ಸುಗಮ ಸಂಗೀತಕ್ಷೇತ್ರಕ್ಕೆಕ ಅನುಪಮ ಕಾಣಿಕೆ ನೀಡಿದ ಕರ್ನಾಟಕದ ಹಿರಿಯ ಕಲಾವಿದರಲ್ಲಿ ಶಿವಮೊಗ್ಗ ಸುಬ್ಬಣ್ಣನವರೂ ಒಬ್ಬರು. ಶಿವಮೊಗ್ಗ ಜಿಲ್ಲೆಯ ‘ನಗರ’ ಎಂಬ ಊರಿನಲ್ಲಿ ೧೪೫.೧೨.೧೯೩೮ರಲ್ಲಿ ಸುಬ್ಬಣ್ಣನವರು ಗಣೇಶರಾವ್‌ ಹಾಗೂ ರಂಗನಾಯಕಮ್ಮನವರ ಸುಪುತ್ರರಾಗಿ ಜನಿಸಿದರು. ಸುಬ್ಬಣ್ಣನವರಿಗೆ ಸಂಗೀತಕಲೆ ಅವರ ತಂದೆ ಹಾಗೂ ತಾಯಿಯವರ ಎರಡೂ ವಂಶಗಳಿಂದ ಬಂದ ಬಳುವಳಿ. ಅವರ ತಾತ (ತಂದೆಯ ತಂದೆ) ನವರಾದ ಶಾಮಣ್ಣನವರಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಚೆನ್ನಾಗಿ ಗೊತ್ತಿತ್ತು.

ಆರಡಿ ಎತ್ತರದ ದೇಹಕ್ಕೆ ಹೊಂದುವ ಗಿರಿಜಾಮೀಸೆ, ಆರ್ಭಟದ ಧ್ವನಿಯ ಗ್ರಾಮ್ಯ-ಗಡಸು ಶಬ್ದಗಳು ಅವರ ಸ್ವಭಾವದಲ್ಲಿ ಸೇರಿಹೋಗಿತ್ತು. ಈ ಅಜ್ಜನ ಶಾರೀರ ಹಾಗೂ ಬಣ್ಣಗಳೆರಡನ್ನೂ ಪಡೆದಿರುವ ಸುಬ್ಬಣ್ಣನವರಿಗೆ ಅವರ ಗಡಸುತನದ ಆಕ್ರಮಣ ಮನೋಭಾವ ಬರಲಿಲ್ಲ. ಬದಲಾಗಿ ತಾಯಿಯ ಕಡೆಯ ಸೌಮ್ಯತೆ ಹಾಗೂ ಸ್ನೇಹಪರ ಲಕ್ಷಣಗಳು ಬಂದಿವೆ. ಸುಬ್ಬಣ್ಣನ ಮತ್ತೊಬ್ಬ ತಾತ (ತಾಯಿಯ ತಂದೆ)ನವರಾದ ನಗರದ ಕೃಷ್ಣ ಉಡುಪರು ಭಾರೀ ಮನೆತನದ, ನಿತ್ಯದಾಸೋಹದ, ಪ್ರಸಿದ್ಧ ವ್ಯಕ್ತಿಯಾಗಿದ್ದವರು. ಅವರ ಮನೆಯಲ್ಲಿ ಪ್ರತಿನಿತ್ಯ ನಡೆಯುತ್ತಿದ್ದ ಭಜನೆಗಳಲ್ಲಿ ಸ್ವತಃ ಉಡುಪರೇ ಮೃದಂಗ ನುಡಿಸುತ್ತಿದ್ದರು. ಕರ್ನಾಟಕ ಸಂಗೀತ ದಿಗ್ಗಜಗಳಾದ ಚಂಬೈ ವೈದ್ಯನಾಥ ಭಾಗವತರ್, ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್, ಚಿಟ್ಟಿಬಾಬು ಮುಂತಾದವರು ಉಡುಪರ ಮನೆಯಲ್ಲಿ ಅತಿಥಿಗಳಾಗಿ ಉಳಿದು ಅವರ ಭಜನೆಗಳಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದಾರೆ. ಇಂತಹ ಪರಿಸರದಲ್ಲಿ ಬೆಳೆದ ಸುಬ್ಬಣ್ಣನ ತಾಯಿ ರಂಗನಾಯಕಮ್ಮ ನಾಲ್ಕು