‘ಕಲ್ಲಯ್ಯ ನೀನು ಬಂದದ್ದು ತುಂಬ ಸಂತೋಷ.  ನಿನ್ನ ಹಾಗೆ ಇನ್ನೂ ಇಲ್ಲಿಗೆ ಬರುವವರು ಯಾರು ಯಾರೋ! ಎಲ್ಲವೂ ರೇವಣಸಿದ್ಧರ ಸಂಕಲ್ಪ.  ಶ್ರೀ ಶೈಲದ ಮಲ್ಲಿಕಾರ್ಜುನನ ಕೃಪೆ’ – ಎಂದು ಸಿದ್ಧರಾಮನು ಹಾವಿನ ಹಾಳ ಕಲ್ಲಯ್ಯನು ತನ್ನಲ್ಲಿಗೆ ಬಂದಾಗ ಹೇಳಿದ ಮಾತು ನಿಜವಾಗಲು ಹೆಚ್ಚು ಕಾಲವೇನೂ ಬೇಕಾಗಲಿಲ್ಲ.  ಸಿದ್ಧರಾಮನ ಹೆಸರನ್ನು ಕೇಳಿ, ಸೊನ್ನಲಿಗೆಯಲ್ಲಿ ಆತನು ಕೈಕೊಳ್ಳಲು ಉದ್ದೇಶಿಸಿದ್ದ, ಕರ್ಮಯೋಗದ ಯೋಜನೆಯ ಸುದ್ದಿಯನ್ನು ಕೇಳಿ, ಹತ್ತೂ ಕಡೆಯಿಂದ ನಾ ಮುಂದೆ ತಾ ಮುಂದೆ ಎಂದು ಹಲವು ಜನ ಅವನ ಸೇವೆಗೆ ಬಂದು ನಿಂತರು.  ಕಪಿಲಸಿದ್ಧ ಮಲ್ಲಿಕಾರ್ಜುನನ ಕಿರಿಯ ದೇಗುಲ ಈಗ ಮೊದಲಿಗಿಂತ ಒಂದಷ್ಟು ವಿಸ್ತಾರವನ್ನು ಪಡೆದುಕೊಂಡಿತ್ತು.  ಸೊನ್ನಲಿಗೆಯ ಈ ಪರಿಸರದಲ್ಲಿ ಇನ್ನೂ ಹಲವು ದೇಗುಲಗಳು ನಿರ್ಮಾಣವಾಗಬೇಕು.  ಬಂದು ಹೋಗುವ ಭಕ್ತಾದಿಗಳಿಗೆ ನಿಲ್ಲಲು ನೆಲೆಬೇಕು.  ಬಂದ ಜನಕ್ಕೆ ಉಚಿತವಾದ ಆಹಾರ ದಾನದ ವ್ಯವಸ್ಥೆಗೆ ಅನ್ನಸತ್ರಗಳಾಗಬೇಕು.  ಬಂದ ಹಾಗೂ ಮುಂದೆ ಬರಲಿರುವ ಶಿಷ್ಯರ ವಸತಿಗೆ, ಅವರ ದೈನಂದಿನ ಪೂಜೆ-ಧ್ಯಾನಾದಿಗಳಿಗೆ ಒಂದು ಮಹಾಮನೆ ನಿರ್ಮಾಣವಾಗಬೇಕು.  ಹಾಗೆಯೆ ಮಲ್ಲಿಕಾರ್ಜುನನ ನಿತ್ಯನೇಮಗಳಿಗೆ ಹೋಮಗಳಿಗೆ, ವೇದಶಾಸ್ತ್ರಾದಿಗಳನ್ನು ಬಲ್ಲ ಹಾಗೂ ಶಾಸ್ತ್ರೋಕ್ತವಾದ ಅರ್ಚನೆಗಳನ್ನು ಬಲ್ಲ ಜನ ಬೇಕು – ಇತ್ಯಾದಿ ಯೋಚನೆಗಳು ಸಿದ್ಧರಾಮನ ಮನದಲ್ಲಿ ಸುಳಿದು ಹೋದವು.  ಹಾವಿನ ಹಾಳಕಲ್ಲಯ್ಯ ಮತ್ತು ಅಣ್ಣ ಬೊಮ್ಮಣ್ಣನ  ಜತೆ ಕೂತು ಒಂದಿರುಳು ಸಿದ್ಧರಾಮನು ಈ ಯೋಜನೆಗಳನ್ನು ಕುರಿತು ಯೋಚಿಸಿದನು.  ‘ಇಷ್ಟೆಲ್ಲಾ ಮಾಡಲು ತುಂಬಾ ಹಣಬೇಕಾಗುತ್ತದೆ.  ಜನಬಲಕ್ಕೇನೂ ಕೊರತೆಯಾಗದು, ಆದರೆ ಧನಬಲಕ್ಕೇನು ಮಾಡುವುದು’ ಎಂದು ಬೊಮ್ಮಣ್ಣ ತನ್ನ ಆತಂಕವನ್ನು ಸಿದ್ಧರಾಮನ ಎದುರು ಮಂಡಿಸಿದನು.  ಸಿದ್ಧರಾಮನು ಆ ಕುರಿತು ಒಂದಿಷ್ಟೂ ವಿಚಲಿತನಾಗದೆ ನುಡಿದನು : ‘ಎಲ್ಲ ಮಲ್ಲಯ್ಯನ ಇಚ್ಛೆ.  ಅವನೇ ಈ ಸೊನ್ನಲಿಗೆಯನ್ನು ಅಭಿನವ ಶ್ರೀಶೈಲ ಕ್ಷೇತ್ರವನ್ನಾಗಿ ಮಾಡಬೇಕೆಂದು ನಿರ್ದೇಶಿಸಿ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾನೆ.  ನೋಡೋಣ, ಅವನೇ ಏನಾದರೂ ದಾರಿ ತೋರಿಸಬಹುದೇನೋ’. ಅಣ್ಣ ಬೊಮ್ಮಯ್ಯ ‘ನೀವು ಹೇಳುವುದೇನೊ ಸರಿ.  ಆದರೆ ನಾವೂ ಈ ಬಗ್ಗೆ ಪ್ರಯತ್ನ ಪಡಬೇಡವೆ? ಮತ್ತೆ ಚಾಮಲದೇವಿಯನ್ನು ಕೇಳಿದರೆ ಹೇಗೆ?’ ಎಂದ.  ‘ಚಾಮಲದೇವಿ ಒಂದು ಕ್ರೋಶದಷ್ಟು ಭೂಮಿಯನ್ನು ಈಗಾಗಲೇ ಕೊಟ್ಟಿದ್ದಾಳೆ, ಅದು ಅವಳ ಪಾಲಿನ ಕೊಡುಗೆ, ಮತ್ತೆ ನಾವು ಆಕೆಯನ್ನು ಕೇಳುವುದು ಬೇಡ.  ಕಾಯೋಣ, ಮತ್ತೆ ಬೇರೊಂದು ಮುಖದಿಂದ ನಮಗೆ ನೆರವು ಬಂದೀತು’ ಎಂದ ಸಿದ್ಧರಾಮ.

ಇರುಳು ಕಳೆದು ಬೆಳಗಾಯಿತು.  ಮುಂಜಾನೆ ಅಣ್ಣ ಬೊಮ್ಮಯ್ಯ, ಕೆಲವು ಸಹಾಯಕರೊಂದಿಗೆ, ಹೊಸದಾಗಿ ನಿರ್ಮಿತವಾದ ಹೂವಿನ ತೋಟದ ಪಕ್ಕದ ನೆಲವನ್ನು, ತಮಗೆ ಬೇಕಾದ ತರಕಾರಿಗಳನ್ನು ಬೆಳೆದುಕೊಳ್ಳುವ ಉದ್ದೇಶದಿಂದ ಗುದ್ದಲಿಯಿಂದ ನೆಲವನ್ನು ಅಗೆಯುತ್ತಿದ್ದ. ಅತ್ತ ಸಿದ್ಧರಾಮ ಸ್ನಾನಾದಿಗಳನ್ನು ಮುಗಿಸಿ ಮಲ್ಲಿಕಾರ್ಜುನನ ದೇವಾಲಯದಲ್ಲಿ ಎಂದಿನಂತೆ ಮಲ್ಲಿನಾಥನ ಲಿಂಗಕ್ಕೆ ಅಭಿಷೇಕ ಮಾಡಿ, ಧೂಪ-ದೀಪ-ಅಭಿಷೇಕ ಅಲಂಕಾರಗಳಿಂದ ಅರ್ಚನೆಯನ್ನು ಮುಗಿಸಿ, ಧ್ಯಾನದಲ್ಲಿ ಕುಳಿತಿದ್ದನು.  ಇತ್ತ ದೇವಾಲಯದ ಸಮೀಪದಲ್ಲಿ ಸಿದ್ಧರಾಮನ ವಸತಿಗೆಂದು ಕಟ್ಟಲಾಗಿದ್ದ ಪರ್ಣಕುಟಿಯ ಒಳಗಡೆ ಹಾವಿನಹಾಳ ಕಲ್ಲಯ್ಯನು, ನೆಲವನ್ನು ಗುಡಿಸುತ್ತಿದ್ದನು.  ಈ ಮೂರು ಕ್ರಿಯೆಗಳು ಸಮಾನಾಂತರವಾಗಿ ನಡೆಯುತ್ತಿರುವಾಗ, ಅಣ್ಣ ಬೊಮ್ಮಯ್ಯನು ನೆಲವನ್ನು ಅಗೆಯುತ್ತಿರುವಂತೆಯೆ, ಅವನು ಒಂದೆಡೆ ನೆಲಕ್ಕೆ ಹಾಕಿದ ಗುದ್ದಲಿ ಇದ್ದಕ್ಕಿದ್ದಂತೆಯೆ ಠಣ್ ಎಂದು ಲೋಹದ ವಸ್ತುವೊಂದಕ್ಕೆ ತಗುಲಿ ಸದ್ದು ಮಾಡಿತು.  ಆತ ಪ್ರಯಾಸದಿಂದ ಗುದ್ದಲಿಯನ್ನು ಎತ್ತಿ  ಮತ್ತೂ ಒಮ್ಮೆ ಅಗೆದಾಗ, ಆ ಸದ್ದು ಇನ್ನೂ ಜೋರಾಗಿ ಕೇಳಿದ್ದಲ್ಲದೆ, ಗುದ್ದಲಿ ಆ ಲೋಹದ ವಸ್ತುವಿಗೆ ಸಿಕ್ಕಿಕೊಂಡಂತಾಯಿತು.  ಆತ ತನ್ನ ಸಹಾಯಕರೊಂದಿಗೆ ಪ್ರಯಾಸದಿಂದ ಗುದ್ದಲಿಯನ್ನೆಳೆದಾಗ, ಮೊಹರು ಮಾಡಿದ ಅಗಲವಾದ ಲೋಹದ ಪಾತ್ರೆಯೊಂದು ಗೋಚರವಾಯಿತು.  ಖಂಡಿತವಾಗಿಯೂ ಇದು ನೆಲದೊಳಗೆ ಎಂದೋ ಯಾರೋ ಬಚ್ಚಿಟ್ಟ ನಿಧಿಯೇ ಇರಬಹುದೆಂಬ ಸಂಭ್ರಮ ಅವನನ್ನು ತುಂಬಿತು.  ಜತೆಯ ಕೆಲಸಗಾರರೆಲ್ಲ ಹಿಗ್ಗಿನಿಂದ ಹೋ! ಎಂದರು.  ಪರ್ಣಕುಟಿಯ ಬಾಗಿಲಿಗೆ ನೀರು ಎರಚುತ್ತಿದ್ದ ಕಲ್ಲಯ್ಯನಿಗೂ ಈ ಕೋಲಾಹಲ ಕೇಳಿಸಿತು.  ಆತನೂ ಕುತೂಹಲಭರಿತನಾಗಿ ಹೋಗಿ ನೋಡುತ್ತಾನೆ; ಅಣ್ಣ ಬೊಮ್ಮಯ್ಯನ ಮುಖದಲ್ಲಿ ಆಶ್ಚರ್ಯ- ಸಂತೋಷಗಳು ಪುಟಿಯುತ್ತಿವೆ.  ಹೊಸದಾಗಿ ಬಂದ ತರುಣ-ಶಿಷ್ಯರ ಮುಖದಲ್ಲೂ ಮಂದಹಾಸ ಮಿನುಗುತ್ತಿದೆ.  ಸಂದರ್ಭ ಏನೆಂಬುದನ್ನರಿತ ಆತ ದೇವಸ್ಥಾನದೆಡೆಗೆ ಧಾವಿಸಿ ನಿಶ್ಚಿಂತೆಯಿಂದ ಧ್ಯಾನಮಗ್ನನಾಗಿದ್ದ ಸಿದ್ಧರಾಮನಿಗೆ, ಸುದ್ದಿಯನ್ನು ತಿಳಿಸಿ, ಅವನನ್ನು ಕರೆದುಕೊಂಡು ಬಂದನು.  ಧ್ಯಾನಸ್ಥಿಮಿತ ಮುಖಮುದ್ರೆಯ ಸಿದ್ಧರಾಮ ಒಂದಿಷ್ಟೂ ಆಶ್ಚರ್ಯವನ್ನು ಸೂಚಿಸದೆ, ಸಂತೋಷ – ಸಂಭ್ರಮಗಳಿಂದ ಪುಲಕಿತನಾಗಿದ್ದ ಬೊಮ್ಮಯ್ಯನನ್ನೂ, ಅವನ ಜತೆಗಿದ್ದ ತರುಣ-ಭಕ್ತರನ್ನೂ ಪ್ರಶ್ನಾರ್ಥಕವಾಗಿ ದಿಟ್ಟಿಸಿದನು.  ‘ಅಣ್ಣನವರೇ, ನಮ್ಮ ಗುದ್ದಲಿಗೆ ಹಣದ ಕೊಪ್ಪರಿಗೆಯೇ ಸಿಕ್ಕಹಾಗೆ ತೋರುತ್ತದೆ’ ಎಂದ ಅಲ್ಲಿನ ಕೆಲಸಗಾರರಲ್ಲಿ ಒಬ್ಬ.  ಬೊಮ್ಮಯ್ಯ ಯಾವ ಮಾತನ್ನೂ ಆಡದೆ ಸ್ತಂಭೀಭೂತನಾಗಿದ್ದ.  ಸಿದ್ಧರಾಮನ ಸೂಚನೆಯ ಮೇರೆಗೆ ಅವರೆಲ್ಲರೂ ಗುದ್ದಲಿಗೆ ಸಿಕ್ಕಿಕೊಂಡು ಅರ್ಧಮೇಲಕ್ಕೆ ಎದ್ದಿದ್ದ, ಅಗಲವಾದ ತಾಮ್ರದ ಪಾತ್ರೆಯನ್ನು ಮೇಲಕ್ಕೆ ಎತ್ತಿದರು.  ಅನಂತರ ಬೆಸುಗೆಯಾದ ಅದರ ಮುಚ್ಚಳವನ್ನು ತೆಗೆದು ನೋಡುತ್ತಾರೆ ಅದರ ತುಂಬ ಮಿರುಮಿರುಗುವ ಬಂಗಾರದ ವರಹಗಳು! ಯಾವ ರಾಜರ ಕಾಲದಲ್ಲಿ ಹೀಗೆ ಭೂಗರ್ಭದಲ್ಲಿ ಸುರಕ್ಷಿತವಾಗಿ ಇರಿಸಿದ ಸಂಪತ್ತೊ ಇದು ಎಂದು ಎಲ್ಲರೂ ಚಕಿತಗೊಂಡರು.  ‘ನೋಡಿದೆಯ ಬೊಮ್ಮಣ್ಣ ನಮ್ಮ ಮಲ್ಲಿಕಾರ್ಜುನನ ಲೀಲೆಯನ್ನು!’ ಎಂದ ಸಿದ್ಧರಾಮ.  ಆ ಮಾತಿಗೆ ಯಾರು ಪ್ರತ್ಯುತ್ತರ ಕೊಡುವ ಸ್ಥಿತಿಯಲ್ಲಿ ಇರಲಿಲ್ಲ.

ಮುಂದಿನ ದಿನಗಳಲ್ಲಿ ಸೊನ್ನಲಿಗೆಯ ಮಾಟವೇ ಬದಲಾಯಿಸಿತು.  ಮಲ್ಲಿಕಾರ್ಜುನನ ದೇಗುಲದ ಆಸುಪಾಸಿನಲ್ಲಿ ಇನ್ನೂ ಹದಿನಾರು ಲಿಂಗಗಳು ಪ್ರತಿಷ್ಠಾಪಿತವಾದವು.  ಮಹಮನೆಯ ಕೆಲಸವೂ ಮುಂದುವರಿಯಿತು.  ಸಿದ್ಧರಾಮನ ವಸತಿಗಾಗಿ ಮಠದ ಸಣ್ಣದೊಂದು ಕಟ್ಟಡ ತಲೆಯೆತ್ತಿತು.  ದೇವಸ್ಥಾನದ ಹಾಗೂ ಅರ್ಚನೆ- ಅಭಿಷೇಕಗಳಿಗಾಗಿ ಚಿಕ್ಕ ಗೋಶಾಲೆಯೆ ನಿರ್ಮಿತಿಯಾಯಿತು.  ದೇವಾಲಯದ ಪೂಜೆ ಹರಕೆಗಳಿಗಾಗಿ ಬರುವ ಭಕ್ತಾದಿಗಳಿಗೆ ಉಳಿದುಕೊಳ್ಳಲು ಸತ್ರಗಳೂ, ಉಚಿತ ವಸತಿ-ಅಶನಗಳ ವ್ಯವಸ್ಥೆಯೂ ಏರ್ಪಟ್ಟವು.  ಹೋಮ-ಹವನಾದಿಗಳ ವಿಧಿವಿಧಾನಗಳನ್ನು ಬಲ್ಲ ಶಾಸ್ತ್ರವೇತ್ತರುಗಳಿಗಾಗಿ ಪ್ರತ್ಯೇಕವಾದ ವಸತಿಗಳನ್ನು ಕಲ್ಪಿಸಲಾಯಿತು.  ಕ್ರಮ ಕ್ರಮೇಣ, ಹಳೆಯ ಸೊನ್ನಲಿಗೆ ಹಿಂದಾಗಿ, ಈಗ ಹೊಸ ಸೊನ್ನಲಾಪುರ ರೂಪುಗೊಂಡಿತು.  ದಿನಬೆಳಗಾದರೆ ಮಲ್ಲಿಕಾರ್ಜುನ ದೇವಾಲಯದ ಪೂಜಾ ಸಂಭ್ರಮವೇ ಸಂಭ್ರಮ.  ಮೂರು ಹೊತ್ತೂ ಮಹಾಮಂಗಳಾರತಿಯ ವೇಳೆಗೆ ಶಂಖ-ಜಾಗಟೆ-ಕಹಳೆ-ಭೇರೀ ನಿನಾದವು ಸಮುದ್ರ ನಿರ್ಘೋಷದಿಂದ ವಾಯುಮಂಡಲವನ್ನು ವ್ಯಾಪಿಸುವುದು.  ದಿನಕ್ಕೊಂದು ಬಗೆಯ ಅಭಿಷೇಕ – ಅರ್ಚನೆಗಳಿಂದ ಕಪಿಲಸಿದ್ಧಮಲ್ಲಿಕಾರ್ಜುನ ಲಿಂಗವು ಶೋಭಾಯಮಾನವಾಗಿ ಭಕ್ತರನ್ನು ಪುಲಕಿತರನ್ನಾಗಿ ಮಾಡುವುದು; ಕಾಲಕಾಲಕ್ಕೆ ಶಾಸ್ತ್ರೋಕ್ತವಾದ ಹಲವು ಉತ್ಸವಗಳಲ್ಲಿ ಮಲ್ಲಿಕಾರ್ಜುನನ ಉತ್ಸವ ಮೂರ್ತಿಯು ಬಿಜಯಂಗೈಯ್ಯುವುದು; ಸಂಜೆ ದೇವಸ್ಥಾನದ ಪ್ರಾಕಾರದಲ್ಲಿ ಸುಶ್ರಾವ್ಯವಾದ ಭಜನೆಯ ಮೇಳದ ದನಿ ಅನುರಣಿಸುವುದು, ಮುಖಮಂಟಪದ ಬದಿಯ ಯಾಗ ಶಾಲೆಗಳಲ್ಲಿ ನಿತ್ಯ ಹೋಮ ಹವನಾದಿಗಳ ವೇದ ಮಂತ್ರ ಘೋಷಗಳ ನಾದ ಅಲೆಯಲೆಯಾಗಿ ತೇಲಿ ಬರುವುದು.  ಅನ್ನ ಸತ್ರಗಳಲ್ಲಿ ನೂರಾರು ಜನಕ್ಕೆ ಉಚಿತವಾಗಿ ಭೋಜನ ವ್ಯವಸ್ಥೆಯ ಸಂಭ್ರಮ ಗೋಚರವಾಗುವುದು.  ಮಹಮನೆಯ ಮುಂದೆ ಭಕ್ತಾದಿಗಳು ತಾವಾಗಿಯೇ ಗಾಡಿಗಾಡಿಗಳಲ್ಲಿ ಹೇರಿಕೊಂಡು ಬಂದು ಕಾಣಿಕೆ ಎಂದು ಒಪ್ಪಿಸಿದ ದವಸಧಾನ್ಯಗಳು ಉಗ್ರಾಣಗಳಲ್ಲಿ ತುಂಬಿಕೊಳ್ಳುವುವು : ಬಡಬಗ್ಗರಿಗೆ, ಅನ್ನದಾನ – ವಸ್ತ್ರದಾನಗಳು ಸುಸೂತ್ರವಾಗಿ ನಡೆಯುವುವು.  ಆಗಾಗ ಸಾಮೂಹಿಕ ವಿವಾಹಗಳು ನಡೆದು ನೂತನ ವಧೂವರರು ಶ್ರೀಮಠದ ಉದಾರವಾದ ಕೊಡುಗೆಯಿಂದ ತಮ್ಮ ಸಂಸಾರ ಜೀವನವನ್ನು ಪ್ರಾರಂಭಿಸುವರು.  ಹಗಲೆನ್ನದೆ ರಾತ್ರಿಯೆನ್ನದೆ ಈ ಹೊಸ ಸೊನ್ನಲಿಗೆಯು ಕ್ರಿಯಾಶೀಲವಾಗಿ ತೋರುವುದು.  ಹಾವಿನಹಾಳ ಕಲ್ಲಯ್ಯ, ಅಣ್ಣ ಬೊಮ್ಮಯ್ಯ ಮತ್ತು ನೂರಾರು ಜನ ಶಿಷ್ಯರ ಸ್ವಯಂಸೇವೆಯ ನಿರಂತರ ಜವಾಬ್ದಾರಿಗಳಿಂದ, ದಿನದಿಂದ ದಿನಕ್ಕೆ ಈ ಮಹಾಕ್ಷೇತ್ರದ ಕಾರ್ಯಗಳು ಸುಸೂತ್ರವಾಗಿ ನಡೆಯುವುವು.  ಈ ಎಲ್ಲದರ ನಡುವೆ ಸಿದ್ಧರಾಮನು ತನ್ನ ದೈನಂದಿನ ಧ್ಯಾನ-ಪೂಜೆಗಳಿಂದ, ಈ ಕ್ಷೇತ್ರಕ್ಕೆ ಬಂದು ಹೋಗುವ ಬಹುಸಂಖ್ಯಾತ ಭಕ್ತರ ಕಷ್ಟಸುಖಗಳನ್ನು ವಿಚಾರಿಸುವ ಕಾಳಜಿಗಳಿಂದ, ಅಪಾರವಾದ ಅನುಕಂಪದಿಂದ, ನಿಶ್ಯಬ್ದ ಅಯಸ್ಕಾಂತಕೇಂದ್ರದಂತೆ ಶೋಭಿಸುತ್ತಾನೆ.

