಬಂದವರಾರೂ ಎಂದಿಗೂ ನಿರಾಶರಾಗಿ ಹೋಗುವುದಿಲ್ಲ. ಇಗೋ ಈ ವಿಭೂತಿಯನ್ನು ಮಗುವಿನ ಮೈಗೆಲ್ಲ ಹಚ್ಚಿರಿ. ಅಲ್ಲಾ ಅಚ್ಛಾ ಕರೇಗಾ” ಎಂದರು. ಆ ತಾಯಿ ತಂದೆಯರಿಗೆ ಮತ್ತೆ ಚೈತನ್ಯ ಬಂದಂತಾಯಿತು. ಅವರು ಹೇಳಿದಂತೆ ಮಾಡಿದರು. ಆಶ್ಚರ್ಯ! ನಾಲ್ಕೇ ದಿನಗಳಲ್ಲಿ ಮಗುವಿಗೆ ಪೂರ್ಣ ಗುಣವಾಯಿತು. ಬಾಬಾರ ಅಪ್ಪಣೆ ಪಡೆದು ಹಿಂತಿರುಗಿದರು. ಈ ಸಂಗತಿ ಕೇಳಿದ ಡಾಕ್ಟರಿಗೆ ನಂಬಲು ಕಷ್ಟವಾಯಿತು. ಆದರೆ ಪರೀಕ್ಷೆ ಮಾಡಿದರೆ ರೋಗದ ಲವಲೇಶವೂ ಇಲ್ಲ!

ಇದೊಂದು ಶಿರಡಿ ಸಾಯಿ ಬಾಬಾರ ಪವಾಡ ವೃತ್ತಾಂತ. ಇಂತಹವು ಹಲವಾರಿವೆ. ಕೇಳಿದವರಿಗೆ ಇದು ಯಾವುದೋ ಪುರಾಣದ ಕತೆ, ಮೂಢನಂಬಿಕೆಯನ್ನು ಬೆಳೆಸುವ ಕತೆ ಎನಿಸಬಹುದು. ಆದರೆ ಸಾಯಿಭಕ್ತರು, ’ಇವು ಕತೆಗಳಲ್ಲ. ನಮ್ಮ ಸತ್ಯವಾದ ಅನುಭವಗಳು’ ಎನ್ನುತ್ತಾರೆ.

ಈ ಪವಾಡಗಳನ್ನು ಬದಿಗೆ ಸರಿಸಿ ನೋಡಿದರೆ ಬಾಬಾರ ಮಹಾನ್‌ವ್ಯಕ್ತಿತ್ವದ ಅರಿವಾಗುತ್ತದೆ. ಅವರು ವಾಸ್ತವವಾಗಿ ಹಣ, ಕೀರ್ತಿ, ಪ್ರತಿಷ್ಠೆ, ಪ್ರದರ್ಶನ ಯಾವುದನ್ನೂ ಬಯಸದ ವ್ಯಕ್ತಿ. ಅವರ ಶುದ್ಧವಾದ ಹೃದಯದಲ್ಲಿ ತುಂಬಿದ್ದುದು ಪ್ರೇಮ, ದಯೆ ಮಾತ್ರ. ಮಾನವರ ಬಗ್ಗೆ ಮಾತ್ರವಲ್ಲ ಸಕಲ ಜೀವಿಗಳ ಬಗ್ಗೆ ಒಂದೇ ಬಗೆಯ ಪ್ರೀತಿ. ನೊಂದವರ ಬಗ್ಗೆ ಅಪಾರ ಕರುಣೆ.

ಪರಕೀಯ ದಾಸ್ಯದಲ್ಲಿ ಸಿಲುಕಿ ಭಾರತ ಆತ್ಮಾಭಿಮಾನ, ಆತ್ಮ ವಿಕಾಸಗಳನ್ನು ಕಳೆದುಕೊಂಡಿದ್ದ ಕಾಲದಲ್ಲಿ ಅದರ ಆಧ್ಯಾತ್ಮ ಸತ್ವದ ನೆನಪು ಮಾಡಿಕೊಟ್ಟು ನವಜಾಗೃತಿಯನ್ನುಂಟು ಮಾಡಿದ ಮಹಾಪುರಷರಲ್ಲಿ ಮುಖ್ಯರಾದವರು ಶ್ರೀ ರಾಮಕೃಷ್ಣ ಪರಮಹಂಸರು ಮತ್ತು ಶಿರಡಿಯ ಶ್ರೀ ಸಾಯಿಬಾಬಾ. ಇಬ್ಬರೂ ’ಅವತಾರ ಪುರುಷರು, ಸರ್ವಧರ್ಮ ಸಮನ್ವಯಾಚಾರ್ಯರು’ ಎಂದು ಪ್ರಸಿದ್ಧರಾಗಿದ್ದಾರೆ.

ಯಾರೀತ?

ಶ್ರೀ ಸಾಯಿಬಾಬಾ ಮೊಟ್ಟಮೊದಲು ಲೋಕಕ್ಕೆ ಪ್ರಕಟವಾದದ್ದು ಕ್ರಿ.ಶ. ೧೮೫೦ರ‍ಲ್ಲಿ. ಶಿರಡಿಯಲ್ಲಿ. ಆಗ ಅವರಿಗೆ ಸಾಯಿಬಾಬಾ ಎಂಬ ಹೆಸರು ಇರಲಿಲ್ಲ. ಯಾವ ಹೆಸರೂ ಇರಲಿಲ್ಲ.

ಶಿರಡಿ ಅಹ್ಮದ್‌ನಗರ ಜಿಲ್ಲೆಯ ಒಂದು ಸಣ್ಣ ಹಳ್ಳಿ. ಕೊಪರ್‌ಗಾಂವ್ ಸ್ಟೇಷನ್ನಿನ ಎಂಟು ಮೈಲಿ ದೂರ. ಒಂದು ಬೆಳಗು ಮಸೀದಿ ಬಳಿಯ ಬೇವಿನ ಮರದ ಕೆಳಗೆ ೧೨ ವರ್ಷದ ಬಾಲಕನೊಬ್ಬ ಧ್ಯಾನಸ್ಥನಾಗಿ ಕೂತಿದ್ದ. ಒಳ್ಳೆ ಸ್ಫುರದ್ರೂಪಿ, ತೇಜಸ್ವಿ. ’ಯಾರೀತ?’ ಎಂದು ಶಿರಡಿಯ ಜನ ಕುತೂಹಲಗೊಂಡರು. ಹಗಲಿರುಳೆನ್ನದೇ ಅಲ್ಲೇ ಕೂತಿರುತ್ತಿದ್ದ. ಯಾರೊಂದಿಗೂ ಮಾತಿಲ್ಲ. ಊರ ದೇವರು ಖಂಡೋಬನ ಹೇಳಿಕೆಯಾಯಿತಂತೆ. ಅದರಂತೆ ಬೇವಿನ ಮರದ ಕೆಳಗೆ ಅಗೆದರು. ಅಡ್ಡ ಇದ್ದ ಚಪ್ಪಡಿ ಕಲ್ಲು ತೆಗೆದರು. ಕೆಳಗೆ ಚೊಕ್ಕಟವಾಗಿರಿಸಿದ್ದ ಒಂದು ಒಂದು ನೆಲಮನೆ. ಧ್ಯಾನಕ್ಕಿಟ್ಟ ಆಸನ. ಪಕ್ಕದಲ್ಲಿ ಗೋಮುಖ, ಜಪಮಣಿ, ನಾಲ್ಕೂ ಕಡೆ ಪ್ರಶಾಂತವಾಗಿ ಉರಿಯುತ್ತಿದ್ದ ದೀಪಗಳು. ಬಾಲಕ ಅದು ತನ್ನ ಗುರುವಿನ ಸಮಾಧಿ ಎಂದ. ಕೆಲವು ದಿನಗಳಲ್ಲಿ ಆ ಹುಡುಗ ಕಾಣದಾದ. ಎಲ್ಲಿಗೆ ಹೋದನೋ?

ಶಿರಡಿಯಲ್ಲಿ ಈಗಲೂ ಆ ಬೇವಿನ ಮರ ಇದೆ. ಸಾಥೆ ಎಂಬ ಭಕ್ತರೊಬ್ಬರು ಅದನ್ನೊಳಗು ಮಾಡಿ ಒಂದು ಮಂಟಪ ಕಟ್ಟಿಸಿದ್ದಾರೆ. ಭಕ್ತರು ಗುರುವಾರ, ಶುಕ್ರವಾರ ನೆಲವನ್ನು ಸಾರಿಸಿ, ರಂಗವಲ್ಲಿಯಿಟ್ಟು, ಊದುಬತ್ತಿ ಹಚ್ಚಿ ಸೇವೆ ಮಾಡುತ್ತಾರೆ.

ಮತ್ತೆ ಕಾಣಿಸಿಕೊಂಡ

೧೮೫೪ರಲ್ಲಿ ಶಿರಡಿಗೆ ಮುಸಲ್ಮಾನರ ಮದುವೆ ದಿಬ್ಬಣವೊಂದು ಬಂತು. ಹೈದರಾಬಾದ್ ಸಂಸ್ಥಾನದ ಔರಂಗಾಬಾದ್ ಜಿಲ್ಲೆಯ ಧೂಪ್ ಖೇಡ್‌ಹಳ್ಳಿಯ ಪಾಟೀಲಚಾಂದ್ ಖಾನನೇ ದಿಬ್ಬಣದ ಯಜಮಾನ. ಮದುವೆ ಅವನ ಹೆಂಡತಿಯ ಸೋದರಳಿಯನದು. ಶಿರಡಿಯ ಹೆಣ್ಣು.

ಊರ ಹೊರಗೆ ಖಂಡೋಬನ ಗುಡಿಯೆದುರು ಬೀಗರೆಲ್ಲ ಗಾಡಿಗಳಿಂದಿಳಿದರು. ಅವರೊಂದಿಗೆ ಬಂದಿದ್ದ ತರುಣ ಫಕೀರನನ್ನು ನೋಡಿದ ಕೂಡಲೆ ಶಿರಡಿಯ ಜನ ಚಕಿತರಾದರು. ನಾಲ್ಕು ವರ್ಷಗಳ ಹಿಂದೆ ಬೇವಿನ ಮರದಡಿ ಕಂಡ ಬಾಲಕನೇ ಈತ ಎಂದು ನೆನಪಿಸಿಕೊಂಡರು. ಅದೇ ಆಕರ್ಷಕ ಮುಖ. ಅದೇ ತೇಜಸ್ಸು. ಈಗ ಬೆಳೆದಿದ್ದಾನೆ. ಒಳ್ಳೆ ಎತ್ತರವಾದ ಸದೃಢಕಾಯ. ಬಿಳಿಯ ನಿಲುವಂಗಿ ಹಾಕಿ ತಲೆಗೊಂದು ಬಟ್ಟೆ ಸುತ್ತಿದ್ದಾನೆ. ಕೈಯಲ್ಲಿ ಫಕೀರರು ಇಟ್ಟುಕೊಳ್ಳುವ ಸಟ್ಕಾ.

ಆತ ಖಂಡೋಬನ ಗುಡಿಯ ಕಡೆಗೆ ಧೀರ ಗಂಭೀರವಾಗಿ ನಡೆದು ಬರುತ್ತಿದ್ದಂತೆ ಎದುರುಗೊಂಡ ಭಗತ್ ಮಾಲ್ಯಾಪತಿ ತನಗರಿವಿಲ್ಲದಂತೆಯೇ ಅಕ್ಕರೆ ತುಂಬಿದ ದನಿಯಿಂದ, “ಯಾ, ಸಾಯೀ, ಯಾ, ಬಾಬಾ” ಎಂದು ಉದ್ಗರಿಸಿ ಸ್ವಾಗತಿಸಿದ. ತರುಣ ಫಕೀರನಿಗೆ ಅಂದಿನಿಂದ ಅದೇ ಹೆಸರಾಯಿತು. ’ಸಾಯಿ’ ಎಂದರೆ ’ಸಾಧು’ ಎಂದರ್ಥ. ’ಬಾಬಾ’ ಎಂದರೆ ’ತಂದೆ’.

