ಕೇವಲ ಕಾಡುಗಳಲ್ಲಿ ಅಲ್ಲದೆ ನಾಡಿನಲ್ಲೂ ಗಿಡ ಮರಗಳ ನಡುವೆ ಅಲ್ಲಲ್ಲಿ ಕಾಣುವ ಅಣಬೆ/ ನಾಯಿಕೊಡೆಗಳನ್ನು ಎಲ್ಲರೂ ನೋಡಿರುತ್ತೇವೆ; ನೋಡಲು ಅವು ಸಸ್ಯಗಳೇಎನಿಸುತ್ತವೆ, ಆದರೆ ಅವು ಸಸ್ಯಗಳಲ್ಲ. ಇವು ‘ಶಿಲೀಂಧ್ರ’ ಎಂಬ ಪ್ರತ್ಯೇಕ ಸಾಮ್ರಾಜ್ಯಕ್ಕೆ ಸೇರಿದ ಜೀವಿಗಳು. ಈ ಸಾಮ್ರಾಜ್ಯದ ಜೀವಿಗಳೆಲ್ಲವೂ ಅಣಬೆಗಳಂತೆ ಬರಿಗಣ್ಣಿಗೆ ಕಾಣುವಷ್ಟು ದೊಡ್ಡವೇ ಇರುವುದಿಲ್ಲ.ವಾಸ್ತವವಾಗಿ, ಸೂಕ್ಷ್ಮದರ್ಶಕದ ಸಹಾಯವಿಲ್ಲದ ಹೊರತು, ಈ ಸಾಮ್ರಾಜ್ಯದ ಹೆಚ್ಚಿನ ಸಂಖ್ಯೆಯ ಸದಸ್ಯರ ಇರುವು ನಮಗೆ ಗೋಚರಿಸುವುದೇ ಇಲ್ಲ; ಹಾಗಾಗಿಯೇ, ಶಿಲೀಂಧ್ರಗಳು ‘ಸೂಕ್ಷ್ಮಜೀವಾಣು’ಗಳೆಂಬ ಹಣೆಪಟ್ಟಿಯ ಅಡಿಯಲ್ಲಿ ವರ್ಗೀಕರಣಗೊಂಡಿವೆ.

ಶಿಲೀಂಧ್ರಗಳನ್ನುಇಂಗ್ಲಿಷ್ನಲ್ಲಿ ‘ಫಂಗಸ್’ (ಏಕ) / ‘ಫಂಗೈ’ (ಬಹು) ಎನ್ನುತ್ತೇವೆ; ಈ ಪದಗಳ ನಿಷ್ಪತ್ತಿಯನ್ನು ಗಮನಿಸಿದರೆ, ಗ್ರೀಕ್ ಭಾಷೆಯ ‘ಸ್ಪೊಂಗೊಸ್’ ಎಂಬ ಪದದಿಂದ ಎರವಲು ಪಡೆದು ಲ್ಯಾಟಿನ್ ಭಾಷೆಯಲ್ಲಿ ‘ಫ್ಫಂಗಸ್’ ಎಂದಿದ್ದ ಹೆಸರನ್ನು ಇಂಗ್ಲೀಷ್ನಲ್ಲಿಯೂ ಬಳಸಲಾಗುತ್ತಿದೆ. ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳಲ್ಲಿ ಈ ಪದಗಳನ್ನು ಅಣಬೆ ಎಂಬ ಅರ್ಥದಲ್ಲಿ ಬಳಸಲಾಗುತ್ತಿತ್ತು. ಇದಕ್ಕೆ ಕಾರಣ, ಬಹುಶಃ ಕಣ್ಣಿಗೆ ಸುಲಭವಾಗಿ ಕಂಡು ಬರುವ ಶಿಲೀಂಧ್ರವೆಂದರೆ ಅಣಬೆಯೇ ತಾನೇ. ಬರಿಗಣ್ಣಿಗೆ ಕಾಣುವ ಇವುಗಳ ಮುಖಾಂತರ ಹುಟ್ಟಿದ ಈ ಸಾಮ್ರಾಜ್ಯಕ್ಕೆ, ಕೇವಲ ಸೂಕ್ಷ್ಮದರ್ಶಕದ ಮೂಲಕ ಕಾಣಬಲ್ಲಂತಹ ಹಲವಾರು ಶಿಲೀಂಧ್ರ ಸದಸ್ಯರುಗಳ ಸೇರ್ಪಡೆ ನಂತರದ ದಶಕಗಳಲ್ಲಿ ಆಗುತ್ತಾ ಸಾಗಿದೆ. ಬ್ಯಾಕ್ಟೀರಿಯಾಗಳಂತೆ ಇವು ಕೂಡ ನಮಗೆ ಹಳೆಯ ಪರಿಚಯವೇ; ಇವುಗಳು ಮಾನವನೊಂದಿಗೆ ಮಾನವನಿರುವಾಗಿನಿಂದಲೂ ಸಂಬಂಧವನ್ನು ಹೊಂದಿದ್ದು, ಇಡ್ಲಿ, ದೋಸೆ, ಬ್ರೆಡ್, ಬನ್, ಕೇಕ್ ನ ತಯಾರಿಯಲ್ಲಿ ಈ ಶಿಲೀಂಧ್ರಗಳದ್ದೆ ಪ್ರಮುಖ ಪಾತ್ರ.
