ನಾವು ಯಾರು? ಏಕೆ? ಇತ್ಯಾದಿ ಪ್ರಶ್ನೆಗಳ ಕೌತುಕ ಹಿಂದಿನಂತೆ ಇಂದಿಗೂ ಮುಂದುವರೆದಿದೆ. ದೃಶ್ಯಕಲೆಯ ಇತಿಹಾಸವೂ ಇದೇ ಹಾದಿಯ ಅತ್ತಿತ್ತ ಸುಳಿಯುತ್ತಲೇ ನಡೆದು ಬಂದಿದೆ. ದೇಶ ಕಾಲಗಳನ್ನು ಮೀರಿದ ಕಲಾ ಸೃಷ್ಟಿಯೊಂದು ಅಸಮಾನ್ಯ ಹೊಳಹುಗಳನ್ನು ಹೊಂದಿರಬಹುದಾದರೂ ಅವುಗಳ ಪ್ರಭಾವದ ಕಲಾಕೃತಿಗಳೇ ದೃಶ್ಯಕಲಾ ಇತಿಹಾಸದ ಪುಟಗಳನ್ನು ಅಲಂಕರಿಸಿವೆ. ‘ದೃಶ್ಯ’ ಮತ್ತು ‘ಸಂದರ್ಭ’ ಈ ಎರಡರ ಸಮ್ಮಿಲನವನ್ನು ದೃಶ್ಯಕಲಾ ಇತಿಹಾಸದಲ್ಲಿ ಗಮನಿಸಬಹುದಾಗಿದೆ. ನಾಗರಿಕ ಜನರ ಇತಿಹಾಸ, ದೃಶ್ಯಕಲೆಯ ಇತಿಹಾಸಗಳೆರಡೂ ಒಂದೇ ಆಗಿಲ್ಲ.

[1] ಒಂದೇ ಕಾಲದಲ್ಲಿ ಹಲವು ವಿವಿಧ ದೃಶ್ಯ ಕಲಾ ಪ್ರಕಾರಗಳು ಉಳಿದು-ಬೆಳೆದು ಬಂದಿವೆ. ೨೦೧೦ ರ ಸಂದರ್ಭದಲ್ಲಿಯೂ ಇತಿಹಾಸ ಪೂರ್ವದ ಚಿ‌ತ್ರ-ಶಿಲ್ಪಗಳನ್ನು ನೋಡುವ ಅವಕಾಶ ಸಮಕಾಲೀನರಿಗೆ ಇದ್ದಿತು.[2] ಜತೆಜತೆಗೇ ಹಲವು ಕಾಲಘಟ್ಟಗಳ ದೃಶ್ಯಕಲೆಯ ಲೋಕವೂ ಇದ್ದೇ ಇವೆ.

ಶಿಲಾಶ್ರಯಗಳ ದೃಶ್ಯಕಲೆ ಅಂದರೆ ಅಲ್ಲಿನ ಚಿತ್ರ, ಮೃತ್‌ಪಾತ್ರೆ ಚಿತ್ರಗಳು, ಸುಡಾವೆ ಮಣ್ಣಿನ ಗೊಂಬೆಗಳು ಇತ್ಯಾದಿಗಳಲ್ಲದೆ ಬಯಲು ಬಂಡೆ ಚಿತ್ರಗಳು, ಬಯಲಲ್ಲಿ ನಿಂತ ಶಿಲ್ಪಗಳನ್ನು ನೆನಪು ಮಾಡಿಕೊಳ್ಳಬಹುದು. ಶಿಲಾಶ್ರಯಗಳು ಹಲವು ಕಾಲಘಟ್ಟಗಳಲ್ಲಿ ಹಲವು ಶೈಲಿಯ ಬಣ್ಣದ ಚಿತ್ರಗಳನ್ನು ಚಿತ್ರಿಸಿಕೊಂಡಿರಬಹುದು. ಹಾಗಾಗಿಯೇ ಒಂದು ನಿರ್ದಿಷ್ಟ ಶಿಲಾಶ್ರಯದಲ್ಲಿ ಇತಿಹಾಸ ಪೂರ್ವದ ಹಲವು ಶಿಲಾಯುಗಗಳ ಚಿತ್ರಗಳೇ ಅಲ್ಲದೆ ಇತಿಹಾಸಕಾಲದ ಹಾಗೂ ಕೆಲವೊಮ್ಮೆ ನೋಡುಗರ, ಅಧ್ಯಯನಶೀಲರ, ಪುರಾತತ್ವ ಸಂಶೋಧಕರ ಸಮಕಾಲೀನ ಚಿತ್ರಗಳೂ ಇರಬಹುದು. ಪ್ರಾಚೀನ ಅಥವಾ ಪ್ರಾಕ್ತನಶಾಸ್ತ್ರೀಯ ಅಧ್ಯಯನಗಳ ಅನ್ವೇಷಣೆಯ ಈ ಶಿಲಾಶ್ರಯಗಳು ಪ್ರಾಗೈತಿಹಾಸಿಕ ಹಾಗೂ ಐತಿಹಾಸಿಕವೂ ಆಗಿವೆ. ಇವು ಮನುಷ್ಯ ಮತ್ತು ಅವನ ಸುತ್ತಲಿನ ಪ್ರಕೃತಿಯ ನಡುವೆ ಇದ್ದ ಗಾಢ ಸಂಬಂಧವನ್ನು ಅಭಿವ್ಯಕ್ತಿಸುತ್ತವೆಯೆ? ಹಲವು ಅಗತ್ಯಗಳನ್ನು ತೃಪ್ತಿಪಡಿಸುವ ಉದ್ದೇಶವನ್ನು ಅವು ಹೊಂದಿರಲಿಲ್ಲವೆ? ಆ ಉದ್ದೇಶಗಳು ಕಾಲ ಕಾಲಕ್ಕೆ ಬದಲಾಗಿವೆಯೆ? ಎಂಬ ಪ್ರಶ್ನೆಗಳನ್ನೂ ಹುಟ್ಟು ಹಾಕುತ್ತವೆ. ಬಹುಶಃ ಉತ್ತರಗಳೂ ಬದಲಾಗುತ್ತಲೇ ಹೋಗಬಹುದು. ಹಾಗಾಗಿ ಆದಿಮಾನವ ಅಥವಾ ಆದಿನಿವಾಸಿಗಳ ದೃಶ್ಯಕಲಾ ಸೃಷ್ಟಿಯ ಬಗೆಗಿನ ಕೌತುಕ ಇನ್ನೂ ಮುಂದುವರೆದಿದೆ; ಅಧ್ಯಯನಗಳೂ ಅಷ್ಟೆ. ೨೧ನೆಯ ಶತಮಾನದ ಆದಿಯಲ್ಲಿಯೂ ಕರ್ನಾಟಕದಲ್ಲಿ ಹೊಸ ಇತಿಹಾಸ ಪೂರ್ವ ಶಿಲಾಶ್ರಯ, ಗುಹಾಚಿತ್ರಗಳನ್ನು ದೇಶದ ಇತರ ಹಲವೆಡೆಗಳಂತೆ ಅನ್ವೇಷಿಸಲಾಗಿದೆ.

ಅಭಿವ್ಯಕ್ತಿ ಏಕೆ?ಹೇಗೆ? ಎಂಬುದಕ್ಕೆ ಎಷ್ಟೆಲ್ಲ ವೈವಿಧ್ಯಮಯ, ಕೆಲವೊಮ್ಮೆ ವೈರುಧ್ಯಮಯ ಉತ್ತರಗಳಿವೆ! ಮಣ್ಣಿನ ಬಣ್ಣಗಳಿಂದ ಆರಂಭಿಸಿ ಬಹುಮಾಧ್ಯಮ (multimedia) ಹಾಗೂ ಆಕಾಶದ ಗಾಳಿ ಬೆಳಕುಗಳನ್ನೂ ಒಳಗೊಂಡ ಅವಕಾಶದ ಅಭಿವ್ಯಕ್ತಿಗಳೂ ಸಾಧಿಸಲ್ಪಟ್ಟಿವೆ. ಆದರೂ ಒಂದು ನಿರ್ದಿಷ್ಟ ಸಂದರ್ಭದಲ್ಲಿ ಯಾವುದೇ ಒಂದು ಅಭಿವ್ಯಕ್ತಿ ಮಾಧ್ಯಮವಲ್ಲದೆ ಇನ್ನೂ ಹಲವು ಮಾಧ್ಯಮಗಳು ಇರಬಲ್ಲವು. ಹಲವು ರೀತಿಯ ದೃಶ್ಯಕಲಾ ಪ್ರಕಾರಗಳು ಬೇರೆ ಬೇರೆ ಸ್ತರಗಳಲ್ಲಿ ಅಸ್ತಿತ್ವವನ್ನು ಕಾಯ್ದುಕೊಂಡಿರುತ್ತವೆ. ನಮ್ಮ ನಡುವೆ ಬಹುಮಾಧ್ಯಮಗಳ ಇನ್‌ಸ್ಟಾಲೇಷನ್ ಕಲೆಯ (Installation art) ನಡುವೆಯೂ ಅಚ್ಚರಿಗೊಳಿಸುವಂತಹ ಪ್ರಾಗೈತಿಹಾಸಕಾಲದ ದೃಶ್ಯ ಕಲೆಯ ಹಲವಾರು ನೆಲೆಗಳು ಇವೆ. ಇತಿಹಾಸಕಾಲದ ಜತೆ ಜತೆಗೇ ಜನಪದ, ಸಂಪ್ರದಾಯ ಪ್ರಕಾರದ ಚಿತ್ರ ಶಿಲ್ಪಗಳಿವೆ. ಈ ವಿವಿಧ ಶೈಲಿಗಳಲ್ಲಿ ಚಿತ್ರ, ಶಿಲ್ಪಗಳು ಸೃಷ್ಟಿಯಾಗುತ್ತಲೇ ಇವೆ. ಹೀಗೆ ಹಲವು ಪ್ರಕಾರದ ಚಿತ್ರ ಶೈಲಿಗಳು ಮುಂದೆಯೂ ಇರುತ್ತವೆ. ನೂರಾರು ವರ್ಷಗಳ ಹಿಂದಿನ ಇತಿಹಾಸ ಪೂರ್ವಕಾಲದ ಚಿತ್ರಗಳು ನಮ್ಮ ನಡುವೆ ಇವೆ ಎಂಬುದೇ ಒಂದು ಅಚ್ಚರಿಯ ಸಂಭ್ರಮದ ಸಂದರ್ಭ.

