ಆಂಗಿಕಂ ಭುವನಂ ಯಸ್ಯ ವಾಚಿಕಂ ಸರ್ವ ವಾಙ್ಮಯಂ
ಆಹಾರ್ಯಂ ಚಂದ್ರತಾರಾದಿ ತಂ ವಂದೇ ಸಾತ್ವಿಕಂ ಶಿವಂ ||

ಈ ಭುವನವೆಲ್ಲವೂ ಯಾರ ಅಂಗಾಭಿನಯವೋ, ಸರ್ವವಾಙ್ಮಯವೂ ಯಾರ ವಾಚಿಕವೋ, ಸಮಸ್ತ ಚಂದ್ರತಾರಾದಿಗಳೂ ಯಾರ ಆಹಾರ್ಯವೋ ಅಂತಹ ಸಾತ್ವಿಕನಾದ ಶಿವನಿಗೆ ಸಮಸ್ಕಾರ.[1]

ನಂದಿಕೇಶ್ವರನ ‘ಅಭಿನಯದರ್ಪಣ’ದ ಈ ಪ್ರಾರ್ಥನಾ ಪದ್ಯದಲ್ಲಿ ಕವಿ ಸಮಸ್ತ ವಿಶ್ವವನ್ನೇ ಆ ದಿವ್ಯಶಕ್ತಿಯ ನಾಟ್ಯಕಲೆ ಎಂದು ಪರಿಭಾವಿಸಿದ್ದಾನೆ. ಸೃಷ್ಟಿ ಪೂರ್ವದಲ್ಲಿ ಶ್ರೀ ನಟರಾಜನ ನಾಟ್ಯದಿಂದ ಈ ಲೋಕವೆಲ್ಲಾ ಮೂಡಿಬಂದಿತು ಎನ್ನುವ ಭಾವನೆಯಲ್ಲಾಗಲೀ, ಹಾಲ್ಗಡಲಿನ ತೆರೆತೆರೆಯ ಮೇಲೆ ಮಹಾ ವಿಷ್ಣು ನರ್ತಿಸಿದಾಗ ಲಾಸ್ಯಕಲೆ ಮೂಡಿಬಂದಿತು ಎಂಬ ಚಿತ್ರಸೂತ್ರದ ಹೇಳಿಕೆಯಲ್ಲಾಗಲೀ, ಈ ಸೃಷ್ಟಿಗೆ ಮತ್ತು ಕಲೆಗೆ ದಿವ್ಯಶಕ್ತಿಯ ಲೀಲೆಯೇ ಕಾರಣ ಎನ್ನುವ ಅಂಶ ಸ್ಪಷ್ಟವಾಗುತ್ತದೆ.

ಸೌಂದರ್ಯಸೃಷ್ಟಿಯೇ ಕಲೆ. ಮೊದಲು ಈ ಲೋಕದ ಸೌಂದರ್ಯ ಸೃಷ್ಟಿಯಾದುದು ಆ ವಿಶ್ವಕರ್ಮನಿಂದ. ಲೋಕವನ್ನು ಸೃಜಿಸಿದ ಪ್ರಜಾಪತಿಯಾದ ಬ್ರಹ್ಮನನ್ನೇ ವಿಶ್ವಕರ್ಮನೆಂದು ಬ್ರಾಹ್ಮಣಗಳಲ್ಲಿ ಕರೆಯಲಾಗಿದೆ.[2] ಈ ವಿಶ್ವಕರ್ಮ ತನ್ನ ಶಕ್ತಿಯಿಂದ ಈ ವಿಶ್ವವನ್ನು ರೂಪಿಸಿದನು. ಈ ಬ್ರಹ್ಮಸೃಷ್ಟಿಯ ಒಂದು ಅಂಶವಾದ ಮರ್ತ್ಯರೂ ತಮ್ಮ ಕಲೆಯಲ್ಲಿ ಬ್ರಹ್ಮಸೃಷ್ಟಿಯನ್ನೇ ಅನುಸರಿಸಿ ನೂತನ ವಸ್ತು ನಿರ್ಮಾಣದಲ್ಲಿ ತೊಡಗಿದ್ದಾರೆ. ಮಾನವನ ಕಲಾಸೃಷ್ಟಿಗೆ ಪ್ರೇರಣೆಯೂ, ಅಂತಶ್ಯಕ್ತಿಯೂ ಬ್ರಹ್ಮಚೈತನ್ಯವೇ.

‘ಕಲೆ’ ಎಂಬ ಮಾತಿಗೆ ಋಗ್ವೇದದಲ್ಲಿ ‘ಅಂಶ’ ಎನ್ನುವ ಅರ್ಥವಿದೆ. ಎಂದರೆ ಕಲೆ ಎನ್ನುವುದು ಆ ದಿವ್ಯಶಕ್ತಿಯ ಕಾಂತಿಯ ಒಂದು ಕಿರಣ. “ಕಲೆ ಎಂದರೆ ಅಂಶ ಅಥವಾ ಕರ್ತೃತ್ವ. ಕಕಾರವು ಬ್ರಹ್ಮ ವಾಚಕವಾದುದರಿಂದ ಸೃಷ್ಟಿಯನ್ನೂ, ಲಕಾರವು ಲಯವನ್ನೂ ಸೂಚಿಸುವುದರಿಂದ ಕಲೆಯ ಸೃಷ್ಟಿ ಸ್ಥಿತಿ ಸಂಹಾರ ರೂಪವಾದುದು.”[3] ಕಲಾ ಎಂಬ ಪದಕ್ಕೆ ಪಂಡಿತರು ನಾನಾ ಅರ್ಥವನ್ನು ಕೊಟ್ಟರೂ ಕಲಾ ಶಬ್ದಕ್ಕೆ ಸಾಮಾನ್ಯವಾದ ಅರ್ಥ ಉಪಾಯ ಅಥವಾ ಕೌಶಲ ಎಂಬುದು. ಯಾವ ಉಪಾಯದಿಂದ ಅಥವಾ ಕೌಶಲದಿಂದ ನಮ್ಮ ಭಾವನೆಗಳನ್ನು ಆಲೋಚನೆಗಳನ್ನು ಮನಮುಟ್ಟುವ ರೀತಿಯಲ್ಲಿ ತಿಳಿಸಬಹುದೋ ಅಂತಹ ವಿಧಾನವೇ ಕಲೆ ಎನ್ನಬಹುದು.[4]