ನಿಜ ಎಲ್ಲವೂ ಮಲ್ಲಯ್ಯನ ಇಚ್ಛೆಯಂತೆಯೆ ನಡೆಯುತ್ತಿದೆ.  ಅವನಿಚ್ಛೆಯಂತೆ ಸೊನ್ನಲಿಗೆ ಅಭಿನವ ಶ್ರೀಶೈಲವೆಂದು ಜನಜನಿತವಾಗಿ ಈಗಾಗಲೇ ಸಹಸ್ರಾರು ಜನವನ್ನು ತನ್ನತ್ತ ಆಕರ್ಷಿಸುತ್ತಿದೆ.  ಆದರೆ ಒಂದೇ ಒಂದು ದೊಡ್ಡ ಕೊರತೆ ಎಂದರೆ ನೀರಿನದು.  ತಾನು ಎಳೆಯಂದಿನಿಂದಲೂ ಕಂಡಂತೆ ಬಟಾಬಯಲಿನ ಸೊನ್ನಲಿಗೆಯ ಪರಿಸರ ಜಲದ ಅಭಾವದಿಂದ ಪರಿತಪಿಸುತ್ತಿದೆ.  ವರ್ಷದಲ್ಲಿ ಬರುವ ಮಳೆಯೋ ತೀರಾ ಕಡಿಮೆ.  ಇರುವ ಜಲಾಶಯಗಳೂ ಸಾಲವು.  ಇದ್ದ ಕೆಲವು ಕೆರೆ-ಕುಂಟೆ-ಬಾವಿಗಳೂ ಹಿಂದಿನ ಜೀವನ ಕ್ರಮಕ್ಕೆ ಹೇಗೋ ಸಾಕಾಗಬಹುದಾಗಿದ್ದರೂ ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುವ ಕಾರ್ಯಕ್ಷೇತ್ರದ ಹೊಸ ಸೊನ್ನಲಾಪುರಕ್ಕೆ ಅವು ಏನೇನೂ ಸಾಲವು.  ಹೀಗಾಗಿ ಎಂದೂ, ಯಾವ ಕಾಲಕ್ಕೂ ಈ ಪರಿಸರಕ್ಕೆ ನೀರಿನ ಕೊರತೆಯಾಗದಂಥ ಕೆರೆಯೊಂದನ್ನು ಕಟ್ಟಬೇಕು.  ಆ ಕೆರೆ ಜಗತ್ತಿನ ಎಲ್ಲ ಪುಣ್ಯನದಿಗಳು ಬಂದು ಸಂಗಮಗೊಂಡಂತೆ ಇರಬೇಕು.  ಸಾಕ್ಷಾತ್ ಗಂಗೆಯನ್ನೆ ತನ್ನ ಜಟಾಜೂಟದಲ್ಲಿ ಅಡಗಿಸಿಕೊಂಡ ಶ್ರೀಶೈಲದ ಮಲ್ಲಿಕಾರ್ಜುನನು ಸಂಕಲ್ಪಿಸಿದರೆ, ಇಂದೊಂದು ಜಲಾಶಯ ನಿರ್ಮಾಣಗೊಳ್ಳುವುದು ಅಸಂಭವವೇನಲ್ಲ.  – ಹೀಗೆ ಸಿದ್ಧರಾಮನ ಮನಸ್ಸಿನಲ್ಲಿ ಕೊರೆಯುತ್ತಿದ್ದ ಚಿಂತೆ, ಕಾರ್ಯರೂಪಕ್ಕೆ ಇಳಿಯಲು ತಡವಾಗಲಿಲ್ಲ.  ತನ್ನ ಮನದ ಇಂಗಿತವನ್ನು ಒಂದು ದಿನ ತನ್ನ ನೂರಾರು ಶಿಷ್ಯರ ಎದುರು ತೋಡಿಕೊಂಡದ್ದೇ ತಡ, ಆ ಸ್ವಯಂಸೇವಕರ ಸಮೂಹ ಕಾರ್ಯೋನ್ಮುಖವಾಗಲು ಸಿದ್ಧವಾಯಿತು.  ಒಂದು ಮುಂಜಾನೆ ಕಪಿಲಸಿದ್ಧ ಮಲ್ಲಿಕಾರ್ಜುನನ ದೇವಾಲಯಕ್ಕೆ ಆಗ್ನೇಯ ದಿಕ್ಕಿನಲ್ಲಿ ಪ್ರಶಸ್ತವಾದ ಸ್ಥಳವೊಂದನ್ನು ಆಯ್ದು, ಸಿದ್ಧರಾಮನು ತಾನೆ ಗುದ್ದಲಿ ಹಿಡಿದು ಮೊದಲು ಅಗೆದನು.  ನೂರಾರು ಶಿಷ್ಯರು ಹಾರೆ-ಸಲಿಕೆ-ಗುದ್ದಲಿಗಳನ್ನು ಹಿಡಿದು  ಕೆರೆಯ ಅಗೆತದಲ್ಲಿ ತೊಡಗಿದರು.  ತಾವು ಈ ಕೆಲಸ ಪ್ರಾರಂಭಿಸಿದ ನಂತರ ಸಿದ್ಧರಾಮನು ಮಠಕ್ಕೆ ಹಿಂದಿರುಗಬಹುದೆಂದು ಶಿಷ್ಯರು ಭಾವಿಸಿದರು.  ಆದರೆ ಕ್ಷೇತ್ರಗುರುವಾದ ಸಿದ್ಧರಾಮ ತಾನೂ ಅವರೆಲ್ಲರ ಜತೆ ನಿಂತು ದಿನವಿಡೀ ಅಗೆದನು.  ಮತ್ತೆ ಮರುದಿನವೂ ಎಂದಿನಂತೆ ಸಿದ್ಧರಾಮ ಶಿಷ್ಯರ ಜತೆ ಕೆರೆಯ ಕೆಲಸಕ್ಕೆ ನಿಂತಿದ್ದನ್ನು ಕಂಡು ಶಿಷ್ಯರಿಗೆ ಮತ್ತು ಸೊನ್ನಲಿಗೆಯ ಜನಕ್ಕೆ  ಆಶ್ಚರ್ಯವಾಯಿತು.  ಕಲ್ಲಯ್ಯ ಹಿಂಜರಿಯುತ್ತ ಹೆಳಿದ : ‘ಅಯ್ಯನವರು ದಯಮಾಡಿ ಮಠಕ್ಕೆ ಹಿಂದಿರುಗಬೇಕು.  ಶಿವಯೋಗಿಗಳಾದ ನೀವು ಮಠದೊಳಗೆ ಇದ್ದುಕೊಂಡು ಭಕ್ತರನ್ನು ಆಶೀರ್ವದಿಸಿದರೆ ಅಷ್ಟೇ ಸಾಕು.  ತಾವು ವೃಥಾ ಶ್ರಮಪಡಬಾರದು’.  ಸಿದ್ಧರಾಮ ನಸುನಕ್ಕು ಹೇಳಿದ : ‘ಕಲ್ಲಯ್ಯ, ಕೃಷಿಯ ಮಾಡಿ ಉಣ್ಣದೆ ಹಸಿವು ಹಿಂಗುವ ಬಗೆ ಹೇಗೆ? ನಾನು ಶಿವಯೋಗಿ ಎಂಬ ಕಾರಣಕ್ಕೆ ಮಠದಲ್ಲಿದ್ದು ಶ್ರಮದಿಂದ ದೂರವಾಗಬೇಕೆ?  ಪ್ರತಿಯೊಬ್ಬನೂ ತಾನು ಉಣ್ಣುವ ಅನ್ನವನ್ನು ಶ್ರಮದಿಂದ ಸಂಪಾದಿಸಬೇಕಲ್ಲದೆ, ಅನ್ಯರಶ್ರಮದಿಂದ  ತನ್ನ ಸುಖವನ್ನು ಗಳಿಸಿಕೊಳ್ಳುವಂತಾಗಬಾರದು.  ಶಿವಯೋಗಿಯ ಶರೀರವಾದರೂ ವೃಥಾ ಕೆಲಸವಿಲ್ಲದೆ ಸವೆಯಬಾರದು.  ಸಾಧ್ಯವಾದಷ್ಟು ಅವನಿಂದಲೂ ದೇಹ ಶ್ರಮದ ಕೆಲಸ ನಡೆಯಬೇಕು.  ಮಠದಲ್ಲಿ ಅಥವಾ ದೇವಸ್ಥಾನದಲ್ಲಿ ಅಥವಾ ಅರಣ್ಯದ ಏಕಾಂತ ಸ್ಥಲಗಳಲ್ಲಿ ಮಾಡುವ ಜಪತಪಾದಿಗಳಷ್ಟೇ ಯೋಗವಲ್ಲ; ಬಹುಜನ ಹಿತಕ್ಕಾಗಿ ಈ ಬಗೆಯ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವುದೂ ಯೋಗವೇ.  ಇದು ಕರ್ಮಯೋಗ, ಕರ್ಮವೆ ಯೋಗ, ಯೋಗವೆ ಕರ್ಮ ಎಂದು ತಿಳಿಯಬೇಕು.  ಈ ನಿಲುವಿನಲ್ಲಿ ಹೀಗೆ ಕರ್ಮದಲ್ಲಿ ತೊಡಗಿಸಿಕೊಳ್ಳುವ ನಮ್ಮ ನಮ್ಮ ಅಹಂಕಾರಗಳನ್ನು ನಿರಸನ ಮಾಡಿಕೊಳ್ಳುತ್ತ ಚಿತ್ತವನ್ನು ನಿರ್ಮಲವನ್ನಾಗಿ ಮಾಡಿಕೊಳ್ಳುವುದೇ ಯೋಗ’.

ಕಲ್ಲಯ್ಯನೂ, ಬೊಮ್ಮಣ್ಣನೂ ಮತ್ತು ಇತರ ನೂರಾರು ಶಿಷ್ಯರು ಕೆರೆಯ ಕೆಲಸದ ಅಗೆತದ ನಡುವೆ ಸಿದ್ಧರಾಮನ ಈ ಮಹಾವಾಕ್ಯವನ್ನು ನಿಶ್ಯಬ್ದವಾಗಿ ಆಲಿಸಿ ಪುಲಕಿತರಾದರು.  ತಾನು ಇವರಿಗಿಂತ ಮೇಲು, ತಾನೊಬ್ಬ ಶಿವಯೋಗಿ, ತಾನೊಬ್ಬ ಕಾರಣಿಕ ಪುರುಷ, ತಾನೊಬ್ಬ ಅಸಾಮಾನ್ಯ ವ್ಯಕ್ತಿ, ತಾನೊಬ್ಬ ಮಹಾಕ್ಷೇತ್ರದ ಧರ್ಮಾಧಿಕಾರಿ ಇತ್ಯಾದಿಯಾದ ಯಾವ ಭಾವವನ್ನೂ ಆರೋಪಿಸಿಕೊಳ್ಳದೆ, ನೂರು ಮಂದಿಯಲ್ಲಿ ತಾನೂ ಒಬ್ಬನೆಂಬ ವಿನೀತ ಭಾವದಲ್ಲಿ ತಮ್ಮ ಜತೆ ಗುದ್ದಲಿ ಹಿಡಿದು ಅಗೆತದಲ್ಲಿ ತೊಡಗಿದ ಸಿದ್ಧರಾಮನ ಶ್ರೀಸಾಮಾನ್ಯತಾ ರೂಪಕ್ಕೆ ಶಿಷ್ಯರು ನಿಬ್ಬೆರಗಾದರು.

ಕೆರೆಯ ಅಗೆತದ ಕೆಲಸ ಮುಂದುವರಿಯಿತು.  ಸುಮಾರು ಮೂರು ತಿಂಗಳ ಕಾಲ ಸಿದ್ಧರಾಮನೂ ಗುದ್ದಲಿ ಹಿಡಿದು ವಿಸ್ತಾರವಾದ ಕೆರೆಯ ಕೆಲಸದಲ್ಲಿ ತೊಡಗಿಕೊಂಡನು.  ಮಳೆಗಾಲಗಳಲ್ಲಿ ಯಾವ ಯಾವ ದಿಕ್ಕುಗಳಿಂದ ನೀರು ಹರಿದು ಬರಬಹುದೆಂಬ ಅಂದಾಜು ಮಾಡಿ, ಹಳ್ಳದ ದಾರಿಗಳನ್ನು ಈ ಕೆರೆಯ ಕಡೆ ತಿರುಗಿಸಿದರು.  ಮೊದ ಮೊದಲು ಕೆರೆಯೊಳಗಿನ ಜಲದ ಸೆಲೆಗಳನ್ನು ಪತ್ತೆಹಚ್ಚಿ ಅಂಥ ಕಡೆಗಳಲ್ಲಿ ಆಳವಾಗಿ ಅಗೆದರು.  ಕ್ರಮಕ್ರಮೇಣ ಚಿಲುಮೆಯಂತೆ ಪುಟಿದ ಅಂತರ್ಜಲವು ನಿಧಾನವಾಗಿ ಕೆರೆಯನ್ನು ತುಂಬಿಕೊಳ್ಳತೊಡಗಿತು.  ಕೆರೆಯ ಕೆಲಸ ಮುಂಗಾರಿನ ವೇಳೆಗೆ ಮುಗಿದು, ಕೆಲವು ದಿನ ಧಾರಾಕಾರವಾಗಿ ಗುಡುಗು-ಸಿಡಿಲು-ಮಿಂಚುಗಳೊಡನೆ ಸುರಿದ ಭಾರೀ ಮಳೆಯಿಂದ ಕೆರೆಯ ಜಲ ವಿಸ್ತೀರ್ಣ ದೃಗ್ಗೋಚರವಾಗತೊಡಗಿತ್ತು.  ತಂದು ಕೂಡಿಸಿದ ಹಲವು ಹಳ್ಳಗಳೂ ಹತ್ತು ದಿಕ್ಕಿನ ನೀರನ್ನು ಈ ಕೆರೆಗೆ ಸೇರಿಸಿದವು. ವಿಶಾಲವಾದ ಕೆರೆಯ ಜಲ ವಿಸ್ತೀರ್ಣದಲ್ಲಿ, ಬೀಸುವ ಗಾಳಿಯ ಹೊಡೆತಕ್ಕೆ ತರಂಗ ಮಾಲೆಗಳು ಕೆಂಪು ಕುದುರೆಗಳಂತೆ ಧಾವಿಸಿ ದಡಕ್ಕೆ ಅಪ್ಪಳಿಸತೊಡಗಿದವು.  ಬಹುಕಾಲದಿಂದ ಇಂಥದೊಂದು ನೀರನೆಲೆಯಿಲ್ಲದ ಸೊನ್ನಲಿಗೆಯ ಬರಡುಭೂಮಿಗೆ ಸಿದ್ಧರಾಮನ ಹಾಗೂ ಅವನ ಬಹುಸಂಖ್ಯೆಯ ಶಿಷ್ಯರ ಶ್ರಮದ ಪರಿಣಾಮವಾಗಿ ಗಂಗಾವತರಣವಾದಂತಾಯಿತು.  ಇನ್ನು ಯಾವ ಕಾಲಕ್ಕೂ ಪಶು ಪಕ್ಷಿ ಆದಿಯಾಗಿ ಎಲ್ಲ ಜೀವರುಗಳಿಗೂ ಬಾಯಾರಿಕೆಯನ್ನು ನೀಗಿಸುವ ನಿರಂತರ ಜಲಸಮೃದ್ಧಿಯ ಕನಸು ನನಸಾದುದನ್ನು ಕಂಡು ಊರ ಜನ ಸಿದ್ಧರಾಮನನ್ನು ಮತ್ತು ಅವನ ಶಿಷ್ಯ ಸಮೂಹವನ್ನು ಬಾಯ್ತುಂಬ ಹೊಗಳಿತು.

ದಿನವೂ ಸಿದ್ಧರಾಮನು ಬೆಳಗಿನ ಜಾವದಲ್ಲಿ ಸ್ನಾನಾದಿಗಳನ್ನು ಮುಗಿಸಿಕೊಂಡು, ಬೆಳಗಾಗುವವರೆಗೂ ಗಾಢವಾದ ಧ್ಯಾನದಲ್ಲಿ ಮುಳುಗುವನು.  ಅನಂತರ ಮಲ್ಲಿಕಾರ್ಜುನನ ದೇಗುಲಕ್ಕೆ ಹೋಗಿ ಮೊದಲ ಪೂಜೆಯಲ್ಲಿ ಪಾಲುಗೊಂಡು, ದೈನಂದಿನ ನೇಮ ಹಾಗೂ ಹೋಮ ಹವನಾದಿಗಳನ್ನು ವೀಕ್ಷಿಸುವನು.  ಸ್ವಲ್ಪ ಹೊತ್ತು ಹೊಸತಾಗಿ ನಿರ್ಮಿತಿಯಾದ ಕೆರೆಯ ಬಳಿಗೆ ಹೋಗಿ, ಅಲ್ಲಿ ಇನ್ನೂ ಆಗಬೇಕಾಗಿರುವ ಕೆಲಸಗಳ ಪರಿಶೀಲನೆ ನಡೆಯಿಸುವನು; ಅನಂತರ ಮಠದ ಬಳಿಗೆ ಹಿಂದಿರುಗುವ ಹೊತ್ತಿಗೆ ಊರೂರು ಕೇರಿಗಳಿಂದ ಬಂದ ಭಕ್ತಾದಿಗಳಿಗೆ ದರ್ಶನ ನೀಡುವನು; ಅವರ ಕಷ್ಟ ಸುಖಗಳನ್ನು ಅನುಕಂಪದಿಂದ ಆಲಿಸುವನು; ಅವರ ಆಧ್ಯಾತ್ಮಿಕ ಸಂದೇಹಗಳಿಗೆ ಸಮಾಧಾನಕರವಾದ ಉತ್ತರಗಳನ್ನು ಹೇಳುವನು; ಅತ್ಯಂತ ಕಷ್ಟದಲ್ಲಿ ಸಿಕ್ಕ ಜನಕ್ಕೆ ಮಲ್ಲಿಕಾರ್ಜುನನ ಬೊಕ್ಕಸದಿಂದ ಧನಸಹಾಯ ಒದಗಿಸುವನು; ವಸ್ತ್ರ ದಾನವನ್ನು ಮಾಡುವನು.  ಶ್ರೀಕ್ಷೇತ್ರಕ್ಕೆ  ಯಾರು ಬಂದರೂ ಅಲ್ಲಿನ ದೈನಂದಿನ ಉಚಿತ ಭೋಜನದಲ್ಲಿ ಪಾಲುಗೊಂಡು ಪ್ರಸಾದವನ್ನು ಸ್ವೀಕರಿಸಿಯೇ ಹೋಗಬೇಕೆಂದು ಸೂಚಿಸುವನು; ನಡುಹಗಲಿನ ಮಿತ ವಿಶ್ರಾಂತಿಯ ನಂತರ ಮತ್ತೆ ತಾನೇ, ಶ್ರೀಕ್ಷೇತ್ರದ ಹೂವಿನ ತೋಟದ ಗಿಡಗಳಿಗೆ ನೀರೆರೆಯುವನು; ಹೊಸದಾಗಿ ನಿರ್ಮಿತವಾಗುತ್ತಿದ್ದ ಕಟ್ಟಡಗಳ ಕೆಲಸದಲ್ಲಿ ತೊಡಗಿದ್ದ ತನ್ನ ಶಿಷ್ಯರ ಜತೆಗೆ ತಾನೂ ನಿಂತು ಅವರೊಡನೆ ಕೆಲಸಕ್ಕೆ ಕೈ ಹಾಕುವನು.  ಮತ್ತೆ ಸಂಜೆಯ ಸೂರ್ಯನ ಕಿರಣಗಳು ಹೊಸ ತಟಾಕದ ಅಸಂಖ್ಯ ಅಲೆಗಳ ಮೇಲೆ ಸುವರ್ಣಕಾಂತಿಯನ್ನು ಹರಡುತ್ತ ನರ್ತಿಸುವಾಗ, ಮತ್ತೆ ಸಂಜೆಯ ಪೂಜೆಯ ಘಂಟೆ-ಜಾಗಟೆ-ಭೇರಿ-ಕಹಳೆಗಳ ನಿನಾದಗಳು ನೆಲ ಮುಗಿಲನ್ನು ಅನುರಣನಗೊಳ್ಳುವಂತೆ ಮಾಡುವಾಗ, ಮಲ್ಲಿಕಾರ್ಜುನನ ದರ್ಶನ ಮಾಡಿಕೊಂಡು ಮರಳಿ ಮಠಕ್ಕೆ ಬಂದು ತಮ್ಮ ನೂರಾರು ಶಿಷ್ಯರ ಜತೆಗೆ ಕೂತು, ಅವರು ಮಾಡಬೇಕಾದ ಮುಂದಿನ ದಿನಗಳ ಕರ್ತವ್ಯಗಳನ್ನು ಕುರಿತು ಯೋಚಿಸುವನು; ಶಿಷ್ಯರ ಜತೆಗೆ ಪಾರಮಾರ್ಥಿಕ ಸಂಗತಿಗಳ ಬಗ್ಗೆ ಸಂವಾದ ನಡೆಸುವನು; ಇರುಳು ಮಿತಾಹಾರದ ನಂತರ ತನ್ನ ಏಕಾಂತವಾದ ಕೊಠಡಿಯಲ್ಲಿ ಕೂತು ಪ್ರಶಾಂತವಾದ ಹಣತೆಗಳ ಬೆಳಕಿನಲ್ಲಿ ತನ್ನ ಅಂದಂದಿನ ಮನಸ್ಸಿನ ತುಮುಲಗಳನ್ನೂ, ಪ್ರತಿಕ್ರಿಯೆಗಳನ್ನೂ, ಭಾವನೆಗಳನ್ನೂ, ವಿಚಾರಗಳನ್ನೂ ಬರೆಯುತ್ತ ಬಹುಹೊತ್ತನ್ನು ಕಳೆಯುವನು.

