ಶಿವಪ್ಪನಾಯಕ ಅರಮನೆ, ವಸ್ತು ಸಂಗ್ರಹಾಲಯ

ತಾಲ್ಲೂಕು: ಶಿವಮೊಗ್ಗ
ತಾಲ್ಲೂಕು ಕೇಂದ್ರದಿಂದ: ೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೦ ಕಿ.ಮೀ

ಕೆಳದಿ ಶಿವಪ್ಪನಾಯಕ ಅರಮನೆ ಆವರಣದಲ್ಲಿ ಶರಾವತಿ, ವರಾಹಿ ಯೋಜನೆಯಲ್ಲಿ ಮುಳುಗಡೆಯಾದ ಸ್ಥಳಗಳಲ್ಲಿದ್ದ ಐತಿಹಾಸಿಕ ಕುರುಹುಗಳನ್ನು ಸಂಗ್ರಹಿಸಿ ಪ್ರದರ್ಶನಕ್ಕೆ ಇಡಲಾಗಿದೆ. ಕೆಳದಿ ಅರಸರ ಕಾಲದಲ್ಲಿ ಬಳಸುತ್ತಿದ್ದ ಕತ್ತಿ, ಗುರಾಣಿ, ಬಟ್ಟೆ, ತಾಮ್ರಘಟ ಇತ್ಯಾದಿಗಳು ಈ ವಸ್ತುಸಂಗ್ರಹಾಲಯದಲ್ಲಿದೆ. ಪಕ್ಕದಲ್ಲಿ ಶ್ರೀ ಸೀತಾರಾಮಾಂಜನೇಯರ ದೇವಸ್ಥಾನ, ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನ, ಗುಡ್ಡೇಕಲ್ ಶ್ರೀ ಸಿದ್ದೇಶ್ವರ ದೇವಾಲಯ ಇದೆ.

ತ್ಯಾವರೆಕೊಪ್ಪ

ತಾಲ್ಲೂಕು: ಶಿವಮೊಗ್ಗ
ತಾಲ್ಲೂಕು ಕೇಂದ್ರದಿಂದ: ೮ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೮ ಕಿ.ಮೀ

ಶಿವಮೊಗ್ಗ ಸಾರರ ರಸ್ತೆಯಲ್ಲಿರುವ ತ್ಯಾವರೆಕೊಪ್ಪ ಶಿವಮೊಗ್ಗದಿಂದ ಸುಮಾರು ೮ ಕಿಮೀ ದೂರದಲ್ಲಿದೆ. ಶಿವಮೊಗ್ಗ ಪ್ರವಾಸೋದ್ಯಮ ನಕ್ಷೆಯಲ್ಲಿ ತ್ಯಾವರೆಕೊಪ್ಪ ಹುಲಿಧಾಮಕ್ಕೆ ಉತ್ತಮ ಸೇರ್ಪಡೆಯಾಗಿದೆ. ಹುಲಿ, ಸಿಂಹಗಳ ಅಭಯಾರಣ್ಯ, ವನ್ಯಧಾಮ, ಕಾಡಿನ ರಾಜನ ಗತ್ತು, ಗಾಂಭೀರ್ಯ, ಹುಲಿಯ ಗಂಭೀರ ನಡಿಗೆಯನ್ನು ಇಲ್ಲಿ ಅನುಭವಿಸಬಹುದು. ಪ್ರವಾಸಿಗರು ನೋಡಲೇಬೇಕಾದ ವನ್ಯ ಪ್ರಾಣಿಧಾಮ ಇದು. ಇಲ್ಲಿ ೧೫ ಹುಲಿ, ೩ ಸಿಂಹ ಇದೆ, ೮ ಚಿರತೆ, ೧ ಕತ್ತೆ ಕಿರಬ, ೬ ನರಿ, ೩೩ ಜಿಂಕೆ, ೩೩ ಕಡವೆ, ೩೧ ಕೃಷ್ಣಮೃಗ, ೩ ಮೊಸಳೆ, ೨ ಮುಳ್ಳು ಹಂದಿ, ೨ ಹೆಬ್ಬಾವು, ೪ ನವಿಲುಗಳಿವೆ. ಇದು ೨೦೦ ಹೆಕ್ಟೇರ್ ವಿಸ್ತೀರ್ಣವನ್ನು ಹೊಂದಿದೆ. ಅಲ್ಲದೆ ಹಲವು ಕಾಡು ಪ್ರಾಣಿಗಳಿವೆ.

