ಶಿರಹಟ್ಟಿಯು ಪ್ರಾಚೀನ ಕಾಲದಿಂದಲೂ ತನ್ನದೇ ಆದ ಸ್ಥಾನವನ್ನು ಹೊಂದಿದೆ. ‘ಶಿರಪುರ’ ಎಂದು ಇತಿಹಾಸದಲ್ಲಿ ದಾಖಲಾಗಿರುವ ಶಿರಹಟ್ಟಿ ವಿಜಾಪುರದ ಆದಿಲ್‌ಶಾಹಿ ಸುಲ್ತಾನರ ಕಾಲದಲ್ಲಿ ಲಕ್ಷ್ಮೇಶ್ವರ ಉಪವಿಭಾಗದ ಒಂದು ಭಾಗವಾಗಿತ್ತು. ಕೆಲ ಕಾಲ ಅಂಕುಶ್ ಖಾನನ ಜಹಗೀರಾಗಿದ್ದ ಶಿರಹಟ್ಟಿಯನ್ನು ಲಕ್ಷ್ಮೇಶ್ವರದ ಜೊತೆಯಾಗಿ ಖಾನಗೌಡ ಎಂಬ ದೇಸಾಯಿ ೧೬೦೭ ರಲ್ಲಿ ದೇಶಗತಿಯಾಗಿ ಪಡೆದನು. ಕಾಲಾಂತರದಲ್ಲಿ ಪೇಶ್ವೆಗಳು ಸಾಂಗ್ಲಿ ಸಂಸ್ಥಾನದ ಒಡೆಯರು ಶಿರಹಟ್ಟಿಯಲ್ಲಿ ಆಳ್ವಿಕೆ ನಡೆಸಿದರು. ಸ್ವಾತಂತ್ರ್ಯಾ ನಂತರ ತಾಲೂಕ ಆಗಿ ರಚನೆಗೊಂಡಿದೆ. ಇದು ಜ್ಞಾನಪೀಠ ಪುರಸ್ಕೃತ ಕವಿ ದ.ರಾ.ಬೇಂದ್ರೆಯವರ ಹುಟ್ಟೂರು.

ಸಂತ ಶರಣರ ಪುಣ್ಯ ಭೂಮಿ :

ಜಗದ್ಗುರು ಫಕೀರ ಶಿದ್ರಾಮ ಮಹಾಸ್ವಾಮಿಗಳು, ಬಾಲೇಹೊಸೂರಿನ ದಿಂಗಾಲೇಶ್ವರರು, ಬನ್ನಿಕೊಪ್ಪದ ಸುಜ್ಞಾನೇಂದ್ರ ಸ್ವಾಮೀಜಿಯವರು, ವರವಿ ಮೌನೇಶ್ವರರು, ಮುಕ್ತಿ ಮಂದಿರದ ಶ್ರೀ ವಿಮಲರೇಣುಕ ಮಹಾಸ್ವಾಮಿಗಳು ಈ ನಾಡಿನ ಸಂತ ಶರಣರಲ್ಲಿ ಪ್ರಮುಖರಾಗಿದ್ದಾರೆ.

 

ಫಕ್ಕೀರೇಶ್ವರ ಮಠ:

ಹಿಂದೂ-ಮುಸ್ಲಿಂ ಭಾವೈಕ್ಯತೆಯ ಕೇಂದ್ರ ಶಿರಹಟ್ಟಿಯ ಶ್ರೀ ಫಕ್ಕೀರೇಶ್ವರ ಮಠ, ಬಿಜಾಪುರದ ಖಾಜಾ ಅಮೀನುದ್ದೀನ ಸೂಫೀ ಸಂತನಲ್ಲಿ ಬೆಳೆದ ಲಿಂಗಾಯತ ಜಂಗಮ ವಟುವಿಗೆ ಸಂತ್ ಖಾಜಾ ಅಮೀನುದ್ದೀನರು ಇಸ್ಲಾಂ ಧಾರ್ಮಿಕ ಆಚರಣೆಗಳನ್ನೆಲ್ಲ ಕಲಿಸಿದರು. ಕೊರಳಲ್ಲಿ ಇಷ್ಟಲಿಂಗ ಕಟ್ಟಿಕೊಂಡು ನಿತ್ಯ ಲಿಂಗಾರ್ಚನೆ ಮಾಡುತ್ತಾ ಇಸ್ಲಾಂ ವಿಧಿಗಳನ್ನು ಅನುಸರಿಸಿದ ವ್ಯಕ್ತಿಯೇ ಫಕೀರೇಶ್ವರರೆಂದು ಖ್ಯಾತರಾಗಿದ್ದಾರೆ. ಆ ಮಹಾ ಮಹಿಮರು ಶಿರಹಟ್ಟಿಯಲ್ಲಿ ಸ್ಥಾಪಿಸಿದ ಮಠದಲ್ಲಿ ಇಂದಿಗೂ ಹಿಂದೂ-ಮುಸ್ಲಿಂ ಬಾಂಧವರು ಒಂದು ಗೂಡಿ ತಮ್ಮ ತಮ್ಮ ಧಾರ್ಮಿಕ ವಿಧಿ ವಿಧಾನಗಳನ್ನು ಆಚರಿಸುತ್ತಾರೆ. ಇಂದಿನ ಪೂಜ್ಯ ಜಗದ್ಗುರು ಶ್ರೀ ಫಕೀರ ಸಿದ್ದರಾಮ ಮಹಾಸ್ವಾಮಿಗಳವರು ಭಾವೈಕ್ಯತೆಯ ಜೊತೆಗೆ ಶ್ರೀಮಠವನ್ನು ಶಿಕ್ಷಣಾಭಿಮುಖವಾಗಿಯೂ ಬೆಳೆಸುತ್ತಿದ್ದಾರೆ. ಪ್ರಸ್ತುತ ಮಠವು ಸುಮಾರು ೩೦೦ ವರ್ಷಗಳಷ್ಟು ಪ್ರಾಚೀನವೆಂದು ಅಭಿಪ್ರಾಯಪಡಲಾಗಿದೆ. ಮಠದಲ್ಲಿರುವ ಒಂದು ಶಾಸನವು ಮಠವನ್ನು ಫಕೀರ ಚನ್ನವೀರ ಸ್ವಾಮೀಜಿಯವರಿಗೆ ಕ್ರಿ.ಶ. ೧೭೨೨ ರಲ್ಲಿ ದಾನ ಕೊಟ್ಟ ವಿಷಯವು ಪ್ರಸ್ತುತವಿದೆ.

