ದುಂದುಮೆ ಬಸವಂತನ ಹಬ್ಬ         | ಪಲ್ಲ |

ಜಯ  ಜಯ ಲಿಂಗಯ್ಯ ಜಯ ಗುರು ಲಿಂಗಯ್ಯ
ಜಯ ಜಯ ಮಂಗಲ ಮನೋಹಾರ| ಮಾ
ಭುವನದೊಡೆಯ ಬಸವೇಶನ ಪಾದವು
ಸುವಿಲಾಸದೋರಿತು ಮನಕಿನ್ನು| ಮಾ        ೧

ಮಡಿವಾಳ ಮಾಚಯ್ಯ ಪಡಿಹಾರಿ ಉತ್ತಣ್ಣ
ನಿಡಗುಡಿ ಮಾರಯ್ಯನಡಿಗಾಳು.| ಮಾ
ದ್ರುಢವೀರಶೈವನು ಮೋಳಿಗಿ ಮಾರಯ್ಯ
ನಡಿಗಳ ನಾ ಬಲಗೊಂಬೆನು| ಮಾ  ೨

ತಿರುನೀಲಕಂಠಯ್ಯ ಮೆರೆಮಿಂಡನಾಗಯ್ಯ
ಉರಿಲಿಂಗಪೆದ್ದಯ್ಯ ವಹಿಲಯ್ಯ| ಮಾ
ಗಿರಿಗುಂಟ ಶಾಂತಯ್ಯ ಗುರುಚೆನ್ನಬಸವಯ್ಯ
ತೆರಪಿಲ್ಲದವರಡಿಯ ಬಲಗೊಂಬೆನು| ಮಾ    ೩

ಹಾದರದ ಬ್ರಹ್ಮಯ್ಯ ಮೇದಾರ ಕೇತಯ್ಯ
ಆದಕ್ಕಿ ಮಾರುಯ್ಯ ಮಸಣಯ್ಯ | ಮಾ
ಸೇದಿರಾಜಯ್ಯ ಶಂಕರದಾಸಯ್ಯನ
ಪಾದಪದ್ಮವ ಬಲಗೊಂಬೆನು| ಮಾ  ೪

ಕಲ್ಯಾಣದೊಳಗಿರುವ ಎಲ್ಲ ಪ್ರಮಥರ ಪಾಡಿ
ನಿಲ್ಲದೆ ಪದಗಳನು ನಡೆಸುವೆನು | ಮಾ
ಕಲ್ಲುಸಕ್ಕರೆ ಹಾಲು ತುಪ್ಪವ ಸವಿದಂತೆ
ಬಲ್ಲಂಥವರಿಗಿದು ತೋರೀತು| ಮಾ ೫

ಬಾಣನು ಮಲುಹಣ ಜಾಣ ಮಯೂರನು
ಕ್ಷೋಣಿಯೊಳಗೆ ರಾಘವಾಂಕನು| ಮಾ
ಮಾಣದ ಹರಿದೇವಮೊದಲಾದ ಕವಿಗಳನು
ಧ್ಯಾನಿಸಿ ಪದಗಳನು ಪೇಳುವೆನು| ಮಾ      ೬

ಕೆರೆಯ ಪದ್ಮರಸನು ವರಲೀಲೆ ಚಾಮೆರಸ
ಗುರುಮಲ್ಲಿಕಾರ್ಜುನನು ಪಂಡಿತರು| ಮಾ
ಗುರುವಾದ ಪಾಲ್ಕುರಿಕೆ ಸೋಮೇಶನಡಿಗಳ
ಸ್ಥಿರವಾಗಿ ನಾ ಬಲಗೋಂಬೆನು| ಮಾ         ೭

ಶಿವಶಿವಯೆಂದರೆ ಸವೆದೀತು ಪಾಪವು
ಅವಿರೆಳ ಪದವಿಯ ತೋರೀತು| ಮಾ
ವಿವರಿಸುವೆನು ಮುಂದೆ ಸವೆಯದ ಕಥೆಯನು
ಕಿವಿಗೊಟ್ಟು ನೀವಿನ್ನು ಕೇಳಿರಿ| ಮಾ  ೮

ಮಾಳವ ಮಾಗಧ ನೇಪಾಳ ಪಾಂಚಾಳ
ಕಾಳಿಂಗ ಕಾಶ್ಮೀರ ದೇಶವು| ಮಾ
ಲಾಳಗುರ್ಜರ ಪಾಂಡ್ಯ ತಿರುಸಣ್ಣ ತುರುಕಾಣ್ಯ
ಬಾಳ ಸಂಭ್ರಮದಿಂದೆ ಒಪ್ಪ್ಯಾವು| ಮಾ       ೯

ಸಿಂಧು ಬರ್ಬರ ಚೋಳಮುಂದೆ ಸೌರಾಷ್ಟ್ರವು
ಚೆಂದುಳ್ಳ ದ್ರಾವಿಡ ದೇಶವು| ಮಾ
ಅಂದುಳ್ಳ ಕುಂತಳ ಕೊಡಗು ಕರ್ನಾಟಕುವು
ಚೆಂದದಿ ದೇಶಗಳೊಪ್ಪ್ಯಾವು| ಮಾ  ೧೦