ಮುಸಲ್ಮಾನರವನೆಂದು ಅರ್ಚಕರು ಆತನನ್ನು ಗುಡಿಯೊಳಗೆ ಬಿಡಲಿಲ್ಲ. ಮದುವೆಗೆ ಬಂದವರೆಲ್ಲರ ಎದುರು ಚಾಂದ್ ಪಾಟೀಲ್ ಆ ಫಕೀರನ ಗುಣಗಾನ ಮಾಡಿದ ಆತನನ್ನು ತಾನು ಮೊದಲು ಭೆಟ್ಟಿಯಾದ ಬಗೆಯನ್ನು ಸ್ವಾರಸ್ಯವಾಗಿ ಹೇಳಿದ- ಅದೇ ವರ್ಷದ ಮೊದಲು. ಔರಂಗಾಬಾದ್‌ಗೆ ಹೊರಟಾಗ ದಾರಿಯಲ್ಲಿ ಆತನ ಪ್ರೀತಿಯ ಕುದುರೆ ತಪ್ಪಿಸಿಕೊಂಡಿತಂತೆ. ಸುಮಾರು ಎರಡು ತಿಂಗಳ ಕಾಲ ಎಲ್ಲೆಲ್ಲಿ ಹುಡುಕಿದರೂ ಸಿಕ್ಕಲಿಲ್ಲ. ಧೂಪ್ ಬಳಿಯ ಕಾಡಿನಲ್ಲಿ ಸುತ್ತಿ ಸುತ್ತಿ ಸಾಕಾಗಿ ವಿಶ್ರಮಿಸಿಕೊಳ್ಳಲು ಹೋದಾಗ ಅಲ್ಲೊಂದು ಮಾವಿನ ಮರದ ಕೆಳಗೆ ಕುಳಿತಿದ್ದ ಹದಿನಾರರ ಪ್ರಾಯದ ಒಬ್ಬ ಫಕೀರನನ್ನು ಕಂಡ. ತನ್ನ ಪಾಡನ್ನು ತೋಡಿಕೊಂಡ. ’ಪಾಪ!’ ಎಂದು ಮರುಕ ತೋರಿದ ಫಕೀರ, “ನಿನ್ನ ಕುದುರೆ ಇಲ್ಲೇ ನಾಲೆಯ ಪಕ್ಕದಲ್ಲಿ ಮೇಯುತ್ತಿದೆ, ಹೋಗಿ ನೋಡು,” ಎನ್ನುತ್ತ ಆ ದಿಕ್ಕನ್ನು ತೋರಿಸಿದ. ಹೋಗಿ ನೋಡಿದಾಗ ನಾಲೆಯ ಬಳಿ ಕುದುರೆ ಸಿಕ್ಕಿತು. ಬಹು ಸಂತೋಷದಿಂದ ಕುದುರೆ ಸಮೇತ ಮತ್ತೆ ಫಕೀರನ ಬಳಿಗೆ ಬಂದ. ಭಕ್ತಿಯಿಂದ ನಮಸ್ಕರಿಸಿದ. ಫಕೀರ ಪ್ರೀತಿಯಿಂದ, “ಬಾ ವಿಶ್ರಮಿಸಿಕೊ. ಚಿಲುಮೆ ಸೇದಿ ಹೋಗುವಿಯಂತೆ,” ಎಂದ. ಚಿಲುಮೆ ಸೇದಲು ಬೆಂಕಿ, ಹಿಡಿಯುವ ವಸ್ತ್ರ

ನೆನೆಸಲು ನೀರು ಬೇಕಾಗಿದ್ದವು. ಫಕೀರ ಸಟ್ಕಾದಿಂದ ನೆಲವನ್ನು ಚುಚ್ಚಿದ. ಉರಿವ ಕೆಂಡ ಬಂತು. ಮತ್ತೊಮ್ಮೆ ಚುಚ್ಚಿದಾಗ ನೀರು ಚಿಮ್ಮಿತು. ಅದ್ಬುತ! ಈತನಾರೋ ಅಸಾಧಾರಣ ಸಿದ್ಧ ಪುರುಷ ಎಂದುಕೊಂಡ ಚಾಂದ್. ತನ್ನ ಮನೆಗೆ ಬರಬೇಕೆಂದು ಭಕ್ತಿಯಿಂದ ಆಹ್ವಾನಿಸಿ ಊರಿಗೆ ಹಿಂತಿರುಗಿದೆ.

 

’ಯಾ, ಸಾಯಿ, ಯಾ, ಬಾಬಾ

“ಶಿರಡಿಗೆ ಮದುವೆಗೆಂದು ಹೊರಟಿದ್ದೆವು. ಪ್ರಾರ್ಥಿಸಿ ಇವರನ್ನು ಜೊತೆಗೆ ಕರೆದುಕೊಂಡು ಬಂದೆ. ಇವರು ಸಾಮಾನ್ಯರಲ್ಲ. ಅಸಾಧಾರಣ ಮಹಿಮೆಯುಳ್ಳ ದಿವ್ಯಪುರುಷರು” ಎಂದು ಹೇಳುತ್ತಾ ಚಾಂದ್‌ಖಾನ್ ವೃತ್ತಾಂತವನ್ನು ಮುಗಿಸಿದ.

ಮದುವೆ ಮುಗಿದು ಹೈದರಾಬಾದ್ ಬೀಗರೆಲ್ಲ ಹಿಂದಕ್ಕೆ ಹೊರಟರು. ಫಕೀರ ಬಾಬಾ ಮಾತ್ರ ಶಿರಡಿಯಲ್ಲೇ ಉಳಿದರು. ಜನರೆಲ್ಲ ’ಸಾಯಿಬಾಬಾ’ ಎಂದೇ ಅವರನ್ನು ಕರೆಯತೊಡಗಿದರು. ಯಾರ ಬಾಯಲ್ಲಿ ಕೇಳಿದರೂ ’ಸಾಯಿಬಾಬಾ’ ಸುದ್ಧಿಯೇ.

ಶಿರಡಿಯಲ್ಲಿ ನೆಲೆಸಿದರು.

ಆದರೆ ಅವರು ಹುಟ್ಟಿದುದೆಲ್ಲಿ? ತಾಯಿ ತಂದೆ ಯಾರು? ಅವರೇನು ಮುಸಲ್ಮಾನರೋ ಹಿಂದುವೋ? ಎಂಬೀ ವಿಚಾರಗಳು ಯಾರಿಗೂ ಗೊತಿಲ್ಲ. ಆ ಬಗ್ಗೆ ಕೇಳಿದರೂ ಹೇಳುತ್ತಿರಲಿಲ್ಲ ಬಾಬಾ. ಅವರ ಮಾತು ಕತೆಗಳಲ್ಲಿ ಯಾವಾಗಲಾದರೂ ನುಸುಳುವ ಸೂಚನೆಗಳಿಂದ ಅವರು ಹೈದರಾಬಾದ್ ರಾಜ್ಯದಲ್ಲಿ ಪಾಥರಿ ಗ್ರಾಮದ ಭಾರದ್ವಾಜ ಗೋತ್ರದ ಬ್ರಾಹ್ಮಣ ಕುಟುಂಬದಲ್ಲಿ ೧೮೩೮ರಲ್ಲಿ ಜನಿಸಿದರು; ಮುಂದೆ ೧೬ ವರ್ಷ ಒಬ್ಬ ಫಕೀರನ ಪೋಷಣೆಯಲ್ಲಿ ಬೆಳೆದರು; ವೆಂಕೂಸಾ ಎಂಬ ಗುರುವಿನ ಮಾರ್ಗದರ್ಶನ ದೊರೆಯಿತು-ಹೀಗೆಂದು ಊಹೆ ಮಾಡಿದ್ದಾರೆ.

ಶಿರಡಿಯಲ್ಲಿ ನೆಲೆಸಿದಂದಿನಿಂದ ಬಾಬಾ ಅಲ್ಲಿನ ಒಂದು ಮುರುಕು ಮಸೀದಿಯಲ್ಲಿ ಇರತೊಡಗಿದರು. ಅದು ಅವರ ಗುರುವಿನ ಸಮಾಧಿಯಿದ್ದ ಬೇವಿನ ಮರಕ್ಕೆ ಸಮೀಪದಲ್ಲಿತ್ತು. ಬೆಳಿಗ್ಗೆ ಚಾವಡಿಯಲ್ಲೋ, ಮಾರುತಿ ಗುಡಿಯಲ್ಲೋ ದೇವಿದಾಸ, ಜಾನಕಿಗೋಸಾವಿ ಮುಂತಾದ ಸಾಧುಗಳೊಂದಿಗೆ ಪಾರಮಾರ್ಥ ವಿಚಾರ ಮಾತನಾಡುತ್ತ ಕೂಡುತ್ತಿದ್ದರು. ದೇವಿದಾಸ ಅವರಿಗೂ ಮುಂಚೆ ಶಿರಡಿಗೆ ಬಂದು ನೆಲೆಸಿದ್ದ ಬೈರಾಗಿ, ಜಾನಕಿಗೋಸಾವಿ ಆ ಮಾರ್ಗವಾಗಿ ಯಾತ್ರೆ ಹೋಗುತ್ತಿದ್ದವನು ಬಾಬಾರನ್ನು ನೋಡಿ ಆಕರ್ಷಿತನಾಗಿ ಅಲ್ಲೇ ನಿಂತವನು. ಬಾಬಾ ಈ ಇಬ್ಬರೊಂದಿಗೆ ತುಂಬಾ ಆತ್ಮೀಯರಾಗಿದ್ದರು.

ಪುಣತಾಂಬೇಕರ್ ಎಂಬ ವೀರವೈಷ್ಣವ, ಸದ್ಭಕ್ತ. ಆನಂದನಾಥ ಎಂಬ ಪ್ರಸಿದ್ಧ ಸಾಧು ಅಕ್ಕಲಕೋಟೆ ಸ್ವಾಮಿಗಳ ಶಿಷ್ಯ, ಇಂತಹವರೆಲ್ಲ ತರುಣ ಸಾಯಿಯನ್ನು ತುಂಬಾ ಗೌರವಿಸುತ್ತಿದ್ದರು. ಆದರೆ ಜನರಿಗೆ ಆಶ್ಚರ‍್ಯ, ಈ ವಿಚಿತ್ರ ಸ್ವಭಾವದ ಫಕೀರ ಅಂತಹ ಮಹಾತ್ಮನೇ ಎಂದು.

ಬಾಬಾ ಇರುತ್ತಿದ್ದುದೇ ಹಾಗೆ. ಅವರ ನಡೆ, ನುಡಿ ಕೆಲವು ಬಾರಿ ವಿಲಕ್ಷಣವಾಗಿರುತ್ತಿದ್ದವು. ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಆಡಿದರೆ ನಿರ್ದಾಕ್ಷಿಣ್ಯವಾದ, ನಿಷ್ಠುರವಾದ ಮಾತು. ಕೆಲವರನ್ನು ಎಷ್ಟೋ ಕಾಲದ ಬಂಧುಗಳೆಂಬಂತೆ ಪ್ರೀತಿಯಿಂದ ಮಾತನಾಡಿಸುವರು. ಇನ್ನು ಕೆಲವರನ್ನು ಬರುತ್ತಿದ್ದ ಹಾಗೆ “ಈ ಮಸೀದಿಯ ಕಟ್ಟೆ ಹತ್ತಬೇಡ,” ಎಂದು ಕೋಪದಿಂದ ಕೂಗಾಡಿ ಕೋಲೆತ್ತಿ ಬೆನ್ನಟ್ಟಿ ಓಡಿಸುವರು. ಆಗ ಜನ ಹುಚ್ಚ ಫಕೀರ ಎನ್ನುವರು. ಹಾಗೆ ಓಡಿಸಿದವರೂ ಜಗ್ಗದೆ ಮತ್ತೆ ಮತ್ತೆ ಬಂದು ದೀನರಾಗಿ ನಿಂತಾಗ ಬಾಬಾರ ಕರುಣೆ ಉಕ್ಕಿ ಹರಿದು ಅವರನ್ನು ಪ್ರೀತಿಯಿಂದ ಹತ್ತಿರ ಕರೆದು ಸಂತೈಸುವರು.