ಜನ ಮಕ್ಕಳಿಗೆ ಜನ್ಮ ನೀಡಿ ಟೈಫಾಯಿಡ್‌ ಕಾಯಿಲೆಯಿಂದಾಗಿ ತಮ್ಮ ೨೩ನೆಯ ವಯಸ್ಸಿನಲ್ಲಿಯೇ ನಿಧನರಾದರು. ಹೀಗೆ ತಾಯಿ ಹಾಗೂ ತಂದೆಯ ವಂಶಗಳೆರಡೂ ಕಡೆಯಿಂದ ಸಂಗೀತದ ಪ್ರಭಾವಕ್ಕೆ ಒಳಗಾದವರು ಸುಬ್ಬಣ್ಣನವರು. ತಂದೆ ಗಣೇಶರಾವ್‌ ಅವರು ಅರಣ್ಯ ಇಲಾಖೆಯಲ್ಲಿ ಕಿಂಚಿತ್ತಾದರೂ ಅಪ್ರಾಮಾಣಿಕರಾಗಿದ್ದರೆ, ಸಂಪತ್ತಿನ ಸೂರೆಯನ್ನೇ ಮಾಡಬಹುದಿತ್ತು ಆದರೆ ಗಣೇಶರಾಯರು ಕರ್ತವ್ಯವೇ ದೇವರೆಂದು ದುಡಿದು, ಇತರರ ಸಂತೋಷದಲ್ಲಿ ತಾವು ಸುಖ ಕಂಡವರು. ತಂದೆಯಲ್ಲಿದ್ದ ಇಂತಹ ವಿರಳ ಗುಣಗಳು ಸುಬ್ಬಣ್ಣನವರಲ್ಲಿಯೂ ಮೈಗೂಡಿವೆ. ನಾವು ಹುಟ್ಟಿದ, ಬೆಳೆದ ಪರಿಸರಗಳು ನಮ್ಮ ಮೇಲೆ ಎಂತಹ ಪ್ರಭಾವ ಬೀರಬಲ್ಲವೆಂಬುದಕ್ಕೆ ಸುಬ್ಬಣ್ಣನ ಬದುಕೇ ಸಾಕ್ಷಿ.

೧೯೫೯ರಲ್ಲಿ ಬಿ.ಕಾಂ. ಓದಲು ಮೈಸೂರಿನ ಬನುಮಯ್ಯ ಕಾಲೇಜಿಗೆ ಸುಬ್ಬಣ್ಣ ಬಂದರು. ರಫಿ ಹಾಗೂ ಮುಖೇಶ್‌ ಅವರ ಗೀತೆಗಳನ್ನು ಹಾಡುತ್ತಿದ್ದ ಸುಬ್ಬಣ್ಣನವರಿಗೆ ಅನುಕರಣೆಯನ್ನು ಬದಿಗೊತ್ತಿ ತಮ್ಮದೇ ಆದ ಶೈಲಿಯಲ್ಲಿ ಕನ್ನಡ ಭಾವಗೀತೆಗಳನ್ನು ಹಾಡುವಂತೆ ಪ್ರೇರೇಪಿಸಿದರವರು ಲಕ್ಷ್ಮೀನಾರಾಯಣ ಭಟ್ಟರು. ಅಂತರ ಕಾಲೇಜುಗಳ  ಭಾವಗೀತೆ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದ ಮೇಲಂತೂ ಸುಬ್ಬಣ್ಣನ ಆತ್ಮವಿರ್ಶವಾಸ ಇಮ್ಮಡಿಯಾಯಿತು.

ಆಗ ಮೈಸೂರಿನಲ್ಲಿ ಪ್ರಖ್ಯಾತರಾಗಿದ್ದ ಮೈಸೂರು ಅನಂತಸ್ವಾಮಿ ಅವರ ಕಾರ್ಯಕ್ರಮಗಳಿಗೆ ತಪ್ಪದೆ ಹಾಜರಾಗುತ್ತಿದ್ದರು. ಮುಂದೆ ಶಿವಮೊಗ್ಗೆಯಲ್ಲಿ ಎಂ. ಪ್ರಭಾಕರ್ ಅವರಿಂದ ಕೆಲಕಾಲ ವಿದ್ಯಾರ್ಥಿಯಾಗಿಯೂ ಸಾಕಷ್ಟು ಅನುಭವಗಳಿಸಿದರು. ಓದು ಮುಗಿಸಿದ ಬಳಿಕ ಕೆಲಕಾಲ ಶಿವಮೊಗ್ಗೆಯಲ್ಲಿದ್ದ ಸುಬ್ಬಣ್ಣ ಮುಂದೆ ಹೈಕೋರ್ಟಿನ ಲಾಯರಾಗಿ ಬೆಂಗಳೂರಿಗೆ ವಲಸೆ ಬಂದರು.