 

ಅವ್ವ ಲಿಂಗವ್ವನ ಗುಡಿ :

ಲಕ್ಷ್ಮೇಶ್ವರ ದೇಶಗತಿಯ ಸಂಸ್ಥಾಪಕಿಯಾದ ಅವ್ವ ಲಿಂಗವ್ವನ ಗುಡಿ ಆಕೆಯ ಸಮಾಧಿ ಕಟ್ಟಡವೆಂದು ನಿರ್ಮಿತವಾಗಿದ್ದರು ಕಾರಣಾಂತರ ಗಳಿಂದ ಅಲ್ಲಿ ಸಮಾಧಿ ಜರುಗಲಿಲ್ಲ. ಈ ಮಠ ೩೦೦ ವರ್ಷಗಳಷ್ಟು ಪ್ರಾಚೀನವಾಗಿದ್ದು, ಆಕರ್ಷಕ ಕಲ್ಲು ಕಟ್ಟಡವಾಗಿದೆ. ದ್ವಾರಬಾಗಿಲವು ಮನಮೋಹಕ ಕೆತ್ತನೆಯಿಂದ ಕೂಡಿದೆ. ಹೊರಭಾಗದಲ್ಲಿ ಸುಂದರ ಕೆತ್ತನೆಗಳುಳ್ಳ ಅನೇಕ ಧಾರ್ಮಿಕ ಶಿಲ್ಪಗಳಿವೆ, ಕಮಲದಳ ಮತ್ತು ಸರ್ವಾಕೃತಿಯ ಕೆತ್ತನೆಗಳಿವೆ. ಇವಲ್ಲದೇ ಲಕ್ಷ್ಮೀನಾರಾಯಣ ಮತ್ತು ಮುರುಗೇಶ್ವರ ಕಲ್ಮಠಗಳು ಶಿರಹಟ್ಟಿಯಲ್ಲಿವೆ.

 

ಹೊಳಲಮ್ಮ ದೇವಸ್ಥಾನ ಶ್ರೀಮಂತನಗರ :

ಶಿರಹಟ್ಟಿಯಿಂದ ೧೮ ಕಿ.ಮಿ. ದೂರದಲ್ಲಿರುವ ದೇವಿಹಾಳ ಬಳಿಯ ಗುಡ್ಡದ ಮೇಲಿರುವ ಕೋಟೆ ಶ್ರೀಮಂತಗಡ ಎಂದೇ ಪ್ರಸಿದ್ಧಿಯಾಗಿದೆ. ಆದಿ ಶಕ್ತಿ ಅವತಾರವೆಂದೇ ಆಸ್ತಿಕರು ಭಾವಿಸುವ ಹೊಳಲಮ್ಮ ದೇವಿಯ ದೇವಸ್ಥಾನ ಇದ್ದು, ಛತ್ರಪತಿ ಶಿವಾಜಿಯು ಈ ದೇವಿಯ ನಿಷ್ಠಾವಂತ ಉಪಾಸಕನಾಗಿದ್ದನೆಂಬ ಐತಿಹ್ಯವಿದೆ. ಶ್ರೀಮಂತಗಡ ಕೋಟೆ ಅಲ್ಲಲ್ಲಿ ಶಿಥಿಲವಾಗಿದ್ದರೂ ಪುರಾತನ ವೈಭವವನ್ನು ಸ್ಮರಣೆಗೆ ತರುವಂತಿದೆ. ಬೆಟ್ಟದ ಮೇಲಿಂದ ನೋಡಿದರೆ ಸುತ್ತಲಿನ ಪ್ರದೇಶದ ಮೋಹಕ ದೃಶ್ಯ ಕಣ್ಣಿಗೆ ಕಟ್ಟುತ್ತದೆ. ದೇವಿಯ ವಿಗ್ರಹವು ವಿಜಯನಗರೋತ್ತರ ಶೈಲಿಯಲ್ಲಿದೆ.

ಇಲ್ಲಿನ ಜನಪದ ಮತ್ತು ಮೌಖಿಕ ಪರಂಪರೆಯಂತೆ ದೇವಿಹಾಳದ ಸುತ್ತಮುತ್ತಲಿನ ಪ್ರದೇಶವು “ರಣದುಲ್ಲಾಖಾನ” ಎಂಬ ಮುಸ್ಲಿಂ ಅರಸ ವಶದಲ್ಲಿತ್ತು. ಇವನು ಗುಡ್ಡದ ಮೇಲೆ ಶಿಥಿಲಾವಸ್ಥೆಯಲ್ಲಿದ್ದ ಗುಡ್ಡದ ಅಮ್ಮನ ದೇವಾಲಯವನ್ನು ಕೆಡವಿ ತನ್ನ ಸಂಪತ್ತನ್ನು ನೆಲದಲ್ಲಿ ರಹಸ್ಯವಾಗಿ ಬಚ್ಚಿಟ್ಟನು. ಆಕ್ರಮಣಕಾರರಿಗೆ ಈ ಸಂಪತ್ತು ದೊರೆಯದಂತೆ ಮಾಡಿ ಪ್ರಾಚೀನ ದೇವಾಲಯವಿದ್ದ ಸ್ಥಳದಲ್ಲಿ ಒಂದು ಹೊಸ ದೇವಾಲಯವನ್ನು ಸ್ಥಾಪಿಸಿದನು. ಅದರಲ್ಲಿ ಮೂರ್ತಿಯನ್ನು ಸ್ಥಾಪಿಸಿ “ಹೊಳ್ಳಮ್ಮ” ಎಂದು ಹೆಸರಿಸಿದ ತನ್ನ ಸಂಪತ್ತಿಗೆ ಈ ದೇವತೆಯನ್ನು ರಕ್ಷಿಸುವ ಸಲುವಾಗಿ ಸ್ಥಾಪಿಸಿದನೆಂದೂ ಆತ ತನ್ನ ಸಂಪತ್ತನ್ನು ತೆಗೆದುಕೊಳ್ಳಬೇಕೆನ್ನುವಾಗ ಹೊಳ್ಳಮ್ಮ (ಹೊರಳಮ್ಮ) ಎಂದಾಕ್ಷಣ ದೇವತೆಯು ಹೊರಳಿ ನೆಲಮನೆಯಲ್ಲಿದ್ದ ಸಂಪತ್ತಿರುವ ಸ್ಥಳಕ್ಕೆ ಹೋಗಿ ಅನುವು ಮಾಡಿಕೊಡುವ ವ್ಯವಸ್ಥೆಯನ್ನು ಮಾಡಿಕೊಂಡಿದ್ದ ಎನ್ನಲಾಗಿದೆ.

