ಸಿದ್ಧರಾಮನು ಮಲ್ಲಯ್ಯನವರ ನಿರ್ದೇಶನದ ಮೇರೆಗೆ ಶ್ರೀಶೈಲವನ್ನು ಬಿಟ್ಟು ಹೊರಟು ಕೆಲವು ದಿನಗಳ ಪಯಣದ ನಂತರ ತನ್ನ ಊರಾದ ಸೊನ್ನಲಿಗೆಯನ್ನು ತಲುಪಿದನು.  ಮನೆಯನ್ನು ಬಿಟ್ಟು ಕೆಲವು ವರ್ಷಗಳ ಹಿಂದೆ ಅನಿರೀಕ್ಷಿತವಾಗಿ ಹೊರಟು ಹೋಗಿದ್ದ ಸಿದ್ಧರಾಮ ಅಷ್ಟೆ ಅನಿರೀಕ್ಷಿತವಾಗಿ ಮನೆಗೆ ಬಂದದ್ದು ಮನೆ ಮಂದಿಗೆಲ್ಲ ತುಂಬ ಸಂತೋಷವನ್ನು ತಂದಿತು.  ಹಿಂದೆ ಇದ್ದಕ್ಕಿದ್ದಂತೆ ಕಾಣೆಯಾದ ಸಿದ್ಧರಾಮನನ್ನು ಮುದ್ದಗೌಡ ಸುತ್ತ ಮುತ್ತಣ ಊರುಗಳಲ್ಲಿ ಹುಡುಕಿದ.  ತನ್ನ ಅಪರವಯಸ್ಸಿನಲ್ಲಿ ಅಪರೂಪಕ್ಕೆ ಹುಟ್ಟಿದ ಕಿರಿಯಮಗ ಸಿದ್ಧರಾಮ ಇದ್ದಕಿದ್ದ ಹಾಗೆ ಎಲ್ಲಿಗೋ ಹೊರಟು ಹೋದನಲ್ಲ ಎಂಬ ಕೊರಗಿನಲ್ಲಿ ಸುಗ್ವವ್ವೆ ಹಲವು ದಿನ ಅನ್ನ-ನೀರುಗಳನ್ನೆ ತೊರೆದು ಹಂಬಲಿಸಿದಳು.  ತಾಯಿಯ ಈ ಸಂಕಟವನ್ನು ನೋಡಲಾರದೆ ಮನೆಯ ಹಿರಿಯ ಮಗನಾದ ಬೊಮ್ಮಯ್ಯ ತಾನೇ ತನ್ನ ಕಿರಿಯ ತಮ್ಮನನ್ನು ಎಲ್ಲಿದ್ದರೂ ಹುಡುಕಿ ಕರೆದುಕೊಂಡು ಬರುತ್ತೇನೆಂದು ತಾಯಿಯನ್ನು ಸಮಾಧಾನಪಡಿಸಿ ಹಲವು ದಿನ ಸುತ್ತಮುತ್ತಲ ಪ್ರಾಂತ್ಯದಲ್ಲೆಲ್ಲಾ ಅಲೆದಾಡಿದ.  ಆದರೆ ಆತನಿಗೆ ಎಲ್ಲಿಯೂ ಸಿದ್ಧರಾಮನ ಸುಳಿವು ದೊರೆಯದೆ ಹತಾಶನಾಗಿ ಮನೆಗೆ ಬಂದ.  ತಂದೆ-ತಾಯಂದಿರಿಗೆ ಅಗಾಧವಾದ ಚಿಂತೆ ಕವಿದುಕೊಂಡಿತು.  ಏನಾದ ಈ ಮಗ? ಎಂದೂ ಯಾವುದನ್ನೂ ಕೇಳದ  ಈ ಮಗ, ಈ ಮನೆಗೂ ತನಗೂ ಏನೇನೂ ಸಂಬಂಧವಿಲ್ಲದಂತೆ ಬದುಕಿದ ಈ ಮಗ, ನಿಜವಾಗಿಯೂ ಎಲ್ಲಾ ಬಂಧನಗಳನ್ನು ಹರಿದುಕೊಂಡು ಹೊರಟೇಹೋದನೆ? ಕರುಗಳನ್ನು ಕಾಯುವಂಥ ಕೆಲಸಕ್ಕೆ ನೇಮಿಸಿದರೆಂದು ಮುನಿದುಕೊಂಡು ನಮ್ಮನ್ನು ತೊರೆದನೆ? ಸಿದ್ಧರಾಮಾ ಎಂದು ಕರೆಯದೆ ಧೂಳಿಮಾಕಾಳನೆಂದು ಕರೆದ ಕಾರಣಕ್ಕೆ ನಮ್ಮನ್ನು ಹೀಗೆ ತಿರಸ್ಕರಿಸಿದನೆ?  ಹುಟ್ಟುವ ಮಗ ಮಹಾಶಿವಯೋಗಿಯಾಗುತ್ತಾನೆಂದು ರೇವಣಸಿದ್ಧರು ನುಡಿದ ಮಾತನ್ನು ನಿಜ ಮಾಡಲು ಎಲ್ಲಾದರೂ ದೂರದ ಬೆಟ್ಟ-ಗುಡ್ಡಗಳ ಕಡೆಗೆ ತಪಸ್ಸಿಗೇನಾದರೂ ಹೋದನೆ – ಈ ಬಗೆಯ ಭಾವ ತುಮುಲಗಳಲ್ಲಿ ದಿನಗಳನ್ನು ನೂಕಿ ಇಂದು ಬಂದಾನು ನಾಳೆ ಬಂದಾನು ಎಂದು ಕೆಲವು ವರ್ಷಗಳು ಕಾದನಂತರ ಅನಿರೀಕ್ಷಿತವಾಗಿ ಒಂದು ದಿನ ಬಂದ ಸಿದ್ಧರಾಮನನ್ನು ಕಂಡು ತಂದೆ-ತಾಯಿಂದಿರು ಹರ್ಷಾನಂದ ಪುಲಕಿತರಾದರು.  ಈಗಲಾದರೂ ಮನೆಗೆ ಬಂದ ಮಗನಿಗೆ ಸರಿಯಾದ ಕಡೆ ಹೆಣ್ಣು ಹುಡುಕಿ ಮದುವೆ ಮಾಡಿ ಮನೆಯ ಹೊಣೆಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ವೃದ್ಧನಾದ ಮುದ್ದಗೌಡ ಕನಸುಕಾಣತೊಡಗಿದ.