ನಗರದ ಬಳಿಯಿರುವ ‘ಹನಿಯ’ ಎಂಬ ಗ್ರಾಮದ ಶ್ರೀನಿವಾಸ ಉಡುಪ ಹಾಗೂ ಪದ್ಮಾವತಮ್ಮನವರ ಮಗಳಾದ ಶಾಂತಾ ಸುಬ್ಬಣ್ಣನ ಬಾಲಸಂಗಾತಿಯಾಗಿ ಬಂದ ಮೇಲೆ ತನ್ನ ಭಾಗ್ಯದ ಬಾಗಿಲೇ ತೆರೆಯಿತೆಂದು ಸುಬ್ಬಣ್ಣ ತುಂಬಾ ಭಾವುಕತೆಯಿಂದ ಹೇಳಿ ಕೊಳ್ಳುತ್ತಾರೆ. ಇವರಿಗೆ ಇಬ್ಬರು ಮಕ್ಕಳು ಬಾಗೇಶ್ರೀ ಹಾಗೂ ಶ್ರೀರಂಗ. ಮಗಳು ಬಾಗೇಶ್ರೀ ಎಂ.ಎ. (ಇಂಗ್ಲೀಷ್‌) ಮುಗಿಸಿ ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಯಲ್ಲಿ ದುಡಿಯುತ್ತಿದದರೆ ಮಗ ಶ್ರೀರಂಗ ಲಾ ಪರೀಕ್ಷೆ ಪಾಸುಮಾಡಿ ನ್ಯಾಯವಾದಿಯಾಗುವ ದಿಕ್ಕಿನಲ್ಲಿ ಸಾಗಿದ್ದಾರೆ. ಶಿವಮೊಗ್ಗೆಯಲ್ಲಿದ್ದಾಗ ತುಂಬಾ ಆರ್ಥಿಕ ಮುಗ್ಗಟ್ಟನ್ನು ಕಂಡ ಸುಬ್ಬಣ್ಣನವರಿಗೆ ಆಸರೆಯಾಗಿ ನಿಂತವರು ಪತ್ನಿ ಶಾಂತಾ ಹಾಗೂ ಅವರ ತವರು. ಕೆಲ ಸಮಯದ ನಂತರ ಸ್ನೇಹಿತರ ಒತ್ತಾಸೆಯ ಮೇರೆಗೆ ಶಿವಮೊಗ್ಗೆಯನ್ನು ಬಿಟ್ಟು ಬೆಂಗಳೂರಿನಲ್ಲಿ ನೆಲೆಸುವ ನಿರ್ಧಾರ ಕೈಗೊಂಡರು. ಹೀಗಾಗಿ ಶ್ರೀಯುತರು ಬೆಂಗಳೂರಿನಲ್ಲಿ ಹೈಕೋರ್ಟ್‌ ಲಾಯರಾಗಿ ತಮ್ಮ ವೃತ್ತಿಯನ್ನು ಆರಿಸಿಕೊಂಡರು. ಆದರೆ ಅವರ ಪ್ರವೃತ್ತಿ ಮಾತ್ರ ಸುಗಮಸಂಗೀತದ ಕಡೆಗೆ ಹೆಚ್ಚು ವಾಲಿತ್ತು. ವೃತ್ತಿ ಕೇವಲ ಸಾಂಕೇತಿಕವಾಗಿತ್ತು. ಸಂಗೀತ ಕ್ಷೇತ್ರದಲ್ಲಿ ವಿಪುಲ ಅವಕಾಶಗಳು ದೊರಕಬಹುದೆಂಬ ಭಾವನೆ ಹಾಗೂ ಅದರ ಬೆಳವಣಿಗೆಗೆ ಉತ್ತಮ ಪರಿಸರ ದೊರಕಬಹುದೆಂಬ ಉದ್ದೇಶದಿಂದಲೇ ಅವರು ಬೆಂಗಳೂರಿಗೆ ತಮ್ಮ ನಿವಾಸವನ್ನು ವರ್ಗಾಯಿಸಿದರು. ಮನಸಿಲ್ಲದ ಮನಸ್ಸಿನಿಂದ ಶಾಂತಾ ತಮ್ಮ ಗಂಡನ ಹಿಂದೆ ನೆರಳಿನಂತೆ ನಡೆದರು.