ಔರಂಗಜೇಬನ ಸೆರೆಯಲ್ಲಿದ್ದ ಶಿವಾಜಿಯ ಕನಸಿನಲ್ಲಿ ದೇವಿಯು (ಹೊಳಲಮ್ಮ) ಧ್ಯಾನ ಮಾಡುವಂತೆ ಪ್ರೇರಣೆಯಾಯಿತು. ಸೆರೆಯಿಂದ ಬಿಡುಗಡೆಯಾದ ಬಳಿಕ ದೇವಿಯು ಅವನಿಗೆ ಖಡ್ಗವನ್ನು ನೀಡಿ ರಣದುಲ್ಲಾಖಾನನ ಸಂಪತ್ತನ್ನು ಕಾಯುವ ಕೆಲಸಕ್ಕೆ ಗುರಿ ಮಾಡಿದ್ದರಿಂದ ಅವನನ್ನು ಬಲಿ ತೆಗೆದುಕೊಳ್ಳುವಂತೆ ಆಶೀರ್ವದಿಸಿದಳು. ಅದಕ್ಕೆ ಅನುಗುಣವಾಗಿ ಶಿವಾಜಿಯು ರಣದುಲ್ಲಾಖಾನನ ಮೇಲೆ ದಾಳಿ ನಡೆಸಿ ಅವನನ್ನು ಕೊಂದು ಅವನ ಸಂಸ್ಥಾನವನ್ನು ವಶಪಡಿಸಿಕೊಂಡು ಬೆಟ್ಟದ ಮೇಲೆ ವಿಜಯ ಪತಾಕೆಯನ್ನು ಹಾರಿಸಿದನು. ದೇವಿಯ ಆಜ್ಞಾನುಸಾರವಾಗಿ ನೆಲಮನೆಯ ಸಂಪತ್ತನ್ನು ತೆಗೆದು, ನೆಲಮನೆಯನ್ನು ಮುಚ್ಚಿಸಿ ಆಸ್ಥಳದಲ್ಲಿ ಈಗಿರುವ ದೇವಿಯ ಮೂರ್ತಿಯನ್ನು ಸ್ಥಾಪಿಸಿದನೆಂದು ಹೇಳಲಾಗುತ್ತದೆ. ದೇವಿಹಾಳದಲ್ಲಿ ನೆಲೆಸುವದಕ್ಕಾಗಿ ಈ ಪೂರ್ವದಲ್ಲಿ ನಿರ್ಮಿಸಿದ ಕೋಟೆಗಳಾದ ಸಿಂಹಗಡ, ಷರುಷಗಡ, ಗಜೇಂದ್ರಗಡ ಮತ್ತು ನಾಗೇಂದ್ರಗಡಗಳಂತೆ ಇಲ್ಲಿ ಹಂತಗಡ ಎಂಬ ಕೋಟೆಯನ್ನು ಶಿವಾಜಿಯು ಕಟ್ಟಿಸಿದನು. ಇಲ್ಲಿ ಉಳಿದೆಲ್ಲ ಕೋಟೆಗಳಿಗಿಂತ ಹೆಚ್ಚು ಸಂಪತ್ತನ್ನು ಇರಿಸಿದ್ದರಿಂದ ಅವನ ಗುರು ಶ್ರೀ ರಾಮದಾಸರು ಈ ಕೋಟೆಗೆ “ಶ್ರೀಮಂತಗಡ” ಎಂದು ಹೆಸರಿಟ್ಟರು.

ಈ ಕೋಟೆಯು ಸುಮಾರು ೨೫ ಎಕರೆಯಷ್ಟು ಪ್ರದೇಶದಲ್ಲಿ ಆವರಿಸಿದ್ದು ಉತ್ತರ ದಿಕ್ಕಿಗೆ ಮುಖ್ಯ ದ್ವಾರವಿದೆ. ಕೋಟೆಯನ್ನು ಏರಲು ಅನುವಾಗುವಂತೆ ರಸ್ತೆ ನಿರ್ಮಿಸಲಾಗಿದೆ. ಕೋಟೆಯ ಗೋಡೆಯು ಸುಮಾರು ೨೫ ಅಡಿ ಎತ್ತರ, ೧೨ ಅಡಿ ಅಗಲವಿದೆ. ರಣದುಲ್ಲಾಖಾನನ ಕೇಂದ್ರ ಸ್ಥಳವಾದ ರಣತೂರನ್ನು ಬೆಟ್ಟದ ಮೇಲಿಂದ ನೋಡಬಹುದು. ಇಲ್ಲಿ ಶಿವಾಜಿಗೂ ಮತ್ತು ರಣದುಲ್ಲಾಖಾನನಿಗೆ ಯುದ್ಧ ನಡೆಯಿತೆಂದು ಹೇಳಲಾಗುತ್ತದೆ. ಇಲ್ಲಿರುವ ರಣಗಟ್ಟೆಯಮ್ಮನ ದಿಬ್ಬ ಇರುವದರಿಂದ ಇದು ರಣಭೂಮಿಯೆಂದು ಸ್ಥಳೀಯರು ಹೇಳುತ್ತಾರೆ. ಇದರಿಂದ ಈ ಊರಿಗೆ ರಣತೂರು ಎಂಬ ಹೆಸರು ಬಂದಿದೆ.