ಅವರ ಸರಳವಾದ ಜೀವನ, ಪ್ರೇಮಮಯಿ ಹೃದಯ ಪಾರಮಾರ್ಥಿಕ ಹಿತವಚನ ಅನೇಕ ಸಾತ್ವಿಕರನ್ನು ಆಕರ್ಷಿಸಿದವು. ಅವರ ನಡೆ-ನುಡಿಗಳಲ್ಲಿ ನಿಜವಾದ ವೈರಾಗ್ಯವೇ ಕಾಣುತ್ತಿತ್ತು. ಅವರ ಮನಸ್ಸು ಸದಾಸಂತುಷ್ಟರಾಗಿ ವಿಕಾರ ರಹಿತವಾಗಿ ಇರುತ್ತಿತ್ತು.

ಮೊದಲು ಅವರು ಅದ್ಭುತ ಪವಾಡ ಪುರುಷರು ಎಂದು ಪ್ರಸಿದ್ಧರಾದರು. ಅದ್ಭುತ ಪ್ರಸಂಗಗಳ ಕಥನ ಊರಿದಂದೊರಿಗೆ ಪ್ರಸಾರವಾದವು. ಅವರಕೃಪೆಯಿಂದ ಎಲ್ಲ ಕಷ್ಟ್ಗಳೂ ದೂರವಾಗುತ್ತವೆ ಎಂಬ ನಂಬಿಕೆ ಹಬ್ಬಿತು. ಸಂಕಟದಲ್ಲಿ ಸಿಕ್ಕವರೂ, ರೋಗಿಗಳೂ, ಹತಾಶರಾದವರೂ, ಶಿರಡಿಗೆ ಬರುವುದು ಹೆಚ್ಚಾಯಿತು.

ಅಂತರಂಗ ಶುದ್ಧಿ ಮುಖ್ಯ

ಬಂದವರನ್ನು ಸಾಮಾನ್ಯವಾಗಿ ಬಾಬಾ ಪ್ರೀತಿಯಿಂದ ನೋಡುವರು. ಮಾತನಾಡಿಸುವರು. ಮಾತು ಮಾತಿಗೆ ’ಅಲ್ಲಾ ಮಾಲಿಕ್’ ಎಂದು ಜಪಿಸುವ ಅವರು, ತಮ್ಮ ಕಷ್ಟವನ್ನು ತೋಡಿಕೊಂಡು ಆರ್ತರಾಗಿ ಬೇಡುವವರ ಬಗ್ಗೆ, ಮನಕರಗಿ ’ಅಲ್ಲಾ ಭಲಾ ಕರೇಗಾ’ ಎಂದು ಆಕಾಶದತ್ತ ದಿಟ್ಟಿಸಿ ನೋಡುತ್ತ ಅಭಯ ಹಸವನ್ನೆತ್ತಿ ಹರಸುವರು. ವಿಭೂತಿ ಪ್ರಸಾದವನ್ನು ಕೊಡುವರು. ಅವರ ನುಡಿಗಳಲ್ಲಿ ಹತಾಶವಾದ ಹೃದಯದಲ್ಲಿ ಚೈತನ್ಯವುಂಟು ಮಾಡುವ ಅಸಾಧಾರಣ ಶಕ್ತಿಯಿತ್ತು.

ಜಾತಿ, ವರ್ಗ ಬೇಧವಿಲ್ಲದೆ ಎಲ್ಲ ಜನರೂ ಇವರ ಬಳಿಗೆ ಬರುವರು. ಎಲ್ಲರೂ ಒಂದಾಗಿ ಭಕ್ತಿಯಿಂದ ಪೂಜೆ, ಭಜನೆಗಳಲ್ಲಿ ಭಾಗವಹಿಸುವರು. ಬಾಬಾರನ್ನು ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕು ಎಂದೆನಿಸುವುದು ಅವರಿಗೆ. ನಿಯತವಾಗಿಯಲ್ಲವಾದರೂ ಒಮ್ಮೊಮ್ಮೆ ಬಾಬಾ ತಾವೂ ನಮಾಜಿನಲ್ಲಿ ಸೇರಿಕೊಳ್ಳುವರು. ಸಂಜೆ ಭಕ್ತರನ್ನೆಲ್ಲ ಕೂಡಿಸಿಕೊಂಡು ಭಜನೆ ಮಾಡಿಸುವರು. ಭಕ್ತಿಪರವಶರಾಗಿ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಆನಂದವಾಗಿ ಕುಣಿಯುವರು. ಮುಸಲ್ಮಾನ್ ಭಕ್ತರು ತಮ್ಮ ಹಬ್ಬಗಳಲ್ಲಿ ಬಾಬಾರ ಹೆಸರಿನಲ್ಲಿ ಬಡಬಗ್ಗರಿಗೆ ಅನ್ನದಾನ ವಸ್ತ್ರದಾನ ಮಾಡುತ್ತಿದ್ದರು. ರಾಮನವಮಿ, ಗೋಕುಲಾಷ್ಟಮಿ, ಶಿವರಾತ್ರಿ, ನವರಾತ್ರಿ ಹಬ್ಬಗಳಲ್ಲಿ ಎಲ್ಲರೂ ಸೇರಿ ಪೂಜೆ, ಭಜನೆ, ಅನ್ನ ಸಂತರ್ಪಣೆ ನಡೆಸುತ್ತಿದ್ದರು. ಭಕ್ತರಲ್ಲಿ ಸಿರಿವಂತರು ಬಡವರು, ಮೇಲು-ಕೀಳು, ಆ ಜಾತಿ, ಈ ಜಾತಿ ಎಂಬ ಯಾವ ಭೇದ ಭಾವನೆಯೂ ಬರದಂತೆ ಬಾಬಾ ನಡೆಸಿ ಕೊಳ್ಳುತ್ತಿದ್ದರು. ಭಕ್ತಿ, ಅಂತರಂಗ ಶುದ್ಧಿ, ಸದಾಚಾರ ಇದೇ ಮುಖ್ಯ ಎಂದು ಮನವರಿಕೆ ಮಾಡುತ್ತಿದ್ದರು.

ಮಸೀದಿಯೊಳಗೆ ಹೋಮಕುಂಡದಂತಹ ಒಂದು ಧುನಿಯನ್ನು ಸದಾ ಉರಿಸುತ್ತಿದ್ದರು. ಅದರಿಂದ ತೆಗೆದ ಭಸ್ಮವನ್ನೇ ಬಾಬಾ ಪ್ರಸಾದವೆಂದು ವಿಭೂತಿ ಕೊಡುತ್ತಿದ್ದರು ಎಂಥಾ ರೋಗವಾಗಲಿ, ಸಂಕಟವಾಗಲಿ ಅದರಿಂದ ಕ್ಷಣ ಮಾತ್ರದಲ್ಲಿ ಪರಿಹಾರವಾಗುವುದು ಎಂಬ ನಂಬಿಕೆ ಸಾಯಿ ಭಕ್ತರಲ್ಲಿ ಇದೆ. ವಿಭೂತಿ ಮಹಿಮೆಯ ಅನೇಕ ಕತೆಗಳು ಪ್ರಚಲಿತವಾಗಿವೆ. ಮಸೀದಿಯ ಮುಂದಿನ ಅಂಗಳದಲ್ಲಿ ಒಂದು ತುಲಸೀ ಬೃಂದಾವನವನ್ನೂ ಬಾಬಾ ಹಾಕಿಸಿದರು.

ದಿನಚರಿ

ಬಾಬಾ ಬೆಳಗಿನ ಜಾವ ಐದು ಗಂಟೆಗೆ ಏಳುವರು. ಪ್ರಾತರ್ವಿಧಿಗಳಾದ ಮೇಲೆ ಒಂದು ತಾಸು ಧುನಿಯೆದುರು ಕೂತು ಧ್ಯಾನ ಮಾಡುವರು. ಅನಂತರ ಚಾವಡಿಯಲ್ಲೋ, ಮಾರುತಿ ಗುಡಿಯಲ್ಲೋ ಸಾಧುಗಳೊಂದಿಗೆ ಮಾತುಕತೆ. ಬಿಸಿಲೇರುತ್ತಿದ್ದಂತೆ ನಾಲ್ಕಾರು ಮನೆಗಳಿಗೆ ಮಾತ್ರ ಹೋಗಿ ಭಿಕ್ಷೆ ಬೇಡುವರು. ನೀಡಿದ ಆಹಾರವನ್ನೆಲ್ಲ ತಂದು, ಮನುಷ್ಯರಾಗಲಿ, ಪಶುಪಕ್ಷಿಗಳಾಗಲಿ, ಹಸಿದು ಬಂದವರೆಲ್ಲರಿಗೂ ಹಂಚಿ, ಉಳಿದುದರಲ್ಲಿ ಕೊಂಚ ತಾವೂ ಸಂತೋಷದಿಂದ ಉಂಡು ತೃಪ್ತಿ ಪಡುವರು. ಕೆಲವು ಸಲ ಎಲ್ಲವನ್ನೂ ಕೊಟ್ಟು ತಾವು ಬರೀ ನೀರು ಕುಡಿದು ಸಂತೃಪ್ತರಾಗುವರು. ಶುದ್ಧ ಶಾಕಾಹಾರಿಗಳಾಗಿದ್ದರೇ ವಿನಾ ಊಟದಲ್ಲಿ ರುಚಿಗೆ ಗಮನ ಕೊಡುತ್ತಿರಲಿಲ್ಲ. ಊಟದ ನಂತರ ನೋಡಲು ಬಂದ ಭಕ್ತರ ಕಷ್ಟ ಸುಖ ಕೇಳುತ್ತ ಹಿತವಚನ, ಸಂತೈಕೆಯ ಮಾತು ಹೇಳಿ ಧೈರ‍್ಯ ಕೊಡವರು. ಆಗ ಎಲ್ಲರಿಗೂ ಸಮಾಧಾನ, ಆನಂದ ಉಂಟಾಗುವುವು. ರೋಗಿಗಳಿಗೆ ಔಷಧಿ ಕೊಡುವರು. ಕೆಲವು ಸಲ ಅತ್ಯಂತ ಸಹಾನುಭೂತಿಯಿಂದ ತಾವೇ ಕೈಯಾರ ಶುಶ್ರೂಷೆ ಮಾಡುವರು. ಕುಷ್ಠರೋಗಿಯೊಬ್ಬನ ವ್ರಣಗಳಿಗೆ ಅಸಹ್ಯ ಪಡದೇ ತಾವೇ ಔಷಧಿ ಲೇಪಿಸಿದ್ದು ಉಂಟು. ಇದಾದ ಬಳಿಕ ತಾವೇ ಶ್ರಮವಹಿಸಿ ಮಾಡಿದ್ದ ಉದ್ಯಾನವನದಲ್ಲಿ, ಬಿಂದಿಗೆಯಲ್ಲಿ ನೀರು ಹೊತ್ತು ತಂದು ಗಿಡಗಳಿಗೆ ಎರೆಯುವರು. ರಮ್ಯವಾದ ಈ ತೋಟ, ಲೇಂಡಿಬಾಗ್, ಶಿರಡಿಯಲ್ಲಿ ಈಗಲೂ ಹಾಗೇ ಪ್ರಶಾಂತವಾಗಿ ಕಂಗೊಳಿಸುತ್ತಿದೆ. ಸಂಜೆ ಯಥಾಪ್ರಕಾರ ಭಜನೆ.