ಒಂದು ದಿನ ಮುಂಜಾನೆ ತನ್ನ ಧ್ಯಾನದ ನಂತರ, ಮಲ್ಲಿಕಾರ್ಜುನನ ದೇಗುಲಕ್ಕೆ ಹೋಗುವ ಮುನ್ನ, ಮಠದ ಆವರಣದ ಹೂವಿನ ತೋಟದಲ್ಲಿ, ಗಾಳಿ ಅಲುಗಿಸದ, ದುಂಬಿಗಳಿನ್ನೂ ಮೊಗವಿಟ್ಟು ಮೂಸದ, ರವಿಕಿರಣಗಳು ಸ್ಪರ್ಶಿಸದ ಬಿಡಿಬಿಡಿ ಅರಳಿದ ಹೂವುಗಳನ್ನು ಸಿದ್ಧರಾಮನು ಬಿಡಿಸುತ್ತಿರುವಾಗ ಅದೆಲ್ಲಿಂದಲೋ ಒಂದು ಜಿಂಕೆಯ ಹಿಂಡು ಸದ್ದಿಲ್ಲದೆ ಬಂದು ಹೂದೋಟದ ಗರುಕೆಯನ್ನು ಮೇಯುವುದನ್ನು ಕಂಡು ಚಕಿತಗೊಂಡು, ಅಣ್ಣ ಬೊಮ್ಮಯ್ಯನನ್ನು ಕೂಗಿ ಕರೆದನು. ಬೊಮ್ಮಯ್ಯ ಬಂದು ನೋಡುತ್ತಾನೆ, ಮುಂಜಾವದ ಮಬ್ಬು ಬೆಳಕಿನಲ್ಲಿ ಚಿಕ್ಕೆ ಚಿಕ್ಕೆಯ ಮೈಯ್ಯ, ಕವಲುಗೊಂಬುಗಳ ಜಿಂಕೆಯ ಹಿಂಡೊಂದು ಛಂಗನೆ ನೆಗೆಯುತ್ತಾ ಓಡುತ್ತಿದೆ.  ಅವುಗಳನ್ನು ಹಿಂಬಾಲಿಸಲಾರದ ಎಳೆಯ ಮರಿಯೊಂದು ದಿಗ್ಭ್ರಾಂತವಾಗಿ ಗಿಡಗಳ ನಡುವೆ ನಿಂತಿವೆ;  ಸಿದ್ಧರಾಮನು ಆ ಮರಿಯನ್ನು ತಬ್ಬಿಹಿಡಿದುಕೊಂಡು, ಪ್ರೀತಿಯಿಂದ ಅದರ ಮೈ ಸವರುತ್ತಿದ್ದಾನೆ.  ‘ಇದೇನು ಪವಾಡ. ಸೊನ್ನಲಿಗೆಯ ಈ ನೆಲದಲ್ಲಿ ಎಂದೂ ಕಾಣದ ಜಿಂಕೆಗಳು ಹೀಗೆ ಕಾಣಿಸುವುದೆಂದರೇನು, ಇದೇನು ಗಂಧರ್ವರ ಮಾಯೆಯೋ!’ ಅನ್ನಿಸಿತು ಬೊಮ್ಮಯ್ಯನಿಗೆ.  ಚಕಿತನಾದ ಬೊಮ್ಮಯ್ಯನಿಗೆ ಸಿದ್ಧರಾಮ ಹೇಳಿದ : ‘ಅಣ್ಣಯ್ಯ ನೋಡು ಈ ಮರಿ ಎಷ್ಟು ಚೆನ್ನಾಗಿದೆ.  ನಾನು ನನ್ನ ಚಿಕ್ಕಂದಿನಲ್ಲಿ ದನಹೊಡೆದುಕೊಂಡು ಹೋಗುತ್ತಿದ್ದೆನಲ್ಲ, ನಮ್ಮೂರ ಕಾವಲಿನ ಕಾಡಿಗೆ, ಆಗಾಗ ಇಂಥ ಜಿಂಕೆಯ ಹಿಂಡೊಂದನ್ನು ಅಪರೂಪಕ್ಕೆ ನೋಡುತ್ತಿದ್ದೆ.  ಈ ಸೊನ್ನಲಿಗೆಯ ಬರಡು ಪರಿಸರಕ್ಕೆ ಆ ದೂರದ ಕಾಡಿನ ಜಿಂಕೆಗಳು ಬರಲು ಇದ್ದ ಆಕರ್ಷಣೆಯಾದರೂ ಏನು? ಈಗಲಾದರೊ ನೀರಿನ ಸಮೃದ್ಧಿಯಿರುವ ಕೆರೆಯಿದೆ.  ಈ ಕ್ಷೇತ್ರದ ನೆಲ ಹಸುರಾಗಿದೆ.  ಸಾಕಷ್ಟು ಗಿಡ ಮರಗಳು ದಟ್ಟವಾಗಿ ಬೆಳೆದುಕೊಂಡಿವೆ.  ಹೀಗಿರುವಾಗ ಜಿಂಕೆಗಳ ಹಿಂಡೊಂದು ನಮ್ಮ ಹೂವಿನ ತೋಟಕ್ಕೆ ಈ ಮುಂಜಾನೆ ಬಂದದ್ದರಲ್ಲಿ ಆಶ್ಚರ್ಯವೇನಿದೆ?  ನೋಡು ಈ ಮರಿಯನ್ನು ಜೋಪಾನವಾಗಿ ನೋಡಿಕೋ. ನಾಳೆ ಬೆಳಗಿನ ಜಾವ, ಮತ್ತೇನಾದರೂ ಆ ಜಿಂಕೆಗಳ ಹಿಂಡು ಬಂದರೆ, ಕಾದಿದ್ದು ಈ ಮರಿಯನ್ನು ಅವುಗಳ ಕಡೆಗೆ ಬಿಡು; ಒಂದು ವೇಳೆ ನಾಳೆಯೂ ಅವು ಬಾರದಿದ್ದರೆ ನೀನೇ ಇದನ್ನು ತೆಗೆದುಕೊಂಡು ಹೋಗಿ ಸಸ್ಯ ಸಮೃದ್ಧವಾದ ಅರಣ್ಯ ಪ್ರದೇಶದೊಳಕ್ಕೆ ಬಿಟ್ಟು ಬಾ’.

ಅದೊಂದು ದಿನ  ಸಿದ್ಧರಾಮನು ತನ್ನ ಮಠದ ಮೊಗಸಾಲೆಯಲ್ಲಿ ಹಾಕಿದ ಮರದ ಮಂಚದ ಮೇಲೆ ಹಾಸಿದ ಕೃಷ್ಣಾಜಿನದ ಮೇಲೆ ಕೂತು ಬೇರೆ ಬೇರೆ ಊರುಗಳಿಂದ ಬಂದ ಜನಕ್ಕೆ ದರ್ಶನವನ್ನು ನೀಡುತ್ತಿದ್ದನು.  ಸಾಕಷ್ಟು ಜನ ಬಂದು ಜಮಾಯಿಸಿದ್ದರು. ಬರುವ ಜನ ಒಂದಿಷ್ಟು ಅನುಕೂಲಸ್ಥರಾಗಿದ್ದರಂತೂ ಎಂದೂ ಬರಿಗೈಯಿಂದ ಬಂದು ಸಿದ್ಧರಾಮನ ದರ್ಶನ ಮಾಡುತ್ತಿರಲಿಲ್ಲ.  ತಮ್ಮ ಊರಲ್ಲಿ ತಾವು ಬೆಳೆದ ಹಣ್ಣು ಹಂಪಲುಗಳನ್ನೋ, ದವಸ ಧಾನ್ಯಗಳನ್ನೋ, ತಂದು ಒಪ್ಪಿಸುತ್ತಿದ್ದರು.  ಆಗಾಗ ಹಣದ ರೂಪದ ಕಾಣಿಕೆಗಳನ್ನೂ ನೀಡುತ್ತಿದ್ದರು.  ಇಂಥ ಹೊತ್ತಿನಲ್ಲಿ ಸಿದ್ಧರಾಮನ ಬಳಿ ಸದಾ ಸೇವೆಗೆ ಸಿದ್ಧರಾದ ಶಿಷ್ಯರು ಈ ವಸ್ತುಗಳನ್ನೂ, ಕಾಣಿಕೆಗಳನ್ನೂ ತೆಗೆದುಕೊಂಡು ಮಲ್ಲಿಕಾರ್ಜುನನ ಅನ್ನಸತ್ರಕ್ಕೆ ಹಾಗೂ ಬೊಕ್ಕಸಕ್ಕೆ ಅವುಗಳು ಸೇರುವಂತೆ ನೋಡಕೊಳ್ಳುತ್ತಿದ್ದರು.  ತೀರಾ ಬಡವರಾದವರು ಬಂದು ಸಿದ್ಧರಾಮನ ಕಾಲಿಗೆ ಅಡ್ಡಬಿದ್ದು ಅವನ ಆಶೀರ್ವಾದದಿಂದ ಧನ್ಯರಾದೆವು ಅಂದುಕೊಳ್ಳುತ್ತಿದ್ದರು; ಹಾಗೂ ತಮ್ಮ ಕಷ್ಟ-ಕಾರ್ಪಣ್ಯಗಳನ್ನೂ ಅವನೆದುರಿಗೆ ತೋಡಿಕೊಳ್ಳುತ್ತಿದ್ದರು.  ಅನಂತರ ಮಲ್ಲಿಕಾರ್ಜುನನ ದೇವಾಲಯಕ್ಕೆ ಹೋಗಿ, ಪೂಜೆ ಮಾಡಿಸಿಕೊಂಡು, ಉಚಿತವಾದ ಅನ್ನ ಸತ್ರಗಳಲ್ಲಿ ಪ್ರಸಾದವನ್ನು ಸ್ವೀಕರಿಸಿ ತಮ್ಮ ತಮ್ಮ ಊರುಗಳಿಗೆ ಮರಳುತ್ತಿದ್ದರು.  ಹಾಗೆ ಸಿದ್ಧರಾಮನನ್ನು ಕಾಣಲು ಬಂದ ಜನ ಜಂಗುಳಿಯೊಳಗೆ ಒಬ್ಬ, ಅಂದು ಅತ್ಯಂತ ಖಿನ್ನವದನನಾಗಿ, ಕಣ್ಣೀರು ಸುರಿಸುತ್ತ  ಬಂದು ಬಲವಾಗಿ ಅವನ ಪಾದಗಳನ್ನು ಹಿಡಿದುಕೊಂಡನು. ಸಿದ್ಧರಾಮನು ಅವನನ್ನು ಸಮಾಧಾನಪಡಿಸುತ್ತ, ‘ಯಾರಪ್ಪ ನೀನು? ನನ್ನಿಂದೇನಾಗಬೇಕು’ ಎಂದು ಪ್ರಶ್ನಿಸಿದನು.  ಆತ ‘ಅಯ್ಯನವರೇ, ನನ್ನ ಹೆಸರು ಬಿಲ್ಲೇಶಬೊಮ್ಮಯ್ಯ.  ಸೊನ್ನಲಿಗೆಯ ತೆಂಕಣದಲ್ಲಿ ನನ್ನ ಊರು.  ನಾನು ತುಂಬ ಬಡವ.  ಮಾಡಲು ಏನೂ ಉದ್ಯೋಗವಿಲ್ಲ.  ತಾವು ಯಾವ ಕೆಲಸ ಕೊಟ್ಟರೂ ನಾನು ಮಾಡುತ್ತೇನೆ.  ನಿಮ್ಮ ಬಳಿ ನೂರಾರು ಜನ ಕೆಲಸಗಾರರಿದ್ದಾರೆ.  ನನ್ನನ್ನೂ ನಿಮ್ಮ ಶಿಷ್ಯಸಮೂಹದಲ್ಲಿ ಒಬ್ಬನನ್ನಾಗಿ ಸ್ವೀಕರಿಸುವ ಕೃಪೆ ಮಾಡಬೇಕು’ ಎಂದು ಬೇಡಿಕೊಂಡನು. ಸಿದ್ಧರಾಮ ಹಾವಿನಹಾಳ ಕಲ್ಲಯ್ಯನಿಗೆ ಹೇಳಿಕಳುಹಿಸಿ ಬಿಲ್ಲೇಶಬೊಮ್ಮಯ್ಯನನ್ನು ತನ್ನ ಬಹುಸಂಖ್ಯಾತ ಶಿಷ್ಯ ಸಮೂಹದಲ್ಲಿ ಒಬ್ಬನನ್ನಾಗಿ ಕರುಣೆಯಿಂದ ಸ್ವೀಕರಿಸಿದನು.

* * *

ಸೊನ್ನಲಿಗೆಯ ಸಮೀಪದ ಸೆಳ್ಳಿಗೆ ಎಂಬ ಊರಿನಲ್ಲಿ ಬೃಹದಾಕಾರವಾದ ಒಂದು ಗಣಪತಿಯ  ವಿಗ್ರಹವಿತ್ತು.   ಆ ಊರಿನ ಜನಗಳಲ್ಲಿ ಏನೇನೋ ವೈಮನಸ್ಯಗಳುಂಟಾಗಿ, ಆ ಗಣಪತಿಯ ಪೂಜಾ ಕಾರ್ಯಗಳು ಸುಸೂತ್ರವಾಗಿ ನಡೆಯದಂಥ ವಾತಾವರಣ ಏರ್ಪಟ್ಟಿತ್ತು.  ಈ ವಿಷಯ ಸಿದ್ಧರಾಮನ ಕಿವಿಗೆ ಬಿದ್ದಾಗ ಈ ಬೃಹದ್ಗಾತ್ರದ ಗಣಪತಿಯ ಮಹಾ ವಿಗ್ರಹವು ಸೊನ್ನಲಿಗೆಯಂಥ ಕ್ಷೇತ್ರದಲ್ಲಿ ಇದ್ದುದಾದರೆ, ಈ ಕ್ಷೇತ್ರಕ್ಕೆ ಒಂದು ಶ್ರೀರಕ್ಷೆಯಾಗುವುದಲ್ಲದೆ, ಅದರ ಅರ್ಚನೆ ಆರಾಧನೆಗಳಿಗೂ ಒಂದು ಅನುಕೂಲವಾಗುವುದೆಂದು ಯೋಚಿಸಿದನು.  ತನ್ನ ಕೆಲವು ಶಿಷ್ಯರನ್ನು ಸೆಳ್ಳಿಗೆಗೆ ಹೋಗಿ ಆ ಊರ ಜನದೊಂದಿಗೆ ಮಾತನಾಡಿ, ಆ ಗಣಪತಿಯ ವಿಗ್ರಹವನ್ನು ಸೊನ್ನಲಿಗೆಗೆ ಸ್ಥಳಾಂತರಿಸಲು ಅನುಕೂಲವಾದ ವಾತಾವರಣವನ್ನು ನಿರ್ಮಿಸಬೇಕೆಂದು ಸೂಚಿಸಿದನು.  ಸಿದ್ಧರಾಮನ ಶಿಷ್ಯರು ಸೆಳ್ಳಿಗೆ ಎಂಬ ಊರಿಗೆ ಹೋಗಿ, ಸೊನ್ನಲಿಗೆಯ ಶಿವಯೋಗಿ ಸಿದ್ಧರಾಮನ ಮನದ ಇಂಗಿತವನ್ನು ತಿಳಿಸಿದರು.  ಮೊದಲೇ ಕಲುಷಿತವಾಗಿದ್ದ ಆ ಹಳ್ಳಿಯ ಸಮಾಜದಲ್ಲಿ ಒಂದು ಪಂಗಡದವರು ಈ ಗಣಪತಿಯ ವಿಗ್ರಹವನ್ನು ಸೊನ್ನಲಿಗೆಗೆ ಕೊಂಡೊಯ್ಯಲು ಸಮ್ಮತಿಸಿದರೆ, ಮತ್ತೊಂದು ಪಂಗಡದವರು ಸಮ್ಮತಿಸಲಿಲ್ಲ.  ಕೊನೆಗೆ, ಈ ಮಹಾವಿಗ್ರಹವು ಹೀಗೆ ನಿರ್ಲಕ್ಷಕ್ಕೆ ಒಳಗಾಗುವುದು ಊರಿಗೆ ಕೇಡೆಂದೂ, ಅದನ್ನು ಸೊನ್ನಲಿಗೆಗೆ ಸ್ಥಳಾಂತರಿಸುವುದು ಶ್ರೇಯಸ್ಕರವೆಂದೂ ಒಂದು ಪಂಗಡದವರು ವಾದ ಮಾಡಿ, ಅದನ್ನು ಸಿದ್ಧರಾಮನ ಶಿಷ್ಯರು ಸೊನ್ನಲಿಗೆಗೆ ಸಾಗಿಸಲು ಸಹಾಯಮಾಡಿದರು.  ಸಿದ್ಧರಾಮನ ಮಹಿಮಾವಿಶೇಷಗಳಿಗೆ ಹೆದರಿ, ಮತ್ತೊಂದು ಪಂಗಡದವರು ಸುಮ್ಮನಾದರು.  ಅಂತೂ ಸೊನ್ನಲಿಗೆಯಲ್ಲಿ ಸೆಳ್ಳಿಗೆಯ ಮಹಾಗಣಪತಿಯ ಆಗಮನ ಮತ್ತು ಪ್ರತಿಷ್ಠಾಪನೆಯಿಂದ ಆ ಕ್ಷೇತ್ರಕ್ಕೆ ಒಂದು ಹೆಚ್ಚಿನ ಮಹತ್ವ ಪ್ರಾಪ್ತವಾಯಿತು.

ಆ ವರ್ಷದ ಚೈತ್ರಮಾಸದ ರಥೋತ್ಸವದ ಸಮಯದಲ್ಲಿ ಹಣದ ಅನುಕೂಲವಿಲ್ಲದ ಬಡಕುಟುಂಬಗಳ ವಧೂ-ವರರ ಸಾಮೂಹಿಕ ವಿವಾಹವನ್ನು ಮಲ್ಲಿಕಾರ್ಜುನನ ಸನ್ನಿಧಿಯಲ್ಲಿ ಏರ್ಪಡಿಸಬೇಕೆಂದು ಸಿದ್ಧರಾಮನು ಸಂಕಲ್ಪಿಸಿದನು. ಮಹಾಮನೆಯಲ್ಲಿ, ಈ ಎಲ್ಲ ಸಿದ್ಧತೆಗಳಿಗಾಗಿ ಕೊಟ್ಟಣದ ಕಾರ್ಯ ಪ್ರಾರಂಭವಾಯಿತು.  ರಥೋತ್ಸವದ ಮುನ್ನ ಮಲ್ಲಿಕಾರ್ಜುನ ಲಿಂಗಕ್ಕೆ ಸಾವಿರ ಸೊಲಿಗೆಗಳ ತುಪ್ಪದ ಅಭಿಷೇಕವೂ ನಡೆಯಬೇಕೆಂದು ಗೋಶಾಲೆಯಿಂದ ಹಾಲು-ಬೆಣ್ಣೆಗಳ ವ್ಯವಸ್ಥೆಯ ಕಡೆಗೂ ಗಮನ ನೀಡಲಾಯಿತು.  ಅನಿರೀಕ್ಷಿತವಾಗಿ ಶ್ರೀಶೈಲದ ಮಠದ ಮಲ್ಲಯ್ಯನವರೂ ಇದೇ ಸಂದರ್ಭಕ್ಕೆ ಸರಿಯಾಗಿ ಸೊನ್ನಲಿಗೆಗೆ ದಯಮಾಡಿಸಿದ್ದು ಸಿದ್ಧರಾಮನ ಮಹದಾನಂದಕ್ಕೆ ಕಾರಣವಾಯಿತು.  ತಮ್ಮ ಆದೇಶದಂತೆ ಸಿದ್ಧರಾಮನು ಸೊನ್ನಲಿಗೆಯನ್ನು ಅಭಿನವ ಶ್ರೀಶೈಲವನ್ನಾಗಿ ಪರಿವರ್ತಿಸಿದುದನ್ನು ಕಂಡು ಮಲ್ಲಯ್ಯನವರು ಸಂತೋಷಗೊಂಡರು.  ಮಲ್ಲಿಕಾರ್ಜುನನ ದೇವಾಲಯವಲ್ಲದೆ, ಇನ್ನೂ ಹದಿನಾರು ಲಿಂಗಗಳೂ ಸ್ಥಾಪಿತವಾಗಿ ಪೂಜೆಗೊಳ್ಳುತ್ತಿದ್ದುದನ್ನು, ನಿತ್ಯದಾಸೋಹ ಹಾಗೂ ಹೋಮ-ನೇಮಗಳಿಂದ ಏರ್ಪಟ್ಟ ಆಧ್ಯಾತ್ಮಿಕ ವಾತಾವರಣವನ್ನು, ಸಿದ್ಧರಾಮನೂ ಅವನ ಶಿಷ್ಯರೂ ಸ್ವತಃ ಶ್ರಮದಿಂದ ನಿರ್ಮಿಸಿದ ಕೆರೆಯ ವಿಸ್ತಾರವನ್ನು, ಮತ್ತು ಆ ಕ್ಷೇತ್ರದ ಇನ್ನಿತರ ಜನೋಪಯೋಗಿ ಕಾರ್ಯಚಟುವಟಿಕೆಗಳನ್ನು ನೋಡಿ ಮಲ್ಲಯ್ಯನವರು ರೋಮಾಂಚನಗೊಂಡರು.

ಸಿದ್ಧರಾಮನ ಯೋಜನೆಯಂತೆ ಮಲ್ಲಿಕಾರ್ಜುನ ಲಿಂಗಕ್ಕೆ ಸಾವಿರ ಸೊಲಿಗೆಯ ತುಪ್ಪದ ಅಭಿಷೇಕವೂ ತದನಂತರದ ಅರ್ಚನೆಗಳೂ ಅನುಕ್ರಮವಾಗಿ ನಡೆದವು. ಅನಂತರ ಐನೂರು ಜೋಡಿ ಮದುವೆಗಳು ನಡೆದು, ಬಡಕುಟುಂಬಗಳ ಐನೂರು ಮಂದಿ ವಧೂವರರು ದಂಪತಿಗಳಾದರು.  ನೆರೆದ ಸಹಸ್ರಾರು ಮಂದಿ ಅಕ್ಷತೆಗಳನ್ನು ತೂರಿ ವಧೂವರರನ್ನು ಹರಸಿದರು.  ವಿವಿಧ ವಾದ್ಯಗಳ ಹಾಗೂ ಮಂತ್ರಘೋಷಗಳ ಸಂಭ್ರಮ ಇಡೀ ಸೊನ್ನಲಿಗೆಯನ್ನು ತುಂಬಿಕೊಂಡಿತು.  ಮದುವೆಗಾಗಿ ಹಾಕಿದ ವಿಸ್ತಾರವಾದ ಚಪ್ಪರದ ಕೆಳಗೆ ಊಟಕ್ಕೆ ಬಂದ ಸಾವಿರಾರು ಜನಗಳಿಗೆ ಹೆಡಿಗೆ ಹೆಡಿಗೆಗಳಲ್ಲಿ ತುಂಬಿ ತಂದ ಭಕ್ಷ್ಯ-ಭೋಜ್ಯಗಳನ್ನು ಸಿದ್ಧರಾಮನ ಶಿಷ್ಯರು ಬಡಿಸಿದರು.  ಶಿವ-ಶಕ್ತಿಸಂಪುಟಗಳಂತೆ ಇದ್ದ ಬಹು ಸಂಖ್ಯೆಯ ದಂಪತಿಗಳನ್ನು ಸಂತೋಷದಿಂದ ನೋಡುತ್ತ ಮಲ್ಲಯ್ಯನವರು ಅವರನ್ನು ಆಶೀರ್ವದಿಸಿದರು.

ಮರುದಿನದ ಮಲ್ಲಿಕಾರ್ಜುನನ ರಥೋತ್ಸವ ಮತ್ತೊಂದು ಅದ್ಭುತವಾದ ನೋಟವಾಗಿತ್ತು.  ಕೈಲಾಸ ಶಿಖರೋನ್ನತವಾದ ರಥದಲ್ಲಿ ಮಲ್ಲಿಕಾರ್ಜುನನ ಮೂರ್ತಿ ಉತ್ಸವಗೊಳ್ಳುವುದನ್ನು ಸಹಸ್ರಾರು ಮಂದಿ ವೀಕ್ಷಿಸಿದರು.  ಭಕ್ತಿಯ ಪ್ರವಾಹವೊಂದು ಸೊನ್ನಲಿಗೆಯಲ್ಲಿ ಮಡುಗಟ್ಟಿದಂತೆ ಭಾಸವಾದ ಆ ಮಹಾಉತ್ಸವವನ್ನು ಮುಗಿಸಿಕೊಂಡು, ಮಲ್ಲಯ್ಯನವರು ಸಿದ್ಧರಾಮನನ್ನು ಪ್ರೀತಿಯಿಂದ ಆಲಿಂಗಿಸಿಕೊಂಡು ಆಶೀರ್ವದಿಸಿ ಶ್ರೀಶೈಲಕ್ಕೆ ಹೊರಟುಹೋದರು.

