ಕರ್ನಾಟಕವು ತನ್ನದೇ ಆದ ಸುದೀರ್ಘ ಪರಂಪರೆಯನ್ನು ಹೊಂದಿದೆ. ಅದರಲ್ಲಿ ಶಿವಮೊಗ್ಗ ಜಿಲ್ಲೆಯ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ. ಶಿವಮೊಗ್ಗವನ್ನು ಆಳಿದ ರಾಜ ಮನೆತನಗಳು/ ಸಂಸ್ಥಾನಗಳು ಈ ಕೆಳಕಂಡಂತೆ ಇವೆ.

 

ಶಿವಮೊಗ್ಗವನ್ನು ಆಳಿದ ರಾಜಮನೆತನಗಳು/ಸಂಸ್ಥಾನಗಳು ಕಾಲ

೧. ಕದಂಬರು ಕ್ರಿ.ಶ. ೩೪೫ ರಿಂದ ಕ್ರಿ.ಶ.೩೫೦

೨. ಗಂಗರು ಕ್ರಿ.ಶ. ೩೫೦ ರಿಂದ ಕ್ರಿ.ಶ. ೫೪೦

೩. ಬಾದಾಮಿ ಚಾಲುಕ್ಯರು ಕ್ರಿ.ಶ. ೩೪೦ ರಿಂದ ಕ್ರಿ.ಶ.೭೫೩

೪. ರಾಷ್ಟ್ರಕೂಟರು ಕ್ರಿ.ಶ. ೭೫೩ ರಿಂದ ಕ್ರಿ.ಶ. ೭೩

೫. ಕಲ್ಯಾಣ ಚಾಲುಕ್ಯರು ಕ್ರಿ.ಶ. ೯೭೩ ರಿಂದ ಕ್ರಿ.ಶ. ೧೧೭೩

೬. ಯಾದವರು ಕ್ರಿ.ಶ. ೧೧೭೩ ರಿಂದ ಕ್ರಿ.ಶ. ೧೩೧೮

೭. ಹೊಯ್ಸಳರು ಕ್ರಿ.ಶ.೧೧೦೮ ರಿಂದ ಕ್ರಿ.ಶ. ೧೩೪೩

೮. ವಿಜಯನಗರ ಸಾಮ್ರಾಜ್ಯ ಕ್ರಿ.ಶ. ೧೩೩೬ ರಿಂದ ಕ್ರಿ.ಶ. ೧೫೬೫

೯. ಬಹುಮನಿಗಳು ಕ್ರಿ.ಶ.೧೩೪೭ ರಿಂದ ಕ್ರಿ.ಶ. ೧೪೮೧

೧೦. ಆದಿಲ್ ಷಾಹಿಗಳು ಕ್ರಿ.ಶ. ೧೪೮೯ ರಿಂದ ಕ್ರಿ.ಶ.೧೬೮೬

೧೧. ಕೆಳದಿ ರಾಜ್ಯ ಕ್ರಿ.ಶ. ೧೫೮೬ ರಿಂದ ಕ್ರಿ.ಶ. ೧೭೬೩

೧೨. ಮೈಸೂರು ಅರಸರು ಕ್ರಿ.ಶ. ೧೫೭೮ ರಿಂದ ಕ್ರಿ.ಶ. ೧೭೯೯

ಶಿವಮೊಗ್ಗ ಎಂಬ ಹೆಸರು ಶಿವ-ಮುಖ, ಸಿಹಿಮೊಗೆ ಎಂಬ ಹೆಸರಿನಿಂದ ಬಂದಿದೆ ಎನ್ನಲಾಗುತ್ತದೆ. ಶಿವಮೊಗ್ಗ ಜಿಲ್ಲೆಯ ಇತಿಹಾಸವು ಕರ್ನಾಟಕದ ಇತಿಹಾಸವೇ ಎಂದು ಹೇಳಬಹುದಾಗಿದೆ. ರಾಜ್ಯದ ಅತಿ ಹೆಚ್ಚು ರಾಜಮನೆತನಗಳು ಈ ಸಂಪದ್ಭರಿತವಾದ ಪ್ರದೇಶವನ್ನು ಆಳಿದವು. ಬನವಾಸಿಯ ಕದಂಬರಿಂದ ಪಾರಂಭವಾಗಿ ಚಾಲುಕ್ಯರ, ರಾಷ್ಟ್ರಕೂಟರ, ಕಲ್ಯಾಣ ಚಾಲುಕ್ಯರು, ಹೊಯ್ಸಳರು, ವಿಜಯನಗರಸಾಮ್ರಾಜ್ಯ ಮತ್ತು ಅಂತಿಮವಾಗಿ ಮೈಸೂರಿನ ಒಡೆಯರು ಈ ಜಿಲ್ಲೆಯನ್ನು ಆಳಿದರು.

