ಶಿಲಾಶ್ರಯ ಚಿತ್ರ ವೈವಿಧ್ಯ

ಹೊಸ ಶಿಲಾಯುಗ ಕಲ್ಲಿನ ಗೋರಿಗಳ ಕಾಲ ಬೇಟೆಯನ್ನು ಬಿಟ್ಟು, ಪ್ರಾಣಿಗಳನ್ನು ಸಾಕುವ, ಅರಣ್ಯದ ಸಸ್ಯಮೂಲ ಆಹಾರವನ್ನು ಅವಲಂಬಿಸುವ ಸಂದರ್ಭ. ಅಂದರೆ ಆಹಾರಕ್ಕಾಗಿಯೋ, ಆಹಾರದ ಕಾರಣಕ್ಕಾಗಿಯೋ ಒಂದೆಡೆ ಬೀಡುಬಿಟ್ಟು ಗಿಡ ಹಾಗೂ ಪ್ರಾಣಿಗಳನ್ನು ತನ್ನ ಸುತ್ತಲೇ ಇರುವಂತೆ ನೋಡಿಕೊಂಡದ್ದು. ಅಂದರೆ ಪ್ರಾಣಿಗಳನ್ನು ಪೋಷಿಸುವ ಹಾಗೂ ವ್ಯವಸಾಯದ ಪ್ರಥಮ ಪಾಠಗಳನ್ನು ಕಲಿಯಲಾರಂಭಿಸಿದ ದಿನಗಳವು. ಹಾಗಾಗಿಯೇ ಶಿಲಾಶ್ರಯಗಳಲ್ಲಿ ವ್ಯವಸಾಯದ ಉಪಕರಣಗಳೂ ಚಿತ್ರ ರೂಪಗಳಲ್ಲಿ ದಾಖಲಿಸಲ್ಪಟ್ಟವು. ಹಂಪಿಯ ವಿಠಲ ದೇವಾಲಯದ ಹತ್ತಿರದ ಮಶಲಯ್ಯನ ಗುಡ್ಡದಲ್ಲಿ ಕಾಡುಪ್ರಾಣಿಗಳ ಜತೆಜತೆಗೆ ಹಸು, ವ್ಯವಸಾಯ ಉಪಯುಕ್ತ ಉಪಕರಣಗಳ ರೇಖಾಚಿತ್ರಗಳೂ ಕೆಂಗಾವಿ ಬಣ್ಣದಲ್ಲಿವೆ. ಇದಕ್ಕೂ ಮೊದಲಿನ ಶತಮಾನಗಳ ಹಿಂದೆ ನಾವೀಗಾಗಲೇ ಗಮನಿಸಿರುವಂತೆ ಹಲವು ಉದ್ದೇಶದ, ಹಲವು ಶೈಲಿಯ ಚಿತ್ರಗಳು ಹಲವೆಡೆ ಕಾಣಿಸಿಕೊಂಡಿವೆಯಷ್ಟೆ. ಈ ಹಿಂದಿನ ಹಳೆಯ ಶಿಲಾಯುಗದ ಹಲವು ಶಿಲಾಶ್ರಯಗಳು ಭೂಮಿತಿ, ಜ್ಯಾಮಿತಿಯ ಮತ್ತು ಸಾಂಕೇತಿಕ ರೇಖೆಯ ಭಾವ ನಿರೂಪಣೆಯ (ideography)ಅನುಭವ ನೀಡುವ coded ಭಾಷೆಯಂತಹ ರೂಪಗಳನ್ನು ತಮ್ಮ ಮೇಲ್ಮೈನಲ್ಲಿ ಹೊಂದಿವೆ. ಬಹುತೇಕ ಕೆಂಗಾವಿ ಹಾಗೂ ಬಿಳಿಯ ಬಣ್ಣದ ರೇಖಣೆಗಳವು. ಕೋಲಾರ ಜಿಲ್ಲೆಯ ಟೇಕಲ್‌ನ ಬೆಟ್ಟಗಳ ಕಲ್ಲಾಸರೆಯಲ್ಲಿಯೂ coded ರೂಪಗಳನ್ನು ಗಮನಿಸಬಹುದು. ಕೆಲವೊಮ್ಮೆ ಅಮೂರ್ತ ಸಂಜ್ಞೆ(sign)ಗಳೂ, ಪ್ರಾಣಿಗಳ ಚಿತ್ರಗಳೊಂದಿಗೆ ಇರುವುದುಂಟು. ಇವೆರಡೂ ಸೇರಿ coded messagesಗಳಂತೆ ಕಾಣುತ್ತವೆ. ಕೆಲವೊಮ್ಮೆ ಇವು ಅರ್ಥಪೂರ್ಣವಾಗಿರಬಹುದೆನ್ನಿಸಿದರೆ ಬಹುಪಾಲು ಬಹಳ ಸಂಕೀರ್ಣ ಅನುಭವ ನೀಡಬಹುದು. ಅದನ್ನು ಸೃಷ್ಟಿಸಿದವರಿಗೆ ಆ symbolic elements ಹಾಗೂ messages ಸುಸ್ಪಷ್ಟವಿರಬಹುದು. ಆ ಸಂದರ್ಭದ ಜನಸಮೂಹಕ್ಕೆ ಪ್ರಸ್ತುತವಾಗಿಯೂ ಇದ್ದಿರಬಹುದು. ಪುನರಾವರ್ತಿತ ಸಂಕೇತಗಳ ರೇಖಾ ರೂಪಗಳ ಹಿಂದೆ ನಿರ್ದಿಷ್ಟ ಸಂದೇಶಗಳೂ ಇರಬಹುದು. ಇವು ಪದಗಳಿಲ್ಲದ ಸಂಕೇತಗಳ ರೇಖಾಚಿತ್ರ ಸಮೂಹ. ಹಳೆಯ ಶಿಲಾಯುಗದ ಅಭಿವ್ಯಕ್ತಿಯ ದೈನಂದಿನ ಬದುಕಿಗೆ ಸಂಬಂಧಿಸಿದ್ದುವಾಗಿರಲಿಲ್ಲ. ಆ ಚಿತ್ರಗಳು ಅವರ ಸಾಮಾಜಿಕ ಬದುಕಿನ ನಿಯಮಗಳಿಗೆ ಒಳಪಟ್ಟಂತೆ ಕಾಣುತ್ತವೆ. ಆ ಸಂದರ್ಭದ ಮಾಂತ್ರಿಕರ ಪ್ರಭಾವವೂ ಹೆಚ್ಚೇ ಆಗಿತ್ತು. ಸಮಾಧಿ ಸ್ಥಿತಿಯಿಂದ ‘ಮತ್ತೊಂದು ಪ್ರಪಂಚ’ ಸಂದರ್ಶಿಸಿ ಬಂದ ಮಾಂತ್ರಿಕ ತನ್ನ ಅನುಭವ ಲೋಕವನ್ನು ದೃಶ್ಯಾತ್ಮಕವಾಗಿ ಶಿಲಾಶ್ರಯ ಮುಖ ಅಥವಾ ಮೇಲ್ಮೈಯಿಂದ ಹೊರಬಂದ ರೀತಿಯಲ್ಲಿ ಚಿತ್ರಿಸುತ್ತಿದ್ದುದುಂಟು. ಈ ಸಂದರ್ಭದಲ್ಲಿ ಶಿಲಾಶ್ರಯಗಳ ಬಂಡೆಗಳ ಮೈವಳಿಕೆ, ಬಿರುಕು ಅಥವಾ ಇನ್ನಿತರ ಸಹಜ ಅಂಕುಡೊಂಕುಗಳು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಲ್ಪಡುತ್ತಿದ್ದವು. ಚಿಕ್ಕರಾಮಾಪುರದ ಒನಕೆಕಿಂಡಿ ಶಿಲಾಶ್ರಯ ಒಂದರಲ್ಲಿ ಹೆಡೆ ಬಿಚ್ಚಿದ ಹಾವಿನ ಚಿತ್ರ ನೆನಪಿಸಿಕೊಳ್ಳಿ. ಆಳ ಕಿಂಡಿಯಿಂದ ಹಾವು ಹೊರಬಂದಂತ ಕಲ್ಪನೆ. ನಂತರ ಹಲವು ರೇಖಾರೂಪಗಳ ರೇಖಣೆ! ಹಾಗೆಯೇ ಹಂಪಿಯ ಭರಮದೇವರ ಗುಂಡಿನ ಎಡಬದಿಯ ಸ್ವಲ್ಪ ದೂರದ ಬಂಡೆಗಳ ನಡುವೆ ಒಂದು ಬಂಡೆಯ ಮೇಲಿನಿಂದ ನೀರು ಹರಿದು ಉಂಟುಮಾಡಿರುವ ವಿಶಿಷ್ಟ ಬಣ್ಣದ ಮೈವಳಿಕೆಗೆ ರೇಖೆಗಳನ್ನು ಸೇರಿಸಿ ಮೂಡಿಸಿರುವ ರೂಪ ಹರಿದು ಹೋಗುವಿಕೆಗೆ ಪೂರಕವಾಗಿದೆ! ಉಳಿದಂತೆ ಭಾರತದ ಎಲ್ಲೆಡೆ ಹಲವು ಕಾಲಗಳ ಹಿನ್ನೆಲೆಯಲ್ಲಿ ವೈವಿಧ್ಯಮಯ ಚಿತ್ರ ರೂಪಗಳಿವೆ. ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಚತ್ತೀಸ್‌ಗಡ, ಜಮ್ಮು ಲಡಾಕ್, ಗುಜರಾತ್, ಕೇರಳ, ತಮಿಳುನಾಡು, ಆಂಧ್ರ ಪ್ರದೇಶಗಳನ್ನು ಇಲ್ಲಿ ಉಲ್ಲೇಖಿಸಬಹುದು. ಇಲ್ಲಿನ ಶಿಲಾಶ್ರಯಗಳು ಚಿತ್ರಗಳು ಸಹಜವಾಗಿಯೇ ವಿವಿಧ ಕಾಲಘಟ್ಟಗಳಲ್ಲಿ ಚಿತ್ರಿತಗೊಂಡಿರುವುದರಿಂದ ಶೈಲಿಗಳಲ್ಲಿಯೂ ವೈವಿಧ್ಯತೆ ಇದೆ. ಆದರೆ ರೂಪಗಳ ದೃಷ್ಟಿಯಿಂದ ಏಕತೆಯನ್ನು ನೋಡುತ್ತೇವೆ. ಪ್ರಕೃತಿಯ ಪ್ರಾಣಿ, ಪಕ್ಷಿ ಇತ್ಯಾದಿ ರೂಪಗಳ ಜತೆಜತೆಗೇ ಬೇಟೆ, ವಿವಿಧ ಆಚರಣೆ, ಅಲಂಕಾರ, ಹಲವೊಮ್ಮೆ ಕೃಷಿಯ ಪರಿಕರಗಳು ಹಾಗೂ ಸಾಂಕೇತಿಕ ರೇಖೆ ರೂಪಗಳು ಇಲ್ಲಿ ನೆನಪಾಗುತ್ತವೆ. ಗಂಗಾ, ಯಮುನಾ, ಮಹಾನದಿ, ನರ್ಮದಾ, ಕೃಷ್ಣಾ, ತುಂಗಭದ್ರಾ ಇತ್ಯಾದಿ ನದಿಗಳೇ ಅಲ್ಲದೆ ಇವುಗಳ ಹಲವು ಉಪನದಿಗಳ ಅತ್ತಿತ ದಟ್ಟ ಅರಣ್ಯ, ಎತ್ತರ ಬೆಟ್ಟ ಪ್ರದೇಶ ಹಾಗೂ ಬಯಲಿನ ನಡುವೆ ಇರುವ ಶಿಲಾಶ್ರಯ, ಗುಹೆಗಳಲ್ಲಿ ಚಿತ್ರಗಳನ್ನು ನೋಡಬಹುದಾಗಿದೆ. ನದಿ ಉಪನದಿಗಳಿಲ್ಲದ ಕಡೆ ನೀರಿನ ಆಶ್ರಯಕ್ಕೆ ಹತ್ತಿರ ಇರುವ ಶಿಲಾಶ್ರಯ ನೆಲೆಗಳಲ್ಲಿಯೂ ಆದಿಮ ಚಿತ್ರ ರೂಪಗಳನ್ನು ಗಮನಿಸಬಹುದು; ಆದರೆ ಇಂತಹ ಪರಿಸರದ ಎಲ್ಲ ಶಿಲಾಶ್ರಯಗಳಲ್ಲಿಯೂ ಚಿತ್ರಗಳಿರುವುದು ಸಾಧ್ಯವಿಲ್ಲ. ಆಶ್ರಯ ಪಡೆದಿದ್ದ ಎಲ್ಲ ಗುಹೆ, ಶಿಲಾಶ್ರಯಗಳಲ್ಲಿ ಚಿತ್ರಿಸುವುದು ಅಗತ್ಯವಿರಲಿಲ್ಲ. ಅವರ ನಿರ್ದಿಷ್ಟ ಉದ್ದೇಶಕ್ಕೆ ಪೂರಕವಾಗಿ ಕೆಲವು ಗುಹೆ, ಶಿಲಾಶ್ರಯಗಳಲ್ಲಿ ಚಿತ್ರಿಸುವ ಅಗತ್ಯವಿದ್ದಿರಬಹುದು. ಹಾಗಾಗಿಯೇ ೨೦೧೦ರಲ್ಲಿ ಈ ಲೇಖಕನ ಗಮನ ಸೆಳೆದ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಘಟ್ಟ ಮಾದ ಮಂಗಲದ ಹತ್ತಿರದ ಗ್ರಾನೈಟ್ ಶಿಲಾಬೆಟ್ಟದಲ್ಲಿ ಒಂದೆಡೆ ಮಾತ್ರ ಚಿತ್ರಗಳಿವೆ ಮತ್ತು ಹತ್ತಿರದ ಟೇಕಲ್‌ನ ಹತ್ತಾರು ಕಿಲೋಮೀಟರ್ ಸುತ್ತಳತೆಯ ಗ್ರಾನೈಟ್ ಬೆಟ್ಟ ಸಾಲುಗಳಲ್ಲಿ ಬೆರಳೆಣಿಕೆಯ ಶಿಲಾಶ್ರಯಗಳಲ್ಲಿ ಚಿತ್ರಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿಯೂ ಬೃಹತ್ ಶಿಲಾಯುಗ, ನೂತನ ಶಿಲಾಯುಗ ಹಾಗೂ ಇತಿಹಾಸ ಪ್ರಾರಂಭ ಕಾಲದ ನೆಲೆಗಳು ಕಾಣಿಸಿಕೊಂಡಿವೆ.

