ಶಿಲೆಯಲ್ಲವೀ ಗುಡಿಯು, ಕಲೆಯ ಬಲೆಯು ಎನ್ನುತ್ತದೆ ಕವಿವಾಣಿ ಬೇಲೂರು, ಹಳೇಬೀಡಿನ ಬಗ್ಗೆ. ಬೇಲೂರಿನ ಶಿಲಾಬಾಲಿಕೆಯರ ಸೌಂದರ್ಯ ಮನಸ್ಸನ್ನು ಬಂಧಿಯಾಗಿಸುವ ಬಲೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದರೊಟ್ಟಿಗೇ ಇನ್ನೊಂದು ಪ್ರಶ್ನೆಯೂ ಏಳುತ್ತದೆ. ಹೆಣ್ಣಷ್ಟೆ ಏಕೆ ಕಲೆಯ ಬಲೆ! ಕಲಾವಿದರ ಮನಸ್ಸಿನಲ್ಲಿ ಹೆಣ್ಣು ಮೂಡಿಸುವಷ್ಟು ಗಾಢವಾದ ಕಲ್ಪನೆಯನ್ನು ಇನ್ಯಾವ ವಸ್ತುವೂ ಮೂಡಿಸುವುದಿಲ್ಲ ಎನಿಸುತ್ತದೆ.  ಚೆಲುವಿನ ಚಿತ್ತಾರದ ನಿಸರ್ಗವನ್ನೂ ಕಲಾವಿದನ ಮನಸ್ಸು ಹೆಣ್ಣಿಗೇ ಹೋಲಿಸುತ್ತದೆ! ಲಿಯೊನಾರ್ಡೊ ಡಾವಿಂಚಿಯ ಮೊನಾಲಿಸಾ, ಕವಿ ಇಕ್ಬಾಲನ ಪ್ರೇಯಸಿ, ಮೈಕೆಲ್ ಏಂಜೆಲೊನ ವೀನಸ್ ದೇವತೆ, ನಮ್ಮದೇ ನೆಲದ ಕಾಳಿದಾಸನ ಶಾಕುಂತಲೆ, ರವಿವರ್ಮನ ಮುಗುದೆಯರು ಹಾಗೂ ಬೇಲೂರಿನ ಶಿಲಾಬಾಲಿಕೆಯರು ಕವಿ-ಕಲಾವಿದರ ಮನಸ್ಸಿನಲ್ಲಿ ಹೆಣ್ಣು ಕೇಂದ್ರವಸ್ತುವಾಗಿರುವುದರ ಸಂಕೇತ.

ಹೆಣ್ಣಿಗೂ ಕಲೆಗೂ ಹೀಗೊಂದು ಸಂಬಂಧ ಬೆಳೆದುದೇಕೆ ಎನ್ನುವುದು ತತ್ವಶಾಸ್ತ್ರಜ್ಞರ ಹಾಗೂ ವಿಮರ್ಶಕರಷ್ಟೆ ಕೇಳುವ ಪ್ರಶ್ನೆಯಾಗಿ ಉಳಿದಿಲ್ಲ. ಈ ಸಂಶಯ ವಿಜ್ಞಾನಿಗಳ ಮನಸ್ಸಿನಲ್ಲೂ ಮೂಡಿದೆ. ಕಲೆಯ ಕೇಂದ್ರವಸ್ತುವಾಗಿ ಹೆಣ್ಣು ಯಾವಾಗ ಎನ್ನುವ ಪ್ರಶ್ನೆಗೆ ಇತ್ತೀಚೆಗೆ ಜರ್ಮನಿಯ ಪುರಾತನ ಗುಹೆಗಳಲ್ಲಿ ದೊರೆತ, ಪ್ರಾಣಿಗಳ ಹಲ್ಲಿನಲ್ಲಿ ಕಡೆದ ತಾಯತದಂತಹ ವಸ್ತುಗಳು ಸೂಚ್ಯ ಉತ್ತರವನ್ನು ನೀಡಿವೆ. ಜೊತೆಗೇ ಮನುಷ್ಯನ ಮನಸ್ಸಿನಲ್ಲಿ ಹೆಣ್ಣು ಕೇವಲ ಕಾಮದ ಬೊಂಬೆಯಾಗದೆ ಸೌಂದರ್ಯದ ಖನಿಯಾಗಿಯೂ, ಕಲಾಪ್ರತಿಮೆಯಾಗಿಯೂ ಬೆಳೆದದ್ದೇಕೆನ್ನುವ ಸೂಕ್ಷ್ಮ ಸುಳಿವನ್ನೂ ಈ ತಾಯತಗಳು ನೀಡಿವೆ.

ಮಂಗನಿಂದ ಮಾನವನಾಗುವ ಹಾದಿಯಲ್ಲಿ ಎಲ್ಲಿಯೋ ಒಂದು ಹಂತದಲ್ಲಿ ಮಾನವನ ಮನಸ್ಸು ಭಾವುಕವಾಯಿತು, ಕವಿ-ಕಲಾವಿದರನ್ನು ಹುಟ್ಟಿಸಿತು ಎನ್ನುವುದು ಎಲ್ಲರಿಗೂ ವೇದ್ಯ. ಏಕೆಂದರೆ ಮಾನವನಂತೆ ಚಿತ್ರಗಳನ್ನು ಬರೆಯುವ, ಶಿಲ್ಪಗಳನ್ನು ಕಡೆಯುವ ಹಾಗೂ ಕಚಂದಿರನಂಥ ಚೆಲುವೆಕಿ ಎಂದು ರೂಪಕವನ್ನು ಸೃಷ್ಟಿಸುವ ಪ್ರಾಣಿಗಳಿಲ್ಲ.  ಅತ್ಯಂತ ಸೊಗಸಾದ ಗೂಡನ್ನು ನೇಯುವ ಗೀಜಗನ ಹಕ್ಕಿಗೆ ತಾನೇಕೆ ಗೂಡು ಹೆಣೆಯುತ್ತಿದ್ದೇನೆ ಎನ್ನುವ ಪರಿವೆ ಇರಲಿಕ್ಕಿಲ್ಲ. ಹೀಗೊಂದು ಭಾವುಕ ಮನಸ್ಸಿರುವ ಮಾನವ ವಿಕಾಸವಾದದ್ದು ಹೇಗೆ? ಮಾನವನ ಆದಿಜ ಎನ್ನಿಸಿದ ವಾನರಗಳೂ ಕಲೋಪಾಸಕಗಳಾಗಿದ್ದುವೇ? ಅಥವಾ ಈ ಭಾವುಕ ಮನಸ್ಸು ಮಾನವನ ಇತ್ತೀಚಿನ ಸ್ವರೂಪಕ್ಕಷ್ಟೆ ದೊರಕಿರುವ ಸಾಮಥ್ರ್ಯವೇ? ಇತ್ಯಾದಿ ಹಲವು ಪ್ರಶ್ನೆಗಳು ವಿಕಾಸವಾದಕ್ಕೆ ನೂರೈವತ್ತು ವರ್ಷ ತುಂಬಿದ ಇಂದೂ ಉತ್ತರವಿಲ್ಲದ ಪ್ರಶ್ನೆಗಳಾಗಿವೆ.