ಆಡುಮಂಡಲ ದೇಶ ನವಿನ ಕೊಂಕಣ ದೇಶ
ಪಾಡುಳ್ಳ ಮಧುರೆ ಮಾರಾಟವು| ಮಾ
ನೋಡಲು ಪಿಂಗದೆ ಪರಿಪರಿದೇಶವು
ರೂಢಿಯೊಳಗೆ ಒಪ್ಪಿ ಮೆರೆದಾವು| ಮಾ       ೧೧

ಇಂತಪ್ಪ ಚಪ್ಪನ್ನ ದೇಶದೊಳೊಪ್ಪಿತು
ಮತ್ತೊಂದು ಕೈಕೆಯ ದೇಶವು| ಮಾ
ಸಂತೋಷದಿಂ ಕನಕಾವತಿಯೆಂಬ ಪಟ್ಟಣ
ಅಂತು ಪೊಗಳುವರಳವಲ್ಲ| ಮಾ    ೧೨

ಹಾರೂರು ಹರದಾರು ಮೇಲೆ ಚಿನಿವಾಲರು
ಕೇರಿ ಕೇರಿಯೊಳೆಸೆದಿರ್ದರು| ಮಾ
ನೂರೊಂದು ಕುಲ ಹದಿನೆಂಟು ಜಾತಿಗಳೆಲ್ಲ
ತಾರತಮ್ಯದೊಳೆಸೆದಿರ್ದರು| ಮಾ  ೧೩

ಮೂರಾರು ಸಾವಿರ ಹಾರೂರ ಮನೆಯಿರೆ
ಮೀರಿ ದಾನವನೊಬ್ಬ ಹಾರುವನು| ಮಾ
ವಾರಿಜಮುಖಿಯೊಳು ಸೌಮಿನಿಯೆಂದೆಂಬ
ಪೋರಿ ಚಿಕ್ಕದೊಂದು ಮಗಳಿತ್ತು| ಮಾ        ೧೪

ಅದರ ಚೆಲ್ವಿಕಿಯನ್ನು ಹೇಳುವರಳವಲ್ಲ
ಹದಿನೆಂಟು ಲಕ್ಷಣಯಿತ್ತೆಲ್ಲ| ಮಾ
ಮದನನ ಅರಗಿಳಿ ರತಿರೂಪ ನಿಂದಲ್ಲಿ
ಮುದದಿ ಸಂತೋಷದೊಳಿತ್ತಲ್ಲ| ಮಾ         ೧೫

ಚಕ್ಕಂದ ಸಾಕಿನ್ನು ತಕ್ಕಂಥ ವರನೋಡಿ
ಲೆಕ್ಕವಿಲ್ಲದೆ ರೊಕ್ಕ ವೆಚ್ಚವು| ಮಾ
ಅಕ್ಕರಿಂದಲಿ ಅದರ ಲಗ್ನವ ಮಾಡಿನ್ನು
ತಕ್ಕಷ್ಟು ಸುಖದಲ್ಲಿ ಇದ್ದಾರು| ಮಾ   ೧೬

ಪೂರ್ವವ ಗೆದ್ದವರಾರುಂಟು ಧರೆಯೊಳು
ನಾರೀಗೆ ತುಂಬಿತು ಯೌವನ| ಮಾ
ಮಾರನಾಟಗಳಿನ್ನು ಮನಸಿನಲ್ಲಿರುತಿರೆ
ನಾರೀಯ ಗಂಡನು ಸತ್ತಾನು| ಮಾ ೧೭

ಗಂಡ ಸಾಯಲಿಕ್ಕೆ ಮುಂಡಿಯಾದ ಮೇಲೆ
ಮಂಡೆಯ ಕೂದಲ ತೆಗಿಸ್ಯಾರು| ಮಾ
ಕಂಡಕಂಡವರೆಲ್ಲ ಹಸುಮಗಳೆನುತ ಭೂ
ಮಂಡಲದವರೆಲ್ಲ ಮರುಗ್ಯಾರು|ಮಾ ೧೮

ದಿನದಿನಕವಳಸು ತನುಮವನು ಕೊರೆಯಿತು
ಮನಸಿಜನಾಟಕೆ ದೇಹ ಸವೆದೀತು| ಮಾ
ಇನಿಯರ ಕಾಣುತ್ತ ಮನದಿ ಕಾತುರ ಹೆಚ್ಚಿ
ಹಣಿಹಣಿಯನು ಬಡಕೊಂಡಾಳು| ಮಾ        ೧೯

ಎಲ್ಲರ ಕುಲದಂತೆ ಅಲ್ಲ ಈ ಕುಲದೊಳು
ಇಲ್ಲಿಂದ ಮರಣದ ಪರಿಯನು | ಮಾ
ನಿಲ್ಲದೆ ನೆಲ ಮುಡಿವುದು ಬಂತಿದು
ಎಲ್ಲಿತ್ತು ಮಗಳಿಗೆ ವಿಧಿಹತ್ತಿ| ಮಾ    ೨೦