ಭಾರತದ ಪ್ರಾಗೈತಿಹಾಸ ಪೂರ್ವಕಲೆ ವಿಶ್ವಮಾನ್ಯತೆಯನ್ನು ಪಡೆದಿದೆ. ಹಾಗಾಗಿ ವಿಶ್ವದ ಇತಿಹಾಸಪೂರ್ವ ಕಲೆ ಅಧ್ಯಯನಶೀಲರ ಗಮನವನ್ನೂ ಸೆಳೆದಿದೆ. ಮಧ್ಯಪ್ರದೇಶದ ಭೂಪಾಲದ ಬಳಿಯ ಭೀಂಬೇಟ್ಕಾದ ಕಲ್ಲಾಸರೆಯು, ಗುಹಾ ಚಿತ್ರಗಳು ೧೯೫೭ರಲ್ಲಿ ಕಾಣಿಸಿಕೊಂಡು ತೀವ್ರ ಅಧ್ಯಯನಗಳಿಗೂ ಒಳಗೊಂಡು ವಿಸ್ವ ಪರಂಪರೆಯ ಪಟ್ಟಿಯಲ್ಲಿ ಸೇರಿತು. ಒಂದು ಲಕ್ಷ ವರ್ಷಗಳ ಹಿಂದೆ ಆಫ್ರಿಕಾದ Homo sapian ಆದಿವಾಸಿ ಜನಾಂಗ ಮೊದಲ ದೃಶ್ಯಕಲಾ ರೂಪ ಕಲ್ಪನೆಗೆ ಕಾರಣರಾದರು. ಸುಮಾರು ನಲವತ್ತು ಸಾವಿರ ವರ್ಷಗಳ ಹಿಂದೆ ಆ ಜನಾಂಗ ವಿಶ್ವದ ಹಲವೆಡೆ ಹಂಚಿಹೋಯಿತು. ಆದಿಮ ಕಲೆಯ ಈ ಮೊದಲ ಹೆಜ್ಜೆಗಳು ಪಶ್ಚಿಮ ಯುರೋಪನ್ನು ಆವರಿಸಿದ ನಂತರ ನಮ್ಮ ನರ್ಮದಾ ನದಿಯ ಆವರಣಕ್ಕೂ ಧಾವಿಸಿದವು. ನರ್ಮದಾ ನದಿಯ ಆಚೆ-ಈಚೆಯಿಂದ ನಮ್ಮ ದೇಶದ ಹಲವೆಡೆ ಕಾಣಿಸಿಕೊಂಡ ಈ ಆದಿಮ ಕಲೆಯ ಶೋಧವು ಆಕಸ್ಮಿಕವಾಗಿ ಅಲ್ಲಲ್ಲಿ ೧೮೮೦ರಿಂದ ಪ್ರಾರಂಭವಾಯಿತು. ಈ ದೃಶ್ಯಕಲೆಯ ಕಾಲವನ್ನು ನಿರ್ಧರಿಸುವ ಪ್ರಕ್ರಿಯೆಯೇ ಒಂದು ವಿಶೇಷ ಅಧ್ಯಯನಯೋಗ್ಯ ಶಿಸ್ತಾಗಿ ಇಂದು ಬೆಳೆದು ನಿಂತಿದೆ.[3]

ವಿಶ್ವದಲ್ಲಿ ಇತಿಹಾಸಪೂರ್ವ ಶಿಲಾಶ್ರಯ ಚಿತ್ರಗಳ ಹುಡುಕಾಟಕ್ಕೆ ಸುಮಾರು ನೂರು ವರ್ಷಗಳ ಇತಿಹಾಸವಿದೆ. ನಮ್ಮಲ್ಲಿ ಈ ಪರಂಪರೆ ಉತ್ತರ ಕರ್ನಾಟಕದಿಂದ ಪ್ರಾರಂಭ. ಹಲವಾರು ನೆಲೆಗಳ ವೈವಿಧ್ಯಮಯ ಚಿತ್ರ, ಶಿಲ್ಪ ಇತ್ಯಾದಿಗಳು ಕಾಣಿಸಿಕೊಂಡವು. ಬೆಂಗಳೂರು ಜಿಲ್ಲೆಯ ಕನಕಪುರ ಹಾಗೂ ಕೋಲಾರ ಜಿಲ್ಲೆಯ ಕೆ.ಜಿ.ಎಫ್ (ಕೋಲಾರ ಚಿನ್ನದ ಗಣಿಗಳ ಪ್ರದೇಶ), ಹಾಗೂ ಟೇಕಲ್‌ಗಳನ್ನೂ ಒಳಗೊಂಡಂತೆ ಹಲವು ಶಿಲಾಶ್ರಯಗಳ ಅನ್ವೇಷಣೆಯಲ್ಲಿ ಹಲವು ಚಿತ್ರ ನೆಲೆಗಳು ಕಾಣಿಸಿಕೊಂಡಿವೆ.

೧೮೮೦ರಲ್ಲಿ ಆಕಸ್ಮಿಕವಾಗಿಯೇ ನಮ್ಮ ದೇಶದಲ್ಲಿ ಪ್ರಾಗೈತಿಹಾಸ ದೃಶ್ಯ ಕಲೆಯ ಶೋಧನಾ ಚಟುವಟಿಕೆಗಳು ಪ್ರಾರಂಭಗೊಂಡವು. ಹ್ಯೂ ಬರ್ಟ್‌‌ನಾಕ್ಸ್ ಬಳ್ಳಾರಿಯ ಹತ್ತಿರದ ಕಪ್ಪಗಲ್ಲು ಬಳಿ ಕುಟ್ಟಿ/ಗೀರಿ ಬಿಡಿಸಿದ ಚಿತ್ರಗಳನ್ನು ನೋಡಿದರು. ಇದೇ ಸಮಯದ ಸ್ವಲ್ಪ ಹಿಂದೆ ಮುಂದೆ ಆರ್ಚಿಬಾಲ್ಡ್ ಕಾರ್ಲೆಲೈ ಹಾಗೂ ಜಾನ್‌ಕಾಕ್ ಬರ್ನ್‌ ಮಧ್ಯಪ್ರದೇಶದ ಮಿರ್ಜಾಪುರದ ಬಳಿ ಕೈಮೂರ್ ಬೆಟ್ಟಗಳಲ್ಲಿ ಕಲ್ಲಾಸರೆ (rocks helter) ಗಳಲ್ಲಿ ವರ್ಣಚಿತ್ರಗಳನ್ನು ಕಂಡರು. ನಂತರ ಇಂತಹ ನೆಲೆಗಳ ಶೋಧನೆ ಆಗಾಗ ನಡೆದೇ ಇದ್ದಿತು. ಇದೊಂದು ನಿಲ್ಲದ ಪ್ರಕ್ರಿಯೆ.

೧೯೩೫ರಲ್ಲಿ ಲಿಯೋನಾರ್ಡ್‌‌ಮನ್ ಗಂಗಾವತಿ ತಾಲ್ಲೂಕಿನ ಹಿರೇಬೆನಕಲ್ ಗುಡ್ಡಗಳಲ್ಲಿ ಆಕರ್ಷಕವಾದ ಮೂರು ಗುಹೆಗಳನ್ನು ಕಂಡರು. ಭಿಲ್ಲಮರಾಯನ ಗುಡ್ಡದಲ್ಲಿ ಕುಟ್ಟಿ, ಗೀರಿ ಮೂಡಿಸಿದ ಚಿತ್ರಗಳನ್ನು ಕಂಡರು. ಇತಿಹಾಸ ಪೂರ್ವ ಶಿಲಾಶ್ರಯ ಚಿತ್ರ ಅನ್ವೇಷಣೆಯಲ್ಲಿ ಈ ಮೊದಲೇ ಉಲ್ಲೇಖಿಸಿರುವ ೧೯೫೭ ಮಹತ್ವದ ವರ್ಷ. ಏಕೆಂದರೆ ಭೀಂಬೇಟ್ಕಾದಲ್ಲಿ ಅಪರೂಪದ ಸುಂದರ ಚಿತ್ರಗಳನ್ನು ೨೦೦ಕ್ಕೂ ಹೆಚ್ಚು ಶಿಲಾಶ್ರಯ ಗುಹೆಗಳಲ್ಲಿ ಕಂಡುಕೊಳ್ಳಲಾಯಿತು. ವಾಕಾನ್ಯರ್ ಅವರಿಂದಾಗಿ ಈ ಅನ್ವೇಷಣೆ ಅಪೂರ್ವ. ಅವರು ೧೯೮೦ರ ದಶಕದಲ್ಲಿ ಕರ್ನಾಟಕಕ್ಕೂ ಬಂದು ಹೋದರು. ನಮ್ಮಲ್ಲಿ ಶಿಲಾಶ್ರಯ ನೆಲೆಗಳು ಇರಬಹುದಾದ ಸಾಧ್ಯತೆಯನ್ನು ಈ ಬರಹಗಾರನಿಗೆ ತೋರಿಸಿದವರು ಅವರು. ಅನ್ವೇಷಣೆಗಳು ಫಳಗಳನ್ನೂ ನೀಡಿವೆ. ವಾಕಾನ್ಕರ್ ನಮ್ಮ ಬಾದಾಮಿಯ ಸುತ್ತಮುತ್ತ ಕೆಲವು ಮಹತ್ವದ ಚಿತ್ರಗಳನ್ನು ಹುಡುಕಿಕೊಟ್ಟರು!