ಬಲು ಹಿಂದಿನಿಂದಲೇ ಮಾನವರು ಕಲೋಪಾಸಕರಾಗಿದ್ದರು ಎನ್ನುವುದಕ್ಕೆ ಶಿಲಾಯುಗದ ಗುಹೆಗಳಲ್ಲಿ ದೊರಕಿರುವ ಚಿತ್ರಗಳು ಸಾಕ್ಷಿ. ಮಧ್ಯಪ್ರದೇಶದ ಭಿಂಬೆಟ್ಕದಲ್ಲಿರುವ ಗುಹೆಗಳಲ್ಲಿ ಹತ್ತುಸಾವಿರ ವರ್ಷಕ್ಕೂ ಹಿಂದಿನ ಚಿತ್ರಗಳಿವೆ. ನರ್ಸರಿ ಶಾಲೆಯ ಮಕ್ಕಳು ಬರೆದಂತೆ ತೋರುವ ಈ ಚಿತ್ರಗಳು ಮಾನವನೆಂಬ ಕಲಾವಿದನ ಶೈಶವಾವಸ್ಥೆಯ ಕುರುಹುಗಳು. ಪ್ರಪಂಚದ ಹಲವೆಡೆ ಇಂತಹ ಚಿತ್ರಗಳು ಕಾಣಸಿಕ್ಕಿವೆ. ಚಂದ್ರ, ಸೂರ್ಯ, ಕುದುರೆ, ಹಸು, ಎಮ್ಮೆಗಳಂತಹ ಪ್ರಾಣಿಗಳು ಬಿಂಬಿತವಾಗಿವೆ.  ಕೆಲವು ಸ್ಥಳಗಳಲ್ಲಿ ಮನುಷ್ಯನೂ ಬಿಂಬಿತನಾಗಿದ್ದಾನೆ. ಆದರೆ ಮನುಷ್ಯನ ಚಿತ್ರಗಳೆಲ್ಲವೂ ಎರಡು ಆಯಾಮದಲ್ಲಿ ಮಕ್ಕಳು ಬರೆವಂತಹ ಕಡ್ಡಿ ಮಾನವರಂತಹ ಚಿತ್ರಗಳು. ಮಕ್ಕಳ ಮನಸ್ಸಿನಂತೆಯೇ ಇನ್ನೂ ಶೈಶವಾವಸ್ಥೆಯಲ್ಲಿರುವ ಕಲಾವಿದನ ಮನಸ್ಸಿಗೆ ಇವು ಸಾಕ್ಷಿ.

ತನ್ನ ಚಿತ್ರಗಳನ್ನು ಪರಿಪೂರ್ಣವಾಗಿ ಬಿಂಬಿಸುವ ಸಾಮಥ್ರ್ಯ ಮಾನವನಿಗೆ ದೊರೆತದ್ದು ಯಾವಾಗ ಎನ್ನುವುದೊಂದು ಕುತೂಹಲದ ಪ್ರಶ್ನೆ. ಏಕೆಂದರೆ ಇದು ಸಾಧ್ಯವಾದ ಹಂತದಲ್ಲಿ ಮಾನವನ ಮಿದುಳಿನ ವಿಕಾಸವೂ ಹೆಚ್ಚೂ, ಕಡಿಮೆ ಪರಿಪೂರ್ಣವಾಗಿರಬೇಕು. ಆದ್ದರಿಂದಲೇ ವಿಜ್ಞಾನಿಗಳಿಗೆ ಪುರಾತನ ಮಾನವನ ಕಲಾಕೃತಿಗಳ ಮೇಲೆ ಆಸಕ್ತಿ. ಇಂತಹ ಪುರಾತನ ಕಲಾಕೃತಿಗಳನ್ನು ಹುಡುಕುತ್ತಿದ್ದ ಜರ್ಮನಿಯ ನಿಕೊಲಾಸ್ ಕೊನ್ರಾಡ್ ಎನ್ನುವವನಿಗೆ ದಕ್ಷಿಣ ಜರ್ಮನಿಯ ಹೋಲಿ ಫೆಲ್ಸ್ ಎನ್ನುವ ಸ್ಥಳದಲ್ಲಿ, ಗುಹೆಯೊಂದರಲ್ಲಿ ಆರು ಸೆಂಟಿಮೀಟರು ಉದ್ದದ ಕಲಾಕೃತಿಗಳು ಕಂಡವು.

