ಬಿದನೂರಿನ ಪ್ರಭು ಶಿವಪ್ಪನಾಯಕನು ಬೆಳಗಿನ ವೈಹಾಳಿ (ಕುದರೆ ಸವಾರಿ)ಯನ್ನು ತೀರಿಸಿಕೊಂಡು ಅರಮನೆಗೆ ಹಿಂದಿರುಗಿದ್ದನು.

ಬೆಳಗಿನ ಜಾವದ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಪ್ರಾತಃರ್ವಿಧಿಗಳನ್ನು ತೀರಿಸಿಕೊಂಡು ಒಂದು ತಾಸು ಕಾಲ ಅಂಗಸಾಧನೆಯನ್ನು ಮಾಡುವುದು ಅವನ ನಿತ್ಯದ ಪರಿಪಾಠ. ಈ ಸಮಯದಲ್ಲಿ ಅವನ ಬಾಲ್ಯದ ಗೆಳೆಯರು ಅವನೊಡನೆ ಮಲ್ಲಯುದ್ಧದಲ್ಲಿ ತೊಡಗುತ್ತಿದ್ದರು. ಅನಂತರ ಕತ್ತಿವರಸೆ, ಕುದುರೆ ಸವಾರಿಗಳು. ಖಡ್ಗ ವಿದ್ಯೆಯಲ್ಲಿ ನಾಯಕನನ್ನು ಮೀರಿಸುವವರು ಕೆಳದಿಯ ರಾಜ್ಯದಲ್ಲಿ ಇರಲಿಲ್ಲ. ಅವನು ಪಟ್ಟದ ಕುದುರೆಯನ್ನು ಏರಿ ಹೊರಟ ನೆಂದರೆ ನಾಲ್ಕು ಗಾವುದವೆನ್ನುವುದು ನಾಲ್ಕು ನಿಮಿಷದ ಪ್ರಯಾಣವಾಗುತ್ತಿತ್ತು.

ಈ ಸಮಯದಲ್ಲಿ ನಾಯಕನು ನಗರದ ಪ್ರದಕ್ಷಿಣೆ ಮಾಡಿ ಬರುತ್ತಿದ್ದುದುಂಟು. ಜನರ ಯೋಗಕ್ಷೇಮ ವಿಚಾರಿಸಲು ಇದೊಂದು ಅವಕಾಶ. ಯಾರು ಬೇಕಾದರೂ ನಾಯಕನನ್ನು ಕಂಡು ತಮ್ಮ ಅಹವಾಲುಗಳನ್ನು ಹೇಳಿಕೊಳ್ಳಬಹುದಿತ್ತು. ಅರಮನೆಗೆ ಬರುತ್ತಲೇ ನಾಯಕನು ಅವುಗಳ ವಿತರಣೆಗೆ ಗಮನ ಕೊಡುತ್ತಿದ್ದನು.

ಇಂದು ವೈಹಾಳಿ ಮುಗಿಸಿಕೊಂಡು ನಾಯಕನು ಅರಮನೆಗೆ ಬರುತ್ತಿದ್ದಂತೆ ನಿಯೋಗಿ ರಾಮಚಂದ್ರಯ್ಯನು ಒಂದು ಮಹತ್ವದ ಸಂಗತಿಯನ್ನು ತಿಳಿಸಲು ಕಾದಿದ್ದನು.

ನಾಯಕನನ್ನು ನೋಡುತ್ತಲೇ ಅವನು ಅಡ್ಡಬಿದ್ದು, ” ಪ್ರಭು, ಆಗಂತುಕನೊಬ್ಬನು ನಿಮ್ಮನ್ನು ಕಾಣಲು ಬಂದಿದ್ದಾನೆ. ಹೆಸರು ಕೇಳಿದರೆ ಹೇಳುವುದಿಲ್ಲ. ಎಲ್ಲಿಯವನೆಂದರೆ ತಿಳಿಸುವುದಿಲ್ಲ. ಎಲ್ಲವನ್ನೂ ಸನ್ನಿಧಾನದಲ್ಲಿ ಅರಿಕೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದಾನೆ.”ಎಂದನು.

“ಅವನನ್ನು ಕರೆದು ತಾ. ಏನು ವಿಷಯವೋ ವಿಚಾರಿಸೋಣ” ನಾಯಕನು ಸುರಿಯುತ್ತಿದ್ದ ಬೆವರನ್ನು ಅಂಗವಸ್ತ್ರದಿಂದ ಒರೆಸಿಕೊಂಡು ತನ್ನ ವೈಹಾಳಿಯ ಊಡುಪನ್ನು ಕಳಚಿ, ಬೇರೆ ಉಡುಪು ಧರಿಸಿದನು.

ಅಷ್ಟರಲ್ಲಿ ನಿಯೋಗಿಯು ರಾಜದೂತನಿಗೆ ಜತೆಗೆ ಬಂದು ನಿಂತನು.

ಆಗಂತುಕನು ಶಿವಪ್ಪನಾಯಕನಿಗೆ ದೀರ್ಘದಂಡ ನಮಸ್ಕಾರ ಮಾಡಿ, ಕಳವಳದಿಂದ ನಾಯಕನ ಮುಖ ನೋಡುತ್ತಾ ನಿಂತನು.

“ನೀವು ಯಾರು? ಎಲ್ಲಿಂದ ಬಂದಿರುವಿರಿ? ನೀವು ಬಂದಿರುವ ಕಾರ್ಯವೇನು? ಎಲ್ಲವನ್ನೂ ಸಂಕೋಚವಿಲ್ಲದೆ ತಿಳಿಸಿರಿ” – ಎಂದು ಆಭಯವಾಣಿಯಲ್ಲಿ ಗಂಭೀರವಾಗಿ ನುಡಿದ ಶಿವಪ್ಪನಾಯಕ.

“ಪ್ರಭು, ನನ್ನ ಹೆಸರು ವೆಂಕಟೇಶಯ್ಯ, ವಿಜಯ ನಗರದ ಸಾಮ್ರಾಟ್ ಶ್ರೀರಂಗರಾಯರ ನಂಬಿಕೆಯ ಸಚಿವ. ತಮ್ಮೊಡನೆ ಒಂದು ರಹಸ್ಯ ರಾಯಭಾರಕ್ಕೆ ಸಾಮ್ರಾಟರು ನನ್ನನ್ನು ಕಳುಹಿಸಿಕೊಟ್ಟಿದ್ದಾರೆ”.

“ಏನು? ವಿಜಯನಗರ  ಸಾಮ್ರಾಟರು ನಿಮ್ಮನ್ನು ಕಳುಹಿಸಿಕೊಟ್ಟಿದ್ದಾರೆಯೆ? ಅವರು ಎಲ್ಲಿದ್ದಾರೆ” – ಆತುರ ವಿಸ್ಮಯಗಳಿಂದ ಶಿವಪ್ಪನಾಯಕ ಕೇಳಿದ.

ಸದ್ಯಕ್ಕೆ ಅವರು ಶ್ರೀರಂಗಪಟ್ಟಣದಲ್ಲಿ ಆಶ್ರಯ ಪಡೆದಿದ್ದಾರೆ ಪ್ರಭು.”

“ನಮಗೂ ಗೂಢಚಾರರಿಂದ ಈ ಬಗ್ಗೆ ಸುದ್ದಿ ಬಂದಿತ್ತು. ವೆಲ್ಲೂರನ್ನು ಬಿಜಾಪುರದವರಿಗೆ ಒಪ್ಪಿಸಿದ ಮೇಲೆ ಅವರು ಕೆಲವು ಕಾಲ ಕಣ್ಮರೆಯಾಗಿದ್ದರು. ಆನಂತರ ಶ್ರೀರಂಗಪಟ್ಟಣದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ವಾರ್ತೆ ಬಂದಿತ್ತು.

“ಹೌದು ಪ್ರಭು. ವೆಲ್ಲೂರಿನಿಂದ ಹೊರಟ ಮೇಲೆ ನಾವು ಹಲವು ಕಡೆ ಆಶ್ರಯ ಪಡೆಯಲು ಪ್ರಯತ್ನಿಸಿ ವಿಫಲರಾದೆವು. ಮೈಸೂರಿನ ಕಂಠೀರವ ನರಸರಾಜರು ನಮಗೆ ಆಶ್ರಯ ಕೊಡಬೇಕೆಂದಿದ್ದರು. ಆದರೆ ಅವರ ನಂತರ ಪಟ್ಟಕ್ಕೆ ಬಂದ ದೊಡ್ಡದೇವರಾಜರು ಬಿಜಾಪುರದವರಿಗೆ ಹೆದರಿ ಸಾಮ್ರಾಟರನ್ನು ಕುಟುಂಬ ಸಮೇತ ಹೊರಗೆ ಕಳುಹಿಸುವ ವಿಚಾರ ಮಾಡುತ್ತಿದ್ದಾರೆ. ಬೇರೆ ದಾರಿ ಇಲ್ಲದೆ  ತಮ್ಮಲ್ಲಿ ಆಶ್ರಯವನ್ನು ಬೇಡಲು  ನನ್ನನ್ನು ಸಾಮ್ರಾಟರು ಕಳುಹಿಸಿಕೊಟ್ಟಿದ್ದಾರೆ.”

“ಎಂಥ ಮಾತು! ವಿಜಯನಗರದ ಸಾಮ್ರಾಟರಿಗೆ ನಾವು ಕೆಳದಿಯ  ಅರಸರು ಆಶ್ರಯ ನೀಡುವುದೆ? ಈ ಕೆಳದಿಯು ವಿಜಯನಗರದ ಆಶ್ರಿತ ರಾಜ್ಯವಾಗಿತ್ತು. ಸಾಮ್ರಾಜ್ಯದ ಸ್ವಾಮಿನಿಷ್ಠ ಸೇವಕರು ನಾವು. ನಿಮಗೆ ಯಾವುದೇ ಸಂಕೋಚ ಬೇಡ” ಎಂದು ನಿಯೋಗಿಯ ಕಡೆ ತಿರುಗಿ,

“ರಾಮಚಂದ್ರಯ್ಯ, ವೆಂಕಟೇಶಯ್ಯನವರಿಗೆ ಬಿಡದಿಯನ್ನು ಕಲ್ಪಿಸು. ಅವರು ನಮ್ಮ ಅತಿಥಿಗಳು. ರಾಜಸಭೆಯಲ್ಲಿ ನಮ್ಮ ನಿರ್ಧಾರಗಳನ್ನು ಅವರಿಗೆ ತಿಳಿಸುತ್ತೇನೆ” ಎಂದು ಹೇಳಿ ಅವರನ್ನು ಬೀಳ್ಕೊಟ್ಟನು.

ಆಶ್ರಿತರಿಗೆ ಅಭಯ

ರಾಜ್ಯಕೋಶಗಳೆಲ್ಲವನ್ನು ಕಳೆದುಕೊಂಡು ಹೆಸರಿಗೆ ಮಾತ್ರ ದೊರೆಯಾಗಿದ್ದ ಶ್ರೀರಂಗರಾಯನಿಗೆ ಆಶ್ರಯ ಕೊಡುವುದೆಂದರೆ ಆಗುತ್ತಿತ್ತು. ಅವರಿಗೆ ಆಶ್ರಯ ಕೊಟ್ಟರೆ ಶಿವಪ್ಪನಾಯಕನು ಮಧುರೆ, ತಂಜಾವೂರು, ಜಿಂಜಿ ಮತ್ತು ಮೈಸೂರು ದೊರೆಗಳ  ವಿರೋಧವನ್ನು ಕಟ್ಟಿಕೊಳ್ಳ ಬೇಕಾಗಿತ್ತು. ಅಲ್ಲದೆ ಪ್ರಬಲನಾದ ಬಿಜಾಪುರದ ಸುಲ್ತಾನನೂ ಅದರಿಂದ ಸಿಟ್ಟುಗೊಳ್ಳುತ್ತಿದ್ದ, ಏಕೆಂದರೆ ಬಿಜಾಪುರಕ್ಕೂ ವಿಜಯನಗರಕ್ಕೂ ಹಗೆತನವಿತ್ತು.

ಲೋಕಪ್ರಸಿದ್ಧವಾದ ಶತಮಾನಗಳ ಕಾಲ ವೈಭವವಾಗಿ ಮೆರೆದಿತ್ತು; ಹೊರದೇಶಗಳಿಂದ ಬಂದವರು ಸಹಾ ಸಾಮ್ರಾಜ್ಯವನ್ನು ಕಂಡು ಬೆರಗಾಗಿದ್ದರು. ಆದರೆ ಅದು ರಕ್ಕಸತಂಗಡಿ ಯುದ್ಧದಲ್ಲಿ (೧೫೬೫) ಒಟ್ಟಾಗಿ ಬಂದ ಅಹಮದ್ ನಗರ, ಬಿಜಾಪುರ, ಬಿದರೆ, ಗೋಲ್ಕಂಡ, ಬೀರಾರ್ ಸುಲ್ತಾನರಿಗೆ ಸೋತು ಹೋಗಿತ್ತು. ವಿಜೇತರಾದ ಮುಸಲ್ಮಾನ ಸೈನಿಕರ ದಾಳಿಗೆ ಸಿಕ್ಕಿ ಸಂಪೂರ್ಣವಾಗಿ ನಾಶವಾಗಿತ್ತು. ಆಗಲೇ ವೈರಿಗಳು ವಿಜಯನಗರದ ನಿವಾಸಿಗಳ ಮೇಲೆ ಬಿದ್ದು ಅಲ್ಲಿನ ಸಂಪತ್ತನ್ನು ದೋಚಿಕೊಂಡು ಹೋಗಿದ್ದರು. ಈ ಸಮಯದಲ್ಲಿ ಸಾಮ್ರಾಟನಾಗಿದ್ದ ಸದಾಶಿವರಾಯನನ್ನು, ತಿರುಮಲ, ವೆಂಕಟಾದ್ರಿ ಎಂಬುವರು ಚಂದ್ರಗಿರಿ ಕರೆದುಕೊಂಡು ಹೋಗಿ ಅಲ್ಲಿ ರಕ್ಷಿಸಿದರು.

ವಿಜಯನಗರವು ಬಹಮನಿ ಸುಲ್ತಾನನಿಂದ ನಾಶವಾದ ಮೇಲೆ ಅದನ್ನು ಮತ್ತೆ ಮೊದಲಿನ ಸ್ಥಿತಿಗೆ ತರಲು ತಿರುಮಲ, ವೆಂಕಟಾದ್ರಿ ಮತ್ತು ವೆಂಕಟಪತಿದೇವರಾಯರು ಪ್ರಯತ್ನಿಸಿರೂ ಸಾಧ್ಯವಾಗಲಿಲ್ಲ. ಸಾಮ್ರಾಜ್ಯಕ್ಕೆ ಸೇರಿದ ಜಿಂಜಿ, ಮಧುರೆ, ತಂಜಾವೂರು, ಶ್ರೀರಂಗಪಟ್ಟಣ ಮತ್ತು ಇಕ್ಕೇರಿಯ ಶಿವಪ್ಪನಾಯಕನು ಮಾತ್ರ ಹಿಂದಿನ ನಿಷ್ಠೆಯನ್ನು ಬಿಡಲಿಲ್ಲ. ವಿಜಯನಗರದ ಅರಸರಿಗೆ ಮೊದಲಿನಂತೆ ಆಶ್ರಿತ ದೊರೆಯಾಗಿ ನಡೆದುಕೊಂಡಿದ್ದನು.

ವಿಜಯನಗರವನ್ನು ಹಾಳು ಮಾಡಿದ ಬಿಜಾಪುರ ಮತ್ತು ಗೋಲ್ಕಂಡಗಳ ಸುಲ್ತಾನರು ಅಷ್ಟರಿಂದಲೇ ತೃಪ್ತಿ ಪಡಲಿಲ್ಲ. ವಿಜಯನಗರ ಪತನಾನಂತರ ಮೂರನೆಯ ಶ್ರೀರಂಗರಾಯನು ಪೆನಗೊಂಡೆ ಮತ್ತು ಪೆಲ್ಲೂರುಗಳಿಂದ ರಾಜ್ಯಭಾರ ಮಾಡುತ್ತಿದ್ದ. ಈ ಆಳಿದುಳಿದ ರಾಜ್ಯವನ್ನು ಕಸಿದುಕೊಳ್ಳಲು ಸುಲ್ತಾನರು ದಂಡೆತ್ತಿ ಬಂದರು.

ಶ್ರೀರಂಗರಾಯನು ಯುದ್ಧದಲ್ಲಿ ಮುಸಲ್ಮಾನರಿಗೆ ಸೋತ, ವೆಲ್ಲೂರನ್ನು ಬಿಟ್ಟು ಪತ್ನಿ-ಪುತ್ರರೊಡನೆ ತಲೆ ಮರೆಸಿ ಕೊಳ್ಳಬೇಕಾಯಿತು. ಮಧುರೆ, ತಂಜಾವೂರು ನಾಯಕನ ಬಳಿ ನೆರವು ಬೇಡಿದ. ಅವನಿಗೆ ಆಶ್ರಯ ಕೊಟ್ಟರೆ ಬಿಜಾಪುರ ಮತ್ತು ಗೋಲ್ಕಂಡಗಳ ಸುಲ್ತಾನರಿಗೆ ಸಿಟ್ಟು ಬರುತ್ತದೆ ಎಂದು ಅವರು ಒಪ್ಪಲಿಲ್ಲ. ಆಗ ಮೈಸೂರಿನ ರಾಜ ಬಹು ಪರಾಕ್ರಮಿಯಾದ ರಣಧೀರ ಕಂಠೀರವ ನರಸರಾಜ ಒಡೆಯನು; ಅತನು ಶ್ರಿರಂಗ ರಾಯನಿಗೆ ಆಶ್ರಯ ಕೊಟ್ಟ ಆದರೆ ರಣಧೀರನು ಸತ್ತು ಹೋದ ನಂತರ ಬಂದ ದೊಡ್ಡ ದೇವರಾಜ ಒಡೆಯನು ಬಿಜಾಪುರ ಮುಸಲ್ಮಾನರಿಗೆ ಹೆದರಿಬಿಟ್ಟ ಶ್ರೀರಂಗ ರಾಯನಿಗೆ ಮೈಸೂರನ್ನು ಬಿಟ್ಟು ಹೋಗೆಂದು ಹೇಳಿಬಿಟ್ಟ.

ಶ್ರೀರಂಗರಾಯನಿಗೆ ಯಾರೂ ಆಶ್ರಯ ಕೊಡಲೊಲ್ಲರು. ಅವನನ್ನು ತಮ್ಮ ಊರಿನಲ್ಲಿ ಇಟ್ಟುಕೊಂಡರೆ ಅಪಾಯವನ್ನೇ ಇಟ್ಟುಕೊಂಡ ಹಾಗೆ. ಸುಲ್ತಾನರು ಬಲಿಷ್ಠರು. ಅವರಿಗೆ ಸಿಟ್ಟು ಬರುತ್ತದೆ. ಪಾಪ, ಶ್ರೀರಂಗರಾಯನಿಗೆ ನೆಲೆಯೇ ಇಲ್ಲ ಎನ್ನುವ ಹಾಗಾಯಿತು. ಅಲೆದಲೆದು, ಕಡೆಗೆ ಕೆಳದಿಯ ನಾಯಕನಿಗೆ ಮೊರೆಯಿಟ್ಟ.

ಶಿವಪ್ಪನಾಯಕನು ಈ ವಿಷಯದಲ್ಲಿ ದುಡುಕದೆ ತನ್ನ ಸಚಿವರ ಸಲಹೆಯನ್ನು ತೆಗೆದುಕೊಂಡನು.

“ಪ್ರಭೂ, ಆಶ್ರಯ ಬೇಡಿ ಬಂದವರಿಗೆ ಆಶ್ರಯ ನೀಡುವುದು ನಮ್ಮ ಕರ್ತವ್ಯವಾಗಿದೆ. ವಿಜಯನಗರದ ಕೃಪಾಶ್ರಯದಿಂದ ಬೆಳೆದಿರುವ ನಾವು ಸಾಮ್ರಾಟರಿಗೆ ಕಷ್ಟಕಾಲದಲ್ಲಿ ನೆರವಾಗುವುದು ನಮ್ಮ ಧರ್ಮವಾಗಿದೆ” ಎಂದು ಪ್ರಧಾನಿ ದೊಡ್ಡ ತಮ್ಮರಸಯ್ಯನು ಹೇಳಿದನು.

“ನಮ್ಮ ಹಿಂದಣ ದೊರೆಗಳಾದ ಸದಾಶಿವ ನಾಯಕರೂ ಚಿಕ್ಕ ಸಂಕಣ್ಣನಾಕರೂ ವಿಜಯನಗರ ಸಾಮ್ರಾಜ್ಯಕ್ಕೆ ಕಷ್ಟ ಕಾಲದಲ್ಲಿ ಇದೇ ಬಗೆಯ ಸೇವೆ ಸಲ್ಲಿಸಿ ಸನ್ಮಾನಿತರಾಗಿದ್ದಾರೆ” ಎಂದನು ಅಮಾತ್ಯ ಚೌಡಪ್ಪಯ್ಯ.

ಬಸಪ್ಪದೇವನು, ಸಾಮ್ರಾಟನು ರಾಜ್ಯಕೋಶಗಳನ್ನು ಕಳೆದುಕೊಂಡಿದ್ದಾನೆ, ಇತರರೆಲ್ಲ ಅವನ ಕೈಬಿಟ್ಟಿದ್ದಾರೆ, ಅವನಿಗೆ ನೆರವಾಗುವುದರಿಂದ ಮುಸಲ್ಮಾನರ ದ್ವೇಷ ಕಟ್ಟಿಕೊಳ್ಳಬೇಕಾಗುವುದೆಂದು ಅಭಿಪ್ರಾಯಪಟ್ಟನು.

ಶಿವಪ್ಪನಾಯಕನು ಎಲ್ಲರ ಮಾತನ್ನೂ ಶಾಂತನಾಗಿ ಕೇಳಿದ. ಆನಂತರ ಹೇಳಿದ : “ನಿಜ, ಬಸಪ್ಪನಾಯಕರ ಮಾತು ನಿಜ. ನಾವು ಶ್ರೀರಂಗರಾಯನಿಗೆ ಇಲ್ಲಿ ಸ್ಥಳ ಕೊಟ್ಟರೆ ಮುಸಲ್ಮಾನ ಸುಲ್ತಾನನಿಗೆ ಸಿಟ್ಟು ಬರುತ್ತದೆ.

“ಆದರೆ ನಾವು ವಿಜಯನಗರದ ಉಪ್ಪನ್ನು ಉಂಡವರು ಎಂಬುದನ್ನೂ ಮರೆಯುವ ಹಾಗಿಲ್ಲ. ನಮ್ಮ ರಾಜ ವಂಶದ ಹಿರಿಯರಿಗೆ ವಿಜಯನಗರದ ಚಕ್ರವರ್ತಿಗಳು ಮರ್ಯಾದೆ ಮಾಡಿದ್ದಾರೆ. ಪ್ರಭುಗಳು ಈಗ  ಇಂಥ ಕಷ್ಟದಲ್ಲಿದ್ದಾರೆ, ಅವರನ್ನು ದೂರ ಮಾಡುವುದೆ?”

ಧೀರ ಶಿವಪ್ಪನಾಯಕನು ಶ್ರೀರಂಗರಾಯನಿಗೆ ಕಾಗದ ಕಳುಹಿಸಿದ, ’ತಾವು ನನ್ನ ರಾಜ್ಯದಲ್ಲಿ ಬಂದು ಇರಬಹುದು’ ಎಂದು. ಶಿವಪ್ಪನಾಯಕನು ಬೇಲೂರು ಪ್ರಾಂತದ ಸಕ್ಕರೆ ಪಟ್ಟಣದಲ್ಲಿ ಶ್ರೀರಂಗರಾಯನಿಗೆ ಎಲ್ಲ ಅನುಕೂಲಗಳನ್ನೂ ಕಲ್ಪಿಸಿಕೊಟ್ಟ.

“ಈ ಪವಿತ್ರ ಕಾರ್ಯದಲ್ಲಿ ನನ್ನ ದೇಹ ಬಿದ್ದು ಹೋದರೂ ಚಿಂತೆಯಿಲ್ಲ. ಕೊಟ್ಟ ವಚನವನ್ನು ಪಾಲಿಸುತ್ತೇನೆ” ಎಂದ.

ವೀರರ ವಂಶದ ರತ್ನ

ಇಂದಿನ ಶಿವಮೊಗ್ಗ ಜಿಲ್ಲೆಯಲ್ಲಿ ಕೆಳದಿ ಎಂಬ ಊರಿದೆ. ಸುಮಾರು ನಾಲ್ಕು ಶತಮಾನಗಳ ಹಿಂದೆ ಅದು ಶಿವಪ್ಪನಾಯಕನ ಹಿಂದಿನವರ ರಾಜಧಾನಿ ಆಗಿತ್ತು.

ಈ ವಂಶದ ಮೂಲಪುರುಷರು ಚೌಡಪ್ಪ ಮತ್ತು ಭದ್ರಪ್ಪ ಎಂಬ ಸಹೋದರರು. ಅವರ ತಂದೆ ತಾಯಿಗಳು ಬಸಪ್ಪ ಮತ್ತು ಬಸವಮ್ಮ ಎಂಬ ಸಾತ್ವಿಕ ದಂಪತಿಗಳು. ಅವರು ಪಳ್ಳಿಬೈಲು – ಇಂದಿನ ಹಳ್ಳಿಬೈಲು – ಎಂಬ ಮಲೆನಾಡಿನ ಹಳ್ಳಿಯಲ್ಲಿ ವಾಸವಾಗಿದ್ದರು.

ಒಂದು ದಿನ  ಚೌಡಪ್ಪನು ಅಂದಿನ ಹೊಲದ ಕೆಲಸವನ್ನು ಮಾಡಿ ದಣಿದು ಮಧ್ಯಾಹ್ನದ ಬಿಸಿಲಿನಲ್ಲಿ ವಿಶ್ರಮಿಸಿಕೊಳ್ಳುತ್ತಾ ಇದ್ದನು. ಆಗ ಅದೇ ಮಾರ್ಗದಲ್ಲಿ ದಣಿದು ಬಂದಿದ್ದ ವೆಂಕಟಭಟ್ಟನೆಂಬ ಜ್ಯೋತಿಷಿಯು ವಿಶ್ರಮಿಸಿಕೊಳ್ಳಲು ಚೌಡಪ್ಪನು ಕುಳಿತಿದ್ದ ಸ್ಥಳಕ್ಕೆ ಬಂದನು. ಅಷ್ಟರಲ್ಲಿ ಭದ್ರಪ್ಪನೂ ಅವನ ತಾಯಿಯೂ ಮಧ್ಯಹ್ನದ ಬುತ್ತಿಯನ್ನು ತೆರೆದುಕೊಂಡು ಅಲ್ಲಿಗೆ ಬಂದರು. ಅಲ್ಲಿ ಕುಳಿತಿದ್ದ ಆ ಬ್ರಾಹ್ಮಣನನ್ನು ನೋಡಿ ಬಸವಮ್ಮ ಭಕ್ತಿಯಿಂದ ನಮಸ್ಕರಿಸಿದಳು.

“ತಾಯಿ, ಭಗವಂತನು ನಿಮ್ಮ ಎಲ್ಲ ಕಷ್ಟಗಳನ್ನೂ ಸದ್ಯದಲ್ಲೇ ಪರಿಹಾರ ಮಾಡುತ್ತಾನೆ. ಇನ್ನು ಕೆಲವು ದಿನಗಳಲ್ಲಿ ನಿನ್ನ ಮಕ್ಕಳು ರಾಜ ಮನ್ನಣೆ ಪಡೆದು ಈ ನಾಡಿಗೆ ಪ್ರಭುಗಳಾಗುತ್ತಾರೆ” ಎಂದು ವೆಂಕಟಭಟ್ಟನು ಆಶೀರ್ವಾದ ಮಾಡಿದನು.