ಮಧ್ಯಪ್ರದೇಶದ ಬೆಟ್ಟಾನದಿಯ ಬದಿಯ ಭೀಂಬೇಟ್ಕಾ ಇತಿಹಾಸಪೂರ್ವ ಶಿಲಾಶ್ರಯ ಚಿತ್ರಗಳು ಭಾರತೀಯ ದೃಶ್ಯ ಕಲೆಯ ಮೊದಲನೆಯ ಅಧ್ಯಾಯವಾಗಿ ಕಾಣಿಸಿಕೊಂಡಿವೆ. ಶಿಲಾಯುಗ ಪೂರ್ವಕಾಲದಿಂದ ಶಿಲಾಯುಗದ ಅಂತ್ಯದವರೆಗೆ ಸತತವಾಗಿ ಇತಿಹಾಸ ಪೂರ್ವಜರ ವಾಸಸ್ಥಳವಾಗಿದ್ದ ಭೀಂಬೇಟ್ಕಾ ಸಮಚ್ಚಯಗಳು ಸುಸ್ಥಿತಿಯಲ್ಲಿವೆ. ವಿಶ್ವಪರಂಪರೆಯ ತಾಣವಾಗಿ ಆಯ್ಕೆಗೊಂಡ ನಂತರವಂತೂ ಅಲ್ಲಿ ಹಲವು ರೀತಿಯ ಸಂರಕ್ಷಣೆಯ ಕಾರ್ಯಗಳು ನಡೆದಿವೆ. ಆದಿಮ ನಿಷಾದ್, ಪುಲಿಂದ ಮತ್ತು ವನಾರ್ ಮೊದಲಾದ ಆದಿವಾಸಿ ಜನರು ಈ ಸಮುಚ್ಚಯದ ವಿವಿಧ ಎತ್ತರಗಳಲ್ಲಿ ವಿವಿಧ ಎತ್ತರಗಳಲ್ಲಿ ತನ್ನ ಅಭಿವ್ಯಕ್ತಿಗೆ ರೂಪ ನೀಡಿದ್ದಾರೆ. ಉಜ್ಜಯನಿಯ ವಾಕಾನ್ಕರ್ ಈ ದೃಶ್ಯಕಲಾ ಅಚ್ಚರಿಯನ್ನು ಇಡೀ ವಿಶ್ವಕ್ಕೆ ಪರಿಚಯಿಸಿದರು. ಜೆ.ಸ್ವಾಮಿನಾಥನ್ ಇಲ್ಲಿನ ಕರೆಯ ರೂಪ ಹಾಗೂ ಆಶಯಗಳನ್ನು ತಮ್ಮ ಕೃತಿಗಳಲ್ಲಿ ತಂದುಕೊಂಡರು.

ಭೀಂಬೇಟ್ಕಾ ಶಿಲಾಶ್ರಯಗಳಲ್ಲಿ ಒಂದರ ಮೇಲೊಂದು ಅಥವಾ ಬಣ್ಣವನ್ನು ಪದೇ ಪದೇ ಅದೇ ಚಿತ್ರಗಳ ಮೇಲೆ ಲೇಪಿಸಿ ರೂಪಿಸಿರುವುದರಿಂದ ಮತ್ತು ಅವುಗಳ ಶೈಲಿಯ ವೈವಿಧ್ಯತೆಯಿಂದ ಈ ಚಿತ್ರಗಳನ್ನು ೯ ಘಟ್ಟಗಳಲ್ಲಿ ವಿಭಾಗಿಸಲಾಗಿದೆ. ಅತಿ ಹಳೆಯವೆಂದರೆ ಪ್ರಾಚೀನ ಶಿಲಾಯುಗಕ್ಕೂ, ನವೀನ ಶಿಲಾಯುಗಕ್ಕೂ ನಡುವಣ ಮಧ್ಯ ಶಿಲಾಯುಗದ್ದು. ಆನಂತರದ್ದು ಇತಿಹಾಸ ಕಾಲದ್ದು. ಬಹುಶಃ ಸೆಳಿಗೊಂಬು (twigs)ಗಳಿಂದ ಮಾಡಿದ ತೆಳುವಾದ ಕುಂಚಗಳ ನೆರವಿನಿಂದ ಚಿತ್ರಿಸಲಾಗಿದೆ. ರೇಖಾ ಮತ್ತು ವರ್ಣಪ್ರಧಾನ ಚಪ್ಪಟೆ ಚಿತ್ರಗಳು ಪ್ರಾಣಿಗಳ ಮತ್ತು ಮಾನವರ ಆಕಾರಗಳ ವಿವಿಧ ಆಯಾಮಗಳನ್ನು ಅರಗಿಸಿಕೊಂಡಿವೆ. ಜಟಿಲ ವಿನ್ಯಾಸಗಳು, ಸವಾರರು, ಕುದುರೆಗಳು, ಕಾದಾಟದ ದೃಶ್ಯಗಳು, ಬೇಟೆ, ಮೆರವಣಿಗೆಯ ದೃಶ್ಯಗಳು, ಸಂಗೀತ ಹಾಗೂ ನೃತ್ಯ ಕುರಿತ ಚಿತ್ರಗಳೇ ಅಲ್ಲದೆ ವೈವಿಯಧ್ಯಮಯ ರೂಪ-ದೃಶ್ಯ ಕಲ್ಪನೆಗಳಿವೆ. ವೃಕ್ಷವೊಂದರ ಆಕರ್ಷಕ ರೇಖಾ ಸಂಯೋಜನೆ ಗಮನ ಸೆಳೆಯುವಂತಿದೆ.

ಭೀಂಬೇಟ್ಕಾದ ಬಹುತೇಕ ಚಿತ್ರಗಳು ಕೆಂಪುಕಾವಿ ಮತ್ತು ಬಿಳಿಯ ಬಣ್ಣಗಳನ್ನು ಹೊಂದಿವೆ. ಮಿಶ್ರಛಾಯಾ ವರ್ಣಚಿತ್ರಗಳೂ ರೇಖಾರೂಪಗಳ ವೈಭವೀಕರನದಂತಿವೆ. ಕೆಲವು ಚಿತ್ರಗಳು ಹಸಿರು ಮತ್ತು ಹಳದಿಯ ಬಣ್ಣಗಳನ್ನು ಲೇಪಿಸಿಕೊಂಡಿವೆನ! ಕ್ರ.ಸಂ/ಏ.ಎಸ್.ಐ ೯ರ ಶಿಲಾಶ್ರಯ ಈ ದೃಷ್ಟಿಯಿಂದ ಗಮನಾರ್ಹ. ಮರಳುಗಲ್ಲಿನ ಸುಮಾರು ೭೫೪ ಶಿಲಾಶ್ರಯಗಳ ಸುಮಾರು ೫೦೦ರ ಉಬ್ಬು ಬಂಡೆಯ ಭಿತ್ತಿ ಹಾಗೂ ಛಾವಣಿಗಳಲ್ಲಿ, ಕೆಲವೊಮ್ಮೆ ಹತ್ತಲು ಶ್ರಮಿಸಬೇಕಾದ ಎತ್ತರಗಳಲ್ಲಿ, ಅಲ್ಲದೆ ತೀರ ಕೆಳಭಾಗದಲ್ಲಿಯೂ ಸಹ ಈ ಚಿತ್ರಗಳಿವೆ. ಈ ಬಹುತೇಕ ರೇಖಾಚಿತ್ರಗಳು, ಹಲವೊಮ್ಮೆ ಬಣ್ಣವನ್ನು ಚಪ್ಪಟೆಯಾಗಿ ಲೇಪಿಸಿದ ಚಿತ್ರಗಳೊಂದಿಗೆ ಇವೆ. ಮ್ಯಾಂಗನೀಸ್, ಹೆಮಟೈಟ್, ಮೃದುಕೆಂಪು ಶಿಲೆ ಮತ್ತು ಮರದ ಇದ್ದಿಲಿನಿಂದ ಬಣ್ಣಗಳನ್ನು ಪಡೆಯಲಾಗಿದೆ. ಪ್ರಾಣಿಗಳ ಕೊಬ್ಬು ಮತ್ತು ಮರದ ಎಲೆಗಳ ರಸವನ್ನು ಈ ಬಣ್ಣಗಳೊಂದಿಗೆ ಮಿಶ್ರಮಾಡಿ ಚಿತ್ರಿಸಲಾಗಿದೆ. ಚಿತ್ರಿತ ಅವಕಾಶದ (space) ಬಂಡೆಗಳು ಆಕ್ಸೈಡ್‌ಗಳ ಹಾಜರಿಯಿಂದ ಉಂಟಾಗಿರುವ ರಾಸಾಯನಿಕ ಪ್ರಕ್ರಿಯೆಯಿಂದ ಶತಮಾನಗಳ ನಂತರವೂ ಈ ಬಣ್ಣಗಳು ಉಳಿದುಬಂದಿವೆ. ಈ ಚಿತ್ರ ಪರಂಪರೆಯ ಸಾಲಿಗೆ ಸೇರಿದ ಹಲವಾರು ಶಿಲಾಶ್ರಯ-ಗುಹೆಗಳ ಚಿತ್ರ ಸಮೂಹ ಮಧ್ಯಪ್ರದೇಶದಲ್ಲಿದೆ. ದೃಶ್ಯ ಕಲೆಯ ದೃಷ್ಟಿಯಿಂದ ಪಚ್ಚಮಡಿ, ಹೋಶಂಗಾಬಾದ್‌ಗಳು ಸುಂದರವಾದ, ವಿಶಿಷ್ಟ ಚಿತ್ರಗಳನ್ನು ಹೊಂದಿವೆ.

