ಸೊನ್ನಲಿಗೆಯ ನೆಲದ ಮೇಲೆ ಶ್ರಾವಣದ ವೈಭವವೆ ವೈಭವ.  ಚೈತ್ರ ವೈಶಾಖಗಳ ಮುಂಗಾರು ಮಳೆಗೆ ತುಂಬಿದ್ದ ಕೆರೆ ಈಗ ತುಳುಕುತ್ತಿದೆ.  ಕೆಂಪು ಕುದುರೆಯ ಸಾಲಿನಂತೆ ಅಲೆಗಳು ಒಂದರ ಹಿಂದೊಂದು ಧಾವಿಸುತ್ತಿವೆ.  ಕೆರೆಯ ಉದ್ದಕ್ಕೂ ಹೊಂಗೆ, ಹಿಪ್ಪೆ, ನೇರಲೆ, ಅರಳಿ ಮೊದಲಾದ ಮರಗಳು ಸಮೃದ್ಧವಾದ ಹಸುರಿನಿಂದ ಬೀಸುವ ಗಾಳಿಗೆ ಜೋಲಿ ಹೊಡೆಯುತ್ತಿವೆ.  ಕೆರೆಯ ಪಕ್ಕದ ಹೂವಿನ ತೋಟದಲ್ಲಿ ಹಲವಾರು ಬಣ್ಣದ ಹೂವಿನ ಗಿಡಗಳು ಶೋಭಿಸುತ್ತಿವೆ.  ಅದರಾಚೆ ಅನತಿ ದೂರದಲ್ಲಿ ಈ ಕ್ಷೇತ್ರಕ್ಕೆ ಸೇರಿದ ಜಮೀನಿನಲ್ಲಿ ತೆನೆದೂಗುವ ಪೈರಿನ ಹರಹು ಕಣ್ಣನ್ನು ತಣಿಸುತ್ತಿದೆ.  ಒಂದು ಕಾಲಕ್ಕೆ ಬರೀ ಬರಡುನೆಲದ ಬಯಲಾಗಿದ್ದ ಸೊನ್ನಲಿಗೆ ಈ ಸಸ್ಯ ಸಮೃದ್ಧಿಯಿಂದ ಚೇತೋಹಾರಿಯಾಗಿದೆ.

ಅದೊಂದು ಸಂಜೆ, ಸಿದ್ಧರಾಮನ ಕೆಲವು ಕೆಲಸಗಾರ ಶಿಷ್ಯರು, ಕೆಲವು ದಿನಗಳ ಹಿಂದೆ ಬಿದ್ದ ಶ್ರಾವಣದ ಮಳೆಯ ಹೊಡೆತಕ್ಕೆ ಕೋಡಿಯ ಬಳಿ ಕೊಂಚ ಕುಸಿದಿದ್ದ ಕೆರೆಯ ಏರಿಗೆ ಕಲ್ಲು ಕಟ್ಟಿ ಭದ್ರಪಡಿಸುವ ಕಾರ್ಯದಲ್ಲಿ ತೊಡಗಿದ್ದರು.  ಸಿದ್ಧರಾಮನು, ಅಣ್ಣ ಬೊಮ್ಮಯ್ಯನ ಜತೆಗೆ ನಿಂತು ಅದರ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದನು.  ಆಗ ಸೊನ್ನಲಿಗೆಗೆ ಉತ್ತರದ ಕಡೆಯಿಂದ ಇತ್ತ ಹಾದು ಹೋಗುವ ದಾರಿಯಲ್ಲಿ ಮಹಾತೇಜಸ್ವಿಯಾದ ಜಂಗಮರೊಬ್ಬರು ಗಂಭೀರವಾಗಿ ನಡೆದು ಬರುತ್ತಿದ್ದರು.  ಕಾವಿಯಬಣ್ಣದ ಉದ್ದನೆಯ ನಿಲುವಂಗಿ; ಜಟ್ಟಿಯ ಮೈಕಟ್ಟು;  ಹೆಗಲಲ್ಲಿ ಒಂದು ಜೋಳಿಗೆ; ಬಲದ ಕೈಯಲ್ಲೊಂದು ದಂಡ; ಮುಖದ ತುಂಬ ಹೊದರು ಹೊದರಾಗಿ ವ್ಯಾಪಿಸಿಕೊಂಡ ಕಪ್ಪಾದ ಗಡ್ಡ ಮೀಸೆಗಳು; ಎತ್ತಿಕಟ್ಟಿದ ಜಟೆ; ಆಳವೂ ಪ್ರಶಾಂತವೂ ಆದ ಕಣ್ಣುಗಳು; ಕೊರಳಲ್ಲಿ ಸಣ್ಣದೊಂದು ರುದ್ರಾಕ್ಷಿಯ ಮಾಲೆ.  ಆ ಮೂರ್ತಿ ನಿಧ ನಿಧಾನಕ್ಕೆ ಬರುತ್ತಿದ್ದ ಹಾಗೆಯೆ ಸಿದ್ಧರಾಮನ ಅಂತರಂಗವನ್ನು ಅದಾವುದೋ ಒಂದು ಅನಿರ್ವಚನೀಯ ಶಕ್ತಿಯೊಂದು ಸೆಳೆದಂತಾಯಿತು.  ಹಿಂದೆ ತಾನು ಕರುಗಾಯಲು ಹೋಗುತ್ತಿದ್ದ ಸಮಯದಲ್ಲಿ ನವಣೆಯ ಹೊಲದ ಬಳಿ ತಾನು ಮೊದಲು ಕಂಡ ಮಲ್ಲಯ್ಯನ ಮೂರ್ತಿಯಂತೆಯೇ ಅವರು ಗೋಚರಿಸಿದರು.  ಆದರೆ ಇನ್ನೂ ಅವರು ಹತ್ತಿರ ಬಂದಾಗ, ಇವರು ಅವರಿಗಿಂತ ಬೇರೆಯೇ ಅನ್ನಿಸಿತು.  ಅವರ ಸಾನಿಧ್ಯದ ಮಹಿಮೆಯೋ ಎಂಬಂತೆ ಸಿದ್ಧರಾಮನ ಶಿಷ್ಯರೆಲ್ಲ ತಮ್ಮ ತಮ್ಮ ಕೆಲಸವನ್ನು ನಿಲ್ಲಿಸಿ ಅವರ ಪಾದಗಳಿಗೆ ಎರಗಿದರು.  ಸಿದ್ಧರಾಮನೂ ಬೊಮ್ಮಯ್ಯನೂ ನಮಸ್ಕರಿಸಿದರು.  ಆಗ ಬೊಮ್ಮಯ್ಯನು ಅವರನ್ನು ಕುರಿತು ‘ಪರಮ ಜಂಗಮಮೂರ್ತಿಗಳೇ, ಪೂಜ್ಯರಾದ ತಾವು ಯಾರೆಂಬುದನ್ನು ದಯಮಾಡಿ ತಿಳಿಸಿ ಕೊಡಬೇಕು’ ಎಂದನು.  ಆ ಜಂಗಮರು ನಸುನಕ್ಕು ‘ನಾನೆ? ನಾನು ಯಾರೋ ನನಗೆ ತಿಳಿಯದು.  ಆದರೆ ನನ್ನನ್ನು ಅಲ್ಲಮ, ಅಲ್ಲಮ ಪ್ರಭು ಎಂದು ಜನರು ಕರೆಯುತ್ತಾರೆ.  ನೀವು ಯಾರು? ಈ ಕೆರೆ ದೇಗುಲಗಳ ಕ್ಷೇತ್ರ ಯಾವುದು?’ ಎಂದರು.

ಸಿದ್ಧರಾಮನೂ ಅವನ ಶಿಷ್ಯರೂ ಅಲ್ಲಮ ಎಂಬ ಹೆಸರನ್ನು ಕೇಳಿ ಸಂಭ್ರಾಂತರಾದರು.  ಓ, ಇವರೇ ಆ ಜಂಗಮಮೂರ್ತಿ? ಯಾರನ್ನು ತಾವೆಲ್ಲ ಮಾಯಾಕೋಲಾಹಲ ಮೂರ್ತಿ ಎಂದು ಕೇಳಿದ್ದೆವೋ, ಯಾರು ಅನೇಕ ಸಿದ್ಧ ಸಾಧಕರನ್ನು ಒರೆಗಲ್ಲಿಗೆ ಹಚ್ಚಿ ಅವರವರ ಅಂತಸ್ಸತ್ವವನ್ನು ಬಯಲಿಗೆಳೆದವರೆಂದು ಹೇಳಲಾಗುತ್ತಿದೆಯೋ, ಯಾರು ಕೆಲವೇ ವರ್ಷಗಳ ಹಿಂದೆ ಕಲ್ಯಾಣದ ಬಸವಣ್ಣನವರ ಶರಣಗಣಗಳ ಗೌರವಾದರಗಳಿಗೆ ಪಾತ್ರರಾಗಿ, ಅವರಿಗೆ ಮಾರ್ಗದರ್ಶನ ಮಾಡಿ, ಅನಂತರ ಕೆಲವು ಕಾಲ ಉತ್ತರ ಭಾರತದ ಪರ್ಯಟನವನ್ನು ಕೈಕೊಂಡು ಮತ್ತೆ ಬರುವುದಾಗಿ ಅವರಿಗೆ ಆಶ್ವಾಸನೆ ನೀಡಿ ಹೊರಟರೋ ಆ ಶ್ರೀಮನ್ನಿರಂಜನ ಜಂಗಮ ಮೂರ್ತಿಯಾದ ಅಲ್ಲಮಪ್ರಭುಗಳೇ ಇವರು – ಎಂದು ಅವರೆಲ್ಲರೂ ಪುಲಕಗೊಂಡರು.  ಆ ಮೌನ ಸಂಭ್ರಮದ ಒಂದೆರಡು ಕ್ಷಣಗಳ ನಂತರ ಬೊಮ್ಮಯ್ಯ ಹೇಳಿದ : ‘ಪ್ರಭುವೇ, ಇದು ಸೊನ್ನಲಿಗೆ.  ಕಪಿಲಸಿದ್ಧ ಮಲ್ಲಿಕಾರ್ಜುನನ ಶ್ರೀಕ್ಷೇತ್ರ.  ಇದೋ ಇವರೇ ಕ್ಷೇತ್ರಪಾಲಕರಾದ ಶಿವಯೋಗಿ ಸಿದ್ಧರಾಮಯ್ಯನವರು.  ಈ ಕೆರೆಯನ್ನು ಕಟ್ಟಿಸಿದವರೂ ಇವರೇ.  ಅಲ್ಲಿ ಅನತಿ ದೂರದಲ್ಲಿ ಕಾಣುತ್ತಿದೆಯಲ್ಲ ಮಲ್ಲಿಕಾರ್ಜುನನ ಗುಡಿ ಮತ್ತು ಅದರ ಸುತ್ತಣ ಅನೇಕ ಲಿಂಗ ಪ್ರತಿಷ್ಠಾಪನೆಗಳು ಎಲ್ಲವನ್ನೂ ಮಾಡಿಸಿದವರು ಇವರೇ..’