ಕಲೆಗಳ ಸಂಖ್ಯೆ ಅನಿರ್ದಿಷ್ಟ. ವಾತ್ಸಾಯನ ಮತ್ತು ಭಾಗವತಕಾರರು ಕಲೆಗಳು ೬೪ ಎಂದರೂ ಇವುಗಳ ಸಂಖ್ಯೆ ಇಷ್ಟೇ ಎಂಬ ಬಗ್ಗೆ ಲೇಖಕರಲ್ಲಿ ಒಮ್ಮತವಿಲ್ಲ. ಜೈನ ಗ್ರಂಥಗಳು ೭೨ ಕಲೆಗಳನ್ನೂ, ಬೌದ್ಧ ಗ್ರಂಥವಾದ ಲಲಿತ ವಿಸ್ತರ ೬೪ನ್ನೂ ಹೇಳಿವೆ. ಯಶೋಧರನು ಕಾಮಸೂತ್ರಕ್ಕೆ ಬರೆದ ಟೀಕೆಯಲ್ಲಿ ಕಲೆಗಳ ಸಂಖ್ಯೆಯನ್ನು ೫೧೨ಕ್ಕೆ ಒಯ್ದು ಮುಟ್ಟಿಸಿದ್ದಾನೆ[5]. ಈ ಸಂಖ್ಯೆ ಎಷ್ಟಾದರೂ ಇರಲಿ, ವೇದಸಾಹಿತ್ಯದಲ್ಲಿ ನೃತ್ಯ-ಗೀತ-ವಾದಿತ ಈ ಮೂರನ್ನೂ ಕಲೆಗಳೆಂದು ಹೇಳಲಾಗಿದೆ.[6]

ವಾಸ್ತುಶಾಸ್ತ್ರ ಮತ್ತು ಶಿಲ್ಪಶಾಸ್ತ್ರಗಳನ್ನೂ ವೇದದ ಉಪಾಂಗಗಳೆಂದು ಭಾವಿಸಲಾಗಿದೆ. ಇವುಗಳನ್ನು ಉಪವೇದಗಳೆಂದು ಕರೆದಿದ್ದಾರೆ. ಇವುಗಳನ್ನು ರಚಿಸಿದವರು ಪೂರ್ವಾಚಾರ‍್ಯರು. ಇವರೂ ಇಂತಿಷ್ಟೇ ಜನ ಎಂಬುದು ತಿಳಿಯದು. ಹರಪ್ಪ ಮಹೆಂಜದಾರೋ ಅವಶೇಷಗಳಲ್ಲಿ ಅತ್ಯಾಶ್ಚರ‍್ಯಕರವಾದ ಕಂಚಿನ ವಿಗ್ರಹಗಳೂ ನೃತ್ಯಗಾರ್ತಿಯರ ಪ್ರತಿಮೆಗಳೂ, ಇಂದಿನ ವೀಣಾದಿ ವಾದ್ಯಗಳ ಮಾದರಿಗಳೂ ದೊರೆತಿರುವುದನ್ನು ನೊಡಿದರೆ ಭಾರತೀಯ ಕಲಾಕೌಶಲ ಎಷ್ಟು ಪ್ರಾಚೀನ ಎನ್ನುವುದು ತಿಳಿಯುತ್ತದೆ.[7]