 

ಸೇಕ್ರೆಡ್ ಹಾರ್ಟ್ ಚರ್ಚ್

ತಾಲ್ಲೂಕು: ಶಿವಮೊಗ್ಗ
ತಾಲ್ಲೂಕು ಕೇಂದ್ರದಿಂದ: ೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೦ ಕಿ.ಮೀ 

ಶಿವಮೊಗ್ಗ ಸಂಸ್ಕೃತಿ, ಕಲೆ ರಾಜಕೀಯ ಮತ್ತು ಧರ್ಮಕ್ಕೂ ತವರೂರಾಗಿದೆ. ಇದಕ್ಕೆ ಬಹಳ ಸೊಗಸಾದ ಉದಾಹರಣೆ ಎಂದರೆ ಸೇಕ್ರೆಡ್ ಹಾರ್ಟ್ ಚರ್ಚ್. ಈ ಹಿಂದೆ ಸಣ್ಣ ಕಟ್ಟಡದಲ್ಲಿ ಇದ್ದ ಚರ್ಚ್ ೨೦೦೧-೦೨ರಲ್ಲಿ ಇದು ಮಹಾ ಸ್ವರೂಪವನ್ನು ಪಡೆದುಕೊಂಡಿದೆ. ಇಂದು ಇದು ಭಾರತದ ಎರಡನೇ ಅತಿ ದೊಡ್ಡ ಚರ್ಚ್ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಈ ಚರ್ಚಿನಲ್ಲಿ ಇಂದು ೫೦೦೦ ಜನರು ಕುಳಿತು ಪ್ರಾರ್ಥನೆ ಸಲ್ಲಿಸಬಹುದಾಗಿದೆ. ಈ ಚರ್ಚ್ ನಗರದ ಹೃದಯ ಭಾಗದಲ್ಲಿದೆ. ಈ ಚರ್ಚನ್ನು ರೋಮನ್ ಗ್ರಾಫಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ಚರ್ಚ್ ನ ಒಳಭಾಗದಲ್ಲಿ ಏಸುವಿನ ಜೀವನದ ಪ್ರಮುಖ ಘಟನಾವಳಿಗಳ ತೈಲಚಿತ್ರಗಳು ನಮ್ಮನ್ನು ಕ್ರೈಸ್ತನ ಕಾಲಕ್ಕೆ ಕೊಂಡೊಯ್ಯುತ್ತವೆ. ಈ ಪ್ರಾರ್ಥನಾ ಮಂದಿರದೊಳಗಿನ ಪ್ರಶಾಂತತೆಯು ಯಾರನ್ನಾದರೂ ಆಕರ್ಷಿಸದೆ ಇರಲಾರದು.

 

ಕೂಡಲಿ ಕ್ಷೇತ್ರ

ತಾಲ್ಲೂಕು: ಶಿವಮೊಗ್ಗ
ತಾಲ್ಲೂಕು ಕೇಂದ್ರದಿಂದ: ೧೬ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೧೬ ಕಿ.ಮೀ

ಶಿವಮೊಗ್ಗ ಜಿಲ್ಲೆಯು ನದಿಗಳಿಗೆ ಹೆಸರುವಾಸಿಯಾಗಿದೆ. ತುಂಗಾ, ಭದ್ರಾ, ಶರಾವತಿಗಳೆಂಬ ಮುಖ್ಯ ನದಿಗಳು ಹಾಗೂ ವರದಾ ಮತ್ತು ಕುಮದ್ವತಿ ಎಂಬ ಉಪನದಿಗಳು ಇಲ್ಲಿ ಹರಿದು ಇಲ್ಲಿನ ಜನರಿಗೆ ಆಸರೆಯಾಗಿವೆ. ಆದರೆ ತುಂಗೆ ಮತ್ತು ಭದ್ರೆ ಎಂಬ ಈ ಎರಡೂ ನದಿಗಳು ಪಶ್ಚಿಮ ಘಟ್ಟದ ಸನಿಹದಲ್ಲಿ ಹುಟ್ಟಿ ಸ್ವಲ್ಪ ದೂರ ಸಮಾನಾಂತರವಾಗಿ ಹರಿದು ಒಂದು ಪುಣ್ಯ ಕ್ಷೇತ್ರದಲ್ಲಿ ಒಂದಾಗಿ ಸೇರುತ್ತವೆ. ಆ ಪುಣ್ಯ ಕ್ಷೇತ್ರವೇ “ಕೂಡಲಿ ಕ್ಷೇತ್ರ”.