ಕರ್ನಾಟಕದಲ್ಲಿ ಲಿಯೋನಾರ್ಡ್‌‌ಮನ್ ಅವರ ಶೋಧನೆಯ ನಂತರ ೧೯೪೦ರಲ್ಲಿ ರಾಯಚೂರು ಚಿಲ್ಲೆಯ ಮಸ್ಕಿ, ಕಲ್ಲೂರು, ಗುಲ್ಬರ್ಗಾ ಜಿಲ್ಲೆಯ ಯಾದಗಿರಿ ಬಳಿಯ ಬಳಿಚಕ್ರ ಮೊದಲಾದ ನೆಲೆಗಳು ಅ. ಸುಂದರ ಅವರ ಆಸಕ್ತಿಯಲ್ಲಿ ಕಾಣಿಸಿಕೊಂಡವು. ನಂತರ ಹಲವರಿಂದ ಈ ಅನ್ವೇಷಣೆ ಗಣನೀಯ ರೀತಿಯಲ್ಲಿ ರಾಜ್ಯದ ಹಲವೆಡೆ ನಡೆದಿದೆ. ಸೂಕ್ಷ್ಮ ಶಿಲಾಯುಗದಿಂದ (ಸು.ಕ್ರಿ.ಪೂ. ೧೦,೦೦೦-೭೦೦೦) ಕಬ್ಬಿಣಯುಗದ ಬೃಹತ್ ಶಿಲಾಯುಗದ ಹಂತದ ಕೊನೆಯವರೆಗಿನ (ಸು.ಕ್ರಿ.ಪೂ. ೧೨೦೦-೨೦೦) ಹಲವು ನೆಲೆಗಳು ಅಧ್ಯಯನ ಮಾಡುವವರ ಪಟ್ಟಿಯಲ್ಲಿವೆ. ಗುಹೆ, ಕಲ್ಲಾಸರೆಯ ವರ್ಣಚಿತ್ರಗಳು ೪೦ಕ್ಕೂ ಹೆಚ್ಚು ನೆಲೆಗಳಲ್ಲಿ, ಕುಟ್ಟಿದ, ಗೀರಿದ ಚಿತ್ರಗಳು ಸುಮಾರು ೩೦ ನೆಲೆಗಳಲ್ಲಿ ಶೋಧಿಸಲ್ಪಟ್ಟಿವೆ. ಬಳ್ಳಾರಿ ಜಿಲ್ಲೆಯ ಕೂಡ್ಗಿಗಿ ತಾಲ್ಲೂಕಿನ ಕುಮತಿಯಲ್ಲಿ ಹೊಸಶಿಲಾಯುಗದ ಎರಡು ಬೃಹತ್ ಶಿಲ್ಪಗಳು ರಕ್ಕಸಗಲ್ಲುಗಳು ಹೆಸರಿನಲ್ಲಿ ಖ್ಯಾತವಾಗಿವೆ. ಮೊಳಕಾಲ್ಮೂರು ತಾಲ್ಲೂಕಿನ ನುಂಕಪ್ಪನ ಗುಡ್ಡದ ನುಂಕಮಲ್ಲಯ್ಯ ಸಿದ್ಧೇಶ್ವರರು ಮನುಷ್ಯ ಬೇಟೆಯಲ್ಲಿ ನಿರತ ರಾಕ್ಷರಿಬ್ಬರನ್ನು ಹೀಗೆ ಶಿಲಾಮೂರ್ತಿಗಳಾಗಿಸಿದರೆಂದು ಸ್ಥಳೀಯ ದಂತಕತೆ ಇದೆ. ಸುಮಾರು ೧೫ ಅಡಿ ಎತ್ತರದ ಈ ಶಿಲ್ಪಗಳು ಸರಳ ಸುಂದರ. ಬಸ್ತಾರಿನ ಗೋರಿಗಳ ಬಳಿ ಸತ್ತವರ ಕಥಾನಕದ ಚಿತ್ರ ಬರೆದು ನಿಲ್ಲಿಸುವ ಪರಿಪಾಟ ಇದೆ. ಅಲ್ಲಿನ ಆದಿವಾಸಿ ಜನರು ಆ ಪರಂಪರೆಯನ್ನು ಮುಂದುವರೆಸಿದ್ದಾರೆ. ಕುಮತಿಯಲ್ಲಿನ ನಿಂತ ನಿಲುವಿನ ಶಿಲ್ಪಗಳು ನಮ್ಮಲ್ಲಿನ ವಿಶಿಷ್ಟ ಆದಿಮ ಪ್ರಜ್ಞೆಗೆ ಸಾಕ್ಷಿಗಳಂತಿವೆ.

ನಮ್ಮ ೨೦೧೦ರ ಸಮಕಾಲೀನ ಕಲಾಸೃಷ್ಟಿಗೆ ಕಾರಣಗಳಾದ ಸ್ವ-ಅಭಿವ್ಯಕ್ತಿ, ಭಾವನೆಗಳ ತೀವ್ರತೆ, ಸಂತೋಷ, ಸೌಂದರ್ಯ ಪ್ರಜ್ಞೆ ಇತ್ಯಾದಿಗಳು ಇತಿಹಾಸಪೂರ್ವ ಚಿತ್ರಗಳ ಸೃಷ್ಟಿಗೆ ಕಾರಣ ಅಲ್ಲ. ಈ ಕಲೆಯನ್ನು ಹಲವಾರು ಪ್ರಾಗೈತಿಹಾಸಕಾರರ ದೃಷ್ಟಿಯಲ್ಲಿ ಎರಡು ಪ್ರಧಾನ ಅಂಶಗಳು ಪ್ರಭಾವಿಸಿವೆ. ೧. ಆಹಾರದ ಸಂಪಾದನೆ ೨. ಆಹಾರವಾಗುವ ಪಶು, ಪಕ್ಷಿ, ಗಿಡ, ಮರ, ಬಳ್ಳಿಗಳ ಸಮೃದ್ಧ ಬೆಳೆವಣಿಗೆ ಮತ್ತು ಅವುಗಳ ವಂಶ ಅಭಿವೃದ್ಧಿ. ಜತೆ ಜತೆಗೇ ಬೇರೆಯ ಅಂಶಗಳ ಪ್ರಭಾವವೂ ಇದ್ದೇ ಇವೆ. ಭಾವನಾತ್ಮಕ ಪ್ರೇರಣೆಯು ಹೆಚ್ಚು ಪ್ರಭಾವಶಾಲಿಯಾಗಿಲ್ಲ. ಅಲಂಕರಣೆ, ಮಾಂತ್ರಿಕ ಕಟ್ಟಳೆ, ಸಾಂಕೇತಿಕ ಭಾಷೆ, ಹೊಸ ಅನ್ವೇಷಣೆಯ ಉಪಯುಕ್ತ ಪರಿಕರಗಳ ದಾಖಲೀಕರಣಗಳೂ ಗಣನೀಯ ಪ್ರಭಾವ ಬೀರಿವೆ. ಈ ಆಶೋತ್ತರಗಳ ಪೂರೈಕೆಗೆ ಆದಿಮ ಜನರ ಕೆಲವು ನಂಬಿಕೆಗಳು, ಕಟ್ಟು-ಕಟ್ಟಳೆಗಳು ಬೆಳೆದು ಬಂದವು. ಈ ಉದ್ದೇಶಗಳ ಸಾಧನೆಗೆ ‘ಪ್ರಾಣಿಗಳ ಬೇಟೆ’, ‘ಗೋಗ್ರಹಣ’ ಇತ್ಯಾದಿಗಳಿಗೆ ಹೋಗುವ ಮೊದಲು ಯಶಸ್ವಿ ಬೇಟೆಯನ್ನು ಸೂಚಿಸುವ ಸಮೂಹ ನೃತ್ಯ, ಗರ್ಭ ಧರಿಸಿದ ಪ್ರಾಣಿ. ಈಟಿಯಿಂದ ಚುಚ್ಚಲ್ಪಟ್ಟ ಪ್ರಾಣಿ. ಬಾಣದ ಸಾಂಕೇತಿಕ ಗುರುತುಗಳು ಹೀಗೆ ವೈವಿಧ್ಯಮಯ ಚಿತ್ರಗಳನ್ನು ಚಿತ್ರಿಸುವ ಆಚರಣೆ ಬೆಳೆಯಿತು. ಸಹಜವಾಗಿ ಪ್ರಕೃತಿಯಲ್ಲಿ ಸಿಗುವ ವಸ್ತುಗಳು, ಆಯುಧ ಪರಿಕರಗಳಾಗಿ ಹೊರ ಜಗತ್ತನ್ನು ಪ್ರಭಾವಿಸುವ, ನವೀಕರಿಸುವ ಸಾಧ್ಯತೆ ಆದಿಮಾನವನಲ್ಲಿ ಮತ್ತೊಂದು ಚಿಂತನೆಗೆ ಕಾರಣವಾದವು. ಅದು ‘ಮಾಂತ್ರಿಕ ಪರಿಕರ’ಗಳಿಂದ ಪ್ರಕೃತಿಯನ್ನೇ ‘ಮಾಟ’ಮಾಡಬಹುದೆಂಬುದು! ಹಾಗಾದಾಗ ಕೆಲಸ ಮತ್ತು ಶ್ರಮಗಳ ಅಗತ್ಯವೇ ಆಗದಲ್ಲ ! ತಮ್ಮ ಇಷ್ಟದಂತೆ ಪ್ರಾಣಿ, ಪಕ್ಷಿಗಳ ನಿಯಂತ್ರಣಕ್ಕಾಗಿ ಸಾಂಕೇತಿಕ ರೇಖಾ ರೂಪಗಳು, ‘ವಿಕೃತಿ ಸೌಂದರ್ಯ ಮೀಮಾಂಸೆ’ಯ ಪ್ರಾರಂಭದ ಹೆಜ್ಜೆಗಳಂತೆ ಮೂಡಿಬಂದವು. ಆದರೆ ಅರ್‌ನೆಸ್ಟ್ ಫಿಶ್ಚರ್ “Art in the dawn of humanity had little to do with beaty and nothing at all to do with aesthetic desire: it was a magical tool or weapon of the human collective in its struggle for survival the magic of tool making led inevitably to the attempt to extend magic to infinity. Art was a magical tool and it served man in mastering nature and developing social relationship. Clearly the decisive function of art was to exert power over nature, an enemy, a sexual partner, power over reality power to strengthen the human collective” ಎಂದು ತಮ್ಮ ‘The necessity of art’ ನಲ್ಲಿ ವ್ಯಕ್ತಪಡಿಸಿರುವುದು ಆದಿಮ ಕಲೆಯ ಮೂಲ ಕಾರಣ, ಸಂದರ್ಭ, ಸಾಧ್ಯತೆಗಳ ಬಗ್ಗೆ ಕುತೂಹಲ ಉಂಟುಮಾಡುತ್ತದೆ.