ರಥೋತ್ಸವ ಮುಗಿದು ಎರಡು ತಿಂಗಳು ಕಳೆದಿದ್ದವು.  ಮಟಮಟ ಮಧ್ಯಾಹ್ನ.  ವೈಶಾಖದ ಬಿಸಿಲು ನಿರ್ದಯವಾಗಿ ಎಲ್ಲವನ್ನೂ ದಹಿಸುವಂತೆ ತೋರುತ್ತಿದೆ.  ಆ ಬಿಸಿಲಿನಲ್ಲಿ ಸೊನ್ನಲಿಗೆಯ ಕಡೆಗೆ ಬರುವ ಧೂಳು ದಾರಿಯಲ್ಲಿ ನಾಲ್ಕು ಜನ ವಿಪ್ರರ ತಂಡವೊಂದು ನಡೆದು ಬರುತ್ತಿದೆ.  ಆ ವಿಪ್ರರು ಉತ್ತರದ ಕಾಶಿಯಿಂದ, ತಮ್ಮ ತೀರ್ಥಯಾತ್ರೆಯನ್ನು ಮುಗಿಸಿಕೊಂಡು, ವಾತಾಪಿಯ ಕಡೆಗೆ, ಸೊನ್ನಲಿಗೆಯ ಮಾರ್ಗವಾಗಿ ಪಯಣ ಹೊರಟಿದ್ದಾರೆ.  ಅವರ ಜತೆಗೆ ಸೊನ್ನಲಿಗೆಯ ದೇವಸ್ಥಾನದಲ್ಲಿ ಹರಕೆಯೊಪ್ಪಿಸಲೆಂದು ಕೆಲವು ಗ್ರಾಮಸ್ಥರು, ಅವರ ಮೇಲೆ ತಮ್ಮ ನೆರಳು ಬೀಳದಷ್ಟು ಅಂತರವನ್ನು ಕಾಯ್ದುಕೊಂಡು ಬರುತ್ತಿದ್ದಾರೆ.  ಪಯಣದ ಆಯಾಸ; ಮೈತುಂಬ ದಾರಿಯ ಧೂಳು. ಸೊನ್ನಲಿಗೆಯ ಸಮೀಪಕ್ಕೆ ಬಂದ ಅವರ ಕಣ್ಣಿಗೆ ನಡುಹಗಲಿನ ಬಿಸಿಲಿನಲ್ಲಿ ಥಳಥಳಿಸುವ ವಿಸ್ತಾರವಾದ ಕೆರೆಯ ಹರಹು ಗೋಚರಿಸಿ, ಆ ಬ್ರಾಹ್ಮಣರಿಗೆ ಮಹದಾನಂದಾಯಿತು. ‘ಅದ್ಯಾವುದು ಈ ತಟಾಕ’ ಎಂದು ಜತೆಗೆ ಬರುತ್ತಿದ್ದ ಗ್ರಾಮಸ್ಥರನ್ನು ಕೇಳಿದರು.  ಅವರಲ್ಲಿ ಒಬ್ಬ ‘ಯಾಕೆ ನಿಮಗೆ ಗೊತ್ತಿಲ್ಲವೆ? ಇದು ನಮ್ಮ ಸಿದ್ಧರಾಮಯ್ಯನೋರು ಕಟ್ಟಿಸಿದ್ದು’ ಅಂದ.  ‘ಸಿದ್ಧರಾಮಯ್ಯ! ಯಾರು ಅವನು? ಎಂದು ಬ್ರಾಹ್ಮಣರಲ್ಲೊಬ್ಬರು.  ‘ಇದೇನು ಸ್ವಾಮಿ, ಅವನು ಇವನು ಅನ್ನುತ್ತೀರಿ? ಸಿದ್ಧರಾಮಯ್ಯನೋರು ಮಹಾಯೋಗಿಗಳು.  ಅವರಿಂದಾಗಿ ಈ ಸೊನ್ನಲಾಪುರ ಅಭಿನವ ಶ್ರೀಶೈಲ ಅನ್ನಿಸಿಕೊಂಡಿದೆ.  ಕಾಶೀ-ರಾಮೇಶ್ವರ ಎಲ್ಲಾನೂ ಇದರ ಮುಂದೆ ನೀವಾಳಿಸಿ ಬಿಸಾಕಬೇಕು.  ಅದೇನು ಹೇಳ್ತೀರಿ ಬಿಡಿ.  ಮಲ್ಲಿಕಾರ್ಜುನ ದೇವಸ್ಥಾನದ ಆ ಪೂಜೆಯೇನು,  ಆ ಉತ್ಸವ ಏನು!  ಬಂದ ಅಷ್ಟೂ ಜನಕ್ಕೆ ದಿನಾ ಅನ್ನ ಸಂತರ್ಪಣೇನೂ ನಡೀತದೆ.  ನೀವೂ ಈ ಕೆರೇಲಿ ಸ್ನಾನಮಾಡಿ, ಅಯ್ಯನವರ ಸತ್ರದಲ್ಲಿ ಊಟಮಾಡಿ ನಿಮ್ಮೂರಿಗೆ ಪ್ರಯಾಣ ಮಾಡಬಹುದು’ ಎಂದ ಗ್ರಾಮಸ್ಥರಲ್ಲಿ ಒಬ್ಬ.  ಇನ್ನೊಬ್ಬ ‘ಅಯ್ಯೋ ಅವರು ಬ್ರಾಂಬ್ರು ಕಣೋ.  ಅವರೆಲ್ಲಿ ಊಟಾ ಮಾಡ್ತಾರೋ ಈ ಊರಿನ ಸತ್ರದಾಗೆ’ ಎಂದ.

ಆ ವಿಪ್ರೋತ್ತಮರಿಗೆ ಅರ್ಥವಾಯಿತು, ಇದು ಸಿದ್ಧರಾಮಯ್ಯ ಕಟ್ಟಿಸಿದ ಕೆರೆ ಅನ್ನುವುದು.  ಹೆಸರು ಕೇಳಿದರೇ ಗೊತ್ತಾಗುತ್ತದೆ, ಅವನೊಬ್ಬ ಶೂದ್ರ ಎಂದು.  ಈ ಶೂದ್ರ ಕಟ್ಟಿಸಿದ ಕೆರೆಗೆ ಸಂಸ್ಕಾರಶುದ್ಧಿ ಇರುವುದಾದರೂ ಹೇಗೆ? ಕಾಶಿಯ ಗಂಗಾನದಿಯಲ್ಲಿ ಸ್ನಾನ ಮಾಡಿದ ತಾವು, ಉದ್ದಕ್ಕೂ ಯಮುನಾ, ಸರಸ್ವತೀ, ತಪತೀ, ಗೋದಾವರೀ, ನರ್ಮದಾ ಇಂಥ ಪವಿತ್ರ ನದಿಗಳ ಪುಣ್ಯ ಜಲಗಳಲ್ಲಿ ಸ್ನಾನಮಾಡಿದ ತಾವು ಇಲ್ಲಿ, ಈ ಶೂದ್ರಾದಿಗಳು ಕಟ್ಟಿದ ಕೆರೆಯಲ್ಲಿ ಸ್ನಾನ ಮಾಡುವದೇ ಅನ್ನಿಸಿತು ಅವರಿಗೆ.  ಆದರೆ ಮೇಲೆ ಬಡಿಯುತ್ತಿರುವ ವೈಶಾಖದ ಬಿಸಿಲು, ಪಯಣದ ಆಯಾಸ, ಮೈ ತುಂಬ ಮೆತ್ತಿಕೊಂಡ ಧೂಳು, ಈ ಎಲ್ಲವೂ ತಮ್ಮ ಶಾಸ್ತ್ರ ಜ್ಞಾನವನ್ನೂ ಧಿಕ್ಕರಿಸಿ, ಸಧ್ಯಕ್ಕೆ ಸ್ನಾನ ಮಾಡದೆ ಬೇರೆ ಗತಿಯಿಲ್ಲ ಎಂಬ ಸತ್ಯವನ್ನು ಅನಾವರಣಗೊಳಿಸುತ್ತಿತ್ತು.  ಆಗ ಅವರಿಗೊಂದು ಅನುಕೂಲ ವೇದಾಂತ ಸ್ಫುರಿಸಿತು: ಈ ಕೆರೆಯನ್ನು ಶೂದ್ರ ಕಟ್ಟಿಸಿದರೇನಂತೆ? ಸತ್ಕುಲ ಪ್ರಸೂತರೂ, ವೇದ ವೇದಾಂತಾದಿ ಶಾಸ್ತ್ರ ಪಾರಂಗತರೂ, ಮಹಾ ಬ್ರಾಹ್ಮಣೋತ್ತಮರೂ ಆದ ತಾವು ಮಂತ್ರಪೂರ್ವಕವಾಗಿ ನೀರಿಗಿಳಿದರೆ, ಆ ನೀರಿಗೆ ತಮ್ಮ ಸ್ಪರ್ಶದಿಂದ ಸಂಸ್ಕಾರಶುದ್ಧಿಯುಂಟಾಗಿ, ಆ ಜಲವು ಪರಮ ಪವಿತ್ರವಾಗುವುದರಲ್ಲಿ ಸಂದೇಹವೇ ಇಲ್ಲ – ಎಂಬ ಮಹಾವಿಚಾರವೊಂದು ಸ್ಫುರಿಸಿತು.  ಈ ‘ವಿವೇಕೋದಯ’ದಿಂದ ಆ ನಾಲ್ಕು ಜನ ವಿಪ್ರರೂ ಲಗುಬಗೆಯಿಂದ ನೀರಿಗಿಳಿದು ಹಾಯಾಗಿ ಸ್ನಾನ ಮಾಡತೊಡಗಿದರು.  ಅವರ ಸ್ಪರ್ಶದಿಂದ ಆ ಕೆರೆಯ ನೀರಿಗೆ ‘ಪಾವಿತ್ರ್ಯ’ ಪ್ರಾಪ್ತವಾಯಿತೋ ಇಲ್ಲವೊ; ಆದರೆ ಹಲವು ದಿನಗಳಿಂದ ಮಲಿನವಾಗಿದ್ದ ಅವರ ಮೈಯ್ಯ ಕೊಳೆಯಂತೂ ನೀಗಿತು!  ಆ ಥಣ್ಣನೆಯ ನೀರಿನ ಸ್ನಾನದಿಂದ ಹಗುರಗೊಂಡವರಾಗಿ, ಆ ಬ್ರಾಹ್ಮಣರು ನೀರಿಂದಾಚೆ ದಡಕ್ಕೆ ಬಂದರೋ ಇಲ್ಲವೋ, ಅಲ್ಲಿಯೆ ಮರದ ಮೇಲಿದ್ದ ನಾಲ್ಕಾರು ಕಾಗೆಗಳು ಅದ್ಯಾವಾಗಲೋ ಹಾರಿ ಬಂದು ಮಡಿವಂತರಾದ ಆ ಬ್ರಾಹ್ಮಣರ ಮೈಯ್ಯನ್ನು ಸೋಂಕಿ ಬಿಟ್ಟವು!  ‘ಅಯ್ಯೋ, ಅಯ್ಯೋ ಇದೇನು ಅನಿಷ್ಟ, ಕಾಕ ಸ್ಪರ್ಶವಾಯಿತಲ್ಲ’ ಅನ್ನುತ್ತ ಮತ್ತೆ ಆ ಬ್ರಾಹ್ಮಣರು ಎರಡು ಮೂರು ಬಾರಿ ನೀರಿಗೆ ಇಳಿದು ಹೊರಬಂದರೂ ಮತ್ತೆ ಅದೇ ಕಾಗೆಯ ಕತೆ! ಆಗ ಆ ಬ್ರಾಹ್ಮಣರಿಗೆ ಅರ್ಥವಾಯಿತು, ತಮ್ಮಿಂದ ಏನೋ ಅಪಚಾರವಾಗಿದೆ ಎಂದು.  ಕೊಂಚ ಯೋಚನೆ ಮಾಡಿದ್ದರಲ್ಲಿ ಅವರಿಗೆ ಅನ್ನಿಸಿತು, ಈ ಸೊನ್ನಲಿಗೆ ತಾವಂದುಕೊಂಡಂತೆ ಸಾಮಾನ್ಯವಾದ ಸ್ಥಳ ಅಲ್ಲ; ಇದೊಂದು ಶಕ್ತಿ ಕ್ಷೇತ್ರವಾಗಿರಲೇಬೇಕು.  ಈ ಕ್ಷೇತ್ರದ ಸಿದ್ಧರಾಮಯ್ಯ ಸಾಧಾರಣ ಮಾನವನಲ್ಲ, ಆತ ನಿಜವಾಗಿಯೂ ಒಬ್ಬ ಸಿದ್ಧನೇ ಆಗಿರಬಹುದು.

ಅನಂತರ ಆ ಬ್ರಾಹ್ಮಣರು ಮಠಕ್ಕೆ ಬಂದು ಸಿದ್ಧರಾಮನನ್ನು ಕಂಡು ಗೌರವಪೂರ್ವಕವಾಗಿ ವಂದಿಸಿದರು. ಸಿದ್ಧರಾಮನೂ ಅವರ ಪೂರ್ವೋತ್ತರಗಳನ್ನೆಲ್ಲ ಪ್ರೀತಿಯಿಂದ ವಿಚಾರಿಸಿ ಮಾತನಾಡಿಸಿದನು.  ಅವರ ಭೋಜನ ವ್ಯವಸ್ಥೆಗೆ ಮಹಮನೆಯ ಉಗ್ರಾಣದಿಂದ ಸಕಲ ಪಡಿ ಪದಾರ್ಥಗಳನ್ನೂ ಕೊಡಿಸುವಂತೆ ಕಲ್ಲಯ್ಯನಿಗೆ ಅಪ್ಪಣೆಮಾಡಿದರು.

ಅಂದು ಮಧ್ಯಾಹ್ನ ಕೆರೆಯಬಳಿ ನಡೆದ ಈ ‘ಕಾಗೆಯ ಕತೆ’ ಆ ಬ್ರಾಹ್ಮಣರು ಸೊನ್ನಲಿಗೆಯನ್ನು ಬಿಟ್ಟು ಹೋದ ಎರಡು ಮೂರು ದಿನಗಳವರೆಗೂ, ಅರ್ಧ ಪವಾಡದಂತೆಯೂ, ಅರ್ಧ ವಿನೋದದ ಘಟನೆಯಂತೆಯೂ ಆ ಊರಿನಲ್ಲಿ ಪ್ರಚಲಿತವಾಗಿತ್ತು. ಅಂದು ಸಂಜೆ ಮಹಾಮನೆಯಲ್ಲಿ ಸೇರಿದ ತನ್ನ ಶಿಷ್ಯಗೋಷ್ಠಿಯೊಂದಿಗಿನ ಆಧ್ಯಾತ್ಮಿಕ ಸಂವಾದ ಕಾಲದಲ್ಲಿ ಸಿದ್ಧರಾಮನು ಪ್ರಾಸಂಗಿಕವಾಗಿ ವೇದ ಶಾಸ್ತ್ರಾದಿಜ್ಞಾನಗಳ ನಿರರ್ಥಕತೆಯನ್ನು ಕುರಿತು, ನಿಜವಾದ ಬ್ರಾಹ್ಮಣನೆಂದರೆ ಯಾರು ಎಂಬುದನ್ನು ಕುರಿತು ಪ್ರಸ್ತಾಪಿಸಿದನು.  ‘ವೇದವೇದಾಂತವನೋದಿ ಫಲವೇನು ಮನಸ್ಸೂತಕವಳಿಯದನ್ನಕ್ಕ? ವೇದವೇದಾಂತಗಳು ಬ್ರಹ್ಮವಿದ್ಯೆ.  ಅಂದರೆ ಜೀವ-ಜಗತ್ತು-ದೇವರು ಇವರುಗಳ ಸ್ವರೂಪವನ್ನೂ, ಸಂಬಂಧವನ್ನೂ ಕುರಿತ ಚರ್ಚೆಗಳು.  ಇಂಥ ವೇದ ವೇದಾಂತಗಳನ್ನು ಓದುವುದರಿಂದ ಮನಸ್ಸಿನ ಸೂತಕ ಅಥವಾ ಮೈಲಿಗೆಗಳನ್ನು ಕಳೆದುಕೊಳ್ಳಲಾಗದಿದ್ದರೆ ಅವುಗಳನ್ನು ಓದಿ ಪ್ರಯೋಜನವೇನು? ಈ ಸೂತಕ ಅಥವಾ ಮೈಲಿಗೆಗಳು ಯಾವುವು ಗೊತ್ತೆ?  ನಾನು ಸತ್ಕುಲಸಂಭವನೆಂಬ ಪ್ರತಿಷ್ಠೆ; ತಾನು ವೇದಾದಿ ಶಾಸ್ತ್ರಪಾರಂಗತನೆಂಬ ಹೆಮ್ಮೆ, ತಾನು ಉಳಿದವರಿಗಿಂತ ಶ್ರೇಷ್ಠನೆಂಬ ಅಹಂಕಾರ; ತನ್ನ ಹೊರತು ಬೇರೆಯ ವರ್ಣಗಳವರು ಕೀಳೆಂಬ ತಿರಸ್ಕಾರ -ಇವೇ ಆ ಸೂತಕಗಳು.  ಈ ಸೂತಕಗಳನ್ನು ಮನಸ್ಸಿನಲ್ಲಿರಿಸಿಕೊಂಡು ಯಾವ ಯಾವ ಪುಣ್ಯತೀರ್ಥಗಳಲ್ಲಿ ಮುಳುಗಿದರೂ ಉಪಯೋಗವಿಲ್ಲ.  ಇನ್ನು ಬ್ರಾಹ್ಮಣನೆಂದರೆ ಯಾರು ಹೇಳುತ್ತೇನೆ ಕೇಳಿ : ವೇದವನೋದಿ ವೇದಾಧ್ಯಯನ ಮಾಡಿದವರು ಬ್ರಾಹ್ಮಣರೆಂಬುದು ಸಾಮಾನ್ಯವಾದ ತಿಳಿವಳಿಕೆ.  ಆದರೆ ‘ಬ್ರಹ್ಮ ಭೂತನಾದೊಡೆ ಆತನೆ ಬ್ರಾಹ್ಮಣ ನೋಡಾ’ ಅನ್ನುತ್ತೇನೆ ನಾನು.  ಅಂದರೆ ಯಾರು ಸಮಸ್ತ ಭೂತಗಳಲ್ಲಿಯೂ, ಬ್ರಹ್ಮವನ್ನು ಅಥವಾ ಅ ಪರಾತ್ಪರ ಚೈತನ್ಯವನ್ನು ಕಾಣುತ್ತಾನೆಯೊ ಅವನೇ ನಿಜವಾದ  ಅರ್ಥದಲ್ಲಿ  ಬ್ರಾಹ್ಮಣನೆನಿಸಿಕೊಳ್ಳುತ್ತಾನೆ’

* * *

ಸೆಳ್ಳಿಗೆಯ ಗಣಪತಿಯ ಮಹಾವಿಗ್ರಹವನ್ನು ಆ ಊರಿನ ಜನಗಳ ಎರಡೂ ಪಂಗಡಗಳನ್ನು ಹೇಗೋ ಒಡಂಬಡಿಸಿ ಸಿದ್ಧರಾಮನ ಶಿಷ್ಯರು ಅದನ್ನು ತಂದು ಸೊನ್ನಲಿಗೆಯಲ್ಲಿ ಸ್ಥಾಪಿಸಿ ನಂತರ, ಆ ವಿಗ್ರಹವನ್ನು ಸ್ಥಳಾಂತರಿಸಲು ಒಪ್ಪದ ಪಂಗಡದ ಜನದ ಮನಸ್ಸಿನಲ್ಲಿ, ತಮಗೊಂದು ಬಗೆಯ ತೇಜೋವಧೆಯಾಯಿತೆಂಬ ಅಸಮಾಧಾನ ದಿನದಿಂದ ದಿನಕ್ಕೆ ಬೆಳೆಯತೊಡಗಿತು.  ಸೊನ್ನಲಿಗೆಯ ಸಿದ್ಧರಾಮನ ಶಕ್ತಿಸಾಮರ್ಥ್ಯಗಳಿಗೆ ಮತ್ತು ಅದೊಂದು ಮಹಾಕ್ಷೇತ್ರವಾಗಿ ಇತ್ತೀಚೆಗೆ ಪಡೆದ ಪ್ರತಿಷ್ಠೆಗಳಿಗೆ, ಅಂಜಿ, ಈ ಸೆಳ್ಳಿಗೆಯ ಜನ ತಮ್ಮೂರಿನ ಗಣಪತಿಯ ವಿಗ್ರಹದ ಸ್ಥಳಾಂತರಕ್ಕೆ ಹೇಗೋ ಒಪ್ಪಿಕೊಂಡಿದ್ದರು.  ಈಗ ಆ ಮಹಾವಿಗ್ರಹದ ಸ್ಥಾಪನೆಯಿಂದ ಸೊನ್ನಲಿಗೆಗೆ ಮತ್ತೂ ಒಂದು ಹೆಚ್ಚಿನ ಪ್ರತಿಷ್ಠೆ ಪ್ರಾಪ್ತವಾದುದನ್ನು ಕಂಡು, ಅಸೂಯಾಪರರಾದ ಸೆಳ್ಳಿಗೆಯ ಕೆಲವು ಜನ ಏನಾದರೂ ಮಾಡಿ ಸಿದ್ಧರಾಮನನ್ನು ಸಮಯನೋಡಿ ತೇಜೋವಧೆ ಮಾಡಬೇಕೆಂದು ಯೋಚಿಸಿದರು.  ಈ ಜನದ ಯೋಚನೆಗೆ ಬೆಂಬಲವಾಗಿ ನಿಂತವನು ಕುಟಿಲ ವಿದ್ಯಾಸಾಗರನೆಂಬ ಒಬ್ಬ ತಾಂತ್ರಿಕ ಪಂಥದ ಜೋಗಿ.  ಅವನು ತನ್ನ ಮಂತ್ರ-ತಂತ್ರಾದಿಗಳಿಂದ ಜನರನ್ನು ವಶೀಕರಣಗೊಳಿಸಿಕೊಂಡು ಕೋವೂರಿನ ಸಮೀಪದಲ್ಲಿ ಮಠವೊಂದನ್ನು ಕಟ್ಟಿಕೊಂಡಿದ್ದನು.  ತನ್ನ ಪರಿಸರದಲ್ಲಿಯೆ ಸಿದ್ಧರಾಮನೆಂಬಾತ ಜನಪ್ರಿಯತೆಯನ್ನೂ, ಪ್ರತಿಷ್ಠೆಯನ್ನೂ ಪಡೆದುಕೊಳ್ಳುತ್ತಿರುವುದು ಅವನ ಪಾಲಿಗೆ ಅಸಹನೆಯ ಸಂಗತಿಯಾಗಿತ್ತು.  ಏನಾದರೂ ಮಾಡಿ ಮಹಾಯೋಗಿ ಎಂದು ಹೆಸರಾದ ಸಿದ್ಧರಾಮನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಸಂಚೊಂದನ್ನು ಆತ ರೂಪಿಸತೊಡಗಿದ್ದ.