ಯುಗಾದಿ ಹಬ್ಬ ಮಾರನೇ ದಿನ ಇಲ್ಲಿನ ತುಂಗಾ ಭದ್ರಾ ನದಿಗಳ ಸಂಗಮದ ತುದಿಯಲ್ಲೇ ಇರುವ ಸಂಗಮೇಶ್ವರನ ಜಾತ್ರೆ ಬಹಳ ಅದ್ಧೂರಿಯಿಂದ ನೆರವೇರುತ್ತದೆ. ವಿಜಯ ದಶಮಿಯಂದು ಇಲ್ಲಿನ ಶ್ರೀ ಮಜ್ಜಗದ್ಗುರು ಶಂಕರರ ಶೃಂಗೇರಿ ಮಠದಲ್ಲಿ ಮಾತೆ ಶ್ರೀ ಶಾರದಾಂಬೆಯ ರಥೋತ್ಸವ ನಡೆಯುತ್ತದೆ. ಅಲ್ಲದೆ ಕಾರ್ತಿಕ ಶುದ್ಧ ಹುಣ್ಣಿಮೆಯಂದು ಶ್ರೀ ನರಸಿಂಗ ದೇವರ ರಥೋತ್ಸವ ನಡೆಯುತ್ತದೆ. ಇದರ ಇನ್ನೊಂದು ವಿಶೇಷವೆಂದರೆ ಹಿಂದೂ ಮತ್ತು ಮುಸಲ್ಮಾನರು ಇಲ್ಲಿ ಸಹಬಾಳ್ವೆಯ ಜೀವನ ನಡೆಸುತ್ತಿರುವುದಾಗಿದೆ. ಇದೂ ಕೂಡ ಕೂಡಲಿ ಎಂಬ ಹೆಸರಿಗೆ ನಿಜ ಅರ್ಥ ನೀಡುತ್ತದೆ. ಮಳೆಗಾಲದಲ್ಲಿ ಈ ಎರಡೂ ನದಿಗಳು ತುಂಬಿ ಹರಿದಾಗ ಇದರ ಪಾತ್ರದಲ್ಲಿನ ನೀರು ನಮಗೆ ಸಮುದ್ರವನ್ನು ಕಾಣುವಂತಹ ದೃಶ್ಯವನ್ನು ನೀಡುತ್ತದೆ. ಆನಂತರ ಅದು ತುಂಗಭದ್ರಾ ಎಂಬ ಹೆಸರಿನೊಂದಿಗೆ ಒಂದೇ ನದಿಯಾಗಿ ಹರಿಯುತ್ತದೆ.

 

ಆನೆ ಬಿಡಾರ ಸಕ್ರೆ ಬೈಲು:

ತಾಲ್ಲೂಕು : ಶಿವಮೊಗ್ಗ
ತಾಲ್ಲೂಕು ಕೇಂದ್ರದಿಂದ: ೧೫ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೧೫ ಕಿ.ಮೀ