ಬಾಲ್ಯದಿಂದಲೂ ಸಂಗೀತ ಪ್ರಪಂಚದಲ್ಲಿ ಲೀನವಾಗಿ ಹೋಗಿದ್ದ ಸುಬ್ಬಣ್ಣನವರಿಗೆ ಸಂಗೀತ ಪರಂಪರೆಯ ಜತೆಜತೆಗೆ ದೇವರು ಕಂಚಿನ ಕಂಠವನ್ನು ಅನುಗ್ರಹಿಸಿದ್ದಾನೆ. ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಅನೇಕ ಬಹುಮಾನಗಳನ್ನು ಪಡೆದ ಇವರನ್ನು ಕನ್ನಡದ ಭಾವಗೀತೆಗಳನ್ನು  ಹಾಡುವಂತೆ ಪ್ರೇರೇಪಿಸಿದವರು ಕವಿ ಲಕ್ಷ್ಮೀನಾರಾಯಣ ಭಟ್ಟರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಜರುಗಿದ ಅಂತರ ಕಾಲೇಜುಗಳ ಭಾವಗೀತೆ ಸ್ಪರ್ಧೆಯಲ್ಲಿ ಅವರು ಹಾಡಿದ ಅಡಿಗರ ‘ಯಾವ ಮೋಹನ ಮುರಳಿ ಕರೆಯಿತು” ಗೀತೆಗೆ ಪ್ರಥಮ ಬಹುಮಾನ ಬಂದ ಮೇಲೆ ಸುಬ್ಬಣ್ಣನವರು ಹಿಂದಿರುಗಿ ನೋಡಿದ್ದೇ ಇಲ್ಲ. ಅನಂತಸ್ವಾಮಿ, ಎಂ. ಪ್ರಭಾಕರ್ ಹಾಗೂ ಪಿ. ಕಾಳಿಂಗರಾವ್‌ ಅವರ ಗೀತೆಗಳಿಂದ ತುಂಬಾ ಪ್ರಭಾವಿತರಾದ ಸುಬ್ಬಣ್ಣ ಸಂಗೀತದ ಗೀಳು ಹಚ್ಚಿಕೊಂಡು ಓದುಬಿಟ್ಟು ಬಾಂಬೆಗೆ ಓಡಿಹೋಗಬೇಕೆಂದು ಚಿಂತಿಸಿದ್ದೂ ಉಂಟು. ಯಾವುದಾದರೂ ರಂಗದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ಈ ಮಟ್ಟದ ‘ಹುಚ್ಚು’ ಇದ್ದಾಗ ಮಾತ್ರ ಸಾಧ್ಯ. ಓದು ಮುಗಿಸಿ ಶಿವಮೊಗ್ಗೆಯಲ್ಲಿದ್ದಾಗಲೇ ಸುಬ್ಬಣ್ಣ ಬೆಂಗಳೂರು ಆಕಾಶವಾಣಿಯ ಕಲಾವಿದರಾಗಿ ಆಯ್ಕೆಯಾದರು. ೧೯೬೨ರಲ್ಲಿ ಮೊದಲ ಬಾರಿಗೆ ಆಕಾಶವಾಣಿಯಲ್ಲಿ ಅವರು ಹಾಡಿದರು. ಎಷ್ಟೋ ಮನೆಗಳಲ್ಲಿ ರೇಡಿಯೋ ಸಹ ಇಲ್ಲದಿದ್ದ  ಕಾಲದಲ್ಲಿ ರೇಡಿಯೋನಲ್ಲಿ ಒಬ್ಬರ ಹಾಡು ಪ್ರಸಾರವಾಗುವುದೆಂದರೆ ಅದೊಂದು ಸಂಭ್ರಮದ ಘಳಿಗೆಯೇ ಸರಿ.