“ಇದು ನಿಜವೇ?” ಆಚ್ಚರಿಯಿಂದ ಕೇಳಿದ ಚೌಡಪ್ಪ.

“ಶಿವನಾಣೆ ಸತ್ಯ” ಎಂದ ವೆಂಕಟಭಟ್ಟ.

ಈ ಘಟನೆಯಾದ ಅತ್ಯಲ್ಪ ಕಾಲದಲ್ಲೇ ಆ ಸೋದರರಿಗೆ ತಮ್ಮ ಹೊಲದಲ್ಲಿ ಗುಪ್ತನಿಧಿಯೊಂದು ದೊರಕಿತು. ಅದರ ಸಹಾಯದಿಂದ ಅವರು ಊರಿಗೆ ಗಣ್ಯ ವ್ಯಕ್ತಿಗಳಾದರು. ದಿನದಿನಕ್ಕೆ ಅವರ ಸ್ಥಿತಿ ಉತ್ತಮವಾಯಿತು.

ಇದಾದ ಸ್ವಲ್ಪ ಕಾಲಕ್ಕೆ ಒಂದು ಅದ್ಭುತ ನಡೆಯಿತು ಎನ್ನುತ್ತಾರೆ. ಈ  ಕಥೆಯೂ ತುಂಬ ಸ್ವಾರಸ್ಯವಾಗಿದೆ.

ಪಳ್ಳಿಬಯಲಿನ ಗೌಡನ ಮನೆಯಲ್ಲಿ ಒಂದು ಹಸು. ಚೆನ್ನಾಗಿ ಹಾಲು ಕೊಡುತ್ತಿತ್ತು.

ಇದ್ದಕ್ಕಿದ್ದ ಹಾಗೆ ಹಾಲು ಕೊಡುವುದನ್ನು ನಿಲ್ಲಿಸಿತು. ಬೆಳಿಗ್ಗೆ ಮೇಯುವುದಕ್ಕೆ ಹೋಗುವುದು, ಹಿಂದಕ್ಕೆ ಬಂದಾಗ ಕೆಚ್ಚಲು ಬರಿದು! ಒಂದು ದಿನವಲ್ಲ, ಎರಡು ದಿನವಲ್ಲ, ಪ್ರತಿನಿತ್ಯ ಹೀಗೇ.

ಗೌಡನ ಆಳುಗಳು ಹಸುವಿನ ಹಿಂದೆಯೇ ನಡೆದರು, ಅದು ಎಲ್ಲಿ ಹೋದರೆ ಅಲ್ಲಿಯೇ ಹೋದರು. ಹಸು ಕಾಡಿನ ಮಧ್ಯೆ ಇದ್ದ ಒಂದು ಬಿದಿರು ಮೆಳೆಯ ಮಧ್ಯೆ ಒಂದು ಹುತ್ತಕ್ಕೆ ಹೋಯಿತು. ಅಲ್ಲಿ ತಾನೇ ಹಾಲು ಸುರಿಸಿತು. ಆಳುಗಳು ಬಂದು ಗೌಡನಿಗೆ ವಿಷಯವನ್ನು ಅರಿಕೆ ಮಾಡಿದರು.

’ಏನು ಸೋಜಿಗ!’ ಎನ್ನಿಸಿತು ಗೌಡನಿಗೆ ಅವನೇ ಆಕಳಿನ ಹಿಂದೆ ಹೊರಟ. ಆ ಆಕಳು ಯಥಾಪ್ರಕಾರ ಬಿದಿರು ಮೆಳೆಯ ಮಧ್ಯೆ ಹಾಲು  ಸುರಿಸಿತು.

ಅಲ್ಲಿ ಅಗೆಸಿ ನೋಡಿದ ಗೌಡ. ಹುತ್ತದಲ್ಲಿ ಒಂದು ಲಿಂಗ! ಗೌಡ ಅದನ್ನು ಕಣ್ಣಿಗೊತ್ತಿಕೊಂಡ. ಆ ಸ್ಥಳವನ್ನೆಲ್ಲ ಸ್ವಚ್ಛ ಮಾಡಿದ.

ಆ ಲಿಂಗವನ್ನು ರಾಮೇಶ್ವರನೆಂದು ಕರೆದು ಒಂದು ದೇವಾಲಯವನ್ನು ಕಟ್ಟಿಸಿ ಅರ್ಚನಾದಿಗಳಿಗೆ ಏರ್ಪಡಿಸಿ ಭಕ್ತಿಯಿಂದ ಸೇವಿಸುತ್ತಾ ಬಂದನು. ಚೌಡಪ್ಪನಿಗೆ ದೇವರ ಅನುಗ್ರಹವಿತ್ತು ಎಂದು ತೋರಿಸುವ ಇಂತಹ ಕಥೆಗಳಿವೆ.

ಇದೇ ಸಮಯ ಅವನಿಗೆ ಬೇಡನೊಬ್ಬನಿಂದ ನಾಗಮರಿ ಎಂಬ ಕತ್ತಿಯು ಕಾಣಿಕೆಯಾಗಿ ದೊರಕಿತು. ಅದನ್ನು ಹಿಡಿದ ಘಳಿಗೆಯಿಂದ ಚೌಡಪ್ಪನ ಸ್ಥಾನಮಾನಗಳು ಏರುತ್ತಾ ಹೋದವು. ಜನರು ಅವನನ್ನು ಚೌಡಪ್ಪ ನಾಯಕನೆಂದು ಗೌರವದಿಂದ ಕರೆಯತೊಡಗಿದರು. ಚೌಡಪ್ಪನು ಒಂದೊಂದೇ ಗ್ರಾಮವನ್ನು ತನ್ನ ವಶಕ್ಕೆ ತೆಗೆದುಕೊಳ್ಳುತ್ತಾ ಆ ಪ್ರದೇಶಕ್ಕೆ ಅಧಿಪತಿಯಾದನು.

ವಿಜಯನಗರ ಸಾಮ್ರಾಜ್ಯವು ಕೃಷ್ಣದೇವರಾಯನ ಕಾಲದಲ್ಲಿ ವೈಭವದ ತುತ್ತತುದಿಯನ್ನು ಮುಟ್ಟಿತ್ತು. ಅವನು ಚೌಡಪ್ಪನಾಯಕನ ಮಹತ್ಕಾರಗಳನ್ನು ಕೇಳಿದ್ದನು. ಅವನು ಚೌಡಪ್ಪ ಸಹೋದರರನ್ನು ಸನ್ನಿಧಾನಕ್ಕೆ ಬರಲು ಆಮಂತ್ರಣ ಕಳುಹಿಸಿಕೊಟ್ಟನು.

ಸಹೋದರರಿಬ್ಬರೂ ಸಂತೋಷದಿಂದಲೇ ವಿಜಯ ನಗರಕ್ಕೆ ಹೋಗಿ ಸಾಮ್ರಾಟನನ್ನು ಕಂಡು  ಬೆಲೆ ಬಾಳುವ ಕಾಣಿಕೆಗಳನ್ನು ಗೌರವದಿಂದ ಅರ್ಪಿಸಿದರು.

ಆ ಸಹೋದರರ ಮುಖದ ವರ್ಚಸ್ಸು ಮೈಕಟ್ಟು ಕಂಡು ರಾಯನಿಗೆ ಬಹಳ ಸಂತೋಷವಾಯಿತು. ಅವರ ಶೌರ್ಯ, ಸಾಹಸಗಳನ್ನು ಪರೀಕ್ಷಿಸಲು ಮಲಸೀಮೆಯ  ದುಷ್ಟ ಪಾಳೆಯಗಾರರ ಮೇಲೆ ಯುದ್ಧಕ್ಕೆ ಕಳುಹಿಸಿಕೊಟ್ಟನು.

ಚೌಡಪ್ಪನ ನಾಗಮುರಿ ಖಡ್ಗದ ಮುಂದೆ ಆ ಪಾಳೆಯಗಾರರ ಸೈನಿಕರು ನಿಲ್ಲಲಾರದೆ ಹೋದರು. ಚೌಡಪ್ಪ ಸಹೋದರರು ಸಾಮ್ರಾಟನಿಗೆ ವಿಜಯವನ್ನು ತಂದುಕೊಟ್ಟರು.

ಇದರಿಂದ ಕೃಷ್ಣದೇವರಾಯನಿಗೆ ತುಂಬ ಸಂತೋಷವಾಯಿತು. ಅವರು ಪಾಳೆಯಗಾರರಿಂದ ಸ್ವಾಧೀನ ಪಡಿಸಿಕೊಂಡಿದ್ದ ಎಲ್ಲ ಪ್ರದೇಶಕ್ಕೂ ಅವರನ್ನು ಅಧಿಪತಿಗಳನ್ನಾಗಿ ನೇಮಿಸಿದ. ಅವರನ್ನು ಯೋಗ್ಯ ರೀತಿಯಲ್ಲಿ ಸನ್ಮಾನಿಸಿದ. ಕೆಳದಿಯ ಮೂಲ ಸಂಸ್ಥಾನದ ಮೊನ್ನೆಯ ಚೌಡಪ್ಪ ಎಂದು ಬಿರುದು ಕೊಟ್ಟ. ಬಹು ಗೌರವದಿಂದ ಅವರನ್ನು ಕಳುಹಿಸಿಕೊಟ್ಟ ಅಲ್ಲದೆ ಚಂದ್ರಗುತ್ತಿ, ಕೆಳದಿ, ಇಕ್ಕೇರಿ, ಪೆರ್ಬಯಲು, ಯಲಗಳಲೆ, ಮೇದೂರು, ಕಲಿಸೆ ಮತ್ತು ಲಾತವಾಡಿಗಳೆಂಬ ಎಂಟು ಮಾಗಣೆಗಳನ್ನು ಜಹಗೀರಾಗಿ ಇತ್ತನು.

ವಿಜಯನಗರದ ಸಾಮ್ರಾಟರಿಂದ ಮನ್ನಣೆ ಪಡೆದ ಮೇಲೆ ಕೆಳದಿಯಲ್ಲಿ ಚೌಡಪ್ಪನು ವಿದ್ಯುಕ್ತನಾಗಿ ಪಟ್ಟಾಭಿಷಿಕ್ತನಾಗಿ ಕೆಳದಿಯ ರಾಜ್ಯಕ್ಕೆ ಮೂಲಪುರುಷನಾದನು. ಹದಿಮೂರು ವರ್ಷಗಳವರೆಗೆ ರಾಜ್ಯವಾಳಿ ತೀರಿಕೊಂಡನು.

ಅವನ ನಂತರ ಅವನ ಮಗ ಸದಾಶಿವನಾಯಕನು ಇಕ್ಕೇರಿಯ ಸಿಂಹಾಸನವನ್ನೇರಿ ಮೂರು ದಶಕಗಳವರೆಗೆ ವೈಭವದಿಂದ ಆಳಿದನು. ಅವನ ಕಾಲದಲ್ಲಿ ಇಕ್ಕೇರಿಯ ಖ್ಯಾತಿಯ ದಕ್ಷಿಣಾಪಥದಲ್ಲೆಲ್ಲಾ ಹರಡಿತು. ಬಹಮನಿ ಸುಲ್ತಾನದ ವಿರುದ್ಧ ನಡೆದ ಯುದ್ಧದಲ್ಲಿ ಕಲ್ಬುರ್ಗಿ ಕಲ್ಯಾಣದುರ್ಗಗಳನ್ನು ಹಿಡಿಯುವುದರಲ್ಲಿ ವಿಜಯ ನಗರದ ಚಕ್ರವರ್ತಿಗೆ ನೆರವಾದನು. ಮದಗಲ ಕೆರೆಯನ್ನು ಇವನೇ ಕಟ್ಟಿಸಿದನು. ಕೆಳದಿಯ ರಾಮೇಶ್ವರ ಮಂದಿರವನ್ನು ಸುಂದರಗೊಳಿಸಿದ; ಪಾರ್ವತಿ ಅಮ್ಮನವರ ವಿಗ್ರಹವನ್ನು ಪ್ರತಿಷ್ಠಾಪಿಸಿದ.

ಇಂತಹ ಸ್ವಾಮಿಭಕ್ತರ ಮತ್ತು ದೈವಭಕ್ತರ ಕುಟುಂಬದಲ್ಲಿ ಹುಟ್ಟಿದವನು ಶಿವಪ್ಪನಾಯಕ. ಈ ವಂಶದಲ್ಲಿ ಚೌಡಪ್ಪ ಸಹೋದರರು ಮತ್ತು ಸದಾಶಿವನಾಯಕ – ಇವರಲ್ಲದೆ ಹಲವು ವೀರರತ್ನಗಳು ಬೆಳಗಿದವು.

ದೊಡ್ಡ ಸಂಕಣ್ಣ ನಾಯಕನೆಂಬುವನು ಗೋವೆಯನ್ನು ಗೆದ್ದ. ವಿಜಯನಗರಕ್ಕೆ ಸಹಾಯ ಮಾಡಿದ ಇವನ ಸಾಹಸವನ್ನು ಮೆಚ್ಚಿ ವಿಜಯನಗರದ ಸಾಮ್ರಾಟರು ಇವನಿಗೆ ’ಭುಜಕೀರ್ತಿ’ ಎಂದು ಬಿರುದು ಕೊಟ್ಟರು.

ಶಿವಪ್ಪನಾಯಕನ ತಾತನಾದ ಸಂಕಣ್ಣನಾಯಕನೂ ಶೂರನೇ. ರಕ್ಕಸತಂಗಡಿ ಎನ್ನುವ ಸ್ಥಳದಲ್ಲಿ ೧೫೬೫ರಲ್ಲಿ ಬಹಮನಿ ಸುಲ್ತಾನರ ಸೈನ್ಯಗಳಿಗೂ ವಿಜಯನಗರದ ಸೈನ್ಯಗಳಿಗೂ ಭಯಂಕರ ಯುದ್ಧವಾಯಿತು. ಇದರಲ್ಲಿ ಸಂಕಣ್ಣನಾಯಕ ವಿಜಯನಗರದ ಕಡೆ ಹೋರಾಡಿದ.