ಒಂದು ಸಂಜೆ, ಸಿದ್ಧರಾಮನು ತನ್ನ ಮಠದ ಕೋಣೆಯೊಳಗೆ ಕೂತಾಗ, ಶಿಷ್ಯನೊಬ್ಬನು ಬಂದು, ಗುರುಗಳನ್ನು ನೋಡಲು, ಯಾರೋ ಜೋಗ-ಜೋಗಿಣಿಯರು ಬಂದಿದ್ದಾರೆಂದು ಬಿನ್ನವಿಸಿದನು.  ‘ಅವರನ್ನು ಒಳಗೆ ಬರಹೇಳು’ ಅನ್ನಲು, ಆಗಂತುಕರಿಬ್ಬರೂ ಒಳಗೆ ಬಂದರು. ಬಂದವರಲ್ಲಿ ಒಬ್ಬ ಜೋಗಿ.  ಪ್ರಸನ್ನ ಸುಂದರವಾದ ಮುಖ; ಎತ್ತಿ ಕಟ್ಟಿದ ಜಟೆ, ಹಣೆಯಲ್ಲಿ ಅರ್ಧಚಂದ್ರಾಕೃತಿಯ ಗುರುತು; ಉಟ್ಟದ್ದು ನೀಲಿಯ ಬಟ್ಟೆ.  ಅವನ ಜತೆಗೆ ಮತ್ತೊಬ್ಬಳು ಜೋಗಿಣಿ.  ಅಪೂರ್ವ ಸುಂದರಿ.  ದುಂಡುಮುಖ, ತುಂಬು ಹೆರಳು; ಬ್ರಹ್ಮನೇ ಜಾಗರೂಕತೆಯಿಂದ ಮಾಡಿದ್ದನೆಂಬಂಥ ಮೈಮಾಟ; ಕೊರಳಲ್ಲಿ ಹಾರ; ತುಟಿಯಲ್ಲಿ ತುಳುಕುವ ಮಂದಹಾಸ, ಎಂಥವರನ್ನೂ ತನ್ನ ಕಡೆಗಣ್ ನೋಟದಿಂದ ಸುಲಭವಾಗಿ ಕೈವಶಮಾಡಿಕೊಳ್ಳಬಲ್ಲೆನೆಂಬ ವೈಯಾರ.  ಸಿದ್ಧರಾಮನಿಗೆ ಆ ಅಪೂರ್ವ ಚೆಲುವೆಯನ್ನು ಕಂಡು ಒಂದು ಕ್ಷಣ ಮನಸ್ಸು ಹೊಯ್ದಾಡಿದಂತಾಯಿತು.   ‘ಇದಾವುದಿದು ಈ ಪರಿಸರಕ್ಕೆ ಸಂಗತವಲ್ಲದ ಸಮ್ಮೋಹಕತೆ! ಇವರು ಈ ಹೊತ್ತಿನಲ್ಲಿ ಬಂದದ್ದಾದರೂ ಯಾಕೆ? – ಎಂದು ಅನ್ನಿಸಿತು. ಅಷ್ಟರಲ್ಲಿ ಆಗಂತುಕ ಹೇಳಿದ : ‘ನನ್ನ ಹೆಸರು ನೀಲಪಟ.   ಈಕೆ ನನ್ನ ಸಹಯೋಗಿನಿ.  ಮಹಾಯೋಗಿಗಳೆಂದು ಹೆಸರು ಪಡೆದ ನಿಮ್ಮನ್ನು ನೋಡಲೆಂದೇ ಬಂದೆವು’.  ‘ನಿಮ್ಮನ್ನು ನೋಡಿದ ಕೂಡಲೇ ನೀವೊಂದು ತಾಂತ್ರಿಕ ಪಂಥಕ್ಕೆ ಸೇರಿದವರೆಂಬುದು ಅರ್ಥವಾಯಿತು, ಹೇಳಿ ನನ್ನಿಂದೇನಾಗಬೇಕು?’ ಎಂದ ಸಿದ್ಧರಾಮ.  ನೀಲಪಟ ಹೇಳಿದ ‘ನಾನೊಂದು ಕಾರ್ಯನಿಮಿತ್ತವಾಗಿ ಕೆಲವು ಕಾಲ ಶ್ರೀಶೈಲಕ್ಕೆ ಹೋಗಿ ಬರಬೇಕಾಗಿದೆ.  ಅಲ್ಲಿಯವರೆಗೆ ತಾವು ಈ ನಮ್ಮ ಯೋಗಿನಿಯನ್ನು ತಮ್ಮ ಸಾನಿಧ್ಯದಲ್ಲಿ ಸೇವೆಗಾಗಿ ನಿಲ್ಲಿಸಿಕೊಳ್ಳಬೇಕೆಂದು ನನ್ನ ಪ್ರಾರ್ಥನೆ’.  ಸಿದ್ಧರಾಮನಿಗೆ ತನಗೆ ಇದೊಂದು ಮಲ್ಲಿಕಾರ್ಜುನನೇ ತಂದೊಡ್ಡಿದ ಅಗ್ನಿಪರೀಕ್ಷೆ ಅನ್ನಿಸಿತು.  ಸಂಸಾರವೆಂಬ ಮಹಾರಣ್ಯದೊಳಗೆ ಕಾಮನೆಂಬ ಬೇಟೆಗಾರನಿಗೆ  ತನ್ನನ್ನು ಹೀಗೆ ಗುರಿಮಾಡುವ ನಿನ್ನಿಚ್ಛೆ ಏನಿರಬಹುದೆಂದು ಮಲ್ಲಿನಾಥನನ್ನು ನೆನೆದು ಕಳವಳಿಸಿದನು.  ತನ್ನ ಮನಸ್ಸನ್ನು ಹದಕ್ಕೆ ತಂದುಕೊಂಡು, ನೀಲಪಟನಿಗೆ ಹೇಳಿದ : ‘ಯೋಗಿಗಳೆ ಏನು ಮಾತನಾಡುತಿದ್ದೀರಿ ನೀವು? ನಾನು ಈಕೆಯ ಸೇವೆಯನ್ನು – ನಿಮ್ಮ ಪಂಥದ ಅರ್ಥದಲ್ಲಿ ಸ್ವೀಕರಿಸಬೇಕೆ? ನಾನು ಸಂಸಾರವನ್ನು ತೊರೆದು ನನ್ನ ಪಾಡಿಗೆ ನಾನು, ಮಠದಲ್ಲಿರುವ ಒಬ್ಬ ಸಾಧು’.  ನೀಲಪಟನು ಗಟ್ಟಿಯಾಗಿ ನಕ್ಕು ‘ಏನಂದಿರಿ, ಸಂಸಾರವನ್ನೆ ಬಿಟ್ಟಿರುವ ಸಾಧು ನೀವು ಎಂದಿರಾ? ಇದೇನಿದು? ಈ ಮಠ, ಮಠದ ಸುತ್ತ ಇರುವ ಸತ್ರಗಳೇನು, ಮಹಾಮನೆ ಏನು? ನೂರಾರು ಜನ ಶಿಷ್ಯರು ಏನು? ದಿನ ಬೆಳಗಾದರೆ ಬಾವಿ ತೋಡಿಸಬೇಕು, ಕೆರೆ ಕಟ್ಟಿಸಬೇಕು, ಸತ್ರದಲ್ಲಿ ಊಟದ ವ್ಯವಸ್ಥೆಮಾಡಬೇಕು ಇದೆಲ್ಲಾ ಏನು?  ಇದು ಸಂಸಾರವಲ್ಲವೆ?  ಇದೇನು ಚಿಕ್ಕ ಸಂಸಾರವೇ?  ಸಂಸಾರವೆಂದ ಮೇಲೆ ಒಂಟಿಯಾಗಿದ್ದರೆ ಏನು ಚಂದ?  ಜತೆಗೊಬ್ಬಳು ಸಂಗಾತಿಯೂ ಬೇಡವೆ?’ ಸಿದ್ಧರಾಮನು ತಾಳ್ಮೆ ಕಳೆದುಕೊಳ್ಳದೆ ನಿಧಾನವಾಗಿ ನುಡಿದ.  ‘ನೀವು ಹೇಳುವ ಜೀವನ ಕ್ರಮಗಳೆಲ್ಲ, ನಿಮ್ಮ ತಾಂತ್ರಿಕ ಪಂಥಗಳಿಗೆ ಸರಿಯಿರಬಹುದು.  ಆದರೆ ನನ್ನ ದಾರಿ ಬೇರೆ, ನನ್ನ ನಿಲುವೂ ಬೇರೆ’.  ನೀಲಪಟ ನಡುವೆಯೇ ಬಾಯಿ ಹಾಕಿದ : ‘ನಿಮ್ಮ ನಿಲುವು ಹೇಗೆ ಬೇರೆ? ಸಾಕ್ಷಾತ್ ಶಿವನೇ ನಿಮ್ಮ ದೈವವಲ್ಲವೆ?  ಆತನೇ ತನ್ನ ದೇಹದ ಅರ್ಧಭಾಗದಲ್ಲಿ ಪಾರ್ವತಿಗೆ ಎಡೆಮಾಡಿಕೊಟ್ಟಿಲ್ಲವೆ?  ಹೀಗಿರುವಾಗ…?’.  ಸಿದ್ಧರಾಮನನಿಗೆ ಇದು ಅತಿ ಎನಿಸಿತು – ಅವನ ಉದ್ಧಟತನದ ವ್ಯಾಖ್ಯಾನವನ್ನು ಕೇಳಿ.  ಆದರೂ ಒಂದಿಷ್ಟೂ ವಿಚಲಿತವಾಗದೆ ಹೇಳಿದ : ‘ಪೂಜ್ಯರೆ ತಾವು ಹೆಣ್ಣೆಂದರೆ ಏನೆಂದು ತಿಳಿದಿರುವಿರಿ? ಮಾರಾಟದ ವಸ್ತುವೆಂದೋ, ಉಪಭೋಗದ ಸಾಮಾಗ್ರಿಯೆಂದೋ, ಮಾಯೆ ಎಂದೋ, ಮೋಹ ಎಂದೋ? ಹೆಣ್ಣಿನ ಬಗ್ಗೆ ಗೌರವ ಉಳ್ಳ ಯಾರೂ ನೀವು ನನಗೆ ಕೊಟ್ಟಂಥ ಸಲಹೆಯನ್ನು ಕೊಡಲಾರರು.  ತಾವೇ ಹೇಳಿದಿರಿ, ಸಾಕ್ಷಾತ್ ಶಿವನೇ ತನ್ನ ದೇಹಾರ್ಧದಲ್ಲಿ ಪಾರ್ವತಿಗೆ ಎಡೆ ಮಾಡಿಕೊಟ್ಟಿದ್ದಾನೆಂದು; ಆ ಸಾಕ್ಷಾತ್ ಪಾರ್ವತಿಯ ಸ್ವರೂಪವೇ ಜಗತ್ತಿನ ಹೆಣ್ಣುಗಳೆಲ್ಲರೂ. ನನ್ನ ಪಾಲಿಗೆ ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧ ಮಲ್ಲಿಕಾರ್ಜುನನಲ್ಲದೆ ಬೇರೆ ಅಲ್ಲ.  ಈಗ ನಿಮ್ಮ ಜತೆಗೆ ಬಂದಿರುವ ಈ ಹೆಣ್ಣು ನನಗೆ ಸಾಕ್ಷಾತ್ ಜಗನ್ಮಾತೆಯ ಸ್ವರೂಪವಾಗಿಯೇ ಕಾಣುತ್ತಿದ್ದಾಳೆ’.

ನೀಲಪಟನಿಗೆ ಬಾಯಿಕಟ್ಟಿತು.  ತನ್ನನ್ನು ಸಿದ್ಧರಾಮನಲ್ಲಿಗೆ ಕಳುಹಿಸಿದ ಕುಟಿಲವಿದ್ಯಾಸಾಗರನ ವಿಷಯದಲ್ಲಿ ಒಂದು ಬಗೆಯ ತಿರಸ್ಕಾರ ಉಂಟಾಯಿತು.  ಜಗತ್ತಿನ ಹೆಣ್ಣುಗಳೆಲ್ಲ ಜಗನ್ಮಾತೆಯ ವಿವಿಧ ಸ್ವರೂಪವೆಂದು ಸಿದ್ಧರಾಮನು ಹೇಳಿದ ಮಾತು ಅವನ ಅಂತರಂಗದ ಕಣ್ಣನ್ನು ತೆರೆಯಿಸಿತು.  ತನ್ನ ಜತೆಗೆ ಬಂದ ಹೆಣ್ಣು ಪಶ್ಚಾತ್ತಾಪದಿಂದ ಕುಸಿದು ಕಣ್ಣೀರು ಸುರಿಸುತ್ತಿದ್ದಳು.  ಅವರಿಬ್ಬರೂ ಸದ್ದಿಲ್ಲದೆ ಸಿದ್ಧರಾಮನ ಪಾದಗಳಿಗೆ ಎರಗಿ, ಮಠದಿಂದ ಹೊರಕ್ಕೆ ಬಂದು ಸೊನ್ನಲಿಗೆಯ ಮೇಲೆ ಕವಿದುಕೊಳ್ಳುತ್ತಿದ್ದ ಇರುಳಿನಲ್ಲಿ ಕರಗಿಹೋದರು.

* * *

ಅದೊಂದು ದಿನ ಸಿದ್ಧರಾಮನು ಎಂದಿನಂತೆ ಬೆಳಿಗ್ಗೆ ಮಲ್ಲಿಕಾರ್ಜುನನ ದೇವಾಲಯದಿಂದ ಮಠಕ್ಕೆ ಬಂದಾಗ ನಾಲ್ಕಾರು ಜಂಗಮರು ಸಿದ್ಧರಾಮನನ್ನು ಎದುರುಗೊಂಡು ಕೈಮುಗಿದರು.  ಕೊರಳಲ್ಲಿ ಕಟ್ಟಿದ ಲಿಂಗ, ಹಣೆಯಲ್ಲಿ ವಿಭೂತಿ, ಹೆಗಲಲ್ಲಿ ಜೋಳಿಗೆ.  ಸಿದ್ಧರಾಮನೂ ಅವರಿಗೆ ಪ್ರತಿಯಾಗಿ ವಂದಿಸಿ ಅವರು ಬಂದುದೆಲ್ಲಿಂದ ಎಂದು ವಿಚಾರಿಸಿದನು.  ಅವರು ಹೇಳಿದರು : ‘ಅಯ್ಯನವರೇ ನಾವು ಇಲ್ಲಿಂದ ಪಶ್ಚಿಮಕ್ಕೆ ಹಲವು ಹರಿದಾರಿಗಳ ದೂರದಲ್ಲಿರುವ ಕಲ್ಯಾಣದಿಂದ ಬಂದವರು.  ಈಗ ಅದು ಕಲಚೂರಿ ಬಿಜ್ಜಳ ಚಕ್ರವರ್ತಿಗಳ ರಾಜಧಾನಿ.  ಅಲ್ಲಿ ಮಹಾಶರಣ ಬಸವಣ್ಣನವರು ದಂಡನಾಯಕರು.  ಬಸವಣ್ಣನವರ ಮಹಾಮನೆಯ ವೈಭವವನ್ನು ಏನೆಂದು ಹೇಳೋಣ?  ಶಿವಭಕ್ತಿಯೇ ಮಡುಗೊಂಡಂತಿರುವ ಕಲ್ಯಾಣದಲ್ಲಿ, ಅಸಂಖ್ಯಾತ ಶರಣಗಣಂಗಳು ಸೇರಿ, ಶಿವನ ಪ್ರಕಾಶವೇ ಪ್ರಕಾಶ!  ಇಡೀ ಭರತಖಂಡದ ಜನವೆ ಈಗ ಕಲ್ಯಾಣದ ಕಡೆಗೆ ಆಕರ್ಷಿತವಾಗಿದೆ.  ಬಸವಣ್ಣನವರು ಪ್ರವರ್ತನಗೊಳಿಸಿದ ಶರಣ ಧರ್ಮದಲ್ಲಿ ಜಾತಿ ಭೇದವಿಲ್ಲ, ವರ್ಗಭೇದವಿಲ್ಲ, ಲಿಂಗಭೇದವಿಲ್ಲ.  ‘ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಶಿವಭಕ್ತರಾದವರೆಲ್ಲರೂ ಒಂದೇ’ ಅನ್ನುವುದು ಅದರ ನಿಲುವು.  ಲಿಂಗಾರ್ಚನೆ, ಜಂಗಮ ಪೂಜೆ, ದಾಸೋಹಾದಿಗಳಿಂದ ನಮ್ಮ ಕಣ್ಣೆದುರಿಗೇ ಜಗತ್ತಿನಲ್ಲಿ ಈವರೆಗೆ ಸಂಭವಿಸದೆ ಇದ್ದ ಮಹತ್ತಾದ ಒಂದು ಘಟನೆ ಅಲ್ಲಿ ರೂಪುಗೊಳ್ಳುತ್ತಿದೆ.  ಇದುವರೆಗೂ ಶತಮಾನಗಳ ಕಾಲ ಸಾಮಾನ್ಯ ಜನತೆಯನ್ನು ಧರ್ಮದ ಹೆಸರಿನಲ್ಲಿ ನಿಯಂತ್ರಣದಲ್ಲಿರಿಸಿದ ಮೇಲು ವರ್ಗದವರ ಹಿಡಿತವೆಲ್ಲವೂ ಕಳಚಿ ಬೀಳುತ್ತಿವೆ.  ತೀರಾ ಕನಿಷ್ಠವೆನ್ನಿಸಿಕೊಂಡವನೂ ಈ ಶರಣ ಧರ್ಮದ ಬೆಳಕಿನಲ್ಲಿ ಧೈರ್ಯವಾಗಿ ತಲೆ ಎತ್ತಿ ನಿಲ್ಲಬಲ್ಲವನಾಗಿದ್ದಾನೆ, ಆತ್ಮ ಗೌರವದಿಂದ ದನಿಯೆತ್ತಿ ಮಾತನಾಡಬಲ್ಲವನಾಗಿದ್ದಾನೆ.  ಅದೊಂದು ಬೆಳಗು, ಮಹಾಬೆಳಗು.  ಇಲ್ಲಿ ನೀವೂ ಸೊನ್ನಲಿಗೆಯನ್ನು ಅಂಥದೇ ಒಂದು ಕೇಂದ್ರವನ್ನಾಗಿಸಿ ರೂಪಿಸುತ್ತಿದ್ದೀರಿ ಎಂದು ನಾವು ಕೇಳಿದ್ದೆವು.  ಈಗ ನೋಡಿ ನಮಗೆ ಸಂತೋಷವಾಯಿತು’.

ಕಲ್ಯಾಣ ಕ್ರಾಂತಿಯ ವಿಚಾರವನ್ನು ಅವರಿವರ ಬಾಯಿಂದ ಅಲ್ಪಸ್ವಲ್ಪ ಕೇಳಿದ್ದ ಸಿದ್ಧರಾಮನಿಗೆ ಈ ಜಂಗಮರ ವರ್ಣನೆಯಿಂದ ಈಗೊಂದು ಸ್ಪಷ್ಟವಾದ ಚಿತ್ರ ದೊರೆತಂತಾಯಿತು.  ಸಿದ್ಧರಾಮನ ಕೋರಿಕೆಯ ಮೇರೆಗೆ ಆ ಜಂಗಮರು ಬಸವಣ್ಣನವರ, ಚನ್ನಬಸವಣ್ಣನವರ, ಜೇಡರ ದಾಸಿಮಯ್ಯನ, ಮಾದಾರ ಚನ್ನಯ್ಯನ ವಚನಗಳನ್ನು ಹಾಡಿದರು.  ಆ ವಚನ ರಚನೆಯ ಕ್ರಮವನ್ನೂ, ಅದರೊಳಗಿನ ಶಿವಾನುಭವದ ಸ್ವರೂಪವನ್ನು ಗುರುತಿಸಿದ ಸಿದ್ಧರಾಮನಿಗೆ ರೋಮಾಂಚನವಾಯಿತು. ಅಂದು ಸಿದ್ಧರಾಮನ ಮಹಮನೆಯಲ್ಲಿ ಪ್ರಸಾದವನ್ನು ಸ್ವೀಕರಿಸಿದ ಜಂಗಮರು, ಅವನ ಅನುಮತಿ ಪಡೆದು ತಮ್ಮದೇಶ ಸಂಚಾರಕ್ಕೆ ಹೊರಟರು.

ಅವರು ಅತ್ತ ಹೋದೊಡನೆಯೆ ತಪಸ್ವಿಯಂತೆ ತೋರುವ ವ್ಯಕ್ತಿಯೊಬ್ಬ ಬಂದು ಸಿದ್ಧರಾಮನನ್ನು ಕಂಡನು.  ತರುಣನೂ, ತೇಜಸ್ವಿಯೂ ಆದ ಆ ವ್ಯಕ್ತಿ, ತಾನು ಮೂಲತಃ ಶ್ರೀಶೈಲದವನೆಂದೂ, ಶ್ರೀಶೈಲದ ಮಲ್ಲಯ್ಯನವರ ಸೂಚನೆಯಂತೆ, ಹಲವು ವರ್ಷಗಳ ಹಿಂದೆಯೆ ಹಿಮಾಲಯದ ಕೇದಾರಕ್ಕೆ ತಪಸ್ಸಿಗೆ ಹೋಗಿ ಈಗ ಹಿಂದಿರುಗುತ್ತಿದ್ದೇನೆಂದೂ, ತನ್ನನ್ನು ಜನ ಕೇದಾರಗುರು ಎಂದು ಕರೆಯುತ್ತಾರೆಂದೂ ತಿಳಿಸಿದನು.  ಸಿದ್ಧರಾಮನಿಗೆ ಈತನೂ ತನ್ನಂತೆಯೇ ಮಲ್ಲಯ್ಯನ ಶಿಷ್ಯನೆಂಬುದನ್ನು ತಿಳಿದು ಸಂತೋಷವಾಯಿತು.  ಕೇದಾರಗುರುವೂ ತಮ್ಮ ಜತೆಗೆ ಇದ್ದು ಇಲ್ಲಿ ಪ್ರಾರಂಭವಾಗಿರುವ ಮಲ್ಲಿಕಾರ್ಜುನನ ಕಾರ್ಯದಲ್ಲಿ ಪಾಲುಗೊಳ್ಳಬೇಕೆಂದೂ ಸಿದ್ಧರಾಮನು ಅವನನ್ನು ಕೇಳಿಕೊಂಡನು.  ಕೇದಾರಗುರು ‘ತುಂಬ ಸಂತೋಷ ಅಯ್ಯನವರೇ.  ನಾವು ಎಲ್ಲಿದ್ದರೂ ಮಲ್ಲಿಕಾರ್ಜುನನ ಸೇವೆ ಮಾಡುವವರೇ.  ಅದೂ ಮಲ್ಲಯ್ಯನವರ ಸಾಕ್ಷಾತ್ ಸುಪುತ್ರರಾದ ನಿಮ್ಮ ಜತೆಗಿರುವುದು ಇನ್ನೂ ಸಂತೋಷದ ಸಂಗತಿಯೇ.  ಆದರೆ ನಾನು ಶ್ರೀಶೈಲವನ್ನು ಬಿಟ್ಟು ಅನೇಕ ವರ್ಷಗಳಾಯಿತು.  ಈಗ ಅಲ್ಲಿಗೆ ಹೋಗಿ ಮಲ್ಲಯ್ಯನವರ ದರ್ಶನ ಮಾಡಿ ಅವರ ಆಶೀರ್ವಾದ, ಅನುಮತಿ ಎರಡನ್ನೂ ಪಡೆದು ಮತ್ತೆ ಇಲ್ಲಿಗೇ ಬರುತ್ತೇನೆ’ ಎಂದನು.

ಸಿದ್ಧರಾಮನು ಕೇದಾರಗುರುವಿನ ಜತೆಗೆ ಮಾತನಾಡುತ್ತಿರುವ ಹೊತ್ತಿನಲ್ಲಿ ದೂರದಲ್ಲಿ ಏನೋ ಕಲಕಲರವ ಕೇಳಿದಂತಾಯಿತು.  ಕಿವಿಗೊಟ್ಟು ಆಲಿಸಿದ್ದರಲ್ಲಿ, ಅದು ಯಾರದೋ ಆರ್ತಧ್ವನಿಯಂತೆ ಹಲವು ಸಲ, ವಾಗ್ವಾದದಂತೆ ಹಲವು ಸಲ ಕೇಳಿತು.  ಸಿದ್ಧರಾಮನು ಕಲ್ಲಯ್ಯನನ್ನು ಕರೆದು, ಅದೇನು ಸಂಗತಿ ಎಂದು ವಿಚಾರಿಸಿಕೊಂಡು ಬಾ ಎಂದು ಕಳುಹಿಸಿದನು.