 

ವ್ಯಕ್ತಿ ಎಷ್ಟೇ ಪ್ರತಿಭಾವಂತನಾದರೂ, ಅದು ಸರಿಯಾದ ಸಮಯದಲ್ಲಿ ಗುರುತಿಸಲ್ಪಡದಿದ್ದರೆ ಅಂತಹ ಪ್ರತಿಭೆಗಳು ಕಮರಿಹೋಗುತ್ತವೆ. ಆದರೆ ಸುಬ್ಬಣ್ಣನವರಿಗೆ ದೈವಾನುಗ್ರಹವೂ ಇದೆ. ಯಾವುದೇ ಗಾಯಕನಿಗೆ ತಾನು ಚಲನಚಿತ್ರದಲ್ಲಿ ಹಾಡಬೇಕೆಂಬ ಬಯಕೆ ಇರುತ್ತದೆ. ಇಂತಹ ಬಯಕೆ ಈಡೇರಿದ ಸಮಯವೇ ಸುಬ್ಬಣ್ಣನವರ ಬದುಕಿನಲ್ಲಿ ಜರುಗಿದ ಮಹತ್ತರ ಕತಿರುವು. ಕಂಬಾರರ “ಕರಿಮಾಯಿ” ಚಿತ್ರಕ್ಕೆ ಹಾಡಿಸಲು ಹೊಸಗಾಯಕರನ್ನು ವಿಭಿನ್ನಶೈಲಿಯನ್ನು ಆರಿಸಿಕೊಳ್ಳುವಂತೆ ಲಕ್ಷ್ಮಿನಾರಾಯಣ ಭಟ್ಟರು ಸಲಹೆ ಕೊಟ್ಟರು. ಸುಬ್ಬಣ್ಣನವರ ಹೆಸರನ್ನು ಅವರೇ ಸೂಚಿಸಿದರು. ಕಂಬಾರರು ಒಪ್ಪುವಂತೆ ಸುಬ್ಬಣ್ಣನವರು ಹಾಡಿದರು. ಎಲ್‌.ಪಿ. ತಟ್ಟೆಗಳ ಮೇಲೆ ಹಾಡಿದವರು “ಜಿ. ಸುಬ್ರಹ್ಮಣ್ಯಂ” ಎಂದು ಪ್ರಕಟವಾಯಿತು. (ಆಗ ಸುಬ್ಬಣ್ಣನವರ ಹೆಸರು ಜಿ. ಸುಬ್ರಹ್ಮಣ್ಯಂ). ಆಕಾಶವಾಣಿಯಲ್ಲಿ “ಈ ಗೀತೆಯನ್ನು ಹಾಡಿದವರು ಎಸ್‌.ಪಿ. ಬಾಲಸುಬ್ರಹ್ಮಣ್ಯಂ” ಎಂದು ಪ್ರಸಾರವಾಗತೊಡಗಿತು. ಈ ಗೊಂದಲವನ್ನು ತಪ್ಪಿಸಲು ಕಂಬಾರರು ತಮ್ಮ ಎರಡನೇ ಚಿತ್ರ ‘ಕಾಡುಕುದುರೆ’ಯಲ್ಲಿ ಇವರ ಹೆಸರನ್ನು ‘ಶಿವಮೊಗ್ಗ ಸುಬ್ಬಣ್ಣ’ ಎಂದು ಬದಲಾಯಿಸಿದರು. ಹೆಸರು ಬದಲಾಯಿಸಿದ ಗಳಿಗೆಯ ಅದೃಷ್ಟದ ಜತೆಗೆ ಸುಬ್ಬಣ್ಣನವರ ಕಂಠದಿಂದ ಹೊರಹೊಮ್ಮಿದ ಸಾಹಿತ್ಯದ ಸತ್ವದಿಂದ ಒಂದೇ ಬಾರಿಗೆ ಸುಬ್ಬಣ್ಣ ಗಗನದೆತ್ತರಕ್ಕೆ ಜಿಗಿದರು. ಅವರು ಹಾಡಿದ ಗೀತೆಗೆ ರಾಷ್ಟ್ರಮಟ್ಟದ ‘ರಜತಕಮಲ ಪ್ರಶಸ್ತಿ’ ದೊರಕಿತು. ಕನ್ನಡಿಗರ ಕೀರ್ತಿ ಪತಾಕೆ ಮುಗಿಲೆತ್ತರಕ್ಕೆ ಹಾರಿತು. ಕೆಲವರಿಗೆ ಮಾತ್ರ ಒಲಿಯುವ ಅತಿ ಎತ್ತರದ ನೆಲೆಗೆ ಸುಬ್ಬಣ್ಣ ಜಿಗಿದಿದ್ದರು.