ಆದರೆ ತಂದೆ ತಾಯಂದಿರಿಗೆ ಅರ್ಥವಾಯಿತು ಈಗ ತಾವು ಕಾಣುವ ಈ ಮಗ, ಈವರೆಗೂ ತಾವು ಕಂಡ ಮಗನಲ್ಲ ಎಂದು.  ಹಿಂದೆ ಜಡನಾಗಿ ಮೂಕನಾಗಿ, ಮರುಳಿನ ಮುದ್ದೆಯಂತಿದ್ದ ಈ ಮಗನ ಮುಖದಲ್ಲಿ ಏನೋ ಒಂದು ಅಪೂರ್ವವಾದ ತೇಜಸ್ಸು ತುಂಬಿಕೊಂಡಿದೆ; ಯೌವನಕ್ಕೆ ಬಂದು ನೋಡುವವರ ಕಣ್ಮನಗಳನ್ನು ಸೆಳೆಯುವಂಥ ಅವನ ನಿಲುವಿನಲ್ಲಿ ಹಿಂದಿಲ್ಲದ ಗಾಂಭೀರ್ಯವೊಂದು ಪ್ರಕಟವಾಗುತ್ತಿದೆ.  ದೈನಂದಿನ ವ್ಯಾವಹಾರಿಕವಾದ ಮಾತುಕತೆಯಲ್ಲಿ ಯಾವುದೇ ಆಸಕ್ತಿಯನ್ನು ಪ್ರಕಟಿಸದೆ, ತಾನು ಬೇರೆ ಏನೋ ಮಹತ್ತಾದ ಯೋಜನೆಗಳನ್ನು ಮನಸ್ಸಿನಲ್ಲಿ ತುಂಬಿಕೊಂಡವನಂತೆ ತೋರುತ್ತಾನೆ.  ಹಿಂದೆ ಯಾರ ಜತೆಗೂ ಮಾತನಾಡದೆ ಮೂಕನಂತಿದ್ದ ಈ ಮಗ ಈಗ ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಾನೆ; ಅವರಿವರ ಕಷ್ಟ ಸುಖಗಳನ್ನು ವಿಚಾರಿಸುತ್ತಾನೆ.  ತಾನು ಶ್ರೀಶೈಲಕ್ಕೆ ಹೋದದ್ದು, ಅಲ್ಲಿನ ಪರ್ವತಾರಣ್ಯಗಳ ನಡುವೆ ಸುತ್ತಾಡಿದ್ದು, ಆಗ ಹಲವು ಬಗೆಯ ಸಾಧುಗಳನ್ನೂ, ಸಿದ್ಧರನ್ನೂ ಕಂಡದ್ದು, ಇತ್ಯಾದಿ ವಿಷಯಗಳನ್ನು ಕುರಿತು ತನ್ನ ಅಣ್ಣ ಬೊಮ್ಮಯ್ಯನ ಜತೆಗೆ ಲವಲವಿಕೆಯಿಂದ ಮಾತಾಡಿದ್ದನ್ನು ಕಂಡು ಮನೆ-ಮಂದಿಗೆಲ್ಲ ಆಶ್ಚರ್ಯ.  ಆದರೂ ಅವನು ಬೊಮ್ಮಯ್ಯನ ಜತೆಗೆ ಮನದೆರೆದು ಮಾತಾಡಿದಷ್ಟು ಉಳಿದವರೊಂದಿಗೆ ಮಾತಾಡಿದ್ದು ಕಾಣಲಿಲ್ಲ.  ಬೊಮ್ಮಯ್ಯನಿಗೆ ಮಾತ್ರ ಅರ್ಥವಾಯಿತು, ಸಿದ್ಧರಾಮನ ಬದುಕು ಬೇರೊಂದು ಧ್ಯೇಯದೀಕ್ಷೆಯನ್ನು ಪಡೆದುಕೊಂಡು ಪುನರ್ಭವಗೊಂಡಿದೆ ಅನ್ನುವುದು,  ಸಿದ್ಧರಾಮ ನಾಳಿನ ದಿನ ಕೈಕೊಳ್ಳುವ ಯಾವುದೇ ಮಹತ್ಸಾಧನೆಯಲ್ಲಿ ತನ್ನದೂ ಒಂದು ಪಾಲಿದೆ ಅನ್ನುವುದು.  ಹೀಗಾಗಿ ತಾನು ವಯಸ್ಸಿನಲ್ಲಿ ಹಿರಿಯನಾದರೂ, ತನ್ನ ಕಿರಿಯ ತಮ್ಮ ಅವನ ಪಾಲಿಗೆ, ಗೌರವಭಾವನೆಯನ್ನು ಉಂಟುಮಾಡುವ ಹಿರಿಯನಂತೆಯೆ ತೋರಿದನು.  ಆಗಾಗ ಸಿದ್ಧರಾಮನು ಅಣ್ಣ ಬೊಮ್ಮಯ್ಯನೊಡನೆ ತಾನು ಶ್ರೀಶೈಲದ ಮಲ್ಲಯ್ಯನಿಂದ ಪಡೆದ ನಿರ್ದೇಶನಗಳನ್ನು ಕುರಿತು ಹಾಗೂ ಅದರ ಕಾರ್ಯ ಸಾಧ್ಯತೆಗಳನ್ನು ಕುರಿತು ಸಮಾಲೋಚಿಸುತ್ತಾನೆ.  ಮೊದಲು ಈ ಮನೆಯಿಂದ ಹೊರಗೆ ಬಂದು, ಸೊನ್ನಲಿಗೆಯ ಆಚೆ ಮಲ್ಲಿನಾಥನಿಗಾಗಿ ದೇವಾಲಯವೊಂದನ್ನು ನಿರ್ಮಿಸಿ ಅದನ್ನು ಕೇಂದ್ರವನ್ನಾಗಿ ಮಾಡಿಕೊಂಡು ಮುಂದಿನ ಸಾಮಾಜಿಕ-ಆಧ್ಯಾತ್ಮಿಕ ಕಾರ್ಯಗಳನ್ನು ವಿಸ್ತರಿಸಬೇಕು ಅನ್ನುವುದು ಅವನ ಮೊದಲ ಗಮನವಾಗಿತ್ತು.  ಈ ಕಾರ್ಯಕ್ಕೆ ಅಣ್ಣ ಬೊಮ್ಮಯ್ಯನ ನೆರವೂ ಬೇಕಾಗಿತ್ತು.  ಹಾಗೆ ನೋಡಿದರೆ ಬೊಮ್ಮಯ್ಯನಿಗೆ ಸೊನ್ನಲಿಗೆಯ ಪರಿಸರದ ಜನರ ಪರಿಚಯ ಸಾಕಷ್ಟಿತ್ತು.  ಒಂದು ದಿನ ಆತ ಆ ಊರ ಶ್ರೀಮಂತ ಮನೆತನದ ಚಾಮಲದೇವಿ ಅನ್ನುವವಳನ್ನು ಕಂಡು, ಶ್ರೀಶೈಲದಿಂದ ಮರಳಿ ಊರಿಗೆ ಬಂದ ಸಿದ್ಧರಾಮನ ವಿಚಾರವನ್ನು ಅವಳೊಂದಿಗೆ ಪ್ರಸ್ತಾಪಿಸಿದನು.  ಹಿಂದೆ, ಹಲವು ವರ್ಷಗಳ ಹಿಂದೆ ಗುರುರೇವಣಸಿದ್ಧರು ಸೊನ್ನಲಿಗೆಗೆ ಬಂದದ್ದು ಮತ್ತು ಅವರು ಮುದ್ದಗೌಡನ ಮಡದಿ ಸುಗ್ಗವ್ವೆಗೆ ಆಶೀರ್ವಾದ ಮಾಡಿದ್ದು, ಆಕೆಯಲ್ಲಿ ಶಿವಯೋಗ ಸಂಪನ್ನನಾದ ಮಗನೊಬ್ಬ ಹುಟ್ಟಿಬರುತ್ತಾನೆಂದು ಭವಿಷ್ಯ ನುಡಿದದ್ದು, ಇತ್ಯಾದಿ ಸಂಗತಿಗಳನ್ನು ಅವರಿವರ ಬಾಯಲ್ಲಿ ಕೇಳಿದ್ದಳು.  ಅನಂತರ ‘ಶಿವಯೋಗಸಂಪನ್ನ’ನಾಗಿಯೇ ಜನಿಸಿದವನೆಂದು ಭಾವಿಸಲಾಗಿದ್ದ  ಸುಗ್ಗವ್ವೆಯ ಮಗ, ಯಾವ ಕೆಲಸಕ್ಕೂ ಬಾರದ ನಿಷ್ಪ್ರಯೋಜಕನಾದದ್ದರಿಂದ, ಅವನನ್ನು ದನಕಾಯುವ ಕೆಲಸಕ್ಕೆ ಹಾಕಿದ್ದಾರೆಂಬುದನ್ನು ತಿಳಿದು ಚಾಮಲದೇವಿ, ಆಶ್ಚರ್ಯಪಟ್ಟು ಸುಮ್ಮನಾಗಿದ್ದಳು.  ಆದರೆ, ಅವಳಿಗೆ ಸುದ್ದಿಬಂತು-ದನ ಕಾಯಲು ಹೋದ ಈ ಹುಡುಗ ಹೇಳದೆ ಕೇಳದೆ ಎಲ್ಲಿಗೋ ಹೊರಟು ಹೋದನೆಂದು.  ಅನಂತರ ಅವಳು ಆ ವಿಷಯವನ್ನೆ ಮರೆತು ಬಿಟ್ಟಿದ್ದಳು.  ಈಗ ಬೊಮ್ಮಯ್ಯನು ಬಂದು, ತನ್ನ ತಮ್ಮ ಶ್ರೀಶೈಲಕ್ಕೆ ದೈವೀ ಉನ್ಮಾದದಲ್ಲಿ ಹೋದದ್ದು, ಅಲ್ಲಿ ಅವನಿಗೆ ಒಬ್ಬ ಗುರು ದೊರೆತದ್ದು, ಆತ ರೇವಣಸಿದ್ಧರ ಪರಂಪರೆಗೆ ಸೇರಿದವರಾಗಿ ಸಿದ್ಧರಾಮನಿಗೆ ಆಧ್ಯಾತ್ಮಿಕ ಗುರುವಾಗಿ ಮಾರ್ಗದರ್ಶನ ಮಾಡಿದ್ದು, ಈಗ ಸಿದ್ಧರಾಮ ಅವರ ಮಾರ್ಗದರ್ಶನದ ಮೇರೆಗೆ ಸೊನ್ನಲಿಗೆಗೆ ಹಿಂದಿರುಗಿರುವುದು – ಈ ವಿಷಯಗಳನ್ನೆಲ್ಲ ತಿಳಿಸಿದಾಗ ಚಾಮಲದೇವಿಗೆ ಜಗ್ಗನೆ ಹಿಂದಿನ ನೆನಪುಗಳೆಲ್ಲವೂ ಮರುಕಳಿಸಿದವು.  ಹಾಗಾದರೆ ಗುರು ರೇವಣಸಿದ್ಧರು ನುಡಿದ ಭವಿಷ್ಯವಾಣಿ ನಿಜವಾಗುವ ಕಾಲ ಬಂದಿದೆ ಅನ್ನಿಸಿತು.  ಆಕೆ ತಾನು ಒಮ್ಮೆ ಬೊಮ್ಮಯ್ಯನ ಮನೆಗೆ ಬಂದು ಸಿದ್ಧರಾಮನ ದರ್ಶನಮಾಡುವುದಾಗಿ ಆಶ್ವಾಸನೆ ನೀಡಿದಳು.