ಶಿವಮೊಗ್ಗ ಜಿಲ್ಲೆಯ ಮಲೆನಾಡು ಪ್ರದೇಶವಾಗಿದೆ. ಇದನ್ನು ’ಮಲೆನಾಡಿನ ಹೆಬ್ಬಾಗಿಲು’ ಎಂದು ಕರೆಯಬಹುದಾಗಿದೆ. ಶಿವಮೊಗ್ಗ ಜಿಲ್ಲೆಯ ಸುತ್ತಲೂ ಹಾವೇರಿ, ದಾವಣಗೆರೆ, ಚಿಕ್ಕಮಗಳೂರು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿವೆ.

ಶಿವಮೊಗ್ಗ ಜಿಲ್ಲೆಯ ೮೪೬೫ ಚದರ ಕಿ.ಮೀ. ವಿಸ್ತೀರ್ಣವನ್ನು ಹೊಂದಿದೆ. ಜಿಲ್ಲೆಯ ಕೊಡಚಾದ್ರಿಯು ೧೩೪೩ ಮೀ. ಸಮುದ್ರ ಮಟ್ಟದಿಂದ ಎತ್ತರದಲ್ಲಿದೆ.

 

ಜಿಲ್ಲೆಯ ಭೌಗೋಳಿಕ ಹಿನ್ನಲೆ

ಶಿವಮೊಗ್ಗ ಜಿಲ್ಲೆಯ ಸಮುದ್ರ ಮಟ್ಟದಿಂದ ಸರಾಸರಿ ೬೪೦ ಮೀ. ಎತ್ತರದಲ್ಲಿದೆ. ಪಶ್ಚಿಮದಲ್ಲಿ ಪಶ್ಚಿಮ ಘಟ್ಟಗಳು ಅಥವಾ ಸಹ್ಯಾದ್ರಿ ಬೆಟ್ಟಗಳು ಇವೆ, ಘಟ್ಟಗಳಿಂದ ಜಿಲ್ಲೆಯಲ್ಲಿ ಅನೇಕ ನದಿಗಳು ಹರಿದು ಜಿಲ್ಲೆಗೆ ನೈಸರ್ಗಿಕ ಸೌಂದರ್ಯವನ್ನು ಕೊಡುತ್ತವೆ. ಅನೇಕ ಸರೋವರಗಳು, ಕೆರೆಗಳು, ನದಿಗಳು ಭೂಮಿಯನ್ನು ಕೃಷಿಯೋಗ್ಯವನ್ನಾಗಿ ಮಾಡಿವೆ. ಶಿವಮೊಗ್ಗ ಜಿಲ್ಲೆಯನ್ನು ’ಕರ್ನಾಟಕದ ಅಕ್ಷಯ ಪಾತ್ರೆ’ ಎಂದು ಕರೆಯಲಾಗಿದೆ.

ಜಿಲ್ಲೆಯಲ್ಲಿ ಶರಾವತಿ, ತುಂಗಾ, ಕುಮದ್ವತಿ, ವರದಾ, ಭದ್ರಾ ನದಿಗಳು ಹರಿಯುತ್ತವೆ. ತುಂಗಾ ಮತ್ತು ಭದ್ರಾನದಿಗಳು ಕೂಡಲಿ ಎಂಬಲ್ಲಿ ಸಂಗಮವಾಗಿ ತುಂಗಭದ್ರವಾಗಿ ಹರಿಯುತ್ತವೆ.