ಕಲ್ಲಯ್ಯನು ಆ ತುಮುಲಧ್ವನಿಯ ದಿಕ್ಕಿಗೆ ಹೋದನು.  ಅಲ್ಲಿ ಊರನಡುವೆ ನಾಲ್ಕು ಬೀದಿ ಕೂಡುವಲ್ಲಿ ಮೂರ್ನಾಲ್ಕು ಜನಕ್ಕೂ ಮತ್ತು ದಷ್ಟಪುಷ್ಟನಾದ ಒಬ್ಬ ವ್ಯಕ್ತಿಗೂ ಏನೋ ಜಗಳ ನಡೆಯುತ್ತಿತ್ತು.  ಹತ್ತಿರ ಹೋಗಿ ನೋಡಿದ್ದರಲ್ಲಿ ಆ ಮೂರು ನಾಲ್ಕು ಜನ ಯಾವುದೋ ಹಳ್ಳಿಯ ಜನ; ಅವರೊಡನೆ ವಾದಮಾಡುತ್ತಿದ್ದ ಇನ್ನೊಬ್ಬ ಬಹುಕಾಲದಿಂದ ಪರಿಚಿತನಾದ ಈ ಮಠದ ಶಿಷ್ಯರಲ್ಲಿ ಒಬ್ಬ.  ಆತ ಕೆಲವು ವರ್ಷಗಳ ಹಿಂದೆ ಬಂದು ಮಠಕ್ಕೆ ಸೇರಿಕೊಂಡ ಬಿಲ್ಲೇಶಬೊಮ್ಮಯ್ಯನೆಂಬುದನ್ನು ಕಲ್ಲಯ್ಯನು ಗುರುತಿಸುವುದರಲ್ಲಿ ತಡವಾಗಲಿಲ್ಲ.  ಕಲ್ಲಯ್ಯನು ‘ಮೊದಲು ನಿಲ್ಲಿಸಿ ನಿಮ್ಮ ಜಗಳವನ್ನು, ಅಯ್ಯನವರೇ ಹೇಳಿ ಕಳಿಸಿದಾರೆ, ಇದೇನೆಂದು ವಿಚಾರಿಸಲು.  ಹೇಳಿ ನೀವು ಯಾರು?’ ಎಂದ.  ಅನಿರೀಕ್ಷಿತವಾಗಿ ಕಲ್ಲಯ್ಯನನ್ನು ಕಂಡ ಬಿಲ್ಲೇಶ ಬೊಮ್ಮಯ್ಯ ಗಾಬರಿಗೊಂಡನು.  ಆ ಗ್ರಾಮೀಣರಂತೆ ತೋರುವವರಲ್ಲಿ ಒಬ್ಬಾತ ಹೇಳಿದ, ‘ನೋಡಿ ಕಲ್ಲಯ್ಯನವರೆ.  ಈತ, ಈ ಬಿಲ್ಲೇಶ ಬೊಮ್ಮಯ್ಯ ನಮಗೆ ದಾಯಾದಿಯಾಗಬೇಕು. ಈಗ್ಗೆ ಮೂರು ವರ್ಷಗಳ ಹಿಂದೆ, ಈತ ಏನೋ ಉದ್ಯೋಗ ಮಾಡುತ್ತೇನೆಂದು ನಮ್ಮಿಂದ ನೂರು ವರಹ ಸಾಲ ತೆಗೆದುಕೊಂಡ.  ಆ ಮೇಲೆ ಏನೇನೋ ಕೆಟ್ಟ ಚಾಳಿಗೆ ಬಿದ್ದು ಆ ಹಣವನ್ನೂ ಕಳೆದುಕೊಂಡ.  ಯಾವ ಉದ್ಯೋಗವನ್ನೂ ಮಾಡಲಿಲ್ಲ.  ನಾವು ಕೊಟ್ಟ ಹಣಕ್ಕೆ ತಗಾದೆ ಮಾಡಿದೆವು.  ಇವತ್ತು ಕೊಡುತ್ತೇನೆ, ನಾಳೆ ಕೊಡುತ್ತೇನೆ ಎಂದು ಬರೀ ಕಾಲಹರಣ ಮಾಡಿದ.  ನಮ್ಮ ತೋಟದಲ್ಲಾದರೂ ದುಡಿದು ತೀರಿಸು ಎಂದು ಹೇಳಿದೆವು.  ಅದನ್ನೂ ಮಾಡದೆ, ಒಂದು ದಿನ ರಾತ್ರೋರಾತ್ರಿ ನಮ್ಮೂರನ್ನೆ ಬಿಟ್ಟು ಪರಾರಿಯಾದ.  ಇವತ್ತು ಬಂದಾನು ನಾಳೆ ಬಂದಾನು ಎಂದು ಕಾದೆವು.  ಆಸಾಮಿ ಪತ್ತೆಯೇ ಇಲ್ಲ.  ನಿನ್ನೆ ಸಂಜೆ ನಾವು ದೇವಸ್ಥಾನದ ಹರಕೆಗೆ ಅಂತ ಈ ಊರಿಗೆ ಬಂದೆವು.  ಈ ಹೊತ್ತು ಬೆಳಿಗ್ಗೆ ಈ ಮನುಷ್ಯ ಅಕಸ್ಮಾತ್ತಾಗಿ ಈ ಊರಲ್ಲೇ ಸಿಕ್ಕ.  ನಾವು ‘ಅಣ್ಣ ಬೊಮ್ಮಯ್ಯ, ಹೀಗೆ ಮಾಡಬಹುದಾ ನೀನು?’ ಅಂದೆವು.  ಅಷ್ಟಕ್ಕೇ ಆತ ನಮ್ಮ ಮೇಲೆ ಹರಿಯಾಯ್ದು, ‘ನೀವು ಯಾರೋ ಏನೋ ನನಗೆ ಗೊತ್ತಿಲ್ಲ’ ಅಂದ.  ಎಲಾ ಇವನ! ನಮ್ಮ ದಾಯಾದಿಯಾಗಿ, ನಮ್ಮ ಗಂಟನ್ನೇ ಮುಳುಗಿಸಿ ಇಲ್ಲಿಗೆ ಬಂದು ನಮ್ಮನ್ನು ‘ನೀವು ಯಾರೋ ನನಗೆ ಗೊತ್ತಿಲ್ಲ’ ಅನ್ನುತ್ತಾನಲ್ಲ ಅನ್ನಿಸಿತು.  ‘ಯಾಕಪ್ಪ ನಮ್ಮಿಂದ ಹಣ ತೆಗೆದುಕೊಂಡದ್ದು ಮರೆತೇ ಹೋಯಿತೇ? ನಮ್ಮ ಗುರುತೇ ಇಲ್ಲದವನಂತೆ ನಟಿಸುತ್ತೀಯಲ್ಲಪ್ಪ?’ ಅಂದೆವು.  ‘ನಾನು ಯಾರು ಗೊತ್ತ? ಸಾಕ್ಷಾತ್ ಸಿದ್ಧರಾಮಯ್ಯನವರ ಶಿಷ್ಯ.  ನನ್ನ ಮೇಲೆ ಹೀಗೆ ಸುಳ್ಳು ಆರೋಪ ಹೊರಿಸುತ್ತೀರಾ?’ ಅಂದ.  ನಾವು ಹೇಳಿದೆವು : ‘ಈಗ ನೀನು ಯಾರ ಶಿಷ್ಯನಾದರೂ ಆಗಿರು, ಆವತ್ತು ನಮ್ಮೂರಲ್ಲಿ ನಮ್ಮಿಂದ ತೆಗೆದುಕೊಂಡೆಯಲ್ಲ, ನೂರು ವರಹ ಸಾಲ, ಅದನ್ನು ಮೊದಲು ಕೊಡು’.  ಆದರೆ ಈ ಮನುಷ್ಯ ಈ ಊರ ಮಂದಿಯ ಮುಂದೆ ‘ನೀವು ಕೊಟ್ಟದ್ದೂ ಇಲ್ಲ, ನಾನು ತೆಗೆದುಕೊಂಡದ್ದೂ ಇಲ್ಲ.  ಇಲ್ಲಿಗೆ ಬಂದು ಈ ಮಠದ ಶಿಷ್ಯರಲ್ಲಿ ಒಬ್ಬನಾದ ನನ್ನ ಮರ್ಯಾದೆ ತೆಗೆಯಬೇಕೆಂದು ಮಾಡಿದ್ದೀರಾ? ನೋಡ್ರಪ್ಪಾ ನೋಡಿ, ಈ ಮಠದ ಶಿಷ್ಯನಾದ ನನ್ನ ಮೇಲೆ ಇವರ‍್ಯಾರೋ ಬಂದು ಎಂಥ ಅಪವಾದ ಹೊರಿಸುತ್ತಾರಲ್ಲಪ್ಪ.  ಅಯ್ಯೋ ಶಿವನೇ ಮಲ್ಲಿಕಾರ್ಜುನಾ, ಏನು ಸ್ಥಿತಿ ತಂದೆಯಪ್ಪಾ’, ಎಂದು ಅವನೇ ಅಳತೊಡಗಿದ್ದನ್ನು ಕಂಡು ಈ ಊರ ಜನ ನಮ್ಮನ್ನೆ ಏನೋ ಮಾಡಬಾರದ ತಪ್ಪು ಮಾಡಿದೆವೆಂಬಂತೆ ಬಯ್ದರು.  ಇನ್ನು ನಾವು ಮಾಡುವುದಾದರೂ ಏನು ಕಲ್ಲಯ್ಯನವರೆ.  ‘ಅಪ್ಪಾ ಬೊಮ್ಮಯ್ಯ, ಹೋಗಲಿ ಬಿಡು.  ನಾವೂ ಬಡವರೇ.  ನಾವು ಕೊಟ್ಟ ಸಾಲವನ್ನು ನೀನು ಹಿಂದಕ್ಕೆ ಕೊಡದಿದ್ದರೆ ಹೋಗಲಿ.  ಕೊನೆ ಪಕ್ಷ ಅದರ ಬಡ್ಡಿಯನ್ನಾದರೂ ಕೊಡಪ್ಪ’ ಅಂದೆವು.  ಅದಕ್ಕೆ ಆತ ‘ಅಸಲನ್ನೆ ನಾನು ತೆಗೆದುಕೊಂಡಿಲ್ಲದಿರುವಾಗ, ಬಡ್ಡಿಯನ್ನೆಲ್ಲಿಂದ ತರಲಿ?’ ಅನ್ನುತ್ತಾನೆ.  ನೋಡಿ ಕಲ್ಲಯ್ಯನವರೆ, ನಾವೇನೋ ಬಡವರು ನಿಜ.  ಹಾಗಂತ ಸುಳ್ಳು ಹೇಳುತ್ತೇವೆಂದು ತಿಳಿಯಬೇಡಿ, ಸೊನ್ನಲಿಗೆಯ ಮಲ್ಲಿನಾಥನ ಆಣೆಯಾಗಿ ನಾವು ನಿಜ ಹೇಳುತ್ತೇವೆ.  ಬಾ ಬೊಮ್ಮಯ್ಯ, ನೀನು ನಮ್ಮಿಂದ ಹಣ ತೆಗೆದುಕೊಂಡಿಲ್ಲ ಎಂದು ಕಪಿಲಸಿದ್ಧಮಲ್ಲಿಕಾರ್ಜುನನ ದೇವಸ್ಥಾನದಲ್ಲಿ ಪ್ರಮಾಣಮಾಡು.  ಆಮೇಲೆ ನಾವು ನಮ್ಮ ಪಾಡಿಗೆ ಊರಿಗೆ  ಹೋಗುತ್ತೇವೆ’ ಅಂದೆವು.  ಅದಕ್ಕೆ ಆತ ‘ನಾನು ಯಾವ ಆಣೆ ಪ್ರಮಾಣಗಳನ್ನೂ ಮಾಡಬೇಕಾಗಿಲ್ಲ.  ಮೊದಲು ನಿಮ್ಮ ಪಾಡಿಗೆ ನೀವು ಈ ಕ್ಷೇತ್ರವನ್ನು ಬಿಟ್ಟು ತೊಲಗಿ’ ಎಂದು ನಮ್ಮ ಮೇಲೆ ಕೈಮಾಡಬಹುದೇ ಎಂದರು.

ಕಲ್ಲಯ್ಯ ಒಮ್ಮೆ ಗಂಭೀರವಾಗಿ ಬಿಲ್ಲೇಶ ಬೊಮ್ಮಯ್ಯನ ಕಡೆಗೆ ನೋಡಿದ.  ಕಲ್ಲಯ್ಯನ ದೃಷ್ಟಿ ಬೊಮ್ಮಯ್ಯನ ಅಂತರಂಗವನ್ನು ಇಳಿದು ಪರೀಕ್ಷಿಸುವಂತಿತ್ತು.  ಬೊಮ್ಮಯ್ಯನಿಗೆ ತಾನು ನಿಂತ ನೆಲವೇ ಕುಸಿಯತೊಡಗಿದಂತೆ ತೋರಿತು.  ಕಲ್ಲಯ್ಯ ಹೇಳಿದ, ‘ವಿಷಯವೇನೆಂದು ತಿಳಿಯಿತಲ್ಲ.  ಬನ್ನಿ ಅಯ್ಯನವರು ಕರೆಯುತ್ತಿದ್ದಾರೆ.  ಅವರೇ ಈ ಸಂಗತಿಯನ್ನು ಇತ್ಯರ್ಥ ಮಾಡುತ್ತಾರೆ‘ ಎಂದ.

ಆ ಗ್ರಾಮಸ್ಥರಿಗೆ ಕಳೆದ ಧೈರ್ಯ ಮರಳಿ ಬಂದಂತಾಯಿತು.  ಸದ್ದಿಲ್ಲದೆ ಅವರು ಕಲ್ಲಯ್ಯನನ್ನು ಹಿಂಬಾಲಿಸಿದರು.  ಕುಸಿದು ಕುಗ್ಗಿದ ಬಿಲ್ಲೇಶ ಬೊಮ್ಮಯ್ಯನೂ ಅವರ ಹಿಂದೆ ಮಠದ ಆವರಣವನ್ನು ಪ್ರವೇಶಿಸಿದನು.  ಮಠದ ಅಂಗಳದಲ್ಲಿ, ಕೇದಾರ ಗುರುವಿನ ಜತೆಗೆ ಕೂತ ಸಿದ್ಧರಾಮನಿಗೆ  ಅವರೆಲ್ಲರೂ ನಮಸ್ಕರಿಸಿದರು.  ಸಿದ್ಧರಾಮನ ತೇಜೋಮೂರ್ತಿಯನ್ನು ಹತ್ತಿರದಿಂದ ಕಂಡ ಬೊಮ್ಮಯ್ಯನ ಮನಸ್ಸು ಅಳುಕತೊಡಗಿತು. ಪ್ರಸಂಗವನ್ನು ಇಷ್ಟು ದೂರ ತರಬಾರದಾಗಿತ್ತು ಎಂಬ ಆಧೀರತೆಯೊಂದು  ಅವನಲ್ಲಿ ಕಾಣಿಸಿಕೊಳ್ಳತೊಡಗಿತು.

ಕಲ್ಲಯ್ಯನಿಂದ ಸಂಗತಿ ಏನೆಂಬುದನ್ನು ತಿಳಿದುಕೊಂಡ ಸಿದ್ಧರಾಮ ಮತ್ತೊಮ್ಮೆ ಆ ಗ್ರಾಮಸ್ಥರ ವೃತ್ತಾಂತವನ್ನು ಅವರ ಬಾಯಿಂದಲೇ ಕೇಳಿಸಿಕೊಂಡ.  ಒಮ್ಮೆ, ಧೂರ್ತವಿನಯದಲ್ಲಿ ನಿಂತ ಬಿಲ್ಲೇಶ ಬೊಮ್ಮಯ್ಯನ ಕಡೆಗೆ ನೋಡಿದನು.  ತನ್ನ ಬಹುಸಂಖ್ಯಾತ ಶಿಷ್ಯರ ನಡುವೆಯೂ ಇಂಥವರೂ ಇದ್ದಾರೆಯೆ ಎಂದು ಮನಸ್ಸಿನಲ್ಲಿ ಯೋಚಿಸಿದ.  ಆ ಗ್ರಾಮಸ್ಥರ ಮುಗ್ಧವಾದ ನಿರೂಪಣೆಯಲ್ಲಿ ಹುರುಳಿದೆ ಅಂದುಕೊಂಡ ಸಿದ್ಧರಾಮನು ‘ಬೊಮ್ಮಯ್ಯ ನೀನು ಇವರಿಂದ ನೂರು ವರಹ ಸಾಲ ತೆಗೆದುಕೊಂಡುದ್ದು ನಿಜವೆ, ಹೇಳು?’ ಎಂದ.  ‘ಇಲ್ಲ ಅಯ್ಯನವರೆ, ನಾನೇನೂ ಸಾಲ ಮಾಡಿಲ್ಲ.  ಈ ಜನ ಸುಳ್ಳು ಹೇಳುತ್ತಾರೆ’ ಎಂದನು ಬೊಮ್ಮಯ್ಯ. ‘ಹಾಗಾದರೆ ಯಾಕೆ ನೀನು ಕಪಿಲಸಿದ್ಧಮಲ್ಲಿನಾಥನ ದೇವಸ್ಥಾನದಲ್ಲಿ  ಈ ಬಗ್ಗೆ ಆಣೆಯಿರಿಸಿ ಹೇಳಲಿಲ್ಲ’ ಅಂದ ಸಿದ್ಧರಾಮ.  ಬೊಮ್ಮಯ್ಯ ಮಾತನಾಡಲಿಲ್ಲ.  ‘ಹಾಗಾದರೆ ಈಗಲೂ ಮಲ್ಲಿನಾಥನ ಮೇಲೆ ಆಣೆ ಇರಿಸಿ ಹೇಳುತ್ತೀಯಾ?’ ಎಂದ ಸಿದ್ಧರಾಮ.  ‘ಆಣೆ  ಇಟ್ಟು ಹೇಳುವುದು ಬೇಕಾಗಿಲ್ಲ ಅಯ್ಯನವರೆ’ ಅಂದ ಬೊಮ್ಮಯ್ಯ.  ‘ಹಾಗಾದರೆ ಅವರಿಂದ ನೀನು ಹಣ ಪಡೆದದ್ದು ನಿಜ ಅಂದಂತಾಯಿತು.  ಅವರ ಹಣವನ್ನು ಹೇಗಾದರೂ ಮಾಡಿ ಹಿಂದಿರುಗಿಸಬೇಕು ನೀನು, ಇಲ್ಲದೆ ಇದ್ದರೆ  ನಿನ್ನನ್ನು ಯಾವುದೇ ಧರ್ಮಾಧಿಕರಣಕ್ಕಾದರೂ ಇವರು ಎಳೆದುಕೊಂಡು ಹೋಗಬಹುದು.  ಕಲ್ಲಯ್ಯ, ಈತ ಬಂದು ಎಷ್ಟು ದಿನವಾಯಿತು ಲೆಕ್ಕ ಹಾಕಿ, ಈ ಗ್ರಾಮದ ಬಡಜನರಿಗೆ ನಮ್ಮ ಧರ್ಮಾಧಿಕರಣದಿಂದ ಒಂದಷ್ಟು ಪರಿಹಾರ ದ್ರವ್ಯವನ್ನು ಕೊಡಿಸು; ಮತ್ತು ಈ ಬೊಮ್ಮಯ್ಯ ನಮ್ಮ ಈ ಮಠದಲ್ಲಿರಲು ಅರ್ಹನೇ ಅಲ್ಲವೇ ಅನ್ನುವುದನ್ನು ಈ ಸಂಜೆ ನಮ್ಮ ಮಹಮನೆಯ ಶಿಷ್ಯಗೋಷ್ಠಿಯಲ್ಲಿ ವಿಚಾರ ಮಾಡೋಣ’ – ಎಂದು ಹೇಳಿ, ಕೇದಾರಗುರುವಿನ ಜತೆಗೆ ಮಠದ ಒಳಕ್ಕೆ ಸಿದ್ಧರಾಮನು ನಡೆದುಹೋದನು.

ಆ ಗ್ರಾಮಸ್ಥರು ಹಾವಿನಹಾಳ ಕಲ್ಲಯ್ಯನ ಜತೆಗೆ ಅವನ ಸೂಚನೆಯ ಪ್ರಕಾರ, ಮಹಮನೆಯ ಕಡೆಗೆ ಹೋದರು.  ಅವರೆಲ್ಲರೂ ಹೋದನಂತರ ಬಿಲ್ಲೇಶ ಬೊಮ್ಮಯ್ಯ ಒಬ್ಬನೆ ಮಠದ ಅಂಗಳದಲ್ಲಿ ಪರಿತ್ಯಕ್ತನಂತೆ ಉಳಿದನು.  ಒಮ್ಮೆಗೇ ಅನಿರೀಕ್ಷಿತವಾಗಿ ಬಂದ ಪ್ರಸಂಗ ಅವನನ್ನು ತೀರಾ ಅಧೀರನನ್ನಾಗಿ ಮಾಡಿತ್ತು.  ಮುಂದೇನು ಮಾಡಲೂ ತೋಚದೆ ಖಿನ್ನನಾಗಿ ಊರ ಮುಂದಣ ಕೆರೆಯ ಬದಿಯ ಮರವೊಂದರ ನೆರಳಿನಲ್ಲಿ ಕುಳಿತುಕೊಂಡನು.  ಕೆರೆಯ ಅಲೆಗಳು ನಡುಹಗಲಿನ ಬಿಸಿಲಿನಲ್ಲಿ ದಡಕ್ಕೆ ಬಂದು ಬಡಿಯುತ್ತಿದ್ದವು.  ಬೊಮ್ಮಯ್ಯನಿಗೆ, ಕೆಲವು ಕಾಲದ ಹಿಂದೆ ತಾನೂ ಸಿದ್ಧರಾಮನ ಬಹುಸಂಖ್ಯೆಯ ಶಿಷ್ಯರ ಜತೆಗೆ ಇದೇ ಕೆರೆಯನ್ನು ಕಟ್ಟುವ ಕಾಯಕದಲ್ಲಿ ತೊಡಗಿಕೊಂಡ ನೆನಪುಗಳೂ ಅಲೆಯಲೆಯಾಗಿ ಬಂದವು.  ಸಿದ್ಧರಾಮನು ತಾನೇ ನಿಂತು ಶಿಷ್ಯರ ಜತಗೆ ಕೆಲಸ ಮಾಡುತ್ತಿದ್ದುದೂ, ಶಿಷ್ಯರ ವಿಚಾರದಲ್ಲಿ ಅವರಿಗಿದ್ದ ಅವ್ಯಾಜವಾದ ಪ್ರೀತಿ ವಿಶ್ವಾಸಗಳೂ ಮನಸ್ಸಿನೆದುರು ಸುಳಿದುಹೋದವು.  ಅಂಥ ಗುರುಮೂರ್ತಿಗೆ ನಾನು ಸುಳ್ಳು ಹೇಳಿದೆನಲ್ಲಾ, ತನ್ನ ದಾಯಾದಿಗಳಿಂದ ತಾನು ಪಡೆದ ಹಣ ತನ್ನನ್ನು ಈ ಗತಿಗೆ ತಂದಿತಲ್ಲಾ ಎಂದು ವ್ಯಥೆಯಾಯಿತು.  ಇನ್ನು ತಾನು ಈ ಗುರು ಸನ್ನಿಧಿಯಿಂದ ಪರಿತ್ಯಕ್ತನಾದ ಹಾಗೇ ಎಂದು ಅನ್ನಿಸಿತು.  ಬೆಳಗಿನ ವಿಚಾರಣೆ ಆದಾಗಲೇ ತಪ್ಪಿತಸ್ಥನಾದ ತನ್ನನ್ನು ಕೂಡಲೇ ಈ ಮಠದಿಂದ ಉಚ್ಛಾಟಿಸಿದ್ದರೆ ಚೆನ್ನಾಗಿತ್ತು; ಅದರ ಬದಲು ಈ ಸಂಜೆ ನಮ್ಮ ಮಠದ ಶಿಷ್ಯಗೋಷ್ಠಿಯಲ್ಲಿ ವಿಚಾರ ಮಾಡೋಣ ಅಂದರಲ್ಲ ಗುರುಗಳು.  ಇನ್ನು ಅಷ್ಟೂ ಜನ ಶಿಷ್ಯರ ಎದುರು ಇನ್ನಾವ ಪ್ರಶ್ನೆಗಳನ್ನು ತಾನು ಎದುರಿಸಬೇಕಾಗಬಹುದೋ.  ಅನಂತರ ಗುರುದ್ರೋಹಿ ಅನ್ನಿಸಿಕೊಂಡ ತಾನು ಅಷ್ಟೂ ಜನ ಭಕ್ತಾದಿಗಳಿಗೆ ಮತ್ತೆ ಮುಖ ತೋರಿಸುವುದಾದರೂ ಹೇಗೆ.  ಈ ಬಗೆಯ ಬದುಕಿಗಿಂತ ಮರಣವೇ ಲೇಸು ಅನ್ನಿಸತೊಡಗಿತು.