ಒಂದು ದಿನ ಅನಿರೀಕ್ಷಿತವಾಗಿ ಚಾಮಲದೇವಿ ಮುದ್ದಗೌಡನ ಮನೆಗೆ ಬಂದಳು. ಸಿದ್ಧರಾಮ ಜಗುಲಿಯ ಮೇಲೆ ಕೂತಿದ್ದನು.  ಗಾಂಭೀರ್ಯವೇ ಮೂರ್ತಿವೆತ್ತಂತೆ ಕೂತ ಸಿದ್ಧರಾಮನ ಮಂದಹಾಸಯುಕ್ತವಾದ ಮುಖಮಂಡಲವನ್ನು ಕಂಡು ಚಾಮಲದೇವಿ ಚಕಿತಳಾದಳು.  ಪ್ರಶಾಂತವೂ, ಉಜ್ವಲವೂ ಆದ ಕಣ್ಣುಗಳು; ಇಪ್ಪತ್ತರ ಹರೆಯದ ಮುಖದಲ್ಲಿ ಮೊಳೆತು ಕಪ್ಪಗೆ, ಅಷ್ಟೇನೂ ದಟ್ಟವಲ್ಲದೆ ಮುಖವನ್ನು ತಬ್ಬಿಕೊಂಡ ಗಡ್ಡ ಮೀಸೆಗಳು; ಹಣೆಯ ಮೇಲೆ ದಟ್ಟವಾದ ವಿಭೂತಿ ಬೆನ್ನ ಹಿಂದೆ ಹರಡಿಕೊಂಡ ತಲೆಗೂದಲು.  ಸಾಕ್ಷಾತ್ ಶಿವನೇ ಯುವಕನಾಗಿ ಬಂದು ಇಲ್ಲಿ ಕೂತಿದ್ದಾನೆ ಅನ್ನಿಸಿತು ಚಾಮಲದೇವಿಗೆ.  ಆಕೆ ಭಕ್ತಿಯಿಂದ ಆತನಿಗೆ ತಲೆಬಾಗಿದಳು.  ಸಿದ್ಧರಾಮನು ಎದ್ದು ನಿಂತು ಕೈಮುಗಿದು ಆಕೆಗೆ ಸ್ವಾಗತ ಕೋರಿದನು.  ಎಂದೂ ಈಕಡೆ ಬಾರದ ಆ ಊರಿನ ಶ್ರೀಮಂತ ಮಹಿಳೆ ತಮ್ಮ ಮನೆಗೆ ಬಂದದ್ದೂ, ಆಕೆ ತಮ್ಮ ಮಗನಿಗೆ ತಲೆಬಾಗಿ ನಮಿಸಿದ್ದೂ,  ಬಹುಕಾಲದ ಪರಿಚಿತರೊಬ್ಬರನ್ನು ಎದುರುಗೊಂಡಂತೆ ಸಿದ್ಧರಾಮನು ನಡೆದುಕೊಂಡದ್ದೂ ಸುಗ್ಗವ್ವೆಗೆ ಅರ್ಥವಾಗದ ಘಟನೆಗಳಂತೆ ತೋರಿದವು.  ಮನೆಯ ಮುಂದಿನ ದೊಡ್ಡ ಮರವೊಂದರ ನೆರಳಿಗೆ ಚಾಮಲದೇವಿ ಸಿದ್ಧರಾಮ ಇಬ್ಬರೂ ನಡೆದು ಬಂದರು.  ಅಲ್ಲಿ ಅವರಿಬ್ಬರೂ ಸ್ವಲ್ಪ ಹೊತ್ತು ಹಾಕಿದ ವೇತ್ರಾಸನಗಳ ಮೇಲೆ ಕೂತು ಮಾತನಾಡಿದರು.  ಚಾಮಲದೇವಿ ಅನಂತರ ಸುಗ್ಗವ್ವೆ ನೀಡಿದ ಫಲತಾಂಬೂಲಗಳನ್ನು ಸ್ವೀಕರಿಸಿ ತನ್ನ ದೊಡ್ಡಮನೆಗೆ ಹಿಂದಿರುಗಿದಳು.  ಈ ಘಟನೆ ನಡೆದ ಕೆಲವು ದಿನಗಳ ನಂತರ ಬೊಮ್ಮಯ್ಯನು ಚಾಮಲದೇವಿಯ ಕಡೆಯಿಂದ ಸುದ್ದಿಯೊಂದನ್ನು ತಂದನು.  ಚಾಮಲದೇವಿ ತನ್ನ ಸ್ವಸಂತೋಷದಿಂದ ಊರ ಹೊರಗೆ ತನ್ನ ಜಮೀನಿನಲ್ಲಿ ದೇವಾಲಯವೊಂದನ್ನು ಕಟ್ಟಿಸಿ ಸುತ್ತಮುತ್ತಲ ಜಮೀನನ್ನು ಆ ದೇವಸ್ಥಾನಕ್ಕೆ ಬಿಟ್ಟುಕೊಡುವಳೆಂದೂ ಸಿದ್ಧರಾಮನು ಆ ದೇವಾಲಯದಲ್ಲಿ ಲಿಂಗ ಪ್ರತಿಷ್ಠೆ ಮಾಡಿ, ಅದನ್ನು ಪವಿತ್ರೀಕೃತವನ್ನಾಗಿ ಮಾಡುವುದಲ್ಲದೆ ಅದನ್ನೇ ತನ್ನ ಯೋಗಭೂಮಿಯನ್ನಾಗಿ ಮಾಡಿಕೊಂಡು ನೆಲಸಬೇಕೆಂದೂ, ಹೀಗೆಂದು ತನ್ನ ಕನಸಿನಲ್ಲಿ ಶ್ರೀಶೈಲದ ಮಲ್ಲಿಕಾರ್ಜುನನ ಅಪ್ಪಣೆ ಕೂಡ ಆಗಿದೆಯೆಂದೂ ಬೊಮ್ಮಯ್ಯನ ಮೂಲಕ ಹೇಳಿಕಳುಹಿಸಿದಳು.  ಇದೆಲ್ಲವೂ ಆ ಮಲ್ಲಯ್ಯನ ಲೀಲೆಯೇ ಎಂದು ಸಿದ್ಧರಾಮನು ಸಂತೋಷದಿಂದ ಸಮ್ಮತಿಸಿದನು.

ಕೆಲವೇ ತಿಂಗಳುಗಳಲ್ಲಿ ಚಾಮಲದೇವಿ ತನ್ನ ಜಮೀನಿನ ನಡುವೆ ಸೊಗಸಾದ ದೇವಾಲಯವೊಂದನ್ನು ಕಟ್ಟಿಸಿದಳು.  ದೇವಾಲಯದ ಸುತ್ತ ಹೂವಿನ ಗಿಡಗಳಿಗಾಗಿ ಸ್ಥಳವನ್ನು ಕಲ್ಪಿಸಿದಳು.  ಮತ್ತು ಆ ಸ್ಥಳವನ್ನು ಧಾರಾಪೂರ್ವಕವಾಗಿ ಮಲ್ಲಿಕಾರ್ಜುನನ ಹೆಸರಿನಲ್ಲಿ ದಾನಮಾಡಿದಳು.  ಒಂದು ದಿನ ಶುಭಮುಹೂರ್ತದಂದು ಸಿದ್ಧರಾಮನು ಈ ದೇವಸ್ಥಾನದಲ್ಲಿ ಕಪಿಲಸಿದ್ಧ ಮಲ್ಲಿಕಾರ್ಜುನಲಿಂಗವನ್ನು ಶಾಸ್ತ್ರೋಕ್ತವಾಗಿ ಸ್ಥಾಪಿಸಿದನು.  ಊರಜನಕ್ಕೆ ಚಾಮಲದೇವಿ ದೊಡ್ಡ ಅನ್ನ ಸಂತರ್ಪಣೆಯನ್ನು ಏರ್ಪಡಿಸಿದಳು.  ಭೂರಿ ಭೋಜನ ದಾನ ದಕ್ಷಿಣೆಗಳಿಂದ ಜನ ಸಂತೋಷಗೊಂಡರು.  ಲಿಂಗ ಪ್ರತಿಷ್ಠೆಯಾದ ದಿನದಿಂದ ಸಿದ್ಧರಾಮನು ದೇಗುಲವನ್ನೆ ತನ್ನ ನೆಲೆಯನ್ನಾಗಿ ಮಾಡಿಕೊಂಡನು.  ದೇವಾಲಯದ ಪಕ್ಕದಲ್ಲಿ ಚಿಕ್ಕದೊಂದು ಕುಟೀರವನ್ನು ಕಟ್ಟಿಸಿಕೊಂಡು ವಾಸ ಮಾಡುತ್ತ, ದಿನವೂ ಮಲ್ಲಿಕಾರ್ಜುನನ ಪೂಜೆಯಲ್ಲಿ ತನ್ಮಯನಾಗುತ್ತಾ, ದೇವಾಲಯದ ಸುತ್ತ ಹೂವಿನ ಗಿಡಗಳನ್ನು ಬೆಳೆಯಿಸಿ ನೀರೆರೆಯುತ್ತಾ, ಪೂಜೆ-ಧ್ಯಾನ-ಮನನಾದಿಗಳಲ್ಲಿ ಮಗ್ನನಾದನು.  ಅನಿರೀಕ್ಷಿತವಾದ ಈ ಬೆಳವಣಿಗೆಯಿಂದ ದಿಗ್ಮೂಢರಾದ ತಂದೆ ತಾಯಂದಿರು, ಇನ್ನು ಈ ಮಗನ ದಾರಿಯೇ ಬೇರೆ, ಹರಿಯುವ ಹೊಳೆಯನ್ನು ಸಣ್ಣದೊಂದು ಅಡ್ಡಗಟ್ಟೆ ಹಾಕಿ ಅದನ್ನು ಕೆರೆಯನ್ನಾಗಿ ನಿಲ್ಲಿಸುವ ಪ್ರಯತ್ನ ಮಾಡುವುದು ತೀರಾ ಅವಿವೇಕದ ವಿಚಾರ ಎಂದು ಸುಮ್ಮನಾದರು.  ಕೆಲವು ಕಾಲದ ನಂತರ ಅಣ್ಣ ಬೊಮ್ಮಯ್ಯನೂ ಮನೆಯನ್ನು ತೊರೆದು ಬಂದು, ಸಿದ್ಧರಾಮನನ್ನು ಗುರುವೆಂದು ಸ್ವೀಕರಿಸಿ ಅವನಿಂದ ಮಂತ್ರೋಪದೇಶವನ್ನು ಪಡೆದು, ಅವನ ಜತೆಗೆ ನಿಂತನು.

* * *

ಸಿದ್ಧರಾಮನು ಸೊನ್ನಲಿಗೆಯ ಕಪಿಲಸಿದ್ಧಮಲ್ಲಿಕಾರ್ಜುನನ ದೇಗುಲದಲ್ಲಿ, ನೆಲೆನಿಂತ ಸಮಯದಲ್ಲಿ-

ಸೊನ್ನಲಿಗೆಗೆ ದಕ್ಷಿಣದ ದೂರದಲ್ಲಿರುವ ಕಪ್ಪಡಿ ಸಂಗಮ ಕ್ಷೇತ್ರದಿಂದ ಬಸವಣ್ಣ ಬಿಜ್ಜಳನ ರಾಜಧಾನಿಯಾದ ಮಂಗಳವೇಡೆಗೆ ಹೊರಟಿದ್ದನು.

ಬಿಜಾಪುರಕ್ಕೆ ಸಮೀಪದ ಬಾಗೇವಾಡಿಯಲ್ಲಿ ಹುಟ್ಟಿದ ಬಸವಣ್ಣ ಉಪನಯನವನ್ನು ತಿರಸ್ಕರಿಸಿ, ಕೃಷ್ಣ – ಮಲ ಪ್ರಹಾರೀ ನದಿಗಳ ಸಂಗಮಸ್ಥಾನದಲ್ಲಿರುವ ಕಪ್ಪಡಿ ಸಂಗಮೇಶ್ವರ ದೇವಸ್ಥಾನದಲ್ಲಿ ನಿಂತು, ಈಶಾನಗುರುಗಳ ಸಾನಿಧ್ಯದಲ್ಲಿ ಆಧ್ಯಾತ್ಮಿಕ ಶಿಕ್ಷಣವನ್ನು ಪಡೆದು, ದಿನವೂ ಸಂಗಮನಾಥನನ್ನು ಅನನ್ಯ ಭಕ್ತಿಯಿಂದ ಆರಾಧಿಸುತ್ತ ತಾರುಣ್ಯಕ್ಕೆ ಕಾಲಿಟ್ಟಿದ್ದನು.  ಬದುಕಿನ ಭೋಗ – ವೈಭವಗಳ ಕಡೆಗೆ ಬಹುಮಟ್ಟಿಗೆ ವಿರಕ್ತನಾಗಿಯೆ ಇದ್ದ ಬಸವಣ್ಣ, ದೈನಂದಿನ ಶಿವಪೂಜಾಸಂಭ್ರಮಗಳಲ್ಲಿ ತಲ್ಲೀನನಾಗಿ, ಕೇವಲ ತಪೋನುಷ್ಠಾನಗಳಲ್ಲಿಯೆ ತೊಡಗಿಕೊಂಡಿರಬೇಕೆಂಬುದು ಅವನ ಅಂತರಂಗದ  ಅಭೀಪ್ಸೆಯಾಗಿತ್ತು.  ಆದರೆ ಸಂಗಮನಾಥನ ಇಚ್ಛೆ ಬೇರೊಂದಾಗಿತ್ತು.  ಬಸವಣ್ಣನ ವ್ಯಕ್ತಿತ್ವವನ್ನೂ, ಅವನಿಗಿದ್ದ ಪಾಂಡಿತ್ಯ – ವಿವೇಕಗಳನ್ನೂ ಬಲ್ಲ ಅವನ ಸೋದರಮಾವ ಬಲದೇವರು, ಅವನನ್ನು ಮಂಗಳವಾಡಕ್ಕೆ ಕರೆದುಕೊಂಡು ಹೋಗಲು ಕಪ್ಪಡಿಸಂಗಮಕ್ಕೆ ಬಂದಿದ್ದರು.  ಕಲಚೂರಿ ಅರಸನಾದ ಬಿಜ್ಜಳನ ಬಳಿ ಮಂತ್ರಿಗಳಾಗಿದ್ದ ತಾವು, ಬಸವಣ್ಣನನ್ನು ರಾಜಧಾನಿಯಾದ ಮಂಗಳವಾಡಕ್ಕೆ ಕರೆದುಕೊಂಡು ಹೋಗಿ ಅವನಿಗೊಂದು ಸ್ಥಾನ-ಮಾನವನ್ನು ಕಲ್ಪಿಸಿಕೊಡುವುದು ಬಲದೇವರ ಉದ್ದೇಶವಾಗಿತ್ತು.  ಬಸವಣ್ಣನು ಆ ಕ್ಷೇತ್ರದ ಗುರುಗಳ ನಿರ್ದೇಶನ ಹಾಗೂ ಬಲದೇವರ ಒತ್ತಾಯ ಇವುಗಳಿಗೆ ತಲೆಬಾಗಿ, ಒಲ್ಲದ ಮನಸ್ಸಿನಿಂದ, ಬಲದೇವರ ಜತೆಗೆ ಈವರೆಗಿನ ಸಾಧನಾ ರಂಗವಾದ ಕಪ್ಪಡಿಸಂಗಮ ಕ್ಷೇತ್ರವನ್ನು ಬಿಟ್ಟು ಮಂಗಳವಾಡದ ಕಡೆಗೆ ಹೊರಟಿದ್ದನು.

ಸುಮಾರು ಅದೇ ಸಂದರ್ಭದಲ್ಲಿ, ಇನ್ನೂ ದಕ್ಷಿಣದ ಬನವಾಸೀ ನಾಡಿನ ಪರಿಸರದಲ್ಲಿ ಅನಿಮಿಷಯೋಗಿಗಳ ಅನುಗ್ರಹವನ್ನು ಪಡೆದು ಅಲ್ಲಮ ತನ್ನ ಜಂಗಮಯಾತ್ರೆಯನ್ನು ಪ್ರಾರಂಭಿಸಿದ್ದನು.

ಬನವಸೆ ಪರಿಸರದ ಬಳ್ಳಿಗಾವೆ ಅಲ್ಲಮನ ಜನ್ಮಸ್ಥಳ.  ಎಳೆಯಂದಿನಿಂದಲೂ ತನ್ನ ಕುಲಕಸುಬಾದ ಮೃದಂಗವಾದನ ಕಲೆಯಲ್ಲಿ ಆತನಿಗೆ ಪ್ರೀತಿ.  ದಿನದಿಂದ ದಿನಕ್ಕೆ ಬೆಳೆದು ತಾರುಣ್ಯವನ್ನು ತಲುಪಿದ ಈತ ಒಂದುದಿನ ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿ, ಪೂಜೆಯ ಸಮಯದಲ್ಲಿ ಮದ್ದಲೆಯನ್ನು ಬಾರಿಸುತ್ತಿರುವಾಗ, ಆ ಊರಿನ ಅಪೂರ್ವ ಲಾವಣ್ಯವತಿಯಾದ ಕಾಮಲತೆ ಎನ್ನುವವಳು, ಇವನ ಮನಸ್ಸನ್ನು ಸೂರೆಗೊಂಡು ಮೋಹಿಸಿದಳು.  ಅಲ್ಲಮನೂ ಅವಳ ರೂಪ ಯೌವನಗಳಿಗೆ ಸೋತನು.  ಇಬ್ಬರಿಗೂ ಮದುವೆಯಾಯಿತು.  ಅದಮ್ಯವಾದ ತಾರುಣ್ಯದ ಪ್ರೇಮದ ಹೊಳೆಯಲ್ಲಿ ಇಬ್ಬರೂ ಕೊಚ್ಚಿ ಹೋದರು.  ಅಲ್ಲಮನಿಗೆ ಕಾಮಲತೆಯಲ್ಲದೆ, ಕಾಮಲತೆಗೆ ಅಲ್ಲಮನಲ್ಲದೆ ಬೇರೆಯ ಜಗತ್ತೆಂಬುದೇ ಇಲ್ಲವಾಯಿತು.  ಹೀಗಿರುವಾಗ ಒಮ್ಮೆ ಕಾಮಲತೆ ತೀವ್ರಜ್ವರದಿಂದ ತೀರಿಕೊಂಡಳು.  ಕಾಮಲತೆಯ ಅನಿರೀಕ್ಷಿತವಾದ ಮರಣ ಅಲ್ಲಮನ ಮೇಲೆ ಬರಸಿಡಿಲಿನಂತೆ ಎರಗಿತು.  ಈ ಆಘಾತದಿಂದ ತತ್ತರಿಸಿದ ಅಲ್ಲಮ ಕಾಮಲತೆಯ ವಿರಹದುರಿಯಲ್ಲಿ ಬೆಂದು, ಈ ಆಘಾತದಿಂದಲೆ ಅವನು ಸಂಸಾರದ ಅಸಾರತೆಯ ಅರಿವನ್ನು ಪಡೆದು, ಎಲ್ಲವನ್ನೂ ತೊರೆದು ಗೊತ್ತುಗುರಿಯಿಲ್ಲದೆ ಮರುಳನಂತೆ ಅಲೆಯುತ್ತಿರುವಾಗ, ಅಲ್ಲಿ ಒಂದೆಡೆ, ಗುಹಾವಾಸಿಗಳಾಗಿ, ಅಂಗೈಯ ಲಿಂಗದಲ್ಲಿ ಸರ್ವಾಂಗಲೀನರಾಗಿ ಧ್ಯಾನಕ್ಕೆ ಕುಳಿತ ಮಹಾಯೋಗಿಗಳಾದ ಅನಿಮಿಷಯ್ಯಗಳ ದರ್ಶನವಾಯಿತು.  ಅವರ ಆ ಮಹಾತೇಜಸ್ಸು ಹಾಗೂ ಕಾರುಣ್ಯಾನುಗ್ರಹಗಳಿಂದ ಪುನರ್ಭವವನ್ನು ಪಡೆದ ಅಲ್ಲಮ ಆ ಗುಹೆಯಿಂದ ಹೊರಬಂದು ಪರಮ ವೈರಾಗ್ಯಮೂರ್ತಿಯಾಗಿ, ತನ್ನ ಪರ್ಯಟನವನ್ನು ಪ್ರಾರಂಭಿಸಿದನು.

ಇದೇ ಬನವಾಸಿಗೆ ತೀರಾ ಸಮೀಪದಲ್ಲಿರುವ ಉಡುತಡಿ ಎಂಬ ಊರಿನಲ್ಲಿ, ಶಿವಭಕ್ತರ ಕುಟುಂಬವೊಂದರ ಹುಡುಗಿ ಮಹಾದೇವಿ ತನ್ನ ಗೆಳತಿಯರ ಜತೆಗೆ ಆಟವಾಡುತ್ತಿದ್ದಾಳೆ.  ಬಾಲ್ಯದಿಂದಲೇ ಚೆನ್ನಮಲ್ಲಿಕಾರ್ಜುನನನ್ನು ತನ್ನ ಸನಾತನ ಸಂಗಾತಿ ಎಂದು ಭಾವಿಸಿದ ಈ ಹುಡುಗಿ ತನ್ನ ಅಪೂರ್ವವಾದ ಶಿವಭಕ್ತಿಯಿಂದ ಎಲ್ಲರನ್ನು ಬೆರಗುಗೊಳಿಸುತ್ತಾಳೆ.