ಪ್ರಾಚೀನ ಭಾರತೀಯರಲ್ಲಿ, ಎಂದರೆ ವೇದೋಪನಿಷತ್ತುಗಳ ಕಾಲದಲ್ಲಿ ಯಾವ ಕಲಾ ಕೌಶಲವೂ ಕಾಣುವುದಿಲ್ಲವೆಂದೂ, ಅಂದಿನವರಿಗೆ ಸೌಂದರ್ಯವನ್ನು ಕುರಿತ ಒಲವೇ ಇರಲಿಲ್ಲವೆಂದೂ ಪಾಶ್ಚಾತ್ಯರನೇಕರು ಆಕ್ಷೇಪಿಸಿದ್ದಾರೆ. “ಆದರೆ ವೇದಯುಗದಲ್ಲಿ ಮೂರ್ತಿಗಳನ್ನು ಮರ, ಕಲ್ಲು, ಲೋಹ, ಮೃತ್ತಿಕೆ, ರತ್ನಗಳಿಂದ ಮಾಡುತ್ತಿದ್ದರು. ಎರಕ ಹೊಯ್ದೂ ಮಾಡುತ್ತಿದ್ದರು. ಅಥರ್ವ ವೇದದಲ್ಲಿ ‘ಕೃತ್ಯಾ’ ವಿಗ್ರಹಗಳನ್ನು ಮಾಡುವ ವಿಧಾನವು ಕಂಡುಬರುತ್ತದೆ.”[8] ವೇದ ಕಾಲದಲ್ಲಿ ಸೌಂದರ್ಯ ಪ್ರಿಯತೆ ಇರಲಿಲ್ಲವೆನ್ನುವುದಾಗಲೀ, ಅವರಿಂದ ಕಲಾ ಕೃತಿಗಳು ರಚಿತವಾಗಲಿಲ್ಲವೆನ್ನುವುದಾಗಲೀ ಸತ್ಯದೂರವಾದ ಸಂಗತಿಗಳು. ಮಾನವಸೌಂದರ್ಯವನ್ನು, ಪ್ರಕೃತಿ ಸೌಂದರ್ಯವನ್ನು, ದೇವಸೌಂದರ್ಯವನ್ನು ಕುರಿತು ಹಾಡಿದ ಅವರ ಹಾಡುಗಳೇ ಅವರ ಸುಸಂಸ್ಕೃತ ಸೌಂದರ್ಯದೃಷ್ಟಿಗೆ ನಿದರ್ಶನ. ಅವರೇನೂ ಶಿಲ್ಪಿಗಳಂತೆ ವಿಗ್ರಹ ನಿರ್ಮಾಣದಲ್ಲಿ ಸದಾ ತೊಡಗಿ ಭಾರತೀಯ ಶಿಲ್ಪಸಂಪತ್ತನ್ನು ಹೆಚ್ಚಿಸುವುದರಮೂಲಕ ತಮ್ಮ ಸೌಂದರ‍್ಯಾಭಿರುಚಿಯನ್ನು ತೋರಿಸಲಿಲ್ಲ; ಹಾಗೆ ಮಾಡುವುದು ಅವರ ಉದ್ದೇಶವೂ ಆಗಿರಲಿಲ್ಲ. ದೇವಾದಿ ದೇವತೆಗಳು ಬಂದು ತಮ್ಮ ಯಜ್ಞ ಯಾಗಾದಿಗಳಲ್ಲಿ ಹವಿಸ್ಸನ್ನು ಸ್ವೀಕರಿಸುವುದನ್ನು ಕಣ್ಣಾರೆ ಕಂಡ ಅವರಿಗೆ ವಿಗ್ರಹ ರಚನೆಯೂ ಅಲ್ಪವಾಗಿ ತೋರಿರಬಹುದು.[9] ಆದರೆ ಅವರು ಯಜ್ಞಯಾಗಾದಿ ಕರ್ಮಗಳಿಗಾಗಿ ರಚಿಸಿದ ಚಿತಾ (ಯಜ್ಞಕುಂಡ) ಮತ್ತು ಅಪರ ಕರ್ಮಗಳಿಗಾಗಿ ರಚಿಸಿದ ಚಿತಾ, ಇವು ಭಾರತೀಯ ಶಿಲ್ಪದ ಬೀಜವಾದುವು  ಎಂಬುದನ್ನು ಮರೆಯಬಾರದು.

ಭಾರತೀಯರ ಪ್ರಕಾರ ಶಿಲ್ಪ ಮತ್ತು ಕಲೆ ಎರಡೂ ಅಭಿನ್ನಾರ್ಥದಲ್ಲಿ ಬಳಸಲ್ಪಟ್ಟಿವೆ. ಶಿಲ್ಪ ಎನ್ನುವುದು ಸಮಸ್ತ ಕಲೆಗಳನ್ನೂ ಒಳಗೊಳ್ಳುತ್ತದೆ, “ಭಾರತೀಯ ಶಿಲ್ಪಕಲೆ ಎರಡು ನಿರ್ದಿಷ್ಟವಾದ ರೂಪದಲ್ಲಿ ವಿಕಾಸಗೊಂಡಿದೆ. ಮೊದಲನೆಯದು ಶವಸಂಸ್ಕಾರ  ರೂಪವಾದುದು; ಎರಡನೆಯದು ಯಜ್ಞಕರ್ಮಗಳಿಗೆ ಸಂಬಂಧಿಸಿದ್ದು. ‘ಚಿತಿ’ ಎಂದರೆ ಯಜ್ಞವೇದಿಕೆ, ಕುಂಡ. ಇವು ಅನುಭಾವ ಪೂರ್ಣವಾದ ರೇಖಾಕೃತಿಗಳಿಂದ ರಚಿತವಾಗಿ ಕ್ರಮೇಣ ಚಕ್ರ ಯಂತ್ರ ಎಂಬ ರೂಪಗಳಾದುವು. ಇವೇ ಶಿಲ್ಪದಲ್ಲಿ ‘ವಿಮಾನ,’  ‘ಪ್ರಾಸಾದ’, ‘ಮಂಡಪ’ಗಳ ಮಾದರಿಗಳಾಗಿ ಭಾರತೀಯ ದೇವಾಲಯ ಶಿಲ್ಪಕ್ಕೆ ಮೂಲವಾದವು. ಇನ್ನು ‘ಚಿತಾ’ ಎಂದರೆ ಶವದಹನ ವೇದಿಕೆ. ಚೈತ್ಯ ಎಂದರೆ ಶವ ದಹನಾನಂತರ ಭಸ್ಮವನ್ನು ಇಡುವ ಸ್ಥಳ. ಚಿತೆಯಿಂದ ಚೈತ್ಯ, ಸ್ತೂಪ, ಮಠಗಳು ಮಹಾವ್ಯಕ್ತಿಗಳ ಭಸ್ಮಾವಶೇಷವನ್ನೋ ಮತ್ತಾವುದೇ ಅವರು ಬಳಸಿದ ಸಾಮಗ್ರಿಗಳನ್ನೋ ಇಟ್ಟು ಪೂಜಿಸುವ ಸ್ಥಳಗಳಾದುವು. ಚೈತ್ಯ ಎನ್ನುವ ಮಾತು ಬುದ್ಧನ ಅವಶೇಷಗಳನ್ನಿಟ್ಟು ಕಟ್ಟಿದ ಸ್ತೂಪಗಳೆಂದು ವಿಶೇಷ ಪ್ರಚುರವಾದರೂ ವೇದಯುಗದಲ್ಲೇ ‘ಚಿತಾ’ ಭಸ್ಮವನ್ನಿಟ್ಟ ಚೈತ್ಯಾಲಯಗಳು ಗೋಚರಿಸುತ್ತವೆ.”[10]