 

ವರದಿಯ ಶ್ರೀ ಮೌನೇಶ್ವರ :

ವರವಿಯು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನಲ್ಲಿರುವ ಪುಣ್ಯ ಕ್ಷೇತ್ರ ಇದು ಶಿರಹಟ್ಟಿ ಯಿಂದ ೫ ಕಿ.ಮಿ. ದೂರದಲ್ಲಿದೆ. ಶಿರಹಟ್ಟಿಯಿಂದ ಮುಂಡರಗಿಗೆ ಹೋಗುವ ರಾಜಮಾರ್ಗದಿಂದ ೩ ಕಿ.ಮಿ. ಒಳಗಡೆ ಕಪ್ಪತಗುಡ್ಡದ ಸಾಲಿನ ಮಧ್ಯದಲ್ಲಿರುವ ಬಯಲಂಗಣದಲ್ಲಿರುವ ಚಿಕ್ಕ ಗ್ರಾಮ ಈ ಗ್ರಾಮದ ಸುತ್ತಲೂ ಕವದಿಹಳ್ಳ ಹರಿಯುತ್ತಿದ್ದು ಸುತ್ತಲೂ ಅಂದವಾಗಿ ಬೆಳೆದು ನಿಂತಿರುವ ಮರಗಳ ಸಾಲು, ಗುಡ್ಡದ ಪ್ರದೇಶವಾಗಿದ್ದರಿಂದ ನೈಸರ್ಗಿಕವಾಗಿಯೇ ಆ ಗ್ರಾಮದ ಅಂದವು ಹೆಚ್ಚಿದೆ. ಶ್ರೀ ಮೌನೇಶ್ವರರು ಗುಲ್ಬರ್ಗಾ ಜಿಲ್ಲೆಯ ಸುರಪುರ ತಾಲೂಕಿನ ದೇವರ ಗೋನಾಳ ವಿಶ್ವಕರ್ಮ ವಂಶಜರಾದ ಶೇಕಪ್ಪ ಮತ್ತು ಶೇಷಮ್ಮನವರ ಮಗನಾಗಿ ಅವತರಿಸಿದ ಮುಂದೆ ಹಲವಾರು ಸ್ಥಳಗಳಲ್ಲಿ ಸಂಚರಿಸಿದ ಕುರುಹುಗಳಿವೆ. ಶ್ರೀ ಮೌನೇಶ್ವರ ದೇವಾಲಯವು ಯಾವುದೇ ಕುಸುರಿಯಿಂದ ಅಳವಡಿಸಲ್ಪಟ್ಟಿಲ್ಲ. ಈ ದೇವಾಲಯವು ವಿಜಾಪುರದ ಆದಿಲ್‌ಶಾಹಿ ಕಾಲದಲ್ಲಿ ಕಟ್ಟಿಸಲಾಯಿತೆಂದು ಪ್ರತೀತಿ ಇದೆ.

ಗರ್ಭಗುಡಿಯಲ್ಲಿ ಶ್ರೀ ಮೌನೇಶ್ವರರು ಲಿಂಗಾಕಾರವಾಗಿ ಮಧ್ಯದಲ್ಲಿ ಪೂಜಿಸಲ್ಪಡುತ್ತಿರುವವರು. ಇಲ್ಲಿಯ ಲಿಂಗವು ಉದ್ಭವ ಲಿಂಗವೆಂದು ಪ್ರತೀತಿ ಇದೆ. ಶ್ರೀ ಮೌನೇಶ್ವರರು ವರವಿಯ ಸುತ್ತಮುತ್ತಲೂ ಅನೇಕ ಪವಾಡಗಳನ್ನು ಮಾಡುತ್ತಾ ಸಂಚರಿಸುತ್ತಿದ್ದಾಗ, ಆ ಗ್ರಾಮದ ಕ್ಯಾಸಕ್ಕಿ ಮನೆತನದ ಸೊಸೆ ಜಕ್ಕವ್ವಳು ನೀರಿಗಾಗಿ ಕೊಡ ತೆಗೆದುಕೊಂಡು ಹೊರ ವಲಯದಲ್ಲಿರುವ ಹಳ್ಳಕ್ಕೆ ಹೊರಟಿದ್ದಳು. ಅದೇ ದಾರಿಯಲ್ಲಿ ಶ್ರೀ ಮೌನೇಶ್ವರರು ಚಿಲುಮೆಯನ್ನು ಸೇದಬೇಕೆಂಬ ಹಂಬಲದಿಂದ ಚಿಲುಮೆಯನ್ನು ಹಾಕಿದರು. ಆದರೆ ಅದರಲ್ಲಿ ಬೆಂಕಿ ಇರಲಿಲ್ಲ ಬೆಂಕಿಗಾಗಿ ಕಾಯುತ್ತಿದ್ದರು. ಆ ಹೆಣ್ಣು ಮಗಳು ಬರಲು ಬೆಂಕಿ ತರಲು ಕೇಳಿಕೊಂಡರು ಅವಳು ತನ್ನ ಅಸಹಾಯಕತೆಯನ್ನು ಹೇಳಿದರೂ ಸಹ ಒತ್ತಾಯಿಸಿ ಕೇಳಿಕೊಂಡು ಬೆಂಕಿತರಲು ಕಳುಹಿಸಿದರು. ಅವಳು ಬೆಂಕಿಯನ್ನು ತಂದ ಮೇಲೆ ಅಲ್ಲಿಯೇ ತಮ್ಮ ಕೈಯಲ್ಲಿರುವ ವಸ್ತುವೊಂದರಿಂದ ನೆಲವನ್ನು ಒತ್ತಲು ಅಲ್ಲಿ ವರ್ತಿ ಉಂಟಾಗಿ ನೀರು ಹರಿಯಲು ಪ್ರಾರಂಬಿಸಿತು. ಬೆಂಕಿಯನ್ನು ತಂದ ಜಕ್ಕವ್ವಳಿಗೆ ಆ ವರ್ತಿಯಲ್ಲಿಯೇ ನೀರು ತುಂಬಿಕೊಂಡು ಹೋಗಲು ಹೇಳಿದರು. ಅದೇ ಇಂದಿನ ಅಂಬಲಿ ತೀರ್ಥ. ಆಗ ಮೌನೇಶ್ವರರು ಬೇಗ ಹೋಗಮ್ಮ ನನ್ನ ಸಲುವಾಗಿ ನಿನಗೆ ತಡವಾಯಿತು. ನಿನ್ನ ಮನೆಯವರು ಕೋಪಿಸಿಕೊಳ್ಳಬಹುದು ಬೇಗ ಹೋಗಿ ಅಂಬಲಿ ಹಾಕದೆ ಅಡುಗೆ ಮಾಡು ಎಂದು ಹೇಳಿದರು. ಅವರು ಹೇಳಿದಂತೆ ಅಂಬಲಿ ಹಾಕದಂತೆ ಅಡುಗೆ ಮಾಡಿದಳು. ಆ ದಿವಸ ಅಡುಗೆಯು ದಿನಕ್ಕಿಂತಲೂ ರುಚಿಯಾಗಿತ್ತು. ಮನೆಯವರೆಲ್ಲರೂ ಬಹುಪರಿಯಿಂದ ಹೊಗಳಿದರು. ಇದನ್ನು ನಂಬದ ಮನೆಯವರು ಮರುದಿವಸ ಅಂಬಲಿ ಹಾಕದೆ ಅಡುಗೆ ಮಾಡಿಸಿ ನೋಡಿದರು. ಅದೂ ಕೂಡ ರುಚಿಯಾಗಿದ್ದರಿಂದ ಇದಕ್ಕೆ ಅಂಬಲಿತೀರ್ಥವೆಂದು ಹೆಸರಿಟ್ಟರು. ಈ ತೀರ್ಥದಲ್ಲಿ ಸರ್ವ ರೋಗವನ್ನು ನಿವಾರಿಸುವ ಶಕ್ತಿ ಇದೆ. ಅಲ್ಲದೇ ಇಂದಿಗೂ ವರವಿ ಸುತ್ತಮುತ್ತಲಿನ ಗ್ರಾಮದ ಜನರು ಬೆಳೆಗಳಿಗೆ ಯಾವುದೇ ರೋಗ ಬಂದರೂ ಈ ನೀರನ್ನೇ ಸಿಂಪಡಿಸುತ್ತಾರೆ.