‘ಶಿಲೀಂಧ್ರ’ ಸಾಮ್ರಾಜ್ಯ
‘ಶಿಲೀಂಧ್ರ’ಗಳಿಗೆಂದೇ ಪ್ರತ್ಯೇಕ ಸಾಮ್ರಾಜ್ಯದ ಅವಶ್ಯಕತೆಯ ಹಿಂದಿನ ಕಾರಣ, ಸಸ್ಯ – ಪ್ರಾಣಿಗಳಿಗೂ, ಇವುಗಳಿಗೂ ನಡುವೆ ಇರುವ ಸೂಕ್ಷ್ಮ ಸ್ಪಷ್ಟ ವ್ಯತ್ಯಾಸಗಳು. ಸಸ್ಯಗಳಂತೆ ಇವುಗಳು ಕೋಶಗೋಡೆ ಹೊಂದಿದ್ದರೂ, ಅವುಗಳಲ್ಲಿ ಸಸ್ಯದಂತೆ ‘ಸೆಲ್ಯುಲೋಸ್’ ಇಲ್ಲ, ಬದಲಿಗೆ, ‘ಖೈಟಿನ್’ಎಂಬ ರಾಸಾಯನಿಕ ಸಂಯುಕ್ತ ಪದಾರ್ಥವಿದೆ. ‘ಫಂಗಸ್’ಗಳನ್ನು ಸ್ಥೂಲವಾಗಿ ಗಮನಿಸಿದರೆ ಅವುಗಳ ದೈಹಿಕ ರಚನೆ ನಮಗೆ ಪುಟ್ಟ ಸಸ್ಯದಂತೆ ಕಂಡರೂ, ಅವುಗಳಲ್ಲಿ ಜೀವಕೋಶದ ನೆಲೆಗಟ್ಟಿನಲ್ಲಿ ಸ್ಪಷ್ಟ ವ್ಯತ್ಯಾಸವಿದೆ.ಹೊರಗೆ ಬೇರಿನಂತೆ, ಕಾಂಡದಂತೆ, ಹಣ್ಣಿನಂತೆ ಕಂಡುಬರುವ ‘ಶಿಲೀಂಧ್ರ’ದ ದೇಹದ ಭಾಗಗಳು, ವಾಸ್ತವವಾಗಿ ಕಾಂಡ, ಬೇರು ಎಂದು ಪ್ರತ್ಯೆಕವಾಗಿಸಲ್ಪಟ್ಟ ಜೀವಕೋಶಗಳನ್ನು ಒಳಗೊಂಡಿರುವುದಿಲ್ಲ. ಸಸ್ಯಗಳಲ್ಲಿ ಇರುವಂತೆ ‘ಫಂಗಸ್’ಗಳಲ್ಲಿ ‘ಹರಿದ್ರೇಣು’ ಅಥವಾ ‘ಕ್ಲೋರೋಪ್ಲಾಸ್ಟ್’ ಇರುವುದಿಲ್ಲ; ಹಾಗಾಗಿ ಇವು ಸಸ್ಯಗಳಂತೆ ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳಲು ಸಾಧ್ಯವಾಗದೇ, ಪ್ರಾಣಿಗಳಂತೆ ತಮ್ಮ ಸುತ್ತಲಿನ ಇತರೆ ಜೀವಿಗಳ ಮೇಲೆ ಆಹಾರಕ್ಕಾಗಿ ಅವಳಂಬಿತವಾಗಿರುತ್ತವೆ. ಹಾಗೆಂದು, ಇವನ್ನು ಪ್ರಾಣಿಗಳ ಸಾಮ್ರಾಜ್ಯಕ್ಕೆ ಸೇರಿಸಲು ಕೂಡ ಸಾಧ್ಯವಿಲ್ಲ; ಏಕೆಂದರೆ ಆಣ್ವಿಕ ನೆಲೆಗಟ್ಟಿನಲ್ಲಿ ಇವಕ್ಕೂ ಪ್ರಾಣಿಗಳ ಜೀವಕೋಶಕ್ಕೂ, ಇವುಗಳಲ್ಲಿ ನಡೆಯುವ ಜೀವರಾಸಾಯನಿಕ ಪ್ರಕ್ರಿಯೆಗಳಿಗೂ ಅಜಗಜಾಂತರ. ಹೀಗಾಗಿ ಸ್ಥಾಪನೆಯಾದ ‘ಶಿಲೀಂಧ್ರ’ ಸಾಮ್ರಾಜ್ಯವು, ಕೇವಲ ಫಂಗಸ್ಗಳಿಗೆ ಮೀಸಲಾಗಿದ್ದು, ಸರಿಸುಮಾರು ೧.