ಬೌದ್ಧಧರ್ಮವು ಭಾರತೀಯ ಶಿಲ್ಪದ ಮೇಲೆ ವಿಶೇಷ ಪರಿಣಾಮ ಮಾಡಿತು. ಬುದ್ಧನಿಗೆ ಮೊದಲು ಜಗತ್ತು ಕಂಡದ್ದು ದುಃಖಮಯವಾಗಿ, ಕ್ಷಣಿಕವಾಗಿ. ದುಃಖಮಯವಾದ ಕ್ಷಣಿಕವಾದ ಲೋಕದಲ್ಲಿ ನಿಂತು ಸೌಂದರ್ಯವನ್ನಾರಾಧಿಸುವುದಕ್ಕಿಂತ, ಈ ಜನನ ಮರಣಗಳ ಕರ್ಮಚಕ್ರದಿಂದ ಪಾರಾಗುವುದು ಅವನ ದೃಷ್ಟಿಗೆ ಪ್ರಧಾನ. ಅವನ ಕಾಲದಲ್ಲಿಯೇ ಬುದ್ಧ ತನ್ನ ವಿಗ್ರಹದ ಪೂಜೆಯನ್ನು ಒಪ್ಪಲಿಲ್ಲ. ಬೌದ್ಧ ಸನ್ಯಾಸಿಗಳು ನರ್ತನ-ಗಾಯನಗಳಲ್ಲಿ ಕೂಡ ಭಾಗವಹಿಸಬಾರದೆಂದು ವಿನಯ ಪಿಟಕದಲ್ಲಿ ಹೇಳಿದೆ. ಆದರೆ ಬುದ್ಧ ತನ್ನ ಕಡೆಗಾಲದಲ್ಲಿ, ಎಂಬತ್ತನೇ ವಯ್ಸಸ್ಸಿನಲ್ಲಿ ವೈಶಾಲಿಯಿಂದ ಕುಶಿ ನಾಗರಕ್ಕೆ ಹೋಗುವ ದಾರಿಯಲ್ಲಿ ರಮ್ಯವಾದ ಗುಡ್ಡಗಾಡಿನ ಹಾದಿಯಲ್ಲಿ ಆನಂದನನ್ನು ಕುರಿತು, “ಚಿತ್ರಂ ಜಂಬೂದ್ವೀಪಂ, ಮನೋರಮಮ್ ಜೀವಿತಮ್ ಮನುಷ್ಯಾಣಾಮ್”[11] ಎಂದು ಉದ್ಗಾರವೆತ್ತುತ್ತಾನೆ. ಬೋಧಿಯನ್ನು ಪಡೆದ ಬುದ್ಧನ ಕಣ್ಣಿಗೆ ಮನುಷ್ಯ ಜೀವಿತವೂ ಮನೋಹರವಾಗೇ ಕಂಡಿತು! ಆದರೂ ಅವನ ಕಟ್ಟಕಡೆಯ ಮಾತುಗಳು “ಓ ಭಿಕ್ಷುಗಳೇ, ಎಲ್ಲ ವಸ್ತುಗಳೂ ನಶ್ವರವಾದುವು; ಆರ್ತತೆಯಿಂದ ನಿಮ್ಮ ಬಿಡುಗಡೆಯನ್ನು ನೀವು ಪಡೆಯಿರಿ” ಎಂಬುದು.

ಆದರೆ ಬುದ್ಧನ ಮರಣಾನಂತರ ಬಹುಕಾಲದ ಮೇಲೆ ಭಾರತದ ವಾಯುವ್ಯದಲ್ಲಿ ವಲಸೆ ಬಂದ ಗ್ರೀಕ್, ರೋಮನ್ ಜನರ ಸಂಸರ್ಗದಿಂದ, ಅವರ ಯವನ ಶಿಲ್ಪಗಳ ಪ್ರೇರಣೆಯಿಂದ ಗಾಂಧಾರವೆಂಬ ಶಿಲ್ಪಮಾದರಿಯೊಂದು ರೂಪಿತವಾಗಿ ಅನೇಕ ಬುದ್ಧ ವಿಗ್ರಹಗಳೂ ರಚಿತವಾದುವು. ವಿದೇಶೀಯ ಸಂಸರ್ಗ ಹಾಗೂ ಪ್ರಭಾವಗಳಿಂದ ರೂಪುಗೊಂಡ ಈ ಶಿಲ್ಪ, ಗುಪ್ತರ ಕಾಲದಲ್ಲಿ ತನ್ನ ಶಿಖರವನ್ನು ಮುಟ್ಟಿತು. ಈ ಗಾಂಧಾರಶಿಲ್ಪ ಭಾರತೀಯ ಶಾಸ್ತ್ರಗಳ ಕಟ್ಟುನಿಟ್ಟುಗಳಿಗೆ ಒಳಗಾಗದೆ ಧ್ಯಾನಾನುಭವವನ್ನು ಸ್ವತಂತ್ರವಾಗಿ ಅಭಿವ್ಯಕ್ತಗೊಳಿಸುವ ಹಂಬಲದಲ್ಲಿ ಮುಂದುವರಿಯಿತು. ಈ ಗಾಂಧಾರಶಿಲ್ಪದ ವಿಗ್ರಹಗಳು “ಶಾಂತಂ-ಶಿವಂ-ಸುಂದರಂ” ಎನ್ನಬಹುದು.[12]