ಮಾಂತ್ರಿಕ ಶಕ್ತಿಯ ಪ್ರಭಾವ ಹೊಸ ಶಿಲಾಯುಗಕ್ಕಿಂತಲೂ ಹಿಂದಿನ ಸಂದರ್ಭದಲ್ಲಿ ಬಹುತೇಕ ಯಾಜಮಾನ್ಯ ಹೊಂದಿತ್ತು. ಪ್ರಕೃತಿಯ ಕುರಿತ ಭಯವನ್ನು ಈ ಮಾಂತ್ರಿಕರು ತಮ್ಮದೇ ಆದ ರೀತಿಯಲ್ಲಿ ಯಾಜಮಾನಿಕೆಗೆ ದುಡಿಸಿಕೊಂಡರು. ಮಾಟಗಾರರೂ ಆಗಿದ್ದು ದೇವಮಾನವ ಸ್ಥಾನವನ್ನು ಹೊಂದಿದ್ದರು. ೨೦-೪೦ ಸಾವಿರ ವರ್ಷಗಳ ಹಿಂದಿನಿಂದ ಮಾಂತ್ರಿಕ ಧಾರ್ಮಿಕ ಆಚರಣೆಗಳು ಆದಿಮ ಜನರಲ್ಲಿ ಬೆಳೆದು ಬಂದಿವೆ. ೨೧ನೆಯ ಶತಮಾನದಲ್ಲಿಯೂ ಭಾರತದ ಹಲವು ಗುಡ್ಡಗಾಡು-ಆದಿಮಸತ್ವಗಳ ಮೂಲದ ಜನರಲ್ಲಿ ವಿಶಿಷ್ಟ ಆಚರಣೆಗಳು ಮುಂದುವರಿದಿವೆ. ಈ ಮೂಲದ ಅತಿ ಮುಂದೆವರೆದ ಸಮೂಹಗಳಲ್ಲಿಯೂ ಈ ಪುರಾತನ ಮಾಂತ್ರಿಕನ ಪಾತ್ರ, ‘ದೇವಮಾನವ’ ಸ್ಥಾನವನ್ನು ಪಡೆದುಕೊಂಡು ಚಲಾವಣೆಯಲ್ಲಿದೆ. ಹಿಂದಿನ ಮಾಂತ್ರಿಕನು ನೋವು ನಿವಾರಕ, ಮನಃಶಾಸ್ತ್ರಜ್ಞ, ದೈವಿಕಶಕ್ತ, ಐಂದ್ರಜಾಲಿಕ, ಮಾಟಗಾರ ಮತ್ತು ಪರಮಜ್ಞಾನಿ ಇವೆಲ್ಲವುಗಳ ಒಟ್ಟು ರೂಪವೇ ಆಗಿದ್ದನು. ಈ ಸರ್ವಶಕ್ತ ಮಾಂತ್ರಿಕ ಇಷ್ಟಬಂದಾಗ ಸಮಾಧಿ ಸ್ಥಿತಿಯನ್ನು ಹೊಂದಿ ತನ್ನ ಆತ್ಮದ ಮೂಲಕ ದೇಹದಿಂದ ಹೊರ ಸಂಚರಿಸಿ ಹೊರ ಪ್ರಪಂಚಗಳನ್ನು ಪ್ರವೇಶಿಸಿ ಅಲ್ಲಿನ ದೇವಶಕ್ತಿಗಳೇ ಅಲ್ಲದೆ ಈ ಹಿಂದೆ ಸತ್ತ ಹಿಂದಿನ ತಲೆಮಾರಿನವರನ್ನು ಭೇಟಿ ಮಾಡಿ ಅವರಿಂದ ವಿಶಿಷ್ಟ ಶಕ್ತಿಗಳನ್ನು ಪಡೆದು ಹಿಂದಿರುಗಿ ತನ್ನ ದೇಹ ಪ್ರವೇಶಿಸಿ ಇಲ್ಲಿ ಸಾಯುವ ಜನರು ಮೇಲಿನ ಲೋಕ ಸೇರುವ ಮಾರ್ಗದರ್ಶಿಯಾಗಿ ನಡೆದುಕೊಳ್ಳುವ ನಡವಳಿಕೆ, ನಂಬಿಕೆ ಆ ಜನರದು. ಕೆಲವೊಮ್ಮೆ ಭೂತ-ಪ್ರೇತಗಳೊಂದಿಗೆ ಹೋರಾಡುವ ಪರಿಯೂ ಆಗಿತ್ತು. ತನ್ನ ಶತ್ರು ಮಾಂತ್ರಿಕನನ್ನು ನಿಗ್ರಹಿಸಲು ಸಹ ಮಾಂತ್ರಿಕನು ಸಮಾಧಿಸ್ಥಿತಿಯ ಲಾಭ ಪಡೆಯುತ್ತಿದ್ದರು. ಈ ‘ಮಾಂತ್ರಿಕರ ಪಯಣ’ಒಂದು ರೀತಿಯ ಆಕಾಶದ ಹಾರಾಟದ ಅನುಭವ. ಈ ಮಾಂತ್ರಿಕರ ರೂಪಕಲ್ಪನೆಯೂ ಪಕ್ಷಿ ಸಂಬಂಧಿ ಸಶಕ್ತ ಸಾಂಕೇತಿಕತೆಯನ್ನು ಹೊಂದಿದೆ. ಇದನ್ನು ಒಂದು ರೀತಿಯಲ್ಲಿ ಆತ್ಮದ ಪಯಣದ ಭೌತ-ಭೂದೃಶ್ಯಲೋಕವಾಗಿ ಚಿತ್ರಿಸಿ ನೋಡಬಹುದು. ಇತರ ಪ್ರಪಂಚ ಪ್ರವೇಶಿಸುವ ಸಮಾಧಿ ಸಾಮರ್ಥ್ಯದ ಮಾಂತ್ರಿಕನು ಹೊರ ಬಂದ ಕೂಡಲೇ ಅಲ್ಲಿ ಕಂಡು-ಕೇಳಿದ್ದನ್ನು ನೆನಪಿಟ್ಟುಕೊಂಡಿರುತ್ತಿದ್ದರು. ಕೆಲವೊಮ್ಮೆ ಶಿಲಾಶ್ರಯಗಳ ಶಿಲಾಮೇಲ್ಮೈಗಳಲ್ಲಿ ರೇಖಿಸಿ ಚಿತ್ರಿಸಿಬಿಡುವ ಸಾಮರ್ಥ್ಯವನ್ನು ಹೊಂದಿದ್ದನು.