ಜಿಲ್ಲೆಯಲ್ಲಿ ಉತ್ತಮ ಮುಂಗಾರು ಮಳೆಯಾಗುವುದರಿಂದ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತದೆ. ಹೆಚ್ಚಾಗಿ ಭತ್ತ, ಜೋಳದ ಜೊತೆಯಲ್ಲಿ ಅಡಿಕೆ, ವೆನಿಲ್ಲಾ, ಮೆಣಸು, ಇತ್ಯಾದಿಗಳನ್ನು ಬೆಳೆಯಲಾಗುತ್ತದೆ.

ಶಿವಮೊಗ್ಗ ಜೆಲ್ಲೆಯಲ್ಲಿ ದಟ್ಟವಾದ ಕಾಡುಗಳಿದ್ದು ವನ್ಯ ಸಂಪತ್ತು ಹೇರಳವಾಗಿದೆ. ಇಲ್ಲಿನ ಕಾಡುಗಳಲ್ಲಿ ಬೀಟೆ, ತೇಗ, ಹೊನ್ನ, ಶ್ರೀಗಂಧ, ಹಲಸು, ಇನ್ನೂ ಅನೇಕ ಮರಗಳೂ ಮುಗಿಲೆತ್ತರಕ್ಕೆ ಬೆಳೆದು ನಿಂತಿವೆ. ಅದರಂತೆ ಅಭಯಾರಣ್ಯ ಅದರಲ್ಲಿ ಅತೀ ವಿರಳವಾಗಿರುವ ಪ್ರಾಣಿಗಳೂ ಇವೆ. ನದಿಗಳು ಹರಿಯುತ್ತಿರುವುದರಿಂದ ಅನೇಕ ಅಣೆಕಟ್ಟುಗಳನ್ನು ಕಟ್ಟಲಾಗಿದೆ. ಲಿಂಗನಮಕ್ಕಿ ಅಣೆಕಟ್ಟು, ಗಾಜನೂರು ಅಣೆಕಟ್ಟು ಕೆಲವು ಮುಖ್ಯ ಅಣೆಕಟ್ಟುಗಳು.

ಜನಸಂಖ್ಯೆ

೨೦೦೧ ನೇ ಜನಗಣತಿಯ ಪ್ರಕಾರ ಶಿವಮೊಗ್ಗ ಜಿಲ್ಲೆಯ ಒಟ್ಟು ಜನಸಂಖ್ಯೆ ೧೬,೪೨,೫೪೫ ಅದರಲ್ಲಿ ಪುರುಷರು-೮,೩೦,೫೫(೫೦.೫೬%) ಮತ್ತು ಮಹಿಳೆಯರು ೮,೧೧,೯೮೬ ( ೪೯.೪೪%) ಇದ್ದಾರೆ. ಶಿವಮೊಗ್ಗ ತಾಲ್ಲೂಕು ಜಿಲ್ಲೆಯಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ತಾಲ್ಲೂಕಾಗಿದೆ ಮತ್ತು ಹೊಸನಗರ ಅತೀ ಕಡಿಮೆ ಜನ ಸಂಖ್ಯೆ ಹೊಂದಿದ ತಾಲ್ಲೂಕಾಗಿದೆ. ಜಿಲ್ಲೆಯ ಸಾಕ್ಷರತೆಯು ೭೪.೮೬% ಇರುತ್ತದೆ. ಇದರಲ್ಲಿ ೭೮.೨೬% ಪುರುಷರು ಮತ್ತು ೬೭.೨೪% ಮಹಿಳೆಯರು ಸಾಕ್ಷರರು.

 

ಜಿಲ್ಲೆಯ ಈ ಏಳು ತಾಲ್ಲೂಕುಗಳನ್ನು ಒಳಗೊಂಡಿದೆ.

೧. ಶಿವಮೊಗ್ಗ

೨. ಭದ್ರಾವತಿ

೩. ಹೊಸನಗರ

೪. ಸಾಗರ

೫. ಶಿಕಾರಿಪುರ

೬. ಸೊರಬ

೭. ತೀರ್ಥಹಳ್ಳಿ