ಈ ಕಾಲ ಮುಗಿದ ಇಳಿಗಾಲದಲ್ಲಿ ಶಿಲ್ಪಶಾಸ್ತ್ರಗಳು ರಚಿತವಾದುವು. ಹೇಗೆ ಕಾವ್ಯದಲ್ಲಿ ಆಲಂಕಾರಿಕರು ಕವಿಗಳಿಗೆ ಒಂದು ಬಗೆಯ ನಿರ್ಬಂಧವನ್ನು ಹಾಕಿದರೋ ಹಾಗೆ ಶಿಲ್ಪಿಗಳಿಗೆ ಈ ಶಾಸ್ತ್ರಕಾರರು ಹಲವು ನಿರ್ಬಂಧ ನಿಯಮಗಳನ್ನು ರಚಿಸಿದರು. ಗುಪ್ತರಕಾಲದಿಂದ ಈಚೆಗೆ ಈ ಶಿಲ್ಪಶಾಸ್ತ್ರಗಳು ಹೆಚ್ಚಿಕೊಂಡವು. ಕ್ರಿ.ಶ. ೬ನೆಯ ಶತಮಾನದಿಂದ ೧೧-೧೨ನೆಯ ಶತಮಾನದವರೆಗೂ ಈ ಶಿಲ್ಪಶಾಸ್ತ್ರದ ರಚನೆ ಸಾಗಿತೆನ್ನಬೇಕು.[13]

ಸಕಲ ಕಲೆಗಳನ್ನೂ ಒಳಗೊಳ್ಳುವ ಈ ಶಿಲ್ಪ, ವಾಸ್ತುಶಾಸ್ತ್ರ, ಶಿಲ್ಪಶಾಸ್ತ್ರ, ಚಿತ್ರಸೂತ್ರ ಎಂದು ಮೂರು ವಿಭಾಗವಾಗಿದೆ. ಭಾರತೀಯ ಚಿತ್ರಕಲೆಯನ್ನು ಚಿತ್ರಸೂತ್ರ ವಿವರಿಸುತ್ತದೆ. ವಿಷ್ಣುಧರ್ಮೋತ್ತರ ಪುರಾಣದಲ್ಲಿ ಚಿತ್ರದ ವಿಷಯ ವಿಸ್ತಾರವಾಗಿ ಹೇಳಲ್ಪಟ್ಟಿದೆ. ಭಾರತೀಯ ಚಿತ್ರಶಾಸ್ತ್ರದ ಉಗಮವನ್ನು ಕುರಿತು ಚಿತ್ರಸೂತ್ರ ಮತ್ತು ವಿಷ್ಣು ಧರ್ಮೋತ್ತರಗಳಲ್ಲಿ[14] ಎರಡು ಕತೆಗಳಿವೆ: ಚಿತ್ರಸೂತ್ರದ ಪ್ರಕಾರ ಭಯಾಜಿತ್ ಎನ್ನುವ ರಾಜನೊಬ್ಬ ತನ್ನ ರಾಜ್ಯದಲ್ಲಿ ಅಕಾಲ ಮೃತ್ಯುವಿಗೆ ತುತ್ತಾದ ಬ್ರಾಹ್ಮಣ ಕುಮಾರನನ್ನು ಯಮನಿಂದ ಹಿಂದಕ್ಕೆ ತರುವ ಹೋರಾಟದಲ್ಲಿ, ಯಮನನ್ನು ಸೋಲಿಸುತ್ತಾನೆ. ಆಗ ಬ್ರಹ್ಮನೇ ಬಂದು ಕರ್ಮವಶದಿಂದ ಮೃತ್ಯುವಿಗೀಡಾದ ಬ್ರಾಹ್ಮಣ ಕುಮಾರನನ್ನು ಯಮನು ಒಯ್ದುದು ಸರಿಯೆಂದೂ, ಅದರ ಬದಲು, ನೀನು ಈ ಬ್ರಾಹ್ಮಣ ಕುಮಾರನ ಚಿತ್ರವನ್ನು ಬರೆದರೆ ನಾನು ಅದಕ್ಕೆ ಜೀವ ಬರಿಸುತ್ತೇನೆಂದೂ ಹೇಳಿದಾಗ, ಆ ರಾಜ ಹಾಗೆಯೆ ಮಾಡಲಾಗಿ, ಬ್ರಹ್ಮನು ಆ ಚಿತ್ರಕ್ಕೆ ಜೀವಬರಿಸಿ ‘ನೀನು ಯಮನ ನಗ್ನ ಪ್ರೇತಗಳನ್ನು ಗೆದ್ದುದರಿಂದ ನಿನಗೆ ನಗ್ನಜಿತ್ ಎಂದು ಹೆಸರಾಗಲಿ, ಇದು ಜಗತ್ತಿನ ಪ್ರಥಮ ಚಿತ್ರವಾಗಲಿ’ – ಎಂದು ಹರಸುತ್ತಾನೆ. ಇನ್ನು ವಿಷ್ಣುಧರ್ಮೋತ್ತರದಲ್ಲಿ, ನಾರಾಯಣನೆಂಬ ಋಷಿ ತನ್ನ ತಪೋಭಂಗ ಮಾಡಲು ಬಂದ ಅಪ್ಸರೆಯರನ್ನು ನಾಚಿಸಲು, ಮಾವಿನ ಎಲೆಯ ರಸದಿಂದ ಊರ್ವಶಿಯ ಚಿತ್ರವನ್ನು ಬರೆದು ಅದಕ್ಕೆ ಜೀವ ತುಂಬಲಾಗಿ ಅಪ್ಸರೆಯರು ನಾಚಿ ಓಡಿಹೋದರೆಂದೂ, ಅನಂತರ ಈ ಋಷಿ ಚಿತ್ರವಿದ್ಯೆಯನ್ನು ವಿಶ್ವಕರ್ಮನಿಗೆ ಬೋಧಿಸಿದನೆಂದೂ ಹೇಳಲಾಗಿದೆ. ಈ ಎರಡು ಕತೆಗಳ ಹಿಂದಿರುವ ಸತ್ಯ ಇದು : ಚಿತ್ರ ಎನ್ನುವುದು ಬ್ರಹ್ಮಸೃಷ್ಟಿಗೆ ಸಮಾನವಾದ ಸೃಷ್ಟಿ; ಅದು ಮೃತ್ಯುವನ್ನೂ ಗೆಲ್ಲತಕ್ಕದ್ದು; ಅದು ಅಪೂರ್ವ ಸೌಂದರ‍್ಯ ನಿರ್ಮಾಣಶಕ್ತಿ.