ಬಿಲ್ಲೇಶ ಬೊಮ್ಮಯ್ಯನ ಮನಸ್ಸಿನ ತುಮುಲವನ್ನು ಒಂದಿಷ್ಟೂ ಗಮನಕ್ಕೆ ತೆಗೆದುಕೊಳ್ಳದಂತೆ ಮಧ್ಯಾಹ್ನದ ನೆತ್ತಿಯಲ್ಲಿದ್ದ ಸೂರ್ಯ ಸಂಜೆಯ ಕಡೆ ಹೊರಳತೊಡಗಿದ್ದ; ಕೆರೆಯ ವಿಸ್ತಾರದಲ್ಲಿ ದೂರ ದೂರದಿಂದ ಅಲೆಗಳು ಗಾಳಿಯ ಹೊಡೆತಕ್ಕೆ ಬಂದು ದಡಕ್ಕೆ ಅಪ್ಪಳಿಸುತ್ತಿದ್ದವು.  ಏನನ್ನೋ ನಿಶ್ಚಯಿಸಿದವನಂತೆ ಬಿಲ್ಲೇಶ ಬೊಮ್ಮಯ್ಯ ಆ ಕೆರೆಯ ಎಡಕ್ಕೆ ಹೊರಳಿ ಅನತಿದೂರದಲ್ಲಿದ್ದ ಒಂದು ಹಾಳುಗುಡಿಯನ್ನು ಪ್ರವೇಶಿಸಿದನು.  ದೇವರಿಲ್ಲದ ಆ ಪುಟ್ಟ ಗುಡಿಯ ಒಳಗೆ ಮಬ್ಬುಗತ್ತಲು ಹಬ್ಬಿಕೊಂಡಿತ್ತು.  ಬೊಮ್ಮಯ್ಯನು, ಅಲ್ಲಲ್ಲಿ ಮೈಗೆ ಅಮರಿಕೊಳ್ಳುವ ಜೇಡರ ಬಲೆಗಳನ್ನು ತಳ್ಳುತ್ತಾ ಒಳಗೆ ನಡೆದು ತಾನು ತಂದಿದ್ದ ಕೆಲಸದ ಕೈಗತ್ತಿಯನ್ನು ಎದುರುಗೋಡೆಗೆ ಸಿಕ್ಕಿಸಿ ತಾನು ಸೊನ್ನಲಿಗೆಯ ಕಡೆಗೆ ಒಮ್ಮೆ ಕೈಮುಗಿದು, ರಭಸದಿಂದ ಹಾಯ್ದನು.  ಆ ಕತ್ತಿ ಅವನ ಎದೆಯನ್ನು ನಾಟಿ ಬೆನ್ನಿನಲ್ಲಿ ಕಾಣಿಸಿಕೊಂಡಿತು.  ಎದೆಯಿಂದ ಛಿಲ್ಲೆಂದು ಚಿಮ್ಮಿದ ರಕ್ತ ಆ ಪಾಳುಗುಡಿಯ ಗೋಡೆಗಳಿಗೆ ಸಿಡಿಯಿತು.  ಒಂದೆರಡು ನಿಮಿಷ ಸ್ಪಂದಿಸಿದ ಬಿಲ್ಲೇಶ ಬೊಮ್ಮಯ್ಯನ ಶರೀರ ಸ್ತಬ್ಧವಾಯಿತು.  ಗುಡಿಯ ಛಾವಣಿಯಲ್ಲಿ ಜೋತಾಡುತ್ತಿದ್ದ ನಾಲ್ಕಾರು ಬಾವಲಿಗಳು ಪಟ ಪಟನೆ ರೆಕ್ಕೆ ಬಡಿಯುತ್ತ ಹೊರಕ್ಕೆ ಹಾರಿ ಬಂದವು.  ಸೊನ್ನಲಿಗೆಯ ಮೇಲೆ ಆಗಲೇ ಇರುಳು ತನ್ನ ನೆರಳುಗಳನ್ನು ಹಾಸತೊಡಗಿತ್ತು.  ಮಲ್ಲಿಕಾರ್ಜುನನ ದೇಗುಲದ ಗಂಟೆಗಳ ಸದ್ದು ವಾಯುಮಂಡಲದಲ್ಲಿ ಅನುರಣಿಸತೊಡಗಿತ್ತು.

* * *

ಕೇದಾರ ಗುರುಗಳು, ಶ್ರೀ ಶೈಲಕ್ಕೆ ಹೋಗಿ ಕೆಲವು ದಿನ ಇದ್ದು ಮಲ್ಲಯ್ಯನವರ ಅನುಮತಿಯನ್ನು ಪಡೆದು, ಸೊನ್ನಲಿಗೆಗೆ ಬಂದು ಸಿದ್ಧರಾಮನ ಜತೆಗೆ ಕರ್ಮಯೋಗದಲ್ಲಿ ತೊಡಗಿಕೊಂಡರು.  ಎಂದಿನಂತೆ ನಿತ್ಯನೇಮಗಳೂ ಹೋಮಗಳೂ, ದಾನ-ಧರ್ಮ ಕಾರ್ಯಗಳೂ, ಆಗಾಗ ಸಾಮೂಹಿಕ ವಿವಾಹಗಳೂ – ನಡೆಯುತ್ತ, ಸೊನ್ನಲಿಗೆಗೆ ಬಂದು ಹೋಗುವ ಭಕ್ತರ ಹಾಗೂ ಯಾತ್ರಿಕರ ಸಂಖ್ಯೆ ಹೆಚ್ಚಾಗುತ್ತಿತ್ತು.  ಇತ್ತೀಚೆಗಂತೂ, ನಾನಾ ಬಗೆಯ ರೋಗ-ರುಜಿನಗಳವರೂ ಬಂದು,  ಸಿದ್ಧರಾಮಯ್ಯನವರು ಬೂದಿ ಮಂತ್ರಿಸಿ ಕೊಟ್ಟರೆ, ಯಂತ್ರ ಬರೆದು ಕೊಟ್ಟರೆ ತಮ್ಮ ರೋಗಗಳು ಗುಣವಾಗುತ್ತವೆಯೆಂದೂ ಪೀಡಿಸತೊಡಗಿದರು.  ಆದರೆ ಸಿದ್ಧರಾಮನು ತಾನು ಮಂತ್ರ ತಂತ್ರಾದಿಗಳಿಂದ ದೈಹಿಕ ರೋಗಗಳನ್ನು ವಾಸಿಮಾಡುವ ‘ಸಿದ್ಧ’ನಲ್ಲವೆಂದೂ, ತಾನಿರುವುದು ಈ ಲೋಕದಲ್ಲಿ ಮನುಷ್ಯ ತಾನು ಇಹಲೋಕದ ಕರ್ತವ್ಯ ಕರ್ಮಗಳನ್ನು ನಿರ್ವಹಿಸುತ್ತಲೆ ಶಿವಯೋಗವನ್ನು ಸಾಧಿಸುವುದು ಹೇಗೆ, ಶ್ರದ್ಧೆ -ಭಕ್ತಿಧ್ಯಾನಾದಿಗಳಿಂದ ಮನಸ್ಸಿನ ರೋಗ-ರುಜಿನಗಳನ್ನು ವಾಸಿಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸುವುದಕ್ಕಾಗಿ – ಎಂದು ಬೋಧಿಸುವನು.  ಆದರೂ ಜನ ಇಷ್ಟು ಮಹಿಮಾಶಾಲಿಯಾದ ಸಿದ್ಧರಾಮನು, ನಿಜವಾಗಿಯೂ ಅಲೌಕಿಕ ಸಾಮರ್ಥ್ಯಗಳನ್ನು ಉಳ್ಳವನೆಂದೂ, ಆತ ಪ್ರತಿದಿನ ರಾತ್ರಿ ನೇರವಾಗಿ ಕೈಲಾಸಕ್ಕೆ ಹೋಗಿ ಸಾಕ್ಷಾತ್ ಶಿವನೊಂದಿಗೆ ಸಮಾಲೋಚಿಸಿ ಬೆಳಗಾಗುವುದರ ಒಳಗಾಗಿ ಮತ್ತೆ ಸೊನ್ನಲಿಗೆಗೆ ಹಿಂದಿರುಗುತ್ತಾನೆಂದೂ – ಮಾತನಾಡಿಕೊಳ್ಳುವ ಸಂಗತಿ ಸಿದ್ಧರಾಮನ ಕಿವಿಗೂ ಬಿದ್ದಿತ್ತು.  ಪವಾಡ ಪ್ರಿಯರಾದ ಜನ ಹಬ್ಬಿಸುವ ಈ ವದಂತಿಗಳನ್ನು ಕೇಳಿ ಸಿದ್ಧರಾಮ ನಸುನಕ್ಕು ಸುಮ್ಮನಾಗಿದ್ದ.

ಅದು ಕಾರ್ತಿಕ ಮಾಸ.  ಪ್ರತಿ ಕಾರ್ತಿಕದಲ್ಲೂ ಸೊನ್ನಲಿಗೆಯ ಮಲ್ಲಿನಾಥನ ದೇವಸ್ಥಾನದಲ್ಲಿ ನಡೆಯುವ ದೀಪೋತ್ಸವ ತುಂಬ ಹೆಸರು ವಾಸಿಯಾದದ್ದು.  ಇಡೀ ದೇವಸ್ಥಾನವೇ ಲಕ್ಷ ದೀಪರಾಜಿಗಳಿಂದ  ಬೆಳಕಿನ ತೇರಿನಂತೆ ಶೋಭಾಯ ಮಾನವಾಗಿರುತ್ತದೆ.  ಇಡೀ ಮಾಸಾದ್ಯಂತ ದಿನಕ್ಕೊಬ್ಬರಂತೆ ಭಕ್ತಾದಿಗಳು ಈ ದೀಪೋತ್ಸವದ ಹಾಗೂ ಅಂದಂದಿನ ಅಭಿಷೇಕ ಪ್ರಸಾದಗಳ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ.  ಅಷ್ಟೂ ದಿನವೂ ಸಿದ್ಧರಾಮನು ತನ್ನ ನೂರಾರು ಶಿಷ್ಯರ ಜತೆ ಕಾರ್ತಿಕದ ದೀಪೋತ್ಸವದಲ್ಲಿ ಪಾಲುಗೊಂಡು, ಭಕ್ತಾದಿಗಳಿಗೆ ಪ್ರಸಾದವನ್ನು ವಿತರಣೆ ಮಾಡುತ್ತಾನೆ.  ಈ ವಿಶೇಷವಾದ ಸಂದರ್ಭದಲ್ಲಿ ಸಿದ್ಧರಾಮಯ್ಯನವರ ಕೈಯಿಂದಲೇ ಪ್ರಸಾದವನ್ನು ಸ್ವೀಕರಿಸುವ ಪುಣ್ಯ ಸಮಯಕ್ಕಾಗಿ ಜನ ಕಾಯ್ದುಕೊಂಡು ಇರುತ್ತಾರೆ.

ಅಂದು ಸೋಮವಾರ.  ಹೊರ ಊರಿನಿಂದ ಬಂದು ಅಂದಿನ ದೀಪೋತ್ಸವ ಹಾಗೂ ಚರುಪಿನ ವ್ಯವಸ್ಥೆಯನ್ನು ತಾವು ವಹಿಸಿಕೊಳ್ಳುವುದಾಗಿ ಕೆಲವರು, ದೇವಸ್ಥಾನದ ಪಾರುಪತ್ಯೇಗಾರರಿಗೆ ತಿಳಿಸಿದ್ದರು.  ಸಂಜೆ ಎಂದಿನಂತೆ ದೀಪೋತ್ಸವ ನಡೆಯಿತು.  ಕಪಿಲಸಿದ್ಧ ಮಲ್ಲಿನಾಥನಿಗೆ ಪಂಚಾಭಿಷೇಕವೂ ನಡೆಯಿತು.  ವಿವಿಧ ಅರ್ಚನೆಗಳಿಂದ ಅಂದು ಮಲ್ಲಿನಾಥನ ಲಿಂಗವು ಶೋಭಾಯಮಾನವಾಗಿತ್ತು. ಸಿದ್ಧರಾಮನು ತನ್ನ ನೂರಾರು ಶಿಷ್ಯರ ಜತೆ ನಿಂತು ಮಹಾಮಂಗಳಾರತಿಯಲ್ಲಿ ಪಾಲುಗೊಂಡನು.  ಮಂಗಳಾರತಿಯನಂತರ ಪ್ರಸಾದ ವಿನಿಯೋಗ.  ಸಿದ್ಧರಾಮನ ಶಿಷ್ಯರು ಪಾರುಪತ್ಯೇಗಾರರ ಸನ್ನೆಯ ಮೇರೆಗೆ ಹೆಡಿಗೆ ಹೆಡಿಗೆಗಳಲ್ಲಿ ಸಿದ್ಧವಾಗಿದ್ದ ಗುಗ್ಗುರಿಯನ್ನು ತಂದು ಇಳುಹಿದರು. ಸಿದ್ಧರಾಮನು ಅದರಲ್ಲಿ ಒಂದಷ್ಟನ್ನು ತೆಗೆದು ತಟ್ಟೆಗೆ ಹಾಕಿ ಅದನ್ನು ಮಲ್ಲಿಕಾರ್ಜುನನಿಗೆ ನೈವೇದ್ಯ ಮಾಡುವಂತೆ ಅರ್ಚಕರಿಗೆ ಸೂಚಿಸಿದನು.  ಆನಂತರ ಸಿದ್ಧರಾಮನು ಬಹುಸಂಖ್ಯೆಯಲ್ಲಿ ನೆರೆದ ಭಕ್ತರ ಕಡೆಗೆ ಒಮ್ಮೆ ದಿಟ್ಟಿಸಿ ‘ಈ ಹೊತ್ತಿನ ಅರ್ಚನೆ ಹಾಗೂ ಪ್ರಸಾದ ವಿನಿಯೋಗಕ್ಕೆ ಏರ್ಪಡಿಸಿದವರು ಯಾರು, ಅವರು ಮುಂದೆ ಬನ್ನಿ’ ಎಂದನು. ಆ ಗುಂಪಿನ ಹಿಂದೆಲ್ಲೋ ನಿಂತ ಕೆಲವರು ‘ನಾವು’ ಎಂದು ಹೇಳಿದರು. ‘ಹಾಗಾದರೆ ಮುಂದೆ ಬನ್ನಿ.  ನೀವು ಮೊದಲು ಪ್ರಸಾದವನ್ನು ಸ್ವೀಕರಿಸಿ’ ಎಂದನು.  ಆ ಜನ ಮುಂದೆ ಬಾರದೆ ‘ಅಯ್ಯನವರು ಮೊದಲು ತಮ್ಮವರಿಗೆ  ವಿನಿಯೋಗಿಸೋಣವಾಗಲಿ, ನಾವು ಹೇಗಿದ್ದರೂ ಆಮೇಲೆ ತೆಗೆದುಕೊಳ್ಳುತ್ತೇವಲ್ಲ’ ಎಂದರು.  ಸಿದ್ಧರಾಮನಿಗೆ ಅರ್ಥವಾಯಿತು, ಈದಿನ ಯಾರೋ ಗುಗ್ಗರಿಯಲ್ಲಿ ಏನನ್ನೋ ಬೆರೆಸಿ ತಮ್ಮನ್ನೂ ತಮ್ಮ ಶಿಷ್ಯರನ್ನೂ ಕೊಲ್ಲಲು ಒಳಸಂಚು ಮಾಡುತ್ತಿದ್ದಾರೆ ಎಂದು.  ಮನಸ್ಸಿನಲ್ಲಿ ಒಂದು ಕ್ಷಣ ಹಾಲಾಹಲವನ್ನು ಪಾನಮಾಡಿದ ನೀಲಕಂಠ ಶಿವನ ಮೂರ್ತಿ ಸುಳಿದು ಮಾಯವಾಯಿತು.  ‘ಆಯಿತು ಮಲ್ಲಿನಾಥನ ಇಚ್ಛೆ ಹೇಗಿದೆಯೋ ಹಾಗೇ ಆಗಲಿ’ ಅನ್ನುತ್ತ ಶಿಷ್ಯರನ್ನು ಹತ್ತಿರ ಕರೆದು ‘ಬನ್ನಿ ಇದನ್ನು ಮಲ್ಲಿಕಾರ್ಜುನನ ಪ್ರಸಾದ ಎಂದು ಶ್ರದ್ಧೆಯಿಂದ ತೆಗೆದುಕೊಳ್ಳಿ’ ಎಂದು ಗುಗ್ಗುರಿಯನ್ನು ಹಂಚಿದನು.  ಶಿಷ್ಯರು ಇಂದಿನ ಪ್ರಸಾದ ಎಂದಿಗಿಂತ ಬಹುರುಚಿಯಾಗಿದೆ ಅನ್ನುತ್ತ ತಿಂದರು.  ಸಿದ್ಧರಾಮನು ‘ಅಯಿತಲ್ಲ.  ಈಗಲಾದರೂ ಬನ್ನಿ ಪ್ರಸಾದವನ್ನು ಸ್ವೀಕರಿಸಿ’ ಎಂದು ಅಂದಿನ ವ್ಯವಸ್ಥಾಪಕರನ್ನು ಉದ್ದೇಶಿಸಿ ಹೇಳಿದನು. ಆದರೆ ಅವರೆಲ್ಲಿ! ಗುಂಪಿನಲ್ಲಿ ಕೊಂಚ ಹೊತ್ತಿನಲ್ಲಿ ಕಂಡ ಮುಖಗಳೇ ಇಲ್ಲ! ಸಿದ್ಧರಾಮನು ಇದೇನು ಸೋಜಿಗೆ ಅಂದುಕೊಳ್ಳುವಷ್ಟರಲ್ಲಿ, ತಪ್ಪಿಸಿಕೊಂಡವರ ಜಾಡು ಹಿಡಿದ ಸಿದ್ಧರಾಮನ ಕೆಲವು ಶಿಷ್ಯರು ಆಗಂತುಕರಲ್ಲಿ ಒಂದಿಬ್ಬರನ್ನು ಹಿಡಿದು ಸಿದ್ಧರಾಮನ ಎದುರಿಗೆ ತಂದು ನಿಲ್ಲಿಸಿ, ‘ಅಯ್ಯನವರೇ.  ಅಷ್ಟೂ ಜನ ಕತ್ತಲಲ್ಲಿ ತಪ್ಪಿಸಿಕೊಂಡರು.  ಕೊನೆಗೆ ಸಿಕ್ಕವರು ಇವರಿಬ್ಬರೇ’ ಎಂದರು.  ನೆರೆದ ಅಷ್ಟೂ ಜನಕ್ಕೆ ಇಂದಿನ ಪ್ರಸಾದ ವ್ಯವಸ್ಥೆಯಲ್ಲಿ ಏನೋ ಒಳಸಂಚು ನಡೆದಿದೆ ಎಂದು ಅನ್ನಿಸತೊಡಗಿತು.  ಸಿದ್ಧರಾಮನು ವಿವರ್ಣರಾಗಿ ಕಂಪಿಸುತ್ತಿದ್ದ ಆ ಇಬ್ಬರನ್ನೂ ಕನಿಕರದಿಂದ ದಿಟ್ಟಿಸಿದನು.  ಕಲ್ಲಯ್ಯ ಅವರನ್ನು ಕೇಳಿದ ‘ಯಾರೋ ನೀವು? ಇವತ್ತು ಏನು ಮಾಡಬೇಕು ಅಂತ ಇದ್ದಿರಿ?’ ಎಂದು ಗದರಿದನು.  ಅವರು ‘ನಾವು ಕೋವೂರಿನವರು.  ಕುಟಿಲ ವಿದ್ಯಾಸಾಗರರೆಂಬ ಸಿದ್ಧರ ಕಡೆಯವರು.  ಪ್ರಸಾದದಲ್ಲಿ ವಿಷಬೆರೆಸಿ ಕೊಲ್ಲಬೇಕೆಂದು ಅವರು ನಮ್ಮನ್ನು ಕಳುಹಿಸಿದರು.  ದಯಮಾಡಿ ನಮ್ಮನ್ನು ಬಿಟ್ಟು ಬಿಡಿ.  ನಮ್ಮದೇನೂ ತಪ್ಪಿಲ್ಲ’ ಎಂದು ಅಂಗಲಾಚಿದರು.  ಪ್ರಸಾದ, ಪ್ರಸಾದದೊಳಗೆ ವಿಷ ಎಂಬ ಮಾತು ಕೇಳಿ ಜನರೆಲ್ಲ ಗಾಬರಿಯಾದರು.  ಸಿದ್ಧರಾಮನು ಹೇಳಿದ : ‘ಗಾಬರಿಯಾಗಬೇಕಾಗಿಲ್ಲ ಈಗಾಗಲೇ ನೀವೆಲ್ಲ ಈ ಗುಗ್ಗರಿಯನ್ನು ತಿಂದಿದ್ದೀರಿ.  ಅದನ್ನು ಪ್ರಸಾದ ಎಂದು ಸ್ವೀಕರಿಸಿದ್ದೀರಿ. ಮಲ್ಲಿನಾಥನಿಗೆ ನೈವೇದ್ಯವಾಗಿ ‘ಪ್ರಸಾದ’ವಾದ ಮೇಲೆ ಅದು ವಿಷವಾಗುವುದುಂಟೆ?  ಅವನು ಒಲಿದರೆ ವಿಷವೆಲ್ಲವೂ ಅಮೃತವಾಗುತ್ತದೆ.  ಸಾಕ್ಷಾತ್ ಶಿವನೇ ಹಾಲಾಹಲವನ್ನು ಲೋಕ ಕಲ್ಯಾಣಕ್ಕಾಗಿ ಕುಡಿದನೆಂಬ ಪುರಾಣದ ಕತೆಯನ್ನು ನೀವೆಲ್ಲ ಕೇಳಿದ್ದೀರಿ.  ಇಲ್ಲಿ ಇರುವ ಮಹಿಮೆಯೇನಿದ್ದರೂ ಅದು ಕಪಿಲಸಿದ್ಧ ಮಲ್ಲಿಕಾರ್ಜುನನದು.  ಮಹಾಗುರುವಾದ ಮಲ್ಲಿನಾಥನ ಮುಂದೆ ನಾನೆಷ್ಟರವನು?  ಈ ದಿನ ನಮ್ಮ ಮಲ್ಲಿನಾಥ ವಿಷಪೂರಿತವಾದ ಗುಗ್ಗರಿಯನ್ನು ಅಮೃತವನ್ನಾಗಿ ಪರಿವರ್ತಿಸಿದ್ದಾನೆ.  ಅವನಲ್ಲಿ ಶ್ರದ್ಧೆಯಿಡಿ.  ನಿಮಗೆ ಯಾವ ಭಯವೂ ಬೇಡ.’

ಗುರುವಿನ ಧೀರವಾಣಿಯನ್ನು ಕೇಳಿ ಶಿಷ್ಯರೂ ಮತ್ತು ನೆರೆದ ಭಕ್ತಾದಿಗಳೂ ಮೂಕ -ವಿಸ್ಮಿತ-ಧನ್ಯಭಾವವೊಂದರಲ್ಲಿ ನಿಂತರು.