ಜಕ್ಕವ್ವನು ನೀರು ತರಲು ತಡವಾದದ್ದನ್ನು ನೋಡಿದ ಅತ್ತೆಯು ಅವಳನ್ನು ಪೀಡಿಸತೊಡಗಿದಳು. ಆಗ ಸೊಸೆಯು ನಡೆದ ಸಂಗತಿಯನ್ನು ಹೇಳಲು, ಆ ಸಾಧುವನ್ನು ನನಗೆ ತೋರಿಸು ಎಂದು ಹೇಳಲು ಜಕ್ಕವ್ವನ್ನು ಅತ್ತೆಯನ್ನು ಕರೆದುಕೊಂಡು ಸಾಧುವಿನ ವೇಷದಲ್ಲಿ ಶ್ರೀ ಮೌನೇಶ್ವರರು ಕುಳಿತ ಸ್ಥಳಕ್ಕೆ ಕರೆದು ತಂದಳಂತೆ. ಆದರೆ ಅಲ್ಲಿ ಸ್ವಾಮಿಗಳಿರಲಿಲ್ಲ. ಹಾಗೆ ಸಂಚರಿಸುವಾಗ ಮತ್ತೊಂದು ಸ್ಥಳದಲ್ಲಿ ಕಂಡರು. ಆದರೆ ಅತ್ತೆಗೆ ಮಾತ್ರ ಕಾಣಲಿಲ್ಲ. ಇದನ್ನು ತಿಳಿದ ಅತ್ತೆಯು ಅವನೊಬ್ಬ ಮೋಸಗಾರ, ಮಾಟಗಾರ ಎಂದೆಲ್ಲಾ ಹೇಳಿದಳು. ಅದನ್ನೆಲ್ಲ ತಿಳಿದ ಸ್ವಾಮಿಗಳು “ಮಗಳೆ ನಿನ್ನ ಅತ್ತೆಗೆ ಹೇಳು ಇಂದು ರಾತ್ರಿ ಭಾರಿ ಮಳೆ ಬರುವುದು, ಎಷ್ಟು ಮಳೆ ಬಂದರೂ ಸಹ ನಾನು ಕುಳಿತಿರುವ ಸ್ಥಳದಲ್ಲಿ ಒಂದು ಹನಿ ನೀರೂ ಬಿದ್ದಿರುವದಿಲ್ಲ. ಇದೇ ನನ್ನ ಗುಟ್ಟು ಎಂದು ಹೇಳಿ ಹೋದರಂತೆ ಅದೇ ರೀತಿ ಭಾರೀ ಮಳೆ ಬಂದು ಸ್ವಾಮೀಜಿ ಕುಳಿತ ಜಾಗದಲ್ಲಿ ಒಂದು ಹನಿ ನೀರು ಸಹ ಇರಲಿಲ್ಲ. ಅತ್ತೆಗೆ ಇದನ್ನೆಲ್ಲ ನೋಡಿ, ಆಶ್ಚರ್ಯವಾಯಿತು. ಮುಂದೆ ಒಂದು ಲಿಂಗವು ಉದ್ಭವವಾಯಿತು.

 

ಲಕ್ಷ್ಮೇಶ್ವರ

ಜಿಲ್ಲೆ : ೪೦ ಕಿ. ಮೀ.

“ಪುಲಿಗೆರೆ” “ಹುಲಿಗೆರೆ” “ಪುರಿಗೆರೆ” “ಪುಲಿಕಾನಗರ” ಎಂದು ಶಾಸನೋಕ್ತವಾದ ಇಂದಿನ ಲಕ್ಷ್ಮೇಶ್ವರವು ಗದಗ ಜಿಲ್ಲೆಯ ಮಹತ್ವದ ಐತಿಹಾಸಿಕ ಪ್ರಸಿದ್ಧಿಯ ಪ್ರೇಕ್ಷಣೀಯ ಸ್ಥಳವಾಗಿದೆ. ತಾಲೂಕಿನ ಅತೀ ದೊಡ್ಡ ಪಟ್ಟಣವಾಗಿದ್ದು ಶೈಕ್ಷಣಿಕ ಹಾಗೂ ವಾಣಿಜ್ಯ ಕ್ಷೇತ್ರದಲ್ಲಿಯೂ ಮುಂದೆ ಇದೆ. ಲಕ್ಷ್ಮರಸನೆಂಬ ರಾಜ ದೇವಾಲಯವೊಂದನ್ನು ನಿರ್ಮಿಸಿ ಅದಕ್ಕೆ ಲಕ್ಷ್ಮಣೇಶ್ವರನೆಂದು ಹೆಸರಿಸಿದನು. ಇದಕ್ಕೆ ಕಾಲಾಂತರದಲ್ಲಿ ಲಕ್ಷ್ಮೇಶ್ವರ ಎಂಬ ಹೆಸರು ಪ್ರಾಪ್ತವಾಯಿತು. ಜೈನ, ಶೈವ ಹಾಗೂ ವೈಷ್ಣವ ದೇವಾಲಯಗಳ ಕೇಂದ್ರವಾಗಿದ್ದ ಈ ಸ್ಥಳದಲ್ಲಿ ಈಗಲೂ ಕೆಲವು ಐತಿಹಾಸಿಕ ಸ್ಮಾರಕಗಳಿವೆ.