ಚಿತ್ರ-ಗೀತ-ನರ್ತನ ಇವುಗಳೆಲ್ಲ ಪರಸ್ಪರ ಪೂರಕವಾಗಿ ಬೆಳೆದು ಬಂದ ಕಲೆಗಳು. ಆಯಾ ಕಲೆಗಳಿಗೆ ಸಂಬಂಧಿಸಿದಂತೆ ವಿಪುಲವಾದ ಶಾಸ್ತ್ರಗ್ರಂಥಗಳು ಬೆಳೆದು ಬಂದಿವೆ. ಎಲ್ಲ ಕಲೆಗಳೂ ರಸಾಭಿವ್ಯಕ್ತಿಯನ್ನೇ ತಮ್ಮ ಗುರಿ ಎಂದು ಸಾರಿದುವು. ಈ ಎಲ್ಲಕ್ಕೂ ಸಮಾನವಾದ ‘ರಸ’ದ ವಿಷಯದಲ್ಲಿ ಭರತಮುನಿಯ ನಾಟ್ಯಶಾಸ್ತ್ರವೇ ಆಧಾರ. ವಿಷ್ಣು ಧರ್ಮೋತ್ತರ  ಪುರಾಣದಲ್ಲಿ ಯಾವ ಯಾವ ರಸಗಳು ಯಾವ ಯಾವ ವರ್ಣವುಳ್ಳವು ಎಂಬುದನ್ನೂ ಹೇಳಲಾಗಿದೆ. ಸಂಗೀತದಲ್ಲಿ ಯಾವ ಯಾವ ಸ್ವರಗಳಿಗೆ ಯಾವ ಯಾವ ರಸಾಭಿವ್ಯಂಜನ  ಶಕ್ತಿ ಇದೆ ಎನ್ನುವುದನ್ನೂ ಹೇಳಿದೆ. ಚಿತ್ರದಲ್ಲಿಯೂ ಕೂಡ ಯಾವ ಯಾವ ವರ್ಣ ಯಾವ ಯಾವ ರಸವನ್ನು ವ್ಯಕ್ತಗೊಳಿಸಲು ಉಪಯೋಗಿಸಲ್ಪಡಬೇಕು ಎನ್ನುವ ವಿಷಯವನ್ನೂ  ಹೇಳಲಾಗಿದೆ.[15] “ನೃತ್ಯದಂತೆ ಚಿತ್ರವೂ ಲೋಕತ್ರಯದ ಅನುಕರಣ ರೂಪವಾದುದರಿಂದ ಆಯಾ ಭಾವಾವೇಶಕ್ಕೆ ತಕ್ಕಂತೆ ಇರುವ ಆಕೃತಿ ವಿಶೇಷಗಳು ಸಮನಾಗಿರುವುದರಿಂದ ನೃತ್ಯಸಹ ಉತ್ಕೃಷ್ಟವಾದ ಚಿತ್ರವೇ ಆಗುತ್ತದೆ”.[16] ಹೀಗೆ ನಾದವಾಗಲೀ, ವರ್ಣವಾಗಲೀ, ನರ್ತನವಾಗಲೀ ಎಲ್ಲವೂ ಚಿತ್ರದಲ್ಲೇ ನೆಲೆಯನ್ನು ಕಂಡುಕೊಳ್ಳುತ್ತವೆ. ಈ ಕಲೆಗಳ ಉದ್ದೇಶ ರಸಾಭಿವ್ಯಂಜನೆ[17] ಎಂದರೂ  ಅವುಗಳ ಪರಮೋದ್ದೇಶ ಅಷ್ಟೇ ಅಲ್ಲ. ಅವು ಕೇವಲ ರಸಾನಂದದಲ್ಲಿ ನಿಲ್ಲಿಸಿದರೆ ಸಾಲದು; ಪುರುಷಾರ್ಥ ಸಾಧಕವಾಗಬೇಕು. “ಯಾವನು ನೃತ್ಯ, ಗೀತ, ವಾದ್ಯ ಇವುಗಳನ್ನು ಮಹಾವಿಷ್ಣುವಿನ ಪ್ರೀತಿಗಾಗಿ ಅರ್ಪಿಸುತ್ತಾನೊ ಅವನು ಸರ್ವ ವಸ್ತು ಸಮೃದ್ಧಿಯಿಂದ ಮಾಡಿದ ಯಜ್ಞದ ಫಲವನ್ನೇ ಹೊಂದುತ್ತಾನೆ”[18]


[1] ಆಂಗಿಕ – ಅಂಗಾಂಗಗಳ ಚಲನೆ. ವಾಚಿಕ-ನಾಟ್ಯದಲ್ಲಿ ಬಳಸುವ ಹಾಡು, ಮಾತು, ಇತ್ಯಾದಿ ಆಹಾರ್ಯ- ನಾಟ್ಯಪ್ರದರ್ಶನಕ್ಕೆ ಅಗತ್ಯವಾದ, ಉಚಿತವಾದ ವೇಷಭೂಷಣಗಳು.