ಬಾಬಾರ ಉಡುಗೆ ಬಹು ಸರಳ, ಉದ್ದವಾದ, ಕಪನಿ, ತೇಪೆ ಹಾಕಿದ ಚಿಂದಿ ಬಟ್ಟೆಯದು. ಅವರು ತಲೆಯ ಕೂದಲನ್ನೆಂದೂ ತೆಗೆಸಲಿಲ್ಲ. ಕೂದಲು ಸ್ವಲ್ಪವೂ ಕಾಣದಂತೆ ಬಟ್ಟೆಯನ್ನು ಸುತ್ತಿ ಓರೆಗೆ ಗಂಟು ಹಾಕುತ್ತಿದ್ದರು. ಒಂದು ಜೋಳಿಗೆ, ಡಬ್ಬಿ, ಮಲಗಲು ಒಂದು ಗೋಣಿ ತಾಟು, ನೀರಿಗೆ ಎರಡು ಮಣ್ಣಿನ ಮಡಕೆ, ಒಂದು ಲೋಟಾ, ಫಕೀರರ ಸಟ್ಕಾ (ಒಂದು ತುದಿಯಲ್ಲಿ ಬಳೆ ಇರುವ ಕಬ್ಬಿಣದ ಇಕ್ಕಳ), ಮತ್ತು ಒಂದು ತಂಬಾಕು ಸೇದುವ ಚಿಲುಮಿ. ನಾನಾ ಸಾಹೇಬ್ ಡೇಂಗಳೆ ಎಂಬ ಭಕ್ತರು ಬಾಬಾ ನೆಲದ ಮೇಲೆ ಮಲಗುವುದನ್ನು ನೋಡಲಾರದೆ, ತೂಗುಮಂಚವಾಗಿ ಬಳಸುವಂತಹ ಒಂದು ಮರದ ಹಲಗೆ ಕೊಟ್ಟಿದ್ದರು.ಇಷ್ಟೇ ಅವರ ಆಸ್ತಿ. ಅನವಶ್ಯಕವಾದ ಯಾವ ವಸ್ತುವನ್ನೂ ಅವರು ಸಂಗ್ರಹಿಸಿ ಇಡುತ್ತಿರಲಿಲ್ಲ. ಅನವಶ್ಯಕವಾದ ಅರ್ಥವಿಲ್ಲದ ಮಾತೂ ಆಡುತ್ತಿರಲಿಲ್ಲ.

ಭಕ್ತಗಣ

ಬಾಬಾರ ಅಪರೋಕ್ಷ ಜ್ಞಾನ, ಮಹಿಮೆಗಳ ವಿಚಾರ ಕೇಳಿ ದೂರ ದೂರಗಳಿಂದ, ಮುಂಬಯಿ, ಪುಣೆ ಮುಂತಾದ ನಗರಗಳಿಂದ ವಿದ್ಯವಾಂತರು, ವಿಚಾರವಂತರು, ಒಳ್ಳೆಯ ಅಧಿಕಾರ ಸ್ಥಾನದಲ್ಲಿದ್ದವರೂ ಬಂದು ಅವರ ಅಪೂರ್ವ ವ್ಯಕ್ತಿತ್ವಕ್ಕೆ, ದಿವ್ಯ ನುಡಿಗಳಿಗೆ ಮಾರುಹೋಗಿ ಭಕ್ತರಾಗತೊಡಗಿದರು. ಅವರ ನೆಚ್ಚಿನ ಶಿಷ್ಯರಾಗಬೇಕಾದವರು ಒಬ್ಬೊಬ್ಬರಾಗಿ ಬಂದು ಸೇರತೊಡಗಿದರು. “ನನ್ನವರು ಎಲ್ಲೇ ಇರಲಿ, ಎಷ್ಟು ದೂರದಲ್ಲೇ ಇರಲಿ ಹಕ್ಕಿಯ ಕಾಲಿಗೆ ದಾರ ಕಟ್ಟಿ ಎಳೆಯುವಂತೆ ಅವರನ್ನು ನನ್ನ ಬಳಿಗೆ ಬರಮಾಡಿಕೊಳ್ಳುತ್ತೇನೆ” ಎಂದು ಬಾಬಾ ಯಾವಾಗಲೂ ಹೇಳುತ್ತಿದ್ದರು. ಕೆಲವರನ್ನು ಕುರಿತಂತೂ, “ನಮ್ಮ ನಿಮ್ಮ ಸಂಬಂಧ ಇಂದಿನದಲ್ಲ; ಜನ್ಮಾಂತರಗಳಿಂದ ಬೆಳದು ಬಂದದ್ದು” ಎಂದು ಆತ್ಮೀಯವಾಗಿ ಹೇಳುತ್ತಿದ್ದರು.

ಡೆಪ್ಯೂಟಿ ಕಲೆಕ್ಟರ್, ಮುಂಬೈಯ ನಾರಾಯಣ ರಾವ್ ಚಾಂದೋರ್ಕರ್ (ನಾನಾ), ಶಿರಡಿಯ ಶಾಲಾ ಶಿಕ್ಷಕ ಮಾಧವರಾವ್ ದೇಶಪಾಂಡೆ (ಶ್ಯಾಮ್) ಆಪ್ತ ಶಿಷ್ಯರಲ್ಲಿ ಅಗ್ರಗಣ್ಯರು. ಎರಡು ಬಾರಿ ಹೇಳಿ ಕಳಿಸಿದರೂ ಬರಲು ನಿರಾಕರಿಸಿದ ಚಾಂದೋರ್ಕರ್ ಮೂರನೇ ಬಾರಿ ಕರೆ ಬಂದಾಗ, ’ಇದ್ಯಾರು ಈ ಬಾಬಾ ಗುರುತಿಲ್ಲ ಪರಿಚಯವಿಲ್ಲ, ಏಕೆ ಹೇಳಿ ಕಳಿಸುತ್ತಿದ್ದಾರೆ?’ ಎಂದು ಬಂದರು. ಬಾಬಾರನ್ನು ಕೇಳಿಯೂ ಕೇಳಿದರು. ಅವರು “ಜಗತ್ತಿನಲ್ಲಿ ಎಷ್ಟು ಜನರಿಲ್ಲ. ಎಲ್ಲಬಿಟ್ಟು ನಿನ್ನನ್ನೇ ಏಕೆ ಬರ ಹೇಳಿದೆ? ನಿನಗೆ ನೆನಪಿಲ್ಲ. ನನಗಿದೆ. ನನ್ನ ನಿನ್ನ ಸಂಬಂಧ ಎಷ್ಟೋ ಜನ್ಮದ್ದು,” ಎಂದರು. ನಾನಾ, ಶ್ಯಾಮಾ ಬಾಬಾರ ಆಪ್ತ ಸ್ನೇಹಿತರಂತಿದ್ದರು. ಹೀಗೆಯೇ ಬಂದು ಆಪ್ತ ಶಿಷ್ಯರಾದ ಗಣಪತರಾವ್ ಸಹಸ್ರ ಬುದ್ಧಿ (ಪ್ರಸಿದ್ಧ ಕೀರ್ತನಕಾರ ದಾಸಗಣೂ) ೧೯೦೩ರಲ್ಲಿ ತಮ್ಮ ಪೊಲೀಸ್ ನೌಕರಿಗೆ ಶರಣು ಹೊಡದು, ಹರಿಕಥೆ ಮಾಡುತ್ತ ಬಾಬಾರ ಮಹಿಮೆ, ಸಂದೇಶಗಳನ್ನು ಸಾರಿದರು. ಅಣ್ಣಾ ಸಾಹೇಬ್ ದಾಚೊಲ್ಕರ್, ಶ್ರೀಮಂತ ಬಾಪೂ ಸಾಹೇಬ ಬವಟಿ, ರಾಧಾಕೃಷ್ಣಬಾಯಿ ಇವರೆಲ್ಲ ಅವರ ಆತ್ಮೀಯ ಭಕ್ತರು. ಮತ್ತೊಬ್ಬ ಭಕ್ತ ಅಬ್ದುಲ್ಲಾ ತಾರ್ಬೆಲ್ಲಾ ಊರಿನವನು. ಮೆಕ್ಕಾ ಯಾತ್ರೆಗೆ ಹೊರಡುವ ಫಕೀರರಿಗೆ ಶಿರಡಿಯ ಸಾಯಿಬಾಬಾ ಯಥೇಚ್ಛ ಧನಸಹಾಯ ಮಾಡುವರೆಂದು ಕೇಳಿ ಶಿರಡಿಗೆ ಬಂದ.

’ಭಕ್ತಿ, ಶ್ರದ್ಧೆ, ದಾನಬುದ್ಧಿ, ಕರ್ತವ್ಯ ನಿಷ್ಠೆ ಮುಖ್ಯ

ಮಸೀದಿಯ ಬಾಗಿಲಲ್ಲೇ ಬಾಬಾ ನಿಂತಿದ್ದರು. ಇಬ್ಬರ ಕಣ್ಣು ಸೇರಿದವು. ’ಇವರೇ ನನ್ನ ಗುರು’ ಎಂದೆನಿಸಿ ಅಬ್ದುಲ್ಲಾನ ಮೈ ರೋಮಾಂಚಿತವಾಯಿತು. ಇದು ನಡೆದದ್ದು ೧೯೧೩ರಲ್ಲಿ. ಆಗ ಆತ ಇನ್ನೂ ಅನುಭವವಿಲ್ಲದ ತರುಣ. “ಸಾಯಿ ಗುರುವಿನ ಕೃಪೆಯಿಂದ ನನ್ನ ಮನೋಧರ್ಮವೇ ಬದಲಿಸಿತು. ಇಸ್ಲಾಮ್ ಧರ್ಮವೇ ಶ್ರೇಷ್ಟವಾದದ್ದು, ಹಿಂದೂಗಳು ನಮ್ಮ ವೈರಿಗಳು ಎಂದು ಭಾವಿಸಿದ್ದೆ. ಬಾಬಾರೊಂದಿಗೆ ಮೂರು ವರ್ಷ ಇರುವುದರೊಳಗೆ ದ್ವೇಷವೆಲ್ಲ ಅಳಿದು ಹೋಗಿ ಹಿಂದೂಗಳ ಬಗ್ಗೆ ಸೋದರ ಭಾವನೆ ಉಂಟಾಯಿತು.” ಎಂದು ಈ ಎಲ್ಲ ಶಿಷ್ಯರಿಗೂ ಬಾಬಾ ಅದ್ಭುತವಾದ ಅನುಭವಗಳನ್ನು ಕೊಟ್ಟರೆಂದರು.

ಗುರುಕೃಪೆ ಮುಖ್ಯ

ಬಾಬಾ ಯಾರಿಗೂ ಉಪದೇಶ ಕೊಡಲಿಲ್ಲ. ಅವರದು ಪ್ರಾಯೋಗಿಕ ಆಧ್ಯಾತ್ಮ. ಅವರ ಭೆಟ್ಟಿಯಾದ ಪ್ರಥಮ ಕ್ಷಣದಿಂದಲೇ ಸೂಕ್ಷ್ಮವಾದ ಪ್ರಭಾವ ಅಂತರಂಗ ಪರಿವರ್ತನೆಗೆ ತೊಡಗುತ್ತಿತ್ತು. ’ನಿಮ್ಮೆಲ್ಲ ಭಾರವನ್ನೂ ನಾನು ವಹಿಸಿಕೊಂಡಿದ್ದೇನ. ಇನ್ನು ನಿಶ್ಚಿಂತರಾಗಿರಿ’ ಎಂದು ಭರವಸೆ ಕೊಡುತ್ತಿದ್ದರು. ಅಲ್ಲದೆ ಭಕ್ತರ ಜೀವನದ ಎಲ್ಲ ಆಗುಹೋಗುಗಳ ಸೂತ್ರಧಾರರೇ ಆಗುತ್ತಿದ್ದರು. ಅದರ ಅರ್ಥ ಅಹಂಕಾರವನ್ನು ಬಿಟ್ಟು ಗುರುವಿನಲ್ಲಿ ಸಂಪೂರ್ಣ ಶರಣಾಗತರಾಗಬೇಕು ಎಂದು; ’ನಿಷ್ಕ್ರಿಯರಾಗಿ ಸೋಮಾರಿಗಳಾಗಬೇಕು ಎಂಬುದಲ್ಲ. ಬಾಬಾ ಸ್ವತಃ ಹಾಗೆ ನಿರಹಂಭಾವದಿಂದ ಇದ್ದರು. “ನನ್ನದೇನಿದೆ ಎಲ್ಲಾ ಫಕೀರ ಹೇಳಿದಂತೆ ಮಾಡುತ್ತೇನೆ”; “ಪಕೀರ ಬೇಡವೆನ್ನುತ್ತಾನೆ ನಾನೇನೂ ಮಾಡಲಾರೆ”; “ನನ್ನ ಗುರು ಮಹಾ ಮಹಿಮಾಶಾಲಿ ಆತನ ಕೃಪೆಯಿಂದಲೇ ನಾನು ಸಂಕಲ್ಪಿಸಿದ್ದು ಆಗುತ್ತದೆ” ಎಂದು ಹೇಳಿ ತಮ್ಮ ಆರಾಧಕರ ಮನಸ್ಸನ್ನು ಭಗವಂತನ ಕಡೆ ತಿರುಗಿಸುವರು.