ಮಾರನ ಕಣೆಗಳು ಪೂರೈಸಿ ಹೊಡೆಯಲ್ಕೆ
ನಾರೀಗೆ ತಟ್ಟುಚ್ಚಿ ಹಾಯ್ದವು| ಮಾ
ಧೀರತನವನು ಬಿಟ್ಟು ಗಾರುಗೆಡುತಲಾಗ
ಮಾರನಾಟಕೆ ನಾರಿ ಬಿದ್ದಾಳು| ಮಾ ೨೧

ಆರೂ ಅರಿಯದಂತೆ ನಾರಿ ಹಾದರವಾಡೆ
ಈ ರೀತಿ ಕೆಲದಿನ ನಡೆಯಿತು | ಮಾ
ತೋರಿತು ಗರ್ಭವು ನಾರಿಗೆ ವಿಧಿಹತ್ತಿ
ನಾರು ಮಾಡಿ ಮುಂದೇನಾತು| ಮಾ         ೨೨

ಬೆಳೆಯಿತು ಗರ್ಭವು ಬಿಳ್ಪೇರಿ ವದನವು
ಕಳಸಕುಚವು ಕಪ್ಪೇರ‍್ಯವು| ಮಾ
ತಳಿದಾರು ನೆರೆಹೊರೆ ಬಂದು ಬಳಗವೆಲ್ಲ
ಕುಲಕೆ ಕುಂದ ತಂದಳೆಂದಾರು| ಮಾ         ೨೩

ತಂದಿ ತಾಯಿಗಳೆಲ್ಲ ಸಂದೇಹ ಮಾಡುತ
ಮುಂದಿದು ನಮಗಪಕೀರ್ತಿಯು| ಮಾ
ಮಂದಗಮನೆ ನಮ್ಮ ಮನಯೊಳು ಇರಸಲ್ಲ
ಒಂದಾಗಿ ಹೊರೆಯಕ್ಕೆ ಹಾಕ್ಯಾರು| ಮಾ      ೨೪

ಸಿಸುಹತ್ಯ ಸ್ತ್ರೀಹತ್ಯ ಪಶುಹತ್ಯ ಮಾಡಲು
ಅಸಮ ಪಾತಕವೆಂದು ಬಿಟ್ಟಾರು | ಮಾ
ಕಸಮೂಳಿ ಹೋಗೆಂದು ಹೊರಡಿಸಲಲ್ಲೊಬ್ಬ
ಅಸಮ ಪಾತಕ ಬೇಡ ಕಂಡಾನು| ಮಾ       ೨೫

ಕಾಣುತ್ತ ಸಂತೈಸಿ ಪ್ರಾಣದೊಲ್ಲಭನಾಗಿ
ಮಾನುನಿಯ ಕೊಂಡೊಯಿದಾನು| ಮಾ
ಏನು ಹೇಳಲಿ ಮುದ್ದುಮಾಂಸವ ತಿನುತಲಿ
ತಾನು ಹಂಬಲಿಸಿ ಬಳಲ್ಯಾಳು| ಮಾ          ೨೬

ಕುಲಗೆಟ್ಟು ನೆಲೆದಪ್ಪಿ ಬಲುಕಷ್ಟಪಡುತಲಿ
ಕೆಲವು ದಿವಸ ಹೀಂಗ ಕಳದಾಳು| ಮಾ
ಲಲನೆ ತಾ ಮಾಡಿದ ಕೃತ್ಯವು ಕೇಳಿರಿ
ಇಳೆಯೊಳು ಪೊಸತಾಗಿ ತೋರಿತು|ಮಾ    ೨೭

ಗಂಡಹೆಂಡೀರಾಗಿ ಭಂಡಾಟ ದಿನದಲ್ಲಿ
ಮಂಡಲದೊಳು ನಗೆಗೇಡಾಗಿ| ಮಾ
ಕಂಡಕಂಡವರೆಲ್ಲ ಚೀಯೆಂದು ಬೈವೂತ
ಬಂಡಾಗಿ ಬದುಕನು ಮಾಡ್ಯಾಳು| ಮಾ       ೨೮

ಹತ್ತಂಟು ವರುಷವು ಉತ್ತಮಳೆನಿಸಿದ್ದು
ಪೆತ್ತಳು ನಾಕಾರ ಮಕ್ಕಳನು | ಮಾ
ಇತ್ತ ಗಂಡನುತಾನು ತವರೀಗೆ ಹೋಗಿರೆ
ತೊತ್ತ ಮಾಡಿದ ಕೃತ್ಯ ಕೇಳಿರಿ| ಮಾ ೨೯

ಸೆರೆಯವ ಕುಡಿದಿನ್ನು ದೇಹದೆಚ್ಚರ ತಪ್ಪಿ
ಗುರುಗುರುಗುಟ್ಟುತ ಮಲಿಗ್ಯಾಳು| ಮಾ
ಸರುಹೊತ್ತಿನೊಳೆದ್ದು ಮಾಂಸದಪೇಕ್ಷೆಗೆ
ಭರದಿಂದಲವಳಿನ್ನು ಎದ್ದಾಳು| ಮಾ ೩೦