ಹಾವಿನಹಾಳ ಕಲ್ಲಯ್ಯನ ಮನಸ್ಸು ಇತ್ತೀಚೆಗೆ ನಡೆದ ಅನಿರೀಕ್ಷಿತವಾದ ಘಟನೆಯೊಂದರಿಂದ ಅಲ್ಲೋಲ ಕಲ್ಲೋಲವಾಗಿತ್ತು.  ಬಹುಕಾಲದಿಂದ ತನ್ನನ್ನು ರಕ್ಷಿಸುತ್ತಿದ್ದ ಆ ವೈರಾಗ್ಯದ ಕೋಟೆಯಲ್ಲಿ ಅವನಿಗರಿಯದಂತೆಯೇ ಬಿರುಕುಗಳು ಕಾಣಿಸಿಕೊಳ್ಳತೊಡಗಿದ್ದವು.  ಎಳೆಯಂದಿನಿಂದ ಮೊಳೆತ ಆ ಶಿವಭಕ್ತಿ, ಹಾಗೂ ಸಿದ್ಧರಾಮನ ಸನ್ನಿಧಿಯಲ್ಲಿ ರೂಪುಗೊಳ್ಳುತ್ತಿದ್ದ ಆ ಜೀವನದ ಆದರ್ಶಗಳು ಈಗ ಬಿರುಗಾಳಿಗೊಡ್ಡಿದ ಮೋಡಗಳಂತೆ ಚದುರತೊಡಗಿದ್ದನ್ನು ಕಂಡು ಅವನು ಗಾಬರಿಗೊಂಡಿದ್ದನು.

ಇತ್ತೀಚೆಗೆ ನಡೆದ ಘಟನೆಯೆಂದರೆ : ಇದೇ ಚೈತ್ರಮಾಸದ ಒಂದು ದಿನ ಅತ್ಯಂತ ಚೆಲುವೆಯಾದ ಶಿವಭಕ್ತೆಯೊಬ್ಬಳು ಸೊನ್ನಲಿಗೆಗೆ ಬಂದಳು.  ಅವಳು ಬಂದದ್ದು ಬಸವಣ್ಣನವರ ಕಲ್ಯಾಣದಿಂದ.  ಉಟ್ಟದ್ದು ಶ್ವೇತ ಶುಭ್ರವಾದ ಸೀರೆ.  ಹಣೆಯಲ್ಲಿ ಎದ್ದು ಕಾಣುವ ವಿಭೂತಿ.  ವಿಭೂತಿಯ ನಡುವೆ ಚಂದ್ರ ಕುಂಕುಮ.  ದಟ್ಟವಾದ ಹೆರಳು. ವಿಶಾಲವಾದ ಕಣ್ಣುಗಳು.  ಕಾಮನ ಬಿಲ್ಲಿನಂತಹ ಹುಬ್ಬುಗಳು.  ನೀಳವಾದ ನಾಸಿಕ.  ಮೋಹಕವಾದ ಬಾಯಿ.  ಮಧುರವಾದ ಸ್ವರ.  ಚೆಲುವಿಕೆಯೇ ಹೆಣ್ಣಾದ ಪರಿ.  ಜತೆಗೆ ಮಠದ ಆವರಣದಲ್ಲಿ ಸಿದ್ಧರಾಮಯ್ಯನವರ ಹಾಗೂ ಅವರ ಶಿಷ್ಯರ ಸಮೂಹದಲ್ಲಿ, ಕಲ್ಯಾಣದಲ್ಲಿ ಬಸವಣ್ಣನವರ ಮಹಮನೆಯ ಅನುಭವ ಮಂಟಪದಲ್ಲಿ ನಡೆಯುವ ಸಂವಾದ ಸೊಗಸನ್ನು ವ್ಯಾಖ್ಯಾನಿಸುತ್ತಾ, ಆಕೆ ಹಾಡಿ ತೋರಿಸಿದ ಒಂದೆರಡು ವಚನಗಳ ರೀತಿಯಂತೂ ಅತ್ಯಪೂರ್ವ.

ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ
ಅಂಬುಜಕೆ ಭಾನುವಿನ ಉದಯದ ಚಿಂತೆ
ಭ್ರಮರಕ್ಕೆ ಪರಿಮಳದ ಬಂಡುಂಬ ಚಿಂತೆ

ಎಂಬ ವಚನವಾಗಲಿ

ಬಿಟ್ಟೆನೆಂದಡೆ ಬಿಡದೀ ಮಾಯೆ
ಬಿಡದಿದ್ದರೆ ಬೆಂಬತ್ತಿತ್ತು ಮಾಯೆ

ಎಂಬ ವಚನವಾಗಲಿ ಕಲ್ಲಯ್ಯನ ಮನಸ್ಸನ್ನು ಅವಳ ಚೆಲುವಿನ ಸಮೇತ ಸೂರೆಗೊಂಡವು.  ಸಿದ್ಧರಾಮನು ಆ ವಚನಗಳನ್ನು ಹಾಗೂ ಆಕೆ ಅವುಗಳನ್ನು ಹಾಡಿ ತೋರಿಸಿದ ರೀತಿಯನ್ನು ತುಂಬ ಮೆಚ್ಚಿಕೊಂಡು ‘ತಾಯಿ ನಿನ್ನ ಕೊರಳಿನಲ್ಲಿ ಸಾಕ್ಷಾತ್ ಸ್ವರ ದೇವತೆಯೆ ಮನೆ ಮಾಡಿಕೊಂಡಿದ್ದಾಳೆ’ ಎಂದು ಪ್ರಶಂಸಿಸಿದನು.  ಆದರೆ ಕಲ್ಲಯ್ಯನ ಪಾಲಿಗೆ ಆಕೆ ಸಾಕ್ಷಾತ್ ಸ್ವರದೇವತೆ ಅಲ್ಲ;  ಸ್ಮರದೇವತೆಯಾಗಿ ಕಾಡತೊಡಗಿದ್ದೇ ಅವನ ಅಂತರಂಗದ ಅಲ್ಲೋಲ ಕಲ್ಲೋಲಕ್ಕೆ ನಿಜವಾದ ಕಾರಣವಾಗಿತ್ತು.

ಹಾಗೆ ನೋಡಿದರೆ ಕಲ್ಲಯ್ಯ, ಸಿದ್ಧರಾಮನ ಅಚ್ಚುಮೆಚ್ಚಿನ ಶಿಷ್ಯನಾಗಿದ್ದನು.  ಅಣ್ಣ ಬೊಮ್ಮಯ್ಯ ಮತ್ತು ಇತ್ತೀಚೆಗೆ ಬಂದ ಕೇದಾರಗುರು ಇವರೂ ಸಿದ್ಧರಾಮನಿಗೆ ಹತ್ತಿರದವರಾಗಿದ್ದರು.  ಇವರಲ್ಲದೆ ಸೊನ್ನಲಿಗೆಯ ವಿವಿಧ ಕಾರ್ಯಚಟುವಟಿಕೆಗಳನ್ನು ಸಿದ್ಧರಾಮನ ನಿರ್ದೇಶನದ ಮೇರೆಗೆ ನೋಡಿಕೊಳ್ಳುತ್ತಿದ್ದ ಇನ್ನೂ ಹಲವರಿದ್ದರು.  ಅವರಲ್ಲಿ ಅನೇಕರು ಗೃಹಸ್ಥರೂ ಆಗಿದ್ದರು.  ಸೊನ್ನಲಿಗೆಯಲ್ಲಿ, ಅವರಿಗೆ ಸ್ವಂತ ಮನೆಗಳು ಇದ್ದವು.  ಅವರು ಗೃಹಸ್ಥರಾಗಿರಲಿ, ಆಗಿಲ್ಲದಿರಲಿ ಅವರೆಲ್ಲರೂ ಸಿದ್ಧರಾಮನ ಈ ಕರ್ಮಭೂಮಿಯ ಕೆಲಸಗಾರರು.  ಸಿದ್ಧರಾಮನ ವ್ಯಕ್ತಿತ್ವ ಮತ್ತು ಅವನು ಅವರಲ್ಲಿ ಬಿತ್ತಿದ್ದ, ಉಪದೇಶಿಸುತ್ತಿದ್ದ ಮಾನವನ ಶ್ರೇಯಸ್ಸಿನ ಪರವಾದ ತ್ಯಾಗ, ಸೇವೆ, ಶ್ರದ್ಧೆ, ಭಕ್ತಿ ಮೊದಲಾದ ಆದರ್ಶಗಳು ಅವರನ್ನು ಹಿಡಿದು ನಡೆಸುತ್ತಿದ್ದವು.  ಸಿದ್ಧರಾಮನ ಮಹಾಮನೆಯಲ್ಲಿ ಆಗಾಗ ನಡೆಯುತ್ತಿದ್ದ ಪ್ರವಚನಗಳೂ, ಚರ್ಚೆಗಳೂ, ಸಂವಾದಗಳೂ ಈ ಭಕ್ತರ ಅನೇಕ ಸಂದೇಹಗಳನ್ನು ನಿವಾರಿಸಿ ಶಿವಪಥದ ಸ್ವರೂಪವನ್ನು ಅವರೆದುರು ಸ್ಪಷ್ಟಪಡಿಸುತ್ತಿದ್ದವು.  ಈ ಸಂವಾದ ಗೋಷ್ಠಿಗಳಲ್ಲಿ ಹಾವಿನಹಾಳ ಕಲ್ಲಯ್ಯನೂ ಪ್ರಮುಖವಾದ ಪಾತ್ರವನ್ನು ವಹಿಸುತ್ತಿದ್ದನು.  ಎಷ್ಟಾದರೂ ಎಳೆಯಂದಿನಿಂದಲೇ ಶಿವಭಕ್ತಿಯನ್ನು ಮೈಗೂಡಿಸಿಕೊಂಡು ಬೆಳೆದವನು; ತನ್ನ ತಂದೆ ಶಿವನೋಜನು ವಂಶಪಾರಂಪರ್ಯವಾಗಿ ರೂಢಿಸಿಕೊಂಡು ಬಂದ ವಿಶ್ವಕರ್ಮವೃತ್ತಿಯನ್ನೆ, ತನ್ನೂರಿನ ಕಲ್ಲಿನಾಥನ ಮೇಲಣ ಭಕ್ತಿಯ ಆಧಿಕ್ಯದಿಂದ ತಿರಸ್ಕರಿಸಿದವನು; ತನಗಾಗಿ ಗೊತ್ತಾದ ಮದುವೆಯನ್ನು, ಮದುವೆಯ ಹಿಂದಿನ ದಿನ ಧಿಕ್ಕರಿಸಿ ಸದ್ಗುರುವನ್ನು ಹುಡುಕಿಕೊಂಡು ಬಂದವನು; ರೇವಣಸಿದ್ಧರ ಶಿಷ್ಯನಾದ ರುದ್ರಮುನಿದೇವರ ಸೂಚನೆಯಂತೆ ಸೊನ್ನಲಿಗೆಗೆ ಬಂದು ಸಿದ್ಧರಾಮನ ಸನ್ನಿಧಿಯನ್ನು ಸೇರಿದವನು.  ಇಂಥವನಿಗೂ ಕಲ್ಯಾಣದಿಂದ ಬಂದ ಚೆಲುವೆಯಾದ ಶಿವಭಕ್ತೆಯೊಬ್ಬಳು, ಅಯಸ್ಕಾಂತದಂತೆ ಆಕರ್ಷಿಸಿ ಅವನ ಅಂತರಂಗದಲ್ಲಿ ಒಂದು ಬಗೆಯ ಅಲ್ಲೋಲ  ಕಲ್ಲೋಲವನ್ನುಂಟುಮಾಡಿದಳೆಂದ ಮೇಲೆ, ಈ ಮಾಯೆಯ ಶಕ್ತಿ ಇನ್ನೆಂಥದಿರಬಹುದು.  ‘ಬಿಟ್ಟೆನೆಂದರೆ ಬಿಡದೀ ಮಾಯೆ, ಬಿಡದಿದ್ದರೆ ಬೆಂಬತ್ತಿತ್ತು, ಮಾಯೆ’ ಎಂಬ ವಚನ ಅಗಾಧವಾದ ಶಕ್ತಿಯೊಂದರ ವ್ಯಾಖ್ಯಾನದಂತೆ ತೋರಿತು ಹಾವಿನಹಾಳ ಕಲ್ಲಯ್ಯನಿಗೆ.

ಸಿದ್ಧರಾಮನ ಶಿಷ್ಯರಲ್ಲಿ ಎದ್ದು ಕಾಣುವಂತಿದ್ದ ಕಲ್ಲಯ್ಯನನ್ನು ಆಕೆ ಗಮನಿಸಿದ್ದಳು.  ಸೊನ್ನಲಿಗೆಯಲ್ಲಿ ಆಕೆ ನಿಂತ ಆ ಕೆಲವು ದಿನ, ಆಕೆ ದಿನವೂ ಬೆಳಿಗ್ಗೆ ಮಲ್ಲಿನಾಥನ ದೇವಸ್ಥಾನಕ್ಕೆ ಬಂದು ಹೋಗುವಳು; ಸಂಜೆ ಗುಡಿಯ ಮೂಲೆಯಲ್ಲಿ ಕೂತು ತಂಬೂರಿ ಮಿಡಿಯುತ್ತ ಸುಶ್ರಾವ್ಯವಾಗಿ ಹಾಡುವಳು.  ಒಂದು ಸಂಜೆ ಯಾವುದೊ ಕಾರ್ಯ ನಿಮಿತ್ತ ಕಲ್ಲಯ್ಯನು ದೇವಸ್ಥಾನದ ಕಡೆಗೆ ಬಂದಾಗ ಆಕೆ, ಅಲ್ಲಿಂದ ಹೊರಕ್ಕೆ ಬರುತ್ತಿದ್ದಳು.  ಸಂಜೆಯ ಹೊಂಗಿರಣಗಳು ಆಕೆಯ ಮುಖ ಮಂಡಲವನ್ನು ಬೆಳಗುತ್ತಿದ್ದವು.  ಬಿಚ್ಚಿ ಹರಡಿಕೊಂಡ ನೀಳವಾದ ಕಪ್ಪಾದ ಕೇಶರಾಶಿ ಗಾಳಿಗೆ ತೊನೆದಾಡುತ್ತಿದ್ದವು.  ಎದುರಿಗೆ ಬಂದ ಕಲ್ಲಯ್ಯ ಅವಳ ಆ ಕಾಂತಿಯುಕ್ತವಾದ ಕಣ್ಣುಗಳನ್ನು ನೋಡಿದನು; ಆಕೆಯ ತುಟಿಗಳಲ್ಲಿ ಮಂದಸ್ಮಿತವೊಂದು ಮಿಂಚಿ ಮಾಯವಾಯಿತು.  ಕಲ್ಲಯ್ಯನು ಧೈರ್ಯ ತಂದುಕೊಂಡು, ‘ನಿಮ್ಮ ಜತೆ ಕೊಂಚ ಮಾತನಾಡುವುದಿದೆ.  ನೀವು, ಕೆರೆಯ ಬದಿಯ ಹೂವಿನ ತೋಟಕ್ಕೆ ಬರುವುದಾದರೆ ಸಂತೋಷ’, ಎಂದನು.  ಆಕೆ ಅದಕ್ಕೆ ಪ್ರತಿಯಾಗಿ ಏನೂ ಮಾತನಾಡಲಿಲ್ಲ.  ಆಕೆಯ ಕಣ್ಣುಗಳೇ ಎಲ್ಲವನ್ನೂ ಹೇಳಿದವು.

ಕೆರೆಯ ಬದಿಯ ಹೂವಿನ ತೋಟದಲ್ಲಿ ಅಂದು ಕಲ್ಲಯ್ಯನು ಕಾಯತ್ತಿದ್ದನು.  ಕೆರೆಯ ಅಲೆಗಳ ಸಪ್ಪಳ ಕೇಳುತ್ತಿತ್ತು.  ಚೈತ್ರ ಮಾಸಕ್ಕೆ ಚಿಗುರಿದ ಮರಗಳು ಹೊಸ ತಳಿರನ್ನು ಹೇರಿಕೊಂಡು ನಿಂತಿದ್ದವು.  ಮಂದವಾದ ಗಂಧಪವನವೊಂದು ಹೂ ಹೂವುಗಳ ಮೈದಡವುತ್ತ ಬೀಸುತ್ತಿತ್ತು.  ಸಪ್ತಮಿಯ ಚಂದಿರನ ಕ್ಷೀಣ ಕಾಂತಿಯೊಂದು ಹೂವಿನ ತೋಟವನ್ನು ಸ್ಪಷ್ಟಾಸ್ಪಷ್ಟವಾದ ಕನಸೊಂದರ ದೃಶ್ಯದಂತೆ ಪರಿವರ್ತಿಸಿತ್ತು.  ಅಷ್ಟರಲ್ಲಿ ಆ ಚೆಲುವೆ ಮೈಗೊಂಡ ಕನಸಿನಂತೆ ಅಲ್ಲಿಗೆ ಪ್ರವೇಶಿಸಿದಳು.

ಕಲ್ಲಯ್ಯನು ಯಾವ ಮುಚ್ಚುಮರೆಯೂ ಇಲ್ಲದೆ ತನ್ನ ಅಂತರಂಗವನ್ನು ಅವಳೆದುರು ತೋಡಿಕೊಂಡನು.  ಆಕೆ ತಾನು ಬನವಾಸಿಯ ಕಡೆಯಿಂದ ಬಂದವಳೆಂದೂ, ತನ್ನ ಹೆಸರು ಚನ್ನವ್ವೆಯೆಂದೂ, ಎಳೆಯಂದಿನಲ್ಲಿ ತನ್ನ ತಂದೆ ತಾಯಂದಿರನ್ನು ಕಳೆದುಕೊಂಡ ತಾನು, ಕಲ್ಯಾಣದ ಶರಣರ ನಡುವೆ ತನ್ನ ಮನಶ್ಯಾಂತಿಯನ್ನು ಪಡೆದುಕೊಂಡು, ಅವರ ವಚನಗಳನ್ನು ಪ್ರಸಾರಮಾಡುವ ಕಾಯಕವನ್ನು ಕೈಕೊಂಡು ಊರೂರ ಮೆಲೆ ಸಂಚಾರ ಮಾಡುತ್ತಿರುವುದಾಗಿಯೂ ತನ್ನನ್ನು ಮೆಚ್ಚಿ ಮದುವೆಯಾಗಿ, ಬಾಳಿಸಬಲ್ಲವರು ದೊರೆತರೆ ತಾನೂ ಗೃಹಸ್ಥೆಯಾಗಿ ಬದುಕಲು ಯಾವ ಆಕ್ಷೇಪಣೆಯೂ ಇಲ್ಲವೆಂದೂ ತಿಳಿಸಿದಳು.   ಅಂದು ರಾತ್ರಿ ಮಹಾಮನೆಯ ಶಿಷ್ಯಗೋಷ್ಠಿಯನ್ನು ಮುಗಿಸಿಕೊಂಡು   ತನ್ನ ಮಠಕ್ಕೆ ಸಿದ್ಧರಾಮನು ಹಿಂದಿರುಗುವಾಗ, ಕಲ್ಲಯ್ಯ ಸಿದ್ಧರಾಮನ ಜತೆಗೆ ಹೋಗುತ್ತ ತುಂಬಾ ಸಂಕೋಚದಿಂದ ತನ್ನ ಮನಃಸ್ಥಿತಿಯನ್ನು ವಿವರಿಸಿದನು.  ತಾನು  ಆ ಸಂಜೆ ಚನ್ನವ್ವನೊಡನೆ ಮಾತನಾಡಿರುವುದಾಗಿಯೂ, ಆಕೆ ತನ್ನನ್ನು ಮದುವೆಯಾಗಲು ಒಪ್ಪಿರುವುದಾಗಿಯೂ, ಈ ಮದುವೆಗೆ ಅಯ್ಯನವರ ಅನುಮತಿಬೇಕೆಂದೂ ಕೇಳಿದನು.  ಸಿದ್ಧರಾಮನು ಗಟ್ಟಿಯಾಗಿ ನಕ್ಕು, ‘ಈ ವಿಚಾರವನ್ನು ಪ್ರಸ್ತಾಪಿಸುವುದಕ್ಕೆ ಇಷ್ಟೊಂದು ಸಂಕೋಚವೇಕೆ? ಮದುವೆಯಾಗುವುದೊಂದು ಮಹಾಪರಾಧವೆ? ಈಗ ನೀನು ಚನ್ನವ್ವನನ್ನೆ ಕೇಳು.  ಬಸವಣ್ಣನವರ ಕಲ್ಯಾಣದಿಂದ ಬಂದವಳಲ್ಲವೆ ಆಕೆ?  ಅಲ್ಲಿರುವ ಶರಣರೆಲ್ಲ ಸಂಸಾರಿಗಳೊ, ಸನ್ಯಾಸಿಗಳೊ, ಅವಳನ್ನೆ ಕೇಳು.  ‘ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ’ ಎಂದ ಜೇಡರ ದಾಸಿಮಯ್ಯನ ವಚನವನ್ನು ಕೇಳಿಲ್ಲವೆ ನೀನು?  ಸಂಸಾರವೆಂಬುದು ಶಿವಯೋಗಕ್ಕೆ ಮಾರಕವೆಂಬ ಮಾತು ಬಹಳ ಹಿಂದಿನ ಮಾತಾಯಿತು.  ಆ ಮಾತಿಗೆ ಅರ್ಥವಿಲ್ಲ.  ನನ್ನ ಉದಾಹರಣೆ ಬೇಡ.  ಅದನ್ನು ಬಿಟ್ಟು ಬಿಡು.  ಆದರೆ ಸಂಸಾರದೊಳಗಿದ್ದೂ ಶಿವಯೋಗವನ್ನು ಸಾಧಿಸಬಹುದು.  ನೀನೇನು ಸಾಧಾರಣ ವ್ಯಕ್ತಿಯೆ? ನೀನೊಬ್ಬ ಅಪ್ರತಿಮ ಶಿವಭಕ್ತ.  ‘ಭಕ್ತನ ಮನಸ್ಸು ಹೆಣ್ಣಿನೊಳಗಾದರೆ’ ವಿವಾಹವಾಗುವುದೊಂದೇ ಸರಿಯಾದ ದಾರಿ.  ಅದರಿಂದ ನಿನ್ನ ಶಿವಭಕ್ತಿಗೇನೂ ಕುಂದಿಲ್ಲ.  ಇಷ್ಟರ ಮೇಲೆ ಆ ಹೆಣ್ಣು ಯಾರು? ಆಕೆಯೂ ಶರಣಗಣಗಳ ನಡುವೆ ಇದ್ದು, ಶಿವಭಕ್ತಿಯ ಸಂಸ್ಕಾರದಿಂದ ಪುನೀತಳಾದವಳು.  ನೀನು ಆಕೆಯನ್ನು ಮದುವೆಯಾಗುವುದು ಖಂಡಿತವಾಗಿಯೂ ಶ್ರೇಯಸ್ಕರವಾದದ್ದು.  ಮದುವೆಯಾದ ನಂತರ, ಈ ಕ್ಷೇತ್ರಕ್ಕೆ ನಿಮ್ಮಿಬ್ಬರ ಸೇವೆಯೂ ಅವಿಚ್ಛಿನ್ನವಾಗಿ ಸಲ್ಲುವಂತಾಗಲಿ.  ಮದುವೆಯ ನಂತರ ನೀವಿಬ್ಬರೇ ಸೊನ್ನಲಿಗೆಯಲ್ಲಿಯೇ ಗೃಹಸ್ಥರಾಗಿ ಇರಬೇಕು’

ಕಲ್ಲಯ್ಯನ ಮನಸ್ಸಿನ ತಳಮಳವೆಲ್ಲವೂ ಶಾಂತವಾಯಿತು.  ಧನ್ಯತೆಯ ಹಾಗೂ ಕೃತಜ್ಞತೆಯ ಭಾವದಿಂದ ಆತ ಸಿದ್ಧರಾಮನ ಪಾದಕ್ಕೆರಗಿದನು.