ಒಮ್ಮೆ ರಾಧಾಬಾಯಿ ಎಂಬ ಭಕ್ತೆ, ತುಂಬಾ ವಯಸ್ಸಾದವಳು, ’ಸಾಯಿ ಗುರುವಿನ ಉಪದೇಶ ದೊರಕದ ಹೊರತು ನೀರು ಸಹ ಕುಡಿಯುವುದಿಲ್ಲ’ ಎಂದು ಹಟ ಹಿಡಿದು ಕೂತಳು. ಬಾಬಾರಿಗೆ ಸುದ್ದಿ ಮುಟ್ಟಿತು. ಆಗ ಅವರು ಆಕೆಯನ್ನು ಕರೆಸಿ ಪ್ರೀತಿಯಿಂದ ಹತ್ತಿರ ಕೂರಿಸಿ, “ಏಕೆ ತಾಯೀ ಈ ಹಟ? ನಾನೋ ಬಡ ಬೈರಾಗಿ. ನನ್ನ ಗುರು ಕೃಪಾವಂತ. ಆದರೆ ನನಗೆಂದೂ ಉಪದೇಶ ನೀಡಲಿಲ್ಲ. ಎರಡೇ ದುಡ್ಡು ದಕ್ಷಿಣೆ ಮಾತ್ರ ಬೇಡಿದರು. ಧೈರ್ಯ ಎಂಬುದೊಂದು ದುಡ್ಡು. ನಿಷ್ಠೆ ಇನ್ನೊಂದು. ಧೈರ್ಯ ಕಳೆದುಕೊಂಡರೆ ಶಕ್ತಿ, ಯುಕ್ತಿ, ಉತ್ಸಾಹ ಎಲ್ಲ ಹೋಗಿ ದೈನ್ಯತೆ ಬರುತ್ತೆ. ಗುರು ಒಡ್ಡುವ ಪರೀಕ್ಷೆಯಲ್ಲೂ ಧೈರ್ಯ ಮಣಿಯಂತೆ ಹೊಳೆಯುತ್ತೆ. ಗುರುವಿನಲ್ಲಿ ಏಕಾಗ್ರ ನಿಷ್ಠೆ ಇದ್ದರೆ ಸಾಕು. ದೃಷ್ಟಿ ಮಾತ್ರದಿಂದಲೇ ಗುರು ರಕ್ಷಿಸುವನು,” ಎಂದರು. ರಾಧಾಬಾಯಿಯ ಕಣ್ಣು ತೆರೆಯಿತು.

ಸಾಯಿಯವರಿಗೆ ಆಡಂಬರ ಹಿಡಿಸುತ್ತಿರಲಿಲ್ಲ. ಒಮ್ಮೆ ಅವರ ನೆಚ್ಚಿನ ದಾಸಗಣೂ ಕೀರ್ತನಕ್ಕೆ ಹೊರಟ. ಆಗಿನ ಪದ್ಧತಿಯಂತೆ ಕಿಂಕಾಪಿನ ಅಂಗರೇಕು, ಜರತಾರಿ ಟೋಪಿ, ರೇಶಿಮೆ ಪಂಚೆ, ಪುಷ್ಪ ಮಾಲೆ ಧರಿಸಿ ಬಾಬಾರಿಗೆ ನಮಸ್ಕಾರ ಮಾಡಲು ಹೋದ. “ಒಳ್ಳೇ ಅಳಿಯ ದೇವರಂತೆ ಪೋಷಾಕು ಹಾಕಿದ್ದೀಯಲ್ಲ, ಎಲ್ಲಿಗೆ ಸವಾರಿ?” ಎಂದು ಕೇಳಿದರು ಬಾಬಾ.

“ಕೀರ್ತನಕ್ಕೆ ಬಾಬಾ”

“ಛೇ, ಕೀರ್ತನಕ್ಕೆ ಇಷ್ಟು ಪ್ರಯಾಸವೇಕೆ? ನಾರದರೇ ಕೀರ್ತನೆ ಆರಂಭಿಸಿದರು. ಅವರೆಂದೂ ಹೀಗೆ ವೇಷ ಧರಿಸಲಿಲ್ಲ. ಸಾದಾ ಪಂಚೆ, ವಲ್ಲಿ, ಕೈಯಲ್ಲಿ ತಾಳ, ಕೊರಳಲ್ಲಿ ತುಲಸೀ ಮಾಲೆ ಇಷ್ಟುಸಾಕು.”

ದಾಸಗಣೂ ನಾಚಿ ಕೂಡಲೆ ಹೋಗಿ ಉಡುಪನ್ನು ಬದಲಾಯಿಸಿದ.

ದಕ್ಷಿಣೆಯ ಹಣವನ್ನೆಲ್ಲ ಸಾಯಿ ತಮ್ಮ ಬಳಿಗೆ ಬರುವ ದೀನ ದರಿದ್ರರಿಗೆ ಧಾರಾಳವಾಗಿ ಹಂಚಿಬಿಡುತ್ತಿದ್ದರು. ಅಲ್ಲದೆ ದಿನದಿನದ ಬದುಕಿಗೂ ಕಷ್ಟವಾಗಿದ್ದ ನೆರೆಹೊರೆಯ ಕೆಲವರಿಗೆ ನಿತ್ಯನೇಮದಂತೆ ನಿಗದಿಯಾಗಿ ಇಷ್ಟಿಷ್ಟು ಅಂತ ಹಣಕೊಡುತ್ತಿದ್ದರು. ಆ ಮಾರ್ಗವಾಗಿ ಹಾದು ಹೋಗುವ ತೀರ್ಥಯಾತ್ರಿಕರಿಗಂತೂ ಹಣವನ್ನು ನೀರಿನಂತೆ ಹಂಚುತ್ತಿದ್ದರು. ಈ ಸುದ್ದಿ ಕೇಳಿ ಅನೇಕ ಯಾತ್ರಿಕರು ಈ ಆಸೆಯಿಂದಲೇ ಶಿರಡಿಗೆ ಬರುತ್ತಿದ್ದರು.

ಬಾಬಾರಿಗೆ ಮಕ್ಕಳು ಎಂದರೆ ತುಂಬಾ ಪ್ರೇಮ. ನಿತ್ಯ ಒಂದು ಹಿಂಡು ಹುಡುಗರು ಅವರ ಸುತ್ತ ಸೇರುವರು. ಬಾಬಾ ಕತೆ ಹೇಳಿ, ಹಾಡು ಕಲಿಸಿ, ತಮಾಷೆ ಮಾಡಿ ಅವರನ್ನು ಸಂತೋಷಗೊಳಿಸುವರು. ಅವರೂ ಪೀಡಿಸಿ, ಬಾಬಾರಿಂದ, ಬೈಸಿಕೊಂಡರೂ, ಮೊಂಡೊ ಹಿಡಿದು, ಚಿಲ್ಲರೆ ಕಾಸು ಇಸಿದುಕೊಂಡು ಓಡುತ್ತಿದ್ದರು.

ಯೋಗ್ಯತೆಗೆ ತಕ್ಕ ಮಾರ್ಗದರ್ಶನ

ಬಾಬಾ ತಮ್ಮ ಬಳಿಗೆ ಬಂದವರಿಗೆ ಅವರವರಗತ್ಯ ಯೋಗತ್ಯೆಗಳಿಗೆ ತಕ್ಕಂತೆ ಮಾರ್ಗದರ್ಶನ ನೀಡುತ್ತಿದ್ದರು. “ನನ್ನ ಉಗ್ರಾಣ ಸಮೃದ್ಧವಾಗಿದೆ. ಆದರೆ ಅವರವರ ಪಚನ ಶಕ್ತಿಗೆ ಅನುಗುಣವಾಗಿ ಬಡಿಸುವೆ” ಎನ್ನುತ್ತಿದ್ದರು.

ಒಂದು ಸಲ ಒಬ್ಬ ಭಾಗವತ ಆತುರಾತುರವಾಗಿ ಬಂದು, “ನೀವು ಬಹುಬೇಗ ಬ್ರಹ್ಮದರ್ಶನ ಮಾಡಿಸುತ್ತೀರೆಂದು ಕೇಳಿ ಬಂದಿದ್ದೇನೆ. ನನಗೆ ಬೇರೇನೂ ಬೇಡ. ಬ್ರಹ್ಮದರ್ಶನ ಮಾಡಿಸಿರಿ ಸಾಕು,” ಎಂದು ಕೈ ಮುಗಿದು ನಿಂತ. ಅವರು ನಗುತ್ತಾ “ಆಹಾ ಎಂತಹ ಆಸೆ! ಎಲ್ಲರೂ ಕೀರ್ತಿ, ಸಂಪತ್ತು ಕೇಳುತ್ತಾರೆ. ಬ್ರಹ್ಮಜ್ಞಾನವನ್ನು ಕೇಳುವ ನೀನೊಬ್ಬನಾದರೂ ಬಂದೆಯಲ್ಲ ಬಹಳ ಸಂತೋಷ. ಆಗಲಿ ಬ್ರಹ್ಮದರ್ಶನ ಮಾಡಿಸುತ್ತೇನೆ. ಕುಳಿತುಕೋ” ಎಂದರು. ಅವನಿಗೆ ಚೆನ್ನಾಗಿ ತಿಳಿಯುವಂತೆ ಒಬ್ಬ ಹುಡುಗನನ್ನು ಅವರಿವರಲ್ಲಿಗೆ ಐದು ರೂಪಾಯಿ ಸಾಲ ತರಲು ಓಡಾಡಿಸಿದರು. ಸಾಲ ಎಲ್ಲೂ ಹುಟ್ಟಲಿಲ್ಲ.ಅಷ್ಟು ಹಣ ಅತ್ಯಗತ್ಯವಾಗಿ ಕೂಡಲೇ ಬೇಕು ಎಂಬಂತೆ ಚಡಪಡಿಸಿದರು. ಈ ವಿಳಂಬವನ್ನು ಭಾಗವತ ಸಹಿಸದಾದ. ಜೇಬಿನಲ್ಲಿ ೨೫೦ ರೂಪಾಯಿಗಳಿದ್ದರೂ ಗುರುವಿಗೆ ತುರ್ತಾಗಿ ಹಣ ಏಕೆ ಬೇಕಾಗಿದೆಯೋ ಕೊಟ್ಟು ಬಿಡೋಣ ಎಂದೆನಿಸಲಿಲ್ಲ ಆತನಿಗೆ. “ಎಲ್ಲಿ ಮತ್ತೆ. ಜಾಗ್ರತೆ ಬ್ರಹ್ಮದರ್ಶನ ಮಾಡಿಸಿರಿ”, ಎಂದು ಅವಸರ ಪಡಿಸಿದ. ಆಗ ಅವರು, “ನಿನಗೆಂತಹ ಬ್ರಹ್ಮದರ್ಶನ? ಅದಕ್ಕಾಗಿ ಸರ್ವತ್ಯಾಗಕ್ಕೂ ಸಿದ್ಧರಾಗಿರಬೇಕು. ಲೋಭಿಯಾದ ನಿನಗೆ ನಿನ್ನ ಬ್ರಹ್ಮನು ನಿನ್ನ ಜೇಬಿನಲ್ಲೇ ಕೂತಿದ್ದಾನೆ. ನೋಡಿ ಸಂತೋಷಪಡು,” ಎಂದರು. ಆತ ದಿಗಿಲು ಬಿದ್ದು ಕಾಲಿಗೆರಗಿದ.

