ಜನನ : ೬-೫-೧೯೩೦ ರಂದು ದೇವಗಿರಿಯಲ್ಲಿ

ಮನೆತನ : ಕಲಾವಿದರ ಮನೆತನ. ತಂದೆ ಚಂದಯ್ಯಾ ಜೋಗಯ್ಯನವರು ಗಾಯಕರು ಹಾಗೂ ಪಿಟೀಲು ವಾದಕರಾಗಿದ್ದರು. ತಾಯಿ ಚೆನ್ನಬಸಮ್ಮ.

ಶಿಕ್ಷಣ : ದೇವಗಿರಿಯ ಚಂದ್ರಶೇಖರಯ್ಯ ಹಿರೇಮಠ ಅವರಲ್ಲಿ ಪ್ರಾರಂಭಿಕ ಶಿಕ್ಷಣ. ಅನಂತರ ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಉಭಯಗಾನ ವಿಶಾರದ ಡಾ|| ಪುಟ್ಟರಾಜ ಕವಿ ಗವಾಯಿಗಳ ಬಳಿ ಸಂಗೀತ, ಕಥಾಕೀರ್ತನ ಕಲೆಗಳಲ್ಲಿ ಉನ್ನತ ಶಿಕ್ಷಣ ಪಡೆದಿರುವುದಲ್ಲದೆ ಶಾಸ್ತ್ರಾಧ್ಯಯನವನ್ನು ಮಾಡಿದ್ದಾರೆ. ಹಾರ್ಮೋನಿಯಂ ಹಾಗೂ ತಬಲಾ ವಾದನದಲ್ಲೂ ಪರಿಶ್ರಮವಿದೆ.

ಕ್ಷೇತ್ರ ಸಾಧನೆ : ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಪುಣ್ಯತಿಥಿಯ ಸಂದರ್ಭದಲ್ಲಿ ಪ್ರಥಮ ಕೀರ್ತನ ಕಾರ್ಯಕ್ರಮ. ಅನಂತರ ಕರ್ನಾಟಕ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶಗಳಲ್ಲಿ ಸಂಚಾರ ಮಾಡಿರುವುದೇ ಅಲ್ಲದೆ ರಾಜ್ಯದ ನಾನಾ ಭಾಗಗಳಿಂದ ಧಾರವಾಡ, ಹಾವೇರಿ, ಬ್ಯಾಡಗಿ, ರಾಯಚೂರು, ಬಳ್ಳಾರಿ, ಗುಲಬರ್ಗಾ, ವಿಜಾಪುರ, ಬೆಳಗಾವಿ ಮುಂತಾದೆಡೆಗಳಲ್ಲೂ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ನಾಟಕ ಕಲೆಯಲ್ಲೂ ಸಾಕಷ್ಟು ಪರಿಶ್ರಮ ಪಡೆದು ಪಂಚಾಕ್ಷರಿ ಗವಾಯಿಗಳು ಸ್ಥಾಪಿಸಿದ ಶ್ರೀ ಕುಮಾರೇಶ್ವರ ಕೃಪಾ ಪೋಷಿತ ನಾಟ್ಯ ಸಂಸ್ಥೆಯಲ್ಲಿ ಸ್ತ್ರೀ ಪಾತ್ರ, ವಿದೂಷಕ ಹಾಗೂ ಇತರ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸಾಹಿತ್ಯ ಕೃಷಿಯನ್ನೂ ಮಾಡಿರುವ ಶಾಸ್ತ್ರೀಗಳು ’ಸ್ತ್ರೀ ನೀತಿ’ – ಪ್ರದ್ಯಮಾಲಾ ಹಾಗೂ ಕೆಲವೊಂದು ಮಂಗಳ ಗೀತೆಗಳ ರಚನೆ ಮಾಡಿರುತ್ತಾರೆ.

ಎಲ್ಲಕಿಂತ ಹೆಚ್ಚಿನ ಹಾಗು ಮಹತ್ವದ ಸಾಧನೆಯೆಂದರೆ ದೇವಗಿರಿ ಅಡ್ಡರಸ್ತೆಯಲ್ಲಿ ಸುಮಾರು ಎರಡು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ತಮ್ಮ ಗುರುಗಳಾದ ಪುಟ್ಟರಾಜ ಕವಿ ಗವಾಯಿಗಳ ಹೆಸರಿನಲ್ಲಿ ಮಹದ್ವಾರವೊಂದನ್ನು ನಿರ್ಮಿಸಿದ್ದಾರೆ. ಗವಾಯಿಗಳ ತವರೂರಾದ ದೇವಗಿರಿಯಲ್ಲಿ ಒಂದು ಪುಣ್ಯಾಶ್ರಮ ಸ್ಥಾಪಿಸಲು ನಾಲ್ಕು ಲಕ್ಷ ರೂಪಾಯಿಗಳನ್ನು ತಮ್ಮ ಪುರಾಣ ಪ್ರವಚನಗಳ ಮೂಲಕ ಸಂಗ್ರಹಿಸಿರುತ್ತಾರೆ. ಸುಮಾರು ೫೦ ವರ್ಷಗಳಿಗೂ ಮಿಕ್ಕಿ ಹರಿಕಥಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುತ್ತಾರೆ.

ಪ್ರಶಸ್ತಿ – ಪುರಸ್ಕಾರ : ಶಿವಾನುಭವ ತತ್ವ ಪ್ರಚಾರ ಸಮಿತಿ, ಸೊರಬ ವತಿಯಿಂದ ’ಕೀರ್ತನ ಕಲಾ ನಿಪುಣ’, ಶ್ರೀ ಸೋಗಿಪುರ ವರ್ಗ ಕಟೀಮನೆ ಮಠ ಇವರಿಂದ ’ಕೀರ್ತನ ಭಾಸ್ಕರ’, ಪುಟ್ಟರಾಜ ಗವಾಯಿಗಳ ೫೫೫ ನೇ ತುಲಭಾರ ಹಾಗೂ ಸಂಗೀತೋತ್ಸವದ ಸಂದರ್ಭದಲ್ಲಿ ಸನ್ಮಾನದೊಂದಿಗೆ “ಗುರು ಸೇವಾಯೋಗಿ” ಮುಂತಾಗಿ ಬಿರುದು ಸನ್ಮಾನಗಳೇ ಅಲ್ಲದೆ ಕನ್ನಡ ಸಾಹಿತ್ಯ ಪರಿಷತ್ತು, ಹಾವೇರಿ ಸಂಗೀತ ಕಲಾ ಬಳಗ ಮುಂತಾದ ಸಂಸ್ತೆಗಳಿಂದಲೂ ಗೌರವ ಸನ್ಮಾನಗಳು ಸಂದಿವೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೨೦೦೩-೦೪ ರ ಸಾಲಿನ ’ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.