[2] ವಿಶ್ವಕರ್ಮ ಶಿಲ್ಪದಲ್ಲಿ ಸುಪ್ರಸಿದ್ಧ. ಪುರಾಣಗಳಲ್ಲಿ ದೇವಶಿಲ್ಪಿ ಎಂದು ಹೆಸರಾದವನು. ಆದರೆ ಶಿಲ್ಪಶಾಸ್ತ್ರಗಳನ್ನು  ಬರೆದ ವಿಶ್ವಕರ್ಮನೂ ಪುರಾಣೋಕ್ತ ವಿಶ್ವಕರ್ಮನೂ ಬೇರೆ ಬೇರೆ. ದೇವಶಿಲ್ಪಿಯಾದ ವಿಶ್ವಕರ್ಮನನ್ನು ಕುರಿತು, ಬ್ರಹ್ಮನ ನಾಲ್ಕು ಮುಖದಿಂದ ನಾಲ್ಕು ಜನ ಶಿಲ್ಪಿಗಳು ಮೂಡಿದರೆಂದೂ ಅವರಲ್ಲಿ ಲೋಕಸೃಷ್ಟಿಗೆ ಹೊರಟ ಮೊದಲನೆಯವನೇ ವಿಶ್ವಕರ್ಮನೆಂದೂ ‘ಮಾನಸಾರ’ ಹೇಳುತ್ತದೆ. ಬ್ರಹ್ಮನು ವಿಶ್ವಕರ್ಮನಿಂದ ನಾಟ್ಯಶಾಲೆಯನ್ನು ನಿರ್ಮಿಸಿದನೆಂದು ನಾಟ್ಯಶಾಸ್ತ್ರದಲ್ಲಿ ಉಲ್ಲೇಖವಿದೆ. ಗುಪ್ತರ ಕಾಲಕ್ಕೆ ಹಿಂದೆಯೇ ಶಿಲ್ಪ ಶಾಸ್ತ್ರಗಳನ್ನು ರಚಿಸಿದ ವಿಶ್ವಕರ್ಮನೆಂಬ ವ್ಯಕ್ತಿ ಇದ್ದುದು ಸ್ಪಷ್ಟ… ವರಾಹಮಿಹಿರನ ಬೃಹತ್ಸಂಹಿತೆಯ ಆಧಾರದಿಂದ ಇವನು ಕ್ರಿ.ಶ. ೬ನೇ ಶತಮಾನದ ಪೂರ್ವಾರ್ಧದಲ್ಲಿದ್ದಿರಬಹುದೆಂಬುದು ಪಂಡಿತರ ಮತ.

Edited by Phanindra nath Bose: Silpa Sastram: p, 6-9

[3] ಡಾ|| ಶ್ರೀಕಂಠಶಾಸ್ತ್ರೀ : ಭಾರತೀಯ ಸಂಸ್ಕೃತಿ : ಪು. 255.

[4] ‘ಕಲೆ’ ಎಂಬ ಪದಕ್ಕೆ ಸರಿಯಾದ ನಿಷ್ಪತ್ತಿ ದೊರೆತಿಲ್ಲ. ಮೋನಿಯರ್ ವಿಲಯಮ್ಸ್ ಅವರೂ ಆ ಪದದ ಮೂಲ ಸಂಶಯಾಸ್ಪದ ಎನ್ನುತ್ತಾರೆ. ಅದು ಬಹುಶಃ ‘ಕಲ್’ ಎಂಬ ದ್ರಾವಿಡಮೂಲದಿಂದ ಆರ್ಯರಿಗೆ ಬಂದಿರಬಹುದೆಂದು ಫಣೀಂದ್ರನಾಥಬೋಸ್ ಅವರು ಅಭಿಪ್ರಾಯ ಪಡುತ್ತಾರೆ. ಇದಕ್ಕೂ ಗ್ರೀಕ್ ಪದ Kalos (ಸೌಂದರ‍್ಯ – ಶಿವ ಎರಡೂ) ಎಂಬುದಕ್ಕೂ ಸಂಬಂಧವಿರಬಹುದೇ?

[5] ಕಲೆಗಳ ಸಂಖ್ಯೆಯನ್ನೂ ವಿವರಗಳನ್ನು ನೋಡಲು ಬಯಸುವವರು ಡಾ. ಎಂ. ವೆಂಕಟಸುಬ್ಬಯ್ಯನವರ The Kalas ಎನ್ನುವ ನಿಬಂಧವನ್ನು ನೋಡಬಹುದು.

[6] Edited by Phanindra Nath Bose : Silpasastra : p. 19

[7] Haridasa Mitra : Contribution to the Bibliography of Indian Art and Aesthetics : p. 3 and 10.

[8] ಡಾ. ಶ್ರೀಕಂಠಶಾಸ್ತ್ರೀ : ಭಾರತೀಯ ಸಂಸ್ಕೃತಿ : ಪು. 292.

[9] ಅಗ್ನಿರ್ದೇವೋದ್ವಿಜಾತೀನಾಂ ಹೃದಿದೇವೋ ಮನೀಷಿಣಾಮ್ |
ಪ್ರತಿಮಾಸ್ವಲ್ಪ ಬುದ್ಧೀನಾಂ ಜ್ಞಾನಿನಾಂ ಸರ್ವತಃ ಶಿವಃ ||

(ಕ್ರಿಯಾವೇತ್ತನಾದವನು ಅಗ್ನಿಯಲ್ಲಿ ದೇವರನ್ನು ಕಂಡರೆ ಮನೀಷಿಯಾದವನು ಹೃದಯದಲ್ಲಿ ಕಾಣುತ್ತಾನೆ. ಅಲ್ಪ ಬುದ್ಧಿಗಳು ಪ್ರತಿಮೆಯಲ್ಲಿ ಕಂಡರೆ ಜ್ಞಾನಿಗಳು ಸರ್ವತ್ರವೂ ಶಿವನನ್ನು ಕಾಣುತ್ತಾರೆ.) – “ದೇಹೋದೇವಾಲಯಂ ಪ್ರೋಕ್ತ ಜೀವದೇವೋ ಸನಾತನಃ”

[10] Haridasa Mitra : Contribution to the Bibliography of Indian Art and Aesthetics : P. 31 to 33.

