ಶ್ರೀ ಶಿವಕುಮಾರ ಕುಕನೂರ ನಾಡಿನ ಜನಪ್ರಿಯ ತಬಲಾ ವಾದಕರಲ್ಲೊಬ್ಬರು. ೧೯೩೧ರಲ್ಲಿ ಸಂಗೀತಗಾರರ ಮನೆತನದಲ್ಲಿ ಜನಿಸಿದ ಶ್ರೀ ಶಿವಕುಮಾರ ಕುಕನೂರು ಅವರಿಗೆ ಸಂಗೀತ ಶಿಕ್ಷಣ ದೊರೆತದ್ದು ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪಂಡಿತ್‌ ಪುಟ್ಟರಾಜ ಗವಾಯಿಗಳ ಮಾರ್ಗದರ್ಶನದಲ್ಲಿ. ತಬಲಾ ವಿದ್ವತ್‌, ವಿಶಾರದ ಮತ್ತು ಅಲಂಕಾರ ಪದವಿಗಳನ್ನು ಗಳಿಸಿರುವ ಶ್ರೀ ಕುಕನಕೂರು ಪ್ರಸ್ತುತ ಕುಕನೂರಿನ ಶ್ರೀ ಗುರು ಪಂಚಾಕ್ಷರ ಸಂಗೀತ ವಿದ್ಯಾಲಯದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಜೊತೆಗೆ ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ, ವಿಜಯಾ ಕಲಾ ಮಂದಿರದಲ್ಲಿ. ಗಂಗಾವತಿಯ ಶ್ರೀ ಕೊಟ್ಟೂರೇಶ್ವರ ಸಂಗೀತ ವಿದ್ಯಾಲಯದಲ್ಲಿ ಹಾಗೂ ಚೆನ್ನೈನ ಎಂ. ರಂಗರಾವ್‌ ಸ್ಕೂಲ್‌ ಆಫ್‌ ಮ್ಯೂಸಿಕ್‌ನಲ್ಲಿ ತಬಲಾ ಶಿಕ್ಷಕರಾಗಿ ಕೆಲಸ ಮಾಡಿದ್ದಾರೆ.

ಪ್ರಖ್ಯಾತ ಗಾಯಕರುಗಳಾದ ಪಂ. ಬಸವರಾಜ ರಾಜಗುರು, ಪಂ. ಪ್ರಭುದೇವ ಸರ್ದಾರ್, ಪಂ. ಸಿದ್ಧರಾಮ ಜಂಬಲದಿನ್ನಿ, ಡಾ. ಪಿ.ಬಿ. ಶ್ರೀನಿವಾಸ್‌, ಡಾ.ಎಂ. ಬಾಲಮುರುಳಿಕೃಷ್ಣ, ಪಂ. ರಾಮ ಬಾಹು ಬಿಜಾಪುರೆ, ಪಂ. ಮರಿಯಪ್ಪ ರೋಣ, ಖ್ಯಾತ ಶಹನಾಯಿ ವಾದಕರಾದ ದಿ.ಬಿ.ಡಿ. ಭಜಂತ್ರಿ ಮುಂತಾದವರಿಗೆ ತಬಲಾ ಹಾಗೂ ಹಾರ್ಮೋನಿಯಂ ಸಾಥಿ ನೀಡಿದ ಹೆಗ್ಗಳಿಕೆ ಶಿವಕುಮಾರರದು.

ಆಕಾಶವಾಣಿಯ ಗುಲ್ಬರ್ಗಾ ಹಾಗೂ ಧಾರವಾಡ ಕೇಂದ್ರದ ಕಲಾವಿದರಾದ ಶ್ರೀ ಶಿವಕುಮಾರರು ಈಗಲೂ ಸಂಗೀತಾಸಕ್ತ ಮಕ್ಕಳಿಗೆ ಹಾರ್ಮೋನಿಯಂ ಹಾಗೂ ತಬಲಾ ಶಿಕ್ಷಣ ನೀಡುವ ಕೆಲಸವನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಇವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೨೦೦೦-೦೧ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.