ವೈರಾಗ್ಯ ಮೂರ್ತಿಯಾಗಿದ್ದರೂ ಬಾಬಾ ಎಲ್ಲರಿಗೂ ಸಂನ್ಯಾಸಿಗಳಾಗಿರೆಂದು ಹೇಳಲಿ. “ದೇಹ ದಂಡಿಸಿದರೆ, ಮನೆ ಮಠ ಬಿಟ್ಟು ಓಡಿಹೋದರೆ ಸಂನ್ಯಾಸವುಂಟಾಗುವುದೇ? ಅಂತಹ ಸಂನ್ಯಾಸದಿಂದ ಪ್ರಯೋಜನವಿಲ್ಲ. ಭಕ್ತಿ, ಶ್ರದ್ಧೆ ದಾನಬುದ್ಧಿ, ಕರ್ತವ್ಯ ನಿಷ್ಠೆ ಇರುವ ವ್ಯಕ್ತಿ ಸಂಸಾರದಲ್ಲಿದ್ದೂ ಮುಕ್ತನಾಗುತ್ತಾನೆ,” ಎನ್ನುತ್ತಿದ್ದರು. ಕಠೋರವಾದ ವ್ರತ, ನಿಯಮಗಳನ್ನೂ, ಅರ್ಥವಿಲ್ಲದ ಸಂಪ್ರದಾಯಗಳನ್ನೂ ತಮಾಷೆ ಮಾಡುತ್ತಿದ್ದರು. ಬಾಬಾ ಎಂದೂ ಉಪವಾಸವಿರುತ್ತಿರಲಿಲ್ಲ. ಉಪವಾಸವಿರಲು ಇತರರನ್ನೂ ಬಿಡುತ್ತಿರಲಿಲ್ಲ. ಅತಿಯಾಗಿ ತಿನ್ನುವುದಾಗಲಿ, ಉಪವಾಸವಿರುವುದಾಗಲಿ ಎರಡೂ ಒಳ್ಳೆಯದಲ್ಲ, ಮಿತಾಹಾರಿಯಾಗಿರಬೇಕು ಮಿತಭಾಷಿಯಾಗಿರಬೇಕು ಎಂಬುದನ್ನು ತಮ್ಮ ಬಾಳಿನ ರೀತಿಯಿಂದಲೇ ತೋರಿಸುತ್ತಿದ್ದರು.

ಅನೇಕ ಭಕ್ತರು ಬಾಬಾರ ದರ್ಶನ, ಸೇವೆಗಳಿಗಾಗಿ ಶಿರಡಿಗೆ ಬಂದು ತಿಂಗಳು ಗಟ್ಟಲೆ ಇರುತ್ತಿದ್ದರು.ಇರಲಿಕ್ಕೆ ಅಡಿಗೆ ಮಾಡಿಕೊಳ್ಳಲಿಕ್ಕೆ ತಾವೇ ಎಲ್ಲಾದರೂ ಏರ್ಪಾಟು ಮಾಡಿಕೊಳ್ಳುತ್ತಿದ್ದರು. ಶ್ರೀಮತಿ ತರ್ಖಡ ಹೀಗೆ ಒಮ್ಮೆ ಬಂದು ಇರುತ್ತಿರುವಾಗ ಒಂದು ದಿನ ಅಡಿಗೆಯೆಲ್ಲ ಮಾಡಿ ಊಟಕ್ಕೆ ಕೂರಬೇಕು ಎನ್ನುವ ಸಮಯಕ್ಕೆ ಸರಿಯಾಗಿ ಬಾಗಿಲ ಬಳಿ ಹಸಿದ ನಾಯಿಯೊಂದು ಬಂದು ನಿಂತಿತ್ತು. ಆ ತಾಯಿ ಕನಿಕರಿಸಿ ರೊಟ್ಟಿಯನ್ನು ತೆಗೆದುಕೊಂಡು ಹೋಗಿ ಹಾಕಿದರು. ಆನಂತರ ತಾವು ಊಟ ಮಾಡಿ ಮಧ್ಯಾಹ್ನ ಸಾಯಿ ದರ್ಶನಕ್ಕೆ ಹೋದರು. ಅವರನ್ನು ನೋಡುತ್ತಲೇ ಬಾಬಾ, “ತಾಯೇ ಇಂದು ನನಗೆ ನೀನು ಕೊಟ್ಟ ರೊಟ್ಟಿ ಬಹಳ ರುಚಿಸಿತು. ತೃಪ್ತಿಯಾಯಿತು”, ಎಂದರು.

ಹಸಿದವರಿಗೆ ಅನ್ನ ಕೊಟ್ಟ ನಂತರ ಊಟ ಮಾಡುವವರಿಗೆ ಯಾವಾಗಲೂ ಕಲ್ಯಾಣ ಕಟ್ಟಿಟ್ಟದ್ದು ಎಂದೆನ್ನುತ್ತಿದ್ದರು.

ಬಾಬಾ ಅನುಗ್ರಹಿಸುತ್ತಿದ್ದ ರೀತಿಯೂ ವಿಚಿತ್ರವಾಗಿರುತ್ತಿತ್ತು. ಕೆಲವರಿಗೆ ದೂರ ಕೂಡಿಸಿ ಬಹುಕಾಲ ದರ್ಶನವನ್ನೇ ಕೊಡುತ್ತಿರಲಿಲ್ಲ. ಕೆಲವರನ್ನು ದೇಶಾಂತರಕ್ಕೆ ಕಳಿಸುವರು. ಕೆಲವರನ್ನು ಮಸೀದಿಯಲ್ಲಿರಿಸಿಕೊಂಡರೆ ಕೆಲವರನ್ನು ಹೊರಗೆ ವಿಠ್ಠಲನ ಗುಡಿಯಲ್ಲೋ, ಛತ್ರದಲ್ಲೋ ಇರಲು ಕಳಿಸುವರು. ಕೆಲವರನ್ನು ಏಕಾಂತದಲ್ಲಿ ಕುಳ್ಳಿರಿಸಿ ಗುರುಚರಿತ್ರೆಯನ್ನೋ, ಭಗವದ್ಗೀತೆಯನ್ನೋ ಅಥವಾ ಅಂತಹ ಯಾವುದಾದರೂ ಪವಿತ್ರವಾದ ಗ್ರಂಥವನ್ನೋ ಪಾರಾಯಣ ಮಾಡಿಸುವರು. ಒಬ್ಬರಿಗೆ ಬಂದ ಕೂಡಲೆ ಅಥವಾ ಕೆಲವು ದಿನಗಳಲ್ಲೇ ಕೃಪೆ ದೊರೆಯುವುದು. ಇನ್ನೊಬ್ಬರಿಗೆ ವರ್ಷಗಟ್ಟಲೆ ಕಾದರೂ ಫಲವಿಲ್ಲ. ’ಶಿರಡಿಗೆ ಹೋದೆ. ಸಾಯಿ ದರ್ಶನ ಸಿಕ್ಕಿತು. ಅವರೊಂದಿಗೆ ಮನಸಾರ ಮಾತಾಡಿದೆ. ಶಿರಡಿಯಲ್ಲಿ ಬೇಕಾದಷ್ಟು ದಿನ ಸ್ವಸ್ಥವಾಗಿ ಇದ್ದು ಬಂದೆ,’ ಎಂದು ಹೇಳಲು ಯಾರಿಗೂ ಸಾಧ್ಯವಿರಲಿಲ್ಲ.

ಪುಸ್ತಕ ಜ್ಞಾನಕ್ಕೆ ಎಷ್ಟೋ ಅಷ್ಟು ಬೆಲೆ

ಬಾಬಾ ಪುಸ್ತಕ ಜ್ಞಾನಕ್ಕೆ ಅಷ್ಟು ಬೆಲೆ ಕೊಡುತ್ತಿರಲಿಲ್ಲ. ಬಾಬಾ ಹೇಳುತ್ತಿದ್ದರು: ’ನೋಡು ಶ್ಯಾಮಾ ಪುಸ್ತಕ ಓದಿದ ಮಾತ್ರಕ್ಕೆ ಜ್ಞಾನ ಬರುತ್ತೆ ಎಂಬುದು ಶುದ್ಧ ತಪ್ಪು. ಆಧ್ಯಾತ್ಮದಲ್ಲೂ ಮೆಟ್ಟಿಲುಗಳಿವೆ. ಯೋಗ್ಯತೆ ಬೆಳೆದಂತೆ ಅವು ವಿದಿತವಾಗುತ್ತವೆ. ಒಂದೇ ಸಲಕ್ಕೆ ಉಪನಿಷತ್ತಿನ ಅಧ್ಯಯನಕ್ಕೆ ಹೊರಟರೆ ಅನರ್ಥವಾದೀತು.’ ಹೀಗೆಂದು ಸದ್ಗ್ರಂಥಗಳನ್ನು ಓದಲು ಬೇಡವೆಂದೇನೂ ಹೇಳುತ್ತಿರಲಿಲ್ಲ. ಅವರವರ ಅವಶ್ಯಕತೆ, ಮನೋವಿಕಾಸಗಳಿಗನುಗುಣವಾಗಿ ಶಿಷ್ಯರಿಗೆ, ’ಈ ಪುಸ್ತಕ ಓದು, ಪಾರಾಯಣ ಮಾಡು,ಇದು ಬೇಡ’ ಎಂದು ಸೂಚಿಸಿ ಮಾರ್ಗದರ್ಶನ ನೀಡುತ್ತಿದ್ದರು.

ಬಾಬಾ ಸ್ವತಃ ಯಾವ ಶಾಸ್ತ್ರವನ್ನಾಗಲಿ, ಗ್ರಂಥವನ್ನಾಗಲಿ ಓದುತ್ತಿರಲಿಲ್ಲ. ಒಮ್ಮೆ ನಾನಾ ಗುರುಗಳ ಕಾಲೊತ್ತುತ್ತ ಯಾವುದೋ ಶ್ಲೋಕವನ್ನು ಗುನಗುತ್ತಿದ್ದ. ಬಾಬಾ ಅದೇನಂದು ಕೇಳಿದರು. ಆತ ಅವರಿಗೇನು ಸಂಸ್ಕೃತ ಬರುತ್ತೆ ಎಂದುಕೊಂಡು, “ಯಾವುದೋ ಸಂಸ್ಕೃತ ಶ್ಲೋಕ.” ಎಂದ. “ಎಲ್ಲಿ ಅದೇನು? ಸ್ವಲ್ಪ ಗಟ್ಟಿಯಾಗಿ ಹೇಳು ಕೇಳೋಣ” ಎಂದಾಗ ಹೇಳಿದ. ಬಾಬಾ ಅದರ ಅರ್ಥ ಕೇಳಿದರು. ಆತ ತಾತ್ಪರ್ಯ ಹೇಳಲು, “ನಾನು ಕೇಳಿದ್ದು ತಾತ್ಪರ್ಯ ಅಲ್ಲ; ಪದ ಪದಗಳ ಅರ್ಥ ಮತ್ತು ವಿಶೇಷಾರ್ಥಗಳನ್ನ’ ಎನ್ನುತ್ತ ಒಂದೊಂದು ಪದದ ವಿಶಿಷ್ಟತೆಯ ಬಗ್ಗೆ, ಆ ಪದಪ್ರಯೋಗದ ಔಚಿತ್ಯದ ಬಗ್ಗೆ ಪ್ರಶ್ನೆಗಳನ್ನು ಹಾಕಿದರು. ಆತ ಕೊಟ್ಟ ವಿವರಣೆ ಹೇಗೆ ಸಮರ್ಪಕವಲ್ಲ ಎಂದು ತೋರಿಸಿ ತಾವೇ ಅತ್ಯಂತ ಪ್ರತಿಭಾ ಪೂರ್ಣವಾದ ವ್ಯಾಖ್ಯಾನ ಮಾಡಿ ಹೇಳಿದರು. ಆತನಿಗೆ ಪರಮಾಶ್ಚರ‍್ಯವಾಯಿತು. ಆಳವಾದ ಪಾಂಡಿತ್ಯ, ವಿಶೇಷವಾದ ಅಧ್ಯಯನವಿಲ್ಲದೆ ಅಂತಹ ಪರಿಸ್ಫುಟವಾದ ಅರ್ಥ ವಿವರಣೆ ಕೊಡುವುದು ಅಸಾಧ್ಯ.