ಇತ್ತ ಸೊನ್ನಲಿಗೆಗೆ ಹೆಚ್ಚೇನೂ  ದೂರವಲ್ಲದ ಬಿಜ್ಜಳನ ಮಂಗಳವೇಡೆಗೆ ಸಮೀಪದ ಹಾವಿನಹಾಳ ಎಂಬ ಊರಿನಲ್ಲಿ ಕಲ್ಲಯ್ಯನೆಂಬ ಶಿವಭಕ್ತನು, ತನ್ನ ತಂದೆ-ತಾಯಂದಿರು ಸತ್ಕುಲ ಪ್ರಸೂತೆಯೂ ರೂಪವತಿಯೂ ಆದ ಕನ್ಯೆಯೊಂದಿಗೆ ಏರ್ಪಡಿಸಿದ್ದ ತನ್ನ ಮದುವೆಯನ್ನು ತಿರಸ್ಕರಿಸಿ ಸೊನ್ನಲಿಗೆಯ ಕಡೆಗೆ ಪಯಣ ಹೊರಟಿದ್ದನು.

ಕಲ್ಲಯ್ಯನ ತಂದೆ ಶಿವನೋಜ. ತಾಯಿ ಸೋಮವ್ವೆ.  ಶಿವನೋಜ ಹಾವಿನಹಾಳ ಗ್ರಾಮದಲ್ಲಿ, ವಡವೆ – ವಸ್ತುಗಳನ್ನು ಮಾಡುವುದರಲ್ಲಿ ತುಂಬ ನಿಪುಣನೂ, ಪ್ರಸಿದ್ಧನೂ ಆದ ವಿಶ್ವಕರ್ಮ ಕುಲದವನು.  ಬಹುಕಾಲದನಂತರ ತನಗೆ ಹುಟ್ಟಿದ ಒಬ್ಬನೇ ಮಗನಿಗೆ, ಆ ಊರಿನ ದೇವಾಲಯದಲ್ಲಿ ಪೂಜೆಗೊಳ್ಳುತ್ತಿದ್ದ ಕಲ್ಲಿನಾಥನ ಮೇಲಿನ ಭಕ್ತಿಯಿಂದ ಕಲ್ಲಯ್ಯನೆಂದು ನಾಮಕರಣ ಮಾಡಿದನು.  ಚಿಕ್ಕಂದಿನಿಂದಲೂ ಕಲ್ಲಯ್ಯನಿಗೆ ತಂದೆಯ ಕುಲ ಕಸುಬಾದ ಅಕ್ಕಸಾಲಿಗರ ವೃತ್ತಿಯಲ್ಲಿ ಪರಿಣತನಾಗುವುದಕ್ಕಿಂತ, ಊರ ನಡುವಣ ಕಲ್ಲಿನಾಥ ದೇವಾಲಯದ ಕಡೆಗೇ ವಿಶೇಷ ಆಸಕ್ತಿ.  ದಿನ ಬೆಳಗಾದರೆ ಕಲ್ಲಿನಾಥನ ದೇವಾಲಯಕ್ಕೆ ಹೋಗಿ ಪೂಜೆ ಧ್ಯಾನಾದಿಗಳಲ್ಲಿ ಮಗ್ನವಾಗಿ ಕಲ್ಲಯ್ಯ ಸುತ್ತಣ ಜಗತ್ತನ್ನೇ ಮರೆತು ಬಿಡುತ್ತಾನೆ.  ತಂದೆ ಹಾಗೂ ಹೀಗೂ ಬಲವಂತ ಮಾಡಿ ಮಗನನ್ನು ತನ್ನ ವೃತ್ತಿಯ ಕಡೆಗೆ ಎಳೆದಷ್ಟೂ, ಕಲ್ಲಯ್ಯನ ಮನಸ್ಸು ಕಲ್ಲಿನಾಥನ ಕಡೆಗೇ ಎಳೆಯುತ್ತದೆ.  ಮಗನ ಈ ಶಿವಮರುಳುತನವನ್ನು ಕಂಡು  ಶಿವನೋಜನಿಗೂ ಸೋಮವ್ವೆಗೂ ತುಂಬ ಆತಂಕ.  ಮಗನನ್ನು ಈ ಸಂಸಾರದ ಹಾದಿಗೆ ಹಚ್ಚುವುದು ಹೇಗೆ ಎಂಬ ಚಿಂತೆ.

ಹೀಗಿರುತ್ತಿರಲಾಗಿ ಒಂದು ದಿನ ಬಿಜ್ಜಳ ಮಹಾರಾಜನ ಅರಮನೆಯ ನಾಯಕನೆನಿಸಿಕೊಂಡ ಕಸಿಕಿಲನಾರಾಯಣ ಎಂಬಾತ ಒಂದು ಸಾವಿರ ಚಿನ್ನದ ಗಟ್ಟಿಗಳನ್ನು ತೆಗೆದುಕೊಂಡು ಹಾವಿನಹಾಳ ಗ್ರಾಮದ ಶಿವನೋಜನಲ್ಲಿಗೆ ಬಂದು, ಬಿಜ್ಜಳರಾಯರಿಗೆ ಒಂದು ಸೊಗಸಾದ ಉತ್ತರಿಗೆಯನ್ನು ಕೂಡಲೇ ಮಾಡಿಕೊಡಬೇಕೆಂದು ಅಪ್ಪಣೆ ಮಾಡಿದನು.  ‘ನಿನ್ನ ಮಗನು ನಿನ್ನಂತೆಯೆ ಚಿನ್ನಾಭರಣ ಕೆಲಸದಲ್ಲಿ ಕುಶಲಿಗನಾಗಿರುವುದರಿಂದ ಈ ಚಂದದ ಆಭರಣವನ್ನು ಕೇವಲ ಮೂರು ದಿನಗಳ ಒಳಗೇ ಮಾಡಿಕೊಡತಕ್ಕದ್ದು; ಇದು ರಾಜಾಜ್ಞೆ’ ಎಂದು ಆತ ಶಿವನೋಜನಿಗೆ ಎಚ್ಚರಿಕೆಯನ್ನು ಕೊಟ್ಟನು.  ಈ ಅಲ್ಪಾವಧಿಯೊಳಗೆ, ಮಹಾಮಂಡಲೇಶ್ವರರಾದ ಬಿಜ್ಜಳನಿಗೆ ಈ ಆಭರಣವನ್ನು ಮಾಡಿಕೊಡುವುದಾದರೂ ಹೇಗೆ ಎಂಬ ಚಿಂತೆ ಶಿವನೋಜನಿಗೆ ಕವಿಯಿತು.  ಕೂಡಲೇ ಆತ ತನ್ನ ನೆರವಿಗಾಗಿ ಮಗನನ್ನು ಹುಡುಕಿದರೆ ಆತ ಮನೆಯಲ್ಲಿ ಇಲ್ಲವೇ ಇಲ್ಲ.  ನೋಡಿದರೆ ಕಲ್ಲಯ್ಯ ಎಂದಿನಂತೆ ಕಲ್ಲಿನಾಥನ ದೇಗುಲದಲ್ಲಿ ಶಿವಪೂಜಾ ಸಂಭ್ರಮದಲ್ಲಿ ತೊಡಗಿದ್ದಾನೆ.  ನಡು ಹಗಲಾಗಿ, ಹೊತ್ತು ಸಂಜೆಯ ಕಡೆಗೆ ಜಾರಿದರೂ, ದೇಗುಲದಿಂದ ಮನೆಯ ಕಡೆಗೆ ಬರುವ ಯೋಚನೆಯೇ ಕಲ್ಲಯ್ಯನಿಗೆ ಇಲ್ಲ.  ಗಂಡನ ತಳಮಳವನ್ನು ನೋಡಲಾಗದೆ, ತಾಯಿ ಸೋಮವ್ವೆ ತಾನೇ ಕಲ್ಲಿನಾಥನ ದೇವಸ್ಥಾನಕ್ಕೆ ಹೋಗಿ, ತನ್ನ ಮಗನ ಮನವೊಲಿಸಿ ಮನೆಗೆ ಕರೆದುಕೊಂಡುಬಂದಳು.  ತಂದೆ ಪರಿಪರಿಯಾಗಿ ಮಗನಿಗೆ ಬುದ್ಧಿ ಹೇಳಿದನು:  ‘ಮಗನೆ ಹೀಗೆ ನೀನು ಮನೆಯ ಕರ್ತವ್ಯಗಳನ್ನು ಕಡೆಗಣಿಸಿ ಕಲ್ಲಿನಾಥನ ದೇಗುಲಕ್ಕೆ ಹೋಗುವುದು ಸರಿಯೆ? ಹೀಗೆ ಮಾಡಿದರೆ ನನ್ನ ನಂತರ ನನ್ನ ಕುಲಕಸುಬನ್ನು ಮುಂದುವರಿಸುವವರು ಯಾರು? ಮನೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವವರು ಯಾರು?  ಪುರುಷನಾದವನಿಗೆ ಉದ್ಯೋಗವೇ ಭೂಷಣ.  ನಿನಗೆ ಇರುವ ಹಸ್ತಕುಶಲತೆ ಇನ್ನಾರಿಗಿದೆ?  ಹೀಗಿರುವಾಗ ಅದನ್ನು ಬಳಸಿಕೊಂಡು ಧನ ಸಂಪಾದನೆಯನ್ನು ಮಾಡುವುದು ಮುಖ್ಯವಲ್ಲವೆ?  ಈ ಪ್ರಾಯದಲ್ಲಿ ಸಂಪಾದಿಸಿ ಸಂಚಯನ ಮಾಡಿಕೊಳ್ಳದೆ ಹೋದರೆ, ವಯಸ್ಸಾದಾಗ ಹೀಗೆ ದುಡಿದು ಸಂಪಾದಿಸುವುದು ಸಾಧ್ಯವಾಗುತ್ತದೆಯೆ? ಈಗ ಬಿಜ್ಜಳನ ಅರಮನೆಯಿಂದ ಅಮೂಲ್ಯವಾದೊಂದು ಆಭರಣವನ್ನು ತಯಾರಿಸಿ ಕೊಡಬೇಕಾದ ಜವಾಬ್ದಾರಿಯೊಂದು ನನ್ನ ಮೇಲೆ ಬಿದ್ದಿದೆ; ಈಗ ನೀನೂ ನನ್ನ ಜತೆ ಕೂತು ಈ ಕುಶಲ ಕರ್ಮದಲ್ಲಿ ನೆರವಾಗಲೇಬೇಕು.  ನಿನ್ನ ಕಲ್ಲಿನಾಥನ ಪೂಜೆ-ಗೀಜೆ ಏನಿದ್ದರೂ ಆಮೇಲೆ.