ಆವೀನ ಕರವೊಂದು ಆಡೀನ ಮರಿಯೊಂದು
ಜೋಡಾಗಿ ತಾವಿನ್ನು ಕಟ್ಟಾರು| ಮಾ
ಮಾಡದೊಳಗಿದ್ದ ಮಸೆದ ಚೂರಿಯ ಹಿಡಿದು
ನೋಡದೆ ಕೊರಳನು ಕೊರಯಿದಾಳು|ಮಾ   ೩೧

ದೇಹದೆಚ್ಚರ ಹುಟ್ಟಿ ದೀವಿಗೆಯನು ತಂದು
ಮಾಂಸವ ಸೋದಿಸಭೇಕೆಂದು | ಮಾ
ಆವೀನ ಕರವಾಗಿ ನೋವಾತು ಶಿವಶಿವಾ
ವಿವರಿಸುತಲಾಗ ನುಡಿದಾಳು|ಮಾ  ೩೨

ಕರುವೀನ ಮಾಂಸವ ಭರದಿಂದೆ ಸೋದಿಸಿ
ಹರುಷದಿಂದಲಟ್ಟು ತಿಂದಳು| ಮಾ
ಹೊರಿಯಾಕೆ ಬಿಸುಟಲುಇ ಎಲುವು ತೊಗಲೆಲ್ಲ
ಭರದಿಂದ ಹೋಯಿಕೊಂಡತ್ತಾಳು| ಮಾ      ೩೩

ನಾರೀಯ ಗಾರುಡ ದಾರಿಗೂ ತಿಳಿಯದು
ವಾರೆಲ್ಲ ಬಂದಿನ್ನು ನೆರೆದೀತು | ಮಾ
ದೂರ ಹೇಳ್ಯಾಳು ತನ್ನ ತಪ್ಪನೆ ತಪ್ಪಿಸಿ
ಈ ರೀತಿ ಹುಲಿ ಕರವ ಮುರಿಯಿತು| ಮಾ     ೩೪

ಮಲ ಮಲಗುತ ಲಲನೆ ನೀ ಉಳಿಯೆಂದು
ಒಳಿಯಕ್ಕೆ ಆಕಿಯ ಕಳಿಸ್ಯಾರು| ಮಾ
ಹಲವು ಪಾಪಗಳಿಂದ ಕೆಲದಿನ ಕಳೆದಿನ್ನು
ಮಲಗೂತ ಪ್ರಾಣವ ಬಿಟ್ಟಾಳು| ಮಾ          ೩೫

ಬಂದಾರು ಯಮನಾಳು ತಂದುಪಾಶವ ಹಾಕಿ
ಸಂದೇಹ ಮಾಡದೆ ಎಳದಾರು | ಮಾ
ಮುಂದೆ ಕೇಳಿರಿ ಪುಣ್ಯ ಪಾಪದ ಫಲವನು
ಕಂದರ್ಪ ಹರಶಿವ ಬಲ್ಲನು| ಮಾ    ೩೬

ಪುಣ್ಯವ ಮಾಡಿದ ಹೆಣ್ಗಂಡುಗಳನು
ಮನ್ನೀಸಿ ಸ್ವರ್ಗಕ್ಕೆ ಕಳಿಸ್ಯಾರು| ಮಾ
ಅನ್ಯಾಯ ಮಾಡಿದ ಗನ್ನಘಾತಕರನು
ಬನ್ನಬಡಿಸುವದೇನು ಪೇಳಲಿ| ಮಾ  ೩೭

ಮೆಚ್ಚಿದ ಹೆಣ್ಣಿನ್ನು ನೀಚತನಕ ಬಿದ್ದು
ನಾಚದೆ ಹಾದರವಾಡ್ಯಾಳು| ಮಾ
ಬಾಚಿ ಬಾಚಿಲಿ ಕೆತ್ತಿ ಬಡಿವುತಿರ್ಪರು ಅಲ್ಲಿ
ಸೂಚನೆಗಳ ಕಂಡು ಮರುಗ್ಯಾರು| ಮಾ      ೩೮

ಹೆಂಡರ ಬಳಲೀಸಿ ತುಂಡತನಕ ಬಿದ್ದು
ರಂಡಿಮುಂಡೇರ ಸಂಗದಿರುವನು| ಮಾ
ಉಂಡುಮನಿಗೆ ಎರಡು ಬಗೆದ ಮಾನವನಿಗೆ
ತುಂಡರಿಸಿ ಬಿಸುಡೂವ ಯಮನಾಗ| ಮಾ    ೩೯

ಕುಂಟಲಗಿತ್ತೀಗೆ ಗಂಟಲ ಗಾಣವು
ಸೊಂಟವ ಮುರಿದಿನ್ನು ಹಾಕ್ಯಾರು| ಮಾ
ಉಂಟಾದ ನ್ಯಾಯವ ಹುಸಿ ಮಾಡಿದವನಿಗೆ
ಕುಂಟಿಯ ಬಳಿ ಕಾಸಿ ಒತ್ಯಾರು|ಮಾ          ೪೦