ಮುಂದೆ ಎಂ.ಎಸ್‌.ಐ.ಎಲ್‌ಗಾಗಿ ಸಿ. ಅಶ್ವಥ್‌ ಅವರ ಸಂಗೀತ ನಿರ್ದೇಶನದಲ್ಲಿ ಶಿಶುನಾಳ ಶರೀಫರ ‘ಅಳಬೇಡ ತಂಗೀ ಅಳಬೇಡ’ ಹಾಡಿ ಹೆಸರು ಗಳಿಸಿದರು. ಇದರ ಪರಿಣಾಮವಾಗಿ ಅಶ್ವಥ್‌ರವರು ತಮ್ಮ ಶರೀಫರ ಕ್ಯಾಸೆಟ್‌ನಲ್ಲಿ ‘ಕೋಡಗನ ಕೋಳಿ ನುಂಗಿತ್ತ’, ‘ಬಿದ್ದೀಯಬೇ ಮುದುಕಿ’ ಹಾಗು ‘ಅಳಬೇಡ ತಂಗಿ’ ಗೀತೆಗಳನ್ನು ಸುಬ್ಬಣ್ಣನವರಿಂದ ಹಾಡಿಸಿದರು. ಸುಬ್ಬಣ್ಣನಂತಹ ಗಾಯಕರಿಗೆ ಇಂತಹ ಅವಕಾಶ ಕಲ್ಪಿಸಿಕೊಟ್ಟು ಸ್ವತಃ ಗಾಯಕರಾದ ಅಶ್ವಥ್‌ ಅವರು ತಮ್ಮ ದೊಡ್ಡತನವನ್ನು ತೋರಿದರು. ಇಂತಹ ವೃತ್ತಿ ಬಾಂಧವ್ಯ ಸುಗಮ ಸಂಗೀತ ಜಗತ್ತಿಗೆ ಅಪಾರ ಕಾಣಿಕೆಯನ್ನು ನೀಡಿದುದು ಕನ್ನಡಿಗರ ಸೌಭಾಗ್ಯವೆಂದೇ ಹೇಳಬಹುದು.

ತದನಂತರ ಸುಬ್ಬಣ್ಣ ಒಬ್ಬರೇ ಹಾಡಿರುವ ಕುವೆಂಪುರವರ ಗೀತೆಗಳ  ಧ್ವನಿಸುರುಳಿಯನ್ನು ಸಂಗೀತಾ ಸಂಸ್ಥೆ ಹೊರತಂದಿತು. ಮುಂದೆ ಅನಂತಸ್ವಾಮಿಯವರ ನಿರ್ದೇಶನದಲ್ಲಿ ಹಾಡಿದ ‘ನಿತ್ಯೋತ್ಸವ’, ಸಿ. ಅಶ್ವಥ್‌ರವರ ನಿರ್ದೇಶನದ ‘ಶರೀಫ್‌ ಧ್ವನಿಸುರುಳಿಗಳು’, ದೀಪಿಕಾ, ಕವಿಶೈಲ ಹಾಗೂ ಎಚ್‌.ಕೆ. ನಾರಾಯಣರ ನಿರ್ದೇಶನದ ಬಾರೋವಸಂತ, ಅಗ್ನಿಹಂಸ ಹಾಗೂ ನಾಮಸ್ಮರಣ ಸುಬ್ಬಣ್ಣನವರಿಗೆ ಹೆಸರು ತಂದುಕೊಟ್ಟ ಧ್ವನಿಸುರುಳಿಗಳು. ಇಂತಹ ಮಹಾ ಸಂಗೀತ ಸಂಯೋಜಕರ ನಿರ್ದೇಶನದಲ್ಲಿ ಹಾಡಿದುದು ತಮ್ಮ ಜೀವನದ ಸೌಭಾಗ್ಯವೆಂದೇ ಇವರು ಭಾವಿಸಿದ್ದಾರೆ. ಹೀಗೆ ಕುವೆಂಪು, ಬೇಂದ್ರೆ, ಅಡಿಗ, ಎನ್‌.ಎಸ್‌. ಲಕ್ಷ್ಮಿನಾರಾಯಣ ಭಟ್ಟ, ಎಂ.ಎನ್‌. ವ್ಯಾಸರಾವ್‌, ಪು.ತಿ.ನ, ಶರೀಫರು ಹಾಗೂ ಜಾನಪದ ಗೀತೆಗಳನ್ನು ಸುಗಮ ಸಂಗೀತ ಶೈಲಿಲಯಲ್ಲಿ ಹಾಡಿ ಅದಕ್ಕೆ ತಮ್ಮದೇ ಆದ ಛಾಪು ಮೂಡಿಸಿ ಕರ್ನಾಟಕದ ಜನತೆಯ ಮನೆ ಮಾತಾಗಿದ್ದಾರೆ.