‘ ಹೌದೆ? ನೀವೇ ಶಿವಯೋಗಿ ಸಿದ್ಧರಾಮಯ್ಯನವರು? ಈ ಕೆರೆ, ಈ ದೇಗುಲ ಇದೆಲ್ಲಾ ನೀವೇ ಕಟ್ಟಿಸಿದ್ದು? ಒಳ್ಳೆಯದು.  ನಿಮ್ಮ ಹೆಸರೇನೆಂದಿರಿ, ಸಿದ್ಧರಾಮ ಎಂದೆ?  ಆದರೆ ‘ವಡ್ಡರಾಮ’ ಎಂದಿದ್ದರೆ ಹೆಚ್ಚು ಸಾರ್ಥಕವಾಗುತ್ತಿತ್ತು’ ಎಂದ ಅಲ್ಲಮ.

ಶಿಷ್ಯರು ಈ ಮಾತನ್ನು ಕೇಳಿ ಗಾಬರಿಯಾದರು.  ಇದೇನಿದು, ಯಾವುದನ್ನು ಸಿದ್ಧರಾಮನು ಶಿವಯೋಗಕ್ಕೆ ದಾರಿ ಎಂದು ಈ ಲೋಕದ ಜನರ ಒಳ್ಳೆಯದಕ್ಕೆ ಮಾಡುತ್ತಿದ್ದನೋ, ಅಂತಹ ಕಾರ್ಯಗಳನ್ನು ಜರಿದು ಅವರನ್ನು ‘ವಡ್ಡರಾಮ‘ನೆಂದು ಕರೆಯಬಹುದೆ ಎಂದು ಅನ್ನಿಸಿತು.  ಯಾರೂ ಏನೂ ಮಾತನಾಡಲಿಲ್ಲ.  ಸಿದ್ಧರಾಮನು ಹಸನ್ಮುಖಿಯಾಗಿಯೇ ಪ್ರಭುವಿನ ಕಡೆ ನೋಡುತ್ತಿದ್ದನು.  ಅಲ್ಲಮನು ಆ ಕೆರೆಯ ಹರಹನ್ನು ಕೊಂಚಕಾಲ ದಿಟ್ಟಿಸಿ, ‘ಕೆರೆಯೇನೋ ದೊಡ್ಡದಾಗಿದೆ, ಒಳ್ಳೆಯದು.  ನಿಮಗೆ ಗೊತ್ತೆ, ನಾನೂ ಒಂದು ಕೆರೆಯನ್ನು ಕಟ್ಟಿದ್ದೇನೆ’ ಎಂದ.  ಒಂದು ಕ್ಷಣದ ಹಿಂದೆ ಈ ಕೆರೆಯನ್ನು ಕಟ್ಟಿಸಿದ್ದು ಸಿದ್ಧರಾಮಯ್ಯ ಎಂದು ಹೇಳಿದಾಗ,  ಈ ಕಾರಣಕ್ಕೆ ‘ವಡ್ಡರಾಮ’ನೆಂದು ಟೀಕಿಸಿದ ಈ ವ್ಯಕ್ತಿಯೇ ಈಗ ತಾನೂ ಒಂದು ಕೆರೆಯನ್ನು ಕಟ್ಟಿದ್ದೇನೆ ಅನ್ನುತ್ತಾನಲ್ಲ! ಆ ಅರೆಮರಳು ಜಂಗಮನೊಂದಿಗೆ ವ್ಯವಹರಿಸುವುದೇ ಅಸಾಧ್ಯ ಎಂದು ಬೊಮ್ಮಯ್ಯ ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದಾಗ, ಅಲ್ಲಮ ತನ್ನ ಮಾತನ್ನು ಮುಂದುವರಿಸಿದ : ‘ತನುವೆಂಬ ಏರಿಗೆ ಮನವೆಂಬ ಕಟ್ಟೆ, ಆಚಾರವೆಂಬ ಸೋಪಾನ.  ಪರಮಾನಂದವೆಂಬ ಜಲವ ತುಂಬಿ ಕೆರೆಯ ಕಟ್ಟಬಲ್ಲವನಾರನೂ ಕಾಣೆ.  ನಾ ಕಟ್ಟಿದ ಕೆರೆ ಸ್ಥಿರವಾಯಿತ್ತು ಗುಹೇಶ್ವರಾ ನಿಮ್ಮಾಣೆ’.  ಈ ಉಕ್ತಿಯನ್ನು ಕೇಳಿ ಶಿಷ್ಯರು ಬೆರಗುಗೊಂಡರು.  ಸಿದ್ಧರಾಮನು ಆನಂದದಿಂದ ತಲೆದೂಗಿದನು.  ತಮಗೆ ಗೊತ್ತಿದ್ದದ್ದು ಕಲ್ಲುಮಣ್ಣುಗಳಿಂದ ಕಟ್ಟಲಾದ ಕೆರೆ.  ಆದರೆ ಅಲ್ಲಮ ಹೇಳುತ್ತಿರುವುದು ಬೇರೊಂದು ಅಂತರಂಗದ ಹಾಗೂ ಸ್ಥಿರವಾದ ಕೆರೆಯ ನಿರ್ಮಾಣ.  ಆ ಬಗೆಯ ಚಿಂತನೆ, ಅದನ್ನು ಹೇಳಿದ ರೀತಿ ಎಲ್ಲವೂ ಸಿದ್ಧರಾಮನ ಶಿಷ್ಯರಿಗಂತೂ ಅಪೂರ್ವವಾದ ಅನುಭವವನ್ನೆ ತೆರೆದಂತಾಯಿತು.  ಸಿದ್ಧರಾಮನು ‘ಪ್ರಭುಗಳು ಮೊದಲು ನಮ್ಮ ಮಠಕ್ಕೆ ದಯಮಾಡಿಸೋಣವಾಗಲಿ.  ಬಹುದೂರದಿಂದ ಬಂದಿರುವ ತಮ್ಮನ್ನು ಹೀಗೆ, ಇಲ್ಲಿ ನಿಲ್ಲಿಸಿಕೊಂಡು ಮಾತನಾಡಿ ಬಳಲಿಸುವುದು ನಮಗೆ ಸಲ್ಲದು.  ನಮ್ಮ ಪುಣ್ಯದ ಫಲವಾಗಿ ತಾವು ಬಂದಿದ್ದೀರಿ.  ಇಲ್ಲಿ ನಮ್ಮ ಜತೆಗಿದ್ದು ವಿಶ್ರಾಂತಿ ಪಡೆದು ನಮ್ಮ ಮೇಲೆ ಅನುಗ್ರಹ ಮಾಡಬೇಕು’ ಎಂದು ಕೇಳಿಕೊಂಡನು.

ಅಂದಿನಿರುಳು ಸೊನ್ನಲಿಗೆಯ ಮಠದಲ್ಲಿ ವಿಶ್ರಮಿಸಿದ ನಂತರ ಅಲ್ಲಮನು ಮರುದಿನ ಮುಂಜಾನೆ ಸಿದ್ಧರಾಮನೊಂದಿಗೆ ಇಡೀ ಕ್ಷೇತ್ರದ ಚಟುವಟಿಕೆಗಳನ್ನು ವೀಕ್ಷಿಸಿದನು.  ಕಪಿಲಸಿದ್ಧ ಮಲ್ಲಿಕಾರ್ಜುನನ ದೇಗುಲದಲ್ಲಿ ಬಹು ಬಗೆಯ ವಾದ್ಯಗಳು ಮೊರೆಯುತ್ತಿದ್ದವು; ಧೂಪ ದೀಪ-ಅಲಂಕಾರಾದಿಗಳಿಂದ ದೇವಸ್ಥಾನ ಝಗ ಝಗಿಸುತ್ತಿತ್ತು; ನೂರಾರು ಭಕ್ತರು ಕಿಕ್ಕಿರಿದಿದ್ದರು.  ಕೆಲವರು ದೇವಾಲಯದ ಸುತ್ತ ಉರುಳು ಸೇವೆ ಸಲ್ಲಿಸುತ್ತಿದ್ದರು; ಮತ್ತೆ ಕೆಲವರು ಬಗೆಬಗೆಯ ಹರಕೆ ಸಲ್ಲಿಸುತ್ತಿದ್ದರು; ಊರ ತುಂಬಾ ಪ್ರತಿಷ್ಠಾಪಿಸಲಾಗಿದ್ದ ಲಿಂಗಕ್ಕೆ ಎಡೆಯಾಡುತ್ತಿದ್ದರು; ಬಗೆಬಗೆಯ ನೇಮಗಳನ್ನು ಸಲ್ಲಿಸುತ್ತ ಜನ ಸಂಭ್ರಮಿತರಾಗಿದ್ದರು.  ದೇವಸ್ಥಾನದ ಪಕ್ಕದ ಮೊಗಸಾಲೆಯಲ್ಲಿ ಬಗೆ ಬಗೆಯ ಹೋಮ ಹವನಾದಿಗಳು ನಡೆಯುತ್ತಿದ್ದವು.  ದೇವಸ್ಥಾನದ ವ್ಯವಸ್ಥಾಪಕರು ಹಾಗೂ ಪೂಜಾರಿಗಳು ಭಕ್ತಾದಿಗಳ  ಅಪೇಕ್ಷೆಗಳಿಗೆ ಅನುಸಾರವಾಗಿ ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿದ್ದರು.  ಅವನ್ನೆಲ್ಲ ನೋಡುತ್ತ ಅಲ್ಲಮನು ಸಿದ್ಧರಾಮನ ಕಡೆ ನೋಡುತ್ತಾ ‘ಇದೇನಿದು ಸಿದ್ಧರಾಮಯ್ಯ, ಇದೇನು ಸಂತೆಯೋ, ದೇವಸ್ಥಾನವೋ? ಈ ಗದ್ದಲ- ಈ ಆಡಂಬರ- ಈ ನೇಮ- ಈ ಹೋಮಗಳಲ್ಲಿ, ಈ ಕಲ್ಲಮೇಲೆ ಕಲ್ಲು ಹೇರಿದ ಈ ಕಟ್ಟಡದಲ್ಲಿ ದೇವರು ಹೇಗೆ ತಾನೇ ಇದ್ದಾನು!’ ಎಂದ. ‘ದೇಹದೊಳಗೆ ದೇಗುಲವಿರಲು ಮತ್ತೆ ಬೇರೆ ದೇವಾಲಯವೇಕಯ್ಯ, ಹೇಳಲಿಲ್ಲ ಕೇಳಲಿಲ್ಲ, ಗುಹೇಶ್ವರಾ, ನೀನು ಕಲ್ಲಾದರೆ ನಾನೇನಪ್ಪೆನು?’ ಎಂದು ತನ್ನೊಳಗೇ ತಾನು ಮಾತಾಡಿಕೊಂಡನು.  ಪ್ರಭುವಿನ ಮಾತನ್ನು ಕೇಳುತ್ತಿದ್ದ ಹಾಗೆ ಸಿದ್ಧರಾಮನಿಗೆ ತಾನು ಹಿಂದೆ ಶ್ರೀಶೈಲದ ಮಠದಲ್ಲಿ ಮಲ್ಲಯ್ಯನವರೊಡನೆ ಮಾತನಾಡಿದ ಸಂದರ್ಭವೊಂದು ತನಗೆ ನೆನಪಿಗೆ ಬಂದು, ಸಾಕ್ಷಾತ್ ಜೀವಂತನಾದ ಮಲ್ಲಯ್ಯನನ್ನು ಹುಡುಕಿಕೊಂಡು ಹೋದಾಗ ಅಂದು ದೇಗುಲದೊಳಗಿದ್ದ ಜನ, ಶ್ರೀಶೈಲಲಿಂಗವನ್ನು ತೋರಿಸಿ ಇವನೇ ಮಲ್ಲಯ್ಯ ಅಂದಾಗ ತಾನು ಅದನ್ನು ಒಪ್ಪದೆ ತನಗೆ ವಾಸ್ತವವಾಗಿ ಕಂಡ ಮಲ್ಲಯ್ಯನನ್ನು ಹುಡುಕಿಕೊಂಡು ಹೋದದ್ದೂ, ಅನಂತರ ಆ ಮಲ್ಲಯ್ಯನವರು, ತಾನೆತ್ತಿದ ಸಂದೇಹಕ್ಕೆ ಉತ್ತರವಾಗಿ, ಶ್ರೀಶೈಲದಲ್ಲಿ ಲಿಂಗರೂಪದಲ್ಲಿ ಅರ್ಚನೆಗೊಳ್ಳುವ ‘ಕಲ್ಲು’, ‘ಅದು ಕಲ್ಲೆಂದವರಿಗೆ ಕಲ್ಲು ದೇವರೆಂದವರಿಗೆ ದೇವರು’ ಎಂದು ಹೇಳಿದ್ದೂ ನೆನಪಿಗೆ ಬಂತು.  ಸಿದ್ಧರಾಮನು ಹೇಳಿದ, ‘ನಿಮ್ಮ ನಿಲುವಿಗೆ ಈ ದೇವಸ್ಥಾನಾದಿಗಳು ಅರ್ಥಹೀನವಾಗಿ ಕಾಣಬಹುದು ನಿಜ.  ಆದರೆ, ಈ ಲೋಕದ ಸಾಮಾನ್ಯರಿಗೆ, ಅವರ ಭಕ್ತಿ ಶ್ರದ್ಧೆಗಳ ಸಂವರ್ಧನೆಗೆ, ಇಂಥದೊಂದು ಮೊದಲ ನೆಲೆ ಬೇಕೇ ಬೇಕಲ್ಲವೆ?  ಇಷ್ಟರ ಮೇಲೆ ಈ ರೀತಿಯ ಕೆರೆ ದೇಗುಲಗಳ ನಿರ್ಮಾಣದ ಮೂಲಕ ಲೋಕಸೇವೆಯಲ್ಲಿ ತೊಡಗು ಎಂದು ನನಗೆ ನಿರ್ದೇಶನ ಮಾಡಿದವರೂ ಶ್ರೀಶೈಲದ ಮಲ್ಲಯ್ಯನವರೇ.  ಈಗ ಮತ್ತೆ ಅದೇ ಮಲ್ಲಯ್ಯನವರು, ‘ಎಷ್ಟು ದಿನ ಈ ಕೆಲಸದಲ್ಲಿ ತೊಡಗಿರುತ್ತೀಯ ಇನ್ನು ಸಾಕು’ ಎಂದು ಬಹುಶಃ ನಿಮ್ಮ ಮೂಲಕವಾಗಿ ನಿರ್ದೇಶನ ಕೊಡುತ್ತಿರಬಹುದೆಂದು ತಿಳಿಯುತ್ತೇನೆ’ ಎಂದನು ಸಿದ್ಧರಾಮ.  ಪ್ರಭು ಮಾತನಾಡಲಿಲ್ಲ.  ಸಿದ್ಧರಾಮನ ಜತೆಗೆ, ಆತ ನಿಮಿಸಿದ ಅನ್ನ ಸತ್ರಗಳನ್ನೂ, ಅರವಟ್ಟಿಗೆಗಳನ್ನೂ ನೋಡಿದ.  ಆ ದೇವಸ್ಥಾನ.  ಅದರ ಆಜುಬಾಜಿನಲ್ಲಿದ್ದ ಅನೇಕ ಚಿಕ್ಕ ಚಿಕ್ಕ ಪುಡಿದೇವತೆಗಳು, ಸೆಳ್ಳಿಗೆಯಿಂದ ತಂದು ಸ್ಥಾಪಿಸಿದ ಬೃಹದ್‌ಗಾತ್ರದ ಗಣಪತಿ-ಎಲ್ಲೆಂದರಲ್ಲಿ ಜನ,, ಜನ, ಜನ! ಸಿದ್ಧರಾಮನನ್ನು ಕುರಿತು ‘ಇದೇನು ಸಿದ್ಧರಾಮಯ್ಯ, ಈ ದೇವಸ್ಥಾನ’ ಈ ಭಕ್ತಾದಿಗಳು, ಈ ಸತ್ರ, ಈ ಅರವಟ್ಟಿಗೆ ಇದನ್ನೆಲ್ಲ ನೋಡಿಕೊಳ್ಳುವ ವ್ಯವಸ್ಥೆ, ಮತ್ತು ಅದರ ಜವಾಬ್ದಾರಿ ಹಾಗೂ ಚಿಂತೆ ಇವನ್ನೆಲ್ಲ ನೋಡಿದರೆ, ದೊಡ್ಡದೊಂದು ಸಂಸಾರವೇ ನಿನ್ನನ್ನು ಸುತ್ತಿಕೊಂಡಂತಾಗಿದೆಯಲ್ಲ!  ‘ಅನ್ನವನಿಕ್ಕಿ ನನ್ನಿಯ ನುಡಿದು ಅರವಟ್ಟಿಗೆಯನಿಕ್ಕಿ ಕೆರೆಯ ಕಟ್ಟಿಸಿದರೆ ಮರಣಬಂದ ಮೇಲೆ ಸ್ವರ್ಗ ಉಂಟಲ್ಲದೆ ಶಿವನ ನಿಜವು ಸಾಧ್ಯವಾಗದು.  ಗುಹೇಶ್ವರನ ಅರಿದ ಶರಣಂಗೆ ಆವ ಫಲವೂ ಇಲ್ಲ’ ಎಂದನು ಪ್ರಭುದೇವ.  ಸಿದ್ಧರಾಮನಿಗೂ ಗೊತ್ತಿತ್ತು.  ಕೆರೆ-ಬಾವಿ-ದೇವಾಲಯಗಳನ್ನು, ಉಳ್ಳವರು ಅಥವಾ ಹಣವಂತರು ಕೀರ್ತಿ ಪ್ರತಿಷ್ಠೆಗಾಗಿಯೋ, ಪುಣ್ಯ ಸಂಪಾದನೆಗಾಗಿಯೋ, ಸ್ವರ್ಗ ಪ್ರಾಪ್ತಿಯ ಆಸೆಗಾಗಿಯೋ ಮಾಡಿಸುತ್ತಾ ಬಂದಿದ್ದಾರೆ ಎನ್ನುವುದು.  ಆದರೆ ಯಾಕೆ ಹೀಗೆ ಪ್ರಭು ನನಗೆ ಈ ಮಾತನ್ನು ಹೇಳುತ್ತಿದ್ದಾರೆ.  ತನ್ನ ದಾರಿ ಹಾಗೂ ಗುರಿಗಳೆರಡೂ ಬೇರೆ ಎಂಬುದನ್ನು ಇವರಿಗೆ ತಿಳಿಸುವುದು ಹೇಗೆ ಎಂದು ಸಿದ್ಧರಾಮನ ಮನಸ್ಸು ಹೊಯ್ದಾಡಿತು.  ಆತ ಹೇಳಿದ : ‘ಪ್ರಭುವೇ ಖ್ಯಾತಿ ಪೂಜಾಲಾಭಗಳಿಗಾಗಿ ಜನ ಈ ಬಗೆಯ ಕಾರ್ಯಗಳನ್ನು ಕೈಕೊಳ್ಳುವರೆಂದು ನಾನು ಬಲ್ಲೆ.  ಆದರೆ ನನ್ನದು ಯಾವ ಬಗೆಯ ಕಾಮನೆಗಳನ್ನೂ ಗುರಿಯಾಗಿಸಿಕೊಂಡ ಕಾರ್ಯವಲ್ಲ.  ನಾನು ಈ ಬಗೆಯ ಬಹಿರಂಗದ ಕರ್ಮಗಳಲ್ಲಿ ತೊಡಗಿ ಗುಹೇಶ್ವರ ಲಿಂಗವನ್ನು ಮರೆತಿದ್ದೇನೆಂದು ತಾವು ಭಾವಿಸುವಿರ?  ಈ ಕರ್ಮ ಶ್ರೀಮಲ್ಲಿಕಾರ್ಜುನನ ನಿರೂಪದಿಂದಲೇ ನನ್ನ ನಿಮಿತ್ತವಾಗಿ ನಡೆಯುವುದೆಂಬ ಅರಿವು ನನಗಿದೆ.  ಈ ನಿರಂತರ ಕರ್ಮ ನನ್ನ ಅಂತರಂಗಸಾಧನೆಯ ಬಹಿರಂಗ ರೂಪ ಮಾತ್ರ.  ನನ್ನ ಪಾಲಿಗೆ ಜಗತ್ತಿನ ಸಚರಾಚರವೂ ಪರಶಿವನ ಸಾಕಾರ ರೂಪವೇ.  ಈ ಲೋಕದಲ್ಲಿರುವ, ಜೀವರ ದುಃಖವನ್ನು ಸಂಕಟವನ್ನು, ದಾರಿದ್ರ್ಯವನ್ನು ಅಜ್ಞಾನವನ್ನು ಕೈಲಾದಮಟ್ಟಿಗೆ ಕಡಮೆ ಮಾಡಲು ನಾವು ನೆರವಾಗದೆ ಹೋದರೆ ಏನು ಪ್ರಯೋಜನ?  ‘ನಿಜ, ನಿಜ’ ಅಲ್ಲಮನು ನಡುವೆ ಬಾಯಿ ಹಾಕಿದ : ‘ಲೋಕದಲ್ಲಿ ಕಷ್ಟವಿದೆ.  