ಕಲ್ಲಯ್ಯನಿಗೆ ತಂದೆಯ ಮಾತು ರುಚಿಸಲಿಲ್ಲ.  ಅದರಲ್ಲಿಯೂ ಕಲ್ಲಿನಾಥನ ಬಗ್ಗೆ, ತನ್ನ ತಂದೆಗಿರುವ ಉಪೇಕ್ಷೆಯ ಮಾತಿನ ಧಾಟಿ ಅವನಿಗೆ ಹಿಡಿಸಲಿಲ್ಲ.  ತನ್ನ ಆರಾಧ್ಯದೈವದ ಬಗ್ಗೆ ಇವರು ಇಷ್ಟು ಹಗುರವಾಗಿ ಮಾತನಾಡಬಹುದೇ ಎಂಬ ದುಃಖ ಅವನನ್ನು ಕೊರೆಯಿತು.  ‘ಹೌದು ನನಗೆ ಕಲ್ಲಿನಾಥನೆ ಮುಖ್ಯ.  ನೀವು ಏನು ಮಾಡಿದರೂ ನಾನು ನನ್ನ ಕಲ್ಲಿನಾಥನ ಪಾದವನ್ನು ಬಿಟ್ಟು ಕದಲುವವನಲ್ಲ.  ನನ್ನನ್ನು ವೃಥಾ ಈ ಸಂಸಾರ ಕರ್ಮಗಳಲ್ಲಿ ಯಾಕೆ ತೊಡಗಿಸಲು ಯೋಚಿಸುತ್ತೀರಿ?  ಶಿವನೇ ನನ್ನ ಪಾಲಿಗೆ ತಂದೆ-ತಾಯಿ ಎಲ್ಲವೂ.  ಇಂಥ ಶಿವನಿಂದ ನನ್ನನ್ನು ವಿಮುಖನನ್ನಾಗಿ ಮಾಡುವ ತಂದೆ-ತಾಯಿಯಂದಿರನ್ನು ನಾನು ಹೇಗೆ ಗೌರವಿಸಲಿ? ನನಗೆ ಈ ಸಂಸಾರವೂ ಬೇಡ, ಅದನ್ನು ನಿರ್ವಹಿಸುವ ಈ ಕುಲಕಸುಬೂ ಬೇಡ’ ಎಂದು ಕಲ್ಲಯ್ಯ ತನ್ನ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದನು.

ಶಿವನೋಜನ ತಾಳ್ಮೆ ಮಗನ ಈ ಮಾತುಗಳಿಂದ ಸಿಡಿದೊಡೆಯಿತು.  ಒಂದೆಡೆ, ಮೂರೇ ದಿನಗಳಲ್ಲಿ, ರಾಜ ಬಿಜ್ಜಳನ ಅರಮನೆಗೆ ಉತ್ತರಿಗೆಯನ್ನು ಮಾಡಿಕೊಡಬೇಕೆಂಬ ಒತ್ತಡ; ಮತ್ತೊಂದೆಡೆ ಈ ಕುಲಕರ್ಮದಲ್ಲಿ ತನ್ನ ಜತೆ ಸಹಕರಿಸಲು ಒಪ್ಪದೆ ಸಿಡಿದೆದ್ದು ನಿಂತ ಮಗನ ಉದ್ಧಟತನ, ಊರಿಗೇ ಹೆಸರಾದ ಹೊನ್ನಗೆಲಸದ ನಿಪುಣನೆನ್ನಿಸಿಕೊಂಡ ತಾನು ಈ ಬಗೆಯ ಅಸಹಕಾರ ಹಾಗೂ ಪರಾಭವಗಳಿಂದ ತಲೆ ತಗ್ಗಿಸುವಂತಾಯಿತಲ್ಲ ಎಂಬ ದುಃಖ ಇನ್ನೊಂದು ಕಡೆ, ತಾನು ಸಕಾಲಕ್ಕೆ ಸರಿಯಾಗಿ ಒಡವೆಯನ್ನು ಮಾಡಿ ಕೊಡದೆ ಹೋದರೆ ಗುರಿಯಾಗಬೇಕಾದ ರಾಜಾಗ್ರಹ ಮತ್ತು ದಂಡನೆಯ ಭಯ ಮತ್ತೊಂದು ಕಡೆ.  ಈ ಎಲ್ಲ ಮನೋವಿಕಾರಗಳಿಂದ, ಮುಂದುಗಾಣದೆ ಶಿವನೋಜನು ಮನೆಯ ಮೂಲೆಯೊಳಗಿದ್ದ ಬೆತ್ತವನ್ನೆಳೆದುಕೊಂಡು ಕಲ್ಲಯ್ಯನಿಗೆ ಚೆನ್ನಾಗಿ ಹೊಡೆದನು.  ‘ಅಯ್ಯೋ ಅಯ್ಯೋ ಏನು ಮಾಡುತ್ತೀರಿ? ಮಗನನ್ನು, ಇರುವ ಒಬ್ಬನೇ ಒಬ್ಬ ಮಗನನ್ನು ಕೊಂದೇಬಿಡುತ್ತೀರಾ?’ ಎಂದು ತಾಯಿ ಸೋಮವ್ವೆ ಬೊಬ್ಬೆಯಿಟ್ಟಳು.  ಕಲ್ಲಯ್ಯನು ತನಗೆ ಬೀಳುವೇಟಿನ ಒಂದೊಂದು ಹೊಡೆತಕ್ಕೂ ‘ಕಲ್ಲಿನಾಥಾ ಕಲ್ಲಿನಾಥಾ’ ಅನ್ನುತ್ತಿದ್ದನೆ ಹೊರತು ಬೇರೆಯ ಪ್ರತಿಕ್ರಿಯೆ ಇಲ್ಲ.  ಶಿವನೋಜನು ತಾನೇ ಹೊಡೆದೂ ಹೊಡೆದೂ ಸೋತು ಕುಸಿದು ಕೂತನು.  ಕಲ್ಲಯ್ಯ ಮರುಮಾತಾಡದೆ ನಿಶ್ಯಬ್ದವಾಗಿ, ಇರುಳಿನ ಕತ್ತಲ ದಾರಿಯನ್ನು ತುಳಿದು ನೇರವಾಗಿ ಊರ ನಡುವಣ ಕಲ್ಲಿನಾಥನ ದೇವಾಲಯಕ್ಕೆ ಹೋದನು.

ಇರುಳೆಲ್ಲ ಕಲ್ಲಿನಾಥನ ಸನ್ನಿಧಿಯಲ್ಲಿ ಕಲ್ಲಯ್ಯನ ಪೂಜೆ ಮುಂದುವರಿಯಿತು.  ಆ ಪೂಜಾ ಸಂಭ್ರಮದಲ್ಲಿ ಅವನಿಗೆ ಇದುವರೆಗೂ ಮನೆಯಲ್ಲಿ ನಡೆದ ಹಗರಣವೂ, ತತ್ಪರಿಣಾಮವಾದ ದಂಡನೆಯ ವೇದನೆಯೂ ಮರೆತೇಹೋಯಿತು.  ಬೆಳಗಾಗಿ ಊರೆಲ್ಲ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿದರೂ ಕಲ್ಲಯ್ಯನಿಗೆ ಅದರ ಪರಿವೆಯೇ ಇಲ್ಲ.  ಅಷ್ಟರ ಮಟ್ಟಿಗೆ ಆತ ಶಿವಪೂಜೆಯಲ್ಲಿ ಮಗ್ನನಾಗಿ ಒಂದು ಬಗೆಯ ಆನಂದವನ್ನು ಅನುಭವಿಸುತ್ತಿದ್ದನು.  ಇದ್ದಕ್ಕಿದ್ದಂತೆಯೆ ಆ ಆನಂದವೇ ಒಂದು ಮಧುರವಾದ ಹಾಗೂ ಆತ್ಮೀಯವಾದ ಕರೆಯಾಯಿತೊ ಎನ್ನುವಂತೆ ‘ಮಗೂ, ಕಲ್ಲಯ್ಯ, ನೋಡು ನಾನು ಬಂದಿದ್ದೇನೆ’ ಎಂಬ ಧ್ವನಿಯೊಂದು ಕೇಳಿಸಿತು.  ಕಲ್ಲಯ್ಯ ತಿರುಗಿ ನೋಡುತ್ತಾನೆ, ಜಟಾಜೂಟ ಶೋಭಿತವಾದ ಗಂಭೀರವಾದ ಆಕೃತಿಯೊಂದು ನಿಂತಿದೆ.  ಕೊರಳಲ್ಲಿ ರುದ್ರಾಕ್ಷಿಯ ಮಾಲೆ; ಹಣೆಯಲ್ಲಿ ವಿಭೂತಿ; ಹೆಗಲಲ್ಲಿ ಜೋಳಿಗೆ; ಕಯ್ಯಲ್ಲಿ ಲಾಕುಳ.  ಕಲ್ಲಯ್ಯ ಅವರ ಕಾಲಿಗೆ ನಮಸ್ಕಾರ ಮಾಡಿ, ಹೀಗೆ ಅವ್ಯಾಜವಾಗಿ ಕೃಪೆಮಾಡಿದ ಈ ಕಾರುಣ್ಯಮೂರ್ತಿ ಯಾರಿರಬಹುದು ಎಂದು ಪ್ರಶ್ನಾರ್ಥಕವಾಗಿ ನೋಡಿದ ‘ಮಗೂ ನಾನು ರುದ್ರಮುನಿದೇವ; ಸದ್ಗುರು ರೇವಣಸಿದ್ಧರ ಶಿಷ್ಯ ನಾನು.  ನಿನ್ನನ್ನು ಭೆಟ್ಟಿಯಾಗಿ ಮಾರ್ಗದರ್ಶನ ಮಾಡು ಎಂದು ಅವರೇ ನನ್ನನ್ನು, ಕಳುಹಿಸಿದ್ದಾರೆ.  ಹೇಳುತ್ತೇನೆ ಕೇಳು : ನೀನು ಇನ್ನು ಕೆಲವು ದಿನಗಳನಂತರ ಸೊನ್ನಲಿಗೆಗೆ ಹೋಗಬೇಕು.  ಇಷ್ಟರಲ್ಲಿಯೆ ಆ ಸಂದರ್ಭ ತಾನಾಗಿಯೆ ಒದಗುತ್ತದೆ.  ಅಲ್ಲಿ ಸಿದ್ಧರಾಮ ಎಂಬ  ಶಿವಯೋಗಿಯಿಂದ ಕರ್ಮಯೋಗದ ಕಾರ್ಯಕ್ಷೇತ್ರವೊಂದು ವಿಸ್ತರಣೆಗೊಳ್ಳುತ್ತಿದೆ.  ನೀನೂ ಸಿದ್ಧರಾಮನಿಗೆ ನೆರವಾಗಬೇಕೆಂಬುದು ನಮ್ಮ ಶ್ರೀಗುರುವಿನ ಸಂಕಲ್ಪವಾಗಿದೆ.  ನೀನು ಸಿದ್ಧರಾಮನ ಬಳಿಗೆ ಹೋಗಿ ಆತನನ್ನು ಗುರುವೆಂದು ಸ್ವೀಕರಿಸಿ ನಿನ್ನ ಶ್ರೇಯಸ್ಸಿನ ಹಾದಿಯನ್ನು ಕಂಡುಕೊಳ್ಳಬೇಕಾಗುತ್ತದೆ.  ಶುಭವಾಗಲಿ, ಇನ್ನು ನಾನು ಬರುತ್ತೇನೆ’.  ಇಷ್ಟು ಹೇಳಿ ರುದ್ರಮುನಿದೇವರು ದೇವಸ್ಥಾನದಿಂದಾಚೆಯ ಬೆಳಗಿನ ಹೊಂಬಿಸಿಲಲ್ಲಿ, ಬೆಳಕಿನಂತೆ ನಡೆದು ಹೋದರು.