ಹಿರಿಯ ವೆಂಕಟಪ್ಪನಾಯಕ ಎನ್ನುವ ರಾಜ ಬಹು ಸಮರ್ಥ. ಜನರಿಗೆ ತೊಂದರೆ ಕೊಡುತ್ತಿದ್ದ ಪಾಳಯಗಾರರನ್ನು ಅಡಗಿಸಿದ. ಈತನೇ ಶಿವಪ್ಪನಾಯಕನನ್ನು ಬೆಳೆಸಿದ. ಶಿವಪ್ಪ ಹುಡುಗನಾಗಿದ್ದಾಗಲೇ ಅವನ ಚುರುಕು ಬುದ್ಧಿಯನ್ನೂ, ಧೈರ್ಯವನ್ನೂ ವೆಂಕಟಪ್ಪನಾಯಕ ಮೆಚ್ಚಿದ್ದ. ಅವನಿಗೆ ಒಳ್ಳೆಯ ಶಿಕ್ಷಣ ಕೊಡಿಸಿದ. ವೆಂಕಟಪ್ಪನಾಯಕನ ಮಗನಾದ ಭದ್ರಪ್ಪನಾಯಕ ಮೊದಲೇ ತೀರಿಕೊಂಡ. ಅವನ ಮಗ ವೀರಭದ್ರನಾಯಕ.

ವೆಂಕಟಪ್ಪನಾಯಕನಿಗೆ ವಯಸ್ಸಾಯಿತು. “ಇಷ್ಟು ದಿನ ರಾಜ್ಯ ಆಳಿದೆ, ಸಾಕು. ಈ ವಯಸ್ಸಿನಲ್ಲಾದರೂ ಚಿಂತೆ ಇಲ್ಲದೆ ಶಾಂತವಾಗಿ ಇರೋಣ. ದೇವರ  ಧ್ಯಾನದಲ್ಲಿ ಮುಪ್ಪನ್ನು ಕಳೆಯೋಣ” ಎನ್ನಿಸಿತು. ಆದರೆ ವೀರಭದ್ರನಾಯಕ ಅಷ್ಟು ಸಮರ್ಥನಲ್ಲ.

ವೆಂಕಟಪ್ಪನಾಯಕ ರಾಜ್ಯಾಡಳಿತವನ್ನೆಲ್ಲ ಶಿವಪ್ಪ ನಾಯಕನಿಗೆ ವಹಿಸಿದ. ತಾನು ಹೆಸರಿಗೆ ರಾಜನಾಗುಳಿದ.

ಶಿವಪ್ಪನಾಯಕನ ಹೊಣೆ

ವೆಂಕಟಪ್ಪನಾಯಕ ೧೬೨೯ರಲ್ಲಿ ಮಡಿದನು.

ಸಾಯುವ ಮುನ್ನ ವೆಂಕಟಪ್ಪನಾಯಕನು ವೀರಭದ್ರನಾಯಕನನ್ನು ಶಿವಪ್ಪನಾಯಕನ ಕೈಗಿತ್ತು. –

“ಮಗು ಶಿವಪ್ಪ, ನಾನು ನಿನ್ನ ಮೇಲೆ ಮಹತ್ತರ ಜವಾಬ್ದಾರಿಯನ್ನು ಹೊರಿಸಿ ಹೋಗುತ್ತಿದ್ದೇನೆ. ಇಕ್ಕೇರಿಯ ಹಾಗೂ ವೀರಭದ್ರನಾಯಕನ ಸಂರಕ್ಷಣೆಯ ಭಾರ ಹೊರಿಸುತ್ತಿದ್ದೇನೆ, ನನ್ನ ವಂಶದ ಒಂದೇ ಮೊಳಕೆ ಎಂದರೆ ವೀರಭದ್ರನಾಯಕ ಅವನಿನ್ನೂ ಅನನುಭವಿ. ಅವನನ್ನು ಕಾಪಾಡುವ ಭಾರ ನಿನ್ನದು” ಎಂದನು.

ಶೋಕವೇ ಮೂರ್ತಿವೆತ್ತಂತಿದ್ದ ಶಿವಪ್ಪನಾಯಕನು, “ಅಪ್ಪಾಜಿ, ತಾವು ಕಟ್ಟಿ ಬೆಳೆಸಿದ ಈ ಇಕ್ಕೇರಿ ರಾಜ್ಯ ಅನಾಥವಾಗಲು ನಾನು ಅವಕಾಶ ಕೊಡುವುದಿಲ್ಲ. ನನಗೆ ರಾಜ್ಯಲೋಭವಿಲ್ಲ. ಅಘೋರೇಶ್ವರನ ಆಣೆಯಿಟ್ಟು ಹೇಳುತ್ತೇನೆ. ವೀರಭದ್ರನಾಯಕನಿಗೆ ಈ ಪವಿತ್ರ ಸಿಂಹಾಸನವನ್ನು ಭದ್ರಪಡಿಸಿಕೊಡಲು ನನ್ನ ಶಕ್ತಿಮೀರಿ ದುಡಿಯುತ್ತೇನೆ. ನನ್ನ ಮಾತನ್ನು ನಂಬಿ ನೀವು ನಿಶ್ಚಿಂತರಾಗಿರಿ” ಎಂದು ಗದ್ಗದಕಂಠದಲ್ಲಿ ಆಶ್ವಾಸನೆ ನೀಡಿದನು.

ಈ ಮಾತನ್ನು ಕೇಳಿ ಸಮಾಧಾನಚಿತ್ತನಾಗಿ ಹಿರಿಯ ವೆಂಕಟಪ್ಪನಾಯಕನು ಕೊನೆಯುಸಿರನ್ನು ಎಳೆದಿದ್ದನು.

ರಾಜದ್ರೋಹಿ ತಪ್ಪಿಸಿಕೊಂಡ

ವೀರಭದ್ರನಾಯಕನು ತಂದೆಯಿಂದ ಶಿಕ್ಷಣ ಪಡೆದಿದ್ದರೂ ಅವನು ತಂದೆಯಲ್ಲಿದ್ದ ಯಾವ ವಿಶೇಷ ಗುಣಗಳನ್ನೂ ಮೈಗೂಡಿಸಿಕೊಂಡಿರಲಿಲ್ಲ, ವೆಂಕಟಪ್ಪನಾಯಕನಲ್ಲಿದ್ದ ಆಡಳಿತ ನಿಪುಣತೆ, ಮಹತ್ವಾಕಾಂಕ್ಷೆ, ಧೈರ್ಯ,ಸ್ಥೈರ್ಯ, ಸಾಹಸಬುದ್ಧಿ, ವೀರಪಕ್ಷಪಾತ – ಮೊದಲಾದ ಗುಣಗಳು ಅವನಲ್ಲಿ ತಿಲಾಂಶವೂ ಇರಲಿಲ್ಲ ಆದರೆ ಅವನಲ್ಲಿ ಧಾರ್ಮಿಕ ಶ್ರದ್ಧೆ, ಆಸ್ತಿಕ ಮನೋಭಾವ, ವೈರಾಗ್ಯಗಳು ಹೇರಳವಾಗಿದ್ದವು. ಹೀಗಾಗಿ ವೀರಭದ್ರ ನಾಯಕನು ಸಿಂಹಾಸನದ ಮೇಲಿದ್ದರೂ ತೀರ ಸರಳ ಜೀವನವನ್ನು ಬಯಸುತ್ತಿದ್ದನು. 

ಸೈನಿಕರು ಒಳಕ್ಕೆ ಬರುತ್ತಲೇ ಶಿವಪ್ಪನಾಯಕನು ಅವರನ್ನು ತುಂಡರಿಸಿದನು

ಅವನಿಗೆ ರಾಜ್ಯಾಡಳಿತದಲ್ಲಿ ಬೇಸರವಿತ್ತು. ಅವನು ಆಡಳಿತವನ್ನು ಶಿವಪ್ಪನಾಯಕನಿಗೆ ಒಪ್ಪಿಸಿ, ತನಗೆ ಪ್ರಿಯ ವಾದ ದೇವರ ಭಕ್ತರ ಸಂಗ, ಗ್ರಂಥಪಠಣ, ಶಾಸ್ತ್ರಪುರಾಣ ಸಮಾಲೋಚನೆ ಮೊದಲಾದ ಧಾರ್ಮಿಕ ವಿಷಯಗಳಲ್ಲೂ, ಗೋಸಾಯಿಗಳ, ಸನ್ಯಾಸಿಗಳ ಜತೆಯಲ್ಲೂ ಕಾಲ ಕಳೆಯುತ್ತಿದ್ದನು. ಅವನು ಇಕ್ಕೇರಿಗೆ ಸಮೀಪದಲ್ಲಿದ್ದ ತೀರ್ಥರಾಜಪುಕ್ಕೆ ಹೋಗಿ ಅಲ್ಲಿನ ಪ್ರಶಾಂತ ವಾತಾವರಣದಲ್ಲಿ ಒಂದು ಅರಮನೆಯನ್ನು ಕಟ್ಟಿಕೊಂಡು ಇದ್ದು ಬಿಟ್ಟ ಇದರಿಂದ ಅವನಿಗೆ ಬೇಕಾದ ಮನಶ್ಯಾಂತಿ ದೊರೆಯಿತು. ಆದರೆ ರಾಜನಿಲ್ಲದ ಇಕ್ಕೇರಿಯ ಅರಮನೆ ಮಾತ್ರ ಅವನ ಶತ್ರುಗಳ ಮತ್ತು ದ್ರೋಹಿಗಳ ಹುತ್ತವಾಯಿತು.

ಇಂಥ ವಿದ್ರೋಹಿಗಳ ಪೈಕಿ ಸದಾಶಿವನಾಯಕ ಮತ್ತು ಬಸವಲಿಂಗನಾಯಕ ಎಂಬುವರು ಮುಖ್ಯರು. ಇವರಿಬ್ಬರು ತಮಗೆ ಸಿಂಹಾಸನದ ಹಕ್ಕು ಇದೆ ಎಂದು ಹೇಳಿಕೊಳ್ಳುತ್ತಾ ತಮ್ಮ ಸುತ್ತ ಸ್ವಾರ್ಥಿಗಳ ದಂಡನ್ನೇ ಕಟ್ಟಿತೊಡಗಿದ್ದರು. ಅದರಲ್ಲಿ ಆಸ್ಥಾನದ ಅನೇಕ ಹಿರಿಯರೂ, ರಾಜಬಂಧುಗಳೂ ಸೇರಿದ್ದರು. ಇವರಿಗೆ ದಿವಾನ ಪುಟ್ಟಣ್ಣನು ಮುಖಂಡನಾಗಿದ್ದನು. ಅವರು ಸಮಯ ಸಾಧಿಸಿ ಶಿವಪ್ಪನಾಯಕನನ್ನೂ, ದೊರೆಯಾದ ವೀರಭದ್ರ ನಾಯಕನನ್ನೂ ಕೊಂದು ಸಿಂಹಾಸನವನ್ನು ಏರಬೇಕು ಎಂದು ನಿಶ್ಚಯಿಸಿದರು.

ದೊರೆ ವೀರಭದ್ರನಾಯಕನಿಗೆ ತೀರ್ಥರಾಜಪುರವು ಬೇಸರವಾಯಿತು. ಮಲೆನಾಡಿನ ಸುಂದರ ಸ್ಥಳದಲ್ಲಿ ಪವಡಿಸಿದ್ದ ಆನಂದಪುರ ಪ್ರಿಯವಾಯಿತು. ಅವನು ಅಲ್ಲಿಗೆ ಹೋಗಿ ನೆಮ್ಮದಿಯಿಂದ ಇರತೊಡಗಿದನು.

ಸದಾಶಿವನಾಯಕನಿಗೆ ಇದೇ ಸುಸಂಧಿ ಎನ್ನಿಸಿತು. ತಾನು ಈಗ ರಾಜ ಆಗುವುದಕ್ಕೆ ಬಸವಲಿಂಗನಾಯಕನೇ ಅಡ್ಡಿ ಎಂದು ಅವನಿಗೆ ತೋರಿತು. ಅವನನ್ನು ಅರಮನೆಗೆ ರಹಸ್ಯ ಮಂತ್ರಾಲೋಚನೆಗೆ ಎಂದು ಹೇಳಿ ಕರೆಸಿ ಕೊಂಡ. ಅವನನ್ನು ಕಟುಕದ ವಂಶಕ್ಕೆ ಒಪ್ಪಿಸಿ, ಕೊಂದುಬಿಡಿ ಎಂದು ಹೇಳಿದ. ಕೊಲ್ಲುವುದೆಂದರೆ ಆ ಕಟುಕರಿಗೆ ಅಭ್ಯಾಸ. ಆದರೂ ಅವರಿಗೂ ಯಾವ ತಪ್ಪೂ ಮಾಡದ ಅವನನ್ನು ಕೊಲ್ಲಲು ಮನಸ್ಸಾಗಲಿಲ್ಲ. ಅವನ ಕೈಕಾಲುಗಳನ್ನು ಕತ್ತಿರಿಸಿ, ಅಂಗವಿಕಲನನ್ನಾಗಿ ಮಾಡಿ, ನಗರದ ನಿರ್ಜನ ಪ್ರದೇಶದಲ್ಲಿ ಎಸೆದು ಬಂದರು. ಕೂಡಲೇ ಗೂಢಚಾರರು ಈ ವಾರ್ತೆಯನ್ನು ತಂದು ಶಿವಪ್ಪನಾಯಕನಿಗೆ ಹೇಳಿದರು. ಅವನು ಆನಂದಪುರದಲ್ಲಿ ಇದ್ದ ವೀರಭದ್ರನಾಯಕನಿಗೆ ಈ ಸುದ್ಧಿ ಕಳುಹಿಸಿ, ಕೂಡಲೇ ಹೊರಟು ಬರಲು ಪತ್ರ ಬರೆದನು.