ಈಶಾವಾಸ್ಯ ಉಪನಿಷತ್ತಿನ ಅಧ್ಯಯನ ಮಾಡುತ್ತಿದ್ದ ದಾಸಗಣೂವಿಗೆ ಒಂದು ಸಲ ಯಾವುದೋ ಶ್ಲೋಕದ ಭಾವಾರ್ಥ ಕ್ಲಿಷ್ಟವಾಗಿ ಕಂಡಿತು. ಪಂಡಿತರೊಂದಿಗೆ ಚರ್ಚಿಸಿದರೂ ಸಮಾಧಾನಕರವಾಗಿ ಮನವರಿಕೆಯಾಗಲಿಲ್ಲ. ಬಾಬಾರ ಬಳಿ ತನ್ನ ಸಮಸ್ಯೆಯನ್ನು ಹೇಳಿದ. ಬಾಬಾ ನಗುತ್ತಾ, “ಇದೆಂತಹಾ ಸಮಸ್ಯೆ ಬಿಡಪ್ಪಾ, ಈ ಶ್ಲೋಕದ ಅರ್ಥಸರಳವಾಗಿಯೇ ಇದೆ. ನೀನು ತಿರುಗಿ ಹೋಗುವಾಗ ಕಾಕಾನ ಮನೆ ಕೆಲಸದವಳ ಮಗಳು ನಿನ್ನೀ ಸಂದೇಹವನ್ನು ಪರಿಹಾರ ಮಾಡುವಳು. ಹೋಗು,” ಎಂದರು.

ಕಾಕಾ ಎಂದರೆ ಬಾಬಾರ ಪ್ರೇಮ ಭಕ್ತರಾಗಿದ್ದ ಭಾವೂ ಸಾಹೇಬ್ ದೀಕ್ಷಿತ್ ಮುಂಬಯಿಯ ಪರೇಲ್‌ನಲ್ಲಿದ್ದರು. ಬಾಬಾ ಸುಮ್ಮನೆ ಪರಿಹಾಸ್ಯ ಮಾಡುತ್ತಿದ್ದಾರೆ ಎಂದು ದಾಸಗಣೂ ತಿಳಿದರು. ಮಹಾಮಹಾ ಪಂಡಿತರಿಗೇ ಕಷ್ಟವಾದುದನ್ನು ಕೆಲಸದವಳ ಮಗಳು, ಅನಕ್ಷರಸ್ಥೆ, ಹೇಳಲು ಸಾಧ್ಯವೇ? ಎಂದುಕೊಂಡರು. ಆದರೆ ಪರೇಲಕ್ಕೆ ಹೋಗಿ ಕಾಕಾರ ಮನೆಯಲ್ಲಿ ಎರಡು ದಿನ ಇದ್ದಾಗ ಒಂದು ಮುಂಜಾನೆ ಅರೆನಿದ್ರೆಯಲ್ಲಿದ್ದ ಅವರ ಕಿವಿಗೆ ಮಧುರವಾದ ಹಾಡೊಂದು ಕೇಳಿಸಿತು. ಪೂರ್ಣ ಎಚ್ಚೆತ್ತು ಗಮನವಿಟ್ಟು ಕೇಳಿದರು. ಅದೊಂದು ಹಳ್ಳಿಯ ಪದ. ಅದರ ಅರ್ಥವನ್ನು ಗ್ರಹಿಸುತ್ತ ಈಶಾವಾಸ್ಯದ ಇವರಿಗೆ ಅರ್ಥವಾಗದ ಶ್ಲೋಕದ ಭಾವ ಸ್ಪಷ್ಟವಾಯಿತು. ಗಣೂ ಕೂಡಲೇ ಎದ್ದು ಹೋಗಿ ಹಾಡುತ್ತಿರುವವರಾದರೆಂದು ಕೇಳಿದರು.

ಅವಳು ಕಾಕಾರ ಮನೆಯ ಕೆಲಸದವಳ ಮಗಳೆಂದು ತಿಳಿಯಿತು. ಆಕೆಯನ್ನು ಹೋಗಿ ನೋಡಿದಾಗ ಒಂದು ಹಳೆಯ ಹರಕು ಸೀರೆ ಉಟ್ಟಿದ್ದಳು. ದಾಸಗಣೂ ಕಾಕಾರಿಗೆ ಹೇಳಿ ಅವಳಿಗೆ ಒಂದು ಹೊಸ ಚಂದದ ಸೀರೆಯನ್ನು ಇನಾಮಾಗಿ ಕೊಡಿಸಿದರು. ಮಾರನೇ ದಿನ ಹೊಸ ಸೀರೆಯುಟ್ಟು ಬಂದ ಆಕೆ ಹಿಂದಿನ ದಿನ ಇದ್ದಷ್ಟೇ ಸಂತೋಷದಿಂದ ಹಾಡುತ್ತಾ ಕೆಲಸ ಮಾಡಿದಳು. ಅದರ ಮಾರನೇ ದಿನ ಮತ್ತೆ ಹಳೆಯ ಚಿಂದೀ ಸೀರೆಯನ್ನು ಉಟ್ಟು ಬಂದಳು. ಹೊಸ ಸೀರೆ ಉಟ್ಟಾಗ ಹೆಚ್ಚಾಗದ ಸಂತೋಷವೇ ಆಗಲೂ ಇತ್ತು. ಆಕೆಯ ಮನೋಧರ್ಮ ಈಶಾವಾಸ್ಯ ಶ್ಲೋಕದ ವ್ಯಾಖ್ಯಾನವೇ ಆಗಿ ಕಂಡಿತು ದಾಸಗಣೂವಿಗೆ.

ಬಾಬಾರ ಕೀರ್ತಿಯನ್ನು ಕೇಳಿ ಬರುತ್ತಿದ್ದವರು ಕಷ್ಟದಲ್ಲಿರುವವರು ಮಾತ್ರವಲ್ಲ. ಭಕ್ತರು ಮಾತ್ರವಲ್ಲ, ಅಲ್ಲಿ ಚಮತ್ಕಾರಗಳು ನಡೆಯುವುದೆಂದು ಕೇಳಿ ಕುತೂಹಲದಿಂದ ನೋಡಲು ಬರುವರು. ಬಾಬಾ ಎಂತಹವರೆಂದು ಪರೀಕ್ಷೆ ಮಾಡಲು ಬರುವವರು ಇದ್ದರು. ಭಕ್ತರು ಯಾರು? ಕಪಟಿಗಳು ಯಾರು? ಎಂದು ಬಾಬಾರಿಗೆ ಗೊತ್ತಾಗಿ ಬಿಡುತ್ತಿತ್ತು.

೧೯೧೭ರಲ್ಲಿ ಬಾಲಗಂಗಾಧರ ತಿಲಕರು ಶಿರಡಿಗೆ ಬಂದು ಸಾಯಿಯವರನ್ನು ಭೆಟ್ಟಿಯಾಗಿ ಹೋದದ್ದು ಮುಂಬೈ ಪ್ರಾಂತದಲ್ಲೆಲ್ಲಾ ದೊಡ್ಡ ಸುದ್ದಿಯಾಯಿತು. ಕೆಲವು ಸರಕಾರಿ ಅಧಿಕಾರಿಗಳ ಗಮನವೂ ಇತ್ತ ಹರಿಯಿತು. ಬಾಬಾ ನೂರು, ಸಾವಿರ, ಲಕ್ಷಗಟ್ಟಲೆ ದಕ್ಷಿಣೆ ಕೇಳುತ್ತಾರೆ, ಬೊಂಬಾಯಿ, ಸೊಲ್ಲಾಪುರಗಳಿಂದ ಬರುವ ಶ್ರೀಮಂತರು ಅಲ್ಲಿಗೆ ಬಂದು ಹಣ ಸುರಿಯುತ್ತಾರೆ ಎಂಬ ವದಂತಿಗಳನ್ನು ಕೇಳಿ ವರಮಾನ ತೆರಿಗೆಯ ಅಧಿಕಾರಿಗಳು ಶಿರಡಿಗೆ ತನಿಖೆ ಮಾಡಲು ಬಂದರು. ಮಸೀದಿಯಲ್ಲಿ ಬಾಬಾ ಇದ್ದ ರೀತಿ, ಅವರ ದಿನಚರಿ, ಬಂದ ಸಣ್ಣ ಪುಟ್ಟ ದಕ್ಷಿಣೆಯ ಹಣವನ್ನೂ ಬಡವರ ಅಗತ್ಯಗಳಿಗೆ ಕೊಟ್ಟು ಏನನ್ನೂ ಉಳಿಸಿಕೊಳ್ಳದ ಅವರ ಧರ್ಮಬುದ್ಧಿ, ವೈರಾಗ್ಯಗಳನ್ನು ನೋಡಿ ಭಕ್ತಿಯಿಂದ ನಮಸ್ಕರಿಸಿ ಬಂದ ದಾರಿ ಹಿಡಿದರು.

ಎಚ್ಚರಿಕೆ

ಒಂದು ದಿನ ಇಬ್ಬರು ಮಹಮದೀಯ ಮಹಿಳೆಯರು ಬಾಬಾರ ದರ್ಶನಕ್ಕೆ ಬಂದರು. ಚಾಂದೋರ್ಕರ್ ಅಲ್ಲಿಂದೆದ್ದು ಹೊರಡಲನುವಾದರು. “ಪರವಾಗಿಲ್ಲ, ನೀನಿಲ್ಲೇ ಇರು” ಎಂದು ಬಾಬಾ ಕುಳ್ಳಿರಿಸಿದರು. ಅವರಿಬ್ಬರೂ ಮುಖದ ಪರದೆ ತೆಗೆದು ಬಾಗಿ ನಮಸ್ಕರಿಸಿದರು. ಕಿರಿಯವಳು ತುಂಬಾ ಚೆಲುವೆ. ಆಕೆಯ ರೂಪ ನೋಡಿ ಚಾಂದೋರ್ಕರರ ಮನಸ್ಸು ವಿಚಲಿತವಾಯಿತು. ಇನ್ನೊಂದು ಬಾರಿ ಆಕೆಯನ್ನು ನೋಡಬೇಕೆಂದು ಕೊಂಡರು. ತಕ್ಷಣ ಬಾಬಾ ಅವರ ತೊಡೆಗೆ ಮೆತ್ತಗೆ ಪೆಟ್ಟಿಕ್ಕಿದರು. ಆ ಯುವತಿಯರು ಹೋದ ಮೇಲೆ, “ನಾನಾ, ನಾನು ಏಕೆ ಹೊಡೆದೆನೆಂದು ತಿಳಿಯತೇ?” ಎಂದರು.

“ತಿಳಿಯಿತು ಸ್ವಾಮೀ, ನನಗೀಗ ಹಾಗೇಕೆ ಎನಿಸಿತು ಎಂದು ನಾಚಿಕೆಯಾಗುತ್ತೆ. ನನಗೇಕೆ ಇಂಥಾ ಸ್ಥಳದಲ್ಲೂ ಕೆಟ್ಟ ಯೋಚನೆ ಬರುತ್ತವೆ?”

’ಕೊಡಲು ಸಾಧ್ಯವಿದ್ದರೆ ಇಲ್ಲಾ ಎನಬೇಡ’

“ಅದು ಮನುಷ್ಯ ಸಹಜ ದೌರ್ಬಲ್ಯ, ನಾನಾ. ಸೌಂದರ‍್ಯದ ಪ್ರಭಾವವೇ ಹಾಗೆ. ಆದರೆ ನೋಡು ಇಂತಹ ಸೌಂದರ್ಯವನ್ನು ಸೃಷ್ಟಿಸಿದ ಪರಮಾತ್ಮನ ಅದ್ಭುತ ಕಲೆಗಾರಿಕೆಯ ಕಡೆಗೆ ಗಮನ ಹರಿಯಬೇಡವೇ? ಇದರ ಸಾವಿರ ಪಟ್ಟು ಹೆಚ್ಚು ಸುಂದರವಾಗಿರುವ ಅವನ ಕಡೆ ನಿನ್ನ ಮನ ಹೋಗಿದ್ದರೆ ಈ ಸುಂದರಿಯ ಮುಖವನ್ನು ಮತ್ತೆ ನೋಡುವ ಮನೋಭಾವವೇ ಬೇರೆಯ ರೀತಿಯದಾಗಿರುತ್ತಿತ್ತು.”