ಸಂಕಟವಿದೆ, ದುಃಖವಿದೆ.  ಅದನ್ನು ಹೋಗಲಾಡಿಸಲು ಕಾರ್ಯ ಪ್ರವೃತ್ತವಾಗುವುದೂ ಒಳ್ಳೆಯದೇ.  ಆದರೆ ನಿನ್ನಂಥ ಶಿವಯೋಗಿಯಾದವನು ಈ ಬಗೆಯ ಕರ್ಮಬಂಧನಗಳಲ್ಲಿ ಇನ್ನೂ ಎಷ್ಟು ಕಾಲ ತೊಡಗಬೇಕು ಅಂದು ಕೊಂಡಿದ್ದೀಯೆ?  ಈ ಲೋಕದ ನೋವು-ಸಂಕಟ-ದಾರಿದ್ರ  ಎಷ್ಟಿದೆಯೆಂದರೆ, ಅದನ್ನು ನಾನೂ ನೀನೂ ಈ ಕೂಡಲೆ ಯಾಕೆ, ಈ ಜನ್ಮದಲ್ಲೇ ನಿವಾರಿಸಬಲ್ಲೆವೆ; ನಮಗೆ ಚಳಿಯಾದರೆ ಕಂಬಳಿ ಹೊದ್ದುಕೊಳ್ಳಬಹುದು.  ಆದರೆ ‘ಬೆಟ್ಟಕ್ಕೆ ಚಳಿಯಾದರೆ ಏನು ಹೊದ್ದಿಸಬಹುದಯ್ಯಾ?’ ನೀನೇನೋ ಯಾವ ಫಲವನ್ನೂ ನಿರೀಕ್ಷಿಸದೆ ಈ ಕೆಲಸಗಳಲ್ಲಿ ತೊಡಗಿರಬಹುದು; ಆದರೆ ಮಾಡುತ್ತ ಮಾಡುತ್ತ ಮನಸ್ಸು ಅದೇ ದೊಡ್ಡದೆಂಬಂತೆ ಅದಕ್ಕೇ ಅಂಟಿಕೊಳ್ಳುವ ಸ್ವಭಾವದ್ದು.  ನಿಜ; ಇವೆಲ್ಲ ಜೀವರ ಮೇಲಣ ಅನುಕಂಪೆಯಿಂದ ನೀನು ಕೈಕೊಂಡ ಕರ್ಮಗಳೇ.  ಆದರೆ ಅವುಗಳೆಲ್ಲ ನಾಳೆ ನೀನು ಏರಬೇಕಾದ ನಿಲುವಿನ ಹಿಂದಣ ಹೆಜ್ಜೆಗಳಷ್ಟೇ.  ‘ಕೆರೆ ದೇಗುಲಂಗಳೆಲ್ಲವೂ ಹಿಂದಣ ಅಡಿವಜ್ಜೆಗೆ ಒಳಗು; ಕರ್ಮ ಕಾಂಡ ಯೋಗಂಗಳೆಲ್ಲವೂ ಭವದ ತೆಕ್ಕೆಗೆ ಒಳಗು.  ಹಿಂದಣ ಮುಂದಣ ಸಂದನಳಿದು ಗುಹೇಶ್ವರ ಲಿಂಗದಲ್ಲಿ ಸಂದಿರಬೇಕು ಸಿದ್ಧರಾಮಯ್ಯ’.  ಒಂದು ವೇಳೆ ಸಾಕ್ಷಾತ್ ಮಲ್ಲಿನಾಥನೆ ನಿನ್ನೆದುರು ಪ್ರತ್ಯಕ್ಷವಾಗಿ ನಿನಗೆ ಬೇಕಾದ ವರವನ್ನು ಕೇಳಿಕೋ ಎನ್ನುತ್ತಾನೆ ಎಂದು ಇಟ್ಟುಕೋ.  ಆಗ ಅವನನ್ನು ಕುರಿತು ಏನನ್ನು ಕೇಳುತ್ತೀಯ? ಇನ್ನೊಂದು ನಾಲ್ಕು ಕೆರೆಗಳನ್ನು ಸೃಷ್ಟಿಸು ಅನ್ನುತ್ತೀಯಾ? ಇನ್ನೊಂದಿಷ್ಟು ದೇವಾಲಯಗಳನ್ನು ಕಟ್ಟಿಸು ಎಂದು ಕೇಳುತ್ತೀಯಾ? ಹಲವು ಅನ್ನ ಸತ್ರ ಅರವಟ್ಟಿಗೆಗಳು ಬೇಕೆಂದು ಕೇಳುತ್ತೀಯಾ? ಅಥವಾ ಪರಮಾತ್ಮನಲ್ಲಿ ಅಖಂಡ ಶ್ರದ್ದಾ ಭಕ್ತಿಯನ್ನೂ, ಆತನ ಸಾಕ್ಷಾತ್ಕಾರವನ್ನೂ, ಮಹಾನುಭಾವರ ಸಂಗದಿಂದ ದೊರಕುವ ಆನಂದವನ್ನೂ ಅನುಗ್ರಹಿಸು ಎಂದು ಕೇಳುತ್ತೀಯಾ”?

ಸಿದ್ಧರಾಮನು ಮರುಮಾತಾಡದೆ ಪ್ರಭುವಿನ ಪಾದಕ್ಕೆರಗಿದನು.  ಆ ಮೌನದಲ್ಲಿ ಅಲ್ಲಮನು ಹೇಳಿದನು : ‘ಸಿದ್ಧರಾಮಯ್ಯ ನೀನು, ನನ್ನ ಜತೆಗೆ ಕೆಲವು ದಿನ ಕಲ್ಯಾಣಕ್ಕೆ ಬಾ.  ಅಲ್ಲಿ ನಡೆಯುತ್ತಿರುವ ಈ ಯುಗದ ಅದ್ಭುತವೊಂದನ್ನು ನಿನಗೆ ತೋರಿಸುತ್ತೇನೆ.’

ಅಲ್ಲಮ, ಸಿದ್ಧರಾಮ ಇವರಿಬ್ಬರೂ ಸೊನ್ನಲಿಗೆಯಿಂದ ಪಯಣಹೊರಟು ಒಂದೆರಡು ದಿನಗಳಲ್ಲಿಯೇ ಕಲ್ಯಾಣವನ್ನು ಸಮೀಪಿಸಿದರು.  ಅವರ ಕಣ್ಣಿಗೆ ಅನತಿ ದೂರದಲ್ಲಿಯೆ ಕಲಚುರಿ ಬಿಜ್ಜಳನ ರಾಜಧಾನಿಯಾದ ಕಲ್ಯಾಣದ ಕೋಟೆ ಕಾಣಿಸಿತು.  ಇಡೀ ನಗರವನ್ನು ಬಳಸಿಕೊಂಡ ಆ ಕೋಟೆಯ ಮಹಾದ್ವಾರವನ್ನು ಪ್ರವೇಶಿಸಿದ ಅಲ್ಲಮನು,  ತ್ರಿಪುರಾಂತಕ ದೇವಾಲಯವನ್ನು ಸಮೀಪಿಸಿ ಅಲ್ಲಿ ಸಿದ್ಧರಾಮನೊಂದಿಗೆ ವಿಶ್ರಮಿಸಿ ತಾನು ಬಂದಿರುವ ಸುದ್ಧಿಯನ್ನು ಬಸವಣ್ಣನವರ ಮಹಾಮನೆಗೆ ಮುಟ್ಟಿಸಬೇಕೆಂದು, ದೇವಸ್ಥಾನದ ಪರಿಚಾರಕರಲ್ಲಿ ಒಬ್ಬನ ಮೂಲಕ ಹೇಳಿಕಳುಹಿಸಿದನು.  ಅನಂತರ ಅಲ್ಲಮ, ಸಿದ್ಧರಾಮರಿಬ್ಬರೂ ತ್ರಿಪುರಾಂತಕ ದೇವಾಲಯದ ಕೆರೆಯಲ್ಲಿ ಮಿಂದು ಶುಚಿರ್ಭೂತರಾಗಿ, ಆ ಕೆರೆಯ ಚೆಲುವನ್ನೂ, ಅದರ ಸುತ್ತ ಬೆಳೆದ ಬಗೆ ಬಗೆಯ ವೃಕ್ಷ ಸಮೂಹದ ಸೊಗಸನ್ನೂ, ದೂರದಲ್ಲಿ ಹರಹಿಕೊಂಡ ನಗರದ ವಿಸ್ತೀರ್ಣವನ್ನೂ ನೋಡುತ್ತ ಕುಳಿತರು.  ಕೊಂಚ ಹೊತ್ತಿನ ನಂತರ ಇದ್ದಕ್ಕಿದ್ದಂತೆ ವಾದ್ಯಗಳ ಗಡಾವಣೆಯ ಸದ್ದು ದೂರದಿಂದ ಕೇಳಿಬರತೊಡಗಿತ್ತು.  ಇದೇನೆಂದು ನೋಡಿದರೆ ಸಣ್ಣದೊಂದು ಉತ್ಸವವೇ ಈ ದೇವಾಲಯದ ಕಡೆ ಬರುತ್ತಿದೆ.  ಕನ್ನಡಿ ಕಲಶವಿಡಿದ ಮಹಿಳೆಯರೂ, ಕಾವಿಬಣ್ಣದ ಧ್ವಜಗಳನ್ನು ಹಿಡಿದ ಜನಗಳೂ, ಅವರ ನಡುವೆ ಸಂಗನ ಶರಣ ಬಸವಣ್ಣನವರೂ, ಚನ್ನಬಸವಣ್ಣನವರೂ, ಕಿನ್ನರಿ ಬೊಮ್ಮಯ್ಯ, ಹರಳಯ್ಯ, ಹಡಪದ ಅಪ್ಪಣ್ಣ, ಮಡಿವಾಳ ಮಾಚಯ್ಯ, ಅಕ್ಕನಾಗಮ್ಮ, ಗಂಗಾಂಬಿಕೆ, ನೀಲಾಂಬಿಕೆ- ಇವರೆಲ್ಲ ಕಾಣಿಸಿದರು.  ‘ಓಹೋ! ನಮ್ಮ ಕಲ್ಯಾಣದ ಶರಣ ಮಹಾಗಣಂಗಳ ಪಡೆಯೇ ಬರುತ್ತಿದೆ ನೋಡು ಸಿದ್ಧರಾಮಯ್ಯ’, ಎಂದು ಅಲ್ಲಮನು ಉದ್ಗಾರವೆತ್ತುವ ವೇಳೆಗೆ, ಹರ್ಷಾನಂದ ಪುಳಕಿತರಾದ ಬಸವಣ್ಣನವರು ಬಂದು ಅಲ್ಲಮಫ್ರಭುವಿನ ಪಾದಕ್ಕೆ ನಮಸ್ಕರಿಸಿದರು.   