ಆದಿಮ ಸತ್ವಕಣ್ಣುಕಿವಿಕೈ

ಆದಿಮ ಸತ್ವ ಸಂವೇದಿ ಶಿಲಾಶ್ರಯಗಳಲ್ಲಿದ್ದ ಜನರಿಗೆ ಕೈಗಳಿದ್ದಂತೆ ಕಿವಿ, ಕಣ್ಣುಗಳೂ ಇದ್ದವಷ್ಟೆ. ದೃಶ್ಯಲೋಕದ ಜತೆ ಜತೆಗೇ ಶಬ್ದಲೋಕವೂ ಅವರಿಗೆ ಹೊಸ ಹೊಳಹುಗಳನ್ನು ನೀಡಿರಬೇಕು. ೨೧ನೆಯ ಶತಮಾನದ ಗಡಿಬಿಡಿಯ, ಟೆಕ್ನೋ-ಕೂಲಿ ಸಂಸ್ಕೃತಿಯ ಜನವಸತಿಗಳಿಂದ ಬಹುದೂರದಲ್ಲಿರುವ ಶಿಲಾಶ್ರಯಗಳ ನಡುವೆ ನಡೆದಾಡಿದಾಗ ಈ ದೃಷ್ಟಿಯತ್ತ ಮನಸ್ಸು ಪಯಣಿಸಬಲ್ಲದು. ಮಲ್ಲಾಪುರದ ಖಾನ್ ಸಾಬ್ ಗುಹೆ ಇರಲಿ ಅಥವಾ ಭೀಂಬೇಟ್ಕಾದ audience hall ಎಂದು ಕರೆಯಲಾಗುವ ಇತಿಹಾಸಪೂರ್ವ ಸಭಾಂಗಣವೇ ಇರಲಿ, ಬಾದಾಮಿಯ ಸಿಡಿಲಪಡಿಯ ಆವರಣವೇ ಇರಲಿ ಅಲ್ಲೆಲ್ಲ ವಿಶಿಷ್ಟ ಮೌನ ಮನೆ ಮಾಡಿದೆ; ಶಬ್ದದೊಳಗಣ ನಿಶ್ಯಬ್ದದಂತೆ. ನಮಗೆ ಒಂದು ರೀತಿಯ ‘ಕಾಲ ಕುರುಡು’ ಕಾಡುತ್ತಿರುವಂತಿದೆ. ಪುರಾತತ್ವ ಅನ್ವೇಷಕರು, ಸಂಶೋಧಕರು ಪ್ರಸ್ತುತ ಅದನ್ನು ಮೀರುವಂತೆ ಕಾರ್ಯ ನಿರ್ವಹಿಸಬೇಕಾಗಿದೆ. ಧ್ವನಿಶಾಸ್ತ್ರ ಸಂಬಂಧಿ ಶಬ್ದದ ಪುರಾತತ್ವತೆಯನ್ನು ಧ್ವನಿವೈಜ್ಞಾನಿಕರು ಅನ್ವೇಷಿಸುವ ನಿಟ್ಟಿನಲ್ಲಿ ಗಮನ ನೀಡದಿರುವುದೊಂದು ಅಚ್ಚರಿ. ಶಿಲಾಶ್ರಯಗಳ ಸುತ್ತಮುತ್ತ ನಡೆಯುತ್ತಿದ್ದ ಹಲವು ಆಚರಣೆಗಳು ಹಾಗೂ ಸಂಭ್ರಮಗಳ ಸಾಮೂಹಿಕ ನಡವಳಿಕೆಗಳಲ್ಲಿ ದೃಶ್ಯ-ಶಬ್ದ ಎಲ್ಲವು ಪ್ರಭಾವಶಾಲಿಯಾಗಿಯೇ ದುಡಿಸಿಕೊಳ್ಳಲ್ಪಟ್ಟಿರಬೇಕು. ಇತಿಹಾಸ ಪೂರ್ವ ಹಾಗೂ ನಂತರದ ಸಂದರ್ಭದಲ್ಲಿ ಶಿಲಾಶ್ರಯಗಳ ನೆಲೆಗಳನ್ನು ಹೇಗೆಲ್ಲ ಬಳಸಲು ಪ್ರಯತ್ನಿಸಿರಬಹುದು? ಇಂದು ನೀರವ ಮೌನವಾಗಿರುವ ಹಿಂದೆಯೇ ಸತ್ತ ಈ ನೆಲೆಗಳು ಅಲ್ಲಿನ ಆತ್ಮಗಳ ಮೂಲಕ ಭೂತಕಾಲೀನವಾಗಿ ‘ರಮ್ಯ’ ಅನುಭವವನ್ನೂ ನೀಡಬಲ್ಲವು! ಆದರೆ ಇದು ಸತ್ಯಕ್ಕೆ ದೂರವೂ ಇರಬಹುದು. ಆದರೂ ಇತಿಹಾಸಪೂರ್ವಕಾಲದ ಶಬ್ದದ ಗ್ರಹಿಕೆಯೇ ಪ್ರಕೃತಿಯನ್ನು ಮೀರಿದ ಒಂದು ‘ಘಟಿಸುವಿಕೆ’ ಆಗಿತ್ತು. ಇಂದಿನ ಸಂದರ್ಭಕ್ಕೆ ಹೊಂದದ ಸೃಷ್ಟಿ ಇದಾದರೂ ಕೆಲವು ಸಂಪ್ರದಾಯ ಸಂಸ್ಕೃತಿಗಳಲ್ಲಿ ಈ ನಂಬಿಕೆ ಉಳಿದುಕೊಂಡಿದೆ ಎಂದು ಹೇಳಲಾಗಿದೆ. ಪ್ರಕೃತಿಯು ನಿಶ್ಯಬ್ದವಾದ ಶಬ್ದವನ್ನು ಸೃಷ್ಟಿಸಬಲ್ಲದು. ಕೆಲವು ಮಿತಿಗಳಿಂದಾಗಿ ಮನುಷ್ಯನು ಅದನ್ನು ಕೇಳಲಾರ ಎಂಬುದು ಕುತೂಹಲಕರ. ಪ್ರಾಣಿಗಳು ಈ ಶಬ್ದವಿಲ್ಲದ ನಿಶ್ಯಬ್ದವನ್ನು ಉಂಟುಮಾಡಬಲ್ಲವು.

ಆದಿಮ ಜನ ಪ್ರಕೃತಿಗೇ ಹತ್ತಿರವಾಗಿದ್ದವರು. ಹಾಗಾಗಿ ಈ ನಿಶ್ಯಬ್ದ ಶಬ್ದವನ್ನು ಗ್ರಹಿಸಬಲ್ಲವರಾಗಿರಬೇಕು. ಜತೆ ಜತೆಗೇ ಪ್ರಕೃತಿ ಸಹಜ ಶಬ್ದಗಳು ೨೧ನೆಯ ಶತಮಾನದ ಸಂದರ್ಭದ ಕೃತಕ ಗದ್ದಲ ಗಾಬರಿಗೊಳಿಸುವಂತಹದ್ದು. ಸಹಜ ಶಬ್ದಕ್ಕಿಂತಲೂ ನಾವು ಗದ್ದಲವನ್ನೇ ಆಯ್ಕೆ ಮಾಡಿಕೊಂಡಿದ್ದೇವಲ್ಲವೆ? ಮನೆಯೊಳಗಿನ ಮೌನ ಮುರಿಯಲು ರೇಡಿಯೋ, ಟಿ.ವಿ.ಗಳನ್ನು ಹಚ್ಚುತ್ತೇವೆ! ಹೋಟೆಲ್ ಅಥವಾ ಶಾಪಿಂಗ್ ಮಾಲ್‌ಗಳಲ್ಲೂ ಹಿನ್ನೆಲೆಗೆ ಗದ್ದಲದ ಸಂಗೀತದ ಅಗತ್ಯವನ್ನು ಸೃಷ್ಟಿಸಿದ್ದೇವೆ. ಪ್ರಕೃತಿಯ ಅಥವಾ ಮನುಷ್ಯರ ಸಹಜ ಶಬ್ದವನ್ನು ಹೆಚ್ಚಿನ ತೀವ್ರತೆಯಿಂದ ಅನುಭವಿಸುವ ಅಗತ್ಯವಿದೆ. ಶಿಲಾಶ್ರಯಗಳಲ್ಲಿ ಈ ನಿಟ್ಟಿನ ಪ್ರಯತ್ನಗಳನ್ನು ನಡೆಸಬಹುದಾಗಿದೆ. ಹಾಗಾಗಿ ಶಬ್ದದ ಪುರಾತತ್ವ ಶೋಧನೆಗಳು ಅಗತ್ಯ ಅತಿ ಜರೂರಾಗಿ ಆಗಬೇಕಿದೆ. ಸ್ಥಳ, ಶಬ್ದ ಮತ್ತು ಸ್ಮೃತಿಗಳು ಹಲವು ಸಂದರ್ಭಗಳ ಶಿಲಾಶ್ರಯಗಳಲ್ಲಿ ನೆಲೆಸಿದ್ದವರನ್ನು ಪ್ರಭಾವಿಸಿರುವ ಊಹೆಗಳೂ ಆಧಾರಗಳ ಅನ್ವೇಷಣೆಯ ಕಾರಣದಿಂದ ನಿಜವಾಗಬಹುದು.