ಶಿವಮೊಗ್ಗ ನಗರವು ಮಲೆನಾಡಿನ ಹೆಬ್ಬಾಗಿಲು, ಈ ಹೆಬ್ಬಾಗಿಲಿನಿಂದ ಕೊಂಚ ಒಳ ನಡೆದು ತುಂಗಾ ಆಣೆಕಟ್ಟನ್ನು ತಲುಪಿ ಅಲ್ಲಿಂದ ಕೇವಲ ಎರಡು ಕಿಲೋ ಮೀಟರ್ ಮುಂದಕ್ಕೆ ನಡೆದರೆ ನಮಗೆ ದಟ್ಟ ಕಾನನವು ಎದುರುಗೊಳ್ಳುತ್ತದೆ. ಹಾಗೆಯೇ ಅಲ್ಲಿ ಪುಟ್ಟ ಹಳ್ಳಿಯೊಂದು ಎದುರಾಗುತ್ತದೆ. ಈ ಹಳ್ಳಿ ತನ್ನ ಹೆಸರನ್ನು ಇಡೀ ಕರ್ನಾಟಕದಾದ್ಯಂತ ಜನಪ್ರಿಯಗೊಳಿಸಿ ಕೊಂಡಿದೆ ಆ ಹಳ್ಳಿಯೇ “ಸಕ್ರೆ ಬೈಲು” ಆ ಹಳ್ಳಿಯ ಹೆಸರನ್ನು ಅಷ್ಟು ಖ್ಯಾತಿಗೆ ತಂದಿರುವುದು ಅಲ್ಲಿನ ಆನೆಗಳು. ಈ ಪ್ರದೇಶವು ಸಂಪೂರ್ಣವಾಗಿ ಗುಡ್ಡ ಬೆಟ್ಟಗಳಿಂದ ಕೂಡಿದೆ. ಸಕ್ರೆಬೈಲಿನ ಪೂರ್ವಕ್ಕೆ ತುಂಗಾ ಅಣೆಕಟ್ಟು ಮತ್ತು ಪಶ್ಚಿಮಕ್ಕೆ ಶೆಟ್ಟಿಹಳ್ಳೀ ಅಭಯಾರಣ್ಯವಿದೆ.

ಈ ಬಿಡಾರದಲ್ಲಿ ಆನೆಯನ್ನು ಪಳಗಿಸುವ ಮಾವುತರುಗಳು ಇದ್ದಾರೆ. ಆನೆಗಳು ರಾತ್ರಿಯಿಡೀ ಅರಣ್ಯದಲ್ಲಿದ್ದು ಬೆಳಗ್ಗೆ ೯-೦೦ ಗಂಟೆಗೆ ಆಣೆಕಟ್ಟೆಯ ಇನ್ನೊಂದು ಅಂಚಿನಲ್ಲಿರುವ ನದಿ ಪಾತ್ರ ಪ್ರದೇಶವಾದ ಈ ಬಿಡಾರಕ್ಕೆ ಬರುತ್ತವೆ. ಇಲ್ಲಿ ಭದ್ರಾ ಅಭಯಾರಣ್ಯದ ಕಡೆಯಿಂದ ಕೆಲವು ಕಾಡಾನೆಗಳು ಆಗಾಗ್ಗೆ ಬರುತ್ತವೆ.

ಈ ಬಿಡಾರವನ್ನು ಭೇಟಿ ಮಾಡಲು ಅವು ಬೆಳಗ್ಗೆ ೯-೦೦ ರಿಂದ ೧೧-೦೦ ಗಂಟೆಗೆ ಅಲ್ಲಿಗೆ ಹೋಗುವುದು ಸೂಕ್ತ. ೧೧-೦೦ ರ ನಂತರ ಆನೆಗಳು ತಿರುಗಿ ಕಾಡಿನ ಕಡೆ ಪ್ರಯಾಣ ಬೆಳಸುತ್ತವೆ. ಈ ಬಿಡಾರದಲ್ಲಿ ಆನೆ ಸವಾರಿ, ಆನೆಗೆ ಸ್ನಾನ ಮಾಡಿಸುವುದನ್ನು ನಾವು ಕೈಗೊಳ್ಳಬಹುದು. ಒಟ್ಟಾರೆ ಈ ಆನೆ ಬಿಡಾರವು ಸಂದರ್ಶಕರಿಗೆ ಮಹದಾನಂದ ನೀಡುವುದರಲ್ಲಿ ಎಳ್ಳಷ್ಟು ಅನುಮಾನವಿಲ್ಲ.