ಇನ್ನುಳಿದವರೆಲ್ಲರೂ ಬಸವಣ್ಣನವರನ್ನು ಅನುಸರಿಸಿದರು.  ಕೆಲವು ವರ್ಷಗಳ ಹಿಂದೆ, ಕಲ್ಯಾಣದ ಶರಣರನ್ನು ಆಶೀರ್ವದಿಸಿದ ಅಲ್ಲಮ ಪ್ರಭು, ಈಗ ಮತ್ತೆ ತಮ್ಮ ಪರ್ಯಟನವನ್ನು ಮುಗಿಸಿಕೊಂಡು ಕಲ್ಯಾಣಕ್ಕೆ ಬಂದದ್ದು ಅವರಿಗೆಲ್ಲ ಒಂದು ಉತ್ಸವದ ದಿನವೇ ಆಗಿತ್ತು.  ಕಲ್ಯಾಣದ ಈ ಶರಣ ಸಮೂಹದ ಸಂಗತಿಯನ್ನು ಹಾಗೂ ಆ ಶರಣರಿಂದ ರಚಿತವಾದ ವಚನಗಳ ಸೊಗಸನ್ನು, ಸೊನ್ನಲಿಗೆಯಲ್ಲಿಯೇ ಕೇಳಿ ತಿಳಿದಿದ್ದ ಸಿದ್ಧರಾಮನು, ಈ ಶರಣ ಕಿರಣ ಕೇಂದ್ರವಾದ ಬಸವಣ್ಣನವರ ಮುಗ್ಧ-ಗಂಭೀರ-ಶ್ರೀಮೂರ್ತಿಯನ್ನು ಕಣ್ಣಾರೆ ಕಂಡು ಚಕಿತಗೊಂಡನು.  ಒಂದು ರಾಜ್ಯದ ದಂಡನಾಯಕರಾದ ಬಸವಣ್ಣನವರ ಆ ಸರಳವಾದ ಉಡಿಗೆ ತೊಡಿಗೆಗಳನ್ನೂ ನಯವಿನಯಗಳನ್ನೂ, ಅಲ್ಲಮನ ವಿಚಾರದಲ್ಲಿದ್ದ ಭಕ್ತಿ – ಗೌರವಗಳನ್ನು ಗಮನಿಸಿ ಸಂತೋಷಪಟ್ಟನು.  ಅಲ್ಲಮನು ಬಸವಣ್ಣನವರಿಗೂ ಮತ್ತು ಅವರ ಜತೆ ಬಂದವರಿಗೂ ಸಿದ್ಧರಾಮನನ್ನು ಪರಿಚಯಿಸುತ್ತ ‘ನೋಡು ಬಸವಣ್ಣ, ಎಲ್ಲೆಲ್ಲಿ ನಮ್ಮ ಗುಹೇಶ್ವರ ಎಂಥೆಂಥ ಶರಣರನ್ನು ಯಾವ್ಯಾವ ಕಾರ್ಯದಲ್ಲಿ ತೊಡಗಿಸಿರುತ್ತಾನೆಂಬುದನ್ನು ಕಂಡವರು ಯಾರು? ಕಲ್ಯಾಣಕ್ಕೆ ಕೆಲವೇ ಹರಿದಾರಿಗಳ ದೂರದಲ್ಲಿರುವ ಸೊನ್ನಲಿಗೆಯಲ್ಲಿ, ಕೆರೆ-ಬಾವಿ ದೇವಾಲಯಾದಿಗಳನ್ನು ನಿರ್ಮಿಸುತ್ತ, ಪ್ರೀತಿ ಕರುಣೆ ತುಂಬಿದ ಹೃದಯದಿಂದ ಜನಸೇವೆ ಮಾಡುತ್ತ, ಕಪಿಲಸಿದ್ಧಮಲ್ಲಿಕಾರ್ಜುನನ ಸನ್ನಿಧಿಯಲ್ಲಿ ಸಾಧನೆ ಮಾಡುತ್ತ, ಸೊನ್ನಲಿಗೆಯನ್ನು ಯೋಗರಮಣೀಯ ಕ್ಷೇತ್ರವನ್ನಾಗಿ ಮಾಡಿರುವ ಕಾಯಕಯೋಗಿ ಸಿದ್ಧರಾಮಯ್ಯನವರು ಇವರೇ’ – ಎಂದು ಹೇಳಿದನು.  ಕೂಡಲೇ ಬಸವಣ್ಣನವರು ಸಿದ್ಧರಾಮನ ಪಾದಗಳಿಗೆ ನಮಸ್ಕರಿಸುತ್ತ ‘ನಿಮ್ಮನ್ನು ಕಾಣುವ ಭಾಗ್ಯ ನನಗೆ ಪ್ರಭುಗಳಿಂದ ದೊರೆತಂತಾಯಿತು.  ತಮ್ಮ ಶ್ರೀಪಾದಕ್ಕೆ ಶರಣು ಶರಣು’ ಎಂದರು.  ಸಿದ್ಧರಾಮನು, ತಾನು ನಮಸ್ಕಾರ ಮಾಡುವ ಮೊದಲೇ ಬಸವಣ್ಣನವರು ತನಗೆ ನಮಸ್ಕರಿಸಿದ ಅನಿರೀಕ್ಷಿತ ಸಂದರ್ಭದಿಂದ ಅಚ್ಚರಿಗೊಂಡು, ‘ನಿಮ್ಮ ಮುಂದೆ ನಾನು ಯಾರು? ಎಲ್ಲೋ ಹೇಗೋ ನನ್ನ ಪಾಡಿಗೆ ನಾನು ಇದ್ದವನನ್ನು ಪ್ರಭುದೇವರು ಇಲ್ಲಿಗೆ ತಂದು ನಿಮ್ಮೆಲ್ಲರ ಸಂಗ ಲಭಿಸುವಂತೆ ಮಾಡಿದರು.  ಈ ನನ್ನ ಪುಣ್ಯಕ್ಕೆ ಎಣೆಯುಂಟೆ’? – ಎಂದನು.

ಈ ಉತ್ಸವದ ಪ್ರದರ್ಶನವನ್ನು ಅಲ್ಲಮ ಪ್ರಭು ಬೇಡವೆಂದು ಹೇಳಿದರೂ ಆತ ಬಸವಾದಿಗಳ ಜತೆಗೆ ಮಹಮನೆಗೆ ಆ ಉತ್ಸವದ ನಡುವೆಯೇ ಹೋಗಬೇಕಾಯಿತು.  ಅಲ್ಲಮನ ವಿಚಾರದಲ್ಲಿ ಕಲ್ಯಾಣದ ಶರಣಸಮೂಹ ಇರಿಸಿಕೊಂಡ ‘ಗುರು’ ಭಾವವನ್ನು ಕಂಡು ಸಿದ್ಧರಾಮನು ಬೆರಗುಗೊಂಡನು.  ಅಲ್ಲಮನನ್ನೂ, ಸಿದ್ಧರಾಮನನ್ನೂ ಕರೆದುಕೊಂಡು ಹೋದನಂತರ, ಮಹಮನೆಯ ಅತಿಥ್ಯದಲ್ಲಿದ್ದ ಸಿದ್ಧರಾಮನಿಗೆ ಕಲ್ಯಾಣದ ಒಬ್ಬೊಬ್ಬ ಶರಣ ಶರಣೆಯರೂ ಮೇಲೆ ನೋಡಲು ತೀರಾ ಸಾಧಾರಣರಂತೆ ಕಂಡರೂ, ಆಂತರಂಗಿಕವಾಗಿ ಅವರೊಬ್ಬೊಬ್ಬರೂ ಏರಿ ನಿಂದ ನಿಲುವು ಎಂಥದೆಂಬುದು ಅರಿವಾಗತೊಡಗಿತ್ತು.  ಬಸವಣ್ಣನವರು ದಿನವೂ ತಮ್ಮ ದಂಡನಾಯಕತ್ವದ ಕೆಲಸಕ್ಕಾಗಿ ಬಿಜ್ಜಳನ ಅರಮನೆಗೆ ಹೋಗಿ ತಮ್ಮ ಲೌಕಿಕ ಕರ್ತವ್ಯವನ್ನು ನಿರ್ವಹಿಸುತ್ತಲೇ ಅದಾವಾಗಲೋ ಮಹಮನೆಯ ಶರಣ ಸಮೂಹದ ಜತೆ ಒಂದಾಗಿ ಬಿಡುತ್ತಿದ್ದರು.  ಅಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಇಷ್ಟಲಿಂಗದ ಸನ್ನಿಧಿಯಲ್ಲಿ ಮಾಡುತ್ತಿದ್ದ ಪೂಜೆಯ ನಿಶ್ಯಬ್ದ ಗಾಂಭೀರ್ಯದಲ್ಲಿ ಅವರವರ ಪೂಜೆಗೆ ಅಗತ್ಯವಾದ ಪರಿಕರಗಳನೆಲ್ಲ ಮಹಾಮನೆಯ ವ್ಯವಸ್ಥಾಪಕರು ಒದಗಿಸುತ್ತಿದ್ದರು.  ಧೂಪದೀಪಾದಿಗಳ ಬೆಳಕೋ ಬೆಳಕು; ಅಲೆಯಲೆಯಾಗಿ ಸಣ್ಣದನಿಯಲ್ಲಿ ಅನುರಣಿಸುವ ಕಿರುಗಂಟೆಯ ನಾದ; ಇಷ್ಟಲಿಂಗದಲ್ಲಿ ದೃಷ್ಟಿ ನೆಟ್ಟು ಕೂತರೆಂದರೆ, ಬಹುಕಾಲ ಧ್ಯಾನದಲ್ಲಿ ಲೀನರಾಗುವ ಏಕಾಗ್ರತೆ; ಅನಂತರ ಪ್ರಸಾದ ಸ್ವೀಕಾರ.  ಈ ಎಲ್ಲವೂ ಸದ್ದುಗದ್ದಲವಿಲ್ಲದ ಮೌನದಲ್ಲಿ ಸಾಗುವ ಕ್ರಿಯೆಗಳು.  ಸೊನ್ನಲಿಗೆಯ ಮಲ್ಲಿಕಾರ್ಜುನ ದೇವಾಲಯದಲ್ಲಿ ದಿನವೂ ನಡೆಯುವ ನೇಮಗಳ, ಹೋಮಗಳ, ಹರಕೆಗಳ, ಗಂಟೆ-ಜಾಗಟೆ-ನಗಾರಿ-ಭೇರೀತಾಡನಗಳ ಅಬ್ಬರದೊಂದಿಗೆ ಹೋಲಿಸಿದರೆ ಮಹಾಮನೆಯ ಈ ಶಿವಪೂಜಾ ಸಂಭ್ರಮ, ಭಕ್ತಿ ಎನ್ನುವುದು, ಪೂಜೆ ಎನ್ನುವುದು, ತನ್ನ ಇಷ್ಟದೈವದೊಂದಿಗೆ ಭಕ್ತನಾದವನು ನಡೆಯಿಸುವ ಒಂದು ನಿಶ್ಯಬ್ದ ಆತ್ಮಾನುಸಂಧಾನ ಎನ್ನುವುದು ಸಿದ್ಧರಾಮನಿಗೆ ಅರ್ಥವಾಗತೊಡಗಿತು.  