ಇನ್ನು ಕರ್ನಾಟಕದ ಬಹುತೇಕ ಶಿಲಾಶ್ರಯಗಳಲ್ಲಿ ವೈವಿಧ್ಯತೆ ಇದೆ. ಗುಹೆಗಳು. ಸೀಳುಬಂಡೆ, ಹಾಸಲು ಬಂಡೆ, ಪೊಳ್ಳುಬಂಡೆ, ಬಂಡೆಯ ಮುಂಚಾಚು, ಬೆಟ್ಟದ ಶಿಲಾಪೊಟರೆ, ಅರೆ ವೃತ್ತಾಕಾರದ ಬಾಗಿದ ಬಂಡೆ, ಅಪರೂಪಕ್ಕೆ ಬಯಲು ಬಂಡೆಗಳನ್ನು ದುಡಿಸಿಕೊಳ್ಳಲಾಗಿದೆ. ನೀರಮಾನ್ವಿಯ ವಿಶಿಷ್ಟ ಹಾಗೂ ವಿಚಿತ್ರರೂಪದ, ಆಗಸದತ್ತ ನೆಟ್ಟಂತೆ ನಿಂತ ಬೊಡ್ಡೆಯಾಕಾರದ ಕಲ್ಲಿನ ತೆರೆದ ಅವಕಾಶ (space)ಒಂದರ ಮೇಲೊಂದರಂತೆ ಚಿತ್ರಿಸಲ್ಪಟ್ಟಿರುವುದು ಕುತೂಹಲಕಾರಿ. ಕಾಲಮಾನದ ನಿರ್ಧಾರವೂ ಸಮಸ್ಯಾತ್ಮಕವೆ. ಆದರೆ ಅವುಗಳ ಶೈಲಿ, ಬಣ್ಣ ಬಳಕೆಗಳ ತಾಂತ್ರಿಕತೆ, ಅವುಗಳ ನೆಲೆ, ಸ್ಥಿತಿ, ಚಿತ್ರಗಳ ವಸ್ತು, ಹತ್ತಿರದ ಸಾಂಸ್ಕೃತಿಕ ನೆಲೆಗಳೊಂದಿಗೆ ಹೊಂದಿರುವ ಸಂಬಂಧ ಇತ್ಯಾದಿಗಳನ್ನು ಅದೇ ಕಾಲಮಾನದ ಇನ್ನಿತರೆಡೆಗಳ ನೆಲೆಗಳೊಂದಿಗೆ ಹೋಲಿಸಿ ನಿರ್ಧರಿಸುವ ಪ್ರಯತ್ನಗಳು ಯಶಸ್ವಿಯಾಗಿವೆ. ಭೀಂಬೇಟ್ಕಾದ ಹಳೆಯ ಶಿಲಾಯುಗದ ಅಂತಿಮ ಹಂತದ ಚಿತ್ರಗಳೊಂದಿಗೆ ಹೋಲಿಸಬಹುದಾದ ಚಿತ್ರಗಳು ನಮ್ಮ ಬಾದಾಮಿ, ಪಟ್ಟದಕಲ್ಲುಗಳ ಹತ್ತಿರದ ಅರೆಗುಡ್ಡ-ಹಿರೇಗುಡ್ಡಗಳಲ್ಲಿಯ ಚಿತ್ರಗಳು ಹಾಗೆಯೇ ಬಾದಾಮಿ ಹತ್ತಿರದ ಶಿಡಿಲಪಡಿ ಮತ್ತು ರಾಮದುರ್ಗದ ಜರುಗಿನ ಹಾದಿಯ ಹತ್ತಿರದ ಕಲ್ಲಾಸರೆಯ ಚಿತ್ರಗಳೂ ತಮ್ಮ ಶೈಲಿ ಹಾಗೂ ವಸ್ತುವಿನ ಕಾರಣಕ್ಕಾಗಿ ವಿಶಿಷ್ಟವಾಗಿ ಈ ಸಾಲಿಗೆ ಸೇರುತ್ತವೆ. ಉಳಿದ ಎಲ್ಲವೂ ಅನಂತರದ ಕಾಲಘಟ್ಟಗಳಲ್ಲಿ ಮೂಡಿ ಬಂದಿವೆ. ಸೂಕ್ಷ್ಮ ಶಿಲಾಯುಗ, ಹೊಸ ಶಿಲಾಯುಗ, ಶಿಲಾತಾಮ್ರಯುಗ, ಮಸ್ಕಿ, ಪಿಕ್ಲಿಹಾಳ, ಕಬ್ಬಿಣಯುಗ ಬೃಹತ್ ಶಿಲಾಯುಗಗಳ ಹಿರೇಬೆನಕಲ್ ಶಿಲಾಶ್ರಯಗಳಲ್ಲಿ ಕೆಮ್ಮಣ್ಣು ಬಣ್ಣದ ವೈಭವವಿದೆ. ಹಾಗೆಯೇ ಹೊಸ ಶಿಲಾಯುಗ-ತಾಮ್ರಯುಗಗಳ ಶಿಲಾಶ್ರಯಗಳಲ್ಲಿ ಕೆಂಪು, ಕಂದು, ಬಿಳುಪು, ತಿಳಿಹಳದಿ, ಹಳದಿ ಮಿಶ್ರಿತ ಬಿಳುಪು, ಇತಿಹಾಸ ಪ್ರಾರಂಭದ ಕಾಲದ ಶಿಲಾಶ್ರಯಗಳಲ್ಲಿ ಕೆಂಪು, ಬಿಳುಪು, ಅಪರೂಪಕ್ಕೆ ಹಸಿರು ಬಣ್ಣಗಳಲ್ಲಿ ಇರುವುದನ್ನು ಗಮನಿಸಬಹುದು. ಇತಿಹಾಸ ಕಾಲದ ಶಿಲಾಶ್ರಯ ಚಿತ್ರಗಳು ಚಿತ್ರ ಅವಕಾಶದಲ್ಲಿ ಸುಣ್ಣಲೇಪಿಸಿ ಅದರ ಮೇಲೆ ಚಿತ್ರಗಳನ್ನು ರೇಖಿಸಲಾಗಿದೆ. ರಾಯಚೂರು ಹತ್ತಿರದ ಮಾನ್ವಿ ಹಾಗೂ ಬೈಲ್‌ಮರ್ಚೇಡ್‌ಗಳಲ್ಲಿ ಹಾಗೂ ಬಾದಾಮಿಯಲ್ಲಿ ಈ ಹಾದಿಯ ಶಿಲಾಶ್ರಯ ಚಿತ್ರಗಳನ್ನು ಗಮನಿಸಬಹುದು. ಆದಿಮ ಜನರ ಪ್ರಾರಂಭದ ಶಿಲಾಶ್ರಯ, ಗುಹೆಗಳ ಚಿತ್ರಗಳು ಮಾಂತ್ರಿಕ ಶಕ್ತಿಯನ್ನು ವೈಭವೀಕರಿಸುವ ಉದ್ದೇಶ ಸಾಧಿಸಿದರೆ ಇತಿಹಾಸ ಕಾಲಘಟ್ಟದ ಹೊತ್ತಿಗೆ ಈ ಚಿತ್ರ ಪ್ರಕಾರ ಧಾರ್ಮಿಕ ಶಕ್ತಿ ಎಡೆಗೆ ತನ್ನ ಗಮನ ಹರಿಸಿದ್ದನ್ನು ಮಾನ್ವಿ, ಬಾದಾಮಿಯ ಶಿಲಾಶ್ರಯಗಳು ಬಿಂಬಿಸುತ್ತವೆ.

ಮಣ್ಣಿನ ಪಾತ್ರೆ, ಪಡಗ ಚಿತ್ರಗಳು

ಆದಿಮ ಜನರ ದಿನನಿತ್ಯದ ಮಣ್ಣಿನ ಮಡಿಕೆ, ಗಡಿಗೆ ಇತ್ಯಾದಿ ಪಾತ್ರೆಗಳೂ ಹಲವು ಪ್ರದೇಶಗಳಲ್ಲಿ ಹಲವು ರೀತಿಗಳಲ್ಲಿ ಇವೆ. ಕೃಷ್ಣಾನದಿ ಬಯಲಿನ ಶಿಲಾ-ತಾಮ್ರಯುಗ, ಕೃಷ್ಣಾಮೇಲ್ದಂಡೆ ಬಯಲಿನ (ಶಿಲಾ-ತಾಮ್ರಯುಗ), ತುಂಗಭದ್ರಾ-ಕಾವೇರಿ ಬಯಲಿನ (ನೂತನ ಶಿಲಾಯುಗ), ಭೀಮಾನದಿ ಬಯಲಿನ (ಶಿಲಾ-ತಾಮ್ರಯುಗ) ಸಂಸ್ಕೃತಿಗಳಲ್ಲಿ ಮೃತ್ತಿಕೆಯ ಪಾತ್ರೆಗಳ ಮೇಲ್ಮೈಯಲ್ಲಿ ಅಲಂಕರಿಸಲ್ಪಟ್ಟ ಚಿತ್ರಗಳಲ್ಲಿ ವೈವಿಧ್ಯತೆ ಇದೆ. ತುಂಗಭದ್ರಾ ನದಿ ಬಯಲಿನ ಕಬ್ಬಿಣಯುಗದ ಬೃಹತ್ ಶಿಲಾ ಸಂಸ್ಕೃತಿಯ ಕಪ್ಪು,ಕೆಂಪು ಬಣ್ಣದ ಪಾತ್ರೆಗಳು ಬಿಳಿಯ ರೇಖಾ ರೂಪಗಳನ್ನು ಅಲಂಕರಿಸಿಕೊಂಡಿವೆ. ಕೆಲವೊಮ್ಮೆ ಪ್ರಾಣಿ, ಪಕ್ಷಿಗಳ ರೇಖಾಚಿತ್ರಗಳೂ ಇರುತ್ತವೆ. ಆ ಸಂದರ್ಭದ ಶಿಲಾಶ್ರಯ ಚಿತ್ರ ಶೈಲಿಗಳಿಗೆ ಹತ್ತಿರವಾಗಿಯೇ ಇವು ರೇಖಿಸಲ್ಪಟ್ಟಿರುತ್ತವೆ. ಮಣ್ಣಿನ ಪಾತ್ರೆಗಳನ್ನು ಒಣಗಿಸಿದ ನಂತರ ಚಿತ್ರಿಸಿ ನಂತರ ಭಟ್ಟಿಯಲ್ಲಿ ಸುಡಲಾಗಿರುವುದರಿಂದ ಶಾಶ್ವತವಾಗಿ ಇರಬಲ್ಲವು. ಕಾವೇರಿ-ತುಂಗಭದ್ರಾ ಬಯಲಿನ ನೂತನ ಶಿಲಾ ಸಂಸ್ಕೃತಿಯ ಬೂದು ಬಣ್ಣದ ಪಾತ್ರೆಗಳು ಸುಡುವ ಪ್ರಕ್ರಿಯೆಗೆ ಒಳಗಾದ ನಂತರ ಕೆಮ್ಮಣ್ಣಿನ ಬಣ್ಣದ ಸರಳ ಅಗಲ ರೇಖೆಗಳನ್ನು ರೇಖಿಸಿಕೊಂಡಿವೆ. ಕೃಷ್ಣಾ ನದಿ ಬಯಲಿನ ಮಸ್ಕಿ ಸಂಸ್ಕೃತಿಯ ಬೂದುವರ್ನ ಪಾತ್ರೆಗಳು ಬಹಳ ಪ್ರಾಚೀನವಾದುವು. ಮಸ್ಕಿ, ಪಿಕ್ಕಿಹಾಳ, ಕೊಡೆಕಲ್ಲು, ಬ್ರಹ್ಮಗಿರಿಗಳಲ್ಲಿ ಇವು ಸಿಕ್ಕಿವೆ.

ಮಸ್ಕಿ ಸಂಸ್ಕೃತಿಯ ನೇರಳೆ ಬಣ್ಣದ ಚಿತ್ರಗಳಲ್ಲಿ ಅಡ್ಡ, ಉದ್ದ, ಓರೆ ಕತ್ತರಿಯಾಗಿ ರೇಖಿಸಲ್ಪಟ್ಟಿರುವ ಸಮಾನಾಂತರ ಬಿಡಿ ರೇಖೆಗಳಲ್ಲದೆ, ವಿಶಿಷ್ಟ-ವಿಚಿತ್ರ ರೇಖಾಚಿತ್ರಗಳೂ ಇವೆ. ಕೆಲವು ಜೋಡಿ ಮೀನು, ಕೊಕ್ಕರೆ, ಗಿಡದ ಕೊಂಬೆ, ಬಾಣಗಳಂತಹ ರೇಖಾ ರೂಪಗಳೂ ಇವೆ. ಪಿಕ್ಕಿಹಾಳದ ಇತಿಹಾಸ ಪ್ರಾರಂಭ ಕಾಲದ ಮಣ್ಣಿನ ಪಾತ್ರೆಯ ಮೇಲಿನ ವಿಶಿಷ್ಟ ಅಲಂಕರಣಗಳ ನಡುವೆ ಮಾನವ ರೂಪ ಕಲ್ಪನೆ ಆದಿಮ ಸತ್ವವನ್ನು ಉಳಿಸಿಕೊಂಡಿರುವುದು ಗಮನಾರ್ಹ.