 

ಸೋಮೇಶ್ವರನ ದೇವಾಲಯ

ಪುಲಿಗೆರೆ ಸೋಮನಾಥ (ಜನನ ಸುಮಾರು ೧೨೯೯) ಹಳಗನ್ನಡದ ಕವಿಗಳಲ್ಲೊಬ್ಬ ಸೋಮನಾಥನು ಹಿಂದಿನ ಧಾರವಾಡ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಪುಲಿಗೆರೆ ಯವನು. ಆದಯ್ಯನ ಪರಮ ಶಿವಭಕ್ತನಾಗಿದ್ದ, ಅವನು ಈ ದೇವಾಲಯದಲ್ಲಿ ಜೈನ ಮೂರ್ತಿಯನ್ನು ಭಗ್ನಗೊಳಿಸಿ ಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸಿದನೆಂದು ಹರಿಹರನ ಆದಯ್ಯನ ರಗಳೆಯಲ್ಲಿ ಪ್ರಸ್ತಾಪಿಸಲಾಗಿದೆ.

ಸೌರಾಷ್ಟ್ರದಲ್ಲಿರುವ ಸೋಮನಾಥನಂತೆ ಮೂರ್ತಿಯನ್ನು ಮಾಡಿಸಿ ಇಲ್ಲಿ ಪ್ರತಿಷ್ಠಾಪಿಸಿದನೆಂದು ಹೇಳಲಾಗಿದೆ. ದೇವಾಲಯವು ಮೂಲತಃ ಜೈನ ಬಸದಿಯಾಗಿದ್ದು ಅದರಲ್ಲಿ ಶಿವನನ್ನು ಪ್ರತಿಷ್ಠಾಪಿಸುವ ಮೂಲಕ ಶಿವಾಲಯವಾಗಿದೆ. ದಂಡನಾಯಕ ನಾಗವರ್ಮಯ್ಯನು ಪುಲಿಗೆರೆಯ ೧೨೦ ಮಹಾಜನರಿಂದ ಭೂಮಿಯನ್ನು ಕೊಂಡು ಸೋಮೇಶ್ವರ ದೇವಾಲಯಕ್ಕೆ ದಾನ ಮಾಡಿದ ವಿವರಗಳಿವೆ. ಕನ್ನಡ, ಸಂಸ್ಕೃತ ಭಾಷಾ ಪಂಡಿತನಾದ ಈತನ ಅಂಕಿತ ನಾಮ “ಹರಹರ ಶ್ರೀ ಚನ್ನಸೋಮೇಶ್ವರ” ಕನ್ನಡದಲ್ಲಿ ರತ್ನಾಕರಂಡಕ ಕಾವ್ಯವನ್ನು ಚಂಪೂವಿನಲ್ಲಿಯು, ಸೋಮೇಶ್ವರ ಶತಕವನ್ನು ವೃತ್ತಛಂದಸ್ಸಿನಲ್ಲಿಯೂ ರಚಿಸಿದ್ದಾನೆ.

 

ಶಂಖನಾಥ ಬಸದಿ :

ಬಾದಾಮಿ ಚಾಲುಕ್ಯರ ಕಾಲಕ್ಕೂ ಮೊದಲೇ ನಿರ್ಮಾಣವಾಗಿರಬಹುದಾದ ಶಂಖನಾಥ ಬಸದಿಯು ಗರ್ಭಗ್ರಹ, ನವರಂಗ ಹಾಗೂ ವಿಶಾಲವಾದ ಮುಖಮಂಟಪ ಹೊಂದಿದೆ. ಗರ್ಭಗ್ರಹವು ಚೌಕಾಕಾರದ ತಳವಿನ್ಯಾಸ ಹೊಂದಿದ್ದು, ಪ್ರಾಚೀನ ಲಕ್ಷಣಗಳುಳ್ಳ ಜೈನ ಪಾಣೀ ಪೀಠದ ಮೇಲೆ ಧ್ಯಾನಮುದ್ರೆಯ ಆಸೀನ ನೇಮೀನಾಥ ತೀರ್ಥಂಕರ ವಿಗ್ರಹವನ್ನು ಇತ್ತೀಚೆಗೆ ೧೯೮೭ರಲ್ಲಿ ಪ್ರತಿಷ್ಠಾಪಿಸಲಾಗಿದೆ. ಗರ್ಭಗ್ರಹದ ಬಾಗಿಲು ವಾಡೆಯ ಇಕ್ಕೆಲಗಳಲ್ಲಿ ಜ್ವಾಲಾಮಾಲಿನಿ ಹಾಗೂ ಇತರ ಯಕ್ಷ ಯಕ್ಷಿಣೀಯರು ನಂತರದ ಕಾಲದ ಚಿತ್ರಗಳಿವೆ. ನವರಂಗದಲ್ಲಿ ಎರಡು ಕೊಠಡಿಗಳನ್ನು ಚಾಲುಕ್ಯ ಶೈಲಿಯ ಪಾಣೀಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಬಸದಿಯ ಮಹಾದ್ವಾರವು ಚಾಲುಕ್ಯ ಶೈಲಿಯ ವಿಪುಲವಾದ ಅಲಂಕಾರವನ್ನು ಹೊಂದಿದ್ದು ಇಕ್ಕೆಲಗಳಲ್ಲಿ ಜಾಲಂಧ್ರಗಳಿವೆ. ಲಲಾಟದಲ್ಲಿ ಚಾಲುಕ್ಯ ಶೈಲಿಯ ಮುಕ್ಕೋಡೆಯಿರುವ ಜೀನಬಿಂಬವಿದೆ. ಲಕ್ಷ್ಮೇಶ್ವರದ ಅತ್ಯಂತ ಪ್ರಾಚೀನ ಹಾಗೂ ಪ್ರಭಾವೀ ಬಸದಿ ಇದೆ.