ಈ ಶರಣ ಸಮುದಾಯದಲ್ಲಿ ಇರುವಂಥವರೂ ಎಂಥ ಜನ! ತೀರಾತೀರಾ ಸಾಮಾನ್ಯರು.  ಸಮಾಜದ ವಿವಿಧ ಸ್ತರಗಳಿಂದ ಬಂದವರು : ಮಾದಾರ ಚನ್ನಯ್ಯ, ಡೋಹಾರ ಕಕ್ಕಯ್ಯ, ಮೇದಾರ ಕೇತಯ್ಯ, ಕಿನ್ನರಿ ಬೊಮ್ಮಯ್ಯ, ಅಂಬಿಗರ ಚೌಡಯ್ಯ – ಎಲ್ಲರೂ ದುಡಿಯುವ ವರ್ಗದ ವಿವಿಧ ವೃತ್ತಿಗಳ ಜನ.  ಇವರ ಜತೆಗೆ ಅರಸುತನವನ್ನೇ ಧಿಕ್ಕರಿಸಿ ಕಾಶ್ಮೀರದಿಂದ ಇಲ್ಲಿಗೆ ಬಂದು ಕಟ್ಟಿಗೆ ಕೆಲಸದ ಕಾಯಕವನ್ನು ಕೈಕೊಂಡ ಮೋಳಿಗೆ ಮಾರಯ್ಯ; ಗುಜರಾತಿನಿಂದ ಬಂದ ಸೊಡ್ಡಳ ಬಾಚರಸ; ಸೌರಾಷ್ಟ್ರದಿಂದ ಬಂದಿರುವ ಆದಯ್ಯ; ಆಂಧ್ರದಿಂದ ಬಂದಿರುವ ಉರಿಲಿಂಗಪೆದ್ದಿ, ಇಡೀ ಭಾರತದ ವಿವಿಧ ಪ್ರದೇಶದ ಭಕ್ತಾದಿಗಳೆಲ್ಲ ಬಂದಿದ್ದಾರೆ.  ಬಸವ, ಚನ್ನಬಸವ, ಅಲ್ಲಮ ಈ ಮಹಾ ಭಕ್ತರೂ ಜ್ಞಾನಿಗಳೂ ಅನುಭಾವಿಗಳೂ, ಹಾಗೆಯೆ ಬಹುಸಂಖ್ಯೆಯ ಮಹಿಳೆಯರೂ ಈ ಸಮುದಾಯದಲ್ಲಿದ್ದಾರೆ.  ಇದೊಂದು ಅಪೂರ್ವ ಸಂಗಮ.  ತೀರಾ ತೀರಾ ಸಾಮಾನ್ಯರೆಂದುಕೊಂಡವರೂ ಸಂವಾದದ ಸಂದರ್ಭಗಳಲ್ಲಿ ಎಂತೆಂತಹ ಪ್ರಶ್ನೆ ಕೇಳುತ್ತಾರೆ!  ವೇದಶಾಸ್ತ್ರ ಪುರಾಣ ಆಗಮಗಳನ್ನು ನಿರ್ಲಕ್ಷ್ಯದಿಂದ ಅತ್ತ ತೂರಿ, ಅದಾವುದರ ಅರಿವೂ ಇಲ್ಲದೆ ಈ ಜನ ಎತ್ತುವ ಪ್ರಶ್ನೆಗಳು ಪರಂಪರೆಯ ಅಡಿಪಾಯವನ್ನೆ ಕದಲಿಸುವಂತಿವೆ; ವ್ಯವಸ್ಥೆಯ ಬೇರುಗಳನ್ನೆ ಅಲ್ಲಾಡಿಸುತ್ತಿವೆ.  ‘ಇಲ್ಲಿ ಇಂಥದೊಂದು ಸ್ಫೋಟ ಸಂಭವಿಸುತ್ತಿರುವಾಗ  ಅಲ್ಲಿ ನಾನೇನು ಮಾಡಿದೆ? ಸೊನ್ನಲಿಗೆಯಲ್ಲಿ ಗುಡಿಗಳನ್ನು ಕಟ್ಟಿಸಿದೆ; ನುರಾರುಲಿಂಗಗಳನ್ನು ಪ್ರತಿಷ್ಠಾಪಿಸಿದೆ, ದಿನವೂ ಬಗೆ ಬಗೆಯ ನೇಮಗಳನ್ನು ಪ್ರೋತ್ಸಾಹಿಸಿದೆ; ಹೋಮ ಕುಂಡಗಳಿಗೆ ಆಜ್ಯ- ಆಹುತಿಯನ್ನು ಅರ್ಪಿಸಿದೆ.  ಕೆರೆ-ಬಾವಿ-ಅರವಟ್ಟಿಗೆ ಅನ್ನಸತ್ರಗಳನ್ನು ಮಾಡಿಸಿದೆ. ಅದರಿಂದ ಆದದ್ದೇನು?  ಜನರ ದೈನಂದಿನ ಅಗತ್ಯಗಳಿಗೆ ನೆರವಾದಂತಾಯಿತೇ ಹೊರತು, ಇಲ್ಲಿನ ಹಾಗೆ ಶರಣರಲ್ಲಿ ಆಧ್ಯಾತ್ಮಿಕ ಪ್ರಗತಿಯನ್ನೂ, ವೈಚಾರಿಕ ಎಚ್ಚರವನ್ನೂ ತಂದಂತಾಯಿತೆ?  ಇಲ್ಲಿರುವ ಘನಮಹಿಮ ಶರಣರ ಮುಂದೆ ನಾನೆಷ್ಟರವನು? ಅವರಿದ್ದಾರೆ ಲಿಂಗ ಪ್ರಭೆಯೊಳಗೆ; ನಾನಿದ್ದೇನೆ ಅಹಂಕಾರ ಪಂಜರದೊಳಗೆ; ನನ್ನ ದೇವರೇ ಮಲ್ಲಿನಾಥ,  ಅಂಗ ಲಿಂಗವ ಹಿಡಿದು ನಡೆ ಎಂದಿರಾಗಿ ನಡೆವುತ್ತಿದ್ದೆನು.  ಲಿಂಗ ಪ್ರತಿಷ್ಠೆಯ ಮಾಡೆಂದು ಎನಗೆ ನಿರೂಪಿಸಿದ ಕಾರಣ ಮಾಡುತ್ತಿದ್ದೆನಲ್ಲದೆ ಎನಗೆ ಬೇರೆ ಸ್ವತಂತ್ರ ಉಂಟೆ?  ಹಿಂದೆ ನೀವು ಕೊಟ್ಟ ನಿರೂಪ ನಿಮಗೆ ಹುಸಿಯಾದೊಡೆ ಇನ್ನು ಮುಂದೆ ಸಯವಪ್ಪಂತೆ ನಡೆಸಾ ಕಪಿಲಸಿದ್ಧಮಲ್ಲಿಕಾರ್ಜುನಾ’.

ಕಲ್ಯಾಣಕ್ಕೆ ಬಂದಂದಿನಿಂದ ಸಿದ್ಧರಾಮನ ಅಂತರಂಗ ತಾನು ತನ್ನ ಕಾರ್ಯಕ್ಷೇತ್ರದಲ್ಲಿ ಇದುವರೆಗೂ ತೊಡಗಿಕೊಂಡ ಕಾರ್ಯಗಳನ್ನು, ಇಲ್ಲಿನ ಪರಿಸರದಲ್ಲಿ ಸಂಭವಿಸುತ್ತಿದ್ದ ಘಟನಾವಳಿಗಳನ್ನೂ ಹೋಲಿಸಿನೋಡಿ ಒಂದು ಬಗೆಯ ತಳಮಳವನ್ನು ಅನುಭವಿಸುತ್ತಿತ್ತು.  ತಾನು ಸ್ಥಾವರಲಿಂಗದ ಆರಾಧಕನಾಗಿ, ದೇವಾಲಯಾದಿಗಳ ಪರವಾಗಿದ್ದರೆ, ಇಲ್ಲಿ ಇಷ್ಟಲಿಂಗ ನಿಷ್ಠೆಯ ಮೂಲಕ ದೇಹವನ್ನೇ ದೇವಾಲಯವನ್ನಾಗಿ ಮಾಡಿಕೊಂಡು, ಬಹಿರಂಗದ ದೇವಾಲಯಗಳನ್ನೂ, ಅದಕ್ಕೆ ಸಂಬಂಧಿಸಿದ ವ್ರತ-ನೇಮ-ಆಚರಣೆ ಇತ್ಯಾದಿಗಳನ್ನೂ ತಿರಸ್ಕರಿಸುವ ನಿಲುವು ಪ್ರಧಾನವಾಗಿದೆ; ವೇದಾಗಮಗಳ ಮಾರ್ಗದಲ್ಲಿ ನಡೆಯುತ್ತಿದ್ದ ಅರ್ಚನೆ ಹೋಮಾದಿಗಳನ್ನು ನಿರಾಕರಿಸಿ, ವೇದ ಶಾಸ್ತ್ರಾಗಮಗಳ ಬದಲು ತಮ್ಮ ತಮ್ಮ ಸ್ವಾನುಭವದ ಮೂಲ ಮಾನದಲ್ಲೇ ಅಂತರಂಗದ ರತ್ನವನ್ನು ಅನ್ವೇಷಿಸುವ ಧ್ಯಾನಯೋಗ ಇಲ್ಲಿ ಪ್ರಮುಖವಾಗಿದೆ.  ಯಾವುದೇ ಕುಲ-ಗೋತ್ರ-ಜಾತಿ-ಲಿಂಗಗಳ ಭೇದವಿಲ್ಲದೆ ಶರಣನಾಗಿರುವಿಕೆಯೊಂದೆ ಎಲ್ಲರನ್ನೂ ಸಮಾನತೆಯ ನೆಲೆಯೊಂದರಲ್ಲಿ ನಿಲ್ಲಿಸಿದೆ.  ಈ ಎಲ್ಲ ಕ್ರಿಯೆಗಳ ಕೇಂದ್ರವಾದ ಬಸವಣ್ಣನವರ ಸದುವಿನಯ ಸದಾಚಾರಗಳಂತೂ ಅನನ್ಯವಾದವುಗಳಾಗಿವೆ.  ಅರಮನೆಯ ಅಧಿಕಾರದ ಗದ್ದುಗೆಯ ಮೇಲೆ ಯಾವ ವಿನಯದಿಂದ ಕೂತುಕೊಳ್ಳುತ್ತಾರೋ, ಅದಕ್ಕೂ ಮಿಗಿಲಾದ ವಿನಯದಿಂದ ದೈನಂದಿನ ಶರಣಗೋಷ್ಠಿಯಲ್ಲಿ ಬೆರೆಯುತ್ತಾರೆ.  ಅದೇ ಸರಳತೆಯಿಂದ ಪಂಚಮರ ಕೇರಿಗೆ ಹೋಗಿ ಅಲ್ಲಿನ ಶರಣರನ್ನು ಮಾತನಾಡಿಸುತ್ತಾರೆ; ಅವರ ಮನೆಗಳಲ್ಲಿ ಪ್ರಸಾದವನ್ನು ಸ್ವೀಕರಿಸುತ್ತಾರೆ.  ಮತ್ತೆ ಶರಣ ಧರ್ಮದೊಳಗೆ ಬಂದ ಎಲ್ಲರೂ, ಮಹಾಮನೆಗೆ ಬಂದು ದೈನಂದಿನ ಶಿವಾನುಭವಗೋಷ್ಠಿಯೊಳಗೆ ಪಾಲುಗೊಳ್ಳುತ್ತಾರೆ.  ಅಲ್ಲಮನ ಅಧ್ಯಕ್ಷತೆಯಲ್ಲಿ ನಡೆಯುವ ಶಿವಾನುಭವ ಸಂವಾದ ಅಭೂತಪೂರ್ವವಾದದ್ದು.  ಪ್ರತಿಯೊಬ್ಬರೂ ನಿರ್ಭಯವಾಗಿ ತಮ್ಮ ತಮ್ಮ ಅಂತರಂಗವನ್ನು ಬಿಚ್ಚಿ ಹರುಹುತ್ತಾರೆ.  ಅಲ್ಲಮಪ್ರಭು ಎಂಥ ಗಹನವಾದ ಸಂಗತಿಗಳಿಗೂ, ತನ್ನದೇ ಆದ ರೀತಿಯಲ್ಲಿ ಪರಿಹಾರ ಸೂಚಿಸುತ್ತಾನೆ.  ಇಲ್ಲಿರುವ ಒಬ್ಬೊಬ್ಬರೂ, ವ್ಯಕ್ತಪಡಿಸುವ ಅನುಭವಗಳೂ, ತೋರುವ ಪ್ರತಿಕ್ರಿಯೆಗಳೂ ಯಾರಿಗಾದರೂ ಬೆರಗು ಹುಟ್ಟಿಸುತ್ತವೆ.  ಶರಣೆಯರಂತೂ ಯಾರಿಗೂ ಕಡಮೆ ಇಲ್ಲ.  ಇತ್ತೀಚೆಗೆ ಈ ಅನುಭವ ಮಂಟಪಕ್ಕೆ ಒಬ್ಬ ಹೆಣ್ಣುಮಗಳು ಬಂದಳು.  ಅವಳ ಹೆಸರು ಮಹಾದೇವಿ.  ಹರನನ್ನೆ ತನ್ನ ಸನಾತನ ಸಂಗಾತಿ ಎಂದು ಭಾವಿಸಿ, ರಾಜನೊಬ್ಬನೊಂದಿಗೆ ತನಗೆ ಬಲವಂತವಾಗಿ ನಡೆದ ಮದುವೆಯನ್ನು ಧಿಕ್ಕರಿಸಿ ತನ್ನ ನಿಜವಾದ ಪತಿ ಚನ್ನಮಲ್ಲಿಕಾರ್ಜುನನನ್ನು ಹುಡುಕಿಕೊಂಡು ಬಂದವಳು.  ಅಲ್ಲಮ ಪ್ರಭುವಿನ ಜತೆ ಅವಳು ನಡೆಯಿಸಿದ ಆಧ್ಯಾತ್ಮಿಕ ಸಂವಾದವಂತೂ ಅಪೂರ್ವವಾದದ್ದು.  ಜ್ಞಾನಿಯಾದ ಚನ್ನಬಸವಣ್ಣನೇ ಬೆರಗಾಗಿ ಆಕೆಗೆ ನಮೋ ಎಂದನು.  ಅಲ್ಲಮಪ್ರಭು ಅವಳನ್ನು ಹಾಡಿ ಹೊಗಳಿದರು; ಬಸವಣ್ಣನವರು ಆಕೆಯನ್ನು ‘ಅಕ್ಕ’ ಎಂದು ಕರೆದರು.  ಈ ಶರಣ ಸಮೂಹದಲ್ಲಿ ಯಾರು ಯಾರಿಗಿಂತ ಹೆಚ್ಚು ಅನ್ನುವುದೇ ಗೊತ್ತಾಗುವುದಿಲ್ಲ.  ವಯಸ್ಸಲ್ಲ, ಅಂತರಂಗದ ಪರಿಣತಿಯೇ ಮೂಲಮಾನ.  ಪ್ರತಿಯೊಬ್ಬರೂ ತಾವು ಮತ್ತೊಬ್ಬರಿಗಿಂತ ಕಿರಿಯರೆಂದು ತೋರಿಸಿಕೊಳ್ಳುವ ವಿನಯದ ಪೈಪೋಟಿಯೇ ಇಲ್ಲಿ ನಡೆದಿದೆ.  ಈ ಪರಸ್ಪರ ವಿನಯದ ವಿನಿಮಯದ ಮೂಲಕ ಪ್ರತಿಯೊಬ್ಬರೂ ತಮ್ಮ ತಮ್ಮ ಅಹಂಕಾರದ ನಿರಸನದಿಂದ ಅಚ್ಚರಿಯನ್ನುಂಟುಮಾಡುತ್ತಾರೆ.  ‘ಸಿದ್ಧರಾಮಯ್ಯ, ನೀನು ನನ್ನ ಜತೆ ಕೆಲವು ಕಾಲ ಕಲ್ಯಾಣಕ್ಕೆ ಬಾ.  ಅಲ್ಲಿ ನಡೆಯುತ್ತಿರುವ ಈ ಯುಗದ ಅದ್ಭುತವೊಂದನ್ನು ತೋರಿಸುತ್ತೇನೆ’ ಅಂದಿದ್ದರು ಅಲ್ಲಮಪ್ರಭುಗಳು.  ಈಗ ಸಿದ್ಧರಾಮ ಆ ಅದ್ಭುತವನ್ನು ದಿನವೂ ಕಣ್ಣೆದುರು ಕಾಣುತ್ತಾನೆ.

ಸಿದ್ಧರಾಮನನ್ನು ತಮ್ಮ ಅಕ್ಕರೆಯವರಲ್ಲಿ ಒಬ್ಬನೆಂದು ಬಸವ-ಅಲ್ಲಮಾದಿಗಳು ನಡೆಯಿಸಿಕೊಂಡರೂ, ಸಿದ್ಧರಾಮನಿಗೆ ಸ್ಪಷ್ಟವಾಗಿ ಗೋಚರವಾಗತೊಡಗಿತು, ತಾನು ಬೆಳೆದು ಬಂದ ಭಕ್ತಿಯ ಸಂಪ್ರದಾಯಕ್ಕೂ, ಇಲ್ಲಿ ಪ್ರವರ್ತನಗೊಂಡ ನೂತನ ಭಕ್ತಿ ಪರಂಪರೆಗೂ ಸಾಕಷ್ಟು ವ್ಯತ್ಯಾಸವಿದೆ- ಎಂಬುದು.  ತಾನು ಸ್ಥಾವರಲಿಂಗ ಸಂಪ್ರದಾಯದವನು; ವೇದ ಶಾಸ್ತ್ರಾದಿ ಯೋಗವಿದ್ಯೆಯನ್ನು ಮೈಗೂಡಿಸಿಕೊಂಡವನು.  ಹೀಗಿರುವ ತಾನು ಇಷ್ಟಲಿಂಗ ನಿಷ್ಠೆಯ, ವೇದ ಶಾಸ್ತ್ರಾದಿಗಳನ್ನು ತಿರಸ್ಕರಿಸುವ – ಈ ಶರಣ ಸಮೂಹದೊಂದಿಗೆ ತಾನೂ ಅವರಲ್ಲಿ ಒಬ್ಬನೆಂಬಂತೆ ಬೆರೆಯುವುದು ಹೇಗೆ?  ಒಮ್ಮೆ ಮಾತಿನ ನಡುವೆ ಸೊಡ್ಡಳ ಬಾಚರಸ ಎಂಬ ಹಿರಿಯ ಶರಣನೊಬ್ಬ ಸಿದ್ಧರಾಮನಿಗೆ ಸೂಚಿಸಿದ : ‘ಅಯ್ಯನವರೇ ನೀವಿದುವರೆಗೂ ಯಾವ ಶೈವಭಕ್ತಿಯ ಮಾರ್ಗದಲ್ಲಿ ನಡೆದುಬಂದಿರೋ, ಅದು ಈಗ ಈ ಶರಣ ಧರ್ಮದಲ್ಲಿ ಪರಿಷ್ಕಾರಗೊಂಡು ಹೊಸರೂಪವನ್ನು ಪಡೆಯುತ್ತಿದೆ.  ಶರಣ ಧರ್ಮದ ಈ ಹೊಸ ಆಂದೋಲನದೊಳಗೆ ನಿಮ್ಮಂಥ ಯೋಗಿಗಳು ಕೂಡಿಕೊಳ್ಳುವುದು ಈ ಕಾಲಮಾನದ ಅಗತ್ಯವೂ ಆಗಿದೆ. ನೀವು ಹೀಗೆ ಸೇರಬೇಕೆಂಬುದು, ಕಲ್ಯಾಣದ ಶರಣರೆಲ್ಲರ ಆಪೇಕ್ಷೆ ಕೂಡಾ ಆಗಿದೆ.  ಈ ಕುರಿತು ಬಸವಣ್ಣನವರು, ಚನ್ನಬಸವಣ್ಣ ಮತ್ತು ಅಲ್ಲಮ ಪ್ರಭುಗಳೊಂದಿಗೆ ಪ್ರಸ್ತಾಪ ಮಾಡಿದಾಗ ನಾನೂ ಇದ್ದೆ.  ಯಾವ ಕಪಿಲಸಿದ್ಧಮಲ್ಲಿನಾಥನು ನಿಮಗೆ ಸೊನ್ನಲಿಗೆಯ ಆರಾಧ್ಯ ದೈವವಾಗಿದ್ದಾನೋ ಆತನೇ, ಚೈತನ್ಯ ಸ್ವರೂಪವಾಗಿ ಇಷ್ಟಲಿಂಗದಲ್ಲಿಯೂ ನೆಲಸಿ ನಿಮ್ಮ ಪೂಜೆಯನ್ನು ಕೈಕೊಳ್ಳುತ್ತಾನಲ್ಲವೆ?  ಆದಕಾರಣ ತಾವೂ ಶರಣದೀಕ್ಷೆಯನ್ನು ಕೈಕೊಂಡು ನಮಗೆ ಮಾರ್ಗದರ್ಶನ ಮಾಡಬೇಕು’.