ಬಹಳ ಹಿಂದೆ ಯುರೋಪಿನ ಶೀತಪ್ರದೇಶಗಳಲ್ಲಿ ವಾಸವಿದ್ದ ಜೂಲುಕೂದಲಿನ ಆನೆ ಮ್ಯಾಮತ್ನ ದಂತಗಳಿಂದ ಕಡೆದ ಈ ಕಲಾಕೃತಿಗಳನ್ನು ಕೊನ್ರಾಡ್ ಹೆಣ್ಣಿನ ಬಿಂಬಗಳು ಎಂದು ಗುರುತಿಸಿದ್ದಾನೆ. ಮಾನವನ ಇತಿಹಾಸದಲ್ಲಿ ಇದುವೇ ಪ್ರಪ್ರಥಮ ಶಿಲ್ಪವಾಗಿರಬೇಕು ಎನ್ನುವುದು ಇವನ ತರ್ಕ. ರೇಡಿಯೊಕಾರ್ಬನ್ ಡೇಟಿಂಗ್ ತಂತ್ರದಿಂದ ಈ ಬಿಂಬಗಳು ಎಷ್ಟು ಹಳೆಯದಿರಬಹುದು ಎಂದು ಲೆಕ್ಕ ಹಾಕಿದ್ದಾರೆ. ವಸ್ತುವಿನಲ್ಲಿ ಇರುವ ಕಾರ್ಬನ್ನಲ್ಲಿ ಎರಡು ರೂಪಗಳಿರುತ್ತವೆ. ಅವುಗಳಲ್ಲಿ ಕಾರ್ಬನ್ 14 ಎನ್ನುವ ರೂಪ ಕ್ರಮೇಣ ಕಾರ್ಬನ್ 12 ರೂಪಕ್ಕೆ ಬದಲಾಗುತ್ತದೆ. ಅರ್ಧದಷ್ಟು ಕಾರ್ಬನ್ 14 ಕಾರ್ಬನ್ 12ರ ರೂಪಕ್ಕೆ ಬದಲಾಗಲು ಸುಮಾರು 4000 ವರ್ಷಗಳು ಬೇಕು. ದೊರೆತ ವಸ್ತುವಿನಲ್ಲಿ ಇರುವ ಕಾರ್ಬನ್ 14 ಮತ್ತು ಕಾರ್ಬನ್ 12ರ ನಡುವಣ ಪ್ರಮಾಣ ತಿಳಿದರೆ, ಅದರಲ್ಲಿರುವ ಕಾರ್ಬನ್ 12 ರೂಪುಗೊಳ್ಳಲು ಎಷ್ಟು ವರ್ಷವಾಗಿರಬಹುದು ಎಂದು ಊಹಿಸಬಹುದು. ವಸ್ತುವಿನ ಕಾಲವನ್ನು ನಿರ್ಧರಿಸಬಹುದು. ಈ ತಂತ್ರದಿಂದ ಕೊನ್ರಾಡ್ಗೆ ದೊರೆತ ಬಿಂಬಗಳ ವಿಶ್ಲೇಷಣೆ ಮಾಡಿದಾಗ ಅವು ಸುಮಾರು 35000 ವರ್ಷಗಳಷ್ಟು ಹಳೆಯವೆಂದು ತಿಳಿಯಿತು.

ಮಾನವ ವಿಕಾಸವಾದದ್ದು ಆಫ್ರಿಕಾದಲ್ಲಿ ಇದ್ದ ವಾನರಜಾತಿಗಳಿಂದ ಎನ್ನುವುದು ವಿಜ್ಞಾನಿಗಳ ತರ್ಕ. ಈ ಆದಿಮಾನವರು ಯುರೋಪಿಗೆ ವಲಸೆ ಬಂದು ವಸಾಹತುಗಳನ್ನು ನಿರ್ಮಿಸಿಕೊಂಡರು. ಕ್ರಮೇಣ ಮಾನವನ ವಿಕಾಸವಾಯಿತು. ಅದೇ ಸಮಯದಲ್ಲಿಯೇ ಈ ಸಂತತಿ ಕ್ಷೀಣಿಸಿತೆಂದೂ ಪುರಾವೆಗಳು ದೊರಕಿವೆ. ಕೊನ್ರಾಡ್ಗೆ ಈಗ ದೊರೆತಿರುವ ಸ್ತ್ರೀ ಬಿಂಬಗಳು ಆದಿಮಾನವರ ಅವಸಾನವಾದ ಸಂಧಿಕಾಲಕ್ಕೆ ಸೇರಿದುವು ಎನ್ನುವುದು ಕುತೂಹಲಕರವಾದ ಸಂಗತಿ. ಹಾಗೆಂದ ಮಾತ್ರಕ್ಕೆ ಇವು ಬೇಲೂರಿನ ಶಿಲಾಬಾಲಿಕೆಯಂತೆ ಇಲ್ಲ. ಇವುಗಳಲ್ಲಿ ಸ್ತ್ರೀ ರೂಪವನ್ನು ಹುಡುಕಬೇಕಷ್ಟೆ! ಗಮನವಿಟ್ಟು ನೋಡಿದರೆ ಹೆಣ್ತನದ ದ್ಯೋತಕವಾದ ದೊಡ್ಡದೆರಡು ಸ್ತನಗಳು ಗೋಚರಿಸುತ್ತವೆ. ಉಳಿದಂತೆ ಕೈ, ಕಾಲು, ತಲೆ ಎಲ್ಲವೂ ಪುಟ್ಟವು. ಇದೇ ರೀತಿಯ, ಹೆಣ್ಣಿನ ಲೈಂಗಿಕಾಂಗಗಳೇ ಪ್ರಧಾನವಾಗಿ ಕಾಣುವ ಮೂರ್ತಿಗಳನ್ನು ಆಸ್ಟ್ರಿಯಾದ ವಿಲೆಂಡಾರ್ಫ ಎಂಬಲ್ಲಿ ಈ ಹಿಂದೆ ಪತ್ತೆ ಮಾಡಲಾಗಿತ್ತು. ವಿಲೆಂಡಾರ್ಫನ ಕನ್ಯೆಯರ ಬಿಂಬ ಸುಮಾರು 28000 ವರ್ಷಗಳಷ್ಟು ಹಿಂದಿನವು ಎಂದು ಸಿದ್ಧವಾಗಿತ್ತು.

ಇದೀಗ ದೊರೆತಿರುವ ಈ ಕೃತಿಗಳು ಇನ್ನೂ ಪುರಾತನ ಎನ್ನುವುದಷ್ಟೆ ಇವುಗಳ ವಿಶೇಷವಲ್ಲ. ಇವುಗಳ ಮುಂದೆ ವಿಲೆಂಡಾರ್ಫನ ಬಿಂಬಗಳು ಪ್ರಬುದ್ಧ ಕಲಾಕೃತಿಗಳೆನ್ನಿಸಿಕೊಳ್ಳಬಲ್ಲುವು. ಅರ್ಥಾತ್, ಕೊನ್ರಾಡ್ ಹುಡುಕಿದ ಕದಂತಕನ್ಯೆಕಿಯರನ್ನು ಕೆತ್ತಿದ ಜೀವಿಯ ಮಿದುಳು ಬಿಂಬಗಳನ್ನು ರಚಿಸುವುದನ್ನು ಇನ್ನೂ ಕಲಿಯುತ್ತಿತ್ತು ಎನ್ನಬಹುದು. ವಿಲೆಂಡಾರ್ಫನ ಕಲಾವಿದನ ಮಿದುಳು ಇದಕ್ಕಿಂತಲೂ ಸುಧಾರಣೆಗೊಂಡದ್ದು ಎನ್ನಬಹುದು. ಹಾಗಿದ್ದರೆ ಈ ಕದಂತಕನ್ಯೆಕಿಯರನ್ನು ಸೃಷ್ಟಿಸಿದ ಜೀವಿಯ ಕಾಲದಲ್ಲಿ ಕಲೋಪಾಸಕ ಮನಸ್ಸಿನ ಮಾನವ ವಿಕಾಸವಾದ ಎನ್ನಬಹುದೇ? ಅರ್ಥಾತ್ ಕಲಾವಿದನ ಮನಸ್ಸು ಆಗ ರೂಪುಗೊಂಡಿತೇ? ಈ ಪ್ರಶ್ನೆಗೆ ಉತ್ತರ ಹೇಳುವುದು ಕಷ್ಟವಾದರೂ, ಈ ಕಲಾವಿದನ ಮನಸ್ಸಿನಲ್ಲಿಯೂ ಹೆಣ್ಣಿನ ಬಿಂಬವೇ ಇತ್ತು ಎನ್ನುತ್ತಿದ್ದಾರೆ ಜರ್ಮನಿಯ ಈ ದಂತಕನ್ಯೆಯರು.

Conrad, N. J., Nature, 459, 248-252, 2009