ಉಂಡುಟ್ಟು ಮಲಗಿಸಿ ಗಂಡನೊಂಚಿಸಿ ಪೋದ
ಬಂಡದೊತ್ತಿಗೆ ಬಾಧೆ ಬಡಿಸ್ಯಾರು| ಮಾ
ಕಂಡ ಕಂಡವರೊಳು ಕದನವ ಮಾಡಲು
ಹಿಂಡು ರಕ್ಕಸರಿನ್ನು ಎಳದಾರು| ಮಾ         ೪೧

ಮದವಿಯ ಮನಿಯೊಳು ಕದನ ಹುಟ್ಟಿಸಿ ಮತ್ತೆ
ಬದಲು ಮಾಡುವ ಹೆಣ್ಣು ಗಂಡನು| ಮಾ
ಎದೆ ಮಾಟ ಹುಗಿದಿನ್ನು ತಿರ್‌ಋಂದು ಎಳೆವೂತ
ಕುದಿವ ಸೀಸವ ಬಾಯೊಳ್ಹಾಕ್ಯಾರು| ಮಾ    ೪೨

ತಂದೀಯ ಸಲಹದೆ ತಾಯಿಗೆ ನಮಿಸದೆ
ಬಂಧು ಬಳಗ ಬಗೆಗೊಳಿಸದೆ | ಮಾ
ಸಂದೇಹ ಮಾಡದೆ ಸದೆಬಡಿವುತಲಾಗ
ತಂದು ನರಕಕ್ಕೆ ದಬ್ಯಾರು| ಮಾ    ೪೩

ಹೇಳಲು ತೀರದ ಬಾಳ ಬಾಧೆಗಳನು
ಘೋಳಿಟ್ಟು ಬೇರಿನ್ನು ಒದರ‍್ಯರು| ಮಾ
ಬಾಳಬಂಧನದಿಂದೆ ಎಳದೊಯ್ದು ಯಮನಾಳು
ಆಳಿದೊಡಯನ ಮುಂದೆ ನಿಲಿಸ್ಯಾರು| ಮಾ  ೪೪

ಕರೆಸಲು ಬಂದಾರು ವರಚಿತ್ರಗುಪ್ತರು
ಪರಿಕ್ಷೀಸಿ ಹೇಳ್ಯಾರು ಪಾಪವು| ಮಾ
ಅರಿಯಲೆಮ್ಮಳವಲ್ಲ ವರುಷ ತೀರಲು ಹೇಳು
ನರಕಿ ಮಾಡಿದ ಪಾಪವೆಂದಾರು| ಮಾ       ೪೫

ಕೇಳೂತ ಯಮನಾಗ ಬಾಳ ಕೋಪವ ತಾಳಿ
ಸೀಳಿಸುವೆನು ಎಂದು ಎದ್ದಾನು| ಮಾ
ಏಳೇಳು ಜನ್ಮದಿ ಗತಿ ಮೋಕ್ಷವಿದಕಿಲ್ಲ
ಕೀಳು ನರಕಕಿನ್ನು ಹಾಕಿರೆಂದಾನು| ಮಾ     ೪೬

ಎಂದು ಆರ್ಭಡಿಸಲು ಮುಂದೊಂದು ಪೇಳ್ದರು
ಎಂದೆಂದು ಶಿವಯೆಂದುದಿಲ್ಲವು| ಮಾ
ಕೊಂದಿನ್ನು ಆವೀನ ಕರುವನು ಶಿವಶಿವ
ಎಂದಳೆನುತಲಾಗ ಪೇಳ್ಯಾರು| ಮಾ          ೪೭

ಶಿವಯೆಂದು ಬಳಿಕಿನ್ನು ಹವಣೀಕಿ ನಮಗಿಲ್ಲ
ಜವನ ಬೀದಿಯು ತಪ್ಪಿ ಉಳಿದಾಳು| ಮಾ
ಭುವಿಯೊಳು ಹುಟ್ಟಿನ್ನು ಸವೆಯದ ಪಾಪವ
ಸಲೆತೀರ್ಚಿ ಶಿವನೊಳು ಬೆರೆಯಲಿ| ಮಾ      ೪೮

ಎಂದು ಗೊತ್ತನು ಮಾಡಿ ಅಂದು ಭೂಮಿಗೆ ಕಳುಹೆ
ಮುಂದೆ ಕೇಳಿರಿ ಅದರ ಕಷ್ಟವು| ಮಾ
ಬಂದು ಹುಟ್ಟಿತು ಅಂತ್ಯ ಜರ ಗರ್ಭದೊಳಿನ್ನು
ಅಂಧಕಳಾಗಿ ತಾ ಕೇಳಿರಿ | ಮಾ    ೪೯

ಹುಟ್ಟು ಗುರುಡಿಯಾಗಿ ಹುಟ್ಟೀತು ಆಕ್ಷಣ
ನಷ್ಟವಾದರು ತಂದೆತಯಿಗಳು| ಮಾ
ಪಟ್ಟು ಗುಡುಮೆ ಇದು ಬಲು ಪಾಪಿಯೆನುತಲಿ
ಸಿಟ್ಟೀಲಿ ಸೋದರರು ಬಯಿದಾರು| ಮಾ      ೫೦