ಸೊಡ್ಡಳ ಬಾಚರಸನು ಚಕ್ರವರ್ತಿ ಬಿಜ್ಜಳನ ಕರಣ ಶಾಲೆಯ ಅಧಿಕಾರಿಗಳಲ್ಲಿ ಒಬ್ಬ.  ಕೂಡಲ ಸಂಗಮದಿಂದ ಮೊದಲು ಮಂಗಳವೇಡೆಗೆ ಬಸವಣ್ಣನವರು ಬಂದ ತರುಣದಲ್ಲಿ ಅವರು ಕೆಲಸ ಮಾಡಿದ್ದು ಕರಣ ಶಾಲೆಯಲ್ಲಿಯೆ.  ಮಂಗಳವೇಡೆಯಿಂದ ಬಿಜ್ಜಳನು ಕಲ್ಯಾಣಕ್ಕೆ ತನ್ನ ರಾಜಧಾನಿಯನ್ನು ಸ್ಥಳಾಂತರಮಾಡಿ ಚಕ್ರವರ್ತಿಯಾದಾಗ, ಬಸವಣ್ಣನವರು ದಂಡಾಧೀಶರಾದರು.  ಸೊಡ್ಡಳಬಾಚರಸ ಇಲ್ಲಿಯೂ ಬಿಜ್ಜಳನ ಕರಣಸಾಲೆಯ ಹಿರಿಯ ಅಧಿಕಾರಿಯಾಗಿ ಮುಂದುವರಿದ.  ಜತೆಗೆ ಆತ ಮಹಾಮನೆಯ ಹಿರಿಯ ಶರಣರಲ್ಲಿ ಒಬ್ಬ.  ಆತ ನೀವೂ ‘ವೀರಶೈವ ದೀಕ್ಷೆ’ಯನ್ನು ಕೈಕೊಂಡು, ಅನುಭವ ಮಂಟಪದ ಸದಸ್ಯರಲ್ಲಿ ಒಬ್ಬರಾಗಬೇಕೆಂದು ಹೇಳಿದ ಮಾತನ್ನು ಕೇಳಿ ಸಿದ್ಧರಾಮನು ನಕ್ಕು ‘ಎಲ್ಲವೂ ಮಲ್ಲಿನಾಥನ ಇಚ್ಛೆ’ ಎಂದನು.

ಸಿದ್ಧರಾಮನಿಗೆ ಲಿಂಗದೀಕ್ಷೆಯ ಮೂಲಕ ಆತನೂ ಈ ಮಹಾ ಆಂದೋಲನದಲ್ಲಿ ಸೇರುವಂತಾಗಬೇಕೆಂಬ ಪ್ರಸ್ತಾಪ ಬಸವಣ್ಣನವರಿಂದ ಬಂದಾಗ, ಅಲ್ಲಮಪ್ರಭು ಹೇಳಿದ್ದರು : ‘ಸಿದ್ಧರಾಮಯ್ಯನವರು ಸಾಮಾನ್ಯರಲ್ಲ, ಅವರೊಬ್ಬರು ಮಹಾಯೋಗಿ.  ಮೇಲೆ ನೋಡಲು ಅವರು ಲೌಕಿಕವಾದ ಜನೋಪಯೋಗಿ ಕರ್ಮಗಳಲ್ಲಿ ತೊಡಗಿಕೊಂಡಂತೆ ತೋರಿದರೂ, ಅಂತರಂಗದಲ್ಲಿ ಅವರೊಬ್ಬ ಯೋಗಿಯೇ.  ಅಧ್ಯಾತ್ಮದಲ್ಲಿ ಇಷ್ಟೊಂದು ಮುಂದುವರಿದಿರುವ ಅವರಿಗೆ ಲಿಂಗದೀಕ್ಷೆಯ ಅಗತ್ಯವೇ ಇಲ್ಲ.  ತಾನಾಗಿಯೇ ಆಕಾಶವನ್ನಡರಬಲ್ಲವನಿಗೆ  ಏಣಿಯ ಹಂಗೇಕೆ? ಸಮುದ್ರವನ್ನು ದಾಟ ಬಲ್ಲವನಿಗೆ ಹರಿಗೋಲಿನ ಹಂಗೇಕೆ.  ಸೀಮೆಯನ್ನು ಮೀರಿ ನಿಸ್ಸೀಮನಾಗಿ ಪ್ರಾಣವೇ ಲಿಂಗವೆಂದು ಅರಿತ ಯೋಗಿಗೆ ಇಷ್ಟಲಿಂಗ ದೀಕ್ಷೆಯ ಹಂಗೇಕೆ?’.  ಆದರೆ ಅದಕ್ಕೆ ಚನ್ನಬಸವಣ್ಣ ‘ಆಕಾಶದಲ್ಲಿ ಗಾಳಿಪಟ ಆಡುವುದಾದರೂ, ಅದಕ್ಕೊಂದು ಕೆಳನೆಲೆಯಲ್ಲಿ ಮೂಲ ಸೂತ್ರದ ನಿಯಂತ್ರಣ ಬೇಕಲ್ಲವೆ? ಅಂಗಕ್ಕೆ ಲಿಂಗ ಸಂಗವಿಲ್ಲದೆ ಅದು ನಿಸ್ಸಂಗವಾಗುವುದಾದರೂ ಹೇಗೆ? ನಮ್ಮ ಶರಣ ಧರ್ಮದ ಪ್ರಕಾರ ಅಂಗದ ಮೇಲೆ ಲಿಂಗ ಸಂಬಂಧವಿಲ್ಲದೆ ಪ್ರಾಣಲಿಂಗ ಸಂಬಂಧ ಹೇಗಾದೀತು?’ ಎಂದನು.  ಜತೆಗೆ ಮಡಿವಾಳ ಮಾಚಿದೇವ, ಮೋಳಿಗೆ ಮಾರಯ್ಯ ಮೊದಲಾದವರು, ಪ್ರಭುದೇವರು ಹೇಳಿದಂತೆ ಸಿದ್ಧರಾಮ ತುಂಬ ಮುಂದುವರಿದ ಯೋಗಿಯೇ ಆದರೂ, ಅವರು ಮೂಲತಃ ಅಷ್ಟಾಂಗ ಯೋಗ ಮಾರ್ಗದ ಧ್ಯಾನ-ಧಾರಣ-ಸಮಾಧಿಗಳನ್ನು ಸಾಧಿಸಿರಬಹುದು.  ಆದರೆ ಈ ವೇದಾಂತಜ್ಞಾನದಿಂದ ಶಿವತತ್ವವು ಘಟಿಸಲಾರದು.  ಆದ ಕಾರಣ ಷಟ್‌ಸ್ಥಲ ಮಾರ್ಗಾವಲಂಬನೆಯ ಮೂಲಕ ಶಿವತತ್ವವನ್ನರಿಯಬೇಕಾದರೆ ಅವರಿಗೆ ಅಂಗದ ಮೇಲೆ ಲಿಂಗ ಸಾಹಿತ್ಯವಾಗಲೇಬೇಕು.  ಅದು ಹೊರತು ಈ ಶರಣಗೋಷ್ಠಿಯಲ್ಲಿ ಅವರಿಗೆ ಸಂಯೋಗವೆಲ್ಲಿಯದು’ ಎಂದು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

ಸಿದ್ಧರಾಮನಿಗೆ ಲಿಂಗದೀಕ್ಷೆಯ ಪ್ರಸ್ತಾಪ ಬಂದ ಈ ಸಂದರ್ಭದಲ್ಲಿ ಹಿರಿಯ ಶರಣ ಸೊಡ್ಡಳ ಬಾಚರಸನೂ ಇದ್ದ.  ಬಸವಣ್ಣನವರು ಈ ಪ್ರಸ್ತಾಪದ ಸಾರಾಂಶವನ್ನು ಸಿದ್ಧರಾಮಯ್ಯನಿಗೆ ತಿಳಿಸಿ ಲಿಂಗ ದೀಕ್ಷೆಗೆ ಅವರ ಮನಸ್ಸನ್ನು ಒಲಿಸಬೇಕೆಂದು, ಹಿರಿಯರಾದ ಸೊಡ್ಡಳ ಬಾಚರಸರನ್ನು ಕೇಳಿಕೊಂಡಿದ್ದರು.  ಅದರಂತೆ ಆ ಪ್ರಸ್ತಾಪದ ಸಾರಾಂಶವನ್ನು ಉಚಿತವರಿತು ಸಿದ್ಧರಾಮನಿಗೆ ತಿಳಿಸಿದಾಗ, ಆತ ಅದಕ್ಕೆ ಯಾವ ಆಕ್ಷೇಪಣೆಯನ್ನೂ ವ್ಯಕ್ತಪಡಿಸದೆ ‘ಎಲ್ಲವೂ ಮಲ್ಲಿನಾಥನ ಇಚ್ಛೆ’ ಎಂದು ಮಾತ್ರ ತನ್ನ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದನು.

ಕೆಲವೇ ದಿನಗಳಲ್ಲಿ ಮಲ್ಲಿನಾಥನ ಇಚ್ಛೆ ಕಾರ್ಯಗತವಾಯಿತು.  ಚನ್ನಬಸವಣ್ಣನೇ ಗುರುವಾಗಿ ನಿಂತು ಸಿದ್ಧರಾಮನಿಗೆ ಬಸವಣ್ಣನವರ ಮಹಾಮನೆಯಲ್ಲಿ ಲಿಂಗ ದೀಕ್ಷೆ ನೆರವೇರಿತು.  ಕಲ್ಯಾಣದ ಶರಣರೆಲ್ಲರೂ ಪರಮಾನಂದಭರಿತರಾದರು.  ಸಿದ್ಧರಾಮನು ಅಲ್ಲಮಪ್ರಭುವನ್ನು ಕುರಿತು ‘ಅಯ್ಯಾ, ನಿಮ್ಮ ಮಹಾನುಭಾವರಿಂದ ಮಹಾವಸ್ತುವಿನ ಪ್ರಮಾಣವನರಿತೆ.  ನಿಮ್ಮ ನೆಚ್ಚಿನ ಮೆಚ್ಚಿನ ಶರಣರ ಸಂಗದಲ್ಲಿರಿಸಿ ಎನ್ನನಾಗುಮಾಡಿದಿರಿ’ ಎಂದು ಭಕ್ತಿಯಿಂದ ಸ್ತುತಿಸಿದನು.