೫ ರಿಂದ ೫ ದಶಲಕ್ಷದವರೆಗೆ ಸದಸ್ಯರನ್ನು ಒಳಗೊಂಡಿದೆ. ಆದರೆ, ಇವುಗಳಲ್ಲಿ ಕೇವಲ ೫% ಸದಸ್ಯರನ್ನು ಸರಿಯಾದ ವೈಜ್ಞಾನಿಕ ರೂಪದಲ್ಲಿ ವರ್ಗೀಕರಿಸಲಾಗಿದೆ; ಹಲವು ದಶಕಗಳ ಹಿಂದೆ, ‘ಶಿಲೀಂಧ್ರ’ಗಳನ್ನು ಅವುಗಳ ರೂಪವಿಜ್ಞಾನ. ಶರೀರವಿಜ್ಞಾನ ಅಥವಾ ಜೀವನಚಕ್ರ ಕಾರ್ಯವಿಧಾನದ ಆಧಾರದ ಮೇಲೆ ವಿಂಗಡಿಸಲಾಗಿತ್ತು; ಆದರೆ ಇತ್ತೀಚಿನ ಕೆಲ ವರ್ಷಗಳಿಂದ ‘ಡಿ.ಎನ್.ಎ’ ವಿಶ್ಲೇಷಣೆ ವಿಧಾನವನ್ನು ಬಳಸಿ,‘ಶಿಲೀಂಧ್ರ’ ಸಾಮ್ರಾಜ್ಯದ ಸದಸ್ಯರುಗಳನ್ನು ಮರುವಿಂಗಡಿಸಲಾಗುತ್ತಿದೆ.
ಶಿಲೀಂಧ್ರಗಳ ವಿತರಣೆ:
ಭೂಮಿಯ ಮೇಲೆ ಮಣ್ಣು ಮತ್ತು ನೀರಿನಲ್ಲಿ ಶಿಲೀಂಧ್ರಗಳು ಯಥೇಚ್ಚವಾಗಿ ವಾಸಿಸುತ್ತಿದ್ದು, ಇವುಗಳ ಲಕ್ಷಾಂತರ ಪ್ರಭೇದಗಳನ್ನು ಈಗಾಗಲೇ ಗುರುತಿಸಲಾಗಿದ್ದು ನಿಜವಾದರೂ, ವೈಜ್ಞಾನಿಕ ಲೋಕಕ್ಕೆ ಇನ್ನೂ ಪರಿಚಯವೇ ಇಲ್ಲದ ಬೃಹತ್ ಪ್ರಮಾಣದ ಶಿಲೀಂಧ್ರಗಳು ಕೂಡ ಇವೆ. ಗಾಳಿಯಲ್ಲಿ ಸಾಮಾನ್ಯವಾಗಿ ಶಿಲೀಂಧ್ರಗಳು ವಾಸಿಸುವುದಿಲ್ಲ; ಆದರೆ, ಅವುಗಳ ‘ಸ್ಪೋರ್’ ಅಥವಾ ಬೀಜಗಳು ಮತ್ತು ದೇಹದ ಕೆಲವು ಭಾಗಳು ಗಾಳಿಯಲ್ಲಿ ತೇಲುತ್ತಿರುತ್ತವೆ ಹಾಗೂ ಸೂಕ್ತ ನೀರಿನ ನೆಲೆ ಅಥವಾ ಮಣ್ಣಿನ ಮೇಲೆ ಇಳಿದು ತಮ್ಮ ಜೀವನಚಕ್ರವನ್ನು ಮುಂದುವರೆಸುತ್ತವೆ. ಸಾಮಾನ್ಯವಾಗಿ ಉಪ್ಪಿನಂಶ ಕಡಿಮೆಯಿರುವ ನೀರಿನ ನೆಲೆಗಳಲ್ಲಿ, ಕಲುಷಿತ ನೀರಿನಲ್ಲಿ, ಸಾವಯವ ಅಂಶವನ್ನು ಹೆಚ್ಚಾಗಿ ಹೊಂದಿರುವ ಮಣ್ಣಿನಲ್ಲಿ ಶಿಲೀಂಧ್ರಗಳು ಸುಲಭವಾಗಿ ಕಂಡುಬರುತ್ತವೆ. ಹಾಗೆಂದು, ಜೀವಿಸಲು ಅಷ್ಟೇನೂ ಆರಾಮದಾಯಕವಲ್ಲದ ಆರ್ಕ್ಟಿಕ್ ಮತ್ತು ಅಂಟಾರ್ಕ್ಟಿಕ್ ಪ್ರದೇಶಗಳನ್ನೂ ಈ ಶಿಲೀಂಧ್ರಗಳು ಬಿಟ್ಟಿಲ್ಲ; ತಮ್ಮ ದೈಹಿಕ ಜೀವರಾಸಾಯನಿಕ ಪ್ರಕ್ರಿಯೆಗಳನ್ನು ಅಮೂಲಾಗ್ರವಾಗಿ ಬದಲಾಯಿಸಿಕೊಂಡು, ಅಂತಹ ಕ್ಲಿಷ್ಟಕರ ಪರಿಸ್ಥಿತಿಗಳಲ್ಲೂ ಹೊಂದಿಕೊಂಡಿವೆ. ಕೆಲವು ಶಿಲಿಂಧ್ರಗಳು ಇತರ ಜೀವಿಗಳ ಮೇಲೆ ಅಥವಾ ಒಳಗೆ ಬದುಕುವುದೂ ಉಂಟು.