ಹಿಂದಣ ಪಾಪವು ಬಂದು ಪ್ರಾಪ್ತಿಯಾಗಿ
ಒಂದೊಂದು ಕಷ್ಟವು ಗಿಣ್ಣರೋಗ
ನಿಂದರದೆ ಹುಳುಗಳು ಕಡಿದಾವು| ಮಾ       ೫೧

ಕೀವುರಕ್ತವು ಸುರಿಯೆ ಸೀವರಿಸುತಲಾಗ
ಆವಾಗಾರಾರು ಹೊರೆಯಕ್ಕೆ ಹಾಕ್ಯಾರು| ಮಾ
ನೋವುತ ಬಳಲೂತ ಬಲು ಕಷ್ಟಬಡುತಲಿ
ಸಾವನ್ನು ಬಯಸೂತಲಿದ್ದಾಳು| ಮಾ          ೫೨

ಒಡಲಿಗನ್ನಗಳಿಲ್ಲ ಉಡಲಿಕ್ಕೆ ಮೊದಲಿಲ್ಲ
ಎಡವೂತ ಮುಗ್ಗುತ್ತ ಇತ್ತಲ್ಲ| ಮಾ
ಬಿಡದೆಂಜಲನು ತಿಂದಣ್ಣುತಲೆಂಬತ್ತೋರುಷ
ಹಿಡಿಯಿತು ಜೀವನ ಕೇಳಿರಿ | ಮಾ   ೫೩

ಅಂದು ಗೋಕರ್ಣಕ್ಕೆ ಚೆಂದದಿ ಪರಸುಯು
ಸಂದೋಹ ಮುಂತಾಗಿ ತೆರೆಳೀತು | ಮಾ
ನಂದಿಧ್ವಜಗಳು ಸಿಂಧುಪತಾಕೆಯು
ಮುಂದೆ ಪುರವಂತರು ತೆರಳ್ಯಾರು | ಮಾ    ೫೪

ಛತ್ರಚಾಮರಗಳು ಮತ್ತೆ ಪಲ್ಲಕ್ಕಿಯು
ಸುತ್ತಲ ದೊರೆಗಳು ತೆರಳ್ಯಾರು| ಮಾ
ಎತ್ತ ನೋಡಲು ಸಣ್ಣ ಬಣ್ಣವನುಟ್ಟಿನ್ನು
ಅರ್ತಿಯಿಂದಲಿ ಇನ್ನು ತೆರಳ್ಯಾರು| ಮಾ      ೫೫

ಹೊಡೆವ ಡಮಾಮಿಯು ನುಡಿವ ಚಿನಿಕಾಳಿಯು
ಮಡದೀಯ ಪಾತ್ರ ಮೇಳವು| ಮಾ
ಎಡಬಲದಲ್ಲಿ ಉಗ್ಗಿಸುತ ನಡೆವಂಥ
ಸಡಗರವಿನ್ನೇನು ಹೇಳಲಿ| ಮಾ     ೫೬

ಬುರುಗ ತಮ್ಮಟ ಶಂಖ ಮೆರೆವ ಭಜಂತ್ರಿಯು
ಪರಿಪರಿ ವಾದ್ಯಗಳಿದ್ದವು |ಮಾ
ಧರೆ ಬೆಸಲಾದಂತೆ ತೆರಪಿಲ್ಲ ಪರಸಿಯು
ಹರಷದಿಂದಲಿ ಮತ್ತೆ ತೆರಳ್ಯಾರು | ಮಾ      ೫೭

ಉಘೆ ಚಾಂಗು ಭಲರೆಂದು ಪೊಗಳುತ ಸೊಸಿಂದೆ
ಬಗೆ ಬಗೆ ವರ್ಣದ ಕುಲಗಳು | ಮಾ
ಅಗಲದೆ ಹಿರಿಯರು ಕಿರಿಯರು ಹೆಣ್ಗಂಡು
ಸುಗುಣರು ಸಹವಾಗಿ ತೆರಳ್ಯಾರು| ಮಾ      ೫೮

ಉಲುವನೆ ಕೇಳುತ್ತ ಗಲಿಬೀಲಿ ಏನೆಂದು
ಲಲನೆ ಮಾತಂಗಿಯು ಕೇಳ್ಯಾಳು | ಮಾ
ಇಳೆಗೊಂಡೆಯ ಗೋಕರ್ಣ ಭಾಳೇಶನಿಗೆ ಪರಸಿ
ತಾಳುವದೇ ಹೋಗುವದೆಂದಳು | ಮಾ      ೫೯

ಅನ್ನ ಅರಿವೆಗಳನ್ನು ಮನ್ನೀಸಿ ಅದರೊಳು
ನಿನಗರ್ಧ ಕೊಡುವೇನು ಎಂದಳು| ಮಾ
ಮನದಿ ತಾ ಬೇಡುತ್ತ ಶಿವಶಿವಾ ಎನ್ನುತ್ತ
ಎನ್ನ ನೀ ಕರೆದೊಯ್ಯೆಂದಳು | ಮಾ ೬೦

ಎಂದ ಮಾತನು ಕೇಳಿ ಮುಂದೆ ಕೋಲನೆ ಪಿಡಿದು
ಬಂದಾಳು ಮಾತಂಗಿ ಕೇಳಿರಿ |ಮಾ
ಒಂದೊಂದು ಪರಿಪರಿಹಳ್ಳ ಕೊಳ್ಳವ ದಾಟಿ
ಹೆದರದೆ ಎಡವೂತ ಮುಗ್ಗೂತ | ಮಾ         ೬೧