ಈ ಎಲ್ಲ ವಿಶಿಷ್ಟ ಸಾಧ್ಯತೆಗಳನ್ನು ಹೊಂದಿದ ಆದಿಮ ಸತ್ವದ ಚಿತ್ರಗಳು ಇಂದಿಗೂ ಉಳಿದು ಬಂದಿವೆ; ಅಪರೂಪಕ್ಕೆ ಉಸಿರಾಡುತ್ತಿವೆ. ಅವರ ಮಾಂತ್ರಿಕ ಶಕ್ತಿಯ ನಂಬಿಕೆ, ಆಚರಣೆಗಳು ಧಾರ್ಮಿಕ ಶಕ್ತಿಯತ್ತ ಹೆಜ್ಜೆ ಹಾಕಿದ್ದನ್ನು ಇತಿಹಾಸಕಾಲ ಹಾಗೂ ನಮ್ಮ ಸಮಕಾಲೀನ ಇತಿಹಾಸ ಗಂಭೀರವಾಗಿಯೇ ಗುರುತಿಸಿದೆ. ನಮ್ಮ ದೇಶದ ಜಗದಲಪುರ, ಕೊಂಡಗಾವ್, ನಾರಾಯಣಪುರ ಹಾಗೂ ಪಚ್ಚಮಡಿಗಳಲ್ಲಿ ಈ ಬೆಳವಣಿಗೆ ಘಟಿಸಿದೆ. ಹಾಗೆ ನೋಡಿದರೆ ಇಡೀ ವಿಶ್ವದ ಆದಿಮ ಕಲೆಯ ಜನಸಮೂಹಗಳ ವಾರಸುದಾರರ ಕಲೆಯ ಶಕ್ತಿಯು ಧಾರ್ಮಿಕ ಶಕ್ತಿ ಎಡೆಗೆ ಧಾವಿಸಿದ್ದು ಗಮನಾರ್ಹ ಬೆಳವಣಿಗೆ ಸಹಜವಾಗಿಯೇ ನಡೆದಿದೆ. ಈ ಧಾರ್ಮಿಕ ನಡವಳಿಕೆಯ ಪ್ರಭಾವದಲ್ಲಿ ಕಲ್ಗೋರಿಗಳ ಕಾಲ ಕ್ರಾಂತಿಕಾರಿ ಮನಸ್ಥಿತಿಯನ್ನು ಸಾಧಿಸಿತ್ತು. ಪ್ರಾಣಿಗಳ ಬೇಟೆಯನ್ನು ಬಿಟ್ಟು ಕಾಡಿನ ಸಸ್ಯ ಮೂಲದ ಆಹಾರವನ್ನು ಕಂಡುಕೊಂಡದ್ದು ಅಪೂರ್ವವೇ ಸರಿ. ವ್ಯವಸಾಯದೊಂದಿಗೆ ಪ್ರಾಣಿಗಳನ್ನು ಸಾಕುವ ಹವ್ಯಾಸಗಳು, ಪ್ರಕೃತಿಯ ಶಕ್ತಿಯನ್ನು ಗೌರವಿಸುವ ಪರಿ, ಪ್ರಕೃತಿಯನ್ನು ಮೀರುವ ಪ್ರಯತ್ನ ಎನ್ನಬಹುದು. ಧಾರ್ಮಿಕ ಆಚರಣೆಗಳೂ ಆರಂಭಗೊಂಡವು. ಯುರೋಪಿನ, ಭಾರತದ ಭೀಂಬೇಟ್ಕಾ ಮೊದಲಾದ ನಾನಾ ಕಡೆಗಳಲ್ಲಿ ಗುಹೆಗಳ, ಗೋಡೆ ಚಾವಣಿಗಳಲ್ಲಿ ಇರುವ ಪ್ರಾಚೀನ ಮನುಷ್ಯರ ವರ್ಣಚಿತ್ರಗಳದ್ದು ಒಂದು ಅದ್ಭುತ ಲೋಕವೇ ಸರಿ. ಫ್ರಾನ್ಸ್, ಇಟಲಿ, ಸ್ಪೇನ್, ಈಜಿಪ್ಟ್, ಭಾರತಗಳಲ್ಲಿ ಕಾಣಿಸಿಕೊಂಡಿರುವ ಚಿತ್ರಗಳು ಸುಮಾರು ಹತ್ತರಿಂದ ಮೂವತ್ತು ಸಾವಿರ ವರ್ಷಗಳಷ್ಟು ಹಿಂದಿನವು. ಯುರೋಪಿನ ‘ಕ್ರೋಮ್ಯಾನನ್ ಮನುಷ್ಯ’ರೇ ಈ ೩೦-೪೦ಸಾವಿರ ವರ್ಷಗಳ ಹಿಂದಿನ ಚಿತ್ರಗಳ ಪ್ರವರ್ತಕರು ಎಂದು ಇತ್ತೀಚಿನವರೆಗೂ ತಿಳಿಯಲಾಗಿತ್ತು. ಆದರೆ ೨೦೦೯ರಲ್ಲಿ ದಕ್ಷಿಣ ಆಫ್ರಿಕದ ಬ್ಲಾಂಬೋಸ್ ಹಾಗೂ ಆಫ್ರಿಕಾದ ಜಾಂಬಿಯಾ ದೇಶದ ಹಲವು ಗುಹಾ ನೆಲೆಗಳಲ್ಲಿ ಕೆಂಪು ಬಣ್ಣದ ಶಿಲಾಚೂರುಗಳ ಮೇಲೆ ಕೊರೆಯಲಾಗಿರುವ ಗೆರೆಗೆರೆ ಚಿತ್ತಾರಗಳು ಕಾಣಿಸಿಕೊಂಡಿವೆ! ಈ ಕಲೆಯ ಕಾಲ ಈಗ್ಗೆ ಒಂದು ಲಕ್ಷ ವರ್ಷ ಹಿಂದೆ. ಈ ಸಂದರ್ಭದ ಅಲ್ಲಿನ ಮಾನವ ಪ್ರಭೇದ ಇನ್ನೂ ಸ್ಪಷ್ಟವಾಗಿ ಗುರುತಿಸಲಾಗಿಲ್ಲ. ಈ ನಡುವೆ ಮಾನವನ ಕಲೆಯ ಕಾಲ ಒಂದು ಲಕ್ಷ ವರ್ಷ ಹಾಗೂ ಮೂಲ ಕ್ಷೇತ್ರ ಆಫ್ರಿಕ ಖಂಡ ಎಂಬ ಅಂಶಗಳು ಮಾತ್ರ ಈಗ ಸ್ಪಷ್ಟ. ಮೂಲ ಕಲಾವಿದ ಪ್ರಭೇದ ಇನ್ನೂ ಅಜ್ಞಾತ.