ವೃತ್ತಿಯಲ್ಲಿ ವಕೀಲರಾಗಿ ಪ್ರವೃತ್ತಿಯಲ್ಲಿ ಸುಗಮ ಸಂಗೀತ ಕಲಾವಿದರಾಗಿ ಸುಬ್ಬಣ್ಣನವರದು ವಿಶಿಷ್ಟವಾದ ವ್ಯಕ್ತಿತ್ವ. ಅನೇಕ ಕಲಾವಿದರಲ್ಲಿ ನಾನು ಕಂಡ ‘ಅಹಂ’ ಇವರಲ್ಲಿಲ್ಲ. ಒಬ್ಬ ಕಲಾವಿದನಿಗೆ ಇರಲೇಬೇಕಾದ ಸೌಜನ್ಯತೆ ಹಾಗೂ ವಿನಯಗಳು ಇವರಲ್ಲಿ ಮೈಗೂಡಿವೆ. ೨೦೦೦ದಲ್ಲಿ ಖ್ಯಾತ ದಸರಾ ಸಂಗೀತೋತ್ಸವದಲ್ಲಿ ಅರಮನೆ ವೇದಿಕೆಯಲ್ಲಿ. ಅನಂತರ ಬಿ.ಕೆ.ಸುಮಿತ್ರ ಅವರ ಸಂಗೀತ ಶಾಲೆಯ ಸಹಾಯಾರ್ಥ ಗಾಯನ ಕಾರ್ಯಕ್ರಮದಲ್ಲಿ ಹಾಗೂ ೨೦೦೨ರಲ್ಲಿ ನಮ್ಮ ಕಾಲೇಜಿನ ವೇದಿಕೆಯಲ್ಲಿ ನಾನು ಹಾಗೂ ಸುಬ್ಬಣ್ಣನವರು ಹಾಡಿದೆವು. ಈ ಸಂದರ್ಭದಲ್ಲಿ ಸುಬ್ಬಣ್ಣನವರು ನನ್ನ ಬಳಿ ಬಂದು “ಮಲ್ಲಣ್ಣನವರೇ, ನಿಮ್ಮ ಬಗ್ಗೆ  ಕೇಳಿದ್ದೆ. ಆದರೆ ನಿಮ್ಮ ಕಂಠವನ್ನು ಕೇಳಿದ್ದು ಇವತ್ತೇ. ತುಂಬಾ ಚೆನ್ನಾಗಿದೆ. ಹೀಗೇ ಬೆಳೆಸಿಕೊಳ್ಳಿ” ಎಂಧು ಅವರು ಹೇಳುವಾಗ ಒಬ್ಬ ಕಲಾವಿದನ ಆಂತರಿಕ ಔದಾರ್ಯವನ್ನು ಅವರು ತೋರಿದಂತಾಯ್ತು.

ಹಾಡುಗಾರಿಕೆಯಲ್ಲಿರುವ ಆತ್ಮವಿಶ್ವಾಸ, ನಮ್ರತೆ ಹಾಗೂ ಶ್ರದ್ಧೆ ಇವರ ವ್ಯಕ್ತಿತ್ವದಲ್ಲಿಯೂ ಇದೆ. ಜನಪ್ರಿಯತೆಗಾಗಿ ಕೀಳು ಅಭಿರುಚಿಯ ಗೀತೆಗಳನ್ನು ಅವರು ಎಂದಿಗೂ ಆರಿಸಿಕೊಳ್ಳಲಿಲ್ಲ. ಪಿ. ಕಾಳಿಂಗರಾವ್‌ ಹಾಗೂ ಎಚ್.ಆರ್. ಲೀಲಾವತಿ ಮುಂತಾದ ಹಿರಿಯ ಗಾಯಕ ಗಾಯಕಿಯರಂತೆ ಕೇಳುವ ಸಹೃದಯರಿಗೆ ಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ನಿಂತಿರುವ ಉತ್ತಮ ಸಾಹಿತ್ಯವುಳ್ಳ ಗೀತೆಗಳನ್ನು ಉಣಬಡಿಸಿದವರು. ನಿಧಾನಸ್ಥರಾದ ನಮ್ಮ ಸುಬ್ಬಣ್ಣನವರಲ್ಲಿ ಮಾತು ಕಡಿಮೆ. ಆದರೆ ಯಾವುದೇ ವಿಷಯವನ್ನು  (ಅದರಲ್ಲೂ ಚರಿತ್ರೆಯ ವಿಷಯ ಬಂದಾಗ) ತುಂಬಾ ಗಹನವಾಗಿ ಮಾತನಾಡಬಲ್ಲರು. ಬದುಕಿನಲ್ಲಿ ಅನೇಕ ಏಳುಬೀಳುಗಳನ್ನು ಕಂಡರೂ ಎಲ್ಲವನ್ನೂ ಸಮಚಿತ್ತತೆಯಿಂದ ಸ್ವೀಕರಿಸಿದ ಸುಬ್ಬಣ್ಣ ಒಂದು ದೃಷ್ಟಿಯಲ್ಲಿ ಸ್ಥಿತಪ್ರಜ್ಞರೇ ಸರಿ. ಇವರ ಕಾಡುಕುದುರೆ ಹಾಡಿಗೆ ರಾಷ್ಟ್ರಪ್ರಶಸ್ತಿ ಬಂದಾಗ “ಎಸ್‌.ಪಿ. ಬಾಲಸುಬ್ರಹ್ಮಣ್ಯಂರವರಂತಹ ಗಾಯಕರಿಗೇ, ಇನ್ನೂ ಬರದ ಪ್ರಶಸ್ತಿ ನನಗೆ ಬಂದಿರುವುದು ಅದೃಷ್ಟವೇ ಸರಿ” ಎಂದು ಪ್ರತಿಕ್ರಿಯಿಸಿದ್ದಾರೆ. ಇಲದು ಅವರ ಸೌಜನ್ಯಕ್ಕೆ ಸಾಕ್ಷಿ. ಸುಬ್ಬಣ್ಣ ಎಂದೂ ಪ್ರಶಸ್ತಿಗಳನ್ನು ಅರಸಿಕೊಂಡು ಹೋದವರಲ್ಲ. ಆದರೆ ಏನೆಲ್ಲಾ ಪ್ರಶಸ್ತಿಗಳು ಅವರನ್ನು ಅರಸಿಬಂದವು. ಒಟ್ಟಿನಲ್ಲಿ ಗಾಯಕರ ನಡುವೆ ಗಾಯಕರಾಗಿ, ಸ್ನೇಹಿತರ ನಡುವೆ ಸ್ನೇಹಿತರಾಗಿ, ಪ್ರೀತಿಸುವ ಪತಿಯಾಗಿ, ಮುದ್ದಿಸುವ ತಂದೆಯಾಗಿ ವಿಶೇಷ ಆಕರ್ಷಣೆಯ ವ್ಯಕ್ತಿತ್ವವುಳ್ಳ ಸುಬ್ಬಣ್ಣನಂಥವರು ನಿಜಕ್ಕೂ ಅತಿವಿರಳ. ಕೆಲವರು ಹೊರಗೆ ಕಪ್ಪು ಒಳಗೆ ಬಿಳುಪು, ಮತ್ತೆ ಕೆಲವರು ಹೊರಗೆ ಬಿಳುಪು ಒಳಗೆ ಕಪ್ಪು. ಆದರೆ ನಮ್ಮ ಸುಬ್ಬಣ್ಣನ ಮನಸ್ಸೂ ಒಳಗೂ-ಹೊರಗೂ ಎಲ್ಲಾ ಅವರೂಪಿನಷ್ಟೇ ಸ್ವಚ್ಛ ಬಿಳುಪು.

ಸುಬ್ಬಣ್ಣನವರಿಗೆ ಸಂದ ಪ್ರಶಸ್ತಿಗಳು ಅಪಾರ; ಅವಲ್ಲಿ ಕೆಲವು ಉಲ್ಲೇಖನೀಯ.

೧೯೮೫: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ;೧೯೮೯: ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ೧೯೯೨: ದೆಹಲಿ ಕನ್ನಡಿಗ ಪತ್ರಿಕೆಯ ಕಾಳಿಂಗರಾವ್ ಪ್ರಶಸ್ತಿ; ೧೯೯೭, ಮೈಸೂರು ಅನಂತ ಸ್ವಾಮಿ ಸ್ಮಾರಕ ಪ್ರಶಸ್ತಿ; ೧೯೯೯, ರಾಜ್ಯದ ಅತ್ಯುನ್ನತ ಶಿಶುನಾಳ ಷರೀಫ ಪ್ರಶಸ್ತಿ.