ಬೀಳೂತ ಏಳೂತ ಬಹಳ ಸಂಕಟಪಟ್ಟು
ಏಳು ಜನ್ಮಕೆ ಇನ್ನು ಸಾಕಿನ್ನು |ಮಾ
ಘೋಳಿಟ್ಟು ಒದರೂತ ಭಾಳಲೋಚನ ಸ್ಥಾನ
ಗೋಕರ್ಣದೊಳೆಯಕ್ಕೆ ಬಿದ್ದಾಳು |ಮಾ        ೬೨

ಸುತ್ತ ಯೋಜನಪರಿ ಕ್ಷೇತ್ರವು ಮತ್ತಲ್ಲಿ
ಸತ್ತವರಿಗೆ ಮುಕ್ತಿ ಆದೀತು| ಮಾ
ಇತ್ತಲಾ ಕುರಡಿಯು ಅತ್ತ ಮಾರ್ಗದಿ ಬಿದ್ದು
ಅತ್ತು ಕಣ್ಣೊಳು ಮಣ್ಣ ಹೊಯ್ಕೊಂಡಾಳು| ಮಾ         ೬೩

ಪುಣ್ಯದ ಸ್ಥಳವಿದು ಅನ್ನ ಅರಿವೆಯ ಕೊಟ್ಟು
ಇನ್ನು ಪುಣ್ಯವ ನೀವು ಪಡೆಯಿರಿ | ಮಾ
ಕಣ್ಣಿಲ್ಲದ ಪಾಪಿ ಹೆಣ್ಣಿನೊಳಗೆ ಖೋಡಿ
ಉನ್ನತ ದುಃಖದಿ ಹಲುಬ್ಯಾಳು |ಮಾ         ೬೪

ಕಂಡಕಂಡವರೆಲ್ಲ ಕಡು ಹೇಸಿಕಿವಳೆಂದು
ಮಂಡಿ ತಗ್ಗಿಸಿಕೊಂಡು ನಡೆದಾರು| ಮಾ
ಕಂಡುದಿಲ್ಲವು ತುತ್ತು ಅನ್ನ ಗೇಣರಿವೆಯ
ದಿಂಡ ಮಾತಂಗಿಯ ಕೇಳ್ಯಾರು | ಮಾ       ೬೫

ಹಿಂದಿನ ಜನ್ಮದಿ ಒಂದ್ವೇಳೆ ಶಿವಯೆಂದ
ಳಂದಿನ ಫಲಗಳು ಒದಗ್ಯಾವು |ಮಾ
ಮುಂದಿರೆ ಮುಕ್ತಿ ಹೊಂದುವ ಕಾಲವು
ಬಂದೀತು ನೀವಿನ್ನು ಕೇಳಿರಿ |ಮಾ   ೬೬

ಮಾಘಮಾಸವು ಕೃಷ್ಣಪಕ್ಷ ಚತುರ್ದಶಿಯು
ಆಗ್ಯಾವು ದಿನ ಶಿವರಾತ್ರಿಯು | ಮಾ
ಹಾಗೆ ಒರೆಯುತ ಪ್ರಾಣಬಿಡುಕಾಲದೊಳಿನ್ನು
ಆಗೊಬ್ಬ ಪುಣ್ಯಾತ್ಮ ಬಂದಾನು| ಮಾ         ೬೭

ಶಿವಪೂಜೆ ತಾನಾದ ಶಿವಬ್ರಾಹ್ಮಣನೊಬ್ಭ
ತವೆ ಮಿಂದು ಮಡಿಯುಟ್ಟು ಇದ್ದಾನು| ಮಾ
ಶಿವನ ಪೂಜೆಗೆ ಇಂದು ಬೆಲ್ಪತ್ರೆ ಒಯ್ವಾಗ
ನೋವಿನ ನುಡಿಗೇಳಿ ಮರಿಗ್ಯಾನು| ಮಾ      ೬೮