ಶಿಲೀಂಧ್ರಗಳ ರೂಪವಿಜ್ಞಾನ:
ಹಣ್ಣು ತರಕಾರಿ ಬ್ರೆಡ್ನಂತಹಾ ಆಹಾರದ ಮೇಲೋ, ಅಥವಾ ಬಹಳ ದಿನ ಉಪಯೋಗಿಸದೆ ಇಟ್ಟ ಬಟ್ಟೆಗಳ ಮೇಲೋ ಕಪ್ಪು/ ಹಸಿರು/ ಬಿಳಿ ಬಣ್ಣದ ಚುಕ್ಕೆ ಚುಕ್ಕೆ ಪುಡಿಗಳನ್ನು ನೀವು ಗಮನಿಸಿರಬಹುದು. ಅದೇ ಶಿಲೀಂಧ್ರ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಏಕೆಂದರೆ ಧೂಳಿನಂತೆ, ಪುಡಿಪುಡಿಯಾಗಿರುವ ಅದು,ನಿಜವಾಗಲೂ ಜೀವಿಯೇ ಎನಿಸಬಹುದು. ಆದರೆ, ಸೂಕ್ಷ್ಮದರ್ಶಕದ ಸಹಾಯದಿಂದ ಗಮನಿಸಿದಾಗ, ಅವು ದಾರದ ಎಳೆಗಳಂತೆ ಕಂಡುಬರುತ್ತವೆ ಮತ್ತು ಈ ದಾರದ ಎಳೆಗಳಂತಹ ದೇಹಭಾಗವನ್ನು ‘ಹೈಫಾ’ (ಏಕ)/ ಹೈಫೆ (ಬಹು) ಎನ್ನುತ್ತೇವೆ. ಕೆಲವು ಶಿಲೀಂಧ್ರಗಳ ಹೈಫೆಯ ಉದ್ದ ೨ – ೧೦ ನ್ಯಾನೋಮೀಟರ್; ಆದರೆ, ಹಲವಾರು ಸೆಂಟಿಮೀಟರ್ ಉದ್ದದ ಹೈಫೆಯನ್ನುಳ್ಳ ಹಲವು ಫಂಗಸ್ಗಳು ಕೂಡ ಯಥೇಚ್ಚವಾಗಿ ಕಂಡುಬರುತ್ತವೆ. ಈ ‘ಹೈಫೆ’ ಗಿಡ ಮರಗಳಂತೆರೆಂಬೆ ಕೊಂಬೆಗಳನ್ನು ಬೆಳೆಸಿಕೊಳ್ಳುತ್ತದೆ; ಈ ಪ್ರಕ್ರಿಯೆಯಲ್ಲಿ ಒಂದು ‘ಹೈಫಾ’ ಮತ್ತೊಂದರೊಂದಿಗೆ ಸಮ್ಮಿಳನವಾದಾಗ,ಅಲ್ಲೊಂದು ಜಾಲದಂತಹಾ ವ್ಯವಸ್ಥೆ ಏರ್ಪಟ್ಟು, ಗೋಜಲುಗೋಜಲಾಗಿ ಹರಡಿಕೊಳ್ಳುತ್ತಾ ಸಾಗುತ್ತದೆ. ಈ ‘ಹೈಫೆ’ಯ ಜಾಲಬಂಧವನ್ನು ‘ಮೈಸೀಲಿಯಮ್’ ಎನ್ನುತ್ತೇವೆ. ಈ ಉದ್ದುದ್ದದ ದಾರದ ಎಳೆಗಳಂತಹ ದೇಹದಲ್ಲಿ, ಹಲವಾರು ಜೀವಕೋಶಗಳಿರುವಂತೆ ಭಾಸವಾದರೂ, ಒಂದು ಹೈಫಾ ಒಂದೇ ಬಹುದೊಡ್ಡ ಜೀವಕೋಶವಾಗಿರುತ್ತದೆ; ಕೆಲವೊಮ್ಮೆ ಮಧ್ಯ ಮಧ್ಯದಲ್ಲಿ ಕೋಶಗೋಡೆಯಂತೆ ಕಾಣಿಸುವ ಅರೆಬರೆ ಬೆಳೆದ ಪದರವಿದ್ದರೂ, ಅದು ರಂಧ್ರಪೂರಿತವಾಗಿದ್ದು, ತನ್ನ ಮೂಲಕ ಕೋಶದ ಎಲ್ಲಾ ಸಾಮಗ್ರಿಯನ್ನು ಹರಿಯಲು ಸಾಧ್ಯವಾಗಿಸುತ್ತದೆ; ಮತ್ತೂ ಕೆಲವು ಹೈಫಾಗಳಲ್ಲಿ ಉದ್ದಕ್ಕೂ ಒಂದೇ ಜೀವಕೋಶವಿದ್ದು, ಮಧ್ಯದಲ್ಲಿ ಯಾವುದೇ ಪೂರೆಯಂತಹ ಅಡೆತಡೆಯಿಲ್ಲದಿದ್ದರೂ, ಹಲವಾರು ಕೋಶಕೇಂದ್ರಗಳು ಅಥವಾ ನ್ಯೂಕ್ಲಿಯಸ್ಗಳು ಇರುವುದರಿಂದ, ಉದ್ದದ ಒಂದೇ ಕೋಶವು ಹಲವಾರು ಕೋಶಗಳಂತೆ ಕಾಣುತ್ತದೆ. ಫಂಗಸ್ಗಳು ತಮ್ಮ ಸಂತಾನೋತ್ಪತ್ತಿಗಾಗಿ ಬೀಜಗಳನ್ನು ಉತ್ಪಾದಿಸುತ್ತದೆ ಮತ್ತು ಅವನ್ನು ‘ಸ್ಪೋರ್’ಗಳೆನ್ನುತ್ತೇವೆ. ಸಾವಿರಾರು ‘ಸ್ಪೋರ್’ಗಳನ್ನು ಒಳಗೊಂಡಿರುವ ಹಣ್ಣಿನಂತಹ ದೇಹಭಾಗವನ್ನು ‘ಸ್ಪೋರೋಕಾರ್ಪ್’ ಎನ್ನುತ್ತೇವೆ; ಇದಕ್ಕೆ, ಮತ್ತೂ ಮುಂದುವರಿದು, ಯಾವ ವರ್ಗದ ಶಿಲೀಂಧ್ರದ ಹಣ್ಣು ಎಂಬುದನ್ನು ಆಧರಿಸಿ ‘ಕ್ಲಮೈಡೊಕೊನಿಡಿಯ’, ‘ಅಸ್ಕೊಕಾರ್ಪ್’, ‘ಬಸಿಡಿಯೋಕಾರ್ಪ್’ ಎಂಬ ವಿಶೇಷ ಹೆಸರಿನಿಂದಲೂ ಗುರುತಿಸಲಾಗುತ್ತದೆ. ‘ಸ್ಪೋರ್’ ತುಂಬಿದ ಹಣ್ಣನ್ನು ತಮ್ಮ ಮೇಲೆ ಹೊತ್ತ ಕೊಂಬೆಗಳನ್ನು ‘ಫಿಯಲೈಡ್’ ಎನ್ನುತ್ತೇವೆ.ಹಣ್ಣಿನ ಪರಿಪಕ್ವತೆಯ ನಂತರ ಅದು ಒಡೆದು, ‘ಸ್ಪೋರ್’ಗಳು ಗಾಳಿಯಲ್ಲಿ ಚೆಲ್ಲಾಪಿಲ್ಲಿಯಾಗುತ್ತವೆ. ಆ ‘ಸ್ಪೋರ್’ಗಳಿಗೆ ಸೂಕ್ತ ನೆಲೆ ದೊರೆತ ನಂತರ, ಅವು ಚಿಗುರಿ ಹೊಸ ‘ಹೈಫಾ’ದ ಜನನವಾಗುತ್ತದೆ.
ಶಿಲೀಂಧ್ರಗಳ ಆಹಾರಕ್ರಮ:
ಶಿಲೀಂದ್ರಗಳಲ್ಲಿ‘ಹರಿದ್ರೇಣು’ಗಳು ಇಲ್ಲದಿರುವುದರಿಂದ, ದ್ಯುತಿಸಂಶ್ಲೇಷಣೆ ಸಾಧ್ಯವಿಲ್ಲ; ಹಾಗಾಗಿ ಅವು ಇತರ ಜೀವಿಗಳ ಮೇಲೆ ಆಹಾರಕ್ಕಾಗಿ ಅವಲಂಬಿತವಾಗಿರುವ ಭಿನ್ನಪೋಶಕಗಳೇ ಸರಿ. ಈ ಭಿನ್ನಪೋಶಕಜೀವಿಯು ನಾಲ್ಕು ಬಗೆಗಳಲ್ಲಿ ತಮ್ಮ ಆಹಾರವನ್ನು ಸಂಪಾದಿಸಿ, ಜೀರ್ಣಿಸಿಕೊಳ್ಳುತ್ತವೆ. ಇದರ ಆಧಾರದ ಮೇಲೆ ಇವುಗಳನ್ನು ನಾಲ್ಕು ಬಗೆಯಾಗಿ ವಿಂಗಡಿಸಬಹುದು:
