ಜನನ: ೧೪-೧೨-೧೯೩೮ ಹೊಸನಗರ ತಾ|| ನಗರದಲ್ಲಿ ಮೂಲನಾಮ: ಜಿ.ಸುಬ್ರಹ್ಮಣ್ಯ.

ಮನೆತನ: ಸಂಗೀತದ ಮನೆತನ, ತಾತ ಶಾಮಣ್ಣನವರು ಸಂಗೀತ ವಿದ್ವಾಂಸರು. ತಾಯಿಯ ತಂದೆ ಶ್ರೀಕೃಷ್ಣ ಉಡುಪರು ಸಂಗೀತ ಶಾಸ್ತ್ರಜ್ಞರು. ತಂದೆ ಗಣೇಶರಾವ್ ಸಂಗೀತಾಸಕ್ತರು. ಸೊಸೆ ಆರ್ಚನಾ ಉಡುಪ ಹೆಸರಾಂತ ಗಾಯಕಿ.

ಗುರುಪರಂಪರೆ: ಪ್ರಾರಂಭಿಕ ಶಿಕ್ಷಣ ತಾತ ಶಾಮಣ್ಣನವರಿಂದ. ಅನಂತರ ಶಿವಮೊಗ್ಗೆಯಲ್ಲಿ ವಿ|| ರಾಮನಾಥನ್ ಹಾಗೂ ಎಂ. ಪ್ರಭಾಕರ್ ಅವರಲ್ಲಿ ಹೆಚ್ಚಿನ ಕಲಿಕೆ. ವೃತ್ತಿಯಲ್ಲಿ ಸುಬ್ಬಣ್ಣ ವಕೀಲರು. ಮೈಸೂರು ಬನುಮಯ್ಯ ಕಾಲೇಜಿನಲ್ಲಿ ಓದುತ್ತಿದ್ದಾಗ ಕನ್ನಡ ಗೀತೆಗಳನ್ನು ಹಾಡುವಂತೆ ಕವಿ ಲಕ್ಷ್ಮಿನಾರಾಯಣ ಭಟ್ಟರ ಪ್ರೇರಣೆ.

ಸಾಧನೆ: ೧೯೬೩ರಿಂದ ಆಕಾಶವಾಣಿ ಕೇಂದ್ರದಿಂದ ಭಾವಗೀತೆ ಗಾಯನಗಳ ಪ್ರಸಾರ.ಅನಂತರ ಸಾರ್ವಜನಿಕ ವೇದಿಕೆಗೆ ಪ್ರವೇಶ. ನಿರಂತರ ಕಾರ್ಯಕ್ರಮಗಳು. ಸಂಸ್ಕೃತಿ ಸುದಿನ, ಅಕಾಡೆಮಿ (ಸಂಗೀತ ಹಾಗೂ ಸಾಹಿತ್ಯ) ಗಳ ಆಶ್ರಯದಲ್ಲಿ ಅವ್ಯಾಹತವಾಗಿ ಭಾವಗೀತೆಗಳ ಕಾರ್ಯಕ್ರಮಗಳು.ಮುಂಬಯಿ, ದೆಹಲಿ, ಗೋವಾ, ಅಲ್ಲದೆ ಹೊರರಾಷ್ಟ್ರಗಳಲ್ಲೂ ಸಹ ಕಾರ್ಯಕ್ರಮಗಳನ್ನು ನೀಡಿದ್ದಾರೆ. ೧೯೬೪ರಲ್ಲಿ ಸಂಗೀತ ನೃತ್ಯ ಅಕಾಡೆಮಿ ನಡೆಸಿದ ಸುಗಮ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಕೆ. ಅನೇಕ ಧ್ವನಿ ಮುದ್ರಿಕೆಗಳು, ಧ್ವನಿ ಸುರುಳಿಗಳು ಹಾಗೂ ಸಿ.ಡಿಗಳ ಮೂಲಕ  ಇವರ ಗಾನ ಸೌರಭ ಹೊರಮ್ಮಿದೆ. ಸಂಗೀತ ನೃತ್ಯ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.ಕೆಲವೊಂದು ಚಲನಚಿತ್ರಗಳಲ್ಲೂ ಹಿನ್ನೆಲೆ ಗಾಯಕರಾಗಿ ಪಾಲ್ಗೊಂಡಿದ್ದಾರೆ.

ಪ್ರಶಸ್ತಿ-ಸನ್ಮಾನ: ೧೯೭೮ರಲ್ಲಿ ಕಾಡುಕುದುರೆ ಚಿತ್ರದ ಹಿನ್ನೆಲೆ ಗಾಯಕನಕ್ಕಾಗಿ ರಾಷ್ಟ್ರಮಟ್ಟದ ಶ್ರೇಷ್ಠ ಗಾಯಕ ಪ್ರಶಸ್ತಿ ಶಿವಮೊಗ್ಗ ಸಾಗರ, ಉಡುಪಿ, ಧರ್ಮಸ್ಥಳಗಳಲ್ಲಿ ಸನ್ಮಾನ. ೧೯೮೭-೮೮ರ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ೧೯೯೨ರಲ್ಲಿ ದೆಹಲಿ ಕನ್ನಡಿಗ ಪತ್ರಿಕೆಯ ಕಾಳಿಂಗರಾವ್ ಪ್ರಶಸ್ತಿ ೧೯೯೭ರಲ್ಲಿ ಮೈಸೂರು ಅನಂತಸ್ವಾಮಿ ಸ್ಮಾರಕ ಪ್ರಶಸ್ತಿಗಳೆ ಅಲ್ಲದೆ ೧೯೯೫ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ೧೯೯೯ರ ಸಂತ ಶಿಶುನಾಳ ಪ್ರಶಸ್ತಿ ಇವರಿಗೆ ಸಂದಿರುವುದಲ್ಲದೆ ಇವರ ಅಪಾರ ಸಾಧನೆಗಾಗಿ ೨೦೦೮ರಲ್ಲಿ ಕುವೆಂಪು ವಿಶ್ವವಿದ್ಯಾಲಯದ ವತಿಯಿಂದ ಗೌರವ ಡಾಕ್ಟರೇಟ್ ಪದವಿ ಸಹ ದೊರೆತಿದೆ.