ದಾನದ ವಿಷಯದಿ ಏನಾದರು ಕೊಡಬೇಕು
ಏನೂ ಇಲ್ಲಾ ಈ ವ್ಯಾಳ್ಯೆದಲಿ| ಮಾ
ಮಾನೂನಿಕೈಯೊಳು ಮರುಗೂತ ಒಂದೆಸಳ
ತಾನಾಗಿಬಿಟ್ಟಿನ್ನು ಹೋದಾನು| ಮಾ ೬೯
ಅನ್ನವೆ ಉದಕವೆ ಇನ್ನಿದನು ಮೆಲುವುದೆ
ಮುನ್ನದನು ತವಕದಿ ಪಿಡಿದಾಳು| ಮಾ
ಗನ್ನಘಾತಕ ಮತ್ತೆ ಇದನೇನ ಕೊಟ್ಟೆಂದು
ತನ್ನ ಸಿಟ್ಟಿಲಿ ಅದನು ಒಗೆದಾಳು| ಮಾ ೭೦
ಒಗದ ಠಾವಿಲಿ ಮತ್ತೆ ಅಗಜೆಯ ಅರಸನ
ಮಿಗಿಲಾದ ಶೂನ್ಯಲಿಂಗಿತ್ತಲ್ಲ| ಮಾ
ಅಗಲದೆ ಮಸ್ತಕದೊಳು ಬಿತ್ತು ಪೂಜೆಯು
ಸೊಗಸಾಯಿತೆಂದಾಗ ಶಿವನೊಲಿದ| ಮಾ ೭೧
ಅನ್ನಿಲ್ಲದುಪವಾಸ ಮುನ್ನ ನಿದ್ರಿಲ್ಲದೆ
ಚನ್ನಾಗಿ ಜಾಗರವಾಯಿತು| ಮಾ
ಪನ್ನಂಗಧರ ಮೆಚ್ಚಿ ಬರಹೇಳೆ ಶಿವದೂತ
ರುನ್ನತ ಸಂಭ್ರಮದಿ ಬಂದಾರು| ಮಾ ೭೨
ದೇವದುಂದುಭಿಯಾಗೆ ಪೂವಿನ ಮಳೆಗರೆಯೆ
ಸಾವಧಾನದಿ ರಥವು ಬಂದೀತು| ಮಾ
ದಿವ್ಯ ತನುವನಿತ್ತು ರಥದೊಳು ಕೂಡ್ರಿಸಿ
ದೇವಲೋಕ ಕೊಂಡೊಯಿದಾರು| ಮಾ ೭೩
ಉಘೆ ಚಾಂಗು ಭಲರೆಂದು ನೆಗೆದಾವು ಪುಷ್ಪವು
ಅಗಜೆಯರಸನ ಪಾದಕಾಣಿಸಿತು| ಮಾ
ಮಿಗಿಲಾದ ಪೊಡವಿಯೊಳು ಜನಗಣಕೂಡುತ್ತ
ಸೊಗಸಿಂದೆ ಚಪ್ಪಾಳಿಯಿಕ್ಕಿತು| ಮಾ ೭೪
ಸಾರೂಪ್ಯ ಸಾಮೀಪ್ಯ ಸಾಯುಜ್ಯ ಸಾಲೋಕ್ಯ
ಮೀರಿದ ಪದವಿಯು ತೋರಿತು| ಮಾ
ಆರರಿವರೀಶನ ಮಹಿಮೆಯ ಶಿವಯೆಂದ
ಡೀ ರೀತಿ ಪದವಿಯು ದೊರೆತೀತು| ಮಾ ೭೫
ಎಷ್ಟು ಪಾಪವ ಮಾಡಿ ಒಟ್ಟಿಗೆ ಶಿವಯೆಂದ
ಡಿಷ್ಟಾರ್ಥ ತೋರೀತು | ಮಾ
ಬಿಟ್ಟುಬಿಡದೆ ನೀವು ನಿಷ್ಠೆಯಿಂ ಪೂಜಿಸೆ
ಎಷ್ಟಾಗುವದು ಪದವಿ ತಿಳಿಯಿರಿ| ಮಾ ೭೬
ಶಿವನಾಮದಿಂದಲಿ ಸವೆದೀತು ಪಾಪವು
ಹವಿಗೊಂಡು ಕರ್ಪೂರವಾಯಿತು| ಮಾ
ಭುವನದೊಳಗೆ ಶಿವನಿಂದುಂಟೆ ದೈವವು
ಕಿವಿಗೊಟ್ಟು ಕೇಳಿನ್ನು ಸುಖಿಸಿರಿ| ಮಾ         ೭೭

ಧರೆಗೆ ದಕ್ಷಿಣಕಾಶಿಯೆನಿಸಿ  ರಾಜಿಸುವದು
ವರ ಮಹಾ ಪಂಪಾಕ್ಷೇತ್ರವು| ಮಾ
ಇರುವದು ಪಶ್ಚಿಮ ದೆಸೆಯೊಳು ಮುನಿಪುರ
ವರ ಪ್ರಭುವಿನ ಭಜಿಸೀರಿ| ಮಾ      ೭೮

ಓತೋತು ನಿಮ್ಮಯ ಮನದೊಳಿದ್ದಭೀಷ್ಟೆಯು
ಇತ್ತಲಾಕ್ಷಣ ಇನ್ನು ಆಗುವುದು | ಮಾ
ದಾತ ಶಿವನನು ಓತು ಭಜಿಸಲು ತಮಗೆ
ನಿತ್ಯಸುಖ ಪ್ರತಿನಿತ್ಯ ದೊರೆವುದು | ಮಾ     ೭೯

ಜಯ ಜಯ ಹರಯೆನ್ನಿ ಜಯ ಜಯ ಶಿವಯೆನ್ನಿ
ಜಯ ಜಯ ಬಸವೇಶ ಸಲಹೆನ್ನಿ | ಮಾ
ಜಯ ಜಯ ಮುನಿಪುರ ವರಪ್ರಭುವಿನ ಪಾದ
ಸುವಿಲಾಸದಿಂದ ಕೊಂಡಾಡಿರಿ | ಮಾ        ೮೦