 

ಜುಮ್ಮಾ ಮಸೀದಿ:

ಲಕ್ಷ್ಮೇಶ್ವರದ ಮತ್ತೊಂದು ಮಹತ್ವದ ಆಕರ್ಷಕ ವಾಸ್ತು ಶಿಲ್ಪವೆಂದರೆ ಪೇಠಬಣದಲ್ಲಿರುವ ಆದಿಲ್ ಶಾಹಿ ಕಾಲದ ಜುಮ್ಮಾ ಮಸೀದಿ ಬಿಜಾಪುರದ ೨ ನೇ ಇಬ್ರಾಹಿಂ ಆದಿಲ್ ಶಹಾನ ಕಾಲದಲ್ಲಿ ಲಕ್ಷ್ಮೇಶ್ವರದಲ್ಲಿ ಆಡಳಿತಾಧಿಕಾರಿಯಾಗಿದ್ದ ಅಂಕುಷಖಾನನು ಕ್ರಿ.ಶ. ೧೬೧೭ರಲ್ಲಿ ಈ ಬಸದಿಯನ್ನು ನಿರ್ಮಿಸಿದನೆಂದು ದಾಖಲೆ ಇದೆ. ಎತ್ತರವಾದ ಕೋಟೆಯ ಬಾಗಿಲಿನಂತಹ ಮಹಾದ್ವಾರದಿಂದ ಪ್ರವೇಶಿಸಿದರೆ ಎತ್ತರವಾದ ಎರಡು ಮಿನಾರಗಳಿಂದ ಹಾಗೂ ಅರ್ಧಗೋಲಾಕಾರದ ದೊಡ್ಡ ಗೋಪುರದಿಂದ ಇಂಡೋಸಾರ್ಸೆನಿಕ್ ಶೈಲಿಯ ವಾಸ್ತು ರಚನೆಯನ್ನು ಮೈದಳೆದಿರುವ ಭವ್ಯ ಕಟ್ಟಡವಾಗಿದೆ. ವಿಶಾಲವಾದ ಪ್ರಾರ್ಥನಾ ಸ್ಥಳವಿದ್ದು, ಛಾವಣಿಯಲ್ಲಿ ಷಟ್ ಕೋನಾಕೃತಿಯ ಅಂಕಣಗಳಿವೆ. ಇವುಗಳಲ್ಲಿ ಆಳವಾದ ಭುವನೇಶ್ವರಿ ಮಾದರಿಯನ್ನು ಹೋಲುವ ಅಲಂಕಾರವು ಚಿತ್ತಾಕರ್ಷಕವಾಗಿದೆ. ಛಾವಣಿಯ ಶೈಲಿಯ ಅನುಕರಣೆಯಾದ ಕಲ್ಲಿನ ಸರಪಳಿಯು ನಮ್ಮ ಗಮನವನ್ನು ಸೆಳೆಯುತ್ತದೆ. ಮೇಲ್ಭಾಗದಲ್ಲಿರುವ ಗುಮ್ಮಟದ ತಳದಿಂದ ಮೇಲಿರುವ ಕಮಲದ ದಳದ ಅಲಂಕಾರವಿದೆ.

 

ದೂದಪೀರಾ ದರ್ಗಾ:

ಹಲವು ಮಂದಿ ಮಹಾಪುರುಷರನ್ನು ಜನ್ಮವೆತ್ತಿದ ಈ ನಾಡು ನಿಜಕ್ಕೂ ಭಾವೈಕ್ಯತೆಯ ಸಂದೇಶ ಸಾರುವ ಪವಿತ್ರ ಭೂಮಿ. ಅನೇಕ ಮಹಿಮಾ ಪುರುಷರು ಸಂತರು, ಶರಣರು, ದಾಸರು ಹಾಗೂ ಸೂಫಿಗಳು ತಮ್ಮ ಅರ್ಥಪೂರ್ಣ ಸಿದ್ದಾಂತಗಳ ಮೂಲಕ ಜನಸಮುದಾಯದಲ್ಲಿ ಸೌಹಾರ್ದತೆಯ ಬೀಜ ಬಿತ್ತಿ ಸರ್ವರೂ ಒಂದಾಗಿ ಬಾಳಲು ಒಂದೊಂದು ಸ್ಥಳವನ್ನು ತಮ್ಮ ಕರ್ಮಭೂಮಿಯನ್ನಾಗಿ ಆಯ್ಕೆ ಮಾಡಿಕೊಂಡರು. ಅವುಗಳಲ್ಲಿ ಗದಗ ಜಿಲ್ಲೆಯ ಲಕ್ಷ್ಮೇಶ್ವರವೂ ಒಂದಾಗಿದೆ. ಲಕ್ಷ್ಮೇಶ್ವರದಲ್ಲಿ ಹಲವು ದೇವಾಲಯ ಮಸೀದಿ, ಬಸದಿಗಳು, ಕೋಟೆ ಕೊತ್ತಲಗಳಿವೆ. ಹೀಗಾಗಿ ಲಕ್ಷ್ಮೇಶ್ವರ ನಗರವು “ದೇವಾಲಯಗಳ ಬೀಡು, ನಾಡೋಜ ಪಂಪನ ಸಾಂಸ್ಕೃತಿಕ ಕೇಂದ್ರ” ವೆಂದು ಕರೆಯುತ್ತಾರೆ.

‘‘ಪ್ರೀತಿಗಿಂತ ಮಿಗಿಲಾದ ಧರ್ಮವಿಲ್ಲ’’ ಎಂದು ಸಾರುವ ಸೂಫಿ ತತ್ವ ಪ್ರಚಾರಕ್ಕಾಗಿ ತಮ್ಮ ಗುರುವಿನ ಆಜ್ಞೆಯಂತೆ, ಹಜರತ್ ಸೈಯದ ಸಿದ್ದಿಕ್ ಸುಲ್ತಾನ ಬಾದಷಾಹ ಖಾದ್ರಿ ಅವರು ಕ್ರಿ.ಶ. ೧೩೬೪ರಲ್ಲಿ ಲಕ್ಷ್ಮೇಶ್ವರಕ್ಕೆ ಪ್ರಪ್ರಥಮವಾಗಿ ಪಾದಾರ್ಪಣೆ ಮಾಡಿದ ಸೂಫಿಯಾಗಿದ್ದಾರೆ. ಪ್ರಮುಖ ಸಂತರಲ್ಲಿ ಸೌಹಾರ್ದತೆಯ ಸಮರ್ಥ ಪ್ರತಿಪಾದಕರಾಗಿ ಪ್ರಕಾಶ ಮಾನರಾದ, ಭಾವೈಕ್ಯತೆಯ ಹರಿಕಾರ ‘‘ವಿಶ್ವಭಾತೃತ್ವದ ಸೂಫಿ ಸಂತ ದೂದಪೀರಾಂ’’ ಅಗ್ರಮಾನ್ಯರು. ಪವಿತ್ರ ತಪೋಭೂಮಿಯಾದ ಲಕ್ಷ್ಮೇಶ್ವರ ನಗರವು ಮಹಾಯೋಗಿ ದೂದಪೀರಾರವರ ಪಾದ ಸ್ಪರ್ಶದಿಂದ ಪಾವನವಾಗಿದೆ. ದೂದಪೀರಾರವರು ಜನರಲ್ಲಿ ಬಹುದಿನಗಳಿಂದಲೂ ಬೇರೂರಿರುವ ಅಜ್ಞಾನ, ಮೂಢನಂಬಿಕೆ, ದಾರಿದ್ರ್ಯವನ್ನು ದೂರಮಾಡಿ ಮಾನವೀಯ ಮೌಲ್ಯಗಳಿಗೆ ಹೆಚ್ಚು ಒತ್ತು ನೀಡಿದರು.

ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ದರ್ಗಾ ಎಂದೇ ಹೆಸರಾಗಿದೆ. ಜಿಯಾರತ್ ಗಾಗಿ ಬರುವ ಭಕ್ತರಲ್ಲಿ ಸಂತಾನಫಲ, ದೀರ್ಘಕಾಲದ ಕಾಯಿಲೆ, ಅಲ್ಪಕಾಲದ ಕಾಯಿಲೆ, ಮಾನಸಿಕ ಕಾಯಿಲೆ, ಕೌಟುಂಬಿಕ ಸಮಸ್ಯೆ ಹಾಗೂ ಮಾನಸಿಕ ನೆಮ್ಮದಿಗಾಗಿ ಬರುವ ಭಕ್ತರಿಗೆ ಅತೀ ಶೀಘ್ರವಾಗಿ ಪರಿಹಾರ ದೊರೆತಿರುವ ನಿದರ್ಶನವಿದೆ. ಇಂತಹ ಪವಿತ್ರ ದರ್ಗಾ ಲಕ್ಷ್ಮೇಶ್ವರ ನಗರದಲ್ಲಿದೆ.

 

ಮುಕ್ತಿಮಂದಿರ:

ಲಕ್ಷ್ಮೇಶ್ವರ ನಗರದಿಂದ ೪ ಕಿ.ಮಿ. ಅಂತರದಲ್ಲಿರುವ ಪವಿತ್ರ ಕ್ಷೇತ್ರವೇ  ಮುಕ್ತಿಮಂದಿರ. ಬಾಳೆಹೊನ್ನೂರಿನ ರಂಭಾಪುರಿ ಪೀಠದ ಲಿಂಗೈಕ್ಯ ರೇಣುಕ ವೀರಗಂಗಾಧರಸ್ವಾಮಿಗಳು ೧೯೪೦ರಲ್ಲಿ ಈ ಪ್ರದೇಶದಲ್ಲಿ ವಾಸಿಸಲು ಆರಂಭಿಸಿ ಅಲ್ಲಿದ್ದ ಕಾಡನ್ನು ಕಡಿದು ಕೃಷಿ ಮಾಡಿ ದೀನ ದಲಿತರಿಗೆ ಕೃಷಿ ಉತ್ಪನ್ನಗಳನ್ನು ನೀಡುತ್ತಿದೆ. ಜೊತೆಗೆ ಧರ್ಮದ ಸಂದೇಶವನ್ನೂ ಸಹ ನೀಡುತ್ತದೆ. ಇವರ ಕಾಯಕ ಭೂಮಿಯು ತಪೋವನವಾಗಿ ರೂಪಾಂತರಗೊಂಡಿದೆ. ಇವರು ಎಲ್ಲಾ ಧರ್ಮಗಳು ಒಂದೇ ಮತ್ತು ಅವುಗಳು ಮುಕ್ತಿಯನ್ನು ನೀಡುತ್ತವೆ. “ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ” ಎಂಬ ಮಂತ್ರವನ್ನು ಜನರಲ್ಲಿ ಬಿತ್ತಿದರು. ಎಲ್ಲಾ ಧರ್ಮಗಳನ್ನು ಪ್ರತಿನಿಧಿಸುವಂತೆ ಮುಕ್ತಿ ಮಂಟಪವನ್ನು ನಿರ್ಮಿಸಲಾಗಿದೆ. ಈಗ ತ್ರಿಕೋಟಿ ಲಿಂಗಗಳನ್ನು ಸ್ಥಾಪಿಸಲಾಗಿದೆ.

೧೯ನೇ ಶತಮಾನದಲ್ಲಿದ್ದ ಸಂತ ಶಿಶುನಾಳ ಶರೀಫರು ಈ ಭಾಗದಲ್ಲಿ ಸಂಚರಿಸುವಾಗ ಒಂದೆಡೆ ಕುಳಿತು ಚಿಲುಮೆ ಸೇದುವಾಗ ಅದರಿಂದ ಹರಳು ಜಾರಿ ಬಿತ್ತು ಹರಳಿಗೆ ಎರಡು ಕಲ್ಲುಗಳನ್ನು ಇಟ್ಟು ಗುಡಿಯನ್ನು ನಿರ್ಮಿಸಿ ಪ್ರಸಿದ್ಧಿಯನ್ನು ಹೊಂದು ಎಂದು ಆಶೀರ್ವದಿಸಿದ್ದರಿಂದ ಈ ಸ್ಥಳವು ಧಾರ್ಮಿಕ ಕ್ಷೇತ್ರವಾಗಿ ಬೆಳೆಯಿತು ಎನ್ನುವುದು ಇಲ್ಲಿಯ ಜನರ ನಂಬಿಕೆಯಾಗಿದೆ. ಮುಕ್ತಿಮಂದಿರವು ಕುಂದಗೋಳ ತಾಲೂಕಿನ ಹರ್ಲಾಪುರ ಸಮೀಪದ ಗ್ರಾಮವಾಗಿದೆ. ಪ್ರಸ್ತುತ ಜಗದ್ಗುರು ವಿಮಲ ರೇಣುಕ ಸ್ವಾಮಿಯವರ ನೇತೃತ್ವದಲ್ಲಿ ಇಲ್ಲಿ ಧರ್ಮ ಪ್ರಚಾರ ಕಾರ್ಯ ಮುಂದುವರೆದಿದೆ.