ಆದಿಮ ಸತ್ವಗಳ ಶಿಲ್ಪಗಳು

ಕನ್ನಡ ಶಿಲ್ಪಕಲೆಯ ಇತಿಹಾಸದ ಮೊದಲ ಅಧ್ಯಾಯದಂತೆ ಬಳ್ಳಾರಿ ಜಿಲ್ಲೆಯ ಕೂಡ್ಲಗಿಯ ಹತ್ತಿರದ ಕುಮತಿಯಲ್ಲಿನ ಇತಿಹಾಸಪೂರ್ವ ಸಂದರ್ಭದ ಹೊಸಶಿಲಾಯುಗದ ಶಿಲ್ಪಗಳು ಕಾಣಿಸಿಕೊಂಡಿವೆ ! ಈ ಆದಿಮ ಶಿಲ್ಪಗಳು ಭಾರತೀಯ ಶಿಲ್ಪಕಲೆಯ ಇತಿಹಾಸದ ದೃ‌ಷ್ಟಿಯಿಂದಲೂ ಗಣನೀಯ. ಒರಿಸ್ಸಾ ಹಾಗೂ ತಮಿಳುನಾಡಿನ ಒಂದೆರಡು ನೆಲೆಗಳಲ್ಲಿ ನಿಂತ ಶಿಲ್ಪ ಸದೃಶ, ವಿಭಿನ್ನ ಉದ್ದೇಶದ ಶಿಲ್ಪ (?!) ಗಳು ಇವೆಯಾದರೂ ಕುಮತಿಯ (ಈ ಹಿಂದೆ ರಾಯಚೂರು ಜಿಲ್ಲೆಗೆ ಸೇರ್ಪಡೆಗೊಂಡಿತ್ತು.) ಶಿಲ್ಪಗಳು ಸ್ಪಷ್ಟ ಮಾನವ ಆಕಾರಗಳನ್ನು ಹೊಂದಿರುವುದು ಒಂದು ವಿಶೇಷ. ವಿಕೃತಿ ಸೌಂದರ್ಯವು ಆದಿಮ ಸತ್ವಗಳನ್ನು ಅರಗಿಸಿಕೊಂಡಾಗ ಎಷ್ಟೊಂದು ಸುಂದರ, ಶಕ್ತಿಯುತವಾಗಬಲ್ಲದು ಎಂಬುದಕ್ಕೆ ಈ ಶಿಲ್ಪಗಳು ಸಾಕ್ಷಿಯಾಗಿವೆ. ತಮ್ಮ ಸ್ವರೂಪದಿಂದಲೇ ಅಲ್ಲದೆ ಜನಜನಿತದಂತಹ ಕಥಾನಕಗಳಿಂದಲೂ ಈ ರೂಪಗಳು ವಿಶಿಷ್ಟವೇ ಆಗಿವೆ. ಈ ಶಿಲ್ಪಗಳ ಹತ್ತಿರ ಸುಳಿಯಲು ಆ ಪುಟ್ಟ ಹಳ್ಳಿಯ ಜನ ಹೆದರುವುದೂ ಅಚ್ಚರಿಯನ್ನು ಉಂಟುಮಾಡುತ್ತದೆ. ಗ್ರಾನೈಟ್ ಕಲ್ಲು ಚಪ್ಪಡಿಯನ್ನು ಶಿಲ್ಪವಾಗಿಸಲಾಗಿದೆ. ಇವು ಎರಡೂ ಬದಿ ನಿಂತು ನೋಡಿ ಆನಂದಿಸಬಹುದಾದ ಚಪ್ಪಟೆ ಶಿಲ್ಪಗಳಿವು.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಿಲಸಕಲ್ಲು ಎಂಬ ಊರಿನ ವಿಶಾಲ ದಿಬ್ಬದಂತಹ ಮೈದಾನದ ಉದ್ದಕ್ಕೂ ನಲ್ವತ್ತೈದು ಒರಟು ನಿಲುವುಗಲ್ಲುಗಳು ನಿಲ್ಲಿಸಲ್ಪಟ್ಟಿವೆ. ಅಮೂರ್ತರೂಪದಿಂದ ಕೂಡಿ ಬಾಹ್ಯಾಕಾಶದತ್ತ ತಮ್ಮ ಚೂಪು ತುದಿಗಳನ್ನು ಗುರಿಯಾಗಿಸಿ ನಿಂತಿರುವ ಕಲ್ಲುಗಳಿವು. ವಿಶಿಷ್ಟ ಸಂದರ್ಭದ ಆಚರಣೆ, ನಂಬಿಕೆಗಳ, ಹೊರಲೋಕದ ಸಂಬಂಧಿ ದೃಷ್ಟಿಯ ಕೌತುಕಮಯ ದೃಷ್ಟಿಯನ್ನೂ ಇವು ತಮ್ಮೊಳಗೆ ಅಡಗಿಸಿಕೊಂಡಿವೆ. ಇಂತಹ ನಿಲುವು ಗಲ್ಲುಗಳು ಕೊಡಗು, ಚಿತ್ರದುರ್ಗಗಳಲ್ಲಿಯೂ ಇರುವ ವರದಿಗಳಿವೆ. ಹಾಸನ ಜಿಲ್ಲೆಯ ಕೆಲವೆಡೆ ಬೆಟ್ಟಗಳ ನಡುವೆ, ಚಿತ್ರಗಳಿಲ್ಲದ ಶಿಲಾಶ್ರಯಗಳ ನಡುವೆ ವಿಶಾಲ ಮೈದಾನಗಳಿದ್ದು ಅವುಗಳ ಹತ್ತಿರ ಚಕ್ರವ್ಯೂಹ, ಚೌಕವ್ಯೂಹದ ಕಲ್ಲಿನ ರಚನೆಗಳು ಕಾಣಿಸಿಕೊಂಡಿವೆ. ಇವು ವಿಶೇಷ ರೀತಿಯ ದೃಶ್ಯ ಸಂದರ್ಭ ಸೌಂದರ್ಯವನ್ನು ಹೊಂದಿವೆ. ಈ ಚೌಕವ್ಯೂಹಗಳನ್ನು ಅಧ್ಯಯನ ಮಾಡುವ ಅಗತ್ಯವಿದೆ. ಇವನ್ನು ಗೋವಾದ ಚಕ್ರವ್ಯೂಹದ ನಿರ್ಮಿತಿಯ ಆಕಾರದೊಂದಿಗಿಟ್ಟು ನೋಡಬಹುದಾಗಿದೆ. ಇಷ್ಟು ದೃಶ್ಯಕಲೆಯ ನೋಟದ ಮಾತಾಯಿತು. ಇನ್ನಿತರ ಒಳನೋಟಗಳನ್ನು ರಾಜ್ಯ ಪುರಾತತ್ವ ಸರ್ವೇಕ್ಷಣ ಶಾಖೆಯವರು ಕಂಡುಕೊಳ್ಳಬೇಕಾಗಿದೆ. ಆ ಅಧ್ಯಯನದ ಫಲವನ್ನು ದೃಶ್ಯ ಕಲಾರಂಗ ಬಳಸಿಕೊಳ್ಳಬಹುದಾಗಿದೆ.