ಅವನು ಬರುವುದರೊಳಗೆ ನಿಷ್ಠಾವಂತ ಸೈನಿಕರೊಡನೆ ಹೊರಟು ಸದಾಶಿವನಾಯಕನಿಗೆ ಬಂಧಿಸಲು ನೋಡಿದನು. ಈ ಸುದ್ಧಿ ಸದಾಶಿವನಾಯಕನಿಗೆ ತಲುಪಿತು. ತನ್ನ ರಾಜದ್ರೋಹ ಬಯಲಾಗುವುದೆಂದು ಹೆದರಿ ಆ ರಾತ್ರಿಯೇ ಅಲ್ಲಿಂದ ಓಡಿಹೋಗಿ ತಲೆತಪ್ಪಿಸಿಕೊಂಡ.

ಅರಮನೆಯ ಮೇಲೆ ದಾಳಿಯಿಟ್ಟ ಶಿವಪ್ಪನಾಯಕನಿಗೆ ನಿರಾಶೆ ಕಾದಿತ್ತು. ವಿದ್ರೋಹದ ಹಕ್ಕಿ ಗೂಡಿಯಿಂದ ಹಾರಿ ಹೋಗಿ ಪಂಜರ ಬರಿದಾಗಿತ್ತು. ಅವನು ಸದಾಶಿವನಾಯಕನ ಆಸ್ತಿಯನ್ನು ತಾನೆ ವಶಪಡಿಸಿಕೊಂಡು, ಅವನ ಜಾಡನ್ನು ಹಿಡಿಯಲು ಗೂಢಚಾರರನ್ನು ಕಳುಹಿಸಿದನು.

ಸುತ್ತ ಶತ್ರುಗಳೇ

ಅವರು ಸದಾಶಿವನಾಯಕನು ಸೋದೆ ಮತ್ತು ಬಿಳಗಿ ದೊರೆಗಳ ಮರೆಹೊಕ್ಕಿರುವ ಸಂಗತಿಯನ್ನು ಪತ್ತೆ ಮಾಡಿ ಹಿಂದಿರುಗಿದರು.

ಶಿವಪ್ಪನಾಯಕನು ತಡಮಾಡದೆ ಸೈನ್ಯವನ್ನು ಸಜ್ಜುಗೊಳಿಸಿ, ಆ ರಾಜ್ಯಗಳ ಮೇಲೆ ದಂಡೆತ್ತಿ ಹೊರಟನು.

ಅವರು ಶಿವಪ್ಪನಾಯಕನ ಎದುರು ನಿಲ್ಲಲಾರದೆ ಬಿಜಾಪುರದ ಮುಸ್ಲಿಮರ ಸಹಾಯವನ್ನು ಯಾಚಿಸಿದರು. ಈ ಸಮಯದಲ್ಲಿ ಸದಾಶಿವನಾಯಕನು ಹಠಾತ್ತನೆ ಕಾಯಿಲೆಯಿಂದ ಮಲಗಿ ಮರಣ ಹೊಂದಿದನು. ಅಲ್ಲಿಗೆ ವಿದ್ರೋಹದ ಕಿಡಿ ಆರಿತೆಂದು ತಿಳಿದು ಶಿವಪ್ಪನಾಯಕನು ಹಿಂದಿರುಗಿ ಬಂದನು.

ಇಕ್ಕೇರಿ ಇಷ್ಟು ಏಳಿಗೆಗೆ ಬಂದದ್ದು ಬಿಜಾಪುರದ ಸುಲ್ತಾನನಿಗೆ ಸಂಕಟ, ಕೋಪ. ಆ ರಾಜ್ಯದ ಮೇಲೆ ದಂಡೆತ್ತಿ ಬರಲು ಅನುಕೂಲಕರವಾದ ಸಮಯಕ್ಕಾಗಿ ಕಾಯುತ್ತಿದ್ದನು. ಈಗ ಬಿಳಗಿ ಮತ್ತು ಸೋದೆ ಅರಸರಿಗೆ ಬೆಂಬಲವಾಗಿ ತನ್ನ ಸೈನ್ಯವನ್ನು ರಣದುಲ್ಲಾಖಾನನೆಂಬ ಸಮರ್ಥ ದಂಡನಾಯಕನ ಕೈಲಿ ಕೊಟ್ಟು ಇಕ್ಕೇರಿಯ ಸಂಪತ್ತನ್ನು ಸೂರೆ ಮಾಡಿ ಬರಲು ಕಳುಹಿಸಿಕೊಟ್ಟನು.

ಬಾಣಾವರ, ತರೀಕೆರೆ ಎರಡು ಸ್ಥಳಗಳಲ್ಲಿಯೂ ಪಾಳೆಯಗಾರರು ಆಳುತ್ತಿದ್ದರು. ಅವರೂ ಹಿಂದೂಗಳು. ಅವರಿಗೂ ದುರ್ಬುದ್ಧಿ ಬಂದಿತು. ಶಿವಪ್ಪನಾಯಕನ ಮೇಲಿನ ಹೊಟ್ಟೆಯ ಕಿಚ್ಚಿನಿಂದ ಅವರು ಬಿಜಾಪುರದ ಸುಲ್ತಾನನ ಕಡೆ ಸೇರಿದರು. ” ಬಿಜಾಪುರದ ಸುಲ್ತಾನ ಸೈನ್ಯ ತೆಗೆದುಕೊಂಡು ಬರುವ ಯೋಚನೆ ಮಾಡುತ್ತಿದ್ದಾನೆ” ಎಂದು ಗೂಢಚಾರರು ಶಿವಪ್ಪನಾಯಕನಿಗೆ ಸುದ್ದಿ ತಂದರು.

ಆದರೆ, “ತರೀಕೆರೆ ಮತ್ತು ಬಾಣಾವರದ ಪಾಳೆಯಗಾರರೂ ಅವನ ಕಡೆ,” ಎಂದು ಅವರು ಹೇಳಿದಾಗ ಶಿವಪ್ಪನಾಯಕನಿಗೆ ಆಶ್ಚರ್ಯವಾಯಿತು. ದುಃಖವಾಯಿತು. ನಿನ್ನೆ ವಿಜಯನಗರ, ಇವತ್ತು ಇಕ್ಕೇರಿ, ನಾಳೆ ತರೀಕೆರೆ, ಬಾಣಾವರ-ಇಷ್ಟು ಈ ಪಾಳೆಯಗಾರರಿಗೆ ತಿಳಿಯಬೇಡವೆ? ಒಂದೊಂದಾಗಿ ಹಿಂದೂ ರಾಜ್ಯಗಳನ್ನು ಸುಲ್ತಾನ ಬಾಯಿಗೆ ಹಾಕಿಕೊಳ್ಳುತ್ತಾನೆ ಎಂದು ಅರ್ಥ ಆಗಬೇಡವೆ?

ಈ ಇಕ್ಕಟ್ಟಿನಿಂದ ಪಾರಾಗುವ ದಾರಿ ಕಾಣದೆ ಶಿವಪ್ಪನಾಯಕನು ಸಂಧಾನದಿಂದ ಬಂದಿರುವ ವಿಪತ್ತನ್ನು ಪರಿಹರಿಸಿಕೊಳ್ಳಲು ಯೋಚಿಸಿದನು. ಅದರಂತೆ ನಿಯೋಗಿ ಶಂಕರನಾರಾಯಣ ಎಂಬುವನನ್ನು ಬಿಜಾಪುರಕ್ಕೆ ಕಳುಹಿಸಿದನು. ಶಂಕರನಾರಾಯಣನು ಅಲ್ಲಿನ ವಜೀರನ ಸ್ನೇಹಗಳಿಸಿದನು. ಬಿಜಾಪುರದವರಿಗೆ ಬಿಳಗಿ, ಸೋದೆಗಳನ್ನು ಬಿಟ್ಟುಕೊಡುವುದಾಗಿ ವಾಗ್ದಾನ ಮಾಡಿದನು.

ಆ ಧೂರ್ತರು ಇದಕ್ಕೆ ಒಪ್ಪಿಕೊಂಡಂತೆ ನಟಿಸಿದರು. ಶಿವಪ್ಪನಾಯಕನು ಅಪಾಯವು ಕರಗಿ ಹೋಯಿತು ಎಂದು ಮೈಮರೆತ, ಶತ್ರುಗಳು ಇದೇ ಸಮಯವನ್ನು ಸಾಧಿಸಿ, ಹಠಾತ್ತನೆ ಇಕ್ಕೇರಿಯ ಮೇಲೆ ದಾಳಿ ಇಟ್ಟರು.

ಅವರ ಧಾಳಿಗೆ ಪ್ರತಿಭಟನೆ ನೀಡಲು ಸಾಧ್ಯವಾಗದೆ ರಾಜಧಾನಿಯನ್ನು ಬಿಟ್ಟು ಪಾರಾಗುವುದೊಂದೇ ಶಿವಪ್ಪನಾಯಕನಿಗೆ ದಾರಿಯಾಯಿತು. ಅವನು ಇಕ್ಕೇರಿಯ ಸಮಸ್ತ ರಾಜ ಭಂಡಾರವನ್ನು ಭುವನಗಿರಿಯ ಅಜ್ಞಾತ ಸ್ಥಳಕ್ಕೆ ಸಾಗಿಸಿ ರಾಜಧಾನಿಯನ್ನು ಶತ್ರುಗಳಿಗೆ ದುರ್ಭೇದ್ಯವಾಗಿದ್ದ ಬಿದನೂರಿಗೆ ಬದಲಾಯಿಸಿದನು.

ಶತ್ರುಗಳು ಇಕ್ಕೇರಿಗೆ ಮುತ್ತಿಗೆ ಹಾಕಿ, ಅದನ್ನು ಸುಲಭವಾಗಿ ವಶಪಡಿಸಿಕೊಂಡರು. ಆದರೆ ಅಲ್ಲಿ ಅವರಿಗೆ ರಾಜಭಂಡಾರದಲ್ಲಿದ್ದ ಒಂದು ಕವಡೆಯೂ ಸಿಕ್ಕಲಿಲ್ಲ. ಇದರಿಂದ ರೋಸಿನ ಅವರು ಕೈಗೆ ಸಿಕ್ಕ ಗ್ರಾಮಗಳನ್ನು ಕೊಳ್ಳೆ ಹೊಡೆದರು. ಇಕ್ಕೇರಿಯನ್ನು ಸುಟ್ಟು ವೀರಭದ್ರನಾಯಕನ ಮೇಲೆ ಸೇಡು ತೀರಿಸಿಕೊಳ್ಳಲು ಹೊರಟರು. ಮೊದಲು ಅವನು ಕವಲೇದುರ್ಗದಲ್ಲಿ ತಲೆ ಮರೆಸಿಕೊಂಡನು. ಆನಂತರ ಶತ್ರುಗಳ ಉಪಟಳ ಸಹಿಸದೆ ಭುವನಗಿರಿಗೆ ಬಂದನು. ಅಲ್ಲಿಗೆ ಸೈನ್ಯಸಮೇತ ಹೋಗುವುದೆಂದರೆ ಸೈನಿಕರ ಜೀವಂತ ಸಮಾಧಿ ಎಂದು ರಣದುಲ್ಲಾಖಾನನು ಮನಗೊಂಡನು. ಚಾಣಾಕ್ಷನಾದ ಅವನು ಶತ್ರುಗಳೊಡನೆ ಗೌರವದ ಒಪ್ಪಂದಕ್ಕೆ ಬರಲು ನಿಶ್ಚಯಿಸಿದನು.

ಶಿವಪ್ಪನಾಯಕನು ರಾಮಕೃಷ್ಣಪ್ಪನೆಂಬ ವಕೀಲನನ್ನು ರಾಯಭಾರಿಯಾಗಿ ಕಳುಹಿಸಿ, ಸಂಧಾನದ ಷರತ್ತುಗಳನ್ನು ನಿರ್ಧರಿಸಿದನು. ಅದರಂತೆ ಬಿಜಾಪುರದವರು ತಾವು ಗೆದ್ದ ಪ್ರದೇಶವನ್ನು ಬಿಟ್ಟು ಹಿಂದಿರುಗಬೇಕೆಂದೂ ಯುದ್ಧದ ಖರ್ಚಿಗೆ  ಒಂದು ಲಕ್ಷ ವರಹವನ್ನು ಇಕ್ಕೇರಿಯವರು ಕೊಡಬೇಕೆಂದೂ ತೀರ್ಮಾನವಾಯಿತು.

ದ್ರೋಹಿಗಳಿಗೆ ಪಾಠ

ಹೀಗೆ ಶಿವಪ್ಪನಾಯಕನು ಮೈಮೇಲೆ ಬಂದಿದ್ದ ವಿಪತ್ತನ್ನು ಕಳೆದುಕೊಂಡನು. ಶತ್ರುಗಳನ್ನು ಕಳುಹಿಸಿಕೊಟ್ಟ ಮೇಲೆ ಶಿವಪ್ಪನಾಯಕನು ತನಗೆ ದ್ರೋಹ ಬಗೆದ ತರೀಕೆರೆ ಮತ್ತು ಬಾಣಾವರಗಳ ನಾಯಕರನ್ನು ವಿಚಾರಿಸಿಕೊಳ್ಳಲು ನಿಶ್ಚಯಿಸಿದನು.

ಅವನು ಅವರ ಮೇಲೆ ದೊಡ್ಡ ಸೈನ್ಯವನ್ನು ಕಳುಹಿಸಿ ದ್ರೋಹಿ ಪಾಳೆಯಗಾರರನ್ನು ಬಗ್ಗು ಬಡಿದ. ಬಿಜಾಪುರದವರಿಗೆ ಒಂದು ಲಕ್ಷ ವರಹ ಕೊಡಬೇಕಾಗಿತ್ತಲ್ಲವೆ? ಆ ಹಣವನ್ನು ತರೀಕೆರೆ ಮತ್ತು ಭಾಣಾವರಗಳ ಪಾಳೆಯಗಾರರಿಂದ ವಸೂಲು ಮಾಡಿದನು.

ಹೀಗೆ ಶಿವಪ್ಪನಾಯಕನು ಚಾಣಾಕ್ಷ ರಾಜನೀತಿಯಿಂದಾಗಿ ಒಂದೇ ಏಟಿಗೆ ಎರಡು ಹಕ್ಕಿಗಳು ನೆಲಕ್ಕೆ ಉರುಳಿದ್ದವು.