ಈ ಮೊದಲೇ ಉಲ್ಲೇಖಿಸಿರುವಂತೆ ಜಾಗತಿಕ ಇತಿಹಾಸಪೂರ್ವ, ಆದಿಮಕಲೆಗೆ ಸುಮಾರು ಒಂದು ಲಕ್ಷ ವರ್ಷಗಳ ಇತಿಹಾಸವಿದ್ದರೆ, ನಮ್ಮಲ್ಲಿ ಸುಮಾರು ಹತ್ತು ಸಾವಿರ ವರ್ಷಗಳ ಇತಿಹಾಸ ಇದೆ. ಕರ್ನಾಟಕದಲ್ಲಿ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಪ್ರಾರಂಭಗೊಂಡ ಈ ಚಿತ್ರ ಪರಂಪರೆ ಇಂದು ಬೆಂಗಳೂರು ಜಿಲ್ಲೆಯ ಕನಕಪುರ, ಕೋಲಾರ ಜಿಲ್ಲೆಯ ಟೇಕಲ್, ಕೆ.ಜಿ.ಎಫ್‌ಗಳನ್ನು ಒಳಗೊಂಡಂತೆ ಹಲವೆಡೆ ಮುಂದುವರೆದಿದೆ. ದಕ್ಷಿಣ ಭಾರತದಲ್ಲಿಯೂ ಇತ್ತೀಚೆಗೆ ಹೆಚ್ಚೆಚ್ಚು ಅನ್ವೇಷಿಸಲ್ಪಡುತ್ತಿವೆ. ೧೮೮೦ರಲ್ಲಿ ಬಳ್ಳಾರಿಯ ಕಪ್ಪಗಲ್ಲು ಗುಡ್ಡಗಳಲ್ಲಿ ಕುಟ್ಟಿ, ಗೀರಿ ಮೂಡಿಸಿದ ಚಿತ್ರಗಳು, ರಾಯಚೂರಿನ ಗಂಗಾವತಿ ತಾಲ್ಲೂಕಿನ ಹಿರೇಬೆನಕಲ್ ಚಿತ್ರಗಳು, ಬಿಲ್ಲಮರಾಯನ ಗುಡ್ಡದಲ್ಲಿ ಕುಟ್ಟಿ, ಗೀರಿ ಮೂಡಿಸಿದ ಚಿತ್ರಗಳನ್ನು ಲಿಯೋನಾರ್ಡ್‌‌ಮನ್ ಕಂಡರು. ನಂತರ ೧೯೪೦ರಲ್ಲಿ ರಾಯಚೂರು ಜಿಲ್ಲೆಯ ಮಸ್ಕಿ, ಕಲ್ಲೂರು, ಗುಲ್ಬರ್ಗಾ ಜಿಲ್ಲೆಯ ಯಾದಗಿರಿ ಬಳಿಯ ಬಳಿಚಕ್ರ ಮೊದಲಾದವು ಅ.ಸುಂದರ ಅವರ ಆಸಕ್ತಿಯಲ್ಲಿ ಪರಿಚಿತಗೊಂಡವು. ನಂತರ ಹಲವರಿಂದ ಈ ಅನ್ವೇಷಣೆ ನಡೆದಿದೆ. ೭೦ಕ್ಕೂ ಹೆಚ್ಚು ಗುಹೆ, ಕಲ್ಲಾಸರೆ (rock shelter) ಗಳ ಚಿತ್ರಗಳು ನೆಲೆಗಳಲ್ಲಿ ಅಧ್ಯಯನಗಳು ನಡೆದಿವೆ. ಸೂಕ್ಷ್ಮ ಶಿಲಾಯುಗದಿಂದ (ಸುಮಾರು ಕ್ರಿ.ಪೂ.೧೦,೦೦೦೦-೭,೦೦೦ ವರ್ಷ) ಕಬ್ಬಿಣಯುಗದ ಬೃಹತ್ ಶಿಲಾಯುಗದ ಹಂತದ ಕೊನೆಯವರೆಗಿನ (ಸುಮಾರು ಕ್ರಿ.ಪೂ.೧೨೦೦-೨೦೦) ಹಲವು ನೆಲೆಗಳು ಈ ಪಟ್ಟಿಯಲ್ಲಿವೆ. ಸುಡಾವೆ ಮಣ್ಣಿನ ಗೊಂಬೆಗಳು ಮಣ್ಣಿನ ಪಾತ್ರೆಯ ಮೇಲ್ಮೈನ ವರ್ಣಚಿತ್ರಗಳು ಆಕರ್ಷಕ ಅಲಂಕರಣದಿಂದ ಕೂಡಿವೆ. ಗುಹೆಯೊಳಗೆ ಅಥವಾ ಕಲ್ಲಾಸರೆಯ ಒಳ ಬದಿಯಲ್ಲಿ ಬಿಳಿಯ ಅಥವಾ ಕೆಮ್ಮಣ್ಣಿನ ಬಣ್ಣದಲ್ಲಿ ಬರೆದ ಚಿತ್ರಗಳು, ಬಯಲು ಬಂಡೆಗಳ ಮೇಲೆ ಕುಟ್ಟಿ, ಗೀರಿ ಮೂಡಿಸಿದ ರೇಖೆಗಳಿಂದ ಮೂಡಿದ ಚಿತ್ರಗಳು ಇವೆ. ಗುಹೆ ಮತ್ತು ಕಲ್ಲಾಸರೆಗಳ ಚಿತ್ರಗಳು ಉತ್ತರ ಕರ್ನಾಟಕದ ಹಲವು ಸ್ಥಳಗಳಲ್ಲಿ ೧೩೦ಕ್ಕೂ ಹೆಚ್ಚು ವರ್ಣ ಚಿತ್ರ ಗುಹೆಗಳು, ೧೮ ಸ್ಥಳಗಳಲ್ಲಿ ಬಯಲು ಬಂಡೆಯ ಚಿತ್ರಗಳಿವೆ. ಈ ಎಲ್ಲ ಚಿತ್ರಗಳಲ್ಲಿ ರಾಮದುರ್ಗ, ಐಹೊಳೆ, ಬಾದಾಮಿ ಪ್ರದೇಶಗಳಲ್ಲಿನ ಚಿತ್ರಗಳು ದಕ್ಷಿಣ ಭಾರತದ ಅತಿ ಪ್ರಾಚೀನ ಪ್ರಾಗೈತಿಹಾಸ ಕಾಲದ ಚಿತ್ರಗಳಾಗಿವೆ. ಕೋಲಾರ ಜಿಲ್ಲೆಯ ಹಲವು ಶಿಲಾಶ್ರಯಗಳು ೪-೫ ಸಾವಿರ ವರ್ಷಗಳ ಇತ್ತೀಚಿನವಾಗಿವೆ. ನೆರೆಯ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶಗಳ ಶಿಲಾಶ್ರಯ ದೃಶ್ಯ ಕಲಾಲೋಕವೂ ಸಾಕಷ್ಟು ವೈವಿಧ್ಯಮಯವಾಗಿದೆ. ಇತ್ತೀಚೆಗೆ ಈ ರಾಜ್ಯಗಳಲ್ಲಿಯೂ ಹೊಸ ಶಿಲಾಶ್ರಯ ಚಿತ್ರಗಳು ಕಾಣಿಸಿಕೊಂಡಿವೆ. ಇಡೀ ಭಾರತದ ಶಿಲಾಶ್ರಯ ಚಿತ್ರಕಲೆಯ ಶೈಲಿ ವೈವಿಧ್ಯತೆಯಲ್ಲಿಯೂ ಬಣ್ಣಗಳಲ್ಲಿ ಏಕತೆಯನ್ನು ಕಾಣುತ್ತೇವೆ. ಹಲವು ಕಾಲಘಟ್ಟಗಳ ಈ ಚಿತ್ರಗಳು ಸಹಜವಾಗಿಯೇ ಹಲವು ಶೈಲಿಗಳಲ್ಲಿ ಮೂಡಿ ಬಂದಿವೆ. ಇತ್ತೀಚೆಗೆ ಚಿಕ್ಕ ರಾಮಾಪುರದಲ್ಲಿನ ಕೆಲವು ಶಿಲಾಶ್ರಯಗಳಲ್ಲಿ ರಂಗೋಲಿಗೆ ಹತ್ತಿರವಾದ, ಸಾಂಕೇತಿಕ ಚಿತ್ರಗಳು ಇನ್ನೂ ಕೆಲವು ರೀತಿಯ ಅಲಂಕರಣ ಚಿತ್ರಗಳು ಕಾಣಿಸಿಕೊಂಡಿವೆ.

[1] “ಒಂದು ದೇಶದ ನಾಗರಿಕ ಜನರ ಇತಿಹಾಸವೇ ಬೇರೆ, ಕಲೆಯ ಇತಿಹಾಸವೇ ಬೇರೆ ಎಂಬುದಾಗಿ ಕಾಲಮಾನದ ದೃಷ್ಟಿಯಿಂದ ನಾವು ಒಪ್ಪುವುದಕ್ಕೆ ಸಿದ್ಧರಾಗಬೇಕಾಗುತ್ತದೆ”. ಡಾ.ಶಿವರಾಮ ಕಾರಂತ, “ಕರ್ನಾಟಕದಲ್ಲಿ ಚಿತ್ರಕಲೆ, ಪುಟ ೨, ಪ್ರಸಾರಾಂಗ, ಮಾನಸಗಂಗೋತ್ರಿ, ಮೈಸೂರು ೧೯೭೨.

[2] ಜಾಗತೀಕರಣದ ಅಬ್ಬರದ ಹಣ ನಮ್ಮ ಸಂಸ್ಕೃತಿಗೆ ಹಲವು ಅಪಾಯಗಳನ್ನು ತಂದೊಡ್ಡಿದೆ. ಕರ್ನಾಟಕದ ಹಲವು ಜಿಲ್ಲೆಗಳ ಭೂದೃಶ್ಯಗಳು ಪಲ್ಲಟಗೊಂಡಿವೆ. ಬೃಹತ್ ಯಂತ್ರಗಳು ಸಾವಿರಾರು ವರ್ಷಗಳ ಪರಂಪರೆಯ ಇತಿಹಾಸಪೂರ್ವ ಕಾಲದ ಶಿಲಾಶ್ರಯಗಳ ಬೃಹತ್ ಬಂಡೆಗಳನ್ನು ಪುಡಿಗೊಳಿಸುವ ಸಾಮರ್ಥ್ಯ ಹೊಂದಿವೆ. ಇತಿಹಾಸ, ಸಾಂಸ್ಕೃತಿಕ ಪ್ರಜ್ಞೆಯ ಕೊರತೆಯ ಕಾರಣಕ್ಕಾಗಿ ಶಿಲಾಶ್ರಯಗಳು ನಾಶಗೊಳ್ಳುವ ಮೂಲಕ ಅಲ್ಲಿನ ಚಿತ್ರಗಳೂ ಇಲ್ಲವಾಗಿವೆ. ಬಳ್ಳಾರಿ, ಕೋಲಾರ ಮೊದಲಾದ ಜಿಲ್ಲೆಗಳನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.

[3] ಪ್ರಾಗೈತಿಹಾಸಪೂರ್ವ ಕಲೆಯ ಕಾಲ ನಿರ್ಣಯ ವಿಧಾನಗಳು ಹಲವು ಆಯಾಮಗಳನ್ನು ಪಡೆದುಕೊಳ್ಳುವ ಸಾಧ್ಯತೆಗಳು ಇವೆ. ಪ್ರಸ್ತುತ ನಿಷ್ಕ್ರಷ್ಟ ಕಾಲ ನಿರ್ಣಯಕ್ಕಾಗಿ ಇಂಗಾಲದ ಅಂಶವಿರುವ ಇದ್ದಿಲು ಅಥವಾ ಎಲುಬಿನ ಅಧ್ಯಯನ, ಪರೀಕ್ಷೆಯ ನೆರವು ಪಡೆಯುವಿಕೆ ಅವುಗಳಲ್ಲಿ ಒಂದು ಬಿ.ಸಿ. ಅಂದರೆ ಕ್ರಿಸ್ತಪೂರ್ವ, ಬಿ.ಪಿ. ಅಂದರೆ ಬಿಫೋರ್ ಪ್ರಸೆಂಟ್. ಅಂದರೆ ಈ ಸಂದರ್ಭಕ್ಕಿಂತಲೂ ಹಿಂದೆ ಈ ಸಂದರ್ಭ ಅಥವಾ ಇಂದಿನ ಸಂದರ್ಭ ಅಂದರೆ ಪ್ರಾಗೈತಿಹಾಸ ಅಧ್ಯಯನಕಾರರು ನಿಗದಿಪಡಿಸಿರುವ ೧೯೫೦ ಹಿಂದೆ ಅಂದರೆ ೧೯೫೦ಕ್ಕಿಂತಲೂ ಹಿಂದೆ ನೋಡಬೇಕಾಗುವುದು.