[11] Edited by Prof. P.V. Bapat: 2500 Years of Buddhism  p. VII (Foreword)

[12] Phanindranath Bose: Principles of Indian Shilpa Shastra p. 5-6

[13] ಅಲ್ಲೆ ಪು. 7

[14] ಕ್ರಿ.ಶ. ೨ನೆಯ ಶತಮಾನದಿಂದ ೪ನೆಯ ಶತಮಾನದಲ್ಲಿ ವಿಷ್ಣು ಧರ್ಮೋತ್ತರ ರಚಿತವಾಗಿರಬೇಕೆಂದು Stella Kramrisch ಅಭಿಪ್ರಾಯಪಡುತ್ತಾರೆ. ಅದರಲ್ಲಿರುವ ಚಿತ್ರಕಲಾ ವಿಚಾರ ೭ನೆ ಶತಮಾನದಲ್ಲಿ ಸೇರಿಕೊಂಡಿರಬೇಕು ಎಂದು ವಿದ್ವಾಂಸರ ಊಹೆ.

[15] ಹಾಸ್ಯ ಶೃಂಗಾರಗಳ ಅಭಿವ್ಯಕ್ತಿಗೆ ಮಧ್ಯಮ ಮತ್ತು ಪಂಚಮ ಸ್ವರಗಳು ಅನುಕೂಲಿಸುತ್ತವೆ. ವೀರ ಅದ್ಭುತ ರೌದ್ರ ರಸಗಳಿಗೆ ಷಡ್ಜ ಮತ್ತು ಪಂಚಮ ಸ್ವರಗಳು. ಕರುಣ ರಸಕ್ಕೆ ನಿಷಾದ ಮತ್ತು ಗಾಂಧಾರ. ಭೀಭತ್ಸ ಮತ್ತು ಭಯಾನಕ ರಸಗಳಿಗೆ ದೈವತ್ತ. ಶಾಂತರಸಕ್ಕೆ ಮಧ್ಯಮ. (ವಿಷ್ಣುಧರ್ಮೋತ್ತರ ಪುರಾಣ III-18)

ಶ್ವೇತ – ರಕ್ತ – ಪೀತ – ಕೃಷ್ಣ – ಹರಿತ – ಈ ಐದು ಬಣ್ಣಗಳೇ ಮೂಲವರ್ಣವೆಂದು ಹೇಳಲ್ಪಟ್ಟಿವೆ. ಈ ವರ್ಣಗಳಲ್ಲಿ ಒಂದು ಎರಡು ಮೂರು ವರ್ಣಗಳ ಸಾಂಕರ‍್ಯದಿಂದಲೂ, ಅಲ್ಪ ಸ್ವಲ್ಪ  ವ್ಯತ್ಯಾಸದಿಂದ ಪೃಥಗ್ಫಾವವನ್ನು ಕಲ್ಪಿಸುವುದರಿಂದಲೂ ಉಂಟಾಗಬಹುದಾದ ವರ್ಣಗಳ ಸಂಖ್ಯೆಗೆ ಪಾರವೇ ಇಲ್ಲ. (ವಿಷ್ಣು ಧರ್ಮೋತ್ತರ, III-17 ಶ್ಲೋಕ ೮-೯)

ಶಾಂತರಸವು ಅಪ್ರಕಟಿತವಾದ ಸ್ವಾಭಾವಿಕ ವರ್ಣ ಉಳ್ಳದ್ದು. ಶೃಂಗಾರವು ಶ್ಯಾಮವರ್ಣದಿಂದಲೂ, ರೌದ್ರವು ರಕ್ತವರ್ಣದಿಂದಲೂ, ಹಾಸ್ಯವು ಶ್ವೇತವರ್ಣದಿಂದಲೂ, ಭಯಾನಕವು ಕೃಷ್ಣ ವರ್ಣದಿಂದಲೂ, ವೀರವು ಶ್ವೇತ ಮಿಶ್ರಿತವಾದ ಹೊಂಬಣ್ಣದಿಂದಲೂ, ಕರುಣವು ಕಪೋತದಂತಹ ಬೂದು ಬಣ್ಣದಿಂದಲೂ, ಅದ್ಭುತವು ಹಳದಿಬಣ್ಣದಿಂದಲೂ ಬೀಭತ್ಸವು ನೀಲಿಬಣ್ಣದಿಂದಲೂ ಕೂಡಿರುತ್ತವೆ. (ಅಲ್ಲೆ : III-30-4,5,6)

[16] ಅಲ್ಲೇ : III-35-7

[17] ಭರತ ಹೇಳಿದ್ದು ಎಂಟೇ ರಸವಾದರೂ ಇದರಲ್ಲಿ ಶಾಂತವನ್ನು ಸೇರಿಸಿ ರಸಗಳು ಒಂಬತ್ತು  ಎಂದು ಹೇಳಿರುವ ವಿಚಾರ ಗಮನಾರ್ಹವಾದುದು

[18] ವಿಷ್ಣು ಧರ್ಮೋತ್ತರಪುರಾಣ  III-34 – 27