ಕಪ್ಪಗಲ್ಲು, ಬ್ರಹ್ಮಗಿರಿ, ಪಿಕ್ಕಿಹಾಳ, ಸಂಗನಕಲ್ಲು, ತೆಕ್ಕಲಕೋಟೆ ಮೊದಲಾದ ನೆಲೆಗಳಲ್ಲಿ ನೂತನ ಶಿಲಾಯುಗ ಅಥವಾ ಶಿಲಾತಾಮ್ರಯುಗದ ಸುಡಾವೆ ಮಣ್ಣಿನ ಗೊಂಬೆಗಳು ಕಾಣಿಸಿಕೊಂಡಿವೆ. ಬೆಳಗಾವಿ ಜಿಲ್ಲೆಯ ಹಾರೂ ಗೇರಿ, ಬಿಜಾಪುರ ಜಿಲ್ಲೆಯ ಭೋರಗಿಯಲ್ಲಿಯೂ ಒಂದೊಂದು ಗೊಂಬೆಗಳು ಸಿ‌ಕ್ಕಿವೆ. ಈ ಗೊಂಬೆಗಳು ದನ, ಎತ್ತು, ಕುರಿ, ಪಕ್ಷಿ, ಮನುಷ್ಯರ ಪ್ರತಿಕೃತಿಗಳಾಗಿವೆ. ಬಹುತೇಕ ಅಸ್ಪಷ್ಟ ರೂಪದ ಗೊಂಬೆಗಳಿವು. ಒರಟು ಅಥವಾ ಆದಿಮ ಸತ್ವಗಳನ್ನು ಇವು ಅರಗಿಸಿಕೊಂಡಿವೆ. ಹೊಸಶಿಲಾಯುಗದ ಸಂದರ್ಭವೇ ಬೇಟೆಯನ್ನು ಬಿಟ್ಟು ಕೃಷಿಯಲ್ಲಿ, ಪ್ರಾಣಿಗಳನ್ನು ಸಾಕುವುದರಲ್ಲಿ ನಿರತವಾದ ಜನರ ಸ್ಥಿತಿ. ಹಾಗಾಗಿ ಅವರ ಶಿಲಾಶ್ರಯಗಳ ಚಿತ್ರಗಳಂತೆಯೇ ಈ ಗೊಂಬೆಗಳೂ ಸಾಕು ಪ್ರಾಣಿ, ಪಕ್ಷಿಗಳನ್ನೇ ಅರಗಿಸಿಕೊಂಡಿವೆ. ಉದಾಹರಣೆಗೆ ಪಿಕ್ಕಿಹಾಳದ ಶಿಲಾಶ್ರಯ ಚಿತ್ರಗಳ ಪ್ರಾಣಿಗಳಿಗೂ, ಗೊಂಬೆಗಳಲ್ಲಿ ಕಾಣಿಸಿಕೊಂಡಿರುವ ಪ್ರಾಣಿಗಳ ರೂಪಗಳಿಗೂ ಸಾಮ್ಯತೆ ಇದೆ.

ನಮ್ಮ ಪೂರ್ವಜರ ಆದಿಮ ಸತ್ವಗಳ ವಿಶಿಷ್ಟ ಸೌಂದರ್ಯದ ಶಿಲಾಶ್ರಯ ದೃಶ್ಯಕಲೆಯ ಧ್ಯಾನ ಇಲ್ಲಿಗೇ ಮುಗಿಯುವುದಿಲ್ಲ. ಇನ್ನೂ ಹೊಸ ಶಿಲಾಶ್ರಯಗಳನ್ನು ಅನ್ವೇಷಿಸುವ ಚಟುವಟಿಕೆಯಲ್ಲಿ ಹಲವರು ತೊಡಗಿಕೊಂಡಿರುವುದರಿಂದ ಮತ್ತಷ್ಟು ಹೊಸ ನೋಟಗಳನ್ನು ನಾವು ನೋಡುವ ಸಾಧ್ಯತೆಗಳು ಇವೆ.