ಅನಿರೀಕ್ಷಿತ ಗುರುದರ್ಶನದಿಂದ ಹಾಗೂ ಅವರು ನೀಡಿದ ನಿರ್ದೇಶನದಿಂದ ಪುಲಕಿತನಾದ ಕಲ್ಲಯ್ಯನಿಗೆ ಇದೇನು ಕನಸೋ ನನಸೋ – ಅನ್ನಿಸಿತು.  ಅಂತೂ ಕಲ್ಲಿನಾಥನ ಕರುಣೆಯಿಂದ ತನಗೆ ಈ ಭಾಗ್ಯ ಲಭಿಸಿತು ಅಂದುಕೊಂಡ ಕಲ್ಲಯ್ಯ.  ಮನಸ್ಸು ಅತ್ಯಂತ ಪ್ರಸನ್ನವಾಯಿತು.  ಮೈಯೆಲ್ಲ ಹಗುರಾಗಿ ಅನಿರ್ವಚನೀಯವಾದ ಲವಲವಿಕೆಯೊಂದು ತನ್ನ ಶರೀರವನ್ನು ತುಂಬಿ ತುಳುಕುವಂತೆ ಭಾಸವಾಯಿತು.

ದಿನವೂ ಮಲ್ಲಿನಾಥನ ದೇಗುಲಕ್ಕೆ ಬಂದು ಧ್ಯಾನ ಪೂಜಾದಿಗಳಿಂದ ಪ್ರಸನ್ನನಾಗಿ, ಕಲ್ಲಯ್ಯ ಮನೆಗೆ ಹೋಗುತ್ತಾನೆ.  ತಂದೆಯಾದ ಶಿವನೋಜನು, ಮಗನೊಂದಿಗೆ ಸಂಭವಿಸಿದ ಅಹಿತಕರವಾದ ಮುಖಾಮುಖಿಯನ್ನು ಮರೆತು, ತಾನೇ ಹಗಲಿರುಳೂ ಕಷ್ಟಪಟ್ಟು ಬಿಜ್ಜಳನ ಅರಮನೆಗಾಗಿ ಉತ್ತರಿಗೆಯನ್ನು ಸಕಾಲದಲ್ಲಿ ಮಾಡಿಕೊಟ್ಟು, ರಾಜನ ಪ್ರಸನ್ನತೆಗೂ, ಸಂಭಾವನೆಗೂ ಪಾತ್ರನಾಗಿದ್ದ.  ‘ಶಿವಮರುಳ’ನಾದ ಈ ಮಗನಿಗೆ ತನ್ನ ವೃತ್ತಿಗೆ ಸಂಬಂಧಿಸಿದ ಯಾವ ಕಾರ್ಯವನ್ನೂ ವಹಿಸದಿರುವುದೇ ಸದ್ಯಕ್ಕೆ ಒಳಿತೆಂದೂ, ಲಕ್ಷಣವಾದ ಕನ್ಯೆಯೊಬ್ಬಳನ್ನು ತಂದು ಕಲ್ಲಯ್ಯನಿಗೆ ಮದುವೆ ಮಾಡಿದರೆ, ಸಂಸಾರದ ನೊಗ ಹೆಗಲಿಗೇರಿ, ತಾನೇ ವ್ಯಾವಹಾರಿಕ ಜಗತ್ತಿಗೆ ಬರುತ್ತಾನೆ ಎಂದೂ ಲೆಕ್ಕಹಾಕುತ್ತಿದ್ದನು.

ಶಿವನೋಜ ಮತ್ತು ಸೋಮವ್ವೆಯರು ಕಂಡ ಕನಸು ನನಸಾಗಬಹುದೆಂಬ ಸಂದರ್ಭ ಒದಗಿಬಂತು.  ಕಲ್ಲಯ್ಯನಿಗೆ ಯಾವ ಸುಳಿವನ್ನೂ ಕೊಡದೆ, ಅವರಿಬ್ಬರೂ ತಮ್ಮ ಹತ್ತಿರದ ಬಳಗದಲ್ಲಿ ಅತ್ಯಂತ ಚೆಲುವೆಯಾದ ಕನ್ಯೆಯೊಬ್ಬಳನ್ನು ಹುಡುಕಿ, ಕಲ್ಲಯ್ಯನಿಗೆ ಮದುವೆ ಮಾಡುವ ಸನ್ನಾಹವನ್ನು ಕಾರ್ಯಗತಗೊಳಿಸಲು ಯೋಚಿಸಿದರು.  ಮೂರು ಹೊತ್ತೂ ಕಲ್ಲಿನಾಥನ ದೇವಾಲಯದಲ್ಲೆ ಇರುತ್ತಿದ್ದ ಕಲ್ಲಯ್ಯನಿಗೆ ಇದರ ಸುಳಿವೂ ಅಷ್ಟಾಗಿ ಹತ್ತಲಿಲ್ಲ.  ಒಂದು ಸಂಜೆ ದೇವಸ್ಥಾನದಿಂದ ಮನೆಗೆ ಬಂದು ನೋಡುತ್ತಾನೆ.  ಮನೆಯ ಮುಂದೆ ಹಸಿರು ಚಪ್ಪರ ರಾರಾಜಿಸುತ್ತಿದೆ, ಮನೆ ತುಂಬ ಬಂಧು ಬಾಂಧವರು ಸಡಗರದಿಂದ ಓಡಾಡುತ್ತಿದ್ದಾರೆ.  ಎಲ್ಲರೂ ಕಲ್ಲಯ್ಯನನ್ನು ಅತ್ಯಂತ ಅಕ್ಕರೆಯಿಂದ ನೋಡುತ್ತಿದ್ದಾರೆ.  ಇದೇನಿದು-ಎಂದು ಕಲ್ಲಯ್ಯ ಚೋದ್ಯಗೊಳ್ಳುತ್ತಿದ್ದಂತೆಯೆ, ತಾಯಿ ಸೋಮವ್ವೆ ಅತ್ಯಂತ ವಾತ್ಸಲ್ಯದಿಂದ ಕಲ್ಲಯ್ಯನ ಮೈದಡವಿ, ಮರುದಿನ ಬೆಳಿಗ್ಗೆಯೆ ಅವನಿಗೆ ಮದುವೆಯೆಂದೂ, ಅತ್ಯಂತ ಚೆಲುವೆಯಾದ ಕನ್ಯೆಯನ್ನು ಅವನಿಗಾಗಿ ಗೊತ್ತು ಮಾಡಿರುವುದಾಗಿಯೂ, ಮಗನಾದ ತಾನು ಮದುವೆ ಮಾಡಿಕೊಂಡು ಸುಖವಾಗಿ ಬದುಕುವುದನ್ನು ಕಣ್ಣಾರೆ ಕಾಣಬೇಕೆಂಬುದು ತನ್ನ ಬಯಕೆ ಎಂದೂ ಸಂಕ್ಷೇಪವಾಗಿ ನಿರೂಪಿಸಿದಳು.  ಕಲ್ಲಯ್ಯ ತನ್ನ ತಾಯಿಯ ಪ್ರೀತಿಯ ಮಾತಿಗೆ ಯಾವುದೇ ಪ್ರತಿಕ್ರಿಯೆಯನ್ನೂ ತೋರಿಸದೆ ನಸುನಕ್ಕು ಸುಮ್ಮನಾದನು.  ಆದರೆ ಕಲ್ಲಯ್ಯನಿಗೆ ತಾನು ಸೊನ್ನಲಿಗೆಗೆ ಹೋಗಲು ‘ಸಂದರ್ಭವೊಂದು ಇಷ್ಟರಲ್ಲಿಯೆ ಒದಗುತ್ತದೆ’ ಎಂದು ಗುರು ರುದ್ರಮುನಿದೇವರು ಹೇಳಿದ ಮಾತಿನ ಅರ್ಥ ಸ್ಪಷ್ಟವಾದಂತಾಯಿತು.  ಇನ್ನು ಈ ಸಂಸಾರದೊಳಗೆ ಸಿಕ್ಕಿ ಹಾಕಿಕೊಂಡರೆ ಮುಗಿಯಿತು.  ಈ ಮದುವೆಯ ಬಲೆಯಿಂದ ಪಾರಾಗಿ ನಾನು ಸೊನ್ನಲಿಗೆಗೆ ಹೋಗಲು ಇದೇ ಸರಿಯಾದ ಸಂದರ್ಭ – ಎಂದು ಅನ್ನಿಸಿತು.