ಇನ್ನೊಂದು ಸಂದರ್ಭದಲ್ಲಿ ಬಾಬಾ ಚಾಂದೋರ್ಕರರನ್ನು ಕರೆದು ಹೇಳಿದರು: “ಇಲ್ಲಿ ನೋಡು ನಾನಾ, ನಾ ಒಂದು ಮಾತು ಹೇಳುತ್ತೇನೆ. ಚೆನ್ನಾಗಿ ನೆನಪಿನಲ್ಲಿಟ್ಟು ಅದರಂತೆ ನಡೆಯುವೆಯಾ?”

“ಅದೇನು ಹೇಳಿ ಬಾಬಾ, ನಿಮ್ಮ ಯಾವ ಮಾತನ್ನು ಮೀರಿ ನಡೆದಿದ್ದೇನೆ.”

“ಯಾರಾದರೂ ನಿನ್ನ ಬಳಿಗೆ ಬಂದು ಏನನ್ನಾದರೂ ಬೇಡಿದರೆ, ಕೊಡಲು ಸಾಧ್ಯವಿದ್ದರೆ, ನಿನ್ನ ಕೈಲಾದರೆ, ಇಲ್ಲ ಎನ್ನಬೇಡ. ಕೊಡಲು ಮನಸ್ಸಿಲ್ಲದಿದ್ದರೆ ಸುಮ್ಮನೆ ಇಲ್ಲ ಎನ್ನು ಕೇಳಿದವರನ್ನು ಹೀಯಾಳಿಸಬೇಡ. ಹಾಸ್ಯ ಮಾಡಿ ನಗಬೇಡ. ಕೋಪಿಸಿಕೊಳ್ಳಬೇಡ. ನನ್ನಲ್ಲಿಲ್ಲ ಎಂದು ಸುಳ್ಳು ಹೇಳಬೇಡ, ಸ್ಪಷ್ಟವಾಗಿ, ಕೊಡಲು ಇಷ್ಟವಿಲ್ಲ ಎನ್ನು. ಮರೆಯಬೇಡ.”

ನಾನಾ “ಆಗಲಿ. ಇದರಲ್ಲಿ ಮರೆಯುವುದೇನಿದೆ?” ಎಂದ.

ಇದಾಗಿ ಕೆಲವು ದಿನಗಳಾದವು. ಬಾಬಾರ ಮಾತು ಬಹುಶಃ ಮರತೇ ಹೋಗಿರಬಹುದು. ಕೊಪರ್ ಗಾಂವ್‌ನ ದತ್ತ ಮಂದಿರಕ್ಕೆ ೩೦೦ ರೂಪಾಯಿ ಕೊಡುವುದಾಗಿ ನಾನಾ ವಚನ ಕೊಟ್ಟಿದ್ದರು. ಹಣವನ್ನು ಮಾತ್ರಕೊಡಲಿಲ್ಲ. ಒಮ್ಮೆ ಎಲ್ಲಿಂದಲೋ ಕೊಪರ್‌ಗಾಂವ್ ಮಾರ್ಗವಾಗಿ ಶಿರಡಿಗೆ ಬರುವಾಗ ದತ್ತ ಮಂದಿರದ ಸಾಧು ಎಲ್ಲಿ ಸಿಕ್ಕಿ ಹಣ ಕೇಳುವನೋ ಎಂದು ಬೇರೊಂದು ಸುತ್ತು ಬಳಸಿನ ದಾರಿ ಹಿಡಿದು, ಕಲ್ಲು ಮುಳ್ಳು ತುಳಿದು, ಘಾಸಿಪಟ್ಟು ಶಿರಡಿಗೆ ಬಂದರು.

ಬಾಬಾ ಎಂದಿನಂತೆ ಪ್ರೀತಿಯಿಂದ ಮಾತನಾಡಿಸುವುದರಲಿ ಅವರೊಂದಿಗೆ ಮಾತನ್ನೇ ಬಿಟ್ಟರು. ನಾನಾ ಒದ್ದಾಡಿ ಹೋದರು. ಕಡೆಗೆ ದುಃಖ ತಡೆಯಲಾರದೆ” ಬಾಬಾ ನನ್ನೊಡನೆ ಏಕೆ ಮಾತನಾಡಲೊಲ್ಲಿರಿ? ನನ್ನಿಂದ ಏನು ಅಪರಾಧವಾಯಿತು?” ಎಂದು ಗೋಗರೆದರು.

ಬಾಬಾ ಮಾತುಕೊಟ್ಟು ನಡೆಸದ ನಿನ್ನೊಡನೆ ಏನು ಮಾತು? ಮಹಾ ದೊಡ್ಡ ಮನುಷ್ಯ. ಆ ಸಾಧು ದತ್ತ ಮಂದಿರಕ್ಕೆ ಹಣ ಕೇಳುವನೆಂದು ಸುತ್ತಿ ಬಳಸಿ ಬಂದೆ. ಮೊದಲು ಮಾತನ್ನೇಕೆ ಕೊಡಬೇಕು? ಹಣ ಕೊಡುವುದಿಲ್ಲ ಎಂದಿದ್ದರೆ ಅವನೇನು ನಿನ್ನ ನುಂಗಿ ಹಾಕುತ್ತಿದ್ದನೇ? ಅದಲ್ಲದೆ ನನಗೆ ನೀ ಕೊಟ್ಟ ಮಾತೇನಾಯಿತು? ಇದರಲ್ಲಿ ಮರೆಯುವುದೇನಿದೆ ಎಂದೆಯಲ್ಲ. ಇದೇ ಏನು ನೀನು ನೆನಪಿನಲ್ಲಿಟ್ಟುಕೊಳ್ಳುವುದು” ಎಂದರು.

ಸಣ್ಣ ಮಾತಿರಲಿ, ದೊಡ್ಡ ಮಾತಿರಲಿ ನುಡಿದಂತೆ ನಡೆಯಬೇಕು. ಕೊಟ್ಟ ಮಾತು ನಡೆಸಬೇಕು. ಇದು ಸಾಯಿ ತತ್ವ.

ದೀಪ ಆರಲಿದೆ

ಬಾಬಾ ಶಿರಡಿ ಬಿಟ್ಟು ದೂರ ಎಲ್ಲೂ ಹೋಗಲಿಲ್ಲ. ಅವರಿದ್ದು ದೇ ಪುಣ್ಯ ಕ್ಷೇತ್ರವಾಯಿತು. ಸಾವಿರಾರು ಭಕ್ತರು ದೇಶ ವಿದೇಶಗಳಿಂದ ಅವರ ದರ್ಶನ, ಅನುಗ್ರಹಗಳಿಗಾಗಿ ಬಂದರು. ಅವರವರ ಅಂತರಂಗವನ್ನು ಚೆನ್ನಾಗಿ ತಿಳಿದ ಬಾಬಾ ಅದಕ್ಕೆ ತಕ್ಕಂತೆ ಅನುಗ್ರಹ ಮಾಡುತ್ತಿದ್ದರು. ೧೯೧೮ರ ವೇಳೆಗೆ ಬಾಬಾರಿಗೆ ಎಂಬತ್ತು ವರ್ಷ ವಯಸ್ಸು, ಬರುವ ಭಕ್ತರ ಸಂದಣಿ ಹೆಚ್ಚಾಗಿ ಅವರೆಲ್ಲರಿಗೂ ಸಮಾಧಾನ, ಮಾರ್ಗದರ್ಶನ, ಕೊಡುವುದರಲ್ಲಿ, ಸತತವಾದ ಅವಿಶ್ರಾಂತ ಕೆಲಸ ಕಾರ‍್ಯಗಳಲ್ಲಿ ಅವರ ದೇಹ ದಣಿಯಿತು.

ನವರಾತ್ರಿಗೆ ಕೆಲವು ದಿನಗಳಿದ್ದಂತೆ ಬಾಬಾ ಮುಸ್ಲಿಮ್ ಪುಣ್ಯ ಕ್ಷೇತ್ರವೊಂದಕ್ಕೆ ೨೦೦ ರೂಪಾಯಿ ಕಳಿಸಿ ಫಕೀರರಿಗೆ ಊಟ ಹಾಕಿಸಲು ತಿಳಿಸಿರು. ಅಲ್ಲಿನ ಒಬ್ಬ ಮುಸಲ್ಮಾನ್‌ಸಂತನಿಗೆ “ಅಲ್ಲಾ ತಾನು ಹಚ್ಚಿದ ದೀಪವನ್ನೀಗ ಆರಿಸಲಿದ್ದಾನೆ,” ಎಂದು ಸಂದೇಶ ಕಳಿಸಿದರು. ಕೇಳಿ ಆತ ಕಣ್ಣೀರುಗರೆದ. ನವರಾತ್ರಿಯ ದಿನಗಳಲ್ಲಿ ಬಾಬಾರ ಆದೇಶದ ಮೇರೆಗೆ ದ್ವಾರಕಾಮಾಯಿಯಲ್ಲಿ ’ರಾಮ ವಿಜಯ’ ಕಾವ್ಯದ ಪಾರಾಯಣ ನಡೆದಿತ್ತು.

ಸನಾತನ ಧರ್ಮಪ್ರತಿಷ್ಠಾಪನೆಗಾಗಿ, ಲೋಕ ಹಿತಸಾಧನೆಗಾಗಿ ಮತ್ತೆ ಅವತರಿಸಿ ಬರುವುದಾಗಿ ಕೆಲವು ಆಪ್ತ ಶಿಷ್ಯರಿಗೆ ಹೇಳಿದ ಬಾಬಾ ೧೯೧೮ರ ವಿಜಯದಶಮಿಯ ದಿನ, ಮಧ್ಯಾಹ್ನದ ಆರತಿಯಾದ ಬಳಿಕ ದೇಹತ್ಯಾಗ ಮಾಡಿದರು. ಅವರ ಇಚ್ಛೆಯಂತೆ ಮಂದಿರದಲ್ಲಿ ಅವರ ಸಮಾಧಿ ಮಾಡಿದರು.

ದೀಪ ಬೆಳಗುತ್ತಲೇ ಇದೆ

ಬಾಬಾ ಸಿದ್ಧರಾಗಿಯೇ ಲೋಕಕ್ಕೆ ಪ್ರಕಟರಾದರು. ಅವರು ಸಾಧನೆ ಮಾಡಿದ್ದನ್ನು ಯಾರೂ ನೋಡಲಿಲ್ಲ. ತಮಗಾಗಿ ಅವರು ಸಾಧಿಸಬೇಕಾದುದು ಏನೂ ಇರಲಿಲ್ಲ ದೇವರಲ್ಲಿ ಭಕ್ತಿ, ಭಜನೆ ಸತ್ಸಂಗಗಳಲ್ಲಿ ಆಸಕ್ತಿ, ದೀನ ದಲಿತರ ಮತ್ತು ರೋಗಿಗಳ ಸೇವೆ, ಎಲ್ಲ ಜೀವರ ಬಗ್ಗೆ ಪ್ರೀತಿ-ಅನುಕಂಪ ಇವೇ ಮಾನವೀಯತೆಯ ಲಕ್ಷಣಗಳೆಂದು ತಮ್ಮ ಜೀವನದ ಮಾದರಿಯಿಂದಲೇ ತೋರಿಸಿ ದಾರಿ ಬೆಳಕಾದರು. ಅವರಿಗೆ ಸಾವೆಂಬುದಿಲ್ಲ. ಈಗಲೂ ಅಸಂಖ್ಯಾತ ಭಕ್ತರ ನೋವು ನಿರಾಸೆಗಳನ್ನು ಹೋಗಲಾಡಿಸಿ ಧೈರ‍್ಯ ವಿಶ್ವಾಸಗಳನ್ನು ಕೊಡುತ್ತಿರುವ ಚಿರಂತನ ಚೈತನ್ಯವಾಗಿದ್ದಾರೆ.