ಪೂತಿಜೀವಿ: ‘ಮ್ಯುಕರ್’, ‘ರೈಜ್ಹೊಪಸ್’,‘ಪೆನಿಸಿಲಿಯಮ್’, ‘ಆಸ್ಪರ್ಜಿಲ್ಲಸ್’ನಂಥಾ ಶಿಲೀಂದ್ರಗಳು, ಸಸ್ಯ ಮತ್ತು ಪ್ರಾಣಿಗಳ ಸತ್ತ ದೇಹಗಳ ಮೇಲೆ ವಾಸಿಸುತ್ತವೆ; ಇವು ಸತ್ತ ದೇಹಭಾಗಗಳಿಂದ, ಅಥವಾ ಪ್ರಾಣಿಜನ್ಯ / ಸಸ್ಯಜನ್ಯ ವಿಸರ್ಜನೆಗಳಿಂದ ತಮಗೆ ಬೇಕಾದ ಪೋಷಕಾಂಶಗಳನ್ನು ಹೀರಿಕೊಳ್ಳುತ್ತವೆ. ಈ ಕಾರ್ಯಕ್ಕಾಗಿಯೇ ವಿಶಿಷ್ಟ ‘ಹೈಫೆ’ ಬೆಳೆಸಿಕೊಂಡು, ಸಾವಯವ ಪದಾರ್ಥಗಳೊಳಗೆ ಅವನ್ನು ಇಳಿಸಿ, ಕಿಣ್ವಗಳ ಸಹಾಯದಿಂದ ತಮ್ಮ ಆಹಾರವನ್ನು ಪಡೆದುಕೊಳ್ಳುತ್ತವೆ ಮತ್ತು ಜೀರ್ಣಿಸಿಕೊಳ್ಳುತ್ತವೆ.
ಪರಭಕ್ಷಕ:‘ಆರ್ಥ್ರೋಬೋಟ್ರಿಸ್’, ‘ಡಾಕ್ತಿಲೆಲ್ಲಾ’ದಂತಹಾ ಕೆಲವು ಶಿಲೀಂಧ್ರಗಳು, ಸಣ್ಣ ಹುಳುಗಳಂತಹಾ ಪ್ರಾಣಿಗಳಾದ ‘ಪ್ರೊತೊಝೊವಾ’, ‘ನೆಮಾಟೋಡ್’ಗಳನ್ನು ಬೇಟೆಯಾಡಿ, ಭಕ್ಷಿಸುತ್ತವೆ. ಇದಕ್ಕಾಗಿ ಅವು ಉರುಲು ಅಥವಾ ಬಲೆಯಂತಹಾ ‘ಹೈಫೆ’ಗಳನ್ನೊಳಗೊಂಡ ವಿಶಿಷ್ಟ ದೇಹರಚನೆಯ ಮೊರೆ ಹೋಗುತ್ತವೆ. ಈ ಅನನ್ಯ ಬಲೆಯನ್ನು ಬಳಸಿ ಹಿಡಿದ ಬೇಟೆಯನ್ನು, ಕಿಣ್ವಗಳ ಸಹಾಯದಿಂದ ಅರಗಿಸಿ, ಅವುಗಳಿಂದ ಪೋಷಕಾಂಶ ಹೀರಿಕೊಳ್ಳುತ್ತವೆ.
ಪರಾವಲಂಬಿ:‘ಪುಸ್ಸಿನಿಯ’, ‘ತಫ್ರಿನಾ’, ‘ಫ್ಯುಸೆರಿಯಮ್’, ‘ಪೈಥಿಯಮ್’ನಂತಹಾ ಹಲವು ಶಿಲೀಂಧ್ರಗಳು, ಪರಾವಲಂಬಿ ಜೀವಿಗಳಾಗಿದ್ದು, ಜೀವಂತ ಪ್ರಾಣಿ ಅಥವಾ ಸಸ್ಯದೊಳಗೆ ಜೀವಿಸುತ್ತವೆ. ಅತಿಥೇಯ ಜೀವಿಯ ಜೀವಕೋಶದಿಂದ ತನಗೆ ಬೇಕಾದ ಪೋಷಕಾಂಶವನ್ನು ಸಂಪಾದಿಸಿಕೊಂಡು, ಜೀರ್ಣಿಸಿಕೊಳ್ಳುವುದಷ್ಟೇ ಅಲ್ಲದೇ, ಅತಿಥೇಯ ಜೀವಿಗೆ ರೋಗರುಜಿನಗಳನ್ನೂ ದಯಪಾಲಿಸುತ್ತವೆ. ಕೆಲವು ಫಂಗಸ್ಗಳು ಐಚ್ಚಿಕ ಪರಾವಲಂಬಿಗಳಾಗಿದ್ದು, ಅತಿಥೇಯ ಜೀವಿಯ ಅಥವಾ ಸಾವಯವ ಪದಾರ್ಥಗಳ ಲಭ್ಯತೆಯ ಆಧಾರದ ಮೇಲೆ ತಾವು ಪರಾವಲಂಬಿಗಳಾಗಬೇಕೋ, ಪೂತಿಜೀವಿಗಳಾಗಬೇಕೋ ನಿರ್ಧರಿಸುತ್ತವೆ. ಆದರೆ, ಹಲವು ಶಿಲೀಂಧ್ರಗಳು ಜೀವನದಾದ್ಯಂತ ಬದ್ಧ ಪರಾವಲಂಬಿಗಳಾಗಿದ್ದು, ಮಾನವನೂ ಸೇರಿದಂತೆ ಪ್ರಾಣಿಗಳ ಮತ್ತು ಸಸ್ಯಗಳ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ.