ಅವನ ಏಳಿಗೆಯನ್ನು ಕೆಲವರಿಗೆ ಸಹಿಸಲಾಗಲಿಲ್ಲ. ಒಂದು ಕಾಲದಲ್ಲಿ ಸ್ವಾಮಿನಿಷ್ಠೆಯಿಂದ ಇದ್ದ ದಿನಾನ್ ಪುಟ್ಟಣ್ಣನಂಥ ವ್ಯಕ್ತಿಗೂ ಸಹನವಾಗಲಿಲ್ಲ. ಅವನು ಶಿವಪ್ಪನಾಯಕನನ್ನು ನಿವಾರಿಸಿಕೊಳ್ಳಲು ಹೊಂಚು ಹಾಕುತ್ತಿದ್ದನು.

ಒಂದು ದಿನ ಪುಟ್ಟಣ್ಣನಿಗೆ ಅವನಿಗೆ ಬೇಕಾದ ಸುಸಂಧಿಯು ತಾನಾಗಿ ದೊರೆಯಿತು.

ಸಾಮಾನ್ಯವಾಗಿ ಶಿವಪ್ಪನಾಯಕನು ಬೆಂಗಾವಲು ಪಡೆಯಿಲ್ಲದೆ ರಾಜಧಾನಿಯನ್ನು ಸಂಚರಿಸುತ್ತಿದ್ದನು. ಅವನು ಆ ದಿನ ಯಾವುದೋ ಕಾರ್ಯಕ್ಕಾಗಿ ಸಾಗರಕ್ಕೆ ಹೋಗಬೇಕಾಯಿತು. ಅವನು ಹಿಂದಿರುಗುವಾಗ ಮಾರ್ಗ ಮಧ್ಯೆ ಅವನ ಮೇಲೆ ಬಿದ್ದು ಅವನನ್ನು ಕೊಂದು ಹಾಕಲು ಪುಟ್ಟಣ್ಣನು ಕೆಲವರನ್ನು ಕಳುಹಿಸಿದನು.

ಸುಂಕದ ಸೇನ ಬೊನಕೋನಪ್ಪಯ್ಯ ಎಂಬುವನು ಶಿವಪ್ಪನಾಯಕನ ಒಬ್ಬ ಸ್ನೇಹಿತ. ಇವನು ಹೇಗೋ ಪುಟ್ಟಣ್ಣನ ಸಂಚಿನ ವಿಷಯವನ್ನು ತಿಳಿದುಕೊಂಡ. ಶಿವಪ್ಪನಾಯಕನಿಗೆ ಈ ಸುದ್ದಿ ತಿಳಿಸಿ ಅವನನ್ನೂ ಅವನ ತಮ್ಮನನ್ನೂ ತನ್ನ ಮನೆಯಲ್ಲಿ ಅಡಗಿಸಿಟ್ಟ ಶಿವಪ್ಪ ನಾಯಕನು ಸಾಗರದಿಂದ ಹೊರಟು ಹೋದ ಎಂದು ಸುದ್ದಿ ಹರಡಿದ. ಆನಂತರ ಸೈನ್ಯ ಸಮೇತ ಹೋಗಿ ಆ ದ್ರೋಹಿಗಳನ್ನು ಹಿಡಿದು ಶಿಕ್ಷಿಸಲಾಯಿತು. ಒಳಹೊರಗಿನ ಶತ್ರುಗಳಿಂದ ರಾಜ್ಯವು ಮುಕ್ತವಾದ ಮೇಲೆ ಶಿವಪ್ಪನಾಯಕನು ನೆಮ್ಮದಿಯ ನಿಟ್ಟುಸಿರು ಬಿಡುವಷ್ಟರಲ್ಲೇ ಇನ್ನೊಂದು ವಿಪತ್ತು ಕಾದಿತ್ತು.

ದೊರೆ ವೀರಭದ್ರನಾಯಕನ ಪತ್ನಿ ವೀರಮ್ಮಾಜಿಯು ಹಾಸಿಗೆ ಹಿಡಿದು ಮಲಗಿ ಹಠಾತ್ತನೆ ತೀರಿಕೊಂಡಳು. ಇದರಿಂದ ಮೊದಲೇ ವೈರಾಗ್ಯಪರನಾಗಿದ್ದ ದೊರೆಗೆ ಜೀವನವು ನಿಸ್ಸಾರವಾಗಿ ತೋರಿತು. ಅವನು ರಾಜ್ಯಾಡಳಿತದಲ್ಲಿ ಆಸಕ್ತಿ ಕಳೆದುಕೊಂಡನು.

ಅವನು ಶಿವಪ್ಪನಾಯಕನಿಗೆ ತನ್ನ ಮನಸ್ಸಿನ ಅಂತರಾಳವನ್ನು ನಿವೇದಿಸಿಕೊಂಡನು. ತನಗೆ ರಾಜನೆಂಬ ಹೆಸರು ಬೇಡ, ದೂರವಾಗಿ ಜೀವನ ನಡೆಸುವ ಇಷ್ಟ ತನಗೆ ಎಂದು ಹೇಳಿದ. ತನ್ನನ್ನು ಅಧಿಕಾರದಿಂದ ಮುಕ್ತನನ್ನಾಗಿ ಮಾಡಲು ಬೇಡಿಕೊಂಡನು. ಅವನಿಗೆ ಮಕ್ಕಳಿರಲಿಲ್ಲ, ರಾಜ್ಯಕ್ಕೆ ಹತ್ತಿರದ ಹಕ್ಕುದಾರ ಶಿವಪ್ಪ ನಾಯಕನಾಗಿದ್ದನು. ಹೀಗಾಗಿ ಆಸ್ಥಾನಿಕರೆಲ್ಲರೂ ಶಿವಪ್ಪನಾಯಕನನ್ನೇ ದೊರೆಯಾಗಲು ಒತ್ತಾಯ ಪಡಿಸಿದರು. ಅವರ ಒತ್ತಾಯಕ್ಕೆ ಮಣಿದು ಶಿವಪ್ಪನಾಯಕನು ಕ್ರಿ.ಶ.೧೬೪೫ರಲ್ಲಿ ಬಿದನೂರಿನಲ್ಲಿ ಸಿಂಹಾಸನವನ್ನೇರಿದನು.

ಅಸಹಾಯಶೂರ

ಶಿವಪ್ಪನಾಯಕನಿಗೆ ಅರಸೊತ್ತಿಗೆಯು ಸುಖದ ಸುಪ್ಪತ್ತಿಗೆ ಆಗಲಿಲ್ಲ. ಅವನ ಬಾಲ್ಯದಿಂದಲೂ ಮಹತ್ವಾ ಕಾಂಕ್ಷಿಯಾದ ತರುಣನಾಗಿದ್ದನು. ಅವನ ಕಣ್ಣ ಮುಂದೆ ಹಿರಿಯ ವೆಂಕಟಪ್ಪನಾಯಕ ಆದರ್ಶವಾಗಿದ್ದನು . ಅವನು ಪರಿಸ್ಥತಿಯ ಲಾಭ ಪಡೆದಿದ್ದರೆ ಎಂದೋ ಇಕ್ಕೇರಿಯ ಪ್ರಭು ವಾಗಿ ಮೆರೆಯಬಹುದಾಗಿತ್ತು. ಹಿರಿಯ  ವೆಂಕಟಪ್ಪನಾಯಕ ನಿಗೇ ವಯಸ್ಸಾದ ಮೇಲೆ ಆಡಳಿತದಲ್ಲಿ ಹೆಚ್ಚು ಮನಸ್ಸಿರಲಿಲ್ಲ. ವೀರಭದ್ರನಾಯಕನಂತೂ ಎಂದೂ ಆಡಳಿತದಲ್ಲಿ ಆಸಕ್ತಿ ಇದ್ದವನಲ್ಲ. ಅವನನ್ನು ಶಿವಪ್ಪನಾಯಕನ ಸುಲುಭವಾಗಿ ಮೂಲೆಗೆ  ತಳ್ಳಬಹುದಾಗಿತ್ತು.  ಆದರೆ ಶಿವಪ್ಪನಾಯಕನು ಅವನ ಪರವಾಗಿ ಹೋರಾಡಿದನು. ಮಹಾಭಾರತದ ಭೀಷ್ಮನಂತೆ, ಅಧಿಕಾರ ತಾನಾಗಿ ಬಂದರೂ ಶಿವಪ್ಪನಾಯಕನು ಅದನ್ನು ತಿರಸ್ಕರಿಸಿ ವೆಂಕಟಪ್ಪನಾಯಕನ ಪುಣ್ಯ ಸಂತಾನಕ್ಕೆ ಸಿಂಹಾಸನವನ್ನು ಕಾಯ್ದಿರಿಸಲು ಶಕ್ತಿಮೀರಿ ದುಡಿದಿದ್ದನು.

ಅವನ ಈ ನಿಸ್ವಾರ್ಥ ಬುದ್ದಿಯೇ ಅವನಿಗೆ ಅನೇಕ ನಿಷ್ಠಾವಂತ ಸ್ನೇಹಿತರನ್ನೂ, ಸೇವಕರನ್ನು ದೊರಕಿಸಿ ಕೊಟ್ಟಿತ್ತು. ಅವನು ಆಡಳಿತದಲ್ಲಿ ದಕ್ಷನೂ, ದೂರದರ್ಶಿಯೂ, ಪ್ರಜಾವತ್ಸಲನೂ ಆಗಿದ್ದನು. ಜನತೆ ಅವನು ಸಿಂಹಾಸನವನ್ನೇರುವುದನ್ನು ವಿರೋಧಿಸಲಿಲ್ಲ. ಅವರಿಗೆ ಬಹುದಿನಗಳ ಕನಸು ನನಸಾದಂತೆ ಆಗಿತ್ತು. ಅವರು ಬಿದನೂರಿನ ಇತಿಹಾಸದಲ್ಲಿ ನೂತನ ಅಧ್ಯಾಯ ಆರಂಭವಾಯಿತೆಂದು ತಿಳಿದು ಹಿಗ್ಗಿದರು.

ಶಿವಪ್ಪನಾಯಕನು ದೊರೆಯಾದದ್ದು ಬಹಳ ಜನಕ್ಕೆ ಸಂತೋಷವೇ. ಆದರೆ ಒಬ್ಬಿಬ್ಬ ಸ್ವಾರ್ಥಿಗಳಿಗೆ ಇದು ಸಹನವಾಗಲಿಲ್ಲ ಅವರಲ್ಲಿ ಪರವಪ್ಪ ಮತ್ತು ಸಿದ್ದಪ್ಪ ಎಂಬ ಧೂರ್ತರು ಪ್ರಮುಖರಾಗಿದ್ದರು. ಅವರು ಆಸ್ಥಾನದಲ್ಲಿ ಪ್ರಬಲರಾಗಿದ್ದರು. ಶಿವಪ್ಪನಾಯಕನು ಅಧಿಕಾರಕ್ಕೆ ಬಂದರೆ ತಮ್ಮ ವರ್ಚಸ್ಸು ಬೆಳೆಯುವುದೆಂದು ನಿರೀಕ್ಷಿಸಿ, ಮೊದಲು ಶಿವಪ್ಪನಾಯಕನು ಅಧಿಕಾರಕ್ಕೆ ಬರಲು ನೆರವಾಗಿದ್ದರು. ಆದರೆ ಶಿವಪ್ಪನಾಯಕನು ಯಾರ ಕೈಗೊಂಬೆಯಾಗಲೂ ಇಷ್ಟಪಡಲಿಲ್ಲ. ಇದರಿಂದ ಆ ದ್ರೋಹಿಗಳಿಗೆ ನಿರಾಶೆಯಾಗಿತ್ತು.

ಶಿವಪ್ಪನಾಯಕನು ದೊರೆಯಾದರೆ ತಾವು ಅಮಾತ್ಯರಾಗುವ ಕನಸು ಕಟ್ಟಿದ್ದರು. ಆದರೆ ಹಾಗಾಗಲಿಲ್ಲ. ಅವರು ಮೊದಲು ಅಸಮಾಧಾನದ ಮೂಲಕ ಪ್ರತಿಭಟಿಸಿದರು. ಆನಂತರ ಶಿವಪ್ಪನಾಯಕನನ್ನು ಬಹಿರಂಗದಲ್ಲಿ ದೂಷಿಸತೊಡಗಿದರು.

ನಾಯಕನಿಗೆ ಪ್ರಧಾನಿ ದೊಡ್ಡ ತಮ್ಮರಸಯ್ಯ, ಬಸಪ್ಪದೇವರು, ಚೌಡಯ್ಯ ಮೊದಲಾದವರು ಮುಖ್ಯ ಅಧಿಕಾರಿಗಳಲ್ಲಿ ಇದ್ದುಕೊಂಡು ನೆರವಾಗುತ್ತಿದ್ದರು. ಪರವಪ್ಪ, ಸಿದ್ದಪ್ಪನಾಯಕರಿಗೆ ಕೆಲಸ ಮಾಡದೆ ಸೋಮಾರಿಗಳಾಗಿದ್ದ ಅಧಿಕಾರಿಗಳು ಕೆಲವರು ಬೆಂಬಲ ಕೊಟ್ಟರು. ಶಿವಪ್ಪನಾಯಕನು ಅಧಿಕಾರಿಗಳ ದಕ್ಷತೆಗೆ ಪುರಸ್ಕಾರ ನೀಡಿ ಪ್ರೋತ್ಸಾಹಿಸುತ್ತಿದ್ದುದು ಅವರಿಗೆ ಸಹಿಸದಾಗಿತ್ತು. ಅಂತಹವರಲ್ಲಿ ಕಡತದ ಕಛೇರಿಯಲ್ಲಿದ್ದ ಕೆಲವರು ಪರವಪ್ಪನ ಮಾತಿಗೆ ಕಿವಿಗೊಟ್ಟು ಕೆಲಸದ ನಿಮಿತ್ತ ಶಿಪ್ಪನಾಯಕ ಅಲ್ಲಿಗೆ ಬಂದಾಗ ಅವನನ್ನು ಹಿಡಿದು ಕೊಡುವುದಾಗಿ ವಾಗ್ದಾನ ಮಾಡಿದರು.

ಒಂದು ದಿನ ಇದಾವುದೂ ತಿಳಿಯದೆ ಶಿವಪ್ಪನಾಯಕನು ಕಡತದ ಕಛೇರಿಗೆ ಕಾರ್ಯನಿಮಿತ್ತವಾಗಿ ವೆಂಕಟಪ್ಪನೊಡನೆ ಬಂದನು.

ಶಿವಪ್ಪನಾಯಕನು ಕಛೇರಿಯ ಒಂದು ಕೊಠಡಿಗೆ ಹೋದ, ಅಲ್ಲಿ ಒಬ್ಬನೇ ಕೆಲಸ ಮಾಡಲಾರಂಭಿಸಿದ. ಕೆಲಸ ಮಾಡುತ್ತ ಸುತ್ತಲಿನ ಪ್ರಪಂಚವನ್ನೇ ಮರೆತು ಕೆಲಸದಲ್ಲಿಯೇ ಮಗ್ನನಾಗಿ ಹೋದ.

ದ್ರೋಹಿಗಳಾದ ಅಧಿಕಾರಿಗಳು ಇಂತಹ ಸಮಯಕ್ಕಾಗಿಯೇ ಕಾದಿದ್ದರು.

ಅವನು ಕೆಲಸ ಮಾಡುತ್ತಿದ್ದ ಕೋಣೆಯ ಬಾಗಿಲನ್ನು ಹಾಕಿ ಬೀಗ ಹಾಕಿಬಿಟ್ಟರು. ಅವನ ಶತ್ರುಗಳಾದ ಪರವಪ್ಪ ಮತ್ತು ಸಿದ್ಧಪ್ಪನಾಯಕರಿಗೆ ರಾಜನು ಸೆರೆ ಸಿಕ್ಕಿದ್ದಾನೆ ಎಂದು ಸುದ್ದಿ ಕಳುಹಿಸಿದರು.

ಏಕಾಕಿಯಾಗಿ ಶತ್ರುಗಳ ಕೈಗೆ ಸಿಕ್ಕಿಕೊಂಡ ಶಿವಪ್ಪನಾಯಕನಿಗೆ ದಿಗ್ಭ್ರಮೆಯಾಗಲಿಲ್ಲ, ಅವನು ತನ್ನಲ್ಲಿದ್ದ ನಾಗಮುರಿಯನ್ನು ತೆಗೆದುಕೊಂಡು ಸರಿಯಾದ ಸಮಯಕ್ಕಾಗಿ ಕಾದನು.

ಇಬ್ಬರು ಸೈನಿಕರು ಆಯುಧಗಳನ್ನು ಹಿಡಿದು, ಬಾಗಿಲನ್ನು ತೆರೆದುಕೊಂಡು ಒಳಕ್ಕೆ ಬಂದರು.

ಶಿವಪ್ಪನಾಯಕನು ಕ್ಷಣಮಾತ್ರದಲ್ಲಿ ಅವರ ಮೇಲೆ ಬಿದ್ದು ಅವರನ್ನು ತುಂಡರಿಸಿದನು. ಬಾಗಿಲು ತೆರೆದಿತ್ತು ಮಿಂಚಿನಂತೆ  ಹೊರಬಿದ್ದು ಮಾಯವಾದನು.

ಆನಂತರ ಅರಮನೆಗೆ ಹೋಗಿ ಈ ವಿದ್ರೋಹಕ್ಕೆ ಕಾರಣನಾದ ಅಧಿಕಾರಿಗಳನ್ನು ಬಂಧಿಸಿ ಅವರಿಗೆ ಉಗ್ರವಾದ ಶಿಕ್ಷೆ ವಿಧಿಸಿದನು. ಹೀಗೆ ಪಿತೂರಿಯನ್ನು ಮೊಳಕೆಯಲ್ಲೇ ಹೊಸಗಿ ಹಾಕಿದನು.

ಅವನು ಕೈಗೊಂಡ ಈ ಉಗ್ರದಂಡನೆಯಿಂದ ಅವನ ವಿರೋಧಿಗಳೆಲ್ಲರೂ ಎಚ್ಚರಗೊಳ್ಳುವಂತೆ ಆಯಿತು. ಅವರೆಲ್ಲರು ಹಲ್ಲು ಕಿತ್ತ ಸರ್ಪಗಳಂತಾಗಿ, ಶಿವಪ್ಪನಾಯಕನ ಮೇಲೆ ಸೇಡು ತೀರಿಸಿಕೊಳ್ಳಲಾಗದೆ, ರಾಜ್ಯವನ್ನು ಬಿಟ್ಟು ಹೋದರು. ಇನ್ನು ಕೆಲವರು ತಮ್ಮ ಅಕೃತ್ಯಕ್ಕೆ ವಿಷಾದಿಸಿ, ಕ್ಷಮಾಪಣೆ ಬೇಡಿ ಹೊಸ ಮನುಷ್ಯರೇ ಆದರು.

ಶಿವಪ್ಪನಾಯಕನು ರಾಜ್ಯಕ್ಕೆ ಇದ್ದ ಒಳಗಿನ ಶತ್ರುಗಳನ್ನು ನಿವಾರಿಸಿಕೊಂಡ ಮೇಲೆ ತನ್ನ ಗಮನವನ್ನು ಹೊರಗಿನ ಶತ್ರುಗಳ ಕಡೆ ಹರಿಸಿದನು.

ಅವನು ತನ್ನ ಏಳಿಗೆಯನ್ನು ಸಹಿಸದೆ ದಂಡೆತ್ತಿ ಬಂದ ಹೊಳೆನರಸೀಪುರ, ಚನ್ನರಾಯಪಟ್ಟಣ, ಮೈಸೂರು, ಹಾಸನಗಳ ದೊರೆಗಳನ್ನು ತರೀಕೆರೆ ಬಾಣಾವರ ಪಾಳೆಗಾರರನ್ನು ಗೆದ್ದು ಅವರಿಂದ ಕಪ್ಪ ಕಾಣಿಕೆಗಳನ್ನು ಪಡೆದನು. ಕೆಲವರಿಗೆ ಸ್ನೇಹ ಹಸ್ತ ನೀಡಿದನು. ಅದನ್ನು ತಿರಸ್ಕರಿಸಿದವರ ರಾಜ್ಯಗಳನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡನು.

ಶೌರ್ಯಕ್ಕೆ ತಕ್ಕ ವಿಚಕ್ಷಣೆ

ಶಿವಪ್ಪನಾಯಕನು ತನ್ನ ಸೈನ್ಯವನ್ನು ಸಜ್ಜುಗೊಳಿಸಿ ಅರಬ್ಬಿ ಸಮುದ್ರದ ಕರಾವಳಿಯಲ್ಲಿ ನೆಲಸಿದ್ದ ವಿದೇಶೀಯರಾದ ಪೋರ್ಚಗೀಸರ ಪ್ರಾಬಲ್ಯವನ್ನು ಮುರಿದು ಅವರ ಹಾವಳಿಯನ್ನು ಅಡಗಿಸಿ ಪ್ರಜೆಗಳಿಗೆ ನೆಮ್ಮದಿಯನ್ನುಂಟು ಮಾಡಿದನು. ಅಲ್ಲದೆ ಅವನು ತನ್ನ ಬಾಹುಬಲ ಮತ್ತು ಪರಾಕ್ರಮಗಳಿಂದ, ಶಿರಸಿ, ಬನವಾಸಿ, ಹೇರೂರು, ಚೋಳೂರು ಮತ್ತು ಸೋದೆಗಳನ್ನು ಗೆದ್ದು ಅಲ್ಲಿನ ದೊರೆಗಳಿಂದ ಕಪ್ಪ ಕಾಣಿಕೆಗಳನ್ನು ಪಡೆದನು. ಶಿವಪ್ಪನಾಯಕನ ಕಾಲದಲ್ಲಿ ಇಕ್ಕೇರಿ ರಾಜ್ಯವು ಪಶ್ಚಿಮದಲ್ಲಿ ಅರಬ್ಬೀ ಸಮುದ್ರದವರೆಗೂ, ಪೂರ್ವದಲ್ಲಿ ಚಿತ್ರದುರ್ಗದವರೆಗೂ,ದಕ್ಷಿಣದಲ್ಲಿ ಶ್ರೀರಂಗಪಟ್ಟಣದವರೆಗೂ, ಉತ್ತರದಲ್ಲಿ ಬಿಜಾಪುರ ಮತ್ತು ಮಹಾರಾಷ್ಟ್ರ ಸೀಮೆಗಳ ಗಡಿಯವರೆಗೂ ವಿಸ್ತರಿಸಿತ್ತು. ಈ ಎಲ್ಲ ಪ್ರದೇಶಗಳಲ್ಲಿ ಶಿವಪ್ಪನಾಯಕನು ಕಂದಾಯದ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದು ರಾಜ್ಯಾದಾಯವನ್ನು ಹೆಚ್ಚಿಸಿದನು. ಈ ವ್ಯವಸ್ಥೆಯು “ಶಿವಪ್ಪನಾಯಕನ ಶಿಸ್ತು” ಎಂಬ ಹೆಸರಿನಲ್ಲಿ ಬಹಳ ಕಾಲದವರೆಗೆ ಜಾರಿಯಲ್ಲಿತ್ತು.

ರಾಜ್ಯದಲ್ಲಿ ಭೂಮಿಯ ಮೇಲೆ ಕಂದಾಯ ವಸೂಲು ಮಾಡಬೇಕಲ್ಲವೇ? ಜನರು ಕಂದಾಯ ಕೊಟ್ಟರೆ ಸರ್ಕಾರಕ್ಕೆ ಆಡಳಿತ ನಡೆಸಲು ಹಣ. ಆದರೆ ಒಂದು ಕಡೆ ಭೂಮಿ ತುಂಬ ಫಲವತ್ತಾಗಿರುತ್ತದೆ. ಒಳ್ಳೆಯ ಬೆಳೆ ಬರುತ್ತದೆ. ಇನ್ನೊಂದು ಕಡೆ ಅಷ್ಟು ಫಲವತ್ತಾಗಿರದೆ, ಬೆಳೆ ಪಡೆಯಲು ಸ್ವಲ್ಪ ಕಷ್ಟಪಡಬೇಕು. ಮತ್ತೊಂದು ಕಡೆ, ಕಷ್ಟಪಟ್ಟರೂ ಹೆಚ್ಚು ಬೆಳೆ ಬರುವುದಿಲ್ಲ ಅಲ್ಲವೆ? ಆದುದರಿಂದ, ನಾಯಕನು ರಾಜ್ಯದ ಭೂಮಿಯನ್ನು ಭೂಗುಣದ ಆಧಾರದ ಮೇಲೆ ಬೇರೆ ಬೇರೆ ವಿಂಗಡಿಸಿದನು. ಮರಳು ಮಿಶ್ರಿತ ವಾದ ಎರೆ ಮಣ್ಣಿನಿಂದ ಕೂಡಿದ ಭೂಮಿಯನ್ನು ಉತ್ತಮ ಭೂಮಿ ಎಂದೂ. ಬಯಲಾಗಿರುವ ಕೆಮ್ಮಣ್ಣು ಭೂಮಿ ಯನ್ನು ಮಧ್ಯಮ ಭೂಮಿ ಎಂದೂ, ನೀರಿನ ಸೌಕರ್ಯವುಳ್ಳ ಕರಿಮಣ್ಣಿನ ಭೂಮಿಯನ್ನು ಕರಿಭೂಮಿ ಎಂದೂ, ತೇವವಿಲ್ಲದ ಗಟ್ಟಿಯಾದ ಭೂಮಿಯನ್ನು ಅಧಮ ಭೂಮಿ ಎಂದೂ ವರ್ಗೀಕರಿಸಿ ಇವುಗಳ ಫಸಲಿಗೆ ಅನುಗುಣವಾಗಿ ಕಂದಾಯವನ್ನು ವಿಧಿಸಿದ್ದನು. ಅಲ್ಲದೆ ಅಡಿಕೆ, ಏಲಕ್ಕಿ, ಮೆಣಸು ಇವುಗಳ ಮೇಲೆ ತೆರಿಗೆಯನ್ನು ವಿಧಿಸಿ ಏಕಮಾನವೆಂಬ ಹೊಸ ಪದ್ಧತಿ ಜಾರಿಗೆ ತಂದನು.

ಇಂತಹ ಶಿಸ್ತುಗಾರ ಶಿವಪ್ಪನಾಯಕನ ಬಳಿಗೆ ಸಾಮ್ರಾಟ ಶ್ರೀರಂಗರಾಯನು ಆಶ್ರಯ ಬೇಡಿ ಬಂದಿದ್ದನು.

ಕಡೆಯವರೆಗೆ ಹೋರಾಟವೇ

ಸಾಮ್ರಾಟ ಶ್ರೀರಂಗರಾಯನಿಗಾದ ಪರಾಭವವು ಶಿವಪ್ಪನಾಯಕನಿಗೆ ಒಂದು ಮರೆಯಲಾಗದ ಪಾಠವನ್ನು ಕಲಿಸಿತ್ತು. ಪೂಜ್ಯ ವಿದ್ಯಾರಣ್ಯರ ತಪಸ್ಸಿನ ಫಲವಾಗಿ, ಭುವನೇಶ್ವರಿಯ ಅನುಗ್ರಹದಿಂದ, ಕನ್ನಡಿಗರಾದ ಹಕ್ಕ-ಬುಕ್ಕರ ಶೌರ್ಯ ಸಾಹಸಗಳಿಂದ ಅಸ್ತಿತ್ವಕ್ಕೆ ಬಂದ ವಿಜಯನಗರ ಸಾಮ್ರಾಜ್ಯವು ಮೂರೂವರೆ ಶತಮಾನಗಳು ವೈಭವವಾಗಿ ಬಾಳಿತ್ತು. ಅದು ನಾಶ ಹೊಂದಲು ಕಾರಣ ಯಾರು? ಹೊರಗಿನ ಶತ್ರುಗಳಾದ ಮುಸಲ್ಮಾನರೇ? ಒಳಗಿನ ಶತ್ರುಗಳಾದ ಸ್ವಾರ್ಥಸಾಧಕ ಸಾಮಂತರೇ?

ಇವೆರಡು ಕಾರಣಗಳೂ ಇದ್ದವು, ನಿಜ. ಆದರೆ ಇವುಗಳಿಗಿಂತಲೂ ಪ್ರಬಲವಾದ ಬೇರೊಂದು ಸಂಗತಿಯು ಸಾಮ್ರಾಜ್ಯದ ನಾಶಕ್ಕೆ ಕಾರಣವಾಯಿತೆಂದು ಶಿವಪ್ಪನಾಯಕನ ಭಾವನೆ. ಮುಸಲ್ಮಾನ ಸುಲ್ತಾನರು ಒಟ್ಟುಗೂಡಿದುದು ಒಂದು ಕಾರಣ. ಆದರೆ ವಿಜಯನಗರದ ರಾಜರು ಬಹಳ ದುಡುಕು ಸ್ವಭಾವದವರಾಗಿದ್ದರು. ಹಲವರು ಅಧಿಕಾರಿಗಳು ತಮ್ಮ ಅಧಿಕಾರ, ಹಣ ಇವನ್ನೇ ಯೋಚಿಸಿದರು. ರಾಜ್ಯದ ಹಿತವನ್ನು ಮರೆತರು. ರಾಜನೀತಿ, ವಿಜಯನಗರದ ಜನರ ಏಳಿಗೆ, ಬೀಳು ಎಲ್ಲ ಕೆಲವೇ ಜನ ಪ್ರಮುಖರ ಕೈಯಲ್ಲಿತ್ತು. ಆ ಕೆಲವರು ಕೆಟ್ಟವರಾದರೆ ರಾಜ್ಯಕ್ಕೆ ವಿನಾಶ ಇವೆಲ್ಲಕ್ಕಿಂತ ಪ್ರಬಲ ಕಾರಣವೆಂದರೆ ಹಿಂದೂಗಳ ರಾಷ್ಟ್ರೀಯ ಭಾವನೆಯ ಅಭಾವ. ಅವರು ಪರಸ್ಪರ ದ್ವೇಷಾಸೂಯೆಗಳಲ್ಲಿ ತೊಡಗಿ ರಾಷ್ಟ್ರದ ಹಿತವನ್ನು ಮರೆತು ಸರ್ವನಾಶವನ್ನು ತಂದು ಕೊಂಡಿದ್ದರು.

ಶ್ರೀರಂಗರಾಯನಿಗೆ ಇಕ್ಕೇರಿಯ ದೊರೆ ಶಿವಪ್ಪನಾಯಕನು ಆಶ್ರಯ ಕೊಟ್ಟುದು ಮೈಸೂರು ದೊರೆಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಮೊದಲಿನಿಂದಲು ಶಿವಪ್ಪನಾಯಕನ ಏಳಿಗೆಯನ್ನು ನೋಡಿ ಅವರಿಗೆ ಸಹಿಸದಾಗಿತ್ತು. ಅಲ್ಲದೆ ಬೇಲೂರಿನ ಕೃಷ್ಣಪ್ಪನಾಯಕನು ಮೈಸೂರು ದೊರೆಗಳ ಮಿತ್ತನಾಗಿದ್ದನು. ಅವನ ಕೈಯಿಂದ ಶಿವಪ್ಪನಾಯಕನು ಸಕ್ಕರೆಪಟ್ಟಣವನ್ನು ಕಿತ್ತುಕೊಂಡು ಶ್ರೀರಂಗರಾಯನಿಗೆ ಕೊಟ್ಟದ್ದು ಮೈಸೂರಿನ ರಾಜರಿಗೆ ಸಹಿಸಲಾಗಲಿಲ್ಲ.

ಆಗ ಮೈಸೂರಿನ ದೊರೆ ದೊಡ್ಡದೇವರಾಜ, ತನಗಿಂತಲೂ ಶಿವಪ್ಪನಾಯಕ ಶಕ್ತಿವಂತ ಎಂದು ಗೊತ್ತು. ಅವನು ಬಿಜಾಪುರ ಸುಲ್ತಾನನ ಸಹಾಯವನ್ನು ಯಾಚಿಸಿದನು. ಮುಸಲ್ಮಾನರು ತನಗೆ ಸಹಾಯ ಮಾಡಿದರೆ ಶಿವಪ್ಪನಾಯಕನಿಂದ ಬೇಲೂರನ್ನು ಗೆದ್ದುಕೊಂಡು ಅವರಿಗೆ ಕೊಡುವುದಾಗಿ ಅವನು ವಾಗ್ದಾನ ಮಾಡಿದನು.

ಈ ವಾರ್ತೆ ಶಿವಪ್ಪನಾಯಕನಿಗೆ ತಿಳಿಯಿತು. ತಡ ಮಾಡುವುದರಿಂದ ಸರ್ವನಾಶವಾಗುವುದೆಂದು ಯೋಚಿಸಿದ. ತನ್ನಸಮಸ್ತ  ಸೈನ್ಯದೊಡನೆ ಶ್ರೀರಂಗಪಟ್ಟಣದ ಮೇಲೆ ದಂಡೆತ್ತಿ ಹೊರಟನು. ಅವನ ಸೈನ್ಯದಲ್ಲಿ ಸುಮಾರು ಒಂದು ಲಕ್ಷ ಆನೆ, ಕುದುರೆ, ಪದಾತಿ ದಳಗಳು ಇದ್ದವು.

ಶತ್ರುಗಳನ್ನು ನಡುದಾರಿಯಲ್ಲಿ ತಡೆಯಲು ಮೈಸೂರಿನ ದಳವಾಯಿ ಹಂಪರಾಜನು ಶಾಂತಿಗ್ರಾಮ ಎಂಬಲ್ಲಿ ಎದುರಾಗಿ ಯುದ್ಧ ಮಾಡಿದನು. ಈ ಯುದ್ಧದಲ್ಲಿ ಮೈಸೂರಿನವರಿಗೆ ಸಂಪೂರ್ಣವಾಗಿ ಸೋಲಾಯಿತು. ದಳವಾಯಿಯು ತನ್ನ ಇತರ ದಳಪತಿಗಳೊಡನೆ ಶಿವಪ್ಪನಾಯಕನಿಗೆ ಸೆರೆ ಸಿಕ್ಕಿದನು. ಇದರಿಂದ ಉತ್ತೇಜಿತನಾಗಿ ಶಿವಪ್ಪನಾಕಯನು ಶ್ರೀರಂಗಪಟ್ಟಣವನ್ನು ಗೆಲ್ಲಲು ತನ್ನ ಸೈನ್ಯವನ್ನು ನಡೆಸಿಕೊಂಡು ಬಂದು ಪಟ್ಟಣದ ಹೊರವಲಯದಲ್ಲಿ ಬೀಡುಬಿಟ್ಟನು.

ಇದೇ ಸಮಯದಲ್ಲಿ ಮೈಸೂರಿನವರಿಗೆ ಸಹಾಯ ಮಾಡಲು ಬಿಜಾಪುರದ ಸೈನ್ಯವು ಬಹದ್ದೂರ್ ಖಾನನ ನೇತೃತ್ವದಲ್ಲಿ ಬರುತ್ತಿರುವ ಸಂಗತಿಯು ಶಿವಪ್ಪನಾಯಕನಿಗೆ ತಿಳಿಯಿತು. ಮೈಸೂರು, ಬಿಜಾಪುರ ಎರಡು ರಾಜ್ಯಗಳ ಸೈನ್ಯಗಳನ್ನು ತನ್ನ ಒಂದು ಸೈನ್ಯ ಎದುರಿಸಲಾರದು ಎಂಬುದು ಅವನಿಗೆ ಸ್ಪಷ್ಟವಾಯಿತು. ನಾಯಕ ಬುದ್ಧಿವಂತ. ಹೇರಳವಾಗಿ ಹಣವನ್ನು ಕೊಟ್ಟು ಮುಸಲ್ಮಾನ ದಂಡನ್ನು ಬಂದ ದಾರಿಯಲ್ಲೇ ಹಿಂದಿರುಗಿಸಿದನು. ಇದರಿಂದ ಮೈಸೂರಿನವರಿಗೆ ಗಾಬರಿಯಾಯಿತು.

ಶಿವಪ್ಪನಾಯಕನು ಬಿರುಗಾಳಿಯಂತೆ ಶ್ರೀರಂಗಪಟ್ಟಣದ ಕೋಟೆಯನ್ನು ಮುತ್ತಿ ಅದನ್ನು ಗೆದ್ದುಕೊಳ್ಳಲು ಸಾಹಸದಿಂದ ಹೋರಾಡಿದನು. ಈ ಸಮಯದಲ್ಲಿ ಪಟ್ಟಣವು ಶತ್ರುಗಳಿಗೆ ವಶವಾಗುವುದೆಂದು ಹೆದರಿದ ದೊಡ್ಡ ದೇವರಾಜನು ಶಿವಪ್ಪನಾಯಕನನ್ನು ಹಿಮ್ಮೆಟ್ಟಿಸಲು ಒಂದು ಕುತಂತ್ರವನ್ನು ಮಾಡಿದನು. ಅವನು ವಾಮಾಚಾರದ ಮೂಲಕವಾಗಿ ಮಾಟಮಂತ್ರಗಳನ್ನು ಮಾಡಿಸಿ ಶಿವಪ್ಪನಾಯಕನ ಆರೋಗ್ಯವನ್ನು ಕೆಡಿಸಿ ಅವನನ್ನು ಧಾಳಿಯಿಂದ ಹಿಮ್ಮೆಟ್ಟಿಸಲು ಆಲೋಚಿಸಿದನು.

ಅದರಂತೆ ಕೇರಳದ ಒಬ್ಬ ಮಾಟಗಾರನನ್ನು ಅವರು ಈ ಕೆಲಸಕ್ಕೆ ನಿಯೋಜಿಸಿದರು. ಅವನ ಮಾಟದಿಂದಲೋ ದುರದೃಷ್ಟದಿಂದಲೋ ಅಂತೂ ಶಿವಪ್ಪನಾಯಕನು ಅನಾರೋಗ್ಯದಿಂದ ಹಾಸಿಗೆ ಹಿಡಿದನು. ಅವನು ತನ್ನ ಮುತ್ತಿಗೆಯನ್ನು ಕಿತ್ತು ಬಿದನೂರಿಗೆ ಹಿಂದಿರುಗಬೇಕಾಯಿತು.

ಶಿವಪ್ಪನಾಯಕನು ರಾಜಧಾನಿಗೆ ಹಿಂದಿರುಗಿದವನು ಮತ್ತೆ ಮೊದಲಿನಂತೆ ಆಗಲಿಲ್ಲ. ಈ ಕಾಯಿಲೆಯೇ ನೆಪವಾಗಿ ೧೬೬೦ರಲ್ಲಿ ಮಡಿದನು. ಸಾಮ್ರಾಟ್ ಶ್ರೀರಂಗರಾಯನಿಗೆ ಆಶ್ರಯ ಕೊಟ್ಟ ಶಾಂತಿ, ಸಮಾಧಾನಗಳಿಂದ ಅವನು ಕಣ್ಮುಚ್ಚಿಕೊಂಡಿದ್ದನು.

ಶಿವಪ್ಪನಾಯಕನು ಕೆಳದಿಯನ್ನಾಳಿದ ದೊರೆಗಳಲ್ಲೆಲ್ಲಾ ಅತ್ಯಂತ ಸುಪ್ರಸಿದ್ಧನಾದ ದೊರೆ. ಇಕ್ಕೇರಿಯ ಇತಿಹಾಸದಲ್ಲಿ ಅವನ ಆಳ್ವಿಕೆಯು ಒಂದು ಸುವರ್ಣ ಅಧ್ಯಾಯ ಎನ್ನಬಹುದು. ಅವನ ಹೆಸರು ದೇಶ ವಿದೇಶಗಳಿಗೆ ಹಬ್ಬಿತ್ತು.

ಶಿವಪ್ಪನಾಯಕನು ದೈವಭಕ್ತನಾಗಿದ್ದನು. ಅವನು ಶೈವನಾಗಿದ್ದರೂ ಎಲ್ಲ ಧರ್ಮಗಳನ್ನು ಸಮಾನ ದೃಷ್ಟಿಯಿಂದ ನೋಡುತ್ತಿದ್ದನು. ಬ್ರಾಹ್ಮಣರಿಗೆ ಅಗ್ರಹಾರವನ್ನೂ, ಶೈವರಿಗೆ ಶಿವಪುರಿಗಳನ್ನೂ ಕಟ್ಟಿಸಿ ಕೊಟ್ಟಿದ್ದನು. ಅನೇಕ ಪುರಾತನ ದೇವಮಂದಿರಗಳನ್ನು ಜೀರ್ಣೋದ್ದಾರ ಮಾಡಿಸಿ ದತ್ತಿಗಳನ್ನು ಬಿಟ್ಟನು. ಅವನಿಗೆ ಸಾಹಿತ್ಯ ಕಲೆಗಳಲ್ಲಿ ಆಸಕ್ತಿಯಿತ್ತು. ಯೋಗಶಾಸ್ತ್ರದಲ್ಲೂ ಒಲವಿತ್ತು.

ಶಿವಪ್ಪನಾಯಕನು ಸಂಸಾರದ ಜೀವನದಲ್ಲಿ ಸುಖಿಯಾಗಿದ್ದನು. ಅವನಿಗೆ ಇಬ್ಬರು ಹೆಂಡತಿಯರು; ಒಬ್ಬ ಮಗ, ಒಬ್ಬ ಮಗಳು ಇದ್ದರು.

ರಣರಂಗದಲ್ಲಿ ಅಸಮಾನವೀರ, ಆಡಳಿತದಲ್ಲಿ ನ್ಯಾಯವಂತ, ದಕ್ಷ, ಪ್ರಜೆಗಳ ಹಿತವನ್ನೇ ಬಯಸಿದವನು- ಶಿವಪ್ಪನಾಯಕ, ಉದಾತ್ತ ಚೇತನ.