ಹಾವಿನಹಾಳ ಗ್ರಾಮದಲ್ಲಿ ಮುಂಗೋಳಿ ಕೂಗುವ ಮುನ್ನ ಕಲ್ಲಯ್ಯನು, ಕಲ್ಲಿನಾಥನಿಗೆ ಕೈಮುಗಿದು ಊರನ್ನು ತೊರೆದು ಸೊನ್ನಲಿಗೆಯ ದಾರಿಯಲ್ಲಿ ಸಾಕಷ್ಟು ದೂರ ಬಂದಿದ್ದ.  ಮದುವೆ ದಿಬ್ಬಣದವರು ಇನ್ನೂ ಗಾಢನಿದ್ರೆಯಲ್ಲಿರುವಾಗ, ತಂದೆ-ತಾಯಂದಿರು ಮಗನ ಮದುವೆಯ ಸಂಭ್ರಮದ ಕನಸು ಕಾಣುತ್ತಿರುವಾಗ, ಮಂಗಳವಾದ್ಯಗಳಿನ್ನೂ ಮೌನದಲ್ಲಿ ಮಲಗಿರುವಾಗ, ದೃಢಸಂಕಲ್ಪದ ಕಲ್ಲಯ್ಯ ಸಿದ್ಧರಾಮನ ಸೊನ್ನಲಿಗೆಯ ಕಡೆ ಪ್ರಯಾಣ ಹೊರಟಿದ್ದ.  ಅಂತರಂಗದಲ್ಲಿ ಅರಿವನ್ನು ತೋರಿ, ಬಹಿರಂಗದಲ್ಲಿ ಕುರುಹ ತೋರಿ,  ಈ ಎರಡೂ ಸನ್ನಿಹಿತವಾಗುವ ನಿಜದ ನಿಲುವನ್ನು ತೋರುವ ಶ್ರೀಗುರುವನ್ನು ತಾನು ಎಂದು ಕಾಣುವೆನೋ ಎಂಬ ಚಿಂತೆಯೊಂದು ಆತನ ಸಹಯಾತ್ರಿಯಾಗಿತ್ತು.

ಎರಡು ದಿನಗಳ ಕಾಲುನಡಿಗೆಯ ಮೂಲಕ ಸೊನ್ನಲಿಗೆಯ ಕಡೆಗೆ ಹೊರಟ ಕಲ್ಲಯ್ಯನು ಮೂರನೆಯ ದಿನ ಮಧ್ಯಾಹ್ನದ ಹೊತ್ತಿಗೆ ಸೊನ್ನಲಿಗೆಯಾಚೆಯ ಕಪಿಲಸಿದ್ಧ ಮಲ್ಲಿನಾಥನ ದೇವಾಲಯದ ಬಳಿಗೆ ಬಂದು ಕುಳಿತುಕೊಂಡನು.  ಗುಡಿಯ ಸುತ್ತ ಹೊಸದಾಗಿ ನಿರ್ಮಿತವಾದ ತೋಟದ ಗಿಡಗಳಿಗೆ ನೀರೆರೆಯುತ್ತಿದ್ದ ಬೊಮ್ಮಯ್ಯನು, ದೇವಾಲಯದ ಹೊರಗೆ ದಣಿದು ಕೂತ ಈ ವ್ಯಕ್ತಿಯನ್ನು ಗಮನಿಸಿದನು.  ಉಟ್ಟ ಬಟ್ಟೆಯೆಲ್ಲ ಧೂಳೀಮಯವಾಗಿ, ತಲೆ ಕೂದಲೆಲ್ಲ ಕೆದರಿ, ಬಿರುಬಿಸಿಲ ಪಯಣದಿಂದ ನಸುಗೆಂಪಾದ ಕಣ್ಣುಳ್ಳ ಈ ಅಪರಿಚಿತ ವ್ಯಕ್ತಿಯನ್ನು ಕಂಡು ಬೊಮ್ಮಯ್ಯನು ಅವನು ಯಾರು ಎತ್ತ ಎಂದು ವಿಚಾರಿಸಿದನು.  ಆತ ತಾನು ಸಿದ್ಧರಾಮನನ್ನೆ ಹುಡುಕಿಕೊಂಡು ಬಂದಿದ್ದಾನೆನ್ನುವ ಸಮಾಚಾರವನ್ನು ತಿಳಿದು ಚಕಿತಗೊಂಡು, ಗುಡಿಗೆ ಸಮೀಪದ ಪರ್ಣಕುಟಿಯೊಂದರೊಳಗೆ ವಿಶ್ರಮಿಸಿದ್ದ ಸಿದ್ಧರಾಮನ ಬಳಿಗೆ ಅವನನ್ನು ಕರೆದುಕೊಂಡು ಹೋದನು.  ಕಲ್ಲಯ್ಯ, ಪ್ರಶಾಂತವಾದ ದೀಪದಂತಿದ್ದ ಸಿದ್ಧರಾಮನ ಕಾಲಿಗೆ ಅಡ್ಡಬಿದ್ದು, ತನ್ನ ಹೆಸರು ಕಲ್ಲಯ್ಯನೆಂದೂ, ಬಿಜಾಪುರಕ್ಕೆ ಹತ್ತಿರದಲ್ಲಿರುವ ಹಾವಿನಹಾಳ ಎಂಬ ಗ್ರಾಮವು ತನ್ನ ಊರೆಂದೂ, ರೇವಣಸಿದ್ಧರ ಸುಪುತ್ರರಾದ ಗುರು ರುದ್ರಮುನಿದೇವರ ಆದೇಶದ ಮೇರೆಗೆ ತಾನು ಸಿದ್ಧರಾಮನನ್ನು ಗುರುವೆಂದು ಸ್ವೀಕರಿಸಿ, ಅವನು ಕೈಕೊಳ್ಳಲಿರುವ ಕರ್ಮಯೋಗದಲ್ಲಿ ಪಾಲುಗೊಂಡು ಸೇವೆ ಸಲ್ಲಿಸಲು ಬಂದಿರುವೆನೆಂದೂ ಬಿನ್ನವಿಸಿದನು.  ಸಿದ್ಧರಾಮನು ಆ ಮಧ್ಯಾಹ್ನದ ಮೌನದಲ್ಲಿ ಮಂದಹಾಸದಿಂದ ಕಲ್ಲಯ್ಯನ ಆ ಮಾತುಗಳನ್ನು ಆಲಿಸುತ್ತಾ, ಮಹಾಶಿಲ್ಪಿಯೊಬ್ಬನು ತಾನು ಕಡೆಯಲಿರುವ ಕಲ್ಲಿನ ಗುಣವನ್ನು ಸೂಕ್ಷ್ಮವಾಗಿ ವೀಕ್ಷಿಸುವಂತೆ, ಕಲ್ಲಯ್ಯನನ್ನು ಪ್ರೀತಿಯಿಂದ ದಿಟ್ಟಿಸುತ್ತ ಹೇಳಿದನು : ಕಲ್ಲಯ್ಯ ನೀನು ಬಂದದ್ದು ತುಂಬ ಸಂತೋಷ.  ನಿನ್ನ ಹಾಗೆಯೆ ಇನ್ನೂ ಇಲ್ಲಿಗೆ ಬರುವವರು ಯಾರು ಯಾರೋ!  ಎಲ್ಲವೂ ರೇವಣಸಿದ್ಧರ ಸಂಕಲ್ಪ, ಶ್ರೀಶೈಲದ ಮಲ್ಲಿಕಾರ್ಜುನನ ಕೃಪೆ.  ಇಂದಿನಿಂದ ನೀನು ನಮ್ಮವನು.  ನಾನೂ-ನೀನೂ ಮಾಡಬೇಕಾದ ಕೆಲಸ ಬಹಳ ಇದೆ.  ಈ ಸೊನ್ನಲಿಗೆ ಅಭಿನವ ಶ್ರೀಶೈಲವಾಗಬೇಕು ಮಲ್ಲಯ್ಯನ ಇಚ್ಛೆಯಂತೆ ಇಲ್ಲೊಂದು ಹೊಸ ಹುಟ್ಟು ಪ್ರಾರಂಭವಾಗಲಿದೆ.  ಜೀವರಲ್ಲಿ ಶಿವನನ್ನು ಕಂಡು, ಸೇವೆಯ ಮೂಲಕ ಆತನನ್ನು ಆರಾಧಿಸುವ ಕಾಯಕದಲ್ಲಿ ನಾವು ತೊಡಗಬೇಕಾಗಿದೆ.  ದುಃಖ-ದಾರಿದ್ರ್ಯ-ಅಜ್ಞಾನಗಳಲ್ಲಿ ಮುಳುಗಿರುವ ಈ ನಮ್ಮ ನೆಲದಲ್ಲಿ ಶ್ರದ್ಧೆ, ಭಕ್ತಿ, ದುಡಿಮೆ ಹಾಗೂ ವೈಚಾರಿಕತೆಯ ಬೀಜಗಳನ್ನು ನಾವು ಬಿತ್ತಬೇಕಾಗಿದೆ.