ಸಹಜೀವಿ:‘ಲೈಕೆನ್ಸ್’, ‘ಮೈಕೊರೈಜ್ಹಾ’ದಂತಹ ಉದಾಹರಣೆಗಳನ್ನು ನಾವು ನಮ್ಮ ಸುತ್ತಲಿನ ಪರಿಸರದಲ್ಲಿ ಕಂಡಿರುತ್ತೇವೆ;‘ಲೈಕೆನ್ಸ್’ ಅನ್ನು ಕಲ್ಲುಹೂವು ಎಂದು ಆಹಾರದಲ್ಲಿ ಬಳಸಲಾಗುತ್ತದೆ. ಮರಗಳ ಮೇಲೆ, ಪಾರ್ಕಿನ ಹಳೆಯ ಬೆಂಚುಗಳ ಮೇಲೆ ಹಸಿರು – ಬಿಳಿ ಬಣ್ಣದಲ್ಲಿ ಹೂವಿನ ಆಕಾರದ ‘ಲೈಕೆನ್ಸ್’ಗಳನ್ನು ಗಮನಿಸಿದ್ದರೂ, ಅದು ಶಿಲೀಂಧ್ರ ಮತ್ತು ಪಾಚಿಯ ಸಹಜೀವನದ ಕುರುಹು ಎಂಬುದು ಬಹಳಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ. ಇಲ್ಲಿ ಎರಡು ಬಗೆಯ ಸೂಕ್ಷ್ಮಾಣು ಜೀವಿಗಳು, ಪರಸ್ಪರ ಪ್ರಯೋಜನಗಳನ್ನು ಪಡೆದುಕೊಂಡು ಸಹಜೀವನ ನಡೆಸುತ್ತವೆ. ಶಿಲೀಂಧ್ರವು ಪಾಚಿಗೆ ವಾಸಿಸಲು ಅನುಕೂಲಕರ ಸ್ಥಳ ನೀಡುತ್ತದೆ ಮತ್ತು ಪಾಚಿಯು ಅದಕ್ಕೆ ಬದಲಾಗಿ ಆಹಾರ ತಯಾರಿಸಿಕೊಡುತ್ತದೆ. ‘ಮೈಕೊರೈಜ್ಹಾ’ ಹೆಸರೇ ಸೂಚಿಸುವಂತೆ, ಗ್ರೀಕ್ ಭಾಷೆಯಲ್ಲಿ ‘ಮೈಕೋ’ ಎಂದರೆ ಶಿಲೀಂಧ್ರ ಮತ್ತು ‘ರೈಜ್ಹಾ’ ಎಂದರೆ ಬೇರು; ಅರ್ಥಾತ್, ‘ಮೈಕೊರೈಜ್ಹಾ’ ಎಂದರೆ ಗಿಡ ಮರಗಳ ಬೇರು ಮತ್ತು ಶಿಲೀಂಧ್ರಗಳ ನಡುವಿನ ಸಾಮರಸ್ಯದ ಪ್ರತೀಕ. ಈ ಉದಾಹರಣೆಯಲ್ಲೂ, ಸಸ್ಯ ಮತ್ತು ಶಿಲೀಂಧ್ರ ಪರಸ್ಪರ ಪರೋಪಕಾರಿಯೇ. ಇಲ್ಲಿ ಸಹಜೀವಿಯಾಗಿರುವ ಶಿಲೀಂಧ್ರವು, ಪರಾವಲಂಬಿಯಂತೆ ರೋಗವನ್ನು ಉಂಟುಮಾಡುವುದಿಲ್ಲ.
ಶಿಲೀಂಧ್ರಗಳ ಸಂತಾನೋತ್ಪತ್ತಿ:
ಪ್ರತಿ ಜೀವಿಯು ತನ್ನ ಅನುವಂಶಿಕ ಜೀವರಾಸಾಯನಿಕ ಮಾಹಿತಿಯನ್ನು ಮುಂದಿನ ಜನಾಂಗಕ್ಕೆ ವರ್ಗಾಯಿಸಲು, ಮತ್ತು ತನ್ನ ಪ್ರಭೇದವನ್ನು ಮುಂದುವರೆಸಲು ಸಂತಾನೋತ್ಪತ್ತಿ ಅತ್ಯಗತ್ಯ. ಶಿಲೀಂಧ್ರಗಳಲ್ಲಿ ಸಂತಾನೋತ್ಪತ್ತಿಯು ಸಸ್ಯಕಾರಿ, ಅಲೈಂಗಿಕ ಮತ್ತು ಲೈಂಗಿಕ ವಿಧಾನಗಳ ಮುಖಾಂತರ ನಡೆಯುತ್ತದೆ. ಸಸ್ಯಕಾರಿ ಸಂತಾನೋತ್ಪತ್ತಿಯು ಹಲವಾರು ಬಗೆಯಲ್ಲಿ ಸಾಧ್ಯವಿದ್ದರೂ, ಮುಖ್ಯವಾಗಿ ಎರಡು ಬಗೆಯಲ್ಲಿ – ಅಂದರೆ, ವಿಘಟನೆ ವಿಧಾನ ಮತ್ತು ಮೊಗ್ಗು ಮೊಳಕೆಯೊಡೆಯುವ ವಿಧಾನದಿಂದ ಆಗುವುದು ಕಂಡುಬರುತ್ತದೆ.‘ರೈಜ್ಹೊಪಸ್’, ‘ಯೀಸ್ಟ್’ ನಂತಹಾ ಶಿಲೀಂಧ್ರಗಳು ಸಸ್ಯಕಾರಿ ಸಂತಾನೋತ್ಪತ್ತಿಯನ್ನು ಅನುಸರಿಸುತ್ತವೆ.ಅಲೈಂಗಿಕ ಮತ್ತು ಲೈಂಗಿಕ – ಈ ಎರಡೂ ವಿಧಾನಗಳಲ್ಲಿ ‘ಸ್ಪೋರ್’ಗಳೆಂಬ ಬೀಜಗಳು ಹಣ್ಣಿನಂತಹ ದೇಹಭಾಗದಲ್ಲಿ ಉತ್ಪತ್ತಿಯಾಗುತ್ತವೆ. ಆದರೆ, ಅಲೈಂಗಿಕ ವಿಧಾನದಲ್ಲಿ ಉತ್ಪತ್ತಿಯಾದ ಬೀಜಗಳು ಕೇವಲ ಒಂದು ಸದಸ್ಯ ಶಿಲೀಂಧ್ರದಿಂದ ತಯಾರಾಗುತ್ತದೆ; ‘ಆಸ್ಪರ್ಜಿಲ್ಲಸ್’, ‘ಪೆನಿಸಿಲಿಯಮ್’ನಂತಹ ಶಿಲೀಂಧ್ರಗಳು ಅಲೈಂಗಿಕ ಸಂತಾನೋತ್ಪತ್ತಿಯನ್ನು ಅನುಸರಿಸುತ್ತವೆ. ಲೈಂಗಿಕ ವಿಧಾನದಲ್ಲಿ, ಎರಡು ಫಂಗಸ್ಗಳು ಹೆಣ್ಣು ಮತ್ತು ಗಂಡು ಲಿಂಗಾಣುಗಳನ್ನುಉತ್ಪಾದಿಸಿ, ಅವು ಒಂದರೊಳಗೊಂದು ಮಿಳಿತವಾದ ನಂತರ, ಅದರ ಫಲವಾಗಿ ಬೀಜಗಳ ಉತ್ಪಾದನೆಯಾಗುತ್ತದೆ. ‘ಆಲ್ಬುಗೋ’, ‘ಪೈಥಿಯಮ್’ನಂತಹಾ ಶಿಲೀಂಧ್ರಗಳು ಲೈಂಗಿಕ ಸಂತಾನೋತ್ಪತ್ತಿಯನ್ನು ಅನುಸರಿಸುತ್ತವೆ.
ಶಿಲೀಂಧ್ರಗಳು ಸೂಕ್ಷ್ಮಾಣುಜೀವಿಗಳಾದರೂ, ನಮ್ಮ ಜೀವನದಲ್ಲಿ ಅವುಗಳ ಪ್ರಾಮುಖ್ಯತೆ ಅಗಾಧ; ಇದಕ್ಕೆ ಕಾರಣ, ಅವುಗಳಿಂದ ನಮಗಿರುವಷ್ಟು ಉಪಯೋಗಗಳಷ್ಟೇ ಅವುಗಳಿಂದ ನಮಗೆ ಅಪಾಯವೂ ಇದೆ. ಬ್ಯಾಕ್ಟೀರಿಯಾಗಳಂತೆ ಇವು ಕೂಡ ನೈಸರ್ಗಿಕ ಮತ್ತು ಮಾನವ ನಿರ್ಮಿತ ಉಪಯುಕ್ತತೆಯಿಂದ ಎಷ್ಟು ವಿಖ್ಯಾತವೋ, ಇವುಗಳು ಉಂಟುಮಾಡುವ ಖಾಯಿಲೆಗಳಿಂದ ಅಷ್ಟೇ ಕುಖ್ಯಾತ. ನಮ್ಮ ಬದುಕಿನಲ್ಲಿ ಶಿಲೀಂಧ್ರಗಳ ಪಾತ್ರದ ಬಗ್ಗೆ ಮುಂದಿನ ಲೇಖನದಲ್ಲಿ ಗಮನಿಸೋಣ.

– ಕ್ಷಮಾ.ವಿ.ಭಾನುಪ್ರಕಾಶ್